Bhishma Parva: Chapter 99

ಭೀಷ್ಮ ಪರ್ವ: ಭೀಷ್ಮವಧ ಪರ್ವ

೯೯

ಸಂಕುಲಯುದ್ಧ (೧-೧೬). ಯುದ್ಧವರ್ಣನೆ (೧೭-೪೭).

Image result for mahabharata war images06099001 ಸಂಜಯ ಉವಾಚ|

06099001a ಮಧ್ಯಾಹ್ನೇ ತು ಮಹಾರಾಜ ಸಂಗ್ರಾಮಃ ಸಮಪದ್ಯತ|

06099001c ಲೋಕಕ್ಷಯಕರೋ ರೌದ್ರೋ ಭೀಷ್ಮಸ್ಯ ಸಹ ಸೋಮಕೈಃ||

ಸಂಜಯನು ಹೇಳಿದನು: “ಮಹಾರಾಜ! ಮಧ್ಯಾಹ್ನದಲ್ಲಿ ಸೋಮಕರೊಂದಿಗೆ ಭೀಷ್ಮನ ಲೋಕಕ್ಷಯಕಾರಕ ರೌದ್ರ ಸಂಗ್ರಾಮವು ಪ್ರಾರಂಭವಾಯಿತು.

06099002a ಗಾಂಗೇಯೋ ರಥಿನಾಂ ಶ್ರೇಷ್ಠಃ ಪಾಂಡವಾನಾಮನೀಕಿನೀಂ|

06099002c ವ್ಯಧಮನ್ನಿಶಿತೈರ್ಬಾಣೈಃ ಶತಶೋಽಥ ಸಹಸ್ರಶಃ||

ರಥಿಗಳಲ್ಲಿ ಶ್ರೇಷ್ಠ ಗಾಂಗೇಯನು ನಿಶಿತ ಬಾಣಗಳಿಂದ ಪಾಂಡವರ ಸೇನೆಗಳನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಿದನು.

06099003a ಸಮ್ಮಮರ್ದ ಚ ತತ್ಸೈನ್ಯಂ ಪಿತಾ ದೇವವ್ರತಸ್ತವ|

06099003c ಧಾನ್ಯಾನಾಂ ಇವ ಲೂನಾನಾಂ ಪ್ರಕರಂ ಗೋಗಣಾ ಇವ||

ನಿನ್ನ ತಂದೆ ದೇವವ್ರತನು ಹುಲ್ಲಿನಿಂದ ಧಾನ್ಯಗಳನ್ನು ಬೇರ್ಪಡಿಸಲು ಎತ್ತುಗಳು ತುಳಿಯುವಂತೆ ಆ ಸೇನೆಯನ್ನು ಮರ್ದಿಸಿದನು.

06099004a ಧೃಷ್ಟದ್ಯುಮ್ನಃ ಶಿಖಂಡೀ ಚ ವಿರಾಟೋ ದ್ರುಪದಸ್ತಥಾ|

06099004c ಭೀಷ್ಮಮಾಸಾದ್ಯ ಸಮರೇ ಶರೈರ್ಜಘ್ನುರ್ಮಹಾರಥಂ||

ಧೃಷ್ಟದ್ಯುಮ್ನ, ಶಿಖಂಡಿ, ವಿರಾಟ ಮತ್ತು ದ್ರುಪದರು ಸಮರದಲ್ಲಿ ಆ ಮಹಾರಥ ಭೀಷ್ಮನ ಹತ್ತಿರ ಹೋಗಿ ಬಾಣಗಳಿಂದ ಹೊಡೆದು ಆಕ್ರಮಣಿಸಿದರು.

06099005a ಧೃಷ್ಟದ್ಯುಮ್ನಂ ತತೋ ವಿದ್ಧ್ವಾ ವಿರಾಟಂ ಚ ತ್ರಿಭಿಃ ಶರೈಃ|

06099005c ದ್ರುಪದಸ್ಯ ಚ ನಾರಾಚಂ ಪ್ರೇಷಯಾಮಾಸ ಭಾರತ||

ಭಾರತ! ಆಗ ಅವನು ಧೃಷ್ಟದ್ಯುಮ್ನ ಮತ್ತು ವಿರಾಟರನ್ನು ಮೂರು ಬಾಣಗಳಿಂದ ಹೊಡೆದು, ದ್ರುಪದನ ಮೇಲೆ ನಾರಾಚವನ್ನು ಪ್ರಯೋಗಿಸಿದನು.

06099006a ತೇನ ವಿದ್ಧಾ ಮಹೇಷ್ವಾಸಾ ಭೀಷ್ಮೇಣಾಮಿತ್ರಕರ್ಶಿನಾ|

06099006c ಚುಕ್ರುಧುಃ ಸಮರೇ ರಾಜನ್ಪಾದಸ್ಪೃಷ್ಟಾ ಇವೋರಗಾಃ||

ರಾಜನ್! ಸಮರದಲ್ಲಿ ಆ ಮಹೇಷ್ವಾಸ ಅಮಿತ್ರಕರ್ಶಿ ಭೀಷ್ಮನಿಂದ ಹೊಡೆಯಲ್ಪಟ್ಟ ಅವರು ಕಾಲಿನಿಂದ ತುಳಿಯಲ್ಪಟ್ಟ ಸರ್ಪಗಳಂತೆ ಕ್ರೋಧಿತರಾದರು.

06099007a ಶಿಖಂಡೀ ತಂ ಚ ವಿವ್ಯಾಧ ಭರತಾನಾಂ ಪಿತಾಮಹಂ|

06099007c ಸ್ತ್ರೀಮಯಂ ಮನಸಾ ಧ್ಯಾತ್ವಾ ನಾಸ್ಮೈ ಪ್ರಾಹರದಚ್ಯುತಃ||

ಭಾರತರ ಪಿತಾಮಹನನ್ನು ಶಿಖಂಡಿಯು ಹೊಡೆದರೂ ಕೂಡ ಅವನ ಸ್ತ್ರೀತ್ವವನ್ನು ಮನಸ್ಸಿಗೆ ತಂದುಕೊಂಡು ಆ ಅಚ್ಯುತನು ಅವನನ್ನು ಪ್ರಹರಿಸಲಿಲ್ಲ.

06099008a ಧೃಷ್ಟದ್ಯುಮ್ನಸ್ತು ಸಮರೇ ಕ್ರೋಧಾದಗ್ನಿರಿವ ಜ್ವಲನ್|

06099008c ಪಿತಾಮಹಂ ತ್ರಿಭಿರ್ಬಾಣೈರ್ಬಾಹ್ವೋರುರಸಿ ಚಾರ್ಪಯತ್||

ಧೃಷ್ಟದ್ಯುಮ್ನನಾದರೋ ಸಮರದಲ್ಲಿ ಕ್ರೋಧದಿಂದ ಅಗ್ನಿಯಂತೆ ಪ್ರಜ್ವಲಿಸುತ್ತಾ ಮೂರು ಬಾಣಗಳಿಂದ ಪಿತಾಮಹನ ಎದೆಗೆ ಹೊಡೆದನು.

06099009a ದ್ರುಪದಃ ಪಂಚವಿಂಶತ್ಯಾ ವಿರಾಟೋ ದಶಭಿಃ ಶರೈಃ|

06099009c ಶಿಖಂಡೀ ಪಂಚವಿಂಶತ್ಯಾ ಭೀಷ್ಮಂ ವಿವ್ಯಾಧ ಸಾಯಕೈಃ||

ಭೀಷ್ಮನನ್ನು ದ್ರುಪದನು ಇಪ್ಪತ್ತೈದರಿಂದ, ವಿರಾಟನು ಹತ್ತು ಬಾಣಗಳಿಂದ, ಮತ್ತು ಶಿಖಂಡಿಯು ಇಪ್ಪತ್ತೈದು ಸಾಯಕಗಳಿಂದ ಹೊಡೆದರು.

06099010a ಸೋಽತಿವಿದ್ಧೋ ಮಹಾರಾಜ ಭೀಷ್ಮಃ ಸಂಖ್ಯೇ ಮಹಾತ್ಮಭಿಃ|

06099010c ವಸಂತೇ ಪುಷ್ಪಶಬಲೋ ರಕ್ತಾಶೋಕ ಇವಾಬಭೌ||

ಮಹಾರಾಜ! ಯುದ್ಧದಲ್ಲಿ ಆ ಮಹಾತ್ಮರಿಂದ ಹೀಗೆ ಅತಿಯಾಗಿ ಗಾಯಗೊಂಡ ಭೀಷ್ಮನು ವಸಂತಕಾಲದಲ್ಲಿ ಪುಷ್ಪ-ಚಿಗುರುಗಳಿಂದ ಕೂಡಿದ ಅಶೋಕವೃಕ್ಷದಂತೆ ಕೆಂಪಾಗಿ ತೋರಿದನು.

06099011a ತಾನ್ಪ್ರತ್ಯವಿಧ್ಯದ್ಗಾಂಗೇಯಸ್ತ್ರಿಭಿಸ್ತ್ರಿಭಿರಜಿಹ್ಮಗೈಃ|

06099011c ದ್ರುಪದಸ್ಯ ಚ ಭಲ್ಲೇನ ಧನುಶ್ಚಿಚ್ಛೇದ ಮಾರಿಷ||

ಮಾರಿಷ! ಅವರನ್ನು ಮೂರು ಮೂರು ಜಿಹ್ಮಗಗಳಿಂದ ತಿರುಗಿ ಹೊಡೆದು ಗಾಂಗೇಯನು ಭಲ್ಲದಿಂದ ದ್ರುಪದನ ಧನುಸ್ಸನ್ನು ಕತ್ತರಿಸಿದನು.

06099012a ಸೋಽನ್ಯತ್ಕಾರ್ಮುಕಮಾದಾಯ ಭೀಷ್ಮಂ ವಿವ್ಯಾಧ ಪಂಚಭಿಃ|

06099012c ಸಾರಥಿಂ ಚ ತ್ರಿಭಿರ್ಬಾಣೈಃ ಸುಶಿತೈ ರಣಮೂರ್ಧನಿ||

ಆಗ ರಣನೆತ್ತಿಯಲ್ಲಿ ಅವನು ಇನ್ನೊಂದು ಬಿಲ್ಲನ್ನು ಎತ್ತಿಕೊಂಡು ಭೀಷ್ಮನನ್ನು ಐದು ಮತ್ತು ಸಾರಥಿಯನ್ನು ಮೂರು ನಿಶಿತ ಬಾಣಗಳಿಂದ ಹೊಡೆದನು.

06099013a ತತೋ ಭೀಮೋ ಮಹಾರಾಜ ದ್ರೌಪದ್ಯಾಃ ಪಂಚ ಚಾತ್ಮಜಾಃ|

06099013c ಕೇಕಯಾ ಭ್ರಾತರಃ ಪಂಚ ಸಾತ್ಯಕಿಶ್ಚೈವ ಸಾತ್ವತಃ||

06099014a ಅಭ್ಯದ್ರವಂತ ಗಾಂಗೇಯಂ ಯುಧಿಷ್ಠಿರಹಿತೇಪ್ಸಯಾ|

06099014c ರಿರಕ್ಷಿಷಂತಃ ಪಾಂಚಾಲ್ಯಂ ಧೃಷ್ಟದ್ಯುಮ್ನಮುಖನ್ರಣೇ||

ಮಹಾರಾಜ! ಆಗ ಯುಧಿಷ್ಠಿರನ ಹಿತವನ್ನು ಅಪೇಕ್ಷಿಸಿ ಮತ್ತು ರಣಮುಖದಲ್ಲಿ ಪಾಂಚಾಲ್ಯ ಧೃಷ್ಟದ್ಯುಮ್ನನನ್ನು ರಕ್ಷಿಸುವ ಸಲುವಾಗಿ ಭೀಮನು ದ್ರೌಪದಿಯ ಐದು ಮಕ್ಕಳು, ಕೇಕಯದ ಐವರು ಸಹೋದರರು ಮತ್ತು ಸಾತ್ವತ ಸಾತ್ಯಕಿಯನ್ನೊಡಗೂಡಿ ಗಾಂಗೇಯನನ್ನು ಅಕ್ರಮಣಿಸಿದನು.

06099015a ತಥೈವ ತಾವಕಾಃ ಸರ್ವೇ ಭೀಷ್ಮರಕ್ಷಾರ್ಥಮುದ್ಯತಾಃ|

06099015c ಪ್ರತ್ಯುದ್ಯಯುಃ ಪಾಂಡುಸೇನಾಂ ಸಹಸೈನ್ಯಾ ನರಾಧಿಪ||

ನರಾಧಿಪ! ಹಾಗೆಯೇ ನಿಮ್ಮವರೆಲ್ಲರೂ ಭೀಷ್ಮನ ರಕ್ಷಣೆಗಾಗಿ ಉದ್ಯುಕ್ತರಾಗಿ ಸೇನೆಗಳೊಂದಿಗೆ ಪಾಂಡುಸೇನೆಯನ್ನು ಎದುರಿಸಿ ಹೋರಾಡಿದರು.

06099016a ತತ್ರಾಸೀತ್ಸುಮಹದ್ಯುದ್ಧಂ ತವ ತೇಷಾಂ ಚ ಸಂಕುಲಂ|

06099016c ನರಾಶ್ವರಥನಾಗಾನಾಂ ಯಮರಾಷ್ಟ್ರವಿವರ್ಧನಂ||

ಆಗ ಅಲ್ಲಿ ನಿಮ್ಮವರ ಮತ್ತು ಅವರ ನಡುವೆ ಯಮರಾಷ್ಟ್ರವನ್ನು ವೃದ್ಧಿಗೊಳಿಸುವ ಪದಾತಿ-ಕುದುರೆ-ರಥ-ಆನೆಗಳ ಮಹಾ ಸಂಕುಲ ಯುದ್ಧವು ನಡೆಯಿತು.

06099017a ರಥೀ ರಥಿನಮಾಸಾದ್ಯ ಪ್ರಾಹಿಣೋದ್ಯಮಸಾದನಂ|

06099017c ತಥೇತರಾನ್ಸಮಾಸಾದ್ಯ ನರನಾಗಾಶ್ವಸಾದಿನಃ||

06099018a ಅನಯನ್ಪರಲೋಕಾಯ ಶರೈಃ ಸನ್ನತಪರ್ವಭಿಃ|

06099018c ಅಸ್ತ್ರೈಶ್ಚ ವಿವಿಧೈರ್ಘೋರೈಸ್ತತ್ರ ತತ್ರ ವಿಶಾಂ ಪತೇ||

ರಥಿಗಳು ರಥಿಗಳ ಮೇಲೆ ಆಕ್ರಮಣಮಾಡಿ ಯಮಸಾದನಕ್ಕೆ ಕಳುಹಿಸುತ್ತಿದ್ದರು. ವಿಶಾಂಪತೇ! ಇತರರು ಅಲ್ಲಲ್ಲಿ ಪದಾತಿ-ಆನೆ-ಕುದುರೆ ಸವಾರರನ್ನು ಸನ್ನತಪರ್ವ ಶರಗಳಿಂದ ಮತ್ತು ವಿವಿಧ ಘೋರ ಅಸ್ತ್ರಗಳಿಂದ ಪರಲೋಕಗಳಿಗೆ ಕಳುಹಿಸುತ್ತಿದ್ದರು.

06099019a ರಥಾಶ್ಚ ರಥಿಭಿರ್ಹೀನಾ ಹತಸಾರಥಯಸ್ತಥಾ|

06099019c ವಿಪ್ರದ್ರುತಾಶ್ವಾಃ ಸಮರೇ ದಿಶೋ ಜಗ್ಮುಃ ಸಮಂತತಃ||

ರಥಗಳಿಗೆ ಕಟ್ಟಿದ್ದ ಕುದುರೆಗಳು ರಥಿಗಳನ್ನು ಕಳೆದುಕೊಂಡು ಮತ್ತು ಸಾರಥಿಗಳನ್ನು ಕಳೆದುಕೊಂಡು ಸಮರದಲ್ಲಿ ಎಲ್ಲ ಕಡೆಗಳಲ್ಲಿ ಓಡಿಹೋಗುತ್ತಿದ್ದವು.

06099020a ಮರ್ದಮಾನಾ ನರಾನ್ರಾಜನ್ ಹಯಾಂಶ್ಚ ಸುಬಹೂನ್ರಣೇ|

06099020c ವಾತಾಯಮಾನಾ ದೃಶ್ಯಂತೇ ಗಂಧರ್ವನಗರೋಪಮಾಃ||

ರಾಜನ್! ರಣದಲ್ಲಿ ಬಹಳಷ್ಟು ಮನುಷ್ಯರನ್ನು ಮತ್ತು ಕುದುರೆಗಳನ್ನು ಮರ್ದಿಸುತ್ತಿದ್ದ ಆ ರಥಗಳು ಗಂಧರ್ವನಗರಗಳಂತೆ ಕಾಣುತ್ತಿದ್ದವು.

06099021a ರಥಿನಶ್ಚ ರಥೈರ್ಹೀನಾ ವರ್ಮಿಣಸ್ತೇಜಸಾ ಯುತಾಃ|

06099021c ಕುಂಡಲೋಷ್ಣೀಷಿಣಃ ಸರ್ವೇ ನಿಷ್ಕಾಂಗದವಿಭೂಷಿತಾಃ||

06099022a ದೇವಪುತ್ರಸಮಾ ರೂಪೇ ಶೌರ್ಯೇ ಶಕ್ರಸಮಾ ಯುಧಿ|

06099022c ಋದ್ಧ್ಯಾ ವೈಶ್ರವಣಂ ಚಾತಿ ನಯೇನ ಚ ಬೃಹಸ್ಪತಿಂ||

06099023a ಸರ್ವಲೋಕೇಶ್ವರಾಃ ಶೂರಾಸ್ತತ್ರ ತತ್ರ ವಿಶಾಂ ಪತೇ|

06099023c ವಿಪ್ರದ್ರುತಾ ವ್ಯದೃಶ್ಯಂತ ಪ್ರಾಕೃತಾ ಇವ ಮಾನವಾಃ||

ವಿಶಾಂಪತೇ! ಹೊಳೆಯುತ್ತಿರುವ ಕವಚಗಳನ್ನು ಧರಿಸಿದ್ದ, ಕುಂಡಲ-ಕಿರೀಟಗಳಿಂದ ಮತ್ತು ಸರ್ವಾಂಗಗಳಲ್ಲಿ ವಿಭೂಷಿತರಾದ, ರೂಪದಲ್ಲಿ ದೇವಪುತ್ರರ ಸಮನಾದ, ಯುದ್ಧ ಶೌರ್ಯದಲ್ಲಿ ಶಕ್ರನ ಸಮನಾದ, ವೈಶ್ರವಣನಂತೆ ಶ್ರೀಮಂತರಾದ, ನ್ಯಾಯಗಳಲ್ಲಿ ಬೃಹಸ್ಪತಿಯಂತಿರುವ, ಸರ್ವಲೋಕೇಶ್ವರರಂತಿರುವ ಶೂರ ರಥರು ರಥಹೀನರಾಗಿ ಸಾಧಾರಣ ಮನುಷ್ಯರಂತೆ ಅಲ್ಲಲ್ಲಿ ಓಡಿಹೋಗುತ್ತಿರುವುದು ಕಂಡುಬಂದಿತು.

06099024a ದಂತಿನಶ್ಚ ನರಶ್ರೇಷ್ಠ ವಿಹೀನಾ ವರಸಾದಿಭಿಃ|

06099024c ಮೃದ್ನಂತಃ ಸ್ವಾನ್ಯನೀಕಾನಿ ಸಂಪೇತುಃ ಸರ್ವಶಬ್ದಗಾಃ||

ನರಶ್ರೇಷ್ಠ! ಆನೆಗಳೂ ಕೂಡ ಮಾವುತರನ್ನು ಕಳೆದುಕೊಂಡು ತಮ್ಮ ಸೈನಿಕರನ್ನೇ ತುಳಿಯುತ್ತಾ ಜೋರಾಗಿ ಕೂಗಿಕೊಂಡು ಎಲ್ಲ ಕಡೆ ಓಡಿಹೋಗುತ್ತಿದ್ದವು.

06099025a ವರ್ಮಭಿಶ್ಚಾಮರೈಶ್ಚತ್ರೈಃ ಪತಾಕಾಭಿಶ್ಚ ಮಾರಿಷ|

06099025c ಕಕ್ಷ್ಯಾಭಿರಥ ತೋತ್ತ್ರೈಶ್ಚ ಘಂಟಾಭಿಸ್ತೋಮರೈಸ್ತಥಾ||

06099026a ವಿಶೀರ್ಣೈರ್ವಿಪ್ರಧಾವಂತೋ ದೃಶ್ಯಂತೇ ಸ್ಮ ದಿಶೋ ದಶ|

06099026c ನಗಮೇಘಪ್ರತೀಕಾಶೈರ್ಜಲದೋದಯನಿಸ್ವನೈಃ||

ಮಾರಿಷ! ಕಪ್ಪುಮೋಡಗಳಂತೆ ಹೊಳೆಯುವ ಮತ್ತು ಮೋಡಗಳಿಂದ ಗರ್ಜಿಸುವ ಆನೆಗಳು ಕವಚಗಳನ್ನು, ಚಾಮರ-ಚತ್ರಗಳನ್ನು, ಪತಾಕೆಗಳನ್ನು, ಕಕ್ಷ್ಯಗಳನ್ನು, ಘಂಟೆಗಳನ್ನು, ಮತ್ತು ತೋಮರಗಳನ್ನು ಕಳೆದುಕೊಂಡು ಹತ್ತೂ ದಿಕ್ಕುಗಳಲ್ಲಿ ಓಡಿ ಹೋಗುತ್ತಿರುವುದು ಕಂಡುಬಂದಿತು.

06099027a ತಥೈವ ದಂತಿಭಿರ್ಹೀನಾನ್ಗಜಾರೋಹಾನ್ವಿಶಾಂ ಪತೇ|

06099027c ಪ್ರಧಾವಂತೋಽನ್ವಪಶ್ಯಾಮ ತವ ತೇಷಾಂ ಚ ಸಂಕುಲೇ||

ವಿಶಾಂಪತೇ! ಹಾಗೆಯೇ ನಿನ್ನ ಮತ್ತು ಅವರ ಸಂಕುಲಗಳಲ್ಲಿ ಆನೆಗಳನ್ನು ಕಳೆದುಕೊಂಡ ಗಜಾರೋಹಿಗಳು ಓಡಿಹೋಗುತ್ತಿರುವುದನ್ನು ನೋಡಿದೆವು.

06099028a ನಾನಾದೇಶಸಮುತ್ಥಾಂಶ್ಚ ತುರಗಾನ್ ಹೇಮಭೂಷಿತಾನ್|

06099028c ವಾತಾಯಮಾನಾನದ್ರಾಕ್ಷಂ ಶತಶೋಽಥ ಸಹಸ್ರಶಃ||

ನಾನಾ ದೇಶಗಳಲ್ಲಿ ಹುಟ್ಟಿದ್ದ, ಹೇಮಭೂಷಿತ, ವಾಯುವಿನ ವೇಗವುಳ್ಳ ನೂರಾರು ಸಹಸ್ರಾರು ಕುದುರೆಗಳು ಓಡಿಹೋಗುತ್ತಿರುವುದನ್ನು ನೋಡಿದೆವು.

06099029a ಅಶ್ವಾರೋಹಾನ್ ಹತೈರಶ್ವೈರ್ಗೃಹೀತಾಸೀನ್ಸಮಂತತಃ|

06099029c ದ್ರವಮಾಣಾನಪಶ್ಯಾಮ ದ್ರಾವ್ಯಮಾಣಾಂಶ್ಚ ಸಂಯುಗೇ||

ಅಶ್ವಾರೋಹಿಗಳು ಖಡ್ಗಗಳನ್ನು ಹಿಡಿದು ಕುದುರೆಗಳನ್ನು ಓಡಿಸಿಕೊಂಡು ಹೋಗುತ್ತಿರುವುದನ್ನೂ, ಕುದುರೆಗಳು ಅವರನ್ನು ಓಡಿಸಿಕೊಂಡು ಹೋಗುತ್ತಿರುವುದನ್ನೂ ಸಮರದಲ್ಲಿ ಎಲ್ಲಕಡೆ ನೋಡಿದೆವು.

06099030a ಗಜೋ ಗಜಂ ಸಮಾಸಾದ್ಯ ದ್ರವಮಾಣಂ ಮಹಾರಣೇ|

06099030c ಯಯೌ ವಿಮೃದ್ನಂಸ್ತರಸಾ ಪದಾತೀನ್ವಾಜಿನಸ್ತಥಾ||

ಆನೆಯು ಆನೆಯನ್ನು ಸೇರಿಕೊಂಡು ಮಹಾರಣದಲ್ಲಿ ಪದಾತಿಗಳನ್ನೂ ಕುದುರೆಗಳನ್ನೂ ಧ್ವಂಸಮಾಡಿ ಓಡಿ ಹೋಗುತ್ತಿರುವುದನ್ನು ಕಂಡೆವು.

06099031a ತಥೈವ ಚ ರಥಾನ್ರಾಜನ್ಸಮ್ಮಮರ್ದ ರಣೇ ಗಜಃ|

06099031c ರಥಶ್ಚೈವ ಸಮಾಸಾದ್ಯ ಪದಾತಿಂ ತುರಗಂ ತಥಾ||

06099032a ವ್ಯಮೃದ್ನಾತ್ಸಮರೇ ರಾಜಂಸ್ತುರಗಾಂಶ್ಚ ನರಾನ್ರಣೇ|

06099032c ಏವಂ ತೇ ಬಹುಧಾ ರಾಜನ್ಪ್ರಮೃದ್ನಂತಃ ಪರಸ್ಪರಂ||

ರಾಜನ್! ಹಾಗೆಯೇ ರಣದಲ್ಲಿ ಆನೆಗಳು ರಥಗಳನ್ನು ಧ್ವಂಸಮಾಡಿದವು. ರಥಗಳೂ ಕೂಡ ಪದಾತಿಗಳು ಮತ್ತು ಕುದುರೆಗಳ ಮೇಲೆ ಬಿದ್ದು ಧ್ವಂಸಮಾಡಿದವು. ರಾಜನ್! ಸಮರದಲ್ಲಿ ಕುದುರೆಗಳು ರಣದಲ್ಲಿದ್ದ ಪದಾತಿಗಳನ್ನು ತುಳಿದು ಧ್ವಂಸಮಾಡಿದವು. ಹೀಗೆ ರಾಜನ್! ಪರಸ್ಪರರನ್ನು ಬಹಳವಾಗಿ ಧ್ವಂಸಮಾಡಲಾಯಿತು.

06099033a ತಸ್ಮಿನ್ರೌದ್ರೇ ತಥಾ ಯುದ್ಧೇ ವರ್ತಮಾನೇ ಮಹಾಭಯೇ|

06099033c ಪ್ರಾವರ್ತತ ನದೀ ಘೋರಾ ಶೋಣಿತಾಂತ್ರತರಂಗಿಣೀ||

ನಡೆಯುತ್ತಿದ್ದ ಆ ಮಹಾಭಯಂಕರ ರೌದ್ರ ಯುದ್ಧದಲ್ಲಿ ರಕ್ತ ಮತ್ತು ಕರುಳುಗಳು ತರಂಗಗಳಾಗಿದ್ದ ಘೋರ ನದಿಯೊಂದು ಹುಟ್ಟಿ ಹರಿಯಿತು.

06099034a ಅಸ್ಥಿಸಂಚಯಸಂಘಾಟಾ ಕೇಶಶೈವಲಶಾದ್ವಲಾ|

06099034c ರಥಹ್ರದಾ ಶರಾವರ್ತಾ ಹಯಮೀನಾ ದುರಾಸದಾ||

ಮೂಳೆಗಳ ರಾಶಿಗಳು ಬಂಡೆಗಳಂತಿದ್ದವು, ಕೂದಲುಗಳು ಪಾಚೆಹುಲ್ಲಿನಂತಿದ್ದವು, ರಥಗಳ ಗುಂಪುಗಳು ಮಡುವುಗಳಾಗಿದ್ದವು, ಮತ್ತು ಕುದುರೆಗಳು ದುರಾಸದವಾಗಿದ್ದ ಅದರ ಮೀನುಗಳಾಗಿದ್ದವು.

06099035a ಶೀರ್ಷೋಪಲಸಮಾಕೀರ್ಣಾ ಹಸ್ತಿಗ್ರಾಹಸಮಾಕುಲಾ|

06099035c ಕವಚೋಷ್ಣೀಷಫೇನಾಢ್ಯಾ ಧನುರ್ದ್ವೀಪಾಸಿಕಚ್ಛಪಾ||

ತಲೆಬುರುಡೆಗಳಿಂದ ತುಂಬಿಹೋಗಿತ್ತು. ಆನೆಗಳು ಅದರ ಮೊಸಳೆಗಳಂತಿದ್ದವು. ಕವಚ ಮತ್ತು ಶಿರಸ್ತ್ರಾಣಗಳು ನೊರೆಗಳಂತಿದ್ದವು. ಧನುಸ್ಸುಗಳು ಪ್ರವಾಹದಂತೆಯೂ ಕತ್ತಿಗಳು ಆಮೆಗಳಂತೆಯೂ ಇದ್ದವು.

06099036a ಪತಾಕಾಧ್ವಜವೃಕ್ಷಾಢ್ಯಾ ಮರ್ತ್ಯಕೂಲಾಪಹಾರಿಣೀ|

06099036c ಕ್ರವ್ಯಾದಸಂಘಸಂಕೀರ್ಣಾ ಯಮರಾಷ್ಟ್ರವಿವರ್ಧಿನೀ||

06099037a ತಾಂ ನದೀಂ ಕ್ಷತ್ರಿಯಾಃ ಶೂರಾ ಹಯನಾಗರಥಪ್ಲವೈಃ|

06099037c ಪ್ರತೇರುರ್ಬಹವೋ ರಾಜನ್ಭಯಂ ತ್ಯಕ್ತ್ವಾ ಮಹಾಹವೇ||

ರಾಜನ್! ಪತಾಕೆ ಮತ್ತು ಧ್ವಜಗಳು ತೀರವೃಕ್ಷಗಳಂತಿದ್ದವು. ಸತ್ತವರ ಹೆಣಗಳೆಂಬ ತೀರವನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ಮಾಂಸಾಹಾರಿ ಪ್ರಾಣಿ-ಪಕ್ಷಿಗಳು ಆ ನದಿಯ ಹಂಸಗಳಾಗಿದ್ದವು. ಯಮರಾಷ್ಟ್ರವಿವರ್ಧಿನಿಯಾದ ಆ ನದಿಯನ್ನು ಶೂರ ಕ್ಷತ್ರಿಯರು ರಥ-ಆನೆ-ಕುದುರೆಗಳನ್ನೇ ದೋಣಿಗಳನ್ನಾಗಿಸಿಕೊಂಡು ಭಯವನ್ನು ತ್ಯಜಿಸಿ ಆ ಮಹಾಹವದಲ್ಲಿ ದಾಟುತ್ತಿದ್ದರು.

06099038a ಅಪೋವಾಹ ರಣೇ ಭೀರೂನ್ಕಶ್ಮಲೇನಾಭಿಸಂವೃತಾನ್|

06099038c ಯಥಾ ವೈತರಣೀ ಪ್ರೇತಾನ್ಪ್ರೇತರಾಜಪುರಂ ಪ್ರತಿ||

ವೈತರಣಿಯು ಹೇಗೆ ಪ್ರೇತಗಳನ್ನು ಪ್ರೇತರಾಜಪುರಕ್ಕೆ ಕೊಂಡೊಯ್ಯುತ್ತದೆಯೋ ಹಾಗೆ ರಣದಲ್ಲಿಯ ಆ ನದಿಯು ಸಂಕೋಚಪಟ್ಟವರನ್ನು, ಕಳವಳದಿಂದಿರುವವರನ್ನು ಒಯ್ಯುತ್ತಿತ್ತು.

06099039a ಪ್ರಾಕ್ರೋಶನ್ ಕ್ಷತ್ರಿಯಾಸ್ತತ್ರ ದೃಷ್ಟ್ವಾ ತದ್ವೈಶಸಂ ಮಹತ್|

06099039c ದುರ್ಯೋಧನಾಪರಾಧೇನ ಕ್ಷಯಂ ಗಚ್ಛಂತಿ ಕೌರವಾಃ||

ಅಲ್ಲಿ ಆ ಮಹಾವಿನಾಶವನ್ನು ನೋಡಿ ಕ್ಷತ್ರಿಯರೆಲ್ಲರೂ ಸಂಕಟದಿಂದ ಕೂಗಿದರು: “ದುರ್ಯೋಧನನ ಅಪರಾಧದಿಂದ ಕೌರವರು ಕ್ಷಯವಾಗುತ್ತಿದ್ದಾರೆ.

06099040a ಗುಣವತ್ಸು ಕಥಂ ದ್ವೇಷಂ ಧಾರ್ತರಾಷ್ಟ್ರೋ ಜನೇಶ್ವರಃ|

06099040c ಕೃತವಾನ್ಪಾಂಡುಪುತ್ರೇಷು ಪಾಪಾತ್ಮಾ ಲೋಭಮೋಹಿತಃ||

ಜನೇಶ್ವರ ಪಾಪಾತ್ಮಾ ಲೋಭಮೋಹಿತ ಧಾರ್ತರಾಷ್ಟ್ರನು ಹೇಗೆ ತಾನೇ ಗುಣವಂತ ಪಾಂಡುಪುತ್ರರೊಂದಿಗೆ ದ್ವೇಷವನ್ನು ಸಾಧಿಸುತ್ತಾನೆ?”

06099041a ಏವಂ ಬಹುವಿಧಾ ವಾಚಃ ಶ್ರೂಯಂತೇ ಸ್ಮಾತ್ರ ಭಾರತ|

06099041c ಪಾಂಡವಸ್ತವಸಮ್ಯುಕ್ತಾಃ ಪುತ್ರಾಣಾಂ ತೇ ಸುದಾರುಣಾಃ||

ಭಾರತ! ಹೀಗೆ ಬಹುವಿಧದ ಮಾತುಗಳನ್ನು ಅಲ್ಲಿ ಪಾಂಡವರು ಮತ್ತು ನಿನ್ನ ಪುತ್ರರ ಸುದಾರುಣ ಸಮಾಗಮದಲ್ಲಿ ಕೇಳಿದೆವು.

06099042a ತಾ ನಿಶಮ್ಯ ತದಾ ವಾಚಃ ಸರ್ವಯೋಧೈರುದಾಹೃತಾಃ|

06099042c ಆಗಸ್ಕೃತ್ಸರ್ವಲೋಕಸ್ಯ ಪುತ್ರೋ ದುರ್ಯೋಧನಸ್ತವ||

06099043a ಭೀಷ್ಮಂ ದ್ರೋಣಂ ಕೃಪಂ ಚೈವ ಶಲ್ಯಂ ಚೋವಾಚ ಭಾರತ|

06099043c ಯುಧ್ಯಧ್ವಮನಹಂಕಾರಾಃ ಕಿಂ ಚಿರಂ ಕುರುಥೇತಿ ಚ||

ಭಾರತ! ಸರ್ವ ಯೋಧರು ಹೇಳಿಕೊಳ್ಳುತ್ತಿದ್ದ ಆ ಮಾತನ್ನು ಕೇಳಿ ಸರ್ವಲೋಕವನ್ನೂ ಅನಾದರಿಸುವ ನಿನ್ನ ಮಗ ದುರ್ಯೋಧನನು ಭೀಷ್ಮ, ದ್ರೋಣ, ಕೃಪ ಮತ್ತು ಶಲ್ಯರಿಗೆ “ಅಹಂಕಾರವನ್ನು ಬಿಟ್ಟು ಯುದ್ಧಮಾಡಿ! ಏಕೆ ತಡಮಾಡುತ್ತಿದ್ದೀರಿ?” ಎಂದನು.

06099044a ತತಃ ಪ್ರವವೃತೇ ಯುದ್ಧಂ ಕುರೂಣಾಂ ಪಾಂಡವೈಃ ಸಹ|

06099044c ಅಕ್ಷದ್ಯೂತಕೃತಂ ರಾಜನ್ಸುಘೋರಂ ವೈಶಸಂ ತದಾ||

ಆಗ ರಾಜನ್! ಅಕ್ಷದ್ಯೂತವನ್ನಾಡಿದ ಕುರುಗಳ ಮತ್ತು ಪಾಂಡವರ ನಡುವೆ ಸುಘೋರವಾದ ವಿನಾಶಕಾರಿ ಯುದ್ಧವು ನಡೆಯಿತು.

06099045a ಯತ್ಪುರಾ ನ ನಿಗೃಹ್ಣೀಷೇ ವಾರ್ಯಮಾಣೋ ಮಹಾತ್ಮಭಿಃ|

06099045c ವೈಚಿತ್ರವೀರ್ಯ ತಸ್ಯೇದಂ ಫಲಂ ಪಶ್ಯ ತಥಾವಿಧಂ||

ವೈಚಿತ್ರವೀರ್ಯ! ಹಿಂದೆ ನೀನು ಅದನ್ನು ತಡೆಯುತ್ತಿದ್ದ ಮಹಾತ್ಮರನ್ನು ಸ್ವೀಕರಿಸದೇ ಇದ್ದುದರ ಫಲವನ್ನು ಇಂದು ಯಥಾವಿಧವಾಗಿ ನೋಡು.

06099046a ನ ಹಿ ಪಾಂಡುಸುತಾ ರಾಜನ್ಸಸೈನ್ಯಾಃ ಸಪದಾನುಗಾಃ|

06099046c ರಕ್ಷಂತಿ ಸಮರೇ ಪ್ರಾಣಾನ್ಕೌರವಾ ವಾ ವಿಶಾಂ ಪತೇ||

ವಿಶಾಂಪತೇ! ಸಮರದಲ್ಲಿ ಪಾಂಡುಸುತರಾಗಲೀ ಅಥವಾ ಕೌರವರಾಗಲೀ, ಅವರ ಸೇನೆಗಳಾಗಲೀ, ಅವರ ಅನುಯಾಯಿಗಳಾಗಲೀ ತಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳುತ್ತಿರಲಿಲ್ಲ.

06099047a ಏತಸ್ಮಾತ್ಕಾರಣಾದ್ಘೋರೋ ವರ್ತತೇ ಸ್ಮ ಜನಕ್ಷಯಃ|

06099047c ದೈವಾದ್ವಾ ಪುರುಷವ್ಯಾಘ್ರ ತವ ಚಾಪನಯಾನ್ನೃಪ||

ಪುರುಷವ್ಯಾಘ್ರ! ನೃಪ! ಇದೇ ಕಾರಣದಿಂದ, ದೈವದಿಂದಲೋ ಅಥವಾ ನಿನ್ನ ಅನ್ಯಾಯಗಳಿಂದಲೋ ಈ ಘೋರ ಜನಕ್ಷಯವು ನಡೆಯುತ್ತಿದೆ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಂಕುಲಯುದ್ಧೇ ಏಕೋನಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ತೊಂಭತ್ತೊಂಭತ್ತನೇ ಅಧ್ಯಾಯವು.

Image result for indian motifs against white background

 

Comments are closed.