Bhishma Parva: Chapter 98

ಭೀಷ್ಮ ಪರ್ವ: ಭೀಷ್ಮವಧ ಪರ್ವ

೯೮

ದ್ರೋಣ-ಅರ್ಜುನರ ಯುದ್ಧ (೧-೨೭). ಭೀಮನು ಪದಾತಿಯಾಗಿಯೇ ಕೌರವ ಗಜಸೇನೆಯನ್ನು ನಾಶಗೊಳಿಸಿದುದು (೨೮-೩೮).

Image result for bhima killing elephants06098001 ಧೃತರಾಷ್ಟ್ರ ಉವಾಚ|

06098001a ಕಥಂ ದ್ರೋಣೋ ಮಹೇಷ್ವಾಸಃ ಪಾಂಡವಶ್ಚ ಧನಂಜಯಃ|

06098001c ಸಮೀಯತೂ ರಣೇ ಶೂರೌ ತನ್ಮಮಾಚಕ್ಷ್ವ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ದ್ರೋಣ ಮತ್ತು ಮಹೇಷ್ವಾಸ ಪಾಂಡವ ಧನಂಜಯ ಇವರಿಬ್ಬರು ಶೂರರೂ ರಣದಲ್ಲಿ ಹೇಗೆ ಎದುರಾದರು ಎನ್ನುವುದನ್ನು ನನಗೆ ಹೇಳು.

06098002a ಪ್ರಿಯೋ ಹಿ ಪಾಂಡವೋ ನಿತ್ಯಂ ಭಾರದ್ವಾಜಸ್ಯ ಧೀಮತಃ|

06098002c ಆಚಾರ್ಯಶ್ಚ ರಣೇ ನಿತ್ಯಂ ಪ್ರಿಯಃ ಪಾರ್ಥಸ್ಯ ಸಂಜಯ||

ಸಂಜಯ! ಧೀಮತ ಭಾರದ್ವಾಜನಿಗೆ ಪಾಂಡವನು ಯಾವಾಗಲೂ ಪ್ರಿಯನಾದವನು. ಆಚಾರ್ಯನೂ ಕೂಡ ರಣದಲ್ಲಿ ನಿತ್ಯವೂ ಪಾರ್ಥನ ಪ್ರಿಯನು.

06098003a ತಾವುಭೌ ರಥಿನೌ ಸಂಖ್ಯೇ ದೃಪ್ತೌ ಸಿಂಹಾವಿವೋತ್ಕಟೌ|

06098003c ಕಥಂ ಸಮೀಯತುರ್ಯುದ್ಧೇ ಭಾರದ್ವಾಜಧನಂಜಯೌ||

ಎರಡು ಸಿಂಹಗಳಂತೆ ಉತ್ಕಟರಾದ, ದರ್ಪಿಗಳಾದ, ರಥಿಗಳಾದ ಭಾರದ್ವಾಜ-ಧನಂಜಯರಿಬ್ಬರೂ ಹೇಗೆ ಯುದ್ಧದಲ್ಲಿ ಸೇರಿದರು?”

06098004 ಸಂಜಯ ಉವಾಚ|

06098004a ನ ದ್ರೋಣಃ ಸಮರೇ ಪಾರ್ಥಂ ಜಾನೀತೇ ಪ್ರಿಯಮಾತ್ಮನಃ|

06098004c ಕ್ಷತ್ರಧರ್ಮಂ ಪುರಸ್ಕೃತ್ಯ ಪಾರ್ಥೋ ವಾ ಗುರುಮಾಹವೇ||

ಸಂಜಯನು ಹೇಳಿದನು: “ಯುದ್ಧದಲ್ಲಿ ದ್ರೋಣನು ಪಾರ್ಥನನ್ನು ತನಗೆ ಪ್ರಿಯನಾದವನೆಂದು ಗುರುತಿಸುವುದಿಲ್ಲ. ಅಥವಾ ಪಾರ್ಥನೂ ಕ್ಷತ್ರಧರ್ಮವನ್ನು ಗೌರವಿಸಿ ಯುದ್ಧದಲ್ಲಿ ಅವನನ್ನು ಗುರುವೆಂದು ಗುರುತಿಸುವುದಿಲ್ಲ.

06098005a ನ ಕ್ಷತ್ರಿಯಾ ರಣೇ ರಾಜನ್ವರ್ಜಯಂತಿ ಪರಸ್ಪರಂ|

06098005c ನಿರ್ಮರ್ಯಾದಂ ಹಿ ಯುಧ್ಯಂತೇ ಪಿತೃಭಿರ್ಭ್ರಾತೃಭಿಃ ಸಹ||

ರಾಜನ್! ಕ್ಷತ್ರಿಯರು ರಣದಲ್ಲಿ ಎಂದೂ ಒಬ್ಬರನ್ನೊಬ್ಬರು ತಿರಸ್ಕರಿಸುವುದಿಲ್ಲ. ನಿರ್ಮರ್ಯಾದೆಯಿಂದ ತಂದೆ-ಸಹೋದರರೊಡನೆಯೂ ಯುದ್ಧ ಮಾಡುತ್ತಾರೆ.

06098006a ರಣೇ ಭಾರತ ಪಾರ್ಥೇನ ದ್ರೋಣೋ ವಿದ್ಧಸ್ತ್ರಿಭಿಃ ಶರೈಃ|

06098006c ನಾಚಿಂತಯತ ತಾನ್ಬಾಣಾನ್ಪಾರ್ಥಚಾಪಚ್ಯುತಾನ್ಯುಧಿ||

ಭಾರತ! ರಣದಲ್ಲಿ ದ್ರೋಣನು ಪಾರ್ಥನಿಂದ ಮೂರು ಬಾಣಗಳಿಂದ ಹೊಡೆಯಲ್ಪಟ್ಟನು. ಆದರೆ ಅವನು ಪಾರ್ಥನ ಚಾಪದಿಂದ ಹೊರಟುಬಂದ ಆ ಬಾಣಗಳನ್ನು ಪರಿಗಣಿಸಲೇ ಇಲ್ಲ.

06098007a ಶರವೃಷ್ಟ್ಯಾ ಪುನಃ ಪಾರ್ಥಶ್ಚಾದಯಾಮಾಸ ತಂ ರಣೇ|

06098007c ಪ್ರಜಜ್ವಾಲ ಚ ರೋಷೇಣ ಗಹನೇಽಗ್ನಿರಿವೋತ್ಥಿತಃ||

ರಣದಲ್ಲಿ ಪುನಃ ಪಾರ್ಥನನ್ನು ಶರವೃಷ್ಟಿಯಿಂದ ಮುಚ್ಚಿದನು ಮತ್ತು ರೋಷದಿಂದ ಗಹನವಾದ ವನವು ಸುಡುತ್ತಿದೆಯೋ ಎನ್ನುವಂತೆ ಉರಿದನು.

06098008a ತತೋಽರ್ಜುನಂ ರಣೇ ದ್ರೋಣಃ ಶರೈಃ ಸನ್ನತಪರ್ವಭಿಃ|

06098008c ವಾರಯಾಮಾಸ ರಾಜೇಂದ್ರ ನಚಿರಾದಿವ ಭಾರತ||

ರಾಜೇಂದ್ರ! ಭಾರತ! ಆಗ ರಣದಲ್ಲಿ ತಡಮಾಡದೇ ದ್ರೋಣನು ಸನ್ನತಪರ್ವ ಶರಗಳಿಂದ ಅರ್ಜುನನನ್ನು ನಿಲ್ಲಿಸಿದನು.

06098009a ತತೋ ದುರ್ಯೋಧನೋ ರಾಜಾ ಸುಶರ್ಮಾಣಮಚೋದಯತ್|

06098009c ದ್ರೋಣಸ್ಯ ಸಮರೇ ರಾಜನ್ಪಾರ್ಷ್ಣಿಗ್ರಹಣಕಾರಣಾತ್||

ರಾಜನ್! ಆಗ ಸಮರದಲ್ಲಿ ರಾಜಾ ದುರ್ಯೋಧನನು ದ್ರೋಣನ ರಥದ ಹಿಂಬಾಗದ ರಕ್ಷಕನಾಗಿರುವಂತೆ ಸುಶರ್ಮನಿಗೆ ನಿರ್ದೇಶಿಸಿದನು.

06098010a ತ್ರಿಗರ್ತರಾಡಪಿ ಕ್ರುದ್ಧೋ ಭೃಶಮಾಯಮ್ಯ ಕಾರ್ಮುಕಂ|

06098010c ಚಾದಯಾಮಾಸ ಸಮರೇ ಪಾರ್ಥಂ ಬಾಣೈರಯೋಮುಖೈಃ||

ತ್ರಿಗರ್ತರಾಜನೂ ಕೂಡ ಕ್ರುದ್ಧನಾಗಿ ಸಮರದಲ್ಲಿ ಕಾರ್ಮುಕವನ್ನು ಚೆನ್ನಾಗಿ ಎಳೆದು ಪಾರ್ಥನನ್ನು ಬಾಣಗಳಿಂದ ಮುಚ್ಚಿದನು.

06098011a ತಾಭ್ಯಾಂ ಮುಕ್ತಾಃ ಶರಾ ರಾಜನ್ನಂತರಿಕ್ಷೇ ವಿರೇಜಿರೇ|

06098011c ಹಂಸಾ ಇವ ಮಹಾರಾಜ ಶರತ್ಕಾಲೇ ನಭಸ್ತಲೇ||

ಅವರಿಬ್ಬರು ಬಿಟ್ಟ ಆ ಬಾಣಗಳು ಶರತ್ಕಾಲದಲ್ಲಿ ಆಕಾಶದಲ್ಲಿ ಹಾರಾಡುವ ಹಂಸಗಳಂತೆ ಪ್ರಕಾಶಿಸಿದವು.

06098012a ತೇ ಶರಾಃ ಪ್ರಾಪ್ಯ ಕೌಂತೇಯಂ ಸಮಸ್ತಾ ವಿವಿಶುಃ ಪ್ರಭೋ|

06098012c ಫಲಭಾರನತಂ ಯದ್ವತ್ಸ್ವಾದುವೃಕ್ಷಂ ವಿಹಂಗಮಾಃ||

ಪ್ರಭೋ! ರುಚಿಕರ ಹಣ್ಣುಗಳ ಭಾರದಿಂದ ಬಗ್ಗಿರುವ ವೃಕ್ಷಕ್ಕೆ ಹಕ್ಕಿಗಳು ಮುತ್ತಿಕೊಳ್ಳುವಂತೆ ಅವರ ಶರಗಳು ಅರ್ಜುನನ ಶರೀರದ ಸುತ್ತಲೂ ಚುಚ್ಚಿಕೊಂಡವು.

06098013a ಅರ್ಜುನಸ್ತು ರಣೇ ನಾದಂ ವಿನದ್ಯ ರಥಿನಾಂ ವರಃ|

06098013c ತ್ರಿಗರ್ತರಾಜಂ ಸಮರೇ ಸಪುತ್ರಂ ವಿವ್ಯಧೇ ಶರೈಃ||

ರಥಿಗಳಲ್ಲಿ ಶ್ರೇಷ್ಠ ಅರ್ಜುನನಾದರೋ ರಣದಲ್ಲಿ ಸಿಂಹನಾದ ಮಾಡಿ ಸಮರದಲ್ಲಿ ಪುತ್ರನೊಂದಿಗೆ ತ್ರಿಗರ್ತರಾಜನನ್ನು ಶರಗಳಿಂದ ಹೊಡೆದನು.

06098014a ತೇ ವಧ್ಯಮಾನಾಃ ಪಾರ್ಥೇನ ಕಾಲೇನೇವ ಯುಗಕ್ಷಯೇ|

06098014c ಪಾರ್ಥಮೇವಾಭ್ಯವರ್ತಂತ ಮರಣೇ ಕೃತನಿಶ್ಚಯಾಃ|

06098014e ಮುಮುಚುಃ ಶರವೃಷ್ಟಿಂ ಚ ಪಾಂಡವಸ್ಯ ರಥಂ ಪ್ರತಿ||

ಪ್ರಲಯಕಾಲದಲ್ಲಿ ಕಾಲಪುರುಷನಂತೆ ಪಾರ್ಥನಿಂದ ಪ್ರಹೃತರಾದ ಅವರು ಮರಣದ ನಿಶ್ಚಯವನ್ನು ಮಾಡಿ ಪಾರ್ಥನನ್ನೇ ಎದುರಿಸಿ, ಪಾಂಡವನ ರಥದ ಮೇಲೆ ಬಾಣಗಳ ಮಳೆಯನ್ನು ಸುರಿಸಿದರು.

06098015a ಶರವೃಷ್ಟಿಂ ತತಸ್ತಾಂ ತು ಶರವರ್ಷೇಣ ಪಾಂಡವಃ|

06098015c ಪ್ರತಿಜಗ್ರಾಹ ರಾಜೇಂದ್ರ ತೋಯವೃಷ್ಟಿಂ ಇವಾಚಲಃ||

ರಾಜೇಂದ್ರ! ಅಚಲವಾಗಿದ್ದು ಪರ್ವತವು ನೀರಿನ ಮಳೆಯನ್ನು ಸ್ವೀಕರಿಸುವಂತೆ ಅವರು ಸುರಿಸಿದ ಬಾಣಗಳ ಮಳೆಯನ್ನು ಪಾಂಡವನು ತಡೆದುಕೊಂಡನು.

06098016a ತತ್ರಾದ್ಭುತಮಪಶ್ಯಾಮ ಬೀಭತ್ಸೋರ್ಹಸ್ತಲಾಘವಂ|

06098016c ವಿಮುಕ್ತಾಂ ಬಹುಭಿಃ ಶೂರೈಃ ಶಸ್ತ್ರವೃಷ್ಟಿಂ ದುರಾಸದಾಂ||

06098017a ಯದೇಕೋ ವಾರಯಾಮಾಸ ಮಾರುತೋಽಭ್ರಗಣಾನಿವ|

06098017c ಕರ್ಮಣಾ ತೇನ ಪಾರ್ಥಸ್ಯ ತುತುಷುರ್ದೇವದಾನವಾಃ||

ಅಲ್ಲಿ ನಾವು ಬೀಭತ್ಸುವಿನ ಕೈಚಳಕದ ಅದ್ಭುತವನ್ನು ನೋಡಿದೆವು. ಅನೇಕ ಶೂರರು ಸುರಿಸಿದ ಸಹಿಸಲಸಾದ್ಯ ಬಾಣಗಳ ಮಳೆಯನ್ನು ಅವನೊಬ್ಬನೇ ಭಿರುಗಾಳಿಯು ಮೋಡಗಳ ಸಮೂಹವನ್ನು ಹೇಗೋ ಹಾಗೆ ಚದುರಿಸಿ ತಡೆದನು. ಪಾರ್ಥನ ಆ ಕೆಲಸದಿಂದ ದೇವ-ದಾನವರು ಸಂತುಷ್ಟರಾದರು.

06098018a ಅಥ ಕ್ರುದ್ಧೋ ರಣೇ ಪಾರ್ಥಸ್ತ್ರಿಗರ್ತಾನ್ಪ್ರತಿ ಭಾರತ|

06098018c ಮುಮೋಚಾಸ್ತ್ರಂ ಮಹಾರಾಜ ವಾಯವ್ಯಂ ಪೃತನಾಮುಖೇ||

ಭಾರತ! ಮಹಾರಾಜ! ಆಗ ಕ್ರುದ್ಧನಾಗಿ ರಣದಲ್ಲಿ ಪಾರ್ಥನು ತ್ರಿಗರ್ತರ ಮೇಲೆ ವಾಯವ್ಯಾಸ್ತ್ರವನ್ನು ಪ್ರಯೋಗಿಸಿದನು.

06098019a ಪ್ರಾದುರಾಸೀತ್ತತೋ ವಾಯುಃ ಕ್ಷೋಭಯಾಣೋ ನಭಸ್ತಲಂ|

06098019c ಪಾತಯನ್ವೈ ತರುಗಣಾನ್ವಿನಿಘ್ನಂಶ್ಚೈವ ಸೈನಿಕಾನ್||

ಅದರಿಂದ ಭಿರುಗಾಳಿಯು ಹುಟ್ಟಿ ನಭಸ್ತಲವೇ ಅಲ್ಲೋಲಕಲ್ಲೋಲವಾಯಿತು. ಅನೇಕ ವೃಕ್ಷಗಳನ್ನು ಕೆಡವಿ ಸೈನಿಕರನ್ನೂ ಧ್ವಂಸಮಾಡಿತು.

06098020a ತತೋ ದ್ರೋಣೋಽಭಿವೀಕ್ಷ್ಯೈವ ವಾಯವ್ಯಾಸ್ತ್ರಂ ಸುದಾರುಣಂ|

06098020c ಶೈಲಮನ್ಯನ್ಮಹಾರಾಜ ಘೋರಮಸ್ತ್ರಂ ಮುಮೋಚ ಹ||

ಆಗ ದ್ರೋಣನು ಸುದಾರುಣ ವಾಯವ್ಯಾಸ್ತ್ರವನ್ನು ನೋಡಿ ಬೇರೆ ಘೋರ ಶೈಲಾಸ್ತ್ರವನ್ನು ಪ್ರಯೋಗಿಸಿದನು.

06098021a ದ್ರೋಣೇನ ಯುಧಿ ನಿರ್ಮುಕ್ತೇ ತಸ್ಮಿನ್ನಸ್ತ್ರೇ ಮಹಾಮೃಧೇ|

06098021c ಪ್ರಶಶಾಮ ತತೋ ವಾಯುಃ ಪ್ರಸನ್ನಾಶ್ಚಾಭವನ್ದಿಶಃ||

ಯುದ್ಧದ ಮಹಾರಣದಲ್ಲಿ ದ್ರೋಣನು ಬಿಟ್ಟ ಆ ಅಸ್ತ್ರವು ಭಿರುಗಾಳಿಯನ್ನು ಪ್ರಶಮನಗೊಳಿಸಿತು. ದಿಕ್ಕುಗಳು ಪ್ರಸನ್ನವಾದವು.

06098022a ತತಃ ಪಾಂಡುಸುತೋ ವೀರಸ್ತ್ರಿಗರ್ತಸ್ಯ ರಥವ್ರಜಾನ್|

06098022c ನಿರುತ್ಸಾಹಾನ್ರಣೇ ಚಕ್ರೇ ವಿಮುಖಾನ್ವಿಪರಾಕ್ರಮಾನ್||

ಆಗ ವೀರ ಪಾಂಡುಸುತನು ತ್ರಿಗರ್ತನ ರಥಸೇನೆಯನ್ನು ರಣದಲ್ಲಿ ನಿರುತ್ಸಾಹಿಗಳನ್ನಾಗಿಯೂ, ವಿಮುಖರನ್ನಾಗಿಯೂ, ಪರಾಕ್ರಮ ಹೀನರನ್ನಾಗಿಯೂ ಮಾಡಿದನು.

06098023a ತತೋ ದುರ್ಯೋಧನೋ ರಾಜಾ ಕೃಪಶ್ಚ ರಥಿನಾಂ ವರಃ|

06098023c ಅಶ್ವತ್ಥಾಮಾ ತತಃ ಶಲ್ಯಃ ಕಾಂಬೋಜಶ್ಚ ಸುದಕ್ಷಿಣಃ||

06098024a ವಿಂದಾನುವಿಂದಾವಾವಂತ್ಯೌ ಬಾಹ್ಲಿಕಶ್ಚ ಸಬಾಹ್ಲಿಕಃ|

06098024c ಮಹತಾ ರಥವಂಶೇನ ಪಾರ್ಥಸ್ಯಾವಾರಯನ್ದಿಶಃ||

ಆಗ ರಾಜಾ ದುರ್ಯೋಧನ, ರಥಿಗಳಲ್ಲಿ ಶ್ರೇಷ್ಠ ಕೃಪ, ಅಶ್ವತ್ಥಾಮ, ಶಲ್ಯ, ಕಾಂಬೋಜದ ಸುದಕ್ಷಿಣ, ಅವಂತಿಯ ವಿಂದಾನುವಿಂದರು ಮತ್ತು ಬಾಹ್ಲಿಕರೊಂದಿಗೆ ಬಾಹ್ಲೀಕ ಇವರುಗಳು ಮಹಾ ರಥಸೇನೆಯಿಂದ ಪಾರ್ಥನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.

06098025a ತಥೈವ ಭಗದತ್ತಶ್ಚ ಶ್ರುತಾಯುಶ್ಚ ಮಹಾಬಲಃ|

06098025c ಗಜಾನೀಕೇನ ಭೀಮಸ್ಯ ತಾವವಾರಯತಾಂ ದಿಶಃ||

ಹಾಗೆಯೇ ಭಗದತ್ತ ಮತ್ತು ಮಹಾಬಲ ಶ್ರುತಾಯು ಇವರು ಗಜಸೇನೆಗಳಿಂದ ಭೀಮನನ್ನು ಎಲ್ಲ ಕಡೆಗಳಿಂದಲೂ ತಡೆದರು.

06098026a ಭೂರಿಶ್ರವಾಃ ಶಲಶ್ಚೈವ ಸೌಬಲಶ್ಚ ವಿಶಾಂ ಪತೇ|

06098026c ಶರೌಘೈರ್ವಿವಿಧೈಸ್ತೂರ್ಣಂ ಮಾದ್ರೀಪುತ್ರಾವವಾರಯನ್||

ವಿಶಾಂಪತೇ! ಭೂರಿಶ್ರವ, ಶಲ, ಮತ್ತು ಸೌಬಲರು ತಕ್ಷಣವೇ ವಿವಿಧ ಶರಜಾಲಗಳಿಂದ ಮಾದ್ರೀಪುತ್ರರನ್ನು ತಡೆದರು.

06098027a ಭೀಷ್ಮಸ್ತು ಸಹಿತಃ ಸರ್ವೈರ್ಧಾರ್ತರಾಷ್ಟ್ರಸ್ಯ ಸೈನಿಕೈಃ|

06098027c ಯುಧಿಷ್ಠಿರಂ ಸಮಾಸಾದ್ಯ ಸರ್ವತಃ ಪರ್ಯವಾರಯತ್||

ಭೀಷ್ಮನಾದರೋ ಎಲ್ಲ ಧಾರ್ತರಾಷ್ಟ್ರರ ಎಲ್ಲ ಸೈನಿಕರೊಂದಿಗೆ ಯುಧಿಷ್ಠಿರನನ್ನು ಎದುರಿಸಿ ಎಲ್ಲ ಕಡೆಗಳಿಂದ ಸುತ್ತುವರೆದರು.

06098028a ಆಪತಂತಂ ಗಜಾನೀಕಂ ದೃಷ್ಟ್ವಾ ಪಾರ್ಥೋ ವೃಕೋದರಃ|

06098028c ಲೇಲಿಹನ್ಸೃಕ್ಕಿಣೀ ವೀರೋ ಮೃಗರಾಡಿವ ಕಾನನೇ||

ಮೇಲೆ ಬೀಳುತ್ತಿದ್ದ ಗಜಸೇನೆಯನ್ನು ನೋಡಿ ಪಾರ್ಥ ವೃಕೋದರ ವೀರನು ಕಾನನದಲ್ಲಿರುವ ಮೃಗರಾಜನಂತೆ ತನ್ನ ಕಟವಾಯಿಗಳನ್ನು ನೆಕ್ಕಿದನು.

06098029a ತತಸ್ತು ರಥಿನಾಂ ಶ್ರೇಷ್ಠೋ ಗದಾಂ ಗೃಹ್ಯ ಮಹಾಹವೇ|

06098029c ಅವಪ್ಲುತ್ಯ ರಥಾತ್ತೂರ್ಣಂ ತವ ಸೈನ್ಯಮಭೀಷಯತ್||

ಆಗ ರಥಿಗಳಲ್ಲಿ ಶ್ರೇಷ್ಠನು ಮಹಾಹವದಲ್ಲಿ ಗದೆಯನ್ನು ಹಿಡಿದು ತಕ್ಷಣವೇ ರಥದಿಂದ ಕೆಳಗೆ ಹಾರಿ ನಿನ್ನ ಸೈನ್ಯವನ್ನು ಹೆದರಿಸಿದನು.

06098030a ತಮುದ್ವೀಕ್ಷ್ಯ ಗದಾಹಸ್ತಂ ತತಸ್ತೇ ಗಜಸಾದಿನಃ|

06098030c ಪರಿವವ್ರೂ ರಣೇ ಯತ್ತಾ ಭೀಮಸೇನಂ ಸಮಂತತಃ||

ಗದಾಪಾಣಿಯಾಗಿ ನಿಂತಿದ್ದ ಭೀಮಸೇನನನ್ನು ನೋಡಿ ಗಜಾರೋಹಿಗಳೂ ರಣದಲ್ಲಿ ಪ್ರಯತ್ನಟ್ಟು ಅವನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.

06098031a ಗಜಮಧ್ಯಮನುಪ್ರಾಪ್ತಃ ಪಾಂಡವಶ್ಚ ವ್ಯರಾಜತ|

06098031c ಮೇಘಜಾಲಸ್ಯ ಮಹತೋ ಯಥಾ ಮಧ್ಯಗತೋ ರವಿಃ||

ಆನೆಗಳ ಮಧ್ಯವನ್ನು ಸೇರಿ ಪಾಂಡವನು ಮಹಾ ಮೇಘ ಜಾಲಗಳ ನಡುವೆ ಕಾಣುವ ರವಿಯಂತೆ ವಿರಾಜಿಸಿದನು.

06098032a ವ್ಯಧಮತ್ಸ ಗಜಾನೀಕಂ ಗದಯಾ ಪಾಂಡವರ್ಷಭಃ|

06098032c ಮಹಾಭ್ರಜಾಲಮತುಲಂ ಮಾತರಿಶ್ವೇವ ಸಂತತಂ||

ಪಾಂಡವರ್ಷಭನು ಆ ಗಜಸೇನೆಯನ್ನು ಭಿರುಗಾಳಿಯು ಮಹಾ ಮೋಡಗಳ ಜಾಲವನ್ನು ಹೇಗೋ ಹಾಗೆ ಎಲ್ಲಕಡೆ ಚದುರಿಸಿದನು.

06098033a ತೇ ವಧ್ಯಮಾನಾ ಬಲಿನಾ ಭೀಮಸೇನೇನ ದಂತಿನಃ|

06098033c ಆರ್ತನಾದಂ ರಣೇ ಚಕ್ರುರ್ಗರ್ಜಂತೋ ಜಲದಾ ಇವ||

ಬಲಶಾಲಿ ಭೀಮಸೇನನಿಂದ ವಧಿಸಲ್ಪಡುತ್ತಿದ್ದ ಆ ಆನೆಗಳು ರಣದಲ್ಲಿ ಮೋಡಗಳು ಗುಡುಗುವಂತೆ ಗರ್ಜಿಸಿದವು.

06098034a ಬಹುಧಾ ದಾರಿತಶ್ಚೈವ ವಿಷಾಣೈಸ್ತತ್ರ ದಂತಿಭಿಃ|

06098034c ಫುಲ್ಲಾಶೋಕನಿಭಃ ಪಾರ್ಥಃ ಶುಶುಭೇ ರಣಮೂರ್ಧನಿ||

ರಣಮೂರ್ಧನಿಯಲ್ಲಿ ಅನೇಕ ಆನೆಗಳಿಂದ ಸೀಳಲ್ಪಟ್ಟ ಮತ್ತು ಗಾಯಗೊಂಡ ಪಾರ್ಥನು ಹೂಬಿಟ್ಟ ಅಶೋಕವೃಕ್ಷದಂತೆ ಶೋಭಿಸಿದನು.

06098035a ವಿಷಾಣೇ ದಂತಿನಂ ಗೃಹ್ಯ ನಿರ್ವಿಷಾಣಮಥಾಕರೋತ್|

06098035c ವಿಷಾಣೇನ ಚ ತೇನೈವ ಕುಂಭೇಽಭ್ಯಾಹತ್ಯ ದಂತಿನಂ|

06098035e ಪಾತಯಾಮಾಸ ಸಮರೇ ದಂಡಹಸ್ತ ಇವಾಂತಕಃ||

ತಿವಿಯಲು ಬಂದ ದಂತವನ್ನೇ ಹಿಡಿದು ಜಗ್ಗಾಡಿ ಕಿತ್ತು ಅವುಗಳಿಂದಲೇ ದಂಡವನ್ನು ಹಿಡಿದ ಅಂತಕನಂತೆ ಆನೆಗಳ ಕುಂಭಸ್ಥಳಗಳನ್ನು ತಿವಿದು ಸಾಯಿಸುತ್ತಿದ್ದನು.

06098036a ಶೋಣಿತಾಕ್ತಾಂ ಗದಾಂ ಬಿಭ್ರನ್ಮೇದೋಮಜ್ಜಾಕೃತಚ್ಛವಿಃ|

06098036c ಕೃತಾಂಗದಃ ಶೋಣಿತೇನ ರುದ್ರವತ್ಪ್ರತ್ಯದೃಶ್ಯತ||

ರಕ್ತದಿಂದ ನೆನೆದಿದ್ದ ಗದೆಯನ್ನು ಹಿಡಿದು, ಮೇಡಸ್ಸು, ಮಜ್ಜೆಗಳು ಶರೀರದ ಮೇಲೆ ಹಾರಿ ಪ್ರಕಾಶಿಸುತ್ತಿದ್ದ ಅವನು ರಕ್ತದಿಂದ ಅಭ್ಯಂಜನ ಮಾಡಿದ ರುದ್ರನಂತೆ ತೋರಿದನು.

06098037a ಏವಂ ತೇ ವಧ್ಯಮಾನಾಸ್ತು ಹತಶೇಷಾ ಮಹಾಗಜಾಃ|

06098037c ಪ್ರಾದ್ರವಂತ ದಿಶೋ ರಾಜನ್ವಿಮೃದ್ನಂತಃ ಸ್ವಕಂ ಬಲಂ||

ರಾಜನ್! ಹೀಗೆ ವಧಿಸಲ್ಪಟ್ಟು ಉಳಿದಿದ್ದ ಮಹಾಗಜಗಳು ತಮ್ಮದೇ ಸೇನೆಯನ್ನು ಧ್ವಂಸಮಾಡುತ್ತಾ ಎಲ್ಲಾಕಡೆ ಓಡಿಹೋದವು.

06098038a ದ್ರವದ್ಭಿಸ್ತೈರ್ಮಹಾನಾಗೈಃ ಸಮಂತಾದ್ಭರತರ್ಷಭ|

06098038c ದುರ್ಯೋಧನಬಲಂ ಸರ್ವಂ ಪುನರಾಸೀತ್ಪರಾಙ್ಮುಖಂ||

ಭರತರ್ಷಭ! ಎಲ್ಲ ಕಡೆಗಳಿಂದಲೂ ಗಜಸೈನ್ಯಗಳು ಪಲಾಯನ ಮಾಡುತ್ತಿದ್ದುದರಿಂದ ಉಳಿದ ದುರ್ಯೋಧನನ ಸೇನೆಯೆಲ್ಲವೂ ಪರಾಙ್ಮುಖವಾಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಮಪರಾಕ್ರಮೇ ಅಷ್ಟನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಮಪರಾಕ್ರಮ ಎನ್ನುವ ತೊಂಭತ್ತೆಂಟನೇ ಅಧ್ಯಾಯವು.

Image result for indian motifs against white background

Comments are closed.