Bhishma Parva: Chapter 96

ಭೀಷ್ಮ ಪರ್ವ: ಭೀಷ್ಮವಧ ಪರ್ವ

೯೬

ಅಭಿಮನ್ಯುವಿನ ಪರಾಕ್ರಮ (೧-೨೦). ಆರ್ಶ್ಯಶೃಂಗಿ ಅಲಂಬುಷ ಮತ್ತು ದ್ರೌಪದೇಯರ ಯುದ್ಧ; ಅಭಿಮನ್ಯುವಿನೊಡನೆ ಅಲಂಬುಷನ ಸಮಾಗಮ (೨೧-೫೧).

06096001 ಸಂಜಯ ಉವಾಚ|

06096001a ಅಭಿಮನ್ಯೂ ರಥೋದಾರಃ ಪಿಶಂಗೈಸ್ತುರಗೋತ್ತಮೈಃ|

06096001c ಅಭಿದುದ್ರಾವ ತೇಜಸ್ವೀ ದುರ್ಯೋಧನಬಲಂ ಮಹತ್|

06096001e ವಿಕಿರಂ ಶರವರ್ಷಾಣಿ ವಾರಿಧಾರಾ ಇವಾಂಬುದಃ||

ಸಂಜಯನು ಹೇಳಿದನು: “ರಥೋದಾರ ತೇಜಸ್ವಿ ಅಭಿಮನ್ಯುವು ಪಿಂಗಳವರ್ಣದ ಉತ್ತಮ ಕುದುರೆಗಳಿಂದ ಕೂಡಿದ ರಥದಲ್ಲಿ ಕುಳಿತು ಮೋಡಗಳು ಮಳೆಯನ್ನು ಸುರಿಸುವಂತೆ ಬಾಣಗಳ ಮಳೆಯನ್ನು ಸುರಿಸುತ್ತಾ ದುರ್ಯೋಧನನ ಮಹಾ ಸೇನೆಯ ಮೇಲೆ ದಾಳಿಮಾಡಿದನು.

06096002a ನ ಶೇಕುಃ ಸಮರೇ ಕ್ರುದ್ಧಂ ಸೌಭದ್ರಮರಿಸೂದನಂ|

06096002c ಶಸ್ತ್ರೌಘಿಣಂ ಗಾಹಮಾನಂ ಸೇನಾಸಾಗರಮಕ್ಷಯಂ|

06096002e ನಿವಾರಯಿತುಮಪ್ಯಾಜೌ ತ್ವದೀಯಾಃ ಕುರುಪುಂಗವಾಃ||

ರಾಶಿ ರಾಶಿ ಶಸ್ತ್ರಗಳಿಂದ ಕೂಡಿದ್ದ ಅಕ್ಷಯ ಸೇನಾಸಾಗರವನ್ನು ಒಳಹೊಗುತ್ತಿದ್ದ ಕ್ರುದ್ಧ ಅರಿಸೂದನ ಸೌಭದ್ರನನ್ನು ತಡೆಯಲು ನಿನ್ನ ಕಡೆಯ ಕುರುಪುಂಗವರಿಗೆ ಸಾಧ್ಯವಾಗಲಿಲ್ಲ.

06096003a ತೇನ ಮುಕ್ತಾ ರಣೇ ರಾಜನ್ ಶರಾಃ ಶತ್ರುನಿಬರ್ಹಣಾಃ|

06096003c ಕ್ಷತ್ರಿಯಾನನಯಂ ಶೂರಾನ್ಪ್ರೇತರಾಜನಿವೇಶನಂ||

ರಾಜನ್! ಅವನು ಬಿಟ್ಟ ಶತ್ರುಗಳನ್ನು ನಾಶಪಡಿಸಬಲ್ಲ ಬಾಣಗಳು ಶೂರ ಕ್ಷತ್ರಿಯರನ್ನು ಪ್ರೇತರಾಜನ ಮನೆಗೆ ಕೊಂಡೊಯ್ಯುತ್ತಿದ್ದವು.

06096004a ಯಮದಂಡೋಪಮಾನ್ಘೋರಾಂ ಜ್ವಲನಾಶೀವಿಷೋಪಮಾನ್|

06096004c ಸೌಭದ್ರಃ ಸಮರೇ ಕ್ರುದ್ಧಃ ಪ್ರೇಷಯಾಮಾಸ ಸಾಯಕಾನ್||

ಸಮರದಲ್ಲಿ ಸೌಭದ್ರನು ಕ್ರುದ್ಧನಾಗಿ ಯಮದಂಡಕ್ಕೆ ಸಮಾನವಾದ ಪ್ರಜ್ವಲಿತ ಮುಖವುಳ್ಳ ಸರ್ಪಗಳಂತಿದ್ದ ಸಾಯಕಗಳನ್ನು ಪ್ರಯೋಗಿಸುತ್ತಿದ್ದನು.

06096005a ರಥಿನಂ ಚ ರಥಾತ್ತೂರ್ಣಂ ಹಯಪೃಷ್ಠಾಚ್ಚ ಸಾದಿನಂ|

06096005c ಗಜಾರೋಹಾಂಶ್ಚ ಸಗಜಾನ್ಪಾತಯಾಮಾಸ ಫಾಲ್ಗುನಿಃ||

ಪಾಲ್ಗುನಿಯು ತಕ್ಷಣವೇ ರಥಗಳಲ್ಲಿದ್ದ ರಥಿಗಳನ್ನೂ, ಕುದುರೆಯನ್ನೇರಿದ್ದ ಸವಾರರನ್ನೂ, ಆನೆಗಳೊಂದಿಗೆ ಗಜಾರೋಹಿಗಳನ್ನೂ ಕೆಳಗುರುಳಿಸಿದನು.

06096006a ತಸ್ಯ ತತ್ಕುರ್ವತಃ ಕರ್ಮ ಮಹತ್ಸಂಖ್ಯೇಽದ್ಭುತಂ ನೃಪಾಃ|

06096006c ಪೂಜಯಾಂ ಚಕ್ರಿರೇ ಹೃಷ್ಟಾಃ ಪ್ರಶಶಂಸುಶ್ಚ ಫಾಲ್ಗುನಿಂ||

ಯುದ್ಧದಲ್ಲಿ ಅವನು ಮಾಡುತ್ತಿರುವ ಮಹಾ ಕಾರ್ಯಗಳನ್ನು ನೋಡಿ ರಾಜರು ಸಂತೋಷಗೊಂಡು ಫಾಲ್ಗುನಿಯನ್ನು ಬಹಳವಾಗಿ ಹೊಗಳಿದರು ಮತ್ತು ಗೌರವಿಸಿದರು.

06096007a ತಾನ್ಯನೀಕಾನಿ ಸೌಭದ್ರೋ ದ್ರಾವಯನ್ಬಹ್ವಶೋಭತ|

06096007c ತೂಲರಾಶಿಮಿವಾಧೂಯ ಮಾರುತಃ ಸರ್ವತೋದಿಶಂ||

ಭಿರುಗಾಳಿಯ ಹತ್ತಿಯ ರಾಶಿಯನ್ನು ಎಲ್ಲ ದಿಕ್ಕುಗಳಲ್ಲಿಯೂ ಹಾರಿಸಿಬಿಡುವಂತೆ ಸೌಭದ್ರನು ಆ ಸೇನೆಗಳನ್ನು ಓಡಿಸಿ ಬಹುವಾಗಿ ಶೋಭಿಸಿದನು.

06096008a ತೇನ ವಿದ್ರಾವ್ಯಮಾಣಾನಿ ತವ ಸೈನ್ಯಾನಿ ಭಾರತ|

06096008c ತ್ರಾತಾರಂ ನಾಧ್ಯಗಚ್ಛಂತ ಪಂಕೇ ಮಗ್ನಾ ಇವ ದ್ವಿಪಾಃ||

ಭಾರತ! ಆಳವಾದ ಕೆಸರಿನಲ್ಲಿ ಸಿಲುಕಿಕೊಂಡ ಆನೆಗಳಿಗೆ ರಕ್ಷಕರೇ ಇಲ್ಲದಿರುವಂತೆ ಅವನಿಂದ ಓಡಿಸಲ್ಪಟ್ಟ ನಿನ್ನ ಸೇನೆಗಳಿಗೆ ಯಾರೂ ಇಲ್ಲದಂತಾಯಿತು.

06096009a ವಿದ್ರಾವ್ಯ ಸರ್ವಸೈನ್ಯಾನಿ ತಾವಕಾನಿ ನರೋತ್ತಮಃ|

06096009c ಅಭಿಮನ್ಯುಃ ಸ್ಥಿತೋ ರಾಜನ್ವಿಧೂಮೋಽಗ್ನಿರಿವ ಜ್ವಲನ್||

ರಾಜನ್! ನಿನ್ನ ಸರ್ವ ಸೇನೆಗಳನ್ನು ಓಡಿಸಿ ನರೋತ್ತಮ ಅಭಿಮನ್ಯುವು ಹೊಗೆಯಿಲ್ಲದ ಬೆಂಕಿಯಂತೆ ಉರಿಯುತ್ತಾ ನಿಂತನು.

06096010a ನ ಚೈನಂ ತಾವಕಾಃ ಸರ್ವೇ ವಿಷೇಹುರರಿಘಾತಿನಂ|

06096010c ಪ್ರದೀಪ್ತಂ ಪಾವಕಂ ಯದ್ವತ್ ಪತಂಗಾಃ ಕಾಲಚೋದಿತಾಃ||

ಕಾಲಚೋದಿತ ಪತಂಗಗಳು ಉರಿಯುತ್ತಿರುವ ಪಾವಕನನ್ನು ಸಹಿಸಿಕೊಳ್ಳಲಾರದಂತೆ ಅರಿಘಾತಿಯ ಪ್ರಹಾರವನ್ನು ನಿನ್ನವರಲ್ಲಿ ಯಾರಿಗೂ ಸಹಿಸಿಕೊಳ್ಳಲಾಗಲಿಲ್ಲ.

06096011a ಪ್ರಹರನ್ಸರ್ವಶತ್ರುಭ್ಯಃ ಪಾಂಡವಾನಾಂ ಮಹಾರಥಃ|

06096011c ಅದೃಶ್ಯತ ಮಹೇಷ್ವಾಸಃ ಸವಜ್ರ ಇವ ವಜ್ರಭೃತ್||

ಸರ್ವಶತ್ರುಗಳ ಪ್ರಹಾರ ಮಾಡಿ ಪಾಂಡವರ ಮಹಾರಥ ಮಹೇಷ್ವಾಸನು ವಜ್ರದೊಂದಿಗೆ ವರ್ಜಭೃತುವಿನಂತೆ ಅದೃಶ್ಯನಾಗುತ್ತಿದ್ದನು.

06096012a ಹೇಮಪೃಷ್ಠಂ ಧನುಶ್ಚಾಸ್ಯ ದದೃಶೇ ಚರತೋ ದಿಶಃ|

06096012c ತೋಯದೇಷು ಯಥಾ ರಾಜನ್ಭ್ರಾಜಮಾನಾಃ ಶತಃವದಾಃ||

ರಾಜನ್! ದಿಕ್ಕು ದಿಕ್ಕುಗಳಲ್ಲಿ ತಿರುಗುತ್ತಿದ್ದ ಅವನ ಬಂಗಾರದ ಬೆನ್ನಿನ ಬಿಲ್ಲು ಮೋಡಗಳಲ್ಲಿ ಹೊಳೆಯುವ ಮಿಂಚುಗಳಂತೆ ಕಾಣುತ್ತಿತ್ತು.

06096013a ಶರಾಶ್ಚ ನಿಶಿತಾಃ ಪೀತಾ ನಿಶ್ಚರಂತಿ ಸ್ಮ ಸಂಯುಗೇ|

06096013c ವನಾತ್ಫುಲ್ಲದ್ರುಮಾದ್ರಾಜನ್ಭ್ರಮರಾಣಾಮಿವ ವ್ರಜಾಃ||

ವನದಲ್ಲಿ ಹೂಬಿಟ್ಟ ಮರಗಳನ್ನು ಹುಡುಕಿಕೊಂಡು ಹಾರಿ ಹೋಗುವ ದುಂಬಿಗಳಂತೆ ಅವನ ಹೊಂಬಣ್ಣದ ನಿಶಿತ ಶರಗಳು ಸಂಗ್ರಾಮದಲ್ಲಿ ಸುಯ್ಯನೆ ಹೋಗುತ್ತಿದ್ದವು.

06096014a ತಥೈವ ಚರತಸ್ತಸ್ಯ ಸೌಭದ್ರಸ್ಯ ಮಹಾತ್ಮನಃ|

06096014c ರಥೇನ ಮೇಘಘೋಷೇಣ ದದೃಶುರ್ನಾಂತರಂ ಜನಾಃ||

ಹಾಗೆಯೇ ಮೇಘಘೋಷದಿಂದ ರಥದಲ್ಲಿ ಸಂಚರಿಸುತ್ತಿದ್ದ ಮಹಾತ್ಮ ಸೌಭದ್ರನ ಗತಿಯಲ್ಲಿಯೂ ಜನರು ಯಾವ ಅಂತರವನ್ನೂ ಕಾಣುತ್ತಿರಲಿಲ್ಲ.

06096015a ಮೋಹಯಿತ್ವಾ ಕೃಪಂ ದ್ರೋಣಂ ದ್ರೌಣಿಂ ಚ ಸ ಬೃಹದ್ಬಲಂ|

06096015c ಸೈಂಧವಂ ಚ ಮಹೇಷ್ವಾಸಂ ವ್ಯಚರಲ್ಲಘು ಸುಷ್ಠು ಚ||

ಕೃಪ, ದ್ರೋಣ, ದ್ರೌಣಿ, ಬೃಹದ್ಬಲ ಮತ್ತು ಮಹೇಷ್ವಾಸ ಸೈಂಧವನನ್ನು ಮೋಹಗೊಳಿಸುತ್ತಾ ಅವನು ಶೀಘ್ರವಾಗಿ ಸಂಚರಿಸುತ್ತಿದ್ದನು.

06096016a ಮಂಡಲೀಕೃತಮೇವಾಸ್ಯ ಧನುಃ ಪಶ್ಯಾಮ ಮಾರಿಷ|

06096016c ಸೂರ್ಯಮಂಡಲಸಂಕಾಶಂ ತಪತಸ್ತವ ವಾಹಿನೀಂ||

ಮಾರಿಷ! ನಿನ್ನ ಸೇನೆಯನ್ನು ಸುಡುತ್ತಿದ್ದ ಅವನ ಧನುಸ್ಸು ಯಾವಾಗಲೂ ಸೂರ್ಯಮಂಡಲದಂತೆ ಮಂಡಲಾಕಾರದಲ್ಲಿರುವುದನ್ನೇ ನಾವು ಕಾಣುತ್ತಿದ್ದೆವು.

06096017a ತಂ ದೃಷ್ಟ್ವಾ ಕ್ಷತ್ರಿಯಾಃ ಶೂರಾಃ ಪ್ರತಪಂತಂ ಶರಾರ್ಚಿಭಿಃ|

06096017c ದ್ವಿಫಲ್ಗುನಮಿಮಂ ಲೋಕಂ ಮೇನಿರೇ ತಸ್ಯ ಕರ್ಮಭಿಃ||

ಶರಗಳೆಂಬ ಕಿರಣಗಳಿಂದ ಸುಡುತ್ತಿದ್ದ ಅವನ ಕರ್ಮಗಳನ್ನು ನೋಡಿ ಶೂರ ಕ್ಷತ್ರಿಯರು ಅವನು ಲೋಕದಲ್ಲಿ ಎರಡನೆಯ ಫಲ್ಗುನನನೆಂದು ಭಾವಿಸಿದರು.

06096018a ತೇನಾರ್ದಿತಾ ಮಹಾರಾಜ ಭಾರತೀ ಸಾ ಮಹಾಚಮೂಃ|

06096018c ಬಭ್ರಾಮ ತತ್ರ ತತ್ರೈವ ಯೋಷಿನ್ಮದವಶಾದಿವ||

ಮಹಾರಾಜ! ಅವನಿಂದ ಆರ್ದಿತವಾದ ಆ ಭಾರತರ ಮಹಾ ಸೇನೆಯು ಕಾಮಪರವಶ ಸ್ತ್ರೀಯಂತೆ ಮತಿಗೆಟ್ಟು ತೂರಾಡುತ್ತಿತ್ತು.

06096019a ದ್ರಾವಯಿತ್ವಾ ಚ ತತ್ಸೈನ್ಯಂ ಕಂಪಯಿತ್ವಾ ಮಹಾರಥಾನ್|

06096019c ನಂದಯಾಮಾಸ ಸುಹೃದೋ ಮಯಂ ಜಿತ್ವೇವ ವಾಸವಃ||

ಆ ಸೈನ್ಯವನ್ನು ಓಡಿಸುತ್ತಾ, ಮಹಾರಥರನ್ನು ಕಂಪಿಸುತ್ತಾ, ಮಯನನ್ನು ಜಯಿಸಿದ ವಾಸವನಂತೆ ಸುಹೃದಯರನ್ನು ಹರ್ಷಗೊಳಿಸಿದನು.

06096020a ತೇನ ವಿದ್ರಾವ್ಯಮಾಣಾನಿ ತವ ಸೈನ್ಯಾನಿ ಸಂಯುಗೇ|

06096020c ಚಕ್ರುರಾರ್ತಸ್ವರಂ ಘೋರಂ ಪರ್ಜನ್ಯನಿನದೋಪಮಂ||

ಅವನಿಂದ ಹೊಡೆದೋಡಿಸಲ್ಪಟ್ಟ ನಿನ್ನ ಸೈನ್ಯಗಳು ಸಂಯುಗದಲ್ಲಿ ಮೋಡಗಳ ಗುಡುಗಿನಂತೆ ಘೋರ ಆರ್ತಸ್ವರದಲ್ಲಿ ಕೂಗಿಕೊಳ್ಳುತ್ತಿದ್ದವು.

06096021a ತಂ ಶ್ರುತ್ವಾ ನಿನದಂ ಘೋರಂ ತವ ಸೈನ್ಯಸ್ಯ ಮಾರಿಷ|

06096021c ಮಾರುತೋದ್ಧೂತವೇಗಸ್ಯ ಸಮುದ್ರಸ್ಯೇವ ಪರ್ವಣಿ|

06096021e ದುರ್ಯೋಧನಸ್ತದಾ ರಾಜಾ ಆರ್ಶ್ಯಶೃಂಗಿಮಭಾಷತ||

ಮಾರಿಷ! ಪರ್ವಕಾಲದಲ್ಲಿ ಭಿರುಗಾಳಿಗೆ ಸಿಲುಕಿದ ಸಮುದ್ರದಂತಿದ್ದ ನಿನ್ನ ಸೈನ್ಯದ ಆ ಘೋರ ನಿನಾದವನ್ನು ಕೇಳಿ ರಾಜಾ ದುರ್ಯೋಧನನು ಆರ್ಶ್ಯಶೃಂಗಿಗೆ ಹೇಳಿದನು:

06096022a ಏಷ ಕಾರ್ಷ್ಣಿರ್ಮಹೇಷ್ವಾಸೋ ದ್ವಿತೀಯ ಇವ ಫಲ್ಗುನಃ|

06096022c ಚಮೂಂ ದ್ರಾವಯತೇ ಕ್ರೋಧಾದ್ವೃತ್ರೋ ದೇವಚಮೂಮಿವ||

“ಈ ಮಹೇಷ್ವಾಸ ಕಾರ್ಷ್ಣಿಯು ಎರಡನೆಯ ಅರ್ಜುನನೋ ಎನ್ನುವಂತೆ ಕ್ರೋಧದಿಂದ ವೃತ್ರನು ದೇವಸಮೂಹದಂತೆ ನಮ್ಮ ಸೇನೆಗಳನ್ನು ಓಡಿಸುತ್ತಿದ್ದಾನೆ.

06096023a ತಸ್ಯ ನಾನ್ಯಂ ಪ್ರಪಶ್ಯಾಮಿ ಸಂಯುಗೇ ಭೇಷಜಂ ಮಹತ್|

06096023c ಋತೇ ತ್ವಾಂ ರಾಕ್ಷಸಶ್ರೇಷ್ಠ ಸರ್ವವಿದ್ಯಾಸು ಪಾರಗಂ||

ರಾಕ್ಷಸಶ್ರೇಷ್ಠ! ಸರ್ವ ವಿದ್ಯೆಗಳಲ್ಲಿ ಪಾರಂಗತನಾದ ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಸಂಯುಗದಲ್ಲಿ ಅವನ ಚಿಕಿತ್ಸಕನನ್ನು ನಾನು ಕಾಣಲಾರೆನು.

06096024a ಸ ಗತ್ವಾ ತ್ವರಿತಂ ವೀರಂ ಜಹಿ ಸೌಭದ್ರಮಾಹವೇ|

06096024c ವಯಂ ಪಾರ್ಥಾನ್ ಹನಿಷ್ಯಾಮೋ ಭೀಷ್ಮದ್ರೋಣಪುರಃಸರಾಃ||

ಬೇಗನೇ ನೀನು ಹೋಗಿ ಆಹವದಲ್ಲಿ ಸೌಭದ್ರನನ್ನು ಕೊಲ್ಲು. ನಾವು ಭೀಷ್ಮ-ದ್ರೋಣರ ನೇತೃತ್ವದಲ್ಲಿ ಪಾರ್ಥರನ್ನು ಕೊಲ್ಲುತ್ತೇವೆ.”

06096025a ಸ ಏವಮುಕ್ತೋ ಬಲವಾನ್ರಾಕ್ಷಸೇಂದ್ರಃ ಪ್ರತಾಪವಾನ್|

06096025c ಪ್ರಯಯೌ ಸಮರೇ ತೂರ್ಣಂ ತವ ಪುತ್ರಸ್ಯ ಶಾಸನಾತ್|

06096025e ನರ್ದಮಾನೋ ಮಹಾನಾದಂ ಪ್ರಾವೃಷೀವ ಬಲಾಹಕಃ||

ಹೀಗೆ ಹೇಳಲು ಬಲವಾನ್ ಪ್ರತಾಪವಾನ್ ರಾಕ್ಷಸೇಂದ್ರನು ತಕ್ಷಣವೇ ನಿನ್ನ ಮಗನ ಶಾಸನದಂತೆ ಮಳೆಗಾಲದಲ್ಲಿ ಮೋಡಗಳು ಗರ್ಜಿಸುವಂತೆ ಜೋರಾಗಿ ಗರ್ಜಿಸುತ್ತ ಸಮರಕ್ಕೆ ಹೊರಟನು.

06096026a ತಸ್ಯ ಶಬ್ದೇನ ಮಹತಾ ಪಾಂಡವಾನಾಂ ಮಹದ್ಬಲಂ|

06096026c ಪ್ರಾಚಲತ್ಸರ್ವತೋ ರಾಜನ್ಪೂರ್ಯಮಾಣ ಇವಾರ್ಣವಃ||

ರಾಜನ್! ಅವನ ಆ ಜೋರಿನ ಕೂಗಿನಿಂದ ಪಾಂಡವರ ಮಹಾ ಸೇನೆಯು ತುಂಬಿ ಉಕ್ಕುವ ಸಮುದ್ರದಂತೆ ಎಲ್ಲಕಡೆಗಳಿಂದ ಕ್ಷೋಭೆಗೊಂಡಿತು.

06096027a ಬಹವಶ್ಚ ನರಾ ರಾಜಂಸ್ತಸ್ಯ ನಾದೇನ ಭೀಷಿತಾಃ|

06096027c ಪ್ರಿಯಾನ್ಪ್ರಾಣಾನ್ಪರಿತ್ಯಜ್ಯ ನಿಪೇತುರ್ಧರಣೀತಲೇ||

ರಾಜನ್! ಅವನ ಕೂಗಿಗೆ ಹೆದರಿ ಎಷ್ಟೋ ಜನರು ಪ್ರಿಯ ಪ್ರಾಣಗಳನ್ನು ತೊರೆದು ನೆಲದ ಮೇಲೆ ಬಿದ್ದರು.

06096028a ಕಾರ್ಷ್ಣಿಶ್ಚಾಪಿ ಮುದಾ ಯುಕ್ತಃ ಪ್ರಗೃಹೀತಶರಾಸನಃ|

06096028c ನೃತ್ಯನ್ನಿವ ರಥೋಪಸ್ಥೇ ತದ್ರಕ್ಷಃ ಸಮುಪಾದ್ರವತ್||

ಕಾರ್ಷ್ಣಿಯಾದರೋ ಸಂತೋಷದಿಂದ ರಥದಲ್ಲಿ ನಿಂತು ನರ್ತಿಸುತ್ತಿರುವನೋ ಎನ್ನುವಂತೆ ಧನುಸ್ಸನ್ನು ಹಿಡಿದು ಆ ರಾಕ್ಷಸನ ಮೇಲೆ ಆಕ್ರಮಣಿಸಿದನು.

06096029a ತತಃ ಸ ರಾಕ್ಷಸಃ ಕ್ರುದ್ಧಃ ಸಂಪ್ರಾಪ್ಯೈವಾರ್ಜುನಿಂ ರಣೇ|

06096029c ನಾತಿದೂರೇ ಸ್ಥಿತಸ್ತಸ್ಯ ದ್ರಾವಯಾಮಾಸ ವೈ ಚಮೂಂ||

ಆಗ ಆ ರಾಕ್ಷಸನು ರಣದಲ್ಲಿ ಆರ್ಜುನಿಯ ಸಮೀಪಕ್ಕೆ ಬಂದು ಕ್ರುದ್ಧನಾಗಿ ಅನತಿದೂರದಲ್ಲಿಯೇ ನಿಂತು ಅವನ ಸೇನೆಯನ್ನು ಓಡಿಸತೊಡಗಿದನು.

06096030a ಸಾ ವಧ್ಯಮಾನಾ ಸಮರೇ ಪಾಂಡವಾನಾಂ ಮಹಾಚಮೂಃ|

06096030c ಪ್ರತ್ಯುದ್ಯಯೌ ರಣೇ ರಕ್ಷೋ ದೇವಸೇನಾ ಯಥಾ ಬಲಿಂ||

ಬಲಿಯಿಂದ ದೇವಸೇನೆಯು ಹೇಗೋ ಹಾಗೆ ರಣದಲ್ಲಿ ಆ ರಾಕ್ಷಸನಿಂದ ವಧಿಸಲ್ಪಡುತ್ತಿದ್ದ ಪಾಂಡವರ ಮಹಾಸೇನೆಯು ಸಮರದಿಂದ ಪಲಾಯನ ಮಾಡಿತು.

06096031a ವಿಮರ್ದಃ ಸುಮಹಾನಾಸೀತ್ತಸ್ಯ ಸೈನ್ಯಸ್ಯ ಮಾರಿಷ|

06096031c ರಕ್ಷಸಾ ಘೋರರೂಪೇಣ ವಧ್ಯಮಾನಸ್ಯ ಸಂಯುಗೇ||

ಮಾರಿಷ! ಸಂಯುಗದಲ್ಲಿ ಘೋರರೂಪದ ಆ ರಾಕ್ಷಸನಿಂದ ವಧಿಸಲ್ಪಡುತ್ತಿದ್ದ ಅವನ ಸೈನ್ಯದಲ್ಲಿ ಮಹಾನಾಶವುಂಟಾಯಿತು.

06096032a ತತಃ ಶರಸಹಸ್ರೈಸ್ತಾಂ ಪಾಂಡವಾನಾಂ ಮಹಾಚಮೂಂ|

06096032c ವ್ಯದ್ರಾವಯದ್ರಣೇ ರಕ್ಷೋ ದರ್ಶಯದ್ವೈ ಪರಾಕ್ರಮಂ||

ಆಗ ರಾಕ್ಷಸನು ತನ್ನ ಪರಾಕ್ರಮವನ್ನು ಪ್ರದರ್ಶಿಸುತ್ತಾ ಸಹಸ್ರಾರು ಬಾಣಗಳಿಂದ ಪಾಂಡವರ ಮಹಾಸೇನೆಯನ್ನು ರಣದಿಂದ ಓಡಿಸಿದನು.

06096033a ಸಾ ವಧ್ಯಮಾನಾ ಚ ತಥಾ ಪಾಂಡವಾನಾಮನೀಕಿನೀ|

06096033c ರಕ್ಷಸಾ ಘೋರರೂಪೇಣ ಪ್ರದುದ್ರಾವ ರಣೇ ಭಯಾತ್||

ಹಾಗೆ ಘೋರರೂಪದ ರಾಕ್ಷಸನಿಂದ ವಧಿಸಲ್ಪಡುತ್ತಿರುವ ಪಾಂಡವರ ಸೇನೆಯು ಭಯಪಟ್ಟು ರಣದಿಂದ ಪಲಾಯನ ಮಾಡಿತು.

06096034a ತಾಂ ಪ್ರಮೃದ್ಯ ತತಃ ಸೇನಾಂ ಪದ್ಮಿನೀಂ ವಾರಣೋ ಯಥಾ|

06096034c ತತೋಽಭಿದುದ್ರಾವ ರಣೇ ದ್ರೌಪದೇಯಾನ್ಮಹಾಬಲಾನ್||

ಕಮಲ ಪುಷ್ಪಗಳಿಂದ ತುಂಬಿದ ಸರೋವರವನ್ನು ಆನೆಯು ಹೇಗೆ ಧ್ವಂಸಿಸುತ್ತದೆಯೋ ಹಾಗೆ ಆ ಸೇನೆಯನ್ನು ಧ್ವಂಸಿಸಿ ಅವನು ರಣದಲ್ಲಿ ಮಹಾಬಲ ದ್ರೌಪದೇಯರನ್ನು ಆಕ್ರಮಣಿಸಿದನು.

06096035a ತೇ ತು ಕ್ರುದ್ಧಾ ಮಹೇಷ್ವಾಸಾ ದ್ರೌಪದೇಯಾಃ ಪ್ರಹಾರಿಣಃ|

06096035c ರಾಕ್ಷಸಂ ದುದ್ರುವುಃ ಸರ್ವೇ ಗ್ರಹಾಃ ಪಂಚ ಯಥಾ ರವಿಂ||

ಪ್ರಹಾರಿಗಳಾದ ಆ ಮಹೇಷ್ವಾಸ ದ್ರೌಪದೇಯರು ಎಲ್ಲರೂ ಕ್ರುದ್ಧರಾಗಿ ಐದು ಗ್ರಹಗಳು ರವಿಯನ್ನು ಹೇಗೋ ಹಾಗೆ ರಾಕ್ಷಸನ ಮೇಲೆ ಎರಗಿದರು.

06096036a ವೀರ್ಯವದ್ಭಿಸ್ತತಸ್ತೈಸ್ತು ಪೀಡಿತೋ ರಾಕ್ಷಸೋತ್ತಮಃ|

06096036c ಯಥಾ ಯುಗಕ್ಷಯೇ ಘೋರೇ ಚಂದ್ರಮಾಃ ಪಂಚಭಿರ್ಗ್ರಹೈಃ||

ಯುಗಕ್ಷಯದಲ್ಲಿ ಚಂದ್ರಮನು ಐದು ಘೋರ ಗ್ರಹಗಳಿಂದ ಪೀಡಿಸಲ್ಪಡುವಂತೆ ಆ ರಾಕ್ಷಸೋತ್ತಮನು ವೀರರಾದ ಅವರಿಂದ ಪೀಡಿತನಾದನು.

06096037a ಪ್ರತಿವಿಂಧ್ಯಸ್ತತೋ ರಕ್ಷೋ ಬಿಭೇದ ನಿಶಿತೈಃ ಶರೈಃ|

06096037c ಸರ್ವಪಾರಶವೈಸ್ತೂರ್ಣಮಕುಣ್ಠಾಗ್ರೈರ್ಮಹಾಬಲಃ||

ಆಗ ಮಹಾಬಲ ಪ್ರತಿವಿಂಧ್ಯನು ಉಕ್ಕಿನಿಂದಲೇ ಮಾಡಲ್ಪಟ್ಟ ನೇರ ಮುಂಬಾಗವನ್ನು ಹೊಂದಿದ್ದ ನಿಶಿತ ಶರಗಳಿಂದ ರಾಕ್ಷಸನನ್ನು ಭೇದಿಸಿದನು.

06096038a ಸ ತೈರ್ಭಿನ್ನತನುತ್ರಾಣಃ ಶುಶುಭೇ ರಾಕ್ಷಸೋತ್ತಮಃ|

06096038c ಮರೀಚಿಭಿರಿವಾರ್ಕಸ್ಯ ಸಂಸ್ಯೂತೋ ಜಲದೋ ಮಹಾನ್||

ಅವುಗಳಿಂದ ಒಡೆದ ಕವಚದಿಂದ ಆ ರಾಕ್ಷಸೋತ್ತಮನು ಸೂರ್ಯನ ಕಿರಣಗಳಿಂದ ಸಮ್ಮಿಶ್ರವಾದ ದೊಡ್ಡ ಕಪ್ಪು ಮೋಡದೋಪಾದಿಯಲ್ಲಿ ಶೋಭಿಸಿದನು.

06096039a ವಿಷಕ್ತೈಃ ಸ ಶರೈಶ್ಚಾಪಿ ತಪನೀಯಪರಿಚ್ಛದೈಃ|

06096039c ಆರ್ಶ್ಯಶೃಂಗಿರ್ಬಭೌ ರಾಜನ್ದೀಪ್ತಶೃಂಗ ಇವಾಚಲಃ||

ರಾಜನ್! ಸುವರ್ಣದ ರೆಕ್ಕೆಗಳುಳ್ಳ ಆ ಬಾಣಗಳು ಆರ್ಶ್ಯಶೃಂಗಿಯ ಶರೀರದೊಳಕ್ಕೆ ನೆಟ್ಟಿಕೊಂಡು ಅವನು ಬೆಳಗುತ್ತಿರುವ ಶಿಖರಗಳುಳ್ಳ ಪರ್ವತದಂತೆ ಕಂಡನು.

06096040a ತತಸ್ತೇ ಭ್ರಾತರಃ ಪಂಚ ರಾಕ್ಷಸೇಂದ್ರಂ ಮಹಾಹವೇ|

06096040c ವಿವ್ಯಧುರ್ನಿಶಿತೈರ್ಬಾಣೈಸ್ತಪನೀಯವಿಭೂಷಿತೈಃ||

ಆಗ ಆ ಇವರು ಸಹೋದರರೂ ಮಹಾಹವದಲ್ಲಿ ರಾಕ್ಷಸೇಂದ್ರನನ್ನು ಸುವರ್ಣ ಭೂಷಿತ ನಿಶಿತ ಬಾಣಗಳಿಂದ ಹೊಡೆದರು.

06096041a ಸ ನಿರ್ಭಿನ್ನಃ ಶರೈರ್ಘೋರೈರ್ಭುಜಗೈಃ ಕೋಪಿತೈರಿವ|

06096041c ಅಲಂಬುಸೋ ಭೃಶಂ ರಾಜನ್ನಾಗೇಂದ್ರ ಇವ ಚುಕ್ರುಧೇ||

ರಾಜನ್! ಕುಪಿತಸರ್ಪಗಳಂತಿದ್ದ ಘೋರ ಶರಗಳಿಂದ ಗಾಯಗೊಂಡ ಅಲಂಬುಸನು ಅಂಕುಶದಿಂದ ಚುಚ್ಚಲ್ಪಟ್ಟ ಗಜರಾಜನಂತೆ ತುಂಬಾ ಕ್ರುದ್ಧನಾದನು.

06096042a ಸೋಽತಿವಿದ್ಧೋ ಮಹಾರಾಜ ಮುಹೂರ್ತಮಥ ಮಾರಿಷ|

06096042c ಪ್ರವಿವೇಶ ತಮೋ ದೀರ್ಘಂ ಪೀಡಿತಸ್ತೈರ್ಮಹಾರಥೈಃ||

ಮಹಾರಾಜ! ಮಾರಿಷ! ಆ ಮಹಾರಥರಿಂದ ಅತಿಯಾಗಿ ಪೀಡಿತನಾಗಿ ಗಾಯಗೊಂಡ ಅವನು ಮುಹೂರ್ತಕಾಲ ದೀರ್ಘ ತಮಸ್ಸಿನ ಮೂರ್ಛೆಯನ್ನು ಹೊಂದಿದನು.

06096043a ಪ್ರತಿಲಭ್ಯ ತತಃ ಸಂಜ್ಞಾಂ ಕ್ರೋಧೇನ ದ್ವಿಗುಣೀಕೃತಃ|

06096043c ಚಿಚ್ಛೇದ ಸಾಯಕೈಸ್ತೇಷಾಂ ಧ್ವಜಾಂಶ್ಚೈವ ಧನೂಂಷಿ ಚ||

ಆಗ ಸಂಜ್ಞೆಯನ್ನು ಹಿಂದೆ ಪಡೆದುಕೊಂಡು ಎರಡು ಪಟ್ಟು ಕ್ರೋಧಾನ್ವಿತನಾಗಿ ಸಾಯಕಗಳಿಂದ ಅವರ ಧ್ವಜಗಳನ್ನೂ ಧನುಸ್ಸುಗಳನ್ನೂ ತುಂಡರಿಸಿದನು.

06096044a ಏಕೈಕಂ ಚ ತ್ರಿಭಿರ್ಬಾಣೈರಾಜಘಾನ ಸ್ಮಯನ್ನಿವ|

06096044c ಅಲಂಬುಸೋ ರಥೋಪಸ್ಥೇ ನೃತ್ಯನ್ನಿವ ಮಹಾರಥಃ||

ಮಹಾರಥ ಅಲಂಬುಸನು ನಗುತ್ತಾ ರಥದಲ್ಲಿಯೇ ನಿಂತು ನರ್ತಿಸುತ್ತಿರುವಂತೆ ಅವರೊಬ್ಬೊಬ್ಬರನ್ನೂ ಮೂರು ಮೂರು ಬಾಣಗಳಿಂದ ಹೊಡೆದನು.

06096045a ತ್ವರಮಾಣಶ್ಚ ಸಂಕ್ರುದ್ಧೋ ಹಯಾಂಸ್ತೇಷಾಂ ಮಹಾತ್ಮನಾಂ|

06096045c ಜಘಾನ ರಾಕ್ಷಸಃ ಕ್ರುದ್ಧಃ ಸಾರಥೀಂಶ್ಚ ಮಹಾಬಲಃ||

ತ್ವರೆಮಾಡಿ ಸಂಕ್ರುದ್ಧನಾದ ಮಹಾಬಲ ರಾಕ್ಷಸನು ಆ ಮಹಾತ್ಮರ ಕುದುರೆಗಳನ್ನೂ ಸಾರಥಿಗಳನ್ನೂ ಸಂಹರಿಸಿದನು.

06096046a ಬಿಭೇದ ಚ ಸುಸಂಹೃಷ್ಟಃ ಪುನಶ್ಚೈನಾನ್ಸುಸಂಶಿತೈಃ|

06096046c ಶರೈರ್ಬಹುವಿಧಾಕಾರೈಃ ಶತಶೋಽಥ ಸಹಸ್ರಶಃ||

ಪುನಃ ಸಂಹೃಷ್ಟನಾಗಿ ಅವರನ್ನು ಸುಸಂಶಿತ ಬಹವಿಧದ ಆಕಾರದ ನೂರಾರು ಸಹಸ್ರಾರು ಶರಗಳಿಂದ ಗಾಯಗೊಳಿಸಿದನು.

06096047a ವಿರಥಾಂಶ್ಚ ಮಹೇಷ್ವಾಸಾನ್ಕೃತ್ವಾ ತತ್ರ ಸ ರಾಕ್ಷಸಃ|

06096047c ಅಭಿದುದ್ರಾವ ವೇಗೇನ ಹಂತುಕಾಮೋ ನಿಶಾಚರಃ||

ಆ ಮಹೇಷ್ವಾಸರನ್ನು ವಿರಥರನ್ನಾಗಿ ಮಾಡಿ ಆ ನಿಶಾಚರ ರಾಕ್ಷಸನು ಅವರನ್ನು ಕೊಲ್ಲಲು ಬಯಸಿ ವೇಗದಿಂದ ಅವರ ಮೇಲೆ ಎರಗಿದನು.

06096048a ತಾನರ್ದಿತಾನ್ರಣೇ ತೇನ ರಾಕ್ಷಸೇನ ದುರಾತ್ಮನಾ|

06096048c ದೃಷ್ಟ್ವಾರ್ಜುನಸುತಃ ಸಂಖ್ಯೇ ರಾಕ್ಷಸಂ ಸಮುಪಾದ್ರವತ್||

ಆ ದುರಾತ್ಮ ರಾಕ್ಷಸನಿಂದ ಅವರು ಆರ್ದಿತರಾದುದನ್ನು ನೋಡಿ ಅರ್ಜುನನ ಮಗನು ಯುದ್ಧದಲ್ಲಿ ರಾಕ್ಷಸನನ್ನು ಎದುರಿಸಿದನು.

06096049a ತಯೋಃ ಸಮಭವದ್ಯುದ್ಧಂ ವೃತ್ರವಾಸವಯೋರಿವ|

06096049c ದದೃಶುಸ್ತಾವಕಾಃ ಸರ್ವೇ ಪಾಂಡವಾಶ್ಚ ಮಹಾರಥಾಃ||

ವೃತ್ರ-ವಾಸವರ ನಡುವಿನಂತೆ ಅವರಿಬ್ಬರ ನಡುವೆ ಯುದ್ಧವು ನಡೆಯಿತು. ಅದನ್ನು ಮಹಾರಥರಾದ ನಿನ್ನವರು ಮತ್ತು ಪಾಂಡವರು ಎಲ್ಲರೂ ನೋಡಿದರು.

06096050a ತೌ ಸಮೇತೌ ಮಹಾಯುದ್ಧೇ ಕ್ರೋಧದೀಪ್ತೌ ಪರಸ್ಪರಂ|

06096050c ಮಹಾಬಲೌ ಮಹಾರಾಜ ಕ್ರೋಧಸಂರಕ್ತಲೋಚನೌ|

06096050e ಪರಸ್ಪರಮವೇಕ್ಷೇತಾಂ ಕಾಲಾನಲಸಮೌ ಯುಧಿ||

ಮಹಾರಾಜ! ಮಹಾ ಯುದ್ದದಲ್ಲಿ ತೊಡಗಿದ್ದ ಅವರಿಬ್ಬರು ಮಹಾಬಲರೂ ಕ್ರೋಧದಿಂದ ಉರಿಯುತ್ತಿದ್ದು, ಕ್ರೋಧದಿಂದ ಕಣ್ಣುಗಳನ್ನು ಕೆಂಪು ಮಾಡಿಕೊಂಡು, ಪರಸ್ಪರರನ್ನು ಕಾಲಾನಲರಂತೆ ನೋಡುತ್ತಿದ್ದರು.

06096051a ತಯೋಃ ಸಮಾಗಮೋ ಘೋರೋ ಬಭೂವ ಕಟುಕೋದಯಃ|

06096051c ಯಥಾ ದೇವಾಸುರೇ ಯುದ್ಧೇ ಶಕ್ರಶಂಬರಯೋರಿವ||

ದೇವಾಸುರರ ಯುದ್ಧದಲ್ಲಿ ಶಕ್ರ-ಶಂಬರರ ನಡುವೆ ನಡೆದಂತೆ ಅವಬ್ಬರ ನಡುವೆ ಘೋರ ಅಪ್ರಿಯ ಯುದ್ಧವಾಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಅಲಂಬುಷಾಭಿಮನ್ಯುಸಮಾಗಮೇ ಷಟ್ನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಅಲಂಬುಷಾಭಿಮನ್ಯುಸಮಾಗಮ ಎನ್ನುವ ತೊಂಭತ್ತಾರನೇ ಅಧ್ಯಾಯವು.

Image result for indian motifs against white background

Comments are closed.