Bhishma Parva: Chapter 93

ಭೀಷ್ಮ ಪರ್ವ: ಭೀಷ್ಮವಧ ಪರ್ವ

೯೩

“ದ್ರೋಣ, ಭೀಷ್ಮ, ಕೃಪ, ಶಲ್ಯ ಮತ್ತು ಸೌಮದತ್ತಿಗಳು ಸಂಯುಗದಲ್ಲಿ ಪಾರ್ಥರಿಗೆ ಯಾವುದೇ ರೀತಿಯ ಬಾಧೆಗಳನ್ನೂ ಉಂಟುಮಾಡುತ್ತಿಲ್ಲ. ಇದರ ಕಾರಣವು ಅರ್ಥವಾಗುತ್ತಿಲ್ಲ.” ಎಂದು ದುರ್ಯೋಧನನು ಹೇಳಲು ಕರ್ಣನು ಭೀಷ್ಮನು ಶಸ್ತ್ರನ್ಯಾಸಮಾಡುವಂತೆ ಮಾಡಿದರೆ ತಾನು ಪಾಂಡವರನ್ನು ಸಂಹರಿಸುತ್ತೇನೆ ಎಂದು ಭರವಸೆಯನ್ನು ನೀಡುವುದು (೧-೧೩). ಅಗ ದುರ್ಯೋಧನನು ಭೀಷ್ಮನ ಶಿಬಿರಕ್ಕೆ ಹೋಗಿ ಅವನಿಗೆ “ಅವರ ಮೇಲಿನ ದಯೆಯಿಂದಲೋ ನನ್ನ ಮೇಲಿನ ದ್ವೇಷದಿಂದಲೋ ಅಥವಾ ನನ್ನ ದೌರ್ಭಾಗ್ಯದಿಂದಲೋ ನೀನು ಪಾಂಡವರನ್ನು ರಕ್ಷಿಸುವೆಯಾದರೆ ಸಮರದಲ್ಲಿ ಆಹವಶೋಭಿ ಕರ್ಣನಿಗೆ ಅನುಮತಿಯನ್ನು ನೀಡು. ಅವನು ರಣದಲ್ಲಿ ಸುಹೃದಯರು ಬಾಂಧವರ ಗಣಗಳೊಂದಿಗೆ ಪಾರ್ಥರನ್ನು ಗೆಲ್ಲುತ್ತಾನೆ.” ಎಂದುದು (೧೪-೪೧).

06093001 ಸಂಜಯ ಉವಾಚ|

06093001a ತತೋ ದುರ್ಯೋಧನೋ ರಾಜಾ ಶಕುನಿಶ್ಚಾಪಿ ಸೌಬಲಃ|

06093001c ದುಃಶಾಸನಶ್ಚ ಪುತ್ರಸ್ತೇ ಸೂತಪುತ್ರಶ್ಚ ದುರ್ಜಯಃ||

06093002a ಸಮಾಗಮ್ಯ ಮಹಾರಾಜ ಮಂತ್ರಂ ಚಕ್ರೂರ್ವಿವಕ್ಷಿತಂ|

06093002c ಕಥಂ ಪಾಂಡುಸುತಾ ಯುದ್ಧೇ ಜೇತವ್ಯಾಃ ಸಗಣಾ ಇತಿ||

ಸಂಜಯನು ಹೇಳಿದನು: “ಮಹಾರಾಜ! ಆಗ ರಾಜಾ ದುರ್ಯೋಧನ, ಸೌಬಲ ಶಕುನಿ, ನಿನ್ನ ಮಗ ದುಃಶಾಸನ ಮತ್ತು ದುರ್ಜಯ ಸೂತಪುತ್ರರು ಸೇರಿಕೊಂಡು “ಪಾಂಡುಸುತರನ್ನು ಗಣಗಳೊಂದಿಗೆ ಯುದ್ಧದಲ್ಲಿ ಹೇಗೆ ಗೆಲ್ಲಬೇಕು” ಎಂದು ಮಂತ್ರಾಲೋಚನೆ ಮಾಡಿದರು.

06093003a ತತೋ ದುರ್ಯೋಧನೋ ರಾಜಾ ಸರ್ವಾಂಸ್ತಾನಾಹ ಮಂತ್ರಿಣಃ|

06093003c ಸೂತಪುತ್ರಂ ಸಮಾಭಾಷ್ಯ ಸೌಬಲಂ ಚ ಮಹಾಬಲಂ||

ಆಗ ರಾಜಾ ದುರ್ಯೋಧನನು ಸೂತಪುತ್ರನನ್ನೂ ಮಹಾಬಲ ಸೌಬಲನನ್ನೂ ಸಂಭೋಧಿಸಿ ತನ್ನ ಮಂತ್ರಿಗಳೆಲ್ಲರಿಗೆ ಹೇಳಿದನು:

06093004a ದ್ರೋಣೋ ಭೀಷ್ಮಃ ಕೃಪಃ ಶಲ್ಯಃ ಸೌಮದತ್ತಿಶ್ಚ ಸಂಯುಗೇ|

06093004c ನ ಪಾರ್ಥಾನ್ಪ್ರತಿಬಾಧಂತೇ ನ ಜಾನೇ ತತ್ರ ಕಾರಣಂ||

ದ್ರೋಣ, ಭೀಷ್ಮ, ಕೃಪ, ಶಲ್ಯ ಮತ್ತು ಸೌಮದತ್ತಿಗಳು ಸಂಯುಗದಲ್ಲಿ ಪಾರ್ಥರಿಗೆ ಯಾವುದೇ ರೀತಿಯ ಬಾಧೆಗಳನ್ನೂ ಉಂಟುಮಾಡುತ್ತಿಲ್ಲ. ಇದರ ಕಾರಣವು ಅರ್ಥವಾಗುತ್ತಿಲ್ಲ.

06093005a ಅವಧ್ಯಮಾನಾಸ್ತೇ ಚಾಪಿ ಕ್ಷಪಯಂತಿ ಬಲಂ ಮಮ|

06093005c ಸೋಽಸ್ಮಿ ಕ್ಷೀಣಬಲಃ ಕರ್ಣ ಕ್ಷೀಣಶಸ್ತ್ರಶ್ಚ ಸಂಯುಗೇ||

ಕರ್ಣ! ಅವಧ್ಯರಾಗಿರುವುದಲ್ಲದೇ ಅವರು ನನ್ನ ಸೇನೆಯನ್ನು ನಾಶಗೊಳಿಸುತ್ತಿದ್ದಾರೆ. ಸಂಯುಗದಲ್ಲಿ ಕ್ಷೀಣಬಲನೂ ಕ್ಷೀಣಶಸ್ತ್ರನೂ ಆಗುತ್ತಿದ್ದೇನೆ.

06093006a ನಿಕೃತಃ ಪಾಂಡವೈಃ ಶೂರೈರವಧ್ಯೈರ್ದೈವತೈರಪಿ|

06093006c ಸೋಽಹಂ ಸಂಶಯಮಾಪನ್ನಃ ಪ್ರಕರಿಷ್ಯೇ ಕಥಂ ರಣಂ||

ದೇವತೆಗಳಿಂದಲೂ ಅವಧ್ಯರಾದ ಶೂರ ಪಾಂಡವರಿಂದ ಪರಾಜಿತನಾಗುತ್ತಿರುವ ನನಗೆ ಸಂಶಯವಾಗುತ್ತಿದೆ. ರಣದಲ್ಲಿ ಹೇಗೆ ಯುದ್ಧಮಾಡಬೇಕು?”

06093007a ತಮಬ್ರವೀನ್ಮಹಾರಾಜ ಸೂತಪುತ್ರೋ ನರಾಧಿಪಂ|

06093007c ಮಾ ಶುಚೋ ಭರತಶ್ರೇಷ್ಠ ಪ್ರಕರಿಷ್ಯೇ ಪ್ರಿಯಂ ತವ||

ಮಹಾರಾಜ! ಸೂತಪುತ್ರನು ನರಾಧಿಪನಿಗೆ ಹೇಳಿದನು: “ಭರತಶ್ರೇಷ್ಠ! ಶೋಕಿಸಬೇಡ! ನಿನಗೆ ಪ್ರಿಯವಾದುದನ್ನು ಮಾಡುತ್ತೇನೆ.

06093008a ಭೀಷ್ಮಃ ಶಾಂತನವಸ್ತೂರ್ಣಮಪಯಾತು ಮಹಾರಣಾತ್|

06093008c ನಿವೃತ್ತೇ ಯುಧಿ ಗಾಂಗೇಯೇ ನ್ಯಸ್ತಶಸ್ತ್ರೇ ಚ ಭಾರತ||

06093009a ಅಹಂ ಪಾರ್ಥಾನ್ ಹನಿಷ್ಯಾಮಿ ಸನಿತಾನ್ಸರ್ವಸೋಮಕೈಃ|

06093009c ಪಶ್ಯತೋ ಯುಧಿ ಭೀಷ್ಮಸ್ಯ ಶಪೇ ಸತ್ಯೇನ ತೇ ನೃಪ||

ಆದಷ್ಟು ಬೇಗನೆ ಮಹಾರಣದಿಂದ ಭೀಷ್ಮ ಶಾಂತನವನು ಹೊರಟು ಹೋಗಲಿ. ಭಾರತ! ಗಾಂಗೇಯನು ಯುದ್ಧದಿಂದ ನಿವೃತ್ತನಾಗಿ ಶಸ್ತ್ರಗಳನ್ನು ಕೆಳಗಿಟ್ಟರೆ, ನೃಪ! ನಿನ್ನಾಣೆ! ಸತ್ಯವಾಗಿಯೂ ನಾನು ಯುದ್ಧದಲ್ಲಿ ಭೀಷ್ಮನು ನೋಡುತ್ತಿದ್ದಂತೆಯೇ ಸರ್ವಸೋಮಕರೊಂದಿಗೆ ಪಾರ್ಥರನ್ನು ಕೊಲ್ಲುತ್ತೇನೆ.

06093010a ಪಾಂಡವೇಷು ದಯಾಂ ರಾಜನ್ಸದಾ ಭೀಷ್ಮಃ ಕರೋತಿ ವೈ|

06093010c ಅಶಕ್ತಶ್ಚ ರಣೇ ಭೀಷ್ಮೋ ಜೇತುಮೇತಾನ್ಮಹಾರಥಾನ್||

ರಾಜನ್! ಭೀಷ್ಮನು ಸದಾ ಪಾಂಡವರ ಮೇಲೆ ದಯೆಯನ್ನು ತೋರಿಸುತ್ತಾ ಬರಲಿಲ್ಲವೇ? ರಣದಲ್ಲಿ ಭೀಷ್ಮನು ಈ ಮಹಾರಥರನ್ನು ಗೆಲ್ಲಲು ಅಶಕ್ತನಾಗಿದ್ದಾನೆ.

06093011a ಅಭಿಮಾನೀ ರಣೇ ಭೀಷ್ಮೋ ನಿತ್ಯಂ ಚಾಪಿ ರಣಪ್ರಿಯಃ|

06093011c ಸ ಕಥಂ ಪಾಂಡವಾನ್ಯುದ್ಧೇ ಜೇಷ್ಯತೇ ತಾತ ಸಂಗತಾನ್||

ರಣಪ್ರಿಯನಾದ ಭೀಷ್ಮನು ನಿತ್ಯವೂ ರಣದಲ್ಲಿ ಅಭಿಮಾನಿಯಾಗಿರುವವನು. ಹೀಗಿರುವಾಗ ಯುದ್ಧದಲ್ಲಿ ಅವನು ಒಟ್ಟಾಗಿ ಬಂದಿರುವ ಪಾಂಡವರನ್ನು ಹೇಗೆ ತಾನೇ ಜಯಿಸಿಯಾನು?

06093012a ಸ ತ್ವಂ ಶೀಘ್ರಮಿತೋ ಗತ್ವಾ ಭೀಷ್ಮಸ್ಯ ಶಿಬಿರಂ ಪ್ರತಿ|

06093012c ಅನುಮಾನ್ಯ ರಣೇ ಭೀಷ್ಮಂ ಶಸ್ತ್ರಂ ನ್ಯಾಸಯ ಭಾರತ||

ಭಾರತ! ಆದುದರಿಂದ ನೀನು ಈಗ ಶೀಘ್ರವೇ ಭೀಷ್ಮನ ಶಿಬಿರಕ್ಕೆ ಹೋಗಿ ಅನುನಯದಿಂದ ರಣದಲ್ಲಿ ಭೀಷ್ಮನು ಶಸ್ತ್ರನ್ಯಾಸಮಾಡುವಂತೆ ಮಾಡು.

06093013a ನ್ಯಸ್ತಶಸ್ತ್ರೇ ತತೋ ಭೀಷ್ಮೇ ನಿಹತಾನ್ಪಶ್ಯ ಪಾಂಡವಾನ್|

06093013c ಮಯೈಕೇನ ರಣೇ ರಾಜನ್ಸಸುಹೃದ್ಗಣಬಾಂಧವಾನ್||

ರಾಜನ್! ಭೀಷ್ಮನು ಶಸ್ತ್ರನ್ಯಾಸ ಮಾಡಿದೊಡನೆಯೇ ನಾನೊಬ್ಬನೇ ರಣದಲ್ಲಿ ಸುಹೃದಯರು ಮತ್ತು ಬಾಂಧವರೊಂದಿಗೆ ಪಾಂಡವರನ್ನು ಸಂಹರಿಸುವುದನ್ನು ನೋಡು!”

06093014a ಏವಮುಕ್ತಸ್ತು ಕರ್ಣೇನ ಪುತ್ರೋ ದುರ್ಯೋಧನಸ್ತವ|

06093014c ಅಬ್ರವೀದ್ಭ್ರಾತರಂ ತತ್ರ ದುಃಶಾಸನಮಿದಂ ವಚಃ||

ಕರ್ಣನು ಹೀಗೆ ಹೇಳಲು ನಿನ್ನ ಪುತ್ರ ದುರ್ಯೋಧನನ್ನು ಅಲ್ಲಿದ್ದ ತಮ್ಮ ದುಃಶಾಸನನಿಗೆ ಹೇಳಿದನು:

06093015a ಅನುಯಾತ್ರಂ ಯಥಾ ಸಜ್ಜಂ ಸರ್ವಂ ಭವತಿ ಸರ್ವತಃ|

06093015c ದುಃಶಾಸನ ತಥಾ ಕ್ಷಿಪ್ರಂ ಸರ್ವಮೇವೋಪಪಾದಯ||

“ದುಃಶಾಸನ! ನಮ್ಮವರು ಎಲ್ಲರೂ ಸುತ್ತುವರೆದು ನನ್ನನ್ನು ಹಿಂಬಾಲಿಸುವಂತೆ ವ್ಯವಸ್ಥೆ ಮಾಡು. ಬೇಗನೇ ಈ ಎಲ್ಲ ಕೆಲಸವನ್ನು ಮಾಡಿ ಮುಗಿಸು.”

06093016a ಏವಮುಕ್ತ್ವಾ ತತೋ ರಾಜನ್ಕರ್ಣಮಾಹ ಜನೇಶ್ವರಃ|

06093016c ಅನುಮಾನ್ಯ ರಣೇ ಭೀಷ್ಮಮಿತೋಽಹಂ ದ್ವಿಪದಾಂ ವರಂ||

ರಾಜನ್! ಹೀಗೆ ಹೇಳಿ ಜನೇಶ್ವರನು ಕರ್ಣನಿಗೆ ಹೇಳಿದನು: “ರಣದಲ್ಲಿ ನರರಲ್ಲಿ ಶ್ರೇಷ್ಠ ಭೀಷ್ಮನನ್ನು ಒಪ್ಪಿಸಿ ಇಲ್ಲಿಗೆ ಬರುತ್ತೇನೆ.

06093017a ಆಗಮಿಷ್ಯೇ ತತಃ ಕ್ಷಿಪ್ರಂ ತ್ವತ್ಸಕಾಶಮರಿಂದಮ|

06093017c ತತಸ್ತ್ವಂ ಪುರುಷವ್ಯಾಘ್ರ ಪ್ರಕರಿಷ್ಯಸಿ ಸಂಯುಗಂ||

ಅರಿಂದಮ! ನಂತರ ನಿನ್ನಲ್ಲಿಗೆ ಬೇಗನೇ ಬರುತ್ತೇನೆ. ಪುರುಷವ್ಯಾಘ್ರ! ಆಗ ನೀನು ಸಂಯುಗದಲ್ಲಿ ಮಾಡಿ ತೋರಿಸುವಿಯಂತೆ.”

06093018a ನಿಷ್ಪಪಾತ ತತಸ್ತೂರ್ಣಂ ಪುತ್ರಸ್ತವ ವಿಶಾಂ ಪತೇ|

06093018c ಸಹಿತೋ ಭ್ರಾತೃಭಿಃ ಸರ್ವೈರ್ದೇವೈರಿವ ಶತಕ್ರತುಃ||

ವಿಶಾಂಪತೇ! ಆಗ ನಿನ್ನ ಮಗನು ಎಲ್ಲ ದೇವತಗಳೊಂದಿಗೆ ಶತಕ್ರತುವಂತೆ ತನ್ನ ಸಹೋದರರೊಂದಿಗೆ ಬೇಗನೇ ಹೊರಟನು.

06093019a ತತಸ್ತಂ ನೃಪಶಾರ್ದೂಲಂ ಶಾರ್ದೂಲಸಮವಿಕ್ರಮಂ|

06093019c ಆರೋಹಯದ್ಧಯಂ ತೂರ್ಣಂ ಭ್ರಾತಾ ದುಃಶಾಸನಸ್ತದಾ||

ಆಗ ತಕ್ಷಣವೇ ಭ್ರಾತಾ ದುಃಶಾಸನನು ಶಾರ್ದೂಲಸಮವಿಕ್ರಮ ನೃಪಶಾರ್ದೂಲನನ್ನು ಕುದುರೆಯ ಮೇಲೆ ಹತ್ತಿಸಿದನು.

06093020a ಅಂಗದೀ ಬದ್ಧಮುಕುಟೋ ಹಸ್ತಾಭರಣವಾನ್ನೃಪಃ|

06093020c ಧಾರ್ತರಾಷ್ಟ್ರೋ ಮಹಾರಾಜ ವಿಬಭೌ ಸ ಮಹೇಂದ್ರವತ್||

ಮಹಾರಾಜ! ಅಂಗದಗಳನ್ನು ಧರಿಸಿದ್ದ, ಕಿರೀಟವನ್ನು ಹಸ್ತಾಭರಣಗಳನ್ನು ಧರಿಸಿದ್ದ ನೃಪ ಧಾರ್ತರಾಷ್ಟ್ರನು ಮಹೇಂದ್ರನಂತೆ ಕಂಗೊಳಿಸಿದನು.

06093021a ಭಾಂಡೀಪುಷ್ಪನಿಕಾಶೇನ ತಪನೀಯನಿಭೇನ ಚ|

06093021c ಅನುಲಿಪ್ತಃ ಪರಾರ್ಧ್ಯೇನ ಚಂದನೇನ ಸುಗಂಧಿನಾ||

06093022a ಅರಜೋಂಬರಸಂವೀತಃ ಸಿಂಹಖೇಲಗತಿರ್ನೃಪಃ|

06093022c ಶುಶುಭೇ ವಿಮಲಾರ್ಚಿಷ್ಮಂ ಶರದೀವ ದಿವಾಕರಃ||

ಶಿರೀಷಪುಷ್ಪ ಸದೃಶನಾಗಿದ್ದ, ಚಿನ್ನದ ಹೊಂಬಣ್ಣದ, ಸುಂಗಂಧಯುಕ್ತವಾದ ಬಹುಮೂಲ್ಯದ ಚಂದನವನ್ನು ಲೇಪಿಸಿಕೊಂಡಿದ್ದ, ಧೂಳಿಲ್ಲದ ಶುಭ್ರ ವಸ್ತ್ರಗಳನ್ನು ತೊಟ್ಟಿದ್ದ, ಮದೋನ್ಮತ್ತ ಸಿಂಹದ ನಡುಗೆಯ ನೃಪನು ಶರದೃತುವಿನ ವಿಮಲ ಆಕಾಶದಲ್ಲಿರುವ ದಿವಾಕರನಂತೆ ಶೋಭಿಸಿದನು.

06093023a ತಂ ಪ್ರಯಾಂತಂ ನರವ್ಯಾಘ್ರಂ ಭೀಷ್ಮಸ್ಯ ಶಿಬಿರಂ ಪ್ರತಿ|

06093023c ಅನುಜಗ್ಮುರ್ಮಹೇಷ್ವಾಸಾಃ ಸರ್ವಲೋಕಸ್ಯ ಧನ್ವಿನಃ|

06093023e ಭ್ರಾತರಶ್ಚ ಮಹೇಷ್ವಾಸಾಸ್ತ್ರಿದಶಾ ಇವ ವಾಸವಂ||

ಭೀಷ್ಮನ ಶಿಬಿರದ ಕಡೆ ಹೋಗುತ್ತಿರುವ ಆ ನರವ್ಯಾಘ್ರನನ್ನು ಸರ್ವಲೋಕದ ಧನ್ವಿಗಳಾದ ಮಹೇಷ್ವಾಸರೂ ಸಹೋದರರೂ ವಾಸವನನ್ನು ತ್ರಿದಶರಂತೆ ಹಿಂಬಾಲಿಸಿದರು.

06093024a ಹಯಾನನ್ಯೇ ಸಮಾರುಹ್ಯ ಗಜಾನನ್ಯೇ ಚ ಭಾರತ|

06093024c ರಥೈರನ್ಯೇ ನರಶ್ರೇಷ್ಠಾಃ ಪರಿವವ್ರುಃ ಸಮಂತತಃ||

ಭಾರತ! ಕೆಲವರು ಕುದುರೆಗಳನ್ನೇರಿ, ಅನ್ಯರು ಆನೆಗಳನ್ನೇರಿ, ಅನ್ಯ ನರಶ್ರೇಷ್ಠರು ರಥಗಳನ್ನೇರಿ ಎಲ್ಲ ಕಡೆಗಳಿಂದಲೂ ಸುತ್ತುವರೆದಿದ್ದರು.

06093025a ಆತ್ತಶಸ್ತ್ರಾಶ್ಚ ಸುಹೃದೋ ರಕ್ಷಣಾರ್ಥಂ ಮಹೀಪತೇಃ|

06093025c ಪ್ರಾದುರ್ಬಭೂವುಃ ಸಹಿತಾಃ ಶಕ್ರಸ್ಯೇವಾಮರಾ ದಿವಿ||

ಮಹೀಪತಿಯ ರಕ್ಷಣಾರ್ಥವಾಗಿ ಸುಹೃದಯರು ಶಸ್ತ್ರಗಳನ್ನು ಹಿಡಿದು ದಿವಿಯಲ್ಲಿ ಅಮರರು ಶಕ್ರನಂತೆ ಹಿಂಬಾಲಿಸಿದರು.

06093026a ಸಂಪೂಜ್ಯಮಾನಃ ಕುರುಭಿಃ ಕೌರವಾಣಾಂ ಮಹಾರಥಃ|

06093026c ಪ್ರಯಯೌ ಸದನಂ ರಾಜನ್ಗಾಂಗೇಯಸ್ಯ ಯಶಸ್ವಿನಃ|

06093026e ಅನ್ವೀಯಮಾನಃ ಸಹಿತೈಃ ಸೋದರೈಃ ಸರ್ವತೋ ನೃಪಃ||

ರಾಜನ್! ಕುರುಗಳಿಂದ ಮತ್ತು ಕೌರವ ಮಹಾರಥರಿಂದ ಸಂಪೂಜ್ಯಮಾನನಾಗಿ ಆ ಯಶಸ್ವಿ ನೃಪನು ಎಲ್ಲಕಡೆಗಳಲ್ಲಿ ಸೋದರರನ್ನೊಡಗೂಡಿ ಗಾಂಗೇಯನ ಸದನದ ಕಡೆ ಪ್ರಯಾಣಿಸಿದನು.

06093027a ದಕ್ಷಿಣಂ ದಕ್ಷಿಣಃ ಕಾಲೇ ಸಂಭೃತ್ಯ ಸ್ವಭುಜಂ ತದಾ|

06093027c ಹಸ್ತಿಹಸ್ತೋಪಮಂ ಶೈಕ್ಷಂ ಸರ್ವಶತ್ರುನಿಬರ್ಹಣಂ||

06093028a ಪ್ರಗೃಹ್ಣನ್ನಂಜಲೀನ್ನೄಣಾಮುದ್ಯತಾನ್ಸರ್ವತೋದಿಶಂ|

06093028c ಶುಶ್ರಾವ ಮಧುರಾ ವಾಚೋ ನಾನಾದೇಶನಿವಾಸಿನಾಂ||

ಆ ಬಲಸಮಯದಲ್ಲಿ ಸರ್ವಶತ್ರುಗಳನ್ನೂ ಸಂಹಾರಮಾಡಲ್ಲ, ಆನೆಯ ಸೊಂಡಲಿನಂತಿದ್ದ, ನೈಪುಣ್ಯತೆಯನ್ನು ಹೊಂದಿದ್ದ ಬಲಗೈಯನ್ನು ಮೇಲೆತ್ತಿ ಎಲ್ಲ ದಿಕ್ಕುಗಳಲ್ಲಿಯು ಅಂಜಲೀ ಬದ್ಧರಾಗಿ ಅರ್ಪಿಸುತ್ತಿದ್ದ ಪ್ರಣಾಮಗಳನ್ನು ಸ್ವೀಕರಿಸುತ್ತಾ ನಾನಾದೇಶ ನಿವಾಸಿಗಳ ಮಧುರ ವಚನವನ್ನು ಕೇಳಿದನು.

06093029a ಸಂಸ್ತೂಯಮಾನಃ ಸೂತೈಶ್ಚ ಮಾಗಧೈಶ್ಚ ಮಹಾಯಶಾಃ|

06093029c ಪೂಜಯಾನಶ್ಚ ತಾನ್ಸರ್ವಾನ್ಸರ್ವಲೋಕೇಶ್ವರೇಶ್ವರಃ||

06093030a ಪ್ರದೀಪೈಃ ಕಾಂಚನೈಸ್ತತ್ರ ಗಂಧತೈಲಾವಸೇಚನೈಃ|

06093030c ಪರಿವವ್ರುರ್ಮಹಾತ್ಮಾನಂ ಪ್ರಜ್ವಲದ್ಭಿಃ ಸಮಂತತಃ||

ಸಂಸ್ತುತಿಸುತ್ತಿದ್ದ ಸೂತರಿಂದ, ಮಹಾಯಶ ಮಾಗಧರಿಂದ ಎಲ್ಲರಿಂದ ಪೂಜಿಸಿಕೊಳ್ಳುತ್ತಾ ಸರ್ವಲೋಕೇಶ್ವರೇಶ್ವರನು ಹೊಳೆಯುತ್ತಿರುವ ಕಾಂಚನಗಳಿಂದ ಮತ್ತು ಸುಗಂಧಿತ ತೈಲಾವಸೇಚನೆಗೊಂಡ ಮಹಾತ್ಮರಿಂದ ಸುತ್ತುವರೆಯಲ್ಪಟ್ಟು ಪ್ರಜ್ವಲಿಸುತ್ತಾ ಮುಂದುವರೆದನು.

06093031a ಸ ತೈಃ ಪರಿವೃತೋ ರಾಜಾ ಪ್ರದೀಪೈಃ ಕಾಂಚನೈಃ ಶುಭೈಃ|

06093031c ಶುಶುಭೇ ಚಂದ್ರಮಾ ಯುಕ್ತೋ ದೀಪ್ತೈರಿವ ಮಹಾಗ್ರಹೈಃ||

ಶುಭ ಕಾಂಚನಗಳಿಂದ ಹೊಳೆಯುತ್ತಿರುವವರಿಂದ ಪರಿವೃತನಾದ ರಾಜನು ಉರಿಯುತ್ತಿರುವ ಮಹಾಗ್ರಹಗಳಿಂದ ಯುಕ್ತನಾದ ಚಂದ್ರಮನಂತೆ ಶೋಭಿಸಿದನು.

06093032a ಕಂಚುಕೋಷ್ಣೀಷಿಣಸ್ತತ್ರ ವೇತ್ರಝರ್ಝರಪಾಣಯಃ|

06093032c ಪ್ರೋತ್ಸಾರಯಂತಃ ಶನಕೈಸ್ತಂ ಜನಂ ಸರ್ವತೋದಿಶಂ||

ಕಂಚುಕ ಉಷ್ಣೀಷಿಣಗಳನ್ನು ಧರಿಸಿದ್ದ ಝರ್ಝರಗಳನ್ನು ಹಿಡಿದಿದ್ದ ವೇತ್ರರು ಎಲ್ಲಕಡೆಯಿಂದ ಮುನ್ನುಗ್ಗುತ್ತಿದ್ದ ಜನಸ್ತೋಮವನ್ನು ಮೆಲ್ಲನೇ ಹಿಂದೆ ಸರಿಸುತ್ತಿದ್ದರು.

06093033a ಸಂಪ್ರಾಪ್ಯ ತು ತತೋ ರಾಜಾ ಭೀಷ್ಮಸ್ಯ ಸದನಂ ಶುಭಂ|

06093033c ಅವತೀರ್ಯ ಹಯಾಚ್ಚಾಪಿ ಭೀಷ್ಮಂ ಪ್ರಾಪ್ಯ ಜನೇಶ್ವರಃ||

ಆಗ ರಾಜ ಜನೇಶ್ವರನು ಭೀಷ್ಮನ ಶುಭ ಸದನವನ್ನು ತಲುಪಿ ಕುದುರೆಯಿಂದ ಇಳಿದು ಭೀಷ್ಮನನ್ನು ಸಮೀಪಿಸಿದನು.

06093034a ಅಭಿವಾದ್ಯ ತತೋ ಭೀಷ್ಮಂ ನಿಷಣ್ಣಃ ಪರಮಾಸನೇ|

06093034c ಕಾಂಚನೇ ಸರ್ವತೋಭದ್ರೇ ಸ್ಪರ್ಧ್ಯಾಸ್ತರಣಸಂವೃತೇ|

06093034e ಉವಾಚ ಪ್ರಾಂಜಲಿರ್ಭೀಷ್ಮಂ ಬಾಷ್ಪಕಂಠೋಽಶ್ರುಲೋಚನಃ||

ಭೀಷ್ಮನನ್ನು ಅಭಿವಂದಿಸಿ, ಮೆತ್ತನೆಯ ಕಾಂಚನದ ಸರ್ವತೋಭದ್ರಾಸನ ಪರಮಾಸನದಲ್ಲಿ ಕುಳಿತುಕೊಂಡು ಅಂಜಲೀ ಬದ್ಧನಾಗಿ ಬಾಷ್ಪಕಂಠದಲ್ಲಿ ಅಶ್ರುಲೋಚನನಾಗಿ ಭೀಷ್ಮನಿಗೆ ಹೇಳಿದನು:

06093035a ತ್ವಾಂ ವಯಂ ಸಮುಪಾಶ್ರಿತ್ಯ ಸಂಯುಗೇ ಶತ್ರುಸೂದನ|

06093035c ಉತ್ಸಹೇಮ ರಣೇ ಜೇತುಂ ಸೇಂದ್ರಾನಪಿ ಸುರಾಸುರಾನ್||

06093036a ಕಿಮು ಪಾಂಡುಸುತಾನ್ವೀರಾನ್ಸಸುಹೃದ್ಗಣಬಾಂಧವಾನ್|

“ಶತ್ರುಸೂದನ! ನಾವು ನಿನ್ನನ್ನು ಸಮಾಶ್ರಯಿಸಿ ಸಂಯುಗದಲ್ಲಿ ಇಂದ್ರನನ್ನೂ ಸುರಾಸುರರನ್ನೂ ರಣದಲ್ಲಿ ಗೆಲ್ಲಲು ಉತ್ಸಾಹಿತರಾಗಿದ್ದೇವೆ. ಇನ್ನು ಸುಹೃದಯರು ಮತ್ತು ಬಾಂಧವಗಣಗಳೊಂದಿಗಿರುವ ವೀರ ಪಾಂಡುಸುತರು ಯಾವ ಲೆಕ್ಕಕ್ಕೆ?

06093036c ತಸ್ಮಾದರ್ಹಸಿ ಗಾಂಗೇಯ ಕೃಪಾಂ ಕರ್ತುಂ ಮಯಿ ಪ್ರಭೋ||

06093036e ಜಹಿ ಪಾಂಡುಸುತಾನ್ವೀರಾನ್ಮಹೇಂದ್ರ ಇವ ದಾನವಾನ್||

ಆದುದರಿಂದ ಗಾಂಗೇಯ! ಪ್ರಭೋ! ನನ್ನ ಮೇಲೆ ಕೃಪೆ ಮಾಡಲು ಮಹೇಂದ್ರನು ದಾನವರನ್ನು ಹೇಗೋ ಹಾಗೆ ನೀನು ವೀರ ಪಾಂಡುಸುತರನ್ನು ಗೆಲ್ಲು.

06093037a ಪೂರ್ವಮುಕ್ತಂ ಮಹಾಬಾಹೋ ನಿಹನಿಷ್ಯಾಮಿ ಸೋಮಕಾನ್|

06093037c ಪಾಂಚಾಲಾನ್ಪಾಂಡವೈಃ ಸಾರ್ಧಂ ಕರೂಷಾಂಶ್ಚೇತಿ ಭಾರತ||

ಮಹಾಬಾಹೋ! ಭಾರತ! ಹಿಂದೆ ನೀನು ಸೋಮಕರನ್ನೂ, ಪಾಂಚಾಲರನ್ನೂ, ಕರೂಷರನ್ನೂ ಪಾಂಡವರೊಂದಿಗೆ ಸಂಹರಿಸುತ್ತೇನೆ ಎಂದು ಹೇಳಿದ್ದೆ.

06093038a ತದ್ವಚಃ ಸತ್ಯಮೇವಾಸ್ತು ಜಹಿ ಪಾರ್ಥಾನ್ಸಮಾಗತಾನ್|

06093038c ಸೋಮಕಾಂಶ್ಚ ಮಹೇಷ್ವಾಸಾನ್ಸತ್ಯವಾಗ್ಭವ ಭಾರತ||

ಭಾರತ! ಆ ವಚನವನ್ನು ಸತ್ಯವಾಗಿಸಲು ಸಮಾಗತರಾಗಿರುವ ಪಾರ್ಥರನ್ನು ಮತ್ತು ಮಹೇಷ್ವಾಸ ಸೋಮಕರನ್ನು ಗೆಲ್ಲು. ಸತ್ಯವಾಗ್ಮಿಯಾಗು.

06093039a ದಯಯಾ ಯದಿ ವಾ ರಾಜನ್ದ್ವೇಷ್ಯಭಾವಾನ್ಮಮ ಪ್ರಭೋ|

06093039c ಮಂದಭಾಗ್ಯತಯಾ ವಾಪಿ ಮಮ ರಕ್ಷಸಿ ಪಾಂಡವಾನ್||

06093040a ಅನುಜಾನೀಹಿ ಸಮರೇ ಕರ್ಣಮಾಹವಶೋಭಿನಂ|

06093040c ಸ ಜೇಷ್ಯತಿ ರಣೇ ಪಾರ್ಥಾನ್ಸಸುಹೃದ್ಗಣಬಾಂಧವಾನ್||

ರಾಜನ್! ಪ್ರಭೋ! ಅವರ ಮೇಲಿನ ದಯೆಯಿಂದಲೋ ನನ್ನ ಮೇಲಿನ ದ್ವೇಷದಿಂದಲೋ ಅಥವಾ ನನ್ನ ದೌರ್ಭಾಗ್ಯದಿಂದಲೋ ನೀನು ಪಾಂಡವರನ್ನು ರಕ್ಷಿಸುವೆಯಾದರೆ ಸಮರದಲ್ಲಿ ಆಹವಶೋಭಿ ಕರ್ಣನಿಗೆ ಅನುಮತಿಯನ್ನು ನೀಡು. ಅವನು ರಣದಲ್ಲಿ ಸುಹೃದಯರು ಬಾಂಧವರ ಗಣಗಳೊಂದಿಗೆ ಪಾರ್ಥರನ್ನು ಗೆಲ್ಲುತ್ತಾನೆ.”

06093041a ಏತಾವದುಕ್ತ್ವಾ ನೃಪತಿಃ ಪುತ್ರೋ ದುರ್ಯೋಧನಸ್ತವ|

06093041c ನೋವಾಚ ವಚನಂ ಕಿಂ ಚಿದ್ಭೀಷ್ಮಂ ಭೀಮಪರಾಕ್ರಮಂ||

ಹೀಗೆ ಹೇಳಿ ನಿನ್ನ ಮಗ ನೃಪತಿ ದುರ್ಯೋಧನನು ಭೀಮಪರಾಕ್ರಮಿ ಭೀಷ್ಮನಿಗೆ ಬೇರೆ ಏನನ್ನೂ ಹೇಳಲಿಲ್ಲ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಂಪ್ರತಿದುರ್ಯೋಧನವಾಕ್ಯೇ ತ್ರಿನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಂಪ್ರತಿದುರ್ಯೋಧನವಾಕ್ಯ ಎನ್ನುವ ತೊಂಭತ್ಮೂರನೇ ಅಧ್ಯಾಯವು.

Image result for indian motifs against white background

Comments are closed.