ಭೀಷ್ಮ ಪರ್ವ: ಭೀಷ್ಮವಧ ಪರ್ವ
Contents
Toggle೯೧
ಘಟೋಟ್ಕಚನಿಂದ ಪರಾಜಿತನಾದ ದುರ್ಯೋಧನ ಮತ್ತು ಭೀಷ್ಮರ ಸಂವಾದ (೧-೧೫). ಭೀಷ್ಮನು ಘಟೋತ್ಕಚನೊಡನೆ ಯುದ್ಧಮಾಡಲು ಭಗದತ್ತನನ್ನು ಕಳುಹಿಸಿದುದು (೧೬-೨೦). ಭೀಮ-ಘಟೋತ್ಕಚರೊಡನೆ ಭಗದತ್ತನ ಯುದ್ಧ (೨೧-೮೧).
06091001 ಸಂಜಯ ಉವಾಚ|
06091001a ತಸ್ಮಿನ್ಮಹತಿ ಸಂಕ್ರಂದೇ ರಾಜಾ ದುರ್ಯೋಧನಸ್ತದಾ|
06091001c ಗಾಂಗೇಯಮುಪಸಂಗಮ್ಯ ವಿನಯೇನಾಭಿವಾದ್ಯ ಚ||
06091002a ತಸ್ಯ ಸರ್ವಂ ಯಥಾವೃತ್ತಮಾಖ್ಯಾತುಮುಪಚಕ್ರಮೇ|
06091002c ಘಟೋತ್ಕಚಸ್ಯ ವಿಜಯಮಾತ್ಮನಶ್ಚ ಪರಾಜಯಂ||
ಸಂಜಯನು ಹೇಳಿದನು: “ಆ ಮಹಾ ಸಂಕ್ರಂದಲ್ಲಿ ರಾಜಾ ದುರ್ಯೋಧನನು ಗಾಂಗೇಯನ ಬಳಿಸಾರಿ, ವಿನಯದಿಂದ ನಮಸ್ಕರಿಸಿ ಅವನಿಗೆ ಘಟೋತ್ಕಚನ ವಿಜಯವನ್ನೂ ತನ್ನವರ ಪರಾಜಯವೆಲ್ಲವನ್ನೂ ನಡೆದಂತೆ ಹೇಳಲು ಪ್ರಾರಂಭಿಸಿದನು.
06091003a ಕಥಯಾಮಾಸ ದುರ್ಧರ್ಷೋ ವಿನಿಃಶ್ವಸ್ಯ ಪುನಃ ಪುನಃ|
06091003c ಅಬ್ರವೀಚ್ಚ ತದಾ ರಾಜನ್ಭೀಷ್ಮಂ ಕುರುಪಿತಾಮಹಂ||
ರಾಜನ್! ಆ ದುರ್ಧರ್ಷನು ಪುನಃ ಪುನಃ ನಿಟ್ಟುಸಿರು ಬಿಡುತ್ತಾ ವರದಿಮಾಡಿದ ನಂತರ ಕುರುಪಿತಾಮಹ ಭೀಷ್ಮನಿಗೆ ಹೇಳಿದನು:
06091004a ಭವಂತಂ ಸಮುಪಾಶ್ರಿತ್ಯ ವಾಸುದೇವಂ ಯಥಾ ಪರೈಃ|
06091004c ಪಾಂಡವೈರ್ವಿಗ್ರಹೋ ಘೋರಃ ಸಮಾರಬ್ಧೋ ಮಯಾ ಪ್ರಭೋ||
“ಪ್ರಭು! ಶತ್ರುಗಳು ವಾಸುದೇವನನ್ನು ಹೇಗೋ ಹಾಗೆ ನಾನು ನಿನ್ನನ್ನು ಆಶ್ರಯಿಸಿ ಪಾಂಡವರೊಂದಿಗೆ ಈ ಘೋರ ಯುದ್ಧವನ್ನು ಕೈಗೊಂಡೆನು.
06091005a ಏಕಾದಶ ಸಮಾಖ್ಯಾತಾ ಅಕ್ಷೌಹಿಣ್ಯಶ್ಚ ಯಾ ಮಮ|
06091005c ನಿದೇಶೇ ತವ ತಿಷ್ಠಂತಿ ಮಯಾ ಸಾರ್ಧಂ ಪರಂತಪ||
ಪರಂತಪ! ನನಗಾಗಿ ಹನ್ನೊಂದು ಅಕ್ಷೌಹಿಣಿ ಸೇನೆಗಳು ಸೇರಿ ನಿನ್ನ ನಿರ್ದೇಶನಕ್ಕೆ ಕಾದು ನಿಂತಿವೆ.
06091006a ಸೋಽಹಂ ಭರತಶಾರ್ದೂಲ ಭೀಮಸೇನಪುರೋಗಮೈಃ|
06091006c ಘಟೋತ್ಕಚಂ ಸಮಾಶ್ರಿತ್ಯ ಪಾಂಡವೈರ್ಯುಧಿ ನಿರ್ಜಿತಃ||
ಭರತಶಾರ್ದೂಲ! ಆದರೆ ಘಟೋತ್ಕಚನನ್ನು ಆಶ್ರಯಿಸಿ ಭೀಮಸೇನನೇ ಮೊದಲಾದ ಪಾಂಡವರು ಯುದ್ಧದಲ್ಲಿ ನನ್ನನ್ನು ಸೋಲಿಸಿದರು.
06091007a ತನ್ಮೇ ದಹತಿ ಗಾತ್ರಾಣಿ ಶುಷ್ಕವೃಕ್ಷಮಿವಾನಲಃ|
06091007c ತದಿಚ್ಛಾಮಿ ಮಹಾಭಾಗ ತ್ವತ್ಪ್ರಸಾದಾತ್ಪರಂತಪ||
06091008a ರಾಕ್ಷಸಾಪಸದಂ ಹಂತುಂ ಸ್ವಯಮೇವ ಪಿತಾಮಹ|
06091008c ತ್ವಾಂ ಸಮಾಶ್ರಿತ್ಯ ದುರ್ಧರ್ಷಂ ತನ್ಮೇ ಕರ್ತುಂ ತ್ವಮರ್ಹಸಿ||
ಅದು ನನ್ನ ದೇಹವನ್ನು ಒಣಗಿದ ಮರವನ್ನು ಬೆಂಕಿಯು ಸುಡುವಂತೆ ಸುಡುತ್ತಿದೆ. ಮಹಾಭಾಗ! ಪರಂತಪ! ಆದುದರಿಂದ ನಿನ್ನ ಪ್ರಸಾದದಿಂದ ಆಪತ್ತನ್ನು ತರುತ್ತಿರುವ ಆ ರಾಕ್ಷಸನನ್ನು ಸ್ವಯಂ ನಾನೇ ಕೊಲ್ಲಲು ಬಯಸುತ್ತೇನೆ. ನಿನ್ನನ್ನು ಆಶ್ರಯಿಸಿದ ನನಗೆ ಆ ದುರ್ಧರ್ಷವಾದುದನ್ನು ಮಾಡಲು ಬಿಡಬೇಕು.”
06091009a ಏತಚ್ಚ್ರುತ್ವಾ ತು ವಚನಂ ರಾಜ್ಞೋ ಭರತಸತ್ತಮ|
06091009c ದುರ್ಯೋಧನಮಿದಂ ವಾಕ್ಯಂ ಭೀಷ್ಮಃ ಶಾಂತನವೋಽಬ್ರವೀತ್||
ಭರತಸತ್ತಮ! ರಾಜನ ಆ ಮಾತನ್ನು ಕೇಳಿ ಭೀಷ್ಮ ಶಾಂತನವನು ದುರ್ಯೋಧನನಿಗೆ ಈ ಮಾತನ್ನಾಡಿದನು:
06091010a ಶೃಣು ರಾಜನ್ಮಮ ವಚೋ ಯತ್ತ್ವಾ ವಕ್ಷ್ಯಾಮಿ ಕೌರವ|
06091010c ಯಥಾ ತ್ವಯಾ ಮಹಾರಾಜ ವರ್ತಿತವ್ಯಂ ಪರಂತಪ||
“ರಾಜನ್! ಕೌರವ! ಪರಂತಪ! ನಾನು ಏನು ಹೇಳುತ್ತೇನೋ ಅದನ್ನು ಕೇಳು. ಮಹಾರಾಜ! ಅದರಂತೆಯೇ ನೀನು ನಡೆದುಕೊಳ್ಳಬೇಕು.
06091011a ಆತ್ಮಾ ರಕ್ಷ್ಯೋ ರಣೇ ತಾತ ಸರ್ವಾವಸ್ಥಾಸ್ವರಿಂದಮ|
06091011c ಧರ್ಮರಾಜೇನ ಸಂಗ್ರಾಮಸ್ತ್ವಯಾ ಕಾರ್ಯಃ ಸದಾನಘ||
06091012a ಅರ್ಜುನೇನ ಯಮಾಭ್ಯಾಂ ವಾ ಭೀಮಸೇನೇನ ವಾ ಪುನಃ|
06091012c ರಾಜಧರ್ಮಂ ಪುರಸ್ಕೃತ್ಯ ರಾಜಾ ರಾಜಾನಂ ಋಚ್ಛತಿ||
ಮಗೂ! ಅರಿಂದಮ! ಅನಘ! ಸರ್ವಾವಸ್ಥೆಯಲ್ಲಿ ನಿನ್ನನ್ನು ನೀನು ಸದಾ ರಕ್ಷಿಸಿಕೊಳ್ಳಬೇಕು. ಸಂಗ್ರಾಮದಲ್ಲಿ ಸದಾ ಧರ್ಮರಾಜನೊಂದಿಗೆ ಅಥವಾ ಅರ್ಜುನ, ಯಮಳರು ಅಥವಾ ಪುನಃ ಭೀಮಸೇನನೊಂದಿಗೆ ಯುದ್ಧಮಾಡುವುದು ನಿನ್ನ ಕಾರ್ಯ. ರಾಜಧರ್ಮವನ್ನು ಗೌರವಿಸಿ ರಾಜನು ರಾಜನೊಂದಿಗೆ ಯುದ್ಧಮಾಡುತ್ತಾನೆ.
06091013a ಅಹಂ ದ್ರೋಣಃ ಕೃಪೋ ದ್ರೌಣಿಃ ಕೃತವರ್ಮಾ ಚ ಸಾತ್ವತಃ|
06091013c ಶಲ್ಯಶ್ಚ ಸೌಮದತ್ತಿಶ್ಚ ವಿಕರ್ಣಶ್ಚ ಮಹಾರಥಃ||
06091014a ತವ ಚ ಭ್ರಾತರಃ ಶೂರಾ ದುಃಶಾಸನಪುರೋಗಮಾಃ|
06091014c ತ್ವದರ್ಥಂ ಪ್ರತಿಯೋತ್ಸ್ಯಾಮೋ ರಾಕ್ಷಸಂ ತಂ ಮಹಾಬಲಂ||
ನಿನಗೋಸ್ಕರವಾಗಿ ಆ ಮಹಾಬಲ ರಾಕ್ಷಸನೊಂದಿಗೆ ನಾನು, ದ್ರೋಣ, ಕೃಪ, ದ್ರೌಣಿ, ಸಾತ್ವತ ಕೃತವರ್ಮ, ಶಲ್ಯ, ಸೌಮದತ್ತಿ, ಮಹಾರಥ ವಿಕರ್ಣ, ಮತ್ತು ದುಃಶಾಸನನೇ ಮೊದಲಾದ ನಿನ್ನ ಭ್ರಾತರರು ಎದುರಿಸಿ ಯುದ್ಧಮಾಡುತ್ತೇವೆ.
06091015a ತಸ್ಮಿನ್ರೌದ್ರೇ ರಾಕ್ಷಸೇಂದ್ರೇ ಯದಿ ತೇ ಹೃಚ್ಛಯೋ ಮಹಾನ್|
06091015c ಅಯಂ ವಾ ಗಚ್ಛತು ರಣೇ ತಸ್ಯ ಯುದ್ಧಾಯ ದುರ್ಮತೇಃ|
06091015e ಭಗದತ್ತೋ ಮಹೀಪಾಲಃ ಪುರಂದರಸಮೋ ಯುಧಿ||
ಆ ರೌದ್ರ ರಾಕ್ಷಸೇಂದ್ರನ ಮೇಲೆ ಹೆಚ್ಚಿನ ಕೋಪವಿದ್ದರೆ, ಆ ದುರ್ಮತಿಯೊಂದಿಗೆ ಯುದ್ಧಮಾಡಲು ಯುದ್ಧದಲ್ಲಿ ಪುರಂದರನ ಸಮನಾದ ಈ ಮಹೀಪಾಲ ಭಗದತ್ತನಾದರೂ ಹೋಗಲಿ.”
06091016a ಏತಾವದುಕ್ತ್ವಾ ರಾಜಾನಂ ಭಗದತ್ತಮಥಾಬ್ರವೀತ್|
06091016c ಸಮಕ್ಷಂ ಪಾರ್ಥಿವೇಂದ್ರಸ್ಯ ವಾಕ್ಯಂ ವಾಕ್ಯವಿಶಾರದಃ||
ರಾಜನಿಗೆ ಹೀಗೆ ಹೇಳಿ, ಪಾರ್ಥಿವೇಂದ್ರನ ಸಮಕ್ಷಮದಲ್ಲಿಯೇ ಆ ವಾಕ್ಯವಿಶಾರದನು ಭಗದತ್ತನಿಗೆ ಈ ಮಾತನ್ನಾಡಿದನು:
06091017a ಗಚ್ಛ ಶೀಘ್ರಂ ಮಹಾರಾಜ ಹೈಡಿಂಬಂ ಯುದ್ಧದುರ್ಮದಂ|
06091017c ವಾರಯಸ್ವ ರಣೇ ಯತ್ತೋ ಮಿಷತಾಂ ಸರ್ವಧನ್ವಿನಾಂ|
06091017e ರಾಕ್ಷಸಂ ಕ್ರೂರಕರ್ಮಾಣಂ ಯಥೇಂದ್ರಸ್ತಾರಕಂ ಪುರಾ||
“ಮಹಾರಾಜ! ಶೀಘ್ರದಲ್ಲಿಯೇ ಹೋಗು! ಯುದ್ಧ ದುರ್ಮದ ಹೈಡಿಂಬನನ್ನು ರಣದಲ್ಲಿ ಸರ್ವಧನ್ವಿಗಳೂ ನೋಡುತ್ತಿರಲು, ಹಿಂದೆ ಇಂದ್ರನು ಕ್ರೂರಕರ್ಮಿ ರಾಕ್ಷಸ ತಾರಕನನ್ನು ಹೇಗೋ ಹಾಗೆ ತಡೆದು ನಿಲ್ಲಿಸು.
06091018a ತವ ದಿವ್ಯಾನಿ ಚಾಸ್ತ್ರಾಣಿ ವಿಕ್ರಮಶ್ಚ ಪರಂತಪ|
06091018c ಸಮಾಗಮಶ್ಚ ಬಹುಭಿಃ ಪುರಾಭೂದಸುರೈಃ ಸಹ||
ಪರಂತಪ! ನಿನ್ನಲ್ಲಿ ದಿವ್ಯಾಸ್ತ್ರಗಳಿವೆ. ವಿಕ್ರಮವಿದೆ. ಈ ಮೊದಲೇ ನೀನು ಅನೇಕ ಅಸುರರೊಂದಿಗೆ ಯುದ್ಧಮಾಡಿರುವೆ.
06091019a ತ್ವಂ ತಸ್ಯ ರಾಜಶಾರ್ದೂಲ ಪ್ರತಿಯೋದ್ಧಾ ಮಹಾಹವೇ|
06091019c ಸ್ವಬಲೇನ ವೃತೋ ರಾಜನ್ಜಹಿ ರಾಕ್ಷಸಪುಂಗವಂ||
ರಾಜಶಾರ್ದೂಲ! ಮಹಾಹವದಲ್ಲಿ ನೀನು ಅವನೊಂದಿಗೆ ಪ್ರತಿಯುದ್ಧಮಾಡಬಲ್ಲೆ. ರಾಜನ್! ಸ್ವಬಲದಿಂದ ಪರಿವೃತನಾಗಿ ರಾಕ್ಷಸಪುಂಗವನನ್ನು ಸಂಹರಿಸು!”
06091020a ಏತಚ್ಚ್ರುತ್ವಾ ತು ವಚನಂ ಭೀಷ್ಮಸ್ಯ ಪೃತನಾಪತೇಃ|
06091020c ಪ್ರಯಯೌ ಸಿಂಹನಾದೇನ ಪರಾನಭಿಮುಖೋ ದ್ರುತಂ||
ಸೇನಾಪತಿ ಭೀಷ್ಮನ ಈ ಮಾತನ್ನು ಕೇಳಿ ಅವನು ಸಿಂಹನಾದ ಗೈಯುತ್ತಾ ಶೀಘ್ರವಾಗಿ ಶತ್ರುಗಳನ್ನು ಎದುರಿಸಲು ಹೊರಟನು.
06091021a ತಮಾದ್ರವಂತಂ ಸಂಪ್ರೇಕ್ಷ್ಯ ಗರ್ಜಂತಮಿವ ತೋಯದಂ|
06091021c ಅಭ್ಯವರ್ತಂತ ಸಂಕ್ರುದ್ಧಾಃ ಪಾಂಡವಾನಾಂ ಮಹಾರಥಾಃ||
ಮಳೆಗಾಲದ ಮೋಡದಂತೆ ಗರ್ಜಿಸುತ್ತಾ ಬರುತ್ತಿದ್ದ ಅವನನ್ನು ನೋಡಿ ಸಂಕ್ರುದ್ಧರಾದ ಮಹಾರಥ ಪಾಂಡವರು ಎದುರಿಸಿದರು.
06091022a ಭಿಮಸೇನೋಽಭಿಮನ್ಯುಶ್ಚ ರಾಕ್ಷಸಶ್ಚ ಘಟೋತ್ಕಚಃ|
06091022c ದ್ರೌಪದೇಯಾಃ ಸತ್ಯಧೃತಿಃ ಕ್ಷತ್ರದೇವಶ್ಚ ಮಾರಿಷ||
06091023a ಚೇದಿಪೋ ವಸುದಾನಶ್ಚ ದಶಾರ್ಣಾಧಿಪತಿಸ್ತಥಾ|
06091023c ಸುಪ್ರತೀಕೇನ ತಾಂಶ್ಚಾಪಿ ಭಗದತ್ತೋಽಪ್ಯುಪಾದ್ರವತ್||
ಸುಪ್ರತೀಕದ ಮೇಲೆ ಬರುತ್ತಿದ್ದ ಭಗದತ್ತನನ್ನು ಭೀಮಸೇನ, ಅಭಿಮನ್ಯು, ರಾಕ್ಷಸ ಘಟೋತ್ಕಚ, ದ್ರೌಪದೇಯರು, ಸತ್ಯಧೃತಿ, ಕ್ಷತ್ರದೇವ, ಚೇದಿಪತಿ, ವಸುದಾನ ಮತ್ತು ದಶಾರ್ಣಾಧಿಪತಿ ಇವರು ಎದುರಿಸಿ ಯುದ್ಧ ಮಾಡಿದರು.
06091024a ತತಃ ಸಮಭವದ್ಯುದ್ಧಂ ಘೋರರೂಪಂ ಭಯಾನಕಂ|
06091024c ಪಾಂಡೂನಾಂ ಭಗದತ್ತೇನ ಯಮರಾಷ್ಟ್ರವಿವರ್ಧನಂ||
ಆಗ ಪಾಂಡವರು ಮತ್ತು ಭಗದತ್ತನ ನಡುವೆ ಯಮರಾಷ್ಟ್ರವನ್ನು ಹೆಚ್ಚಿಸುವ ಘೋರರೂಪದ ಭಯಾನಕ ಯುದ್ಧವು ನಡೆಯಿತು.
06091025a ಪ್ರಮುಕ್ತಾ ರಥಿಭಿರ್ಬಾಣಾ ಭೀಮವೇಗಾಃ ಸುತೇಜನಾಃ|
06091025c ತೇ ನಿಪೇತುರ್ಮಹಾರಾಜ ನಾಗೇಷು ಚ ರಥೇಷು ಚ||
ಮಹಾರಾಜ! ರಥಿಗಳು ಪ್ರಯೋಗಿಸಿದ ಭೀಮವೇಗದ ಸುತೇಜಸ ಬಾಣಗಳು ಆನೆಗಳ ಮೇಲೂ ರಥಗಳ ಮೇಲೂ ಬಿದ್ದವು.
06091026a ಪ್ರಭಿನ್ನಾಶ್ಚ ಮಹಾನಾಗಾ ವಿನೀತಾ ಹಸ್ತಿಸಾದಿಭಿಃ|
06091026c ಪರಸ್ಪರಂ ಸಮಾಸಾದ್ಯ ಸನ್ನಿಪೇತುರಭೀತವತ್||
ಮಾವುತರಿಂದ ನಿರ್ದೇಶಿಸಲ್ಪಟ್ಟ ಮದಿಸಿದ ಮಹಾಗಜಗಳು ಪರಸ್ಪರರೊಡನೆ ನಿರ್ಭೀತಿಯಿಂದ ಕಾದಾಡಿದವು.
06091027a ಮದಾಂಧಾ ರೋಷಸಂರಬ್ಧಾ ವಿಷಾಣಾಗ್ರೈರ್ಮಹಾಹವೇ|
06091027c ಬಿಭಿದುರ್ದಂತಮುಸಲೈಃ ಸಮಾಸಾದ್ಯ ಪರಸ್ಪರಂ||
ಮದಾಂಧರಾಗಿ, ರೋಷಸಂರಬ್ಧರಾಗಿ ಆ ಮಹಾಹವದಲ್ಲಿ ಒನಕೆಗಳಂತಿದ್ದ ಕೋರೆದಾಡೆಗಳಿಂದ ಪರಸ್ಪರರನ್ನು ಇರಿದು ಸೀಳುತ್ತಿದ್ದವು.
06091028a ಹಯಾಶ್ಚ ಚಾಮರಾಪೀಡಾಃ ಪ್ರಾಸಪಾಣಿಭಿರಾಸ್ಥಿತಾಃ|
06091028c ಚೋದಿತಾಃ ಸಾದಿಭಿಃ ಕ್ಷಿಪ್ರಂ ನಿಪೇತುರಿತರೇತರಂ||
ಚಾಮರಗಳನ್ನು ಕಟ್ಟಿದ್ದ, ಮೇಲೆ ಪ್ರಾಸಗಳನ್ನು ಹಿಡಿದು ಕುಳಿತಿದ್ದ ಸವಾರರಿಂದ ಪ್ರಚೋದಿತರಾಗಿ ಕುದುರೆಗಳು ಕ್ಷಿಪ್ರವಾಗಿ ಇತರ ಕುದುರೆಗಳ ಮೇಳೆ ಬೀಳುತ್ತಿದ್ದವು.
06091029a ಪಾದಾತಾಶ್ಚ ಪದಾತ್ಯೋಘೈಸ್ತಾಡಿತಾಃ ಶಕ್ತಿತೋಮರೈಃ|
06091029c ನ್ಯಪತಂತ ತದಾ ಭೂಮೌ ಶತಶೋಽಥ ಸಹಸ್ರಶಃ||
ಪದಾತಿಗಳು ಶತ್ರು ಪದಾತಿಗಳ ಶಕ್ತಿ-ತೋಮರಗಳಿಂದ ಹೊಡೆಯಲ್ಪಟ್ಟು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಭೂಮಿಯಮೇಲೆ ಬಿದ್ದರು.
06091030a ರಥಿನಶ್ಚ ತಥಾ ರಾಜನ್ಕರ್ಣಿನಾಲೀಕಸಾಯಕೈಃ|
06091030c ನಿಹತ್ಯ ಸಮರೇ ವೀರಾನ್ಸಿಂಹನಾದಾನ್ವಿನೇದಿರೇ||
ರಾಜನ್! ಹಾಗೆಯೇ ರಥಿಗಳೂ ಕೂಡ ಕರ್ಣಿ, ನಾಲೀಕ ಮತ್ತು ಸಾಯಕಗಳಿಂದ ಸಮರದಲ್ಲಿ ವೀರರನ್ನು ಸಂಹರಿಸಿ ಸಿಂಹನಾದ ಮಾಡಿ ವಿನೋದಿಸುತ್ತಿದ್ದರು.
06091031a ತಸ್ಮಿಂಸ್ತಥಾ ವರ್ತಮಾನೇ ಸಂಗ್ರಾಮೇ ಲೋಮಹರ್ಷಣೇ|
06091031c ಭಗದತ್ತೋ ಮಹೇಷ್ವಾಸೋ ಭೀಮಸೇನಮಥಾದ್ರವತ್||
ಹೀಗೆ ಅಲ್ಲಿ ಲೋಮಹರ್ಷಣ ಸಂಗ್ರಾಮವು ನಡೆಯುತ್ತಿರಲು, ಮಹೇಷ್ವಾಸ ಭಗದತ್ತನು ಭೀಮಸೇನನ ಮೇಲೆ ಧಾಳಿಮಾಡಿದನು.
06091032a ಕುಂಜರೇಣ ಪ್ರಭಿನ್ನೇನ ಸಪ್ತಧಾ ಸ್ರವತಾ ಮದಂ|
06091032c ಪರ್ವತೇನ ಯಥಾ ತೋಯಂ ಸ್ರವಮಾಣೇನ ಸರ್ವತಃ||
06091033a ಕಿರಂ ಶರಸಹಸ್ರಾಣಿ ಸುಪ್ರತೀಕಶಿರೋಗತಃ|
06091033c ಐರಾವತಸ್ಥೋ ಮಘವಾನ್ವಾರಿಧಾರಾ ಇವಾನಘ||
ಅನಘ! ಎಲ್ಲ ಕಡೆಗಳಿಂದ ನೀರನ್ನು ಸುರಿಸುತ್ತಿರುವ ಪರ್ವತದಂತೆ ಏಳು ಕಡೆಗಳಲ್ಲಿ ಮದೋದಕವನ್ನು ಸುರಿಸುತ್ತಿದ್ದ ಮದಿಸಿದ ಆನೆ ಸುಪ್ರತೀಕನ ಶಿರದ ಮೇಲೆ ಕುಳಿತು ಐರಾವತದ ಮೇಲೆ ಕುಳಿತ ಇಂದ್ರನಂತೆ ಸಹಸ್ರಾರು ಶರಗಳ ಮಳೆಯನ್ನು ಸುರಿಸಿದನು.
06091034a ಸ ಭೀಮಂ ಶರಧಾರಾಭಿಸ್ತಾಡಯಾಮಾಸ ಪಾರ್ಥಿವಃ|
06091034c ಪರ್ವತಂ ವಾರಿಧಾರಾಭಿಃ ಪ್ರಾವೃಷೀವ ಬಲಾಹಕಃ||
ವರ್ಷಋತುವಿನಲ್ಲಿ ಮೇಘವು ಪರ್ವತವನ್ನು ಜಲಧಾರೆಗಳಿಂದ ಮುಚ್ಚುವಂತೆ ಆ ಪಾರ್ಥಿವನು ಭೀಮನನ್ನು ಶರಧಾರೆಗಳಿಂದ ಪ್ರಹರಿಸಿದನು.
06091035a ಭೀಮಸೇನಸ್ತು ಸಂಕ್ರುದ್ಧಃ ಪಾದರಕ್ಷಾನ್ಪರಃಶತಾನ್|
06091035c ನಿಜಘಾನ ಮಹೇಷ್ವಾಸಃ ಸಂಕ್ರುದ್ಧಃ ಶರವೃಷ್ಟಿಭಿಃ||
ಮಹೇಷ್ವಾಸ ಭೀಮಸೇನನಾದರೂ ಸಂಕ್ರುದ್ಧನಾಗಿ ಶರವೃಷ್ಟಿಯಿಂದ ಶತ್ರುಗಳ ನೂರಾರು ಪಾದರಕ್ಷಕರನ್ನು ಸಂಹರಿಸಿದನು.
06091036a ತಾನ್ದೃಷ್ಟ್ವಾ ನಿಹತಾನ್ಕ್ರುದ್ಧೋ ಭಗದತ್ತಃ ಪ್ರತಾಪವಾನ್|
06091036c ಚೋದಯಾಮಾಸ ನಾಗೇಂದ್ರಂ ಭೀಮಸೇನರಥಂ ಪ್ರತಿ||
ಸಂಹರಿಸುತ್ತಿದ್ದ ಅವನನ್ನು ನೋಡಿ ಪ್ರತಾಪವಾನ್ ಭಗದತ್ತನು ಗಜೇಂದ್ರನನ್ನು ಭೀಮಸೇನನ ಕಡೆ ನಡೆಸಿದನು.
06091037a ಸ ನಾಗಃ ಪ್ರೇಷಿತಸ್ತೇನ ಬಾಣೋ ಜ್ಯಾಚೋದಿತೋ ಯಥಾ|
06091037c ಅಭ್ಯಧಾವತ ವೇಗೇನ ಭೀಮಸೇನಮರಿಂದಮಂ||
ಶಿಂಜಿನಿಯಿಂದ ಪ್ರಯೋಗಿಸಲ್ಪಟ್ಟ ಬಾಣದಂತೆ ಅವನಿಂದ ನಡೆಸಲ್ಪಟ್ಟ ಆ ಆನೆಯು ವೇಗದಿಂದ ಅರಿಂದಮ ಭೀಮಸೇನನ ಕಡೆ ಓಡಿಬಂದಿತು.
06091038a ತಮಾಪತಂತಂ ಸಂಪ್ರೇಕ್ಷ್ಯ ಪಾಂಡವಾನಾಂ ಮಹಾರಥಾಃ|
06091038c ಅಭ್ಯವರ್ತಂತ ವೇಗೇನ ಭೀಮಸೇನಪುರೋಗಮಾಃ||
06091039a ಕೇಕಯಾಶ್ಚಾಭಿಮನ್ಯುಶ್ಚ ದ್ರೌಪದೇಯಾಶ್ಚ ಸರ್ವಶಃ|
06091039c ದಶಾರ್ಣಾಧಿಪತಿಃ ಶೂರಃ ಕ್ಷತ್ರದೇವಶ್ಚ ಮಾರಿಷ|
06091039e ಚೇದಿಪಶ್ಚಿತ್ರಕೇತುಶ್ಚ ಸಂಕ್ರುದ್ಧಾಃ ಸರ್ವ ಏವ ತೇ||
ವೇಗದಿಂದ ಮುಂದುವರೆದು ಬರುತ್ತಿದ್ದ ಅದನ್ನು ನೋಡಿ ಪಾಂಡವ ಮಹಾರಥರು - ಕೇಕಯರು, ಅಭಿಮನ್ಯು, ದ್ರೌಪದೇಯರೆಲ್ಲರು, ದಶಾರ್ಣಾಧಿಪತಿ, ಶೂರ ಕ್ಷತ್ರದೇವ, ಚೇದಿಪತಿ, ಚಿತ್ರಕೇತು ಇವರೆಲ್ಲರೂ ಕ್ರುದ್ಧರಾಗಿ ಭೀಮಸೇನನನ್ನು ಮುಂದಿರಿಸಿಕೊಂಡು ಅದರ ಮೇಲೆ ಆಕ್ರಮಣ ಮಾಡಿದರು.
06091040a ಉತ್ತಮಾಸ್ತ್ರಾಣಿ ದಿವ್ಯಾನಿ ದರ್ಶಯಂತೋ ಮಹಾಬಲಾಃ|
06091040c ತಮೇಕಂ ಕುಂಜರಂ ಕ್ರುದ್ಧಾಃ ಸಮಂತಾತ್ಪರ್ಯವಾರಯನ್||
ಉತ್ತಮ ದಿವ್ಯಾಸ್ತ್ರಗಳನ್ನು ಪ್ರದರ್ಶಿಸುತ್ತಾ ಕ್ರುದ್ಧರಾದ ಆ ಮಹಾಬಲರು ಅದೇ ಒಂದು ಆನೆಯನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.
06091041a ಸ ವಿದ್ಧೋ ಬಹುಭಿರ್ಬಾಣೈರ್ವ್ಯರೋಚತ ಮಹಾದ್ವಿಪಃ|
06091041c ಸಂಜಾತರುಧಿರೋತ್ಪೀಡೋ ಧಾತುಚಿತ್ರ ಇವಾದ್ರಿರಾಟ್||
ಅನೇಕ ಬಾಣಗಳಿಂದ ಗಾಯಗೊಂಡು ಪೀಡಿತವಾದ ಆ ಮಹಾಗಜವು ಬಣ್ಣ ಬಣ್ಣದ ಧಾತುಗಳನ್ನು ಸುರಿಸುವ ಪರ್ವತದಂತೆ ರಕ್ತವನ್ನು ಸುರಿಸಿತು.
06091042a ದಶಾರ್ಣಾಧಿಪತಿಶ್ಚಾಪಿ ಗಜಂ ಭೂಮಿಧರೋಪಮಂ|
06091042c ಸಮಾಸ್ಥಿತೋಽಭಿದುದ್ರಾವ ಭಗದತ್ತಸ್ಯ ವಾರಣಂ||
ಆಗ ದಶಾರ್ಣಾಧಿಪತಿಯೂ ಕೂಡ ಪರ್ವತೋಪಮ ಆನೆಯ ಮೇಲೆ ಕುಳಿತು ಭಗದತ್ತನ ಆನೆಯ ಕಡೆ ಧಾವಿಸಿದನು.
06091043a ತಮಾಪತಂತಂ ಸಮರೇ ಗಜಂ ಗಜಪತಿಃ ಸ ಚ|
06091043c ದಧಾರ ಸುಪ್ರತೀಕೋಽಪಿ ವೇಲೇವ ಮಕರಾಲಯಂ||
ಸಮರದಲ್ಲಿ ಮೇಲೆ ಬೀಳಲು ಬರುತ್ತಿದ್ದ ಆ ಗಜವನ್ನು ಗಜಪತಿ ಸುಪ್ರತೀಕವು ತೀರವು ಸಮುದ್ರವನ್ನು ತಡೆಯುವಂತೆ ತಡೆಯಿತು.
06091044a ವಾರಿತಂ ಪ್ರೇಕ್ಷ್ಯ ನಾಗೇಂದ್ರಂ ದಶಾರ್ಣಸ್ಯ ಮಹಾತ್ಮನಃ|
06091044c ಸಾಧು ಸಾಧ್ವಿತಿ ಸೈನ್ಯಾನಿ ಪಾಂಡವೇಯಾನ್ಯಪೂಜಯನ್||
ಮಹಾತ್ಮ ದಶಾರ್ಣನ ಗಜೇಂದ್ರನನ್ನು ತಡೆದುದನ್ನು ನೋಡಿ ಸಾಧು ಸಾಧು ಎಂದು ಪಾಂಡವ ಸೈನ್ಯಗಳು ಅದನ್ನು ಗೌರವಿಸಿದರು.
06091045a ತತಃ ಪ್ರಾಗ್ಜ್ಯೋತಿಷಃ ಕ್ರುದ್ಧಸ್ತೋಮರಾನ್ವೈ ಚತುರ್ದಶ|
06091045c ಪ್ರಾಹಿಣೋತ್ತಸ್ಯ ನಾಗಸ್ಯ ಪ್ರಮುಖೇ ನೃಪಸತ್ತಮ||
ನೃಪಸತ್ತಮ! ಆಗ ಕ್ರುದ್ಧನಾದ ಪ್ರಾಗ್ಜೋತಿಷನು ಮುಂದೆ ನಿಂತಿದ್ದ ಆನೆಯ ಮುಖಕ್ಕೆ ಹದಿನಾಲ್ಕು ತೋಮರಗಳಿಂದ ಹೊಡೆದನು.
06091046a ತಸ್ಯ ವರ್ಮ ಮುಖತ್ರಾಣಂ ಶಾತಕುಂಭಪರಿಷ್ಕೃತಂ|
06091046c ವಿದಾರ್ಯ ಪ್ರಾವಿಶನ್ ಕ್ಷಿಪ್ರಂ ವಲ್ಮೀಕಮಿವ ಪನ್ನಗಾಃ||
ಹಾವುಗಳು ಹುತ್ತವನ್ನು ಪ್ರವೇಶಿಸುವಂತೆ ಅವನು ಬಿಟ್ಟ ತೋಮರಗಳು ಶ್ರೇಷ್ಠ ಆನೆಯ ಸುವರ್ಣಮಯ ಕವಚವನ್ನು ಭೇದಿಸಿ ಅದರ ದೇಹದ ಒಳಹೊಕ್ಕವು.
06091047a ಸ ಗಾಢವಿದ್ಧೋ ವ್ಯಥಿತೋ ನಾಗೋ ಭರತಸತ್ತಮ|
06091047c ಉಪಾವೃತ್ತಮದಃ ಕ್ಷಿಪ್ರಂ ಸ ನ್ಯವರ್ತತ ವೇಗತಃ||
ಭರತಸತ್ತಮ! ಆಳವಾಗಿ ಚುಚ್ಚಲ್ಪಟ್ಟು ವ್ಯಥಿತವಾದ ಆ ಆನೆಯು ಬೇಗನೇ ವೇಗವಾಗಿ ಹಿಂದೆ ಓಡಿಹೋಯಿತು.
06091048a ಪ್ರದುದ್ರಾವ ಚ ವೇಗೇನ ಪ್ರಣದನ್ಭೈರವಂ ಸ್ವನಂ|
06091048c ಸ ಮರ್ದಮಾನಃ ಸ್ವಬಲಂ ವಾಯುರ್ವೃಕ್ಷಾನಿವೌಜಸಾ||
ಭಿರುಗಾಳಿಯು ಮರಗಳನ್ನು ಉರುಳಿಸುವಂತೆ ವೇಗದಿಂದ ಭೈರವವಾದ ಕೂಗನ್ನು ಕೂಗುತ್ತಾ ತನ್ನ ಸೇನೆಯವರನ್ನೇ ತುಳಿದು ಉರುಳಿಸುತ್ತಾ ಓಡಿ ಹೋಯಿತು.
06091049a ತಸ್ಮಿನ್ಪರಾಜಿತೇ ನಾಗೇ ಪಾಂಡವಾನಾಂ ಮಹಾರಥಾಃ|
06091049c ಸಿಂಹನಾದಂ ವಿನದ್ಯೋಚ್ಚೈರ್ಯುದ್ಧಾಯೈವೋಪತಸ್ಥಿರೇ||
ಆ ಆನೆಯು ಪರಾಜಿತವಾದರೂ ಪಾಂಡವರ ಮಹಾರಥರು ವಿಚಲಿತರಾಗದೇ ಯುದ್ಧದಲ್ಲಿ ನಿರತರಾಗಿದ್ದರು.
06091050a ತತೋ ಭೀಮಂ ಪುರಸ್ಕೃತ್ಯ ಭಗದತ್ತಮುಪಾದ್ರವನ್|
06091050c ಕಿರಂತೋ ವಿವಿಧಾನ್ಬಾಣಾನ್ ಶಸ್ತ್ರಾಣಿ ವಿವಿಧಾನಿ ಚ||
ಆಗ ಭೀಮನನ್ನು ಮುಂದೆಮಾಡಿಕೊಂಡು ನಾನಾ ವಿಧಧ ಬಾಣಗಳನ್ನೂ ವಿವಿಧ ಶಸ್ತ್ರಗಳನ್ನೂ ಪ್ರಯೋಗಿಸುತ್ತಾ ಭಗದತ್ತನನ್ನು ಮುತ್ತಿದರು.
06091051a ತೇಷಾಮಾಪತತಾಂ ರಾಜನ್ಸಂಕ್ರುದ್ಧಾನಾಮಮರ್ಷಿಣಾಂ|
06091051c ಶ್ರುತ್ವಾ ಸ ನಿನದಂ ಘೋರಮಮರ್ಷಾದ್ಗತಸಾಧ್ವಸಃ|
06091051e ಭಗದತ್ತೋ ಮಹೇಷ್ವಾಸಃ ಸ್ವನಾಗಂ ಪ್ರತ್ಯಚೋದಯತ್||
ರಾಜನ್! ಮೇಲೆ ಬೀಳುತ್ತಿರುವ ಆ ಸಂಕ್ರುದ್ಧ ಅಮರ್ಷಿಗಳ ಘೋರ ನಿನಾದವನ್ನು ಕೇಳಿ ಭಯವನ್ನಿರಿಯದ ಮಹೇಷ್ವಾಸ ಭಗದತ್ತನು ತನ್ನ ಆನೆಯನ್ನು ಪ್ರಚೋದಿಸಿದನು.
06091052a ಅಂಕುಶಾಂಗುಷ್ಠನುದಿತಃ ಸ ಗಜಪ್ರವರೋ ಯುಧಿ|
06091052c ತಸ್ಮಿನ್ ಕ್ಷಣೇ ಸಮಭವತ್ಸಂವರ್ತಕ ಇವಾನಲಃ||
ಅಂಕುಶದ ಅಂಗುಷ್ಠದಿಂದ ಒತ್ತಲ್ಪಟ್ಟ ಆ ಗಜಪ್ರವರವು ಯುದ್ಧದಲ್ಲಿ ಆ ಕ್ಷಣದಲ್ಲಿ ಸಂವರ್ತಕ ಅಗ್ನಿಯಂತಾಯಿತು.
06091053a ರಥಸಂಘಾಂಸ್ತಥಾ ನಾಗಾನ್ ಹಯಾಂಶ್ಚ ಸಹ ಸಾದಿಭಿಃ|
06091053c ಪಾದಾತಾಂಶ್ಚ ಸುಸಂಕ್ರುದ್ಧಃ ಶತಶೋಽಥ ಸಹಸ್ರಶಃ|
06091053e ಅಮೃದ್ನಾತ್ಸಮರೇ ರಾಜನ್ಸಂಪ್ರಧಾವಂಸ್ತತಸ್ತತಃ||
ರಾಜನ್! ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡುತ್ತಾ ಸಂಕ್ರುದ್ಧವಾದ ಆ ಅನೆಯು ನೂರಾರು ಸಹಸ್ರಾರು ರಥಸಂಘಗಳನ್ನೂ, ಸವಾರರೊಂದಿಗೆ ಕುದುರೆಗಳನ್ನೂ, ಪದಾತಿಗಳನ್ನೂ ತುಳಿದು ಹಾಕಿತು.
06091054a ತೇನ ಸಂಲೋಡ್ಯಮಾನಂ ತು ಪಾಂಡೂನಾಂ ತದ್ಬಲಂ ಮಹತ್|
06091054c ಸಂಚುಕೋಚ ಮಹಾರಾಜ ಚರ್ಮೇವಾಗ್ನೌ ಸಮಾಹಿತಂ||
ಮಹಾರಾಜ! ಅದರಿಂದ ವಿನಾಶಗೊಂಡ ಪಾಂಡವರ ಆ ಮಹಾ ಸೇನೆಯು ಬೆಂಕಿಯಿಂದ ಸುಡಲ್ಪಟ್ಟ ಚರ್ಮದಲ್ಲಿ ಸಂಕೋಚಗೊಂಡಿತು.
06091055a ಭಗ್ನಂ ತು ಸ್ವಬಲಂ ದೃಷ್ಟ್ವಾ ಭಗದತ್ತೇನ ಧೀಮತಾ|
06091055c ಘಟೋತ್ಕಚೋಽಥ ಸಂಕ್ರುದ್ಧೋ ಭಗದತ್ತಮುಪಾದ್ರವತ್||
ಧೀಮತ ಭಗದತ್ತನಿಂದ ತನ್ನ ಸೇನೆಯು ಭಗ್ನವಾದುದನ್ನು ನೋಡಿ ಸಂಕ್ರುದ್ಧನಾದ ಘಟೋತ್ಕಚನು ಭಗದತ್ತನನ್ನು ಆಕ್ರಮಣಿಸಿದನು.
06091056a ವಿಕಟಃ ಪುರುಷೋ ರಾಜನ್ದೀಪ್ತಾಸ್ಯೋ ದೀಪ್ತಲೋಚನಃ|
06091056c ರೂಪಂ ವಿಭೀಷಣಂ ಕೃತ್ವಾ ರೋಷೇಣ ಪ್ರಜ್ವಲನ್ನಿವ||
06091057a ಜಗ್ರಾಹ ವಿಪುಲಂ ಶೂಲಂ ಗಿರೀಣಾಮಪಿ ದಾರಣಂ|
06091057c ನಾಗಂ ಜಿಘಾಂಸುಃ ಸಹಸಾ ಚಿಕ್ಷೇಪ ಚ ಮಹಾಬಲಃ||
ರಾಜನ್! ವಿಕಟ ಪುರುಷನಾಗಿ, ದೀಪ್ತ ಮುಖವುಳ್ಳವನಾಗಿ, ದೀಪ್ತಲೋಚನನಾಗಿ, ರೋಷದಿಂದ ಪ್ರಜ್ವಲಿಸುತ್ತಿರುವಂತಹ ವಿಭೀಷಣ ರೂಪವನ್ನು ತಾಳಿ ಆ ಮಹಾಬಲನು ಗಿರಿಗಳನ್ನೂ ಸೀಳಬಲ್ಲಂತಹ ವಿಪುಲ ಶೂಲವನ್ನು ಹಿಡಿದು ಆ ಆನೆಯನ್ನು ಕೊಲ್ಲಲು ವೇಗವಾಗಿ ಅದರ ಮೇಲೆ ಎಸೆದನು.
06091057e ಸವಿಷ್ಫುಲಿಂಗಜ್ವಾಲಾಭಿಃ ಸಮಂತಾತ್ಪರಿವೇಷ್ಟಿತಂ||
06091058a ತಮಾಪತಂತಂ ಸಹಸಾ ದೃಷ್ಟ್ವಾ ಜ್ವಾಲಾಕುಲಂ ರಣೇ|
06091058c ಚಿಕ್ಷೇಪ ರುಚಿರಂ ತೀಕ್ಷ್ಣಮರ್ಧಚಂದ್ರಂ ಸ ಪಾರ್ಥಿವಃ||
06091058e ಚಿಚ್ಛೇದ ಸುಮಹಚ್ಚೂಲಂ ತೇನ ಬಾಣೇನ ವೇಗವತ್||
ಎಲ್ಲ ಕಡೆಗಳಿಂದಲೂ ಬೆಂಕಿಯ ಕಿಡಿಗಳಿಂದ ಸುತ್ತುವರೆದು ವೇಗವಾಗಿ ಬೀಳುತ್ತಿದ್ದ ಆ ಜ್ವಾಲಾರಾಶಿಯನ್ನು ರಣದಲ್ಲಿ ನೋಡಿ ಪಾರ್ಥಿವನು ತೀಕ್ಷ್ಣ ಸುಂದರ ಅರ್ಧಚಂದ್ರವನ್ನು ಪ್ರಯೋಗಿಸಿ ವೇಗವಾದ ಬಾಣದಿಂದ ಆ ಮಹಾಶೂಲವನ್ನು ತುಂಡರಿಸಿದನು.
06091059a ನಿಪಪಾತ ದ್ವಿಧಾ ಚಿನ್ನಂ ಶೂಲಂ ಹೇಮಪರಿಷ್ಕೃತಂ|
06091059c ಮಹಾಶನಿರ್ಯಥಾ ಭ್ರಷ್ಟಾ ಶಕ್ರಮುಕ್ತಾ ನಭೋಗತಾ||
ಆ ಹೇಮಪರಿಷ್ಕೃತ ಶೂಲವು ಎರಡಾಗಿ ಆಕಾಶದಲ್ಲಿ ಶಕ್ರನು ಬಿಟ್ಟ ವಜ್ರವು ವ್ಯರ್ಥವಾಗಿ ಹೋಗುವಂತೆ ಕೆಳಗೆ ಬಿದ್ದಿತು.
06091060a ಶೂಲಂ ನಿಪತಿತಂ ದೃಷ್ಟ್ವಾ ದ್ವಿಧಾ ಕೃತ್ತಂ ಸ ಪಾರ್ಥಿವಃ|
06091060c ರುಕ್ಮದಂಡಾಂ ಮಹಾಶಕ್ತಿಂ ಜಗ್ರಾಹಾಗ್ನಿಶಿಖೋಪಮಾಂ|
06091060e ಚಿಕ್ಷೇಪ ತಾಂ ರಾಕ್ಷಸಸ್ಯ ತಿಷ್ಠ ತಿಷ್ಠೇತಿ ಚಾಬ್ರವೀತ್||
ಕತ್ತರಿಸಲ್ಪಟ್ಟ ಆ ಶೂಲವು ಎರಡಾಗಿ ಬಿದ್ದುದನ್ನು ನೋಡಿ ಪಾರ್ಥಿವನು ಬಂಗಾರದ ದಂಡವುಳ್ಳ ಅಗ್ನಿಶಿಖೆಯಂತಿರುವ ಮಹಾಶಕ್ತಿಯನ್ನು ಹಿಡಿದು ಅದನ್ನು ರಾಕ್ಷಸನ ಮೇಲೆ ಎಸೆದು “ನಿಲ್ಲು! ನಿಲ್ಲು!” ಎಂದನು.
06091061a ತಾಮಾಪತಂತೀಂ ಸಂಪ್ರೇಕ್ಷ್ಯ ವಿಯತ್ಸ್ಥಾಮಶನೀಮಿವ|
06091061c ಉತ್ಪತ್ಯ ರಾಕ್ಷಸಸ್ತೂರ್ಣಂ ಜಗ್ರಾಹ ಚ ನನಾದ ಚ||
06091062a ಬಭಂಜ ಚೈನಾಂ ತ್ವರಿತೋ ಜಾನುನ್ಯಾರೋಪ್ಯ ಭಾರತ|
06091062c ಪಶ್ಯತಃ ಪಾರ್ಥಿವೇಂದ್ರಸ್ಯ ತದದ್ಭುತಮಿವಾಭವತ್||
ವಜ್ರಾಯುಧದಂತೆ ತನ್ನ ಮೇಲೆ ಬೀಳುತ್ತಿರುವ ಅದನ್ನು ನೋಡಿ ರಾಕ್ಷಸನು ತಕ್ಷಣವೇ ಹಾರಿ ಅದನ್ನು ಹಿಡಿದು ನಕ್ಕನು. ಭಾರತ! ಬೇಗನೇ ಅದನ್ನು ತೊಡೆಯಮೇಲಿರಿಸಿ ಒತ್ತಿ ಮುರಿದನು ಕೂಡ. ನೋಡುತ್ತಿದ್ದ ಪಾರ್ಥಿವೇಂದ್ರರಿಗೆ ಅದೊಂದು ಅದ್ಭುತವೆನಿಸಿತು.
06091063a ತದವೇಕ್ಷ್ಯ ಕೃತಂ ಕರ್ಮ ರಾಕ್ಷಸೇನ ಬಲೀಯಸಾ|
06091063c ದಿವಿ ದೇವಾಃ ಸಗಂಧರ್ವಾ ಮುನಯಶ್ಚಾಪಿ ವಿಸ್ಮಿತಾಃ||
ರಾಕ್ಷಸನು ಆ ಬಲಶಾಲಿ ಕರ್ಮವನ್ನು ಮಾಡಿದುದನ್ನು ನೋಡಿ ದಿವಿಯಲ್ಲಿ ಗಂಧರ್ವರೊಂದಿಗೆ ದೇವತೆಗಳೂ, ಮುನಿಗಳೂ ವಿಸ್ಮಿತರಾದರು.
06091064a ಪಾಂಡವಾಶ್ಚ ಮಹೇಷ್ವಾಸಾ ಭೀಮಸೇನಪುರೋಗಮಾಃ|
06091064c ಸಾಧು ಸಾಧ್ವಿತಿ ನಾದೇನ ಪೃಥಿವೀಮನುನಾದಯನ್||
ಭೀಮಸೇನನೇ ಮೊದಲಾದ ಪಾಂಡವ ಮಹೇಷ್ವಾಸರು ಸಾಧು ಸಾಧು ಎಂಬ ಕೂಗಿನಿಂದ ಭೂಮಿಯನ್ನೇ ಮೊಳಗಿಸಿದರು.
06091065a ತಂ ತು ಶ್ರುತ್ವಾ ಮಹಾನಾದಂ ಪ್ರಹೃಷ್ಟಾನಾಂ ಮಹಾತ್ಮನಾಂ|
06091065c ನಾಮೃಷ್ಯತ ಮಹೇಷ್ವಾಸೋ ಭಗದತ್ತಃ ಪ್ರತಾಪವಾನ್||
ಪ್ರಹೃಷ್ಟ ಮಹಾತ್ಮರ ಆ ಮಹಾನಾದವನ್ನು ಕೇಳಿದ ಪ್ರತಾಪವಾನ್ ಮಹೇಷ್ವಾಸ ಭಗದತ್ತನು ಸಹಿಸಲಾರದೇ ಹೋದನು.
06091066a ಸ ವಿಸ್ಫಾರ್ಯ ಮಹಚ್ಚಾಪಂ ಇಂದ್ರಾಶನಿಸಮಸ್ವನಂ|
06091066c ಅಭಿದುದ್ರಾವ ವೇಗೇನ ಪಾಂಡವಾನಾಂ ಮಹಾರಥಾನ್|
06091066e ವಿಸೃಜನ್ವಿಮಲಾಂಸ್ತೀಕ್ಷ್ಣಾನ್ನಾರಾಚಾಂ ಜ್ವಲನಪ್ರಭಾನ್||
ಇಂದ್ರನ ವಜ್ರಾಯುಧದಂತೆ ಮೊಳಗುತ್ತಿದ್ದ ಮಹಾಚಾಪವನ್ನು ಟೇಂಕರಿಸಿ ಅವನು ವಿಮಲ ತೀಕ್ಷ್ಣ ಜ್ವಲನಪ್ರಭೆಗಳುಳ್ಳ ನಾರಾಚಗಳನ್ನು ಪ್ರಯೋಗಿಸುತ್ತಾ ವೇಗದಿಂದ ಪಾಂಡವ ಮಹಾರಥರ ಮೇಲೆ ಎರಗಿದನು.
06091067a ಭೀಮಮೇಕೇನ ವಿವ್ಯಾಧ ರಾಕ್ಷಸಂ ನವಭಿಃ ಶರೈಃ|
06091067c ಅಭಿಮನ್ಯುಂ ತ್ರಿಭಿಶ್ಚೈವ ಕೇಕಯಾನ್ಪಂಚಭಿಸ್ತಥಾ||
ಭೀಮನನ್ನು ಒಂದರಿಂದ, ರಾಕ್ಷಸನನ್ನು ಒಂಭತ್ತು ಶರಗಳಿಂದ, ಅಭಿಮನ್ಯುವನ್ನು ಮೂರರಿಂದ ಮತ್ತು ಕೇಕಯರನ್ನು ಐದರಿಂದ ಹೊಡೆದನು.
06091068a ಪೂರ್ಣಾಯತವಿಸೃಷ್ಟೇನ ಸ್ವರ್ಣಪುಂಖೇನ ಪತ್ರಿಣಾ|
06091068c ಬಿಭೇದ ದಕ್ಷಿಣಂ ಬಾಹುಂ ಕ್ಷತ್ರದೇವಸ್ಯ ಚಾಹವೇ|
06091068e ಪಪಾತ ಸಹಸಾ ತಸ್ಯ ಸಶರಂ ಧನುರುತ್ತಮಂ||
ಶಿಂಜಿನಿಯನ್ನು ಕರ್ಣಪರ್ಯಂತವಾಗಿ ಎಳೆದು ಸ್ವರ್ಣಪುಂಖಗಳಿರುವ ಪತ್ರಿಯಿಂದ ಆಹವದಲ್ಲಿ ಕ್ಷತ್ರದೇವನ ಬಲತೋಳನ್ನು ಕತ್ತರಿಸಿದನು. ಕೂಡಲೇ ಅವನ ಉತ್ತಮ ಧನುವು ಬಾಣದೊಂದಿಗೆ ಕೆಳಗೆ ಬಿದ್ದಿತು.
06091069a ದ್ರೌಪದೇಯಾಂಸ್ತತಃ ಪಂಚ ಪಂಚಭಿಃ ಸಮತಾಡಯತ್|
06091069c ಭೀಮಸೇನಸ್ಯ ಚ ಕ್ರೋಧಾನ್ನಿಜಘಾನ ತುರಂಗಮಾನ್||
ಅನಂತರ ಐದು ಬಾಣಗಳಿಂದ ಐವರು ದ್ರೌಪದೇಯರನ್ನು ಹೊಡೆದು ಕ್ರೋಧದಿಂದ ಭೀಮಸೇನನ ಕುದುರೆಗಳನ್ನು ಸಂಹರಿಸಿದನು.
06091070a ಧ್ವಜಂ ಕೇಸರಿಣಂ ಚಾಸ್ಯ ಚಿಚ್ಛೇದ ವಿಶಿಖೈಸ್ತ್ರಿಭಿಃ|
06091070c ನಿರ್ಬಿಭೇದ ತ್ರಿಭಿಶ್ಚಾನ್ಯೈಃ ಸಾರಥಿಂ ಚಾಸ್ಯ ಪತ್ರಿಭಿಃ||
ಅವನ ಕೇಸರಿ ಧ್ವಜವನ್ನು ಮೂರು ವಿಶಿಖಗಳಿಂದ ತುಂಡರಿಸಿದನು ಮತ್ತು ಅನ್ಯ ಮೂರು ಪತ್ರಿಗಳಿಂದ ಅವನ ಸಾರಥಿಯನ್ನು ಹೊಡೆದನು.
06091071a ಸ ಗಾಢವಿದ್ಧೋ ವ್ಯಥಿತೋ ರಥೋಪಸ್ಥ ಉಪಾವಿಶತ್|
06091071c ವಿಶೋಕೋ ಭರತಶ್ರೇಷ್ಠ ಭಗದತ್ತೇನ ಸಂಯುಗೇ||
ಭರತಶ್ರೇಷ್ಠ! ಭಗದತ್ತನಿಂದ ಸಂಯುಗದಲ್ಲಿ ಗಾಢವಾದ ಪೆಟ್ಟುತಿಂದು ವ್ಯಥಿತನಾದ ವಿಶೋಕನು ರಥದಲ್ಲಿಯೇ ಕುಳಿತುಕೊಂಡನು.
06091072a ತತೋ ಭೀಮೋ ಮಹಾರಾಜ ವಿರಥೋ ರಥಿನಾಂ ವರಃ|
06091072c ಗದಾಂ ಪ್ರಗೃಹ್ಯ ವೇಗೇನ ಪ್ರಚಸ್ಕಂದ ಮಹಾರಥಾತ್||
ಮಹಾರಾಜ! ಆಗ ರಥಿಗಳಲ್ಲಿ ಶ್ರೇಷ್ಠ ಭೀಮನು ರಥವಿಲ್ಲದವನಾಗಿ ಗದೆಯನ್ನು ಹಿಡಿದು ವೇಗದಿಂದ ಆ ಮಹಾರಥದಿಂದ ಕೆಳಗೆ ಧುಮುಕಿದನು.
06091073a ತಮುದ್ಯತಗದಂ ದೃಷ್ಟ್ವಾ ಸಶೃಂಗಮಿವ ಪರ್ವತಂ|
06091073c ತಾವಕಾನಾಂ ಭಯಂ ಘೋರಂ ಸಮಪದ್ಯತ ಭಾರತ||
ಭಾರತ! ಶೃಂಗದಿಂದೊಡಗೂಡಿದ ಪರ್ವತದಂತಿರುವ ಅವನು ಧಾವಿಸಿ ಬರುತ್ತಿರುವುದನ್ನು ನೋಡಿ ನಿನ್ನವರಲ್ಲಿ ಘೋರ ಭಯವುಂಟಾಯಿತು.
06091074a ಏತಸ್ಮಿನ್ನೇವ ಕಾಲೇ ತು ಪಾಂಡವಃ ಕೃಷ್ಣಸಾರಥಿಃ|
06091074c ಆಜಗಾಮ ಮಹಾರಾಜ ನಿಘ್ನಂ ಶತ್ರೂನ್ಸಹಸ್ರಶಃ||
06091075a ಯತ್ರ ತೌ ಪುರುಷವ್ಯಾಘ್ರೌ ಪಿತಾಪುತ್ರೌ ಪರಂತಪೌ|
06091075c ಪ್ರಾಗ್ಜ್ಯೋತಿಷೇಣ ಸಂಸಕ್ತೌ ಭೀಮಸೇನಘಟೋತ್ಕಚೌ||
ಮಹಾರಾಜ! ಇದೇ ಸಮಯದಲ್ಲಿ ಕೃಷ್ಣಸಾರಥಿ ಪಾಂಡವನು ಸಹಸ್ರಾರು ಶತ್ರುಗಳನ್ನು ಸಂಹರಿಸಿ, ಪ್ರಾಗ್ಜ್ಯೋತಿಷನೊಂದಿಗೆ ಎಲ್ಲಿ ಪುರುಷವ್ಯಾಘ್ರ, ಪರಂತಪ, ತಂದೆ-ಮಗ ಭೀಮಸೇನ-ಘಟೋತ್ಕಚರು ಯುದ್ಧದಲ್ಲಿ ತೊಡಗಿದ್ದರೋ ಅಲ್ಲಿಗೆ ಆಗಮಿಸಿದನು.
06091076a ದೃಷ್ಟ್ವಾ ತು ಪಾಂಡವೋ ರಾಜನ್ಯುಧ್ಯಮಾನಾನ್ಮಹಾರಥಾನ್|
06091076c ತ್ವರಿತೋ ಭರತಶ್ರೇಷ್ಠ ತತ್ರಾಯಾದ್ವಿಕಿರಂ ಶರಾನ್||
ಭರತಶ್ರೇಷ್ಠ! ರಾಜನ್! ಯುದ್ಧಮಾಡುತ್ತಿರುವ ಆ ಮಹಾರಥರನ್ನು ನೋಡಿ ಪಾಂಡವನು ತ್ವರೆಮಾಡಿ ಅಲ್ಲಿ ಶರಗಳನ್ನು ತೂರಿದನು.
06091077a ತತೋ ದುರ್ಯೋಧನೋ ರಾಜಾ ತ್ವರಮಾಣೋ ಮಹಾರಥಃ|
06091077c ಸೇನಾಮಚೋದಯತ್ ಕ್ಷಿಪ್ರಂ ರಥನಾಗಾಶ್ವಸಂಕುಲಾಂ||
ಆಗ ಮಹಾರಥ ರಾಜಾ ದುರ್ಯೋಧನನು ತ್ವರೆಮಾಡಿ ತನ್ನ ರಥ-ಆನೆ-ಅಶ್ವಸಂಕುಲಗಳ ಸೇನೆಯನ್ನು ಕ್ಷಿಪ್ರವಾಗಿ ಪ್ರೇರೇಪಿಸಿದನು.
06091078a ತಾಮಾಪತಂತೀಂ ಸಹಸಾ ಕೌರವಾಣಾಂ ಮಹಾಚಮೂಂ|
06091078c ಅಭಿದುದ್ರಾವ ವೇಗೇನ ಪಾಂಡವಃ ಶ್ವೇತವಾಹನಃ||
ತನ್ನ ಮೇಲೆ ಒಮ್ಮೆಲೇ ಬೀಳುತ್ತಿದ್ದ ಕೌರವರ ಆ ಮಹಾಸೇನೆಯನ್ನು ವೇಗದಿಂದ ಶ್ವೇತವಾಹನ ಪಾಂಡವನು ಎದುರಿಸಿದನು.
06091079a ಭಗದತ್ತೋಽಪಿ ಸಮರೇ ತೇನ ನಾಗೇನ ಭಾರತ|
06091079c ವಿಮೃದ್ನನ್ಪಾಂಡವಬಲಂ ಯುಧಿಷ್ಠಿರಮುಪಾದ್ರವತ್||
ಭಾರತ! ಸಮರದಲ್ಲಿ ಭಗದತ್ತನೂ ಕೂಡ ತನ್ನ ಆನೆಯಿಂದ ಪಾಂಡವ ಸೇನೆಯನ್ನು ಧ್ವಂಸಮಾಡಿ ಯುಧಿಷ್ಠಿರನ ಸಮೀಪಕ್ಕೆ ಹೋದನು.
06091080a ತದಾಸೀತ್ತುಮುಲಂ ಯುದ್ಧಂ ಭಗದತ್ತಸ್ಯ ಮಾರಿಷ|
06091080c ಪಾಂಚಾಲೈಃ ಸೃಂಜಯೈಶ್ಚೈವ ಕೇಕಯೈಶ್ಚೋದ್ಯತಾಯುಧೈಃ||
ಮಾರಿಷ! ಆಗ ಆಯುಧಗಳನ್ನು ಎತ್ತಿ ಹಿಡಿದಿದ್ದ ಪಾಂಚಾಲ-ಸೃಂಜಯ-ಕೇಕಯರೊಡನೆ ಭಗದತ್ತನ ತುಮುಲ ಯುದ್ಧವು ನಡೆಯಿತು.
06091081a ಭೀಮಸೇನೋಽಪಿ ಸಮರೇ ತಾವುಭೌ ಕೇಶವಾರ್ಜುನೌ|
06091081c ಆಶ್ರಾವಯದ್ಯಥಾವೃತ್ತಮಿರಾವದ್ವಧಮುತ್ತಮಂ||
ಸಮರದಲ್ಲಿ ಭೀಮಸೇನನೂ ಕೂಡ ಕೇಶವಾರ್ಜುನರಿಬ್ಬರಿಗೂ ಉತ್ತಮ ಇರಾವತನ ವಧೆಯ ವೃತ್ತಾಂತವನ್ನು ಕೇಳಿಸಿದನು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭಗದತ್ತಯುದ್ಧೇ ಏಕನವತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭಗದತ್ತಯುದ್ಧ ಎನ್ನುವ ತೊಂಭತ್ತೊಂದನೇ ಅಧ್ಯಾಯವು.