Bhishma Parva: Chapter 85

ಭೀಷ್ಮ ಪರ್ವ: ಭೀಷ್ಮವಧ ಪರ್ವ

೮೫

ಧೃತರಾಷ್ಟ್ರನ ಪ್ರಶ್ನೆಗೆ ಉತ್ತಾರಿಸುತ್ತಾ ಸಂಜಯನು ಯುದ್ಧವರ್ಣನೆಯನ್ನು ಮುಂದುವರಿಸಿದುದು (೧-೧೪). ಸಂಕುಲಯುದ್ಧ (೧೫-೩೬).

06085001 ಧೃತರಾಷ್ಟ್ರ ಉವಾಚ|

06085001a ದೃಷ್ಟ್ವಾ ಮಮ ಹತಾನ್ಪುತ್ರಾನ್ಬಹೂನೇಕೇನ ಸಂಜಯ|

06085001c ಭೀಷ್ಮೋ ದ್ರೋಣಃ ಕೃಪಶ್ಚೈವ ಕಿಮಕುರ್ವತ ಸಂಯುಗೇ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಒಬ್ಬನಿಂದಲೇ ನನ್ನ ಅನೇಕ ಮಕ್ಕಳು ಹತರಾದುದನ್ನು ಕಂಡು ಭೀಷ್ಮ-ದ್ರೋಣ-ಕೃಪರು ಸಂಯುಗದಲ್ಲಿ ಏನು ಮಾಡಿದರು?

06085002a ಅಹನ್ಯಹನಿ ಮೇ ಪುತ್ರಾಃ ಕ್ಷಯಂ ಗಚ್ಛಂತಿ ಸಂಜಯ|

06085002c ಮನ್ಯೇಽಹಂ ಸರ್ವಥಾ ಸೂತ ದೈವೇನೋಪಹತಾ ಭೃಶಂ||

ದಿನ ದಿನವೂ ನನ್ನ ಮಕ್ಕಳು ಕ್ಷೀಣವಾಗುತ್ತಿದ್ದಾರೆ ಸಂಜಯ! ಸೂತ! ಹೆಚ್ಚುಭಾಗ ಅವರು ದೈವದಿಂದಲೇ ಹತರಾಗುತ್ತಿದ್ದಾರೆ ಎಂದು ನನಗನ್ನಿಸುತ್ತದೆ.

06085003a ಯತ್ರ ಮೇ ತನಯಾಃ ಸರ್ವೇ ಜೀಯಂತೇ ನ ಜಯಂತ್ಯುತ|

06085003c ಯತ್ರ ಭೀಷ್ಮಸ್ಯ ದ್ರೋಣಸ್ಯ ಕೃಪಸ್ಯ ಚ ಮಹಾತ್ಮನಃ||

06085004a ಸೌಮದತ್ತೇಶ್ಚ ವೀರಸ್ಯ ಭಗದತ್ತಸ್ಯ ಚೋಭಯೋಃ|

06085004c ಅಶ್ವತ್ಥಾಮ್ನಸ್ತಥಾ ತಾತ ಶೂರಾಣಾಂ ಸುಮಹಾತ್ಮನಾಂ||

06085005a ಅನ್ಯೇಷಾಂ ಚೈವ ವೀರಾಣಾಂ ಮಧ್ಯಗಾಸ್ತನಯಾ ಮಮ|

06085005c ಯದಹನ್ಯಂತ ಸಂಗ್ರಾಮೇ ಕಿಮನ್ಯದ್ಭಾಗಧೇಯತಃ||

ಅಯ್ಯಾ! ನನ್ನ ಮಕ್ಕಳೆಲ್ಲರೂ ಜಯಿಸಲ್ಪಡುತ್ತಿದ್ದಾರೆಯೇ ಹೊರತು ಜಯಿಸುತ್ತಿಲ್ಲ. ಭೀಷ್ಮ-ದ್ರೋಣ-ಮಹಾತ್ಮ ಕೃಪ-ಸೌಮದತ್ತ-ವೀರ ಭಗದತ್ತ-ಅಶ್ವತ್ಥಾಮ ಮೊದಲಾದ ಶೂರ ಮಹಾತ್ಮರು ಹಾಗೂ ಅನ್ಯ ವೀರರ ಮಧ್ಯದಲ್ಲಿದ್ದುಕೊಂಡೂ ನನ್ನ ಮಕ್ಕಳು ಸಂಗ್ರಾಮದಲ್ಲಿ ಸಾಯುತ್ತಿದ್ದಾರೆಂದರೆ ಇದು ಭಾಗ್ಯವು ಕೊಟ್ಟಿದ್ದಲ್ಲದೇ ಇನ್ನೇನು?

06085006a ನ ಹಿ ದುರ್ಯೋಧನೋ ಮಂದಃ ಪುರಾ ಪ್ರೋಕ್ತಮಬುಧ್ಯತ|

06085006c ವಾರ್ಯಮಾಣೋ ಮಯಾ ತಾತ ಭೀಷ್ಮೇಣ ವಿದುರೇಣ ಚ||

06085007a ಗಾಂಧಾರ್ಯಾ ಚೈವ ದುರ್ಮೇಧಾಃ ಸತತಂ ಹಿತಕಾಮ್ಯಯಾ|

06085007c ನಾವಬುಧ್ಯತ್ಪುರಾ ಮೋಹಾತ್ತಸ್ಯ ಪ್ರಾಪ್ತಮಿದಂ ಫಲಂ||

ಅಯ್ಯಾ! ದುರ್ಯೋಧನನು ದಡ್ಡ. ಹಿಂದೆ ಹೇಳಿದುದನ್ನು ತಿಳಿದುಕೊಳ್ಳಲಿಲ್ಲ. ನಾನು, ಭೀಷ್ಮ, ವಿದುರ ಮತ್ತು ಗಾಂಧಾರಿಯರು ಅವನ ಹಿತವನ್ನೇ ಬಯಸಿ ಆಗ ಯಾವಾಗಲೂ ತಡೆದರೂ ಅವನು ಮೋಹದಿಂದ ಅರ್ಥಮಾಡಿಕೊಳ್ಳದೇ ಇರುವುದರಿಂದಲೇ ಈ ಫಲವನ್ನು ಪಡೆಯುತ್ತಿದ್ದಾನೆ.

06085008a ಯದ್ಭೀಮಸೇನಃ ಸಮರೇ ಪುತ್ರಾನ್ಮಮ ವಿಚೇತಸಃ|

06085008c ಅಹನ್ಯಹನಿ ಸಂಕ್ರುದ್ಧೋ ನಯತೇ ಯಮಸಾದನಂ||

ಸಮರದಲ್ಲಿ ಭೀಮಸೇನನು ದಿನ ದಿನವೂ ಸಂಕ್ರುದ್ಧನಾಗಿ ಮೂಢರಾದ ನನ್ನ ಮಕ್ಕಳನ್ನು ಯಮಸಾದನಕ್ಕೆ ಕಳುಹಿಸುತ್ತಿರುವುದೇ ಅದರ ಫಲ.”

06085009 ಸಂಜಯ ಉವಾಚ|

06085009a ಇದಂ ತತ್ಸಮನುಪ್ರಾಪ್ತಂ ಕ್ಷತ್ತುರ್ವಚನಮುತ್ತಮಂ|

06085009c ನ ಬುದ್ಧವಾನಸಿ ವಿಭೋ ಪ್ರೋಚ್ಯಮಾನಂ ಹಿತಂ ತದಾ||

ಸಂಜಯನು ಹೇಳಿದನು: “ವಿಭೋ! ಅಂದು ಕ್ಷತ್ತನಾಡಿದ ಉತ್ತಮ ಹಿತವಚನಗಳನ್ನು ನೀನು ತಿಳಿದುಕೊಳ್ಳದೇ ಇದ್ದುದರಿಂದಲೇ ಈ ಪರಿಸ್ಥಿತಿಯು ಬಂದೊದಗಿದೆ.

06085010a ನಿವಾರಯ ಸುತಾನ್ದ್ಯೂತಾತ್ಪಾಂಡವಾನ್ಮಾ ದ್ರುಹೇತಿ ಚ|

06085010c ಸುಹೃದಾಂ ಹಿತಕಾಮಾನಾಂ ಬ್ರುವತಾಂ ತತ್ತದೇವ ಚ||

“ಮಕ್ಕಳು ದ್ಯೂತವಾಡುವುದನ್ನು ತಡೆ. ಪಾಂಡವರನ್ನು ದ್ವೇಷಿಸಬೇಡ!” ಎಂದು ಸುಹೃದಯರು ಹೇಳಿದ ಹಿತಮಾತುಗಳನ್ನು ಆಗ ನೀನು ಸ್ವೀಕರಿಸಲಿಲ್ಲ.

06085011a ನ ಶುಶ್ರೂಷಸಿ ಯದ್ವಾಕ್ಯಂ ಮರ್ತ್ಯಃ ಪಥ್ಯಮಿವೌಷಧಂ|

06085011c ತದೇವ ತ್ವಾಮನುಪ್ರಾಪ್ತಂ ವಚನಂ ಸಾಧು ಭಾಷಿತಂ||

ಸಾಯುವವನಿಗೆ ಔಷಧಿಯಂತೆ ಪಥ್ಯವಾಗಿರುವ ಆ ಮಾತನ್ನು ನೀನು ಕೇಳಲಿಲ್ಲ. ಒಳ್ಳೆಯವರು ಹೇಳಿದುದನ್ನೇ ಇಂದು ನೀನು ಅನುಭವಿಸುತ್ತಿದ್ದೀಯೆ.

06085012a ವಿದುರದ್ರೋಣಭೀಷ್ಮಾಣಾಂ ತಥಾನ್ಯೇಷಾಂ ಹಿತೈಷಿಣಾಂ|

06085012c ಅಕೃತ್ವಾ ವಚನಂ ಪಥ್ಯಂ ಕ್ಷಯಂ ಗಚ್ಛಂತಿ ಕೌರವಾಃ||

ವಿದುರ-ದ್ರೋಣ-ಭೀಷ್ಮರ ಮತ್ತು ಅನ್ಯ ಹಿತೈಷಿಗಳ ಪಥ್ಯವಾದ ಮಾತಿನಂತೆ ನಡೆದುಕೊಳ್ಳದೇ ಕೌರವರು ಕ್ಷಯವನ್ನು ಹೋಗುತ್ತಾರೆ.

06085013a ತದೇತತ್ಸಮತಿಕ್ರಾಂತಂ ಪೂರ್ವಮೇವ ವಿಶಾಂ ಪತೇ|

06085013c ತಸ್ಮಾನ್ಮೇ ಶೃಣು ತತ್ತ್ವೇನ ಯಥಾ ಯುದ್ಧಮವರ್ತತ||

ವಿಶಾಂಪತೇ! ಅದನ್ನು ಉಲ್ಲಂಘಿಸಿದರೆ ಹೀಗಾಗುತ್ತದೆಂದು ಮೊದಲೇ ಗೊತ್ತಿತ್ತು. ಆದರಿಂದಲೇ ಉಂಟಾದ ಯುದ್ಧವು ಹೇಗೆ ನಡೆಯಿತು ಎನ್ನುವುದನ್ನು ಯಥಾವತ್ತಾಗಿ ನನ್ನಿಂದ ಕೇಳು.

06085014a ಮಧ್ಯಾಹ್ನೇ ಸುಮಹಾರೌದ್ರಃ ಸಂಗ್ರಾಮಃ ಸಮಪದ್ಯತ|

06085014c ಲೋಕಕ್ಷಯಕರೋ ರಾಜಂಸ್ತನ್ಮೇ ನಿಗದತಃ ಶೃಣು||

ರಾಜನ್! ಅಂದಿನ ಮದ್ಯಾಹ್ನ ಲೋಕಕ್ಷಯವನ್ನುಂಟುಮಾಡುವ ಮಹಾ ರೌದ್ರ ಸಂಗ್ರಾಮವು ನಡೆಯಿತು. ಅದನ್ನು ವರ್ಣಿಸುತ್ತೇನೆ. ಕೇಳು.

06085015a ತತಃ ಸರ್ವಾಣಿ ಸೈನ್ಯಾನಿ ಧರ್ಮಪುತ್ರಸ್ಯ ಶಾಸನಾತ್|

06085015c ಸಂರಬ್ಧಾನ್ಯಭ್ಯಧಾವಂತ ಭೀಷ್ಮಮೇವ ಜಿಘಾಂಸಯಾ||

ಆಗ ಸೈನ್ಯಗಳೆಲ್ಲವೂ ಧರ್ಮಪುತ್ರನ ಶಾಸನದಂತೆ ಸಂರಬ್ಧಗೊಂಡು ಭೀಷ್ಮನನ್ನೇ ಕೊಲ್ಲಲು ಅವನನ್ನೇ ಆಕ್ರಮಣಿಸಿದವು.

06085016a ಧೃಷ್ಟದ್ಯುಮ್ನಃ ಶಿಖಂಡೀ ಚ ಸಾತ್ಯಕಿಶ್ಚ ಮಹಾರಥಃ|

06085016c ಯುಕ್ತಾನೀಕಾ ಮಹಾರಾಜ ಭೀಷ್ಮಮೇವ ಸಮಭ್ಯಯುಃ||

ಮಹಾರಾಜ! ಧೃಷ್ಟದ್ಯುಮ್ನ, ಶಿಖಂಡೀ ಮತ್ತು ಮಹಾರಥ ಸಾತ್ಯಕಿಯರು ಸೇನೆಗಳನ್ನೊಡಗೂಡಿ ಭೀಷ್ಮನನ್ನೇ ಆಕ್ರಮಿಸಿದರು.

06085017a ಅರ್ಜುನೋ ದ್ರೌಪದೇಯಾಶ್ಚ ಚೇಕಿತಾನಶ್ಚ ಸಂಯುಗೇ|

06085017c ದುರ್ಯೋಧನಸಮಾದಿಷ್ಟಾನ್ರಾಜ್ಞಃ ಸರ್ವಾನ್ಸಮಭ್ಯಯುಃ||

ಅರ್ಜುನ, ದ್ರೌಪದಿಯ ಮಕ್ಕಳು ಮತ್ತು ಚೇಕಿತಾನರು ಸಂಯುಗದಲ್ಲಿ ದುರ್ಯೋಧನನು ಕಳುಹಿಸಿದ್ದ ರಾಜರೆಲ್ಲರ ಮೇಲೆ ಧಾಳಿ ಮಾಡಿದರು.

06085018a ಅಭಿಮನ್ಯುಸ್ತಥಾ ವೀರೋ ಹೈಡಿಂಬಶ್ಚ ಮಹಾರಥಃ|

06085018c ಭೀಮಸೇನಶ್ಚ ಸಂಕ್ರುದ್ಧಸ್ತೇಽಭ್ಯಧಾವಂತ ಕೌರವಾನ್||

ಹಾಗೆಯೇ ವೀರ ಅಭಿಮನ್ಯು, ಮಹಾರಥ ಹೈಡಿಂಬಿ ಮತ್ತು ಭೀಮಸೇನರು ಸಂಕ್ರುದ್ಧರಾಗಿ ಕೌರವರನ್ನು ಎದುರಿಸಿದರು.

06085019a ತ್ರಿಧಾಭೂತೈರವಧ್ಯಂತ ಪಾಂಡವೈಃ ಕೌರವಾ ಯುಧಿ|

06085019c ತಥೈವ ಕೌರವೇ ರಾಜನ್ನವಧ್ಯಂತ ಪರೇ ರಣೇ||

ಪಾಂಡವರು ಯುದ್ಧದಲ್ಲಿ ಮೂರು ವಿಭಾಗಗಳಾಗಿ ಕೌರವರನ್ನು ವಧಿಸುತ್ತಿದ್ದರು. ರಾಜನ್! ಹಾಗೆಯೇ ರಣದಲ್ಲಿ ಕೌರವರೂ ಕೂಡ ಶತ್ರುಗಳನ್ನು ವಧಿಸುತ್ತಿದ್ದರು.

06085020a ದ್ರೋಣಸ್ತು ರಥಿನಾಂ ಶ್ರೇಷ್ಠಃ ಸೋಮಕಾನ್ಸೃಂಜಯೈಃ ಸಹ|

06085020c ಅಭ್ಯದ್ರವತ ಸಂಕ್ರುದ್ಧಃ ಪ್ರೇಷಯಿಷ್ಯನ್ಯಮಕ್ಷಯಂ||

ರಥಿಗಳಲ್ಲಿ ಶ್ರೇಷ್ಠ ದ್ರೋಣನಾದರೋ ಸೃಂಜಯರೊಂದಿಗಿದ್ದ ಸೋಮಕರನ್ನು ಸಂಕ್ರುದ್ಧನಾಗಿ ಆಕ್ರಮಿಸಿ, ಯಮಲೋಕಕ್ಕೆ ಕಳುಹಿಸಿದನು.

06085021a ತತ್ರಾಕ್ರಂದೋ ಮಹಾನಾಸೀತ್ಸೃಂಜಯಾನಾಂ ಮಹಾತ್ಮನಾಂ|

06085021c ವಧ್ಯತಾಂ ಸಮರೇ ರಾಜನ್ಭಾರದ್ವಾಜೇನ ಧನ್ವಿನಾ||

ರಾಜನ್! ಸಮರದಲ್ಲಿ ಧನ್ವಿ ಭಾರದ್ವಾಜನಿಂದ ವಧಿಸಲ್ಪಡುತ್ತಿದ್ದ ಮಹಾತ್ಮಾ ಸೃಂಜಯರಲ್ಲಿ ಮಹಾ ಆಕ್ರಂದನವು ಉಂಟಾಯಿತು.

06085022a ದ್ರೋಣೇನ ನಿಹತಾಸ್ತತ್ರ ಕ್ಷತ್ರಿಯಾ ಬಹವೋ ರಣೇ|

06085022c ವಿವೇಷ್ಟಂತಃ ಸ್ಮ ದೃಶ್ಯಂತೇ ವ್ಯಾಧಿಕ್ಲಿಷ್ಟಾ ನರಾ ಇವ||

ಅಲ್ಲಿ ದ್ರೋಣನಿಂದ ನಿಹತರಾದ ಹಲವಾರು ಕ್ಷತ್ರಿಯರು ರಣದಲ್ಲಿ ವ್ಯಾಧಿಪೀಡಿತರಾದ ಮನುಷ್ಯರಂತೆ ಸಂಕಟದಿಂದ ಹೊರಳಾಡುತ್ತಿದ್ದುದನ್ನು ನೋಡಿದೆವು.

06085023a ಕೂಜತಾಂ ಕ್ರಂದತಾಂ ಚೈವ ಸ್ತನತಾಂ ಚೈವ ಸಂಯುಗೇ|

06085023c ಅನಿಶಂ ಶ್ರೂಯತೇ ಶಬ್ದಃ ಕ್ಷುತ್ಕೃಶಾನಾಂ ನೃಣಾಮಿವ||

ಹಸಿವೆಯಿಂದ ಬಳಲಿದವರಂತೆ ಸಂಯುಗದಲ್ಲಿ ಗಾಯಗೊಂಡು ಬಿದ್ದಿರುವವರ ಕೂಗು, ಅಳು ಮತ್ತು ಕಿರುಚಾಟಗಳು ಕೇಳಿ ಬರುತ್ತಿದ್ದವು.

06085024a ತಥೈವ ಕೌರವೇಯಾಣಾಂ ಭೀಮಸೇನೋ ಮಹಾಬಲಃ|

06085024c ಚಕಾರ ಕದನಂ ಘೋರಂ ಕ್ರುದ್ಧಃ ಕಾಲ ಇವಾಪರಃ||

ಹಾಗೆಯೇ ಕೌರವರೊಡನೆಯೂ ಮಹಾಬಲ ಭೀಮಸೇನನು ಇನ್ನೊಬ್ಬ ಕ್ರುದ್ಧ ಕಾಲನಂತೆ ಘೋರ ಕದನವನ್ನು ನಡೆಸಿದನು.

06085025a ವಧ್ಯತಾಂ ತತ್ರ ಸೈನ್ಯಾನಾಮನ್ಯೋನ್ಯೇನ ಮಹಾರಣೇ|

06085025c ಪ್ರಾವರ್ತತ ನದೀ ಘೋರಾ ರುಧಿರೌಘಪ್ರವಾಹಿನೀ||

ಸೇನೆಗಳು ಅನ್ಯೋನ್ಯರನ್ನು ವಧಿಸುತ್ತಿರುವ ಆ ಮಹಾರಣದಲ್ಲಿ ರಕ್ತ-ಮಾಂಸಗಳೇ ಹರಿದಿದ್ದ ಘೋರ ನದಿಯು ಹುಟ್ಟಿತು.

06085026a ಸ ಸಂಗ್ರಾಮೋ ಮಹಾರಾಜ ಘೋರರೂಪೋಽಭವನ್ಮಹಾನ್|

06085026c ಕುರೂಣಾಂ ಪಾಂಡವಾನಾಂ ಚ ಯಮರಾಷ್ಟ್ರವಿವರ್ಧನಃ||

ಮಹಾರಾಜ! ಯಮರಾಷ್ಟ್ರವನ್ನು ವೃದ್ಧಿಗೊಳಿಸುವ ಕುರು-ಪಾಂಡವರ ಆ ಮಹಾ ಸಂಗ್ರಾಮವು ಘೋರ ರೂಪವನ್ನು ತಾಳಿತು.

06085027a ತತೋ ಭೀಮೋ ರಣೇ ಕ್ರುದ್ಧೋ ರಭಸಶ್ಚ ವಿಶೇಷತಃ|

06085027c ಗಜಾನೀಕಂ ಸಮಾಸಾದ್ಯ ಪ್ರೇಷಯಾಮಾಸ ಮೃತ್ಯವೇ||

ಆಗ ಭೀಮನು ರಣದಲ್ಲಿ ಕ್ರುದ್ಧನಾಗಿ ವಿಶೇಷ ರಭಸದಿಂದ ಗಜಸೇನೆಯ ಮೇಲೆ ಧಾಳಿ ನಡೆಸಿ ಅವುಗಳನ್ನು ಮೃತ್ಯುವಿಗೆ ಕಳುಹಿಸಿದನು.

06085028a ತತ್ರ ಭಾರತ ಭೀಮೇನ ನಾರಾಚಾಭಿಹತಾ ಗಜಾಃ|

06085028c ಪೇತುಃ ಸೇದುಶ್ಚ ನೇದುಶ್ಚ ದಿಶಶ್ಚ ಪರಿಬಭ್ರಮುಃ||

ಭಾರತ! ಅಲ್ಲಿ ಭೀಮನ ನಾರಾಚಗಳಿಂದ ಹೊಡೆಯಲ್ಪಟ್ಟ ಆನೆಗಳು ಬೀಳುತ್ತಿದ್ದವು, ಕಿರುಚಿಕೊಳ್ಳುತ್ತಿದ್ದವು, ಮರಣಹೊಂದಿದ್ದವು ಮತ್ತು ದಿಕ್ಕಾಪಾಲಾಗಿ ತಿರುಗುತ್ತಿದ್ದವು.

06085029a ಚಿನ್ನಹಸ್ತಾ ಮಹಾನಾಗಾಶ್ಚಿನ್ನಪಾದಾಶ್ಚ ಮಾರಿಷ|

06085029c ಕ್ರೌಂಚವದ್ವ್ಯನದನ್ಭೀತಾಃ ಪೃಥಿವೀಮಧಿಶಿಶ್ಯಿರೇ||

ಮಾರಿಷ! ಸೊಂಡಿಲುಗಳು ತುಂಡಾಗಿ ಅಥವಾ ಕಾಲು ತುಂಡಾಗಿ ಮಹಾ ಗಜಗಳು ಕ್ರೌಂಚಗಳಂತೆ ಕೂಗುತ್ತಾ ಭೀತಿಗೊಂಡು ಭೂಮಿಯ ಮೇಲೆ ಮಲಗಿದ್ದವು.

06085030a ನಕುಲಃ ಸಹದೇವಶ್ಚ ಹಯಾನೀಕಮಭಿದ್ರುತೌ|

06085030c ತೇ ಹಯಾಃ ಕಾಂಚನಾಪೀಡಾ ರುಕ್ಮಭಾಂಡಪರಿಚ್ಛದಾಃ|

06085030e ವಧ್ಯಮಾನಾ ವ್ಯದೃಶ್ಯಂತ ಶತಶೋಽಥ ಸಹಸ್ರಶಃ||

ನಕುಲ-ಸಹದೇವರು ಕುದುರೆಗಳ ಸೇನೆಯನ್ನು ಆಕ್ರಮಿಸಿದರು. ಅವರು ಕಾಂಚನ ಆಭರಣಗಳಿಂದ ಮತ್ತು ಮೇಲು ಹೊದಿಕೆಗಳಿಂದ ಅಲಂಕೃತಗೊಂಡಿದ್ದ ನೂರಾರು ಸಹಸ್ರಾರು ಕುದುರೆಗಳನ್ನು ವಧಿಸುತ್ತಿರುವುದು ಕಂಡುಬಂದಿತು.

06085031a ಪತದ್ಭಿಶ್ಚ ಹಯೈ ರಾಜನ್ಸಮಾಸ್ತೀರ್ಯತ ಮೇದಿನೀ|

06085031c ನಿರ್ಜಿಹ್ವೈಶ್ಚ ಶ್ವಸದ್ಭಿಶ್ಚ ಕೂಜದ್ಭಿಶ್ಚ ಗತಾಸುಭಿಃ|

06085031e ಹಯೆರ್ಬಭೌ ನರಶ್ರೇಷ್ಠ ನಾನಾರೂಪಧರೈರ್ಧರಾ||

ಕೆಳಗೆ ಬಿದ್ದಿದ್ದ ಕುದುರೆಗಳಿಂದ ಮೇದಿನಿಯು ತುಂಬಿ ಹೋಗಿತ್ತು. ನಾಲಿಗೆಗಳಿರಲಿಲ್ಲ, ದೀರ್ಘ ನಿಟ್ಟುಸಿರು ಬಿಡುತ್ತಿದ್ದವು, ಕೂಗುತ್ತಿದ್ದವು, ಮತ್ತು ತೀರಿಕೊಂಡಿದ್ದವು. ನರಶ್ರೇಷ್ಠ! ಹೀಗೆ ಕುದುರೆಗಳು ನಾನಾ ರೂಪಗಳನ್ನು ಧರಿಸಿದ್ದವು.

06085032a ಅರ್ಜುನೇನ ಹತೈಃ ಸಂಖ್ಯೇ ತಥಾ ಭಾರತ ವಾಜಿಭಿಃ|

06085032c ಪ್ರಬಭೌ ವಸುಧಾ ಘೋರಾ ತತ್ರ ತತ್ರ ವಿಶಾಂ ಪತೇ||

ಭಾರತ! ವಿಶಾಂಪತೇ! ರಣದಲ್ಲಿ ಅರ್ಜುನನಿಂದ ಹತವಾದ ಕುದುರೆಗಳಿಂದ ವಸುಧೆಯು ಅಲ್ಲಲ್ಲಿ ಘೋರವಾಗಿ ಕಾಣುತ್ತಿತ್ತು.

06085033a ರಥೈರ್ಭಗ್ನೈರ್ಧ್ವಜೈಶ್ಚಿನ್ನೈಶ್ಚತ್ರೈಶ್ಚ ಸುಮಹಾಪ್ರಭೈಃ|

06085033c ಹಾರೈರ್ನಿಷ್ಕೈಃ ಸಕೇಯೂರೈಃ ಶಿರೋಭಿಶ್ಚ ಸಕುಂಡಲೈಃ||

06085034a ಉಷ್ಣೀಷೈರಪವಿದ್ಧೈಶ್ಚ ಪತಾಕಾಭಿಶ್ಚ ಸರ್ವಷಃ|

06085034c ಅನುಕರ್ಷೈಃ ಶುಭೈ ರಾಜನ್ಯೋಕ್ತ್ರೈಶ್ಚವ್ಯಸುರಶ್ಮಿಭಿಃ||

06085034e ಸಂಚನ್ನಾ ವಸುಧಾ ಭಾತಿ ವಸಂತೇ ಕುಸುಮೈರಿವ||

ರಾಜನ್! ಭಗ್ನವಾಗಿದ್ದ ರಥಗಳಿಂದ, ತುಂಡಾದ ಮಹಾಪ್ರಭೆಯ ಧ್ವಜ-ಚತ್ರಗಳಿಂದ, ಸುವರ್ಣಮಯ ಹಾರಗಳಿಂದ, ಕೇಯೂರ-ಕುಂಡಲಗಳನ್ನು ಧರಿಸಿದ್ದ ಶಿರಗಳಿಂದ, ಬಿಚ್ಚಿಹೋದ ಶಿರಸ್ತ್ರಾಣಗಳಿಂದ, ತುಂಡಾದ ಪತಾಕೆಗಳಿಂದ, ಸುಂದರ ನೊಗದ ಕೆಳಭಾಗಗಳಿಂದಲೂ, ಕಡಿವಾಣಗಳಿಂದಲೂ ವ್ಯಾಪ್ತವಾಗಿದ್ದ ರಣಭೂಮಿಯು ವಸಂತ ಋತುವಿನಲ್ಲಿ ಕುಸುಮಗಳಿಂದ ಆಚ್ಛಾದಿತವಾದ ಭೂಪ್ರದೇಶದಂತೆ ಕಾಣುತ್ತಿತ್ತು.

06085035a ಏವಮೇಷ ಕ್ಷಯೋ ವೃತ್ತಃ ಪಾಂಡೂನಾಮಪಿ ಭಾರತ|

06085035c ಕ್ರುದ್ಧೇ ಶಾಂತನವೇ ಭೀಷ್ಮೇ ದ್ರೋಣೇ ಚ ರಥಸತ್ತಮೇ||

06085036a ಅಶ್ವತ್ಥಾಮ್ನಿ ಕೃಪೇ ಚೈವ ತಥೈವ ಕೃತವರ್ಮಣಿ|

06085036c ತಥೇತರೇಷು ಕ್ರುದ್ಧೇಷು ತಾವಕಾನಾಮಪಿ ಕ್ಷಯಃ||

ಹೀಗೆಯೇ ಭಾರತ! ಕ್ರುದ್ಧ ಶಾಂತನವ ಭೀಷ್ಮನಿಂದ, ರಥಸತ್ತಮ ದ್ರೋಣನಿಂದ, ಅಶ್ವತ್ಥಾಮನಿಂದ, ಕೃಪನಿಂದ ಮತ್ತು ಕೃತವರ್ಮನಿಂದ ಪಾಂಡವರ ನಾಶವೂ ನಡೆಯಿತು. ಹಾಗೆಯೇ ಕ್ರುದ್ಧರಾದ ಅವರಿಂದ ನಿನ್ನವರೂ ಹತರಾದರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಅಷ್ಟಮದಿವಸಯುದ್ಧೇ ಪಂಚಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಅಷ್ಟಮದಿವಸಯುದ್ಧ ಎನ್ನುವ ಎಂಭತ್ತೈದನೇ ಅಧ್ಯಾಯವು.

Image result for flowers against white background

Comments are closed.