Bhishma Parva: Chapter 80

ಭೀಷ್ಮ ಪರ್ವ: ಭೀಷ್ಮವಧ ಪರ್ವ

೮೦

ಶ್ರುತಾಯು-ಯುಧಿಷ್ಠಿರರ ಯುದ್ಧ (೧-೧೯). ಕೃಪ-ಚೇಕಿತಾನರ ಯುದ್ಧ (೨೦-೩೨). ಧೃಷ್ಟಕೇತು-ಭೂರಿಶ್ರವರ ಯುದ್ಧ (೩೩-೩೭).  ಚಿತ್ರಸೇನ, ವಿಕರ್ಣ ಮತ್ತು ದುರ್ಮರ್ಷಣರೊಡನೆ ಅಭಿಮನ್ಯುವಿನ ಯುದ್ಧ; ಸುಶರ್ಮಾರ್ಜುನರ ಸಮಾಗಮ (೩೮-೫೧).

06080001 ಸಂಜಯ ಉವಾಚ|

06080001a ತತೋ ಯುಧಿಷ್ಠಿರೋ ರಾಜಾ ಮಧ್ಯಂ ಪ್ರಾಪ್ತೇ ದಿವಾಕರೇ|

06080001c ಶ್ರುತಾಯುಷಮಭಿಪ್ರೇಕ್ಷ್ಯ ಚೋದಯಾಮಾಸ ವಾಜಿನಃ||

ಸಂಜಯನು ಹೇಳಿದನು: “ದಿವಾಕರನು ನಡುನೆತ್ತಿಯ ಮೇಲೆ ಬರಲು ರಾಜಾ ಯುಧಿಷ್ಠಿರನು ಶ್ರುತಾಯುಷನನ್ನು ನೋಡಿ ಕುದುರೆಗಳನ್ನು ಓಡಿಸಿದನು.

06080002a ಅಭ್ಯಧಾವತ್ತತೋ ರಾಜಾ ಶ್ರುತಾಯುಷಮರಿಂದಮಂ|

06080002c ವಿನಿಘ್ನನ್ಸಾಯಕೈಸ್ತೀಕ್ಷ್ಣೈರ್ನವಭಿರ್ನತಪರ್ವಭಿಃ||

ರಾಜನು ಅರಿಂದಮ ಶ್ರುತಾಯುಷನನ್ನು ಎದುರಿಸಿ ಅವನನ್ನು ತೀಕ್ಷ್ಣ ಸಾಯಕಗಳಿಂದ ಮತ್ತು ಒಂಭತ್ತು ನತಪರ್ವಗಳಿಂದ ಹೊಡೆದನು.

06080003a ಸ ಸಂವಾರ್ಯ ರಣೇ ರಾಜಾ ಪ್ರೇಷಿತಾನ್ಧರ್ಮಸೂನುನಾ|

06080003c ಶರಾನ್ಸಪ್ತ ಮಹೇಷ್ವಾಸಃ ಕೌಂತೇಯಾಯ ಸಮರ್ಪಯತ್||

ಆ ರಾಜ ಮಹೇಷ್ವಾಸನು ಧರ್ಮಸೂನುವು ಕಳುಹಿಸಿದ ಬಾಣಗಳನ್ನು ರಣದಲ್ಲಿ ತಡೆದು, ಏಳು ಶರಗಳನ್ನು ಕೌಂತೇಯನ ಮೇಲೆ ಪ್ರಯೋಗಿಸಿದನು.

06080004a ತೇ ತಸ್ಯ ಕವಚಂ ಭಿತ್ತ್ವಾ ಪಪುಃ ಶೋಣಿತಮಾಹವೇ|

06080004c ಅಸೂನಿವ ವಿಚಿನ್ವಂತೋ ದೇಹೇ ತಸ್ಯ ಮಹಾತ್ಮನಃ||

ಅವು ಆ ಮಹಾತ್ಮನ ಕವಚವನ್ನು ಸೀಳಿ ದೇಹದಲ್ಲಿ ಪ್ರಾಣಗಳನ್ನು ಹುಡುಕುತ್ತಿವೆಯೋ ಎನ್ನುವಂತೆ ಅವನ ರಕ್ತವನ್ನು ಹೀರಿದವು.

06080005a ಪಾಂಡವಸ್ತು ಭೃಶಂ ವಿದ್ಧಸ್ತೇನ ರಾಜ್ಞಾ ಮಹಾತ್ಮನಾ|

06080005c ರಣೇ ವರಾಹಕರ್ಣೇನ ರಾಜಾನಂ ಹೃದಿ ವಿವ್ಯಧೇ||

ಮಹಾತ್ಮ ರಾಜನಿಂದ ಹೀಗೆ ತುಂಬಾ ಗಾಯಗೊಂಡ ಪಾಂಡವನಾದರೋ ರಣದಲ್ಲಿ ವರಾಹಕರ್ಣದಿಂದ ರಾಜನ ಹೃದಯವನ್ನು ಹೊಡೆದನು.

06080006a ಅಥಾಪರೇಣ ಭಲ್ಲೇನ ಕೇತುಂ ತಸ್ಯ ಮಹಾತ್ಮನಃ|

06080006c ರಥಶ್ರೇಷ್ಠೋ ರಥಾತ್ತೂರ್ಣಂ ಭೂಮೌ ಪಾರ್ಥೋ ನ್ಯಪಾತಯತ್||

ರಥಶ್ರೇಷ್ಠ ಪಾರ್ಥನು ಇನ್ನೊಂದು ಭಲ್ಲದಿಂದ ಆ ಮಹಾತ್ಮನ ಧ್ವಜವನ್ನು ತಕ್ಷಣವೇ ರಥದಿಂದ ಭೂಮಿಯ ಮೇಲೆ ಉರುಳಿಸಿದನು.

06080007a ಕೇತುಂ ನಿಪತಿತಂ ದೃಷ್ಟ್ವಾ ಶ್ರುತಾಯುಃ ಸ ತು ಪಾರ್ಥಿವಃ|

06080007c ಪಾಂಡವಂ ವಿಶಿಖೈಸ್ತೀಕ್ಷ್ಣೈ ರಾಜನ್ವಿವ್ಯಾಧ ಸಪ್ತಭಿಃ||

ರಾಜನ್! ಧ್ವಜವನ್ನು ಬೀಳಿಸಿದುದನ್ನು ನೋಡಿ ಪಾರ್ಥಿವ ಶ್ರುತಾಯುವು ಪಾಂಡವನನ್ನು ಏಳು ತೀಕ್ಷ್ಣ ವಿಶಿಖಗಳಿಂದ ಹೊಡೆದನು.

06080008a ತತಃ ಕ್ರೋಧಾತ್ಪ್ರಜಜ್ವಾಲ ಧರ್ಮಪುತ್ರೋ ಯುಧಿಷ್ಠಿರಃ|

06080008c ಯಥಾ ಯುಗಾಂತೇ ಭೂತಾನಿ ಧಕ್ಷ್ಯನ್ನಿವ ಹುತಾಶನಃ||

ಆಗ ಧರ್ಮಪುತ್ರ ಯುಧಿಷ್ಠಿರನು ಯುಗಾಂತದಲ್ಲಿ ಇರುವವುಗಳನ್ನು ಸುಟ್ಟುಬಿಡುವ ಹುತಾಶನನಂತೆ ಕ್ರೋಧದಿಂದ ಪ್ರಜ್ವಲಿಸಿದನು.

06080009a ಕ್ರುದ್ಧಂ ತು ಪಾಂಡವಂ ದೃಷ್ಟ್ವಾ ದೇವಗಂಧರ್ವರಾಕ್ಷಸಾಃ|

06080009c ಪ್ರವಿವ್ಯಥುರ್ಮಹಾರಾಜ ವ್ಯಾಕುಲಂ ಚಾಪ್ಯಭೂಜ್ಜಗತ್||

ಮಹಾರಾಜ! ಕ್ರುದ್ಧ ಪಾಂಡವನನ್ನು ನೋಡಿ ದೇವ-ಗಂಧರ್ವ-ರಾಕ್ಷಸರು ಬಹುವಾಗಿ ವ್ಯಥೆಪಟ್ಟರು. ಜಗತ್ತೇ ವ್ಯಾಕುಲಗೊಂಡಿತು.

06080010a ಸರ್ವೇಷಾಂ ಚೈವ ಭೂತಾನಾಮಿದಮಾಸೀನ್ಮನೋಗತಂ|

06080010c ತ್ರೀಽಲ್ಲೋಕಾನದ್ಯ ಸಂಕ್ರುದ್ಧೋ ನೃಪೋಽಯಂ ಧಕ್ಷ್ಯತೀತಿ ವೈ||

“ಮೂರು ಲೋಕಗಳನ್ನೂ ಇಂದು ಸಂಕ್ರುದ್ಧನಾದ ಈ ನೃಪನು ಸುಟ್ಟುಬಿಡುತ್ತಾನೆ!” ಎನ್ನುವುದೇ ಸರ್ವಭೂತಗಳ ಮನೋಗತವಾಗಿತ್ತು.

06080011a ಋಷಯಶ್ಚೈವ ದೇವಾಶ್ಚ ಚಕ್ರುಃ ಸ್ವಸ್ತ್ಯಯನಂ ಮಹತ್|

06080011c ಲೋಕಾನಾಂ ನೃಪ ಶಾಂತ್ಯರ್ಥಂ ಕ್ರೋಧಿತೇ ಪಾಂಡವೇ ತದಾ||

ನೃಪ! ಪಾಂಡವನು ಕ್ರೋಧಿತನಾಗಲು ಋಷಿಗಳೂ ದೇವತೆಗಳೂ ಲೋಕಗಳ ಶಾಂತಿಗಾಗಿ ಸ್ವಸ್ತಿವಾಚನ ಮಾಡಿದರು.

06080012a ಸ ಚ ಕ್ರೋಧಸಮಾವಿಷ್ಟಃ ಸೃಕ್ಕಿಣೀ ಪರಿಲೇಲಿಹನ್|

06080012c ದಧಾರಾತ್ಮವಪುರ್ಘೋರಂ ಯುಗಾಂತಾದಿತ್ಯಸಮ್ನಿಭಂ||

ಅವನೂ ಕೂಡ ಕ್ರೋಧಸಮಾವಿಷ್ಟನಾಗಿ ಕಟವಾಯಿಯನ್ನು ನೆಕ್ಕುತ್ತಾ ಪ್ರಲಯ ಕಾಲದ ಆದಿತ್ಯನಂತೆ ಘೋರರೂಪವನ್ನು ತಾಳಿದನು.

06080013a ತತಃ ಸರ್ವಾಣಿ ಸೈನ್ಯಾನಿ ತಾವಕಾನಿ ವಿಶಾಂ ಪತೇ|

06080013c ನಿರಾಶಾನ್ಯಭವಂಸ್ತತ್ರ ಜೀವಿತಂ ಪ್ರತಿ ಭಾರತ||

ವಿಶಾಂಪತೇ! ಭಾರತ! ಆಗ ನಿನ್ನ ಸೇನೆಗಳೆಲ್ಲವೂ ತಮ್ಮ ಜೀವಿತದ ಮೇಲಿದ್ದ ಆಸೆಯನ್ನು ಸಂಪೂರ್ಣವಾಗಿ ತೊರೆದುಬಿಟ್ಟವು.

06080014a ಸ ತು ಧೈರ್ಯೇಣ ತಂ ಕೋಪಂ ಸನ್ನಿವಾರ್ಯ ಮಹಾಯಶಾಃ|

06080014c ಶ್ರುತಾಯುಷಃ ಪ್ರಚಿಚ್ಛೇದ ಮುಷ್ಟಿದೇಶೇ ಮಹದ್ಧನುಃ||

ಆಗ ಆ ಮಹಾಯಶನೇ ಧೈರ್ಯದಿಂದ ತನ್ನ ಕೋಪವನ್ನು ತಡೆದುಕೊಂಡು ಶ್ರುತಾಯುಷನ ಮಹಾಧನುಸ್ಸನ್ನು ಮುಷ್ಟಿಪ್ರದೇಶದಲ್ಲಿ ಕತ್ತರಿಸಿದನು.

06080015a ಅಥೈನಂ ಚಿನ್ನಧನ್ವಾನಂ ನಾರಾಚೇನ ಸ್ತನಾಂತರೇ|

06080015c ನಿರ್ಬಿಭೇದ ರಣೇ ರಾಜಾ ಸರ್ವಸೈನ್ಯಸ್ಯ ಪಶ್ಯತಃ||

ಧನುಸ್ಸು ತುಂಡಾದ ಅವನನ್ನು ರಾಜನು ರಣದಲ್ಲಿ ಎದೆಯ ಮೇಲೆ ಸರ್ವ ಸೈನ್ಯವೂ ನೋಡುತ್ತಿರುವಂತೆ ನಾರಾಚದಿಂದ ಹೊಡೆದನು.

06080016a ಸತ್ವರಂ ಚರಣೇ ರಾಜಂಸ್ತಸ್ಯ ವಾಹಾನ್ಮಹಾತ್ಮನಃ|

06080016c ನಿಜಘಾನ ಶರೈಃ ಕ್ಷಿಪ್ರಂ ಸೂತಂ ಚ ಸುಮಹಾಬಲಃ||

ರಾಜನ್! ಇನ್ನೊಂದು ಕ್ಷಣದಲ್ಲಿ ಕ್ಷಿಪ್ರವಾಗಿ ಆ ಮಹಾಬಲ ಮಹಾತ್ಮನು ಶರಗಳಿಂದ ಅವನ ಕುದುರೆ-ಸೂತರನ್ನು ಸಂಹರಿಸಿದನು.

06080017a ಹತಾಶ್ವಂ ತು ರಥಂ ತ್ಯಕ್ತ್ವಾ ದೃಷ್ಟ್ವಾ ರಾಜ್ಞಸ್ತು ಪೌರುಷಂ|

06080017c ವಿಪ್ರದುದ್ರಾವ ವೇಗೇನ ಶ್ರುತಾಯುಃ ಸಮರೇ ತದಾ||

ಹತವಾದ ಕುದುರೆ-ರಥಗಳನ್ನು ನೋಡಿ ಪೌರುಷವನ್ನು ತ್ಯಜಿಸಿ ರಾಜ ಶ್ರುತಾಯುವು ವೇಗದಿಂದ ಸಮರವನ್ನು ತ್ಯಜಿಸಿ ಪಲಾಯನಗೈದನು.

06080018a ತಸ್ಮಿನ್ಜಿತೇ ಮಹೇಷ್ವಾಸೇ ಧರ್ಮಪುತ್ರೇಣ ಸಂಯುಗೇ|

06080018c ದುರ್ಯೋಧನಬಲಂ ರಾಜನ್ಸರ್ವಮಾಸೀತ್ಪರಾಙ್ಮುಖಂ||

ರಾಜನ್! ಸಂಯುಗದಲ್ಲಿ ಆ ಮಹೇಷ್ವಾಸನು ಧರ್ಮಪುತ್ರನಿಂದ ಗೆಲ್ಲಲ್ಪಡಲು ದುರ್ಯೋಧನನ ಸೇನೆಗಳೆಲ್ಲವೂ ಪರಾಙ್ಮುಖವಾದವು.

06080019a ಏತತ್ಕೃತ್ವಾ ಮಹಾರಾಜ ಧರ್ಮಪುತ್ರೋ ಯುಧಿಷ್ಠಿರಃ|

06080019c ವ್ಯಾತ್ತಾನನೋ ಯಥಾ ಕಾಲಸ್ತವ ಸೈನ್ಯಂ ಜಘಾನ ಹ||

ಮಹಾರಾಜ! ಹೀಗೆ ಮಾಡಿ ಧರ್ಮಪುತ್ರ ಯುಧಿಷ್ಠಿರನು ಬಾಯಿಕಳೆದ ಕಾಲನಂತೆ ಸೈನ್ಯವನ್ನು ಸಂಹರಿಸಿದನು.

06080020a ಚೇಕಿತಾನಸ್ತು ವಾರ್ಷ್ಣೇಯೋ ಗೌತಮಂ ರಥಿನಾಂ ವರಂ|

06080020c ಪ್ರೇಕ್ಷತಾಂ ಸರ್ವಸೈನ್ಯಾನಾಂ ಚಾದಯಾಮಾಸ ಸಾಯಕೈಃ||

ವಾರ್ಷ್ಣೇಯ ಚೇಕಿತಾನನಾದರೋ ರಥಿಗಳಲ್ಲಿ ಶ್ರೇಷ್ಠ ಗೌತಮನನ್ನು, ಸರ್ವ ಸೇನೆಗಳೂ ನೋಡುತ್ತಿರುವಂತೆ, ಸಾಯಕಗಳಿಂದ ಮುಚ್ಚಿಬಿಟ್ಟನು.

06080021a ಸನ್ನಿವಾರ್ಯ ಶರಾಂಸ್ತಾಂಸ್ತು ಕೃಪಃ ಶಾರದ್ವತೋ ಯುಧಿ|

06080021c ಚೇಕಿತಾನಂ ರಣೇ ಯತ್ತಂ ರಾಜನ್ವಿವ್ಯಾಧ ಪತ್ರಿಭಿಃ||

ರಾಜನ್! ಆ ಶರಗಳನ್ನು ತಡೆದು ಶಾರದ್ವತ ಕೃಪನು ಯುದ್ಧದಲ್ಲಿ ಚೇಕಿತಾನನನ್ನು ಪತ್ರಿಗಳಿಂದ ಹೊಡೆದನು.

06080022a ಅಥಾಪರೇಣ ಭಲ್ಲೇನ ಧನುಶ್ಚಿಚ್ಛೇದ ಮಾರಿಷ|

06080022c ಸಾರಥಿಂ ಚಾಸ್ಯ ಸಮರೇ ಕ್ಷಿಪ್ರಹಸ್ತೋ ನ್ಯಪಾತಯತ್|

06080022e ಹಯಾಂಶ್ಚಾಸ್ಯಾವಧೀದ್ರಾಜನ್ನುಭೌ ಚ ಪಾರ್ಷ್ಣಿಸಾರಥೀ||

ರಾಜನ್! ಅನಂತರ ಆ ಕ್ಷಿಪ್ರಹಸ್ತನು ಸಮರದಲ್ಲಿ ಇನ್ನೊಂದು ಭಲ್ಲದಿಂದ ಅವನ ಧನುಸ್ಸನ್ನು ತುಂಡರಿಸಿ, ಸಾರಥಿಯನ್ನೂ, ನಾಲ್ಕು ಕುದುರೆಗಳನ್ನೂ, ರಥದ ಬದಿಗಳನ್ನು ರಕ್ಷಿಸುತ್ತಿದ್ದ ಇಬ್ಬರು ಸಾರಥಿಗಳನ್ನೂ ಬೀಳಿಸಿದನು.

06080023a ಸೋಽವಪ್ಲುತ್ಯ ರಥಾತ್ತೂರ್ಣಂ ಗದಾಂ ಜಗ್ರಾಹ ಸಾತ್ವತಃ|

06080023c ಸ ತಯಾ ವೀರಘಾತಿನ್ಯಾ ಗದಯಾ ಗದಿನಾಂ ವರಃ|

06080023e ಗೌತಮಸ್ಯ ಹಯಾನ್ ಹತ್ವಾ ಸಾರಥಿಂ ಚ ನ್ಯಪಾತಯತ್||

ಆಗ ಸಾತ್ವತನು ಒಡನೆಯೇ ರಥದಿಂದ ಧುಮುಕಿ ಗದೆಯನ್ನು ಹಿಡಿದನು. ಗದಾಧಾರಿಗಳಲ್ಲಿ ಶ್ರೇಷ್ಠನಾದ ಅವನು ವೀರರನ್ನು ಘಾತಿಗೊಳಿಸುವ ಗದೆಯಿಂದ ಗೌತಮನ ಕುದುರೆಗಳನ್ನು ಕೊಂದು ಸಾರಥಿಯನ್ನೂ ಬೀಳಿಸಿದನು.

06080024a ಭೂಮಿಷ್ಠೋ ಗೌತಮಸ್ತಸ್ಯ ಶರಾಂಶ್ಚಿಕ್ಷೇಪ ಷೋಡಶ|

06080024c ತೇ ಶರಾಃ ಸಾತ್ವತಂ ಭಿತ್ತ್ವಾ ಪ್ರಾವಿಶಂತ ಧರಾತಲಂ||

ಭೂಮಿಗಿಳಿದ ಗೌತಮನು ಅವನ ಮೇಲೆ ಹದಿನಾರು ಬಾಣಗಳನ್ನು ಪ್ರಯೋಗಿಸಿದನು. ಆ ಶರಗಳು ಸಾತ್ವತನನ್ನು ಭೇದಿಸಿ ಧರಾತಲವನ್ನು ಪ್ರವೇಶಿಸಿದವು.

06080025a ಚೇಕಿತಾನಸ್ತತಃ ಕ್ರುದ್ಧಃ ಪುನಶ್ಚಿಕ್ಷೇಪ ತಾಂ ಗದಾಂ|

06080025c ಗೌತಮಸ್ಯ ವಧಾಕಾಂಕ್ಷೀ ವೃತ್ರಸ್ಯೇವ ಪುರಂದರಃ||

ಆಗ ಚೇಕಿತಾನನು ಕ್ರುದ್ಧನಾಗಿ ಗೌತಮನನ್ನು ವಧಿಸಲು ಬಯಸಿ ವೃತ್ರನು ಪುರಂದರನ ಮೇಲೆ ಹೇಗೋ ಹಾಗೆ ಅವನ ಮೇಲೆ ಪುನಃ ಗದೆಯನ್ನು ಪ್ರಯೋಗಿಸಿದನು.

06080026a ತಾಮಾಪತಂತೀಂ ವಿಮಲಾಮಶ್ಮಗರ್ಭಾಂ ಮಹಾಗದಾಂ|

06080026c ಶರೈರನೇಕಸಾಹಸ್ರೈರ್ವಾರಯಾಮಾಸ ಗೌತಮಃ||

ತನ್ನ ಮೇಲೆ ಬಂದು ಬೀಳುತ್ತಿದ್ದ ಆ ಪಚ್ಚೆಕಲ್ಲಿನಿಂದ ನಿರ್ಮಿತವಾಗಿದ್ದ ಮಹಾಗದೆಯನ್ನು ಅನೇಕ ಸಾವಿರ ಬಾಣಗಳಿಂದ ಗೌತಮನು ತಡೆದನು.

06080027a ಚೇಕಿತಾನಸ್ತತಃ ಖಡ್ಗಂ ಕೋಶಾದುದ್ಧೃತ್ಯ ಭಾರತ|

06080027c ಲಾಘವಂ ಪರಮಾಸ್ಥಾಯ ಗೌತಮಂ ಸಮುಪಾದ್ರವತ್||

ಭಾರತ! ಆಗ ಚೇಕಿತಾನನು ಒರೆಯಿಂದ ಖಡ್ಗವನ್ನು ಸೆಳೆದು ಮೇಲೆತ್ತಿ ಅತಿ ವೇಗದಿಂದ ಗೌತಮನ ಸಮೀಪಕ್ಕೆ ಧಾವಿಸಿದನು.

06080028a ಗೌತಮೋಽಪಿ ಧನುಸ್ತ್ಯಕ್ತ್ವಾ ಪ್ರಗೃಹ್ಯಾಸಿಂ ಸುಸಂಶಿತಂ|

06080028c ವೇಗೇನ ಮಹತಾ ರಾಜಂಶ್ಚೇಕಿತಾನಮುಪಾದ್ರವತ್||

ರಾಜನ್! ಗೌತಮನೂ ಕೂಡ ಧನುಸ್ಸನ್ನು ಬಿಸುಟು ಖಡ್ಗವನ್ನು ಹಿಡಿದು ಮಹಾವೇಗದಿಂದ ಚೇಕಿತಾನನನ್ನು ಎದುರಿಸಿದನು.

06080029a ತಾವುಭೌ ಬಲಸಂಪನ್ನೌ ನಿಸ್ತ್ರಿಂಶವರಧಾರಿಣೌ|

06080029c ನಿಸ್ತ್ರಿಂಶಾಭ್ಯಾಂ ಸುತೀಕ್ಷ್ಣಾಭ್ಯಾಮನ್ಯೋನ್ಯಂ ಸಂತತಕ್ಷತುಃ||

ಅವರಿಬ್ಬರು ಬಲಸಂಪನ್ನರೂ ಶ್ರೇಷ್ಠ ಖಡ್ಗಗಳನ್ನು ಹಿಡಿದು ಸುತೀಕ್ಷ್ಣ ಖಡ್ಗಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಲು ಪ್ರಯತ್ನಿಸಿದರು.

06080030a ನಿಸ್ತ್ರಿಂಶವೇಗಾಭಿಹತೌ ತತಸ್ತೌ ಪುರುಷರ್ಷಭೌ|

06080030c ಧರಣೀಂ ಸಮನುಪ್ರಾಪ್ತೌ ಸರ್ವಭೂತನಿಷೇವಿತಾಂ|

06080030e ಮೂರ್ಚಯಾಭಿಪರೀತಾಂಗೌ ವ್ಯಾಯಾಮೇನ ಚ ಮೋಹಿತೌ||

ವೇಗವಾಗಿ ಖಡ್ಗಗಳಿಂದ ಹೊಡೆಯಲ್ಪಟ್ಟ ಆ ಇಬ್ಬರು ಪುರುಷರ್ಷಭರೂ ಹೋರಾಟದಲ್ಲಿ ಗಾಯಗೊಂಡು ಮೋಹಿತರಾಗಿ ಸರ್ವಭೂತಗಳೂ ಪೂಜಿಸುವ ಭೂಮಿಯ ಮೇಲೆ ಬಿದ್ದು ಮೂರ್ಛಿತರಾದರು.

06080031a ತತೋಽಭ್ಯಧಾವದ್ವೇಗೇನ ಕರಕರ್ಷಃ ಸುಹೃತ್ತಯಾ|

06080031c ಚೇಕಿತಾನಂ ತಥಾಭೂತಂ ದೃಷ್ಟ್ವಾ ಸಮರದುರ್ಮದಂ|

06080031e ರಥಮಾರೋಪಯಚ್ಚೈನಂ ಸರ್ವಸೈನ್ಯಸ್ಯ ಪಶ್ಯತಃ||

ಆಗ ವೇಗವಾಗಿ ಅಲ್ಲಿಗೆ ಬಂದ ಕರಕರ್ಷನು ಅವನ ಮೇಲಿನ ಸ್ನೇಹದಿಂದ ಹಾಗಿದ್ದ ಸಮರದುರ್ಮದ ಚೇಕಿತಾನನನ್ನು ನೋಡಿ, ಎಲ್ಲ ಸೇನೆಗಳೂ ನೋಡುತ್ತಿರಲು, ಅವನನ್ನು ತನ್ನ ರಥದ ಮೇಲೇರಿಸಿಕೊಂಡನು.

06080032a ತಥೈವ ಶಕುನಿಃ ಶೂರಃ ಸ್ಯಾಲಸ್ತವ ವಿಶಾಂ ಪತೇ|

06080032c ಆರೋಪಯದ್ರಥಂ ತೂರ್ಣಂ ಗೌತಮಂ ರಥಿನಾಂ ವರಂ||

ವಿಶಾಂಪತೇ! ಹಾಗೆಯೇ ನಿನ್ನ ಬಾವ ಶೂರ ಶಕುನಿಯು ತಕ್ಷಣವೇ ರಥಿಗಳಲ್ಲಿ ಶ್ರೇಷ್ಠ ಗೌತಮನನ್ನು ತನ್ನ ರಥದ ಮೇಲೇರಿಸಿಕೊಂಡನು.

06080033a ಸೌಮದತ್ತಿಂ ತಥಾ ಕ್ರುದ್ಧೋ ಧೃಷ್ಟಕೇತುರ್ಮಹಾಬಲಃ|

06080033c ನವತ್ಯಾ ಸಾಯಕೈಃ ಕ್ಷಿಪ್ರಂ ರಾಜನ್ವಿವ್ಯಾಧ ವಕ್ಷಸಿ||

ರಾಜನ್! ಹಾಗೆಯೇ ಮಹಾಬಲ ಧೃಷ್ಟಕೇತುವು ಸೌಮದತ್ತಿಯನ್ನು ನೋಡಿ ಕ್ರುದ್ಧನಾಗಿ ಅವನ ಎದೆಗೆ ತೊಂಬತ್ತು ಸಾಯಕಗಳನ್ನು ಕ್ಷಿಪ್ರವಾಗಿ ಹೊಡೆದನು.

06080034a ಸೌಮದತ್ತಿರುರಃಸ್ಥೈಸ್ತೈರ್ಭೃಶಂ ಬಾಣೈರಶೋಭತ|

06080034c ಮಧ್ಯಂದಿನೇ ಮಹಾರಾಜ ರಶ್ಮಿಭಿಸ್ತಪನೋ ಯಥಾ||

ಮಹಾರಾಜ! ಮಧ್ಯಾಹ್ನದ ಸೂರ್ಯನು ಕಿರಣಗಳಿಂದ ಹೇಗೋ ಹಾಗೆ ಸೌಮದತ್ತಿಯು ಹೃದಯಕ್ಕೆ ಚುಚ್ಚಿದ್ದ ಆ ತೊಂಬತ್ತು ಬಾಣಗಳಿಂದ ಪರಿಶೋಭಿಸಿದನು.

06080035a ಭೂರಿಶ್ರವಾಸ್ತು ಸಮರೇ ಧೃಷ್ಟಕೇತುಂ ಮಹಾರಥಂ|

06080035c ಹತಸೂತಹಯಂ ಚಕ್ರೇ ವಿರಥಂ ಸಾಯಕೋತ್ತಮೈಃ||

ಭೂರಿಶ್ರವನಾದರೋ ಸಮರದಲ್ಲಿ ಉತ್ತಮ ಸಾಯಕಗಳಿಂದ ಮಹಾರಥ ಧೃಷ್ಟಕೇತುವಿನ ಸಾರಥಿಯನ್ನೂ ಕುದುರೆಗಳನ್ನೂ ಸಂಹರಿಸಿ ಅವನನ್ನು ವಿರಥನನ್ನಾಗಿ ಮಾಡಿದನು.

06080036a ವಿರಥಂ ಚೈನಮಾಲೋಕ್ಯ ಹತಾಶ್ವಂ ಹತಸಾರಥಿಂ|

06080036c ಮಹತಾ ಶರವರ್ಷೇಣ ಚಾದಯಾಮಾಸ ಸಂಯುಗೇ||

ಅವನು ಅಶ್ವ-ಸಾರಥಿಗಳನ್ನು ಕಳೆದುಕೊಂಡು ವಿರಥನಾದುದನ್ನು ನೋಡಿ ಅವನನ್ನು ಮಹಾ ಶರವರ್ಷಗಳಿಂದ ರಣದಲ್ಲಿ ಮುಚ್ಚಿದನು.

06080037a ಸ ಚ ತಂ ರಥಮುತ್ಸೃಜ್ಯ ಧೃಷ್ಟಕೇತುರ್ಮಹಾಮನಾಃ|

06080037c ಆರುರೋಹ ತತೋ ಯಾನಂ ಶತಾನೀಕಸ್ಯ ಮಾರಿಷ||

ಮಾರಿಷ! ಮಹಾಮನ ಧೃಷ್ಟಕೇತುವಾದರೋ ತನ್ನ ರಥವನ್ನು ತೊರೆದು ಶತಾನೀಕನ ರಥವನ್ನೇರಿದನು.

06080038a ಚಿತ್ರಸೇನೋ ವಿಕರ್ಣಶ್ಚ ರಾಜನ್ದುರ್ಮರ್ಷಣಸ್ತಥಾ|

06080038c ರಥಿನೋ ಹೇಮಸನ್ನಾಹಾಃ ಸೌಭದ್ರಮಭಿದುದ್ರುವುಃ||

ರಾಜನ್! ಚಿತ್ರಸೇನ, ವಿಕರ್ಣ ಮತ್ತು ದುರ್ಮರ್ಷಣರು ಬಂಗಾರದ ರಥಗಳಲ್ಲಿ ಸೌಭದ್ರನನ್ನು ಎದುರಿಸಿದರು.

06080039a ಅಭಿಮನ್ಯೋಸ್ತತಸ್ತೈಸ್ತು ಘೋರಂ ಯುದ್ಧಮವರ್ತತ|

06080039c ಶರೀರಸ್ಯ ಯಥಾ ರಾಜನ್ವಾತಪಿತ್ತಕಫೈಸ್ತ್ರಿಭಿಃ||

ರಾಜನ್! ಶರೀರವು ವಾತ-ಪಿತ್ತ-ಕಫ ಈ ಮೂರರೊಡನೆ ಹೋರಾಡುವಂತೆ ಅಭಿಮನ್ಯುವು ಅವರೊಡನೆ ಘೋರ ಯುದ್ಧ ಮಾಡಿದನು.

06080040a ವಿರಥಾಂಸ್ತವ ಪುತ್ರಾಂಸ್ತು ಕೃತ್ವಾ ರಾಜನ್ಮಹಾಹವೇ|

06080040c ನ ಜಘಾನ ನರವ್ಯಾಘ್ರಃ ಸ್ಮರನ್ಭೀಮವಚಸ್ತದಾ||

ರಾಜನ್! ಆ ನರವ್ಯಾಘ್ರನು ನಿನ್ನ ಪುತ್ರರನ್ನು ಮಹಾಹವದಲ್ಲಿ ವಿರಥರನ್ನಾಗಿ ಮಾಡಿ ಭೀಮನ ವಚನವನ್ನು ಸ್ಮರಿಸಿಕೊಂಡು ಅವರನ್ನು ಕೊಲ್ಲಲಿಲ್ಲ.

06080041a ತತೋ ರಾಜ್ಞಾಂ ಬಹುಶತೈರ್ಗಜಾಶ್ವರಥಯಾಯಿಭಿಃ|

06080041c ಸಂವೃತಂ ಸಮರೇ ಭೀಷ್ಮಂ ದೇವೈರಪಿ ದುರಾಸದಂ||

06080042a ಪ್ರಯಾಂತಂ ಶೀಘ್ರಮುದ್ವೀಕ್ಷ್ಯ ಪರಿತ್ರಾತುಂ ಸುತಾಂಸ್ತವ|

06080042c ಅಭಿಮನ್ಯುಂ ಸಮುದ್ದಿಶ್ಯ ಬಾಲಮೇಕಂ ಮಹಾರಥಂ|

06080042e ವಾಸುದೇವಮುವಾಚೇದಂ ಕೌಂತೇಯಃ ಶ್ವೇತವಾಹನಃ||

ಆಗ ಅನೇಕ ರಾಜರಿಂದ, ನೂರಾರು ಗಜಾಶ್ವರಥಸೇನೆಗಳಿಂದ ಸಂವೃತನಾಗಿ ಸಮರದಲ್ಲಿ ದೇವತೆಗಳಿಗೂ ದುರಾಸದನಾದ ಭೀಷ್ಮನು ನಿನ್ನ ಪುತ್ರರನ್ನು ರಕ್ಷಿಸಲು ಶೀಘ್ರವಾಗಿ ಮಹಾರಥ, ಬಾಲಕ, ಅಭಿಮನ್ಯುವೊಬ್ಬನನ್ನೇ ಗುರಿಯಾಗಿಟ್ಟುಕೊಂಡು ಹೋಗುತ್ತಿರಲು ಶ್ವೇತವಾಹನ ಕೌಂತೇಯನು ವಾಸುದೇವನಿಗೆ ಇದನ್ನು ಹೇಳಿದನು:

06080043a ಚೋದಯಾಶ್ವಾನ್ ಹೃಷೀಕೇಶ ಯತ್ರೈತೇ ಬಹುಲಾ ರಥಾಃ|

06080043c ಏತೇ ಹಿ ಬಹವಃ ಶೂರಾಃ ಕೃತಾಸ್ತ್ರಾ ಯುದ್ಧದುರ್ಮದಾಃ|

06080043e ಯಥಾ ನ ಹನ್ಯುರ್ನಃ ಸೇನಾಂ ತಥಾ ಮಾಧವ ಚೋದಯ||

“ಹೃಷೀಕೇಶ! ಮಾಧವ! ಆ ಅನೇಕ ರಥಗಳು, ಅನೇಕ ಶೂರ, ಕೃತಾಸ್ತ್ರ, ಯುದ್ಧ ದುರ್ಮದರು ಎಲ್ಲಿದ್ದಾರೋ ಅಲ್ಲಿಗೆ, ಅವರು ಸೇನೆಗಳನ್ನು ಸಂಹರಿಸುವ ಮೊದಲೇ ಕುದುರೆಗಳನ್ನು ಓಡಿಸು!”

06080044a ಏವಮುಕ್ತಃ ಸ ವಾರ್ಷ್ಣೇಯಃ ಕೌಂತೇಯೇನಾಮಿತೌಜಸಾ|

06080044c ರಥಂ ಶ್ವೇತಹಯೈರ್ಯುಕ್ತಂ ಪ್ರೇಷಯಾಮಾಸ ಸಂಯುಗೇ||

06080045a ನಿಷ್ಟಾನಕೋ ಮಹಾನಾಸೀತ್ತವ ಸೈನ್ಯಸ್ಯ ಮಾರಿಷ|

06080045c ಯದರ್ಜುನೋ ರಣೇ ಕ್ರುದ್ಧಃ ಸಮ್ಯಾತಸ್ತಾವಕಾನ್ಪ್ರತಿ||

ಹೀಗೆ ಅಮಿತೌಜಸ ಕೌಂತೇಯನು ಹೇಳಲು ಸಂಯುಗದಲ್ಲಿ ವಾರ್ಷ್ಣೇಯನು ಶ್ವೇತಹಯಗಳನ್ನು ಕಟ್ಟಿದ್ದ ರಥವನ್ನು ನಿನ್ನ ಮಹಾಸೇನೆಯಿರುವಲ್ಲಿಗೆ ಕೊಂಡೊಯ್ದನು. ರಣದಲ್ಲಿ ಕ್ರುದ್ಧನಾಗಿರುವ ಅರ್ಜುನನು ನಿನ್ನವರನ್ನು ಸಮೀಪಿಸಿದನು.

06080046a ಸಮಾಸಾದ್ಯ ತು ಕೌಂತೇಯೋ ರಾಜ್ಞಸ್ತಾನ್ಭೀಷ್ಮರಕ್ಷಿಣಃ|

06080046c ಸುಶರ್ಮಾಣಮಥೋ ರಾಜನ್ನಿದಂ ವಚನಮಬ್ರವೀತ್||

ರಾಜನ್! ಭೀಷ್ಮನನ್ನು ರಕ್ಷಿಸುತ್ತಿದ್ದ ಆ ರಾಜರ ಬಳಿ ಹೋಗಿ ಕೌಂತೇಯನು ಸುಶರ್ಮಣನಿಗೆ ಹೀಗೆ ಹೇಳಿದನು.

06080047a ಜಾನಾಮಿ ತ್ವಾಂ ಯುಧಿ ಶ್ರೇಷ್ಠಮತ್ಯಂತಂ ಪೂರ್ವವೈರಿಣಂ|

06080047c ಪರ್ಯಾಯಸ್ಯಾದ್ಯ ಸಂಪ್ರಾಪ್ತಂ ಫಲಂ ಪಶ್ಯ ಸುದಾರುಣಂ|

06080047e ಅದ್ಯ ತೇ ದರ್ಶಯಿಷ್ಯಾಮಿ ಪೂರ್ವಪ್ರೇತಾನ್ಪಿತಾಮಹಾನ್||

“ನೀನು ಯುದ್ಧದಲ್ಲಿ ಅತ್ಯಂತ ಶ್ರೇಷ್ಠನೆಂದೂ ಬಹುಕಾಲದಿಂದ ನೀನು ನನಗೆ ವೈರಿಯೆಂದು ತಿಳಿದಿರುತ್ತೇನೆ. ನಮಗೆ ಮಾಡಿದ ಮೋಸಗಳ ಸುದಾರುಣ ಫಲವನ್ನು ಇಂದು ನೋಡು! ಇಂದು ನಿನಗೆ ನಿನ್ನ ಪೂರ್ವ ಪಿತಾಮಹರ ದರ್ಶನ ಮಾಡಿಸುತ್ತೇನೆ.”

06080048a ಏವಂ ಸಂಜಲ್ಪತಸ್ತಸ್ಯ ಬೀಭತ್ಸೋಃ ಶತ್ರುಘಾತಿನಃ|

06080048c ಶ್ರುತ್ವಾಪಿ ಪರುಷಂ ವಾಕ್ಯಂ ಸುಶರ್ಮಾ ರಥಯೂಥಪಃ|

06080048e ನ ಚೈನಮಬ್ರವೀತ್ಕಿಂ ಚಿಚ್ಚುಭಂ ವಾ ಯದಿ ವಾಶುಭಂ||

ಹೀಗೆ ಶತ್ರುಘಾತಿ ಬೀಭತ್ಸುವು ಹೇಳುತ್ತಿದ್ದುದನ್ನು ಕೇಳಿಯೂ ರಥಯೂಥಪ ಸುಶರ್ಮನು ಪೌರುಷದ ಮಾತುಗಳನ್ನು ಏನನ್ನೂ ಶುಭವಾಗಲೀ ಅಶುಭವಾಗಲೀ ಆಡಲಿಲ್ಲ.

06080049a ಅಭಿ ಗತ್ವಾರ್ಜುನಂ ವೀರಂ ರಾಜಭಿರ್ಬಹುಭಿರ್ವೃತಃ|

06080049c ಪುರಸ್ತಾತ್ಪೃಷ್ಠತಶ್ಚೈವ ಪಾರ್ಶ್ವತಶ್ಚೈವ ಸರ್ವತಃ||

06080050a ಪರಿವಾರ್ಯಾರ್ಜುನಂ ಸಂಖ್ಯೇ ತವ ಪುತ್ರೈಃ ಸಹಾನಘ|

06080050c ಶರೈಃ ಸಂಚಾದಯಾಮಾಸ ಮೇಘೈರಿವ ದಿವಾಕರಂ||

ಅನಘ! ಅನೇಕ ರಾಜರಿಂದ ಆವೃತನಾಗಿ ವೀರ ಅರ್ಜುನನನ್ನು ಅವನು ಮುಂದಿನಿಂದ, ಹಿಂದಿನಿಂದ, ಬದಿಗಳಿಂದ ಮತ್ತು ಎಲ್ಲ ಕಡೆಗಳಿಂದ ಸುತ್ತುವರೆದು ಯುದ್ಧದಲ್ಲಿ ನಿನ್ನ ಪುತ್ರರೊಡನೆ ಅರ್ಜುನನನ್ನು ಮೇಘಗಳು ದಿವಾಕರನನ್ನು ಹೇಗೋ ಹಾಗೆ ಶರಗಳಿಂದ ಮುಚ್ಚಿಬಿಟ್ಟನು.

06080051a ತತಃ ಪ್ರವೃತ್ತಃ ಸುಮಹಾನ್ಸಂಗ್ರಾಮಃ ಶೋಣಿತೋದಕಃ|

06080051c ತಾವಕಾನಾಂ ಚ ಸಮರೇ ಪಾಂಡವಾನಾಂ ಚ ಭಾರತ||

ಆಗ ಭಾರತ! ನಿನ್ನವರ ಮತ್ತು ಪಾಂಡವರ ನಡುವೆ ಸಮರದಲ್ಲಿ ರಕ್ತದ ನೀರು ಹರಿದ ಮಹಾ ಸಂಗ್ರಾಮವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಪ್ತಮಯುದ್ಧದಿವಸೇ ಸುಶರ್ಮಾರ್ಜುನ ಸಮಾಗಮೇ ಅಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಪ್ತಮಯುದ್ಧದಿವಸದಲ್ಲಿ ಸುಶರ್ಮಾರ್ಜುನ ಸಮಾಗಮ ಎನ್ನುವ ಎಂಭತ್ತನೇ ಅಧ್ಯಾಯವು.

Image result for flowers against white background

Comments are closed.