Bhishma Parva: Chapter 76

ಭೀಷ್ಮ ಪರ್ವ: ಭೀಷ್ಮವಧ ಪರ್ವ

೭೬

ದುರ್ಯೋಧನ-ಭೀಷ್ಮರ ಸಂವಾದ (೧-೧೨). ಕುರುಸೇನೆಯು ಪುನಃ ಯುದ್ಧಕ್ಕೆ ಹೊರಟಿದುದು (೧೩-೧೯).

06076001 ಸಂಜಯ ಉವಾಚ|

06076001a ಅಥ ಶೂರಾ ಮಹಾರಾಜ ಪರಸ್ಪರಕೃತಾಗಸಃ|

06076001c ಜಗ್ಮುಃ ಸ್ವಶಿಬಿರಾಣ್ಯೇವ ರುಧಿರೇಣ ಸಮುಕ್ಷಿತಾಃ||

ಸಂಜಯನು ಹೇಳಿದನು: “ಮಹಾರಾಜ! ಪರಸ್ಪರರ ಅಪರಾಧಿಗಳಾಗಿ ಶೂರರು ರಕ್ತದಿಂದ ತೋಯ್ದು ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು.

06076002a ವಿಶ್ರಮ್ಯ ಚ ಯಥಾನ್ಯಾಯಂ ಪೂಜಯಿತ್ವಾ ಪರಸ್ಪರಂ|

06076002c ಸನ್ನದ್ಧಾಃ ಸಮದೃಶ್ಯಂತ ಭೂಯೋ ಯುದ್ಧಚಿಕೀರ್ಷಯಾ||

ಯಥಾನ್ಯಾಯವಾಗಿ ವಿಶ್ರಮಿಸಿ ಪರಸ್ಪರರನ್ನು ಗೌರವಿಸಿ ಪುನಃ ಯುದ್ಧಮಾಡಲು ಬಯಸಿ ಸನ್ನದ್ಧರಾಗುತ್ತಿರುವುದು ಕಂಡುಬಂದಿತು.

06076003a ತತಸ್ತವ ಸುತೋ ರಾಜಂಶ್ಚಿಂತಯಾಭಿಪರಿಪ್ಲುತಃ|

06076003c ವಿಸ್ರವಚ್ಚೋಣಿತಾಕ್ತಾಂಗಃ ಪಪ್ರಚ್ಛೇದಂ ಪಿತಾಮಹಂ|| 

ರಾಜನ್! ಆಗ ಅಂಗಗಳಿಂದ ರಕ್ತವು ಸುರಿಯುತ್ತಿರಲು ನಿನ್ನ ಮಗನು ಚಿಂತೆಯಲ್ಲಿ ಮುಳುಗಿ ಪಿತಾಮಹನನ್ನು ಪ್ರಶ್ನಿಸಿದನು:

06076004a ಸೈನ್ಯಾನಿ ರೌದ್ರಾಣಿ ಭಯಾನಕಾನಿ

        ವ್ಯೂಢಾನಿ ಸಮ್ಯಗ್ಬಹುಲಧ್ವಜಾನಿ|

06076004c ವಿದಾರ್ಯ ಹತ್ವಾ ಚ ನಿಪೀಡ್ಯ ಶೂರಾಸ್

        ತೇ ಪಾಂಡವಾನಾಂ ತ್ವರಿತಾ ರಥೌಘಾಃ||

“ಅನೇಕ ಧ್ವಜಗಳಿರುವ, ಚೆನ್ನಾಗಿ ವ್ಯೂಹದಲ್ಲಿ ರಚಿತವಾಗಿರುವ ರೌದ್ರ ಭಯಾನಿಕ ಸೇನೆಯನ್ನೂ ಕೂಡ ಪಾಂಡವರು ಬೇಗನೇ ಭೇದಿಸಿ, ಪೀಡಿಸಿ, ರಥಗಳಲ್ಲಿ ಹೊರಟುಹೋಗುತ್ತಿದ್ದಾರೆ.

06076005a ಸಮ್ಮೋಹ್ಯ ಸರ್ವಾನ್ಯುಧಿ ಕೀರ್ತಿಮಂತೋ

        ವ್ಯೂಹಂ ಚ ತಂ ಮಕರಂ ವಜ್ರಕಲ್ಪಂ|

06076005c ಪ್ರವಿಶ್ಯ ಭೀಮೇನ ನಿಬರ್ಹಿತೋಽಸ್ಮಿ

        ಘೋರೈಃ ಶರೈರ್ಮೃತ್ಯುದಂಡಪ್ರಕಾಶೈಃ||

ವಜ್ರದಂತಿರುವ ಮಕರವ್ಯೂಹವನ್ನು ಕೂಡ ಎಲ್ಲವನ್ನೂ ಸಮ್ಮೋಹಗೊಳಿಸಿ ಯುದ್ಧದಲ್ಲಿ ಕೀರ್ತಿಮಂತರಾಗಿದ್ದಾರೆ. ವ್ಯೂಹವನ್ನು ಪ್ರವೇಶಿಸಿದ ಭೀಮನ ಮೃತ್ಯುದಂಡದಂತೆ ಹೊಳೆಯುತ್ತಿದ್ದ ಘೋರ ಶರಗಳಿಂದ ಗಾಯಗೊಂಡಿದ್ದೇನೆ.

06076006a ಕ್ರುದ್ಧಂ ತಮುದ್ವೀಕ್ಷ್ಯ ಭಯೇನ ರಾಜನ್

        ಸಮ್ಮೂರ್ಚಿತೋ ನಾಲಭಂ ಶಾಂತಿಮದ್ಯ|

06076006c ಇಚ್ಛೇ ಪ್ರಸಾದಾತ್ತವ ಸತ್ಯಸಂಧ

        ಪ್ರಾಪ್ತುಂ ಜಯಂ ಪಾಂಡವೇಯಾಂಶ್ಚ ಹಂತುಂ||

ರಾಜನ್! ಕ್ರುದ್ಧನಾದ ಅವನನ್ನು ನೋಡಿಯೇ ಭಯದಿಂದ ನಾನು ಮೂರ್ಛಿತನಾಗುತ್ತೇನೆ. ಸತ್ಯಸಂಧ! ಇಂದು ನನಗೆ ಶಾಂತಿಯೇ ಇಲ್ಲದಾಗಿದೆ. ಕೇವಲ ನಿನ್ನ ಪ್ರಸಾದದಿಂದ ಪಾಂಡವೇಯರನ್ನು ಕೊಂದು ಜಯವನ್ನು ಗಳಿಸಲು ಶಕ್ಯನಾಗಿದ್ದೇನೆ.”

06076007a ತೇನೈವಮುಕ್ತಃ ಪ್ರಹಸನ್ಮಹಾತ್ಮಾ

        ದುರ್ಯೋಧನಂ ಜಾತಮನ್ಯುಂ ವಿದಿತ್ವಾ|

06076007c ತಂ ಪ್ರತ್ಯುವಾಚಾವಿಮನಾ ಮನಸ್ವೀ

        ಗಂಗಾಸುತಃ ಶಸ್ತ್ರಭೃತಾಂ ವರಿಷ್ಠಃ||

ಅವನು ಹೀಗೆ ಹೇಳಲು ಮಹಾತ್ಮಾ ಮನಸ್ವೀ ಶಸ್ತ್ರಭೃತರಲ್ಲಿ ವರಿಷ್ಠ ಗಂಗಾಸುತನು ವಿನಯನಾಗಿ ಕೇಳಿಕೊಂಡರೂ ಅವನು ಕುಪಿತನಾಗಿದ್ದಾನೆಂದು ತಿಳಿದು ದುರ್ಯೋಧನನಿಗೆ ನಗುತ್ತಾ ಹೇಳಿದನು.

06076008a ಪರೇಣ ಯತ್ನೇನ ವಿಗಾಹ್ಯ ಸೇನಾಂ

        ಸರ್ವಾತ್ಮನಾಹಂ ತವ ರಾಜಪುತ್ರ|

06076008c ಇಚ್ಛಾಮಿ ದಾತುಂ ವಿಜಯಂ ಸುಖಂ ಚ

        ನ ಚಾತ್ಮಾನಂ ಚಾದಯೇಽಹಂ ತ್ವದರ್ಥೇ||

“ರಾಜಪುತ್ರ! ಸೇನೆಯನ್ನು ಹೊಕ್ಕು ಸರ್ವಾತ್ಮದಿಂದ ನಿನಗೆ ವಿಜಯವನ್ನೂ ಸುಖವನ್ನೂ ಕೊಡಲು ಬಯಸಿ ಪರಮ ಪ್ರಯತ್ನವನ್ನು ಮಾಡುತ್ತಿದ್ದೇನೆ. ಅದರಿಂದಾಗಿ ನನ್ನ ರಕ್ಷಣೆಯ ಕುರಿತೂ ನಾನು ಯೋಚಿಸುತ್ತಿಲ್ಲ.

06076009a ಏತೇ ತು ರೌದ್ರಾ ಬಹವೋ ಮಹಾರಥಾ

        ಯಶಸ್ವಿನಃ ಶೂರತಮಾಃ ಕೃತಾಸ್ತ್ರಾಃ|

06076009c ಯೇ ಪಾಂಡವಾನಾಂ ಸಮರೇ ಸಹಾಯಾ

        ಜಿತಕ್ಲಮಾಃ ಕ್ರೋಧವಿಷಂ ವಮಂತಿ||

ಸಮರದಲ್ಲಿ ಪಾಂಡವರ ಸಹಾಯಕ್ಕೆಂದು ಬಂದ ಅನೇಕ ಮಹಾರಥರು ರೌದ್ರರು, ಯಶಸ್ವಿಗಳು, ಶೂರತಮರು, ಕೃತಾಸ್ತ್ರರು, ಆಯಾಸವನ್ನು ಗೆದ್ದವರು ಮತ್ತು ಕ್ರೋಧವಿಷವನ್ನು ಕಾರುವವರು.

06076010a ತೇ ನೇಹ ಶಕ್ಯಾಃ ಸಹಸಾ ವಿಜೇತುಂ

        ವೀರ್ಯೋನ್ನದ್ಧಾಃ ಕೃತವೈರಾಸ್ತ್ವಯಾ ಚ|

06076010c ಅಹಂ ಹ್ಯೇತಾನ್ಪ್ರತಿಯೋತ್ಸ್ಯಾಮಿ ರಾಜನ್

        ಸರ್ವಾತ್ಮನಾ ಜೀವಿತಂ ತ್ಯಜ್ಯ ವೀರ||

ರಾಜನ್! ವೀರ! ನಿನ್ನೊಂದಿಗೆ ವೈರವನ್ನಿಟ್ಟುಕೊಂಡಿರುವ, ವೀರ್ಯದಿಂದ ಉನ್ಮತ್ತರಾಗಿರುವ ಅವರನ್ನು ಶೀಘ್ರವಾಗಿ ಸೋಲಿಸಲು ಶಕ್ಯವಿಲ್ಲ. ನಾನಾದರೋ ಮನಃಪೂರ್ವಕವಾಗಿ ಜೀವವನ್ನೇ ತೊರೆದು ಇವರೊಂದಿಗೆ ಯುದ್ಧ ಮಾಡುತ್ತಿದ್ದೇನೆ.

06076011a ರಣೇ ತವಾರ್ಥಾಯ ಮಹಾನುಭಾವ

        ನ ಜೀವಿತಂ ರಕ್ಷ್ಯತಮಂ ಮಮಾದ್ಯ|

06076011c ಸರ್ವಾಂಸ್ತವಾರ್ಥಾಯ ಸದೇವದೈತ್ಯಾಽಲ್

        ಲೋಕಾನ್ದಹೇಯಂ ಕಿಮು ಶತ್ರೂಂಸ್ತವೇಹ||

ಮಹಾನುಭಾವ! ನಿನಗೋಸ್ಕರವಾಗಿ ನಾನು ನನ್ನ ಜೀವವನ್ನು ರಕ್ಷಿಸಿಕೊಳ್ಳುವ ಆಸೆಯನ್ನಿಟ್ಟುಕೊಂಡಿಲ್ಲ. ನಿನಗೋಸ್ಕರವಾಗಿ ದೇವ-ದೈತ್ಯರೊಂದಿಗೆ ಸರ್ವಲೋಕಗಳನ್ನೂ ನಾನು ದಹಿಸಬಲ್ಲೆ. ಇನ್ನು ನಿನ್ನ ಈ ಶತ್ರುಗಳು ಯಾವ ಲೆಕ್ಕಕ್ಕೆ?

06076012a ತತ್ಪಾಂಡವಾನ್ಯೋಧಯಿಷ್ಯಾಮಿ ರಾಜನ್

        ಪ್ರಿಯಂ ಚ ತೇ ಸರ್ವಮಹಂ ಕರಿಷ್ಯೇ|

06076012c ಶ್ರುತ್ವೈವ ಚೈತತ್ಪರಮಪ್ರತೀತೋ

        ದುರ್ಯೋಧನಃ ಪ್ರೀತಮನಾ ಬಭೂವ||

ರಾಜನ್! ಆ ಪಾಂಡವರೊಡನೆಯೂ ಯುದ್ಧ ಮಾಡುತ್ತೇನೆ. ನಿನಗೆ ಪ್ರಿಯವಾದುದೆಲ್ಲವನ್ನೂ ನಾನು ಮಾಡುತ್ತೇನೆ.” ಅವನ ಆ ಮಾತುಗಳನ್ನು ಕೇಳಿ ದುರ್ಯೋಧನನು ಪರಮ ಪ್ರತೀತನಾದನು.

06076013a ಸರ್ವಾಣಿ ಸೈನ್ಯಾನಿ ತತಃ ಪ್ರಹೃಷ್ಟೋ

        ನಿರ್ಗಚ್ಛತೇತ್ಯಾಹ ನೃಪಾಂಶ್ಚ ಸರ್ವಾನ್|

06076013c ತದಾಜ್ಞಯಾ ತಾನಿ ವಿನಿರ್ಯಯುರ್ದ್ರುತಂ

        ರಥಾಶ್ವಪಾದಾತಗಜಾಯುತಾನಿ||

ಆಗ ಪ್ರಹೃಷ್ಟನಾಗಿ ಎಲ್ಲ ಸೈನ್ಯಗಳಿಗೂ ಎಲ್ಲ ರಾಜರಿಗೂ “ಹೊರಡಿ!” ಎಂದು ಹೇಳಿದನು. ಅವನ ಆಜ್ಞಾನುಸಾರವಾಗಿ ಹತ್ತತ್ತು ಸಾವಿರ ರಥ-ಅಶ್ವ-ಪದಾತಿ-ಗಜಗಳಿಂದ ಕೂಡಿದ ಮಹಾಸೇನೆಯು ಹೊರಟಿತು.

06076014a ಪ್ರಹರ್ಷಯುಕ್ತಾನಿ ತು ತಾನಿ ರಾಜನ್

        ಮಹಾಂತಿ ನಾನಾವಿಧಶಸ್ತ್ರವಂತಿ|

06076014c ಸ್ಥಿತಾನಿ ನಾಗಾಶ್ವಪದಾತಿಮಂತಿ

        ವಿರೇಜುರಾಜೌ ತವ ರಾಜನ್ಬಲಾನಿ||

ರಾಜನ್! ನಾನಾವಿಧದ ಶಸ್ತ್ರಗಳನ್ನು ಹೊಂದಿದ್ದ, ನಾಗಾಶ್ವಪದಾತಿಗಳಿಂದ ತುಂಬಿದ್ದ ನಿನ್ನ ಸೇನೆಗಳು ಹರ್ಷಿತವಾಗಿದ್ದವು ಮತ್ತು ಬಹಳವಾಗಿ ರಾರಾಜಿಸುತ್ತಿದ್ದವು.

06076015a ವೃಂದೈಃ ಸ್ಥಿತಾಶ್ಚಾಪಿ ಸುಸಂಪ್ರಯುಕ್ತಾಶ್

        ಚಕಾಶಿರೇ ದಂತಿಗಣಾಃ ಸಮಂತಾತ್|

06076015c ಶಸ್ತ್ರಾಸ್ತ್ರವಿದ್ಭಿರ್ನರದೇವ ಯೋಧೈರ್

        ಅಧಿಷ್ಠಿತಾಃ ಸೈನ್ಯಗಣಾಸ್ತ್ವದೀಯಾಃ||

ನರದೇವ! ನಿನ್ನ ಸೈನ್ಯಗಣಗಳು ಶಸ್ತ್ರಾಸ್ತ್ರಗಳನ್ನು ತಿಳಿದಿರುವ ಯೋಧರಿಂದ ನಿಯಂತ್ರಿಸಲ್ಪಟ್ಟಿದ್ದವು.

06076016a ರಥೈಶ್ಚ ಪಾದಾತಗಜಾಶ್ವಸಂಘೈಃ

        ಪ್ರಯಾದ್ಭಿರಾಜೌ ವಿಧಿವತ್ಪ್ರಣುನ್ನೈಃ|

06076016c ಸಮುದ್ಧತಂ ವೈ ತರುಣಾರ್ಕವರ್ಣಂ

        ರಜೋ ಬಭೌ ಚಾದಯತ್ಸೂರ್ಯರಶ್ಮೀನ್||

ವಿಧಿವತ್ತಾಗಿ ಅನುಶಾಸಿತರಾಗಿ ರಣರಂಗಕ್ಕೆ ಪ್ರಯಾಣಮಾಡುತ್ತಿದ್ದ ರಥ-ಪದಾತಿ-ಗಜ-ಅಶ್ವ ಸಮೂಹಗಳಿಂದ ಮೇಲೆದ್ದ ಧೂಳು ಸೂರ್ಯನ ಕಿರಣಗಳನ್ನು ಮುಸುಕಿ ಬಾಲಸೂರ್ಯನ ರಶ್ಮಿಗಳಂತೆ ತೋರುತ್ತಿದ್ದವು.

06076017a ರೇಜುಃ ಪತಾಕಾ ರಥದಂತಿಸಂಸ್ಥಾ

        ವಾತೇರಿತಾ ಭ್ರಾಮ್ಯಮಾಣಾಃ ಸಮಂತಾತ್|

06076017c ನಾನಾರಂಗಾಃ ಸಮರೇ ತತ್ರ ರಾಜನ್

        ಮೇಘೈರ್ಯುಕ್ತಾ ವಿದ್ಯುತಃ ಖೇ ಯಥೈವ||

ರಾಜನ್! ರಥ ಮತ್ತು ಆನೆಗಳ ಮೇಲೆ ಕಟ್ಟಿದ್ದ ನಾನಾ ಬಣ್ಣದ ಪತಾಕೆಗಳು ಗಾಳಿಯಿಂದ ಬೀಸುತ್ತಾ ಎಲ್ಲ ಕಡೆಗಳಿಂದಲೂ ಸಮರದಲ್ಲಿ ಆಕಾಶದಲ್ಲಿ ಮೇಘಗಳಿಗೆ ತಾಗಿದ ಮಿಂಚುಗಳಂತೆ ಪ್ರಕಾಶಿಸುತ್ತಿದ್ದವು.

06076018a ಧನೂಂಷಿ ವಿಸ್ಫಾರಯತಾಂ ನೃಪಾಣಾಂ

        ಬಭೂವ ಶಬ್ದಸ್ತುಮುಲೋಽತಿಘೋರಃ|

06076018c ವಿಮಥ್ಯತೋ ದೇವಮಹಾಸುರೌಘೈರ್

        ಯಥಾರ್ಣವಸ್ಯಾದಿಯುಗೇ ತದಾನೀಂ||

ಟೇಂಕರಿಸುತ್ತಿದ್ದ ನೃಪರ ಧನುಸ್ಸುಗಳಿಂದ ಅತಿಘೋರ ತುಮುಲ ಶಬ್ಧವುಂಟಾಗುತ್ತಿತ್ತು. ಅದು ಆದಿಯುಗದಲ್ಲಿ ದೇವತೆಗಳೂ ಮಹಾಸುರರೂ ಸಾಗರವನ್ನು ಮಥಿಸುವಾಗ ಉಂಟಾದ ಶಬ್ಧದಂತಿತ್ತು.

06076019a ತದುಗ್ರನಾದಂ ಬಹುರೂಪವರ್ಣಂ

        ತವಾತ್ಮಜಾನಾಂ ಸಮುದೀರ್ಣಮೇವಂ|

06076019c ಬಭೂವ ಸೈನ್ಯಂ ರಿಪುಸೈನ್ಯಹಂತೃ

        ಯುಗಾಂತಮೇಘೌಘನಿಭಂ ತದಾನೀಂ||

ಆ ಉಗ್ರನಾದದೊಂದಿಗೆ, ಬಹುಬಣ್ಣದ ರೂಪವುಳ್ಳ ನಿನ್ನ ಮಕ್ಕಳ ಆ ಸೇನೆಯು ರಿಪುಸೈನ್ಯಗಳನ್ನು ನಾಶಪಡಿಸುವ ಯುಗಾಂತದ ಘನ ಕಪ್ಪು ಮೋಡಗಳಂತೆ ಕಂಡಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮದುರ್ಯೋಧನಸಂವಾದೇ ಷಟ್ಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮದುರ್ಯೋಧನಸಂವಾದ ಎನ್ನುವ ಎಪ್ಪತ್ತಾರನೇ ಅಧ್ಯಾಯವು.

Image result for elephants against white background

Comments are closed.