Bhishma Parva: Chapter 74

ಭೀಷ್ಮ ಪರ್ವ: ಭೀಷ್ಮವಧ ಪರ್ವ

೭೪

ಸಂಕುಲ ಯುದ್ಧ (೧-೩೬).

06074001 ಸಂಜಯ ಉವಾಚ|

06074001a ತತೋ ದುರ್ಯೋಧನೋ ರಾಜಾ ಮೋಹಾತ್ಪ್ರತ್ಯಾಗತಸ್ತದಾ|

06074001c ಶರವರ್ಷೈಃ ಪುನರ್ಭೀಮಂ ಪ್ರತ್ಯವಾರಯದಚ್ಯುತಂ||

ಸಂಜಯನು ಹೇಳಿದನು: “ಆಗ ರಾಜಾ ದುರ್ಯೋಧನನು ಮೂರ್ಛೆಯಿಂದ ಎಚ್ಚೆತ್ತು ಪುನಃ ಅಚ್ಯುತ ಭೀಮನನ್ನು ಶರವರ್ಷಗಳಿಂದ ಆಕ್ರಮಣಿಸಿದನು.

06074002a ಏಕೀಭೂತಾಃ ಪುನಶ್ಚೈವ ತವ ಪುತ್ರಾ ಮಹಾರಥಾಃ|

06074002c ಸಮೇತ್ಯ ಸಮರೇ ಭೀಮಂ ಯೋಧಯಾಮಾಸುರುದ್ಯತಾಃ||

ಪುನಃ ನಿನ್ನ ಮಹಾರಥ ಪುತ್ರರು ಒಂದಾಗಿ ಸೇರಿ ಸಮರದಲ್ಲಿ ಭೀಮನೊಂದಿಗೆ ಯುದ್ಧಮಾಡತೊಡಗಿದರು.

06074003a ಭೀಮಸೇನೋಽಪಿ ಸಮರೇ ಸಂಪ್ರಾಪ್ಯ ಸ್ವರಥಂ ಪುನಃ|

06074003c ಸಮಾರುಹ್ಯ ಮಹಾಬಾಹುರ್ಯಯೌ ಯೇನ ತವಾತ್ಮಜಃ||

ಮಹಾಬಾಹು ಭೀಮಸೇನನೂ ಕೂಡ ಸಮರದಲ್ಲಿ ಪುನಃ ತನ್ನ ರಥವನ್ನು ಪಡೆದು ಅದನ್ನೇರಿ ನಿನ್ನ ಮಕ್ಕಳನ್ನು ಎದುರಿಸಿದನು.

06074004a ಪ್ರಗೃಹ್ಯ ಚ ಮಹಾವೇಗಂ ಪರಾಸುಕರಣಂ ದೃಢಂ|

06074004c ಚಿತ್ರಂ ಶರಾಸನಂ ಸಂಖ್ಯೇ ಶರೈರ್ವಿವ್ಯಾಧ ತೇ ಸುತಾನ್||

ಮಹಾವೇಗವುಳ್ಳ ಬಂಗಾರದಿಂದ ಅಲಂಕರಿಸಲ್ಪಟ್ಟ ದೃಢವಾದ ಬಣ್ಣದ ಬಿಲ್ಲನ್ನು ಹಿಡಿದು ರಣದಲ್ಲಿ ನಿನ್ನ ಮಕ್ಕಳನ್ನು ಶರಗಳಿಂದ ಹೊಡೆದನು.

06074005a ತತೋ ದುರ್ಯೋಧನೋ ರಾಜಾ ಭೀಮಸೇನಂ ಮಹಾಬಲಂ|

06074005c ನಾರಾಚೇನ ಸುತೀಕ್ಷ್ಣೇನ ಭೃಶಂ ಮರ್ಮಣ್ಯತಾಡಯತ್||

ಆಗ ರಾಜಾ ದುರ್ಯೋಧನನು ಮಹಾಬಲ ಭೀಮಸೇನನನ್ನು ತೀಕ್ಷ್ಣ ನಾರಾಚಗಳಿಂದ ಮರ್ಮಗಳಿಗೆ ಚೆನ್ನಾಗಿ ಹೊಡೆದನು.

06074006a ಸೋಽತಿವಿದ್ಧೋ ಮಹೇಷ್ವಾಸಸ್ತವ ಪುತ್ರೇಣ ಧನ್ವಿನಾ|

06074006c ಕ್ರೋಧಸಂರಕ್ತನಯನೋ ವೇಗೇನೋತ್ಕ್ಷಿಪ್ಯ ಕಾರ್ಮುಕಂ||

06074007a ದುರ್ಯೋಧನಂ ತ್ರಿಭಿರ್ಬಾಣೈರ್ಬಾಹ್ವೋರುರಸಿ ಚಾರ್ಪಯತ್|

06074007c ಸ ತಥಾಭಿಹತೋ ರಾಜಾ ನಾಚಲದ್ಗಿರಿರಾಡಿವ||

ನಿನ್ನ ಮಗನಿಂದ ಅತಿಯಾಗಿ ಪೆಟ್ಟುತಿಂದ ಆ ಮಹೇಷ್ವಾಸನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ವೇಗದಿಂದ ಧನುಸ್ಸನ್ನು ಎತ್ತಿ ದುರ್ಯೋಧನನನ್ನು ಮೂರುಬಾಣಗಳಿಂದ ಅವನ ಬಾಹುಗಳಿಗೂ ಎದೆಗೂ ಹೊಡೆದನು. ಅವನಿಂದ ಪೆಟ್ಟುತಿಂದರೂ ರಾಜನು ಅಲುಗಾಡದೇ ಪರ್ವತದಂತಿದ್ದನು.

06074008a ತೌ ದೃಷ್ಟ್ವಾ ಸಮರೇ ಕ್ರುದ್ಧೌ ವಿನಿಘ್ನಂತೌ ಪರಸ್ಪರಂ|

06074008c ದುರ್ಯೋಧನಾನುಜಾಃ ಸರ್ವೇ ಶೂರಾಃ ಸಂತ್ಯಕ್ತಜೀವಿತಾಃ||

06074009a ಸಂಸ್ಮೃತ್ಯ ಮಂತ್ರಿತಂ ಪೂರ್ವಂ ನಿಗ್ರಹೇ ಭೀಮಕರ್ಮಣಃ|

06074009c ನಿಶ್ಚಯಂ ಮನಸಾ ಕೃತ್ವಾ ನಿಗ್ರಹೀತುಂ ಪ್ರಚಕ್ರಮುಃ||

ಸಮರದಲ್ಲಿ ಕ್ರುದ್ಧರಾಗಿ ಪರಸ್ಪರರನ್ನು ಹೊಡೆಯುತ್ತಿದ್ದ ಅವರಿಬ್ಬರನ್ನು ನೋಡಿ ಜೀವವನ್ನೇ ತೊರೆಯಲು ಸಿದ್ಧರಾಗಿದ್ದ ದುರ್ಯೋಧನನ ಶೂರ ತಮ್ಮಂದಿರೆಲ್ಲರೂ ಭೀಮನನ್ನು ಹಿಡಿಯುವ ತಮ್ಮ ಹಿಂದಿನ ಉಪಾಯದಂತೆ ಮನಸ್ಸು ಮಾಡಿ ಅವನನ್ನು ಸೆರೆಹಿಡಿಯಲು ಪ್ರಯತ್ನಿಸಿದರು.

06074010a ತಾನಾಪತತ ಏವಾಜೌ ಭೀಮಸೇನೋ ಮಹಾಬಲಃ|

06074010c ಪ್ರತ್ಯುದ್ಯಯೌ ಮಹಾರಾಜ ಗಜಃ ಪ್ರತಿಗಜಾನಿವ||

ಮಹಾರಾಜ! ಅವರು ಅವನ ಮೇಲೆ ಎರಗಲು ಮಹಾಬಲ ಭೀಮಸೇನನು ಎದುರಾಳಿ ಆನೆಯನ್ನು ಇನ್ನೊಂದು ಆನೆಯು ಹೇಗೋ ಹಾಗೆ ಎದುರಿಸಿ ಯುದ್ಧ ಮಾಡಿದನು.

06074011a ಭೃಶಂ ಕ್ರುದ್ಧಶ್ಚ ತೇಜಸ್ವೀ ನಾರಾಚೇನ ಸಮರ್ಪಯತ್|

06074011c ಚಿತ್ರಸೇನಂ ಮಹಾರಾಜ ತವ ಪುತ್ರಂ ಮಹಾಯಶಾಃ||

ತುಂಬಾ ಕ್ರುದ್ಧನಾದ ಆ ತೇಜಸ್ವಿಯು ಮಹಾಯಶಸ್ವಿ ನಿನ್ನ ಮಗ ಚಿತ್ರಸೇನನನ್ನು ನಾರಾಚಗಳಿಂದ ಹೊಡೆದನು.

06074012a ತಥೇತರಾಂಸ್ತವ ಸುತಾಂಸ್ತಾಡಯಾಮಾಸ ಭಾರತ|

06074012c ಶರೈರ್ಬಹುವಿಧೈಃ ಸಂಖ್ಯೇ ರುಕ್ಮಪುಂಖೈಃ ಸುವೇಗಿತೈಃ||

ಭಾರತ! ಹಾಗೆಯೇ ನಿನ್ನ ಇತರ ಮಕ್ಕಳನ್ನೂ ವೇಗವುಳ್ಳ ಅನೇಕ ವಿಧದ ರುಕ್ಮಪುಂಖ ಶರಗಳಿಂದ ಹೊಡೆದನು.

06074013a ತತಃ ಸಂಸ್ಥಾಪ್ಯ ಸಮರೇ ಸ್ವಾನ್ಯನೀಕಾನಿ ಸರ್ವಶಃ|

06074013c ಅಭಿಮನ್ಯುಪ್ರಭೃತಯಸ್ತೇ ದ್ವಾದಶ ಮಹಾರಥಾಃ||

06074014a ಪ್ರೇಷಿತಾ ಧರ್ಮರಾಜೇನ ಭೀಮಸೇನಪದಾನುಗಾಃ|

06074014c ಪ್ರತ್ಯುದ್ಯಯುರ್ಮಹಾರಾಜ ತವ ಪುತ್ರಾನ್ಮಹಾಬಲಾನ್||

ಮಹಾರಾಜ! ಆಗ ಭೀಮಸೇನನನ್ನು ಅನುಸರಿಸಿ ಹೋಗಬೇಕೆಂದು ಧರ್ಮರಾಜನು ಅಭಿಮನ್ಯುವಿನ ನಾಯಕತ್ವದಲ್ಲಿ ಕಳುಹಿಸಿದ್ದ ಹನ್ನೆರಡು ಮಹಾರಥರು ತಮ್ಮ ಎಲ್ಲ ಸೇನೆಗಳೊಂದಿಗೆ ಬಂದು ನಿನ್ನ ಮಹಾಬಲ ಪುತ್ರರನ್ನು ಎದುರಿಸಿ ಯುದ್ಧಮಾಡಿದರು.

06074015a ದೃಷ್ಟ್ವಾ ರಥಸ್ಥಾಂಸ್ತಾಂ ಶೂರಾನ್ಸೂರ್ಯಾಗ್ನಿಸಮತೇಜಸಃ|

06074015c ಸರ್ವಾನೇವ ಮಹೇಷ್ವಾಸಾಮ್ಭ್ರಾಜಮಾನಾಂ ಶ್ರಿಯಾ ವೃತಾನ್||

06074016a ಮಹಾಹವೇ ದೀಪ್ಯಮಾನಾನ್ಸುವರ್ಣಕವಚೋಜ್ಜ್ವಲಾನ್|

06074016c ತತ್ಯಜುಃ ಸಮರೇ ಭೀಮಂ ತವ ಪುತ್ರಾ ಮಹಾಬಲಾಃ||

ಆ ಶೂರರ ಸೂರ್ಯಾಗ್ನಿಸಮತೇಜಸ್ಸಿನ ರಥಗಳನ್ನೂ, ಶ್ರೀಯಿಂದ ಆವೃತರಾಗಿ ಬೆಳಗುತ್ತಿರುವ ಮತ್ತು ಮಹಾಹವದಲ್ಲಿ ಸುವರ್ಣಕವಚಗಳ ಬೆಳಕಿನಿಂದ ಬೆಳಗುತ್ತಿರುವ ಆ ಮಹೇಷ್ವಾಸರನ್ನೂ ನೋಡಿ ನಿನ್ನ ಮಹಾಬಲ ಪುತ್ರರು ಸಮರದಲ್ಲಿ ಅವನನ್ನು ತ್ಯಜಿಸಿದರು.

06074017a ತಾನ್ನಾಮೃಷ್ಯತ ಕೌಂತೇಯೋ ಜೀವಮಾನಾ ಗತಾ ಇತಿ|

06074017c ಅನ್ವೀಯ ಚ ಪುನಃ ಸರ್ವಾಂಸ್ತವ ಪುತ್ರಾನಪೀಡಯತ್||

ಅವರು ಜೀವಸಹಿತರಾಗಿ ಹೊರಟುಹೋದುದನ್ನು ಕೌಂತೇಯನು ಸಹಿಸಲಿಲ್ಲ. ಅವರನ್ನು ಬೆನ್ನಟ್ಟಿಹೋಗಿ ನಿನ್ನ ಪುತ್ರರನ್ನು ಪುನಃ ಪೀಡಿಸಿದನು.

06074018a ಅಥಾಭಿಮನ್ಯುಂ ಸಮರೇ ಭೀಮಸೇನೇನ ಸಂಗತಂ|

06074018c ಪಾರ್ಷತೇನ ಚ ಸಂಪ್ರೇಕ್ಷ್ಯ ತವ ಸೈನ್ಯೇ ಮಹಾರಥಾಃ||

06074019a ದುರ್ಯೋಧನಪ್ರಭೃತಯಃ ಪ್ರಗೃಹೀತಶರಾಸನಾಃ|

06074019c ಭೃಶಮಶ್ವೈಃ ಪ್ರಜವಿತೈಃ ಪ್ರಯಯುರ್ಯತ್ರ ತೇ ರಥಾಃ||

ಆಗ ಸಮರದಲ್ಲಿ ಭೀಮಸೇನ ಮತ್ತು ಪಾರ್ಷತರೊಡನೆ ಅಭಿಮನ್ಯುವು ಇರುವುದನ್ನು ನೋಡಿ ನಿನ್ನ ಸೇನೆಯಲ್ಲಿದ್ದ ದುರ್ಯೋಧನನೇ ಮೊದಲಾದ ಮಹಾರಥರು ಧನ್ನುಸ್ಸುಗಳನ್ನು ಹಿಡಿದು ಉತ್ತಮ ಅಶ್ವಗಳಿಂದ ಎಳೆಯಲ್ಪಟ್ಟ ರಥಗಳಲ್ಲಿ ಅವರಿರುವಲ್ಲಿಗೆ ಧಾವಿಸಿದರು.

06074020a ಅಪರಾಹ್ಣೇ ತತೋ ರಾಜನ್ಪ್ರಾವರ್ತತ ಮಹಾನ್ರಣಃ|

06074020c ತಾವಕಾನಾಂ ಚ ಬಲಿನಾಂ ಪರೇಷಾಂ ಚೈವ ಭಾರತ||

ರಾಜನ್! ಭಾರತ! ಆಗ ಅಪರಾಹ್ಣದಲ್ಲಿ ನಿನ್ನವರ ಮತ್ತು ಬಲಶಾಲಿ ಶತ್ರುಗಳ ನಡುವೆ ಮಹಾ ರಣವಾಯಿತು.

06074021a ಅಭಿಮನ್ಯುರ್ವಿಕರ್ಣಸ್ಯ ಹಯಾನ್ ಹತ್ವಾ ಮಹಾಜವಾನ್|

06074021c ಅಥೈನಂ ಪಂಚವಿಂಶತ್ಯಾ ಕ್ಷುದ್ರಕಾಣಾಂ ಸಮಾಚಿನೋತ್||

ಅಭಿಮನ್ಯುವು ವಿಕರ್ಣನ ಮಹಾವೇಗದ ಕುದುರೆಗಳನ್ನು ಕೊಂದು ಇಪ್ಪತ್ತೈದು ಕ್ಷುದ್ರಕಗಳಿಂದ ಅವನನ್ನು ಹೊಡೆದನು.

06074022a ಹತಾಶ್ವಂ ರಥಮುತ್ಸೃಜ್ಯ ವಿಕರ್ಣಸ್ತು ಮಹಾರಥಃ|

06074022c ಆರುರೋಹ ರಥಂ ರಾಜಂಶ್ಚಿತ್ರಸೇನಸ್ಯ ಭಾಸ್ವರಂ||

ರಾಜನ್! ಅಶ್ವವು ಹತವಾಗಲು ಮಹಾರಥ ವಿಕರ್ಣನು ಚಿತ್ರಸೇನನ ಹೊಳೆಯುವ ರಥವನ್ನು ಏರಿದನು.

06074023a ಸ್ಥಿತಾವೇಕರಥೇ ತೌ ತು ಭ್ರಾತರೌ ಕುರುವರ್ಧನೌ|

06074023c ಆರ್ಜುನಿಃ ಶರಜಾಲೇನ ಚಾದಯಾಮಾಸ ಭಾರತ||

ಭಾರತ! ಒಂದೇ ರಥದಲ್ಲಿ ನಿಂತಿದ್ದ ಆ ಇಬ್ಬರು ಕುರುವರ್ಧನ ಸಹೋದರರನ್ನು ಆರ್ಜುನಿಯು ಶರಜಾಲಗಳಿಂದ ಮುಚ್ಚಿದನು.

06074024a ದುರ್ಜಯೋಽಥ ವಿಕರ್ಣಶ್ಚ ಕಾರ್ಷ್ಣಿಂ ಪಂಚಭಿರಾಯಸೈಃ|

06074024c ವಿವ್ಯಧಾತೇ ನ ಚಾಕಂಪತ್ಕಾರ್ಷ್ಣಿರ್ಮೇರುರಿವಾಚಲಃ||

ಆಗ ದುರ್ಜಯ ಮತ್ತು ವಿಕರ್ಣರು ಕಾರ್ಷ್ಣಿಯನ್ನು ಐದು ಆಯಸಗಳಿಂದ ಹೊಡೆದರೂ ಕಾರ್ಷ್ಣಿಯು ಮೇರುವಿನಂತೆ ಅಲುಗಾಡದೇ ಅಚಲವಾಗಿದ್ದನು.

06074025a ದುಃಶಾಸನಸ್ತು ಸಮರೇ ಕೇಕಯಾನ್ಪಂಚ ಮಾರಿಷ|

06074025c ಯೋಧಯಾಮಾಸ ರಾಜೇಂದ್ರ ತದದ್ಭುತಮಿವಾಭವತ್||

ಮಾರಿಷ! ರಾಜೇಂದ್ರ! ದುಃಶಾಸನನಾದರೋ ಸಮರದಲ್ಲಿ ಐವರು ಕೇಕಯರೊಂದಿಗೆ ಯುದ್ಧಮಾಡತೊಡಗಿದನು. ಅದು ಅದ್ಭುತವಾಗಿತ್ತು.

06074026a ದ್ರೌಪದೇಯಾ ರಣೇ ಕ್ರುದ್ಧಾ ದುರ್ಯೋಧನಮವಾರಯನ್|

06074026c ಏಕೈಕಸ್ತ್ರಿಭಿರಾನರ್ಚತ್ಪುತ್ರಂ ತವ ವಿಶಾಂ ಪತೇ||

ವಿಶಾಂಪತೇ! ದ್ರೌಪದೇಯರು ರಣದಲ್ಲಿ ಕ್ರುದ್ಧರಾಗಿ ನಿನ್ನ ಮಗ ದುರ್ಯೋಧನನನ್ನು ಸುತ್ತುವರೆದು ಒಬ್ಬೊಬ್ಬರೂ ಮೂರು ಬಾಣಗಳಿಂದ ಹೊಡೆದರು.

06074027a ಪುತ್ರೋಽಪಿ ತವ ದುರ್ಧರ್ಷೋ ದ್ರೌಪದ್ಯಾಸ್ತನಯಾನ್ರಣೇ|

06074027c ಸಾಯಕೈರ್ನಿಶಿತೈ ರಾಜನ್ನಾಜಘಾನ ಪೃಥಕ್ಪೃಥಕ್||

ರಾಜನ್! ನಿನ್ನ ಮಗ ದುರ್ಧರ್ಷನೂ ಕೂಡ ರಣದಲ್ಲಿ ದ್ರೌಪದೇಯರನ್ನು ಪ್ರತ್ಯೇಕ ಪ್ರತ್ಯೇಕವಾಗಿ ನಿಶಿತ ಸಾಯಕಗಳಿಂದ ಹೊಡೆದನು.

06074028a ತೈಶ್ಚಾಪಿ ವಿದ್ಧಃ ಶುಶುಭೇ ರುಧಿರೇಣ ಸಮುಕ್ಷಿತಃ|

06074028c ಗಿರಿಪ್ರಸ್ರವಣೈರ್ಯದ್ವದ್ಗಿರಿರ್ಧಾತುವಿಮಿಶ್ರಿತೈಃ||

ಅವರಿಂದಲೂ ಪೆಟ್ಟುತಿಂದ ಅವನು ರಕ್ತದಿಂದ ತೋಯ್ದು ಗೈರಿಕಾದಿ ಧಾತುಗಳ ಸಮ್ಮಿಶ್ರಣಗಳಿಂದ ಕೂಡಿದ ಝರಿಗಳಿರುವ ಗಿರಿಯಂತೆ ಶೋಭಿಸಿದನು.

06074029a ಭೀಷ್ಮೋಽಪಿ ಸಮರೇ ರಾಜನ್ಪಾಂಡವಾನಾಮನೀಕಿನೀಂ|

06074029c ಕಾಲಯಾಮಾಸ ಬಲವಾನ್ಪಾಲಃ ಪಶುಗಣಾನಿವ||

ರಾಜನ್! ಭೀಷ್ಮನೂ ಕೂಡ ಸಮರದಲ್ಲಿ ಗೋಪಾಲಕನು ಹಸುಗಳನ್ನು ತರುಬುವಂತೆ ಪಾಂಡವರ ಸೇನೆಯನ್ನು ತಡೆದಿದ್ದನು.

06074030a ತತೋ ಗಾಂಡೀವನಿರ್ಘೋಷಃ ಪ್ರಾದುರಾಸೀದ್ವಿಶಾಂ ಪತೇ|

06074030c ದಕ್ಷಿಣೇನ ವರೂಥಿನ್ಯಾಃ ಪಾರ್ಥಸ್ಯಾರೀನ್ವಿನಿಘ್ನತಃ||

ಆಗ ವಿಶಾಂಪತೇ! ರಣಭೂಮಿಯ ದಕ್ಷಿಣಭಾಗದಿಂದ ಸೇನೆಗಳನ್ನು ಸಂಹರಿಸುತ್ತಿದ್ದ ಪಾರ್ಥನ ಗಾಂಡೀವ ನಿರ್ಘೋಷವು ಕೇಳಿಬಂದಿತು.

06074031a ಉತ್ತಸ್ಥುಃ ಸಮರೇ ತತ್ರ ಕಬಂಧಾನಿ ಸಮಂತತಃ|

06074031c ಕುರೂಣಾಂ ಚಾಪಿ ಸೈನ್ಯೇಷು ಪಾಂಡವಾನಾಂ ಚ ಭಾರತ||

ಭಾರತ! ಅಲ್ಲಿ ಸಮರದಲ್ಲಿ ಕುರುಗಳ ಮತ್ತು ಪಾಂಡವರ ಸೇನೆಗಳಲ್ಲಿ ಎಲ್ಲ ಕಡೆ ಸಂಹೃತರಾದವರ ಮುಂಡಗಳು ಎದ್ದು ನಿಂತಿದ್ದವು.

06074032a ಶೋಣಿತೋದಂ ರಥಾವರ್ತಂ ಗಜದ್ವೀಪಂ ಹಯೋರ್ಮಿಣಂ|

06074032c ರಥನೌಭಿರ್ನರವ್ಯಾಘ್ರಾಃ ಪ್ರತೇರುಃ ಸೈನ್ಯಸಾಗರಂ||

ಸೈನ್ಯವೆಂಬ ಸಾಗರದಲ್ಲಿ ರಕ್ತವೇ ನೀರಾಗಿತ್ತು. ಬಾಣಗಳು ಸುಳಿಯಾಗಿದ್ದವು. ಆನೆಗಳು ದ್ವೀಪಗಳಂತಿದ್ದವು. ಕುದುರೆಗಳು ಅಲೆಗಳಾಗಿದ್ದವು. ರಥಗಳು ನರವ್ಯಾಘ್ರರು ದಾಟಲು ಬಳಸಿದ ನೌಕೆಗಳಂತಿದ್ದವು.

06074033a ಚಿನ್ನಹಸ್ತಾ ವಿಕವಚಾ ವಿದೇಹಾಶ್ಚ ನರೋತ್ತಮಾಃ|

06074033c ಪತಿತಾಸ್ತತ್ರ ದೃಶ್ಯಂತೇ ಶತಶೋಽಥ ಸಹಸ್ರಶಃ||

ಅಲ್ಲಿ ಕೈಗಳು ಕತ್ತರಿಸಿದ, ಕವಚಗಳಿಲ್ಲದ, ದೇಹವೇ ಇಲ್ಲದ ನೂರಾರು ಸಾವಿರಾರು ನರೋತ್ತಮರು ಅಲ್ಲಿ ಬಿದ್ದಿರುವುದು ಕಾಣುತ್ತಿತ್ತು.

06074034a ನಿಹತೈರ್ಮತ್ತಮಾತಂಗೈಃ ಶೋಣಿತೌಘಪರಿಪ್ಲುತೈಃ|

06074034c ಭೂರ್ಭಾತಿ ಭರತಶ್ರೇಷ್ಠ ಪರ್ವತೈರಾಚಿತಾ ಯಥಾ||

ಭಾರತ! ರಕ್ತದಿಂದ ತೋಯಿಸಲ್ಪಟ್ಟು ನಿಹತವಾದ ಮತ್ತ ಮಾತಂಗಗಳು ನೆಲದ ಮೇಲೆ ಪರ್ವತಗಳಂತೆ ತೋರುತ್ತಿದ್ದವು.

06074035a ತತ್ರಾದ್ಭುತಮಪಶ್ಯಾಮ ತವ ತೇಷಾಂ ಚ ಭಾರತ|

06074035c ನ ತತ್ರಾಸೀತ್ಪುಮಾನ್ಕಶ್ಚಿದ್ಯೋ ಯೋದ್ಧುಂ ನಾಭಿಕಾಂಕ್ಷತಿ||

ಭಾರತ! ಅಂತಹ ಅಲ್ಲಿಯೂ ನಾವು ಒಂದು ಪರಮಾದ್ಭುತವನ್ನು ಕಂಡೆವು. ನಿನ್ನವರಲ್ಲಿಯಾಗಲೀ ಅವರಲ್ಲಿಯಾಗಲೀ ಯುದ್ಧವು ಬೇಡವೆಂದು ಹೇಳುವವರು ಯಾರೂ ಇರಲಿಲ್ಲ.

06074036a ಏವಂ ಯುಯುಧಿರೇ ವೀರಾಃ ಪ್ರಾರ್ಥಯಾನಾ ಮಹದ್ಯಶಃ|

06074036c ತಾವಕಾಃ ಪಾಂಡವೈಃ ಸಾರ್ಧಂ ಕಾಂಕ್ಷಮಾಣಾ ಜಯಂ ಯುಧಿ||

ಹೀಗೆ ಮಹಾಯಶಸ್ಸನ್ನು ಬಯಸುತ್ತಾ ನಿನ್ನ ವೀರರು ಯುದ್ಧದಲ್ಲಿ ಜಯವನ್ನೇ ಬಯಸಿ ಪಾಂಡವರೊಂದಿಗೆ ಯುದ್ಧಮಾಡಿದರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಂಕುಲಯುದ್ಧೇ ಚತುಃಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ಎಪ್ಪತ್ನಾಲ್ಕನೇ ಅಧ್ಯಾಯವು.

Image result for flowers against white background

Comments are closed.