Bhishma Parva: Chapter 70

ಭೀಷ್ಮ ಪರ್ವ: ಭೀಷ್ಮವಧ ಪರ್ವ

೭೦

ಭೂರಿಶ್ರವಸನು ಸಾತ್ಯಕಿಯ ಹತ್ತು ಮಕ್ಕಳನ್ನು ಸಂಹರಿಸಿದುದು (೧-೨೪). ಐದನೆಯ ದಿನದ ಯುದ್ಧ ಸಮಾಪ್ತಿ (೨೫-೩೭).

06070001 ಸಂಜಯ ಉವಾಚ|

06070001a ಅಥ ರಾಜನ್ಮಹಾಬಾಹುಃ ಸಾತ್ಯಕಿರ್ಯುದ್ಧದುರ್ಮದಃ|

06070001c ವಿಕೃಷ್ಯ ಚಾಪಂ ಸಮರೇ ಭಾರಸಾಧನಮುತ್ತಮಂ||

06070002a ಪ್ರಾಮುಂಚತ್ಪುಂಖಸಂಯುಕ್ತಾಂ ಶರಾನಾಶೀವಿಷೋಪಮಾನ್|

06070002c ಪ್ರಕಾಶಂ ಲಘು ಚಿತ್ರಂ ಚ ದರ್ಶಯನ್ನಸ್ತ್ರಲಾಘವಂ||

ಸಂಜಯನು ಹೇಳಿದನು: “ರಾಜನ್! ಆಗ ಮಹಾಬಾಹು ಯುದ್ಧದುರ್ಮದ ಸಾತ್ಯಕಿಯು ಸಮರದಲ್ಲಿ ಉತ್ತವಾದ ಭಾರಸಾಧನ ಚಾಪವನ್ನು ಎಳೆದು ಪುಂಖಗಳನ್ನು ಹೊಂದಿದ್ದ ಸರ್ಪದ ವಿಷಸಮಾನ ಶರಗಳನ್ನು ಪ್ರಯೋಗಿಸಿ ಅವನ ವಿಚಿತ್ರ ಲಘು ಹಸ್ತಲಾಘವವನ್ನು ಪ್ರಕಟಪಡಿಸಿದನು.

06070003a ತಸ್ಯ ವಿಕ್ಷಿಪತಶ್ಚಾಪಂ ಶರಾನನ್ಯಾಂಶ್ಚ ಮುಂಚತಃ|

06070003c ಆದದಾನಸ್ಯ ಭೂಯಶ್ಚ ಸಂದಧಾನಸ್ಯ ಚಾಪರಾನ್||

06070004a ಕ್ಷಿಪತಶ್ಚ ಶರಾನಸ್ಯ ರಣೇ ಶತ್ರೂನ್ವಿನಿಘ್ನತಃ|

06070004c ದದೃಶೇ ರೂಪಮತ್ಯರ್ಥಂ ಮೇಘಸ್ಯೇವ ಪ್ರವರ್ಷತಃ||

ಅವನು ರಣದಲ್ಲಿ ಶತ್ರುಗಳ ಮೇಲೆ ಶರಗಳನ್ನು ಎಸೆದು ಹೊಡೆಯುವಾಗ ಎಷ್ಟು ಜೋರಾಗಿ ಚಾಪವನ್ನು ಎಳೆದು ಶರಗಳನ್ನು ಪ್ರಯೋಗಿಸಿ ಪುನಃ ಇತರ ಶರಗಳನ್ನು ಹೂಡಿ ಹೊಡೆಯುತ್ತಿದ್ದನೆಂದರೆ ಅವನು ಮಳೆಸುರಿಸುತ್ತಿರುವ ಮೇಘದಂತೆಯೇ ತೋರಿದನು.

06070005a ತಮುದೀರ್ಯಂತಮಾಲೋಕ್ಯ ರಾಜಾ ದುರ್ಯೋಧನಸ್ತತಃ|

06070005c ರಥಾನಾಮಯುತಂ ತಸ್ಯ ಪ್ರೇಷಯಾಮಾಸ ಭಾರತ||

ಭಾರತ! ಅವನು ಆ ರೀತಿ ಉರಿಯುತ್ತಿರುವುದನ್ನು ಅವಲೋಕಿಸಿದ ರಾಜಾ ದುರ್ಯೋಧನನು ಹತ್ತು ಸಾವಿರ ರಥಗಳನ್ನು ಅವನಿದ್ದಲ್ಲಿಗೆ ಕಳುಹಿಸಿದನು.

06070006a ತಾಂಸ್ತು ಸರ್ವಾನ್ಮಹೇಷ್ವಾಸಾನ್ಸಾತ್ಯಕಿಃ ಸತ್ಯವಿಕ್ರಮಃ|

06070006c ಜಘಾನ ಪರಮೇಷ್ವಾಸೋ ದಿವ್ಯೇನಾಸ್ತ್ರೇಣ ವೀರ್ಯವಾನ್||

ಆ ಎಲ್ಲ ಮಹೇಷ್ವಾಸರನ್ನೂ ಸತ್ಯವಿಕ್ರಮ ಪರಮೇಷ್ವಾಸ ವೀರ್ಯವಾನ್ ಸಾತ್ಯಕಿಯು ದಿವ್ಯಾಸ್ತ್ರಗಳಿಂದ ಸಂಹರಿಸಿದನು.

06070007a ಸ ಕೃತ್ವಾ ದಾರುಣಂ ಕರ್ಮ ಪ್ರಗೃಹೀತಶರಾಸನಃ|

06070007c ಆಸಸಾದ ತತೋ ವೀರೋ ಭೂರಿಶ್ರವಸಮಾಹವೇ||

ಆ ದಾರುಣಕರ್ಮವನ್ನು ಮಾಡಿ ಬಿಲ್ಲನ್ನು ಹಿಡಿದು ಆ ವೀರನು ಆಹವದಲ್ಲಿ ಭೂರಿಶ್ರವನನ್ನು ಎದುರಿಸಿದನು.

06070008a ಸ ಹಿ ಸಂದೃಶ್ಯ ಸೇನಾಂ ತಾಂ ಯುಯುಧಾನೇನ ಪಾತಿತಾಂ|

06070008c ಅಭ್ಯಧಾವತ ಸಂಕ್ರುದ್ಧಃ ಕುರೂಣಾಂ ಕೀರ್ತಿವರ್ಧನಃ||

ಆ ಕುರುಗಳ ಕೀರ್ತಿವರ್ಧನನಾದರೋ ಸೇನೆಯು ಯುಯುಧಾನನಿಂದ ಉರುಳಿಸಲ್ಪಡುತ್ತಿದ್ದುದನ್ನು ನೋಡಿ ಸಂಕ್ರುದ್ಧನಾಗಿ ರಭಸದಿಂದ ಅವನ ಮೇಲೆ ನುಗ್ಗಿದನು.

06070009a ಇಂದ್ರಾಯುಧಸವರ್ಣಂ ತತ್ಸ ವಿಸ್ಫಾರ್ಯ ಮಹದ್ಧನುಃ|

06070009c ವ್ಯಸೃಜದ್ವಜ್ರಸಂಕಾಶಾಂ ಶರಾನಾಶೀವಿಷೋಪಮಾನ್||

06070009e ಸಹಸ್ರಶೋ ಮಹಾರಾಜ ದರ್ಶಯನ್ಪಾಣಿಲಾಘವಂ||

ಮಹಾರಾಜ! ಅವನು ಕಾಮನಬಿಲ್ಲಿನ ಬಣ್ಣದ ಮಹಾಧನುಸ್ಸನ್ನು ಟೇಂಕರಿಸಿ ಸಹಸ್ರಾರು ವಜ್ರಸದೃಶ ಸರ್ಪವಿಷಸಮ ಶರಗಳನ್ನು ಬಿಟ್ಟು ಹಸ್ತಲಾಘವವನ್ನು ತೋರಿಸಿದನು.

06070010a ಶರಾಂಸ್ತಾನ್ಮೃತ್ಯುಸಂಸ್ಪರ್ಶಾನ್ಸಾತ್ಯಕೇಸ್ತು ಪದಾನುಗಾಃ|

06070010c ನ ವಿಷೇಹುಸ್ತದಾ ರಾಜನ್ದುದ್ರುವುಸ್ತೇ ಸಮಂತತಃ|

06070010e ವಿಹಾಯ ಸಮರೇ ರಾಜನ್ಸಾತ್ಯಕಿಂ ಯುದ್ಧದುರ್ಮದಂ||

ರಾಜನ್! ಸಾತ್ಯಕಿಯನ್ನು ಅನುಸರಿಸಿ ಬಂದವರು ಮೃತ್ಯುವಿನ ಸ್ಪರ್ಶದಂತಿದ್ದ ಆ ಶರಗಳನ್ನು ತಡೆಯಲಾಗದೇ, ಸಮರದಲ್ಲಿ ಯುದ್ಧದುರ್ಮದ ಸಾತ್ಯಕಿಯನ್ನು ಬಿಟ್ಟು ಎಲ್ಲಕಡೆ ಪಲಾಯನಮಾಡಿದರು.

06070011a ತಂ ದೃಷ್ಟ್ವಾ ಯುಯುಧಾನಸ್ಯ ಸುತಾ ದಶ ಮಹಾಬಲಾಃ|

06070011c ಮಹಾರಥಾಃ ಸಮಾಖ್ಯಾತಾಶ್ಚಿತ್ರವರ್ಮಾಯುಧಧ್ವಜಾಃ||

06070012a ಸಮಾಸಾದ್ಯ ಮಹೇಷ್ವಾಸಂ ಭೂರಿಶ್ರವಸಮಾಹವೇ|

06070012c ಊಚುಃ ಸರ್ವೇ ಸುಸಂರಬ್ಧಾ ಯೂಪಕೇತುಂ ಮಹಾರಣೇ||

ಅದನ್ನು ನೋಡಿ ಬಣ್ಣಬಣ್ಣದ ಕವಚಗಳು, ಆಯುಧಗಳು ಮತ್ತು ಧ್ವಜಗಳನ್ನು ಹೊಂದಿದ್ದ ಯುಯುಧಾನನ ಹತ್ತು ಮಹಾಬಲ ಮಹಾರಥ ಮಕ್ಕಳು ಒಟ್ಟಾಗಿ ಆಹವದಲ್ಲಿ ಮಹೇಷ್ವಾಸ ಭೂರಿಶ್ರವನನ್ನು ಎದುರಿಸಿ ಎಲ್ಲರೂ ಸಂರಬ್ಧರಾಗಿ ಮಹಾರಣದಲ್ಲಿ ಯೂಪಕೇತುವಿಗೆ ಹೇಳಿದರು:

06070013a ಭೋ ಭೋ ಕೌರವದಾಯಾದ ಸಹಾಸ್ಮಾಭಿರ್ಮಹಾಬಲ|

06070013c ಏಹಿ ಯುಧ್ಯಸ್ವ ಸಂಗ್ರಾಮೇ ಸಮಸ್ತೈಃ ಪೃಥಗೇವ ವಾ||

“ಭೋ! ಭೋ! ಕೌರವದಾಯಾದ! ಮಹಾಬಲ! ಬಾ! ನಮ್ಮೊಡನೆ ಯುದ್ಧಮಾಡು! ಒಟ್ಟಿಗೇ ನಮ್ಮೊಡನೆ ಯುದ್ಧಮಾಡು ಅಥವಾ ಒಬ್ಬೊಬ್ಬರೊಡನೆ ಯುದ್ಧಮಾಡು.

06070014a ಅಸ್ಮಾನ್ವಾ ತ್ವಂ ಪರಾಜಿತ್ಯ ಯಶಃ ಪ್ರಾಪ್ನುಹಿ ಸಂಯುಗೇ|

06070014c ವಯಂ ವಾ ತ್ವಾಂ ಪರಾಜಿತ್ಯ ಪ್ರೀತಿಂ ದಾಸ್ಯಾಮಹೇ ಪಿತುಃ||

ನಮ್ಮನ್ನು ಪರಾಜಯಗೊಳಿಸಿ ನೀನು ಸಂಯುಗದಲ್ಲಿ ಯಶಸ್ಸನ್ನು ಗಳಿಸುತ್ತೀಯೆ. ಅಥವಾ ನಾವು ನಿನ್ನನ್ನು ಪರಾಜಯಗೊಳಿಸಿ ನಮ್ಮ ತಂದೆಯ ಪ್ರೀತಿಯನ್ನು ಗಳಿಸುತ್ತೇವೆ.”

06070015a ಏವಮುಕ್ತಸ್ತದಾ ಶೂರೈಸ್ತಾನುವಾಚ ಮಹಾಬಲಃ|

06070015c ವೀರ್ಯಶ್ಲಾಘೀ ನರಶ್ರೇಷ್ಠಸ್ತಾನ್ದೃಷ್ಟ್ವಾ ಸಮುಪಸ್ಥಿತಾನ್||

ಇದನ್ನು ಕೇಳಿ ಆ ಮಹಾಬಲ ವೀರ್ಯಶ್ಲಾಘೀ ನರಶ್ರೇಷ್ಠನು ಒಟ್ಟಾಗಿರುವ ಅವರನ್ನು ನೋಡಿ ಆ ಶೂರರಿಗೆ ಹೇಳಿದನು:

06070016a ಸಾಧ್ವಿದಂ ಕಥ್ಯತೇ ವೀರಾ ಯದೇವಂ ಮತಿರದ್ಯ ವಃ|

06070016c ಯುಧ್ಯಧ್ವಂ ಸಹಿತಾ ಯತ್ತಾ ನಿಹನಿಷ್ಯಾಮಿ ವೋ ರಣೇ||

“ವೀರರೇ! ಒಳ್ಳೆಯದಾಗಿಯೇ ಹೇಳಿದ್ದೀರಿ. ಅದೇ ನಿಮ್ಮ ಬಯಕೆಯಾದರೆ ಎಲ್ಲರೂ ಒಟ್ಟಾಗಿ ಪ್ರಯತ್ನಪಟ್ಟು ಯುದ್ಧಮಾಡಿ. ನಿಮ್ಮನ್ನು ರಣದಲ್ಲಿ ಸಂಹರಿಸುತ್ತೇನೆ.”

06070017a ಏವಮುಕ್ತಾ ಮಹೇಷ್ವಾಸಾಸ್ತೇ ವೀರಾಃ ಕ್ಷಿಪ್ರಕಾರಿಣಃ|

06070017c ಮಹತಾ ಶರವರ್ಷೇಣ ಅಭ್ಯವರ್ಷನ್ನರಿಂದಮಂ||

ಆ ಮಹೇಷ್ವಾಸನು ಅವರಿಗೆ ಹೀಗೆ ಹೇಳಲು ಆ ವೀರ ಕ್ಷಿಪ್ರಕಾರಿಣರು ಆ ಅರಿಂದಮನ ಮೇಲೆ ಮಹಾ ಶರವರ್ಷಗಳನ್ನು ಸುರಿಸಿದರು.

06070018a ಅಪರಾಹ್ಣೇ ಮಹಾರಾಜ ಸಂಗ್ರಾಮಸ್ತುಮುಲೋಽಭವತ್|

06070018c ಏಕಸ್ಯ ಚ ಬಹೂನಾಂ ಚ ಸಮೇತಾನಾಂ ರಣಾಜಿರೇ||

ಮಹಾರಾಜ! ಆ ಅಪರಾಹ್ಣದಲ್ಲಿ ಅವನೊಬ್ಬನ ಮತ್ತು ಒಟ್ಟಾಗಿರುವ ಅವರೆಲ್ಲರ ನಡುವೆ ರಣದಲ್ಲಿ ತುಮುಲ ಸಂಗ್ರಾಮವು ನಡೆಯಿತು.

06070019a ತಮೇಕಂ ರಥಿನಾಂ ಶ್ರೇಷ್ಠಂ ಶರವರ್ಷೈರವಾಕಿರನ್|

06070019c ಪ್ರಾವೃಷೀವ ಮಹಾಶೈಲಂ ಸಿಷಿಚುರ್ಜಲದಾ ನೃಪ||

ನೃಪ! ಮಹಾಶೈಲವನ್ನು ಮೋಡಗಳು ಮುಸುಕಿ ಮಳೆಸುರಿಸುವಂತೆ ಅವರು ಆ ಒಬ್ಬನೇ ಶ್ರೇಷ್ಠ ರಥಿಯನ್ನು ಶರವರ್ಷಗಳಿಂದ ಮುಚ್ಚಿದರು.

06070020a ತೈಸ್ತು ಮುಕ್ತಾಂ ಶರೌಘಾಂಸ್ತಾನ್ಯಮದಂಡಾಶನಿಪ್ರಭಾನ್|

06070020c ಅಸಂಪ್ರಾಪ್ತಾನಸಂಪ್ರಾಪ್ತಾಂಶ್ಚಿಚ್ಛೇದಾಶು ಮಹಾರಥಃ||

ಆದರೆ ಅವರು ಪ್ರಯೋಗಿಸಿದ ಆ ಯಮದಂಡದಂತೆ ಹೊಳೆಯುತ್ತಿದ್ದ ಶರಗಳ ಸಾಲುಗಳನ್ನು ಅವುಗಳು ಬಂದು ತಲುಪುವುದರೊಳಗೇ ಮಹಾರಥನು ಕತ್ತರಿಸಿದನು.

06070021a ತತ್ರಾದ್ಭುತಮಪಶ್ಯಾಮ ಸೌಮದತ್ತೇಃ ಪರಾಕ್ರಮಂ|

06070021c ಯದೇಕೋ ಬಹುಭಿರ್ಯುದ್ಧೇ ಸಮಸಜ್ಜದಭೀತವತ್||

ಭೀತನಾಗದೇ ಒಬ್ಬನೇ ಅನೇಕರೊಂದಿಗೆ ಯುದ್ಧಮಾಡುತ್ತಿರುವ ಸೌಮದತ್ತಿಯ ಅದ್ಭುತ ಪರಾಕ್ರಮವನ್ನು ನೋಡಿದೆವು.

06070022a ವಿಸೃಜ್ಯ ಶರವೃಷ್ಟಿಂ ತಾಂ ದಶ ರಾಜನ್ಮಹಾರಥಾಃ|

06070022c ಪರಿವಾರ್ಯ ಮಹಾಬಾಹುಂ ನಿಹಂತುಮುಪಚಕ್ರಮುಃ||

ರಾಜನ್! ಆ ಹತ್ತು ಮಹಾರಥರು ಶರವೃಷ್ಟಿಯನ್ನು ಪ್ರಯೋಗಿಸಿ ಆ ಮಹಾಬಾಹುವನ್ನು ಸುತ್ತುವರೆದು ಅವನನ್ನು ಸಂಹರಿಸಲು ಬಯಸಿದರು.

06070023a ಸೌಮದತ್ತಿಸ್ತತಃ ಕ್ರುದ್ಧಸ್ತೇಷಾಂ ಚಾಪಾನಿ ಭಾರತ|

06070023c ಚಿಚ್ಛೇದ ದಶಭಿರ್ಬಾಣೈರ್ನಿಮೇಷೇಣ ಮಹಾರಥಃ||

ಆಗ ಮಹಾರಥಿ ಸೌಮದತ್ತಿಯು ಕ್ರುದ್ಧನಾಗಿ ನಿಮಿಷದಲ್ಲಿಯೇ ಅವರ ಚಾಪಗಳನ್ನು ಹತ್ತು ಬಾಣಗಳಿಂದ ತುಂಡರಿಸಿದನು.

06070024a ಅಥೈಷಾಂ ಚಿನ್ನಧನುಷಾಂ ಭಲ್ಲೈಃ ಸನ್ನತಪರ್ವಭಿಃ|

06070024c ಚಿಚ್ಛೇದ ಸಮರೇ ರಾಜನ್ ಶಿರಾಂಸಿ ನಿಶಿತೈಃ ಶರೈಃ|

ರಾಜನ್! ಅವರ ಧನುಸ್ಸುಗಳನ್ನು ಕತ್ತರಿಸಿ ತಕ್ಷಣವೇ ಸನ್ನತಪರ್ವ ನಿಶಿತ ಭಲ್ಲ ಶರಗಳಿಂದ ಸಮರದಲ್ಲಿ ಅವರ ಶಿರಗಳನ್ನೂ ಕತ್ತರಿಸಿದನು.

06070024e ತೇ ಹತಾ ನ್ಯಪತನ್ಭೂಮೌ ವಜ್ರಭಗ್ನಾ ಇವ ದ್ರುಮಾಃ||

06070025a ತಾನ್ದೃಷ್ಟ್ವಾ ನಿಹತಾನ್ವೀರಾನ್ರಣೇ ಪುತ್ರಾನ್ಮಹಾಬಲಾನ್|

06070025c ವಾರ್ಷ್ಣೇಯೋ ವಿನದನ್ರಾಜನ್ಭೂರಿಶ್ರವಸಮಭ್ಯಯಾತ್||

ಅವನಿಂದ ಹತರಾದ ಅವರು ಸಿಡಿಲಿನಿಂದ ಹೊಡೆಯಲ್ಪಟ್ಟ ಮರಗಳಂತೆ ಭೂಮಿಯ ಮೇಲೆ ಬಿದ್ದರು. ರಣದಲ್ಲಿ ಆ ಮಹಾಬಲ ವೀರ ಪುತ್ರರು ಹತರಾದುದನ್ನು ನೋಡಿ ಕೂಗುತ್ತಾ ವಾರ್ಷ್ಣೇಯನು ಭೂರಿಶ್ರವನನ್ನು ಎದುರಿಸಿದನು.

06070026a ರಥಂ ರಥೇನ ಸಮರೇ ಪೀಡಯಿತ್ವಾ ಮಹಾಬಲೌ|

06070026c ತಾವನ್ಯೋನ್ಯಸ್ಯ ಸಮರೇ ನಿಹತ್ಯ ರಥವಾಜಿನಃ|

06070026e ವಿರಥಾವಭಿವಲ್ಗಂತೌ ಸಮೇಯಾತಾಂ ಮಹಾರಥೌ||

ರಥದಿಂದ ರಥವನ್ನು ಪೀಡಿಸುತ್ತಾ ಆ ಮಹಾಬಲರಿಬ್ಬರೂ ಸಮರದಲ್ಲಿ ಅನ್ಯೋನ್ಯರ ರಥ-ವಾಜಿಗಳನ್ನು ಸಂಹರಿಸಿದರು. ರಥವಿಹೀನರಾದ ಅವರಿಬ್ಬರು ಮಹಾರಥರೂ ಒಟ್ಟಿಗೇ ಕೆಳಗೆ ಧುಮುಕಿದರು.

06070027a ಪ್ರಗೃಹೀತಮಹಾಖಡ್ಗೌ ತೌ ಚರ್ಮವರಧಾರಿಣೌ|

06070027c ಶುಶುಭಾತೇ ನರವ್ಯಾಘ್ರೌ ಯುದ್ಧಾಯ ಸಮವಸ್ಥಿತೌ||

ಶ್ರೇಷ್ಠ ಕವಚಗಳನ್ನು ಧರಿಸಿದ್ದ ಅವರಿಬ್ಬರು ನರವ್ಯಾಘ್ರರೂ ಮಹಾ ಖಡ್ಗಗಳನ್ನು ಹಿಡಿದು ಶೋಭಿಸಿದರು.

06070028a ತತಃ ಸಾತ್ಯಕಿಮಭ್ಯೇತ್ಯ ನಿಸ್ತ್ರಿಂಶವರಧಾರಿಣಂ|

06070028c ಭೀಮಸೇನಸ್ತ್ವರನ್ರಾಜನ್ರಥಮಾರೋಪಯತ್ತದಾ||

ಆಗ ಖಡ್ಗವನ್ನು ಹಿಡಿದಿದ್ದ ಸಾತ್ಯಕಿಯನ್ನು ಬೇಗನೇ ಭೀಮಸೇನನು ತನ್ನ ರಥದ ಮೇಲೆ ಏರಿಸಿಕೊಂಡರು.

06070029a ತವಾಪಿ ತನಯೋ ರಾಜನ್ಭೂರಿಶ್ರವಸಮಾಹವೇ|

06070029c ಆರೋಪಯದ್ರಥಂ ತೂರ್ಣಂ ಪಶ್ಯತಾಂ ಸರ್ವಧನ್ವಿನಾಂ||

ರಾಜನ್! ನಿನ್ನ ಮಗನೂ ಕೂಡ ಆಹವದಲ್ಲಿ ಸರ್ವ ಧನ್ವಿಗಳೂ ನೋಡುತ್ತಿದ್ದಂತೆ ಭೂರಿಶ್ರವಸನನ್ನು ತಕ್ಷಣವೇ ತನ್ನ ರಥದ ಮೇಲೇರಿಸಿಕೊಂಡನು.

06070030a ತಸ್ಮಿಂಸ್ತಥಾ ವರ್ತಮಾನೇ ರಣೇ ಭೀಷ್ಮಂ ಮಹಾರಥಂ|

06070030c ಅಯೋಧಯಂತ ಸಂರಬ್ಧಾಃ ಪಾಂಡವಾ ಭರತರ್ಷಭ||

ಭರತರ್ಷಭ! ಹೀಗೆ ನಡೆಯುತ್ತಿರುವ ರಣದಲ್ಲಿ ಸಂರಬ್ಧರಾದ ಪಾಂಡವರು ಮಹಾರಥ ಭೀಷ್ಮನೊಂದಿಗೆ ಯುದ್ಧ ಮಾಡಿದರು.

06070031a ಲೋಹಿತಾಯತಿ ಚಾದಿತ್ಯೇ ತ್ವರಮಾಣೋ ಧನಂಜಯಃ|

06070031c ಪಂಚವಿಂಶತಿಸಾಹಸ್ರಾನ್ನಿಜಘಾನ ಮಹಾರಥಾನ್||

ಆದಿತ್ಯನು ಕೆಂಪಾಗುತ್ತಿರಲು ತ್ವರೆಮಾಡಿ ಧನಂಜಯನು ಇಪ್ಪತ್ತೈದು ಸಾವಿರ ಮಹಾರಥರನ್ನು ಸಂಹರಿಸಿದನು.

06070032a ತೇ ಹಿ ದುರ್ಯೋಧನಾದಿಷ್ಟಾಸ್ತದಾ ಪಾರ್ಥನಿಬರ್ಹಣೇ|

06070032c ಸಂಪ್ರಾಪ್ಯೈವ ಗತಾ ನಾಶಂ ಶಲಭಾ ಇವ ಪಾವಕಂ||

ಪಾರ್ಥನನ್ನು ಕೊಲ್ಲಲು ದುರ್ಯೋಧನನಿಂದಲೇ ಕಳುಹಿಸಲ್ಪಟ್ಟ ಅವರು ಪತಂಗಗಳು ಬೆಂಕಿಯ ಬಳಿ ಬಂದಾಗ ಹೇಗೋ ಹಾಗೆ ಅವನನ್ನು ತಲುಪುವುದರೊಳಗೇ ನಾಶರಾಗಿಬಿಟ್ಟರು.

06070033a ತತೋ ಮತ್ಸ್ಯಾಃ ಕೇಕಯಾಶ್ಚ ಧನುರ್ವೇದವಿಶಾರದಾಃ|

06070033c ಪರಿವವ್ರುಸ್ತದಾ ಪಾರ್ಥಂ ಸಹಪುತ್ರಂ ಮಹಾರಥಂ||

ಆಗ ಧನುರ್ವೇದವಿಶಾರದರಾದ ಮತ್ಸ್ಯರು ಮತ್ತು ಕೇಕಯರು ಮಗನೊಂದಿಗೆ ಮಹಾರಥ ಪಾರ್ಥನನ್ನು ಸುತ್ತುವರೆದರು.

06070034a ಏತಸ್ಮಿನ್ನೇವ ಕಾಲೇ ತು ಸೂರ್ಯೇಽಸ್ತಮುಪಗಚ್ಛತಿ|

06070034c ಸರ್ವೇಷಾಮೇವ ಸೈನ್ಯಾನಾಂ ಪ್ರಮೋಹಃ ಸಮಜಾಯತ||

ಇದೇ ಸಮಯದಲ್ಲಿ ಸೂರ್ಯನು ಅಸ್ತಂಗತನಾದನು ಮತ್ತು ಸರ್ವಸೇನೆಗಳನ್ನೂ ಪ್ರಮೋಹವು ಅಚ್ಛಾದಿಸಿತು.

06070035a ಅವಹಾರಂ ತತಶ್ಚಕ್ರೇ ಪಿತಾ ದೇವವ್ರತಸ್ತವ|

06070035c ಸಂಧ್ಯಾಕಾಲೇ ಮಹಾರಾಜ ಸೈನ್ಯಾನಾಂ ಶ್ರಾಂತವಾಹನಃ||

ಮಹಾರಾಜ! ಆಗ ನಿನ್ನ ತಂದೆ ದೇವವ್ರತನು ಸಂಧ್ಯಾಕಾಲದಲ್ಲಿ ಆಯಾಸಗೊಂಡ ಸೇನೆವಾಹನಗಳಿಗೆ ವಿರಾಮವನ್ನಿತ್ತನು.

06070036a ಪಾಂಡವಾನಾಂ ಕುರೂಣಾಂ ಚ ಪರಸ್ಪರಸಮಾಗಮೇ|

06070036c ತೇ ಸೇನೇ ಭೃಶಸಂವಿಗ್ನೇ ಯಯತುಃ ಸ್ವಂ ನಿವೇಶನಂ||

ಪರಸ್ಪರರ ಸಮಾಗಮದಿಂದ ತುಂಬಾ ಸಂವಿಗ್ನರಾಗಿದ್ದ ಪಾಂಡವರ ಮತ್ತು ಕುರುಗಳ ಸೇನೆಗಳು ತಮ್ಮ ತಮ್ಮ ನಿವೇಶನಗಳಿಗೆ ತೆರಳಿದವು.

06070037a ತತಃ ಸ್ವಶಿಬಿರಂ ಗತ್ವಾ ನ್ಯವಿಶಂಸ್ತತ್ರ ಭಾರತ|

06070037c ಪಾಂಡವಾಃ ಸೃಂಜಯೈಃ ಸಾರ್ಧಂ ಕುರವಶ್ಚ ಯಥಾವಿಧಿ||

ಭಾರತ! ತಮ್ಮ ತಮ್ಮ ಶಿಬಿರಗಳಿಗೆ ಹೋಗಿ ಅಲ್ಲಿ ಪಾಂಡವರು ಸೃಂಜಯರೊಂದಿಗೆ ಮತ್ತು ಕುರುಗಳೂ ಯಥಾವಿಧಿಯಾಗಿ ವಿಶ್ರಾಂತಿಪಡೆದರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಪಂಚಮದಿವಸಾವಹಾರೇ ಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಪಂಚಮದಿವಸಾವಹಾರ ಎನ್ನುವ ಎಪ್ಪತ್ತನೇ ಅಧ್ಯಾಯವು.

Image result for flowers against white background

Comments are closed.