Bhishma Parva: Chapter 68

ಭೀಷ್ಮ ಪರ್ವ: ಭೀಷ್ಮವಧ ಪರ್ವ

೬೮

ಸಂಕುಲಯುದ್ಧ (೧-೩೩).

06068001 ಸಂಜಯ ಉವಾಚ|

06068001a ಶಿಖಂಡೀ ಸಹ ಮತ್ಸ್ಯೇನ ವಿರಾಟೇನ ವಿಶಾಂ ಪತೇ|

06068001c ಭೀಷ್ಮಮಾಶು ಮಹೇಷ್ವಾಸಮಾಸಸಾದ ಸುದುರ್ಜಯಂ||

ಸಂಜಯನು ಹೇಳಿದನು: “ವಿಶಾಂಪತೇ! ಶಿಖಂಡಿಯು ಮತ್ಸ್ಯ- ವಿರಾಟರನ್ನೊಡಗೂಡಿಕೊಂಡು ಮಹೇಷ್ವಾಸ ಸುದುರ್ಜಯ ಭೀಷ್ಮನಿದ್ದೆಡೆಗೆ ಧಾವಿಸಿದನು.

06068002a ದ್ರೋಣಂ ಕೃಪಂ ವಿಕರ್ಣಂ ಚ         ಮಹೇಷ್ವಾಸಾನ್ಮಹಾಬಲಾನ್|

06068002c ರಾಜ್ಞಶ್ಚಾನ್ಯಾನ್ರಣೇ ಶೂರಾನ್          ಬಹೂನಾರ್ಚದ್ಧನಂಜಯಃ||

ರಣದಲ್ಲಿ ಧನಂಜಯನು ಅನ್ಯ ಶೂರ, ಮಹೇಷ್ವಾಸ, ಮಹಾಬಲ ರಾಜರನ್ನೂ, ದ್ರೋಣ, ಕೃಪ, ವಿಕರ್ಣರನ್ನೂ ಬಹುವಾಗಿ ಬಾಧಿಸಿದನು.

06068003a ಸೈಂಧವಂ ಚ ಮಹೇಷ್ವಾಸಂ ಸಾಮಾತ್ಯಂ ಸಹ ಬಂಧುಭಿಃ|

06068003c ಪ್ರಾಚ್ಯಾಂಶ್ಚ ದಾಕ್ಷಿಣಾತ್ಯಾಂಶ್ಚ ಭೂಮಿಪಾನ್ಭೂಮಿಪರ್ಷಭ||

06068004a ಪುತ್ರಂ ಚ ತೇ ಮಹೇಷ್ವಾಸಂ ದುರ್ಯೋಧನಮಮರ್ಷಣಂ|

06068004c ದುಃಸ್ಸಹಂ ಚೈವ ಸಮರೇ ಭೀಮಸೇನೋಽಭ್ಯವರ್ತತ||

ಭೂಮಿಪರ್ಷಭ! ಸಮರದಲ್ಲಿ ಭೀಮಸೇನನು ಅಮಾತ್ಯ-ಬಂಧುಗಳೊಡನೆ ಮಹೇಷ್ವಾಸ ಸೈಂಧವನನ್ನು, ಪೂರ್ವ ಮತ್ತು ದಕ್ಷಿಣ ಪ್ರದೇಶಗಳ ಭೂಮಿಪರನ್ನೂ, ನಿನ್ನ ಪುತ್ರ ಮಹೇಷ್ವಾಸ ಅಮರ್ಷಣ ದುರ್ಯೋಧನ ಮತ್ತು ದುಃಸ್ಸಹರನ್ನು ಎದುರಿಸಿದನು.

06068005a ಸಹದೇವಸ್ತು ಶಕುನಿಮುಲೂಕಂ ಚ ಮಹಾರಥಂ|

06068005c ಪಿತಾಪುತ್ರೌ ಮಹೇಷ್ವಾಸಾವಭ್ಯವರ್ತತ ದುರ್ಜಯೌ||

ದುರ್ಜಯರೂ ಮಹೇಷ್ವಾಸರೂ ತಂದೆ-ಮಗರಾದ ಮಹಾರಥ ಶಕುನಿ-ಉಲೂಕರನ್ನು ಸಹದೇವನು ಎದುರಿಸಿದನು.

06068006a ಯುಧಿಷ್ಠಿರೋ ಮಹಾರಾಜ ಗಜಾನೀಕಂ ಮಹಾರಥಃ|

06068006c ಸಮವರ್ತತ ಸಂಗ್ರಾಮೇ ಪುತ್ರೇಣ ನಿಕೃತಸ್ತವ||

ಮಹಾರಾಜ! ನಿನ್ನ ಮಗನಿಂದ ವಂಚಿತನಾಗಿದ್ದ ಮಹಾರಥ ಯುಧಿಷ್ಠಿರನು ಸಂಗ್ರಾಮದಲ್ಲಿ ಗಜಸೇನೆಯೊಂದಿಗೆ ಹೋರಾಡುತ್ತಿದ್ದನು.

06068007a ಮಾದ್ರೀಪುತ್ರಸ್ತು ನಕುಲಃ ಶೂರಃ ಸಂಕ್ರಂದನೋ ಯುಧಿ|

06068007c ತ್ರಿಗರ್ತಾನಾಂ ರಥೋದಾರೈಃ ಸಮಸಜ್ಜತ ಪಾಂಡವಃ||

ಮಾದ್ರೀಪುತ್ರ ಶೂರ ನಕುಲ ಪಾಂಡವನು ಯುದ್ಧದಲ್ಲಿ ಸಂಕ್ರಂದನಂತೆ ರಥೋದಾರ ತ್ರಿಗರ್ತರೊಡನೆ ಯುದ್ಧಮಾಡಿದನು.

06068008a ಅಭ್ಯವರ್ತಂತ ದುರ್ಧರ್ಷಾಃ ಸಮರೇ ಶಾಲ್ವಕೇಕಯಾನ್|

06068008c ಸಾತ್ಯಕಿಶ್ಚೇಕಿತಾನಶ್ಚ ಸೌಭದ್ರಶ್ಚ ಮಹಾರಥಃ||

ಸಮರದಲ್ಲಿ ದುರ್ಧರ್ಷ ಶಾಲ್ವ-ಕೇಕಯರೊಂದಿಗೆ ಮಹಾರಥ ಸಾತ್ಯಕಿ, ಚೇಕಿತಾನ ಮತ್ತು ಸೌಭದ್ರರು ಹೋರಾಡುತ್ತಿದ್ದರು.

06068009a ಧೃಷ್ಟಕೇತುಶ್ಚ ಸಮರೇ ರಾಕ್ಷಸಶ್ಚ ಘಟೋತ್ಕಚಃ|

06068009c ಪುತ್ರಾಣಾಂ ತೇ ರಥಾನೀಕಂ ಪ್ರತ್ಯುದ್ಯಾತಾಃ ಸುದುರ್ಜಯಾಃ||

ಸಮರದಲ್ಲಿ ದುರ್ಜಯ ಧೃಷ್ಟಕೇತು ಮತ್ತು ರಾಕ್ಷಸ ಘಟೋತ್ಕಚರು ನಿನ್ನ ಮಕ್ಕಳ ರಥಸೇನೆಯೊಂದಿಗೆ ಹೋರಾಡುತ್ತಿದ್ದರು.

06068010a ಸೇನಾಪತಿರಮೇಯಾತ್ಮಾ ಧೃಷ್ಟದ್ಯುಮ್ನೋ ಮಹಾಬಲಃ|

06068010c ದ್ರೋಣೇನ ಸಮರೇ ರಾಜನ್ಸಮಿಯಾಯೇಂದ್ರಕರ್ಮಣಾ||

ರಾಜನ್! ಸೇನಾಪತಿ ಅಮೇಯಾತ್ಮ ಮಹಾಬಲ ಧೃಷ್ಟದ್ಯುಮ್ನನು ಸಮರದಲ್ಲಿ ಉಗ್ರಕರ್ಮಿ ದ್ರೋಣನೊಂದಿಗೆ ಯುದ್ಧ ಮಾಡುತ್ತಿದ್ದನು.

06068011a ಏವಮೇತೇ ಮಹೇಷ್ವಾಸಾಸ್ತಾವಕಾಃ ಪಾಂಡವೈಃ ಸಹ|

06068011c ಸಮೇತ್ಯ ಸಮರೇ ಶೂರಾಃ ಸಂಪ್ರಹಾರಂ ಪ್ರಚಕ್ರಿರೇ||

ಹೀಗೆ ಮಹೇಷ್ವಾಸ ಶೂರರಾದ ನಿನ್ನವರು ಪಾಂಡವರೊಂದಿಗೆ ಸಮರದಲ್ಲಿ ಸೇರಿ ಸಂಪ್ರಹರಿಸಲು ತೊಡಗಿದರು.

06068012a ಮಧ್ಯಂದಿನಗತೇ ಸೂರ್ಯೇ ನಭಸ್ಯಾಕುಲತಾಂ ಗತೇ|

06068012c ಕುರವಃ ಪಾಂಡವೇಯಾಶ್ಚ ನಿಜಘ್ನುರಿತರೇತರಂ||

ಸೂರ್ಯನು ನಡುನೆತ್ತಿಗೆ ಬಂದು ಆಕಾಶವು ತಾಪಗೊಳ್ಳುತ್ತಿದ್ದರೂ ಕೌರವ-ಪಾಂಡವರು ಪರಸ್ಪರರ ಸಂಹಾರಕ್ರಿಯೆಯಲ್ಲಿ ತೊಡಗಿದ್ದರು.

06068013a ಧ್ವಜಿನೋ ಹೇಮಚಿತ್ರಾಂಗಾ ವಿಚರಂತೋ ರಣಾಜಿರೇ|

06068013c ಸಪತಾಕಾ ರಥಾ ರೇಜುರ್ವೈಯಾಘ್ರಪರಿವಾರಣಾಃ||

ಧ್ವಜ-ಪತಾಕೆಗಳಿಂದ ಕೂಡಿದ ಬಂಗಾರ ಚಿತ್ರಗಳಿಂದ ಅಲಂಕರಿಸಲ್ಪಟ್ಟಿದ್ದ, ಹುಲಿಯ ಚರ್ಮಗಳನ್ನು ಹೊದಿಸಿದ್ದ ರಥಗಳು ರಜದಲ್ಲಿ ಸಂಚರಿಸುತ್ತಾ ಪ್ರಕಾಶಿಸಿದವು.

06068014a ಸಮೇತಾನಾಂ ಚ ಸಮರೇ ಜಿಗೀಷೂಣಾಂ ಪರಸ್ಪರಂ|

06068014c ಬಭೂವ ತುಮುಲಃ ಶಬ್ದಃ ಸಿಂಹಾನಾಮಿವ ನರ್ದತಾಂ||

ಪರಸ್ಪರರನ್ನು ಸಮರದಲ್ಲಿ ಗೆಲ್ಲಲು ಸೇರಿದ್ದವರ ಸಿಂಹಗರ್ಜನೆಗಳಿಂದ ತುಮುಲ ಶಬ್ಧವುಂಟಾಯಿತು.

06068015a ತತ್ರಾದ್ಭುತಮಪಶ್ಯಾಮ ಸಂಪ್ರಹಾರಂ ಸುದಾರುಣಂ|

06068015c ಯಮಕುರ್ವನ್ರಣೇ ವೀರಾಃ ಸೃಂಜಯಾಃ ಕುರುಭಿಃ ಸಹ||

ಅಲ್ಲಿ ರಣದಲ್ಲಿ ವೀರ ಸೃಂಜಯರು ಕುರುಗಳೊಂದಿಗೆ ಸುದಾರುಣ ಸಂಪ್ರಹಾರ ಮಾಡುತ್ತಿರುವ ಅದ್ಭುತವನ್ನು ನೋಡಿದೆವು.

06068016a ನೈವ ಖಂ ನ ದಿಶೋ ರಾಜನ್ನ ಸೂರ್ಯಂ ಶತ್ರುತಾಪನ|

06068016c ವಿದಿಶೋ ವಾಪ್ಯಪಶ್ಯಾಮ ಶರೈರ್ಮುಕ್ತೈಃ ಸಮಂತತಃ||

ರಾಜನ್! ಶತ್ರುತಾಪನ! ಎಲ್ಲಕಡೆಗಳಲ್ಲಿಯೂ ಪ್ರಯೋಗಿಸುತ್ತಿದ್ದ ಶರಗಳಿಂದ ದಿಕ್ಕುಗಳು ಮುಚ್ಚಿ, ಆಕಾಶವಾಗಲೀ, ದಿಕ್ಕುಗಳಾಗಲೀ, ಸೂರ್ಯನಾಗಲೀ ಕಾಣಲೇ ಇಲ್ಲ.

06068017a ಶಕ್ತೀನಾಂ ವಿಮಲಾಗ್ರಾಣಾಂ ತೋಮರಾಣಾಂ ತಥಾಸ್ಯತಾಂ|

06068017c ನಿಸ್ತ್ರಿಂಶಾನಾಂ ಚ ಪೀತಾನಾಂ ನೀಲೋತ್ಪಲನಿಭಾಃ ಪ್ರಭಾಃ||

06068018a ಕವಚಾನಾಂ ವಿಚಿತ್ರಾಣಾಂ ಭೂಷಣಾನಾಂ ಪ್ರಭಾಸ್ತಥಾ|

06068018c ಖಂ ದಿಶಃ ಪ್ರದಿಶಶ್ಚೈವ ಭಾಸಯಾಮಾಸುರೋಜಸಾ||

ಥಳಥಳಿಸುವ ಮೊನೆಯ ಶಕ್ತಿಗಳು, ಹಾಗೆಯೇ ಪ್ರಯೋಗಿಸುತ್ತಿರುವ ತೋಮರಗಳ, ಹರಿತ ಖಡ್ಗಗಳ ಕನ್ನೈದಿಲೆ ಬಣ್ಣದ ಪ್ರಭೆಗಳಿಂದ, ವಿಚಿತ್ರ ಕವಚ-ಭೂಷಣಗಳ ಪ್ರಭೆಗಳಿಂದ ಆಕಾಶ, ದಿಕ್ಕುಗಳು ಮತ್ತು ಉಪದಿಕ್ಕುಗಳು ತಮ್ಮ ಉಜ್ವಲ ಪ್ರಕಾಶದಿಂದ ಬೆಳಗುತ್ತಿದ್ದವು.

06068018e ವಿರರಾಜ ತದಾ ರಾಜಂಸ್ತತ್ರ ತತ್ರ ರಣಾಂಗಣಂ||

06068019a ರಥಸಿಂಹಾಸನವ್ಯಾಘ್ರಾಃ ಸಮಾಯಾಂತಶ್ಚ ಸಂಯುಗೇ|

06068019c ವಿರೇಜುಃ ಸಮರೇ ರಾಜನ್ಗ್ರಹಾ ಇವ ನಭಸ್ತಲೇ||

ರಾಜನ್! ಅಲ್ಲಲ್ಲಿ ರಣಾಂಗಣವು ವಿರಾಜಿಸುತ್ತಿತ್ತು. ರಾಜನ್! ಸಂಯುಗದಲ್ಲಿ ಬಂದು ಸೇರಿದ್ದ ರಥಸಿಂಹಾಸನವ್ಯಾಘ್ರರು ನಭಸ್ತಲದಲ್ಲಿ ಬೆಳಗುವ ಗ್ರಹಗಳಂತೆ ವಿರಾಜಿಸಿದರು.

06068020a ಭೀಷ್ಮಸ್ತು ರಥಿನಾಂ ಶ್ರೇಷ್ಠೋ ಭೀಮಸೇನಂ ಮಹಾಬಲಂ|

06068020c ಅವಾರಯತ ಸಂಕ್ರುದ್ಧಃ ಸರ್ವಸೈನ್ಯಸ್ಯ ಪಶ್ಯತಃ||

ರಥಿಗಳಲ್ಲಿ ಶ್ರೇಷ್ಠ ಭೀಷ್ಮನಾದರೋ ಸಂಕ್ರುದ್ಧನಾಗಿ ಸರ್ವಸೇನೆಗಳೂ ನೋಡುತ್ತಿದ್ದಂತೆಯೇ ಮಹಾಬಲ ಭೀಮಸೇನನನ್ನು ತಡೆದನು.

06068021a ತತೋ ಭೀಷ್ಮವಿನಿರ್ಮುಕ್ತಾ ರುಕ್ಮಪುಂಖಾಃ ಶಿಲಾಶಿತಾಃ|

06068021c ಅಭ್ಯಘ್ನನ್ಸಮರೇ ಭೀಮಂ ತೈಲಧೌತಾಃ ಸುತೇಜನಾಃ||

ಆಗ ಭೀಷ್ಮನು ಪ್ರಯೋಗಿಸಿದ ರುಕ್ಮಪುಂಖ, ಶಿಲಾಶಿತ, ತೈಲದಲ್ಲಿ ಅದ್ದಿದ್ದ, ಸುತೇಜಸ ಬಾಣಗಳು ಸಮರದಲ್ಲಿ ಭೀಮನಿಗೆ ತಾಗಿದವು.

06068022a ತಸ್ಯ ಶಕ್ತಿಂ ಮಹಾವೇಗಾಂ ಭೀಮಸೇನೋ ಮಹಾಬಲಃ|

06068022c ಕ್ರುದ್ಧಾಶೀವಿಷಸಂಕಾಶಾಂ ಪ್ರೇಷಯಾಮಾಸ ಭಾರತ||

ಭಾರತ! ಮಹಾಬಲ ಭೀಮಸೇನನು ಅವನ ಮೇಲೆ ಕ್ರುದ್ಧ ಸರ್ಪದ ವಿಷಕ್ಕೆ ಸಮಾನ ಶಕ್ತ್ಯಾಯುಧವನ್ನು ಪ್ರಯೋಗಿಸಿದನು.

06068023a ತಾಮಾಪತಂತೀಂ ಸಹಸಾ ರುಕ್ಮದಂಡಾಂ ದುರಾಸದಾಂ|

06068023c ಚಿಚ್ಛೇದ ಸಮರೇ ಭೀಷ್ಮಃ ಶರೈಃ ಸನ್ನತಪರ್ವಭಿಃ||

ಮೇಲೆ ಬೀಳುತ್ತಿದ್ದ ರುಕ್ಮದಂಡದ ಆ ದುರಾಸದ ಶಕ್ತಿಯನ್ನು ಸಮರದಲ್ಲಿ ಭೀಷ್ಮನು ತಕ್ಷಣವೇ ಸನ್ನತಪರ್ವ ಶರಗಳಿಂದ ತುಂಡರಿಸಿದನು.

06068024a ತತೋಽಪರೇಣ ಭಲ್ಲೇನ ಪೀತೇನ ನಿಶಿತೇನ ಚ|

06068024c ಕಾರ್ಮುಕಂ ಭೀಮಸೇನಸ್ಯ ದ್ವಿಧಾ ಚಿಚ್ಛೇದ ಭಾರತ||

ಭಾರತ! ಇನ್ನೊಂದು ಪೀತಲದ ನಿಶಿತ ಭಲ್ಲದಿಂದ ಭೀಮಸೇನನ ಕಾರ್ಮುಕವನ್ನು ಎರಡಾಗಿ ತುಂಡರಿಸಿದನು.

06068025a ಸಾತ್ಯಕಿಸ್ತು ತತಸ್ತೂರ್ಣಂ ಭೀಷ್ಮಮಾಸಾದ್ಯ ಸಮ್ಯುಗೇ|

06068025c ಶರೈರ್ಬಹುಭಿರಾನರ್ಚತ್ಪಿತರಂ ತೇ ಜನೇಶ್ವರ||

ಜನೇಶ್ವರ! ಆಗ ಸಾತ್ಯಕಿಯೂ ಕೂಡ ಬೇಗನೇ ಸಂಯುಗದಲ್ಲಿ ಭೀಷ್ಮನ ಬಳಿಸಾರಿ ನಿನ್ನ ತಂದೆಯ ಮೇಲೆ ಅನೇಕ ಶರಗಳನ್ನು ಸುರಿಸಿದನು.

06068026a ತತಃ ಸಂಧಾಯ ವೈ ತೀಕ್ಷ್ಣಂ ಶರಂ ಪರಮದಾರುಣಂ|

06068026c ವಾರ್ಷ್ಣೇಯಸ್ಯ ರಥಾದ್ಭೀಷ್ಮಃ ಪಾತಯಾಮಾಸ ಸಾರಥಿಂ||

ಆಗ ಭೀಷ್ಮನು ಪರಮದಾರುಣ ತೀಕ್ಷ್ಣ ಶರವನ್ನು ಹೂಡಿ ವಾರ್ಷ್ಣೇಯನ ಸಾರಥಿಯನ್ನು ರಥದಿಂದ ಕೆಡವಿದನು.

06068027a ತಸ್ಯಾಶ್ವಾಃ ಪ್ರದ್ರುತಾ ರಾಜನ್ನಿಹತೇ ರಥಸಾರಥೌ|

06068027c ತೇನ ತೇನೈವ ಧಾವಂತಿ ಮನೋಮಾರುತರಂಹಸಃ||

ರಾಜನ್! ಅವನ ರಥದ ಸಾರಥಿಯು ಬೀಳಲು ಅದರ ಕುದುರೆಗಳು ಮನೋಮಾರುತಹಂಸಗಳಂತೆ ಬೇಕಾದಲ್ಲಿ ಓಡತೊಡಗಿದವು.

06068028a ತತಃ ಸರ್ವಸ್ಯ ಸೈನ್ಯಸ್ಯ ನಿಸ್ವನಸ್ತುಮುಲೋಽಭವತ್|

06068028c ಹಾಹಾಕಾರಶ್ಚ ಸಂಜಜ್ಞೇ ಪಾಂಡವಾನಾಂ ಮಹಾತ್ಮನಾಂ||

ಆಗ ಸರ್ವ ಸೈನ್ಯಗಳಲ್ಲಿ ಕೂಗು ತುಮುಲಗಳಾದವು. ಮಹಾತ್ಮ ಪಾಂಡವರಲ್ಲಿ ಹಾಹಾಕಾರವೂ ಉಂಟಾಯಿತು.

06068029a ಅಭಿದ್ರವತ ಗೃಹ್ಣೀತ ಹಯಾನ್ಯಚ್ಛತ ಧಾವತ|

06068029c ಇತ್ಯಾಸೀತ್ತುಮುಲಃ ಶಬ್ದೋ ಯುಯುಧಾನರಥಂ ಪ್ರತಿ||

ಎಲ್ಲೆಲ್ಲೋ ಓಡಿಹೋಗುತ್ತಿದ್ದ ಯುಯುಧಾನನ ರಥವನ್ನು ಹಿಡಿಯುವುದರ ಕುರಿತು ಅಲ್ಲಿ ಮಹಾ ತುಮುಲ ಶಬ್ಧವುಂಟಾಯಿತು.

06068030a ಏತಸ್ಮಿನ್ನೇವ ಕಾಲೇ ತು ಭೀಷ್ಮಃ ಶಾಂತನವಃ ಪುನಃ|

06068030c ವ್ಯಹನತ್ಪಾಂಡವೀಂ ಸೇನಾಮಾಸುರೀಮಿವ ವೃತ್ರಹಾ||

ಇದೇ ಸಮಯದಲ್ಲಿ ಪುನಃ ಭೀಷ್ಮ ಶಾಂತನವನು ವೃತ್ರಹನು ಅಸುರೀ ಸೇನೆಯನ್ನು ಹೇಗೋ ಹಾಗೆ ನಾಶಗೊಳಿಸಿದನು.

06068031a ತೇ ವಧ್ಯಮಾನಾ ಭೀಷ್ಮೇಣ ಪಾಂಚಾಲಾಃ ಸೋಮಕೈಃ ಸಹ|

06068031c ಆರ್ಯಾಂ ಯುದ್ಧೇ ಮತಿಂ ಕೃತ್ವಾ ಭೀಷ್ಮಮೇವಾಭಿದುದ್ರುವುಃ||

ಭೀಷ್ಮನಿಂದ ವಧಿಸಲ್ಪಡುತ್ತಿದ್ದರೂ ಪಾಂಚಾಲ-ಸೋಮಕರು ಒಟ್ಟಿಗೇ ಭೀಷ್ಮನನ್ನು ಎದುರಿಸಿ ಯುದ್ಧ ಮಾಡುವ ದೃಢ ನಿಶ್ಚಯವನ್ನು ಮಾಡಿ ಹೋರಾಡಿದರು.

06068032a ಧೃಷ್ಟದ್ಯುಮ್ನಮುಖಾಶ್ಚಾಪಿ ಪಾರ್ಥಾಃ ಶಾಂತನವಂ ರಣೇ|

06068032c ಅಭ್ಯಧಾವಂ ಜಿಗೀಷಂತಸ್ತವ ಪುತ್ರಸ್ಯ ವಾಹಿನೀಂ||

ಧೃಷ್ಟದ್ಯುಮ್ನನೇ ಮೊದಲಾದ ಪಾರ್ಥರು ನಿನ್ನ ಪುತ್ರನ ಸೇನೆಯನ್ನು ಗೆಲ್ಲಲು ಬಯಸಿ ರಣದಲ್ಲಿ ಶಾಂತನವನನ್ನು ಎದುರಿಸಿದರು.

06068033a ತಥೈವ ತಾವಕಾ ರಾಜನ್ಭೀಷ್ಮದ್ರೋಣಮುಖಾಃ ಪರಾನ್|

06068033c ಅಭ್ಯಧಾವಂತ ವೇಗೇನ ತತೋ ಯುದ್ಧಮವರ್ತತ||

ರಾಜನ್! ಹಾಗೆಯೆ ನಿನ್ನವರ ಭೀಷ್ಮ-ದ್ರೋಣಪ್ರಮುಖರು ವೇಗದಿಂದ ಶತ್ರುಗಳನ್ನು ಎದುರಿಸಿ ಯುದ್ಧವನ್ನು ನಡೆಸಿದರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಪಂಚಮದಿವಸಯುದ್ಧೇ ಅಷ್ಠಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಪಂಚಮದಿವಸಯುದ್ಧ ಎನ್ನುವ ಅರವತ್ತೆಂಟನೇ ಅಧ್ಯಾಯವು.

Image result for flowers against white background

Comments are closed.