Bhishma Parva: Chapter 67

ಭೀಷ್ಮ ಪರ್ವ: ಭೀಷ್ಮವಧ ಪರ್ವ

೬೭

ಸಂಕುಲ ಯುದ್ಧ (೧-೪೧).

06067001 ಸಂಜಯ ಉವಾಚ|

06067001a ದೃಷ್ಟ್ವಾ ಭೀಷ್ಮೇಣ ಸಂಸಕ್ತಾನ್ಭ್ರಾತೄನನ್ಯಾಂಶ್ಚ ಪಾರ್ಥಿವಾನ್|

06067001c ತಮಭ್ಯಧಾವದ್ಗಾಂಗೇಯಮುದ್ಯತಾಸ್ತ್ರೋ ಧನಂಜಯಃ||

ಸಂಜಯನು ಹೇಳಿದನು: “ಸಹೋದರರೂ ಮತ್ತು ಅನ್ಯ ಪಾರ್ಥಿವರೂ ಭೀಷ್ಮನೊಂದಿಗೆ ಯುದ್ಧಮಾಡುತ್ತಿರುವುದನ್ನು ನೋಡಿ ಧನಂಜಯನು ಅಸ್ತ್ರಗಳನ್ನು ಎತ್ತಿ ಹಿಡಿದು ಗಾಂಗೇಯನಿದ್ದಲ್ಲಿಗೆ ಧಾವಿಸಿದನು.

06067002a ಪಾಂಚಜನ್ಯಸ್ಯ ನಿರ್ಘೋಷಂ ಧನುಷೋ ಗಾಂಡಿವಸ್ಯ ಚ|

06067002c ಧ್ವಜಂ ಚ ದೃಷ್ಟ್ವಾ ಪಾರ್ಥಸ್ಯ ಸರ್ವಾನ್ನೋ ಭಯಮಾವಿಶತ್||

ಪಾರ್ಥನ ಪಾಂಚಜನ್ಯ ಮತ್ತು ಧನುಸ್ಸು ಗಾಂಡೀವದ ನಿರ್ಘೋಷ ಹಾಗೂ ಧ್ವಜವನ್ನು ನೋಡಿ ಎಲ್ಲರನ್ನೂ ಭಯವು ಆವರಿಸಿತು.

06067003a ಅಸಜ್ಜಮಾನಂ ವೃಕ್ಷೇಷು ಧೂಮಕೇತುಮಿವೋತ್ಥಿತಂ|

06067003c ಬಹುವರ್ಣಂ ಚ ಚಿತ್ರಂ ಚ ದಿವ್ಯಂ ವಾನರಲಕ್ಷಣಂ|

06067003e ಅಪಶ್ಯಾಮ ಮಹಾರಾಜ ಧ್ವಜಂ ಗಾಂಡಿವಧನ್ವನಃ||

ಮಹಾರಾಜ! ವೃಕ್ಷಗಳೂ ಮರೆಮಾಡದಂತಹ, ಧೂಮಕೇತುವಿನಂತೆ ಎತ್ತರದಲ್ಲಿ ಹಾರುತ್ತಿದ್ದ, ಬಹುವರ್ಣದ, ಚಿತ್ರಗಳಿಂದ ಕೂಡಿದ, ದಿವ್ಯ, ವಾನರ ಲಕ್ಷಣ ಗಾಂಡೀವಧನ್ವಿಯ ಧ್ವಜವನ್ನು ನೋಡಿದೆವು.

06067004a ವಿದ್ಯುತಂ ಮೇಘಮಧ್ಯಸ್ಥಾಂ ಭ್ರಾಜಮಾನಾಮಿವಾಂಬರೇ|

06067004c ದದೃಶುರ್ಗಾಂಡಿವಂ ಯೋಧಾ ರುಕ್ಮಪೃಷ್ಠಂ ಮಹಾರಥೇ||

ಅಂಬರದಲ್ಲಿ ಮೇಘಗಳ ಮಧ್ಯೆ ಮಿಂಚು ಹೊಳೆಯುವಂತೆ ಯೋಧರು ಮಹಾರಥದಲ್ಲಿ ಬಂಗಾರದ ದಂಡವನ್ನುಳ್ಳ ಗಾಂಡೀವವನ್ನು ನೋಡಿದರು.

06067005a ಅಶುಶ್ರುಮ ಭೃಶಂ ಚಾಸ್ಯ ಶಕ್ರಸ್ಯೇವಾಭಿಗರ್ಜತಃ|

06067005c ಸುಘೋರಂ ತಲಯೋಃ ಶಬ್ದಂ ನಿಘ್ನತಸ್ತವ ವಾಹಿನೀಂ||

ನಿನ್ನ ಸೇನೆಯನ್ನು ಸಂಹರಿಸುವಾಗ ಕೇಳಿಬರುವ ಅವನ ಗರ್ಜನೆಯು ಶಕ್ರನ ಗರ್ಜನೆಯಂತಿತ್ತು ಮತ್ತು ಚಪ್ಪಾಳೆಯೂ ಸುಘೋರ ಶಬ್ಧವುಳ್ಳದ್ದಾಗಿತ್ತು.

06067006a ಚಂಡವಾತೋ ಯಥಾ ಮೇಘಃ ಸವಿದ್ಯುತ್ಸ್ತನಯಿತ್ನುಮಾನ್|

06067006c ದಿಶಃ ಸಂಪ್ಲಾವಯನ್ಸರ್ವಾಃ ಶರವರ್ಷೈಃ ಸಮಂತತಃ||

ಭಿರುಗಾಳಿ ಮಿಂಚುಗಳಿಂದ ಕೂಡಿದ ಮೋಡಗಳಂತೆ ಎಲ್ಲ ದಿಕ್ಕುಗಳನ್ನೂ ಎಲ್ಲ ಕಡೆಗಳಿಂದಲೂ ಶರವರ್ಷಗಳಿಂದ ತುಂಬಿಸಿಬಿಟ್ಟನು.

06067007a ಅಭ್ಯಧಾವತ ಗಾಂಗೇಯಂ ಭೈರವಾಸ್ತ್ರೋ ಧನಂಜಯಃ|

06067007c ದಿಶಂ ಪ್ರಾಚೀಂ ಪ್ರತೀಚೀಂ ಚ ನ ಜಾನೀಮೋಽಸ್ತ್ರಮೋಹಿತಾಃ||

ಭೈರವಾಸ್ತ್ರ ಧನಂಜಯನು ಅಸ್ತ್ರಗಳಿಂದ ಮೋಹಿತನಾಗಿ ಪೂರ್ವ-ಪಶ್ಚಿಮ ದಿಕ್ಕುಗಳನ್ನೇ ಗುರುತಿಸಲಾಗದ ಗಾಂಗೇಯನನ್ನು ಎದುರಿಸಿದನು.

06067008a ಕಾಂದಿಗ್ಭೂತಾಃ ಶ್ರಾಂತಪತ್ರಾ ಹತಾಸ್ತ್ರಾ ಹತಚೇತಸಃ|

06067008c ಅನ್ಯೋನ್ಯಮಭಿಸಂಶ್ಲಿಷ್ಯ ಯೋಧಾಸ್ತೇ ಭರತರ್ಷಭ||

ಭರತರ್ಷಭ! ನಿನ್ನ ಯೋಧರು ಅವರ ವಾಹನಗಳು ಬಳಲಿರಲು ಅಸ್ತ್ರಗಳನ್ನು ಕಳೆದುಕೊಂಡು, ಹತಚೇತನರಾಗಿ ಅನ್ಯೋನ್ಯರಿಗೆ ಅಂಟಿಕೊಂಡರು.

06067009a ಭೀಷ್ಮಮೇವಾಭಿಲೀಯಂತ ಸಹ ಸರ್ವೈಸ್ತವಾತ್ಮಜೈಃ|

06067009c ತೇಷಾಮಾರ್ತಾಯನಮಭೂದ್ಭೀಷ್ಮಃ ಶಂತನವೋ ರಣೇ||

ನಿನ್ನ ಸರ್ವ ಮಕ್ಕಳೊಂದಿಗೆ ಅವರು ಭೀಷ್ಮನನ್ನೇ ಅವಲಂಬಿಸಿದರು. ಆಗ ರಣದಲ್ಲಿ ಅವರೆಲ್ಲರ ರಕ್ಷಣೆಯ ಭಾರವು ಭೀಷ್ಮ ಶಾಂತನವನದಾಯಿತು.

06067010a ಸಮುತ್ಪತಂತ ವಿತ್ರಸ್ತಾ ರಥೇಭ್ಯೋ ರಥಿನಸ್ತದಾ|

06067010c ಸಾದಿನಶ್ಚಾಶ್ವಪೃಷ್ಠೇಭ್ಯೋ ಭೂಮೌ ಚಾಪಿ ಪದಾತಯಃ||

ಭಯಗೊಂಡು ರಥಿಗಳು ರಥಗಳಿಂದ ಮತ್ತು ಸವಾರರು ಕುದುರೆಗಳ ಬೆನ್ನ ಮೇಲಿಂದ ಹಾರಿದರು. ಪದಾತಿಗಳೂ ಕೂಡ ಭೂಮಿಯ ಮೇಲೆ ಬಿದ್ದರು.

06067011a ಶ್ರುತ್ವಾ ಗಾಂಡೀವನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ|

06067011c ಸರ್ವಸೈನ್ಯಾನಿ ಭೀತಾನಿ ವ್ಯವಲೀಯಂತ ಭಾರತ||

ಭಾರತ! ಮೋಡಗಳ ಗರ್ಜನೆಯಂತಿದ್ದ ಗಾಂಡೀವದ ನಿರ್ಘೋಶವನ್ನು ಕೇಳಿ ಸರ್ವ ಸೇನೆಗಳೂ ಭಯದಿಂದ ಕರಗಿ ಹೋದವು.

06067012a ಅಥ ಕಾಂಬೋಜಮುಖ್ಯೈಸ್ತು ಬೃಹದ್ಭಿಃ ಶೀಘ್ರಗಾಮಿಭಿಃ|

06067012c ಗೋಪಾನಾಂ ಬಹುಸಾಹಸ್ರೈರ್ಬಲೈರ್ಗೋವಾಸನೋ ವೃತಃ||

06067013a ಮದ್ರಸೌವೀರಗಾಂಧಾರೈಸ್ತ್ರಿಗರ್ತೈಶ್ಚ ವಿಶಾಂ ಪತೇ|

06067013c ಸರ್ವಕಾಲಿಂಗಮುಖ್ಯೈಶ್ಚ ಕಲಿಂಗಾಧಿಪತಿರ್ವೃತಃ||

06067014a ನಾಗಾ ನರಗಣೌಘಾಶ್ಚ ದುಃಶಾಸನಪುರಃಸ್ಸರಾಃ|

06067014c ಜಯದ್ರಥಶ್ಚ ನೃಪತಿಃ ಸಹಿತಃ ಸರ್ವರಾಜಭಿಃ||

06067015a ಹಯಾರೋಹವರಾಶ್ಚೈವ ತವ ಪುತ್ರೇಣ ಚೋದಿತಾಃ|

06067015c ಚತುರ್ದಶ ಸಹಸ್ರಾಣಿ ಸೌಬಲಂ ಪರ್ಯವಾರಯನ್||

06067016a ತತಸ್ತೇ ಸಹಿತಾಃ ಸರ್ವೇ ವಿಭಕ್ತರಥವಾಹನಾಃ|

06067016c ಪಾಂಡವಾನ್ಸಮರೇ ಜಗ್ಮುಸ್ತಾವಕಾ ಭರತರ್ಷಭ||

ವಿಶಾಂಪತೇ! ಭರತರ್ಷಭ! ಆಗ ಶೀಘ್ರಗಾಮಿಗಳಾದ ಅನೇಕ ಗೋಪರು ಮತ್ತು ಬಹುಸಹಸ್ರ ಗೋವಾಸನರ ಸೇನೆಯಿಂದ ಆವೃತರಾಗಿ ಕಾಂಬೋಜಮುಖ್ಯರು, ಮದ್ರ-ಸೌವೀರ-ಗಾಂಧಾರ-ತ್ರಿಗರ್ತರು, ಸರ್ವಕಾಲಿಂಗಮುಖ್ಯರಿಂದ ಆವೃತನಾದ ಕಲಿಂಗಾಧಿಪತಿ, ದುಃಶಾಸನನನ್ನು ಮುಂದಿರಿಸಿಕೊಂಡು ಆನೆ ಮತ್ತು ನರಗಣಗಳ ಸೇನೆ, ಸರ್ವರಾಜರೊಂದಿಗೆ ನೃಪತಿ ಜಯದ್ರಥ, ಮತ್ತು ನಿನ್ನ ಪುತ್ರನಿಂದ ಪ್ರಚೋದಿತರಾದ ಹದಿಲಾಲ್ಕು ಸಾವಿರ ಶ್ರೇಷ್ಠ ಅಶ್ವಯೋಧರು ಸೌಬಲನನ್ನು ಸುತ್ತುವರೆದು ಎಲ್ಲರೂ ಒಟ್ಟಿಗೇ ಮತ್ತು ಪ್ರತ್ಯೇಕವಾಗಿ ರಥ ವಾಹನಗಳಿಂದ ಪಾಂಡವರೊಂದಿಗೆ ಯುದ್ಧಮಾಡ ತೊಡಗಿದರು.

06067017a ರಥಿಭಿರ್ವಾರಣೈರಶ್ವೈಃ ಪದಾತೈಶ್ಚ ಸಮೀರಿತಂ|

06067017c ಘೋರಮಾಯೋಧನಂ ಜಜ್ಞೇ ಮಹಾಭ್ರಸದೃಶಂ ರಜಃ||

ರಥಿಗಳು, ಆನೆಗಳು ಮತ್ತು ಕುದುರೆಗಳ ಚಲನೆಯಿಂದ ಮೇಲೆದ್ದ ಮೇಘ ಸದೃಶ ಧೂಳು ಯುದ್ಧವನ್ನು ಇನ್ನಷ್ಟು ಭಯಂಕರವಾಗಿ ಮಾಡಿತು.

06067018a ತೋಮರಪ್ರಾಸನಾರಾಚಗಜಾಶ್ವರಥಯೋಧಿನಾಂ|

06067018c ಬಲೇನ ಮಹತಾ ಭೀಷ್ಮಃ ಸಮಸಜ್ಜತ್ ಕಿರೀಟಿನಾ||

ತೋಮರ, ಪ್ರಾಸ, ನಾರಾಚಗಳನ್ನು ಹೊಂದಿದ್ದ ಗಜಾಶ್ವರಥಯೋಧರ ಮಹಾಬಲದಿಂದ ಭೀಷ್ಮನು ಕಿರೀಟಿಯನ್ನು ಆಕ್ರಮಣಿಸಿದನು.

06067019a ಆವಂತ್ಯಃ ಕಾಶಿರಾಜೇನ ಭೀಮಸೇನೇನ ಸೈಂಧವಃ|

06067019c ಅಜಾತಶತ್ರುರ್ಮದ್ರಾಣಾಂ ಋಷಭೇಣ ಯಶಸ್ವಿನಾ|

06067019e ಸಹಪುತ್ರಃ ಸಹಾಮಾತ್ಯಃ ಶಲ್ಯೇನ ಸಮಸಜ್ಜತ||

ಅವಂತಿಯವನು ಕಾಶಿರಾಜನೊಂದಿಗೆ, ಸೈಂಧವನು ಭೀಮಸೇನನೊಂದಿಗೆ, ಅಜಾತ ಶತ್ರುವು ಮಕ್ಕಳು ಅಮಾತ್ಯರೊಂದಿಗೆ ಮದ್ರರ ಋಷಭ ಯಶಸ್ವಿ ಶಲ್ಯನೊಂದಿಗೆ ಯುದ್ಧಮಾಡಿದರು.

06067020a ವಿಕರ್ಣಃ ಸಹದೇವೇನ ಚಿತ್ರಸೇನಃ ಶಿಖಂಡಿನಾ|

06067020c ಮತ್ಸ್ಯಾ ದುರ್ಯೋಧನಂ ಜಗ್ಮುಃ ಶಕುನಿಂ ಚ ವಿಶಾಂ ಪತೇ||

ವಿಶಾಂಪತೇ! ವಿಕರ್ಣನು ಸಹದೇವನೊಡನೆ, ಶಿಖಂಡಿಯು ಚಿತ್ರಸೇನನೊಡನೆ, ಮತ್ಸ್ಯರು ದುರ್ಯೋಧನ-ಶಕುನಿಯರನ್ನು ಎದುರಿಸಿ ಹೋದರು.

06067021a ದ್ರುಪದಶ್ಚೇಕಿತಾನಶ್ಚ ಸಾತ್ಯಕಿಶ್ಚ ಮಹಾರಥಃ|

06067021c ದ್ರೋಣೇನ ಸಮಸಜ್ಜಂತ ಸಪುತ್ರೇಣ ಮಹಾತ್ಮನಾ|

06067021e ಕೃಪಶ್ಚ ಕೃತವರ್ಮಾ ಚ ಧೃಷ್ಟಕೇತುಮಭಿದ್ರುತೌ||

ದ್ರುಪದ, ಚೇಕಿತಾನ ಮತ್ತು ಮಹಾರಥ ಸಾತ್ಯಕಿಯರು ಪುತ್ರನೊಡನಿದ್ದ ಮಹಾತ್ಮ ದ್ರೋಣನೊಡನೆ ಯುದ್ಧ ಮಾಡಿದರು.

06067022a ಏವಂ ಪ್ರಜವಿತಾಶ್ವಾನಿ ಭ್ರಾಂತನಾಗರಥಾನಿ ಚ|

06067022c ಸೈನ್ಯಾನಿ ಸಮಸಜ್ಜಂತ ಪ್ರಯುದ್ಧಾನಿ ಸಮಂತತಃ||

ಹೀಗೆ ಸೇನೆಯ ಅಗ್ರಭಾಗದಲ್ಲಿದ್ದ ಅಶ್ವಸೈನ್ಯಗಳೂ, ತಿರುಗುತ್ತಿದ್ದ ಆನೆ-ರಥಗಳ ಸೈನ್ಯಗಳೂ ಸರ್ವತ್ರ ಪರಸ್ಪರ ಯುದ್ಧದಲ್ಲಿ ತೊಡಗಿದರು.

06067023a ನಿರಭ್ರೇ ವಿದ್ಯುತಸ್ತೀವ್ರಾ ದಿಶಶ್ಚ ರಜಸಾವೃತಾಃ|

06067023c ಪ್ರಾದುರಾಸನ್ಮಹೋಲ್ಕಾಶ್ಚ ಸನಿರ್ಘಾತಾ ವಿಶಾಂ ಪತೇ||

ವಿಶಾಂಪತೇ! ಮೋಡಗಳಿಲ್ಲದಿರುವ ಆಕಾಶದಲ್ಲಿ ಕಣ್ಣುಗಳನ್ನು ಕೋರೈಸುವ ಅತಿ ತೀವ್ರ ಮಿಂಚು ಕಾಣಿಸಿಕೊಂಡಿತು. ದಿಕ್ಕುಗಳು ಧೂಳಿನಿಂದ ತುಂಬಿಹೋದವು. ಸಿಡಿಲಿಗೆ ಸಮಾನ ಶಬ್ಧದೊಂದಿಗೆ ಉಲ್ಕೆಗಳು ಕಾಣಿಸಿದವು.

06067024a ಪ್ರವವೌ ಚ ಮಹಾವಾತಃ ಪಾಂಸುವರ್ಷಂ ಪಪಾತ ಚ|

06067024c ನಭಸ್ಯಂತರ್ದಧೇ ಸೂರ್ಯಃ ಸೈನ್ಯೇನ ರಜಸಾವೃತಃ||

ಚಂಡಮಾರುತವು ಹುಟ್ಟಿ ಧೂಳಿನ ಮಳೆಯನ್ನೇ ಸುರಿಸಿತು. ಸೈನ್ಯಗಳು ಏರಿಸಿದ ಧೂಳು ನಭವನ್ನು ಸೇರಿ ಸೂರ್ಯನನ್ನು ಮುಚ್ಚಿಹಾಕಿತು.

06067025a ಪ್ರಮೋಹಃ ಸರ್ವಸತ್ತ್ವಾನಾಮತೀವ ಸಮಪದ್ಯತ|

06067025c ರಜಸಾ ಚಾಭಿಭೂತಾನಾಮಸ್ತ್ರಜಾಲೈಶ್ಚ ತುದ್ಯತಾಂ||

ಧೂಳಿನಿಂದ ತುಂಬಿಕೊಂಡ ಮತ್ತು ಅಸ್ತ್ರಜಾಲಗಳಿಂದ ಪೀಡಿತರಾದ ಸರ್ವ ಸತ್ತ್ವಗಳಲ್ಲಿ ಅತೀವ ಭ್ರಾಂತಿಯುಂಟಾಯಿತು.

06067026a ವೀರಬಾಹುವಿಸೃಷ್ಟಾನಾಂ ಸರ್ವಾವರಣಭೇದಿನಾಂ|

06067026c ಸಂಘಾತಃ ಶರಜಾಲಾನಾಂ ತುಮುಲಃ ಸಮಪದ್ಯತ||

ವೀರರ ಬಾಹುಗಳಿಂದ ಪ್ರಯೋಗಿಸಲ್ಪಟ್ಟ, ಸರ್ವ ಆವರಣಗಳನ್ನೂ ಭೇದಿಸಬಲ್ಲಂತಹ ಶರಜಾಲಗಳ ಸಂಘಾತದಿಂದ ತುಮುಲವುಂಟಾಯಿತು.

06067027a ಪ್ರಕಾಶಂ ಚಕ್ರುರಾಕಾಶಮುದ್ಯತಾನಿ ಭುಜೋತ್ತಮೈಃ|

06067027c ನಕ್ಷತ್ರವಿಮಲಾಭಾನಿ ಶಸ್ತ್ರಾಣಿ ಭರತರ್ಷಭ||

ಭರತರ್ಷಭ! ಭುಜೋತ್ತಮರಿಂದ ಪ್ರಯೋಗಿಸಲ್ಪಟ್ಟ ನಕ್ಷತ್ರಗಳಂತೆ ಹೊಳೆಯುತ್ತಿದ್ದ ಶಸ್ತ್ರಗಳು ಆಕಾಶದಲ್ಲಿ ಬೆಳಕನ್ನುಂಟುಮಾಡಿದವು.

06067028a ಆರ್ಷಭಾಣಿ ವಿಚಿತ್ರಾಣಿ ರುಕ್ಮಜಾಲಾವೃತಾನಿ ಚ|

06067028c ಸಂಪೇತುರ್ದಿಕ್ಷು ಸರ್ವಾಸು ಚರ್ಮಾಣಿ ಭರತರ್ಷಭ||

ಭರತರ್ಷಭ! ಸುವರ್ಣಮಯ ಬಲೆಗಳಿಂದ ಪರಿವೃತವಾಗಿದ್ದ, ಎತ್ತಿನ ಚರ್ಮದಿಂದ ಮಾಡಲ್ಪಟ್ಟಿದ್ದ, ಚಿತ್ರವಿಚಿತ್ರ ಗುರಾಣಿಗಳು ರಣಾಂಗಣದ ಎಲ್ಲ ದಿಕ್ಕುಗಳಲ್ಲಿಯೂ ಬಿದ್ದಿದ್ದವು.

06067029a ಸೂರ್ಯವರ್ಣೈಶ್ಚ ನಿಸ್ತ್ರಿಂಶೈಃ ಪಾತ್ಯಮಾನಾನಿ ಸರ್ವಶಃ|

06067029c ದಿಕ್ಷು ಸರ್ವಾಸ್ವದೃಶ್ಯಂತ ಶರೀರಾಣಿ ಶಿರಾಂಸಿ ಚ||

ಸೂರ್ಯವರ್ಣದ ಖಡ್ಗಗಳಿಂದ ಬೀಳಿಸಲ್ಪಟ್ಟ ಶರೀರ-ಶಿರಗಳು ಎಲ್ಲಕಡೆ ಎಲ್ಲ ದಿಕ್ಕುಗಳಲ್ಲಿ ಕಂಡುಬಂದವು.

06067030a ಭಗ್ನಚಕ್ರಾಕ್ಷನೀಡಾಶ್ಚ ನಿಪಾತಿತಮಹಾಧ್ವಜಾಃ|

06067030c ಹತಾಶ್ವಾಃ ಪೃಥಿವೀಂ ಜಗ್ಮುಸ್ತತ್ರ ತತ್ರ ಮಹಾರಥಾಃ||

ಅಲ್ಲಲ್ಲಿ ಗಾಲಿಗಳು-ನೊಗಗಳು ಮಹಾಧ್ವಜಗಳು ತುಂಡಾಗಿ ಬಿದ್ದಿದ್ದವು ಮತ್ತು ಸತ್ತಿರುವ ಕುದುರೆ-ಮಹಾರಥರು ನೆಲಕ್ಕೀಡಾಗಿದ್ದರು.

06067031a ಪರಿಪೇತುರ್ಹಯಾಶ್ಚಾತ್ರ ಕೇ ಚಿಚ್ಚಸ್ತ್ರಕೃತವ್ರಣಾಃ|

06067031c ರಥಾನ್ವಿಪರಿಕರ್ಷಂತೋ ಹತೇಷು ರಥಯೋಧಿಷು||

ಶಸ್ತ್ರಗಳಿಂದ ಗಾಯಗೊಂಡ ಇನ್ನು ಕೆಲವು ಕುದುರೆಗಳು ರಥಯೋಧರು ಹತರಾಗಿದ್ದರೂ ರಥಗಳನ್ನು ಎಳೆದು ಕೊಂಡು ಹೋಗುತ್ತಿದ್ದವು.

06067032a ಶರಾಹತಾ ಭಿನ್ನದೇಹಾ ಬದ್ಧಯೋಕ್ತ್ರಾ ಹಯೋತ್ತಮಾಃ|

06067032c ಯುಗಾನಿ ಪರ್ಯಕರ್ಷಂತ ತತ್ರ ತತ್ರ ಸ್ಮ ಭಾರತ||

ಭಾರತ! ಕೆಲವು ಉತ್ತಮ ಕುದುರೆಗಳು ಶರಗಳಿಂದ ಹೊಡೆಯಲ್ಪಟ್ಟು ಭಿನ್ನ ದೇಹಿಗಳಾಗಿದ್ದರೂ ಕಟ್ಟಿದ ನೊಗಗಳನ್ನು ಆಲ್ಲಲ್ಲಿ ಎಳೆದುಕೊಂಡು ಹೋಗುತ್ತಿದ್ದವು.

06067033a ಅದೃಶ್ಯಂತ ಸಸೂತಾಶ್ಚ ಸಾಶ್ವಾಃ ಸರಥಯೋಧಿನಃ|

06067033c ಏಕೇನ ಬಲಿನಾ ರಾಜನ್ವಾರಣೇನ ಹತಾ ರಥಾಃ||

ರಾಜನ್! ಕೆಲವೊಂದೆಡೆ ಒಂದೇ ಬಲಶಾಲಿ ಆನೆಯಿಂದ ಸೂತ, ಕುದುರೆ, ಮತ್ತು ರಥದೊಡನೆ ಹತರಾದ ರಥಿಗಳು ಕಂಡುಬಂದರು.

06067034a ಗಂಧಹಸ್ತಿಮದಸ್ರಾವಮಾಘ್ರಾಯ ಬಹವೋ ರಣೇ|

06067034c ಸಂನ್ನಿಪಾತೇ ಬಲೌಘಾನಾಂ ವೀತಮಾದದಿರೇ ಗಜಾಃ||

ಅನೇಕ ಸೈನ್ಯಗಳು ಸಂಹಾರವಾಗುತ್ತಿದ್ದ ಆ ರಣದಲ್ಲಿ ಮದೋದಕವನ್ನು ಸುರಿಸುತ್ತಿದ್ದ ಆನೆಗಳ ಗಂಧವನ್ನೇ ಆಘ್ರಾಣಿಸಿ ಇತರ ಆನೆಗಳು ಆಸಕ್ತಿಯನ್ನು ಕಳೆದುಕೊಂಡವು.

06067035a ಸತೋಮರಮಹಾಮಾತ್ರೈರ್ನಿಪತದ್ಭಿರ್ಗತಾಸುಭಿಃ|

06067035c ಬಭೂವಾಯೋಧನಂ ಚನ್ನಂ ನಾರಾಚಾಭಿಹತೈರ್ಗಜೈಃ||

ನಾರಾಚಗಳಿಂದ ಸಂಹರಿಸಲ್ಪಟ್ಟು ತೋಮರಸಹಿತ ಕೆಳಗೆ ಬೀಳುತ್ತಿದ್ದ ಮಾವಟಿಗರಿಂದಲೂ ಅಸುನೀಗಿದ ಆನೆಗಳಿಂದಲೂ ಆ ರಣಭೂಮಿಯು ಮುಚ್ಚಿ ಹೋಯಿತು.

06067036a ಸಂನ್ನಿಪಾತೇ ಬಲೌಘಾನಾಂ ಪ್ರೇಷಿತೈರ್ವರವಾರಣೈಃ|

06067036c ನಿಪೇತುರ್ಯುಧಿ ಸಂಭಗ್ನಾಃ ಸಯೋಧಾಃ ಸಧ್ವಜಾ ರಥಾಃ||

ಸೇನೆಗಳ ಸಂಘರ್ಷದಲ್ಲಿ ಪ್ರಚೋದಿತಗೊಂಡ ಶ್ರೇಷ್ಠ ಆನೆಗಳು ಯೋಧ-ಧ್ವಜಗಳೊಂದಿಗೆ ಅನೇಕ ರಥಗಳನ್ನು ಮುರಿದು ಉರುಳಿಸಿದವು.

06067037a ನಾಗರಾಜೋಪಮೈರ್ಹಸ್ತೈರ್ನಾಗೈರಾಕ್ಷಿಪ್ಯ ಸಮ್ಯುಗೇ|

06067037c ವ್ಯದೃಶ್ಯಂತ ಮಹಾರಾಜ ಸಂಭಗ್ನಾ ರಥಕೂಬರಾಃ||

ಮಹಾರಾಜ! ಆ ಸಂಯುಗದಲ್ಲಿ ಆನೆಗಳು ನಾಗರಾಜನಂತಿರುವ ಸೊಂಡಿಲುಗಳಿಂದ ರಥದ ನೊಗಗಳನ್ನು ಎತ್ತಿಹಾಕಿ ಮುರಿಯುವುದೂ ಕಂಡುಬಂದಿತು.

06067038a ವಿಶೀರ್ಣರಥಜಾಲಾಶ್ಚ ಕೇಶೇಷ್ವಾಕ್ಷಿಪ್ಯ ದಂತಿಭಿಃ|

06067038c ದ್ರುಮಶಾಖಾ ಇವಾವಿಧ್ಯ ನಿಷ್ಪಿಷ್ಟಾ ರಥಿನೋ ರಣೇ||

ಉದ್ದ ಸೊಂಡಿಲುಗಳಿಂದ ರಥದ ಮೇಲಿದ್ದ ರಥಿಗಳ ಕೂದಲನ್ನು ಹಿಡಿದೆಳೆದು ಮರದ ಶಾಖೆಗಳಂತೆ ಮೇಲೆತ್ತಿ ರಣದಲ್ಲಿ ಜಜ್ಜಿ ಹಾಕುತ್ತಿದ್ದವು.

06067039a ರಥೇಷು ಚ ರಥಾನ್ಯುದ್ಧೇ ಸಂಸಕ್ತಾನ್ವರವಾರಣಾಃ|

06067039c ವಿಕರ್ಷಂತೋ ದಿಶಃ ಸರ್ವಾಃ ಸಂಪೇತುಃ ಸರ್ವಶಬ್ದಗಾಃ||

ರಥಗಳು ರಥಗಳೊಂದಿಗೆ ಯುದ್ಧದಲ್ಲಿ ತೊಡಗಿರುವಾಗ ವರವಾರಣಗಳು ಅವುಗಳನ್ನು ಎಳೆದುಕೊಂಡು ಎಲ್ಲ ದಿಕ್ಕುಗಳಲ್ಲಿ ತಿರುಗಿಸಿ ಅವುಗಳನ್ನು ತಲೆಕೆಳಗೆ ಮಾಡಿ ಬೀಳಿಸುತ್ತಿದ್ದವು.

06067040a ತೇಷಾಂ ತಥಾ ಕರ್ಷತಾಂ ಚ ಗಜಾನಾಂ ರೂಪಮಾಬಭೌ|

06067040c ಸರಃಸ್ಸು ನಲಿನೀಜಾಲಂ ವಿಷಕ್ತಮಿವ ಕರ್ಷತಾಂ||

ಹಾಗೆ ಎಳೆದುಕೊಂಡು ಹೋಗುತ್ತಿರುವ ಆನೆಗಳು ನೋಡಲು ಸರೋವರದಿಂದ ಕುಮುದಗಳ ಜಾಲಗಳನ್ನು ಎಳೆದುಕೊಂಡು ಹೋಗುತ್ತಿವೆಯೋ ಎನ್ನುವಂತೆ ತೋರುತ್ತಿದ್ದವು.

06067041a ಏವಂ ಸಂಚಾದಿತಂ ತತ್ರ ಬಭೂವಾಯೋಧನಂ ಮಹತ್|

06067041c ಸಾದಿಭಿಶ್ಚ ಪದಾತೈಶ್ಚ ಸಧ್ವಜೈಶ್ಚ ಮಹಾರಥೈಃ||

ಈ ರೀತಿ ಅಲ್ಲಿ ಪ್ರಾಣಗಳನ್ನು ತೊರೆದ ಕುದುರೆ ಸವಾರರಿಂದಲೂ, ಪದಾತಿಗಳಿಂದಲೂ, ಧ್ವಜಗಳಿಂದ ಕೂಡಿದ ಮಹಾರಥಗಳಿಂದಲೂ ಆ ವಿಶಾಲ ರಣ ಭೂಮಿಯು ತುಂಬಿಹೋಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಂಕುಲಯುದ್ಧೇ ಸಪ್ತಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ಅರವತ್ತೇಳನೇ ಅಧ್ಯಾಯವು.

Image result for flowers against white background

Comments are closed.