Bhishma Parva: Chapter 65

ಭೀಷ್ಮ ಪರ್ವ: ಭೀಷ್ಮವಧ ಪರ್ವ

೬೫

ಐದನೆಯ ದಿವಸದ ಯುದ್ಧ

ಕೌರವರ ಮಕರವ್ಯೂಹ ರಚನೆ ಮತ್ತು ಪಾಂಡವರ ಶ್ವೇನವ್ಯೂಹ ರಚನೆ; ಯುದ್ಧಾರಂಭ (೧-೧೨). ತುಮುಲ ಯುದ್ಧ (೧೩-೩೩).

06065001 ಸಂಜಯ ಉವಾಚ|

06065001a ವ್ಯುಷಿತಾಯಾಂ ಚ ಶರ್ವರ್ಯಾಮುದಿತೇ ಚ ದಿವಾಕರೇ|

06065001c ಉಭೇ ಸೇನೇ ಮಹಾರಾಜ ಯುದ್ಧಾಯೈವ ಸಮೀಯತುಃ||

ಸಂಜಯನು ಹೇಳಿದನು: “ಮಹಾರಾಜ! ರಾತ್ರಿಯು ಕಳೆದು ದಿವಾಕರನು ಉದಯಿಸಲು ಎರಡೂ ಸೇನೆಗಳೂ ಯುದ್ಧಕ್ಕೆ ಬಂದು ಸೇರಿದವು.

06065002a ಅಭ್ಯಧಾವಂಶ್ಚ ಸಂಕ್ರುದ್ಧಾಃ ಪರಸ್ಪರಜಿಗೀಷವಃ|

06065002c ತೇ ಸರ್ವೇ ಸಹಿತಾ ಯುದ್ಧೇ ಸಮಾಲೋಕ್ಯ ಪರಸ್ಪರಂ||

ಅವರೆಲ್ಲರೂ ಒಟ್ಟಿಗೇ ಪರಸ್ಪರರನ್ನು ಸಂಕ್ರುದ್ಧರಾಗಿ ನೋಡುತ್ತಾ, ಪರಸ್ಪರರನ್ನು ಗೆಲ್ಲಲು ಬಯಸಿ ಹೊರಟರು.

06065003a ಪಾಂಡವಾ ಧಾರ್ತರಾಷ್ಟ್ರಾಶ್ಚ ರಾಜನ್ದುರ್ಮಂತ್ರಿತೇ ತವ|

06065003c ವ್ಯೂಹೌ ಚ ವ್ಯೂಹ್ಯ ಸಂರಬ್ಧಾಃ ಸಂಪ್ರಯುದ್ಧಾಃ ಪ್ರಹಾರಿಣಃ||

ರಾಜನ್! ನಿನ್ನ ದುರ್ಮಂತ್ರದಿಂದಾಗಿ ಪಾಂಡವರು ಮತ್ತು ಧಾರ್ತರಾಷ್ಟ್ರರು ವ್ಯೂಹಗಳನ್ನು ರಚಿಸಿ ಸಂರಬ್ಧರಾಗಿ ಪ್ರಹರಿಸಲು ಉದ್ಯುಕ್ತರಾದರು.

06065004a ಅರಕ್ಷನ್ಮಕರವ್ಯೂಹಂ ಭೀಷ್ಮೋ ರಾಜನ್ಸಮಂತತಃ|

06065004c ತಥೈವ ಪಾಂಡವಾ ರಾಜನ್ನರಕ್ಷನ್ವ್ಯೂಹಮಾತ್ಮನಃ||

ರಾಜನ್! ಭೀಷ್ಮನು ಮಕರವ್ಯೂಹವನ್ನು ರಚಿಸಿ ಸುತ್ತಲೂ ಅದರ ರಕ್ಷಣೆಯನ್ನು ಮಾಡಿದನು. ರಾಜನ್! ಹಾಗೆಯೇ ಪಾಂಡವರು ತಮ್ಮ ವ್ಯೂಹದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿದರು.

06065005a ಸ ನಿರ್ಯಯೌ ರಥಾನೀಕಂ ಪಿತಾ ದೇವವ್ರತಸ್ತವ|

06065005c ಮಹತಾ ರಥವಂಶೇನ ಸಂವೃತೋ ರಥಿನಾಂ ವರಃ||

ನಿನ್ನ ತಂದೆ ರಥಿಗಳಲ್ಲಿ ಶ್ರೇಷ್ಠ ದೇವವ್ರತನು ಮಹಾ ರಥಸಂಕುಲದಿಂದ ಆವೃತನಾಗಿ ರಥಸೇನೆಯೊಂದಿಗೆ ಹೊರಟನು.

06065006a ಇತರೇತರಮನ್ವೀಯುರ್ಯಥಾಭಾಗಮವಸ್ಥಿತಾಃ|

06065006c ರಥಿನಃ ಪತ್ತಯಶ್ಚೈವ ದಂತಿನಃ ಸಾದಿನಸ್ತಥಾ||

ಆಯಾ ವಿಭಾಗಗಳಲ್ಲಿ ವ್ಯವಸ್ಥಿತರಾದ ರಥಿಕರು, ಪದಾತಿಗಳು, ಆನೆ ಸವಾರರು ಮತ್ತು ಕುದುರೆ ಸವಾರರು ಒಂದರ ಹಿಂದೆ ಒಂದರಂತೆ ಅವನ ರಥಸೇನೆಯನ್ನು ಹಿಂಬಾಲಿಸಿ ನಡೆದವು.

06065007a ತಾನ್ದೃಷ್ಟ್ವಾ ಪ್ರೋದ್ಯತಾನ್ಸಂಖ್ಯೇ ಪಾಂಡವಾಶ್ಚ ಯಶಸ್ವಿನಃ|

06065007c ಶ್ಯೇನೇನ ವ್ಯೂಹರಾಜೇನ ತೇನಾಜಯ್ಯೇನ ಸಮ್ಯುಗೇ||

ಉದ್ಯುಕ್ತರಾಗಿರುವ ಅವರನ್ನು ನೋಡಿ ಯಶಸ್ವಿ ಪಾಂಡವರು ಕೂಡ ಸಂಯುಗದಲ್ಲಿ ಜಯಿಸಲಸಾಧ್ಯವಾದ ವ್ಯೂಹರಾಜ ಶ್ಯೇನವ್ಯೂಹವನ್ನು ರಚಿಸಿದರು.

06065008a ಅಶೋಭತ ಮುಖೇ ತಸ್ಯ ಭೀಮಸೇನೋ ಮಹಾಬಲಃ|

06065008c ನೇತ್ರೇ ಶಿಖಂಡೀ ದುರ್ಧರ್ಷೋ ಧೃಷ್ಟದ್ಯುಮ್ನಶ್ಚ ಪಾರ್ಷತಃ||

ಅದರ ಮುಖದಲ್ಲಿ ಮಹಾಬಲ ಭೀಮಸೇನನೂ, ಕಣ್ಣುಗಳಲ್ಲಿ ದುರ್ಧರ್ಷ ಶಿಖಂಡಿ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಶೋಭಿಸಿದರು.

06065009a ಶೀರ್ಷಂ ತಸ್ಯಾಭವದ್ವೀರಃ ಸಾತ್ಯಕಿಃ ಸತ್ಯವಿಕ್ರಮಃ|

06065009c ವಿಧುನ್ವನ್ಗಾಂಡಿವಂ ಪಾರ್ಥೋ ಗ್ರೀವಾಯಾಮಭವತ್ತದಾ||

ವೀರ ಸತ್ಯವಿಕ್ರಮ ಸಾತ್ಯಕಿಯು ಅದರ ತಲೆಯ ಭಾಗವಾದನು. ಗಾಂಡೀವವನ್ನು ಟೇಂಕರಿಸುತ್ತಾ ಪಾರ್ಥನು ಅದರ ಕುತ್ತಿಗೆಯಾದನು.

06065010a ಅಕ್ಷೌಹಿಣ್ಯಾ ಸಮಗ್ರಾ ಯಾ ವಾಮಪಕ್ಷೋಽಭವತ್ತದಾ|

06065010c ಮಹಾತ್ಮಾ ದ್ರುಪದಃ ಶ್ರೀಮಾನ್ಸಹ ಪುತ್ರೇಣ ಸಂಯುಗೇ||

ಸಂಯುಗದಲ್ಲಿ ಸಮಗ್ರ ಅಕ್ಷೌಹಿಣಿಯ ಎಡಬಾಗದಲ್ಲಿ ಪುತ್ರರೊಂದಿಗೆ ಮಹಾತ್ಮ ಶ್ರೀಮಾನ್ ದ್ರುಪದನಿದ್ದನು.

06065011a ದಕ್ಷಿಣಶ್ಚಾಭವತ್ಪಕ್ಷಃ ಕೈಕೇಯೋಽಕ್ಷೌಹಿಣೀಪತಿಃ|

06065011c ಪೃಷ್ಠತೋ ದ್ರೌಪದೇಯಾಶ್ಚ ಸೌಭದ್ರಶ್ಚಾಪಿ ವೀರ್ಯವಾನ್||

ಅದರ ಬಲಭಾಗದಲ್ಲಿ ಅಕ್ಷೌಹಿಣೀಪತಿ ಕೈಕೇಯನು ಇದ್ದನು. ಹಿಂಭಾಗದಲ್ಲಿ ದ್ರೌಪದೇಯರೂ, ವೀರ್ಯವಾನ್ ಸೌಭದ್ರನೂ ಇದ್ದರು.

06065012a ಪೃಷ್ಠೇ ಸಮಭವಚ್ಚ್ರೀಮಾನ್ಸ್ವಯಂ ರಾಜಾ ಯುಧಿಷ್ಠಿರಃ|

06065012c ಭ್ರಾತೃಭ್ಯಾಂ ಸಹಿತೋ ಧೀಮಾನ್ಯಮಾಭ್ಯಾಂ ಚಾರುವಿಕ್ರಮಃ||

ಅವರ ಹಿಂದೆ ಸೋದರರಾದ ಯಮಳರೊಡನೆ ಧೀಮಾನ್, ಚಾರುವಿಕ್ರಮ, ಸ್ವಯಂ ರಾಜಾ ಯುಧಿಷ್ಠಿರನಿದ್ದನು.

06065013a ಪ್ರವಿಶ್ಯ ತು ರಣೇ ಭೀಮೋ ಮಕರಂ ಮುಖತಸ್ತದಾ|

06065013c ಭೀಷ್ಮಮಾಸಾದ್ಯ ಸಂಗ್ರಾಮೇ ಚಾದಯಾಮಾಸ ಸಾಯಕೈಃ||

ರಣದಲ್ಲಿ ಭೀಮನು ಮಕರದ ಮುಖವನ್ನು ಪ್ರವೇಶಿಸಿ ಸಂಗ್ರಾಮದಲ್ಲಿ ಭೀಷ್ಮನನ್ನು ಎದುರಿಸಿ ಅವನನ್ನು ಸಾಯಕಗಳಿಂದ ಮುಚ್ಚಿಬಿಟ್ಟನು.

06065014a ತತೋ ಭೀಷ್ಮೋ ಮಹಾಸ್ತ್ರಾಣಿ ಪಾತಯಾಮಾಸ ಭಾರತ|

06065014c ಮೋಹಯನ್ಪಾಂಡುಪುತ್ರಾಣಾಂ ವ್ಯೂಢಂ ಸೈನ್ಯಂ ಮಹಾಹವೇ||

ಭಾರತ! ಆಗ ಭೀಷ್ಮನು ಮಹಾಹವದಲ್ಲಿ ಪಾಂಡುಪುತ್ರರ ಸೈನ್ಯ ವ್ಯೂಹವನ್ನು ಮೋಹಗೊಳಿಸುತ್ತಾ ಮಹಾಸ್ತ್ರಗಳನ್ನು ಪ್ರಯೋಗಿಸತೊಡಗಿದನು.

06065015a ಸಮ್ಮುಹ್ಯತಿ ತದಾ ಸೈನ್ಯೇ ತ್ವರಮಾಣೋ ಧನಂಜಯಃ|

06065015c ಭೀಷ್ಮಂ ಶರಸಹಸ್ರೇಣ ವಿವ್ಯಾಧ ರಣಮೂರ್ಧನಿ||

ರಣಮೂರ್ಧನಿಯಲ್ಲಿ ಸೈನ್ಯವು ಮೋಹಗೊಳ್ಳಲು ತ್ವರೆಮಾಡಿ ಧನಂಜಯನು ಭೀಷ್ಮನನ್ನು ಸಹಸ್ರ ಶರಗಳಿಂದ ಹೊಡೆದನು.

06065016a ಪರಿಸಂವಾರ್ಯ ಚಾಸ್ತ್ರಾಣಿ ಭೀಷ್ಮಮುಕ್ತಾನಿ ಸಂಯುಗೇ|

06065016c ಸ್ವೇನಾನೀಕೇನ ಹೃಷ್ಟೇನ ಯುದ್ಧಾಯ ಸಮವಸ್ಥಿತಃ||

ಸಂಯುಗದಲ್ಲಿ ಭೀಷ್ಮನು ಪ್ರಯೋಗಿಸಿದ ಅಸ್ತ್ರಗಳನ್ನು ನಿರಸನಗೊಳಿಸಿ ತನ್ನ ಸೇನೆಯು ಸಂತೋಷಗೊಂಡು ಯುದ್ಧದಲ್ಲಿ ನಿಲ್ಲುವಂತೆ ಮಾಡಿದನು.

06065017a ತತೋ ದುರ್ಯೋಧನೋ ರಾಜಾ ಭಾರದ್ವಾಜಮಭಾಷತ|

06065017c ಪೂರ್ವಂ ದೃಷ್ಟ್ವಾ ವಧಂ ಘೋರಂ ಬಲಸ್ಯ ಬಲಿನಾಂ ವರಃ|

06065017e ಭ್ರಾತೄಣಾಂ ಚ ವಧಂ ಯುದ್ಧೇ ಸ್ಮರಮಾಣೋ ಮಹಾರಥಃ||

ಆಗ ಹಿಂದೆ ತನ್ನ ಸೇನೆಯ ಘೋರ ವಧೆಯನ್ನು ನೋಡಿದ್ದ ಬಲಿಗಳಲ್ಲಿ ಶ್ರೇಷ್ಠ ಮಹಾರಥ ರಾಜಾ ದುರ್ಯೋಧನನು ಯುದ್ಧದಲ್ಲಿ ತನ್ನ ಭ್ರಾತೃಗಳ ವಧೆಯನ್ನು ಸ್ಮರಿಸಿಕೊಳ್ಳುತ್ತಾ ಭಾರದ್ವಾಜನಿಗೆ ಹೇಳಿದನು:

06065018a ಆಚಾರ್ಯ ಸತತಂ ತ್ವಂ ಹಿ ಹಿತಕಾಮೋ ಮಮಾನಘ|

06065018c ವಯಂ ಹಿ ತ್ವಾಂ ಸಮಾಶ್ರಿತ್ಯ ಭೀಷ್ಮಂ ಚೈವ ಪಿತಾಮಹಂ||

06065019a ದೇವಾನಪಿ ರಣೇ ಜೇತುಂ ಪ್ರಾರ್ಥಯಾಮೋ ನ ಸಂಶಯಃ|

06065019c ಕಿಮು ಪಾಂಡುಸುತಾನ್ಯುದ್ಧೇ ಹೀನವೀರ್ಯಪರಾಕ್ರಮಾನ್||

“ಆಚಾರ್ಯ! ಅನಘ! ನೀನು ಸತತವೂ ನನ್ನ ಹಿತವನ್ನೇ ಬಯಸುತ್ತೀಯೆ. ನಾವು ನಿನ್ನನ್ನು ಮತ್ತು ಪಿತಾಮಹ ಭೀಷ್ಮನನ್ನು ಆಶ್ರಯಿಸಿ ರಣದಲ್ಲಿ ದೇವತೆಗಳನ್ನು ಕೂಡ ಗೆಲ್ಲಬಲ್ಲೆವು ಎನ್ನುವುದರಲ್ಲಿ ಸಂಶಯವಿಲ್ಲ. ಇನ್ನು ಯುದ್ಧದಲ್ಲಿ ಹೀನಪರಾಕ್ರಮರಾದ ಪಾಂಡುಸುತರೇನು?”

06065020a ಏವಮುಕ್ತಸ್ತತೋ ದ್ರೋಣಸ್ತವ ಪುತ್ರೇಣ ಮಾರಿಷ|

06065020c ಅಭಿನತ್ಪಾಂಡವಾನೀಕಂ ಪ್ರೇಕ್ಷಮಾಣಸ್ಯ ಸಾತ್ಯಕೇಃ||

ನಿನ್ನ ಮಗನು ಹೀಗೆ ಹೇಳಲು ದ್ರೋಣನು ಸಾತ್ಯಕಿಯನ್ನು ನೋಡಿ ಪಾಂಡವರ ಸೇನೆಯ ಮೇಲೆ ಆಕ್ರಮಣಿಸಿದನು.

06065021a ಸಾತ್ಯಕಿಸ್ತು ತದಾ ದ್ರೋಣಂ ವಾರಯಾಮಾಸ ಭಾರತ|

06065021c ತತಃ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣ||

ಭಾರತ! ಸಾತ್ಯಕಿಯಾದರೋ ದ್ರೋಣನನ್ನು ತಡೆದನು. ಆಗ ಲೋಮಹರ್ಷಣ ತುಮುಲ ಯುದ್ಧವು ಪ್ರಾರಂಭವಾಯಿತು.

06065022a ಶೈನೇಯಂ ತು ರಣೇ ಕ್ರುದ್ಧೋ ಭಾರದ್ವಾಜಃ ಪ್ರತಾಪವಾನ್|

06065022c ಅವಿಧ್ಯನ್ನಿಶಿತೈರ್ಬಾಣೈರ್ಜತ್ರುದೇಶೇ ಹಸನ್ನಿವ||

ರಣದಲ್ಲಿ ಕ್ರುದ್ಧನಾದ ಪ್ರತಾಪವಾನ್ ಭಾರದ್ವಾಜನು ನಗುತ್ತಾ ಶೈನೇಯನ ಕೊರಳಿಗೆ ನಿಶಿತ ಬಾಣಗಳಿಂದ ಹೊಡೆದನು.

06065023a ಭೀಮಸೇನಸ್ತತಃ ಕ್ರುದ್ಧೋ ಭಾರದ್ವಾಜಮವಿಧ್ಯತ|

06065023c ಸಂರಕ್ಷನ್ಸಾತ್ಯಕಿಂ ರಾಜನ್ದ್ರೋಣಾಚ್ಚಸ್ತ್ರಭೃತಾಂ ವರಾತ್||

ರಾಜನ್! ಆಗ ಭೀಮಸೇನನು ಶಸ್ತ್ರಭೃತಶ್ರೇಷ್ಠ ದ್ರೋಣನಿಂದ ಸಾತ್ಯಕಿಯನ್ನು ರಕ್ಷಿಸುತ್ತಾ ಕ್ರುದ್ಧನಾಗಿ ಭಾರದ್ವಾಜನನ್ನು ಹೊಡೆದನು.

06065024a ತತೋ ದ್ರೋಣಶ್ಚ ಭೀಷ್ಮಶ್ಚ ತಥಾ ಶಲ್ಯಶ್ಚ ಮಾರಿಷ|

06065024c ಭೀಮಸೇನಂ ರಣೇ ಕ್ರುದ್ಧಾಶ್ಚಾದಯಾಂ ಚಕ್ರಿರೇ ಶರೈಃ||

ಆಗ ರಣದಲ್ಲಿ ದ್ರೋಣ, ಭೀಷ್ಮ ಮತ್ತು ಶಲ್ಯರು ಕ್ರೋಧದಿಂದ ಭೀಮಸೇನನನ್ನು ಶರಗಳಿಂದ ಹೊಡೆಯತೊಡಗಿದರು.

06065025a ತತ್ರಾಭಿಮನ್ಯುಃ ಸಂಕ್ರುದ್ಧೋ ದ್ರೌಪದೇಯಾಶ್ಚ ಮಾರಿಷ|

06065025c ವಿವ್ಯಧುರ್ನಿಶಿತೈರ್ಬಾಣೈಃ ಸರ್ವಾಂಸ್ತಾನುದ್ಯತಾಯುಧಾನ್||

ಆಗ ಸಂಕ್ರುದ್ಧರಾದ ಅಭಿಮನ್ಯು ಮತ್ತು ದ್ರೌಪದೇಯರು ನಿಶಿತ ಬಾಣಗಳಿಂದ ಮತ್ತು ಆಯುಧಗಳಿಂದ ಅವರನ್ನು ಹೊಡೆದರು.

06065026a ಭೀಷ್ಮದ್ರೋಣೌ ಚ ಸಂಕ್ರುದ್ಧಾವಾಪತಂತೌ ಮಹಾಬಲೌ|

06065026c ಪ್ರತ್ಯುದ್ಯಯೌ ಶಿಖಂಡೀ ತು ಮಹೇಷ್ವಾಸೋ ಮಹಾಹವೇ||

ಆ ಮಹಾಹವದಲ್ಲಿ ಸಂಕ್ರುದ್ಧರಾಗಿ ಮೇಲೆ ಎರಗಿ ಬರುತ್ತಿರುವ ಮಹಾಬಲ ಭೀಷ್ಮ-ದ್ರೋಣರನ್ನು ಮಹೇಷ್ವಾಸ ಶಿಖಂಡಿಯು ಎದುರಿಸಿ ಯುದ್ಧಮಾಡಿದನು.

06065027a ಪ್ರಗೃಹ್ಯ ಬಲವದ್ವೀರೋ ಧನುರ್ಜಲದನಿಸ್ವನಂ|

06065027c ಅಭ್ಯವರ್ಷಚ್ಚರೈಸ್ತೂರ್ಣಂ ಚಾದಯಾನೋ ದಿವಾಕರಂ||

ಆ ವೀರನು ಮೋಡದ ಗರ್ಜನೆಯಿದ್ದ ಬಲ ಧನುಸ್ಸನ್ನು ಹಿಡಿದು ಕ್ಷಣಮಾತ್ರದಲ್ಲಿ ದಿವಾಕರನನ್ನೇ ಮುಚ್ಚಿಬಿಡುವಂತೆ ಶರವರ್ಷವನ್ನು ಸುರಿಸಿದನು.

06065028a ಶಿಖಂಡಿನಂ ಸಮಾಸಾದ್ಯ ಭರತಾನಾಂ ಪಿತಾಮಹಃ|

06065028c ಅವರ್ಜಯತ ಸಂಗ್ರಾಮೇ ಸ್ತ್ರೀತ್ವಂ ತಸ್ಯಾನುಸಂಸ್ಮರನ್||

ಶಿಖಂಡಿಯನ್ನು ಎದುರಿಸಿ ಭರತರ ಪಿತಾಮಹನು ಅವನ ಸ್ತ್ರೀತ್ವವನ್ನು ಸ್ಮರಿಸಿಕೊಂಡು ಹೋರಾಡುವುದನ್ನು ನಿಲ್ಲಿಸಿದನು.

06065029a ತತೋ ದ್ರೋಣೋ ಮಹಾರಾಜ ಅಭ್ಯದ್ರವತ ತಂ ರಣೇ|

06065029c ರಕ್ಷಮಾಣಸ್ತತೋ ಭೀಷ್ಮಂ ತವ ಪುತ್ರೇಣ ಚೋದಿತಃ||

ಮಹಾರಾಜ! ಆಗ ದ್ರೋಣನು ನಿನ್ನ ಪುತ್ರನಿಂದ ಚೋದಿತನಾಗಿ ಭೀಷ್ಮನನ್ನು ರಕ್ಷಿಸಲು ರಣದಲ್ಲಿ ಮುಂದೆಬಂದನು.

06065030a ಶಿಖಂಡೀ ತು ಸಮಾಸಾದ್ಯ ದ್ರೋಣಂ ಶಸ್ತ್ರಭೃತಾಂ ವರಂ|

06065030c ಅವರ್ಜಯತ ಸಂಗ್ರಾಮೇ ಯುಗಾಂತಾಗ್ನಿಮಿವೋಲ್ಬಣಂ||

ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನು ಶಿಖಂಡಿಯನ್ನು ಎದುರಿಸಿ ಸಂಗ್ರಾಮದಲ್ಲಿ ಯುಗಾಂತದ ಅಗ್ನಿಯಂತೆ ಉಲ್ಬಣಿಸಿ ಅವನನ್ನು ಹೊರಹಾಕಿದನು.

06065031a ತತೋ ಬಲೇನ ಮಹತಾ ಪುತ್ರಸ್ತವ ವಿಶಾಂ ಪತೇ|

06065031c ಜುಗೋಪ ಭೀಷ್ಮಮಾಸಾದ್ಯ ಪ್ರಾರ್ಥಯಾನೋ ಮಹದ್ಯಶಃ||

ವಿಶಾಂಪತೇ! ಆಗ ನಿನ್ನ ಪುತ್ರನು ಮಹಾ ಸೇನೆಯೊಂದಿಗೆ ಭೀಷ್ಮನ ಸಮೀಪಕ್ಕೆ ಬಂದು ಅವನನ್ನು ರಕ್ಷಿಸಿದನು.

06065032a ತಥೈವ ಪಾಂಡವಾ ರಾಜನ್ಪುರಸ್ಕೃತ್ಯ ಧನಂಜಯಂ|

06065032c ಭೀಷ್ಮಮೇವಾಭ್ಯವರ್ತಂತ ಜಯೇ ಕೃತ್ವಾ ದೃಢಾಂ ಮತಿಂ||

ರಾಜನ್! ಹಾಗೆಯೇ ಪಾಂಡವರು ಧನಂಜಯನನ್ನು ಮುಂದಿಟ್ಟುಕೊಂಡು ಜಯದ ಕುರಿತು ದೃಢ ನಿಶ್ಚಯವನ್ನು ಮಾಡಿ ಭೀಷ್ಮನನ್ನೇ ಆಕ್ರಮಣಿಸಿದರು.

06065033a ತದ್ಯುದ್ಧಮಭವದ್ಘೋರಂ ದೇವಾನಾಂ ದಾನವೈರಿವ|

06065033c ಜಯಂ ಚ ಕಾಂಕ್ಷತಾಂ ನಿತ್ಯಂ ಯಶಶ್ಚ ಪರಮಾದ್ಭುತಂ||

ಆಗ ಅಲ್ಲಿ ದೇವ-ದಾನರವರ ನಡುವಿನಂತೆ ನಿತ್ಯ ಯಶ ಮತ್ತು ಜಯವನ್ನು ಬಯಸುವ ಅವರ ನಡುವೆ ಪರಮಾದ್ಭುತವಾದ ಘೋರ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಪಂಚಮದಿವಸಯುದ್ಧಾರಂಭೇ ಪಂಚಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಐದನೇ ದಿನದ ಯುದ್ಧಾರಂಭ ಎನ್ನುವ ಅರವತ್ತೈದನೇ ಅಧ್ಯಾಯವು.

Image result for flowers against white background

 

Comments are closed.