Bhishma Parva: Chapter 62

ಭೀಷ್ಮ ಪರ್ವ: ಭೀಷ್ಮವಧ ಪರ್ವ

೬೨

ಪರಮ ವಿಸ್ಮಿತರಾದ ದೇವರ್ಷಿ-ಗಂಧರ್ವರು “ಭಗವಂತನಾದ ನೀನು ಯಾರಿಗೆ ವಿನಯದಿಂದ ವರಿಷ್ಠ ಸ್ತುತಿ ಮತ್ತು ಮಾತುಗಳಿಂದ ನಮಸ್ಕರಿಸಿದೆ?” ಎಂದು ಬ್ರಹ್ಮನನ್ನು ಕೇಳಲು ಅವನು “ಮಾನುಷಲೋಕದಲ್ಲಿ ವಾಸುದೇವನೆಂದು ಕರೆಯಲ್ಪಟ್ಟು ಅಸುರರ ವಧೆಗಾಗಿ ಮಹೀತಲಲ್ಲಿ ಸಂಭವಿಸು.” ಎಂದು ನಾರಾಯಣನಲ್ಲಿ ಕೇಳಿದೆನೆಂದು ಹೇಳಿ, ವಾಸುದೇವನನ್ನು ಕೇವಲ ಮನುಷ್ಯನೆಂದು ತಿಳಿಯುವವರು ತಾಮಸರು ಎಂದುದು (೧-೨೫). “ಗೋವಿಂದ-ಧನಂಜಯರನ್ನು ದ್ವೇಷಿಸುತ್ತಿರುವುದನ್ನು ನೋಡಿದರೆ ನೀನು ತಮಸ್ಸಿನಿಂದ ಆವೃತನಾಗಿರುವ ಕ್ರೂರ ರಾಕ್ಷಸನೆಂದು ನಾನು ಭಾವಿಸುತ್ತೇನೆ” ಎಂದು ಭೀಷ್ಮನು ದುರ್ಯೋಧನನಿಗೆ ಹೇಳಿದುದು (೨೬-೪೦).

06062001 ಭೀಷ್ಮ ಉವಾಚ|

06062001a ತತಃ ಸ ಭಗವಾನ್ದೇವೋ ಲೋಕಾನಾಂ ಪರಮೇಶ್ವರಃ|

06062001c ಬ್ರಹ್ಮಾಣಂ ಪ್ರತ್ಯುವಾಚೇದಂ ಸ್ನಿಗ್ಧಗಂಭೀರಯಾ ಗಿರಾ||

ಭೀಷ್ಮನು ಹೇಳಿದನು: “ಲೋಕಗಳ ಪರಮೇಶ್ವರ ಭಗವಾನ್ ದೇವನು ಸ್ನಿಗ್ಧ ಗಂಭೀರ ಸ್ವರದಲ್ಲಿ ಬ್ರಹ್ಮನಿಗೆ ಹೀಗೆ ಉತ್ತರಿಸಿದನು.

06062002a ವಿದಿತಂ ತಾತ ಯೋಗಾನ್ಮೇ ಸರ್ವಮೇತತ್ತವೇಪ್ಸಿತಂ|

06062002c ತಥಾ ತದ್ಭವಿತೇತ್ಯುಕ್ತ್ವಾ ತತ್ರೈವಾಂತರಧೀಯತ||

“ಮಗೂ! ನನ್ನ ಯೋಗದಿಂದ ನೀನು ಬಯಸಿದುದು ನನಗೆ ತಿಳಿದಿದೆ. ಹಾಗೆಯೇ ಆಗುತ್ತದೆ.” ಎಂದು ಹೇಳಿ ಅಲ್ಲಿಯೇ ಅಂತರ್ಧಾನನಾದನು.

06062003a ತತೋ ದೇವರ್ಷಿಗಂಧರ್ವಾ ವಿಸ್ಮಯಂ ಪರಮಂ ಗತಾಃ|

06062003c ಕೌತೂಹಲಪರಾಃ ಸರ್ವೇ ಪಿತಾಮಹಮಥಾಬ್ರುವನ್||

ಆಗ ದೇವರ್ಷಿಗಂಧರ್ವರು ಪರಮ ವಿಸ್ಮಿತರಾದರು. ಕೌತೂಹಲಪರರಾದ ಎಲ್ಲರೂ ಪಿತಾಮಹನಿಗೆ ಹೇಳಿದರು:

06062004a ಕೋ ನ್ವಯಂ ಯೋ ಭಗವತಾ ಪ್ರಣಮ್ಯ ವಿನಯಾದ್ವಿಭೋ|

06062004c ವಾಗ್ಭಿಃ ಸ್ತುತೋ ವರಿಷ್ಠಾಭಿಃ ಶ್ರೋತುಮಿಚ್ಛಾಮ ತಂ ವಯಂ||

“ವಿಭೋ! ಭಗವಂತನಾದ ನೀನು ಯಾರಿಗೆ ವಿನಯದಿಂದ ವರಿಷ್ಠ ಸ್ತುತಿ ಮತ್ತು ಮಾತುಗಳಿಂದ ನಮಸ್ಕರಿಸಿದೆ? ಅದನ್ನು ನಾವು ಕೇಳಲು ಬಯಸುತ್ತೇವೆ.”

06062005a ಏವಮುಕ್ತಸ್ತು ಭಗವಾನ್ಪ್ರತ್ಯುವಾಚ ಪಿತಾಮಹಃ|

06062005c ದೇವಬ್ರಹ್ಮರ್ಷಿಗಂಧರ್ವಾನ್ಸರ್ವಾನ್ಮಧುರಯಾ ಗಿರಾ||

ಹೀಗೆ ಕೇಳಲು ಭಗವಾನ್ ಪಿತಾಮಹನು ದೇವ-ಬ್ರಹ್ಮರ್ಷಿ-ಗಂಧರ್ವರೆಲ್ಲರಿಗೆ ಮಧುರ ಧ್ವನಿಯಲ್ಲಿ ಉತ್ತರಿಸಿದನು:

06062006a ಯತ್ತತ್ಪರಂ ಭವಿಷ್ಯಂ ಚ ಭವಿತವ್ಯಂ ಚ ಯತ್ಪರಂ|

06062006c ಭೂತಾತ್ಮಾ ಯಃ ಪ್ರಭುಶ್ಚೈವ ಬ್ರಹ್ಮ ಯಚ್ಚ ಪರಂ ಪದಂ||

06062007a ತೇನಾಸ್ಮಿ ಕೃತಸಂವಾದಃ ಪ್ರಸನ್ನೇನ ಸುರರ್ಷಭಾಃ|

06062007c ಜಗತೋಽನುಗ್ರಹಾರ್ಥಾಯ ಯಾಚಿತೋ ಮೇ ಜಗತ್ಪತಿಃ||

“ಎಲ್ಲಕ್ಕಿಂತಲೂ ಅತೀತನಾದ, ಭವಿಷ್ಯ-ಭವಿತವ್ಯಗಳಿಗೂ ಅತೀತನಾದ, ಭೂತಾತ್ಮ, ಪ್ರಭು, ಬ್ರಹ್ಮ, ಪರಮ ಪದ ಪ್ರಸನ್ನನೊಂದಿಗೆ ನಾನು ಮಾತನಾಡಿದೆ. ಸುರರ್ಷಭರೇ! ಜಗತ್ತಿನ ಅನುಗ್ರಹಾರ್ಥವಾಗಿ ನಾನು ಆ ಜಗತ್ಪತಿಯಲ್ಲಿ ಯಾಚಿಸಿದೆ.

06062008a ಮಾನುಷಂ ಲೋಕಮಾತಿಷ್ಠ ವಾಸುದೇವ ಇತಿ ಶ್ರುತಃ|

06062008c ಅಸುರಾಣಾಂ ವಧಾರ್ಥಾಯ ಸಂಭವಸ್ವ ಮಹೀತಲೇ||

“ಮಾನುಷಲೋಕದಲ್ಲಿ ವಾಸುದೇವನೆಂದು ಕರೆಯಲ್ಪಟ್ಟು ಅಸುರರ ವಧೆಗಾಗಿ ಮಹೀತಲಲ್ಲಿ ಸಂಭವಿಸು.”

06062009a ಸಂಗ್ರಾಮೇ ನಿಹತಾ ಯೇ ತೇ ದೈತ್ಯದಾನವರಾಕ್ಷಸಾಃ|

06062009c ತ ಇಮೇ ನೃಷು ಸಂಭೂತಾ ಘೋರರೂಪಾ ಮಹಾಬಲಾಃ||

ನಿಮ್ಮಿಂದ ಸಂಗ್ರಾಮದಲ್ಲಿ ಹತರಾದ ದೈತ್ಯ-ದಾನವ-ರಾಕ್ಷಸರು ಮಾನವರಲ್ಲಿ ಘೋರರೂಪೀ ಮಹಾಬಲರಾಗಿ ಸಂಭವಿಸಿದ್ದಾರೆ.

06062010a ತೇಷಾಂ ವಧಾರ್ಥಂ ಭಗವಾನ್ನರೇಣ ಸಹಿತೋ ವಶೀ|

06062010c ಮಾನುಷೀಂ ಯೋನಿಮಾಸ್ಥಾಯ ಚರಿಷ್ಯತಿ ಮಹೀತಲೇ||

ಅವರ ವಧೆಗೋಸ್ಕರ ವಿಶ್ವವನ್ನೇ ವಶದಲ್ಲಿಟ್ಟುಕೊಂಡಿರುವ ಭಗವಾನನು ನರನ ಸಹಿತ ಮನುಷ್ಯ ಯೋನಿಯನ್ನು ಪಡೆದು ಮಹೀತಲದಲ್ಲಿ ಸಂಚರಿಸುತ್ತಾನೆ.

06062011a ನರನಾರಾಯಣೌ ಯೌ ತೌ ಪುರಾಣಾವೃಷಿಸತ್ತಮೌ|

06062011c ಸಹಿತೌ ಮಾನುಷೇ ಲೋಕೇ ಸಂಭೂತಾವಮಿತದ್ಯುತೀ||

ಪುರಾಣ ಋಷಿಸತ್ತಮರಾದ ಅಮಿತದ್ಯುತೀ ನರ-ನಾರಾಯಣರು ಒಟ್ಟಿಗೇ ಮನುಷ್ಯ ಲೋಕದಲ್ಲಿ ಅವತರಿಸುವರು.

06062012a ಅಜೇಯೌ ಸಮರೇ ಯತ್ತೌ ಸಹಿತಾವಮರೈರಪಿ|

06062012c ಮೂಢಾಸ್ತ್ವೇತೌ ನ ಜಾನಂತಿ ನರನಾರಾಯಣಾವೃಷೀ||

ಅಮರರಿಂದಲೂ ಅಜೇಯರಾದ ಅವರಿಬ್ಬರನ್ನು ಮೂಡರು ಮಾತ್ರ ನರ-ನಾರಾಯಣ ಋಷಿಗಳೆಂದು ಗುರುತಿಸುವುದಿಲ್ಲ.

06062013a ತಸ್ಯಾಹಮಾತ್ಮಜೋ ಬ್ರಹ್ಮಾ ಸರ್ವಸ್ಯ ಜಗತಃ ಪತಿಃ|

06062013c ವಾಸುದೇವೋಽರ್ಚನೀಯೋ ವಃ ಸರ್ವಲೋಕಮಹೇಶ್ವರಃ||

ಅವನ ಆತ್ಮಜ ಬ್ರಹ್ಮನು ನಾನು. ಸರ್ವ ಜಗತ್ಪತಿಯಾದ ಸರ್ವಲೋಕಮಹೇಶ್ವರನಾದ ಆ ವಾಸುದೇವನು ನಮಗೆ ಅರ್ಚನೀಯನು.

06062014a ತಥಾ ಮನುಷ್ಯೋಽಯಂ ಇತಿ ಕದಾ ಚಿತ್ಸುರಸತ್ತಮಾಃ|

06062014c ನಾವಜ್ಞೇಯೋ ಮಹಾವೀರ್ಯಃ ಶಂಖಚಕ್ರಗದಾಧರಃ||

ಸುರಸತ್ತಮರೇ! ಶಂಖಚಕ್ರಗದಾಧರ ಮಹಾವೀರ್ಯನು ಮನುಷ್ಯಮಾತ್ರದವನು ಎಂದು ಯಾವಾಗಲೂ ಯಾವ ಕಾರಣದಿಂದಲೂ ಅನಾದರಿಸಬಾರದು.

06062015a ಏತತ್ಪರಮಕಂ ಗುಹ್ಯಮೇತತ್ಪರಮಕಂ ಪದಂ|

06062015c ಏತತ್ಪರಮಕಂ ಬ್ರಹ್ಮ ಏತತ್ಪರಮಕಂ ಯಶಃ||

ಇದು ಪರಮ ಗುಹ್ಯವಾದುದು. ಇದು ಪರಮ ಪದ. ಇದೇ ಪರಮ ಬ್ರಹ್ಮ. ಇದೇ ಪರಮ ಯಶಸ್ಸು.

06062016a ಏತದಕ್ಷರಮವ್ಯಕ್ತಮೇತತ್ತಚ್ಚಾಶ್ವತಂ ಮಹತ್|

06062016c ಏತತ್ಪುರುಷಸಂಜ್ಞಂ ವೈ ಗೀಯತೇ ಜ್ಞಾಯತೇ ನ ಚ||

ಇದು ಅಕ್ಷರ, ಅವ್ಯಕ್ತ. ಇದು ಶಾಶ್ವತವಾದ ಮಹತ್. ಇದೇ ಪುರುಷನೆಂದು ತಿಳಿಯಲ್ಪಟ್ಟಿರುವುದು. ಇದನ್ನು ಸ್ತುತಿಸಬಹುದೇ ಹೊರತು ತಿಳಿದುಕೊಳ್ಳಲಾಗುವುದಿಲ್ಲ.

06062017a ಏತತ್ಪರಮಕಂ ತೇಜ ಏತತ್ಪರಮಕಂ ಸುಖಂ|

06062017c ಏತತ್ಪರಮಕಂ ಸತ್ಯಂ ಕೀರ್ತಿತಂ ವಿಶ್ವಕರ್ಮಣಾ||

ಇದೇ ಪರಮ ತೇಜಸ್ಸು. ಇದೇ ಪರಮ ಸುಖ. ಇದೇ ವಿಶ್ವರ್ಕರ್ಮನು ಕಿರ್ತನೆ ಮಾಡುವ ಪರಮ ಸತ್ಯ.

06062018a ತಸ್ಮಾತ್ಸರ್ವೈಃ ಸುರೈಃ ಸೇಂದ್ರೈರ್ಲೋಕೈಶ್ಚಾಮಿತವಿಕ್ರಮಃ|

06062018c ನಾವಜ್ಞೇಯೋ ವಾಸುದೇವೋ ಮಾನುಷೋಽಯಮಿತಿ ಪ್ರಭುಃ||

ಆದುದರಿಂದ ಇಂದ್ರನೊಂದಿಗೆ ಎಲ್ಲ ದೇವತೆಗಳೂ ಲೋಕಗಳ ಪ್ರಜೆಗಳೂ ಈ ಅಮಿತವಿಕ್ರಮಿ ಪ್ರಭು ವಾಸುದೇವನನ್ನು ಮನುಷ್ಯನೆಂದು ಅನಾದರಿಸಬಾರದು.

06062019a ಯಶ್ಚ ಮಾನುಷಮಾತ್ರೋಽಯಮಿತಿ ಬ್ರೂಯಾತ್ಸುಮಂದಧೀಃ|

06062019c ಹೃಷೀಕೇಶಮವಜ್ಞಾನಾತ್ತಮಾಹುಃ ಪುರುಷಾಧಮಂ||

ಸರ್ವೇಂದ್ರಿಯಗಳಿಗೆ ಸ್ವಾಮಿಯಾದ ಈ ಹೃಷೀಕೇಶನನ್ನು ಕೇವಲ ಮನುಷ್ಯನೆಂದು ಹೇಳುವವನು ಅತೀ ಮಂದಬುದ್ಧಿಯೇ ಸರಿ. ಅಂತಹ ಅವಜ್ಞಾತನನ್ನು ಪುರುಷಾಧಮನೆಂದು ಹೇಳುತ್ತಾರೆ.

06062020a ಯೋಗಿನಂ ತಂ ಮಹಾತ್ಮಾನಂ ಪ್ರವಿಷ್ಟಂ ಮಾನುಷೀಂ ತನುಂ|

06062020c ಅವಮನ್ಯೇದ್ವಾಸುದೇವಂ ತಮಾಹುಸ್ತಾಮಸಂ ಜನಾಃ||

ಮನುಷ್ಯನ ದೇಹವನ್ನು ಪ್ರವೇಶಿಸಿರುವ ಆ ಯೋಗಿ, ಮಹಾತ್ಮ, ವಾಸುದೇವನನ್ನು ಅಪಮಾನಿಸುವ ಜನರು ತಾಮಸರೆಂದು ಹೇಳುತ್ತಾರೆ.

06062021a ದೇವಂ ಚರಾಚರಾತ್ಮಾನಂ ಶ್ರೀವತ್ಸಾಂಕಂ ಸುವರ್ಚಸಂ|

06062021c ಪದ್ಮನಾಭಂ ನ ಜಾನಾತಿ ತಮಾಹುಸ್ತಾಮಸಂ ಜನಾಃ||

ಆ ದೇವ, ಚರಾಚರಾತ್ಮ, ಶ್ರೀವತ್ಸಾಂಕ, ಸುವರ್ಚಸ, ಪದ್ಮನಾಭನನ್ನು ಗುರುತಿಸಲಾರದ ಜನರನ್ನು ತಾಮಸರೆಂದು ಹೇಳುತ್ತಾರೆ.

06062022a ಕಿರೀಟಕೌಸ್ತುಭಧರಂ ಮಿತ್ರಾಣಾಮಭಯಂಕರಂ|

06062022c ಅವಜಾನನ್ಮಹಾತ್ಮಾನಂ ಘೋರೇ ತಮಸಿ ಮಜ್ಜತಿ||

ಆ ಕಿರೀಟ-ಕೌಸ್ತುಭಧರ, ಮಿತ್ರರಿಗೆ ಅಭಯವನ್ನುಂಟುಮಾಡುವ ಮಹಾತ್ಮನನ್ನು ತಿಳಿಯದವರು ಘೋರ ಕತ್ತಲೆಯಲ್ಲಿ ಮುಳುಗಿರುತ್ತಾರೆ.

06062023a ಏವಂ ವಿದಿತ್ವಾ ತತ್ತ್ವಾರ್ಥಂ ಲೋಕಾನಾಮೀಶ್ವರೇಶ್ವರಃ|

06062023c ವಾಸುದೇವೋ ನಮಸ್ಕಾರ್ಯಃ ಸರ್ವಲೋಕೈಃ ಸುರೋತ್ತಮಾಃ||

ಸುರೋತ್ತಮರೇ! ಈ ರೀತಿಯಾಗಿ ತತ್ತ್ವಾರ್ಥವನ್ನು ತಿಳಿದುಕೊಂಡು ಲೋಕಗಳ ಈಶ್ವರನಿಗೂ ಈಶ್ವರನಾದ ವಾಸುದೇವನಿಗೆ ಸರ್ವಲೋಕಗಳೂ ನಮಸ್ಕರಿಸಬೇಕು.”

06062024a ಏವಮುಕ್ತ್ವಾ ಸ ಭಗವಾನ್ಸರ್ವಾನ್ದೇವಗಣಾನ್ಪುರಾ|

06062024c ವಿಸೃಜ್ಯ ಸರ್ವಲೋಕಾತ್ಮಾ ಜಗಾಮ ಭವನಂ ಸ್ವಕಂ||

ಹೀಗೆ ಹೇಳಿ ಸರ್ವಲೋಕಾತ್ಮ ಭಗವಾನನು ಹಿಂದೆ ಸರ್ವದೇವಗಣಗಳನ್ನು ಕಳುಹಿಸಿಕೊಟ್ಟು ತನ್ನ ಭವನಕ್ಕೆ ತೆರಳಿದನು.

06062025a ತತೋ ದೇವಾಃ ಸಗಂಧರ್ವಾ ಮುನಯೋಽಪ್ಸರಸೋಽಪಿ ಚ|

06062025c ಕಥಾಂ ತಾಂ ಬ್ರಹ್ಮಣಾ ಗೀತಾಂ ಶ್ರುತ್ವಾ ಪ್ರೀತಾ ದಿವಂ ಯಯುಃ||

ಬ್ರಹ್ಮನ ಆ ಗೀತೆಯನ್ನು ಕೇಳಿ ಪ್ರೀತರಾಗಿ ಗಂಧರ್ವರೊಡನೆ ದೇವತೆಗಳು, ಮುನಿಗಳು ಮತ್ತು ಅಪ್ಸರೆಯರೂ ಕೂಡ ದಿವಕ್ಕೆ ತೆರಳಿದರು.

06062026a ಏತಚ್ಚ್ರುತಂ ಮಯಾ ತಾತ ಋಷೀಣಾಂ ಭಾವಿತಾತ್ಮನಾಂ|

06062026c ವಾಸುದೇವಂ ಕಥಯತಾಂ ಸಮವಾಯೇ ಪುರಾತನಂ||

ಮಗೂ! ಭಾವಿತಾತ್ಮ ಋಷಿಗಳು ಪುರಾತನ ವಾಸುದೇವನ ಕುರಿತು ಮಾತನಾಡಿಕೊಳ್ಳುತ್ತಿರುವಾಗ ನಾನು ಇದನ್ನು ಕೇಳಿದ್ದೆ.

06062027a ಜಾಮದಗ್ನ್ಯಸ್ಯ ರಾಮಸ್ಯ ಮಾರ್ಕಂಡೇಯಸ್ಯ ಧೀಮತಃ|

06062027c ವ್ಯಾಸನಾರದಯೋಶ್ಚಾಪಿ ಶ್ರುತಂ ಶ್ರುತವಿಶಾರದ||

ಇದನ್ನು ಜಾಮದಗ್ನಿ ರಾಮನಿಂದ, ಧೀಮತ ಮಾರ್ಕಂಡೇಯನಿಂದ ಮತ್ತು ಶ್ರುತವಿಶಾರದ ವ್ಯಾಸ-ನಾರದರಿಂದಲೂ ಕೇಳಿದ್ದೇನೆ.

06062028a ಏತಮರ್ಥಂ ಚ ವಿಜ್ಞಾಯ ಶ್ರುತ್ವಾ ಚ ಪ್ರಭುಮವ್ಯಯಂ|

06062028c ವಾಸುದೇವಂ ಮಹಾತ್ಮಾನಂ ಲೋಕಾನಾಮೀಶ್ವರೇಶ್ವರಂ||

ವಾಸುದೇವನು ಮಹಾತ್ಮನೂ, ಲೋಕಗಳ ಈಶ್ವರರ ಈಶ್ವರನೆಂದೂ, ಪ್ರಭು, ಅವ್ಯಯನೆಂದು ಅರ್ಥಮಾಡಿಕೊಂಡಿದ್ದೇನೆ. ಕೇಳಿದ್ದೇನೆ ಕೂಡ.

06062029a ಯಸ್ಯಾಸಾವಾತ್ಮಜೋ ಬ್ರಹ್ಮಾ ಸರ್ವಸ್ಯ ಜಗತಃ ಪಿತಾ|

06062029c ಕಥಂ ನ ವಾಸುದೇವೋಽಯಮರ್ಚ್ಯಶ್ಚೇಜ್ಯಶ್ಚ ಮಾನವೈಃ||

ಸರ್ವ ಜಗತ್ತಿನ ಪಿತ ಬ್ರಹ್ಮನು ಯಾರ ಮಗನೋ ಆ ವಾಸುದೇವನು ಮಾನವರಿಗೆ ಹೇಗೆ ಅರ್ಚನೀಯನಾಗುವುದಿಲ್ಲ?

06062030a ವಾರಿತೋಽಸಿ ಪುರಾ ತಾತ ಮುನಿಭಿರ್ವೇದಪಾರಗೈಃ|

06062030c ಮಾ ಗಚ್ಛ ಸಂಯುಗಂ ತೇನ ವಾಸುದೇವೇನ ಧೀಮತಾ|

06062030e ಮಾ ಪಾಂಡವೈಃ ಸಾರ್ಧಮಿತಿ ತಚ್ಚ ಮೋಹಾನ್ನ ಬುಧ್ಯಸೇ||

ಮಗೂ! ಧೀಮತ ವಾಸುದೇವನೊಂದಿಗೆ ಮತ್ತು ಪಾಂಡವರೊಂದಿಗೆ  ಯುದ್ಧಕ್ಕೆ ಹೋಗಬೇಡವೆಂದು ಹಿಂದೆ ವೇದಪಾರಗ ಮುನಿಗಳು ನಿನ್ನನ್ನು ತಡೆದಿದ್ದರು. ಮೋಹಪರವಶನಾಗಿ ನೀನು ಅದನ್ನು ಅರ್ಥಮಾಡಿಕೊಳ್ಳಲಿಲ್ಲ.

06062031a ಮನ್ಯೇ ತ್ವಾಂ ರಾಕ್ಷಸಂ ಕ್ರೂರಂ ತಥಾ ಚಾಸಿ ತಮೋವೃತಃ|

06062031c ಯಸ್ಮಾದ್ದ್ವಿಷಸಿ ಗೋವಿಂದಂ ಪಾಂಡವಂ ಚ ಧನಂಜಯಂ|

06062031e ನರನಾರಾಯಣೌ ದೇವೌ ನಾನ್ಯೋ ದ್ವಿಷ್ಯಾದ್ಧಿ ಮಾನವಃ||

ಗೋವಿಂದನನ್ನು ಮತ್ತು ಪಾಂಡವ ಧನಂಜಯನನ್ನು ದ್ವೇಷಿಸುತ್ತಿರುವುದನ್ನು ನೋಡಿದರೆ ನೀನು ತಮಸ್ಸಿನಿಂದ ಆವೃತನಾಗಿರುವ ಕ್ರೂರ ರಾಕ್ಷಸನೆಂದು ನಾನು ಭಾವಿಸುತ್ತೇನೆ. ಏಕೆಂದರೆ ಬೇರೆ ಯಾವ ಮನುಷ್ಯನೂ ದೇವರಾದ ಈ ನರ-ನಾರಾಯಣರನ್ನು ದ್ವೇಷಿಸುವುದಿಲ್ಲ.

06062032a ತಸ್ಮಾದ್ಬ್ರವೀಮಿ ತೇ ರಾಜನ್ನೇಷ ವೈ ಶಾಶ್ವತೋಽವ್ಯಯಃ|

06062032c ಸರ್ವಲೋಕಮಯೋ ನಿತ್ಯಃ ಶಾಸ್ತಾ ಧಾತಾ ಧರೋ ಧ್ರುವಃ||

ರಾಜನ್! ಆದುದರಿಂದ ನಿನಗೆ ಹೇಳುತ್ತಿದ್ದೇನೆ. ಇವನು ಶಾಶ್ವತ, ಅವ್ಯಯ, ಸರ್ವಲೋಕಮಯ, ನಿತ್ಯ, ಶಾಸ್ತಾ, ಧಾತಾ, ಧರ ಮತ್ತು ಧ್ರುವ.

06062033a ಲೋಕಾನ್ಧಾರಯತೇ ಯಸ್ತ್ರೀಂಶ್ಚರಾಚರಗುರುಃ ಪ್ರಭುಃ|

06062033c ಯೋದ್ಧಾ ಜಯಶ್ಚ ಜೇತಾ ಚ ಸರ್ವಪ್ರಕೃತಿರೀಶ್ವರಃ||

ಇವನು ಲೋಕಗಳನ್ನು ಧರಿಸಿರುವವನು. ಮೂರೂ ಲೋಕಗಳ ಚರಾಚರಗಳ ಗುರು. ಪ್ರಭು. ಯೋದ್ಧನೂ ಅವನೇ, ಜಯವೂ ಅವನೂ, ಗೆಲ್ಲುವವನೂ ಅವನೇ. ಸರ್ವ ಪ್ರಕೃತಿಗಳಿಗೆ ಈಶ್ವರನು.

06062034a ರಾಜನ್ಸತ್ತ್ವಮಯೋ ಹ್ಯೇಷ ತಮೋರಾಗವಿವರ್ಜಿತಃ|

06062034c ಯತಃ ಕೃಷ್ಣಸ್ತತೋ ಧರ್ಮೋ ಯತೋ ಧರ್ಮಸ್ತತೋ ಜಯಃ||

ರಾಜನ್! ಇವನು ಸತ್ತ್ವಮಯ. ತಮೋರಾಗವಿವರ್ಜಿತ. ಎಲ್ಲಿ ಕೃಷ್ಣನಿರುವನೋ ಅಲ್ಲಿ ಧರ್ಮ; ಎಲ್ಲಿ ಧರ್ಮವಿದೆಯೋ ಅಲ್ಲಿ ಜಯ.

06062035a ತಸ್ಯ ಮಾಹಾತ್ಮ್ಯಯೋಗೇನ ಯೋಗೇನಾತ್ಮನ ಏವ ಚ|

06062035c ಧೃತಾಃ ಪಾಂಡುಸುತಾ ರಾಜನ್ಜಯಶ್ಚೈಷಾಂ ಭವಿಷ್ಯತಿ||

ಅವನ ಮಹಾತ್ಮೆ, ಯೋಗ ಮತ್ತು ಆತ್ಮ ಯೋಗಗಳಿಂದಾಗಿ ಧೃತರಾದ ಪಾಂಡವರು ಇದರಲ್ಲಿ ಜಯಿಗಳೇ ಆಗುತ್ತಾರೆ.

06062036a ಶ್ರೇಯೋಯುಕ್ತಾಂ ಸದಾ ಬುದ್ಧಿಂ ಪಾಂಡವಾನಾಂ ದಧಾತಿ ಯಃ|

06062036c ಬಲಂ ಚೈವ ರಣೇ ನಿತ್ಯಂ ಭಯೇಭ್ಯಶ್ಚೈವ ರಕ್ಷತಿ||

ಯಾರು ಪಾಂಡವರಿಗೆ ಸದಾ ಶ್ರೇಯಯುಕ್ತವಾದ ಬುದ್ಧಿಯನ್ನು ನೀಡುವನೋ ಅವನೇ ನಿತ್ಯವೂ ರಣದಲ್ಲಿ ಅವರನ್ನೂ ಅವರ ಸೇನೆಯನ್ನೂ ಭಯದಿಂದ ರಕ್ಷಿಸುತ್ತಿದ್ದಾನೆ.

06062037a ಸ ಏಷ ಶಾಶ್ವತೋ ದೇವಃ ಸರ್ವಗುಹ್ಯಮಯಃ ಶಿವಃ|

06062037c ವಾಸುದೇವ ಇತಿ ಜ್ಞೇಯೋ ಯನ್ಮಾಂ ಪೃಚ್ಛಸಿ ಭಾರತ||

ಭಾರತ! ನನ್ನನ್ನು ಕೇಳಿದರೆ ಈ ವಾಸುದೇವನೇ ಶಾಶ್ವತ ದೇವನೆಂದೂ ಸರ್ವಗುಹ್ಯಮಯ ಶಿವನೆಂದೂ ತಿಳಿದುಕೋ.

06062038a ಬ್ರಾಹ್ಮಣೈಃ ಕ್ಷತ್ರಿಯೈರ್ವೈಶ್ಯೈಃ ಶೂದ್ರೈಶ್ಚ ಕೃತಲಕ್ಷಣೈಃ|

06062038c ಸೇವ್ಯತೇಽಭ್ಯರ್ಚ್ಯತೇ ಚೈವ ನಿತ್ಯಯುಕ್ತೈಃ ಸ್ವಕರ್ಮಭಿಃ||

ನಿತ್ಯವೂ ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿ ಕೃತಲಕ್ಷಣರಾಗಿರುವ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರೂ ಕೂಡ ಇವನನ್ನು ಸೇವಿಸುತ್ತಾರೆ. ಪೂಜಿಸುತ್ತಾರೆ.

06062039a ದ್ವಾಪರಸ್ಯ ಯುಗಸ್ಯಾಂತೇ ಆದೌ ಕಲಿಯುಗಸ್ಯ ಚ|

06062039c ಸಾತ್ವತಂ ವಿಧಿಮಾಸ್ಥಾಯ ಗೀತಃ ಸಂಕರ್ಷಣೇನ ಯಃ||

ದ್ವಾಪರದ ಯುಗಾಂತ್ಯದಲ್ಲಿ ಮತ್ತು ಕಲಿಯುಗದ ಆದಿಯಲ್ಲಿ ಸಂಕರ್ಷಣನು ಸಾತ್ವತ ವಿಧಿಯನ್ನು ಬಳಸಿ ಈ ಗೀತೆಯನ್ನು ಹಾಡಿದ್ದಾನೆ:

06062040a ಸ ಏಷ ಸರ್ವಾಸುರಮರ್ತ್ಯಲೋಕಂ

         ಸಮುದ್ರಕಕ್ಷ್ಯಾಂತರಿತಾಃ ಪುರೀಶ್ಚ|

06062040c ಯುಗೇ ಯುಗೇ ಮಾನುಷಂ ಚೈವ ವಾಸಂ

         ಪುನಃ ಪುನಃ ಸೃಜತೇ ವಾಸುದೇವಃ||

“ಈ ವಾಸುದೇವನು ಯುಗಯುಗದಲ್ಲಿಯೂ ದೇವಲೋಕ-ಮರ್ತ್ಯಲೋಕಗಳನ್ನು, ಸಮುದ್ರಕಕ್ಷೆ ಅಂತರಿಕ್ಷಗಳನ್ನೂ, ಪುರಿಗಳನ್ನೂ ಸೃಷ್ಟಿಸುತ್ತಾನೆ ಮತ್ತು ಮನುಷ್ಯ ಲೋಕದಲ್ಲಿ ಅವತರಿಸುತ್ತಾನೆ.””

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ವಿಶ್ವೋಪಾಖ್ಯಾನೇ ದ್ವಿಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ವಿಶ್ವೋಪಾಖ್ಯಾನ ಎನ್ನುವ ಅರವತ್ತೆರಡನೇ ಅಧ್ಯಾಯವು.

Image result for flowers against white background

Comments are closed.