Bhishma Parva: Chapter 6

ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ

ಸುದರ್ಶನದ್ವೀಪವರ್ಣನೆ

ಸಂಜಯನು ಪಂಚಭೂತಗಳನ್ನು ವರ್ಣಿಸಿ (೧-೧೧), ಸುದರ್ಶನ ದ್ವೀಪವನ್ನು ಸಂಕ್ಷಿಪ್ತವಾಗಿ ವರ್ಣಿಸುವುದು (೧೨-೧೬).

[1]06006001 ಧೃತರಾಷ್ಟ್ರ ಉವಾಚ|

06006001a ನದೀನಾಂ ಪರ್ವತಾನಾಂ ಚ ನಾಮಧೇಯಾನಿ ಸಂಜಯ|

06006001c ತಥಾ ಜನಪದಾನಾಂ ಚ ಯೇ ಚಾನ್ಯೇ ಭೂಮಿಮಾಶ್ರಿತಾಃ||

06006002a ಪ್ರಮಾಣಂ ಚ ಪ್ರಮಾಣಜ್ಞ ಪೃಥಿವ್ಯಾ ಅಪಿ ಸರ್ವಶಃ|

06006002c ನಿಖಿಲೇನ ಸಮಾಚಕ್ಷ್ವ ಕಾನನಾನಿ ಚ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಪ್ರಮಾಣಜ್ಞ! ಭೂಮಿಯನ್ನು ಆಶ್ರಯಿಸಿರುವ ನದಿಗಳ, ಪರ್ವತಗಳ, ಜನಪದಗಳ ಮತ್ತು ಅನ್ಯರ ಹೆಸರುಗಳನ್ನೂ, ಪೃಥ್ವಿಯಲ್ಲಿರುವ ಎಲ್ಲವುಗಳ ನಿಖಿಲ ಕಾನನಗಳ ಪ್ರಮಾಣಗಳನ್ನೂ ಹೇಳು ಸಂಜಯ!”

06006003 ಸಂಜಯ ಉವಾಚ|

06006003a ಪಂಚೇಮಾನಿ ಮಹಾರಾಜ ಮಹಾಭೂತಾನಿ ಸಂಗ್ರಹಾತ್|

06006003c ಜಗತ್ ಸ್ಥಿತಾನಿ ಸರ್ವಾಣಿ ಸಮಾನ್ಯಾಹುರ್ಮನೀಷಿಣಃ||

ಸಂಜಯನು ಹೇಳಿದನು: “ಮಹಾರಾಜ! ಈ ಐದು ಸಮಾನ ಮಹಾಭೂತಗಳು ಕೂಡಿ ಜಗತ್ತಿನ ಸರ್ವವೂ ಇವೆಯೆಂದು ಮನೀಷಿಣರು ಹೇಳುತ್ತಾರೆ.

06006004a ಭೂಮಿರಾಪಸ್ತಥಾ ವಾಯುರಗ್ನಿರಾಕಾಶಮೇವ ಚ|

06006004c ಗುಣೋತ್ತರಾಣಿ ಸರ್ವಾಣಿ ತೇಷಾಂ ಭೂಮಿಃ ಪ್ರಧಾನತಃ||

ಭೂಮಿ, ನೀರು, ವಾಯು, ಅಗ್ನಿ, ಆಕಾಶ ಇವು ತುದಿಯಿಂದ ಒಂದೊಂದು ಗುಣದಿಂದ ಅಧಿಕವಾದವುಗಳು[2]. ಮೊದಲು ಭೂಮಿಯನ್ನು ಹೇಳಲು ಕಾರಣವೇನೆಂದರೆ ಅದು ಸಮಸ್ತಗುಣಗಳಿಂದಲೂ ಕೂಡಿದೆ.

06006005a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಶ್ಚ ಪಂಚಮಃ|

06006005c ಭೂಮೇರೇತೇ ಗುಣಾಃ ಪ್ರೋಕ್ತಾ ಋಷಿಭಿಸ್ತತ್ತ್ವವೇದಿಭಿಃ||

ತತ್ವವೇದಿ ಋಷಿಗಳು ಭೂಮಿಗೆ ಶಬ್ಧ, ಸ್ಪರ್ಷ, ರೂಪ, ರಸ, ಮತ್ತು ಐದನೆಯದಾಗಿ ಗಂಧ - ಈ ಎಲ್ಲ ಗುಣಗಳೂ ಇವೆಯೆಂದು ಹೇಳುತ್ತಾರೆ.

06006006a ಚತ್ವಾರೋಽಪ್ಸು ಗುಣಾ ರಾಜನ್ಗಂಧಸ್ತತ್ರ ನ ವಿದ್ಯತೇ|

06006006c ಶಬ್ದಃ ಸ್ಪರ್ಶಶ್ಚ ರೂಪಂ ಚ ತೇಜಸೋಽಥ ಗುಣಾಸ್ತ್ರಯಃ|

06006006e ಶಬ್ದಃ ಸ್ಪರ್ಶಶ್ಚ ವಾಯೋಸ್ತು ಆಕಾಶೇ ಶಬ್ದ ಏವ ಚ||

ರಾಜನ್! ಜಲದಲ್ಲಿ ನಾಲ್ಕು ಗುಣಗಳಿವೆ. ಅದರಲ್ಲಿ ಗಂಧವಿಲ್ಲ. ತೇಜಸ್ಸಿಗೆ ಶಬ್ಧ, ಸ್ಪರ್ಶ ಮತ್ತು ರೂಪ ಈ ಮೂರು ಗುಣಗಳಿವೆ. ವಾಯುವಿಗೆ ಶಬ್ಧ ಮತ್ತು ಸ್ಪರ್ಶಗಳು ಗುಣಗಳು. ಆಕಾಶದಲ್ಲಿ ಶಬ್ಧ ಮಾತ್ರ ಇದೆ[3].

06006007a ಏತೇ ಪಂಚ ಗುಣಾ ರಾಜನ್ಮಹಾಭೂತೇಷು ಪಂಚಸು|

06006007c ವರ್ತಂತೇ ಸರ್ವಲೋಕೇಷು ಯೇಷು ಲೋಕಾಃ ಪ್ರತಿಷ್ಠಿತಾಃ||

ರಾಜನ್! ಇವು ಈ ಐದು ಮಹಾಭೂತಗಳಲ್ಲಿರುವ ಐದು ಗುಣಗಳು. ಇವುಗಳನ್ನು ಆಧರಿಸಿಯೇ ಲೋಕಗಳು ಇವೆ ಮತ್ತು ಸರ್ವ ಲೋಕಗಳು ಇವುಗಳ ಮೂಲಕವೇ ನಡೆದುಕೊಳ್ಳುತ್ತವೆ[4].

06006008a ಅನ್ಯೋನ್ಯಂ ನಾಭಿವರ್ತಂತೇ ಸಾಮ್ಯಂ ಭವತಿ ವೈ ಯದಾ|

06006008c ಯದಾ ತು ವಿಷಮೀಭಾವಮಾವಿಶಂತಿ ಪರಸ್ಪರಂ|

06006008e ತದಾ ದೇಹೈರ್ದೇಹವಂತೋ ವ್ಯತಿರೋಹಂತಿ ನಾನ್ಯಥಾ||

ಯಾವಾಗ ಈ ಪಂಚಭೂತಗಳು ಸಮಾನರೂಪದಲ್ಲಿರುತ್ತವೆಯೋ ಆಗ ಅವುಗಳು ಪರಸ್ಪರ ಕೂಡುವುದಿಲ್ಲ[5]. ಈ ಪಂಚಭೂತಗಳು ನ್ಯೂನಾಧಿಕ ಭಾವಗಳನ್ನು ಹೊಂದಿದಾಗ ಅವು ಪರಸ್ಪರ ಸೇರುವವು. ಆಗ ಪ್ರಾಣಿಗಳು ದೇಹಧಾರಣೆ ಮಾಡುವವು. ಹಾಗಾಗದೇ ದೇಹವೇ ಉತ್ಪನ್ನವಾಗುವುದಿಲ್ಲ.

06006009a ಆನುಪೂರ್ವ್ಯಾದ್ವಿನಶ್ಯಂತಿ ಜಾಯಂತೇ ಚಾನುಪೂರ್ವಶಃ|

06006009c ಸರ್ವಾಣ್ಯಪರಿಮೇಯಾನಿ ತದೇಷಾಂ ರೂಪಮೈಶ್ವರಂ||

ಇವು ಕ್ರಮವಾಗಿ ನಾಶ ಹೊಂದಿ ಅದರ ಹಿಂದಿನದನ್ನು ಹೋಗಿ ಸೇರಿಕೊಳ್ಳುತ್ತವೆ[6]. ಆಕಾಶದ ಕಡೆಯಿಂದ ಪ್ರತಿಯೊಂದೂ ತಮ್ಮ ಹಿಂದಿನವುಗಳಿಂದ ಹುಟ್ಟಿಕೊಳ್ಳುತ್ತವೆ. ಇವೆಲ್ಲವುಗಳ ಅಪರಿಮಿತ ರೂಪಗಳು ಈಶ್ವರನಿಂದಲೇ ಹುಟ್ಟುತ್ತವೆ[7].

06006010a ತತ್ರ ತತ್ರ ಹಿ ದೃಶ್ಯಂತೇ ಧಾತವಃ ಪಾಂಚಭೌತಿಕಾಃ|

06006010c ತೇಷಾಂ ಮನುಷ್ಯಾಸ್ತರ್ಕೇಣ ಪ್ರಮಾಣಾನಿ ಪ್ರಚಕ್ಷತೇ||

ಭಿನ್ನ-ಭಿನ್ನ ಲೋಕಗಳಲ್ಲಿ ಪಾಂಚಭೌತಿಕ ಧಾತುಗಳು ಕಂಡುಬರುತ್ತವೆ. ಅವುಗಳ ಪ್ರಮಾಣವೆಷ್ಟೆಂದು ಮನುಷ್ಯನು ತರ್ಕದಿಂದ ಮಾತ್ರ ಊಹಿಸಿಕೊಳ್ಳಬಹುದು[8].

06006011a ಅಚಿಂತ್ಯಾಃ ಖಲು ಯೇ ಭಾವಾ ನ ತಾಂಸ್ತರ್ಕೇಣ ಸಾಧಯೇತ್|

06006011c ಪ್ರಕೃತಿಭ್ಯಃ ಪರಂ ಯತ್ತು ತದಚಿಂತ್ಯಸ್ಯ ಲಕ್ಷಣಂ||

ಅಚಿಂತ್ಯವಾಗಿರುವ ಭಾವ[9]ಗಳನ್ನು ತರ್ಕದಿಂದ ಸಾಧಿಸಬಾರದು. ಪ್ರಕೃತಿಗೂ ಆಚೆಯಿರುವುದು, ಭಿನ್ನವಾದುದು ಅಚಿಂತ್ಯದ ಲಕ್ಷಣ.

06006012a ಸುದರ್ಶನಂ ಪ್ರವಕ್ಷ್ಯಾಮಿ ದ್ವೀಪಂ ತೇ ಕುರುನಂದನ|

06006012c ಪರಿಮಂಡಲೋ ಮಹಾರಾಜ ದ್ವೀಪೋಽಸೌ ಚಕ್ರಸಂಸ್ಥಿತಃ||

ಆದರೂ ಕುರುನಂದನ! ನಿನಗೆ ಸುದರ್ಶನ ದ್ವೀಪದ ಕುರಿತು ಹೇಳುತ್ತೇನೆ. ಈ ದ್ವೀಪವು ಚಕ್ರದಂತೆ ಗುಂಡಾಗಿರುವುದು[10].

06006013a ನದೀಜಲಪ್ರತಿಚ್ಛನ್ನಃ ಪರ್ವತೈಶ್ಚಾಭ್ರಸನ್ನಿಭೈಃ|

06006013c ಪುರೈಶ್ಚ ವಿವಿಧಾಕಾರೈ ರಮ್ಯೈರ್ಜನಪದೈಸ್ತಥಾ||

06006014a ವೃಕ್ಷೈಃ ಪುಷ್ಪಫಲೋಪೇತೈಃ ಸಂಪನ್ನಧನಧಾನ್ಯವಾನ್|

06006014c ಲಾವಣೇನ ಸಮುದ್ರೇಣ ಸಮಂತಾತ್ಪರಿವಾರಿತಃ||

ಅದು ನದೀಜಲಗಳಿಂದ, ಮೋಡಗಳಂತಿರುವ ಪರ್ವತಗಳಿಂದ, ವಿವಿಧಾಕಾರದ ಪುರಗಳಿಂದ, ರಮ್ಯ ಜನಪದಗಳಿಂದ, ಪುಷ್ಪಫಲಗಳನ್ನು ನೀಡುವ ವೃಕ್ಷಗಳಿಂದ ತುಂಬಿಕೊಂಡಿದೆ. ಧನ-ಧಾನ್ಯಗಳಿಂದ ಸಂಪನ್ನವಾಗಿದೆ. ಎಲ್ಲ ಕಡೆಗಳಿಂದಲೂ ಲವಣ ಸಮುದ್ರದಿಂದ ಸುತ್ತುವರೆಯಲ್ಪಟ್ಟಿದೆ.

06006015a ಯಥಾ ಚ ಪುರುಷಃ ಪಶ್ಯೇದಾದರ್ಶೇ ಮುಖಮಾತ್ಮನಃ|

06006015c ಏವಂ ಸುದರ್ಶನದ್ವೀಪೋ ದೃಶ್ಯತೇ ಚಂದ್ರಮಂಡಲೇ||

ಕನ್ನಡಿಯಲ್ಲಿ ಮನುಷ್ಯನು ತನ್ನ ಮುಖವನ್ನು ಹೇಗೆ ಕಾಣುತ್ತಾನೋ ಹಾಗೆ ಸುದರ್ಶನ ದ್ವೀಪವು ಚಂದ್ರಮಂಡಲದಲ್ಲಿ ಕಾಣುತ್ತದೆ.

06006016a ದ್ವಿರಂಶೇ ಪಿಪ್ಪಲಸ್ತತ್ರ ದ್ವಿರಂಶೇ ಚ ಶಶೋ ಮಹಾನ್|

06006016c ಸರ್ವೌಷಧಿಸಮಾವಾಪೈಃ ಸರ್ವತಃ ಪರಿಬೃಂಹಿತಃ|

06006016e ಆಪಸ್ತತೋಽನ್ಯಾ ವಿಜ್ಞೇಯಾ ಏಷ ಸಂಕ್ಷೇಪ ಉಚ್ಯತೇ||

ಅದರ ಎರಡು ಭಾಗಗಳ ಒಂದರಲ್ಲಿ ಅಶ್ವತ್ಥವೃಕ್ಷವಿದೆ. ಇನ್ನೊಂದರಲ್ಲಿ ದೊಡ್ಡ ಮೊಲವಿದೆ. ಈ ಖಂಡಗಳು ಎಲ್ಲ ಔಷಧಿಗಳಿಂದ ತುಂಬಿಕೊಂಡಿವೆ. ಈ ಭಾಗಗಳನ್ನು ಬಿಟ್ಟರೆ ಉಳಿದ ಭಾಗಗಳಲ್ಲಿ ಕೇವಲ ನೀರಿದೆ. ಸಂಕ್ಷಿಪ್ತವಾಗಿ ಹೇಳಿದ್ದೇನೆ.”

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಜಂಬೂಖಂಡವಿನಿರ್ಮಾಣಪರ್ವಣಿ ಸುದರ್ಶನದ್ವೀಪವರ್ಣನೇ ಷಷ್ಠೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಜಂಬೂಖಂಡವಿನಿರ್ಮಾಣಪರ್ವದಲ್ಲಿ ಸುದರ್ಶನದ್ವೀಪವರ್ಣನ ಎನ್ನುವ ಆರನೇ ಅಧ್ಯಾಯವು.

Image result for indian motifs earth

[1]ಈ ಅಧ್ಯಾಯದ ವಿಷಯವನ್ನು ಸಾಧಾರಣ ಇಲ್ಲಿ ಇದ್ದಂತೆಯೇ ಪದ್ಮ ಮಹಾ ಪುರಾಣದ ಆದಿಖಂಡದ ೩ನೆಯ ಅಧ್ಯಾಯದಲ್ಲಿಯೂ ಬರುತ್ತದೆ. [ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲಾ, ನಂ. ೧೬, ಪದ್ಮ ಮಹಾ ಪುರಾಣಂ - ಸಂಸ್ಕೃತದಲ್ಲಿ ಮೂಲ, ಕನ್ನಡ ಅರ್ಥಾನುವಾದ, ಆದಿಖಂಡ, ಅನುವಾದಕರು - ಬೇಲದ ಕೆರೆ ಸೂರ್ಯನಾರಾಯಣ ಶಾಸ್ತ್ರಿ, ಮೈಸೂರು, ಬೆಂಗಳೂರು ಪ್ರೆಸ್ ಬ್ರಾಂಚ್, ೧೯೪೪].

[2]ಭೂಮಿಯಿಂದ ಪ್ರಾರಂಭಿಸಿ ಇವುಗಳಲ್ಲಿ ಮೊದಲನೆಯದು ಎರಡನೆಯದಕ್ಕಿಂತ, ಎರಡನೆಯದು ಮೂರನೆಯದಕ್ಕಿಂತ, ಮೂರನೆಯದು ನಾಲ್ಕನೆಯದಕ್ಕಿಂತ ಮತ್ತು ನಾಲ್ಕನೆಯದು ಐದನೆಯದಕ್ಕಿಂತ ಹೆಚ್ಚು ಗುಣವುಳ್ಳದ್ದಾಗಿರುತ್ತದೆ. ಇದನ್ನು ಹೀಗೂ ವಿವರಿಸಬಹುದು - ಆಕಾಶಾದ್ವಾಯುಃ; ವಾಯೋರಗ್ನಿಃ; ಅಗ್ನೇರಾಪಃ; ಅದ್ಭೈಃ ಪೃಥಿವೀ| ಎಂಬುದು ಶ್ರುತಿವಚನ. ಆಕಾಶದಿಂದ ವಾಯುವಿನ ಉತ್ಪತ್ತಿಯಾಗುತ್ತದೆ. ಆಕಾಶಕ್ಕೆ ಒಂದು ಗುಣವಿದ್ದರೆ ವಾಯುವಿಗೆ ಎರಡು ಗುಣಗಳಿವೆ. ಹೀಗೆ ಭೂಮಿಯಲ್ಲಿ ಐದು ಗುಣಗಳಿವೆ. ಆದುದರಿಂದ ಭೂಮಿಯೇ ಅಧಿಕವು.

[3]ಆಕಾಶವನ್ನು ವಾಯುವಿನಿಂದ ಪ್ರತ್ಯೇಕಿಸಬಹುದು. ಆದರೆ ವಾಯುವನ್ನು ಆಕಾಶದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ವಾಯುವು ಆಕಾಶಜನ್ಮವಾದುದು. ವಾಯುವು ಆಕಾಶದ ಗುಣವನ್ನು ಹೊಂದಿರುತ್ತದೆ. ಜೊತೆಗೆ ತನ್ನದೇ ಗುಣವನ್ನೂ ಹೊಂದಿರುತ್ತದೆ.

[4]ಮಹಾಭೂತೇಷು ಪಂಚಭೂತ್ಮಕೇಷು ಸರ್ವೇಷು ಲೋಕೇಷು ಭೋಗ್ಯ ವಸ್ತುಷು ಶರೀರಾದಿ ಘಟಾಂತೇಷು ಏತೇ ಪಂಚಗುಣಾಃ ಸಂತಿ| ಪಂಚಭೂತಾತ್ಮಕವಾದ ಸರ್ವಲೋಕಗಳಲ್ಲಿಯೂ, ಘಟಾಂತವಾದ ಶರೀರಾದಿ ಭೋಗ್ಯ ವಸ್ತುಗಳಲ್ಲಿಯೂ ಈ ಐದು ಗುಣಗಳಿವೆ. ಏತೇ ಕೇ? ಇವುಗಳು ಯಾವುವು? ಯೇಷು ಗುಣೇಷು ಭೋಕ್ತಾರೋ ಭೂತಾಃ ನಿತ್ಯನಿರ್ವೃತ್ತಾಶ್ಚೇತನಾಃ ಪುರುಷಾಃ ಪ್ರತಿಷ್ಠಿತಾಃ| ಈ ಗುಣಗಳಲ್ಲಿಯೇ ಇರುವವುಗಳ ಭೋಕ್ತಾರ ಪುರುಷನು ಚೇತನನಾಗಿ ನಿತ್ಯ ನಿವೃತ್ತನಾಗಿ ಪ್ರತಿಷ್ಠಿತನಾಗಿರುತ್ತಾನೆ. ದೇಹೇಂದ್ರಿಯಾದೀನ್ ಭೋಗ್ಯಾನಧಿಷ್ಠಾಯ ಚೇತನಾಃ ಶಬ್ಧಾದೀನಿ ಭೋಗ್ಯಂತರಾಣಿ ಭುಂಜತೇ| ಭೋಗ್ಯವಸ್ತುಗಳಾದ ದೇಹೇಂದ್ರಿಯಗಳಲ್ಲಿ ನೆಲೆಸಿರುವ ಚೇತನಗಳು ಭೋಗ್ಯಗಗಳನ್ನು ಭೋಗಿಸುತ್ತವೆ. ದೇಹಾದೀನಾಮಪಿ ಭೋಗೋಪಕರಣತ್ವಾತ್ ಭೋಗ್ಯತ್ವಮೇವ ನ ಭೋಕ್ತತ್ವಂ|| ದೇಹಗಳೂ ಭೋಗಕ್ಕೆ ಉಪಕರಣಗಳಾದುದರಿಂದ ಭೋಗ್ಯವಸ್ತುಗಳೇ. ಪಂಚಭೂತಗಳ ಭೋಕ್ತೃವೇ ಚೇತನ.

[5]ಸಮಸ್ಯ ಭಾವಃ ಸಾಮ್ಯಂ ಬ್ರಹ್ಮಭಾವಃ| ಸರ್ವಸಮತ್ವದ ಭಾವವೇ ಬ್ರಹ್ಮಭಾವ. ಸಮ ಆತ್ಮೇತಿ ವಿದ್ಯಾತ್| ನಿರ್ದೋಷಂ ಹಿ ಸಮಃ ಬ್ರಹ್ಮ| ಭೋಕ್ತೃ ಭೋಗ್ಯಯೋರ್ಯದಾ ಸುಷುಪ್ತಿಪ್ರಲಯಸಮಾಧಿಮೋಕ್ಷೇಷು ಬ್ರಹ್ಮಭಾವೋ ಭವತಿ ತದಾ ತೇ ಉಭೇ ಅನ್ಯೋನ್ಯಂ ನಾಭಿವರ್ತಂತೇ|| ಭೋಕ್ತೃ ಮತ್ತು ಭೋಗ್ಯಗಳಿಗೆ ಅಂದರೆ ಪಂಚಭೂತಾತ್ಮಕವಾದ ಶರೀರ ವುತ್ತು ಚೇತನಗಳಿಗೆ ಯಾವಾಗ ಸುಷುಪ್ತಿ-ಪ್ರಲಯ-ಸಮಾಧಿ-ಮೋಕ್ಷಗಳ ಬ್ರಹ್ಮಭಾವವು ಬರುತ್ತದೆಯೋ ಆಗ ಅವುಗಳ ನಡುವೆ ಭೋಗ್ಯ-ಭೋಕ್ತೃಗಳ ಸಂಬಂಧವಿರುವುದಿಲ್ಲ. ವ್ಯವಹಾರತೋ ವಿದ್ಯಮಾನಪಿ ಭೋಗ್ಯಂ ಭೋಕ್ತಾರಂ ನೋಪಸರ್ಪತಿ| ವ್ಯವಹಾರಿಕವಾಗಿ ಚೇತನವು ಶರೀರದಲ್ಲಿ ನೆಲೆಸಿಕೊಂಡಿದ್ದರೂ ಭೋಗ್ಯಗಳು (ವಿಷಯೇಂದ್ರಿಯಗಳು) ಚೇತನದ ಸಮೀಪ ಸರಿಯುವುದಿಲ್ಲ. ನಾಪಿಭೋಕ್ತಾಽಲುಪ್ತದೃಗಪಿ ಭೋಗಾಯ ತನಸ್ಯ ದೇಹೇಂದ್ರಿಯಾದೇರಭಾವಾತ್ ಭೋಗ್ಯಜಾತಮುಪಸರ್ಪತೀತ್ಯರ್ಥಃ|| ಶರೀರಕ್ಕೆ ಕಣ್ಣುಗಳಿದ್ದರೂ ಕೂಡ ಸಮಾಧಿಸ್ಥಿತಿಯಲ್ಲಿ ದೇಹೇಂದ್ರಿಯಗಳ ಅಭಾವವಿರುವುದರಿಂದ ಚೇತನವು ಭೋಗ್ಯವಸ್ತುಗಳ ಕಡೆ ಹೋಗುವುದಿಲ್ಲ. ಸರ್ವಃ ಖಲ್ವಿದಂ ಬ್ರಹ್ಮ ಎಂಬಂತೆ ಇಂದ್ರಿಯ ಸಹಿತವಾದ ಶರೀರವೂ ಬ್ರಹ್ಮವಾಗಿಬಿಡುತ್ತದೆ. ಭೋಜ್ಯ-ಭೋಕ್ತೃಗಳ ವ್ಯತ್ಯಾಸವೇ ಇರುವುದಿಲ್ಲ.

[6] ಪೃಥ್ವಿಯು ಜಲದಲ್ಲಿ, ಜಲವು ತೇಜಸ್ಸಿನಲ್ಲಿ, ತೇಜಸ್ಸು ವಾಯುವಿನಲ್ಲಿ ಮತ್ತು ವಾಯುವು ಆಕಾಶದಲ್ಲಿ.

[7] ಬ್ರಹ್ಮ (ಈಶ್ವರ) ನಿಂದ ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ತೇಜಸ್ಸು, ತೇಜಸ್ಸಿನಿಂದ ಜಲ, ಜಲದಿಂದ ಭೂಮಿ.

[8] ಸಿದ್ಧಾ ಅಪಿ ಯತ್ರ ಬ್ರಹ್ಮಾಂಡಂ ಭಿತ್ವಾ ಗಚ್ಛಂತಿ ತತ್ರಾಪಿ ವಾಸನಾಮಯಧಾತವೋ ವ್ಯಕ್ತಯಃ ಪಾಂಚಭೌತಿಕಾ ದೃಶ್ಯಂತೇ ಅತಃ ಅಪರಿಮೇಯಾ ಏವ ತೇ|| ಸಿದ್ಧ ಪುರುಷರು ಬ್ರಹ್ಮಾಂಡವನ್ನು ಭೇದಿಸಿಕೊಂಡು ಹೋದರೂ ಅಲ್ಲಿ ಕೂಡ ಪಂಚಭೂತಾತ್ಮಿಕ ವಾಸನಾಮಯ ಧಾತುಗಳು ಕಾಣುತ್ತವೆ. ಆದುದರಿಂದಲೇ ಅವರು ಪಂಚಭೂತಗಳು ಅಪರಿಮೇಯವೆಂದು ವರ್ಣಿಸಿದ್ದಾರೆ.

[9] ಭಾವಾಃ ಎನ್ನುವುದಕ್ಕೆ ವ್ಯಾಖ್ಯಾನಕಾರರು ಜಗಜ್ಜನ್ಮೋಪಾದನನಿಮಿತ್ತಪರಿಮಾಣಧರ್ಮಾಧರ್ಮಾದಯಃ| - ಜಗತ್ತು, ಜನ್ಮ, ಮೂಲಕಾರಣ, ನಿಮಿತ್ತ, ಪರಿಮಾಣ, ಧರ್ಮ ಮತ್ತು ಅಧರ್ಮಗಳು - ಎಂದು ಅರ್ಥಮಾಡಿರುತ್ತಾರೆ.

[10] ಸುದರ್ಶನೋ ನಾಮ ಜಂಬೂವೃಕ್ಷವಿಶೇಷಃ ತನ್ನಾಮಾಂಕಿತೋಽಯಂ ದ್ವೀಪಃ - ಒಂದು ಜಾತಿಯ ಜಂಬೂವೃಕ್ಷಕ್ಕೆ ಸುದರ್ಶನ ಎಂದು ಹೆಸರು. ಈ ಹೆಸರಿನ ದ್ವೀಪ ಎಂದು ವಾಖ್ಯಾನಕಾರರು ಅರ್ಥಮಾಡಿರುತ್ತಾರೆ.

Comments are closed.