Bhishma Parva: Chapter 59

ಭೀಷ್ಮ ಪರ್ವ: ಭೀಷ್ಮವಧ ಪರ್ವ

೫೯

ಭೀಮಸೇನನ ಪರಾಕ್ರಮ (೧-೨೦). ಸಾತ್ಯಕಿ-ಭೂರಿಶ್ರವರು ಪರಸ್ಪರರನ್ನು ಎದುರಿಸಿದುದು (೨೧-೨೯).

06059001 ಸಂಜಯ ಉವಾಚ|

06059001a ತಸ್ಮಿನ್ ಹತೇ ಗಜಾನೀಕೇ ಪುತ್ರೋ ದುರ್ಯೋಧನಸ್ತವ|

06059001c ಭೀಮಸೇನಂ ಘ್ನತೇತ್ಯೇವಂ ಸರ್ವಸೈನ್ಯಾನ್ಯಚೋದಯತ್||

ಸಂಜಯನು ಹೇಳಿದನು: “ಆ ಗಜಸೇನೆಯು ಹತವಾಗಲು ನಿನ್ನ ಮಗ ದುರ್ಯೋಧನನು ಭೀಮಸೇನನೆನ್ನು ಕೊಲ್ಲಬೇಕೆಂದು ಸರ್ವ ಸೇನೆಗಳನ್ನು ಪ್ರಚೋದಿಸಿದನು.

06059002a ತತಃ ಸರ್ವಾಣ್ಯನೀಕಾನಿ ತವ ಪುತ್ರಸ್ಯ ಶಾಸನಾತ್|

06059002c ಅಭ್ಯದ್ರವನ್ಭೀಮಸೇನಂ ನದಂತಂ ಭೈರವಾನ್ರವಾನ್||

ಆಗ ನಿನ್ನ ಮಗನ ಶಾಸನದಂತೆ ಸರ್ವ ಸೇನೆಗಳೂ ಭೈರವ ಕೂಗನ್ನು ಕೂಗುತ್ತಾ ಭೀಮಸೇನನ ಮೇಲೆ ಎರಗಿದರು.

06059003a ತಂ ಬಲೌಘಮಪರ್ಯಂತಂ ದೇವೈರಪಿ ದುರುತ್ಸಹಂ|

06059003c ಆಪತಂತಂ ಸುದುಷ್ಪಾರಂ ಸಮುದ್ರಮಿವ ಪರ್ವಣಿ||

06059004a ರಥನಾಗಾಶ್ವಕಲಿಲಂ ಶಂಖದುಂದುಭಿನಾದಿತಂ|

06059004c ಅಥಾನಂತಮಪಾರಂ ಚ ನರೇಂದ್ರಸ್ತಿಮಿತಹ್ರದಂ||

ಭರತ ಬಂದಾಗ ಮೇಲುಕ್ಕುವ ಸಾಗರದಂತೆ ಬೀಳುತ್ತಿದ್ದ ಆ ದುಷ್ಟಾರ ಸೇನೆಯು ದೇವತೆಗಳಿಗೂ ದುರುತ್ಸಹವಾಗಿ ಅಪಾರವಾಗಿತ್ತು. ರಥ-ಗಜ-ಅಶ್ವಗಳಿಂದ ತುಂಬಿತ್ತು. ಶಂಖ ದುಂದುಭಿಗಳ ನಾದದಿಂದ ಕೂಡಿತ್ತು. ನರೇಂದ್ರ! ಅಮಿತ ಸರೋವರದಂತೆ ಅನಂತವೂ ಅಪಾರವೂ ಆಗಿತ್ತು.

06059005a ತಂ ಭೀಮಸೇನಃ ಸಮರೇ ಮಹೋದಧಿಮಿವಾಪರಂ|

06059005c ಸೇನಾಸಾಗರಮಕ್ಷೋಭ್ಯಂ ವೇಲೇವ ಸಮವಾರಯತ್||

ಮಹಾಸಾಗರವನ್ನು ದಡವು ಹೇಗೋ ಹಾಗೆ ಸಮರದಲ್ಲಿ ಕ್ಷೋಭೆಗೊಂಡು ಮೇಲೇಳುತ್ತಿದ್ದ ಆ ಸೇನಾಸಾಗರವನ್ನು ಭೀಮಸೇನನು ಬಲದಿಂದ ತಡೆದನು.

06059006a ತದಾಶ್ಚರ್ಯಮಪಶ್ಯಾಮ ಶ್ರದ್ಧೇಯಮಪಿ ಚಾದ್ಭುತಂ|

06059006c ಭೀಮಸೇನಸ್ಯ ಸಮರೇ ರಾಜನ್ಕರ್ಮಾತಿಮಾನುಷಂ||

ರಾಜನ್! ಸಮರದಲ್ಲಿ ನಂಬಲಿಕ್ಕಾಗದ ಭೀಮಸೇನನ ಆ ಅಮಾನುಷ ಅದ್ಭುತ ಆಶ್ಚರ್ಯ ಕೃತ್ಯಗಳನ್ನು ನೋಡಿದೆವು.

06059007a ಉದೀರ್ಣಾಂ ಪೃಥಿವೀಂ ಸರ್ವಾಂ ಸಾಶ್ವಾಂ ಸರಥಕುಂಜರಾಂ|

06059007c ಅಸಂಭ್ರಮಂ ಭೀಮಸೇನೋ ಗದಯಾ ಸಮತಾಡಯತ್||

ಭೂಮಿಯನ್ನು ನಡುಗಿಸುತ್ತಾ ಬರುತ್ತಿದ್ದ ಆ ಎಲ್ಲರನ್ನೂ ಕುದುರೆ, ರಥ, ಕುಂಜರಗಳೊಂದಿಗೆ, ಸ್ವಲ್ಪವೂ ಭಯಪಡದೇ ಭೀಮಸೇನನು ಗದೆಯಿಂದ ಹೊಡೆದನು.

06059008a ಸ ಸಂವಾರ್ಯ ಬಲೌಘಾಂಸ್ತಾನ್ಗದಯಾ ರಥಿನಾಂ ವರಃ|

06059008c ಅತಿಷ್ಠತ್ತುಮುಲೇ ಭೀಮೋ ಗಿರಿರ್ಮೇರುರಿವಾಚಲಃ||

ರಥಿಗಳಲ್ಲಿ ಶ್ರೇಷ್ಠ ಭೀಮನು ಗದೆಯಿಂದ ಆ ಬಲಗಳನ್ನು ತಡೆದು ತುಮುಲದಲ್ಲಿ ಮೇರುಗಿರಿಯಂತೆ ಅಚಲನಾಗಿ ನಿಂತನು.

06059009a ತಸ್ಮಿನ್ಸುತುಮುಲೇ ಘೋರೇ ಕಾಲೇ ಪರಮದಾರುಣೇ|

06059009c ಭ್ರಾತರಶ್ಚೈವ ಪುತ್ರಾಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ||

06059010a ದ್ರೌಪದೇಯಾಭಿಮನ್ಯುಶ್ಚ ಶಿಖಂಡೀ ಚ ಮಹಾರಥಃ|

06059010c ನ ಪ್ರಾಜಹನ್ಭೀಮಸೇನಂ ಭಯೇ ಜಾತೇ ಮಹಾಬಲಂ||

ಆ ಘೋರ ಪರಮದಾರುಣ ತುಮುಲದ ಸಮಯದಲ್ಲಿ ಅವನ ಸಹೋದರರು, ಪುತ್ರರು, ಪಾರ್ಷತ ಧೃಷ್ಟದ್ಯುಮ್ನ, ದ್ರೌಪದೇಯರು, ಅಭಿಮನ್ಯು ಮತ್ತು ಮಹಾರಥ ಶಿಖಂಡಿಯರು ಮಹಾಬಲ ಭಯಗೊಂಡು ಭೀಮಸೇನನನ್ನು ಬಿಟ್ಟು ಹೋಗಲಿಲ್ಲ.

06059011a ತತಃ ಶೈಕ್ಯಾಯಸೀಂ ಗುರ್ವೀಂ ಪ್ರಗೃಹ್ಯ ಮಹತೀಂ ಗದಾಂ|

06059011c ಅವಧೀತ್ತಾವಕಾನ್ಯೋಧಾನ್ದಂಡಪಾಣಿರಿವಾಂತಕಃ|

06059011e ಪೋಥಯನ್ರಥವೃಂದಾನಿ ವಾಜಿವೃಂದಾನಿ ಚಾಭಿಭೂಃ||

ಆಗ ಅಂತಕ ದಂಡಪಾಣಿಯಂತೆ ಉಕ್ಕಿನಿಂದ ಮಾಡಿದ ಭಾರ ಮಹಾ ಗದೆಯನ್ನು ಹಿಡಿದು ಅವನು ನಿನ್ನ ಯೋಧರ ಮೇಲೆ ಬಿದ್ದು ರಥವೃಂದಗಳನ್ನೂ ವಾಜಿವೃಂದಗಳನ್ನೂ ಸದೆಬಡಿದನು.

06059012a ವ್ಯಚರತ್ಸಮರೇ ಭೀಮೋ ಯುಗಾಂತೇ ಪಾವಕೋ ಯಥಾ|

06059012c ವಿನಿಘ್ನನ್ಸಮರೇ ಸರ್ವಾನ್ಯುಗಾಂತೇ ಕಾಲವದ್ವಿಭುಃ||

ಯುಗಾಂತದಲ್ಲಿ ಅಗ್ನಿಯಂತೆ ವಿಭು ಭೀಮನು ಸಮರದಲ್ಲಿ ಸಂಚರಿಸುತ್ತಾ ಯುಗಾಂತ ಕಾಲನಂತೆ ಸರ್ವರನ್ನೂ ಸಂಹರಿಸತೊಡಗಿದನು.

06059013a ಊರುವೇಗೇನ ಸಂಕರ್ಷನ್ರಥಜಾಲಾನಿ ಪಾಂಡವಃ|

06059013c ಪ್ರಮರ್ದಯನ್ಗಜಾನ್ಸರ್ವಾನ್ನಡ್ವಲಾನೀವ ಕುಂಜರಃ||

ಪಾಂಡವನು ತನ್ನ ತೊಡೆಗಳ ವೇಗದಿಂದಲೇ ರಥಜಾಲಗಳನ್ನು ಸೆಳೆದು ಆನೆಗಳು ಜೊಂಡುಹುಲ್ಲನ್ನು ಮುರಿದು ಧ್ವಂಸಮಾಡುವಂತೆ ಮರ್ದಿಸುತ್ತಿದ್ದನು.

06059014a ಮೃದ್ನನ್ರಥೇಭ್ಯೋ ರಥಿನೋ ಗಜೇಭ್ಯೋ ಗಜಯೋಧಿನಃ|

06059014c ಸಾದಿನಶ್ಚಾಶ್ವಪೃಷ್ಠೇಭ್ಯೋ ಭೂಮೌ ಚೈವ ಪದಾತಿನಃ||

ರಥಗಳಿಂದ ರಥಿಕರನ್ನೂ, ಆನೆಗಳಿಂದ ಗಜಯೋಧರನ್ನೂ, ಕುದುರೆಗಳಿಂದ ಸವಾರರನ್ನೂ ಕೆಳಕ್ಕೆ ಸೆಳೆದು, ಭೂಮಿಯಲ್ಲಿರುವ ಪದಾತಿಗಳನ್ನೂ ಕೆಡವಿ ಕೊಲ್ಲುತ್ತಿದ್ದನು.

06059015a ತತ್ರ ತತ್ರ ಹತೈಶ್ಚಾಪಿ ಮನುಷ್ಯಗಜವಾಜಿಭಿಃ|

06059015c ರಣಾಂಗಣಂ ತದಭವನ್ಮೃತ್ಯೋರಾಘಾತಸನ್ನಿಭಂ||

ಅಲ್ಲಲ್ಲಿ ಸತ್ತು ಬಿದ್ದಿದ್ದ ಮನುಷ್ಯ-ಗಜ-ವಾಜಿಗಳಿಂದ ಆ ರಣಾಂಗಣವು ಮೃತ್ಯುವಿನಿಂದ ಆಘಾತಗೊಂಡಿದೆಯೋ ಎಂಬಂತೆ ಆಯಿತು.

06059016a ಪಿನಾಕಮಿವ ರುದ್ರಸ್ಯ ಕ್ರುದ್ಧಸ್ಯಾಭಿಘ್ನತಃ ಪಶೂನ್|

06059016c ಯಮದಂಡೋಪಮಾಮುಗ್ರಾಮಿಂದ್ರಾಶನಿಸಮಸ್ವನಾಂ|

06059016e ದದೃಶುರ್ಭೀಮಸೇನಸ್ಯ ರೌದ್ರಾಂ ವಿಶಸನೀಂ ಗದಾಂ||

ಪಶುಗಳನ್ನು ಸಂಹರಿಸುವ ಕ್ರುದ್ಧ ರುದ್ರನ ಪಿನಾಕದಂತೆ ಮತ್ತು ಯಮದಂಡದಂತೆ ಉಗ್ರವಾದ, ಇಂದ್ರನ ವಜ್ರದಂತೆ ರೌದ್ರವಾಗಿ ಶಬ್ಧಮಾಡುತ್ತಿದ್ದ ಭೀಮನ ಗದೆಯನ್ನು ನೋಡಿದರು.

06059017a ಆವಿಧ್ಯತೋ ಗದಾಂ ತಸ್ಯ ಕೌಂತೇಯಸ್ಯ ಮಹಾತ್ಮನಃ|

06059017c ಬಭೌ ರೂಪಂ ಮಹಾಘೋರಂ ಕಾಲಸ್ಯೇವ ಯುಗಕ್ಷಯೇ||

ಗದೆಯನ್ನು ತಿರುಗಿಸುತ್ತಿದ್ದ ಆ ಮಹಾತ್ಮ ಕೌಂತೇಯನ ರೂಪವು ಯುಗಕ್ಷಯದಲ್ಲಿ ಕಾಲನಂತೆ ಮಹಾಘೋರವಾಗಿತ್ತು.

06059018a ತಂ ತಥಾ ಮಹತೀಂ ಸೇನಾಂ ದ್ರಾವಯಂತಂ ಪುನಃ ಪುನಃ|

06059018c ದೃಷ್ಟ್ವಾ ಮೃತ್ಯುಮಿವಾಯಾಂತಂ ಸರ್ವೇ ವಿಮನಸೋಽಭವನ್||

ಆ ಮಹಾಸೇನೆಯು ಪುನಃ ಪುನಃ ಪಲಾಯನಗೊಳ್ಳುತ್ತಿರಲು, ಮೃತ್ಯುವಿನಂತೆ ಬರುತ್ತಿದ್ದ ಅವನನ್ನು ನೋಡಿ ಸರ್ವರೂ ಬೇಸತ್ತರು.

06059019a ಯತೋ ಯತಃ ಪ್ರೇಕ್ಷತೇ ಸ್ಮ ಗದಾಮುದ್ಯಮ್ಯ ಪಾಂಡವಃ|

06059019c ತೇನ ತೇನ ಸ್ಮ ದೀರ್ಯಂತೇ ಸರ್ವಸೈನ್ಯಾನಿ ಭಾರತ||

ಭಾರತ! ಎಲ್ಲೆಲ್ಲಿ ಪಾಂಡವನು ಗದೆಯನ್ನೆತ್ತಿ ಬರುತ್ತಿರುವುದನ್ನು ನೋಡುತ್ತಿದ್ದರೋ ಅಲ್ಲಲ್ಲಿ ಸರ್ವ ಸೈನ್ಯಗಳು ಹಿಮ್ಮೆಟ್ಟುತ್ತಿದ್ದರು[1].

06059020a ಪ್ರದಾರಯಂತಂ ಸೈನ್ಯಾನಿ ಬಲೌಘೇನಾಪರಾಜಿತಂ|

06059020c ಗ್ರಸಮಾನಮನೀಕಾನಿ ವ್ಯಾದಿತಾಸ್ಯಮಿವಾಂತಕಂ||

06059021a ತಂ ತಥಾ ಭೀಮಕರ್ಮಾಣಂ ಪ್ರಗೃಹೀತಮಹಾಗದಂ|

06059021c ದೃಷ್ಟ್ವಾ ವೃಕೋದರಂ ಭೀಷ್ಮಃ ಸಹಸೈವ ಸಮಭ್ಯಯಾತ್||

ಸೈನ್ಯಗಳನ್ನು ಸೀಳುತ್ತಿದ್ದ, ಅಂತಕನು ಬಾಯಿ ತೆರೆದು ಜೀವಕೋಟಿಯನ್ನು ನುಂಗುವಂತೆ ಕಾಣುತ್ತಿದ್ದ, ಮಹಾಗದೆಯನ್ನು ಹಿಡಿದಿದ್ದ, ಬಲೌಘ, ಅಪರಾಜಿತ, ಭೀಮಕರ್ಮಿ, ವೃಕೋದರನನ್ನು ನೋಡಿ ಭೀಷ್ಮನು ತಕ್ಷಣವೇ ಅಲ್ಲಿಗೆ ಧಾವಿಸಿ ಬಂದನು.

06059022a ಮಹತಾ ಮೇಘಘೋಷೇಣ ರಥೇನಾದಿತ್ಯವರ್ಚಸಾ|

06059022c ಚಾದಯಂ ಶರವರ್ಷೇಣ ಪರ್ಜನ್ಯ ಇವ ವೃಷ್ಟಿಮಾನ್||

06059023a ತಮಾಯಾಂತಂ ತಥಾ ದೃಷ್ಟ್ವಾ ವ್ಯಾತ್ತಾನನಮಿವಾಂತಕಂ|

06059023c ಭೀಷ್ಮಂ ಭೀಮೋ ಮಹಾಬಾಹುಃ ಪ್ರತ್ಯುದೀಯಾದಮರ್ಷಣಃ||

ಮಹಾಮೇಘಘೋಷದ ರಥದಲ್ಲಿ ಆದಿತ್ಯವರ್ಚನನಾಗಿ ಮಳೆಸುರಿಸುವ ಮೇಘಗಳಂತೆ ಶರವರ್ಷಗಳಿಂದ ಮುಸುಕು ಹಾಕಿದ್ದ, ಅಂತಕನಂತೆ ಬಾಯಿತೆರೆದು ಬರುತ್ತಿದ್ದ ಭೀಷ್ಮನನ್ನು ನೋಡಿ ಮಹಾಬಾಹು ಭೀಮನು ಪರಮ ಕುಪಿತನಾಗಿ ಅವನನ್ನು ಎದುರಿಸಿದನು.

06059024a ತಸ್ಮಿನ್ ಕ್ಷಣೇ ಸಾತ್ಯಕಿಃ ಸತ್ಯಸಂಧಃ

         ಶಿನಿಪ್ರವೀರೋಽಭ್ಯಪತತ್ಪಿತಾಮಹಂ|

06059024c ನಿಘ್ನನ್ನಮಿತ್ರಾನ್ಧನುಷಾ ದೃಢೇನ

         ಸ ಕಂಪಯಂಸ್ತವ ಪುತ್ರಸ್ಯ ಸೇನಾಂ||

ಅದೇ ಕ್ಷಣದಲ್ಲಿ ಸತ್ಯಸಂಧ ಶಿನಿಪ್ರವೀರ ಸಾತ್ಯಕಿಯು ದೃಢ ಧನುಸ್ಸಿನಿಂದ ಶತ್ರುಗಳನ್ನು ಸಂಹರಿಸಿ ನಿನ್ನ ಮಗನ ಸೇನೆಯನ್ನು ನಡುಗಿಸುತ್ತಾ ಪಿತಾಮಹನ ಮೇಲೆ ಎರಗಿದನು.

06059025a ತಂ ಯಾಂತಮಶ್ವೈ ರಜತಪ್ರಕಾಶೈಃ

         ಶರಾನ್ಧಮಂತಂ ಧನುಷಾ ದೃಢೇನ|

06059025c ನಾಶಕ್ನುವನ್ವಾರಯಿತುಂ ತದಾನೀಂ

         ಸರ್ವೇ ಗಣಾ ಭಾರತ ಯೇ ತ್ವದೀಯಾಃ||

ಭಾರತ! ರಜತಪ್ರಕಾಶದಿಂದ ಹೊಳೆಯುತ್ತಿದ್ದ ಕುದುರೆಗಳಿದ್ದ ರಥದಲ್ಲಿ ಬರುತ್ತಿದ್ದ, ದೃಢ ಧನುಸ್ಸಿನಿಂದ ಶರಗಳನ್ನು ಸುರಿಸುತ್ತಿದ್ದ ಅವನನ್ನು ನಿನ್ನ ಸರ್ವಗಣಗಳಲ್ಲಿ ಯಾರೂ ತಡೆಯಲು ಶಕ್ಯರಾಗಿರಲಿಲ್ಲ.

06059026a ಅವಿಧ್ಯದೇನಂ ನಿಶಿತೈಃ ಶರಾಗ್ರೈರ್

         ಅಲಂಬುಸೋ ರಾಜವರಾರ್ಶ್ಯಶೃಂಗಿಃ|

06059026c ತಂ ವೈ ಚತುರ್ಭಿಃ ಪ್ರತಿವಿಧ್ಯ ವೀರೋ

         ನಪ್ತಾ ಶಿನೇರಭ್ಯಪತದ್ರಥೇನ||

ಆಗ ರಾಕ್ಷಸ ರಾಜ ಅಲಂಬುಸನು ನಿಶಿತ ಶರಾಗ್ರಗಳಿಂದ ಅವನನ್ನು ಹೊಡೆಯಲು ಶಿನಿಪ್ರವೀರನು ಅವನನ್ನು ನಾಲ್ಕು ಬಾಣಗಳಿಂದ ಗಾಯಗೊಳಿಸಿ ಆಕ್ರಮಣ ಮಾಡಿದನು.

06059027a ಅನ್ವಾಗತಂ ವೃಷ್ಣಿವರಂ ನಿಶಮ್ಯ

         ಮಧ್ಯೇ ರಿಪೂಣಾಂ ಪರಿವರ್ತಮಾನಂ|

06059027c ಪ್ರಾವರ್ತಯಂತಂ ಕುರುಪುಂಗವಾಂಶ್ಚ

         ಪುನಃ ಪುನಶ್ಚ ಪ್ರಣದಂತಮಾಜೌ||

ವೃಷ್ಣಿವರನು ಶತ್ರುಗಳ ಮಧ್ಯದಲ್ಲಿ ಬಾಣಗಳನ್ನು ಸುರಿಸುತ್ತಾ ತನ್ನ ಮೇಲೆ ಬೀಳಲು ಬರುತ್ತಿದ್ದ ಕುರುಪುಂಗವರನ್ನು ಬಾರಿ ಬಾರಿ ಹೊಡೆದಟ್ಟುತ್ತಿದ್ದನು.

06059028a ನಾಶಕ್ನುವನ್ವಾರಯಿತುಂ ವರಿಷ್ಠಂ

         ಮಧ್ಯಂದಿನೇ ಸೂರ್ಯಮಿವಾತಪಂತಂ|

06059028c ನ ತತ್ರ ಕಶ್ಚಿನ್ನವಿಷಣ್ಣ ಆಸೀದ್

         ಋತೇ ರಾಜನ್ಸೋಮದತ್ತಸ್ಯ ಪುತ್ರಾತ್||

ರಾಜನ್! ಮಧ್ಯಾಹ್ನದಲ್ಲಿ ಸುಡುತ್ತಿರುವ ಸೂರ್ಯನಂತಿದ್ದ ಆ ವರಿಷ್ಠನನ್ನು ತಡೆಯಲು ಸೋಮದತ್ತನ ಮಗನ ಹೊರತಾಗಿ ಅಲ್ಲಿ ಬೇರೆ ಯಾರೂ ಇರಲಿಲ್ಲ.

06059029a ಸ ಹ್ಯಾದದಾನೋ ಧನುರುಗ್ರವೇಗಂ

         ಭೂರಿಶ್ರವಾ ಭಾರತ ಸೌಮದತ್ತಿಃ|

06059029c ದೃಷ್ಟ್ವಾ ರಥಾನ್ಸ್ವಾನ್ವ್ಯಪನೀಯಮಾನಾನ್

         ಪ್ರತ್ಯುದ್ಯಯೌ ಸಾತ್ಯಕಿಂ ಯೋದ್ಧುಮಿಚ್ಛನ್||

ಭಾರತ! ತನ್ನ ರಥರು ಪಲಾಯನಮಾಡುತ್ತಿರುವುದನ್ನು ನೋಡಿ ಸಾತ್ಯಕಿಯೊಡನೆ ಪ್ರತಿಯುದ್ಧ ಮಾಡಲು ಇಚ್ಛಿಸಿ ಸೌಮದತ್ತಿ ಭೂರಿಶ್ರವನು ಉಗ್ರವೇಗದ ಧನುಸ್ಸನ್ನು ಹಿಡಿದು ಮುಂದೆ ಬಂದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಾತ್ಯಕಿಭೂರಿಶ್ರವಸಮಾಗಮೇ ಏಕೋನಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಾತ್ಯಕಿಭೂರಿಶ್ರವಸಮಾಗಮ ಎನ್ನುವ ಐವತ್ತೊಂಭತ್ತನೇ ಅಧ್ಯಾಯವು.

Image result for flowers against white background

[1] ಸೈನ್ಯದಲ್ಲಿ ಬಿರುಕು ಬೀಳುತ್ತಿತ್ತು

Comments are closed.