Bhishma Parva: Chapter 56

ಭೀಷ್ಮ ಪರ್ವ: ಭೀಷ್ಮವಧ ಪರ್ವ

೫೬

ನಾಲ್ಕನೆಯ ದಿನದ ಯುದ್ಧ

ಯುದ್ಧಾರಂಭ (೧-೨೦). ಭೀಷ್ಮಾರ್ಜುನರ ರಥಯುದ್ಧ (೨೧-೨೮).

06056001 ಸಂಜಯ ಉವಾಚ|

06056001a ವ್ಯುಷ್ಟಾಂ ನಿಶಾಂ ಭಾರತ ಭಾರತಾನಾಂ

         ಅನೀಕಿನೀನಾಂ ಪ್ರಮುಖೇ ಮಹಾತ್ಮಾ|

06056001c ಯಯೌ ಸಪತ್ನಾನ್ಪ್ರತಿ ಜಾತಕೋಪೋ

         ವೃತಃ ಸಮಗ್ರೇಣ ಬಲೇನ ಭೀಷ್ಮಃ||

ಸಂಜಯನು ಹೇಳಿದನು: “ಭಾರತ! ರಾತ್ರಿಯು ಕಳೆಯಲು ಭಾರತರ ಸೇನೆಗಳ ಪ್ರಮುಖ ಮಹಾತ್ಮ ಭೀಷ್ಮನು ಕೋಪೋದ್ರಿಕ್ತನಾಗಿ ಸಮಗ್ರ ಸೇನೆಗಳಿಂದ ಆವೃತನಾಗಿ ದಾಯಾದಿಗಳೊಡನೆ ಯುದ್ಧಮಾಡಲು ಹೊರಟನು.

06056002a ತಂ ದ್ರೋಣದುರ್ಯೋಧನಬಾಹ್ಲಿಕಾಶ್ಚ

         ತಥೈವ ದುರ್ಮರ್ಷಣಚಿತ್ರಸೇನೌ|

06056002c ಜಯದ್ರಥಶ್ಚಾತಿಬಲೋ ಬಲೌಘೈರ್

         ನೃಪಾಸ್ತಥಾನ್ಯೇಽನುಯಯುಃ ಸಮಂತಾತ್||

ಅವನನ್ನು ದ್ರೋಣ, ದುರ್ಯೋಧನ, ಬಾಹ್ಲೀಕ, ಹಾಗೆಯೇ ದುರ್ಮರ್ಷಣ, ಚಿತ್ರಸೇನ, ಅತಿಬಲ ಜಯದ್ರಥರು ಇತರ ರಾಜರ ಬಲಗಳೊಂದಿಗೆ ಸುತ್ತುವರೆದು ಮುಂದುವರೆದರು.

06056003a ಸ ತೈರ್ಮಹದ್ಭಿಶ್ಚ ಮಹಾರಥೈಶ್

         ಚ ತೇಜಸ್ವಿಭಿರ್ವೀರ್ಯವದ್ಭಿಶ್ಚ ರಾಜನ್|

06056003c ರರಾಜ ರಾಜೋತ್ತಮ ರಾಜಮುಖ್ಯೈರ್

         ವೃತಃ ಸ ದೇವೈರಿವ ವಜ್ರಪಾಣಿಃ||

ರಾಜನ್! ರಾಜೋತ್ತಮ! ಆ ಮಹಾತ್ಮ, ಮಹಾರಥ, ತೇಜಸ್ವಿ, ವೀರ್ಯವಂತ ರಾಜಮುಖ್ಯರಿಂದ ಆವೃತನಾದ ಅವನು ದೇವತೆಗಳಿಂದ ಸುತ್ತುವರೆಯಲ್ಪಟ್ಟ ವಜ್ರಪಾಣಿಯಂತೆ ರಾರಾಜಿಸಿದನು.

06056004a ತಸ್ಮಿನ್ನನೀಕಪ್ರಮುಖೇ ವಿಷಕ್ತಾ

         ದೋಧೂಯಮಾನಾಶ್ಚ ಮಹಾಪತಾಕಾಃ|

06056004c ಸುರಕ್ತಪೀತಾಸಿತಪಾಂಡುರಾಭಾ

         ಮಹಾಗಜಸ್ಕಂಧಗತಾ ವಿರೇಜುಃ||

ಆ ಸೇನೆಯ ಮುಂದೆ ಸಾಗುತ್ತಿದ್ದ ಮಹಾಗಜಗಳ ಭುಜಗಳ ಮೇಲೆ ಕೆಂಪು-ಹಳದೀ-ಕಪ್ಪು-ಬಿಳೀ ಬಣ್ಣದ ಮಹಾ ಪತಾಕೆಗಳು ಹಾರಾಡುತ್ತಿದ್ದವು.

06056005a ಸಾ ವಾಹಿನೀ ಶಾಂತನವೇನ ರಾಜ್ಞಾ

         ಮಹಾರಥೈರ್ವಾರಣವಾಜಿಭಿಶ್ಚ|

06056005c ಬಭೌ ಸವಿದ್ಯುತ್ಸಂತನಯಿತ್ನುಕಲ್ಪಾ

         ಜಲಾಗಮೇ ದ್ಯೌರಿವ ಜಾತಮೇಘಾ||

ಮಹಾರಥಗಳಿಂದ, ವಾರಣ-ವಾಜಿಗಳಿಂದ ಕೂಡಿದ್ದ ರಾಜ ಶಾಂತನುವಿನ ಆ ಸೇನೆಯು ಮಿಂಚಿನಿಂದ ಕೂಡಿದ ಮೇಘಗಳಂತೆ ಮತ್ತು ಮಳೆಬರುವ ಮುನ್ನ ದಿವಿಯಲ್ಲಿ ಮೋಡಗಳು ತುಂಬಿಕೊಂಡಿರುವಂತೆ ಕಂಡಿತು.

06056006a ತತೋ ರಣಾಯಾಭಿಮುಖೀ ಪ್ರಯಾತಾ

         ಪ್ರತ್ಯರ್ಜುನಂ ಶಾಂತನವಾಭಿಗುಪ್ತಾ|

06056006c ಸೇನಾ ಮಹೋಗ್ರಾ ಸಹಸಾ ಕುರೂಣಾಂ

         ವೇಗೋ ಯಥಾ ಭೀಮ ಇವಾಪಗಾಯಾಃ||

ಆಗ ಶಾಂತನವನಿಂದ ರಕ್ಷಿತವಾದ ರಣಾಭಿಮುಖವಾಗಿದ್ದ ಕುರುಗಳ ಉಗ್ರ ಮಹಾಸೇನೆಯು ಸಮುದ್ರವನ್ನು ಸೇರುವ ಗಂಗೆಯಂತೆ ಭಯಂಕರ ವೇಗದಲ್ಲಿ ಅರ್ಜುನನ ಮೇಲೆ ಎರಗಿತು.

06056007a ತಂ ವ್ಯಾಲನಾನಾವಿಧಗೂಢಸಾರಂ

         ಗಜಾಶ್ವಪಾದಾತರಥೌಘಪಕ್ಷಂ|

06056007c ವ್ಯೂಹಂ ಮಹಾಮೇಘಸಮಂ ಮಹಾತ್ಮಾ

         ದದರ್ಶ ದೂರಾತ್ಕಪಿರಾಜಕೇತುಃ||

ನಾನಾ ವಿಧದ ಗೂಢಸಾರಗಳನ್ನು ಹೊಂದಿದ್ದ, ಗಜ-ಅಶ್ವ-ಪದಾತಿ-ರಥಪಕ್ಷಗಳಿಂದ ಕೂಡಿದ್ದ ಮಹಾ ಮೇಘ ಸಮನಾಗಿದ್ದ ಆ ವ್ಯೂಹವನ್ನು ದೂರದಿಂದ ಕಪಿರಾಜಕೇತುವು ನೋಡಿದನು.

06056008a ಸ ನಿರ್ಯಯೌ ಕೇತುಮತಾ ರಥೇನ

         ನರರ್ಷಭಃ ಶ್ವೇತಹಯೇನ ವೀರಃ|

06056008c ವರೂಥಿನಾ ಸೈನ್ಯಮುಖೇ ಮಹಾತ್ಮಾ

         ವಧೇ ಧೃತಃ ಸರ್ವಸಪತ್ನಯೂನಾಂ||

ಆ ಕೇತುಮತ ನರರ್ಷಭ ಶ್ವೇತಹಯ ವೀರ ಮಹಾತ್ಮನು ಸೈನ್ಯಮುಖದಲ್ಲಿದ್ದುಕೊಂಡು ತನ್ನವರೆಲ್ಲರಿಂದ ಆವೃತನಾಗಿ ಸೇನೆಗಳ ವಧೆಗೆಂದು ಹೊರಟನು.

06056009a ಸೂಪಸ್ಕರಂ ಸೋತ್ತರಬಂಧುರೇಷಂ

         ಯತ್ತಂ ಯದೂನಾಂ ಋಷಭೇಣ ಸಂಖ್ಯೇ|

06056009c ಕಪಿಧ್ವಜಂ ಪ್ರೇಕ್ಷ್ಯ ವಿಷೇದುರಾಜೌ

         ಸಹೈವ ಪುತ್ರೈಸ್ತವ ಕೌರವೇಯಾಃ||

ನಿನ್ನ ಪುತ್ರರೊಂದಿಗೆ ಕೌರವೇಯರು ಉತ್ತಮ ಸೂಪಸ್ಕರಗಳಿಂದ ಕೂಡಿದ ಯದುಗಳ ಋಷಭನೊಂದಿಗಿರುವ ಕಪಿಧ್ವಜನನ್ನು ರಣದಲ್ಲಿ ನೋಡಿ ವಿಷಾದಿತರಾದರು.

06056010a ಪ್ರಕರ್ಷತಾ ಗುಪ್ತಮುದಾಯುಧೇನ

         ಕಿರೀಟಿನಾ ಲೋಕಮಹಾರಥೇನ|

06056010c ತಂ ವ್ಯೂಹರಾಜನ್ದದೃಶುಸ್ತ್ವದೀಯಾಶ್

         ಚತುಶ್ಚತುರ್ವ್ಯಾಲಸಹಸ್ರಕೀರ್ಣಂ||

ರಾಜನ್! ಆಯುಧಗಳನ್ನು ಎತ್ತಿಹಿಡಿದಿದ್ದ ಲೋಕಮಹಾರಥ ಕಿರೀಟಿಯಿಂದ ರಕ್ಷಿತವಾಗಿ ಮುಂದುವರೆಯುತ್ತಿದ್ದ ಆ ವ್ಯೂಹದ ನಾಲ್ಕೂ ಕಡೆಗಳಲ್ಲಿ ನಾಲ್ಕು ಸಾವಿರ ಆನೆಗಳಿದ್ದವು.

06056011a ಯಥಾ ಹಿ ಪೂರ್ವೇಽಹನಿ ಧರ್ಮರಾಜ್ಞಾ

         ವ್ಯೂಹಃ ಕೃತಃ ಕೌರವನಂದನೇನ|

06056011c ತಥಾ ತಥೋದ್ದೇಶಮುಪೇತ್ಯ ತಸ್ಥುಃ

         ಪಾಂಚಾಲಮುಖ್ಯೈಃ ಸಹ ಚೇದಿಮುಖ್ಯಾಃ||

ಹಿಂದಿನ ದಿನ ಕೌರವನಂದನ ಧರ್ಮರಾಜನು ಹೇಗೆ ವ್ಯೂಹವನ್ನು ರಚಿಸಿದ್ದನೋ ಅದರಂತೆಯೇ ಆಯಾ ಸ್ಥಳಗಳಲ್ಲಿ ಚೇದಿಮುಖ್ಯರೊಂದಿಗೆ ಪಾಂಚಾಲಮುಖ್ಯರು ನಿಂತಿದ್ದರು.

06056012a ತತೋ ಮಹಾವೇಗಸಮಾಹತಾನಿ

         ಭೇರೀಸಹಸ್ರಾಣಿ ವಿನೇದುರಾಜೌ|

06056012c ಶಂಖಸ್ವನಾ ದುಂದುಭಿನಿಸ್ವನಾಶ್ಚ

         ಸರ್ವೇಷ್ವನೀಕೇಷು ಸಸಿಂಹನಾದಾಃ||

ಆಗ ಮಹಾವೇಗದಿಂದ ಕೂಡಿ ಸಹಸ್ರಾರು ಭೇರಿಗಳು ಮೊಳಗಿದವು. ಎಲ್ಲ ಸೇನೆಗಳಲ್ಲಿ ಸಿಂಹನಾದಗಳೊಂದಿಗೆ ಶಂಖಸ್ವನ, ದುಂದುಭಿ ನಿಸ್ವನಗಳು ಕೇಳಿಬಂದವು.

06056013a ತತಃ ಸಬಾಣಾನಿ ಮಹಾಸ್ವನಾನಿ

         ವಿಸ್ಫಾರ್ಯಮಾಣಾನಿ ಧನೂಂಷಿ ವೀರೈಃ|

06056013c ಕ್ಷಣೇನ ಭೇರೀಪಣವಪ್ರಣಾದಾನ್

         ಅಂತರ್ದಧುಃ ಶಂಖಮಹಾಸ್ವನಾಶ್ಚ||

ಆಗ ವೀರರ ಬಾಣಗಳ ಮಹಾಸ್ವನಗಳು ಅವರ ಧನುಸ್ಸಿನ ಟೇಂಕಾರಗಳು ಸೇರಿ, ಕ್ಷಣದಲ್ಲಿಯೇ ಭೇರಿ-ಪಣವ-ಪ್ರಣಾದಗಳ ಮತ್ತು ಶಂಖಗಳ ಮಹಾಸ್ವನಗಳು ಕೇಳಿಬಂದವು.

06056014a ತಚ್ಚಂಖಶಬ್ದಾವೃತಮಂತರಿಕ್ಷಂ

         ಉದ್ಧೂತಭೌಮದ್ರುತರೇಣುಜಾಲಂ|

06056014c ಮಹಾವಿತಾನಾವತತಪ್ರಕಾಶಂ

         ಆಲೋಕ್ಯ ವೀರಾಃ ಸಹಸಾಭಿಪೇತುಃ||

ಶಂಖಧ್ವನಿಯು ಅಂತರಿಕ್ಷದಲ್ಲಿ ಆವೃತವಾದುದನ್ನು, ಭೂಮಿಯಿಂದ ಮೇಲೆದ್ದ ಧೂಳಿನ ಜಾಲವು ಉಂಟಾದುದನ್ನು, ಮತ್ತು ಬೆಳಕನ್ನು ಮಹಾ ಕತ್ತಲೆಯು ಆವರಿಸಿದುದನ್ನು ನೋಡಿ ವೀರರು ತಕ್ಷಣವೇ ಮೇಲೆರಗಿದರು.

06056015a ರಥೀ ರಥೇನಾಭಿಹತಃ ಸಸೂತಃ

         ಪಪಾತ ಸಾಶ್ವಃ ಸರಥಃ ಸಕೇತುಃ|

06056015c ಗಜೋ ಗಜೇನಾಭಿಹತಃ ಪಪಾತ

         ಪದಾತಿನಾ ಚಾಭಿಹತಃ ಪದಾತಿಃ||

ರಥಿಕನಿಂದ ಹೊಡೆಯಲ್ಪಟ್ಟ ರಥಿಕನು ಸೂತ, ಕುದುರೆ, ಧ್ವಜಗಳೊಂದಿಗೆ ಕೆಳಗುರುಳಿದನು. ಆನೆಗಳು ಆನೆಗಳಿಂದ ಹೊಡೆಯಲ್ಪಟ್ಟು ಮತ್ತು ಪದಾತಿಗಳು ಪದಾತಿಗಳಿಂದ ಹೊಡೆಯಲ್ಪಟ್ಟು ಬಿದ್ದರು.

06056016a ಆವರ್ತಮಾನಾನ್ಯಭಿವರ್ತಮಾನೈರ್

         ಬಾಣೈಃ ಕ್ಷತಾನ್ಯದ್ಭುತದರ್ಶನಾನಿ|

06056016c ಪ್ರಾಸೈಶ್ಚ ಖಡ್ಗೈಶ್ಚ ಸಮಾಹತಾನಿ

         ಸದಶ್ವವೃಂದಾನಿ ಸದಶ್ವವೃಂದೈಃ||

ಅಶ್ವವೃಂದಗಳು ಅಶ್ವವೃಂದಗಳಿಂದ ಆವರ್ತನ-ಪ್ರತ್ಯಾವರ್ತನಗಳಿಂದ ನಡೆದು ಬಾಣಗಳಿಂದ ಸಾಯುತ್ತಿದ್ದ, ಪ್ರಾಸ-ಖಡ್ಗಗಳಿಂದ ಸಂಹರಿಸಲ್ಪಡುತ್ತಿದ್ದ ದೃಶ್ಯವು ಅದ್ಭುತವಾಗಿತ್ತು.

06056017a ಸುವರ್ಣತಾರಾಗಣಭೂಷಿತಾನಿ

         ಶರಾವರಾಣಿ ಪ್ರಹಿತಾನಿ ವೀರೈಃ|

06056017c ವಿದಾರ್ಯಮಾಣಾನಿ ಪರಶ್ವಧೈಶ್ಚ

         ಪ್ರಾಸೈಶ್ಚ ಖಡ್ಗೈಶ್ಚ ನಿಪೇತುರುರ್ವ್ಯಾಂ||

ವೀರರ ಸುವರ್ಣ ತಾರಾಗಣಗಳಿಂದ ವಿಭೂಷಿತ ಕತ್ತಿ ಮತ್ತು ಗುರಾಣಿಗಳು, ಪರಶಗಳು, ಪ್ರಾಸಗಳು, ಖಡ್ಗಗಳು ತುಂಡಾಗಿ ಭೂಮಿಯ ಮೇಲೆ ಬಿದ್ದಿದ್ದವು.

06056018a ಗಜೈರ್ವಿಷಾಣೈರ್ವರಹಸ್ತರುಗ್ಣಾಃ

         ಕೇ ಚಿತ್ಸಸೂತಾ ರಥಿನಃ ಪ್ರಪೇತುಃ|

06056018c ಗಜರ್ಷಭಾಶ್ಚಾಪಿ ರಥರ್ಷಭೇಣ

         ನಿಪೇತಿರೇ ಬಾಣಹತಾಃ ಪೃಥಿವ್ಯಾಂ||

ಮದಿಸಿದ ಆನೆಗಳ ಕೋರೆದಾಡೆಗಳ ಮತ್ತು ಸೊಂಡಿಲುಗಳ ಪ್ರಹಾರದಿಂದಾಗಿ ಎಲವು ರಥಿಗಳು ಸೂತರೊಂದಿಗೆ ಬಿದ್ದರು. ಗಜರ್ಷಭರೂ ಕೂಡ ರಥರ್ಷಭರ ಬಾಣಗಳಿಂದ ಹತರಾಗಿ ಭೂಮಿಯ ಮೇಲೆ ಬಿದ್ದರು.

06056019a ಗಜೌಘವೇಗೋದ್ಧತಸಾದಿತಾನಾಂ

         ಶ್ರುತ್ವಾ ನಿಷೇದುರ್ವಸುಧಾಂ ಮನುಷ್ಯಾಃ|

06056019c ಆರ್ತಸ್ವರಂ ಸಾದಿಪದಾತಿಯೂನಾಂ

         ವಿಷಾಣಗಾತ್ರಾವರತಾಡಿತಾನಾಂ||

ಆನೆಗಳ ಸಮೂಹಗಳು ವೇಗದಿಂದ ಬಂದು ಕುದುರೆಸವಾರರನ್ನು ಕೆಡವಿ ನೆಲದ ಮೇಲೆ ಬಿದ್ದ ಮನುಷ್ಯರ ಆಕ್ರಂದನ ಮತ್ತು ದೇಹದ ಕೆಳಗೆ ಕೋರೆದಾಡೆಗಳಿಂದ ಆಘಾತಗೊಂಡ ಕುದುರೆಸವಾರರು ಮತ್ತು ಪದಾತಿಗಳ ಆರ್ತಸ್ವರವು ಕೇಳಿಬರುತ್ತಿತ್ತು.

06056020a ಸಂಭ್ರಾಂತನಾಗಾಶ್ವರಥೇ ಪ್ರಸೂತೇ

         ಮಹಾಭಯೇ ಸಾದಿಪದಾತಿಯೂನಾಂ|

06056020c ಮಹಾರಥೈಃ ಸಂಪರಿವಾರ್ಯಮಾಣಂ

         ದದರ್ಶ ಭೀಷ್ಮಃ ಕಪಿರಾಜಕೇತುಂ||

ಕುದುರೆ ಸವಾರರು ಮತ್ತು ಪದಾತಿಗಳ ಆ ಮಹಾಭಯದಿಂದ ನಾಗಾಶ್ವರಥಿಕರು ಸಂಭ್ರಾಂತರಾದರು. ಆಗ ಭೀಷ್ಮನು ಮಹಾರಥರಿಂದ ಪರಿವಾರಿತನಾದ ಕಪಿರಾಜಕೇತುವನ್ನು ನೋಡಿದನು.

06056021a ತಂ ಪಂಚತಾಲೋಚ್ಛ್ರಿತತಾಲಕೇತುಃ

         ಸದಶ್ವವೇಗೋದ್ಧತವೀರ್ಯಯಾತಃ|

06056021c ಮಹಾಸ್ತ್ರಬಾಣಾಶನಿದೀಪ್ತಮಾರ್ಗಂ

         ಕಿರೀಟಿನಂ ಶಾಂತನವೋಽಭ್ಯಧಾವತ್||

ಐದು ತಾಳೇಮರಗಳಷ್ಟು ಎತ್ತರದ ತಾಲವೃಕ್ಷವೇ ಚಿಹ್ನೆಯಾಗಿದ್ದ ಧ್ವಜವುಳ್ಳ, ವೇಗಿಗಳಾದ ವೀರ ಕುದುರೆಗಳನ್ನು ಕಟ್ಟಿದ್ದ ರಥವುಳ್ಳ ಶಾಂತನವನು ಮಹಾ ಅಸ್ತ್ರಗಳನ್ನು ಹೊಂದಿದ್ದ, ಪ್ರದೀಪ್ತನಾಗಿದ್ದ ಕಿರೀಟಿಯನ್ನು ಎದುರಿಸಿದನು.

06056022a ತಥೈವ ಶಕ್ರಪ್ರತಿಮಾನಕಲ್ಪಂ

         ಇಂದ್ರಾತ್ಮಜಂ ದ್ರೋಣಮುಖಾಭಿಸಸ್ರುಃ|

06056022c ಕೃಪಶ್ಚ ಶಲ್ಯಶ್ಚ ವಿವಿಂಶತಿಶ್ಚ

         ದುರ್ಯೋಧನಃ ಸೌಮದತ್ತಿಶ್ಚ ರಾಜನ್||

ರಾಜನ್! ಹಾಗೆಯೇ ಶಕ್ರಪ್ರತಿಮಾನಕಲ್ಪನಾದ ಇಂದ್ರಾತ್ಮಜನನ್ನು ದ್ರೋಣಪ್ರಮುಖರಾದ ಕೃಪ, ಶಲ್ಯ, ವಿವಿಂಶತಿ, ದುರ್ಯೋಧನ ಮತ್ತು ಸೌಮದತ್ತಿಯರು ಎದುರಿಸಿದರು.

06056023a ತತೋ ರಥಾನೀಕಮುಖಾದುಪೇತ್ಯ

         ಸರ್ವಾಸ್ತ್ರವಿತ್ಕಾಂಚನಚಿತ್ರವರ್ಮಾ|

06056023c ಜವೇನ ಶೂರೋಽಭಿಸಸಾರ ಸರ್ವಾಂಸ್

         ತಥಾರ್ಜುನಸ್ಯಾತ್ರ ಸುತೋಽಭಿಮನ್ಯುಃ||

ಆಗ ರಥಾನೀಕದ ಎದುರಿನಿಂದ ಸರ್ವಾಸ್ತ್ರವಿದು, ಕಾಂಚನ-ಬಣ್ಣದ ಕವಚಗಳನ್ನು ತೊಟ್ಟಿದ್ದ ಶೂರ ಅರ್ಜುನನ ಸುತ ಅಭಿಮನ್ಯುವು ವೇಗದಿಂದ ಅಲ್ಲಿಗೆ ಬಂದೊದಗಿದನು.

06056024a ತೇಷಾಂ ಮಹಾಸ್ತ್ರಾಣಿ ಮಹಾರಥಾನಾಂ

         ಅಸಕ್ತಕರ್ಮಾ ವಿನಿಹತ್ಯ ಕಾರ್ಷ್ಣಿಃ|

06056024c ಬಭೌ ಮಹಾಮಂತ್ರಹುತಾರ್ಚಿಮಾಲೀ

         ಸದೋಗತಃ ಸನ್ಭಗವಾನಿವಾಗ್ನಿಃ||

ಆ ಮಹಾರಥರ ಮಹಾಸ್ತ್ರಗಳನ್ನು ನಿರಸನಗೊಳಿಸಿ ಕಾರ್ಷ್ಣಿಯು ಸಹಿಸಲಸಾಧ್ಯ ಕರ್ಮವನ್ನು ಮಾಡಿ ತೋರಿಸಿ, ಮಹಾಮತ್ರದಿಂದ ಅರ್ಪಿಸಿದ ಆಹುತಿಯನ್ನು ತೆಗೆದುಕೊಂಡ ಭಗವಾನ್ ಅಗ್ನಿಯಂತೆ ಪ್ರಜ್ವಲಿಸಿದನು.

06056025a ತತಃ ಸ ತೂರ್ಣಂ ರುಧಿರೋದಫೇನಾಂ

         ಕೃತ್ವಾ ನದೀಂ ವೈಶಸನೇ ರಿಪೂಣಾಂ|

06056025c ಜಗಾಮ ಸೌಭದ್ರಮತೀತ್ಯ ಭೀಷ್ಮೋ

         ಮಹಾರಥಂ ಪಾರ್ಥಮದೀನಸತ್ತ್ವಃ||

ಆಗ ಬೇಗನೇ ರಕ್ತದ ನೀರು ಮತ್ತು ನೊರೆಗಳ ನದಿಯನ್ನು ರಚಿಸಿ ರಿಪುಗಳನ್ನು ಯಮನಲ್ಲಿಗೆ ಕಳುಹಿಸಿ ಅದೀನ ಸತ್ತ್ವ ಭೀಷ್ಮನು ಸೌಭದ್ರನನ್ನು ಅತಿಕ್ರಮಿಸಿ ಮಹಾರಥ ಪಾರ್ಥನಲ್ಲಿಗೆ ಹೋದನು.

06056026a ತತಃ ಪ್ರಹಸ್ಯಾದ್ಭುತದರ್ಶನೇನ

         ಗಾಂಡೀವನಿರ್ಹ್ವಾದಮಹಾಸ್ವನೇನ|

06056026c ವಿಪಾಠಜಾಲೇನ ಮಹಾಸ್ತ್ರಜಾಲಂ

         ವಿನಾಶಯಾಮಾಸ ಕಿರೀಟಮಾಲೀ||

ಆಗ ಅವನ ಅದ್ಭುತ ದರ್ಶನದಿಂದ ನಗುತ್ತಾ ಕಿರೀಟಮಾಲಿಯು ಗಾಂಡೀವವನ್ನು ಮಹಾಸ್ವನದಿಂದ ಟೇಂಕರಿಸಿ ವಿಪಾಠಜಾಲವೆಂಬ ಮಹಾಸ್ತ್ರಜಾಲದಿಂದ ಸೇನೆಗಳನ್ನು ನಾಶಮಾಡತೊಡಗಿದನು.

06056027a ತಮುತ್ತಮಂ ಸರ್ವಧನುರ್ಧರಾಣಾಂ

         ಅಸಕ್ತಕರ್ಮಾ ಕಪಿರಾಜಕೇತುಃ|

06056027c ಭೀಷ್ಮಂ ಮಹಾತ್ಮಾಭಿವವರ್ಷ ತೂರ್ಣಂ

         ಶರೌಘಜಾಲೈರ್ವಿಮಲೈಶ್ಚ ಭಲ್ಲೈಃ||

ಸರ್ವಧನುರ್ಧರರಲ್ಲಿ ಉತ್ತಮನಾದ ಮಹಾತ್ಮ ಭೀಷ್ಮನ ಮೇಲೆ ಅಸಕ್ತಕರ್ಮ ಕಪಿರಾಜಕೇತುವು ಬೇಗನೆ ವಿಮಲ ಭಲ್ಲಗಳ ಶರಜಾಲಗಳ ಮಳೆಯನ್ನು ಸುರಿಸಿದನು.

06056028a ಏವಂವಿಧಂ ಕಾರ್ಮುಕಭೀಮನಾದಂ

         ಅದೀನವತ್ಸತ್ಪುರುಷೋತ್ತಮಾಭ್ಯಾಂ|

06056028c ದದರ್ಶ ಲೋಕಃ ಕುರುಸೃಂಜಯಾಶ್ಚ

         ತದ್ದ್ವೈರಥಂ ಭೀಷ್ಮಧನಂಜಯಾಭ್ಯಾಂ||

ಈ ರೀತಿ ಸತ್ಪುರುಷೋತ್ತಮರಾದ ಭೀಷ್ಮ-ಧನಂಜಯರಿಬ್ಬರ ಧನುಸ್ಸುಗಳ ಭಯಂಕರ ನಿನಾದವನ್ನೂ, ದೈನ್ಯರಹಿತ ಆ ದ್ವೈರಥಯುದ್ಧವನ್ನು ಕುರುಸೃಂಜಯರೂ ಲೋಕವೂ ನೋಡಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಾರ್ಜುನದ್ವೈರಥೇ ಷಟ್ಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಾರ್ಜುನದ್ವೈರಥ ಎನ್ನುವ ಐವತ್ತಾರನೇ ಅಧ್ಯಾಯವು.

Image result for flowers against white background

Comments are closed.