Bhishma Parva: Chapter 54

ಭೀಷ್ಮ ಪರ್ವ: ಭೀಷ್ಮವಧ ಪರ್ವ

೫೪

ಪಾಂಡವಯೋಧರ ಪರಾಕ್ರಮ, ಕೌರವ ಸೇನೆಯ ಪಲಾಯನ (೧-೩೦). ಭೀಷ್ಮ-ದುರ್ಯೋಧನರ ಸಂವಾದ (೩೧-೪೪).

06054001 ಸಂಜಯ ಉವಾಚ|

06054001a ತತಸ್ತೇ ಪಾರ್ಥಿವಾಃ ಕ್ರುದ್ಧಾಃ ಫಲ್ಗುನಂ ವೀಕ್ಷ್ಯ ಸಂಯುಗೇ|

06054001c ರಥೈರನೇಕಸಾಹಸ್ರೈಃ ಸಮಂತಾತ್ಪರ್ಯವಾರಯನ್||

ಸಂಜಯನು ಹೇಳಿದನು: “ಆಗ ಸಂಯುಗದಲ್ಲಿ ಫಲ್ಗುನನನ್ನು ನೋಡಿ ಕ್ರುದ್ಧರಾದ ಪಾರ್ಥಿವರು ಅನೇಕ ಸಹಸ್ರ ರಥಗಳಿಂದ ಅವನನ್ನು ಎಲ್ಲಕಡೆಗಳೆಂದಲೂ ಸುತ್ತುವರೆದರು.

06054002a ಅಥೈನಂ ರಥವೃಂದೇನ ಕೋಷ್ಟಕೀಕೃತ್ಯ ಭಾರತ|

06054002c ಶರೈಃ ಸುಬಹುಸಾಹಸ್ರೈಃ ಸಮಂತಾದಭ್ಯವಾರಯನ್||

ಭಾರತ! ಹೀಗೆ ರಥವೃಂದದಿಂದ ಕೋಟೆಯನ್ನಾಗಿಸಿಕೊಂಡು ಅನೇಕ ಸಹಸ್ರ ಶರಗಳಿಂದ ಎಲ್ಲ ಕಡೆಗಳಿಂದ ಅವನನ್ನು ಹೊಡೆದರು.

06054003a ಶಕ್ತೀಶ್ಚ ವಿಮಲಾಸ್ತೀಕ್ಷ್ಣಾ ಗದಾಶ್ಚ ಪರಿಘೈಃ ಸಹ|

06054003c ಪ್ರಾಸಾನ್ಪರಶ್ವಧಾಂಶ್ಚೈವ ಮುದ್ಗರಾನ್ಮುಸಲಾನಪಿ|

06054003e ಚಿಕ್ಷಿಪುಃ ಸಮರೇ ಕ್ರುದ್ಧಾಃ ಫಲ್ಗುನಸ್ಯ ರಥಂ ಪ್ರತಿ||

ಸಮರದಲ್ಲಿ ಕ್ರುದ್ಧರಾಗಿ ವಿಮಲ ತೀಕ್ಷ್ಣ ಶಕ್ತಿಗಳನ್ನೂ, ಗದೆಗಳನ್ನೂ, ಪರಿಘಗಳನ್ನೂ, ಪ್ರಾಸಗಳನ್ನೂ, ಪರಶುಗಳನ್ನೂ, ಮುದ್ಗರ-ಮುಸಲಗಳನ್ನೂ ಫಲ್ಗುನನ ರಥದ ಮೇಲೆ ಎಸೆದರು.

06054004a ಶಸ್ತ್ರಾಣಾಮಥ ತಾಂ ವೃಷ್ಟಿಂ ಶಲಭಾನಾಮಿವಾಯತಿಂ|

06054004c ರುರೋಧ ಸರ್ವತಃ ಪಾರ್ಥಃ ಶರೈಃ ಕನಕಭೂಷಣೈಃ||

ಹೀಗೆ ಪತಂಗಗಳಂತೆ ಎಲ್ಲಕಡೆಗಳಿಂದ ಸುರಿಯುತ್ತಿರುವ ಶಸ್ತ್ರಗಳನ್ನು ಪಾರ್ಥನು ಕನಕಭೂಷಣ ಶರಗಳಿಂದ ತಡೆದನು.

06054005a ತತ್ರ ತಲ್ಲಾಘವಂ ದೃಷ್ಟ್ವಾ ಬೀಭತ್ಸೋರತಿಮಾನುಷಂ|

06054005c ದೇವದಾನವಗಂಧರ್ವಾಃ ಪಿಶಾಚೋರಗರಾಕ್ಷಸಾಃ|

06054005e ಸಾಧು ಸಾಧ್ವಿತಿ ರಾಜೇಂದ್ರ ಫಲ್ಗುನಂ ಪ್ರತ್ಯಪೂಜಯನ್||

ರಾಜೇಂದ್ರ! ಅಲ್ಲಿ ಆ ಬೀಭತ್ಸುವಿನ ಅತಿಮಾನುಷ ಹಸ್ತಲಾಘವವನ್ನು ನೋಡಿ ದೇವ-ದಾನವ-ಗಂಧರ್ವ-ಪಿಶಾಚ-ಉರಗ-ರಾಕ್ಷಸರು “ಸಾಧು! ಸಾಧು!” ಎಂದು ಫಲ್ಗುನನನ್ನು ಗೌರವಿಸಿದರು.

06054006a ಸಾತ್ಯಕಿಂ ಚಾಭಿಮನ್ಯುಂ ಚ ಮಹತ್ಯಾ ಸೇನಯಾ ಸಹ|

06054006c ಗಾಂಧಾರಾಃ ಸಮರೇ ಶೂರಾ ರುರುಧುಃ ಸಹಸೌಬಲಾಃ||

ಸಮರದಲ್ಲಿ ಶೂರ ಸೌಬಲರೊಂದಿಗೆ ಗಾಂಧಾರರು ಮಹಾಸೇನೆಯೊಡನೆ ಸಾತ್ಯಕಿ ಮತ್ತು ಅಭಿಮನ್ಯುವನ್ನು ತಡೆದರು.

06054007a ತತ್ರ ಸೌಬಲಕಾಃ ಕ್ರುದ್ಧಾ ವಾರ್ಷ್ಣೇಯಸ್ಯ ರಥೋತ್ತಮಂ|

06054007c ತಿಲಶಶ್ಚಿಚ್ಛಿದುಃ ಕ್ರೋಧಾಚ್ಚಸ್ತ್ರೈರ್ನಾನಾವಿಧೈರ್ಯುಧಿ||

ಯುದ್ಧದಲ್ಲಿ ಕ್ರುದ್ಧ ಸೌಬಲಕರು ಕ್ರೋಧದಿಂದ ವಾರ್ಷ್ಣೇಯನ ಉತ್ತಮ ರಥವನ್ನು ನಾನಾವಿಧದ ಶಸ್ತ್ರಗಳಿಂದ ಎಳ್ಳಿನ ಗಾತ್ರದಷ್ಟು ಚೂರು ಚೂರು ಮಾಡಿದರು.

06054008a ಸಾತ್ಯಕಿಸ್ತು ರಥಂ ತ್ಯಕ್ತ್ವಾ ವರ್ತಮಾನೇ ಮಹಾಭಯೇ|

06054008c ಅಭಿಮನ್ಯೋ ರಥಂ ತೂರ್ಣಮಾರುರೋಹ ಪರಂತಪಃ||

ಆಗ ಮಹಾಭಯದಿಂದ ಪರಂತಪ ಸಾತ್ಯಕಿಯು ರಥವನ್ನು ಬಿಟ್ಟು ಬೇಗನೇ ಅಭಿಮನ್ಯುವಿನ ರಥವನ್ನೇರಿದನು.

06054009a ತಾವೇಕರಥಸಂಯುಕ್ತೌ ಸೌಬಲೇಯಸ್ಯ ವಾಹಿನೀಂ|

06054009c ವ್ಯಧಮೇತಾಂ ಶಿತೈಸ್ತೂರ್ಣಂ ಶರೈಃ ಸನ್ನತಪರ್ವಭಿಃ||

ಅವರಿಬ್ಬರೂ ಒಂದೇ ರಥದಲ್ಲಿದ್ದು ಸೌಬಲನ ಸೇನೆಯನ್ನು ಬೇಗನೆ ನಿಶಿತ ಸನ್ನತಪರ್ವ ಶರಗಳಿಂದ ನಾಶಗೊಳಿಸಿದರು.

06054010a ದ್ರೋಣಭೀಷ್ಮೌ ರಣೇ ಯತ್ತೌ ಧರ್ಮರಾಜಸ್ಯ ವಾಹಿನೀಂ|

06054010c ನಾಶಯೇತಾಂ ಶರೈಸ್ತೀಕ್ಷ್ಣೈಃ ಕಂಕಪತ್ರಪರಿಚ್ಛದೈಃ||

ರಣದಲ್ಲಿ ಇನ್ನೊಂದೆಡೆ ದ್ರೋಣ-ಭೀಷ್ಮರು ಧರ್ಮರಾಜನ ಸೇನೆಯನ್ನು ಎದುರಿಸಿ ಅದನ್ನು ತೀಕ್ಷ್ಣ ಕಂಕಪತ್ರ ಶರಗಳಿಂದ ನಾಶಗೊಳಿಸುತ್ತಿದ್ದರು.

06054011a ತತೋ ಧರ್ಮಸುತೋ ರಾಜಾ ಮಾದ್ರೀಪುತ್ರೌ ಚ ಪಾಂಡವೌ|

06054011c ಮಿಷತಾಂ ಸರ್ವಸೈನ್ಯಾನಾಂ ದ್ರೋಣಾನೀಕಮುಪಾದ್ರವನ್||

ಆಗ ರಾಜ ಧರ್ಮಸುತ ಮತ್ತು ಮಾದ್ರೀಪುತ್ರ ಪಾಂಡವರೀರ್ವರು ನೋಡುತ್ತಿರುವಂತೆಯೇ ದ್ರೋಣನ ಸರ್ವಸೇನೆಗಳ ಮೇಲೆ ಧಾಳಿಮಾಡಿದರು.

06054012a ತತ್ರಾಸೀತ್ಸುಮಹದ್ಯುದ್ಧಂ ತುಮುಲಂ ಲೋಮಹರ್ಷಣ|

06054012c ಯಥಾ ದೇವಾಸುರಂ ಯುದ್ಧಂ ಪೂರ್ವಮಾಸೀತ್ಸುದಾರುಣಂ||

ಆಗ ಅಲ್ಲಿ ಹಿಂದೆ ದೇವಾಸುರರ ನಡುವೆ ನಡೆದ ಸುದಾರುಣ ಯುದ್ಧದಂತೆ ಲೋಮಹರ್ಷಣ ತುಮುಲ ಮಹಾಯುದ್ಧವು ನಡೆಯಿತು.

06054013a ಕುರ್ವಾಣೌ ತು ಮಹತ್ಕರ್ಮ ಭೀಮಸೇನಘಟೋತ್ಕಚೌ|

06054013c ದುರ್ಯೋಧನಸ್ತತೋಽಭ್ಯೇತ್ಯ ತಾವುಭಾವಭ್ಯವಾರಯತ್||

ಮಹಾಕಾರ್ಯಗಳನ್ನೆಸಗುತ್ತಿದ್ದ ಭೀಮಸೇನ-ಘಟೋತ್ಕಚರಿಬ್ಬರ ಬಳಿ ಬಂದು ದುರ್ಯೋಧನನು ಅವರಿಬ್ಬರನ್ನು ತಡೆದನು.

06054014a ತತ್ರಾದ್ಭುತಮಪಶ್ಯಾಮ ಹೈಡಿಂಬಸ್ಯ ಪರಾಕ್ರಮಂ|

06054014c ಅತೀತ್ಯ ಪಿತರಂ ಯುದ್ಧೇ ಯದಯುಧ್ಯತ ಭಾರತ||

ಭಾರತ! ಅಲ್ಲಿ ಅದ್ಭುತವನ್ನೇ ನೋಡಿದೆವು. ಯುದ್ಧದಲ್ಲಿ ಯುದ್ಧಮಾಡುತ್ತಿರುವ ಹೈಡಿಂಬಿಯ ಪರಾಕ್ರಮವು ಅವನ ತಂದೆಯನ್ನೂ ಮೀರಿಸಿತ್ತು.

06054015a ಭೀಮಸೇನಸ್ತು ಸಂಕ್ರುದ್ಧೋ ದುರ್ಯೋಧನಮಮರ್ಷಣಂ|

06054015c ಹೃದ್ಯವಿಧ್ಯತ್ಪೃಷತ್ಕೇನ ಪ್ರಹಸನ್ನಿವ ಪಾಂಡವಃ||

ಭೀಮಸೇನ ಪಾಂಡವನಾದರೋ ಸಂಕ್ರುದ್ಧನಾಗಿ, ನಗು ನಗುತ್ತಾ ಧುರ್ಯೋಧನನ ಎದೆಗೆ ಗುರಿಯಿಟ್ಟು ಪೃಷತ್ಕ ಬಾಣವನ್ನು ಪ್ರಯೋಗಿಸಿದನು.

06054016a ತತೋ ದುರ್ಯೋಧನೋ ರಾಜಾ ಪ್ರಹಾರವರಮೋಹಿತಃ|

06054016c ನಿಷಸಾದ ರಥೋಪಸ್ಥೇ ಕಶ್ಮಲಂ ಚ ಜಗಾಮ ಹ||

ಆಗ ರಾಜಾ ದುರ್ಯೋಧನನು ಶ್ರೇಷ್ಠ ಪಹಾರದಿಂದ ಮೂರ್ಛೆಗೊಂಡು ರಥದಲ್ಲಿಯೇ ಕುಸಿದು ಕುಳಿತನು.

6054017a ತಂ ವಿಸಂಜ್ಞಮಥೋ ಜ್ಞಾತ್ವಾ ತ್ವರಮಾಣೋಽಸ್ಯ ಸಾರಥಿಃ|

06054017c ಅಪೋವಾಹ ರಣಾದ್ರಾಜಂಸ್ತತಃ ಸೈನ್ಯಮಭಿದ್ಯತ||

ಅವನು ಮೂರ್ಛಿತನಾದುದನ್ನು ತಿಳಿದು ಸಾರಥಿಯು ತ್ವರೆಮಾಡಿ ಅವನನ್ನು ರಣದಿಂದ ಆಚೆ ಕರೆದೊಯ್ದನು. ಆಗ ಸೈನ್ಯವು ಒಡೆಯಿತು.

06054018a ತತಸ್ತಾಂ ಕೌರವೀಂ ಸೇನಾಂ ದ್ರವಮಾಣಾಂ ಸಮಂತತಃ|

06054018c ನಿಘ್ನನ್ಭೀಮಃ ಶರೈಸ್ತೀಕ್ಷ್ಣೈರನುವವ್ರಾಜ ಪೃಷ್ಠತಃ||

ಎಲ್ಲಕಡೆ ಓಡಿ ಹೋಗುತ್ತಿರುವ ಕೌರವ ಸೇನೆಯನ್ನು ಭೀಮನು ತೀಕ್ಷ್ಣ ಶರಗಳಿಂದ, ಅವರ ಹಿಂದೆ ಓಡಿಹೋಗಿ, ಸಂಹರಿಸಿದನು.

06054019a ಪಾರ್ಷತಶ್ಚ ರಥಶ್ರೇಷ್ಠೋ ಧರ್ಮಪುತ್ರಶ್ಚ ಪಾಂಡವಃ|

06054019c ದ್ರೋಣಸ್ಯ ಪಶ್ಯತಃ ಸೈನ್ಯಂ ಗಾಂಗೇಯಸ್ಯ ಚ ಪಶ್ಯತಃ|

06054019e ಜಘ್ನತುರ್ವಿಶಿಖೈಸ್ತೀಕ್ಷ್ಣೈಃ ಪರಾನೀಕವಿಶಾತನೈಃ||

ರಥಶ್ರೇಷ್ಠ ಪಾರ್ಷತ ಮತ್ತು ಧರ್ಮಪುತ್ರ ಪಾಂಡವರು ದ್ರೋಣ ಮತ್ತು ಗಾಂಗೇಯರು ನೋಡುತ್ತಿದ್ದಂತೆಯೇ ಶತ್ರುಸೇನೆಗಳನ್ನು ತೀಕ್ಷ್ಣ ವಿಶಿಖಗಳಿಂದ ಹೊಡೆದು ಸಂಹರಿಸುತ್ತಿದ್ದರು.

06054020a ದ್ರವಮಾಣಂ ತು ತತ್ಸೈನ್ಯಂ ತವ ಪುತ್ರಸ್ಯ ಸಂಯುಗೇ|

06054020c ನಾಶಕ್ನುತಾಂ ವಾರಯಿತುಂ ಭೀಷ್ಮದ್ರೋಣೌ ಮಹಾರಥೌ||

ಸಂಯುಗದಲ್ಲಿ ಓಡಿಹೋಗುತ್ತಿದ್ದ ನಿನ್ನ ಮಗನ ಸೈನ್ಯವನ್ನು ಮಹಾರಥ ಭೀಷ್ಮ-ದ್ರೋಣರಿಬ್ಬರೂ ತಡೆದು ನಿಲ್ಲಿಸಲು ಶಕ್ಯರಾಗಲಿಲ್ಲ.

06054021a ವಾರ್ಯಮಾಣಂ ಹಿ ಭೀಷ್ಮೇಣ ದ್ರೋಣೇನ ಚ ವಿಶಾಂ ಪತೇ|

06054021c ವಿದ್ರವತ್ಯೇವ ತತ್ಸೈನ್ಯಂ ಪಶ್ಯತೋರ್ದ್ರೋಣಭೀಷ್ಮಯೋಃ||

ವಿಶಾಂಪತೇ! ಭೀಷ್ಮ-ದ್ರೋಣರು ತಡೆಯುತ್ತಿದ್ದರೂ ಅವರ ಕಣ್ಣೆದುರಿಗೇ ಆ ಸೇನೆಯು ಓಡಿ ಹೋಯಿತು.

06054022a ತತೋ ರಥಸಹಸ್ರೇಷು ವಿದ್ರವತ್ಸು ತತಸ್ತತಃ|

06054022c ತಾವಾಸ್ಥಿತಾವೇಕರಥಂ ಸೌಭದ್ರಶಿನಿಪುಂಗವೌ|

06054022e ಸೌಬಲೀಂ ಸಮರೇ ಸೇನಾಂ ಶಾತಯೇತಾಂ ಸಮಂತತಃ||

ಒಂದೇ ರಥದಲ್ಲಿ ನಿಂತು ಸೌಭದ್ರ-ಶಿನಿಪುಂಗವರು ಸೌಬಲಿಯ ಸೇನೆಗಳನ್ನು ಸಮರದಲ್ಲಿ ಎಲ್ಲಕಡೆ ಓಡಿಸಿದರು. ಆಗ ಸಹಸ್ರಾರು ರಥಗಳು ಒಂದೆಡೆಯಿಂದ ಇನ್ನೊಂದೆಡೆಗೆ ಓಡಿಹೋದವು.

06054023a ಶುಶುಭಾತೇ ತದಾ ತೌ ತು ಶೈನೇಯಕುರುಪುಂಗವೌ|

06054023c ಅಮಾವಾಸ್ಯಾಂ ಗತೌ ಯದ್ವತ್ಸೋಮಸೂರ್ಯೌ ನಭಸ್ತಲೇ||

ಅವರಿಬ್ಬರು ಶೈನ-ಕುರುಪುಂಗವರು ಅಮವಾಸ್ಯೆಯಂದು ನಭಸ್ತಲದಲ್ಲಿ ಒಂದೇಕಡೆ ಸೋಮಸೂರ್ಯರಂತೆ ಶೋಭಿಸುತ್ತಿದ್ದರು.

06054024a ಅರ್ಜುನಸ್ತು ತತಃ ಕ್ರುದ್ಧಸ್ತವ ಸೈನ್ಯಂ ವಿಶಾಂ ಪತೇ|

06054024c ವವರ್ಷ ಶರವರ್ಷೇಣ ಧಾರಾಭಿರಿವ ತೋಯದಃ||

ವಿಶಾಂಪತೇ! ಆಗ ಕ್ರುದ್ಧ ಅರ್ಜುನನಾದರೋ ನಿನ್ನ ಸೈನ್ಯದ ಮೇಲೆ ಮೋಡಗಳು ಮಳೆಸುರಿಸುವಂತೆ ಶರವರ್ಷಗಳನ್ನು ಸುರಿಸಿದನು.

06054025a ವಧ್ಯಮಾನಂ ತತಸ್ತತ್ತು ಶರೈಃ ಪಾರ್ಥಸ್ಯ ಸಂಯುಗೇ|

06054025c ದುದ್ರಾವ ಕೌರವಂ ಸೈನ್ಯಂ ವಿಷಾದಭಯಕಂಪಿತಂ||

ಸಂಯುಗದಲ್ಲಿ ಪಾರ್ಥನ ಶರಗಳಿಂದ ವಧಿಸಲ್ಪಡುತ್ತಿದ್ದ ಕೌರವ ಸೇನೆಯು ವಿಷಾದ-ಭಯ ಕಂಪಿತರಾಗಿ ಓಡಿಹೋಯಿತು.

06054026a ದ್ರವತಸ್ತಾನ್ಸಮಾಲೋಕ್ಯ ಭೀಷ್ಮದ್ರೋಣೌ ಮಹಾರಥೌ|

06054026c ನ್ಯವಾರಯೇತಾಂ ಸಂರಬ್ಧೌ ದುರ್ಯೋಧನಹಿತೈಷಿಣೌ||

ಓಡಿಹೋಗುತ್ತಿರುವವರನ್ನು ನೋಡಿ ದುರ್ಯೋಧನನ ಹಿತೈಷಿಗಳಾದ ಮಹಾರಥ ಭೀಷ್ಮ-ದ್ರೊಣರಿಬ್ಬರೂ ಸಂರಬ್ಧರಾಗಿ ಅವರನ್ನು ತಡೆಯಲು ಪ್ರಯತ್ನಿಸಿದರು.

06054027a ತತೋ ದುರ್ಯೋಧನೋ ರಾಜಾ ಸಮಾಶ್ವಸ್ಯ ವಿಶಾಂ ಪತೇ|

06054027c ನ್ಯವರ್ತಯತ ತತ್ಸೈನ್ಯಂ ದ್ರವಮಾಣಂ ಸಮಂತತಃ||

ವಿಶಾಂಪತೇ! ಆಗ ರಾಜಾ ದುರ್ಯೋಧನನು ಎಲ್ಲಕಡೆ ಹೋಗುತ್ತಿರುವ ಆ ಸೈನ್ಯವನ್ನು ನಿಲ್ಲಿಸಿದನು.

06054028a ಯತ್ರ ಯತ್ರ ಸುತಂ ತುಭ್ಯಂ ಯೋ ಯಃ ಪಶ್ಯತಿ ಭಾರತ|

06054028c ತತ್ರ ತತ್ರ ನ್ಯವರ್ತಂತ ಕ್ಷತ್ರಿಯಾಣಾಂ ಮಹಾರಥಾಃ||

ಭಾರತ! ಎಲ್ಲೆಲ್ಲಿ ನಿನ್ನ ಮಗನನ್ನು ಯಾರ್ಯಾರು ನೋಡಿದರೋ ಅಲ್ಲಲ್ಲಿ ಮಹಾರಥ ಕ್ಷತ್ರಿಯರು ಹಿಂದಿರುಗಿದರು.

06054029a ತಾನ್ನಿವೃತ್ತಾನ್ಸಮೀಕ್ಷ್ಯೈವ ತತೋಽನ್ಯೇಽಪೀತರೇ ಜನಾಃ|

06054029c ಅನ್ಯೋನ್ಯಸ್ಪರ್ಧಯಾ ರಾಜಽಲ್ಲಜ್ಜಯಾನ್ಯೇಽವತಸ್ಥಿರೇ||

ರಾಜನ್! ಅವರು ಹಿಂದಿರುಗುತ್ತಿರುವುದನ್ನು ನೋಡಿಯೇ ಇತರ ಜನರು ಅನ್ಯೋನ್ಯರೊಡನೆ ಸ್ಪರ್ಧಿಸುತ್ತಾ, ನಾಚಿಕೆಗೊಂಡು, ಹಿಂದಿರುಗಿ ಬರುತ್ತಿದ್ದರು.

06054030a ಪುನರಾವರ್ತತಾಂ ತೇಷಾಂ ವೇಗ ಆಸೀದ್ವಿಶಾಂ ಪತೇ|

06054030c ಪೂರ್ಯತಃ ಸಾಗರಸ್ಯೇವ ಚಂದ್ರಸ್ಯೋದಯನಂ ಪ್ರತಿ||

ವಿಶಾಂಪತೇ! ಹಿಂದಿರುಗಿ ಬರುತ್ತಿರುವವರ ವೇಗವು ಚಂದ್ರೋದಯದ ಹೊತ್ತಿನಲ್ಲಿ ಸಮುದ್ರವು ಭರವುಕ್ಕಿ ಬರುವಂತಿತ್ತು.

06054031a ಸಂನಿವೃತ್ತಾಂಸ್ತತಸ್ತಾಂಸ್ತು ದೃಷ್ಟ್ವಾ ರಾಜಾ ಸುಯೋಧನಃ|

06054031c ಅಬ್ರವೀತ್ತ್ವರಿತೋ ಗತ್ವಾ ಭೀಷ್ಮಂ ಶಾಂತನವಂ ವಚಃ||

ಹಿಂದಿರುಗುತ್ತಿದ್ದ ಅವರನ್ನು ನೋಡಿ ರಾಜಾ ಸುಯೋಧನನು ತ್ವರೆಮಾಡಿ ಹೋಗಿ ಭೀಷ್ಮ ಶಾಂತನವನಿಗೆ ಈ ಮಾತುಗಳನ್ನಾಡಿದನು:

06054032a ಪಿತಾಮಹ ನಿಬೋಧೇದಂ ಯತ್ತ್ವಾ ವಕ್ಷ್ಯಾಮಿ ಭಾರತ|

06054032c ನಾನುರೂಪಮಹಂ ಮನ್ಯೇ ತ್ವಯಿ ಜೀವತಿ ಕೌರವ||

06054033a ದ್ರೋಣೇ ಚಾಸ್ತ್ರವಿದಾಂ ಶ್ರೇಷ್ಠೇ ಸಪುತ್ರೇ ಸಸುಹೃಜ್ಜನೇ|

06054033c ಕೃಪೇ ಚೈವ ಮಹೇಷ್ವಾಸೇ ದ್ರವತೀಯಂ ವರೂಥಿನೀ||

“ಭಾರತ! ಪಿತಾಮಹ! ನಾನು ಹೇಳುವುದನ್ನು ಚೆನ್ನಾಗಿ ಕೇಳು. ಕೌರವ! ನೀನು ಜೀವಿತವಿರುವಾಗ, ಅಸ್ತ್ರವಿದರಲ್ಲಿ ಶ್ರೇಷ್ಠ ದ್ರೋಣನು ಪುತ್ರನೊಡನೆ ಮತ್ತು ಸುಹೃಜ್ಜನರೊಡನೆ, ಮಹೇಷ್ವಾಸ ಕೃಪ ನೀವುಗಳು ಜೀವಿತವಿರುವಾಗಲೇ ಈ ರೀತಿ ಸೇನೆಗಳು ಪಲಾಯನಮಾಡುತ್ತಿವೆಯೆಂದರೆ ಅದು ಅನುರೂಪವೆಂದು ನನಗನ್ನಿಸುವುದಿಲ್ಲ.

06054034a ನ ಪಾಂಡವಾಃ ಪ್ರತಿಬಲಾಸ್ತವ ರಾಜನ್ಕಥಂ ಚನ|

06054034c ತಥಾ ದ್ರೋಣಸ್ಯ ಸಂಗ್ರಾಮೇ ದ್ರೌಣೇಶ್ಚೈವ ಕೃಪಸ್ಯ ಚ||

ರಾಜನ್! ಪಾಂಡವರೂ ಯಾವರೀತಿಯಲ್ಲಿಯೂ ಸಂಗ್ರಾಮದಲ್ಲಿ ನಿನ್ನ, ಹಾಗೆಯೇ ದ್ರೋಣ, ದ್ರೌಣಿ, ಕೃಪರಿಗಿಂತ ಅತಿಬಲವಂತರಲ್ಲ.

06054035a ಅನುಗ್ರಾಹ್ಯಾಃ ಪಾಂಡುಸುತಾ ನೂನಂ ತವ ಪಿತಾಮಹ|

06054035c ಯಥೇಮಾಂ ಕ್ಷಮಸೇ ವೀರ ವಧ್ಯಮಾನಾಂ ವರೂಥಿನೀಂ||

ಪಿತಾಮಹ! ವೀರ! ಸೇನೆಗಳನ್ನು ವಧಿಸುತ್ತಿರುವ ಇವರನ್ನು ಕ್ಷಮಿಸುತ್ತಿರುವೆಯೆಂದರೆ ಪಾಂಡುಸುತರ ಮೇಲೆ ಇನ್ನೂ ನಿನಗೆ ಅನುಗ್ರಹವಿದೆಯೆಂದಾಯಿತು.

06054036a ಸೋಽಸ್ಮಿ ವಾಚ್ಯಸ್ತ್ವಯಾ ರಾಜನ್ಪೂರ್ವಮೇವ ಸಮಾಗಮೇ|

06054036c ನ ಯೋತ್ಸ್ಯೇ ಪಾಂಡವಾನ್ಸಂಖ್ಯೇ ನಾಪಿ ಪಾರ್ಷತಸಾತ್ಯಕೀ||

ರಾಜನ್! ಯುದ್ಧದ ಮೊದಲೇ ನೀನು ರಣದಲ್ಲಿ ಪಾಂಡವರು, ಪಾರ್ಷತ ಮತ್ತು ಸಾತ್ಯಕಿಯೊಡನೆ ಯುದ್ಧ ಮಾಡುವುದಿಲ್ಲವೆಂದು ನನಗೆ ಹೇಳಬೇಕಾಗಿತ್ತು.

06054037a ಶ್ರುತ್ವಾ ತು ವಚನಂ ತುಭ್ಯಮಾಚಾರ್ಯಸ್ಯ ಕೃಪಸ್ಯ ಚ|

06054037c ಕರ್ಣೇನ ಸಹಿತಃ ಕೃತ್ಯಂ ಚಿಂತಯಾನಸ್ತದೈವ ಹಿ||

ನಿನ್ನ ಆ ಮಾತನ್ನು ಕೇಳಿ ಆಗಲೇ ಕರ್ಣನ ಸಹಿತ ನಿನ್ನ, ಆಚಾರ್ಯನ ಕೃಪನ ಜೊತೆಗೂಡಿ ಆಲೋಚಿಸಿ ಕಾರ್ಯವನ್ನು ಕೈಗೊಳ್ಳುತ್ತಿದ್ದೆ.

06054038a ಯದಿ ನಾಹಂ ಪರಿತ್ಯಾಜ್ಯೋ ಯುವಾಭ್ಯಾಮಿಹ ಸಂಯುಗೇ|

06054038c ವಿಕ್ರಮೇಣಾನುರೂಪೇಣ ಯುಧ್ಯೇತಾಂ ಪುರುಷರ್ಷಭೌ||

ಸಂಯುಗದಲ್ಲಿ ನಾನು ನಿಮ್ಮಿಬ್ಬರನ್ನೂ ಪರಿತ್ಯಜಿಸುವ ಸ್ಥಿತಿಯಲ್ಲಿಲ್ಲವಾದುದರಿಂದ ನೀವಿಬ್ಬರು ಪುರುಷರ್ಷಭರೂ ನಿಮಗೆ ತಕ್ಕುದಾದ ವಿಕ್ರಮದಿಂದ ಯುದ್ಧಮಾಡಬೇಕು.”

06054039a ಏತಚ್ಚ್ರುತ್ವಾ ವಚೋ ಭೀಷ್ಮಃ ಪ್ರಹಸನ್ವೈ ಮುಹುರ್ಮುಹುಃ|

06054039c ಅಬ್ರವೀತ್ತನಯಂ ತುಭ್ಯಂ ಕ್ರೋಧಾದುದ್ವೃತ್ಯ ಚಕ್ಷುಷೀ||

ಈ ಮಾತನ್ನು ಕೇಳಿ ಭೀಷ್ಮನು ಪುನಃ ಪುನಃ ನಗುತ್ತಾ, ನಂತರ ಕ್ರೋಧದಿಂದ ಕಣ್ಣುಗಳನ್ನು ತಿರುಗಿಸುತ್ತಾ ನಿನ್ನ ಮಗನಿಗೆ ಹೇಳಿದನು:

06054040a ಬಹುಶೋ ಹಿ ಮಯಾ ರಾಜಂಸ್ತಥ್ಯಮುಕ್ತಂ ಹಿತಂ ವಚಃ|

06054040c ಅಜೇಯಾಃ ಪಾಂಡವಾ ಯುದ್ಧೇ ದೇವೈರಪಿ ಸವಾಸವೈಃ||

“ರಾಜನ್! ಹಿಂದೆಯೇ ನಾನು ಬಹಳಷ್ಟು ಯುಕ್ತವಾದ ಹಿತವಚನಗಳನ್ನು ನಿನಗೆ ಹೇಳಿದ್ದೆ. ಪಾಂಡವರು ಯುದ್ಧದಲ್ಲಿ ವಾಸನನೊಡನೆ ದೇವತೆಗಳಿಗೂ ಅಜೇಯರು.

06054041a ಯತ್ತು ಶಕ್ಯಂ ಮಯಾ ಕರ್ತುಂ ವೃದ್ಧೇನಾದ್ಯ ನೃಪೋತ್ತಮ|

06054041c ಕರಿಷ್ಯಾಮಿ ಯಥಾಶಕ್ತಿ ಪ್ರೇಕ್ಷೇದಾನೀಂ ಸಬಾಂಧವಃ||

ನೃಪೋತ್ತಮ! ವೃದ್ಧನಾದ ನಾನು ಎಷ್ಟು ಮಾಡಲು ಶಕ್ಯನೋ ಅಷ್ಟನ್ನು ಮಾಡುತ್ತಿದ್ದೇನೆ. ಯಥಾಶಕ್ತಿ ಬಾಂಧವರೊಂದಿಗೆ ಇವರನ್ನು ಸೋಲಿಸಲು ಪ್ರಯತ್ನಿಸುತ್ತೇನೆ.

06054042a ಅದ್ಯ ಪಾಂಡುಸುತಾನ್ಸರ್ವಾನ್ಸಸೈನ್ಯಾನ್ಸಹ ಬಂಧುಭಿಃ|

06054042c ಮಿಷತೋ ವಾರಯಿಷ್ಯಾಮಿ ಸರ್ವಲೋಕಸ್ಯ ಪಶ್ಯತಃ||

ಇಂದು ನೀನು ನೋಡುತ್ತಿರುವಾಗಲೇ ಸರ್ವಲೋಕವೂ ನೋಡುತ್ತಿರಲು ಪಾಂಡುಸುತರನ್ನು ಅವರ ಬಂಧುಗಳು ಮತ್ತು ಸರ್ವಸೈನ್ಯಗಳೊಂದಿಗೆ ತಡೆಯುತ್ತೇನೆ.”

06054043a ಏವಮುಕ್ತೇ ತು ಭೀಷ್ಮೇಣ ಪುತ್ರಾಸ್ತವ ಜನೇಶ್ವರ|

06054043c ದಧ್ಮುಃ ಶಂಖಾನ್ಮುದಾ ಯುಕ್ತಾ ಭೇರೀಶ್ಚ ಜಘ್ನಿರೇ ಭೃಶಂ||

ಜನೇಶ್ವರ! ಹೀಗೆ ಭೀಷ್ಮನು ನಿನ್ನ ಮಗನಿಗೆ ಹೇಳಲು ಮುದಿತರಾಗಿ ಜೋರಾಗಿ ಶಂಖಗಳನ್ನು ಊದಿದರು ಮುತ್ತು ಭೇರಿಗಳನ್ನು ಮೊಳಗಿಸಿದರು.

06054044a ಪಾಂಡವಾಪಿ ತತೋ ರಾಜನ್ ಶ್ರುತ್ವಾ ತಂ ನಿನದಂ ಮಹತ್|

06054044c ದಧ್ಮುಃ ಶಂಖಾಂಶ್ಚ ಭೇರೀಶ್ಚ ಮುರಜಾಂಶ್ಚ ವ್ಯನಾದಯನ್||

ರಾಜನ್! ಆಗ ಪಾಂಡವರೂ ಕೂಡ ಆ ಮಹಾ ನಿನಾದವನ್ನು ಕೇಳಿ ಶಂಖಗಳನ್ನು ಊದಿದರು ಮತ್ತು ಭೇರಿ-ಮುರಜಗಳನ್ನು ಮೊಳಗಿಸಿದರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ತೃತೀಯಯುದ್ಧದಿವಸೇ ಭೀಷ್ಮದುರ್ಯೋಧನಸಂವಾದೇ ಚತುಷ್ಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ತೃತೀಯಯುದ್ಧದಿವಸೇ ಭೀಷ್ಮದುರ್ಯೋಧನಸಂವಾದ ಎನ್ನುವ ಐವತ್ನಾಲ್ಕನೇ ಅಧ್ಯಾಯವು.

Image result for flowers against white background

Comments are closed.