Bhishma Parva: Chapter 5

ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ

ಭೌಮಗುಣಕಥನ

“ಭೂಮಿಯ ಐಶ್ವರ್ಯವನ್ನು ಇಚ್ಛಿಸಿ ಈ ಎಲ್ಲ ರಾಜರುಗಳೂ ಯುದ್ಧಕ್ಕಾಗಿ ಇಲ್ಲಿ ಸೇರಿದ್ದಾರೆಂದರೆ ಭೂಮಿಯು ಮಹಾ ಗುಣವತಿಯಾಗಿರಬೇಕು; ಭೂಮಿಯ ಗುಣಗಳನ್ನು ಹೇಳು” ಎಂದು ಧೃತರಾಷ್ಟ್ರನು ಕೇಳಲು ಸಂಜಯನು ಭೂಮಿಯ ಗುಣಗಳನ್ನು ಹೇಳಲು ಪ್ರಾರಂಭಿಸಿದುದು (೧-೨೧).

06005001 ವೈಶಂಪಾಯನ ಉವಾಚ|

06005001a ಏವಮುಕ್ತ್ವಾ ಯಯೌ ವ್ಯಾಸಧೃತರಾಷ್ಟ್ರಾಯ ಧೀಮತೇ|

06005001c ಧೃತರಾಷ್ಟ್ರೋಽಪಿ ತಚ್ಚ್ರುತ್ವಾ ಧ್ಯಾನಮೇವಾನ್ವಪದ್ಯತ||

ವೈಶಂಪಾಯನನು ಹೇಳಿದನು: “ಹೀಗೆ ಧೀಮತ ಧೃತರಾಷ್ಟ್ರನಿಗೆ ಹೇಳಿ ವ್ಯಾಸನು ಹೋದನು. ಅದನ್ನು ಕೇಳಿ ಧೃತರಾಷ್ಟ್ರನಾದರೋ ಯೋಚನೆಯಲ್ಲಿ ಬಿದ್ದನು.

06005002a ಸ ಮುಹೂರ್ತಮಿವ ಧ್ಯಾತ್ವಾ ವಿನಿಃಶ್ವಸ್ಯ ಮುಹುರ್ಮುಹುಃ|

06005002c ಸಂಜಯಂ ಸಂಶಿತಾತ್ಮಾನಮಪೃಚ್ಛದ್ ಭರತರ್ಷಭ||

ಭರತರ್ಷಭ! ಒಂದು ಕ್ಷಣ ಆಲೋಚಿಸಿ, ಮತ್ತೆ ಮತ್ತೆ ನಿಟ್ಟಿಸಿರು ಬಿಡುತ್ತಾ ಸಂಶಿತಾತ್ಮ ಸಂಜಯನನ್ನು ಕೇಳಿದನು:

06005003a ಸಂಜಯೇಮೇ ಮಹೀಪಾಲಾಃ ಶೂರಾ ಯುದ್ಧಾಭಿನಂದಿನಃ|

06005003c ಅನ್ಯೋನ್ಯಮಭಿನಿಘ್ನಂತಿ ಶಸ್ತ್ರೈರುಚ್ಚಾವಚೈರಪಿ||

“ಸಂಜಯ! ಯುದ್ಧದಲ್ಲಿ ಸಂತೋಷಪಡುವ ಈ ಶೂರ ಮಹೀಪಾಲರು ಅನ್ಯೋನ್ಯರನ್ನು ಶಸ್ತ್ರಗಳಿಂದ ಹೊಡೆಯುವವರಿದ್ದಾರೆ.

06005004a ಪಾರ್ಥಿವಾಃ ಪೃಥಿವೀಹೇತೋಃ ಸಮಭಿತ್ಯಕ್ತಜೀವಿತಾಃ|

06005004c ನ ಚ ಶಾಮ್ಯಂತಿ ನಿಘ್ನಂತೋ ವರ್ಧಯಂತೋ ಯಮಕ್ಷಯಂ||

ಭೂಮಿಗಾಗಿ ಈ ಪಾರ್ಥಿವರು ತಮ್ಮ ಜೀವವನ್ನು ತೊರೆದವರಾಗಿ ಪರಸ್ಪರರನ್ನು ಕೊಂದು ಯಮಕ್ಷಯವನ್ನು ವೃದ್ಧಿಸದೇ ಶಾಂತರಾಗುವವರಲ್ಲ.

06005005a ಭೌಮಮೈಶ್ವರ್ಯಮಿಚ್ಛಂತೋ ನ ಮೃಷ್ಯಂತೇ ಪರಸ್ಪರಂ|

06005005c ಮನ್ಯೇ ಬಹುಗುಣಾ ಭೂಮಿಸ್ತನ್ಮಮಾಚಕ್ಷ್ವ ಸಂಜಯ||

ಭೂಮಿಯ ಐಶ್ವರ್ಯವನ್ನು ಇಚ್ಛಿಸುವ ಅವರು ಪರಸ್ಪರರನ್ನು ಸಹಿಸುತ್ತಿಲ್ಲ. ಹಾಗಿದ್ದರೆ ಭೂಮಿಗೆ ಬಹಳ ಗುಣಗಳಿರಬಹುದೆಂದು ನನಗನ್ನಿಸುತ್ತದೆ. ಅವುಗಳನ್ನು ನನಗೆ ಹೇಳು ಸಂಜಯ!

06005006a ಬಹೂನಿ ಚ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ|

06005006c ಕೋಟ್ಯಶ್ಚ ಲೋಕವೀರಾಣಾಂ ಸಮೇತಾಃ ಕುರುಜಾಂಗಲೇ||

ಬಹಳಷ್ಟು ಸಹಸ್ರ, ಲಕ್ಷ, ಕೋಟಿ, ಅರ್ಬುದ ಸಂಖ್ಯೆಗಳಲ್ಲಿ ಲೋಕವೀರರು ಕುರಜಾಂಗಲದಲ್ಲಿ ಬಂದು ಸೇರಿದ್ದಾರೆ.

06005007a ದೇಶಾನಾಂ ಚ ಪರೀಮಾಣಂ ನಗರಾಣಾಂ ಚ ಸಂಜಯ|

06005007c ಶ್ರೋತುಮಿಚ್ಛಾಮಿ ತತ್ತ್ವೇನ ಯತ ಏತೇ ಸಮಾಗತಾಃ||

ಹೀಗೆ ಬಂದಿರುವವರ ದೇಶ ನಗರಗಳ ಲಕ್ಷಣಗಳ ಕುರಿತು ಸರಿಯಾಗಿ ಕೇಳಲು ಬಯಸುತ್ತೇನೆ ಸಂಜಯ!

06005008a ದಿವ್ಯಬುದ್ಧಿಪ್ರದೀಪೇನ ಯುಕ್ತಸ್ತ್ವಂ ಜ್ಞಾನಚಕ್ಷುಷಾ|

06005008c ಪ್ರಸಾದಾತ್ತಸ್ಯ ವಿಪ್ರರ್ಷೇರ್ವ್ಯಾಸಸ್ಯಾಮಿತತೇಜಸಃ||

ಆ ಅಮಿತ ತೇಜಸ್ವಿ ವಿಪ್ರರ್ಷಿ ವ್ಯಾಸದ ಕರುಣೆಯಿಂದ ನೀನು ದಿವ್ಯ ಬುದ್ಧಿಯ ದೀಪದ ಬೆಳಕಿನಿಂದ ಜ್ಞಾನದ ದೃಷ್ಟಿಯನ್ನು ಪಡೆದುಕೊಂಡಿರುವೆ.”

06005009 ಸಂಜಯ ಉವಾಚ|

06005009a ಯಥಾಪ್ರಜ್ಞಂ ಮಹಾಪ್ರಾಜ್ಞ ಭೌಮಾನ್ವಕ್ಷ್ಯಾಮಿ ತೇ ಗುಣಾನ್|

06005009c ಶಾಸ್ತ್ರಚಕ್ಷುರವೇಕ್ಷಸ್ವ ನಮಸ್ತೇ ಭರತರ್ಷಭ||

ಸಂಜಯನು ಹೇಳಿದನು: “ಭರತರ್ಷಭ! ಮಹಾಪ್ರಾಜ್ಞ! ನಿನಗೆ ನಮನಗಳು. ನನಗೆ ತಿಳಿದಂತೆ ಭೂಮಿಯ ಗುಣಗಳನ್ನು ಹೇಳುತ್ತೇನೆ. ನಿನ್ನ ಶಾಸ್ತ್ರಗಳ ಕಣ್ಣುಗಳಿಂದ ಇದನ್ನು ಕೇಳು.

06005010a ದ್ವಿವಿಧಾನೀಹ ಭೂತಾನಿ ತ್ರಸಾನಿ ಸ್ಥಾವರಾಣಿ ಚ|

06005010c ತ್ರಸಾನಾಂ ತ್ರಿವಿಧಾ ಯೋನಿರಂಡಸ್ವೇದಜರಾಯುಜಾಃ||

ಇಲ್ಲಿ ಇರುವವುಗಳು ಎರಡು ರೀತಿಯವು: ಚಲಿಸುವವು ಮತ್ತು ಚಲಿಸದೇ ಇರುವವು. ಚಲಿಸುವವುಗಳಲ್ಲಿ ಮೂರು ವಿಧಗಳವು - ಯೋನಿಯಿಂದ ಜನಿಸುವವು, ಅಂಡದಿಂದ ಜನಿಸುವವು ಮತ್ತು ಉಷ್ಣ-ತೇವಗಳಿಂದ ಜನಿಸುವವು.

06005011a ತ್ರಸಾನಾಂ ಖಲು ಸರ್ವೇಷಾಂ ಶ್ರೇಷ್ಠಾ ರಾಜನ್ಜರಾಯುಜಾಃ|

06005011c ಜರಾಯುಜಾನಾಂ ಪ್ರವರಾ ಮಾನವಾಃ ಪಶವಶ್ಚ ಯೇ||

ರಾಜನ್! ಚಲಿಸುವವುಗಳಲ್ಲಿ ಎಲ್ಲರಿಗಿಂತಲೂ ಶ್ರೇಷ್ಠವಾದವು ಯೋನಿಯಿಂದ ಹುಟ್ಟಿದವು. ಯೋನಿಜನ್ಮರಲ್ಲಿ ಪ್ರಮುಖರಾದವರು ಮಾನವರು ಮತ್ತು ಪಶುಗಳು.

06005012a ನಾನಾರೂಪಾಣಿ ಬಿಭ್ರಾಣಾಸ್ತೇಷಾಂ ಭೇದಾಶ್ಚತುರ್ದಶ|

06005012c ಅರಣ್ಯವಾಸಿನಃ ಸಪ್ತ ಸಪ್ತೈಷಾಂ ಗ್ರಾಮವಾಸಿನಃ||

ನಾನಾರೂಪಗಳಲ್ಲಿರುವ ಇವುಗಳಲ್ಲಿ ಹದಿನಾಲ್ಕು ಭೇದಗಳಿವೆ. ಅವುಗಳಲ್ಲಿ ಏಳು ಅರಣ್ಯಗಳಲ್ಲಿ ವಾಸಿಸುವಂಥವು (ವನ್ಯ) ಮತ್ತು ಇನ್ನೊಂದು ಏಳು ಗ್ರಾಮವಾಸಿಗಳು.

06005013a ಸಿಂಹವ್ಯಾಘ್ರವರಾಹಾಶ್ಚ ಮಹಿಷಾ ವಾರಣಾಸ್ತಥಾ|

06005013c ಋಕ್ಷಾಶ್ಚ ವಾನರಾಶ್ಚೈವ ಸಪ್ತಾರಣ್ಯಾಃ ಸ್ಮೃತಾ ನೃಪ||

ನೃಪ! ಸಿಂಹ, ಹುಲಿ, ಹಂದಿ, ಕಾಡೆಮ್ಮೆ, ಆನೆ, ಕರಡಿ, ಮತ್ತು ಮಂಗಗಳು ಈ ಏಳು ಅರಣ್ಯವಾಸಿಗಳೆಂದು ಹೇಳುತ್ತಾರೆ.

06005014a ಗೌರಜೋ ಮನುಜೋ ಮೇಷೋ ವಾಜ್ಯಶ್ವತರಗರ್ದಭಾಃ|

06005014c ಏತೇ ಗ್ರಾಮ್ಯಾಃ ಸಮಾಖ್ಯಾತಾಃ ಪಶವಃ ಸಪ್ತ ಸಾಧುಭಿಃ||

ಹಸು, ಆಡು, ಕುರಿ, ಮನುಷ್ಯ, ಕುದುರೆ, ಹೇಸರಗತ್ತೆ ಮತ್ತು ಕತ್ತೆ ಈ ಏಳು ಪಶುಗಳು ಗ್ರಾಮ್ಯವೆಂದೂ ಸಾಧುಗಳೆಂದೂ ಹೇಳಲ್ಪಟ್ಟಿವೆ.

06005015a ಏತೇ ವೈ ಪಶವೋ ರಾಜನ್ಗ್ರಾಮ್ಯಾರಣ್ಯಾಶ್ಚತುರ್ದಶ|

06005015c ವೇದೋಕ್ತಾಃ ಪೃಥಿವೀಪಾಲ ಯೇಷು ಯಜ್ಞಾಃ ಪ್ರತಿಷ್ಠಿತಾಃ||

ರಾಜನ್! ಈ ಹದಿನಾಲ್ಕು ಗ್ರಾಮ್ಯ ಮತ್ತು ಅರಣ್ಯ ಪಶುಗಳ ಕುರಿತು ವೇದಗಳಲ್ಲಿ ಹೇಳಲಾಗಿದೆ[1]. ಪೃಥಿವೀಪಾಲ! ಇವುಗಳ ಮೇಲೆಯೇ ಯಜ್ಞಗಳು ಅವಲಂಬಿಸಿವೆ.

06005016a ಗ್ರಾಮ್ಯಾಣಾಂ ಪುರುಷಃ ಶ್ರೇಷ್ಠಃ ಸಿಂಹಶ್ಚಾರಣ್ಯವಾಸಿನಾಂ|

06005016c ಸರ್ವೇಷಾಮೇವ ಭೂತಾನಾಮನ್ಯೋನ್ಯೇನಾಭಿಜೀವನಂ||

ಗ್ರಾಮ್ಯ ಪಶುಗಳಲ್ಲಿ ಪುರುಷನು ಶ್ರೇಷ್ಠ[2] ಮತ್ತು ಅರಣ್ಯವಾಸಿಗಳಲ್ಲಿ ಸಿಂಹವು ಶ್ರೇಷ್ಠ. ಅನ್ಯೋನ್ಯರೊಂದಿಗೆ ಜೀವನವನ್ನು ಅವಲಂಬಿಸಿಕೊಂಡು ಇವೆಲ್ಲವೂ ಜೀವಿಸುತ್ತವೆ.

06005017a ಉದ್ಭಿಜ್ಜಾಃ[3] ಸ್ಥಾವರಾಃ ಪ್ರೋಕ್ತಾಸ್ತೇಷಾಂ ಪಂಚೈವ ಜಾತಯಃ|

06005017c ವೃಕ್ಷಗುಲ್ಮಲತಾವಲ್ಲ್ಯಸ್ತ್ವಕ್ಸಾರಾಸ್ತೃಣಜಾತಯಃ||

ಸಸ್ಯಗಳು ಚಲಿಸದೇ ಇರುವವು. ಇವುಗಳಲ್ಲಿ ಐದು ಜಾತಿಗಳಿವೆಯೆಂದು ಹೇಳುತ್ತಾರೆ: ವೃಕ್ಷ (ಮರ), ಗುಲ್ಮ[4], ಲತೆ[5], ವಲ್ಲಿ[6], ಮತ್ತು ತ್ವಕ್ಷಾರ[7]ಗಳು.

06005018a ಏಷಾಂ ವಿಂಶತಿರೇಕೋನಾ ಮಹಾಭೂತೇಷು ಪಂಚಸು|

06005018c ಚತುರ್ವಿಂಶತಿರುದ್ದಿಷ್ಟಾ ಗಾಯತ್ರೀ ಲೋಕಸಮ್ಮತಾ||

ಈ ಹತ್ತೊಂಭತ್ತು ಮತ್ತು ಐದು ಮಹಾಭೂತಗಳು - ಒಟ್ಟು ಇಪ್ಪತ್ನಾಲ್ಕು ಗಾಯತ್ರಿಯೆಂದು ಲೋಕಸಮ್ಮತಗೊಂಡಿದೆ[8].

06005019a ಯ ಏತಾಂ ವೇದ ಗಾಯತ್ರೀಂ ಪುಣ್ಯಾಂ ಸರ್ವಗುಣಾನ್ವಿತಾಂ|

06005019c ತತ್ತ್ವೇನ ಭರತಶ್ರೇಷ್ಠ ಸ ಲೋಕಾನ್ನ ಪ್ರಣಶ್ಯತಿ||

ಭರತಶ್ರೇಷ್ಠ! ಈ ಪುಣ್ಯೆ ಸರ್ವಗುಣಾನ್ವಿತೆ ಗಾಯತ್ರಿಯನ್ನು ತತ್ವಶಃ[9] ತಿಳಿದುಕೊಂಡವರು ಈ ಲೋಕಗಳಲ್ಲಿ ನಾಶಹೊಂದುವುದಿಲ್ಲ.

06005020a ಭೂಮೌ ಹಿ ಜಾಯತೇ ಸರ್ವಂ ಭೂಮೌ ಸರ್ವಂ ಪ್ರಣಶ್ಯತಿ|

06005020c ಭೂಮಿಃ ಪ್ರತಿಷ್ಠಾ ಭೂತಾನಾಂ ಭೂಮಿರೇವ ಪರಾಯಣಂ||

ಇವೆಲ್ಲವೂ ಭೂಮಿಯಲ್ಲಿಯೇ ಹುಟ್ಟುತ್ತವೆ. ಮತ್ತು ಎಲ್ಲವೂ ಭೂಮಿಯಲ್ಲಿಯೇ ನಾಶಹೊಂದುತ್ತವೆ. ಇರುವ ಎಲ್ಲವಕ್ಕೆ ಭೂಮಿಯೇ ಆಧಾರ. ಭೂಮಿಯೇ ಆಶ್ರಯ.

06005021a ಯಸ್ಯ ಭೂಮಿಸ್ತಸ್ಯ ಸರ್ವಂ ಜಗತ್ ಸ್ಥಾವರಜಂಗಮಂ|

06005021c ತತ್ರಾಭಿಗೃದ್ಧಾ ರಾಜಾನೋ ವಿನಿಘ್ನಂತೀತರೇತರಂ||

ಈ ಭೂಮಿಯು ಯಾರದ್ದೋ ಅವರಿಗೇ ಅದರಲ್ಲಿರುವ ಎಲ್ಲ ಸ್ಥಾವರ-ಜಂಗಮಗಳು ಸೇರುತ್ತವೆ. ಅದನ್ನೇ ಬಯಸಿ ರಾಜರು ಪರಸ್ಪರರನ್ನು ಸಂಹರಿಸುತ್ತಾರೆ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಭೌಮಗುಣಕಥನೇ ಪಂಚಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಭೌಮಗುಣಕಥನ ಎನ್ನುವ ಐದನೇ ಅಧ್ಯಾಯವು.

Image result for indian motifs earth

[1]ಸಪ್ತಗ್ರಾಮ್ಯಾಃ ಪಶವಃ ಸಪ್ತಾರಣ್ಯಾಃ|

[2]ಪುರುಷನಿಗೂ ಪಶು ಎಂಬ ಶಬ್ಧವನ್ನು ಬಳಸಲಾಗಿದೆ. ಪುರುಷಂ ವೈ ದೇವಾಃ ಪಶುಪಾಲಭಂತ| ತಸ್ಮಾತ್ರಯಃ ಪಶೂನಾಗೂಂಹಸ್ತಾದಾನಾಃ ಪುರುಷೋ ಹಸ್ತೀ ಮರ್ಕಟಃ| ಎಂಬ ವೇದವಾಕ್ಯವಿದೆ.

[3]ಉದ್ಭಿಜ್ಜಗಳೆಂದರೆ ಭೂಮಿಯನ್ನು ಭೇದಿಸಿಕೊಂಡು ಹುಟ್ಟುವವು.

[4]ಗುಲ್ಮವೆಂದರೆ ಮಧ್ಯದ ಕಾಂಡವಿಲ್ಲದ ಗಿಡ, ದರ್ಭೆ, ಜೆಂಡುಹುಲ್ಲು ಮುಂತಾದವು.

[5]ಬಳ್ಳಿ, ಹಂಬು, ಮರಗಳಿಗೆ ಹಂಬಿಕೊಳ್ಳುವ ಬಳ್ಳಿಗಳು

[6]ನೆಲದ ಮೇಲೆ ಹರಡಿಕೊಳ್ಳುವ ವರ್ಷಮಾತ್ರವಿರುವ - ಸೋರೆಕಾಯಿ, ಸೌತೇಕಾಯಿ - ಮೊದಲಾದ ಬಳ್ಳಿಗಳು

[7]ಕಾಂಡಗಳಿರುವ ಹುಲ್ಲು ಜಾತಿಯವು - ಬಿದಿರು

[8]ಇದೇ ಅಧ್ಯಾಯದ ೧೦ನೆಯ ಶ್ಲೋಕದಲ್ಲಿ ಹೇಳಿದ ಅಂಡಜ ಮತ್ತು ಸ್ವೇದಜಗಳು ಈ ಇಪ್ಪತ್ನಾಲ್ಕರಿಂದ ಹೊರತಾಗಿವೆಯೇ? ಇಲ್ಲ. ಅಂಡಜಗಳಿಗೆ ಮೈಥುನವಿರುವುದರಿಂದ ಅವು ಪಶುಗಳ ಗುಂಪಿಗೆ ಸೇರುತ್ತವೆ. ಸ್ವೇದಜಗಳು ಸಸ್ಯಗಳ ಗುಂಪಿಗೆ ಸೇರುತ್ತವೆ.

[9]ಛಾಂದೋಗ್ಯದಲ್ಲಿ ಗಾಯತ್ರಿಯನ್ನು ಭೂಮಿಯನ್ನಾಕ್ರಮಿಸಿರುವವಳೆಂದೇ ವರ್ಣಿಸಲಾದೆ - ಗಾಯತ್ರೀ ವಾ ಇದಂ ಸರ್ವಂ ಭೂತಂ...ಸೈಷಾ ಚತುಷ್ಪದಾ ಷಡ್ವಿಧಾ ಗಾಯತ್ರೀ ತದೇತದೃತಾಭ್ಯನೂಕ್ತಂ ಏತಾವಾನಸ್ಯ ಮಹಿಮಾ ತತೋ ಜ್ಯಾಯಾಂಶ್ಚ ಪೂರುಷಃ| ಪಾದೋಸ್ಯ ಸರ್ವಾಭೂತಾನೀ| ತ್ರಿಪಾದಸ್ಯಾಮೃತಂ ದಿವಿ||

Comments are closed.