Bhishma Parva: Chapter 48

ಭೀಷ್ಮ ಪರ್ವ: ಭೀಷ್ಮವಧ ಪರ್ವ

೪೮

ಎರಡನೆಯ ದಿನದ ಯುದ್ಧಾರಂಭ (೧-೬). ಭೀಷ್ಮಾರ್ಜುನರ ಯುದ್ಧ (೭-೭೦).

Image result for mahabharata06048001 ಧೃತರಾಷ್ಟ್ರ ಉವಾಚ|

06048001a ಏವಂ ವ್ಯೂಢೇಷ್ವನೀಕೇಷು ಮಾಮಕೇಷ್ವಿತರೇಷು ಚ|

06048001c ಕಥಂ ಪ್ರಹರತಾಂ ಶ್ರೇಷ್ಠಾಃ ಸಂಪ್ರಹಾರಂ ಪ್ರಚಕ್ರಿರೇ||

ಧೃತರಾಷ್ಟ್ರನು ಹೇಳಿದನು: “ಈ ರೀತಿ ಸೇನೆಗಳ ವ್ಯೂಹಗಳನ್ನು ರಚಿಸಿ ಶ್ರೇಷ್ಠರಾದ ನನ್ನವರೂ ಇತರರೂ ಹೇಗೆ ಪ್ರಹರ ಮತ್ತು ಸಂಪ್ರಹಾರಗಳಲ್ಲಿ ತೊಡಗಿದರು?”

06048002 ಸಂಜಯ ಉವಾಚ|

06048002a ಸಮಂ ವ್ಯೂಢೇಷ್ವನೀಕೇಷು ಸನ್ನದ್ಧಾ ರುಚಿರಧ್ವಜಾಃ|

06048002c ಅಪಾರಮಿವ ಸಂದೃಶ್ಯ ಸಾಗರಪ್ರತಿಮಂ ಬಲಂ||

ಸಂಜಯನು ಹೇಳಿದನು: “ಸೇನೆಗಳ ವ್ಯೂಹಗಳನ್ನು ಸಮನಾಗಿ ರಚಿಸಿ ಸುಂದರ ಧ್ವಜಗಳಿಂದ ಸನ್ನದ್ಧವಾಗಿದ್ದ ಆ ಅಪಾರಸೇನೆಯು ಸಾಗರದಂತೆ ಬಲಶಾಲಿಯಾಗಿ ತೋರಿತು.

06048003a ತೇಷಾಂ ಮಧ್ಯೇ ಸ್ಥಿತೋ ರಾಜಾ ಪುತ್ರೋ ದುರ್ಯೋಧನಸ್ತವ|

06048003c ಅಬ್ರವೀತ್ತಾವಕಾನ್ಸರ್ವಾನ್ಯುಧ್ಯಧ್ವಮಿತಿ ದಂಶಿತಾಃ||

ಅವರ ಮಧ್ಯೆ ನಿಂತಿದ್ದ ನಿನ್ನ ಪುತ್ರ ರಾಜಾ ದುರ್ಯೋಧನನು ನಿನ್ನವರೆಲ್ಲರಿಗೆ “ಕವಚಧಾರಿಗಳೇ! ಯುದ್ಧಮಾಡಿ!” ಎಂದು ಹೇಳಿದನು.

06048004a ತೇ ಮನಃ ಕ್ರೂರಮಾಸ್ಥಾಯ ಸಮಭಿತ್ಯಕ್ತಜೀವಿತಾಃ|

06048004c ಪಾಂಡವಾನಭ್ಯವರ್ತಂತ ಸರ್ವ ಏವೋಚ್ಛ್ರಿತಧ್ವಜಾಃ||

ಮೇಲೆ ಧ್ವಜಗಳು ಹಾರಾಡುತ್ತಿರಲು ಅವರು ಎಲ್ಲರೂ ಮನಸ್ಸನ್ನು ಕ್ರೂರವಾಗಿಸಿಕೊಂಡು, ಜೀವವನ್ನು ತೊರೆದು ಪಾಂಡವರ ಮೇಲೆ ಆಕ್ರಮಣ ಮಾಡಿದರು.

06048005a ತತೋ ಯುದ್ಧಂ ಸಮಭವತ್ತುಮುಲಂ ಲೋಮಹರ್ಷಣ|

06048005c ತಾವಕಾನಾಂ ಪರೇಷಾಂ ಚ ವ್ಯತಿಷಕ್ತರಥದ್ವಿಪಂ||

ಆಗ ನಿನ್ನವರ ಮತ್ತು ಶತ್ರುಗಳ ನಡುವೆ ರಥ-ಗಜ-ಅಶ್ವ-ಪದಾತಿಗಳ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.

06048006a ಮುಕ್ತಾಸ್ತು ರಥಿಭಿರ್ಬಾಣಾ ರುಕ್ಮಪುಂಖಾಃ ಸುತೇಜನಾಃ|

06048006c ಸನ್ನಿಪೇತುರಕುಂಠಾಗ್ರಾ ನಾಗೇಷು ಚ ಹಯೇಷು ಚ||

ರಥಿಗಳು ಬಿಟ್ಟ ಸುತೇಜನ ಹರಿತ ರುಕ್ಮಪುಂಖ ಬಾಣಗಳು ಆನೆ-ಕುದುರೆಗಳ ಮೇಲೆ ಬೀಳುತ್ತಿದ್ದವು.

06048007a ತಥಾ ಪ್ರವೃತ್ತೇ ಸಂಗ್ರಾಮೇ ಧನುರುದ್ಯಮ್ಯ ದಂಶಿತಃ|

06048007c ಅಭಿಪತ್ಯ ಮಹಾಬಾಹುರ್ಭೀಷ್ಮೋ ಭೀಮಪರಾಕ್ರಮಃ||

ಹೀಗೆ ಸಂಗ್ರಾಮವು ಪ್ರಾರಂಭವಾಗಲು ಧನುಸ್ಸನ್ನು ಎತ್ತಿಕೊಂಡು, ಕವಚಗಳನ್ನು ಧರಿಸಿ ಮಹಾಬಾಹು ಭೀಮಪರಾಕ್ರಮಿ ಭೀಷ್ಮನು ಆಕ್ರಮಣ ಮಾಡಿದನು.

06048008a ಸೌಭದ್ರೇ ಭೀಮಸೇನೇ ಚ ಶೈನೇಯೇ ಚ ಮಹಾರಥೇ|

06048008c ಕೇಕಯೇ ಚ ವಿರಾಟೇ ಚ ಧೃಷ್ಟದ್ಯುಮ್ನೇ ಚ ಪಾರ್ಷತೇ||

06048009a ಏತೇಷು ನರವೀರೇಷು ಚೇದಿಮತ್ಸ್ಯೇಷು ಚಾಭಿತಃ|

06048009c ವವರ್ಷ ಶರವರ್ಷಾಣಿ ವೃದ್ಧಃ ಕುರುಪಿತಾಮಹಃ||

ಕುರುಪಿತಾಮಹ ವೃದ್ಧನು ನರವೀರರಾದ ಸೌಭದ್ರ, ಭೀಮಸೇನ, ಮಹಾರಥ ಶೈನ, ಕೇಕಯ, ವಿರಾಟ, ಪಾರ್ಷತ ಧೃಷ್ಟದ್ಯುಮ್ನ ಮತ್ತು ಚೇದಿ-ಮತ್ಸ್ಯರ ಮೇಲೆ ಶರವರ್ಷಗಳನ್ನು ಸುರಿಸಿ ಹೊಡೆದನು.

06048010a ಪ್ರಾಕಂಪತ ಮಹಾವ್ಯೂಹಸ್ತಸ್ಮಿನ್ವೀರಸಮಾಗಮೇ|

06048010c ಸರ್ವೇಷಾಮೇವ ಸೈನ್ಯಾನಾಮಾಸೀದ್ವ್ಯತಿಕರೋ ಮಹಾನ್||

ಆ ವೀರಸಮಾಗಮದಲ್ಲಿ ಮಹಾವ್ಯೂಹವು ಕಂಪಿಸಿತು. ಎಲ್ಲ ಸೇನೆಗಳಲ್ಲಿಯೂ ಮಹಾ ಅಸ್ತವ್ಯಸ್ತವಾಯಿತು.

06048011a ಸಾದಿತಧ್ವಜನಾಗಾಶ್ಚ ಹತಪ್ರವರವಾಜಿನಃ|

06048011c ವಿಪ್ರಯಾತರಥಾನೀಕಾಃ ಸಮಪದ್ಯಂತ ಪಾಂಡವಾಃ||

ಅಶ್ವಯೋಧರು, ಧ್ವಜವುಳ್ಳವರು, ಆನೆಗಳು ಮತ್ತು ರಥಿಕರು ಅಪಾರ ಸಂಖ್ಯೆಯಲ್ಲಿ ಮರಣವನ್ನಿಪ್ಪಿದರು. ಪಾಂಡವರ ರಥಸೈನ್ಯವು ದಿಕ್ಕಾಪಾಲಾಗಿ ಓಡಿ ಹೋಯಿತು.

06048012a ಅರ್ಜುನಸ್ತು ನರವ್ಯಾಘ್ರೋ ದೃಷ್ಟ್ವಾ ಭೀಷ್ಮಂ ಮಹಾರಥಂ|

06048012c ವಾರ್ಷ್ಣೇಯಮಬ್ರವೀತ್ಕ್ರುದ್ಧೋ ಯಾಹಿ ಯತ್ರ ಪಿತಾಮಹಃ||

ನರವ್ಯಾಘ್ರ ಅರ್ಜುನನಾದರೋ ಮಹಾರಥ ಭೀಷ್ಮನನ್ನು ನೋಡಿ ಕ್ರುದ್ಧನಾಗಿ ವಾರ್ಷ್ಣೇಯನಿಗೆ ಹೇಳಿದನು: “ಪಿತಾಮಹನಿರುವಲ್ಲಿಗೆ ಕೊಂಡೊಯ್ಯಿ!

06048013a ಏಷ ಭೀಷ್ಮಃ ಸುಸಂಕ್ರುದ್ಧೋ ವಾರ್ಷ್ಣೇಯ ಮಮ ವಾಹಿನೀಂ|

06048013c ನಾಶಯಿಷ್ಯತಿ ಸುವ್ಯಕ್ತಂ ದುರ್ಯೋಧನಹಿತೇ ರತಃ||

ವಾರ್ಷ್ಣೇಯ! ದುರ್ಯೋಧನನ ಹಿತರತನಾಗಿ ಈ ಭೀಷ್ಮನು ಸಂಕ್ರುದ್ಧನಾಗಿ ನನ್ನ ಸೇನೆಯನ್ನು ನಾಶಗೊಳಿಸುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ.

06048014a ಏಷ ದ್ರೋಣಃ ಕೃಪಃ ಶಲ್ಯೋ ವಿಕರ್ಣಶ್ಚ ಜನಾರ್ದನ|

06048014c ಧಾರ್ತರಾಷ್ಟ್ರಾಶ್ಚ ಸಹಿತಾ ದುರ್ಯೋಧನಪುರೋಗಮಾಃ||

06048015a ಪಾಂಚಾಲಾನ್ನಿಹನಿಷ್ಯಂತಿ ರಕ್ಷಿತಾ ದೃಢಧನ್ವನಾ|

06048015c ಸೋಽಹಂ ಭೀಷ್ಮಂ ಗಮಿಷ್ಯಾಮಿ ಸೈನ್ಯಹೇತೋರ್ಜನಾರ್ದನ||

ಜನಾರ್ದನ! ಈ ದೃಢಧನ್ವಿಯಿಂದ ರಕ್ಷಿತರಾಗಿ ದ್ರೋಣ, ಕೃಪ, ಶಲ್ಯ ಮತ್ತು ವಿಕರ್ಣರು ದುರ್ಯೋಧನನ ನಾಯಕತ್ವದಲ್ಲಿ ಧಾರ್ತರಾಷ್ಟ್ರರ ಸಹಿತ ಪಾಂಚಾಲರನ್ನು ನಾಶಮಾಡಿಬಿಡುತ್ತಾರೆ. ಜನಾರ್ದನ! ನನ್ನ ಸೇನೆಗೋಸ್ಕರ ನಾನು ಭೀಷ್ಮನ ಹತ್ತಿರ ಹೋಗುತ್ತೇನೆ.”

06048016a ತಮಬ್ರವೀದ್ವಾಸುದೇವೋ ಯತ್ತೋ ಭವ ಧನಂಜಯ|

06048016c ಏಷ ತ್ವಾ ಪ್ರಾಪಯೇ ವೀರ ಪಿತಾಮಹರಥಂ ಪ್ರತಿ||

ಅವನಿಗೆ ವಾಸುದೇವನು ಹೇಳಿದನು: “ಧನಂಜಯ! ಪ್ರಯತ್ನಿಸುವವನಾಗು! ವೀರ! ಪಿತಾಮಹನ ರಥದ ಬಳಿ ಇಗೋ ನಿನ್ನನ್ನು ತಲುಪಿಸುತ್ತೇನೆ.”

06048017a ಏವಮುಕ್ತ್ವಾ ತತಃ ಶೌರೀ ರಥಂ ತಂ ಲೋಕವಿಶ್ರುತಂ|

06048017c ಪ್ರಾಪಯಾಮಾಸ ಭೀಷ್ಮಾಯ ರಥಂ ಪ್ರತಿ ಜನೇಶ್ವರ||

ಜನೇಶ್ವರ! ಹೀಗೆ ಹೇಳಿ ಶೌರಿಯು ಆ ಲೋಕವಿಶ್ರುತ ರಥವನ್ನು ಭೀಷ್ಮನ ರಥದ ಬಳಿ ಕೊಂಡೊಯ್ದನು.

06048018a ಚಂಚದ್ಬಹುಪತಾಕೇನ ಬಲಾಕಾವರ್ಣವಾಜಿನಾ|

06048018c ಸಮುಚ್ಛ್ರಿತಮಹಾಭೀಮನದದ್ವಾನರಕೇತುನಾ|

06048018e ಮಹತಾ ಮೇಘನಾದೇನ ರಥೇನಾದಿತ್ಯವರ್ಚಸಾ||

ಅನೇಕ ಪತಾಕೆಗಳು ಹಾರಾಡುತ್ತಿದ್ದ, ಬೆಳ್ಳಕ್ಕಿಯ ಚುಕ್ಕೆಗಳಂತೆ ಅಪ್ಪಟ ಬಿಳಿಯ ಕುದುರೆಗಳನ್ನು ಕಟ್ಟಿದ್ದ, ಮಹಾಭಯಂಕರವಾಗಿ ಘರ್ಜನೆ ಮಾಡುತ್ತಿದ್ದ ವಾನರನನ್ನು ಧ್ವಜದಲ್ಲಿರಿಸಿದ್ದ ಆ ಆದಿತ್ಯವರ್ಚಸ ರಥವು ಮಹಾ ಮೇಘನಾದದಿಂದ ಕೂಡಿತ್ತು.

06048019a ವಿನಿಘ್ನನ್ಕೌರವಾನೀಕಂ ಶೂರಸೇನಾಂಶ್ಚ ಪಾಂಡವಃ|

06048019c ಆಯಾಚ್ಚರಾನ್ನುದಂ ಶೀಘ್ರಂ ಸುಹೃಚ್ಛೋಷವಿನಾಶನಃ||

06048020a ತಮಾಪತಂತಂ ವೇಗೇನ ಪ್ರಭಿನ್ನಮಿವ ವಾರಣಂ|

06048020c ತ್ರಾಸಯಾನಂ ರಣೇ ಶೂರಾನ್ಪಾತಯಂತಂ ಚ ಸಾಯಕೈಃ||

06048021a ಸೈಂಧವಪ್ರಮುಖೈರ್ಗುಪ್ತಃ ಪ್ರಾಚ್ಯಸೌವೀರಕೇಕಯೈಃ|

06048021c ಸಹಸಾ ಪ್ರತ್ಯುದೀಯಾಯ ಭೀಷ್ಮಃ ಶಾಂತನವೋಽರ್ಜುನಂ||

ಬರುವಾಗ ಕೌರವ ಶೂರಸೇನೆಯನ್ನು ಸಂಹರಿಸುತ್ತಾ, ಶೀಘ್ರವಾದ ಬಾಣಗಳನ್ನು ಬಿಡುತ್ತ, ಸುಹೃದಯರ ಶೋಕವನ್ನು ನಾಶಪಡಿಸುವ ಪಾಂಡವ ಅರ್ಜುನನು ಮದೋದಕವನ್ನು ಸುರಿಸುವ ಆನೆಯಂತೆ ಮಹಾ ವೇಗದಿಂದ ಮೇಲೆ ಬೀಳುತ್ತಾ ರಣದಲ್ಲಿ ಶೂರರನ್ನು ಸಾಯಕಗಳಿಂದ ಗಾಯಗೊಳಿಸಿ ಬೀಳಿಸುತ್ತಾ, ಸೈಂಧವಪ್ರಮುಖರಾದ ಪ್ರಾಚ್ಯ-ಸೌವೀರ-ಕೇಕಯರು ರಕ್ಷಿಸುತ್ತಿದ್ದ ಭೀಷ್ಮ ಶಾಂತನವನ ಮೇಲೆ ಜೋರಾಗಿ ಆಕ್ರಮಣ ಮಾಡಿದನು.

06048022a ಕೋ ಹಿ ಗಾಂಡೀವಧನ್ವಾನಮನ್ಯಃ ಕುರುಪಿತಾಮಹಾತ್|

06048022c ದ್ರೋಣವೈಕರ್ತನಾಭ್ಯಾಂ ವಾ ರಥಃ ಸಂಯಾತುಮರ್ಹತಿ||

ಕುರುಪಿತಾಮಹ, ದ್ರೋಣ ಮತ್ತು ವೈಕರ್ತನನನ್ನು ಬಿಟ್ಟರೆ ಬೇರೆ ಯಾರುತಾನೇ ಗಾಂಡೀವಧನ್ವಿ ಅರ್ಜುನನನ್ನು ತಡೆಹಿಡಿಯಬಲ್ಲರು?

06048023a ತತೋ ಭೀಷ್ಮೋ ಮಹಾರಾಜ ಕೌರವಾಣಾಂ ಪಿತಾಮಹಃ|

06048023c ಅರ್ಜುನಂ ಸಪ್ತಸಪ್ತತ್ಯಾ ನಾರಾಚಾನಾಂ ಸಮಾವೃಣೋತ್||

ಆಗ ಮಹಾರಾಜ! ಕೌರವರ ಪಿತಾಮಹ ಭೀಷ್ಮನು ಅರ್ಜುನನನ್ನು ಎಪ್ಪತ್ತೇಳು ನಾರಾಚಗಳಿಂದ ಪ್ರಹರಿಸಿದನು.

06048024a ದ್ರೋಣಶ್ಚ ಪಂಚವಿಂಶತ್ಯಾ ಕೃಪಃ ಪಂಚಾಶತಾ ಶರೈಃ|

06048024c ದುರ್ಯೋಧನಶ್ಚತುಃಷಷ್ಟ್ಯಾ ಶಲ್ಯಶ್ಚ ನವಭಿಃ ಶರೈಃ||

06048025a ಸೈಂಧವೋ ನವಭಿಶ್ಚಾಪಿ ಶಕುನಿಶ್ಚಾಪಿ ಪಂಚಭಿಃ|

06048025c ವಿಕರ್ಣೋ ದಶಭಿರ್ಭಲ್ಲೈ ರಾಜನ್ವಿವ್ಯಾಧ ಪಾಂಡವಂ||

ರಾಜನ್! ದ್ರೋಣನು ಇಪ್ಪತ್ತೈದು ಬಾಣಗಳಿಂದಲೂ, ಕೃಪನು ಐವತ್ತು ಬಾಣಗಳಿಂದಲೂ, ದುರ್ಯೋಧನನು ಅರವತ್ನಾಲ್ಕು ಬಾಣಗಳಿಂದಲೂ, ಶಲ್ಯನು ಒಂಭತ್ತು ಬಾಣಗಳಿಂದಲೂ, ಸೈಂಧವನು ಒಂಭತ್ತರಿಂದಲೂ, ಶಕುನಿಯು ಐದರಿಂದಲೂ, ವಿಕರ್ಣನು ಹತ್ತು ಭಲ್ಲಗಳಿಂದಲೂ ಪಾಂಡವನನ್ನು ಹೊಡೆದರು.

06048026a ಸ ತೈರ್ವಿದ್ಧೋ ಮಹೇಷ್ವಾಸಃ ಸಮಂತಾನ್ನಿಶಿತೈಃ ಶರೈಃ|

06048026c ನ ವಿವ್ಯಥೇ ಮಹಾಬಾಹುರ್ಭಿದ್ಯಮಾನ ಇವಾಚಲಃ||

ಅವರ ನಿಶಿತ ಶರಗಳಿಂದ ಎಲ್ಲ ಕಡೆ ಹೊಡೆಯಲ್ಪಟ್ಟರೂ ಬಾಣದ ಏಟಿಗೊಳಗಾದ ಪರ್ವತದಂತೆ ಆ ಮಹೇಷ್ವಾಸ ಮಹಾಬಾಹುವು ವ್ಯಥಿತನಾಗಲಿಲ್ಲ.

06048027a ಸ ಭೀಷ್ಮಂ ಪಂಚವಿಂಶತ್ಯಾ ಕೃಪಂ ಚ ನವಭಿಃ ಶರೈಃ|

06048027c ದ್ರೋಣಂ ಷಷ್ಟ್ಯಾ ನರವ್ಯಾಘ್ರೋ ವಿಕರ್ಣಂ ಚ ತ್ರಿಭಿಃ ಶರೈಃ||

06048028a ಆರ್ತಾಯನಿಂ ತ್ರಿಭಿರ್ಬಾಣೈ ರಾಜಾನಂ ಚಾಪಿ ಪಂಚಭಿಃ|

06048028c ಪ್ರತ್ಯವಿಧ್ಯದಮೇಯಾತ್ಮಾ ಕಿರೀಟೀ ಭರತರ್ಷಭ||

ಭರತರ್ಷಭ! ಆಗ ಆ ನರವ್ಯಾಘ್ರ ಅಮೇಯಾತ್ಮ ಕಿರೀಟಿಯು ಭೀಷ್ಮನನ್ನು ಇಪ್ಪತ್ತೈದು ಬಾಣಗಳಿಂದಲೂ, ಕೃಪನನ್ನು ಒಂಭತ್ತು ಬಾಣಗಳಿಂದಲೂ, ದ್ರೋಣನನ್ನು ಆರರಿಂದಲೂ, ವಿಕರ್ಣನನ್ನು ಮೂರು ಬಾಣಗಳಿಂದಲೂ, ಶಲ್ಯನನ್ನು ಮೂರು ಬಾಣಗಳಿಂದಲೂ ರಾಜಾ ದುರ್ಯೋಧನನನ್ನು ಐದರಿಂದಲೂ ಮರಳಿ ಹೊಡೆದನು.

06048029a ತಂ ಸಾತ್ಯಕಿರ್ವಿರಾಟಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ|

06048029c ದ್ರೌಪದೇಯಾಭಿಮನ್ಯುಶ್ಚ ಪರಿವವ್ರುರ್ಧನಂಜಯಂ||

ಧನಂಜಯನನ್ನು ಸಾತ್ಯಕಿ, ವಿರಾಟ, ಧೃಷ್ಟದ್ಯುಮ್ನ ಪಾರ್ಷತ, ದ್ರೌಪದೇಯರು ಮತ್ತು ಅಭಿಮನ್ಯುವು ಸುತ್ತುವರೆದರು.

06048030a ತತೋ ದ್ರೋಣಂ ಮಹೇಷ್ವಾಸಂ ಗಾಂಗೇಯಸ್ಯ ಪ್ರಿಯೇ ರತಂ|

06048030c ಅಭ್ಯವರ್ಷತ ಪಾಂಚಾಲ್ಯಃ ಸಂಯುಕ್ತಃ ಸಹ ಸೋಮಕೈಃ||

ಆಗ ಸೋಮಕರೊಂದಿಗೆ ಕೂಡಿ ಪಾಂಚಾಲ್ಯನು ಗಾಂಗೇಯನ ಪ್ರಿಯರತ, ಮಹೇಷ್ವಾಸ ದ್ರೋಣನನ್ನು ಆಕ್ರಮಣಿಸಿದನು.

06048031a ಭೀಷ್ಮಸ್ತು ರಥಿನಾಂ ಶ್ರೇಷ್ಠಸ್ತೂರ್ಣಂ ವಿವ್ಯಾಧ ಪಾಂಡವಂ|

06048031c ಅಶೀತ್ಯಾ ನಿಶಿತೈರ್ಬಾಣೈಸ್ತತೋಽಕ್ರೋಶಂತ ತಾವಕಾಃ||

ರಥಿಗಳಲ್ಲಿ ಶ್ರೇಷ್ಠ ಭೀಷ್ಮನಾದರೋ ಪಾಂಡವನನ್ನು ಲೋಹದ ನಿಶಿತ ಬಾಣಗಳಿಂದ ವೇಗವಾಗಿ ಹೊಡೆಯಲು ನಿನ್ನವರು ಆಕ್ರೋಶಮಾಡಿದರು.

06048032a ತೇಷಾಂ ತು ನಿನದಂ ಶ್ರುತ್ವಾ ಪ್ರಹೃಷ್ಟಾನಾಂ ಪ್ರಹೃಷ್ಟವತ್|

06048032c ಪ್ರವಿವೇಶ ತತೋ ಮಧ್ಯಂ ರಥಸಿಂಹಃ ಪ್ರತಾಪವಾನ್||

ಪ್ರಹೃಷ್ಟರಾದ ಅವರ ಆ ಸಂತೋಷದ ಕೂಗನ್ನು ಕೇಳಿ ಪ್ರತಾಪವಾನ್ ರಥಸಿಂಹನು ಅವರ ಮಧ್ಯೆ ಪ್ರವೇಶಿಸಿದನು.

06048033a ತೇಷಾಂ ತು ರಥಸಿಂಹಾನಾಂ ಮಧ್ಯಂ ಪ್ರಾಪ್ಯ ಧನಂಜಯಃ|

06048033c ಚಿಕ್ರೀಡ ಧನುಷಾ ರಾಜಽಲ್ಲಕ್ಷ್ಯಂ ಕೃತ್ವಾ ಮಹಾರಥಾನ್||

ರಾಜನ್! ಆ ರಥಸಿಂಹರ ಮಧ್ಯೆ ಪ್ರವೇಶಿಸಿದ ಧನಂಜಯನು ಮಹಾರಥರನ್ನು ಗುರಿಯಾಗಿಟ್ಟುಕೊಂಡು ಧನುಸ್ಸಿನೊಂದಿಗೆ ಆಟವಾಡತೊಡಗಿದನು.

06048034a ತತೋ ದುರ್ಯೋಧನೋ ರಾಜಾ ಭೀಷ್ಮಮಾಹ ಜನೇಶ್ವರಃ|

06048034c ಪೀಡ್ಯಮಾನಂ ಸ್ವಕಂ ಸೈನ್ಯಂ ದೃಷ್ಟ್ವಾ ಪಾರ್ಥೇನ ಸಂಯುಗೇ||

ಆಗ ರಾಜಾ ಜನೇಶ್ವರ ದುರ್ಯೋಧನನು ಸಂಯುಗದಲ್ಲಿ ಪಾರ್ಥನು ತನ್ನ ಸೇನೆಯನ್ನು ಪೀಡಿಸುವುದನ್ನು ನೋಡಿ ಭೀಷ್ಮನಿಗೆ ಹೇಳಿದನು:

06048035a ಏಷ ಪಾಂಡುಸುತಸ್ತಾತ ಕೃಷ್ಣೇನ ಸಹಿತೋ ಬಲೀ|

06048035c ಯತತಾಂ ಸರ್ವಸೈನ್ಯಾನಾಂ ಮೂಲಂ ನಃ ಪರಿಕೃಂತತಿ|

06048035e ತ್ವಯಿ ಜೀವತಿ ಗಾಂಗೇಯೇ ದ್ರೋಣೇ ಚ ರಥಿನಾಂ ವರೇ||

“ಅಯ್ಯಾ! ಈ ಬಲೀ ಪಾಂಡುಸುತನು ಕೃಷ್ಣನ ಸಹಿತ, ಗಾಂಗೇಯ! ನೀನು ಮತ್ತು ರಥಿಗಳಲ್ಲಿ ಶ್ರೇಷ್ಠ ದ್ರೋಣನು ಜೀವಂತವಿರುವಾಗಲೇ ಪ್ರಯತ್ನಿಸುತ್ತಿರುವ ಸರ್ವಸೇನೆಗಳನ್ನು ಬುಡಸಹಿತ ಕಿತ್ತೊಗೆಯುತ್ತಿದ್ದಾನಲ್ಲ!

06048036a ತ್ವತ್ಕೃತೇ ಹ್ಯೇಷ ಕರ್ಣೋಽಪಿ ನ್ಯಸ್ತಶಸ್ತ್ರೋ ಮಹಾರಥಃ|

06048036c ನ ಯುಧ್ಯತಿ ರಣೇ ಪಾರ್ಥಂ ಹಿತಕಾಮಃ ಸದಾ ಮಮ||

ನಿನ್ನಿಂದಾಗಿ ಮಹಾರಥ ಕರ್ಣನೂ ಕೂಡ ಶಸ್ತ್ರವನ್ನು ಕೆಳಗಿಟ್ಟಿದ್ದಾನೆ. ಆದುದರಿಂದಲೇ ಸದಾ ನನ್ನ ಹಿತವನ್ನೇ ಬಯಸುವ ಅವನು ರಣದಲ್ಲಿ ಪಾರ್ಥನೊಂದಿಗೆ ಯುದ್ಧಮಾಡುತ್ತಿಲ್ಲ!

06048037a ಸ ತಥಾ ಕುರು ಗಾಂಗೇಯ ಯಥಾ ಹನ್ಯೇತ ಫಲ್ಗುನಃ|

06048037c ಏವಮುಕ್ತಸ್ತತೋ ರಾಜನ್ಪಿತಾ ದೇವವ್ರತಸ್ತವ|

06048037e ಧಿಕ್ ಕ್ಷತ್ರಧರ್ಮಮಿತ್ಯುಕ್ತ್ವಾ ಯಯೌ ಪಾರ್ಥರಥಂ ಪ್ರತಿ||

ಗಾಂಗೇಯ! ಫಲ್ಗುನನನ್ನು ಕೊಲ್ಲುವಂತಹುದನ್ನು ಮಾಡು!” ಅವನು ಹೀಗೆ ಹೇಳಲು ರಾಜನ್! ನಿನ್ನ ಪಿತ ದೇವವ್ರತನು “ಕ್ಷತ್ರಧರ್ಮಕ್ಕೆ ಧಿಕ್ಕಾರ!” ಎಂದು ಹೇಳಿ ಪಾರ್ಥನ ರಥದ ಬಳಿ ನಡೆದನು.

06048038a ಉಭೌ ಶ್ವೇತಹಯೌ ರಾಜನ್ಸಂಸಕ್ತೌ ದೃಶ್ಯ ಪಾರ್ಥಿವಾಃ|

06048038c ಸಿಂಹನಾದಾನ್ಭೃಶಂ ಚಕ್ರುಃ ಶಂಖಶಬ್ದಾಂಶ್ಚ ಭಾರತ||

ರಾಜನ್! ಭಾರತ! ಇಬ್ಬರೂ ಶ್ವೇತಹಯರೂ ಸಂಘರ್ಷಣೆಗೆ ಸಿದ್ಧರಾಗಿರುವುದನ್ನು ನೋಡಿ ಪಾರ್ಥಿವರು ಜೋರಾಗಿ ಸಿಂಹನಾದಗೈದರು ಮತ್ತು ಶಂಖಗಳ ಶಬ್ಧಗಳನ್ನು ಮಾಡಿದರು.

06048039a ದ್ರೌಣಿರ್ದುರ್ಯೋಧನಶ್ಚೈವ ವಿಕರ್ಣಶ್ಚ ತವಾತ್ಮಜಃ|

06048039c ಪರಿವಾರ್ಯ ರಣೇ ಭೀಷ್ಮಂ ಸ್ಥಿತಾ ಯುದ್ಧಾಯ ಮಾರಿಷ||

ಮಾರಿಷ! ದ್ರೌಣಿ, ದುರ್ಯೋಧನ ಮತ್ತು ನಿನ್ನ ಮಗ ವಿಕರ್ಣನು ರಣದಲ್ಲಿ ಭೀಷ್ಮನನ್ನು ಸುತ್ತುವರೆದು ಯುದ್ಧಕ್ಕೆ ನಿಂತರು.

06048040a ತಥೈವ ಪಾಂಡವಾಃ ಸರ್ವೇ ಪರಿವಾರ್ಯ ಧನಂಜಯಂ|

06048040c ಸ್ಥಿತಾ ಯುದ್ಧಾಯ ಮಹತೇ ತತೋ ಯುದ್ಧಮವರ್ತತ||

ಹಾಗೆಯೇ ಪಾಂಡವರೆಲ್ಲರೂ ಧನಂಜಯನನ್ನು ಸುತ್ತುವರೆದು ಯುದ್ಧಕ್ಕೆ ನಿಂತರು. ಆಗ ಮಹಾಯುದ್ಧವು ನಡೆಯಿತು.

06048041a ಗಾಂಗೇಯಸ್ತು ರಣೇ ಪಾರ್ಥಮಾನರ್ಚನ್ನವಭಿಃ ಶರೈಃ|

06048041c ತಮರ್ಜುನಃ ಪ್ರತ್ಯವಿಧ್ಯದ್ದಶಭಿರ್ಮರ್ಮವೇಧಿಭಿಃ||

ರಣದಲ್ಲಿ ಗಾಂಗೇಯನಾದರೋ ಪಾರ್ಥನನ್ನು ಒಂಭತ್ತು ಶರಗಳಿಂದ ಹೊಡೆದನು. ಅವನನ್ನು ಅರ್ಜುನನು ಹತ್ತು ಮರ್ಮವೇಧಿಗಳಿಂದ ತಿರುಗಿ ಹೊಡೆದನು.

06048042a ತತಃ ಶರಸಹಸ್ರೇಣ ಸುಪ್ರಯುಕ್ತೇನ ಪಾಂಡವಃ|

06048042c ಅರ್ಜುನಃ ಸಮರಶ್ಲಾಘೀ ಭೀಷ್ಮಸ್ಯಾವಾರಯದ್ದಿಶಃ||

ಆಗ ಸಮರಶ್ಲಾಘೀ ಪಾಂಡವ ಅರ್ಜುನನು ಚೆನ್ನಾಗಿ ಗುರಿಯಿಟ್ಟ ಸಹಸ್ರ ಬಾಣಗಳಿಂದ ಭೀಷ್ಮನನ್ನು ಎಲ್ಲ ಕಡೆಗಳಿಂದಲೂ ಮುಚ್ಚಿಬಿಟ್ಟನು.

06048043a ಶರಜಾಲಂ ತತಸ್ತತ್ತು ಶರಜಾಲೇನ ಕೌರವ|

06048043c ವಾರಯಾಮಾಸ ಪಾರ್ಥಸ್ಯ ಭೀಷ್ಮಃ ಶಾಂತನವಸ್ತಥಾ||

ಆಗ ಕೌರವ! ಪಾರ್ಥನ ಆ ಶರಜಾಲವನ್ನು ಭೀಷ್ಮ ಶಾಂತನವನು ಶರಜಾಲದಿಂದಲೇ ತಡೆದನು.

06048044a ಉಭೌ ಪರಮಸಂಹೃಷ್ಟಾವುಭೌ ಯುದ್ಧಾಭಿನಂದಿನೌ|

06048044c ನಿರ್ವಿಶೇಷಮಯುಧ್ಯೇತಾಂ ಕೃತಪ್ರತಿಕೃತೈಷಿಣೌ||

ಇಬ್ಬರೂ ಪರಮ ಸಂಹೃಷ್ಟರಾಗಿದ್ದರು. ಇಬ್ಬರೂ ಯುದ್ಧದಲ್ಲಿ ಪರಸ್ಪರರನ್ನು ಶ್ಲಾಘಿಸುತ್ತಿದ್ದರು. ಒಬ್ಬರು ಪ್ರಹರಿಸಿದರೆ ಇನ್ನೊಬ್ಬರು ಅದಕ್ಕೆ ಪ್ರತಿಯಾಗಿ ಪ್ರಹರಿಸುತ್ತಿದ್ದರು. ಅವರಿಬ್ಬರ ಯುದ್ಧದಲ್ಲಿ ವ್ಯತ್ಯಾಸವೇ ಕಾಣಲಿಲ್ಲ.

06048045a ಭೀಷ್ಮಚಾಪವಿಮುಕ್ತಾನಿ ಶರಜಾಲಾನಿ ಸಂಘಶಃ|

06048045c ಶೀರ್ಯಮಾಣಾನ್ಯದೃಶ್ಯಂತ ಭಿನ್ನಾನ್ಯರ್ಜುನಸಾಯಕೈಃ||

ಭೀಷ್ಮನ ಚಾಪದಿಂದ ಪ್ರಯೋಗಿಸಲ್ಪಟ್ಟ ಗುಂಪು ಗುಂಪಾದ ಶರಜಾಲಗಳು ಅರ್ಜುನನ ಸಾಯಕಗಳಿಂದ ಚೂರು ಚೂರಾಗಿ ಕೆಳಗೆ ಬೀಳುವುದು ಕಾಣುತ್ತಿತ್ತು.

06048046a ತಥೈವಾರ್ಜುನಮುಕ್ತಾನಿ ಶರಜಾಲಾನಿ ಭಾಗಶಃ|

06048046c ಗಾಂಗೇಯಶರನುನ್ನಾನಿ ನ್ಯಪತಂತ ಮಹೀತಲೇ||

ಹಾಗೆಯೇ ಅರ್ಜುನನು ಬಿಟ್ಟ ಶರಜಾಲಗಳು ಗಾಂಗೇಯನ ಶರಗಳಿಂದ ತುಂಡಾಗಿ ನೆಲದ ಮೇಲೆ ಬೀಳುತ್ತಿದ್ದವು.

06048047a ಅರ್ಜುನಃ ಪಂಚವಿಂಶತ್ಯಾ ಭೀಷ್ಮಮಾರ್ಚ್ಛಚ್ಚಿತೈಃ ಶರೈಃ|

06048047c ಭೀಷ್ಮೋಽಪಿ ಸಮರೇ ಪಾರ್ಥಂ ವಿವ್ಯಾಧ ತ್ರಿಂಶತಾ ಶರೈಃ||

ಅರ್ಜುನನು ಇಪ್ಪತ್ತೈದು ನಿಶಿತ ಬಾಣಗಳಿಂದ ಭೀಷ್ಮನನ್ನು ಚುಚ್ಚಿದನು. ಸಮರದಲ್ಲಿ ಭೀಷ್ಮನೂ ಕೂಡ ಪಾರ್ಥನನ್ನು ಮೂವತ್ತು ಬಾಣಗಳಿಂದ ಹೊಡೆದನು.

06048048a ಅನ್ಯೋನ್ಯಸ್ಯ ಹಯಾನ್ವಿದ್ಧ್ವಾ ಧ್ವಜೌ ಚ ಸುಮಹಾಬಲೌ|

06048048c ರಥೇಷಾಂ ರಥಚಕ್ರೇ ಚ ಚಿಕ್ರೀಡತುರರಿಂದಮೌ||

ಆ ಇಬ್ಬರು ಸುಮಹಾಬಲ ಅರಿಂದಮರು ಅನ್ಯೋನ್ಯರ ಕುದುರೆಗಳನ್ನೂ ರಥಗಳ ಈಷಾದಂಡಗಳನ್ನೂ, ರಥಚಕ್ರಗಳನ್ನೂ ಹೊಡೆದು ಆಟವಾಡುತ್ತಿದ್ದರು.

06048049a ತತಃ ಕ್ರುದ್ಧೋ ಮಹಾರಾಜ ಭೀಷ್ಮಃ ಪ್ರಹರತಾಂ ವರಃ|

06048049c ವಾಸುದೇವಂ ತ್ರಿಭಿರ್ಬಾಣೈರಾಜಘಾನ ಸ್ತನಾಂತರೇ||

ಮಹಾರಾಜ! ಆಗ ಪ್ರಹರಿಗಳಲ್ಲಿ ಶ್ರೇಷ್ಠ ಭೀಷ್ಮನು ಕ್ರುದ್ಧನಾಗಿ ವಾಸುದೇವನ ಎದೆಗೆ ಮೂರು ಬಾಣಗಳಿಂದ ಹೊಡೆದನು.

06048050a ಭೀಷ್ಮಚಾಪಚ್ಯುತೈರ್ಬಾಣೈರ್ನಿರ್ವಿದ್ಧೋ ಮಧುಸೂದನಃ|

06048050c ವಿರರಾಜ ರಣೇ ರಾಜನ್ಸಪುಷ್ಪ ಇವ ಕಿಂಶುಕ||

ರಾಜನ್! ಭೀಷ್ಮನ ಚಾಪದಿಂದ ಹೊರಟ ಬಾಣಗಳು ತಾಗಿದ ಮಧುಸೂದನನು ರಣದಲ್ಲಿ ಹೂಬಿಟ್ಟ ಕಿಂಶುಕದಂತೆ ರಾರಾಜಿಸಿದನು.

06048051a ತತೋಽರ್ಜುನೋ ಭೃಶಂ ಕ್ರುದ್ಧೋ ನಿರ್ವಿದ್ಧಂ ಪ್ರೇಕ್ಷ್ಯ ಮಾಧವಂ|

06048051c ಗಾಂಗೇಯಸಾರಥಿಂ ಸಂಖ್ಯೇ ನಿರ್ಬಿಭೇದ ತ್ರಿಭಿಃ ಶರೈಃ||

ಆಗ ಪೆಟ್ಟುತಿಂದ ಮಾಧವನನ್ನು ನೋಡಿ ಕ್ರುದ್ಧನಾದ ಅರ್ಜುನನು ತುಂಬಾ ಕ್ರುದ್ಧನಾಗಿ ಯುದ್ಧದಲ್ಲಿ ಗಾಂಗೇಯನ ಸಾರಥಿಯನ್ನು ಮೂರು ಶರಗಳಿಂದ ಹೊಡೆದನು.

06048052a ಯತಮಾನೌ ತು ತೌ ವೀರಾವನ್ಯೋನ್ಯಸ್ಯ ವಧಂ ಪ್ರತಿ|

06048052c ನಾಶಕ್ನುತಾಂ ತದಾನ್ಯೋನ್ಯಮಭಿಸಂಧಾತುಮಾಹವೇ||

ಆ ವೀರರಿಬ್ಬರೂ ಅನ್ಯೋನ್ಯರನ್ನು ವಧಿಸಲು ಪ್ರಯುತ್ನ ಮಾಡುತ್ತಿದ್ದರೂ ಯುದ್ಧದಲ್ಲಿ ಅನ್ಯೋನ್ಯರನ್ನು ಮೀರಲು ಶಕ್ಯರಾಗಲಿಲ್ಲ.

06048053a ಮಂಡಲಾನಿ ವಿಚಿತ್ರಾಣಿ ಗತಪ್ರತ್ಯಾಗತಾನಿ ಚ|

06048053c ಅದರ್ಶಯೇತಾಂ ಬಹುಧಾ ಸೂತಸಾಮರ್ಥ್ಯಲಾಘವಾತ್||

ಮಂಡಲಾಕಾರವಾಗಿ, ವಿಚಿತ್ರವಾಗಿ, ಮುಂದೆ ಮತ್ತು ಹಿಂದೆ ಚಲಿಸುವುದು ಮೊದಲಾದ ಸಾಮರ್ಥ್ಯ ಲಾಘವಗಳನ್ನು ಸಾರಥಿಗಳು ತೋರಿಸಿಕೊಡುತ್ತಿದ್ದರು.

06048054a ಅಂತರಂ ಚ ಪ್ರಹಾರೇಷು ತರ್ಕಯಂತೌ ಮಹಾರಥೌ|

06048054c ರಾಜನ್ನಂತರಮಾರ್ಗಸ್ಥೌ ಸ್ಥಿತಾವಾಸ್ತಾಂ ಮುಹುರ್ಮುಹುಃ||

ರಾಜನ್! ಪ್ರಹಾರಗಳ ಮಧ್ಯದಲ್ಲಿ ಇಬ್ಬರು ಮಹಾರಥರೂ ತರ್ಕಿಸುತ್ತಿದ್ದರು. ಪುನಃ ಪುನಃ ಮಧ್ಯಮಾರ್ಗವನ್ನು ಹಿಡಿದು ಯುದ್ಧಮಾಡುತ್ತಿದ್ದರು.

06048055a ಉಭೌ ಸಿಂಹರವೋನ್ಮಿಶ್ರಂ ಶಂಖಶಬ್ದಂ ಪ್ರಚಕ್ರತುಃ|

06048055c ತಥೈವ ಚಾಪನಿರ್ಘೋಷಂ ಚಕ್ರತುಸ್ತೌ ಮಹಾರಥೌ||

ಇಬ್ಬರೂ ಸಿಂಹನಾದ ಮಿಶ್ರಿತ ಶಂಖಧ್ವನಿಯನ್ನು ಮಾಡುತ್ತಿದ್ದರು. ಹಾಗೆಯೇ ಇಬ್ಬರು ಮಹಾರಥರೂ ಧನುಷ್ಟೇಂಕಾರವನ್ನೂ ಮಾಡುತ್ತಿದ್ದರು.

06048056a ತಯೋಃ ಶಂಖಪ್ರಣಾದೇನ ರಥನೇಮಿಸ್ವನೇನ ಚ|

06048056c ದಾರಿತಾ ಸಹಸಾ ಭೂಮಿಶ್ಚಕಂಪ ಚ ನನಾದ ಚ||

ಅವರ ಶಂಖಪ್ರಣಾದದಿಂದ ಮತ್ತು ರಥಚಕ್ರಗಳ ಶಬ್ಧದಿಂದ ಭೂಮಿಯು ಸೀಳಿ, ನಡುಗಿ ಮಹಾಶಬ್ಧವುಂಟಾಯಿತು.

06048057a ನ ತಯೋರಂತರಂ ಕಶ್ಚಿದ್ದದೃಶೇ ಭರತರ್ಷಭ|

06048057c ಬಲಿನೌ ಸಮರೇ ಶೂರಾವನ್ಯೋನ್ಯಸದೃಶಾವುಭೌ||

ಭರತರ್ಷಭ! ಅವರಿಬ್ಬರಲ್ಲಿ ಯಾವುದೇ ಅಂತರವು ಕಾಣಲಿಲ್ಲ. ಸಮರದಲ್ಲಿ ಆ ಬಲಿ ಶೂರರಿಬ್ಬರೂ ಅನ್ಯೋನ್ಯರಂತೆಯೇ ಇದ್ದರು.

06048058a ಚಿಹ್ನಮಾತ್ರೇಣ ಭೀಷ್ಮಂ ತು ಪ್ರಜಜ್ಞುಸ್ತತ್ರ ಕೌರವಾಃ|

06048058c ತಥಾ ಪಾಂಡುಸುತಾಃ ಪಾರ್ಥಂ ಚಿಹ್ನಮಾತ್ರೇಣ ಜಜ್ಞಿರೇ||

ಕೌರವರು ಧ್ವಜಚಿಹ್ನೆಯಿಂದ ಮಾತ್ರ ಭೀಷ್ಮನನ್ನು ಗುರುತಿಸುತ್ತಿದ್ದರು. ಹಾಗೆಯೇ ಪಾಂಡುಸುತರು ಪಾರ್ಥನನ್ನು ಕೇವಲ ಧ್ವಜಚಿಹ್ನೆಯಿಂದ ಗುರುತಿಸುತ್ತಿದ್ದರು.

06048059a ತಯೋರ್ನೃವರಯೋ ರಾಜನ್ದೃಶ್ಯ ತಾದೃಕ್ಪರಾಕ್ರಮಂ|

06048059c ವಿಸ್ಮಯಂ ಸರ್ವಭೂತಾನಿ ಜಗ್ಮುರ್ಭಾರತ ಸಂಯುಗೇ||

ರಾಜನ್! ಭಾರತ! ಸಂಯುಗದಲ್ಲಿ ಆ ನರಶ್ರೇಷ್ಠರ ಅಂಥಹ ಪರಾಕ್ರಮವನ್ನು ನೋಡಿ ಸರ್ವಭೂತಗಳೂ ವಿಸ್ಮಯಗೊಂಡವು.

06048060a ನ ತಯೋರ್ವಿವರಂ ಕಶ್ಚಿದ್ರಣೇ ಪಶ್ಯತಿ ಭಾರತ|

06048060c ಧರ್ಮೇ ಸ್ಥಿತಸ್ಯ ಹಿ ಯಥಾ ನ ಕಶ್ಚಿದ್ವೃಜಿನಂ ಕ್ವ ಚಿತ್||

ಭಾರತ! ಹೇಗೆ ಧರ್ಮದಲ್ಲಿ ಸ್ಥಿತನಾಗಿರುವವನಲ್ಲಿ ಯಾವುದೇ ರೀತಿಯ ನ್ಯೂನತೆಗಳು ಕಂಡುಬರುವುದಿಲ್ಲವೋ ಹಾಗೆ ಅವರಿಬ್ಬರಲ್ಲಿ ಯಾವುದೇ ರೀತಿಯ ಕುಂದುಗಳು ಕಾಣುತ್ತಿರಲಿಲ್ಲ.

06048061a ಉಭೌ ಹಿ ಶರಜಾಲೇನ ತಾವದೃಶ್ಯೌ ಬಭೂವತುಃ|

06048061c ಪ್ರಕಾಶೌ ಚ ಪುನಸ್ತೂರ್ಣಂ ಬಭೂವತುರುಭೌ ರಣೇ||

ಇಬ್ಬರೂ ಬಾಣಗಳ ಬಲೆಗಳಿಂದ ಮುಚ್ಚಿಹೋಗಿರುವುದು ಕಾಣುತ್ತಿತ್ತು. ಪುನಃ ತಕ್ಷಣವೇ ಇಬ್ಬರೂ ರಣದಲ್ಲಿ ಪ್ರಕಾಶಮಾನರಾಗಿರುತ್ತಿದ್ದರು.

06048062a ತತ್ರ ದೇವಾಃ ಸಗಂಧರ್ವಾಶ್ಚಾರಣಾಶ್ಚ ಸಹರ್ಷಿಭಿಃ|

06048062c ಅನ್ಯೋನ್ಯಂ ಪ್ರತ್ಯಭಾಷಂತ ತಯೋರ್ದೃಷ್ಟ್ವಾ ಪರಾಕ್ರಮಂ||

ಅಲ್ಲಿ ಅವರ ಪರಾಕ್ರಮವನ್ನು ಕಂಡು ದೇವತೆಗಳು, ಗಂಧರ್ವ-ಚಾರಣ-ಋಷಿಗಳೊಂದಿಗೆ ಅನ್ಯೋನ್ಯರಲ್ಲಿ ಮಾತನಾಡಿಕೊಳ್ಳುತ್ತಿದ್ದರು.

06048063a ನ ಶಕ್ಯೌ ಯುಧಿ ಸಂರಬ್ಧೌ ಜೇತುಮೇತೌ ಮಹಾರಥೌ|

06048063c ಸದೇವಾಸುರಗಂಧರ್ವೈರ್ಲೋಕೈರಪಿ ಕಥಂ ಚನ||

“ಯುದ್ಧದಲ್ಲಿ ಮಗ್ನರಾಗಿರುವ ಈ ಇಬ್ಬರು ಮಹಾರಥರನ್ನು ಗೆಲ್ಲಲು ದೇವಾಸುರಗಂಧರ್ವರಿಂದಲೂ ಲೋಕಗಳಿಂದಲೂ ಎಂದೂ ಸಾಧ್ಯವಿಲ್ಲ.

06048064a ಆಶ್ಚರ್ಯಭೂತಂ ಲೋಕೇಷು ಯುದ್ಧಮೇತನ್ಮಹಾದ್ಭುತಂ|

06048064c ನೈತಾದೃಶಾನಿ ಯುದ್ಧಾನಿ ಭವಿಷ್ಯಂತಿ ಕಥಂ ಚನ||

ಮಹಾದ್ಭುತವಾದ ಈ ಯುದ್ಧವು ಲೋಕಗಳಲ್ಲಿ ಆಶ್ಚರ್ಯವನ್ನುಂಟುಮಾಡುತ್ತಿದೆ. ಹೀಗೆ ಕಾಣುವ ಯುದ್ಧವು ಮುಂದೆ ಎಂದೂ ನಡೆಯಲಿಕ್ಕಿಲ್ಲ.

06048065a ನಾಪಿ ಶಕ್ಯೋ ರಣೇ ಜೇತುಂ ಭೀಷ್ಮಃ ಪಾರ್ಥೇನ ಧೀಮತಾ|

06048065c ಸಧನುಶ್ಚ ರಥಸ್ಥಶ್ಚ ಪ್ರವಪನ್ ಸಾಯಕಾನ್ರಣೇ||

ಧನುಸ್ಸು ರಥಗಳೊಂದಿಗೆ ರಣದಲ್ಲಿ ಸಾಯಕಗಳನ್ನು ಬಿತ್ತುತ್ತಿರುವ ಭೀಷ್ಮನನ್ನು ಧೀಮತ ಪಾರ್ಥನು ಗೆಲ್ಲಲಾರ.

06048066a ತಥೈವ ಪಾಂಡವಂ ಯುದ್ಧೇ ದೇವೈರಪಿ ದುರಾಸದಂ|

06048066c ನ ವಿಜೇತುಂ ರಣೇ ಭೀಷ್ಮ ಉತ್ಸಹೇತ ಧನುರ್ಧರಂ||

ಹಾಗೆಯೇ ಯುದ್ಧದಲ್ಲಿ ದೇವತೆಗಳಿಗೂ ದುರಾಸದನಾದ ಧನುರ್ಧರ ಪಾಂಡವನನ್ನು ರಣದಲ್ಲಿ ಗೆಲ್ಲಲು ಭೀಷ್ಮನಿಗೂ ಸಾಧ್ಯವಿಲ್ಲ.”

06048067a ಇತಿ ಸ್ಮ ವಾಚಃ ಶ್ರೂಯಂತೇ ಪ್ರೋಚ್ಚರಂತ್ಯಸ್ತತಸ್ತತಃ|

06048067c ಗಾಂಗೇಯಾರ್ಜುನಯೋಃ ಸಂಖ್ಯೇ ಸ್ತವಯುಕ್ತಾ ವಿಶಾಂ ಪತೇ||

ವಿಶಾಂಪತೇ! ಗಾಂಗೇಯ-ಅರ್ಜುನರ ಯುದ್ಧವನ್ನು ಪ್ರಶಂಸಿಸುವ ಈ ಮಾತುಗಳು ಎಲ್ಲ ಕಡೆಯಿಂದಲೂ ಕೇಳಿ ಬರುತ್ತಿದ್ದವು.

06048068a ತ್ವದೀಯಾಸ್ತು ತತೋ ಯೋಧಾಃ ಪಾಂಡವೇಯಾಶ್ಚ ಭಾರತ|

06048068c ಅನ್ಯೋನ್ಯಂ ಸಮರೇ ಜಘ್ನುಸ್ತಯೋಸ್ತತ್ರ ಪರಾಕ್ರಮೇ||

ಭಾರತ! ಆಗ ನಿನ್ನ ಮತ್ತು ಪಾಂಡವೇಯರ ಯೋಧರು ಸಮರದಲ್ಲಿ ಪರಾಕ್ರಮದಿಂದ ಅನ್ಯೋನ್ಯರನ್ನು ಸಂಹರಿಸಿದರು.

06048069a ಶಿತಧಾರೈಸ್ತಥಾ ಖಡ್ಗೈರ್ವಿಮಲೈಶ್ಚ ಪರಶ್ವಧೈಃ|

06048069c ಶರೈರನ್ಯೈಶ್ಚ ಬಹುಭಿಃ ಶಸ್ತ್ರೈರ್ನಾನಾವಿಧೈರ್ಯುಧಿ|

06048069e ಉಭಯೋಃ ಸೇನಯೋರ್ವೀರಾ ನ್ಯಕೃಂತಂತ ಪರಸ್ಪರಂ||

ಹರಿತ ಅಲಗಿನ ಖಡ್ಗಗಳಿಂದ, ಫಳ-ಫಳಿಸುವ ಪರಶುಗಳಿಂದ, ಶರಗಳಿಂದ, ನಾನಾವಿಧದ ಅನೇಕ ಶಸ್ತ್ರಗಳಿಂದ ಎರಡೂ ಸೇನೆಗಳ ವೀರರು ಪರಸ್ಪರರನ್ನು ಯುದ್ಧದಲ್ಲಿ ಕಡಿದುರುಳಿಸುತ್ತಿದ್ದರು.

06048070a ವರ್ತಮಾನೇ ತಥಾ ಘೋರೇ ತಸ್ಮಿನ್ಯುದ್ಧೇ ಸುದಾರುಣೇ|

06048070c ದ್ರೋಣಪಾಂಚಾಲ್ಯಯೋ ರಾಜನ್ಮಹಾನಾಸೀತ್ಸಮಾಗಮಃ||

ರಾಜನ್! ಹೀಗೆ ಸುದಾರುಣವಾದ ಘೋರ ಯುದ್ಧವು ನಡೆಯುತ್ತಿರಲು ದ್ರೋಣ ಮತ್ತು ಪಾಂಚಾಲ್ಯನ ನಡುವೆ ಮಹಾ ದ್ವಂದ್ವಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಾರ್ಜುನಯುದ್ಧೇ ಅಷ್ಠಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಾರ್ಜುನಯುದ್ಧ ಎನ್ನುವ ನಲ್ವತ್ತೆಂಟನೇ ಅಧ್ಯಾಯವು.

Image result for flowers against white background

Comments are closed.