Bhishma Parva: Chapter 42

ಭೀಷ್ಮ ಪರ್ವ: ಭೀಷ್ಮವಧ ಪರ್ವ

೪೨

ಮೊದಲನೆಯ ದಿನದ ಯುದ್ಧಾರಂಭ

ಯುದ್ಧವು ಆರಂಭವಾದುದು (೧-೭). ಭೀಮಸೇನನು ಮುನ್ನುಗ್ಗಿ ಕೌರವ ಸೇನೆಯ ಮೇಲೆ ಧಾಳಿಮಾಡಿದುದು (೮-೧೭). ತುಮುಲ ಯುದ್ಧದ ವರ್ಣನೆ (೧೮-೩೦).

06042001 ಧೃತರಾಷ್ಟ್ರ ಉವಾಚ|

06042001a ಏವಂ ವ್ಯೂಢೇಷ್ವನೀಕೇಷು ಮಾಮಕೇಷ್ವಿತರೇಷು ಚ|

06042001c ಕೇ ಪೂರ್ವಂ ಪ್ರಾಹರಂಸ್ತತ್ರ ಕುರವಃ ಪಾಂಡವಾಸ್ತಥಾ||

ಧೃತರಾಷ್ಟ್ರನು ಹೇಳಿದನು: “ನಮ್ಮವರು ಮತ್ತು ಇತರರು ಈ ರೀತಿ ಸೇನೆಗಳ ವ್ಯೂಹಗಳನ್ನು ರಚಿಸಿರಲು ಅಲ್ಲಿ ಮೊದಲು ಯಾರು ಪ್ರಹಾರಮಾಡಿದರು? ಕೌರವರೋ ಪಾಂಡವರೋ?”

06042002 ಸಂಜಯ ಉವಾಚ|

06042002a ಭ್ರಾತೃಭಿಃ ಸಹಿತೋ ರಾಜನ್ಪುತ್ರೋ ದುರ್ಯೋಧನಸ್ತವ|

06042002c ಭೀಷ್ಮಂ ಪ್ರಮುಖತಃ ಕೃತ್ವಾ ಪ್ರಯಯೌ ಸಹ ಸೇನಯಾ||

ಸಂಜಯನು ಹೇಳಿದನು: “ರಾಜನ್! ಸಹೋದರರೊಂದಿಗೆ ನಿನ್ನ ಪುತ್ರ ದುರ್ಯೋಧನನು ಭೀಷ್ಮನನ್ನು ಪ್ರಮುಖನನ್ನು ಮಾಡಿ ಸೇನೆಯನ್ನು ಕೂಡಿಕೊಂಡು ಹೊರಟನು.

06042003a ತಥೈವ ಪಾಂಡವಾಃ ಸರ್ವೇ ಭೀಮಸೇನಪುರೋಗಮಾಃ|

06042003c ಭೀಷ್ಮೇಣ ಯುದ್ಧಮಿಚ್ಛಂತಃ ಪ್ರಯಯುರ್ಹೃಷ್ಟಮಾನಸಾಃ||

ಹಾಗೆಯೇ ಪಾಂಡವರೆಲ್ಲರೂ ಭೀಮಸೇನನನ್ನು ಮುಂದಿಟ್ಟುಕೊಂಡು ಭೀಷ್ಮನೊಂದಿಗೆ ಯುದ್ಧವನ್ನು ಬಯಸಿ ಹೃಷ್ಟಮಾನಸರಾಗಿ ಹೊರಟರು.

06042004a ಕ್ಷ್ವೇಡಾಃ ಕಿಲಕಿಲಾಶಬ್ದಾಃ ಕ್ರಕಚಾ ಗೋವಿಷಾಣಿಕಾಃ|

06042004c ಭೇರೀಮೃದಂಗಮುರಜಾ ಹಯಕುಂಜರನಿಸ್ವನಾಃ||

ಕ್ರಕಚಗಳ ಕಿಲಕಿಲ ಶಬ್ಧ, ಗೋವಿನ ಕೊಂಬಿನ ವಾದ್ಯ, ಭೇರೀ ಮೃದಂಗ ಮತ್ತು ಹಯ-ಕುಂಜರಗಳ ನಿಃಸ್ವನಗಳು ಕಿವುಡು ಮಾಡುವಂತಿತ್ತು.

06042005a ಉಭಯೋಃ ಸೇನಯೋ ರಾಜಂಸ್ತತಸ್ತೇಽಸ್ಮಾನ್ಸಮಾದ್ರವನ್|

06042005c ವಯಂ ಪ್ರತಿನದಂತಶ್ಚ ತದಾಸೀತ್ತುಮುಲಂ ಮಹತ್||

ರಾಜನ್! ಆಗ ಎರಡೂ ಸೇನೆಗಳು - ಅವರು ನಮ್ಮನ್ನು ಮತ್ತು ನಾವು ಅವರನ್ನು ಜೋರಾಗಿ ಕೂಗುತ್ತಾ ಆಕ್ರಮಣ ಮಾಡಿದವು. ಆಗ ಅಲ್ಲಿ ಮಹಾ ತುಮುಲವುಂಟಾಯಿತು.

06042006a ಮಹಾಂತ್ಯನೀಕಾನಿ ಮಹಾಸಮುಚ್ಛ್ರಯೇ

         ಸಮಾಗಮೇ ಪಾಂಡವಧಾರ್ತರಾಷ್ಟ್ರಯೋಃ|

06042006c ಚಕಂಪಿರೇ ಶಂಖಮೃದಂಗನಿಸ್ವನೈಃ

         ಪ್ರಕಂಪಿತಾನೀವ ವನಾನಿ ವಾಯುನಾ||

ಪರಸ್ಪರರನ್ನು ಕೊನೆಗೊಳಿಸಲು ಸೇರಿದ್ದ ಆ ಪಾಂಡವ-ಧಾರ್ತರಾಷ್ಟ್ರರ ಮಹಾ ಸೇನೆಗಳು ಶಂಖ-ಮೃದಂಗ ನಿಸ್ವನಗಳಿಂದ ಗಾಳಿಗೆ ವನಗಳು ತೂರಾಡುತ್ತಿರುವಂತೆ ತೂರಾಡುತ್ತಿದ್ದವು.

06042007a ನರೇಂದ್ರನಾಗಾಶ್ವರಥಾಕುಲಾನಾಂ

         ಅಭ್ಯಾಯತೀನಾಮಶಿವೇ ಮುಹೂರ್ತೇ|

06042007c ಬಭೂವ ಘೋಷಸ್ತುಮುಲಶ್ಚಮೂನಾಂ

         ವಾತೋದ್ಧುತಾನಾಂ ಇವ ಸಾಗರಾಣಾಂ||

ನರೇಂದ್ರ-ನಾಗ-ಅಶ್ವ-ರಥಸಂಕುಲಗಳು ಆ ಅಶಿವ ಮುಹೂರ್ತದಲ್ಲಿ ಪರಸ್ಪರರನ್ನು ಧಾಳಿಮಾಡುವಾಗ ಭಿರುಗಾಳಿಯಿಂದ ಮೇಲೆದ್ದ ಸಾಗರಗಳಂತೆ ಸೇನೆಗಳ ತುಮುಲ ಘೋಷವಾಯಿತು.

06042008a ತಸ್ಮಿನ್ಸಮುತ್ಥಿತೇ ಶಬ್ದೇ ತುಮುಲೇ ಲೋಮಹರ್ಷಣ|

06042008c ಭೀಮಸೇನೋ ಮಹಾಬಾಹುಃ ಪ್ರಾಣದದ್ಗೋವೃಷೋ ಯಥಾ||

ಆ ಲೋಮಹರ್ಷಣ ಶಬ್ಧ ತುಮುಲವು ಮೇಲೇರಲು ಮಹಾಬಾಹು ಭೀಮಸೇನನು ಗೂಳಿ ಹೋರಿಯಂತೆ ಕೂಗಿದನು.

06042009a ಶಂಖದುಂದುಭಿನಿರ್ಘೋಷಂ ವಾರಣಾನಾಂ ಚ ಬೃಂಹಿತಂ|

06042009c ಸಿಂಹನಾದಂ ಚ ಸೈನ್ಯಾನಾಂ ಭೀಮಸೇನರವೋಽಭ್ಯಭೂತ್||

ಶಂಖದುಂದುಭಿ ನಿರ್ಘೋಷ, ಆನೆಗಳ ಘೀಳು, ಸೇನೆಗಳ ಸಿಂಹನಾದಕ್ಕಿಂತಲೂ ಭೀಮಸೇನನ ರವವು ಜೋರಾಗಿತ್ತು.

06042010a ಹಯಾನಾಂ ಹೇಷಮಾಣಾನಾಮನೀಕೇಷು ಸಹಸ್ರಶಃ|

06042010c ಸರ್ವಾನಭ್ಯಭವಚ್ಚಬ್ದಾನ್ಭೀಮಸೇನಸ್ಯ ನಿಸ್ವನಃ||

ಸೇನೆಗಳಲ್ಲಿದ್ದ ಸಹಸ್ರಾರು ಕುದುರೆಗಳೆಲ್ಲವುಗಳ ಹೇಷಾರವಕ್ಕಿಂತ ಭೀಮಸೇನನ ಕೂಗು ಜೋರಾಗಿದ್ದಿತು.

06042011a ತಂ ಶ್ರುತ್ವಾ ನಿನದಂ ತಸ್ಯ ಸೈನ್ಯಾಸ್ತವ ವಿತತ್ರಸುಃ|

06042011c ಜೀಮೂತಸ್ಯೇವ ನದತಃ ಶಕ್ರಾಶನಿಸಮಸ್ವನಂ||

ಶಕ್ರನ ಸಿಡಿಲುಬಡಿದ ಮೋಡಗಳು ಗರ್ಜಿಸುವಂತಿದ್ದ ಆ ನಿನಾದವನ್ನು ಕೇಳಿ ನಿನ್ನ ಸೇನೆಯು ತತ್ತರಿಸಿತು.

06042012a ವಾಹನಾನಿ ಚ ಸರ್ವಾಣಿ ಶಕೃನ್ಮೂತ್ರಂ ಪ್ರಸುಸ್ರುವುಃ|

06042012c ಶಬ್ದೇನ ತಸ್ಯ ವೀರಸ್ಯ ಸಿಂಹಸ್ಯೇವೇತರೇ ಮೃಗಾಃ||

ಸಿಂಹದ ಕೂಗನ್ನು ಕೇಳಿ ಇತರ ಮೃಗಗಳು ಹೇಗೋ ಹಾಗೆ ಅವನ ಶಬ್ಧವನ್ನು ಕೇಳಿ ಎಲ್ಲ ಪ್ರಾಣಿಗಳೂ ಮಲ-ಮೂತ್ರಗಳನ್ನು ವಿಸರ್ಜಿಸಿದವು.

06042013a ದರ್ಶಯನ್ಘೋರಮಾತ್ಮಾನಂ ಮಹಾಭ್ರಮಿವ ನಾದಯನ್|

06042013c ವಿಭೀಷಯಂಸ್ತವ ಸುತಾಂಸ್ತವ ಸೇನಾಂ ಸಮಭ್ಯಯಾತ್||

ಮಹಾಮೋಡದಂತೆ ಗರ್ಜಿಸುತ್ತಾ ಘೋರರೂಪವನ್ನು ತಾಳಿದ ಅವನು ನಿನ್ನ ಮಕ್ಕಳನ್ನು ಭಯಪಡಿಸುತ್ತಾ ಸೇನೆಗಳ ಮೇಲೆ ಎರಗಿದನು.

06042014a ತಮಾಯಾಂತಂ ಮಹೇಷ್ವಾಸಂ ಸೋದರ್ಯಾಃ ಪರ್ಯವಾರಯನ್|

06042014c ಚಾದಯಂತಃ ಶರವ್ರಾತೈರ್ಮೇಘಾ ಇವ ದಿವಾಕರಂ||

ತಮ್ಮ ಕಡೆ ಮುನ್ನುಗ್ಗಿ ಬರುತ್ತಿರುವ ಅವನನ್ನು ಸೋದರರು ಸುತ್ತುವರೆದು ಮೇಘಗಳು ದಿವಾಕರನನ್ನು ಹೇಗೋ ಹಾಗೆ ಶರವ್ರಾತಗಳಿಂದ ಮುಚ್ಚಿದರು.

06042015a ದುರ್ಯೋಧನಶ್ಚ ಪುತ್ರಸ್ತೇ ದುರ್ಮುಖೋ ದುಃಸಹಃ ಶಲಃ|

06042015c ದುಃಶಾಸನಶ್ಚಾತಿರಥಸ್ತಥಾ ದುರ್ಮರ್ಷಣೋ ನೃಪ||

06042016a ವಿವಿಂಶತಿಶ್ಚಿತ್ರಸೇನೋ ವಿಕರ್ಣಶ್ಚ ಮಹಾರಥಃ|

06042016c ಪುರುಮಿತ್ರೋ ಜಯೋ ಭೋಜಃ ಸೌಮದತ್ತಿಶ್ಚ ವೀರ್ಯವಾನ್||

06042017a ಮಹಾಚಾಪಾನಿ ಧುನ್ವಂತೋ ಜಲದಾ ಇವ ವಿದ್ಯುತಃ|

06042017c ಆದದಾನಾಶ್ಚ ನಾರಾಚಾನ್ನಿರ್ಮುಕ್ತಾಶೀವಿಷೋಪಮಾನ್||

ನಿನ್ನ ಪುತ್ರ ದುರ್ಯೋಧನ, ದುರ್ಮುಖ, ದುಃಸಹ, ಶಲ, ದುಃಶಾಸನ, ಅತಿರಥ, ದುರ್ಮರ್ಷಣ, ವಿವಿಂಶತಿ, ಚಿತ್ರಸೇನ, ಮಹಾರಥಿ ವಿಕರ್ಣ, ಪುರುಮಿತ್ರ, ಜಯ, ಭೋಜ, ವೀರ್ಯವಾನ್ ಸೌಮದತ್ತಿ ಇವರು ವಿದ್ಯುತ್ತಿನಿಂದ ಕೂಡಿದ ಮೇಘಗಳಂತೆ ಗುಡುಗುತ್ತಿರುವ ಮಹಾ ಚಾಪಗಳಿಗೆ ವಿಷೋಪಮ ಹರಿತ ನಾರಾಚಗಳನ್ನು ಹೂಡಿ ಅವನ ಮೇಲೆ ಬಿಟ್ಟರು.

06042018a ಅಥ ತಾನ್ದ್ರೌಪದೀಪುತ್ರಾಃ ಸೌಭದ್ರಶ್ಚ ಮಹಾರಥಃ|

06042018c ನಕುಲಃ ಸಹದೇವಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ||

06042019a ಧಾರ್ತರಾಷ್ಟ್ರಾನ್ಪ್ರತಿಯಯುರರ್ದಯಂತಃ ಶಿತೈಃ ಶರೈಃ|

06042019c ವಜ್ರೈರಿವ ಮಹಾವೇಗೈಃ ಶಿಖರಾಣಿ ಧರಾಭೃತಾಂ||

ಆಗ ಆ ಧಾರ್ತರಾಷ್ಟ್ರರನ್ನು ದ್ರೌಪದೀಪುತ್ರರು, ಮಹಾರಥ ಸೌಭದ್ರಿ, ನಕುಲ-ಸಹದೇವರು, ಮತ್ತು ಪಾರ್ಷತ ಧೃಷ್ಟದ್ಯುಮ್ನರು ಮಹಾವೇಗದಿಂದ ಆಕ್ರಮಣಮಾಡಿ ಗಿರಿಶಿಖರಗಳನ್ನು ವಜ್ರಗಳಿಂದ ಹೊಡೆಯುವಂತೆ ನಿಶಿತ ಶರಗಳಿಂದ ಹೊಡೆದರು.

06042020a ತಸ್ಮಿನ್ಪ್ರಥಮಸಮ್ಮರ್ದೇ ಭೀಮಜ್ಯಾತಲನಿಸ್ವನೇ|

06042020c ತಾವಕಾನಾಂ ಪರೇಷಾಂ ಚ ನಾಸೀತ್ಕಶ್ಚಿತ್ಪರಾಙ್ಮುಖಃ||

ಧನುಸ್ಸಿನ ಠೇಂಕಾರದ ಭಯಂಕರ ಶಬ್ಧಗಳಿಂದೊಡಗೂಡಿದ ಆ ಪ್ರಥಮ ಹೋರಾಟದಲ್ಲಿ ನಿನ್ನವರಾಗಲೀ ಶತ್ರುಗಳಾಗಲೀ ಯಾರೂ ಹಿಮ್ಮೆಟ್ಟಲಿಲ್ಲ.

06042021a ಲಾಘವಂ ದ್ರೋಣಶಿಷ್ಯಾಣಾಮಪಶ್ಯಂ ಭರತರ್ಷಭ|

06042021c ನಿಮಿತ್ತವೇಧಿನಾಂ ರಾಜನ್ ಶರಾನುತ್ಸೃಜತಾಂ ಭೃಶಂ||

ಭರತರ್ಷಭ! ದ್ರೋಣಶಿಷ್ಯರ ಲಾಘವವು ಕಂಡುಬಂದಿತು. ರಾಜನ್! ತುಂಬಾ ಬಾಣಗಳನ್ನು ಬಿಡುತ್ತಿದ್ದ ಅವರು ತಮ್ಮ ಗುರಿಯನ್ನು ತಪ್ಪುತ್ತಿರಲಿಲ್ಲ.

06042022a ನೋಪಶಾಮ್ಯತಿ ನಿರ್ಘೋಷೋ ಧನುಷಾಂ ಕೂಜತಾಂ ತಥಾ|

06042022c ವಿನಿಶ್ಚೇರುಃ ಶರಾ ದೀಪ್ತಾ ಜ್ಯೋತೀಂಷೀವ ನಭಸ್ತಲಾತ್||

ಆಗ ಧನುಸ್ಸುಗಳ ಠೇಂಕಾರದ ನಿರ್ಘೋಷವು ಒಂದು ಕ್ಷಣವೂ ನಿಲ್ಲಲಿಲ್ಲ. ನಭಸ್ತಲದಿಂದ ಉಲ್ಕೆಗಳು ಬೀಳುವಂತೆ ಉರಿಯುವ ಬಾಳಗಳು ಹಾರಿ ಬೀಳುತ್ತಿದ್ದವು.

06042023a ಸರ್ವೇ ತ್ವನ್ಯೇ ಮಹೀಪಾಲಾಃ ಪ್ರೇಕ್ಷಕಾ ಇವ ಭಾರತ|

06042023c ದದೃಶುರ್ದರ್ಶನೀಯಂ ತಂ ಭೀಮಂ ಜ್ಞಾತಿಸಮಾಗಮಂ||

ಭಾರತ! ಅನ್ಯ ಎಲ್ಲ ಮಹೀಪಾಲರೂ ದರ್ಶನೀಯವಾಗಿದ್ದ ಆ ದಾಯಾದಿಗಳ ಭಯಂಕರ ಹೋರಾಟವನ್ನು ಪ್ರೇಕ್ಷಕರಾಗಿ ನೋಡುತ್ತಿದ್ದರು.

06042024a ತತಸ್ತೇ ಜಾತಸಂರಂಭಾಃ ಪರಸ್ಪರಕೃತಾಗಸಃ|

06042024c ಅನ್ಯೋನ್ಯಸ್ಪರ್ಧಯಾ ರಾಜನ್ವ್ಯಾಯಚ್ಛಂತ ಮಹಾರಥಾಃ||

ರಾಜನ್! ಆಗ ಆ ಮಹಾರಥರು ಪರಸ್ಪರರ ಕೃತ್ಯಗಳನ್ನು ಸ್ಮರಿಸಿಕೊಂಡು ಸಿಟ್ಟಿಗೆದ್ದು ಅನ್ಯೋನ್ಯರನ್ನು ಸ್ಪರ್ಧಿಸಿ ಹೋರಾಡಿದರು.

06042025a ಕುರುಪಾಂಡವಸೇನೇ ತೇ ಹಸ್ತ್ಯಶ್ವರಥಸಂಕುಲೇ|

06042025c ಶುಶುಭಾತೇ ರಣೇಽತೀವ ಪಟೇ ಚಿತ್ರಗತೇ ಇವ||

ಕುರುಪಾಂಡವರ ಆನೆ-ಕುದುರೆ-ರಥಸಂಕುಲಗಳು ರಣದಲ್ಲಿ ಚಿತ್ರಪಟದಲ್ಲಿರುವವುಗಳಂತೆ ಅತಿಸುಂದರವಾಗಿ ಕಂಡಿತು.

06042026a ತತಸ್ತೇ ಪಾರ್ಥಿವಾಃ ಸರ್ವೇ ಪ್ರಗೃಹೀತಶರಾಸನಾಃ|

06042026c ಸಹಸೈನ್ಯಾಃ ಸಮಾಪೇತುಃ ಪುತ್ರಸ್ಯ ತವ ಶಾಸನಾತ್||

ಆಗ ಪಾರ್ಥಿವರೆಲ್ಲರೂ ಧನುರ್ಬಾಣಗಳನ್ನು ಹಿಡಿದು ನಿನ್ನ ಪುತ್ರನ ಶಾಸನದಂತೆ ಸೇನೆಗಳೊಂದಿಗೆ ಆಕ್ರಮಿಸಿದರು.

06042027a ಯುಧಿಷ್ಠಿರೇಣ ಚಾದಿಷ್ಟಾಃ ಪಾರ್ಥಿವಾಸ್ತೇ ಸಹಸ್ರಶಃ|

06042027c ವಿನದಂತಃ ಸಮಾಪೇತುಃ ಪುತ್ರಸ್ಯ ತವ ವಾಹಿನೀಂ||

ಸಾವಿರಾರು ಪಾರ್ಥಿವರು ಯುಧಿಷ್ಠಿರನ ಆದೇಶದಂತೆ ಸಂತೋಷದಿಂದ ನಿನ್ನ ಮಗನ ಸೇನೆಯ ಮೇಲೆ ಬಿದ್ದರು.

06042028a ಉಭಯೋಃ ಸೇನಯೋಸ್ತೀವ್ರಃ ಸೈನ್ಯಾನಾಂ ಸ ಸಮಾಗಮಃ|

06042028c ಅಂತರ್ಧೀಯತ ಚಾದಿತ್ಯಃ ಸೈನ್ಯೇನ ರಜಸಾವೃತಃ||

ಎರಡೂ ಸೇನೆಗಳ ತೀವ್ರ ಹೋರಾಟದಲ್ಲಿ ಸೇನೆಗಳಿಂದ ಮೇಲೆದ್ದ ಧೂಳಿನಿಂದ ಆದಿತ್ಯನು ಅಂತರ್ಧಾನನಾದನು.

06042029a ಪ್ರಯುದ್ಧಾನಾಂ ಪ್ರಭಗ್ನಾನಾಂ ಪುನರಾವರ್ತತಾಮಪಿ|

06042029c ನಾತ್ರ ಸ್ವೇಷಾಂ ಪರೇಷಾಂ ವಾ ವಿಶೇಷಃ ಸಮಜಾಯತ||

ಅಲ್ಲಿ ನಮ್ಮವರ, ಶತ್ರುಗಳ, ಯುದ್ಧಮಾಡುತ್ತಿರುವವರ, ಗಾಯಗೊಂಡು ಹಿಂದೆ ಸರಿಯುವವರ ಮಧ್ಯೆ ಅಂತರವೇ ತಿಳಿಯುತ್ತಿರಲಿಲ್ಲ.

06042030a ತಸ್ಮಿಂಸ್ತು ತುಮುಲೇ ಯುದ್ಧೇ ವರ್ತಮಾನೇ ಮಹಾಭಯೇ|

06042030c ಅತಿ ಸರ್ವಾಣ್ಯನೀಕಾನಿ ಪಿತಾ ತೇಽಭಿವ್ಯರೋಚತ||

ನಡೆಯುತ್ತಿರುವ ಆ ಮಯಭಯಂಕರ ತುಮುಲ ಯುದ್ಧದ ಎಲ್ಲ ಸೇನೆಗಳಲ್ಲಿಯೂ ನಿನ್ನ ತಂದೆಯು ಮಿಂಚಿದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಯುದ್ಧಾರಂಭೇ ದ್ವಿಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಯುದ್ಧಾರಂಭ ಎನ್ನುವ ನಲ್ವತ್ತೆರಡನೇ ಅಧ್ಯಾಯವು.

Image result for flowers against white background

Comments are closed.