Bhishma Parva: Chapter 40

ಭೀಷ್ಮ ಪರ್ವ:ಭಗವದ್ಗೀತಾ ಪರ್ವ

೪೦

ಮೋಕ್ಷಸಂನ್ಯಾಸಯೋಗ

Image result for bhagavadgita"06040001 ಅರ್ಜುನ ಉವಾಚ|

06040001a ಸನ್ಯಾಸಸ್ಯ ಮಹಾಬಾಹೋ ತತ್ತ್ವಮಿಚ್ಛಾಮಿ ವೇದಿತುಂ|

06040001c ತ್ಯಾಗಸ್ಯ ಚ ಹೃಷೀಕೇಶ ಪೃಥಕ್ಕೇಶಿನಿಷೂದನ||

ಅರ್ಜುನನು ಹೇಳಿದನು: “ಹೃಷೀಕೇಶ! ಕೇಶಿನಿಷೂದನ! ಮಹಾಬಾಹೋ! ಸಂನ್ಯಾಸ ಮತ್ತು ತ್ಯಾಗಗಳ ತತ್ತ್ವಗಳನ್ನು ಪ್ರತ್ಯೇಕವಾಗಿ ತಿಳಿಯಬಯಸುತ್ತೇನೆ.”

06040002 ಶ್ರೀಭಗವಾನುವಾಚ|

06040002a ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ|

06040002c ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ||

ಶ್ರೀ ಭಗವಂತನು ಹೇಳಿದನು: “ಕಾಮ್ಯಕರ್ಮಗಳನ್ನು ಬಿಡುವುದನ್ನು ಕವಿಗಳು ಸಂನ್ಯಾಸವೆಂದು ತಿಳಿಯುತ್ತಾರೆ. ಸರ್ವಕರ್ಮಗಳ ಫಲವನ್ನು ತ್ಯಜಿಸುವುದು ತ್ಯಾಗವೆಂದು ವಿಚಕ್ಷಣರು ಕರೆಯುತ್ತಾರೆ.

06040003a ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ|

06040003c ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ||

ದೋಷವುಳ್ಳದ್ದಾದುದರಿಂದ ಕರ್ಮಗಳನ್ನು ಬಿಡಬೇಕು ಎಂದು ಕೆಲವು ಮನೀಷಿಣರು ಹೇಳುತ್ತಾರೆ. ಆದರೆ ಯಜ್ಞ, ದಾನ, ಮತ್ತು ತಪಃಕರ್ಮಗಳನ್ನು ತ್ಯಜಿಸಬಾರದು ಎಂದು ಇತರರು ಹೇಳುತ್ತಾರೆ.

06040004a ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ|

06040004c ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ||

ಭರತಸತ್ತಮ! ಪುರುಷವ್ಯಾಘ್ರ! ತ್ಯಾಗದ ಕುರಿತಾದ ನಿಶ್ಚಯವನ್ನು ನನ್ನಿಂದ ಕೇಳು. ತ್ಯಾಗದಲ್ಲಿ ಮೂರು ವಿಧಗಳಿವೆ ಎಂದು ಹೇಳುತ್ತಾರೆ.

06040005a ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್|

06040005c ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಂ||

ಯಜ್ಞ, ದಾನ ಮತ್ತು ತಪಃಕರ್ಮಗಳನ್ನು ತ್ಯಜಿಸಬಾರದು. ಅವೂ ಕಾರ್ಯಗಳೇ. ಮನೀಷಿಣರಿಗೆ ಯಜ್ಞ-ದಾನ-ತಪಸ್ಸುಗಳು ಪಾವನವಾದವುಗಳು.

06040006a ಏತಾನ್ಯಪಿ ತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ|

06040006c ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಂ||

ಪಾರ್ಥ! ಆದರೆ ಈ ಕರ್ಮಗಳನ್ನೂ ಕೂಡ ಸಂಗ ಮತ್ತು ಫಲಗಳನ್ನು ತೊರೆದು ಮಾಡಬೇಕೆಂದು ನನ್ನ ಉತ್ತಮ ಮತ ಮತ್ತು ನಿಶ್ಚಯ.

06040007a ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ|

06040007c ಮೋಹಾತ್ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ||

ಆದರೆ ನಿಯತ ನಿತ್ಯಕರ್ಮದ ಸಂನ್ಯಾಸವು ಯುಕ್ತವಲ್ಲ. ಮೋಹದಿಂದ ಅದನ್ನು ಪರಿತ್ಯಜಿಸುವುದನ್ನು ತಾಮಸವೆಂದು ಹೇಳಲ್ಪಡುತ್ತದೆ.

06040008a ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶಭಯಾತ್ತ್ಯಜೇತ್|

06040008c ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್||

ಯಾರು ದುಃಖ ಮತ್ತು ಶರೀರಕ್ಕೆ ಕಷ್ಟವಾಗುತ್ತದೆ ಎಂಬ ಭಯದಿಂದ ಕರ್ಮಗಳನ್ನು ತ್ಯಜಿಸುತ್ತಾರೋ ಅವರು ರಾಜಸ ತ್ಯಾಗವನ್ನು ಮಾಡಿದುದರಿಂದ ತ್ಯಾಗದ ಫಲವನ್ನು ಪಡೆಯುವುದಿಲ್ಲ.

06040009a ಕಾರ್ಯಮಿತ್ಯೇವ ಯತ್ಕರ್ಮ ನಿಯತಂ ಕ್ರಿಯತೇಽರ್ಜುನ|

06040009c ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ||

ಯಾವ ನಿತ್ಯಕರ್ಮಗಳನ್ನು ಮಾಡಬೇಕಾದವು ಎಂದು ಸಂಗ-ಫಲಗಳನ್ನು ತ್ಯಜಿಸಿ ಮಾಡುತ್ತಾರೋ ಅರ್ಜುನ! ಆ ತ್ಯಾಗವು ಸಾತ್ತ್ವಿಕವೆಂದು ನನ್ನ ಮತ.

06040010a ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ|

06040010c ತ್ಯಾಗೀ ಸತ್ತ್ವಸಮಾವಿಷ್ಟೋ ಮೇಧಾವೀ ಚಿನ್ನಸಂಶಯಃ||

ಸತ್ತ್ವಸಮಾವಿಷ್ಟನಾದ ಮೇಧಾವೀ ತ್ಯಾಗಿಯು ಚಿನ್ನಸಂಶಯನಾಗಿ ಅಕುಶಲಕರ್ಮಗಳನ್ನು ದ್ವೇಷಿಸುವುದೂ ಇಲ್ಲ, ಕುಶಲ ಕರ್ಮವನ್ನು ಪ್ರೀತಿಸುವುದೂ ಇಲ್ಲ.

06040011a ನ ಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ|

06040011c ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ||

ಒಂದನ್ನೂ ಬಿಡದೆ ಎಲ್ಲ ಕರ್ಮಗಳನ್ನೂ ತ್ಯಜಿಸಲು ದೇಹಭೃತನಿಗೆ ಶಕ್ಯವಾಗುವುದಿಲ್ಲ. ಯಾರು ಕರ್ಮಫಲತ್ಯಾಗಿಯೋ ಅವನೇ ತ್ಯಾಗಿಯೆನಿಸುವನು.

06040012a ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಂ|

06040012c ಭವತ್ಯತ್ಯಾಗಿನಾಂ ಪ್ರೇತ್ಯ ನ ತು ಸಂನ್ಯಾಸಿನಾಂ ಕ್ವ ಚಿತ್||

ತ್ಯಾಗಿಗಳಲ್ಲದವರಿಗೆ ಅನಿಷ್ಟ, ಇಷ್ಟ ಮತ್ತು ಮಿಶ್ರವೆಂದು ಮೂರು ವಿಧದ ಫಲಗಳು ಮರಣದ ನಂತರ ಉಂಟಾಗುತ್ತದೆ. ಆದರೆ ಸಂನ್ಯಾಸಿಗಳಿಗೆ ಎಂದೂ ಈ ಫಲಗಳುಂಟಾಗುವುದಿಲ್ಲ.

06040013a ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ|

06040013c ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಂ||

ಮಹಾಬಾಹೋ! ಸರ್ವಕರ್ಮಗಳ ಸಿದ್ಧಿಗೆ ಈ ಐದೂ ಕಾರಣಗಳು ಎಂದು ಸಾಂಖ್ಯ ಕೃತಾಂತದಲ್ಲಿ ಹೇಳಿದ್ದಾರೆ. ಅದನ್ನು ನನ್ನಿಂದ ತಿಳಿದುಕೋ.

06040014a ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಂ|

06040014c ವಿವಿಧಾಶ್ಚ ಪೃಥಕ್ಚೇಷ್ಟಾ ದೈವಂ ಚೈವಾತ್ರ ಪಂಚಮಂ||

ಅಧಿಷ್ಠಾನ, ಕರ್ತ, ಪ್ರತ್ಯೇಕವಾಗಿರುವ ವಿವಿಧ ಕರಣಗಳು, ಪ್ರತ್ಯೇಕವಾದ ವಿವಿಧ ಚೇಷ್ಟೆಗಳು, ಮತ್ತು ಅಲ್ಲಿರುವ ದೈವವು ಐದನೆಯದು.

06040015a ಶರೀರವಾಙ್ಮನೋಭಿರ್ಯತ್ಕರ್ಮ ಪ್ರಾರಭತೇ ನರ|

06040015c ನ್ಯಾಯ್ಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವಃ||

ಶರೀರ-ವಾಕ್-ಮನಸ್ಸುಗಳಿಂದ ನರನು ನ್ಯಾಯವಾದ ಅಥವಾ ವಿಪರೀತವಾದ ಯಾವ ಕರ್ಮವನ್ನು ಪ್ರಾರಂಭಿಸುತ್ತಾನೋ ಅದಕ್ಕೆ ಈ ಐದು ಹೇತುಗಳು.

06040016a ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯಃ|

06040016c ಪಶ್ಯತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿಃ||

ಆದರೆ ಅಲ್ಲಿಯೇ ಇರುವ ಆತ್ಮನನ್ನು ಕೇವಲ ಕರ್ತಾರನೆಂದು ಯಾರು ಅಕೃತಬುದ್ಧಿಯಿಂದ ತಿಳಿದುಕೊಳ್ಳುತ್ತಾನೋ ಆ ದುರ್ಮತಿಯು ತಿಳಿಯನು.

06040017a ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ|

06040017c ಹತ್ವಾಪಿ ಸ ಇಮಾಽಲ್ಲೋಕಾನ್ನ ಹಂತಿ ನ ನಿಬಧ್ಯತೇ||

ಯಾರಿಗೆ ನಾನು ಮಾಡಿದೆ ಎನ್ನುವ ಭಾವವಿರುವುದಿಲ್ಲವೋ, ಯಾರ ಬುದ್ಧಿಯು ಅಂಟಿಕೊಳ್ಳುವುದಿಲ್ಲವೋ ಅವನು ಈ ಲೋಕಗಳನ್ನು ಕೊಂದರೂ ಕೊಂದಹಾಗೆ ಆಗುವುದಿಲ್ಲ. ಏಕೆಂದರೆ ಅವನು ಆ ಕರ್ಮದೊಂದಿಗೆ ಬದ್ಧನಾಗಿರುವುದಿಲ್ಲ.

06040018a ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ|

06040018c ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮಸಂಗ್ರಹಃ||

ಜ್ಞಾನ, ಜ್ಞೇಯ ಮತ್ತು ಪರಿಜ್ಞಾತಾ - ಇವು ಕರ್ಮಚೋದನೆಯು ಮೂರು ವಿಧಗಳು. ಕರಣ, ಕರ್ಮ, ಕರ್ತ ಇವು ಮೂರು ವಿಧದ ಕರ್ಮಸಂಗ್ರಹವು.

06040019a ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ|

06040019c ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಚೃಣು ತಾನ್ಯಪಿ||

ಜ್ಞಾನ, ಕರ್ಮ ಮತ್ತು ಕರ್ತ ಇವು ಗುಣಭೇದದಿಂದ ಮೂರು ಬಗೆಯವು ಎಂದು ಗುಣಸಂಖ್ಯಾನದಲ್ಲಿ ಹೇಳುತ್ತಾರೆ. ಅವುಗಳನ್ನು ಯಥಾವತ್ತಾಗಿ ಕೇಳು.

06040020a ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ|

06040020c ಅವಿಭಕ್ತಂ ವಿಭಕ್ತೇಷು ತಜ್ಜ್ಞಾನಂ ವಿದ್ಧಿ ಸಾತ್ತ್ವಿಕಂ||

ಯಾವುದರಿಂದ ಸರ್ವಭೂತಗಳಲ್ಲಿಯೂ ಅವ್ಯಯವಾದ ಒಂದೇ ಭಾವವನ್ನು ವಿಭಕ್ತವಾಗಿರುವವುಗಳಲ್ಲಿ ಅವಿಭಕ್ತತೆಯನ್ನು ಕಂಡುಕೊಳ್ಳುತ್ತಾರೋ ಆ ಜ್ಞಾನವು ಸಾತ್ವಿಕವೆಂದು ತಿಳಿ.

06040021a ಪೃಥಕ್ತ್ವೇನ ತು ಯಜ್ಜ್ಞಾನಂ ನಾನಾಭಾವಾನ್ಪೃಥಗ್ವಿಧಾನ್|

06040021c ವೇತ್ತಿ ಸರ್ವೇಷು ಭೂತೇಷು ತಜ್ಜ್ಞಾನಂ ವಿದ್ಧಿ ರಾಜಸಂ||

ಯಾವುದರಿಂದ ಸರ್ವಭೂತಗಳಲ್ಲಿಯೂ ಪ್ರತ್ಯೇಕತೆಯ ನಾನಾ ಭಾವಗಳನ್ನು ಪ್ರತ್ಯೇಕವಾಗಿಯೇ ತಿಳಿದುಕೊಳ್ಳುತ್ತಾರೋ ಆ ಜ್ಞಾನವು ರಾಜಸವೆಂದು ತಿಳಿ.

06040022a ಯತ್ತು ಕೃತ್ಸ್ನವದೇಕಸ್ಮಿನ್ಕಾರ್ಯೇ ಸಕ್ತಮಹೈತುಕಂ|

06040022c ಅತತ್ತ್ವಾರ್ಥವದಲ್ಪಂ ಚ ತತ್ತಾಮಸಮುದಾಹೃತಂ||

ಆದರೆ ಯಾವುದು ಒಂದು ಕಾರ್ಯದಲ್ಲಿ ಅದೇ ಎಲ್ಲವೂ ಎಂಬಂತೆ ಸಕ್ತವಾಗಿರುವುದೋ ಹೇತುವಿಲ್ಲದ್ದೋ ತತ್ತ್ವಾರ್ಥವಿಲ್ಲದ್ದೋ ಅಲ್ಪವಾಗಿರುವುದೋ ಅದು ತಾಮಸವೆನಿಸುವುದು.

06040023a ನಿಯತಂ ಸಂಗರಹಿತಮರಾಗದ್ವೇಷತಃ ಕೃತಂ|

06040023c ಅಫಲಪ್ರೇಪ್ಸುನಾ ಕರ್ಮ ಯತ್ತತ್ಸಾತ್ತ್ವಿಕಮುಚ್ಯತೇ||

ನಿಯತನಾಗಿ, ಸಂಗರಹಿತನಾಗಿ, ರಾಗದ್ವೇಷಗಳಿಲ್ಲದೇ, ಫಲವನ್ನು ಪಡೆಯಬೇಕೆಂಬ ಇಚ್ಛೆಯಿಲ್ಲದವನು ಮಾಡುವ ಕರ್ಮಗಳು ಸಾತ್ವಿಕವೆನಿಸುವವು.

06040024a ಯತ್ತು ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ|

06040024c ಕ್ರಿಯತೇ ಬಹುಲಾಯಾಸಂ ತದ್ರಾಜಸಮುದಾಹೃತಂ||

ಆದರೆ ಕರ್ಮಫಲವನ್ನು ಪಡೆಯಬೇಕೆಂಬ ಇಚ್ಛೆಯಿಂದ ಅಹಂಕಾರವುಳ್ಳವನು ಬಹಳ ಆಯಾಸಪಟ್ಟುಕೊಂಡು ಮಾಡುವ ಕರ್ಮಗಳು ರಾಜಸವೆನಿಸುತ್ತವೆ.

06040025a ಅನುಬಂಧಂ ಕ್ಷಯಂ ಹಿಂಸಾಮನಪೇಕ್ಷ್ಯ ಚ ಪೌರುಷಂ|

06040025c ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ||

ಆಗುವ ಪರಿಣಾಮಗಳನ್ನೂ, ಕ್ಷಯವನ್ನೂ, ಹಿಂಸೆಯ, ಪೌರುಷವನ್ನೂ ಲೆಕ್ಕಿಸದೇ ಮೋಹದಿಂದ ಮಾಡುವ ಕರ್ಮವನ್ನು ತಾಮಸವೆಂದು ಹೇಳುತ್ತಾರೆ.

06040026a ಮುಕ್ತಸಂಗೋಽನಹಂವಾದೀ ಧೃತ್ಯುತ್ಸಾಹಸಮನ್ವಿತಃ|

06040026c ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ||

ಮುಕ್ತಸಂಗ, ಅನಹಂವಾದಿ, ಧೃತಿ-ಉತ್ಸಾಹ ಸಮನ್ವಿತ, ಸಿದ್ಧಿ-ಅಸಿದ್ಧಿಗಳಿಗೆ ನಿರ್ವಿಕಾರ ಕರ್ತನನ್ನು ಸಾತ್ವಿಕನೆಂದು ಹೇಳುತ್ತಾರೆ.

06040027a ರಾಗೀ ಕರ್ಮಫಲಪ್ರೇಪ್ಸುರ್ಲುಬ್ಧೋ ಹಿಂಸಾತ್ಮಕೋಽಶುಚಿಃ|

06040027c ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ||

ರಾಗೀ, ಕರ್ಮಫಲವನ್ನು ಬಯಸುವ, ಲುಬ್ಧ, ಹಿಂಸಾತ್ಮಕ, ಅಶುಚಿ, ಹರ್ಷ-ಶೋಕಾನ್ವಿತ ಕರ್ತನು ರಾಜಸನೆಂದು ಎನಿಸಿಕೊಳ್ಳುತ್ತಾನೆ.

06040028a ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಕೃತಿಕೋಽಲಸಃ|

06040028c ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ||

ಅಯುಕ್ತ, ಪ್ರಾಕೃತ, ಸ್ತಬ್ಧ, ಶಠ (ಮಾಯಾವೀ), ಇನ್ನೊಬ್ಬರ ಕೆಲಸವನ್ನು ಹಾಳುಮಾಡುವವನು, ಆಲಸಿ, ವಿಷಾದೀ, ದೀರ್ಘಸೂತ್ರೀ ಕರ್ತನನ್ನು ತಾಮಸನೆಂದು ಹೇಳುತ್ತಾರೆ.

06040029a ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ ಶೃಣು|

06040029c ಪ್ರೋಚ್ಯಮಾನಮಶೇಷೇಣ ಪೃಥಕ್ತ್ವೇನ ಧನಂಜಯ||

ಧನಂಜಯ! ಬುದ್ಧಿ ಮತ್ತು ಧೃತಿಗಳು ಗುಣದಿಂದ ಮೂರುವಿಧವಾಗಿರುವುದನ್ನು ಸಂಪೂರ್ಣವಾಗಿ ಬೇರೆ ಬೇರೆಯಾಗಿ ಹೇಳುವುದನ್ನು ಕೇಳು.

06040030a ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ|

06040030c ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ||

ಪಾರ್ಥ! ಯಾವ ಬುದ್ಧಿಯು ಪ್ರವೃತ್ತಿ, ನಿವೃತ್ತಿ, ಕಾರ್ಯ-ಅಕಾರ್ಯಗಳು, ಭಯ-ಅಭಯ, ಬಂಧನ-ಮೋಕ್ಷಗಳನ್ನು ತಿಳಿದಿರುತ್ತದೆಯೋ ಅದನ್ನು ಸಾತ್ವಿಕೀ ಎಂದು ತಿಳಿಯಬೇಕು.

06040031a ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ|

06040031c ಅಯಥಾವತ್ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ||

ಪಾರ್ಥ! ಯಾವ ಬುದ್ಧಿಯು ಧರ್ಮ-ಅಧರ್ಮಗಳನ್ನು, ಕಾರ್ಯ-ಅಕಾರ್ಯಗಳನ್ನು ಯಥಾವತ್ತಾಗಿ ಅರಿತುಕೊಳ್ಳುವುದಿಲ್ಲವೋ ಅದನ್ನು ರಾಜಸೀ ಎಂದು ತಿಳಿದುಕೊಳ್ಳಬೇಕು.

06040032a ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾವೃತಾ|

06040032c ಸರ್ವಾರ್ಥಾನ್ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ||

ಪಾರ್ಥ! ತಮಸ್ಸಿನಿಂದ ಆವೃತವಾಗಿ ಅಧರ್ಮವನ್ನು ಧರ್ಮವೆಂದು ಸ್ವೀಕರಿಸಿ ಎಲ್ಲವುಗಳನ್ನೂ ವಿಪರೀತವಾಗಿ ಅರ್ಥಮಾಡಿಕೊಳ್ಳುವ ಬುದ್ಧಿಯು ತಾಮಸೀ.

06040033a ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇಂದ್ರಿಯಕ್ರಿಯಾಃ|

06040033c ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ||

ಪಾರ್ಥ! ಯಾವ ಅವ್ಯಭಿಚಾರಿ ಧೃತಿಯಿಂದ ಮನಸ್ಸು, ಪ್ರಾಣ ಮತ್ತು ಇಂದ್ರಿಯಕ್ರಿಯೆಗಳನ್ನು ಯೋಗದಿಂದ ಧರಿಸುತ್ತಾರೋ ಆ ಧೃತಿಯು ಸಾತ್ತ್ವಿಕಿ.

06040034a ಯಯಾ ತು ಧರ್ಮಕಾಮಾರ್ಥಾನ್ಧೃತ್ಯಾ ಧಾರಯತೇಽರ್ಜುನ|

06040034c ಪ್ರಸಂಗೇನ ಫಲಾಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ||

ಅರ್ಜುನ! ಪಾರ್ಥ! ಪ್ರಸಂಗದಿಂದ ಫಲಾಕಾಂಕ್ಷಿಯಾಗಿ ಧರ್ಮ-ಕಾಮ-ಅರ್ಥಗಳನ್ನು ಧರಿಸುವ ಧೃತಿಯು ರಾಜಸೀ.

06040035a ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ|

06040035c ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ||

ಪಾರ್ಥ! ಯಾವುದರಿಂದ ಸ್ವಪ್ನ, ಭಯ, ಶೋಕ, ವಿಷಾದ, ಮದಗಳನ್ನು ಬಿಡಲಿಕ್ಕಾಗುವುದಿಲ್ಲವೋ ಆ ಕೆಟ್ಟ ಬುದ್ಧಿಯ ಧೃತಿಯು ತಾಮಸೀ.

06040036a ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತರ್ಷಭ|

06040036c ಅಭ್ಯಾಸಾದ್ರಮತೇ ಯತ್ರ ದುಃಖಾಂತಂ ಚ ನಿಗಚ್ಛತಿ||

06040037a ಯತ್ತದಗ್ರೇ ವಿಷಮಿವ ಪರಿಣಾಮೇಽಮೃತೋಪಮಂ|

06040037c ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಂ||

ಭರತರ್ಷಭ! ಈಗ ಮೂರು ವಿಧವಾದ ಸುಖವನ್ನು ನನ್ನಿಂದ ಕೇಳು. ಅಭ್ಯಾಸದಂತೆ ಮತ್ತೆ ಮತ್ತೆ ಅನುಭವಿಸುವ, ಯಾವುದು ದುಃಖವನ್ನು ಕೊನೆಗೊಳಿಸುತ್ತದೆಯೋ, ಯಾವುದು ಮೊದಲು ವಿಷದಂತಿದ್ದರೂ ಪರಿಣಾಮದಲ್ಲಿ ಅಮೃತೋಪಮವಾಗಿರುವುದೋ ಆ ಆತ್ಮಬುದ್ಧಿಯಿಂದ ಜನಿಸಿದ ಸುಖವನ್ನು ಸಾತ್ತ್ವಿಕವೆನ್ನುವರು.

06040038a ವಿಷಯೇಂದ್ರಿಯಸಮ್ಯೋಗಾದ್ಯತ್ತದಗ್ರೇಽಮೃತೋಪಮಂ|

06040038c ಪರಿಣಾಮೇ ವಿಷಮಿವ ತತ್ಸುಖಂ ರಾಜಸಂ ಸ್ಮೃತಂ||

ವಿಷಯೇಂದ್ರಿಯಗಳ ಸಂಯೋಗದಿಂದ ಜನಿಸಿದ, ಮೊದಲು ಅಮೃತೋಪಮವಾಗಿದ್ದುಕೊಂಡು ಪರಿಣಾಮದಲ್ಲಿ ವಿಷದಂತಿರುವ ಸುಖವನ್ನು ರಾಜಸವೆಂದು ಹೇಳುತ್ತಾರೆ.

06040039a ಯದಗ್ರೇ ಚಾನುಬಂಧೇ ಚ ಸುಖಂ ಮೋಹನಮಾತ್ಮನಃ|

06040039c ನಿದ್ರಾಲಸ್ಯಪ್ರಮಾದೋತ್ಥಂ ತತ್ತಾಮಸಮುದಾಹೃತಂ||

ಯಾವುದು ಮೊದಲೂ ಮತ್ತು ಅನುಭವಿಸಿದ ನಂತರವೂ ಆತ್ಮನನ್ನು ಮೋಹಿತಗೊಳಿಸುವುದೋ ಆ ನಿದ್ರೆ, ಆಲಸ್ಯ ಮತ್ತು ಪ್ರಮಾದಗಳಿಂದ ಜನಿಸುವ ಸುಖವನ್ನು ತಾಮಸವೆಂದು ಉದಾಹರಿಸುತ್ತಾರೆ.

06040040a ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ|

06040040c ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ತ್ರಿಭಿರ್ಗುಣೈಃ||

ಪೃಥಿವಿಯಲ್ಲಾಗಲೀ, ದಿವಿಯಲ್ಲಿಯಾಗಲೀ, ಪುನಃ ದೇವತೆಗಳಲ್ಲಿಯಾಗಲೀ, ಈ ಮೂರು ಪ್ರಕೃತಿಜವಾದ ಗುಣಗಳಿಂದ ಕೂಡಿರದ ಸತ್ತ್ವವು ಯಾವುದೂ ಇಲ್ಲ.

06040041a ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ|

06040041c ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ||

ಪರಂತಪ! ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಕರ್ಮಗಳನ್ನೂ ಕೂಡ ಸ್ವಭಾವದಿಂದ ಹುಟ್ಟುವ ಗುಣಗಳ ಪ್ರಕಾರ ವಿಂಗಡಿಸಲ್ಪಟ್ಟಿದೆ.

06040042a ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ|

06040042c ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಂ||

ಶಮ, ದಮ, ತಪಸ್ಸು, ಶೌಚ, ಕ್ಷಾಂತಿ, ಆರ್ಜವ, ಜ್ಞಾನ, ವಿಜ್ಞಾನ, ಆಸ್ತಿಕ್ಯ ಇವು ಸ್ವಭಾವಜವಾದ ಬ್ರಹ್ಮಕರ್ಮಗಳು.

06040043a ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಂ|

06040043c ದಾನಮೀಶ್ವರಭಾವಶ್ಚ ಕ್ಷತ್ರಕರ್ಮ ಸ್ವಭಾವಜಂ||

ಶೌರ್ಯ, ತೇಜಸ್ಸು, ಧೃತಿ, ದಕ್ಷತೆ, ಯುದ್ಧದಲ್ಲಿ ಪಲಾಯನ ಮಾಡದಿರುವುದು, ದಾನ, ಮತ್ತು ಈಶ್ವರಭಾವಗಳು ಸ್ವಭಾವಜವಾದ ಕ್ಷತ್ರಕರ್ಮಗಳು.

06040044a ಕೃಷಿಗೋರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಂ|

06040044c ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಂ||

ಕೃಷಿ, ಗೋರಕ್ಷಣೆ, ವಾಣಿಜ್ಯ, ಇವು ಸ್ವಭಾವಜವಾದ ವೈಶ್ಯಕರ್ಮಗಳು. ಪರಿಚರ್ಯಾತ್ಮಕ ಕರ್ಮವು ಶೂದ್ರನಿಗೆ ಸ್ವಭಾವಜ.

06040045a ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ|

06040045c ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ ತಚ್ಚೃಣು||

ತನ್ನ ತನ್ನ ಕರ್ಮದಲ್ಲಿ ಅಭಿರತನಾದ ನರನು ಸಂಸಿದ್ಧಿಯನ್ನು ಹೊಂದುತ್ತಾನೆ. ಸ್ವಕರ್ಮದಲ್ಲಿ ನಿರತನಾದವನು ಹೇಗೆ ಸಿದ್ಧಿಯನ್ನು ಹೊಂದುತ್ತಾನೆ ಎನ್ನುವುದನ್ನು ಕೇಳು.

06040046a ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಂ|

06040046c ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ||

ಯಾರಿಂದ ಭೂತಗಳ ಪ್ರವೃತ್ತಿಯು ಉಂಟಾಗುವುದೋ, ಯಾರಿಂದಾಗಿ ಇವೆಲ್ಲವೂ ಇವೆಯೋ ಅವನನ್ನು ಸ್ವಕರ್ಮಗಳಿಂದ ಅರ್ಚಿಸಿ ಮಾನವನು ಸಿದ್ಧಿಯನ್ನು ಪಡೆಯುತ್ತಾನೆ.

06040047a ಶ್ರೇಯಾನ್ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್|

06040047c ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಂ||

ಚೆನ್ನಾಗಿ ಅನುಷ್ಠಾನ ಮಾಡಿದ ಪರಧರ್ಮಕ್ಕಿಂತಲೂ ಉತ್ತಮವಾಗಿರದ ಸ್ವಧರ್ಮವೇ ಶ್ರೇಯವಾದುದು. ಸ್ವಭಾವನಿಯತ ಕರ್ಮವನ್ನು ಮಾಡುವವನು ಕಿಲ್ಬಿಷವನ್ನು ಹೊಂದುವುದಿಲ್ಲ.

06040048a ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್|

06040048c ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ||

ಕೌಂತೇಯ! ಸಹಜ ಕರ್ಮವನ್ನು ದೋಷಗಳಿದ್ದರೂ ಬಿಡಬಾರದು. ಏಕೆಂದರೆ ಹೊಗೆಯಿರುವ ಬೆಂಕಿಯ ಹಾಗೆ ಎಲ್ಲ ಕರ್ಮಗಳೂ ದೋಷವನ್ನೊಳಗೊಂಡಿರುತ್ತವೆ.

06040049a ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ|

06040049c ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ||

ಎಲ್ಲದರಲ್ಲಿ ಸಂಗವಿಲ್ಲದ ಅಂತಃಕರಣವಿರುವವನು ಜಿತಾತ್ಮನಾಗಿ, ಆಸೆಗಳು ತೊಲಗಿರುವವನು ಸಂನ್ಯಾಸದಿಂದ ಕರ್ಮಗಳನ್ನು ಬಿಟ್ಟ ಪರಮ ಸಿದ್ಧಿಯನ್ನು ಪಡೆಯುತ್ತಾನೆ.

06040050a ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾಪ್ನೋತಿ ನಿಬೋಧ ಮೇ|

06040050c ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ||

ಕೌಂತೇಯ! ಆ ನೈಷ್ಕರ್ಮಸಿದ್ಧಿಯನ್ನು ಪಡೆದು ಬ್ರಹ್ಮನನ್ನು ಹೇಗೆ ಸೇರುತ್ತಾನೆ ಎನ್ನುವುದನ್ನು ಸಂಕ್ಷಿಪ್ತವಾಗಿ ನನ್ನಿಂದ ತಿಳಿದುಕೋ. ಅದು ಜ್ಞಾನದ ಅಂತವು.

06040051a ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ|

06040051c ಶಬ್ದಾದೀನ್ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ||

06040052a ವಿವಿಕ್ತಸೇವೀ ಲಘ್ವಾಶೀ ಯತವಾಕ್ಕಾಯಮಾನಸಃ|

06040052c ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ||

06040053a ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಂ|

06040053c ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮಭೂಯಾಯ ಕಲ್ಪತೇ||

ವಿಶುದ್ಧ ಬುದ್ಧಿಯುಳ್ಳವನಾಗಿ, ಧೃತಿಯಿಂದ ತನ್ನನ್ನು ನಿಯಮದಲ್ಲಿರಿಸಿಕೊಂಡು, ಶಬ್ದವೇ ಮೊದಲಾದ ವಿಷಯಗಳನ್ನು ತೊರೆದು, ರಾಗ-ದ್ವೇಷಗಳನ್ನು ತಿರಸ್ಕರಿಸಿ, ಏಕಾಂತ ಸ್ಥಳಗಳನ್ನು ಸೇವಿಸುವ, ಅಲ್ಪ ಆಹಾರವನ್ನು ತೆಗೆದುಕೊಳ್ಳುವ ಸ್ವಭಾವವುಳ್ಳ, ಮಾತು-ಕಾಯ-ಮನಸ್ಸುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ, ಧ್ಯಾನಯೋಗಪರನಾದ, ನಿತ್ಯವೂ ವೈರಾಗ್ಯವನ್ನು ಆಶ್ರಯಿಸಿ, ಅಹಂಕಾರ-ಬಲ-ದರ್ಪ-ಕಾಮ-ಕ್ರೋಧ-ಪರಿಗ್ರಹ ಇವುಗಳನ್ನು ಬಿಟ್ಟು, ನಾನು-ನನ್ನದೆಂಬ ಭಾವನೆಯಿಲ್ಲದವನಾಗಿ ಶಾಂತನಾಗಿರುವವನು ಬ್ರಹ್ಮವೇ ಆಗುವುದಕ್ಕೆ ಸಮರ್ಥನಾಗುತ್ತಾನೆ.

06040054a ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ|

06040054c ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಂ||

ಬ್ರಹ್ಮನಾಗಿ ಪ್ರಸನ್ನಾತ್ಮನಾಗಿರುವವನು ಶೋಕಿಸುವುದಿಲ್ಲ. ಬಯಸುವುದಿಲ್ಲ. ಸರ್ವಭೂತಗಳಲ್ಲಿಯೂ ಸಮನಾಗಿ ನನ್ನ ಮೇಲಿನ ಪರಮ ಭಕ್ತಿಯನ್ನು ಪಡೆದುಕೊಳ್ಳುತ್ತಾನೆ.

06040055a ಭಕ್ತ್ಯಾ ಮಾಮಭಿಜಾನಾತಿ ಯಾವಾನ್ಯಶ್ಚಾಸ್ಮಿ ತತ್ತ್ವತಃ|

06040055c ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನಂತರಂ||

ಭಕ್ತಿಯಿಂದ ನನ್ನನ್ನು ಯಾರು ಮತ್ತು ಎಷ್ಟು ಎನ್ನುವುದನ್ನು ತತ್ತ್ವತಃ ತಿಳಿದುಕೊಳ್ಳುತ್ತಾನೆ. ನನ್ನನ್ನು ತತ್ತ್ವತವಾಗಿ ತಿಳಿದುಕೊಂಡು ಅದರ ನಂತರ ನನ್ನನ್ನು ಪ್ರವೇಶಿಸುತ್ತಾನೆ.

06040056a ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ವ್ಯಪಾಶ್ರಯಃ|

06040056c ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಂ||

ಸದಾ ಎಲ್ಲ ಕರ್ಮಗಳನ್ನು ಮಾಡುತ್ತಿದ್ದರೂ ನನ್ನನ್ನು ಉಪಾಶ್ರಯಿಸಿದ ಅವನು ನನ್ನ ಪ್ರಸಾದದಿಂದ ಶಾಶ್ವತ ಅವ್ಯಯ ಪದವನ್ನು ಹೊಂದುತ್ತಾನೆ.

06040057a ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಃ|

06040057c ಬುದ್ಧಿಯೋಗಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ||

ಚಿತ್ತದಿಂದ ಎಲ್ಲ ಕರ್ಮಗಳನ್ನೂ ನನ್ನಲ್ಲಿ ಸಂನ್ಯಾಸಮಾಡಿ ಮತ್ಪರನಾಗಿರು. ಬುದ್ಧಿಯೋಗವನ್ನವಲಂಬಿಸಿ ಸತತವಾಗಿ ನನ್ನಲ್ಲಿಯೇ ಚಿತ್ತವನ್ನಿಡು.

06040058a ಮಚ್ಚಿತ್ತಃ ಸರ್ವದುರ್ಗಾಣಿ ಮತ್ಪ್ರಸಾದಾತ್ತರಿಷ್ಯಸಿ|

06040058c ಅಥ ಚೇತ್ತ್ವಮಹಂಕಾರಾನ್ನ ಶ್ರೋಷ್ಯಸಿ ವಿನಂಕ್ಷ್ಯಸಿ||

ನನ್ನಲ್ಲಿ ಚಿತ್ತವನ್ನಿರಿಸಿಕೊಂಡಿದ್ದರೆ ಸರ್ವ ಕಷ್ಟಗಳನ್ನೂ ನನ್ನ ಪ್ರಸಾದದಿಂದ ದಾಟುತ್ತೀಯೆ. ಹಾಗೆ ಇಲ್ಲದಿದ್ದರೆ ಅಹಂಕಾರದಿಂದ ನಾಶಹೊಂದುವೆ.

06040059a ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ|

06040059c ಮಿಥ್ಯೈಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ||

ಅಹಂಕಾರವನ್ನು ಆಶ್ರಯಿಸಿ ಯುದ್ಧಮಾಡುವುದಿಲ್ಲ ಎಂದು ತಿಳಿದುಕೊಂಡಿರುವೆಯಾದರೆ ನಿನ್ನ ಈ ವ್ಯವಹಾರವು ಸುಳ್ಳು. ಪ್ರಕೃತಿಯು ನಿನ್ನನ್ನು ಯುದ್ಧಕ್ಕೆ ಕಟ್ಟಿಹಾಕುತ್ತದೆ.

06040060a ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ|

06040060c ಕರ್ತುಂ ನೇಚ್ಛಸಿ ಯನ್ಮೋಹಾತ್ಕರಿಷ್ಯಸ್ಯವಶೋಽಪಿ ತತ್||

ಕೌಂತೇಯ! ಸ್ವಭಾವಜವಾದ ನಿನ್ನ ಕರ್ಮದಿಂದ ನಿಬದ್ಧನಾಗಿ ಮೋಹದಿಂದ ಯಾವುದನ್ನು ಮಾಡಲು ಬಯಸುತ್ತಿಲ್ಲವೋ ಅದನ್ನು ಅವಶನಾಗಿಯಾದರೂ ಮಾಡುತ್ತೀಯೆ.

06040061a ಈಶ್ವರಃ ಸರ್ವಭೂತಾನಾಂ ಹೃದ್ದೇಶೇಽರ್ಜುನ ತಿಷ್ಠತಿ|

06040061c ಭ್ರಾಮಯನ್ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ||

ಅರ್ಜುನ! ಯಂತ್ರಾರೂಢವಾಗಿರುವ ಸರ್ವಭೂತಗಳನ್ನೂ ಮಾಯೆಯಿಂದ ತಿರುಗಿಸುತ್ತಾ ಈಶ್ವರನು ಸರ್ವಭೂತಗಳ ಹೃದಯ ಪ್ರದೇಶದಲ್ಲಿ ನೆಲೆಸಿರುವನು.

06040062a ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ|

06040062c ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಂ||

ಭಾರತ! ಸರ್ವಭಾವದಿಂದ ಅವನನ್ನೇ ಶರಣು ಹೋಗು. ಅವನ ಪ್ರಸಾದದಿಂದ ಪರಮ ಶಾಂತಿಯನ್ನೂ ಶಾಶ್ವತ ಸ್ಥಾನವನ್ನೂ ಪಡೆಯುತ್ತೀಯೆ.

06040063a ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ|

06040063c ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು||

ಹೀಗೆ ಗುಹ್ಯಕ್ಕಿಂತಲೂ ಗುಹ್ಯವಾಗಿರುವ ಜ್ಞಾನವನ್ನು ನಾನು ಹೇಳಿದ್ದೇನೆ. ಇದನ್ನು ಸಂಪೂರ್ಣವಾಗಿ ವಿಮರ್ಶೆಮಾಡಿ ನಿನಗೆ ಇಚ್ಛೆಬಂದಹಾಗೆ ಮಾಡು.

06040064a ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ ವಚಃ|

06040064c ಇಷ್ಟೋಽಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಂ||

ಸರ್ವಗುಹ್ಯತಮವಾಗಿರುವ ನನ್ನ ಪರಮ ವಚನವನ್ನು ಇನ್ನೊಮ್ಮೆ ಕೇಳು. ನೀನು ದೃಢವಾಗಿ ಇಷ್ಟನಾಗಿರುವೆ. ಆದರಿಂದ ನಿನಗೆ ಹಿತವಾದುದನ್ನು ಹೇಳುತ್ತೇನೆ.

06040065a ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು|

06040065c ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಽಸಿ ಮೇ||

ನನ್ನಲ್ಲಿ ಮನಸ್ಸನ್ನಿಡು. ನನ್ನ ಭಕ್ತನಾಗು. ನನ್ನನ್ನು ಯಾಜಿಸು. ನನ್ನನ್ನು ನಮಸ್ಕರಿಸು. ನನ್ನನ್ನೇ ಸೇರುವೆ. ಸತ್ಯವಾಗಿ ಪ್ರತಿಜ್ಞೆ ಮಾಡುತ್ತಿದ್ದೇನೆ. ನೀನು ನನಗೆ ಪ್ರಿಯನಾಗಿರುವೆ.

06040066a ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ|

06040066c ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ||

ಸರ್ವ ಧರ್ಮಗಳನ್ನೂ ಪರಿತ್ಯಜಿಸಿ ನನ್ನನ್ನೊಬ್ಬನನ್ನೇ ಶರಣು ಹೊಗು. ನಾನು ನಿನ್ನನ್ನು ಸರ್ವಪಾಪಗಳಿಂದಲೂ ಬಿಡುಗಡೆಗೊಳಿಸುತ್ತೇನೆ. ಶೋಕಿಸಬೇಡ.

06040067a ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾ ಚನ|

06040067c ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋಽಭ್ಯಸೂಯತಿ||

ನಿನಗೆ ಹೇಳಿದ ಇದನ್ನು ತಪಸ್ಸನ್ನಾಚರಿಸಿರದ, ಭಕ್ತನಾಗಿರದ, ಶುಶ್ರೂಷವನ್ನು ಮಾಡಿರದ, ನನ್ನನ್ನು ಅಸೂಯೆಪಡುವವನಿಗೆ ಎಂದೂ ಹೇಳಬಾರದು.

06040068a ಯ ಇದಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ|

06040068c ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ||

ಯಾರು ಈ ಪರಮ ಗುಹ್ಯವಾದುದನ್ನು ನನ್ನ ಭಕ್ತರಿಗೆ ತಲುಪಿಸುತ್ತಾರೋ ಅವರು ನನ್ನಲ್ಲಿ ಪರಮ ಭಕ್ತಿಯನ್ನು ಮಾಡಿ ನನ್ನನ್ನೇ ಸೇರುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

06040069a ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮಃ|

06040069c ಭವಿತಾ ನ ಚ ಮೇ ತಸ್ಮಾದನ್ಯಃ ಪ್ರಿಯತರೋ ಭುವಿ||

ಮತ್ತು ಮನುಷ್ಯರಲ್ಲಿ ಅವನಿಗಿಂತಲೂ ಹೆಚ್ಚು ನನಗೆ ಪ್ರಿಯವನ್ನು ಮಾಡುವವನು ಯಾರೂ ಇಲ್ಲ. ಅವನಿಗಿಂತಲೂ ನನಗೆ ಪ್ರಿಯನಾದವನು ಬೇರೆ ಯಾರೂ ಭೂಮಿಯ ಮೇಲೆ ಹುಟ್ಟುವುದೂ ಇಲ್ಲ.

06040070a ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ|

06040070c ಜ್ಞಾನಯಜ್ಞೇನ ತೇನಾಹಂ ಇಷ್ಟಃ ಸ್ಯಾಂ ಇತಿ ಮೇ ಮತಿಃ||

ಧರ್ಮಯುಕ್ತವಾದ ನಮ್ಮ ಈ ಸಂವಾದವನ್ನು ಯಾರು ಅಧ್ಯಯನ ಮಾಡುವನೋ ಅವನು ಜ್ಞಾನಯಜ್ಞದಿಂದ ನನ್ನನ್ನು ಇಷ್ಟಪಡಿಸುತ್ತಾನೆ ಎಂದು ನನ್ನ ಮತಿ.

06040071a ಶ್ರದ್ಧಾವಾನನಸೂಯಶ್ಚ ಶೃಣುಯಾದಪಿ ಯೋ ನರಃ|

06040071c ಸೋಽಪಿ ಮುಕ್ತಃ ಶುಭಾಽಲ್ಲೋಕಾನ್ಪ್ರಾಪ್ನುಯಾತ್ಪುಣ್ಯಕರ್ಮಣಾಂ||

ಶ್ರದ್ಧಾವಂತನೂ ಅಸೂಯೆಯಿಲ್ಲದವನೂ ಆಗಿ, ಯಾವ ನರನು ಇದನ್ನು ಕೇಳುತ್ತಾನೋ ಅವನು ಮುಕ್ತನಾಗಿ ಪುಣ್ಯಕರ್ಮಿಗಳ ಶುಭ ಲೋಕಗಳನ್ನು ಪಡೆಯುತ್ತಾನೆ.

06040072a ಕಚ್ಚಿದೇತಚ್ಚ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ|

06040072c ಕಚ್ಚಿದಜ್ಞಾನಸಮ್ಮೋಹಃ ಪ್ರನಷ್ಟಸ್ತೇ ಧನಂಜಯ||

ಪಾರ್ಥ! ಏಕಾಗ್ರ ಚಿತ್ತದಿಂದ ನೀನು ಇದನ್ನು ಕೇಳಿದೆ ತಾನೇ? ಧನಂಜಯ! ನಿನ್ನ ಅಜ್ಞಾನ ಸಮ್ಮೋಹಗಳು ಕಳೆದವು ತಾನೇ?”

06040073 ಅರ್ಜುನ ಉವಾಚ|

06040073a ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ|

06040073c ಸ್ಥಿತೋಽಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ||

ಅರ್ಜುನನು ಹೇಳಿದನು: “ಅಚ್ಯುತ! ಮೋಹವು ನಷ್ಟವಾಯಿತು. ನಿನ್ನ ಪ್ರಸಾದದಿಂದ ನನಗೆ ಸ್ಮೃತಿಯು ದೊರಕಿತು. ಸಂದೇಹಗಳು ಹೊರಟು ಹೋಗಿವೆ. ನೀನು ಹೇಳಿದಂತೆ ಮಾಡುತ್ತೇನೆ.””

06040074 ಸಂಜಯ ಉವಾಚ|

06040074a ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ|

06040074c ಸಂವಾದಮಿಮಮಶ್ರೌಷಮದ್ಭುತಂ ರೋಮಹರ್ಷಣಂ||

ಸಂಜಯನು ಹೇಳಿದನು: “ಹೀಗೆ ನಾನು ವಾಸುದೇವ ಮತ್ತು ಮಹಾತ್ಮ ಪಾರ್ಥರ ಈ ಅದ್ಭುತ, ರೋಮಹರ್ಷಣ ಸಂವಾದವನ್ನು ಕೇಳಿದೆನು.

06040075a ವ್ಯಾಸಪ್ರಸಾದಾಚ್ಚ್ರುತವಾನೇತದ್ಗುಹ್ಯಮಹಂ ಪರಂ|

06040075c ಯೋಗಂ ಯೋಗೇಶ್ವರಾತ್ಕೃಷ್ಣಾತ್ಸಾಕ್ಷಾತ್ಕಥಯತಃ ಸ್ವಯಂ||

ಈ ಗುಹ್ಯತಮ ಪರಮ ಯೋಗವನ್ನು ಯೋಗೇಶ್ವರ ಸ್ವಯಂ ಕೃಷ್ಣನೇ ಹೇಳುವುದನ್ನು ವ್ಯಾಸಪ್ರಸಾದದಿಂದ ಸಾಕ್ಷಾತ್ ಕೇಳಿದೆನು.

06040076a ರಾಜನ್ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮಮದ್ಭುತಂ|

06040076c ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ||

ರಾಜನ್! ಕೇಶವ-ಅರ್ಜುನರ ಈ ಅದ್ಭುತ ಪುಣ್ಯ ಸಂವಾದವನ್ನು ನೆನೆ ನೆನೆಸಿಕೊಂಡು ಮತ್ತೆ ಮತ್ತೆ ಹರ್ಷಗೊಳ್ಳುತ್ತಿದ್ದೇನೆ.

06040077a ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ ರೂಪಮತ್ಯದ್ಭುತಂ ಹರೇಃ|

06040077c ವಿಸ್ಮಯೋ ಮೇ ಮಹಾನ್ರಾಜನ್ ಹೃಷ್ಯಾಮಿ ಚ ಪುನಃ ಪುನಃ||

ಮತ್ತು ಆ ಹರಿಯ ಅತ್ಯದ್ಭುತ ರೂಪವನ್ನು ನೆನೆ ನೆನೆದುಕೊಂಡು ನನಗೆ ಮಹಾವಿಸ್ಮಯವಾಗುತ್ತಿದೆ. ರಾಜನ್! ಪುನಃ ಪುನಃ ಹರ್ಷಗೊಳ್ಳುತ್ತಿದ್ದೇನೆ.

06040078a ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ|

06040078c ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ||

ಎಲ್ಲಿ ಯೋಗೇಶ್ವರ ಕೃಷ್ಣನಿರುವನೋ ಎಲ್ಲಿ ಧನುರ್ಧರ ಪಾರ್ಥನಿರುವನೋ ಅಲ್ಲಿ ಶ್ರೀ, ವಿಜಯ, ಭೂತಿ ಮತ್ತು ಧ್ರುವವಾದ ನೀತಿಗಳಿರುವವು ಎಂದು ನನ್ನ ಮತ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಮೋಕ್ಷಸಂನ್ಯಾಸಯೋಗೋ ನಾಮ ಅಷ್ಠಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಮೋಕ್ಷಸಂನ್ಯಾಸಯೋಗವೆಂಬ ಹದಿನೆಂಟನೇ ಅಧ್ಯಾಯವು.

ಭೀಷ್ಮ ಪರ್ವಣಿ ಚತ್ವಾರಿಂಶೋಽಧ್ಯಾಯಃ||

ಭೀಷ್ಮ ಪರ್ವದಲ್ಲಿ ನಲ್ವತ್ತನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಶ್ರೀಮದ್ಭಗವದ್ಗೀತಾಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಶ್ರೀಮದ್ಭಗವದ್ಗೀತಾಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೫/೧೮, ಉಪಪರ್ವಗಳು-೬೩/೧೦೦, ಅಧ್ಯಾಯಗಳು-೯೦೦/೧೯೯೫, ಶ್ಲೋಕಗಳು-೨೯೨೩೩/೭೩೭೮೪

Image result for flowers against white background

Comments are closed.