Bhishma Parva: Chapter 4

ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ

ವ್ಯಾಸ-ಧೃತರಾಷ್ಟ್ರರ ಸಂವಾದ (೧-೧೪). ಸಂಗ್ರಾಮದಲ್ಲಿ ವಿಜಯಿಗಳಾಗುವವರ ಲಕ್ಷಣಗಳೇನು ಎಂಬ ಧೃತರಾಷ್ಟ್ರನ ಪ್ರಶ್ನೆಗೆ ವ್ಯಾಸನು ಉತ್ತರಿಸಿದುದು (೧೫-೩೫).

06004001 ವೈಶಂಪಾಯನ ಉವಾಚ|

06004001a ಏವಮುಕ್ತೋ ಮುನಿಸ್ತತ್ತ್ವಂ ಕವೀಂದ್ರೋ ರಾಜಸತ್ತಮ|

06004001c ಪುತ್ರೇಣ ಧೃತರಾಷ್ಟ್ರೇಣ ಧ್ಯಾನಮನ್ವಗಮತ್ಪರಂ||

ವೈಶಂಪಾಯನನು ಹೇಳಿದನು:  “ರಾಜಸತ್ತಮ! ಪುತ್ರ ಧೃತರಾಷ್ಟ್ರನು ಹೀಗೆ ಹೇಳಲು ಆ ಕವೀಂದ್ರ ಮುನಿಯು ಪರಮ ಧ್ಯಾನನಿರತನಾದನು.

06004002a ಪುನರೇವಾಬ್ರವೀದ್ವಾಕ್ಯಂ ಕಾಲವಾದೀ ಮಹಾತಪಾಃ|

06004002c ಅಸಂಶಯಂ ಪಾರ್ಥಿವೇಂದ್ರ ಕಾಲಃ ಸಂಕ್ಷಿಪತೇ ಜಗತ್||

ಆ ಕಾಲವಾದೀ ಮಹಾತಪಸ್ವಿಯು ಪುನಃ ಈ ಮಾತುಗಳನ್ನಾಡಿದನು: “ಪಾರ್ಥಿವೇಂದ್ರ! ಕಾಲವು ಜಗತ್ತನ್ನು ಸಂಕ್ಷಿಪ್ತಗೊಳಿಸುತ್ತದೆ ಎನ್ನುವುದು ನಿಸ್ಸಂಶಯ.

06004003a ಸೃಜತೇ ಚ ಪುನರ್ಲೋಕಾನ್ನೇಹ ವಿದ್ಯತಿ ಶಾಶ್ವತಂ|

06004003c ಜ್ಞಾತೀನಾಂ ಚ ಕುರೂಣಾಂ ಚ ಸಂಬಂಧಿಸುಹೃದಾಂ ತಥಾ||

06004004a ಧರ್ಮ್ಯಂ ದೇಶಯ ಪಂಥಾನಂ ಸಮರ್ಥೋ ಹ್ಯಸಿ ವಾರಣೇ|

06004004c ಕ್ಷುದ್ರಂ ಜ್ಞಾತಿವಧಂ ಪ್ರಾಹುರ್ಮಾ ಕುರುಷ್ವ ಮಮಾಪ್ರಿಯಂ||

ಅದೇ ಪುನಃ ಲೋಕಗಳನ್ನು ಸೃಷ್ಟಿಸುತ್ತದೆ. ಇಲ್ಲಿ ಯಾವುದೂ ಶಾಶ್ವತವಲ್ಲವೆಂದು ತಿಳಿ. ಆದುದರಿಂದ ನಿನ್ನ ದಾಯಾದಿಗಳಿಗೆ, ಕುರುಗಳಿಗೆ, ಸಂಬಂಧಿಗಳಿಗೆ ಮತ್ತು ಸ್ನೇಹಿತರಿಗೆ ಧರ್ಮದ ದಾರಿಯನ್ನು ತೋರಿಸಿ ಇದನ್ನು ತಡೆಯಲು ನೀನು ಸಮರ್ಥನಿದ್ದೀಯೆ. ಜ್ಞಾತಿವಧೆಯು ಪಾಪವೆಂದು ಹೇಳುತ್ತಾರೆ. ನನಗೆ ಅಪ್ರಿಯವಾಗುವ ಹಾಗೆ ಮಾಡಬೇಡ.

06004005a ಕಾಲೋಽಯಂ ಪುತ್ರರೂಪೇಣ ತವ ಜಾತೋ ವಿಶಾಂ ಪತೇ|

06004005c ನ ವಧಃ ಪೂಜ್ಯತೇ ವೇದೇ ಹಿತಂ ನೈತತ್ಕಥಂ ಚನ||

ವಿಶಾಂಪತೇ! ಕಾಲನೇ ನಿನ್ನ ಈ ಪುತ್ರರೂಪದಲ್ಲಿ ಜನಿಸಿದ್ದಾನೆ. ವೇದಗಳಲ್ಲಿ ವಧೆಯ ಪೂಜನೆಯಿಲ್ಲ. ಇದು ಎಂದೂ ಹಿತವಾದುದಲ್ಲ.

06004006a ಹನ್ಯಾತ್ಸ ಸ ಏವ ಯೋ ಹನ್ಯಾತ್ಕುಲಧರ್ಮಂ ಸ್ವಕಾಂ ತನುಂ|

06004006c ಕಾಲೇನೋತ್ಪಥಗಂತಾಸಿ ಶಕ್ಯೇ ಸತಿ ಯಥಾಪಥಿ||

ಕುಲಧರ್ಮವನ್ನು ಕೊಲ್ಲುವವನು ತನ್ನ ದೇಹವನ್ನೇ ಕೊಂದುಕೊಂಡಂತೆ. ಒಳ್ಳೆಯ ದಾರಿಯಲ್ಲಿ ಹೋಗಲು ಶಕ್ಯನಾದರೂ ಕಾಲವು ನಡೆಸಿದಂತೆ ನಡೆಯುತ್ತಿರುವೆ.

06004007a ಕುಲಸ್ಯಾಸ್ಯ ವಿನಾಶಾಯ ತಥೈವ ಚ ಮಹೀಕ್ಷಿತಾಂ|

06004007c ಅನರ್ಥೋ ರಾಜ್ಯರೂಪೇಣ ತ್ಯಜ್ಯತಾಮಸುಖಾವಹಃ||

ಈ ಕುಲದ ಮತ್ತು ಹಾಗೆಯೇ ಮಹೀಕ್ಷಿತರ ವಿನಾಶಕ್ಕೆ ರಾಜ್ಯದ ರೂಪದಲ್ಲಿ ಅನರ್ಥವು ಆಗಮಿಸಿದೆ. ಅಸುಖವನ್ನುಂಟುಮಾಡುವುದನ್ನು ತ್ಯಜಿಸಬೇಕು.

06004008a ಲುಪ್ತಪ್ರಜ್ಞಃ ಪರೇಣಾಸಿ ಧರ್ಮಂ ದರ್ಶಯ ವೈ ಸುತಾನ್|

06004008c ಕಿಂ ತೇ ರಾಜ್ಯೇನ ದುರ್ಧರ್ಷ ಯೇನ ಪ್ರಾಪ್ತೋಽಸಿ ಕಿಲ್ಬಿಷಂ||

ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವೆ. ನಿನ್ನ ಸುತರಿಗೆ ಪರಮ ಧರ್ಮವನ್ನು ತೋರಿಸಿಕೊಡು. ದುರ್ಧರ್ಷ! ಯಾವುದರಿಂದ ಪಾಪವನ್ನು ಪಡೆಯುವೆಯೋ ಆ ರಾಜ್ಯದಿಂದ ನಿನಗೇನು?

06004009a ಯಶೋ ಧರ್ಮಂ ಚ ಕೀರ್ತಿಂ ಚ ಪಾಲಯನ್ಸ್ವರ್ಗಮಾಪ್ಸ್ಯಸಿ|

06004009c ಲಭಂತಾಂ ಪಾಂಡವಾ ರಾಜ್ಯಂ ಶಮಂ ಗಚ್ಛಂತು ಕೌರವಾಃ||

ಧರ್ಮ ಮತ್ತು ಕೀರ್ತಿಗಳನ್ನು ಪಾಲಿಸಿ ಯಶಸ್ಸು ಸ್ವರ್ಗಗಳನ್ನು ಪಡೆಯುತ್ತೀಯೆ. ಪಾಂಡವರಿಗೆ ರಾಜ್ಯವು ದೊರೆಯಲಿ. ಕೌರವರು ಶಾಂತಿಯಲ್ಲಿ ನಡೆದುಕೊಳ್ಳಲಿ.”

06004010a ಏವಂ ಬ್ರುವತಿ ವಿಪ್ರೇಂದ್ರೇ ಧೃತರಾಷ್ಟ್ರೋಽಂಬಿಕಾಸುತಃ|

06004010c ಆಕ್ಷಿಪ್ಯ ವಾಕ್ಯಂ ವಾಕ್ಯಜ್ಞೋ ವಾಕ್ಪಥೇನಾಪ್ಯಯಾತ್ ಪುನಃ||

ವಿಪ್ರೇಂದ್ರನು ಹೀಗೆ ಹೇಳುತ್ತಿರಲು ಅಂಬಿಕಾಸುತ ವಾಕ್ಯಜ್ಞ ಧೃತರಾಷ್ಟ್ರನು ಮಧ್ಯದಲ್ಲಿಯೇ ಬಾಯಿಹಾಕಿ ದುಃಖದಿಂದ ವಾಕ್ಪತಿಗೆ ಪುನಃ ಹೇಳಿದನು:

06004011 ಧೃತರಾಷ್ಟ್ರ ಉವಾಚ|

06004011a ಯಥಾ ಭವಾನ್ವೇದ ತಥಾಸ್ಮಿ ವೇತ್ತಾ

         ಭಾವಾಭಾವೌ ವಿದಿತೌ ಮೇ ಯಥಾವತ್|

06004011c ಸ್ವಾರ್ಥೇ ಹಿ ಸಮ್ಮುಹ್ಯತಿ ತಾತ ಲೋಕೋ

         ಮಾಂ ಚಾಪಿ ಲೋಕಾತ್ಮಕಮೇವ ವಿದ್ಧಿ||

ಧೃತರಾಷ್ಟ್ರನು ಹೇಳಿದನು: “ಭಾವಾಭಾವಗಳೆರಡೂ ನಿನಗೆಷ್ಟು ತಿಳಿದಿದೆಯೋ ಅಷ್ಟು ನನಗೂ ಯಥಾವತ್ತಾಗಿ ತಿಳಿದಿದೆ. ಅಪ್ಪಾ! ಲೋಕದಲ್ಲಿ ಸ್ವಾರ್ಥವು ಸಮ್ಮೋಹನಗೊಳಿಸುತ್ತದೆ. ನಾನೂ ಕೂಡ ಲೋಕಾತ್ಮಕನಂತೆ ಎಂದು ತಿಳಿ[1].

06004012a ಪ್ರಸಾದಯೇ ತ್ವಾಮತುಲಪ್ರಭಾವಂ

         ತ್ವಂ ನೋ ಗತಿರ್ದರ್ಶಯಿತಾ ಚ ಧೀರಃ|

06004012c ನ ಚಾಪಿ ತೇ ವಶಗಾ ಮೇ ಮಹರ್ಷೇ

         ನ ಕಲ್ಮಷಂ ಕರ್ತುಮಿಹಾರ್ಹಸೇ ಮಾಂ||

[2]ನಿನ್ನ ಅತುಲಪ್ರಭಾವವನ್ನು ಪ್ರಸಾದಿಸು. ನೀನೇ ನನಗೆ ಗತಿಯನ್ನು ತೋರಿಸುವ ಧೀರ. ಮಹರ್ಷೇ! ಅವರು ನನ್ನ ವಶದಲ್ಲಿಯೂ ಇಲ್ಲ. ಕೆಟ್ಟದ್ದನ್ನು ಮಾಡಲು ನನಗೆ ಮನಸ್ಸಿಲ್ಲ.

06004013a ತ್ವಂ ಹಿ ಧರ್ಮಃ ಪವಿತ್ರಂ ಚ ಯಶಃ ಕೀರ್ತಿರ್ಧೃತಿಃ ಸ್ಮೃತಿಃ|

06004013c ಕುರೂಣಾಂ ಪಾಂಡವಾನಾಂ ಚ ಮಾನ್ಯಶ್ಚಾಸಿ ಪಿತಾಮಹಃ||

ನೀನೇ ಧರ್ಮ, ಪವಿತ್ರ, ಕೀರ್ತಿ ಮತ್ತು ಧೃತಿ-ಸ್ಮೃತಿ. ನೀನು ಕುರುಗಳ ಮತ್ತು ಪಾಂಡವರ ಪಿತಾಮಹನೂ ಕೂಡ.”

06004014 ವ್ಯಾಸ ಉವಾಚ|

06004014a ವೈಚಿತ್ರವೀರ್ಯ ನೃಪತೇ ಯತ್ತೇ ಮನಸಿ ವರ್ತತೇ|

06004014c ಅಭಿಧತ್ಸ್ವ ಯಥಾಕಾಮಂ ಚೇತ್ತಾಸ್ಮಿ ತವ ಸಂಶಯಂ||

ವ್ಯಾಸನು ಹೇಳಿದನು: “ವೈಚಿತ್ರವೀರ್ಯ! ನೃಪತೇ! ನಿನ್ನ ಮನಸ್ಸಿನಲ್ಲಿ ಏನು ನಡೆಯುತ್ತಿದೆಯೋ ಅದನ್ನು ಇಷ್ಟವಿದ್ದಷ್ಟು ಹೇಳು. ನಿನ್ನ ಸಂಶಯವನ್ನು ಹೋಗಲಾಡಿಸುತ್ತೇನೆ.”

06004015 ಧೃತರಾಷ್ಟ್ರ ಉವಾಚ|

06004015a ಯಾನಿ ಲಿಂಗಾನಿ ಸಂಗ್ರಾಮೇ ಭವಂತಿ ವಿಜಯಿಷ್ಯತಾಂ|

06004015c ತಾನಿ ಸರ್ವಾಣಿ ಭಗವನ್ ಶ್ರೋತುಮಿಚ್ಛಾಮಿ ತತ್ತ್ವತಃ||

ಧೃತರಾಷ್ಟ್ರನು ಹೇಳಿದನು: “ಭಗವನ್! ಸಂಗ್ರಾಮದಲ್ಲಿ ವಿಜಯಿಗಳಾಗುವವರಲ್ಲಿರುವ ಲಕ್ಷಣಗಳೆಲ್ಲವನ್ನೂ ತತ್ವತಃ ತಿಳಿಯ ಬಯಸುತ್ತೇನೆ.”

06004016 ವ್ಯಾಸ ಉವಾಚ|

06004016a ಪ್ರಸನ್ನಭಾಃ ಪಾವಕ ಊರ್ಧ್ವರಶ್ಮಿಃ

         ಪ್ರದಕ್ಷಿಣಾವರ್ತಶಿಖೋ ವಿಧೂಮಃ|

06004016c ಪುಣ್ಯಾ ಗಂಧಾಶ್ಚಾಹುತೀನಾಂ ಪ್ರವಾಂತಿ

         ಜಯಸ್ಯೈತದ್ಭಾವಿನೋ ರೂಪಮಾಹುಃ||

ವ್ಯಾಸನು ಹೇಳಿದನು: “ಅವರ ಅಗ್ನಿಯು ಪ್ರಸನ್ನ ಪ್ರಭೆಯನ್ನು ಹೊಂದಿರುವನು. ಜ್ವಾಲೆಗಳು ಊರ್ಧ್ವಮುಖವಾಗಿರುತ್ತವೆ. ಜ್ವಾಲೆಗಳು ಬಲಬದಿಗೆ ವಾಲಿರುತ್ತವೆ. ಧೂಮವಿರುವುದಿಲ್ಲ. ಅದರಲ್ಲಿ ಹಾಕಿದ ಆಹುತಿಗಳು ಪುಣ್ಯ ಗಂಧವನ್ನು ಸೂಸುತ್ತವೆ. ಇವುಗಳು ಮುಂದಾಗುವ ಜಯವನ್ನು ಸೂಚಿಸುತ್ತವೆ ಎಂದು ಹೇಳುತ್ತಾರೆ.

06004017a ಗಂಭೀರಘೋಷಾಶ್ಚ ಮಹಾಸ್ವನಾಶ್ಚ

         ಶಂಖಾ ಮೃದಂಗಾಶ್ಚ ನದಂತಿ ಯತ್ರ|

06004017c ವಿಶುದ್ಧರಶ್ಮಿಸ್ತಪನಃ ಶಶೀ ಚ

         ಜಯಸ್ಯೈತದ್ಭಾವಿನೋ ರೂಪಮಾಹುಃ||

ಅಲ್ಲಿ ಶಂಖ ಮೃದಂಗಗಳು ಗಂಭೀರ ಘೋಷಗಳನ್ನೂ ಮಹಾಸ್ವನಗಳನ್ನು ನುಡಿಸುತ್ತವೆ. ಸೂರ್ಯ-ಚಂದ್ರರು ಅತೀ ಶುದ್ಧ ಬೆಳಕನ್ನು ನೀಡುತ್ತವೆ. ಇವುಗಳು ಮುಂದಾಗುವ ಜಯವನ್ನು ಸೂಚಿಸುತ್ತವೆ ಎಂದು ಹೇಳುತ್ತಾರೆ.

06004018a ಇಷ್ಟಾ ವಾಚಃ ಪೃಷ್ಠತೋ ವಾಯಸಾನಾಂ

         ಸಂಪ್ರಸ್ಥಿತಾನಾಂ ಚ ಗಮಿಷ್ಯತಾಂ ಚ|

06004018c ಯೇ ಪೃಷ್ಠತಸ್ತೇ ತ್ವರಯಂತಿ ರಾಜನ್

         ಯೇ ತ್ವಗ್ರತಸ್ತೇ ಪ್ರತಿಷೇಧಯಂತಿ||

ಹೊರಟಿರುವಾಗ ಎದುರಿನಿಂದ ಕಾಗೆಗಳ ವಿಕಾರವಲ್ಲದ ಧ್ವನಿಯು ಕೇಳಿಸಿದರೆ ಅದು ಕಾರ್ಯಸಿದ್ಧಿಯನ್ನು ಸೂಚಿಸುತ್ತದೆ. ರಾಜನ್! ಅವು ಹಿಂದಿನಿಂದ ಧ್ವನಿಮಾಡಿದರೆ “ಬೇಗ ಹೋಗು! ಕೆಲಸವಾಗುತ್ತದೆ!” ಎಂದೂ ಮುಂದೆ ಬಂದು ಕೂಗಿದರೆ “ನೀನಿಂದು ಹೊರಟ ಕಾರ್ಯವು ಆಗುವುದಿಲ್ಲ! ಹಿಂದಿರುಗುವುದು ಒಳ್ಳೆಯದು!” ಎಂದೂ ಸೂಚಿಸುತ್ತದೆ.

06004019a ಕಲ್ಯಾಣವಾಚಃ ಶಕುನಾ ರಾಜಹಂಸಾಃ

         ಶುಕಾಃ ಕ್ರೌಂಚಾಃ ಶತಪತ್ರಾಶ್ಚ ಯತ್ರ|

06004019c ಪ್ರದಕ್ಷಿಣಾಶ್ಚೈವ ಭವಂತಿ ಸಂಖ್ಯೇ

         ಧ್ರುವಂ ಜಯಂ ತತ್ರ ವದಂತಿ ವಿಪ್ರಾಃ||

ಎಲ್ಲಿ ಪಕ್ಷಿಗಳು, ರಾಜಹಂಸಗಳು, ಗಿಳಿಗಳು, ಕ್ರೌಂಚಗಳು, ಮತ್ತು ಮರಕುಟುಗಗಳು ಕಲ್ಯಾಣಧ್ವನಿಯಲ್ಲಿ ಕೂಗುತ್ತವೆಯೋ, ಗುಂಪುಗುಂಪಾಗಿ ಪ್ರದಕ್ಷಿಣಾಕಾರದಲ್ಲಿ ಹಾರುತ್ತವೆಯೋ ಅಲ್ಲಿ ಜಯವು ನಿಶ್ಚಿತವೆಂದು ವಿಪ್ರರು ಹೇಳುತ್ತಾರೆ.

06004020a ಅಲಂಕಾರೈಃ ಕವಚೈಃ ಕೇತುಭಿಶ್ಚ

         ಮುಖಪ್ರಸಾದೈರ್ಹೇಮವರ್ಣೈಶ್ಚ ನೄಣಾಂ|

06004020c ಭ್ರಾಜಿಷ್ಮತೀ ದುಷ್ಪ್ರತಿಪ್ರೇಕ್ಷಣೀಯಾ

         ಯೇಷಾಂ ಚಮೂಸ್ತೇ ವಿಜಯಂತಿ ಶತ್ರೂನ್||

ಯಾರ ಅಲಂಕಾರಗಳು, ಕವಚಗಳು ಮತ್ತು ಗುರಾಣಿಗಳು, ಸೈನಿಕರ ಮುಖಗಳು ಪ್ರಶಾಂತವಾಗಿ ಬಂಗಾರದ ಬಣ್ಣದಲ್ಲಿ ಹೊಳೆದು ಕಣ್ಣುಕುಕ್ಕಿ ಅವುಗಳನ್ನು ನೋಡಲೂ ಕಷ್ಟವಾಗಿರುತ್ತದೆಯೋ ಅವರ ಸೇನೆಯು ಶತ್ರುಗಳನ್ನು ಜಯಿಸುತ್ತದೆ.

06004021a ಹೃಷ್ಟಾ ವಾಚಸ್ತಥಾ ಸತ್ತ್ವಂ ಯೋಧಾನಾಂ ಯತ್ರ ಭಾರತ|

06004021c ನ ಮ್ಲಾಯಂತೇ ಸ್ರಜಶ್ಚೈವ ತೇ ತರಂತಿ ರಣೇ ರಿಪೂನ್||

ಭಾರತ! ಎಲ್ಲಿ ಯೋಧರ ಸಂತೋಷದ ಕೂಗು, ಸತ್ವ ಮತ್ತು ಮಾಲೆಗಳು ಮಾಸುವುದಿಲ್ಲವೋ ಅವರು ರಣದಲ್ಲಿ ರಿಪುಗಳನ್ನು ಗೆಲ್ಲುತ್ತಾರೆ.

06004022a ಇಷ್ಟೋ ವಾತಃ ಪ್ರವಿಷ್ಟಸ್ಯ ದಕ್ಷಿಣಾ ಪ್ರವಿವಿಕ್ಷತಃ|

06004022c ಪಶ್ಚಾತ್ಸಂಸಾಧಯತ್ಯರ್ಥಂ ಪುರಸ್ತಾತ್ಪ್ರತಿಷೇಧತೇ||

ಯುದ್ಧರಂಗವನ್ನು ಪ್ರವೇಶಿಸುವವನಿಗೆ ಇಷ್ಟವಾದ ಗಾಳಿಬೀಸಿದರೆ, ಯುದ್ಧಕ್ಕೆ ಹೊರಡುವವನಿಗೆ ಹಣವನ್ನಿತ್ತರೆ, ಮೊದಲೇ ಯುದ್ಧವನ್ನು ಪ್ರತಿಷೇದಿಸಿದರೆ ಅಂಥವರು ಯುದ್ಧದ ಪ್ರಯೋಜನವನ್ನು ಮೊದಲೇ ಕಂಡುಕೊಳ್ಳುತ್ತಾರೆ[3].

06004023a ಶಬ್ದರೂಪರಸಸ್ಪರ್ಶಗಂಧಾಶ್ಚಾವಿಷ್ಕೃತಾಃ ಶುಭಾಃ|

06004023c ಸದಾ ಯೋಧಾಶ್ಚ ಹೃಷ್ಟಾಶ್ಚ ಯೇಷಾಂ ತೇಷಾಂ ಧ್ರುವಂ ಜಯಃ||

ಶಬ್ಧ, ರೂಪ, ರಸ, ಸ್ಪರ್ಶ ಮತ್ತು ಗಂಧಗಳು ಎಲ್ಲಿ ಬದಲಾಗದೇ ಶುಭವಾಗಿರುವವೋ, ಎಲ್ಲಿ ಯೋಧರು ಸದಾ ಹೃಷ್ಟರಾಗಿರುವರೋ ಅವರ ಜಯವು ನಿಶ್ಚಯಿಸಿದ್ದು.

06004024a ಅನ್ವೇವ ವಾಯವೋ ವಾಂತಿ ತಥಾಭ್ರಾಣಿ ವಯಾಂಸಿ ಚ|

06004024c ಅನುಪ್ಲವಂತೇ ಮೇಘಾಶ್ಚ ತಥೈವೇಂದ್ರಧನೂಂಷಿ ಚ||

06004025a ಏತಾನಿ ಜಯಮಾನಾನಾಂ ಲಕ್ಷಣಾನಿ ವಿಶಾಂ ಪತೇ|

06004025c ಭವಂತಿ ವಿಪರೀತಾನಿ ಮುಮೂರ್ಷೂಣಾಂ ಜನಾಧಿಪ||

ಗಾಳಿ, ಮೋಡ, ಪಕ್ಷಿಗಳು ಅವರ ಹಿಂದಿನಿಂದ ಬರುತ್ತವೆ. ಮೋಡದಲ್ಲಿ ಕಾಮನ ಬಿಲ್ಲುಗಳು ಅವರನ್ನು ಅನುಸರಿಸುತ್ತವೆ. ವಿಶಾಂಪತೇ! ಇವು ಜಯಹೊಂದುವವರ ಲಕ್ಷಣಗಳು. ಜನಾಧಿಪ! ಆದರೆ ಬೇಗನೆ ಸಾಯುವವರಲ್ಲಿ ಈ ಚಿಹ್ನೆಗಳು ವಿರುದ್ಧವಾಗಿರುತ್ತವೆ.

06004026a ಅಲ್ಪಾಯಾಂ ವಾ ಮಹತ್ಯಾಂ ವಾ ಸೇನಾಯಾಂ ಇತಿ ನಿಶ್ಚಿತಂ|

06004026c ಹರ್ಷೋ ಯೋಧಗಣಸ್ಯೈಕಂ ಜಯಲಕ್ಷಣಮುಚ್ಯತೇ||

ಸೇನೆಯು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ಯೋಧಗಣಗಳ ಹರ್ಷವೊಂದೇ ಜಯದ ಲಕ್ಷಣವೆನಿಸಿಕೊಳ್ಳುತ್ತದೆ.

06004027a ಏಕೋ ದೀರ್ಣೋ ದಾರಯತಿ ಸೇನಾಂ ಸುಮಹತೀಮಪಿ|

06004027c ತಂ ದೀರ್ಣಮನುದೀರ್ಯಂತೇ ಯೋಧಾಃ ಶೂರತಮಾ ಅಪಿ||

ಓರ್ವನೇ ಸೈನಿಕನು ಭಯಪಟ್ಟು ಓಡಿಹೋಗುವಾಗ ಅತಿ ದೊಡ್ಡ ಸೇನೆಯನ್ನೂ ಒಡೆಯಬಲ್ಲ. ಭಯಗೊಂಡ ಅವನು ಶೂರಯೋಧರನ್ನೂ ಕೂಡ ಹೆದರಿಸಬಲ್ಲನು.

06004028a ದುರ್ನಿವಾರತಮಾ ಚೈವ ಪ್ರಭಗ್ನಾ ಮಹತೀ ಚಮೂಃ|

06004028c ಅಪಾಮಿವ ಮಹಾವೇಗಸ್ತ್ರಸ್ತಾ ಮೃಗಗಣಾ ಇವ||

ಒಡೆದು ಚದುರಿಹೋದ ಮಹಾ ಸೇನೆಯನ್ನು, ಓಡಿ ಹೋದ ಮೃಗಗಣಗಳಂತೆ ಅಥವಾ ಮಹಾವೇಗದಿಂದ ಹರಿಯುವ ನೀರಿನಂತೆ, ಪುನಃ ಒಟ್ಟುಗೂಡಿಸುವುದು ಬಹಳ ಕಷ್ಟ.

06004029a ನೈವ ಶಕ್ಯಾ ಸಮಾಧಾತುಂ ಸಮ್ನಿಪಾತೇ ಮಹಾಚಮೂಃ|

06004029c ದೀರ್ಣಾ ಇತ್ಯೇವ ದೀರ್ಯಂತೇ ಯೋಧಾಃ ಶೂರತಮಾ ಅಪಿ|

06004029e ಭೀತಾನ್ಭಗ್ನಾಂಶ್ಚ ಸಂಪ್ರೇಕ್ಷ್ಯ ಭಯಂ ಭೂಯೋ ವಿವರ್ಧತೇ||

ಎಲ್ಲಕಡೆಯಿಂದಲೂ ಬಿದ್ದ ಮಹಾಸೇನೆಯನ್ನು ಸಮಾಧಾನಪಡಿಸುವುದು ಸಾಧ್ಯವಿಲ್ಲ. ಭಯಪಟ್ಟುಕೊಂಡವರು ಶೂರ ಯೋಧರನ್ನು ಕೂಡ ಹೆದರಿಸುತ್ತಾರೆ. ಭೀತರಾದವರನ್ನು, ಭಗ್ನರಾದವರನ್ನು ನೋಡಿ ಭಯವು ಇನ್ನೂ ಹೆಚ್ಚಾಗುತ್ತದೆ.

06004030a ಪ್ರಭಗ್ನಾ ಸಹಸಾ ರಾಜನ್ದಿಶೋ ವಿಭ್ರಾಮಿತಾ ಪರೈಃ|

06004030c ನೈವ ಸ್ಥಾಪಯಿತುಂ ಶಕ್ಯಾ ಶೂರೈರಪಿ ಮಹಾಚಮೂಃ||

06004031a ಸಂಭೃತ್ಯ ಮಹತೀಂ ಸೇನಾಂ ಚತುರಂಗಾಂ ಮಹೀಪತಿಃ|

ರಾಜನ್! ಶತ್ರುಗಳಿಂದ ಒಡೆಯಲ್ಪಟ್ಟು ದಿಕ್ಕುಗಳಿಗೆ ಚದುರಿಹೋದ ಮಹಾಸೇನೆಯನ್ನು ಮಹಾಸೇನೆಯ ಚತುರಂಗ ಬಲಗಳ ಮಹೀಪತಿಯು ಶೂರನಾಗಿದ್ದರೂ ಪುನಃ ಸ್ಥಾಪಿಸಲು ಶಕ್ಯವಿರುವುದಿಲ್ಲ.

06004031c ಉಪಾಯಪೂರ್ವಂ ಮೇಧಾವೀ ಯತೇತ ಸತತೋತ್ಥಿತಃ||

06004032a ಉಪಾಯವಿಜಯಂ ಶ್ರೇಷ್ಠಮಾಹುರ್ಭೇದೇನ ಮಧ್ಯಮಂ|

ಮೊದಲೇ ಸತತ ಪ್ರಯತ್ನಮಾಡಿ, ಪರಸ್ಪರರ ಒಪ್ಪಂದ ಮಾಡಿಕೊಂಡು ಗಳಿಸಿದ ವಿಜಯವನ್ನು ಶ್ರೇಷ್ಠವಾದದೆಂದೂ, ಶತ್ರುಗಳಲ್ಲಿ ಭೇದದ ಉಪಾಯದಿಂದ ಗಳಿಸಿದ ವಿಜಯವು ಮಧ್ಯಮವಾದುದೆಂದೂ ಹೇಳುತ್ತಾರೆ.

06004032c ಜಘನ್ಯ ಏಷ ವಿಜಯೋ ಯೋ ಯುದ್ಧೇನ ವಿಶಾಂ ಪತೇ||

06004032e ಮಹಾದೋಷಃ ಸಂನ್ನಿಪಾತಸ್ತತೋ ವ್ಯಂಗಃ ಸ ಉಚ್ಯತೇ||

ವಿಶಾಂಪತೇ! ಯುದ್ಧದಲ್ಲಿ ಕೊಂದು ಗಳಿಸಿದ ವಿಜಯವನ್ನು, ಹೊಡಿದುರಿಳಿಸಿದ ಮಹಾದೋಷವಿರುವುದರಿಂದ ವ್ಯಂಗ್ಯವಾದುದೆಂದು ಹೇಳುತ್ತಾರೆ.

06004033a ಪರಸ್ಪರಜ್ಞಾಃ ಸಂಹೃಷ್ಟಾ ವ್ಯವಧೂತಾಃ ಸುನಿಶ್ಚಿತಾಃ|

06004033c ಪಂಚಾಶದಪಿ ಯೇ ಶೂರಾ ಮಥ್ನಂತಿ ಮಹತೀಂ ಚಮೂಂ|

06004033e ಅಥ ವಾ ಪಂಚ ಷಟ್ಸಪ್ತ ವಿಜಯಂತ್ಯನಿವರ್ತಿನಃ||

ಪರಸ್ಪರರನ್ನು ಚೆನ್ನಾಗಿ ತಿಳಿದುಕೊಂಡಿರುವ, ಪರಸ್ಪರರೊಂದಿಗೆ ಸಂತೋಷದಿಂದಿರುವ, ಅವಧೂತರಾಗಿರುವ, ಸುನಿಶ್ಚಿತರಾಗಿರುವ ಐವತ್ತು ಶೂರರಾದರೂ ಮಹಾ ಸೇನೆಯನ್ನು ಮಥಿಸಬಲ್ಲರು. ಐವರು ಅಥವಾ ಆರು ಅಥವಾ ಏಳು ಮಂದಿಯಾದರೂ ವಿಜಯವನ್ನು ಹಿಂದಿರುಗಿಸಬಲ್ಲರು.

06004034a ನ ವೈನತೇಯೋ ಗರುಡಃ ಪ್ರಶಂಸತಿ ಮಹಾಜನಂ|

06004034c ದೃಷ್ಟ್ವಾ ಸುಪರ್ಣೋಪಚಿತಿಂ ಮಹತೀಮಪಿ ಭಾರತ||

ಭಾರತ! ವೈನತೇಯ ಗರುಡನು ಪಕ್ಷಿಗಳ ಮಹಾಗುಂಪೇ ಬಂದರೂ ಇನ್ನೊಬ್ಬರ ಸಹಾಯವನ್ನು ಕೇಳುವುದಿಲ್ಲ.

06004035a ನ ಬಾಹುಲ್ಯೇನ ಸೇನಾಯಾ ಜಯೋ ಭವತಿ ಭಾರತ|

06004035c ಅಧ್ರುವೋ ಹಿ ಜಯೋ ನಾಮ ದೈವಂ ಚಾತ್ರ ಪರಾಯಣಂ|

06004035e ಜಯಂತೋ ಹ್ಯಪಿ ಸಂಗ್ರಾಮೇ ಕ್ಷಯವಂತೋ ಭವಂತ್ಯುತ||

ಭಾರತ! ಸೇನೆಯು ದೊಡ್ಡದಾಗಿದೆಯೆಂದು ಜಯವಾಗುವುದಿಲ್ಲ. ದೈವದ ಮೇಲೆ ಅವಲಂಬಿಸಿರುವ ಜಯವು ನಿಶ್ಚಯವಾದುದಲ್ಲ. ಸಂಗ್ರಾಮದಲ್ಲಿ ಜಯವಾದವರಿಗೂ ಅತ್ಯಂತ ಕ್ಷಯವಾಗುತ್ತದೆ.””

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ನಿಮಿತ್ತಾಖ್ಯಾನೇ ಚತುರ್ಥೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ನಿಮಿತ್ತಾಖ್ಯಾನ ಎನ್ನುವ ನಾಲ್ಕನೇ ಅಧ್ಯಾಯವು.

Image result for indian motifs earth

[1]ಸ್ವಾರ್ಥದ ವಿಷಯದಲ್ಲಿ ಪ್ರಪಂಚವೇ ಮೋಹಗೊಳ್ಳುತ್ತದೆ. ಇನ್ನೊಬ್ಬರಿಗೆ ಹೇಳುವಾಗ ಸರಿಯಾಗಿ ಹೇಳಬಹುದು. ಆದರೆ ತಾವು ನಡೆಯುವಾಗ ಮೋಹಕ್ಕೆ ಗುರಿಯಾಗುತ್ತಾರೆ. ಸ್ವಾರ್ಥಕ್ಕೆ ಹೊರತಾದವನು ಈ ಪ್ರಪಂಚದಲ್ಲಿಯೇ ಯಾರೂ ಇರಲಾರನು. ನಾನೂ ಸಹ ಈ ಲೋಕದಲ್ಲಿದ್ದು ಸಂಸಾರದಿಂದ ಅಭಿನ್ನನಾಗಿದ್ದೇನೆ. ನಾನೂ ಸ್ವಾರ್ಥಕ್ಕೆ ಬಲಿಯಾಗಿದ್ದೇನೆ ಎಂದು ನೀನು ಮನಗಾಣಬೇಕು.

[2]ಇಷ್ಟು ಸ್ಪಷ್ಟವಾಗಿ ಇಷ್ಟು ದಿಟ್ಟತನದಿಂದ ಮಾತನಾಡಿದ ಧೃತರಾಷ್ಟ್ರನು ವ್ಯಾಸನ ವ್ಯಕ್ತಿತ್ವವನ್ನು ಸ್ಮರಿಸಿ ಮರುಕ್ಷಣದಲ್ಲಿಯೇ ವಿನಮ್ರತೆಯನ್ನು ಬೆರೆಸಿಕೊಂಡು ಮಾತನಾಡುತ್ತಾನೆ!

[3]ಈ ಶ್ಲೋಕಕ್ಕೆ ಅನೇಕ ಪಾಠಾಂತರಗಳಿವೆ: ಇಷ್ಟಾ ವಾಚಃ; ಇಷ್ಟೋ ವಾತಃ; ಇಷ್ಟೋ ವಾಮಃ; ಇಷ್ಟಾ ವಾಚಪ್ರವಿಷ್ಟಸ್ಯ; ಇಷ್ಟೋವಾಮಸ್ತ್ವರಿಷ್ಟಸ್ಯ; ಪ್ರಾಯೇಣ ವಾಯಸೋ ವಾಮೇ; ಪ್ರಯಾಣೇ ವಾಯಸೇ ವಾಮಾತ್| ದಕ್ಷಿಣಾಃ; ದಕ್ಷಿಣಃ; ದಕ್ಷಿಣಸ್ಯ; ದಕ್ಷಿಣೇ; ದಕ್ಷಿಣಾ ಪ್ರವಕ್ಷಿತಃ ಮೊದಲಾಗಿ...

Comments are closed.