Bhishma Parva: Chapter 3

ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ

ನಿಮಿತ್ತಗಳು

ಯುದ್ಧದಲ್ಲಿ ಮಹಾಕ್ಷಯವನ್ನು ಸೂಚಿಸುವ ನಿಮಿತ್ತಗಳ ಕುರಿತು ವ್ಯಾಸನು ಧೃತರಾಷ್ಟ್ರನಿಗೆ ಮುಂದುವರಿಸಿ ಹೇಳಿದುದು (೧-೪೬).

06003001 ವ್ಯಾಸ ಉವಾಚ|

06003001a ಖರಾ ಗೋಷು ಪ್ರಜಾಯಂತೇ ರಮಂತೇ ಮಾತೃಭಿಃ ಸುತಾಃ|

06003001c ಅನಾರ್ತವಂ ಪುಷ್ಪಫಲಂ ದರ್ಶಯಂತಿ ವನೇ ದ್ರುಮಾಃ||

ವ್ಯಾಸನು ಹೇಳಿದನು: “ಕತ್ತೆಗಳು ಗೋವುಗಳನ್ನು ಹುಟ್ಟಿಸುತ್ತಿವೆ. ಗಂಡು ಮಕ್ಕಳು ತಾಯಿಯರೊಂದಿಗೆ ರಮಿಸುತ್ತಿದ್ದಾರೆ. ವನದಲ್ಲಿ ಮರಗಳು ಅಕಾಲದಲ್ಲಿ ಹೂವು-ಹಣ್ಣುಗಳನ್ನು ಬಿಡುತ್ತಿವೆ.

06003002a ಗರ್ಭಿಣ್ಯೋ ರಾಜಪುತ್ರ್ಯಶ್ಚ ಜನಯಂತಿ ವಿಭೀಷಣಾನ್|

06003002c ಕ್ರವ್ಯಾದಾನ್ಪಕ್ಷಿಣಶ್ಚೈವ ಗೋಮಾಯೂನಪರಾನ್ಮೃಗಾನ್||

ಗರ್ಭಿಣಿ ರಾಜಪುತ್ರಿಯರು ವಿಭೀಷಣರಾದವರನ್ನು ಹುಟ್ಟಿಸುತ್ತಿದ್ದಾರೆ. ಮಾಂಸಭಕ್ಷಕ ಪ್ರಾಣಿಗಳು ಪಕ್ಷಿಗಳೊಂದಿಗೆ ಸೇರಿ ಮೃಗಗಳನ್ನು ಭಕ್ಷಿಸುತ್ತಿವೆ.

06003003a ತ್ರಿವಿಷಾಣಾಶ್ಚತುರ್ನೇತ್ರಾಃ ಪಂಚಪಾದಾ ದ್ವಿಮೇಹನಾಃ|

06003003c ದ್ವಿಶೀರ್ಷಾಶ್ಚ ದ್ವಿಪುಚ್ಛಾಶ್ಚ ದಂಷ್ಟ್ರಿಣಃ ಪಶವೋಽಶಿವಾಃ||

06003004a ಜಾಯಂತೇ ವಿವೃತಾಸ್ಯಾಶ್ಚ ವ್ಯಾಹರಂತೋಽಶಿವಾ ಗಿರಃ|

06003004c ತ್ರಿಪದಾಃ ಶಿಖಿನಸ್ತಾರ್ಕ್ಷ್ಯಾಶ್ಚತುರ್ದಂಷ್ಟ್ರಾ ವಿಷಾಣಿನಃ||

ಮೂರು ಕೋಡುಗಳ, ನಾಲ್ಕು ಕಣ್ಣುಗಳ, ಐದು ಕಾಲುಗಳ, ಎರಡು ಲಿಂಗಗಳಿರುವ, ಎರಡು ತಲೆಗಳಿರುವ, ಎರಡು ಬಾಲಗಳಿರುವ, ಮತ್ತು ಹಲ್ಲುಗಳಿರುವ, ಮೂರು ಪಾದಗಳ, ಕೋಡುಗಳಿರುವ, ನಾಲ್ಕು ಹಲ್ಲುಗಳಿರುವ, ಕುದುರೆಗಳು ಮತ್ತು ಅಶಿವ ಪಶುಗಳು ಹುಟ್ಟಿ, ಅಗಲವಾಗಿ ಬಾಯಿಗಳನ್ನು ಕಳೆದು ಅಶಿವ ಸ್ವರಗಳಲ್ಲಿ ಕೂಗುತ್ತಿವೆ.

06003005a ತಥೈವಾನ್ಯಾಶ್ಚ ದೃಶ್ಯಂತೇ ಸ್ತ್ರಿಯಶ್ಚ ಬ್ರಹ್ಮವಾದಿನಾಂ|

06003005c ವೈನತೇಯಾನ್ಮಯೂರಾಂಶ್ಚ ಜನಯಂತ್ಯಃ ಪುರೇ ತವ||

ನಿನ್ನ ಪುರದಲ್ಲಿ ಬ್ರಹ್ಮವಾದಿಗಳ ಸ್ತ್ರೀಯರು ಮತ್ತು ಇತರರು ಗರುಡ ಮತ್ತು ಮಯೂರಗಳಿಗೆ ಜನ್ಮ ನೀಡುತ್ತಿದ್ದಾರೆ.

06003006a ಗೋವತ್ಸಂ ವಡವಾ ಸೂತೇ ಶ್ವಾ ಸೃಗಾಲಂ ಮಹೀಪತೇ|

06003006c ಕ್ರಕರಾಂ ಶಾರಿಕಾಶ್ಚೈವ ಶುಕಾಂಶ್ಚಾಶುಭವಾದಿನಃ||

ಮಹೀಪತೇ! ಕುದುರೆಗಳು ಹಸುವಿನ ಕರುಗಳಿಗೆ ಮತ್ತು ನಾಯಿಯು ನರಿ ಮತ್ತು ಕೋಳಿಗಳಿಗೆ ಜನ್ಮ ನೀಡುತ್ತಿವೆ. ಜಿಂಕೆಗಳೂ ಗಿಳಿಗಳೂ ಅಶುಭವಾಗಿ ಕೂಗುತ್ತಿವೆ.

06003007a ಸ್ತ್ರಿಯಃ ಕಾಶ್ಚಿತ್ಪ್ರಜಾಯಂತೇ ಚತಸ್ರಃ ಪಂಚ ಕನ್ಯಕಾಃ|

06003007c ತಾ ಜಾತಮಾತ್ರಾ ನೃತ್ಯಂತಿ ಗಾಯಂತಿ ಚ ಹಸಂತಿ ಚ||

ಕೆಲವು ಸ್ತ್ರೀಯರು ನಾಲ್ಕು-ಐದು ಕನ್ಯೆಗಳಿಗೆ ಜನ್ಮನೀಡುತ್ತಿದ್ದಾರೆ. ಹುಟ್ಟಿದಕೂಡಲೇ ಅವರು ನರ್ತಿಸುತ್ತಾರೆ, ಹಾಡುತ್ತಾರೆ ಮತ್ತು ನಗುತ್ತಾರೆ.

06003008a ಪೃಥಗ್ಜನಸ್ಯ ಕುಡಕಾಃ ಸ್ತನಪಾಃ ಸ್ತೇನವೇಶ್ಮನಿ|

06003008c ನೃತ್ಯಂತಿ ಪರಿಗಾಯಂತಿ ವೇದಯಂತೋ ಮಹದ್ಭಯಂ||

ಅತಿ ಕೀಳುಸ್ತರದ ಜನರು ನಗುತ್ತಿದ್ದಾರೆ, ಕುಣಿಯುತ್ತಿದ್ದಾರೆ ಮತ್ತು ಹಾಡುತ್ತಿದ್ದಾರೆ. ಇದು ಮಹಾ ಭಯವನ್ನು ಸೂಚಿಸುತ್ತದೆ.

06003009a ಪ್ರತಿಮಾಶ್ಚಾಲಿಖಂತ್ಯನ್ಯೇ ಸಶಸ್ತ್ರಾಃ ಕಾಲಚೋದಿತಾಃ|

06003009c ಅನ್ಯೋನ್ಯಮಭಿಧಾವಂತಿ ಶಿಶವೋ ದಂಡಪಾಣಯಃ|

06003009e ಉಪರುಂಧಂತಿ ಕೃತ್ವಾ ಚ ನಗರಾಣಿ ಯುಯುತ್ಸವಃ||

ಕಾಲಚೋದಿತ ಶಿಶುಗಳು ಸಶಸ್ತ್ರರ ಚಿತ್ರಗಳನ್ನು ಬರೆಯುತ್ತಿವೆ. ದಂಡಗಳನ್ನು ಹಿಡಿದು ಅನ್ಯೋನ್ಯರನ್ನು ಓಡಿಸುತ್ತಿದ್ದಾರೆ. ಯುದ್ಧದ ಉತ್ಸುಕರಾಗಿ ನಗರವನ್ನೇ ಪುಡಿಮಾಡ ತೊಡಗಿದ್ದಾರೆ.

06003010a ಪದ್ಮೋತ್ಪಲಾನಿ ವೃಕ್ಷೇಷು ಜಾಯಂತೇ ಕುಮುದಾನಿ ಚ|

06003010c ವಿಷ್ವಗ್ವಾತಾಶ್ಚ ವಾಂತ್ಯುಗ್ರಾ ರಜೋ ನ ವ್ಯುಪಶಾಮ್ಯತಿ||

ಕಮಲಗಳು ಮತ್ತು ಕುಮುದಗಳು ಮರಗಳಲ್ಲಿ ಬೆಳೆಯುತ್ತಿವೆ. ಉಗ್ರವಾದ ಭಿರುಗಾಳಿಯು ಬೀಸುತ್ತಿದೆ. ಧೂಳು ಕಡಿಮೆಯಾಗುತ್ತಿಲ್ಲ.

06003011a ಅಭೀಕ್ಷ್ಣಂ ಕಂಪತೇ ಭೂಮಿರರ್ಕಂ ರಾಹುಸ್ತಥಾಗ್ರಸತ್|

06003011c ಶ್ವೇತೋ ಗ್ರಹಸ್ತಥಾ ಚಿತ್ರಾಂ ಸಮತಿಕ್ರಮ್ಯ ತಿಷ್ಠತಿ||

ಭೂಮಿಯು ಕಂಪಿಸುತ್ತಿದೆ. ರಾಹುವು ಸೂರ್ಯಗ್ರಸ್ತ ಮಾಡುತ್ತಿದ್ದಾನೆ. ಶ್ವೇತ (ಕೇತು) ಗ್ರಹವು ಚಿತ್ರಾನಕ್ಷತ್ರವನ್ನು ದಾಟಿ ನಿಂತಿದೆ[1].

06003012a ಅಭಾವಂ ಹಿ ವಿಶೇಷೇಣ ಕುರೂಣಾಂ ಪ್ರತಿಪಶ್ಯತಿ|

06003012c ಧೂಮಕೇತುರ್ಮಹಾಘೋರಃ ಪುಷ್ಯಮಾಕ್ರಮ್ಯ ತಿಷ್ಠತಿ||

ಇವು ವಿಶೇಷವಾಗಿ ಕುರುಗಳ ಅಭಾವವನ್ನು ಸೂಚಿಸುತ್ತವೆ. ಮಹಾಘೋರ ಧೂಮಕೇತುವು ಪುಷ್ಯವನ್ನು ದಾಟಿ ನಿಂತಿದೆ.

06003013a ಸೇನಯೋರಶಿವಂ ಘೋರಂ ಕರಿಷ್ಯತಿ ಮಹಾಗ್ರಹಃ|

06003013c ಮಘಾಸ್ವಂಗಾರಕೋ ವಕ್ರಃ ಶ್ರವಣೇ ಚ ಬೃಹಸ್ಪತಿಃ||

ಈ ಮಹಾಗ್ರಹವು ಎರಡೂ ಸೇನೆಗಳಿಗೆ ಘೋರವಾದ ಅಮಂಗಳವನ್ನುಂಟುಮಾಡುತ್ತದೆ. ಅಂಗಾರಕ (ಮಂಗಳ) ನು ಮಘದಲ್ಲಿ ಮತ್ತು ಶ್ರವಣದಲ್ಲಿ ಬೃಹಸ್ಪತಿ (ಗುರು) ಯು ವಕ್ರವಾಗಿದ್ದಾರೆ.

06003014a ಭಾಗ್ಯಂ ನಕ್ಷತ್ರಮಾಕ್ರಮ್ಯ ಸೂರ್ಯಪುತ್ರೇಣ ಪೀಡ್ಯತೇ|

06003014c ಶುಕ್ರಃ ಪ್ರೋಷ್ಠಪದೇ ಪೂರ್ವೇ ಸಮಾರುಹ್ಯ ವಿಶಾಂ ಪತೇ|

06003014e ಉತ್ತರೇ ತು ಪರಿಕ್ರಮ್ಯ ಸಹಿತಃ ಪ್ರತ್ಯುದೀಕ್ಷತೇ||

ಸೂರ್ಯಪುತ್ರ (ಶನಿ) ನು ಭಗಾ (ಉತ್ತರಾ) ನಕ್ಷತ್ರವನ್ನು ದಾಟಿ ಪೀಡಿಸುತ್ತಿದ್ದಾನೆ. ವಿಶಾಂಪತೇ! ಶುಕ್ರಗ್ರಹವು ಪೂರ್ವಭಾದ್ರಪದವನ್ನು ಹಿಂದೆ ಹಾಕಿ ಉತ್ತರಭಾದ್ರಪದವನ್ನು ನೋಡುತ್ತಿದೆ.

06003015a ಶ್ಯಾಮೋ[2] ಗ್ರಹಃ ಪ್ರಜ್ವಲಿತಃ ಸಧೂಮಃ ಸಹಪಾವಕಃ|

06003015c ಐಂದ್ರಂ ತೇಜಸ್ವಿ ನಕ್ಷತ್ರಂ ಜ್ಯೇಷ್ಠಾಮಾಕ್ರಮ್ಯ ತಿಷ್ಠತಿ||

ಬೆಂಕಿ ಹೊಗೆಗಳಿಂದ ಪ್ರಜ್ವಲಿಸುತ್ತಿರುವ ಕಪ್ಪು ಗ್ರಹ (ರಾಹು)ವು ಇಂದ್ರನ ತೇಜಸ್ವಿ ಜ್ಯೇಷ್ಠಾ ನಕ್ಷತ್ರವನ್ನು ದಾಟಿ ನಿಂತಿದ್ದಾನೆ.

06003016a ಧ್ರುವಃ ಪ್ರಜ್ವಲಿತೋ ಘೋರಮಪಸವ್ಯಂ ಪ್ರವರ್ತತೇ|

06003016c ಚಿತ್ರಾಸ್ವಾತ್ಯಂತರೇ ಚೈವ ಧಿಷ್ಠಿತಃ ಪರುಷೋ[3] ಗ್ರಹಃ||

ಘೋರವಾಗಿ ಪ್ರಜ್ವಸಿಸುತ್ತಿರುವ ಧ್ರುವ ನಕ್ಷತ್ರವು ಬಲಗಡೆ ಉರುಳುತ್ತಿದೆ. ಕ್ರೂರ ಗ್ರಹ (ರಾಹು)ವು ಚಿತ್ರಾ ಮತ್ತು ಸ್ವಾತಿ ನಕ್ಷತ್ರಗಳ ನಡುವೆ ನಿಂತಿದ್ದಾನೆ.

06003017a ವಕ್ರಾನುವಕ್ರಂ ಕೃತ್ವಾ ಚ ಶ್ರವಣೇ ಪಾವಕಪ್ರಭಃ|

06003017c ಬ್ರಹ್ಮರಾಶಿಂ ಸಮಾವೃತ್ಯ ಲೋಹಿತಾಂಗೋ ವ್ಯವಸ್ಥಿತಃ||

ಪಾವಕಪ್ರಭ ಲೋಹಿತಾಂಗ (ಮಂಗಳ)ನು ವಕ್ರ ವಕ್ರವಾಗಿ ಮಾಡಿಕೊಂಡು ಬ್ರಹ್ಮರಾಶಿ (ಗುರು) ಯೊಂದಿಗೆ ಶ್ರವಣಾ ನಕ್ಷತ್ರದಲ್ಲಿ ವ್ಯವಸ್ಥಿತನಾಗಿದ್ದಾನೆ.

06003018a ಸರ್ವಸಸ್ಯಪ್ರತಿಚ್ಛನ್ನಾ ಪೃಥಿವೀ ಫಲಮಾಲಿನೀ|

06003018c ಪಂಚಶೀರ್ಷಾ ಯವಾಶ್ಚೈವ ಶತಶೀರ್ಷಾಶ್ಚ ಶಾಲಯಃ||

ಫಲಮಾಲಿನೀ ಪೃಥ್ವಿಯು ಸರ್ವ ಸಸ್ಯಗಳನ್ನು ಹೊತ್ತಿದ್ದಾಳೆ. ಗೋಧಿಯ ಸಸ್ಯಗಳಿಗೆ ಐದು ತಲೆಗಳಿವೆ ಮತ್ತು ಭತ್ತಕ್ಕೆ ಹತ್ತು ತಲೆಗಳಿವೆ.

06003019a ಪ್ರಧಾನಾಃ ಸರ್ವಲೋಕಸ್ಯ ಯಾಸ್ವಾಯತ್ತಂ ಇದಂ ಜಗತ್|

06003019c ತಾ ಗಾವಃ ಪ್ರಸ್ನುತಾ ವತ್ಸೈಃ ಶೋಣಿತಂ ಪ್ರಕ್ಷರಂತ್ಯುತ||

ಈ ಜಗತ್ತಿನಲ್ಲಿಯೇ ಸರ್ವಲೋಕಗಳಲ್ಲಿಯೂ ಪ್ರಧಾನವೆನಿಸಿಕೊಂಡ ಗೋವುಗಳು ಕರುಗಳನ್ನು ಹೆತ್ತ ನಂತರ ರಕ್ತವನ್ನೇ ಹಾಲನ್ನಾಗಿ ನೀಡುತ್ತಿವೆ.

06003020a ನಿಶ್ಚೇರುರಪಿಧಾನೇಭ್ಯಃ ಖಡ್ಗಾಃ ಪ್ರಜ್ವಲಿತಾ ಭೃಶಂ|

06003020c ವ್ಯಕ್ತಂ ಪಶ್ಯಂತಿ ಶಸ್ತ್ರಾಣಿ ಸಂಗ್ರಾಮಂ ಸಮುಪಸ್ಥಿತಂ||

ಧನುಸ್ಸುಗಳಿಂದ ಹೊಳೆಯುವ ಕಿರಣಗಳು ಹೊರಸೂಸುತ್ತಿವೆ. ಖಡ್ಗಗಳು ಚೆನ್ನಾಗಿ ಹೊಳೆಯುತ್ತಿವೆ. ಸಂಗ್ರಾಮವು ಬಂದಾಗಿದೆ ಎನ್ನುವುದನ್ನು ಶಸ್ತ್ರಗಳು ವ್ಯಕ್ತಪಡಿಸುತ್ತಿವೆ.

06003021a ಅಗ್ನಿವರ್ಣಾ ಯಥಾ ಭಾಸಃ ಶಸ್ತ್ರಾಣಾಮುದಕಸ್ಯ ಚ|

06003021c ಕವಚಾನಾಂ ಧ್ವಜಾನಾಂ ಚ ಭವಿಷ್ಯತಿ ಮಹಾನ್ ಕ್ಷಯಃ||

ಶಸ್ತ್ರಗಳ, ನೀರಿನ, ಕವಚಗಳ ಮತ್ತು ಧ್ವಜಗಳ ಬಣ್ಣವು ಅಗ್ನಿವರ್ಣದಂತೆ ತೋರುತ್ತಿದೆ. ಮಹಾ ಕ್ಷಯವಾಗುವುದಿದೆ.

06003022a ದಿಕ್ಷು ಪ್ರಜ್ವಲಿತಾಸ್ಯಾಶ್ಚ ವ್ಯಾಹರಂತಿ ಮೃಗದ್ವಿಜಾಃ|

06003022c ಅತ್ಯಾಹಿತಂ ದರ್ಶಯಂತೋ ವೇದಯಂತಿ ಮಹದ್ಭಯಂ||

ಮೃಗಪಕ್ಷಿಗಳು ಉರಿಯುತ್ತಿರುವ ಮುಖಗಳಿಂದ ಘೋರ ಕೂಗುಗಳನ್ನು ಕೂಗುತ್ತಾ ಓಡಾಡುತ್ತಿವೆ. ಮಹಾಭಯವನ್ನು ಸೂಚಿಸುತ್ತಿವೆ.

06003023a ಏಕಪಕ್ಷಾಕ್ಷಿಚರಣಃ ಶಕುನಿಃ ಖಚರೋ ನಿಶಿ|

06003023c ರೌದ್ರಂ ವದತಿ ಸಂರಬ್ಧಃ ಶೋಣಿತಂ ಚರ್ದಯನ್ಮುಹುಃ||

ಒಂದೇ ರೆಕ್ಕೆಯುಳ್ಳ, ಒಂದೇ ಕಣ್ಣುಳ್ಳ, ಒಂದೇ ಕಾಲಿರುವ ಘೋರ ಪಕ್ಷಿಯೊಂದು ರಾತ್ರಿ ಆಕಾಶದಲ್ಲಿ, ಕೇಳುವವರು ರಕ್ತಕಾರುವ ಹಾಗೆ, ರೌದ್ರವಾಗಿ ಕೂಗಿ ಭಯಪಡಿಸುತ್ತಿದೆ.

06003024a ಗ್ರಹೌ ತಾಮ್ರಾರುಣಶಿಖೌ ಪ್ರಜ್ವಲಂತಾವಿವ ಸ್ಥಿತೌ|

06003024c ಸಪ್ತರ್ಷೀಣಾಮುದಾರಾಣಾಂ ಸಮವಚ್ಛಾದ್ಯ ವೈ ಪ್ರಭಾಂ||

ಕೆಂಪು ಮತ್ತು ಬಿಳಿಯ ಶಿಖೆಗಳ ಎರಡು ಗ್ರಹಗಳು ಪ್ರಜ್ವಲಿಸುತ್ತಾ ನಿಂತಿವೆ. ಉದಾರ ಸಪ್ತರ್ಷಿಗಳ ನಕ್ಷತ್ರಮಂಡಲಗಳ ಪ್ರಭೆಯನ್ನು ಮುಚ್ಚಿವೆ.

06003025a ಸಂವತ್ಸರಸ್ಥಾಯಿನೌ ಚ ಗ್ರಹೌ ಪ್ರಜ್ವಲಿತಾವುಭೌ|

06003025c ವಿಶಾಖಯೋಃ ಸಮೀಪಸ್ಥೌ ಬೃಹಸ್ಪತಿಶನೈಶ್ಚರೌ||

ಪ್ರಜ್ವಲಿಸುತ್ತಿರುವ ಎರಡು ಗ್ರಹಗಳು ಬೃಹಸ್ಪತಿ-ಶನೈಶ್ಚರರು ವಿಶಾಖಾ ನಕ್ಷತ್ರದ ಸಮೀಪದಲ್ಲಿ ಒಂದು ವರ್ಷ ನೆಲೆಸಿದ್ದಾರೆ[4].

[5]06003026a ಕೃತ್ತಿಕಾಸು ಗ್ರಹಸ್ತೀವ್ರೋ ನಕ್ಷತ್ರೇ ಪ್ರಥಮೇ ಜ್ವಲನ್|

06003026c ವಪೂಂಷ್ಯಪಹರನ್ಭಾಸಾ ಧೂಮಕೇತುರಿವ ಸ್ಥಿತಃ||

ಕೃತ್ತಿಕಾ ನಕ್ಷತ್ರದ ಪ್ರಥಮದಲ್ಲಿ ತೀವ್ರ ಗ್ರಹವು ಪ್ರಜ್ವಲಿಸುತ್ತಾ, ಧೂಮಕೇತುವಿನಂತೆ ಹೊಳೆಯುತ್ತಾ ಅದರ ಮುಖವನ್ನು ಅಡ್ಡಕಟ್ಟುತ್ತಿದೆ.

06003027a ತ್ರಿಷು ಪೂರ್ವೇಷು ಸರ್ವೇಷು ನಕ್ಷತ್ರೇಷು ವಿಶಾಂ ಪತೇ|

06003027c ಬುಧಃ ಸಂಪತತೇಽಭೀಕ್ಷ್ಣಂ ಜನಯನ್ಸುಮಹದ್ಭಯಂ||

ವಿಶಾಂಪತೇ! ಪೂರ್ವದಲ್ಲಿರುವ ಎಲ್ಲ ಮೂರು ನಕ್ಷತ್ರಗಳ ಮೇಲೆ ಬುಧನು ಅಭೀಕ್ಷ್ಣ ದೃಷ್ಠಿಯನ್ನು ಬೀರಿ ಮಹಾ ಭಯವನ್ನು ಹುಟ್ಟಿಸುತ್ತಿದ್ದಾನೆ[6].

06003028a ಚತುರ್ದಶೀಂ ಪಂಚದಶೀಂ ಭೂತಪೂರ್ವಾಂ ಚ ಷೋಡಶೀಂ|

06003028c ಇಮಾಂ ತು ನಾಭಿಜಾನಾಮಿ ಅಮಾವಾಸ್ಯಾಂ ತ್ರಯೋದಶೀಂ||

ಹಿಂದೆ ಹದಿನಾಲ್ಕನೆಯ, ಹದಿನೈದನೆಯ ಅಥವಾ ಹದಿನಾರನೆಯ ದಿನ ಅಮವಾಸ್ಯೆಯಾಗುತ್ತಿತ್ತು. ಈಗಿನ ಹಾಗೆ ತ್ರಯೋದಶಿಯಂದು ಅಮವಾಸ್ಯೆಯಾದದ್ದನ್ನು ನಾನು ಅರಿಯೆ!

06003029a ಚಂದ್ರಸೂರ್ಯಾವುಭೌ ಗ್ರಸ್ತಾವೇಕಮಾಸೇ ತ್ರಯೋದಶೀಂ|

06003029c ಅಪರ್ವಣಿ ಗ್ರಹಾವೇತೌ ಪ್ರಜಾಃ ಸಂಕ್ಷಪಯಿಷ್ಯತಃ||

ಒಂದೇ ತಿಂಗಳಿನಲ್ಲಿ ಚಂದ್ರ ಮತ್ತು ಸೂರ್ಯಗ್ರಹಣಗಳೆರಡೂ ತ್ರಯೋದಶಿಯಂದು ನಡೆದಿದೆ[7]. ಅಕಾಲದಲ್ಲಾದ ಈ ಗ್ರಹಣಗಳು ಪ್ರಜೆಗಳ ನಾಶವನ್ನು ಸೂಚಿಸುತ್ತವೆ.

06003030a ರಜೋವೃತಾ ದಿಶಃ ಸರ್ವಾಃ ಪಾಂಸುವರ್ಷೈಃ ಸಮಂತತಃ|

06003030c ಉತ್ಪಾತಮೇಘಾ ರೌದ್ರಾಶ್ಚ ರಾತ್ರೌ ವರ್ಷಂತಿ ಶೋಣಿತಂ||

ದಿಕ್ಕುಗಳಲ್ಲೆಲ್ಲಾ ಧೂಳುತುಂಬಿ ಎಲ್ಲಕಡೆಗಳಿಂದಲೂ ಆನೆಕಲ್ಲಿನ ಮಳೆಯಾಗುತ್ತಿದೆ. ಉತ್ಪಾತವನ್ನು ಸೂಚಿಸುವ ಮೇಘಗಳು ರಾತ್ರಿಯಲ್ಲಿ ರಕ್ತದ ರೌದ್ರ ಮಳೆಯನ್ನು ಸುರಿಸುತ್ತಿವೆ.

06003031a ಮಾಂಸವರ್ಷಂ ಪುನಸ್ತೀವ್ರಮಾಸೀತ್ ಕೃಷ್ಣಚತುರ್ದಶೀಂ|

06003031c ಅರ್ಧರಾತ್ರೇ ಮಹಾಘೋರಮತೃಪ್ಯಂಸ್ತತ್ರ ರಾಕ್ಷಸಾಃ||

ಕೃಷ್ಣಪಕ್ಷದ ಚತುರ್ದಶಿಯಂದು ಪುನಃ ತೀವ್ರ ಮಾಂಸದ ಮಳೆಯು ಆಯಿತು. ಅರ್ಧರಾತ್ರಿಯಲ್ಲಿ ಮಹಾಘೋರ ರಾಕ್ಷಸರು ಅತೃಪ್ತರಾಗಿದ್ದರು.

06003032a ಪ್ರತಿಸ್ರೋತೋಽವಹನ್ನದ್ಯಃ ಸರಿತಃ ಶೋಣಿತೋದಕಾಃ|

06003032c ಫೇನಾಯಮಾನಾಃ ಕೂಪಾಶ್ಚ ನರ್ದಂತಿ ವೃಷಭಾ ಇವ|

06003032e ಪತಂತ್ಯುಲ್ಕಾಃ ಸನಿರ್ಘಾತಾಃ ಶುಷ್ಕಾಶನಿವಿಮಿಶ್ರಿತಾಃ||

ನದಿಗಳು ವಿರುದ್ಧ ದಿಕ್ಕುಗಳಲ್ಲಿ ಹರಿಯುತ್ತವೆ. ನದಿಗಳ ನೀರು ರಕ್ತವಾಗಿದೆ. ನೊರೆತುಂಬಿ ಬಾವಿಗಳು ಹೋರಿಗಳಂತೆ ಭುಸುಗುಟ್ಟುತ್ತಿವೆ. ಒಣಗಿದ ವಜ್ರದಂತೆ ಉಲ್ಕೆಗಳು ಭುಸುಗುಟ್ಟುತ್ತಾ ಕೆಳಗೆ ಬೀಳುತ್ತಿವೆ.

06003033a ಅದ್ಯ ಚೈವ ನಿಶಾಂ ವ್ಯುಷ್ಟಾಂ ಉದಯೇ ಭಾನುರಾಹತಃ|

06003033c ಜ್ವಲಂತೀಭಿರ್ಮಹೋಲ್ಕಾಭಿಶ್ಚತುರ್ಭಿಃ ಸರ್ವತೋದಿಶಂ||

ಇಂದಿನ ಈ ರಾತ್ರಿಯು ಕಳೆದು ಉದಯದಲ್ಲಿ ಭಾನು ಮೇಲೆದ್ದಾಗ ನಾಲ್ಕೂ ಕಡೆಗಳಲ್ಲಿ ಎಲ್ಲದಿಕ್ಕುಗಳಲ್ಲಿ ಉರಿಯುತ್ತಿರುವ ಮಹಾ ಉಲ್ಕೆಯು ಕಾಣಿಸಿಕೊಳ್ಳುತ್ತದೆ.

06003034a ಆದಿತ್ಯಂ ಉಪತಿಷ್ಠದ್ಭಿಸ್ತತ್ರ ಚೋಕ್ತಂ ಮಹರ್ಷಿಭಿಃ|

06003034c ಭೂಮಿಪಾಲಸಹಸ್ರಾಣಾಂ ಭೂಮಿಃ ಪಾಸ್ಯತಿ ಶೋಣಿತಂ||

ಆದಿತ್ಯವು ಮೇಲೆದ್ದಾಗ ಭೂಮಿಯು ಸಹಸ್ರಾರು ಭೂಮಿಪಾಲರ ರಕ್ತವನ್ನು ಕುಡಿಯುತ್ತದೆ ಎಂದು ಮಹರ್ಷಿಗಳು ಹೇಳುತ್ತಾರೆ.

06003035a ಕೈಲಾಸಮಂದರಾಭ್ಯಾಂ ತು ತಥಾ ಹಿಮವತೋ ಗಿರೇಃ|

06003035c ಸಹಸ್ರಶೋ ಮಹಾಶಬ್ದಂ ಶಿಖರಾಣಿ ಪತಂತಿ ಚ||

ಕೈಲಾಸ-ಮಂದರಗಳೆರಡರಲ್ಲಿ ಮತ್ತು ಹಾಗೆಯೇ ಹಿಮವತ್ ಗಿರಿಯಲ್ಲಿ ಸಹಸ್ರಾರು ಶಿಖರಗಳು ಮಹಾಶಬ್ಧದೊಂದಿಗೆ ಬೀಳುತ್ತಿವೆ.

06003036a ಮಹಾಭೂತಾ ಭೂಮಿಕಂಪೇ ಚತುರಃ ಸಾಗರಾನ್ಪೃಥಕ್|

06003036c ವೇಲಾಂ ಉದ್ವರ್ತಯಂತಿ ಸ್ಮ ಕ್ಷೋಭಯಂತಃ ಪುನಃ ಪುನಃ||

ಭೂಮಿಯ ಮಹಾ ಕಂಪನದಿಂದ ನಾಲ್ಕು ಸಾಗರಗಳು ಪುನಃ ಪುನಃ ಕ್ಷೋಭೆಗೊಂಡು ದಡಗಳನ್ನು ನುಂಗುವವೋ ಎನ್ನುವಹಾಗೆ ಮೇಲೆ ಏರುತ್ತಿವೆ.

06003037a ವೃಕ್ಷಾನುನ್ಮಥ್ಯ ವಾಂತ್ಯುಗ್ರಾ ವಾತಾಃ ಶರ್ಕರಕರ್ಷಿಣಃ|

06003037c ಪತಂತಿ ಚೈತ್ಯವೃಕ್ಷಾಶ್ಚ ಗ್ರಾಮೇಷು ನಗರೇಷು ಚ||

ಉಗ್ರ ಗಾಳಿಗಳು ವೃಕ್ಷಗಳನ್ನು ಕಿತ್ತು ಬೀಳಿಸುತ್ತಿವೆ. ಗ್ರಾಮ ಮತ್ತು ನಗರಗಳಲ್ಲಿ ಚೈತ್ಯ ವೃಕ್ಷಗಳು ಬೀಳುತ್ತಿವೆ.

06003038a ಪೀತಲೋಹಿತನೀಲಶ್ಚ ಜ್ವಲತ್ಯಗ್ನಿರ್ಹುತೋ ದ್ವಿಜೈಃ|

06003038c ವಾಮಾರ್ಚಿಃ ಶಾವಗಂಧೀ ಚ ಧೂಮಪ್ರಾಯಃ ಖರಸ್ವನಃ|

06003038e ಸ್ಪರ್ಶಾ ಗಂಧಾ ರಸಾಶ್ಚೈವ ವಿಪರೀತಾ ಮಹೀಪತೇ||

ದ್ವಿಜರು ಆಹುತಿಯನ್ನು ಹಾಕಿದಾಗ ಅಗ್ನಿಯು ಹಳದಿ, ಕೆಂಪು ಮತ್ತು ನೀಲಿ ಬಣ್ಣಗಳನ್ನು ತಾಳುತ್ತಿದೆ. ಅದರ ಜ್ವಾಲೆಯು ಎಡಕ್ಕೆ ಬಾಗಿ ಧೂಮಯುಕ್ತ ದುರ್ಗಂಧವನ್ನು ನೀಡುತ್ತಿದೆ, ಪಟಪಟ ಶಬ್ಧಮಾಡುತ್ತಿದೆ. ಮಹೀಪತೇ! ಸ್ಪರ್ಷ, ಗಂಧ, ರಸಗಳು ವಿಪರೀತವಾಗಿವೆ.

06003039a ಧೂಮಾಯಂತೇ ಧ್ವಜಾ ರಾಜ್ಞಾಂ ಕಂಪಮಾನಾ ಮುಹುರ್ಮುಹುಃ|

06003039c ಮುಂಚಂತ್ಯಂಗಾರವರ್ಷಾಣಿ ಭೇರ್ಯೋಽಥ ಪಟಹಾಸ್ತಥಾ||

ರಾಜರ ಧ್ವಜಗಳು ಮತ್ತೆ ಮತ್ತೆ ಕಂಪಿಸುತ್ತಾ ಹೊಗೆಯಾಡುತ್ತಿವೆ. ಕಿಡಿಗಳ ಮಳೆಯನ್ನು ಸುರಿಸುತ್ತಿವೆ. ಭೇರಿಗಳು ಬೂದಿಯನ್ನು ಚೆಲ್ಲುತ್ತಿವೆ.

06003040a ಪ್ರಾಸಾದಶಿಖರಾಗ್ರೇಷು ಪುರದ್ವಾರೇಷು ಚೈವ ಹಿ|

06003040c ಗೃಧ್ರಾಃ ಪರಿಪತಂತ್ಯುಗ್ರಾ ವಾಮಂ ಮಂಡಲಮಾಶ್ರಿತಾಃ||

ಪ್ರಾಸಾದ ಶಿಖರಗಳ ತುದಿಯಲ್ಲಿ ಮತ್ತು ಪುರದ್ವಾರಗಳಲ್ಲಿ ಹದ್ದುಗಳು ಎಡಗಡೆಯಿಂದ ಮಂಡಲಾಕಾರದಲ್ಲಿ ಕುಳಿತು ಉಗ್ರವಾಗಿ ಪರಿತಪಿಸುತ್ತಿವೆ.

06003041a ಪಕ್ವಾಪಕ್ವೇತಿ ಸುಭೃಶಂ ವಾವಾಶ್ಯಂತೇ ವಯಾಂಸಿ ಚ|

06003041c ನಿಲೀಯಂತೇ ಧ್ವಜಾಗ್ರೇಷು ಕ್ಷಯಾಯ ಪೃಥಿವೀಕ್ಷಿತಾಂ||

ಪೃಥಿವೀಕ್ಷಿತರ ಸಾವನ್ನು ಸೂಚಿಸುತ್ತಾ ಧ್ವಜಾಗ್ರದಲ್ಲಿ ನಿಂತು ಎಲ್ಲ ಪಕ್ಷಿಗಳೂ ಪಕ್ವಾ ಪಕ್ವಾ[8] ಎಂದು ಜೋರಾಗಿ ಕೂಗುತ್ತಿವೆ.

06003042a ಧ್ಯಾಯಂತಃ ಪ್ರಕಿರಂತಶ್ಚ ವಾಲಾನ್ವೇಪಥುಸಂಯುತಾಃ|

06003042c ರುದಂತಿ ದೀನಾಸ್ತುರಗಾ ಮಾತಂಗಾಶ್ಚ ಸಹಸ್ರಶಃ||

ಯಾವುದೋ ಯೋಚನೆಯಲ್ಲಿದ್ದುಕೊಂಡು ನಡುಗುತ್ತಿರುವ ಆನೆಗಳು ಮಲ-ಮೂತ್ರಗಳನ್ನು ಮಾಡುತ್ತಾ ಅಲ್ಲಲ್ಲಿ ಹೋಗುತ್ತಿವೆ. ಸಹಸ್ರಾರು ಆನೆ-ಕುದುರೆಗಳು ದೀನಗೊಂಡು ರೋದಿಸುತ್ತಿವೆ.

06003043a ಏತಚ್ಚ್ರುತ್ವಾ ಭವಾನತ್ರ ಪ್ರಾಪ್ತಕಾಲಂ ವ್ಯವಸ್ಯತಾಂ|

06003043c ಯಥಾ ಲೋಕಃ ಸಮುಚ್ಛೇದಂ ನಾಯಂ ಗಚ್ಛೇತ ಭಾರತ||

ಭಾರತ! ಇದನ್ನು ಕೇಳಿ ನೀನು ಕಾಲಕ್ಕೆ ತಕ್ಕುದಾಗಿದುದನ್ನು ಈ ಲೋಕವು ಪ್ರಜೆಗಳಿಲ್ಲದಂತೆ ತಡೆಗಟ್ಟಲು ಏನು ಬೇಕೋ ಅದನ್ನು ಏರ್ಪಡಿಸು.””

06003044 ವೈಶಂಪಾಯನ ಉವಾಚ|

06003044a ಪಿತುರ್ವಚೋ ನಿಶಮ್ಯೈತದ್ಧೃತರಾಷ್ಟ್ರೋಽಬ್ರವೀದಿದಂ|

06003044c ದಿಷ್ಟಮೇತತ್ ಪುರಾ ಮನ್ಯೇ ಭವಿಷ್ಯತಿ ನ ಸಂಶಯಃ||

ವೈಶಂಪಾಯನನು ಹೇಳಿದನು: “ತಂದೆಯ ಮಾತನ್ನು ಕೇಳಿ ಧೃತರಾಷ್ಟ್ರನು ಈ ಮಾತನ್ನಾಡಿದನು: “ಮೊದಲೇ ವಿಧಿಯು ಇಷ್ಟಪಟ್ಟಂತೆ ನಡೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

06003045a ಕ್ಷತ್ರಿಯಾಃ ಕ್ಷತ್ರಧರ್ಮೇಣ ವಧ್ಯಂತೇ ಯದಿ ಸಂಯುಗೇ|

06003045c ವೀರಲೋಕಂ ಸಮಾಸಾದ್ಯ ಸುಖಂ ಪ್ರಾಪ್ಸ್ಯಂತಿ ಕೇವಲಂ||

ಕ್ಷತ್ರಿಯರು ಕ್ಷತ್ರಧರ್ಮದಂತೆ ಯುದ್ಧದಲ್ಲಿ ವಧಿಸಲ್ಪಟ್ಟರೆ ಅವರು ಕೇವಲ ವೀರಲೋಕವನ್ನು ಪಡೆದು ಸುಖವನ್ನು ಹೊಂದುತ್ತಾರೆ.

06003046a ಇಹ ಕೀರ್ತಿಂ ಪರೇ ಲೋಕೇ ದೀರ್ಘಕಾಲಂ ಮಹತ್ಸುಖಂ|

06003046c ಪ್ರಾಪ್ಸ್ಯಂತಿ ಪುರುಷವ್ಯಾಘ್ರಾಃ ಪ್ರಾಣಾಂಸ್ತ್ಯಕ್ತ್ವಾ ಮಹಾಹವೇ||

ಈ ಪುರುಷವ್ಯಾಘ್ರರು ಮಹಾಹವದಲ್ಲಿ ಪ್ರಾಣಗಳನ್ನು ತ್ಯಜಿಸಿ ಈ ಲೋಕದಲ್ಲಿ ಕೀರ್ತಿಯನ್ನೂ ಪರಲೋಕದಲ್ಲಿ ದೀರ್ಘಕಾಲದ ಮಹಾ ಸುಖವನ್ನೂ ಪಡೆಯುತ್ತಾರೆ.””

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ನಿಮಿತ್ತಾಖ್ಯಾನೇ ತೃತೀಯೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ನಿಮಿತ್ತಾಖ್ಯಾನ ಎನ್ನುವ ಮೂರನೇ ಅಧ್ಯಾಯವು.

Image result for indian motifs earth

[1] ಕೇತುವು ಸ್ವಾತೀ ನಕ್ಷತ್ರದಲ್ಲಿದೆ. ೧೧ನೆಯ ಶ್ಲೋಕದಲ್ಲಿ ಅರ್ಕಂ ರಾಹುಸ್ತಥಾಗ್ರಸತ್| ಎಂದಿದೆ. ಯುದ್ಧವು ಕಾರ್ತೀಕ ಮಾಸದಲ್ಲಿ ಪ್ರಾರಂಭವಾದುದರಿಂದ ಆ ಮಾಸದಲ್ಲಿ ಸೂರ್ಯನು ತುಲಾರಾಶಿಯಲ್ಲಿರುತ್ತಾನೆ. ಸೂರ್ಯಗ್ರಹಣ ಅಂದರೆ ರಾಹುವೂ ಕೂಡ ತುಲಾ ರಾಶಿಯಲ್ಲಿ ಎಂದರೆ ಸ್ವಾತಿ ನಕ್ಷತ್ರದಲ್ಲಿ ಬಂದಿದ್ದಾನೆ ಎಂದು. ಆದರೆ ಈ ಶ್ಲೋಕದಲ್ಲಿ ಶ್ವೇತಗ್ರಹ - ಹಲವು ವ್ಯಾಖ್ಯಾನಕಾರರ ಪ್ರಕಾರ - ಕೇತುಗ್ರಹವೂ ಕೂಡ ಸ್ವಾತಿಯಲ್ಲಿ ಇದೆ ಎಂದು ಹೇಳುತ್ತದೆ. ಆದರೆ ರಾಹು-ಕೇತುಗಳು ಯಾವಾಗಲೂ ಪರಸ್ಪರ ಏಳನೆಯ ಸ್ಥಾನದಲ್ಲಿಯೇ ಇರುತ್ತಾರೆ. ಹೀಗಿರುವಾಗ, ರಾಹು-ಕೇತುಗಳೆರಡೂ ಒಂದೇ ನಕ್ಷತ್ರದಲ್ಲಿರಲು ಹೇಗೆ ಸಾಧ್ಯ? ಶ್ವೇತೋ ಗ್ರಹಃ ಕೇತುಃ ಚಿತ್ರಾಮತಿಕ್ರಾಮತಿ ಸ್ವಾತ್ಯಾದೌ ವರ್ತತೇ. ಸಮಸಪ್ತಕಸ ರಾಹುಕೇತೂ ಇದಾನೀಮೇಕರಾಶಿಗತೌ ಮಹನಿಷ್ಟಸೂಚಕಾಮಿತಿ ಭಾವಃ| ಗ್ರಹನಿಘಂಟುವಿನಲ್ಲಿ ಕೇತು ಗ್ರಹಕ್ಕೆ ಶ್ವೇತಗ್ರಹವೆಂಬ ಹೆಸರೂ ಇದೆ ಎಂದು ಹೇಳುವುದಿಲ್ಲ – ಕೇತುಃಶಿಖೀ ಧ್ವಜೋ ಧೂಮ್ರ ಉತ್ಪಾತೋ ಬಹುರೂಪಕೃತ್| ಶಿರೋಹೀನೋ ಘೋರರೂಪಶ್ಚಿತ್ರವರ್ಣಃ ಸುಕೇತನಃ|| ಗ್ರಹನಿಘಂಟುವಿನಲ್ಲಿ ಯಾವ ಗ್ರಹಕ್ಕೂ ಶ್ವೇತ ಎಂಬ ಹೆಸರು ಉಕ್ತವಾಗಿಲ್ಲ.

[2] ಭಾರತ ದರ್ಶನದಲ್ಲಿ “ಶ್ವೇತೋ ಗ್ರಹಃ” ಅಂದರೆ ಕೇತು ಗ್ರಹ ಎಂಬ ಪಾಠಾಂತರವಿದೆ.

[3] ಭಾರತ ದರ್ಶನದಲ್ಲಿ “ಪುರುಷಗ್ರಹಃ” ಎಂಬ ಪಾಠಾಂತರವಿದ್ದು ಅದು ರಾಹುಗ್ರಹವಿರಬದುದೇ ಎಂದು ತರ್ಕಿಸಲಾಗಿದೆ.

[4] Verifying all double eclipses of 501-3000 B.C. and when Saturn + Jupiter were near Vishaka, Prof. R.N. Iyengar (I.I.Sc., Bangalore) concluded that 1478 B.C. was the most likely year of the war.

[5] ಈ ಶ್ಲೋಕದ ಮೊದಲು ಈ ಶ್ಲೋಕವನ್ನು ಭಾರತ ದರ್ಶನದಲ್ಲಿ ನೀಡಲಾಗಿದೆ: ಚಂದ್ರಾದಿತ್ಯಾವುಭೌ ಗ್ರಸ್ತಾವೇಕಾಹ್ನಾ ಹಿ ತ್ರಯೋದಶೀಂ| ಅಪರ್ವಣಿ ಗ್ರಹಂ ಯಾತೌ ಪ್ರಜಾಸಂಕ್ಷಯಮಿಚ್ಛತಃ|| - ಪಕ್ಷದ ಹದಿಮೂರನೆಯ ದಿವಸವೇ ಸೂರ್ಯಚಂದ್ರರು ರಾಹುಗ್ರಸ್ತರಾಗಿದ್ದಾರೆ. ಮಹಾಭಾರತ ಯುದ್ಧವು ನಡೆದ ಪಕ್ಷದಲ್ಲಿ ಎರಡು ತಿಥಿಗಳು ಉಪರಿಯಾಗಿ ಬಂದು ಹದಿಮೂರನೆಯ ದಿವಸವೇ ಅಮವಾಸ್ಯೆ ಅಂದರ ಸೂರ್ಯ-ಚಂದ್ರರ ಸಮಾಗಮವಾಗಿರಬೇಕು.

[6] ಭಾರತ ದರ್ಶನದದಲ್ಲಿರುವ ಪಾಠಾಂತರ - ತ್ರಿಷು ಸರ್ವೇಷು ನಕ್ಷತ್ರ ನಕ್ಷತ್ರೇಷು ವಿಶಾಂಪತೇ| ಗೃಧ್ರಃ ಸಂಪತತೇ ಶೀರ್ಷಂ ಜನಯನ್ ಭಯಮುತ್ತಮಂ|| - ಇಪ್ಪತ್ತೇಳು ನಕ್ಷತ್ರಗಳನ್ನೂ ಮೂರು ವಿಭಾಗಗಳನ್ನಾಗಿ ಮಾಡಿದರೆ ಒಂಭತ್ತೊಂಭತ್ತು ನಕ್ಷತ್ರಗಳಿಗೆ ಒಂದು ಭಾಗವಾಗುತ್ತದೆ. ಈ ಮೂರು ಸಮುದಾಯಕ್ಕೂ ಕ್ರಮಶಃ ಅಶ್ವಪತಿಛತ್ರ, ಗಜಪತಿಛತ್ರ, ಮತ್ತು ನರಪತಿ ಛತ್ರ ಎಂದು ಕರೆಯುತ್ತಾರೆ. ಈ ಮೂರೂ ಸಮುದಾಯಗಳಲ್ಲಿ ಮುಖ್ಯನಕ್ಷತ್ರಗಳಿಗೆ ಪಾಪಗ್ರಹಗಳ ಬಾಧೆಯಿದ್ದರೆ ಮಹಾಭಯವುಂಟಾಗುತ್ತದೆ. ಮಹಾಭಾರತ ಯುದ್ಧದ ಸಮಯದಲ್ಲಿ ಅಶ್ವಪತಿಛತ್ರದಲ್ಲಿರುವ ಕೃತ್ತಿಕಾ, ರೋಹಿಣೀ ಮತ್ತು ಪುಷ್ಯ ನಕ್ಷತ್ರಗಳಿಗೆ ಪಾಪಗ್ರಹಗಳ ಬಾಧೆಯಿತ್ತು. ಗಜಪತಿಛತ್ರದಲ್ಲಿರುವ ಮಘಾನಕ್ಷತ್ರದಲ್ಲಿ ಅಂಗಾರಕನೂ, ಸ್ವಾತಿಯಲ್ಲಿ ಸೂರ್ಯ-ಚಂದ್ರ-ರಾಹುಗಳೂ ಇದ್ದವು. ನರಪತಿಛತ್ರದಲ್ಲಿರುವ ಶ್ರವಣ-ಪೋಷ್ಠಪದಗಳಲಿ?ಬೃಹಸ್ಪತಿ-ಶುಕ್ರರು ಇದ್ದರು. ಉತ್ತರಾ ನಕ್ಷತ್ರದಲ್ಲಿ ಶನೈಶ್ಚರನಿದ್ದನು.

[7]Dr. S. Balakrishna (NASA, USA) proved the occurrence of 'two eclipses in (a span of) 13 days prior to Mahabharata'.  Analysing the astronomical possibility of Vyasa's statement in Bhishma Parva "Amavasya occured on the 13th day.  Two eclipses in a month, on the thirteenth day." he presented the data of eclipses during the period 3300 BCJ (Before the Calendar of Julian Ceaser) to 700 BCJ visible at Kuruxethra, using Lodestar Pro software.  He stated the possibility of 672 eclipse pairs, ten 'thirteen day lunar first' eclipse pairs and concluded that 2559 BC eclipse pair was nearest to the text of Mahabharata ['Date of Kurukshetra War based on astronomical data.'  Colloquium, held on January 5 and 6, 2003 at the Mythic Society, Bangalore http://ignca.nic.in/nl002503.htm]  

[8]ಪಕ್ವಂ ಪರಿಣತೇಽಪಿ ಸ್ಯಾದ್ವಿನಾಶಾಭಿಮುಖೇ ತ್ರಿಶು - ವಿನಾಶವು ಸನ್ನಿಹಿತವಾಗಿದೆ ಎಂದರ್ಥ.

Comments are closed.