Bhishma Parva: Chapter 23

ಭೀಷ್ಮ ಪರ್ವ:ಭಗವದ್ಗೀತಾ ಪರ್ವ

೨೩

ಅರ್ಜುನವಿಷಾದ ಯೋಗ

Image result for bhagavadgita

[1]06023001 ಧೃತರಾಷ್ಟ್ರ ಉವಾಚ|

06023001a ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ|

06023001c ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ[2]||

ಧೃತರಾಷ್ಟ್ರನು ಹೇಳಿದನು: “ಸಂಜಯ! ಧರ್ಮಕ್ಷೇತ್ರ ಕುರುಕ್ಷೇತ್ರದಲ್ಲಿ ಯುದ್ಧಮಾಡಲು ಉತ್ಸುಕರಾಗಿ ಸೇರಿದ್ದ ನನ್ನವರು ಮತ್ತು ಪಾಂಡವರು ಏನು ಮಾಡಿದರು?”

06023002 ಸಂಜಯ ಉವಾಚ|

06023002a ದೃಷ್ಟ್ವಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ|

06023002c ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್||

ಸಂಜಯನು ಹೇಳಿದನು: “ಆಗ ಪಾಂಡವ ಸೇನೆಯು ಯುದ್ಧವ್ಯೂಹದಲ್ಲಿ ರಚಿಸಿಕೊಂಡಿದ್ದುದನ್ನು ನೋಡಿದ ರಾಜಾ ದುರ್ಯೋಧನನು ಆಚಾರ್ಯನ ಬಳಿಬಂದು ಹೇಳಿದನು:

06023003a ಪಶ್ಯೈತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಂ|

06023003c ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ||

“ಆಚಾರ್ಯ! ಪಾಂಡುಪುತ್ರರ ಈ ಮಹಾ ಸೇನೆಯನ್ನು ಬುದ್ಧಿವಂತಿಕೆಯಿಂದ ನಿನ್ನ ಶಿಷ್ಯ ದ್ರುಪದಪುತ್ರನು ವ್ಯೂಹದಲ್ಲಿ ರಚಿಸಿದುದನ್ನು ನೋಡು!

06023004a ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯುಧಿ|

06023004c ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ||

06023005a ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್|

06023005c ಪುರುಜಿತ್ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ||

06023006a ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್|

06023006c ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ||

ಅಲ್ಲಿ ಯುದ್ಧದಲ್ಲಿ ಶೂರರಾದ ಮಹೇಷ್ವಾಸ ಭೀಮಾರ್ಜುನರಿದ್ದಾರೆ, ಯುಯುಧಾನ[3], ವಿರಾಟ, ಮಹಾರಥಿ ದ್ರುಪದ, ಧೃಷ್ಟಕೇತು[4], ಚೇಕಿತಾನ[5], ವೀರ್ಯವಾನ್ ಕಾಶಿರಾಜ, ಪುರುಜಿತ[6], ಕುಂತಿಭೋಜ, ನರಪುಂಗವ ಶೈಬ್ಯ, ವಿಕ್ರಾಂತ ಯುಧಾಮನ್ಯು, ವೀರ್ಯವಾನ್ ಉತ್ತಮೌಜಸ್ಸು[7], ಸೌಭದ್ರ, ದ್ರೌಪದಿಯ ಮಕ್ಕಳು - ಎಲ್ಲರೂ ಮಹಾರಥಿಗಳೇ ಇದ್ದಾರೆ.

06023007a ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ನಿಬೋಧ ದ್ವಿಜೋತ್ತಮ|

06023007c ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ಬ್ರವೀಮಿ ತೇ||

ದ್ವಿಜೋತ್ತಮ! ನಮ್ಮಲ್ಲಿರುವ ವಿಶಿಷ್ಟ ನಾಯಕರನ್ನೂ ತಿಳಿದುಕೋ! ನಿನ್ನ ಸೂಚನೆಗಾಗಿ ನಾನು ಹೇಳುತ್ತೇನೆ.

06023008a ಭವಾನ್ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ|

06023008c ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ||

ನೀನು, ಭೀಷ್ಮ, ಕರ್ಣ, ಯುದ್ಧದಲ್ಲಿ ಸದಾ ಜಯವನ್ನೇ ಹೊಂದುವ ಕೃಪ, ಅಶ್ವತ್ಥಾಮ, ವಿಕರ್ಣ, ಮತ್ತು ಸೌಮದತ್ತಿ.

06023009a ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ|

06023009c ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ||

ಇನ್ನೂ ಇತರ ಬಹಳ ಮಂದಿ ಶೂರರು, ನಾನಾ ಶಸ್ತ್ರಗಳನ್ನು ಪ್ರಹರಮಾಡಬಲ್ಲವರು, ಎಲ್ಲಾ ಯುದ್ಧ ವಿಶಾರದರು ನನಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.

06023010a ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಂ|

06023010c ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಂ||

ಭೀಷ್ಮನಿಂದ ರಕ್ಷಿಸಲ್ಪಟ್ಟ ನಮ್ಮ ಸೇನೆಯು ಪರ್ಯಾಪ್ತವಾಗಿಲ್ಲ. ಆದರೆ ಭೀಮನ[8] ರಕ್ಷಣೆಯಲ್ಲಿರುವ ಅವರ ಸೇನೆಯು ಪರ್ಯಾಪ್ತವಾಗಿದೆ[9].

06023011a ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ|

06023011c ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ||

ಈಗ ನೀವೆಲ್ಲರೂ ನಿಮ್ಮ ನಿಮ್ಮ ಸ್ಥಾನಗಳಲ್ಲಿ ನಿಂತು ಎಲ್ಲ ಕಡೆಗಳಿಂದಲೂ ಭೀಷ್ಮನನ್ನು ರಕ್ಷಿಸಬೇಕು.”

06023012a ತಸ್ಯ ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ|

06023012c ಸಿಂಹನಾದಂ ವಿನದ್ಯೋಚ್ಛೈಃ ಶಂಖಂ ದಧ್ಮೌ ಪ್ರತಾಪವಾನ್||

ಅವನಿಗೆ ಹರ್ಷವನ್ನುಂಟುಮಾಡಲೋಸುಗ ಪ್ರತಾಪವಾನ್ ಕುರುವೃದ್ಧ ಪಿತಾಮಹನು ಸಿಂಹನಾದ ಮಾಡಿ ಜೋರಾಗಿ ಶಂಖವನ್ನು ಊದಿದನು.

06023013a ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ|

06023013c ಸಹಸೈವಾಭ್ಯಹನ್ಯಂತ ಸ ಶಬ್ಧಸ್ತುಮುಲೋಽಭವತ್||

ಅದೇ ಸಮಯದಲ್ಲಿ ಒಂದೇ ಸಮನೆ ಶಂಖಗಳು, ಭೇರಿಗಳು, ಪಣವಾನಕಗಳು, ಮತ್ತು ಗೋಮುಖಗಳು ಮೊಳಗಿದವು. ಆ ಶಬ್ಧವು ಎಲ್ಲ ಕಡೆಯೂ ತುಂಬಿತು.

06023014a ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯಂದನೇ ಸ್ಥಿತೌ|

06023014c ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಧ್ಮತುಃ||

ಆಗ ಬಿಳಿಯ ಕುದುರೆಗಳನ್ನು ಕಟ್ಟಿದ್ದ ಮಹಾರಥದಲ್ಲಿ ನಿಂತಿದ್ದ ಮಾಧವ-ಪಾಂಡವರೂ ಕೂಡ ದಿವ್ಯ ಶಂಖಗಳನ್ನು ಊದಿದರು.

06023015a ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ|

06023015c ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ||

06023016a ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ|

06023016c ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ||

06023017a ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ|

06023017c ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ||

06023018a ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ|

06023018c ಸೌಭದ್ರಶ್ಚ ಮಹಾಬಾಹುಃ ಶಂಖಾನ್ದಧ್ಮುಃ ಪೃಥಕ್ ಪೃಥಕ್||

ಹೃಷೀಕೇಶ[10]ನು ಪಾಂಚಜನ್ಯವನ್ನೂ, ಧನಂಜಯನು ದೇವದತ್ತವನ್ನೂ, ಭೀಮಕರ್ಮಿ ವೃಕೋದರನು ಪೌಂಢ್ರವೆಂಬ ಮಹಾಶಂಖವನ್ನೂ, ಕುಂತೀಪುತ್ರ ರಾಜ ಯುಧಿಷ್ಠಿರನು ಅನಂತವಿಜಯವನ್ನೂ, ನಕುಲನು ಸುಘೋಷವನ್ನೂ, ಸಹದೇವನು ಪಣಿಪುಷ್ಪಕವನ್ನೂ ಊದಿದರು. ಹಾಗೆಯೇ ಮಹಾ ಧನುಸ್ಸನ್ನು ಹಿಡಿದಿದ್ದ ಕಾಶೀರಾಜ, ಮಹಾರಥಿ ಶಿಖಂಡಿ, ಧೃಷ್ಟದ್ಯುಮ್ನ, ವಿರಾಟ, ಸೋಲರಿಯದ ಸಾತ್ಯಕಿ, ದ್ರುಪದ, ದ್ರೌಪದಿಯ ಮಕ್ಕಳು ಮತ್ತು ಸರ್ವ ಪೃಥ್ವೀಪತಿಗಳೂ, ಮಹಾಬಾಹು ಸೌಭದ್ರ ಅಭಿಮನ್ಯುವೂ ಬೇರೆ ಬೇರೆಯಾಗಿ ತಮ್ಮ ತಮ್ಮ ಶಂಖಗಳನ್ನು ಊದಿದರು.

Image result for bhagavadgita06023019a ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್|

06023019c ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್||

ಲೋಕವನ್ನೇ ತುಂಬಿದ ಆ ಶಂಖಘೋಷವು ಪೃಥಿವ್ಯಾಕಾಶಗಳಲ್ಲಿ ಮಾರ್ದನಿಗೊಂಡು ಕೌರವರ ಎದೆಗಳನ್ನು ನಡುಗಿಸಿತು.

06023020a ಅಥ ವ್ಯವಸ್ಥಿತಾನ್ದೃಷ್ಟ್ವಾ ಧಾರ್ತರಾಷ್ಟ್ರಾನ್ಕಪಿಧ್ವಜಃ|

06023020c ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ||

06023021a ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ|

06023021c ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಽಚ್ಯುತ||

ಮಹೀಪತೇ! ಶಸ್ತ್ರಗಳನ್ನು ಹಿಡಿದು ಕದನ ಕುತೂಹಲಿಗಳಾಗಿ ತನ್ನ ಎದಿರು ನಿಂತ ಧಾರ್ತರಾಷ್ಟ್ರ ಕೌರವರನ್ನು ನೋಡಿ ಕಪಿಧ್ವಜ ಅರ್ಜುನನು ಬಿಲ್ಲನ್ನೆತ್ತಿ ಹಿಡಿದು ಸರ್ವೇಂದ್ರಿಯ ನಿಯಾಮಕನಾದ ಶ್ರೀಕೃಷ್ಣನಿಗೆ ಈ ಮಾತನ್ನು ಹೇಳಿದನು: “ಅಚ್ಯುತ! ಎರಡೂ ಸೇನೆಗಳ ನಡುವೆ ನನ್ನ ರಥವನ್ನು ಒಯ್ದು ನಿಲ್ಲಿಸು.

06023022a ಯಾವದೇತಾನ್ನಿರೀಕ್ಷೇಽಹಂ ಯೋದ್ಧುಕಾಮಾನವಸ್ಥಿತಾನ್|

06023022c ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ರಣಸಮುದ್ಯಮೇ||

ಈ ರಣರಂಗದಲ್ಲಿ ಯುದ್ಧಮಾಡಲು ಸಿದ್ಧರಾದವರನ್ನೂ, ಯಾರು ನನ್ನೆದುರು ಯುದ್ಧಮಾಡಲು ಉತ್ಸುಕರಾಗಿ ನಿಂತಿದ್ದಾರೆ ಎನ್ನುವುದನ್ನು ನಾನೊಮ್ಮೆ ನೋಡುತ್ತೇನೆ.

06023023a ಯೋತ್ಸ್ಯಮಾನಾನವೇಕ್ಷೇಽಹಂ ಯ ಏತೇಽತ್ರ ಸಮಾಗತಾಃ|

06023023c ಧಾರ್ತರಾಷ್ಟ್ರಸ್ಯ ದುರ್ಬುದ್ಧೇರ್ಯುದ್ಧೇ ಪ್ರಿಯಚಿಕೀರ್ಷವಃ||

ದುರ್ಬುದ್ಧಿ ದುರ್ಯೋಧನನಿಗೆ ಒಳ್ಳೆಯದನ್ನು ಮಾಡಲೆಂದು ಇಲ್ಲಿಗೈತಂದ ಯುದ್ಧಕುತೂಹಲಿಗಳು ಯಾರೆಂಬುದನ್ನು ಒಮ್ಮೆ ನೋಡುತ್ತೇನೆ.”

06023024a ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ|

06023024c ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಂ||

06023025a ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಂ|

06023025c ಉವಾಚ ಪಾರ್ಥ ಪಶ್ಯೈತಾನ್ಸಮವೇತಾನ್ಕುರೂನಿತಿ||

ಭಾರತ! ಗುಡಾಕೇಶ[11] ಅರ್ಜುನನು ಹೀಗೆ ಹೇಳಲು, ಹೃಷೀಕೇಶನು ರಥವನ್ನು ಎರಡೂ ಸೇನೆಗಳ ನಡುವೆ ಭೀಷ್ಮ-ದ್ರೋಣರೇ ಮೊದಲಾದ ಸರ್ವ ಮಹೀಕ್ಷಿತರ ಮುಂದೆ ತಂದು ನಿಲ್ಲಿಸಿ “ಪಾರ್ಥ! ಸೇರಿರುವ ಈ ಕುರುಗಳನ್ನು ನೋಡು!” ಎಂದನು.

Image result for bhagavadgita06023026a ತತ್ರಾಪಶ್ಯತ್ ಸ್ಥಿತಾನ್ಪಾರ್ಥಃ ಪಿತೄನಥ ಪಿತಾಮಹಾನ್|

06023026c ಆಚಾರ್ಯಾನ್ಮಾತುಲಾನ್ ಭ್ರಾತೄನ್ಪುತ್ರಾನ್ಪೌತ್ರಾನ್ಸಖೀಂಸ್ತಥಾ||

06023027a ಶ್ವಶುರಾನ್ಸುಹೃದಶ್ಚೈವ ಸೇನಯೋರುಭಯೋರಪಿ|

ಆ ಎರಡೂ ಸೇನೆಗಳಲ್ಲಿ ತಂದೆಗೆ ಸಮಾನರಾದವರು, ಅಜ್ಜಂದಿರು, ಗುರುಗಳು, ಸೋದರ ಮಾವಂದಿರು, ಒಡಹುಟ್ಟಿದವರು, ಮಕ್ಕಳು, ಮೊಮ್ಮಕ್ಕಳು, ಗೆಳೆಯರು, ಮಾವಂದಿರು, ಮತ್ತು ಸುಹೃದಯರು ನಿಂತಿರುವುದನ್ನು ಪಾರ್ಥನು ಕಂಡನು[12].

06023027c ತಾನ್ಸಮೀಕ್ಷ್ಯ ಸ ಕೌಂತೇಯಃ ಸರ್ವಾನ್ಬಂಧೂನವಸ್ಥಿತಾನ್||

06023028a ಕೃಪಯಾ ಪರಯಾವಿಷ್ಟೋ ವಿಷೀದನ್ನಿದಮಬ್ರವೀತ್|

ಅಲ್ಲಿ ಸೇರಿದ್ದ ಆ ಎಲ್ಲ ಬಂಧುಗಳನ್ನೂ ನೋಡಿದ ಕೌಂತೇಯನು ಕರುಣೆಯುಂಟಾಗಿ ನೊಂದುಕೊಂಡು ಈ ಮಾತುಗಳನ್ನಾಡಿದನು:

06023028c ದೃಷ್ಟ್ವೇಮಾನ್ಸ್ವಜನಾನ್ ಕೃಷ್ಣ ಯುಯುತ್ಸೂನ್ಸಮವಸ್ಥಿತಾನ್||

06023029a ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ|

06023029c ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ||

“ಕೃಷ್ಣ! ಇಲ್ಲಿ ಯುದ್ಧಕ್ಕಾಗಿ ಕಲೆತ ಈ ಸ್ವಜನರನ್ನು ಕಂಡು ನನ್ನ ಅವಯವಗಳೆಲ್ಲ ಸಡಿಲಾಗುತ್ತಿವೆ. ಬಾಯಿ ಒಣಗುತ್ತಿದೆ. ಮೈ ನಡುಗುತ್ತಿದೆ. ನವಿರೇಳುತ್ತಿದೆ.

06023030a ಗಾಂಡೀವಂ ಸ್ರಂಸತೇ ಹಸ್ತಾತ್ತ್ವಕ್ಚೈವ ಪರಿದಹ್ಯತೇ|

06023030c ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ||

ಗಾಂಡೀವ ಧನುಸ್ಸು ಕೈಯಿಂದ ಜಾರುತ್ತಿದೆ. ಚರ್ಮ ಸುಡುತ್ತಿದೆ. ನಿಲ್ಲುವುದಕ್ಕೂ ತ್ರಾಣವಿಲ್ಲ. ಮನಸ್ಸು ಗಾಬರಿಗೊಂಡಿದೆ.

06023031a ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ|

06023031c ನ ಚ ಶ್ರೇಯೋಽನುಪಶ್ಯಾಮಿ ಹತ್ವಾ ಸ್ವಜನಮಾಹವೇ||

ಕೇಶವ! ಕೆಟ್ಟ ಶಕುನಗಳು ಕಾಣುತ್ತಿವೆ. ಈ ಯುದ್ಧದಲ್ಲಿ ಸ್ವಜನರನ್ನು ಕೊಂದರೆ ಏನು ಶ್ರೇಯಸ್ಸೋ ಕಾಣೆ.

06023032a ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ|

06023032c ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ||

ಗೋವಿಂದ! ಕೃಷ್ಣ! ನನಗೆ ಇದರಿಂದ ದೊರೆಯುವ ವಿಜಯವೂ ಬೇಡ. ರಾಜ್ಯವೂ ಬೇಡ. ಸುಖವೂ ಬೇಡ. ಈ ರಾಜ್ಯದಿಂದಾಗಲೀ ಭೋಗಗಳಿಂದಾಗಲೀ, ಬದುಕಿನಿಂದಾಗಲೀ ನಮಗೆ ಆಗಬೇಕಾಗಿದ್ದೇನಿದೆ?

06023033a ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ|

06023033c ತ ಇಮೇಽವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ||

06023034a ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ|

06023034c ಮಾತುಲಾಃ ಶ್ವಶುರಾಃ ಪೌತ್ರಾಃ ಸ್ಯಾಲಾಃ ಸಂಬಂಧಿನಸ್ತಥಾ||

ರಾಜ್ಯ, ಭೋಗ, ಸುಖಗಳನ್ನು ನಾವು ಯಾರಿಗಾಗಿ ಕೋರುತ್ತಿದ್ದೇವೋ ಆ ಗುರುಗಳು, ಪಿತೃಗಳು, ಮಕ್ಕಳು, ಪಿತಾಮಹರು, ಮಾತುಲರು, ಮಾವಂದಿರು, ಮೊಮ್ಮಕ್ಕಳು, ಮೈದುನರು ಮತ್ತು ಇತರ ಸಂಬಂಧಿಕರೆಲ್ಲರೂ ಇಲ್ಲಿ ಯುದ್ದೋದ್ಯಮಿಗಳಾಗಿ ಬಂದಿದ್ದಾರೆ.

06023035a ಏತಾನ್ನ ಹಂತುಮಿಚ್ಛಾಮಿ ಘ್ನತೋಽಪಿ ಮಧುಸೂದನ|

06023035c ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ||

ಮಧುಸೂದನ! ಇವರು ನನ್ನನ್ನು ಕೊಲ್ಲುವಂತಿದ್ದರೂ ನಾನು ಅವರನ್ನು ಕೊಲ್ಲಲಾರದವನು ಮೂರುಲೋಕದ ಒಡೆತನ ಸಿಗುವಹಾಗಿದ್ದರೂ ಈ ಭೂಮಿಯ ಒಡೆತನದ ಆಸೆಯಿಂದ ಕೊಂದೇನೇ?

06023036a ನಿಹತ್ಯ ಧಾರ್ತರಾಷ್ಟ್ರಾನ್ನಃ ಕಾ ಪ್ರೀತಿಃ ಸ್ಯಾಜ್ಜನಾರ್ದನ|

06023036c ಪಾಪಮೇವಾಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ[13]||

ಜನಾರ್ದನ! ಈ ಕೌರವರನ್ನು ಕೊಲ್ಲುವುದರಿಂದ ನಮಗಾಗುವ ಸಂತೋಷವೇನು? ಪಾತಕಿಗಳಾಗಿದ್ದರೂ ಈ ಬಂಧುಗಳನ್ನು ಕೊಂದು ನಮಗೆ ಪಾಪವೇ ಗಂಟು ಬಿದ್ದೀತು[14]!

06023037a ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟ್ರಾನ್ಸಬಾಂಧವಾನ್|

06023037c ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ||

ಮಾಧವ! ಬಂಧುಗಳಾದ ಕೌರವರನ್ನು ಕೊಲ್ಲುವುದು ಸರಿಯಲ್ಲ. ನಮ್ಮವರನ್ನೇ ಕೊಂದು ನಾವು ಹೇಗೆ ಸುಖಿಗಳಾದೇವು?

06023038a ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತಚೇತಸಃ|

06023038c ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಂ||

06023039a ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಂ|

06023039c ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ||

ಇವರಾದರೋ ದುರಾಸೆಯಿಂದ ಬುದ್ಧಿಗೆಟ್ಟು ಮಿತ್ರದ್ರೋಹದಿಂದಾಗುವ ಪಾಪವನ್ನೂ ಕುಲನಾಶದಿಂದಾಗುವ ದೋಷವನ್ನೂ ತಿಳಿಯದವರಾಗಿದ್ದಾರೆ. ಕುಲಕ್ಷಯದಿಂದಾಗುವ ಕೇಡನ್ನು ತಿಳಿಯಬಲ್ಲ ನಮಗಾದರೂ ಈ ಪಾಪದಿಂದ ನಿವೃತ್ತರಾಗಬೇಕೆಂದು ತಿಳಿಯಬಾರದೇಕೆ ಜನಾರ್ದನ!

06023040a ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ|

06023040c ಧರ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮೋಽಭಿಭವತ್ಯುತ||

ಕುಲವು ನಾಶವಾಗಲು ಸನಾತನ ಕುಲಧರ್ಮಗಳು ನಾಶವಾಗುತ್ತವೆ. ಧರ್ಮವು ನಷ್ಟವಾಗಲು ಕುಲವನ್ನೆಲ್ಲ ಅಧರ್ಮವೇ ಆವರಿಸಿಬಿಡುವುದು.

06023041a ಅಧರ್ಮಾಭಿಭವಾತ್ ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ|

06023041c ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ||

ಕೃಷ್ಣ! ಅಧರ್ಮವೇ ಬೆಳೆದಾಗ ಕುಲಸ್ತ್ರೀಯರು ಕೆಡುವರು. ಸ್ತ್ರೀಯರು ಶೀಲಭ್ರಷ್ಟೆಯರಾಗಿ ಕೆಟ್ಟಾಗ ಜಾತಿಗಳ ಬೆರಕೆಯಾಗುವುದು.

06023042a ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ|

06023042c ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ||

ಈ ವರ್ಣಸಾಂಕರ್ಯವು ಕುಲಘಾತಕರನ್ನೂ ಕುಲವನ್ನೂ ಕೂಡಿಯೇ ನರಕಕ್ಕೆ ಬೀಳಿಸುವುದು. ಅಂಥವರ ಪಿತೃಗಳು ಪಿಂಡಪ್ರದಾನವಿಲ್ಲದವರೂ ಜಲತರ್ಪಣವಿಲ್ಲದವರೂ ಆಗಿ ನರಕಕ್ಕೆ ಬೀಳುವರು.

06023043a ದೋಷೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ|

06023043c ಉತ್ಸಾದ್ಯಂತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ||

ಜಾತಿಯ ಬೆರಕೆಗೆ ಕಾರಣರಾದ ಕುಲಘಾತಕರ ಈ ದೋಷಗಳಿಂದಾಗಿ ಬಹುಕಾಲದಿಂದ ಅನುಸರಿಸಿಕೊಂಡು ಬಂದ ಕಾಲಧರ್ಮಗಳೂ, ಜಾತಿಧರ್ಮಗಳು ಕೆಟ್ಟು ಹೋಗುವವು.

Image result for bhagavadgita06023044a ಉತ್ಸನ್ನಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ದನ|

06023044c ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ||

ಜನಾರ್ದನ! ಕುಲಧರ್ಮವನ್ನು ಕೆಡಿಸಿಕೊಂಡ ಮನುಷ್ಯರಿಗೆ ನರಕವಾಸವು ತಪ್ಪಿದ್ದಲ್ಲವೆಂಬುದನ್ನು ಕೇಳಿದ್ದೇವೆ.

06023045a ಅಹೋ ಬತ ಮಹತ್ಪಾಪಂ ಕರ್ತುಂ ವ್ಯವಸಿತಾ ವಯಂ|

06023045c ಯದ್ರಾಜ್ಯಸುಖಲೋಭೇನ ಹಂತುಂ ಸ್ವಜನಮುದ್ಯತಾಃ||

ರಾಜ್ಯದ ಲಾಭದಿಂದ ದೊರೆಯಬಹುದಾದ ಸುಖದ ಲೋಭದಿಂದ ಸ್ವಜನರನ್ನು ಕೊಲ್ಲಲು ಮುಂದಾಗಿರುವ ನಾವು ದೊಡ್ಡದೊಂದು ಪಾಪಕಾರ್ಯವನ್ನು ಮಾಡಲು ಹೊರಟಿದ್ದೀವಲ್ಲ! ಅಯ್ಯೋ!

06023046a ಯದಿ ಮಾಮಪ್ರತೀಕಾರಮಶಸ್ತ್ರಂ ಶಸ್ತ್ರಪಾಣಯಃ|

06023046c ಧಾರ್ತರಾಷ್ಟ್ರಾ ರಣೇ ಹನ್ಯುಸ್ತನ್ಮೇ ಕ್ಷೇಮತರಂ ಭವೇತ್||

ಪ್ರತೀಕಾರವನ್ನು ಮಾಡದ, ಶಸ್ತ್ರವನ್ನು ಹಿಡಿಯದ ನನ್ನನ್ನು ಆಯುಧಪಾಣಿಗಳಾದ ಕೌರವರೇ ಕೊಂದುಬಿಟ್ಟರೆ ಎಷ್ಟೋ ಕ್ಷೇಮವಾದೀತು![15]

06023047a ಏವಮುಕ್ತ್ವಾರ್ಜುನಃ ಸಂಖ್ಯೇ ರಥೋಪಸ್ಥ ಉಪಾವಿಶತ್|

06023047c ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ||

ಹೀಗೆ ಹೇಳಿ ದುಃಖದಿಂದ ಕದಡಿದ ಮನಸ್ಸುಳ್ಳ ಅರ್ಜುನನು ಬಿಲ್ಲು ಬಾಣಗಳನ್ನು ಬಿಸುಟು ರಥದಲ್ಲಿ ಕುಳಿತುಬಿಟ್ಟನು.[16]

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭಗವದ್ಗೀತಾಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಅರ್ಜುನವಿಶಾದಯೋಗೋ ನಾಮ ಪ್ರಥಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭಗವದ್ಗೀತಾಪರ್ವದಲ್ಲಿ ಶ್ರೀಮದ್ಭಗವದ್ಗೀತ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಅರ್ಜುನವಿಶಾದಯೋಗವೆಂಬ ಮೊದಲನೇ ಅಧ್ಯಾಯವು.

ಭೀಷ್ಮಪರ್ವಣಿ ತ್ರಯೋವಿಂಶೋಽಧ್ಯಾಯಃ||

ಭೀಷ್ಮಪರ್ವದಲ್ಲಿ ಇಪ್ಪತ್ಮೂರನೇ ಅಧ್ಯಾಯವು.

Related image

[1] ಭಗವದ್ಗೀತಾಪರ್ವವು ಭೀಷ್ಮಪರ್ವದ ೧೪ನೆಯ ಅಧ್ಯಾಯದಿಂದಲೇ ಪ್ರಾರಂಭವಾಗಿದ್ದರೂ, ಸಾಂಪ್ರದಾಯಿಕವಾದ “ಭಗವದ್ಗೀತೆ”ಯು ಈ ೨೩ನೆಯ ಅಧ್ಯಾಯದಿಂದ ಪ್ರಾರಂಭವಾಗುತ್ತದೆ. ಮೂಲವಾಗಿ ವ್ಯಾಸರು ಭಗವದ್ಗೀತಾಪರ್ವವೆಂದು ಭೀಷ್ಮಪರ್ವದ ೧೪ ರಿಂದ ೪೦ನೇ ಅಧ್ಯಾಯದ ವರೆಗಿನ ೩೬ ಅಧ್ಯಾಗಳಿಗೆ ಹೆಸರನ್ನಿಟ್ಟಿದ್ದರೂ, ಶ್ರೀ ಶಂಕರರೇ ಮೊದಲಾದ ಮತಾಚಾರ್ಯರು ಒಟ್ಟು ೭೦೦ ಶ್ಲೋಕಗಳನ್ನುಳ್ಳ ಈ ೨೩ರಿಂದ ೪೦ನೇ ಅಧ್ಯಾಯದ ವರೆಗಿನ ಒಟ್ಟು ೧೮ ಅಧ್ಯಾಯಗಳಿಗೆ ಮಾತ್ರ “ಭಗವದ್ಗೀತಾ” ಎಂಬ ಹೆಸರನ್ನಿತ್ತಿದ್ದಾರೆ. ಈ ಭಾಗಕ್ಕೆ ಶ್ರೀ ಮಧುಸೂದನಸರಸ್ವತಿಗಳು ಪಾರ್ಥಾಯ ಪ್ರತಿಬೋಧಿತಾಂ - ಮೊದಲಾದ ಒಂಭತ್ತು ಪ್ರಾರ್ಥನಾ ಶ್ಲೋಕಗಳನ್ನೂ ಮಾಡಿದ್ದಾರೆ. ಮುಂದೆ ಅಂಗನ್ಯಾಸ, ಕರನ್ಯಾಸ, ಪಾರಾಯಣಕ್ರಮ ಎಲ್ಲವೂ ಬೆಳೆಯುತ್ತಾ ಹೋಗಿದೆ. ಭಗವದ್ಗೀತೆಯ ಪ್ರತಿಯೊಂದು ಅದ್ಯಾಯದ ಕೊನೆಯಲ್ಲಿಯೂ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮ ವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನಸಂವಾದೇ...ಎಂಬುದಾಗಿ ಇದೆ. ಇದೂ ಕೂಡ ಶ್ರೀ ಶಂಕರ ಭಾಷ್ಯದಿಂದ ರೂಢಿಯಲ್ಲಿದೆ. ಭಗವಂತನು ಹೇಳಿದ್ದಿದರಿಂದ ಇದು ಭಗವದ್ಗೀತೆ. ಉಪನಿಷತ್ತುಗಳ ಸಾರವೇ ಆಗಿರುವುದರಿಂದ “ಗೀತೋಪನಿಷತ್ತು” ಎಂಬ ಹೆಸರನ್ನೂ ಪಡೆದಿದೆ. ಬ್ರಹ್ಮವಸ್ತುವಿನ ಕುರಿತೇ ಹೇಳುವುದರಿಂದ “ಬ್ರಹ್ಮವಿದ್ಯೆ”ಯೆಂದೂ ಕರೆಯಲ್ಪಟ್ಟಿದೆ.

ಶ್ರೀ ಶಂಕರಾಚಾರ್ಯರ ಭಾಷ್ಯಗಳನ್ನು ಪ್ರಸ್ಥಾನತ್ರಯ - ಉಪನಿಷತ್ತುಗಳು, ಭಗವದ್ಗೀತೆ, ಬ್ರಹ್ಮಸೂತ್ರ - ಭಾಷ್ಯಗಳೆಂದು ಕರೆಯುತ್ತಾರೆ. ಪ್ರಸ್ಥಾನವೆಂದರೆ ತತ್ವವನ್ನು ತಿಳಿಯುವುದಕ್ಕೆ ಇರುವ ಮಾರ್ಗಗಳು. ವೇದದ ಅರಣ್ಯಕವೆಂಬ ಭಾಗದಲ್ಲಿಯೇ ಬಲುಮಟ್ಟಿಗೆ ಇರುವ ಉಪನಿಷತ್ತುಗಳು ಆತ್ಮಜ್ಞಾನವನ್ನು ನೀಡಿದರೆ, ಭಗವದ್ಗೀತೆಯು ಉಪನಿಷತ್ತುಗಳನ್ನೇ ಆಧಾರವನ್ನಾಗಿಟ್ಟುಕೊಂಡು ಕರ್ಮ, ಯೋಗ, ಭಕ್ತಿ ಎಂಬ ಸಾಧನಗಳಿಗೂ ಆತ್ಮಜ್ಞಾನವೆಂಬ ಸಾಧ್ಯಕ್ಕೂ ಇರುವ ಸಂಬಂಧವನ್ನು ವಿಶದಗೊಳಿಸುತ್ತದೆ. ಬ್ರಹ್ಮಸೂತ್ರವು ಉಪನಿಷತ್ತು ಮತ್ತು ಭಗವದ್ಗೀತೆಯಲ್ಲಿ ಪ್ರತಿಪಾದಿತವಾದ ತತ್ವಗಳನ್ನು ತರ್ಕ-ನ್ಯಾಯಗಳ ಮೂಲಕ ಗೊತ್ತುಪಡಿಸುತ್ತದೆ. ಹೀಗೆ ಉಪನಿಷತ್ತುಗಳಲ್ಲಿ ಸಾಮಾನ್ಯವಾಗಿ ಪ್ರತಿಪಾದಿಸಲ್ಪಟ್ಟಿರುವ ವಿಷಯವನ್ನು ಭಗವದ್ಗೀತೆ-ಬ್ರಹ್ಮಸೂತ್ರಗಳು ವಿಶೇಷರೀತಿಯಲ್ಲಿ ನಿರ್ಧರಿಸಿರುವುದರಿಂದ ವೇದಾಂತಸಿದ್ಧಾಂತವನ್ನು ಸಂಪೂರ್ಣವಾಗಿ ತಿಳಿಯಬೇಕಾದರೆ ಈ ಮೂರನ್ನೂ ಕ್ರಮವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಈ ಕ್ರಮದಲ್ಲಿ ಗೀತಾಪ್ರಸ್ಥಾನವು ಎರಡನೆಯದಾಗಿದೆ.

ಶ್ರೀ ಶಂಕರಾಚಾರ್ಯರ ಮತದಲ್ಲಿ “ಜ್ಞಾನದಿಂದಲೇ ಮುಕ್ತಿ; ಆ ಮುಕ್ತಿಯೆಂಬುದು ಶರೀರವು ಬಿದ್ದುಹೋದ ಬಳಿಕ ಆಗುವುದಲ್ಲ, ಜ್ಞಾನವಾದಕೂಡಲೇ ಬದುಕಿರುವಾಗಲೇ ದೊರಕುವಂತಹುದು. ಜ್ಞಾನಕ್ಕೆ ತನ್ನ ಫಲವಾದ ಮುಕ್ತಿಯನ್ನು ಕೊಡುವುದಕ್ಕೆ ಕರ್ಮದ ನೆರವೇನೂ ಬೇಕಿರುವುದಿಲ್ಲ. “ಸರ್ವಕರ್ಮಸಂನ್ಯಾಸಪೂರ್ವಕವಾದ ಜ್ಞಾನನಿಷ್ಠೆಯನ್ನು ಸಂಪಾದಿಸಿಕೊಳ್ಳುವುದರಿಂದಲೇ ಸಂಸಾರವು ಸಮೂಲವಾಗಿ ನಾಶವಾಗುತ್ತದೆ; ವರ್ಣಾಶ್ರಮಧರ್ಮರೂಪವಾಗಿರುವ ಕರ್ಮವು ಅಭ್ಯುದಯವನ್ನು ಕೊಡುತ್ತದೆ, ದೇವಾದಿ ಸ್ಥಾನಗಳನ್ನು ಪಡೆಯಲು ಸಾಧನವಾಗಿರುತ್ತದೆ; ಆದರೆ ಈಶ್ವರಾರ್ಪಣಬುದ್ಧಿಯಿಂದ ಕರ್ಮಗಳನ್ನು ಮಾಡಿದರೆ ಸತ್ತ್ವಶುದ್ಧಾದಿಗಳ ಮೂಲಕ ಮುಕ್ತಿಗೂ ಪರಮ ಸಾಧನವಾಗುತ್ತದೆ. ಕರ್ಮರೂಪವಾದ ಪ್ರವೃತ್ತಿಧರ್ಮ, ಜ್ಞಾನವೈರಾಗ್ಯರೂಪವಾದ ನಿವೃತ್ತಿಧರ್ಮ, ವಾಸುದೇವನೆಂಬ ಪರಬ್ರಹ್ಮ – ಇವುಗಳನ್ನು ತಿಳಿಸುವುದೇ ಗೀತೆಯ ಉದ್ದೇಶವು.”

[2] ಗೀತೆಯು ಬ್ರಹ್ಮವಿದ್ಯೆಯನ್ನು ಪ್ರತಿಪಾದಿಸುವುದಾಗಿರುವುದರಿಂದ ಈ ಶ್ಲೋಕಕ್ಕೆ ಕೇವಲ ಆಧ್ಯಾತ್ಮಪರವಾದ ಅರ್ಥವೂ ಇದೆ. “ಧರ್ಮಕ್ಷೇತ್ರವೂ ಕುರುಕ್ಷೇತ್ರವೂ ಆದ ಮನುಷ್ಯ ಶರೀರದಲ್ಲಿ ಯುಯುತ್ಸುಗಳಾಗಿರುವ ಮಮತಾದಿ ದುರ್ವೃತ್ತಿಗಳೂ, ಧರ್ಮಾದಿ ಸದ್ವೃತ್ತಿಗಳೂ ಏನು ಮಾಡಿದವು?” ಇಲ್ಲಿ ಮಾಮಕಾಃ ಎನ್ನುವುದಕ್ಕೆ ಮಮತಾ-ನನ್ನದು ಎಂಬ ಭಾವನೆ. ಮಮೇತಿ ಕಾಯಂತೀತಿ ಮಮಕಾಃ| ತ ಏವ ಮಾಮಕಾಃ| ಪಾಂಡವಾಃ ಎಂದರೆ ಸ್ವಚ್ಛವಾದ ಸದ್ವೃತ್ತಿಗಳು ಎಂದರ್ಥ. ಪಂಡಾ ಆತ್ಮವಿಷಯಾ ಬುದ್ಧಿಃ| ಎಂದು ಭಗವತ್ಪಾದರು ವಾಖ್ಯಾನ ಮಾಡಿರುತ್ತಾರೆ. ಕೌ ರೌತೀತಿ ಕುರುಃ| ಭೂಮಿಯಲ್ಲಿ ಶಬ್ಧ ಮಾಡುವುದು ಕುರು ಅರ್ಥಾತ್ ಪ್ರಾಣಿ. ಅದರ ಕ್ಷೇತ್ರ ಶರೀರ. ಪ್ರಾಣಿಯ ಶರೀರ. ಕುರುಕ್ಷೇತ್ರಂ ಕುಚಸ್ಥಾನೇ ಪ್ರಯಾಗಂ ಹೃತ್ಸರೋರುಹೇ| ಶರೀರಿಯ ಕುಚಸ್ಥಾನಗಳಿಗೂ ಕುರುಕ್ಷೇತ್ರವೆಂದು ಹೆಸರು ಎಂದು ಜ್ಞಾನಯೋಗಕಾಂಡದಲ್ಲಿ ಹೇಳಿದೆ. ಧರ್ಮಕ್ಷೇತ್ರವೆಂದರೆ ಧರ್ಮಾನುಷ್ಠಾನಕ್ಕೆ ಅಧಿಕೃತವಾದ ಶರೀರ; ಅದು ಮನುಷ್ಯ ಶರೀರವೇ ಆಗಿದೆ. ಇತರ ಪ್ರಾಣಿಗಳ ಶರೀರಗಳೂ ದೇವತಾ ಶರೀರಗಳೂ ಕೇವಲ ಭೋಗಕ್ಷೇತ್ರಗಳಾಗಿದ್ದು ಧರ್ಮಪ್ರದವಾದ ಕರ್ಮಗಳನ್ನು ಮಾಡಲು ಆ ಶರೀರಗಳಿಗೆ ಸಾಧ್ಯವಿಲ್ಲ. ಮನುಷ್ಯ ಶರೀರಕ್ಕೆ ಮಾತ್ರ ಈ ಅಧಿಕಾರವಿದೆ. ಆದುದರಿಂದ ಧರ್ಮಕ್ಷೇತ್ರ-ಕುರುಕ್ಷೇತ್ರ ಶಬ್ಧಗಳಿಂದ ಇಲ್ಲಿ ಧಾರ್ಮಿಕವಾದ ಮನುಷ್ಯ ಶರೀರದ ಪರಿಗ್ರಹವಾಗಿದೆ.

[3] ಸಾತ್ಯಕಿ

[4] ಶಿಶುಪಾಲನ ಮಗ. ಮುಂದೆ ೧೪ನೇ ದಿನದ ಯುದ್ಧದಲ್ಲಿ ದ್ರೋಣನಿಂದ ಹತನಾದವನು.

[5] ವೃಷ್ಣಿವಂಶದ ಕ್ಷತ್ರಿಯ.

[6] ಕುಂತಿಯ ಸೋದರ; ದ್ರೋಣನಿಂದ ಹತನಾದವನು.

[7] ಯುಧಾಮನ್ಯು ಮತ್ತು ಉತ್ತಮೌಜಸರು ಪಾಂಚಾಲ್ಯರು; ಅರ್ಜುನನ ಚಕ್ರರಕ್ಷಕರು; ಅಶ್ವತ್ಥಾಮನಿಂದ ಹತರಾದವರು.

[8] ಭೀಮನು ವಜ್ರವ್ಯೂಹದ ಮುಂದಿದ್ದು ಅದನ್ನು ಕಾಪಾಡಿಕೊಂಡಿದ್ದನು. ಪಾಂಡವ ಸೇನೆಗೆ ಆಗ ಧೃಷ್ಟದ್ಯುಮ್ನನೇ ಸೇನಾಪತಿಯಾಗಿದ್ದರೂ ‘ಭೀಮಾಭಿರಕ್ಷಿತಂ’ ಎಂದು ಹೇಳಲಾಗಿದೆ.

[9] ಈ ಶ್ಲೋಕದಲ್ಲಿರುವ ಪರ್ಯಾಪ್ತಂ ಮತ್ತು ಅಪರ್ಯಾಪ್ತಂ ಶಬ್ಧಗಳು ಎರಡುವಿಧವಾದ ಅರ್ಥಗಳನ್ನು ಕೊಡುತ್ತವೆ. ಸಂಸ್ಕೃತ-ಕನ್ನಡ ಶಬ್ಧಕೋಶದಲ್ಲಿ ಅಪರ್ಯಾಪ್ತಂ ಎಂಬುದಕ್ಕೆ ಅಪಾರವಾದ, ಅಪರಿಮಿತವಾದ, ಅಳತೆಯನ್ನು ಮೀರಿದ ಎಂಬ ಅರ್ಥಗಳಿವೆ. ಸಾಕಾಗದ, ಕಡಿಮೆಯಾದ, ಅಸಂಪೂರ್ಣವಾದ, ಅಸಮರ್ಥವಾದ, ಶಕ್ತಿಯಿಲ್ಲದ - ಎಂಬ ಅರ್ಥಗಳೂ ಇವೆ. ಭೀಷ್ಮನಿಂದ ರಕ್ಷಿತವಾದ ನಮ್ಮ ಸೈನ್ಯವು ಅಪರಿಮಿತವಾಗಿದೆ; ಭೀಮನಿಂದ ರಕ್ಷಿತವಾದ ಪಾಂಡವರ ಸೈನ್ಯವೂ ಪರಿಮಿತವಾಗಿದೆ - ಎಂದೂ ಈ ಶ್ಲೋಕಕ್ಕೆ ಅರ್ಥೈಸಬಹುದಾಗಿದೆ. ಅಪರ್ಯಾಪ್ತಂ ಎಂದರೆ ಸಾಕಾಗದ ಎಂಬ ಅರ್ಥವನ್ನೇ ಪ್ರತಿಪಾದಿಸುತ್ತಾ ಶ್ರೀ ರಾಮಾನುಜರು ಈ ಶ್ಲೋಕಕ್ಕೆ ಹೀಗೆ ವ್ಯಾಖ್ಯಾನ ಮಾಡಿರುತ್ತಾರೆ: ದುರ್ಯೋಧನಃ ಸ್ವಯಮೇವ ಭೀಮಾಭಿರಕ್ಷಿತಂ ಪಾಂಡವಾನಾಂ ಬಲಂ, ಆತ್ಮೀಯಂ ಚ ಭೀಷ್ಮಾಭಿರಕ್ಷಿತಂ ಬಲವಲೋಕ್ಯ ಆತ್ಮವಿಜಯೇ ತಸ್ಯ ಬಲಸ್ಯ ಪರ್ಯಾಪ್ತತಾಂ ಆತ್ಮೀಯಸ್ಯ ಬಲಸ್ಯ ತದ್ವಿಜಯೇ ಚಾಪರ್ಯಾಪ್ತತಾಮಾಚಾರ್ಯಾಯ ನಿವೇದ್ಯ ನಿರ್ವಿಷಣ್ಣೋಽಭೂತ್| ಇತರ ಅನುವಾದಗಳು ಈ ರೀತಿ ಇವೆ: (೧) ನಮ್ಮ ಸೈನ್ಯವು ಸಮರ್ಥ ಅಥವಾ ಅಪರಿಮಿತ; ಪಾಂಡವರದು ಅಸಮರ್ಥ ಅಥವಾ ಪರಿಮಿತ  - ಬ್ರಹ್ಮಾನಂದಗಿರಿ. (೨) ನಮ್ಮ ಸೈನ್ಯವು ತಕ್ಕಷ್ಟಿಲ್ಲವಾದರೂ ಭೀಷ್ಮ ರಕ್ಷಿತ; ಅವರದು ತಕ್ಕಷ್ಟಿದ್ದರೂ ಭೀಮರಕ್ಷಿತವಾಗಿದೆ; ಆದುದರಿಂದ ನಮ್ಮದು ಜಯಕ್ಕೆ ಸಾಕು - ಶಂಕರಾನಂದ (೩) ನಮ್ಮ ಸೈನ್ಯವನ್ನು ಪಾಂಡವರು ಸುತ್ತುಗಟ್ಟಲಾರರು; ನಾವು ಅವರನ್ನು ಮುತ್ತಬಹುದು - ನೀಲಕಂಠ (೪) ಭೀಷ್ಮರು ಉಭಯ ಪಕ್ಷಪಾತಿಗಳಾದುದರಿಂದ ನಮ್ಮ ಸೈನ್ಯವು ಸಮರ್ಥವಲ್ಲ - ಶ್ರೀಧರ.

[10] ಹೃಷೀಕ ಎಂದರೆ ಇಂದ್ರಿಯಗಳಿಗೆ, ಈಶ ಎಂದರೆ ಒಡೆಯನಾದವನು ಹೃಷೀಕೇಶ. ಹೃಷ್ಟವಾಗಿ ನಿಮಿರಿ ನಿಂತಿರುವ ತಲೆಗೂದಲುಳ್ಳವನೆಂದೂ ಕೆಲವರು ಅರ್ಥೈಸಿದ್ದಾರೆ.

[11] ಗುಡಾಕ ಎಂದರೆ ನಿದ್ರೆ, ಈಶ ಎಂದರೆ ಒಡೆಯನಾದವನು. ಗುಡಾಕೇಶನು ನಿದ್ರೆಯನ್ನು ನಿಯಂತ್ರಣದಲ್ಲಿಟ್ಟುಕೊಂಡವನು ಎಂದರ್ಥ. ಪೊದೆಯಂತಹ ತಲೆಗೂದಲುಳ್ಳವನೆಂದೂ ಕೆಲವರು ಅರ್ಥೈಸಿದ್ದಾರೆ.

[12] ಆದರೆ ಅರ್ಜುನನು ಆ ಸಮಯದಲ್ಲಿ ಹದಿಮೂರು ವರ್ಷಗಳು ತಮ್ಮೆಲ್ಲರನ್ನೂ ಕಾಡಿಸಿದ ಪರಮವೈರಿ ದುರ್ಯೋಧನನನ್ನು ಕಾಣಲಿಲ್ಲ. ಸಹೋದರನಾದ ದುರ್ಯೋಧನನನ್ನು ಕಂಡನು.

[13] ಮನೆಗೆ ಬೆಂಕಿಯಿಟ್ಟವನು, ವಿಷವನ್ನು ಹಾಕಿದವನು, ಶಸ್ತ್ರವನ್ನೆತ್ತಿ ಹೊಡೆಯುವುದಕ್ಕೆ ಬರುವವನು, ಇತರರ ಭೂಮಿಯನ್ನು ಹೆಂಡತಿಯನ್ನೂ ಅಪಹರಿಸುವವನು – ಆತತಾಯಿ (ಮನುಸ್ಮೃತಿ).

[14] ಆತತಾಯಿನಮಾಯಾಂತಂ ಹನ್ಯಾದೇವಾವಿಚಾರಯನ್| ನಾತತಾಯಿವಧೇ ದೋಷೋ ಹಂತುರ್ಭವತಿ ಕಶ್ಚನ|| ಅರ್ಥಾತ್ ಆತತಾಯಿಯು ಸಿಕ್ಕೊಡನೆಯೇ ಯಾವುದನ್ನೂ ವಿಚಾರಿಸದೇ ವಧಿಸಬೇಕು. ಆತತಾಯಿಯ ವಧೆಯಲ್ಲಿ ಯಾವ ದೋಷವೂ ಇಲ್ಲ (ಮನುಸ್ಮೃತಿ). ಆದರೆ ಇಲ್ಲಿ ಅರ್ಜುನನು ಆತತಾಯಿ ಕೌರವರನ್ನು ಕೊಲ್ಲುವುದು ಪಾಪವೆಂದು ತಿಳಿಯುತ್ತಾನೆ.

[15] ದೃಷ್ಟ್ವೇಮಂ ಎಂಬ ಶ್ಲೋಕಾರ್ಧದಿಂದ ಯದಿ ಮಾಂ ಎಂಬ ಶ್ಲೋಕಾಂತ್ಯದವರೆಗಿನ ೧೮ ೧/೨ ಶ್ಲೋಕಗಳು ಭಗವದ್ಗೀತೆಯ ಅವತಾರಕ್ಕೆ ಮೂಲ ಶ್ಲೋಕಗಳಾಗಿವೆ. ಅರ್ಜುನನ ಈ ವಿಷಾದಸಂದರ್ಭವು ಶ್ರೀಕೃಷ್ಣನು ಮಾಡಿದ ಜ್ಞಾನಯೋಗ-ಕರ್ಮಯೋಗ-ಭಕ್ತಿಯೋಗಗಳ ಉಪದೇಶಕ್ಕೆ ಕಾರಣವಾದುದರಿಂದ ಅರ್ಜುನನ ಈ ವಿಷಾದವನ್ನೂ ಕೂಡ ಆಚಾರ್ಯರು ಯೋಗವೆಂದೇ ಹೆಸರಿಸಿದ್ದಾರೆ. ಹಿಂದೆ ಬಹಳಬಾರಿ ಯುದ್ಧಮಾಡಿದ್ದ ಅರ್ಜುನನಿಗೆ ಈಗಲೇ ಏಕೆ ಈ ರೀತಿಯ ವಿಷಾದವುಂಟಾಯಿತು? ಅರ್ಜುನನಿಗೆ ಎದುರಾಗಿ ನಿಂತಿದ್ದವರು ಇಂದು ಅವನಿಗೆ - ಮೊದಲಿನ ಯುದ್ಧಸಂದರ್ಭಗಳಲ್ಲಿ ಕಂಡುಬಂದಿದ್ದಂತೆ - ಶತ್ರುಗಳಾಗಿ ಕಾಣಲಿಲ್ಲ. ಎರಡು ಕಡೆಗಳಲ್ಲಿ ಪಿತೃ, ಪಿತಾಮಹ, ಆಚಾರ್ಯ, ಮಾತುಲ, ಭ್ರಾತೃ, ಪುತ್ರ-ಪೌತ್ರರನ್ನು ಅವನು ಕಂಡನು. ಯುದ್ಧದ ಸಮಯದಲ್ಲಿ ಮಮಕಾರಕ್ಕೊಳಗಾದಾಗ ಗೊಂದಲಕ್ಕೀಡಾಗುವುದು ಸ್ವಾಭಾವಿಕವೇ! ಅವನ ಶರೀರಗಳಲ್ಲಿ ಕಂಡುಬರುವ ವಿಕಾರಗಳು ಸ್ವಾಭಾವಿಕವಾಗಿವೆ. ನೂರಾರು ಮಂದಿಗೆ ಶಸ್ತ್ರಚಿಕಿತ್ಸೆ ಮಾಡುವ ವೈದ್ಯನು ತನ್ನ ಮಗನಿಗೆ ಶಸ್ತ್ರಚಿಕಿತ್ಸೆ ಮಾಡಲಾರ. ಬೇರೆಯ ವೈದ್ಯರಿಂದ ಮಾಡಿಸುತ್ತಾನೆ. ತಾನೇ ಮಾಡಲು ಹೋದರೆ ಕೈನಡುಗುವುದು ಸ್ವಾಭಾವಿಕ. ದುಂಬಿಯು ಕಟ್ಟಿಗೆಯನ್ನೇ ಕೊರೆಯಬಲ್ಲದು. ಆದರೆ ಕಮಲದೊಳಗೆ ಸಾಯಂಕಾಲವಾಗುತ್ತಲೇ ಸೇರಿಕೊಂಡ ದುಂಬಿಯು ಕಮಲದ ಮೊಗ್ಗನ್ನು ಕೊರೆದುಕೊಂಡು ಹೊರಬರುವ ಸಾಮರ್ಥ್ಯವಿದ್ದರೂ ಮಮತೆಯಿಂದ ಹಾಗೆ ಮಾಡದೇ ಸೂರ್ಯೋದಯವಾಗಿ ಕಮಲವು ಅರಳಿದ ನಂತರವೇ ಹೊರಬರುತ್ತದೆ!

[16] ೨೧ನೆಯ ಅಧ್ಯಾಯದಲ್ಲಿ ಯುದ್ಧಸನ್ನದ್ಧವಾಗಿದ್ದ ದುರ್ಯೋಧನನ ಮಹಾಸೇನೆಯನ್ನು ನೋಡಿ ಯುಧಿಷ್ಠಿರನು ವಿಷಾದಗೊಂಡಿದ್ದಾಗ ಅರ್ಜುನನೇ ಅವನಿಗೆ ಧರ್ಮಮಾರ್ಗದಲ್ಲಿರುವ ತಮಗೆ ವಿಜಯವು ಸಿದ್ಧವೆಂದೂ, ಶ್ರೀಕೃಷ್ಣನಿರುವಲ್ಲಿ ವಿಜಯವು ನಿಶ್ಚಿತವೆಂದೂ ಹೇಳಿ ಸಮಾಧಾನಮಾಡಿದ ಪ್ರಸಂಗವಿದೆ. ಆದರೆ ಇಲ್ಲಿ ಸ್ವಯಂ ತಾನೇ ವಿಷಾದಗೊಂಡಿರುವುದು ಆಶ್ಚರ್ಯ!

Comments are closed.