Bhishma Parva: Chapter 18

ಭೀಷ್ಮ ಪರ್ವ: ಭಗವದ್ಗೀತಾ ಪರ್ವ

೧೮

ಕುರುಸೇನಾವರ್ಣನೆ (೧-೧೮).

06018001 ಸಂಜಯ ಉವಾಚ|

06018001a ತತೋ ಮುಹೂರ್ತಾತ್ತುಮುಲಃ ಶಬ್ದೋ ಹೃದಯಕಂಪನಃ|

06018001c ಅಶ್ರೂಯತ ಮಹಾರಾಜ ಯೋಧಾನಾಂ ಪ್ರಯುಯುತ್ಸತಾಂ||

ಸಂಜಯನು ಹೇಳಿದನು: “ಮಹಾರಾಜ! ಆಗ ಮುಹೂರ್ತಕಾಲದಲ್ಲಿಯೇ ಉತ್ಸಾಹದಿಂದ ಬಂದಿರುವ ಯೋಧರ ಹೃದಯವನ್ನು ಕಂಪಿಸುವ ತುಮುಲ ಶಬ್ಧವು ಕೇಳಿಬಂದಿತು.

06018002a ಶಂಖದುಂದುಭಿನಿರ್ಘೋಷೈರ್ವಾರಣಾನಾಂ ಚ ಬೃಂಹಿತೈಃ|

06018002c ರಥಾನಾಂ ನೇಮಿಘೋಷೈಶ್ಚ ದೀರ್ಯತೀವ ವಸುಂಧರಾ||

ಶಂಖ-ದುಂದುಭಿಗಳ ನಿರ್ಘೋಷದಿಂದ, ಆನೆಗಳ ಘೀಳಿನಿಂದ, ರಥಚಕ್ರಗಳ ಘೋಷದಿಂದ ವಸುಂಧರೆಯು ಅತೀವ ನೋವಿಗೊಳಗಾದಳು.

06018003a ಹಯಾನಾಂ ಹೇಷಮಾಣಾನಾಂ ಯೋಧಾನಾಂ ತತ್ರ ಗರ್ಜತಾಂ|

06018003c ಕ್ಷಣೇನ ಖಂ ದಿಶಶ್ಚೈವ ಶಬ್ದೇನಾಪೂರಿತಂ ತದಾ||

ಆಗ ಕ್ಷಣದಲ್ಲಿ ಆಕಾಶ ದಿಕ್ಕುಗಳು ಕುದುರೆಗಳ ಹೇಂಕಾರ ಮತ್ತು ಯೋಧರ ಗರ್ಜನೆಗಳ ಶಬ್ಧಗಳಿಂದ ತುಂಬಿದವು.

06018004a ಪುತ್ರಾಣಾಂ ತವ ದುರ್ಧರ್ಷ ಪಾಂಡವಾನಾಂ ತಥೈವ ಚ|

06018004c ಸಮಕಂಪಂತ ಸೈನ್ಯಾನಿ ಪರಸ್ಪರಸಮಾಗಮೇ||

ನಿನ್ನ ದುರ್ಧರ್ಷ ಪುತ್ರರ ಮತ್ತು ಪಾಂಡವರ ಸೇನೆಗಳು ಪರಸ್ಪರರನ್ನು ಸೇರಿ ತತ್ತರಿಸಿದವು.

06018005a ತತ್ರ ನಾಗಾ ರಥಾಶ್ಚೈವ ಜಾಂಬೂನದವಿಭೂಷಿತಾಃ|

06018005c ಭ್ರಾಜಮಾನಾ ವ್ಯದೃಶ್ಯಂತ ಮೇಘಾ ಇವ ಸವಿದ್ಯುತಃ||

ಅಲ್ಲಿ ಬಂಗಾರದಿಂದ ವಿಭೂಷಿತರಾದ ಆನೆ-ರಥಗಳು ಮಿಂಚಿನಿಂದ ಕೂಡಿದ ಮೋಡಗಳಂತೆ ಹೊಳೆಯುತ್ತಿದ್ದವು.

06018006a ಧ್ವಜಾ ಬಹುವಿಧಾಕಾರಾಸ್ತಾವಕಾನಾಂ ನರಾಧಿಪ|

06018006c ಕಾಂಚನಾಂಗದಿನೋ ರೇಜುರ್ಜ್ವಲಿತಾ ಇವ ಪಾವಕಾಃ||

ನರಾಧಿಪ! ನಿನ್ನ ಸೇನೆಯ ಬಹುವಿಧಾಕಾರದ ಧ್ವಜಗಳು ಮತ್ತು ಕಾಂಚನಾಂಗದರ ಸುರುಳಿಗಳು ಉರಿಯುತ್ತಿರುವ ಪಾವಕನಂತೆ ತೋರಿದವು.

06018007a ಸ್ವೇಷಾಂ ಚೈವ ಪರೇಷಾಂ ಚ ಸಮದೃಶ್ಯಂತ ಭಾರತ|

06018007c ಮಹೇಂದ್ರಕೇತವಃ ಶುಭ್ರಾ ಮಹೇಂದ್ರಸದನೇಷ್ವಿವ||

ಭಾರತ! ನಿನ್ನ ಮತ್ತು ಶತ್ರುಗಳ ಶುಭವಾದ ಮಹೇಂದ್ರ ಧ್ವಜಗಳು ಮಹೇಂದ್ರನ ಸದನದಂತೆ ತೋರಿದವು.

06018008a ಕಾಂಚನೈಃ ಕವಚೈರ್ವೀರಾ ಜ್ವಲನಾರ್ಕಸಮಪ್ರಭೈಃ|

06018008c ಸನ್ನದ್ಧಾಃ ಪ್ರತ್ಯದೃಶ್ಯಂತ ಗ್ರಹಾಃ ಪ್ರಜ್ವಲಿತಾ ಇವ||

ಸನ್ನದ್ಧರಾಗಿದ್ದ ಪ್ರಜ್ವಲಿಸುವ ಸೂರ್ಯನಂತೆ ಪ್ರಭೆಯಿದ್ದ ಕಾಂಚನ ಕವಚಗಳಿದ್ದ ಆ ವೀರರು ಪ್ರಜ್ವಲಿಸುತ್ತಿರುವ ಗ್ರಹಗಳಂತೆ ಕಂಡುಬಂದರು.

06018009a ಉದ್ಯತೈರಾಯುಧೈಶ್ಚಿತ್ರೈಸ್ತಲಬದ್ಧಾಃ ಪತಾಕಿನಃ|

06018009c ಋಷಭಾಕ್ಷಾ ಮಹೇಷ್ವಾಸಾಶ್ಚಮೂಮುಖಗತಾ ಬಭುಃ||

ಬಣ್ಣ ಬಣ್ಣದ ಕರಬಂಧಗಳನ್ನು ಧರಿಸಿದ್ದ, ಆಯುಧಗಳನ್ನು ಎತ್ತಿಹಿಡಿದ ಋಷಭಾಕ್ಷ ಮಹೇಷ್ವಾಸ ಪತಾಕಿಗಳು ಸೇನೆಗಳ ಮುಂದೆ ಇದ್ದರು.

06018010a ಪೃಷ್ಠಗೋಪಾಸ್ತು ಭೀಷ್ಮಸ್ಯ ಪುತ್ರಾಸ್ತವ ನರಾಧಿಪ|

06018010c ದುಃಶಾಸನೋ ದುರ್ವಿಷಹೋ ದುರ್ಮುಖೋ ದುಃಸಹಸ್ತಥಾ||

06018011a ವಿವಿಂಶತಿಶ್ಚಿತ್ರಸೇನೋ ವಿಕರ್ಣಶ್ಚ ಮಹಾರಥಃ|

ನರಾಧಿಪ! ಭೀಷ್ಮನನ್ನು ಹಿಂದಿನಿಂದ ನಿನ್ನ ಪುತ್ರರಾದ ದುಃಶಾಸನ, ದುರ್ವಿಷಹ, ದುರ್ಮುಖ, ವಿವಿಂಶತಿ, ಚಿತ್ರಸೇನ ಮತ್ತು ಮುಹಾರಥಿ ವಿಕರ್ಣರು ರಕ್ಷಿಸುತ್ತಿದ್ದರು.

06018011c ಸತ್ಯವ್ರತಃ ಪುರುಮಿತ್ರೋ ಜಯೋ ಭೂರಿಶ್ರವಾಃ ಶಲಃ||

06018012a ರಥಾ ವಿಂಶತಿಸಾಹಸ್ರಾಸ್ತಥೈಷಾಮನುಯಾಯಿನಃ|

ಅವರನ್ನು ಅನುಸರಿಸಿ ಸತ್ಯವ್ರತ, ಪುರುಮಿತ್ರ, ಜಯ, ಭೂರಿಶ್ರವ, ಶಲ, ಹಾಗೂ ಇಪ್ಪತ್ತು ಸಾವಿರ ರಥಗಳು ಹೋದವು.

06018012c ಅಭೀಷಾಹಾಃ ಶೂರಸೇನಾಃ ಶಿಬಯೋಽಥ ವಸಾತಯಃ||

06018013a ಶಾಲ್ವಾ ಮತ್ಸ್ಯಾಸ್ತಥಾಂಬಷ್ಠಾಸ್ತ್ರಿಗರ್ತಾಃ ಕೇಕಯಾಸ್ತಥಾ|

06018013c ಸೌವೀರಾಃ ಕಿತವಾಃ ಪ್ರಾಚ್ಯಾಃ ಪ್ರತೀಚ್ಯೋದೀಚ್ಯಮಾಲವಾಃ||

06018014a ದ್ವಾದಶೈತೇ ಜನಪದಾಃ ಸರ್ವೇ ಶೂರಾಸ್ತನುತ್ಯಜಃ|

06018014c ಮಹತಾ ರಥವಂಶೇನ ತೇಽಭ್ಯರಕ್ಷನ್ಪಿತಾಮಹಂ||

ಅಭೀಷಾಹರು, ಶೂರಸೇನರು, ಶಿಬಿಗಳು, ವಸಾತಯರು, ಶಾಲ್ವರು, ಮತ್ಸ್ಯರು, ಅಂಬಷ್ಠರು, ತ್ರಿಗರ್ತರು, ಕೇಕಯರು, ಸೌವೀರರು, ಕಿತವರು, ಪ್ರಾಚ್ಯರು, ಪತೀಚ್ಯರು, ಉದೀಚ್ಯರು, ಮಾಲವರು ಈ ಹನ್ನೆರಡು ಜನಪದಗಳು, ಎಲ್ಲರೂ ತನುವನ್ನು ತ್ಯಜಿಸಿದ ಶೂರರು, ಮಹಾ ರಥಗುಂಪುಗಳೊಂದಿಗೆ ಪಿತಾಮಹನನ್ನು ರಕ್ಷಿಸುತ್ತಿದ್ದರು.

06018015a ಅನೀಕಂ ದಶಸಾಹಸ್ರಂ ಕುಂಜರಾಣಾಂ ತರಸ್ವಿನಾಂ|

06018015c ಮಾಗಧೋ ಯೇನ ನೃಪತಿಸ್ತದ್ರಥಾನೀಕಮನ್ವಯಾತ್||

ಹತ್ತು ಸಾವಿರ ತರಸ್ವಿ ಆನೆಗಳ ಸೇನೆಯೊಂದಿಗೆ ನೃಪತಿ ಮಾಗಧನು ಆ ಸೇನೆಯನ್ನು ಅನುಸರಿಸಿದನು.

06018016a ರಥಾನಾಂ ಚಕ್ರರಕ್ಷಾಶ್ಚ ಪಾದರಕ್ಷಾಶ್ಚ ದಂತಿನಾಂ|

06018016c ಅಭೂವನ್ವಾಹಿನೀಮಧ್ಯೇ ಶತಾನಾಮಯುತಾನಿ ಷಟ್||

ಸೇನೆಗಳ ಮಧ್ಯೆ ರಥಗಳ ಚಕ್ರಗಳನ್ನು ಕಾಯುವವರು ಮತ್ತು ಆನೆಗಳ ಪಾದಗಳನ್ನು ರಕ್ಷಿಸುತ್ತಿದ್ದವರ ಸಂಖ್ಯೆಯೇ ೬೦ ಲಕ್ಷವಾಗಿತ್ತು.

06018017a ಪಾದಾತಾಶ್ಚಾಗ್ರತೋಽಗಚ್ಛನ್ಧನುಶ್ಚರ್ಮಾಸಿಪಾಣಯಃ|

06018017c ಅನೇಕಶತಸಾಹಸ್ರಾ ನಖರಪ್ರಾಸಯೋಧಿನಃ||

ದನುಸ್ಸು, ಖಡ್ಗ ತೋಮರಗಳನ್ನು ಹಿಡಿದು ಸೇನೆಗಳ ಮುಂದೆ ಹೋಗುತ್ತಿದ್ದ ಪದಾತಿಗಳ ಸಂಖ್ಯೆಯು ಅನೇಕ ಲಕ್ಷಗಳಾಗಿತ್ತು. ಅವರು ಉಗುರು ಮತ್ತು ಪ್ರಾಸಗಳನ್ನೂ ಬಳಸಿ ಹೋರಾಡುವವರಾಗಿದ್ದರು.

06018018a ಅಕ್ಷೌಹಿಣ್ಯೋ ದಶೈಕಾ ಚ ತವ ಪುತ್ರಸ್ಯ ಭಾರತ|

06018018c ಅದೃಶ್ಯಂತ ಮಹಾರಾಜ ಗಂಗೇವ ಯಮುನಾಂತರೇ||

ಭಾರತ! ಮಹಾರಾಜ! ಹನ್ನೊಂದು ಅಕ್ಷೌಹಿಣಿಯ ನಿನ್ನ ಪುತ್ರನ ಸೇನೆಯು ಗಂಗೆಯಿಂದ ಅಗಲಿದ ಯಮುನೆಯಂತೆ ತೋರಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಸೈನ್ಯವರ್ಣನೇ ಅಷ್ಟಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಸೈನ್ಯವರ್ಣನೆಯೆಂಬ ಹದಿನೆಂಟನೇ ಅಧ್ಯಾಯವು.

Image result for flowers against white background

Comments are closed.