Bhishma Parva: Chapter 17

ಭೀಷ್ಮ ಪರ್ವ: ಭಗವದ್ಗೀತಾ ಪರ್ವ

೧೭

ಯುದ್ಧಕ್ಕೆ ಸೇರಿದ್ದ ಮಹೀಪಾಲರಿಗೆ ಭೀಷ್ಮನ ಮಾತು; ಕರ್ಣನು ತನ್ನ ಅನುಯಾಯಿ-ಬಂಧುಗಳೊಡನೆ ಶಸ್ತ್ರವನ್ನು ಕೆಳಗಿಟ್ಟುದುದು (೧-೧೩). ಕರ್ಣನಿಲ್ಲದೇ ತವಕಗೊಂಡ ಕೌರವ ಸೇನೆಯ ರಣಯಾತ್ರೆ (೧೪-೩೯).

06017001 ಸಂಜಯ ಉವಾಚ|

06017001a ಯಥಾ ಸ ಭಗವಾನ್ವ್ಯಾಸಃ ಕೃಷ್ಣದ್ವೈಪಾಯನೋಽಬ್ರವೀತ್|

06017001c ತಥೈವ ಸಹಿತಾಃ ಸರ್ವೇ ಸಮಾಜಗ್ಮುರ್ಮಹೀಕ್ಷಿತಃ||

ಸಂಜಯನು ಹೇಳಿದನು: “ಆ ಭಗವಾನ ವ್ಯಾಸ ಕೃಷ್ಣದ್ವೈಪಾಯನನು ಹೇಳಿದಹಾಗೆಯೇ ಎಲ್ಲ ಮಹೀಕ್ಷಿತರೂ ಒಟ್ಟಿಗೇ ಸೇರಿದ್ದರು.

06017002a ಮಘಾವಿಷಯಗಃ ಸೋಮಸ್ತದ್ದಿನಂ ಪ್ರತ್ಯಪದ್ಯತ|

06017002c ದೀಪ್ಯಮಾನಾಶ್ಚ ಸಂಪೇತುರ್ದಿವಿ ಸಪ್ತ ಮಹಾಗ್ರಹಾಃ||

ಆ ದಿನ ಸೋಮನು ಮಘಾನಕ್ಷತ್ರದಲ್ಲಿದ್ದನು. ಆಕಾಶದಲ್ಲಿ ಏಳು ಮಹಾಗ್ರಹಗಳು ಬೆಳಗುತ್ತಿರುವುದು ಕಂಡುಬರುತ್ತಿತ್ತು.

06017003a ದ್ವಿಧಾಭೂತ ಇವಾದಿತ್ಯ ಉದಯೇ ಪ್ರತ್ಯದೃಶ್ಯತ|

06017003c ಜ್ವಲಂತ್ಯಾ ಶಿಖಯಾ ಭೂಯೋ ಭಾನುಮಾನುದಿತೋ ದಿವಿ||

ಉದಯಕಾಲದಲ್ಲಿ ಸೂರ್ಯನು ಎರಡಾಗಿದ್ದನೋ ಎನ್ನುವಂತೆ ತೋರುತ್ತಿತ್ತು. ಅಲ್ಲದೇ ಆ ಭಾನುವು ಆಕಾಶದಲ್ಲಿ ಕಾಣಿಸಿಕೊಂಡಾಗ ಜ್ವಾಲೆಗಳೊಂದಿಗೆ ಉರಿಯುತ್ತಿರುವಂತೆ ತೋರುತ್ತಿದ್ದನು.

06017004a ವವಾಶಿರೇ ಚ ದೀಪ್ತಾಯಾಂ ದಿಶಿ ಗೋಮಾಯುವಾಯಸಾಃ|

06017004c ಲಿಪ್ಸಮಾನಾಃ ಶರೀರಾಣಿ ಮಾಂಸಶೋಣಿತಭೋಜನಾಃ||

ಉರಿದು ಬೆಳಗುತ್ತಿದ್ದ ದಿಕ್ಕುಗಳಿಂದ ಮೃತದೇಹಗಳನ್ನು ಭಕ್ಷಿಸುವ ನರಿ-ಕಾಗೆಗಳು ಕೆಳಗುರುಳುವ ಶರೀರಗಳ ಮಾಂಸ-ರಕ್ತಗಳ ಭೋಜನಗಳಿಗಾಗಿ ಕಾದು ಕೂಗುತ್ತಿರುವುದು ಕೇಳಿ ಬರುತ್ತಿತ್ತು.

06017005a ಅಹನ್ಯಹನಿ ಪಾರ್ಥಾನಾಂ ವೃದ್ಧಃ ಕುರುಪಿತಾಮಹಃ|

06017005c ಭರದ್ವಾಜಾತ್ಮಜಶ್ಚೈವ ಪ್ರಾತರುತ್ಥಾಯ ಸಂಯತೌ||

06017006a ಜಯೋಽಸ್ತು ಪಾಂಡುಪುತ್ರಾಣಾಂ ಇತ್ಯೂಚತುರರಿಂದಮೌ|

06017006c ಯುಯುಧಾತೇ ತವಾರ್ಥಾಯ ಯಥಾ ಸ ಸಮಯಃ ಕೃತಃ||

ಅರಿಂದಮರಾದ ವೃದ್ಧ ಕುರುಪಿತಾಮಹ ಮತ್ತು ಭರದ್ವಾಜಾತ್ಮಜರು, ಮಾಡಿಕೊಂಡ ಒಪ್ಪಂದದಂತೆ ನಿನಗಾಗಿ ಪಾರ್ಥರನ್ನು ಎದುರಿಸಿ ಯುದ್ಧಮಾಡುವವರಾಗಿದ್ದರೂ, ಪ್ರತಿದಿನವೂ ಬೆಳಿಗ್ಗೆ ಎದ್ದು ಮನಸ್ಸನ್ನು ಸಂಯಮದಲ್ಲಿರಿಸಿಕೊಂಡು “ಪಾಂಡುಪುತ್ರರಿಗೆ ಜಯವಾಗಲಿ!” ಎಂದು ಹೇಳುತ್ತಿದ್ದರು.

06017007a ಸರ್ವಧರ್ಮವಿಶೇಷಜ್ಞಃ ಪಿತಾ ದೇವವ್ರತಸ್ತವ|

06017007c ಸಮಾನೀಯ ಮಹೀಪಾಲಾನಿದಂ ವಚನಮಬ್ರವೀತ್||

ನಿನ್ನ ಪಿತ ಸರ್ಮಧರ್ಮವಿಶೇಷಜ್ಞ ದೇವವ್ರತನು ಮಹೀಪಾಲರನ್ನು ಕರೆದು ಈ ಮಾತನ್ನಾಡಿದನು:

06017008a ಇದಂ ವಃ ಕ್ಷತ್ರಿಯಾ ದ್ವಾರಂ ಸ್ವರ್ಗಾಯಾಪಾವೃತಂ ಮಹತ್|

06017008c ಗಚ್ಛಧ್ವಂ ತೇನ ಶಕ್ರಸ್ಯ ಬ್ರಹ್ಮಣಶ್ಚ ಸಲೋಕತಾಂ||

“ಕ್ಷತ್ರಿಯರೇ! ಸ್ವರ್ಗದ ಈ ಮಹಾದ್ವಾರವು ತೆರೆದುಕೊಂಡಿದೆ. ಇದರ ಮೂಲಕ ಶಕ್ರ ಮತ್ತು ಬ್ರಹ್ಮನ ಲೋಕಗಳನ್ನು ಸೇರಿ.

06017009a ಏಷ ವಃ ಶಾಶ್ವತಃ ಪಂಥಾಃ ಪೂರ್ವೈಃ ಪೂರ್ವತರೈರ್ಗತಃ|

06017009c ಸಂಭಾವಯತ ಚಾತ್ಮಾನಮವ್ಯಗ್ರಮನಸೋ ಯುಧಿ||

ಹಿಂದೆ ಹೋಗಿರುವ ಹಿಂದಿನವರು ಇದೇ ದಾರಿಯಲ್ಲಿ ಹೋಗಿದ್ದರು. ಯುದ್ಧದಲ್ಲಿ ಅವ್ಯಗ್ರಮನಸ್ಕರಾಗಿ ಇರುವಂತೆ ನಿಮ್ಮನ್ನು ನೀವು ನೋಡಿಕೊಳ್ಳಿ.

06017010a ನಾಭಾಗೋ ಹಿ ಯಯಾತಿಶ್ಚ ಮಾಂಧಾತಾ ನಹುಷೋ ನೃಗಃ|

06017010c ಸಂಸಿದ್ಧಾಃ ಪರಮಂ ಸ್ಥಾನಂ ಗತಾಃ ಕರ್ಮಭಿರೀದೃಶೈಃ||

ಏಕೆಂದರೆ ನಾಭಾಗ, ಯಯಾತಿ, ಮಾಂಧಾತ, ನಹುಷ, ನೃಗ ಮೊದಲಾದವರು ಇಂತಹದೇ ಕರ್ಮಗಳಿಂದ ಸಂಸಿದ್ಧರಾಗಿ ಪರಮ ಗತಿಯನ್ನು ಪಡೆದರು.

06017011a ಅಧರ್ಮಃ ಕ್ಷತ್ರಿಯಸ್ಯೈಷ ಯದ್ವ್ಯಾಧಿಮರಣಂ ಗೃಹೇ|

06017011c ಯದಾಜೌ ನಿಧನಂ ಯಾತಿ ಸೋಽಸ್ಯ ಧರ್ಮಃ ಸನಾತನಃ||

ಮನೆಯಲ್ಲಿ ವ್ಯಾಧಿಯಿಂದ ಮರಣಹೊಂದುವುದು ಕ್ಷತ್ರಿಯರಿಗೆ ಅಧರ್ಮ. ಯುದ್ಧದಲ್ಲಿ ನಿಧನವನ್ನು ಹೊಂದುವುದೇ ಇವರ ಸನಾತನ ಧರ್ಮ.”

06017012a ಏವಮುಕ್ತಾ ಮಹೀಪಾಲಾ ಭೀಷ್ಮೇಣ ಭರತರ್ಷಭ|

06017012c ನಿರ್ಯಯುಃ ಸ್ವಾನ್ಯನೀಕಾನಿ ಶೋಭಯಂತೋ ರಥೋತ್ತಮೈಃ||

ಭರತರ್ಷಭ! ಭೀಷ್ಮನು ಹೀಗೆ ಹೇಳಲು ಮಹೀಪಾಲರು ಉತ್ತಮ ರಥಗಳಿಂದ ಶೋಭಿಸುತ್ತಿದ್ದ ತಮ್ಮ ತಮ್ಮ ಸೇನೆಗಳಿಗೆ ತೆರಳಿದರು.

06017013a ಸ ತು ವೈಕರ್ತನಃ ಕರ್ಣಃ ಸಾಮಾತ್ಯಃ ಸಹ ಬಂಧುಭಿಃ|

06017013c ನ್ಯಾಸಿತಃ ಸಮರೇ ಶಸ್ತ್ರಂ ಭೀಷ್ಮೇಣ ಭರತರ್ಷಭ||

ಆದರೆ ವೈಕರ್ತನ ಕರ್ಣನು ಮಾತ್ರ ತನ್ನ ಅಮಾತ್ಯ- ಬಂಧುಗಳೊಂದಿಗೆ ಭೀಷ್ಮನ ಸಮರದಲ್ಲಿ ಶಸ್ತ್ರವನ್ನು ಕೆಳಗಿಟ್ಟನು.

06017014a ಅಪೇತಕರ್ಣಾಃ ಪುತ್ರಾಸ್ತೇ ರಾಜಾನಶ್ಚೈವ ತಾವಕಾಃ|

06017014c ನಿರ್ಯಯುಃ ಸಿಂಹನಾದೇನ ನಾದಯಂತೋ ದಿಶೋ ದಶ||

ಆಗ ಕರ್ಣನಿಲ್ಲದೇ ತವಕಗೊಂಡ ನಿನ್ನ ಪುತ್ರರು ಮತ್ತು ರಾಜರು ಹತ್ತೂ ದಿಕ್ಕುಗಳನ್ನು ಸಿಂಹನಾದದಿಂದ ಮೊಳಗಿಸುತ್ತಾ ಹೊರಟರು.

06017015a ಶ್ವೇತೈಶ್ಚತ್ರೈಃ ಪತಾಕಾಭಿರ್ಧ್ವಜವಾರಣವಾಜಿಭಿಃ|

06017015c ತಾನ್ಯನೀಕಾನ್ಯಶೋಭಂತ ರಥೈರಥ ಪದಾತಿಭಿಃ||

ಶ್ವೇತ ಛತ್ರಗಳಿಂದ, ಪತಾಕೆಗಳಿಂದ, ಧ್ವಜ, ಆನೆ, ಕುದುರೆಗಳಿಂದ, ರಥಗಳಿಂದ, ಪಾದಾತಿಗಳಿಂದ ಆ ಸೇನೆಗಳು ಶೋಭಿಸಿದವು.

06017016a ಭೇರೀಪಣವಶಬ್ದೈಶ್ಚ ಪಟಹಾನಾಂ ಚ ನಿಸ್ವನೈಃ|

06017016c ರಥನೇಮಿನಿನಾದೈಶ್ಚ ಬಭೂವಾಕುಲಿತಾ ಮಹೀ||

ಭೇರಿ-ಪಣವಗಳ ಶಬ್ಧಗಳಿಂದ, ಪಟಹಗಳ ನಿಸ್ವನಗಳಿಂದ, ರಥಗಾಲಿಗಳ ನಿನಾದಗಳಿಂದ ಮಹಿಯು ವ್ಯಾಕುಲಿತಗೊಂಡಿತು.

06017017a ಕಾಂಚನಾಂಗದಕೇಯೂರೈಃ ಕಾರ್ಮುಕೈಶ್ಚ ಮಹಾರಥಾಃ|

06017017c ಭ್ರಾಜಮಾನಾ ವ್ಯದೃಶ್ಯಂತ ಜಂಗಮಾಃ ಪರ್ವತಾ ಇವ||

ಕಾಂಚನದ ಅಂಗದ-ಕೇಯೂರಗಳು ಮತ್ತು ಧನುಸ್ಸುಗಳಿಂದ ಆ ಮಹಾರಥರು ಉರಿಯುತ್ತಿರುವ ಜಂಗಮ ಪರ್ವತಗಳಂತೆ ತೋರುತ್ತಿದ್ದರು.

06017018a ತಾಲೇನ ಮಹತಾ ಭೀಷ್ಮಃ ಪಂಚತಾರೇಣ ಕೇತುನಾ|

06017018c ವಿಮಲಾದಿತ್ಯಸಂಕಾಶಸ್ತಸ್ಥೌ ಕುರುಚಮೂಪತಿಃ||

ಮಹಾ ತಾಲವೃಕ್ಷ ಮತ್ತು ಐದು ನಕ್ಷತ್ರಗಳ ಧ್ವಜದ ಕುರುಚಮೂಪತಿ ಭೀಷ್ಮನು ವಿಮಲ ಆಕಾಶದಲ್ಲಿರುವ ಆದಿತ್ಯನಂತೆ ನಿಂತಿದ್ದನು.

06017019a ಯೇ ತ್ವದೀಯಾ ಮಹೇಷ್ವಾಸಾ ರಾಜಾನೋ ಭರತರ್ಷಭ|

06017019c ಅವರ್ತಂತ ಯಥಾದೇಶಂ ರಾಜನ್ ಶಾಂತನವಸ್ಯ ತೇ||

ಭರತರ್ಷಭ! ರಾಜನ್! ನಿನ್ನ ಆ ಎಲ್ಲ ಮಹೇಷ್ವಾಸ ರಾಜರೂ ಶಾಂತನವನ ಆದೇಶದಂತೆ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತುಕೊಂಡರು.

06017020a ಸ ತು ಗೋವಾಸನಃ ಶೈಬ್ಯಃ ಸಹಿತಃ ಸರ್ವರಾಜಭಿಃ|

06017020c ಯಯೌ ಮಾತಂಗರಾಜೇನ ರಾಜಾರ್ಹೇಣ ಪತಾಕಿನಾ|

ಗೋವಾಸನ ಶೈಬ್ಯನು ಎಲ್ಲ ರಾಜರೊಂದಿಗೆ ರಾಜಾರ್ಹವಾದ, ಪತಾಕೆಗಳುಳ್ಳ ಮಾತಂಗರಾಜನೊಂದಿಗೆ ನಡೆದನು.

06017020e ಪದ್ಮವರ್ಣಸ್ತ್ವನೀಕಾನಾಂ ಸರ್ವೇಷಾಮಗ್ರತಃ ಸ್ಥಿತಃ||

06017021a ಅಶ್ವತ್ಥಾಮಾ ಯಯೌ ಯತ್ತಃ ಸಿಂಹಲಾಂಗೂಲಕೇತನಃ|

ಧ್ವಜದಲ್ಲಿ ಸಿಂಹದ ಬಾಲವಿದ್ದ ಪದ್ಮವರ್ಣಿ ಅಶ್ವತ್ಥಾಮನು ಸರ್ವ ಸೇನೆಗಳ ಮುಂದೆ ಹೋಗಿ ನಿಂತುಕೊಂಡನು.

06017021c ಶ್ರುತಾಯುಶ್ಚಿತ್ರಸೇನಶ್ಚ ಪುರುಮಿತ್ರೋ ವಿವಿಂಶತಿಃ||

06017022a ಶಲ್ಯೋ ಭೂರಿಶ್ರವಾಶ್ಚೈವ ವಿಕರ್ಣಶ್ಚ ಮಹಾರಥಃ|

06017022c ಏತೇ ಸಪ್ತ ಮಹೇಷ್ವಾಸಾ ದ್ರೋಣಪುತ್ರಪುರೋಗಮಾಃ||

06017022e ಸ್ಯಂದನೈರ್ವರವರ್ಣಾಭೈರ್ಭೀಷ್ಮಸ್ಯಾಸನ್ಪುರಃಸರಾಃ||

ಶ್ರುತಾಯು, ಚಿತ್ರಸೇನ, ಪುರುಮಿತ್ರ, ವಿವಿಂಶತಿ, ಶಲ್ಯ, ಭೂರಿಶ್ರವ, ಮಹಾರಥ ವಿಕರ್ಣ ಈ ಏಳು ಮಹೇಷ್ವಾಸರು, ವರವರ್ಣದ ಕವಚಗಳನ್ನು ಧರಿಸಿ ರಥಗಳಲ್ಲಿ ನಿಂತು ದ್ರೋಣಪುತ್ರನನ್ನು ಮುಂದಿಟ್ಟುಕೊಂಡು, ಭೀಷ್ಮನ ಮುಂದೆ ಸಾಗಿದರು.

06017023a ತೇಷಾಮಪಿ ಮಹೋತ್ಸೇಧಾಃ ಶೋಭಯಂತೋ ರಥೋತ್ತಮಾನ್|

06017023c ಭ್ರಾಜಮಾನಾ ವ್ಯದೃಶ್ಯಂತ ಜಾಂಬೂನದಮಯಾ ಧ್ವಜಾಃ||

ಅವರ ಉತ್ತಮ ರಥಗಳಿಗೆ ಕಟ್ಟಿದ್ದ ಎತ್ತರವಾದ ಬಂಗಾರದ ಧ್ವಜಗಳು ಹೊಳೆಯುತ್ತಿರುವುದು ತೋರಿತು.

06017024a ಜಾಂಬೂನದಮಯೀ ವೇದಿಃ ಕಮಂಡಲುವಿಭೂಷಿತಾ|

06017024c ಕೇತುರಾಚಾರ್ಯಮುಖ್ಯಸ್ಯ ದ್ರೋಣಸ್ಯ ಧನುಷಾ ಸಹ||

ಆಚಾರ್ಯ ಮುಖ್ಯ ದ್ರೋಣನ ಬಂಗಾರದ ಧ್ವಜದಲ್ಲಿ ಕಮಂಡಲು ವಿಭೂಷಿತ ವೇದಿಯ ಜೊತೆ ಧನುಸ್ಸು ಇತ್ತು.

06017025a ಅನೇಕಶತಸಾಹಸ್ರಮನೀಕಮನುಕರ್ಷತಃ|

06017025c ಮಹಾನ್ದುರ್ಯೋಧನಸ್ಯಾಸೀನ್ನಾಗೋ ಮಣಿಮಯೋ ಧ್ವಜಃ||

ಅನೇಕ ಶತಸಹಸ್ರ ಸೇನೆಗಳು ಹಿಂಬಾಲಿಸುತ್ತಿರುವ ದುರ್ಯೋಧನನ ಮಹಾ ಧ್ವಜವು ಮಣಿಮಯ ಆನೆಯ ಚಿಹ್ನೆಯನ್ನು ಹೊಂದಿತ್ತು.

06017026a ತಸ್ಯ ಪೌರವಕಾಲಿಂಗೌ ಕಾಂಬೋಜಶ್ಚ ಸುದಕ್ಷಿಣಃ|

06017026c ಕ್ಷೇಮಧನ್ವಾ ಸುಮಿತ್ರಶ್ಚ ತಸ್ಥುಃ ಪ್ರಮುಖತೋ ರಥಾಃ||

ಅವನ ರಥದಲ್ಲಿ ಪ್ರಮುಖ ರಥಿಗಳಾದ ಪೌರವ-ಕಲಿಂಗರು, ಕಾಂಬೋಜದ ಸುದಕ್ಷಿಣ, ಕ್ಷೇಮಧನ್ವಿ ಸುಮಿತ್ರರು ನಿಂತಿದ್ದರು.

06017027a ಸ್ಯಂದನೇನ ಮಹಾರ್ಹೇಣ ಕೇತುನಾ ವೃಷಭೇಣ ಚ|

06017027c ಪ್ರಕರ್ಷನ್ನಿವ ಸೇನಾಗ್ರಂ ಮಾಗಧಶ್ಚ ನೃಪೋ ಯಯೌ||

ವೃಷಭದ ಚಿಹ್ನೆಯ ಧ್ವಜವಿರುವ ಮಹಾರ್ಹದ ರಥದಲ್ಲಿ, ತನ್ನ ಸೇನೆಯನ್ನು ಎಳೆದುಕೊಂಡು ಹೋಗುತ್ತಿರುವಂತೆ ಮಾಗಧ ನೃಪನು ನಡೆದನು.

06017028a ತದಂಗಪತಿನಾ ಗುಪ್ತಂ ಕೃಪೇಣ ಚ ಮಹಾತ್ಮನಾ|

06017028c ಶಾರದಾಭ್ರಚಯಪ್ರಖ್ಯಂ ಪ್ರಾಚ್ಯಾನಾಮಭವದ್ಬಲಂ||

ಶುಭ್ರ ಮೋಡಗಳಂತೆ ತೋರುತ್ತಿದ್ದ ಆ ಪೂರ್ವದವರ ಮಹಾಸೇನೆಯನ್ನು ಅಂಗಪತಿ ಮತ್ತು ಮಹಾತ್ಮ ಕೃಪರು ರಕ್ಷಿಸುತ್ತಿದ್ದರು.

06017029a ಅನೀಕಪ್ರಮುಖೇ ತಿಷ್ಠನ್ವರಾಹೇಣ ಮಹಾಯಶಾಃ|

06017029c ಶುಶುಭೇ ಕೇತುಮುಖ್ಯೇನ ರಾಜತೇನ ಜಯದ್ರಥಃ||

ವರಾಹದ ಮುಖ್ಯ ಧ್ವಜವನ್ನು ಹೊಂದಿದ ರಜತ ರಥದಲ್ಲಿ ತನ್ನ ಸೇನೆಯ ಪ್ರಮುಖನಾಗಿ ಜಯದ್ರಥನು ವಿರಾಜಿಸುತ್ತಿದ್ದನು.

06017030a ಶತಂ ರಥಸಹಸ್ರಾಣಾಂ ತಸ್ಯಾಸನ್ವಶವರ್ತಿನಃ|

06017030c ಅಷ್ಟೌ ನಾಗಸಹಸ್ರಾಣಿ ಸಾದಿನಾಮಯುತಾನಿ ಷಟ್||

ಒಂದು ಲಕ್ಷ ರಥಗಳು, ಎಂಟು ಸಾವಿರ ಆನೆಗಳು ಮತ್ತು ಆರು ಸಾವಿರ ಅಶ್ವಾರೂಢರು ಅವನ ವಶದಲ್ಲಿದ್ದರು.

06017031a ತತ್ಸಿಂಧುಪತಿನಾ ರಾಜನ್ಪಾಲಿತಂ ಧ್ವಜಿನೀಮುಖಂ|

06017031c ಅನಂತರಥನಾಗಾಶ್ವಮಶೋಭತ ಮಹದ್ಬಲಂ||

ರಾಜನ್! ಆ ಧ್ವಜಿನೀ ಪ್ರಮುಖ ಸಿಂಧುಪತಿಯಿಂದ ಪಾಲಿತಗೊಂಡ ಅನಂತ ರಥ-ಆನೆ-ಕುದುರೆಗಳಿಂದ ಕೂಡಿದ ಮಹಾಬಲವು ಶೋಭಿಸಿತು.

06017032a ಷಷ್ಟ್ಯಾ ರಥಸಹಸ್ರೈಸ್ತು ನಾಗಾನಾಮಯುತೇನ ಚ|

06017032c ಪತಿಃ ಸರ್ವಕಲಿಂಗಾನಾಂ ಯಯೌ ಕೇತುಮತಾ ಸಹ||

ಅರವತ್ತು ಸಾವಿರ ರಥಗಳು ಮತ್ತು ಒಂದು ಲಕ್ಷ ಆನೆಗಳ ಸೇನೆಯ ಪತಿ ಕಲಿಂಗನು ಕೇತುಮತನೊಂದಿಗೆ ಹೊರಟನು.

06017033a ತಸ್ಯ ಪರ್ವತಸಂಕಾಶಾ ವ್ಯರೋಚಂತ ಮಹಾಗಜಾಃ|

06017033c ಯಂತ್ರತೋಮರತೂಣೀರೈಃ ಪತಾಕಾಭಿಶ್ಚ ಶೋಭಿತಾಃ||

ಅವನ ಪರ್ವತಸಂಕಾಶ ಮಹಾಗಜಗಳು ಯಂತ್ರ-ತೋಮರ-ತೂಣೀರಗಳಿಂದ ಮತ್ತು ಶೋಭಿಸುವ ಪತಾಕೆಗಳಿಂದ ವಿರಾಜಿಸಿದವು.

06017034a ಶುಶುಭೇ ಕೇತುಮುಖ್ಯೇನ ಪಾದಪೇನ ಕಲಿಂಗಪಃ|

06017034c ಶ್ವೇತಚ್ಛತ್ರೇಣ ನಿಷ್ಕೇಣ ಚಾಮರವ್ಯಜನೇನ ಚ||

ಕಲಿಂಗರಾಜನಾದರೋ ಎತ್ತರ ಪಾದಪದ ಧ್ವಜ, ಶ್ವೇತ ಛತ್ರ, ನಿಷ್ಕ-ಚಾಮರಗಳಿಂದ ಶೋಭಿಸಿದನು.

06017035a ಕೇತುಮಾನಪಿ ಮಾತಂಗಂ ವಿಚಿತ್ರಪರಮಾಂಕುಶಂ|

06017035c ಆಸ್ಥಿತಃ ಸಮರೇ ರಾಜನ್ಮೇಘಸ್ಥ ಇವ ಭಾನುಮಾನ್||

ರಾಜನ್! ಕೇತುಮಾನನೂ ಕೂಡ ವಿಚಿತ್ರ ಪರಮ ಅಂಕುಶದ ಆನೆಯನ್ನು ಏರಿ ಸಮರದಲ್ಲಿ ಮೇಘವನ್ನೇರಿದ ಭಾನುವಂತೆ ಕಂಡನು.

06017036a ತೇಜಸಾ ದೀಪ್ಯಮಾನಸ್ತು ವಾರಣೋತ್ತಮಮಾಸ್ಥಿತಃ|

06017036c ಭಗದತ್ತೋ ಯಯೌ ರಾಜಾ ಯಥಾ ವಜ್ರಧರಸ್ತಥಾ||

ವಜ್ರಧರನಂತೆ ತೇಜಸ್ಸಿನಿಂದ ಬೆಳಗುತ್ತಿದ್ದ ರಾಜಾ ಭಗದತ್ತನು ಉತ್ತಮ ಆನೆಯ ಮೇಲೆ ಕುಳಿತು ಹೊರಟನು.

06017037a ಗಜಸ್ಕಂಧಗತಾವಾಸ್ತಾಂ ಭಗದತ್ತೇನ ಸಮ್ಮಿತೌ|

06017037c ವಿಂದಾನುವಿಂದಾವಾವಂತ್ಯೌ ಕೇತುಮಂತಮನುವ್ರತೌ||

ಆನೆಯ ಹೆಗಲಮೇಲೇರಿ ಹೋಗುತ್ತಿರುವ ಭಗದತ್ತನೊಂದಿಗೆ, ಕೇತುಮಂತನನ್ನು ಅನುಸರಿಸಿ ಅವಂತಿಯ ವಿಂದಾನುವಿಂದರು ಹೊರಟರು.

06017038a ಸ ರಥಾನೀಕವಾನ್ವ್ಯೂಹೋ ಹಸ್ತ್ಯಂಗೋತ್ತಮಶೀರ್ಷವಾನ್|

06017038c ವಾಜಿಪಕ್ಷಃ ಪತನ್ನುಗ್ರಃ ಪ್ರಾಹರತ್ಸರ್ವತೋಮುಖಃ||

06017039a ದ್ರೋಣೇನ ವಿಹಿತೋ ರಾಜನ್ರಾಜ್ಞಾ ಶಾಂತನವೇನ ಚ|

06017039c ತಥೈವಾಚಾರ್ಯಪುತ್ರೇಣ ಬಾಹ್ಲೀಕೇನ ಕೃಪೇಣ ಚ||

ರಾಜನ್! ದ್ರೋಣ, ರಾಜ ಶಾಂತನವ, ಆಚಾರ್ಯಪುತ್ರ, ಬಾಹ್ಲೀಕ, ಕೃಪರಿಂತ ರಚಿತಗೊಂಡ ಆ ವ್ಯೂಹವು ಅನೇಕ ರಥಗಳಿಂದ ಕೂಡಿದ್ದು, ಆನೆಗಳು ಅದರ ಉತ್ತಮಾಂಗಗಳು, ರಾಜರು ತಲೆಗಳು, ಕುದುರೆಗಳು ಅದರ ರೆಕ್ಕೆಗಳಾಗಿದ್ದು, ಎಲ್ಲಕಡೆಯಿಂದಲೂ ಮೇಲೆ ನೋಡುತ್ತಾ ಉಗ್ರವಾಗಿ ತೋರುತ್ತಿತ್ತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಸೈನ್ಯವರ್ಣನೇ ಸಪ್ತದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಸೈನ್ಯವರ್ಣನೆಯೆಂಬ ಹದಿನೇಳನೇ ಅಧ್ಯಾಯವು.

Image result for flowers against white background

Comments are closed.