ಭೀಷ್ಮ ಪರ್ವ: ಭಗವದ್ಗೀತಾ ಪರ್ವ
Contents
Toggle೧೫
ಭೀಷ್ಮನ ವಧೆಯನ್ನು ಕೇಳಿ ಧೃತರಾಷ್ಟ್ರನ ವಿಲಾಪ (೧-೭೫).
06015001 ಧೃತರಾಷ್ಟ್ರ ಉವಾಚ|
06015001a ಕಥಂ ಕುರೂಣಾಂ ಋಷಭೋ ಹತೋ ಭೀಷ್ಮಃ ಶಿಖಂಡಿನಾ|
06015001c ಕಥಂ ರಥಾತ್ ಸ ನ್ಯಪತತ್ಪಿತಾ ಮೇ ವಾಸವೋಪಮಃ||
ಧೃತರಾಷ್ಟ್ರನು ಹೇಳಿದನು: “ಕುರುಗಳ ಋಷಭ ಭೀಷ್ಮನು ಶಿಖಂಡಿಯಿಂದ ಹೇಗೆ ಹತನಾದನು? ವಾಸವೋಪಮನಾದ ನನ್ನ ಪಿತನು ರಥದಿಂದ ಹೇಗೆ ಬಿದ್ದನು?
06015002a ಕಥಮಾಸಂಶ್ಚ ಮೇ ಪುತ್ರಾ ಹೀನಾ ಭೀಷ್ಮೇಣ ಸಂಜಯ|
06015002c ಬಲಿನಾ ದೇವಕಲ್ಪೇನ ಗುರ್ವರ್ಥೇ ಬ್ರಹ್ಮಚಾರಿಣಾ||
ಸಂಜಯ! ತಂದೆಗಾಗಿ ಬ್ರಹ್ಮಚರ್ಯವನ್ನು ಪಾಲಿಸಿದ, ದೇವತೆಗಳಂತೆ ಬಲಶಾಲಿಯಾಗಿದ್ದ ಭೀಷ್ಮನಿಲ್ಲದೇ ನನ್ನ ಪುತ್ರರು ಹೇಗಿದ್ದಾರೆ?
06015003a ತಸ್ಮಿನ್ ಹತೇ ಮಹಾಸತ್ತ್ವೇ ಮಹೇಷ್ವಾಸೇ ಮಹಾಬಲೇ|
06015003c ಮಹಾರಥೇ ನರವ್ಯಾಘ್ರೇ ಕಿಮು ಆಸೀನ್ಮನಸ್ತದಾ||
ಆ ಮಹಾಸತ್ವ, ಮಹೇಷ್ವಾಸ, ಮಹಾಬಲಿ, ಮಹಾರಥಿ, ನರವ್ಯಾಘ್ರನು ಹತನಾಗಲು ಅವರ ಮನಸ್ಸು ಹೇಗಿದೆ?
06015004a ಆರ್ತಿಃ ಪರಾ ಮಾವಿಶತಿ ಯತಃ ಶಂಸಸಿ ಮೇ ಹತಂ|
06015004c ಕುರೂಣಾಂ ಋಷಭಂ ವೀರಮಕಂಪ್ಯಂ ಪುರುಷರ್ಷಭಂ||
ಕುರುಗಳ ಋಷಭ, ವೀರ, ಯುದ್ಧದಲ್ಲಿ ಕಂಪಿಸದ, ಪುರುಷರ್ಷಭನು ಹತನಾಗಿದ್ದಾನೆಂದು ನನಗೆ ಏನು ಹೇಳಿದೆಯೋ ಅದರಿಂದ ನನ್ನನ್ನು ಪರಮ ದುಃಖವು ಆವರಿಸಿದೆ.
06015005a ಕೇ ತಂ ಯಾಂತಮನುಪ್ರೇಯುಃ ಕೇ ಚಾಸ್ಯಾಸನ್ಪುರೋಗಮಾಃ|
06015005c ಕೇಽತಿಷ್ಠನ್ಕೇ ನ್ಯವರ್ತಂತ ಕೇಽಭ್ಯವರ್ತಂತ ಸಂಜಯ||
ಸಂಜಯ! ಅವನನ್ನು ಯಾರು ಅನುಸರಿಸಿ ಹೋಗುತ್ತಿದ್ದರು? ಯಾರು ಮುಂದಿದ್ದರು? ಯಾರು ಅವನ ಪಕ್ಕದಲ್ಲಿದ್ದರು? ಮತ್ತು ಯಾರು ಅವನೊಂದಿಗೆ ಹೋಗುತ್ತಿದ್ದರು?
06015006a ಕೇ ಶೂರಾ ರಥಶಾರ್ದೂಲಮಚ್ಯುತಂ ಕ್ಷತ್ರಿಯರ್ಷಭಂ|
06015006c ರಥಾನೀಕಂ ಗಾಹಮಾನಂ ಸಹಸಾ ಪೃಷ್ಠತೋಽನ್ವಯುಃ||
ಶತ್ರುಗಳ ಸೇನೆಯನ್ನು ಹೊಗುವಾಗ ಆ ರಥಶಾರ್ದೂಲ, ಅಚ್ಯುತ, ಕ್ಷತ್ರಿಯರ್ಷಭನನ್ನು ಯಾವ ಶೂರರು ಹಿಂದಿನಿಂದ ರಕ್ಷಣೆಗೆಂದು ಅನುಸರಿಸುತ್ತಿದ್ದರು?
06015007a ಯಸ್ತಮೋಽರ್ಕ ಇವಾಪೋಹನ್ಪರಸೈನ್ಯಮಮಿತ್ರಹಾ|
06015007c ಸಹಸ್ರರಶ್ಮಿಪ್ರತಿಮಃ ಪರೇಷಾಂ ಭಯಮಾದಧತ್|
06015007e ಅಕರೋದ್ದುಷ್ಕರಂ ಕರ್ಮ ರಣೇ ಕೌರವಶಾಸನಾತ್||
ಸೂರ್ಯನು ಕತ್ತಲೆಯನ್ನು ಕಳೆಯುವಂತೆ ಶತ್ರುಸೈನ್ಯವನ್ನು ಕಳೆಯುತ್ತಿರುವ ಆ ಅಮಿತ್ರಹ, ಸಹಸ್ರರಶ್ಮಿಪ್ರತಿಮನು ಶತ್ರುಗಳಲ್ಲಿ ಭಯವನ್ನು ತಂದು ರಣದಲ್ಲಿ ಕೌರವಶಾಸನದಂತೆ ದುಷ್ಕರ ಕರ್ಮಗಳನ್ನು ಮಾಡಿದನು.
06015008a ಗ್ರಸಮಾನಮನೀಕಾನಿ ಯ ಏನಂ ಪರ್ಯವಾರಯನ್|
06015008c ಕೃತಿನಂ ತಂ ದುರಾಧರ್ಷಂ ಸಂಯಗ್ಯಾಸ್ಯಂತಮಂತಿಕೇ|
06015008e ಕಥಂ ಶಾಂತನವಂ ಯುದ್ಧೇ ಪಾಂಡವಾಃ ಪ್ರತ್ಯವಾರಯನ್||
ಯುದ್ಧದಲ್ಲಿ ಸೇನೆಗಳನ್ನು ಮುತ್ತಿಗೆ ಹಾಕುವಾಗ ದುರಾಧರ್ಷ ಕೃತ್ಯವನ್ನು ಮಾಡುವ ಅವನನ್ನು ಯಾರು ತಡೆಗಟ್ಟಿ ಕೊನೆಗೊಳಿಸಿದರು? ಪಾಂಡವರು ಯುದ್ಧದಲ್ಲಿ ಶಾಂತನವನನ್ನು ಹೇಗೆ ತಡೆದರು?
06015009a ನಿಕೃಂತಂತಮನೀಕಾನಿ ಶರದಂಷ್ಟ್ರಂ ತರಸ್ವಿನಂ|
06015009c ಚಾಪವ್ಯಾತ್ತಾನನಂ ಘೋರಮಸಿಜಿಹ್ವಂ ದುರಾಸದಂ||
06015010a ಅತ್ಯನ್ಯಾನ್ಪುರುಷವ್ಯಾಘ್ರಾನ್ ಹ್ರೀಮಂತಮಪರಾಜಿತಂ|
06015010c ಪಾತಯಾಮಾಸ ಕೌಂತೇಯಃ ಕಥಂ ತಮಜಿತಂ ಯುಧಿ||
ಸೇನೆಗಳನ್ನು ಕಡಿಯುತ್ತಿರುವ ಆ ಶರದಂಷ್ಟ್ರ, ತರಸ್ವಿ, ಚಾಪದಂತೆ ಬಾಯಿತೆರೆದುಕೊಂಡಿದ್ದ, ಘೋರ ಖಡ್ಗದಂಥಹ ನಾಲಗೆಯುಳ್ಳ, ದುರಾಸದ, ಅನ್ಯರನ್ನು ಮೀರಿಸಿದ್ದ, ಪುರುಷವ್ಯಾಘ್ರ, ಹ್ರೀಮಂತ, ಅಪರಾಜಿತ ಆ ಅಜಿತನನ್ನು ಯುದ್ಧದಲ್ಲಿ ಕೌಂತೇಯರು ಹೇಗೆ ಉರುಳಿಸಿದರು?
06015011a ಉಗ್ರಧನ್ವಾನಮುಗ್ರೇಷುಂ ವರ್ತಮಾನಂ ರಥೋತ್ತಮೇ|
06015011c ಪರೇಷಾಮುತ್ತಮಾಂಗಾನಿ ಪ್ರಚಿನ್ವಂತಂ ಶಿತೇಷುಭಿಃ||
06015012a ಪಾಂಡವಾನಾಂ ಮಹತ್ಸೈನ್ಯಂ ಯಂ ದೃಷ್ಟ್ವೋದ್ಯಂತಮಾಹವೇ|
06015012c ಕಾಲಾಗ್ನಿಮಿವ ದುರ್ಧರ್ಷಂ ಸಮವೇಷ್ಟತ ನಿತ್ಯಶಃ||
06015013a ಪರಿಕೃಷ್ಯ ಸ ಸೇನಾಂ ಮೇ ದಶರಾತ್ರಮನೀಕಹಾ|
06015013c ಜಗಾಮಾಸ್ತಮಿವಾದಿತ್ಯಃ ಕೃತ್ವಾ ಕರ್ಮ ಸುದುಷ್ಕರಂ||
ಉಗ್ರರಲ್ಲಿಯೇ ಉಗ್ರಧನ್ವಿಯಾದ, ಉತ್ತಮ ರಥದಲ್ಲಿ ಚಲಿಸುತ್ತಿದ್ದ, ಶತ್ರುಗಳ ಶಿರಗಳನ್ನು ತೀಕ್ಷ್ಣಬಾಣಗಳಿಂದ ಕತ್ತರಿಸುತ್ತಿದ್ದ, ಯಾರನ್ನು ನೋಡಿ ಪಾಂಡವರ ಮಹಾಸೇನೆಯು ಯುದ್ಧದಲ್ಲಿ ತತ್ತರಿಸುತ್ತಿತ್ತೋ ಆ ಕಾಲಾಗ್ನಿಯಂತೆ ದುರ್ಧರ್ಷನಾಗಿದ್ದ, ನಿತ್ಯವೂ ಸಮರ ಉತ್ಸುಕನಾಗಿದ್ದ ಅವನು ನನ್ನ ಸೇನೆಯನ್ನು ಹತ್ತು ರಾತ್ರಿ ಮತ್ತು ಹಗಲು ಪರಿರಕ್ಷಿಸಿ ಸುದುಷ್ಕರ ಕಾರ್ಯವನ್ನು ಮಾಡಿ ಆದಿತ್ಯನಂತೆ ಅಸ್ತನಾಗಿದ್ದಾನೆ!
06015014a ಯಃ ಸ ಶಕ್ರ ಇವಾಕ್ಷಯ್ಯಂ ವರ್ಷಂ ಶರಮಯಂ ಸೃಜನ್|
06015014c ಜಘಾನ ಯುಧಿ ಯೋಧಾನಾಮರ್ಬುದಂ ದಶಭಿರ್ದಿನೈಃ||
06015015a ಸ ಶೇತೇ ನಿಷ್ಟನನ್ಭೂಮೌ ವಾತರುಗ್ಣ ಇವ ದ್ರುಮಃ|
06015015c ಮಮ ದುರ್ಮಂತ್ರಿತೇನಾಸೌ ಯಥಾ ನಾರ್ಹಃ ಸ ಭಾರತಃ||
ಇಂದ್ರನಂತೆ ಯಾರು ಅಕ್ಷಯ ಶರಗಳ ಮಳೆಯನ್ನೇ ಸೃಷ್ಟಿಸಿ ಹತ್ತು ದಿನಗಳ ಯುದ್ಧದಲ್ಲಿ ಪ್ರತಿದಿನವೂ ಹತ್ತುಸಾವಿರ ಯೋಧರನ್ನು ಸಂಹರಿಸಿದನೋ ಆ ಭಾರತನು ಅನರ್ಹನಾಗಿದ್ದರೂ ನನ್ನ ದುರ್ಮಂತ್ರದಿಂದಾಗಿ ಭಿರುಗಾಳಿಯಿಂದ ಹೊಡೆಯಲ್ಪಟ್ಟ ಮರದಂತೆ ಭೂಮಿಯಮೇಲೆ ಹೊಡೆದುರುಳಿ ಮಲಗಿದ್ದಾನೆ!
06015016a ಕಥಂ ಶಾಂತನವಂ ದೃಷ್ಟ್ವಾ ಪಾಂಡವಾನಾಮನೀಕಿನೀ|
06015016c ಪ್ರಹರ್ತುಮಶಕತ್ತತ್ರ ಭೀಷ್ಮಂ ಭೀಮಪರಾಕ್ರಮಂ||
ಅಲ್ಲಿ ಶಾಂತನವ ಭೀಷ್ಮನ ಭೀಮಪರಾಕ್ರಮವನ್ನು ನೋಡಿ ಪಾಂಡವರ ಸೇನೆಯು ಹೇಗೆ ತಾನೇ ಅವನನ್ನು ಹೊಡೆದುರುಳಿಸಲು ಶಕ್ಯವಾಯಿತು?
06015017a ಕಥಂ ಭೀಷ್ಮೇಣ ಸಂಗ್ರಾಮಮಕುರ್ವನ್ಪಾಂಡುನಂದನಾಃ|
06015017c ಕಥಂ ಚ ನಾಜಯದ್ಭೀಷ್ಮೋ ದ್ರೋಣೇ ಜೀವತಿ ಸಂಜಯ||
ಸಂಜಯ! ಪಾಂಡುನಂದನರು ಭೀಷ್ಮನೊಂದಿಗೆ ಹೇಗೆ ಯುದ್ಧ ಮಾಡಿದರು? ದ್ರೋಣನು ಜೀವಿತವಿರುವಾಗಲೇ ಅವರು ಹೇಗೆ ಭೀಷ್ಮನನ್ನು ಗೆದ್ದರು?
06015018a ಕೃಪೇ ಸನ್ನಿಹಿತೇ ತತ್ರ ಭರದ್ವಾಜಾತ್ಮಜೇ ತಥಾ|
06015018c ಭೀಷ್ಮಃ ಪ್ರಹರತಾಂ ಶ್ರೇಷ್ಠಃ ಕಥಂ ಸ ನಿಧನಂ ಗತಃ||
ಭರದ್ವಾಜಾತ್ಮಜ ದ್ರೋಣನು ಸನಿಹದಲ್ಲಿಯೇ ಇರುವಾಗ ಪ್ರಹರಿಗಳಲ್ಲಿ ಶ್ರೇಷ್ಠ ಭೀಷ್ಮನು ಹೇಗೆ ತಾನೇ ನಿಧನ ಹೊಂದಿದನು?
06015019a ಕಥಂ ಚಾತಿರಥಸ್ತೇನ ಪಾಂಚಾಲ್ಯೇನ ಶಿಖಂಡಿನಾ|
06015019c ಭೀಷ್ಮೋ ವಿನಿಹತೋ ಯುದ್ಧೇ ದೇವೈರಪಿ ದುರುತ್ಸಹಃ||
ಅತಿರಥನೆಂದೆನಿಸಿಕೊಂಡ, ದೇವತೆಗಳಿಗೂ ಜಯಿಸಲಸಾಧ್ಯನಾದ ಭೀಷ್ಮನು ಪಾಂಚಾಲ ಶಿಖಂಡಿಯಿಂದ ಯುದ್ಧದಲ್ಲಿ ಹೇಗೆ ಸಂಹರಿಸಲ್ಪಟ್ಟನು?
06015020a ಯಃ ಸ್ಪರ್ಧತೇ ರಣೇ ನಿತ್ಯಂ ಜಾಮದಗ್ನ್ಯಂ ಮಹಾಬಲಂ|
06015020c ಅಜಿತಂ ಜಾಮದಗ್ನ್ಯೇನ ಶಕ್ರತುಲ್ಯಪರಾಕ್ರಮಂ||
06015021a ತಂ ಹತಂ ಸಮರೇ ಭೀಷ್ಮಂ ಮಹಾರಥಬಲೋಚಿತಂ|
06015021c ಸಂಜಯಾಚಕ್ಷ್ವ ಮೇ ವೀರಂ ಯೇನ ಶರ್ಮ ನ ವಿದ್ಮಹೇ||
ಯಾರು ನಿತ್ಯವೂ ಮಹಾಬಲ ಜಾಮದಗ್ನ್ಯನೊಡನೆ ರಣದಲ್ಲಿ ಸ್ಪರ್ಧಿಸುತ್ತಿದ್ದನೋ, ಜಾಮದಗ್ನ್ಯನಿಂದ ಗೆಲ್ಲಲಸಾಧ್ಯನಾಗಿದ್ದನೋ ಅ ಶಕ್ರತುಲ್ಯಪರಾಕ್ರಮಿ, ಮಹಾರಥಿ, ಭೀಷ್ಮನನ್ನು ಸಮರದಲ್ಲಿ ಸಂಹರಿಸಲಾಯಿತೆಂದರೆ ಅದರ ಕುರಿತು ನನಗೆ ಹೇಳು ಸಂಜಯ! ಇಲ್ಲದಿದ್ದರೆ ನನಗೆ ನೆಮ್ಮದಿಯೇ ಇಲ್ಲ.
06015022a ಮಾಮಕಾಃ ಕೇ ಮಹೇಷ್ವಾಸಾ ನಾಜಹುಃ ಸಂಜಯಾಚ್ಯುತಂ|
06015022c ದುರ್ಯೋಧನಸಮಾದಿಷ್ಟಾಃ ಕೇ ವೀರಾಃ ಪರ್ಯವಾರಯನ್||
ಸಂಜಯ! ನನ್ನವರಾದ ಯಾವ ಮಹೇಷ್ವಾಸರು ಆ ಅಚ್ಯುತನನ್ನು ಬಿಟ್ಟುಕೊಡಲಿಲ್ಲ? ದುರ್ಯೋಧನನ ಕಡೆಯವರಾದ ಯಾವ ವೀರರು ಅವನನ್ನು ಸುತ್ತುವರೆದಿದ್ದರು?
06015023a ಯಚ್ಚಿಖಂಡಿಮುಖಾಃ ಸರ್ವೇ ಪಾಂಡವಾ ಭೀಷ್ಮಮಭ್ಯಯುಃ|
06015023c ಕಚ್ಚಿನ್ನ ಕುರವೋ ಭೀತಾಸ್ತತ್ಯಜುಃ ಸಂಜಯಾಚ್ಯುತಂ||
ಯಾವಾಗ ಶಿಖಂಡಿಯನ್ನು ಮುಂದಿರಿಸಿಕೊಂಡು ಪಾಂಡವರೆಲ್ಲರೂ ಭೀಷ್ಮನ ಸಮೀಪ ಬಂದರೋ ಆಗ ಕುರುಗಳು ಭಯದಿಂದ ಆ ಅಚ್ಯುತನನ್ನು ತ್ಯಜಿಸಿ ಹೋಗಲಿಲ್ಲ ತಾನೇ?
06015024a ಮೌರ್ವೀಘೋಷಸ್ತನಯಿತ್ನುಃ ಪೃಷತ್ಕಪೃಷತೋ ಮಹಾನ್|
06015024c ಧನುರ್ಹ್ವಾದಮಹಾಶಬ್ದೋ ಮಹಾಮೇಘ ಇವೋನ್ನತಃ||
06015025a ಯದಭ್ಯವರ್ಷತ್ಕೌಂತೇಯಾನ್ಸಪಾಂಚಾಲಾನ್ಸಸೃಂಜಯಾನ್|
06015025c ನಿಘ್ನನ್ಪರರಥಾನ್ವೀರೋ ದಾನವಾನಿವ ವಜ್ರಭೃತ್||
ಉನ್ನತ ಮಹಾಮೇಘಗಳ ಗುಡುಗಿನಂತೆ ಬಿಲ್ಲಿನ ಶಬ್ಧವುಳ್ಳ, ಬಿಲ್ಲಿನ ಹೆದೆಯ ಠೇಂಕಾರವು ಮೊಳಗುತ್ತಿರಲು ಕೌಂತೇಯರ, ಪಾಂಚಾಲರ ಮತ್ತು ಸೃಂಜಯರ ಮೇಲೆ ಮಳೆಸುರಿಸಿ ಶತ್ರುಗಳ ರಥಗಳನ್ನು ಆ ವೀರನು ವಜ್ರಭೃತುವು ದಾನವರನ್ನು ಹೇಗೋ ಹಾಗೆ ಪುಡಿಮಾಡುತ್ತಿದ್ದನು.
06015026a ಇಷ್ವಸ್ತ್ರಸಾಗರಂ ಘೋರಂ ಬಾಣಗ್ರಾಹಂ ದುರಾಸದಂ|
06015026c ಕಾರ್ಮುಕೋರ್ಮಿಣಮಕ್ಷಯ್ಯಮದ್ವೀಪಂ ಸಮರೇಽಪ್ಲವಂ|
06015026e ಗದಾಸಿಮಕರಾವರ್ತಂ ಹಯಗ್ರಾಹಂ ಗಜಾಕುಲಂ||
06015027a ಹಯಾನ್ಗಜಾನ್ಪದಾತಾಂಶ್ಚ ರಥಾಂಶ್ಚ ತರಸಾ ಬಹೂನ್|
06015027c ನಿಮಜ್ಜಯಂತಂ ಸಮರೇ ಪರವೀರಾಪಹಾರಿಣಂ||
06015028a ವಿದಹ್ಯಮಾನಂ ಕೋಪೇನ ತೇಜಸಾ ಚ ಪರಂತಪಂ|
06015028c ವೇಲೇವ ಮಕರಾವಾಸಂ ಕೇ ವೀರಾಃ ಪರ್ಯವಾರಯನ್||
ಎಲ್ಲಿ ಬಾಣಗಳು ದುರಾಸದ ಮೊಸಳೆಗಳೋ ಮತ್ತು ಬಿಲ್ಲುಗಳು ಅಲೆಗಳೋ ಅಂಥಹ ಅಸ್ತ್ರ ಮತ್ತು ಬಾಣಗಳ ಸಾಗರದಂತಿದ್ದ, ದ್ವೀಪವೇ ಇಲ್ಲದ ಅಕ್ಷಯ ಸಾಗರದಂತಿದ್ದ, ತೆಪ್ಪವೇ ಕಾಣದ ಅಲ್ಲೋಲಕಲ್ಲೋಲಗೊಂಡ ಸಾಗರದಂತಿದ್ದ, ಗದೆ-ಖಡ್ಗಗಳು ತಿಮಿಂಗಿಲಗಳಂತಿದ್ದ, ಬಹುಸಂಖ್ಯೆಯಲ್ಲಿ ಕುದುರೆ, ಆನೆ, ಪದಾತಿಗಳು ಓಡಾಡುತ್ತಿರುವ ಆ ಸೇನೆಯನ್ನು, ಸಾಗರವನ್ನು ದಡವು ಎದುರಿಸಿ ತಡೆವಂತೆ ಯಾವ ವೀರರು ತಡೆದರು? –
06015029a ಭೀಷ್ಮೋ ಯದಕರೋತ್ಕರ್ಮ ಸಮರೇ ಸಂಜಯಾರಿಹಾ|
06015029c ದುರ್ಯೋಧನಹಿತಾರ್ಥಾಯ ಕೇ ತದಾಸ್ಯ ಪುರೋಽಭವನ್||
ಸಂಜಯ! ಭೀಷ್ಮನು ದುರ್ಯೋಧನನ ಹಿತಕ್ಕಾಗಿ ಸಮರದಲ್ಲಿ ಈ ಕೆಲಸವನ್ನು ಮಾಡುತ್ತಿರುವಾಗ ಅವನ ಮುಂದೆ ಯಾರಿದ್ದರು?
06015030a ಕೇಽರಕ್ಷನ್ದಕ್ಷಿಣಂ ಚಕ್ರಂ ಭೀಷ್ಮಸ್ಯಾಮಿತತೇಜಸಃ|
06015030c ಪೃಷ್ಠತಃ ಕೇ ಪರಾನ್ವೀರಾ ಉಪಾಸೇಧನ್ಯತವ್ರತಾಃ||
ಅಮಿತತೇಜಸ ಭೀಷ್ಮನ ಎಡಚಕ್ರವನ್ನು ಯಾರು ರಕ್ಷಿಸುತ್ತಿದ್ದರು? ಅವನ ಮುಂದೆ ಯಾವ ವೀರ ಯತವ್ರತರು ಅವನನ್ನು ಬೆಂಬಲಿಸುತ್ತಿದ್ದರು?
06015031a ಕೇ ಪುರಸ್ತಾದವರ್ತಂತ ರಕ್ಷಂತೋ ಭೀಷ್ಮಮಂತಿಕೇ|
06015031c ಕೇಽರಕ್ಷನ್ನುತ್ತರಂ ಚಕ್ರಂ ವೀರಾ ವೀರಸ್ಯ ಯುಧ್ಯತಃ||
ಭೀಷ್ಮನನ್ನು ಅಂತ್ಯದಲ್ಲಿ ಯಾರು ಮುಂದಿನಿಂದ ರಕ್ಷಿಸುತ್ತಿದ್ದರು? ಯುದ್ಧ ಮಾಡುತ್ತಿರುವ ಆ ವೀರನ ಬಲಚಕ್ರವನ್ನು ಯಾವವೀರರು ರಕ್ಷಿಸುತ್ತಿದ್ದರು?
06015032a ವಾಮೇ ಚಕ್ರೇ ವರ್ತಮಾನಾಃ ಕೇಽಘ್ನನ್ಸಂಜಯ ಸೃಂಜಯಾನ್|
06015032c ಸಮೇತಾಗ್ರಮನೀಕೇಷು ಕೇಽಭ್ಯರಕ್ಷನ್ದುರಾಸದಂ||
ಸಂಜಯ! ಅವನ ಎಡಚಕ್ರದಲ್ಲಿದ್ದುಕೊಂಡು ಯಾರು ಸೃಂಜಯರನ್ನು ಸದೆಬಡಿದರು? ಯುದ್ಧದಲ್ಲಿ ತೊಡಗಿರುವಾಗ ಆ ದುರಾಸದನ ಮುಂದಿನ ಚಕ್ರಗಳನ್ನು ಯಾರು ರಕ್ಷಿಸಿದರು?
06015033a ಪಾರ್ಶ್ವತಃ ಕೇಽಭ್ಯವರ್ತಂತ ಗಚ್ಛಂತೋ ದುರ್ಗಮಾಂ ಗತಿಂ|
06015033c ಸಮೂಹೇ ಕೇ ಪರಾನ್ವೀರಾನ್ಪ್ರತ್ಯಯುಧ್ಯಂತ ಸಂಜಯ||
ಸಂಜಯ! ದುರ್ಗಮ ಗತಿಯಲ್ಲಿ ಹೋಗುತ್ತಿರುವ ಅವನನ್ನು ಎರಡೂ ಕಡೆಗಳಿಂದ ಯಾರು ರಕ್ಷಿಸಿದರು? ಯುದ್ಧದಲ್ಲಿ ಯಾರು ಪರವೀರರು ಅವನೊಂದಿಗೆ ಪ್ರತಿಯುದ್ಧ ಮಾಡಿದರು?
06015034a ರಕ್ಷ್ಯಮಾಣಃ ಕಥಂ ವೀರೈರ್ಗೋಪ್ಯಮಾನಾಶ್ಚ ತೇನ ತೇ|
06015034c ದುರ್ಜಯಾನಾಮನೀಕಾನಿ ನಾಜಯಂಸ್ತರಸಾ ಯುಧಿ||
ವೀರರಿಂದ ರಕ್ಷಿಸಲ್ಪಟ್ಟಿದ್ದರೂ, ಅವರನ್ನು ರಕ್ಷಿಸುತ್ತಿದ್ದರೂ ಹೇಗೆ ಅವನು ಯುದ್ಧದಲ್ಲಿ ಆ ದುರ್ಜಯ ಸೇನೆಯನ್ನು ತಕ್ಷಣವೇ ಗೆಲ್ಲಲಿಲ್ಲ?
06015035a ಸರ್ವಲೋಕೇಶ್ವರಸ್ಯೇವ ಪರಮೇಷ್ಠಿಪ್ರಜಾಪತೇಃ|
06015035c ಕಥಂ ಪ್ರಹರ್ತುಮಪಿ ತೇ ಶೇಕುಃ ಸಂಜಯ ಪಾಂಡವಾಃ||
ಸಂಜಯ! ಸರ್ವಲೋಕೇಶ್ವರ, ಪರಮೇಷ್ಠಿ, ಪ್ರಜಾಪತಿಯಂತಿದ್ದರೂ ಅವನನ್ನು ಪಾಂಡವರು ಹೇಗೆ ಹೊಡೆಯಲು ಶಕ್ಯರಾದರು?
06015036a ಯಸ್ಮಿನ್ದ್ವೀಪೇ ಸಮಾಶ್ರಿತ್ಯ ಯುಧ್ಯಂತಿ ಕುರವಃ ಪರೈಃ|
06015036c ತಂ ನಿಮಗ್ನಂ ನರವ್ಯಾಘ್ರಂ ಭೀಷ್ಮಂ ಶಂಸಸಿ ಸಂಜಯ||
ಯಾವ ದ್ವೀಪವನ್ನು ಅವಲಂಬಿಸಿ ಕುರುಗಳು ಶತ್ರುಗಳೊಂದಿಗೆ ಯುದ್ಧ ಮಾಡುತ್ತಿರುವರೋ ಆ ನರವ್ಯಾಘ್ರ ಭೀಷ್ಮನು ನಿಮಗ್ನನಾಗಿದ್ದುದನ್ನು ಹೇಳುತ್ತಿದ್ದೀಯೆ ಸಂಜಯ!
06015037a ಯಸ್ಯ ವೀರ್ಯೇ ಸಮಾಶ್ವಸ್ಯ ಮಮ ಪುತ್ರೋ ಬೃಹದ್ಬಲಃ|
06015037c ನ ಪಾಂಡವಾನಗಣಯತ್ಕಥಂ ಸ ನಿಹತಃ ಪರೈಃ||
ಯಾರ ವೀರ್ಯವನ್ನು ಅವಲಂಬಿಸಿ ನನ್ನ ಪುತ್ರರು ಪಾಂಡವರನ್ನು ಗಣನೆಗೆ ತೆಗೆದುಕೊಂಡಿರಲಿಲ್ಲವೋ ಅವನನ್ನೇ ಶತ್ರುಗಳು ಹೇಗೆ ಸಂಹರಿಸಿದರು?
06015038a ಯಃ ಪುರಾ ವಿಬುಧೈಃ ಸೇಂದ್ರೈಃ ಸಾಹಾಯ್ಯೇ ಯುದ್ಧದುರ್ಮದಃ|
06015038c ಕಾಂಕ್ಷಿತೋ ದಾನವಾನ್ ಘ್ನದ್ಭಿಃ ಪಿತಾ ಮಮ ಮಹಾವ್ರತಃ||
06015039a ಯಸ್ಮಿಂ ಜಾತೇ ಮಹಾವೀರ್ಯೇ ಶಂತನುರ್ಲೋಕಶಂಕರೇ|
06015039c ಶೋಕಂ ದುಃಖಂ ಚ ದೈನ್ಯಂ ಚ ಪ್ರಾಜಹಾತ್ಪುತ್ರಲಕ್ಷ್ಮಣಿ||
06015040a ಪ್ರಜ್ಞಾ ಪರಾಯಣಂ ತಜ್ಜ್ಞಂ ಸದ್ಧರ್ಮನಿರತಂ ಶುಚಿಂ|
06015040c ವೇದವೇದಾಂಗತತ್ತ್ವಜ್ಞಂ ಕಥಂ ಶಂಸಸಿ ಮೇ ಹತಂ||
ಹಿಂದೆ ದಾನವರನ್ನು ಸದೆಬಡಿಯಲು ಬಯಸಿ ಇಂದ್ರನೂ ಸೇರಿ ದೇವತೆಗಳು ಕೇಳಿದ್ದ ನನ್ನ ತಂದೆ ಯುದ್ಧ ದುರ್ಮದ ಮಹಾವ್ರತನು, ಲೋಕಶಂಕರ ಶಂತನುವಿಗೆ ಹುಟ್ಟಿ ಪುತ್ರಲಕ್ಷ್ಮಣನಾಗಿದ್ದು ಅವನ ಶೋಕ, ದುಃಖ ಮತ್ತು ದೈನ್ಯತೆಗಳನ್ನು ಕಳೆದ ಆ ಮಹಾವೀರ್ಯನು, ಆ ಪ್ರಜ್ಞಾಪರಾಯಣ, ತಜ್ಞ, ಸದ್ಧರ್ಮನಿರತ, ಶುಚಿ, ವೇದವೇದಾಂಗತತ್ವಜ್ಞನು ಹೇಗೆ ಹತನಾದನೆಂದು ನನಗೆ ವರ್ಣಿಸು.
06015041a ಸರ್ವಾಸ್ತ್ರವಿನಯೋಪೇತಂ ದಾಂತಂ ಶಾಂತಂ ಮನಸ್ವಿನಂ|
06015041c ಹತಂ ಶಾಂತನವಂ ಶ್ರುತ್ವಾ ಮನ್ಯೇ ಶೇಷಂ ಬಲಂ ಹತಂ||
ಆ ಸರ್ವಾಸ್ತ್ರವಿನಯೋಪೇತ, ದಾಂತ, ಶಾಂತ, ಮನಸ್ವಿ, ಶಾಂತನವನು ಹತನಾದನೆಂದು ಕೇಳಿ ಉಳಿದ ಸೇನೆಯೂ ಹತವಾಗಿರಬಹುದು ಎಂದನಿಸುತ್ತದೆ.
06015042a ಧರ್ಮಾದಧರ್ಮೋ ಬಲವಾನ್ಸಂಪ್ರಾಪ್ತ ಇತಿ ಮೇ ಮತಿಃ|
06015042c ಯತ್ರ ವೃದ್ಧಂ ಗುರುಂ ಹತ್ವಾ ರಾಜ್ಯಮಿಚ್ಛಂತಿ ಪಾಂಡವಾಃ||
ವೃದ್ಧ ಗುರುವನ್ನೂ ಕೊಂದು ಪಾಂಡವರು ರಾಜ್ಯವನ್ನು ಬಯಸುತ್ತಾರೆಂದರೆ ಧರ್ಮಕ್ಕಿಂತಲೂ ಅಧರ್ಮವೇ ಬಲವನ್ನು ಪಡೆದಿದೆ ಎಂದು ನನ್ನ ಅಭಿಪ್ರಾಯ.
06015043a ಜಾಮದಗ್ನ್ಯಃ ಪುರಾ ರಾಮಃ ಸರ್ವಾಸ್ತ್ರವಿದನುತ್ತಮಃ|
06015043c ಅಂಬಾರ್ಥಮುದ್ಯತಃ ಸಂಖ್ಯೇ ಭೀಷ್ಮೇಣ ಯುಧಿ ನಿರ್ಜಿತಃ||
06015044a ತಮಿಂದ್ರಸಮಕರ್ಮಾಣಂ ಕಕುದಂ ಸರ್ವಧನ್ವಿನಾಂ|
06015044c ಹತಂ ಶಂಸಸಿ ಭೀಷ್ಮಂ ಮೇ ಕಿಂ ನು ದುಃಖಮತಃ ಪರಂ||
ಹಿಂದೆ ಸರ್ವಾಸ್ತ್ರವಿದು ಅನುತ್ತಮ ಜಾಮದಗ್ನ್ಯ ರಾಮನು ಅಂಬೆಗೋಸ್ಕರ ಭೀಷ್ಮನೊಂದಿಗೆ ಯುದ್ಧವನ್ನು ಪ್ರಾರಂಭಿಸಿ ಸೋತಿದ್ದನು. ಆ ಇಂದ್ರಸಮಕರ್ಮಿ, ಸರ್ವಧನ್ವಿಗಳ ಕಕುದ ಭೀಷ್ಮನು ಹತನಾದನೆಂದು ಹೇಳಿದೆಯಲ್ಲಾ ಅದಕ್ಕಿಂತಲೂ ಅಧಿಕವಾದ ದುಃಖವಾದರೂ ಏನಿದೆ?
06015045a ಅಸಕೃತ್ ಕ್ಷತ್ರಿಯವ್ರಾತಾಃ ಸಂಖ್ಯೇ ಯೇನ ವಿನಿರ್ಜಿತಾಃ|
06015045c ಜಾಮದಗ್ನ್ಯಸ್ತಥಾ ರಾಮಃ ಪರವೀರನಿಘಾತಿನಾ||
06015046a ತಸ್ಮಾನ್ನೂನಂ ಮಹಾವೀರ್ಯಾದ್ಭಾರ್ಗವಾದ್ಯುದ್ಧದುರ್ಮದಾತ್|
06015046c ತೇಜೋವೀರ್ಯಬಲೈರ್ಭೂಯಾಂ ಶಿಖಂಡೀ ದ್ರುಪದಾತ್ಮಜಃ||
06015047a ಯಃ ಶೂರಂ ಕೃತಿನಂ ಯುದ್ಧೇ ಸರ್ವಶಾಸ್ತ್ರವಿಶಾರದಂ|
06015047c ಪರಮಾಸ್ತ್ರವಿದಂ ವೀರಂ ಜಘಾನ ಭರತರ್ಷಭಂ||
ಬಹಳ ಬಾರಿ ಕ್ಷತ್ರಿಯರ ಗುಂಪುಗಳನ್ನು ಯುದ್ಧದಲ್ಲಿ ಗೆದ್ದ, ಹಾಗೆಯೇ ಪರವೀರನಿಘಾತಿ, ಯುದ್ಧದುರ್ಮದ, ಮಹಾವೀರ್ಯ, ತೇಜೋವೀರ್ಯ, ಬಲೋ ವೀರ್ಯ ಭಾರ್ಗವ ಜಾಮದಗ್ನಿ ರಾಮನಿಂದಲೂ ಸೋಲಿಸಲ್ಪಡದ ಅವನನ್ನು ದ್ರುಪದಾತ್ಮಜ ಶಿಖಂಡಿಯು ಸೋಲಿಸಿದನು. ಅ ಭರತರ್ಷಭ ವೀರ ಪರಮಾಸ್ತ್ರವಿದು ಸರ್ವಶಾಸ್ತ್ರವಿಶಾರದ ಶೂರ ಕೃತಿನನನ್ನು ಯುದ್ಧದಲ್ಲಿ ಸೋಲಿಸಿದ ಅವನು ತೇಜಸ್ಸು-ವೀರ್ಯ-ಬಲಗಳಲ್ಲಿ ಇನ್ನೂ ಹೆಚ್ಚಿನವನೇ ಇರಬೇಕು.
06015048a ಕೇ ವೀರಾಸ್ತಮಮಿತ್ರಘ್ನಮನ್ವಯುಃ ಶತ್ರುಸಂಸದಿ|
06015048c ಶಂಸ ಮೇ ತದ್ಯಥಾ ವೃತ್ತಂ ಯುದ್ಧಂ ಭೀಷ್ಮಸ್ಯ ಪಾಂಡವೈಃ||
ಆ ಶತ್ರುಸಂಸದಿಯಲ್ಲಿ ಯಾವ ವೀರರು ಆ ಅಮಿತ್ರಘ್ನನನ್ನು ಅನುಸರಿಸಿದರು? ಭೀಷ್ಮ ಮತ್ತು ಪಾಂಡವರ ಯುಧ್ಧವನ್ನು ಹೇಗೆ ನಡೆಯಿತೋ ಹಾಗೆ ವರದಿಮಾಡು.
06015049a ಯೋಷೇವ ಹತವೀರಾ ಮೇ ಸೇನಾ ಪುತ್ರಸ್ಯ ಸಂಜಯ|
06015049c ಅಗೋಪಮಿವ ಚೋದ್ಭ್ರಾಂತಂ ಗೋಕುಲಂ ತದ್ಬಲಂ ಮಮ||
ಸಂಜಯ! ವೀರನನ್ನು ಕಳೆದುಕೊಂಡ ನನ್ನ ಪುತ್ರನ ಸೇನೆಯು ರಕ್ಷಕನಿಲ್ಲದ ಸ್ತ್ರೀಯಂತಾಗಿದೆ. ನನ್ನ ಸೇನೆಯು ಗೋಪಾಲಕನಿಲ್ಲದ ಗೋಕುಲದಂತೆ ಭ್ರಾಂತಗೊಂಡಿದೆ.
06015050a ಪೌರುಷಂ ಸರ್ವಲೋಕಸ್ಯ ಪರಂ ಯಸ್ಯ ಮಹಾಹವೇ|
06015050c ಪರಾಸಿಕ್ತೇ ಚ ವಸ್ತಸ್ಮಿನ್ಕಥಮಾಸೀನ್ಮನಸ್ತದಾ||
ಯಾರು ಸರ್ವಲೋಕದ ಪರಮ ಪೌರುಷನಾಗಿದ್ದನೋ ಅವನು ಮಹಾಹವದಲ್ಲಿ ಕೆಳಗುರುಳಿದಾಗ ನನ್ನ ಸೇನೆಯ ಮನಸ್ಥಿತಿಯು ಹೇಗಿದ್ದಿತು?
06015051a ಜೀವಿತೇಽಪ್ಯದ್ಯ ಸಾಮರ್ಥ್ಯಂ ಕಿಮಿವಾಸ್ಮಾಸು ಸಂಜಯ|
06015051c ಘಾತಯಿತ್ವಾ ಮಹಾವೀರ್ಯಂ ಪಿತರಂ ಲೋಕಧಾರ್ಮಿಕಂ||
ಸಂಜಯ! ಮಹಾವೀರ್ಯನಾದ ಲೋಕಧಾರ್ಮಿಕನಾದ ತಂದೆಯನ್ನು ಕೊಂದು ಇಂದು ನಾವು ಜೀವಿಸಿರಲು ಯಾವ ಸಾಮರ್ಥ್ಯವನ್ನು ಪಡೆದಿದ್ದೇವೆ?
06015052a ಅಗಾಧೇ ಸಲಿಲೇ ಮಗ್ನಾಂ ನಾವಂ ದೃಷ್ಟ್ವೇವ ಪಾರಗಾಃ|
06015052c ಭೀಷ್ಮೇ ಹತೇ ಭೃಶಂ ದುಃಖಾನ್ಮನ್ಯೇ ಶೋಚಂತಿ ಪುತ್ರಕಾಃ||
ದಾಟಲು ಬಯಸಿದವರು ಅಗಾಧವಾದ ನೀರಿನಲ್ಲಿ ಮುಳುಗಿ ಹೋಗಿರುವ ಅವರ ನಾವೆಯನ್ನು ನೋಡಿದವರಂತೆ, ಭೀಷ್ಮನು ಹತನಾಗಲು ನನ್ನ ಮಕ್ಕಳು ತುಂಬಾ ಶೋಕಿಸುತ್ತಿರಬಹುದೆಂದು ನಾನು ಅಂದುಕೊಳ್ಳುತ್ತೇನೆ.
06015053a ಅದ್ರಿಸಾರಮಯಂ ನೂನಂ ಸುದೃಢಂ ಹೃದಯಂ ಮಮ|
06015053c ಯಚ್ಚ್ರುತ್ವಾ ಪುರುಷವ್ಯಾಘ್ರಂ ಹತಂ ಭೀಷ್ಮಂ ನ ದೀರ್ಯತೇ||
ಪುರುಷವ್ಯಾಘ್ರ ಭೀಷ್ಮನು ಹತನಾದನೆಂದು ಕೇಳಿದರೂ ಒಡೆಯದೇ ಇದ್ದ ನನ್ನ ಈ ಹೃದಯವು ತುಂಬಾ ಸಾರಮಯವಾಗಿದ್ದು ಸುದೃಢವಾಗಿದೆ ಎನಿಸುತ್ತದೆಯಲ್ಲವೇ?
06015054a ಯಸ್ಮಿನ್ನಸ್ತ್ರಂ ಚ ಮೇಧಾ ಚ ನೀತಿಶ್ಚ ಭರತರ್ಷಭೇ|
06015054c ಅಪ್ರಮೇಯಾಣಿ ದುರ್ಧರ್ಷೇ ಕಥಂ ಸ ನಿಹತೋ ಯುಧಿ||
ಯಾರಲ್ಲಿ ಅಸ್ತ್ರ, ಬುದ್ಧಿ, ಮತ್ತು ನೀತಿಗಳು ಅಳೆಯಲಾರದಷ್ಟು ಇವೆಯೋ ಆ ದುರ್ಧರ್ಷನು ಯುದ್ಧದಲ್ಲಿ ಹೇಗೆ ಹತನಾದನು?
06015055a ನ ಚಾಸ್ತ್ರೇಣ ನ ಶೌರ್ಯೇಣ ತಪಸಾ ಮೇಧಯಾ ನ ಚ|
06015055c ನ ಧೃತ್ಯಾ ನ ಪುನಸ್ತ್ಯಾಗಾನ್ಮೃತ್ಯೋಃ ಕಶ್ಚಿದ್ವಿಮುಚ್ಯತೇ||
ಅಸ್ತ್ರಗಳಿಂದಾಗಲೀ, ಶೌರ್ಯದಿಂದಾಗಲೀ, ತಪಸ್ಸು-ಬುದ್ಧಿಶಕ್ತಿಯಿಂದಾಗಲೀ, ಧೃತಿಯಿಂದಾಗಲೀ, ಮತ್ತು ತ್ಯಾಗದಿಂದಾಗಲೀ ಯಾವುದರಿಂದಲೂ ಮೃತ್ಯುವಿನಿಂದ ಬಿಡುಗಡೆಯು ದೊರೆಯುವುದಿಲ್ಲ.
06015056a ಕಾಲೋ ನೂನಂ ಮಹಾವೀರ್ಯಃ ಸರ್ವಲೋಕದುರತ್ಯಯಃ|
06015056c ಯತ್ರ ಶಾಂತನವಂ ಭೀಷ್ಮಂ ಹತಂ ಶಂಸಸಿ ಸಂಜಯ||
ಸಂಜಯ! ಶಾಂತನವ ಭೀಷ್ಮನು ಹತನಾದ ಎಂದು ನೀನು ಹೇಳುವಲ್ಲಿ ಮಹಾವೀರ್ಯವಾದ ಕಾಲವನ್ನು ಲೋಕದಲ್ಲಿ ಯಾರೂ ದಾಟಲು ಶಕ್ಯರಲ್ಲ ಎಂದಲ್ಲವೇ?
06015057a ಪುತ್ರಶೋಕಾಭಿಸಂತಪ್ತೋ ಮಹದ್ದುಃಖಮಚಿಂತಯನ್|
06015057c ಆಶಂಸೇಽಹಂ ಪುರಾ ತ್ರಾಣಂ ಭೀಷ್ಮಾಚ್ಚಂತನುನಂದನಾತ್||
ಪುತ್ರರ ಕುರಿತಾಗಿ ಶೋಕಸಂತಪ್ತನಾಗಿದ್ದ ನಾನು ಮಹಾದುಃಖದಲ್ಲಿ ಚಿಂತಿಸಿ ಹಿಂದೆಯೇ ಭೀಷ್ಮ ಶಂತನುನಂದನನ ತ್ರಾಣವನ್ನು ಅವಲಂಬಿಸಿದ್ದೆ.
06015058a ಯದಾದಿತ್ಯಮಿವಾಪಶ್ಯತ್ಪತಿತಂ ಭುವಿ ಸಂಜಯ|
06015058c ದುರ್ಯೋಧನಃ ಶಾಂತನವಂ ಕಿಂ ತದಾ ಪ್ರತ್ಯಪದ್ಯತ||
ಸಂಜಯ! ಆದಿತ್ಯನಂತೆ ಭುವಿಗೆ ಬೀಳುತ್ತಿರುವ ಶಾಂತನುವನ್ನು ನೋಡಿ ದುರ್ಯೋಧನನು ಏನು ಮಾಡಿದನು?
06015059a ನಾಹಂ ಸ್ವೇಷಾಂ ಪರೇಷಾಂ ವಾ ಬುದ್ಧ್ಯಾ ಸಂಜಯ ಚಿಂತಯನ್|
06015059c ಶೇಷಂ ಕಿಂ ಚಿತ್ಪ್ರಪಶ್ಯಾಮಿ ಪ್ರತ್ಯನೀಕೇ ಮಹೀಕ್ಷಿತಾಂ||
ಸಂಜಯ! ನನ್ನ ಸ್ವಬುದ್ಧಿಯಿಂದ ಯೋಚಿಸಿದರೆ ನಮ್ಮಲ್ಲಿ ಮತ್ತು ಶತ್ರುಗಳಲ್ಲಿ ಉಳಿದಿರುವ ಮಹೀಕ್ಷಿತರು ಏನು ಮಾಡುತ್ತಾರೆಂದು ತೋಚುವುದಿಲ್ಲ.
06015060a ದಾರುಣಃ ಕ್ಷತ್ರಧರ್ಮೋಽಯಂ ಋಷಿಭಿಃ ಸಂಪ್ರದರ್ಶಿತಃ|
06015060c ಯತ್ರ ಶಾಂತನವಂ ಹತ್ವಾ ರಾಜ್ಯಮಿಚ್ಛಂತಿ ಪಾಂಡವಾಃ||
ಶಾಂತನವನನ್ನು ಕೊಂದು ಪಾಂಡವರು ರಾಜ್ಯವನ್ನು ಬಯಸುತ್ತಾರೆ ಎಂದಾದರೆ ಋಷಿಗಳು ಹಾಕಿಕೊಟ್ಟ ಈ ಕ್ಷತ್ರಧರ್ಮವು ದಾರುಣವಾದುದು.
06015061a ವಯಂ ವಾ ರಾಜ್ಯಮಿಚ್ಛಾಮೋ ಘಾತಯಿತ್ವಾ ಪಿತಾಮಹಂ|
06015061c ಕ್ಷತ್ರಧರ್ಮೇ ಸ್ಥಿತಾಃ ಪಾರ್ಥಾ ನಾಪರಾಧ್ಯಂತಿ ಪುತ್ರಕಾಃ||
ನಾವೂ ಕೂಡ ಪಿತಾಮಹನನ್ನು ಕೊಲ್ಲಿಸಿ ರಾಜ್ಯವನ್ನು ಬಯಸುತ್ತಿದ್ದೇವೆ. ಪಾರ್ಥರೂ ಮತ್ತು ನನ್ನ ಪುತ್ರರೂ ಕ್ಷತ್ರಧರ್ಮದಲ್ಲಿಯೇ ನೆಲೆಸಿದ್ದಾರೆ. ಆದುದರಿಂದ ಅವರು ಅಪರಾಧಮಾಡಿದಂತಾಗಲಿಲ್ಲ.
06015062a ಏತದಾರ್ಯೇಣ ಕರ್ತವ್ಯಂ ಕೃಚ್ಛ್ರಾಸ್ವಾಪತ್ಸು ಸಂಜಯ|
06015062c ಪರಾಕ್ರಮಃ ಪರಂ ಶಕ್ತ್ಯಾ ತಚ್ಚ ತಸ್ಮಿನ್ಪ್ರತಿಷ್ಠಿತಂ||
ಸಂಜಯ! ಅತಿದೊಡ್ಡ ಆಪತ್ತು ಬಂದಾಗ ಆರ್ಯನು ಮಾಡಬೇಕಾದ ಕರ್ತವ್ಯವೇ ಇದು. ಪರಮ ಶಕ್ತಿಯನ್ನುಪಯೋಗಿಸಿ ಪರಾಕ್ರಮವನ್ನು ತೋರಿಸುವುದು ಕ್ಷತ್ರಧರ್ಮದಲ್ಲಿ ಇದೆ.
06015063a ಅನೀಕಾನಿ ವಿನಿಘ್ನಂತಂ ಹ್ರೀಮಂತಮಪರಾಜಿತಂ|
06015063c ಕಥಂ ಶಾಂತನವಂ ತಾತ ಪಾಂಡುಪುತ್ರಾ ನ್ಯಪಾತಯನ್||
ಅಯ್ಯಾ! ಸೇನೆಗಳನ್ನು ಸಂಹರಿಸುತ್ತಿದ್ದ, ವಿನಯನಾದ, ಅಪರಾಜಿತ ಶಾಂತನವನನ್ನು ಪಾಂಡುಪುತ್ರರು ಹೇಗೆ ಕೆಡವಿದರು?
06015064a ಕಥಂ ಯುಕ್ತಾನ್ಯನೀಕಾನಿ ಕಥಂ ಯುದ್ಧಂ ಮಹಾತ್ಮಭಿಃ|
06015064c ಕಥಂ ವಾ ನಿಹತೋ ಭೀಷ್ಮಃ ಪಿತಾ ಸಂಜಯ ಮೇ ಪರೈಃ||
ಸೇನೆಗಳನ್ನು ಹೇಗೆ ರಚಿಸಲಾಗಿತ್ತು? ಮಹಾತ್ಮರು ಹೇಗೆ ಯುದ್ಧಮಾಡಿದರು? ಸಂಜಯ! ನನ್ನ ಪಿತ ಭೀಷ್ಮನನ್ನು ಶತ್ರುಗಳು ಹೇಗೆ ಹೊಡೆದುರುಳಿಸಿದರು?
06015065a ದುರ್ಯೋಧನಶ್ಚ ಕರ್ಣಶ್ಚ ಶಕುನಿಶ್ಚಾಪಿ ಸೌಬಲಃ|
06015065c ದುಃಶ್ಯಾಸನಶ್ಚ ಕಿತವೋ ಹತೇ ಭೀಷ್ಮೇ ಕಿಮಬ್ರುವನ್||
ಭೀಷ್ಮನು ಹತನಾಗಲು ಜೂಜುಕೋರರಾದ ದುರ್ಯೋಧನ, ಕರ್ಣ, ಸೌಬಲ ಶಕುನಿ ಮತ್ತು ದುಃಶಾಸನರು ಏನು ಹೇಳಿದರು?
06015066a ಯಚ್ಚರೀರೈರುಪಸ್ತೀರ್ಣಾಂ ನರವಾರಣವಾಜಿನಾಂ|
06015066c ಶರಶಕ್ತಿಗದಾಖಡ್ಗತೋಮರಾಕ್ಷಾಂ ಭಯಾವಹಾಂ||
06015067a ಪ್ರಾವಿಶನ್ಕಿತವಾ ಮಂದಾಃ ಸಭಾಂ ಯುಧಿ ದುರಾಸದಾಂ|
06015067c ಪ್ರಾಣದ್ಯೂತೇ ಪ್ರತಿಭಯೇ ಕೇಽದೀವ್ಯಂತ ನರರ್ಷಭಾಃ||
ನರ-ವಾರಣ-ವಾಜಿಗಳ ಶರೀರಗಳೇ ದಾಳದ ಮನೆಗಳಾಗಿರುವ, ಶರ-ಶಕ್ತಿ-ಗದೆ-ಖಡ್ಗ-ತೋಮರಗಳೇ ಭಯಾವಹ ದಾಳಗಳಾಗಿರುವ ಆ ಯುದ್ಧವೆಂಬ ದ್ಯೂತದ ದುರಾಸದ ಸಭೆಯನ್ನು ಪ್ರವೇಶಿಸಿ ಆ ಮಂದ ಜೂಜುಕೋರ ನರರ್ಷಭರು ಪ್ರಾಣದ್ಯೂತದಲ್ಲಿ ಯಾರನ್ನು ಪಣವಾಗಿಟ್ಟಿದ್ದರು?
06015068a ಕೇಽಜಯನ್ಕೇ ಜಿತಾಸ್ತತ್ರ ಹೃತಲಕ್ಷಾ ನಿಪಾತಿತಾಃ|
06015068c ಅನ್ಯೇ ಭೀಷ್ಮಾಚ್ಚಾಂತನವಾತ್ತನ್ಮಮಾಚಕ್ಷ್ವ ಸಂಜಯ||
ಅಲ್ಲಿ ಯಾರು ಗೆದ್ದರು? ಯಾರು ಸೋತರು? ಯಾರು ದಾಳಗಳನ್ನು ಚೆನ್ನಾಗಿ ಹಾಕಿದರು? ಶಾಂತನವ ಭೀಷ್ಮನಲ್ಲದೇ ಬೇರೆ ಯಾರು ಕೆಳಗುರುಳಿದರು? ಸಂಜಯ! ನನಗೆ ಹೇಳು.
06015069a ನ ಹಿ ಮೇ ಶಾಂತಿರಸ್ತೀಹ ಯುಧಿ ದೇವವ್ರತಂ ಹತಂ|
06015069c ಪಿತರಂ ಭೀಮಕರ್ಮಾಣಂ ಶ್ರುತ್ವಾ ಮೇ ದುಃಖಮಾವಿಶತ್||
ಈಗ ನನಗೆ ಶಾಂತಿಯೆನ್ನುವುದೇ ಇಲ್ಲದಂತಾಗಿದೆ. ಯುದ್ಧದಲ್ಲಿ ಭೀಮಕರ್ಮಿ ತಂದೆ ದೇವವ್ರತನು ಹತನಾದನೆಂದು ಕೇಳಿ ನನಗೆ ದುಃಖವು ಆವರಿಸಿದೆ.
06015070a ಆರ್ತಿಂ ಮೇ ಹೃದಯೇ ರೂಢಾಂ ಮಹತೀಂ ಪುತ್ರಕಾರಿತಾಂ|
06015070c ತ್ವಂ ಸಿಂಚನ್ಸರ್ಪಿಷೇವಾಗ್ನಿಮುದ್ದೀಪಯಸಿ ಸಂಜಯ||
ಸಂಜಯ! ಪುತ್ರರು ಮಾಡಿದ ಈ ಮಹಾ ತಪ್ಪಿನಿಂದಾಗಿ ನನ್ನ ಹೃದಯವು ಆರ್ತವಾಗಿದೆ. ಅಗ್ನಿಯಮೇಲೆ ತುಪ್ಪವನ್ನು ಸಿಂಪಡಿಸಿ ಹೆಚ್ಚಾಗಿ ಉರಿಯುವಂತೆ ನೀನು ಮಾಡುತ್ತಿದ್ದೀಯೆ.
06015071a ಮಹಾಂತಂ ಭಾರಮುದ್ಯಮ್ಯ ವಿಶ್ರುತಂ ಸಾರ್ವಲೌಕಿಕಂ|
06015071c ದೃಷ್ಟ್ವಾ ವಿನಿಹತಂ ಭೀಷ್ಮಂ ಮನ್ಯೇ ಶೋಚಂತಿ ಪುತ್ರಕಾಃ||
ತನ್ನ ಮೇಲೆ ಮಹಾ ಭಾರವನ್ನು ಹೊತ್ತಿದ್ದ, ಸಾರ್ವಲೌಕಿಕ, ವಿಶ್ರುತ ಭೀಷ್ಮನು ವಿನಿಹತನಾದುದನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿರಬಹುದೆಂದು ಅನ್ನಿಸುತ್ತದೆ.
06015072a ಶ್ರೋಷ್ಯಾಮಿ ತಾನಿ ದುಃಖಾನಿ ದುರ್ಯೋಧನಕೃತಾನ್ಯಹಂ|
06015072c ತಸ್ಮಾನ್ಮೇ ಸರ್ವಮಾಚಕ್ಷ್ವ ಯದ್ವೃತ್ತಂ ತತ್ರ ಸಂಜಯ||
ಸಂಜಯ! ದುರ್ಯೋಧನನು ಮಾಡಿದ ಆ ದುಃಖಗಳನ್ನು ನಾನು ಕೇಳುತ್ತೇನೆ. ಅಲ್ಲಿ ನಡೆದುದೆಲ್ಲವನ್ನೂ ನನಗೆ ಹೇಳು.
06015073a ಸಂಗ್ರಾಮೇ ಪೃಥಿವೀಶಾನಾಂ ಮಂದಸ್ಯಾಬುದ್ಧಿಸಂಭವಂ|
06015073c ಅಪನೀತಂ ಸುನೀತಂ ವಾ ತನ್ಮಮಾಚಕ್ಷ್ವ ಸಂಜಯ||
ಮಂದನ ಬುದ್ಧಿಯಿಂದ ಉಂಟಾಗಿರುವ ಪೃಥ್ವೀಶರ ಆ ಸಂಗ್ರಾಮದಲ್ಲಿ ನಡೆದ ಒಳ್ಳೆಯ ಮತ್ತು ಕೆಟ್ಟದ್ದೆಲ್ಲವನ್ನೂ ನನಗೆ ಹೇಳು ಸಂಜಯ!
06015074a ಯತ್ಕೃತಂ ತತ್ರ ಭೀಷ್ಮೇಣ ಸಂಗ್ರಾಮೇ ಜಯಮಿಚ್ಛತಾ|
06015074c ತೇಜೋಯುಕ್ತಂ ಕೃತಾಸ್ತ್ರೇಣ ಶಂಸ ತಚ್ಚಾಪ್ಯಶೇಷತಃ||
ಜಯವನ್ನು ಬಯಸಿ ಸಂಗ್ರಾಮದಲ್ಲಿ ಆ ತೇಜೋಯುಕ್ತ, ಕೃತಾಸ್ತ್ರನು ಏನೆಲ್ಲ ಮಾಡಿದನೋ ಅದನ್ನು ಯಾವುದನ್ನೂ ಬಿಡದೇ ಹೇಳು.
06015075a ಯಥಾ ತದಭವದ್ಯುದ್ಧಂ ಕುರುಪಾಂಡವಸೇನಯೋಃ|
06015075c ಕ್ರಮೇಣ ಯೇನ ಯಸ್ಮಿಂಶ್ಚ ಕಾಲೇ ಯಚ್ಚ ಯಥಾ ಚ ತತ್||
ಕುರುಪಾಂಡವರ ಸೇನೆಗಳಲ್ಲಿ ಹೇಗೆ ಯುದ್ಧವು ನಡೆಯಿತು. ಯಾವ ಕಾಲದಲ್ಲಿ ಏನಾಯಿತೋ ಅದನ್ನು ಕ್ರಮಬದ್ಧವಾಗಿ ಹೇಳು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಧೃತರಾಷ್ಟ್ರಪ್ರಶ್ನೇ ಪಂಚದಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಧೃತರಾಷ್ಟ್ರಪ್ರಶ್ನೆ ಎಂಬ ಹದಿನೈದನೇ ಅಧ್ಯಾಯವು.
