Bhishma Parva: Chapter 14

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ: ಭಗವದ್ಗೀತಾ ಪರ್ವ

೧೪

ಭೀಷ್ಮನು ಹತನಾದ ಸುದ್ದಿಯನ್ನು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು (೧-೧೩).

Image result for sanjaya dhritarashtra"06014001 ವೈಶಂಪಾಯನ ಉವಾಚ|

06014001a ಅಥ ಗಾವಲ್ಗಣಿರ್ಧೀಮಾನ್ಸಮರಾದೇತ್ಯ ಸಂಜಯ|

06014001c ಪ್ರತ್ಯಕ್ಷದರ್ಶೀ ಸರ್ವಸ್ಯ ಭೂತಭವ್ಯಭವಿಷ್ಯವಿತ್||

ವೈಶಂಪಾಯನನು ಹೇಳಿದನು: “ಈಗ ಧೀಮಾನ ಗಾವಲ್ಗಣೀ, ಭೂತ-ಭವ್ಯ-ಭವಿಷ್ಯಗಳೆಲ್ಲವನ್ನೂ ತಿಳಿದಿದ್ದ ಪ್ರತ್ಯಕ್ಷದರ್ಶೀ ಸಂಜಯನು ಸಮರದಿಂದ ಬಂದನು[1].

06014002a ಧ್ಯಾಯತೇ ಧೃತರಾಷ್ಟ್ರಾಯ ಸಹಸೋಪೇತ್ಯ ದುಃಖಿತಃ|

06014002c ಆಚಷ್ಟ ನಿಹತಂ ಭೀಷ್ಮಂ ಭರತಾನಾಮಮಧ್ಯಮಂ||

ದುಃಖಿತನಾಗಿ ಯೋಚನೆಯಲ್ಲಿ ಮುಳುಗಿದ್ದ ಧೃತರಾಷ್ಟ್ರನಿಗೆ ತಕ್ಷಣವೇ ಭಾರತ ಪಿತಾಮಹ ಭೀಷ್ಮನು ಹತನಾದನೆಂದು ಹೇಳಿದನು.

06014003a ಸಂಜಯೋಽಹಂ ಮಹಾರಾಜ ನಮಸ್ತೇ ಭರತರ್ಷಭ|

06014003c ಹತೋ ಭೀಷ್ಮಃ ಶಾಂತನವೋ ಭರತಾನಾಂ ಪಿತಾಮಹಃ||

“ಮಹಾರಾಜ! ಭರತರ್ಷಭ! ನಿನಗೆ ನಮಸ್ಕಾರ. ನಾನು ಸಂಜಯ. ಭರತರ ಪಿತಾಮಹ ಶಾಂತನವ ಭೀಷ್ಮನು ಹತನಾದನು.

06014004a ಕಕುದಂ ಸರ್ವಯೋಧಾನಾಂ ಧಾಮ ಸರ್ವಧನುಷ್ಮತಾಂ|

06014004c ಶರತಲ್ಪಗತಃ ಸೋಽದ್ಯ ಶೇತೇ ಕುರುಪಿತಾಮಹಃ||

ಸರ್ವಯೋಧರಲ್ಲಿ ಶ್ರೇಷ್ಠನಾದ, ಸರ್ವ ಧನುಷ್ಮತರ ಧಾಮ ಕುರುಪಿತಾಮಹನು ಇಂದು ಶರತಲ್ಪಗತನಾಗಿದ್ದಾನೆ.

06014005a ಯಸ್ಯ ವೀರ್ಯಂ ಸಮಾಶ್ರಿತ್ಯ ದ್ಯೂತಂ ಪುತ್ರಸ್ತವಾಕರೋತ್|

06014005c ಸ ಶೇತೇ ನಿಹತೋ ರಾಜನ್ಸಂಖ್ಯೇ ಭೀಷ್ಮಃ ಶಿಖಂಡಿನಾ||

ರಾಜನ್! ಯಾರ ವೀರ್ಯವನ್ನು ಆಶ್ರಯಿಸಿ ನಿನ್ನ ಪುತ್ರರು ದ್ಯೂತವನ್ನಾಡಿದ್ದರೋ ಆ ಭೀಷ್ಮನು ಯುದ್ಧದಲ್ಲಿ ಶಿಖಂಡಿ[2]ಯಿಂದ ಹತನಾಗಿ ಮಲಗಿದ್ದಾನೆ.

06014006a ಯಃ ಸರ್ವಾನ್ಪೃಥಿವೀಪಾಲಾನ್ಸಮವೇತಾನ್ಮಹಾಮೃಧೇ|

06014006c ಜಿಗಾಯೈಕರಥೇನೈವ ಕಾಶಿಪುರ್ಯಾಂ ಮಹಾರಥಃ||

06014007a ಜಾಮದಗ್ನ್ಯಂ ರಣೇ ರಾಮಮಾಯೋಧ್ಯ ವಸುಸಂಭವಃ|

06014007c ನ ಹತೋ ಜಾಮದಗ್ನ್ಯೇನ ಸ ಹತೋಽದ್ಯ ಶಿಖಂಡಿನಾ||

ಕಾಶಿಪುರಿಯಲ್ಲಿ ಮಹಾಮೃಧದಲ್ಲಿ ಸೇರಿದ್ದ ಎಲ್ಲ ಪೃಥಿವೀಪಾಲರನ್ನೂ ಒಬ್ಬನೇ ರಥದಲ್ಲಿದ್ದು ಗೆದ್ದ ಮಹಾರಥಿ, ಜಾಮದಗ್ನಿ ರಾಮನಿಗೂ ರಣದಲ್ಲಿ ಅಯೋಧ್ಯನಾದ ವಸುಸಂಭವ, ಜಾಮದಗ್ನಿಯಿಂದ ಹತನಾಗದೇ ಇದ್ದ ಭೀಷ್ಮನು ಇಂದು ಶಿಖಂಡಿಯಿಂದ ಹತನಾಗಿದ್ದಾನೆ.

06014008a ಮಹೇಂದ್ರಸದೃಶಃ ಶೌರ್ಯೇ ಸ್ಥೈರ್ಯೇ ಚ ಹಿಮವಾನಿವ|

06014008c ಸಮುದ್ರ ಇವ ಗಾಂಭೀರ್ಯೇ ಸಹಿಷ್ಣುತ್ವೇ ಧರಾಸಮಃ||

06014009a ಶರದಂಷ್ಟ್ರೋ ಧನುರ್ವಕ್ತ್ರಃ ಖಡ್ಗಜಿಹ್ವೋ ದುರಾಸದಃ|

06014009c ನರಸಿಂಹಃ ಪಿತಾ ತೇಽದ್ಯ ಪಾಂಚಾಲ್ಯೇನ ನಿಪಾತಿತಃ||

ಶೌರ್ಯದಲ್ಲಿ ಮಹೇಂದ್ರಸದೃಶನಾದ, ಸ್ಥೈರ್ಯದಲ್ಲಿ ಹಿಮಾಚಲದಂತಿರುವ, ಗಾಂಭೀರ್ಯದಲ್ಲಿ ಸಮುದ್ರದಂತಿರುವ, ಸಹಿಷ್ಣುತೆಯಲ್ಲಿ ಧರೆಯ ಸಮನಾಗಿರುವ, ಆ ಶರದಂಷ್ಟ್ರ, ಧನುರ್ವಕ್ತ್ರ, ಖಡ್ಗಜಿಹ್ವ, ದುರಾಸದ, ನರಸಿಂಹ ನಿನ್ನ ಪಿತ ಭೀಷ್ಮನು ಇಂದು ಪಾಂಚಾಲ್ಯನಿಂದ ಹೊಡೆದುರಿಳಿಸಲ್ಪಟ್ಟಿದ್ದಾನೆ.

06014010a ಪಾಂಡವಾನಾಂ ಮಹತ್ಸೈನ್ಯಂ ಯಂ ದೃಷ್ಟ್ವೋದ್ಯಂತಮಾಹವೇ|

06014010c ಪ್ರವೇಪತ ಭಯೋದ್ವಿಗ್ನಂ ಸಿಂಹಂ ದೃಷ್ಟ್ವೇವ ಗೋಗಣಃ||

06014011a ಪರಿರಕ್ಷ್ಯ ಸ ಸೇನಾಂ ತೇ ದಶರಾತ್ರಮನೀಕಹಾ|

06014011c ಜಗಾಮಾಸ್ತಮಿವಾದಿತ್ಯಃ ಕೃತ್ವಾ ಕರ್ಮ ಸುದುಷ್ಕರಂ||

ರಣದಲ್ಲಿ ಮುನ್ನುಗ್ಗುತ್ತಿರುವ ಯಾರನ್ನು ನೋಡಿ ಪಾಂಡವರ ಮಹಾಸೇನೆಯು ಸಿಂಹವನ್ನು ನೋಡಿದ ಗೋವುಗಳ ಹಿಂಡಿನಂತೆ ಭಯೋದ್ವಿಗ್ನವಾಗಿ ನಡುಗುತ್ತಿತ್ತೋ ಆ ಭೀಷ್ಮನು ನಿನ್ನ ಸೇನೆಗಳನ್ನು ಹತ್ತು ಹಗಲು-ರಾತ್ರಿ ಪರಿರಕ್ಷಿಸಿ, ಸುದುಷ್ಕರ ಕೃತ್ಯಗಳನ್ನೆಸಗಿ ಅಸ್ತನಾದ ಆದಿತ್ಯನಂತೆ ಹೊರಟುಹೋದನು.

06014012a ಯಃ ಸ ಶಕ್ರ ಇವಾಕ್ಷೋಭ್ಯೋ ವರ್ಷನ್ಬಾಣಾನ್ಸಹಸ್ರಶಃ|

06014012c ಜಘಾನ ಯುಧಿ ಯೋಧಾನಾಮರ್ಬುದಂ ದಶಭಿರ್ದಿನೈಃ||

06014013a ಸ ಶೇತೇ ನಿಷ್ಟನನ್ಭೂಮೌ ವಾತರುಗ್ಣ ಇವ ದ್ರುಮಃ|

06014013c ತವ ದುರ್ಮಂತ್ರಿತೇ ರಾಜನ್ಯಥಾ ನಾರ್ಹಃ ಸ ಭಾರತ||

ಭಾರತ! ರಾಜನ್! ಶಕ್ರನಂತೆ ಸಹಸ್ರಾರು ಬಾಣಗಳನ್ನು ಸುರಿಸಿ, ಯುದ್ಧದ ಹತ್ತು ದಿನಗಳ ಪ್ರತಿದಿನವೂ ಹತ್ತು ಸಾವಿರ ಯೋಧರನ್ನು ಸಂಹರಿಸಿ ಭೀಷ್ಮನು ಅನರ್ಹನಾಗಿದ್ದರೂ, ನಿನ್ನ ದುರ್ಮಂತ್ರದಿಂದ ಭಿರುಗಾಳಿಗೆ ಸಿಲುಕಿದ ಮರದಂತೆ ಕೆಳಗುರಿಳಿಸಲ್ಪಟ್ಟು ಭೂಮಿಯ ಮೇಲೆ ಮಲಗಿದ್ದಾನೆ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಭೀಷ್ಮಮೃತ್ಯುಶ್ರವಣೇ ಚತುರ್ದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಭೀಷ್ಮಮೃತ್ಯುಶ್ರವಣವೆಂಬ ಹದಿನಾಲ್ಕನೇ ಅಧ್ಯಾಯವು.

Image result for flowers against white background"

[1] ಯುದ್ಧದಲ್ಲಿ ಭಾಗವಹಿಸುತ್ತಿದ್ದ ಸಂಜಯನು ಯುದ್ಧದ ಹತ್ತನೇ ದಿನದ ಸಾಯಂಕಾಲ ಹಸ್ತಿನಾಪುರಕ್ಕೆ ಹಿಂದಿರುಗಿ ಧೃತರಾಷ್ಟ್ರನಿಗೆ ಭೀಷ್ಮವಧೆಯ ಕುರಿತು ಹೇಳುತ್ತಾನೆ.

[2] ಶಿಖಂಡಿಯು ಭೀಷ್ಮನನ್ನು ಹೊಡೆದುರುಳಿಸಿದನೋ ಅಥವಾ ಅರ್ಜುನನೋ?

Comments are closed.