Bhishma Parva: Chapter 117

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೧೭

ಭೀಷ್ಮ-ಕರ್ಣರ ಸಂವಾದ (೧-೩೪).

06117001 ಸಂಜಯ ಉವಾಚ|

06117001a ತತಸ್ತೇ ಪಾರ್ಥಿವಾಃ ಸರ್ವೇ ಜಗ್ಮುಃ ಸ್ವಾನಾಲಯಾನ್ಪುನಃ|

06117001c ತೂಷ್ಣೀಂಭೂತೇ ಮಹಾರಾಜ ಭೀಷ್ಮೇ ಶಂತನುನಂದನೇ||

ಸಂಜಯನು ಹೇಳಿದನು: “ಮಹಾರಾಜ! ಶಂತನುನಂದನ ಭೀಷ್ಮನು ಸುಮ್ಮನಾಗಲು ಅಲ್ಲಿದ್ದ ಪಾರ್ಥಿವರೆಲ್ಲರೂ ತಮ್ಮ ತಮ್ಮ ಡೇರೆಗಳಿಗೆ ಪುನಃ ತೆರಳಿದರು.

06117002a ಶ್ರುತ್ವಾ ತು ನಿಹತಂ ಭೀಷ್ಮಂ ರಾಧೇಯಃ ಪುರುಷರ್ಷಭಃ|

06117002c ಈಷದಾಗತಸಂತ್ರಾಸಃ ತ್ವರಯೋಪಜಗಾಮ ಹ||

ಭೀಷ್ಮನು ಹತನಾದನೆಂದು ಕೇಳಿದ ಪುರುಷರ್ಷಭ ರಾಧೇಯನು ಸಂತ್ರಾತನಾಗಿ ತ್ವರೆಮಾಡಿ ಅವನಿರುವಲ್ಲಿಗೆ ಆಗಮಿಸಿದನು.

06117003a ಸ ದದರ್ಶ ಮಹಾತ್ಮಾನಂ ಶರತಲ್ಪಗತಂ ತದಾ|

06117003c ಜನ್ಮಶಯ್ಯಾಗತಂ ದೇವಂ ಕಾರ್ತ್ತಿಕೇಯಮಿವ ಪ್ರಭುಂ||

ಅಲ್ಲಿ ಅವನು ದೇವ ಕಾರ್ತ್ತಿಕೇಯನು ಹುಟ್ಟಿದಾಗ ದರ್ಬೆಯ ಹಾಸಿನ ಮೇಲೆ ಮಲಗಿದ್ದಂತೆ ಶರ ಶಯ್ಯೆಯ ಮೇಲೆ ಮಲಗಿದ್ದ ಆ ಪ್ರಭು ಮಹಾತ್ಮನನ್ನು ನೋಡಿದನು.

06117004a ನಿಮೀಲಿತಾಕ್ಷಂ ತಂ ವೀರಂ ಸಾಶ್ರುಕಂಠಸ್ತದಾ ವೃಷಃ|

06117004c ಅಭ್ಯೇತ್ಯ ಪಾದಯೋಸ್ತಸ್ಯ ನಿಪಪಾತ ಮಹಾದ್ಯುತಿಃ||

ಅಶ್ರುಕಂಠನಾಗಿದ್ದ ಮಹಾದ್ಯುತಿ ವೃಷಸೇನನು ಕಣ್ಣು ಮುಚ್ಚಿ ಮಲಗಿದ್ದ ಆ ವೀರನ ಪಾದಗಳ ಮೇಲೆ ಬಿದ್ದನು.

06117005a ರಾಧೇಯೋಽಹಂ ಕುರುಶ್ರೇಷ್ಠ ನಿತ್ಯಂ ಚಾಷ್ಕಿಗತಸ್ತವ|

06117005c ದ್ವೇಷ್ಯೋಽತ್ಯಂತಮನಾಗಾಃ ಸನ್ನಿತಿ ಚೈನಮುವಾಚ ಹ||

“ಕುರುಶ್ರೇಷ್ಠ! ನಾನು ರಾಧೇಯ! ನೋಡಿದಾಗಲೆಲ್ಲಾ ನೀನು ನನ್ನನ್ನು ಅತ್ಯಂತ ಕೀಳುಮಾಡಿ ದ್ವೇಷಿಸುತ್ತಿದ್ದವನು.” ಎಂದು ಅವನಲ್ಲಿ ಮಾತನಾಡಿದನು.

06117006a ತಚ್ಚ್ರುತ್ವಾ ಕುರುವೃದ್ಧಃ ಸ ಬಲಾತ್ಸಂವೃತ್ತಲೋಚನಃ|

06117006c ಶನೈರುದ್ವೀಕ್ಷ್ಯ ಸಸ್ನೇಹಮಿದಂ ವಚನಮಬ್ರವೀತ್||

ಅದನ್ನು ಕೇಳಿ ಕುರುವೃದ್ಧನು ಪ್ರಯತ್ನಪಟ್ಟು ಕಣ್ಣುಗಳನ್ನು ತೆರೆದು, ಮೆಲ್ಲನೇ ಅವನನ್ನು ನೋಡಿ ಸ್ನೇಹಭಾವದಿಂದ ಈ ಮಾತನ್ನಾಡಿದನು.

06117007a ರಹಿತಂ ಧಿಷ್ಣ್ಯಮಾಲೋಕ್ಯ ಸಮುತ್ಸಾರ್ಯ ಚ ರಕ್ಷಿಣಃ|

06117007c ಪಿತೇವ ಪುತ್ರಂ ಗಾಂಗೇಯಃ ಪರಿಷ್ವಜ್ಯೈಕಬಾಹುನಾ||

ತನ್ನ ರಕ್ಷಕರನ್ನು ಕಳುಹಿಸಿ ಏಕಾಂತವಾಗಿದೆಯೆಂದು ಖಚಿತಪಡಿಸಿಕೊಂಡು, ತಂದೆಯು ಮಗನನ್ನು ಹೇಗೋ ಹಾಗೆ ಗಾಂಗೇಯನು ಒಂದೇ ತೋಳಿನಿಂದ ಅವನನ್ನು ಆಲಂಗಿಸಿದನು.

06117008a ಏಹ್ಯೇಹಿ ಮೇ ವಿಪ್ರತೀಪ ಸ್ಪರ್ಧಸೇ ತ್ವಂ ಮಯಾ ಸಹ|

06117008c ಯದಿ ಮಾಂ ನಾಭಿಗಚ್ಛೇಥಾ ನ ತೇ ಶ್ರೇಯೋ ಭವೇದ್ಧ್ರುವಂ||

“ಬಾ! ಬಾ! ನೀನು ಯಾವಾಗಲೂ ನನ್ನೊಡನೆ ಸ್ಪರ್ಧಿಸುತ್ತಿದ್ದೆ. ಇಲ್ಲಿಗೆ ನೀನು ಬಾರದೇ ಇದ್ದಿದ್ದರೆ ನಿನಗೆ ಖಂಡಿತವಾಗಿಯೂ ಶ್ರೇಯಸ್ಸಾಗುತ್ತಿರಲಿಲ್ಲ.

06117009a ಕೌಂತೇಯಸ್ತ್ವಂ ನ ರಾಧೇಯೋ ವಿದಿತೋ ನಾರದಾನ್ಮಮ|

06117009c ಕೃಷ್ಣದ್ವೈಪಾಯನಾಚ್ಚೈವ ಕೇಶವಾಚ್ಚ ನ ಸಂಶಯಃ||

ನೀನು ಕೌಂತೇಯ. ರಾಧೇಯನಲ್ಲವೆಂದು ನನಗೆ ನಾರದನಿಂದ ತಿಳಿದಿತ್ತು. ಕೃಷ್ಣದ್ವೈಪಾಯನ ಮತ್ತು ಕೇಶವನಿಗೂ ಇದು ತಿಳಿದಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.

06117010a ನ ಚ ದ್ವೇಷೋಽಸ್ತಿ ಮೇ ತಾತ ತ್ವಯಿ ಸತ್ಯಂ ಬ್ರವೀಮಿ ತೇ|

06117010c ತೇಜೋವಧನಿಮಿತ್ತಂ ತು ಪರುಷಾಣ್ಯಹಮುಕ್ತವಾನ್||

ಮಗೂ! ನಿನ್ನ ಮೇಲೆ ನನಗೆ ದ್ವೇಷವೇನೂ ಇಲ್ಲ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ನಿನ್ನ ತೇಜೋವಧೆಗೋಸ್ಕರ ಕಠೋರ ಮಾತುಗಳನ್ನಾಡುತ್ತಿದ್ದೆ.

06117011a ಅಕಸ್ಮಾತ್ಪಾಂಡವಾನ್ ಹಿ ತ್ವಂ ದ್ವಿಷಸೀತಿ ಮತಿರ್ಮಮ|

06117011c ಯೇನಾಸಿ ಬಹುಶೋ ರೂಕ್ಷಂ ಚೋದಿತಃ ಸೂರ್ಯನಂದನ||

ಏಕೆಂದರೆ ನೀನು ಅಕಸ್ಮಾತ್ತಾಗಿ (ವಿನಾಕಾರಣ) ಪಾಂಡವರನ್ನು ದ್ವೇಷಿಸುತ್ತಿರುವೆ ಎಂದು ನನ್ನ ಅಭಿಪ್ರಾಯವಾಗಿತ್ತು. ಸೂರ್ಯನಂದನ! ಇದರಿಂದಾಗಿ ನಾನು ನಿನ್ನ ಮೇಲೆ ಬಹಳಷ್ಟು ಬಾರಿ ಕಠೋರನಾಗಿದ್ದೆ.

06117012a ಜಾನಾಮಿ ಸಮರೇ ವೀರ್ಯಂ ಶತ್ರುಭಿರ್ದುಃಸಹಂ ತವ|

06117012c ಬ್ರಹ್ಮಣ್ಯತಾಂ ಚ ಶೌರ್ಯಂ ಚ ದಾನೇ ಚ ಪರಮಾಂ ಗತಿಂ||

ಸಮರದಲ್ಲಿ ನಿನ್ನ ವೀರ್ಯವನ್ನು, ಶತ್ರುಗಳಿಗೆ ನೀನು ದುಃಸಹನೆನ್ನುವುದನ್ನು, ಬ್ರಹ್ಮಣ್ಯತ್ವವನ್ನೂ, ಶೌರ್ಯವನ್ನೂ, ದಾನವನ್ನೂ, ಪರಮ ಗತಿಯನ್ನೂ ನಾನು ತಿಳಿದುಕೊಂಡಿದ್ದೇನೆ.

06117013a ನ ತ್ವಯಾ ಸದೃಶಃ ಕಶ್ಚಿತ್ಪುರುಷೇಷ್ವಮರೋಪಮ|

06117013c ಕುಲಭೇದಂ ಚ ಮತ್ವಾಹಂ ಸದಾ ಪರುಷಮುಕ್ತವಾನ್||

ಅಮರೋಪಮನಾಗಿರುವ ನಿನ್ನಂತಹ ಪುರುಷರು ಯಾರೂ ಇಲ್ಲ. ಕುಲಭೇದವನ್ನು ನೀನು ತರುತ್ತಿರುವೆಯೆಂದು ತಿಳಿದು ಸದಾ ಕಠೋರವಾಗಿ ಮಾತನಾಡುತ್ತಿದ್ದೆ.

06117014a ಇಷ್ವಸ್ತ್ರೇ ಭಾರಸಂಧಾನೇ ಲಾಘವೇಽಸ್ತ್ರಬಲೇ ತಥಾ|

06117014c ಸದೃಶಃ ಫಲ್ಗುನೇನಾಸಿ ಕೃಷ್ಣೇನ ಚ ಮಹಾತ್ಮನಾ||

ಧನುರ್ವಿದ್ಯೆಯಲ್ಲಿ, ಬಿಲ್ಲನ್ನು ಸಂಧಾನಮಾಡುವುದರಲ್ಲಿ, ಲಾಘವದಲ್ಲಿ ಮತ್ತು ಅಸ್ತ್ರಬಲದಲ್ಲಿ ನೀನು ಫಲ್ಗುನ ಮತ್ತು ಮಹಾತ್ಮ ಕೃಷ್ಣನ ಸದೃಶನಾಗಿದ್ದೀಯೆ.

06117015a ಕರ್ಣ ರಾಜಪುರಂ ಗತ್ವಾ ತ್ವಯೈಕೇನ ಧನುಷ್ಮತಾ|

06117015c ತಸ್ಯಾರ್ಥೇ ಕುರುರಾಜಸ್ಯ ರಾಜಾನೋ ಮೃದಿತಾ ಯುಧಿ||

ಕರ್ಣ! ರಾಜಪುರಕ್ಕೆ ಹೋಗಿ ನೀನು ಧನುಷ್ಮತನು ಒಬ್ಬನೇ ಕುರುರಾಜನಿಗೋಸ್ಕರ ರಾಜರನ್ನು ಅಪಮಾನಗೊಳಿಸಿದೆ.

06117016a ತಥಾ ಚ ಬಲವಾನ್ರಾಜಾ ಜರಾಸಂಧೋ ದುರಾಸದಃ|

06117016c ಸಮರೇ ಸಮರಶ್ಲಾಘೀ ತ್ವಯಾ ನ ಸದೃಶೋಽಭವತ್||

ಹಾಗೆಯೇ ದುರಾಸದ ಬಲವಾನ್ ಜರಾಸಂಧನು ಸಮರದಲ್ಲಿ ಸಮರಶ್ಲಾಘಿಯಾದ ನಿನ್ನ ಸರಿಸಮನಾಗಿರಲಿಲ್ಲ.

06117017a ಬ್ರಹ್ಮಣ್ಯಃ ಸತ್ಯವಾದೀ ಚ ತೇಜಸಾರ್ಕ ಇವಾಪರಃ|

06117017c ದೇವಗರ್ಭೋಽಜಿತಃ ಸಂಖ್ಯೇ ಮನುಷ್ಯೈರಧಿಕೋ ಭುವಿ||

ಬ್ರಹ್ಮಣ್ಯನಾಗಿರುವೆ. ಸತ್ಯವಾದಿಯಾಗಿರುವೆ. ತೇಜಸ್ಸಿನಲ್ಲಿ ಸೂರ್ಯನಂತಿರುವೆ. ದೇವಗರ್ಭನಾಗಿರುವೆ. ಸಮರಲ್ಲಿ ಅಜಿತನಾಗಿರುವೆ. ಭೂಮಿಯಲ್ಲಿ ಮನುಷ್ಯರಿಗಿಂತ ಅಧಿಕನಾಗಿರುವೆ.

06117018a ವ್ಯಪನೀತೋಽದ್ಯ ಮನ್ಯುರ್ಮೇ ಯಸ್ತ್ವಾಂ ಪ್ರತಿ ಪುರಾ ಕೃತಃ|

06117018c ದೈವಂ ಪುರುಷಕಾರೇಣ ನ ಶಕ್ಯಮತಿವರ್ತಿತುಂ||

ಹಿಂದೆ ನಿನ್ನ ಮೇಲೆ ಇರಿಸಿಕೊಂಡಿದ್ದ ಕೋಪವನ್ನು ಇಂದು ನಾನು ತ್ಯಜಿಸುತ್ತಿದ್ದೇನೆ. ಪುರುಷ ಕೃತ್ಯದಿಂದ ದೈವವನ್ನು ಬದಲಾಯಿಸಲು ಶಕ್ಯವಿಲ್ಲ.

06117019a ಸೋದರ್ಯಾಃ ಪಾಂಡವಾ ವೀರಾ ಭ್ರಾತರಸ್ತೇಽರಿಸೂದನ|

06117019c ಸಂಗಚ್ಛ ತೈರ್ಮಹಾಬಾಹೋ ಮಮ ಚೇದಿಚ್ಛಸಿ ಪ್ರಿಯಂ||

ಅರಿಸೂದನ! ವೀರ ಪಾಂಡವರು ನಿನ್ನ ಸೋದರರು. ನೀನು ಅವರ ಅಣ್ಣ. ಮಹಾಬಾಹೋ! ನನಗೆ ಪ್ರಿಯವಾದುದನ್ನು ಮಾಡಬೇಕೆಂದು ನೀನು ಬಯಸುವೆಯಾದರೆ ಅವರೊಂದಿಗೆ ಸೇರು.

06117020a ಮಯಾ ಭವತು ನಿರ್ವೃತ್ತಂ ವೈರಮಾದಿತ್ಯನಂದನ|

06117020c ಪೃಥಿವ್ಯಾಂ ಸರ್ವರಾಜಾನೋ ಭವಂತ್ವದ್ಯ ನಿರಾಮಯಾಃ||

ಆದಿತ್ಯನಂದನ! ನನ್ನ ಪತನದೊಂದಿಗೆ ವೈರತ್ವವು ಕೊನೆಗೊಳ್ಳಲಿ. ಪೃಥ್ವಿಯ ಸರ್ವ ರಾಜರೂ ಇಂದು ನಿರಾಮಯರಾಗಲಿ.”

06117021 ಕರ್ಣ ಉವಾಚ|

06117021a ಜಾನಾಮ್ಯಹಂ ಮಹಾಪ್ರಾಜ್ಞ ಸರ್ವಮೇತನ್ನ ಸಂಶಯಃ|

06117021c ಯಥಾ ವದಸಿ ದುರ್ಧರ್ಷ ಕೌಂತೇಯೋಽಹಂ ನ ಸೂತಜಃ||

ಕರ್ಣನು ಹೇಳಿದನು: “ಮಹಾಪ್ರಾಜ್ಞ! ಈ ಎಲ್ಲವೂ ನನಗೆ ತಿಳಿದಿದೆ. ದುರ್ಧರ್ಷ! ನೀನು ಹೇಳಿದುದರಲ್ಲಿ ಸಂಶಯವಿಲ್ಲ. ನಾನು ಕೌಂತೇಯ. ಸೂತಜನಲ್ಲ.

06117022a ಅವಕೀರ್ಣಸ್ತ್ವಹಂ ಕುಂತ್ಯಾ ಸೂತೇನ ಚ ವಿವರ್ಧಿತಃ|

06117022c ಭುಕ್ತ್ವಾ ದುರ್ಯೋಧನೈಶ್ವರ್ಯಂ ನ ಮಿಥ್ಯಾ ಕರ್ತುಮುತ್ಸಹೇ||

ಆದರೆ ನಾನು ಕುಂತಿಯಿಂದ ತಿರಸ್ಕರಿಸಲ್ಪಟ್ಟು ಸೂತನಿಂದ ವರ್ಧಿತನಾದೆ. ದುರ್ಯೋಧನನ ಐಶ್ವರ್ಯವನ್ನು ಭೋಗಿಸಿ ಅದನ್ನು ಸುಳ್ಳಾಗಿಸಲು ಮನಸ್ಸಿಲ್ಲ.

06117023a ವಸು ಚೈವ ಶರೀರಂ ಚ ಯದುದಾರಂ ತಥಾ ಯಶಃ|

06117023c ಸರ್ವಂ ದುರ್ಯೋಧನಸ್ಯಾರ್ಥೇ ತ್ಯಕ್ತಂ ಮೇ ಭೂರಿದಕ್ಷಿಣ|

06117023e ಕೋಪಿತಾಃ ಪಾಂಡವಾ ನಿತ್ಯಂ ಮಯಾಶ್ರಿತ್ಯ ಸುಯೋಧನಂ||

ಭೂರಿದಕ್ಷಿಣ! ಸಂಪತ್ತು, ಶರೀರ, ಮಕ್ಕಳು, ಪತ್ನಿಯರು, ಯಶಸ್ಸು ಎಲ್ಲವನ್ನೂ ದುರ್ಯೋಧನನಿಗಾಗಿ ತ್ಯಜಿಸಿದ್ದೇನೆ. ಸುಯೋಧನನನ್ನು ಆಶ್ರಯಿಸಿ ನಾನು ನಿತ್ಯವೂ ಪಾಂಡವರನ್ನು ಕುಪಿತರನ್ನಾಗಿ ಮಾಡಿದ್ದೇನೆ.

06117024a ಅವಶ್ಯಭಾವೀ ವೈ ಯೋಽರ್ಥೋ ನ ಸ ಶಕ್ಯೋ ನಿವರ್ತಿತುಂ|

06117024c ದೈವಂ ಪುರುಷಕಾರೇಣ ಕೋ ನಿವರ್ತಿತುಮುತ್ಸಹೇತ್||

ಆಗುವಂಥಹುದು ಬಹುಷಃ ಅವಶ್ಯಕವಾಗಿದೆ ಮತ್ತು ತಡೆಯಲು ಸಾಧ್ಯವಿಲ್ಲ. ಪುರುಷ ಪ್ರಯತ್ನದಿಂದ ದೈವವನ್ನು ಬದಲಾಯಿಸಲು ಯಾರಿಗೆ ಉತ್ಸಾಹವಿದೆ?

06117025a ಪೃಥಿವೀಕ್ಷಯಶಂಸೀನಿ ನಿಮಿತ್ತಾನಿ ಪಿತಾಮಹ|

06117025c ಭವದ್ಭಿರುಪಲಬ್ಧಾನಿ ಕಥಿತಾನಿ ಚ ಸಂಸದಿ||

ಪಿತಾಮಹ! ನಿಮಿತ್ತಗಳು ಪೃಥ್ವಿಯ ಕ್ಷಯವನ್ನು ಸೂಚಿಸುತ್ತಿವೆ. ಸಂಸದಿಯಲ್ಲಿ ನೀನು ಇವುಗಳ ಕುರಿತು ತೋರಿಸಿದ್ದೀಯೆ, ಮಾತನಾಡಿದ್ದೀಯೆ.

06117026a ಪಾಂಡವಾ ವಾಸುದೇವಶ್ಚ ವಿದಿತಾ ಮಮ ಸರ್ವಶಃ|

06117026c ಅಜೇಯಾಃ ಪುರುಷೈರನ್ಯೈರಿತಿ ತಾಂಶ್ಚೋತ್ಸಹಾಮಹೇ||

ಪಾಂಡವರು ಮತ್ತು ವಾಸುದೇವ ಇವರು ಅಜೇಯ ಪುರುಷರೆಂದು ನನಗೆ ಎಲ್ಲವೂ ತಿಳಿದಿದೆ. ಅವರೊಂದಿಗೆ ಯುದ್ಧಮಾಡಲು ಬಯಸುತ್ತೇನೆ.

06117027a ಅನುಜಾನೀಷ್ವ ಮಾಂ ತಾತ ಯುದ್ಧೇ ಪ್ರೀತಮನಾಃ ಸದಾ|

06117027c ಅನುಜ್ಞಾತಸ್ತ್ವಯಾ ವೀರ ಯುಧ್ಯೇಯಮಿತಿ ಮೇ ಮತಿಃ||

ತಾತ! ಪ್ರೀತಿಮನಸ್ಕನಾಗಿ ನನಗೆ ಸದಾ ಯುದ್ಧಮಾಡಲು ಅನುಮತಿಯನ್ನು ನೀಡು. ವೀರ! ನಿನ್ನ ಅನುಮತಿಯಂತೆ ನಾನು ಯುದ್ಧಮಾಡಬಲ್ಲೆ ಎಂದು ನನ್ನ ಅಭಿಪ್ರಾಯ.

06117028a ದುರುಕ್ತಂ ವಿಪ್ರತೀಪಂ ವಾ ಸಂರಂಭಾಚ್ಚಾಪಲಾತ್ತಥಾ|

06117028c ಯನ್ಮಯಾಪಕೃತಂ ಕಿಂ ಚಿತ್ತದನುಕ್ಷಂತುಮರ್ಹಸಿ||

ನಾನು ಏನೆಲ್ಲ ಕೆಟ್ಟ ಮಾತುಗಳನ್ನು ಆಡಿದ್ದೆನೋ, ಅಪಮಾನಗೊಳಿಸಿದ್ದೆನೋ, ಚಪಲತೆಯಿಂದ ಜಗಳವಾಡಿದ್ದೆನೋ ನನ್ನಿಂದಾದ ಅವೆಲ್ಲವನ್ನು ನೀನು ಕ್ಷಮಿಸಬೇಕು.”

06117029 ಭೀಷ್ಮ ಉವಾಚ|

06117029a ನ ಚೇಚ್ಚಕ್ಯಮಥೋತ್ಸ್ರಷ್ಟುಂ ವೈರಮೇತತ್ಸುದಾರುಣಂ|

06117029c ಅನುಜಾನಾಮಿ ಕರ್ಣ ತ್ವಾಂ ಯುಧ್ಯಸ್ವ ಸ್ವರ್ಗಕಾಮ್ಯಯಾ||

ಭೀಷ್ಮನು ಹೇಳಿದನು: “ಕರ್ಣ! ಈ ಸುದಾರುಣ ವೈರವನ್ನು ಕೊಡವಿ ಹಾಕಲು ಶಕ್ಯವಿಲ್ಲವೆಂದಾದರೆ ನಿನಗೆ ಅನುಮತಿಯನ್ನು ಕೊಡುತ್ತೇನೆ. ಸ್ವರ್ಗವನ್ನು ಬಯಸಿ ಯುದ್ಧಮಾಡು.

06117030a ವಿಮನ್ಯುರ್ಗತಸಂರಂಭಃ ಕುರು ಕರ್ಮ ನೃಪಸ್ಯ ಹಿ|

06117030c ಯಥಾಶಕ್ತಿ ಯಥೋತ್ಸಾಹಂ ಸತಾಂ ವೃತ್ತೇಷು ವೃತ್ತವಾನ್||

ಉತ್ತಮರ ನಡತೆಯಲ್ಲಿ ನಡೆದುಕೊಂಡು ಯಥಾ ಶಕ್ತಿಯಾಗಿ, ಉತ್ಸಾಹವಿದ್ದಷ್ಟು, ಸಿಟ್ಟನ್ನು ಬಿಟ್ಟು, ದುಡುಕದೇ ನೃಪನ ಕೆಲಸವನ್ನು ಮಾಡು.

06117031a ಅಹಂ ತ್ವಾಮನುಜಾನಾಮಿ ಯದಿಚ್ಛಸಿ ತದಾಪ್ನುಹಿ|

06117031c ಕ್ಷತ್ರಧರ್ಮಜಿತಾಽಲ್ಲೋಕಾನ್ಸಂಪ್ರಾಪ್ಸ್ಯಸಿ ನ ಸಂಶಯಃ||

ನಾನು ನಿನಗೆ ಅನುಜ್ಞೆಯನ್ನು ನೀಡುತ್ತೇನೆ. ಏನು ಇಚ್ಛಿಸಿದ್ದೀಯೋ ಅದನ್ನು ಪಡೆ. ಕ್ಷತ್ರಧರ್ಮದಿಂದ ಲೋಕಗಳನ್ನು ಜಯಿಸುತ್ತೀಯೆ. ಸಂಶಯವಿಲ್ಲ.

06117032a ಯುಧ್ಯಸ್ವ ನಿರಹಂಕಾರೋ ಬಲವೀರ್ಯವ್ಯಪಾಶ್ರಯಃ|

06117032c ಧರ್ಮೋ ಹಿ ಯುದ್ಧಾಚ್ಚ್ರೇಯೋಽನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ||

ಬಲವೀರ್ಯಗಳನ್ನು ಆಶ್ರಯಿಸಿ ನಿರಹಂಕಾರನಾಗಿ ಯುದ್ಧಮಾಡು. ಏಕೆಂದರೆ ಧರ್ಮಯುದ್ಧವೇ ಕ್ಷತ್ರಿಯನಿಗೆ ಶ್ರೇಯಸ್ಕರವು. ಬೇರೆ ಏನೂ ತಿಳಿದಿಲ್ಲ.

06117033a ಪ್ರಶಮೇ ಹಿ ಕೃತೋ ಯತ್ನಃ ಸುಚಿರಾತ್ಸುಚಿರಂ ಮಯಾ|

06117033c ನ ಚೈವ ಶಕಿತಃ ಕರ್ತುಂ ಯತೋ ಧರ್ಮಸ್ತತೋ ಜಯಃ||

ಶಾಂತಿಯನ್ನು ತರಲು ನಾನು ದೀರ್ಘಕಾಲ ಬಹಳಷ್ಟು ಪ್ರಯತ್ನ ಮಾಡಿದೆ. ಆದರೆ ಅದನ್ನು ಮಾಡಲು ಶಕ್ಯನಾಗಲಿಲ್ಲ. ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ.””

06117034 ಸಂಜಯ ಉವಾಚ|

06117034a ಏವಂ ಬ್ರುವಂತಂ ಗಾಂಗೇಯಮಭಿವಾದ್ಯ ಪ್ರಸಾದ್ಯ ಚ|

06117034c ರಾಧೇಯೋ ರಥಮಾರುಹ್ಯ ಪ್ರಾಯಾತ್ತವ ಸುತಂ ಪ್ರತಿ||

ಸಂಜಯನು ಹೇಳಿದನು: “ಹೀಗೆ ಹೇಳಿದ ಗಾಂಗೇಯನನ್ನು ವಂದಿಸಿ, ಪ್ರಸನ್ನಗೊಳಿಸಿ ರಾಧೇಯನು ರಥವನ್ನೇರಿ ನಿನ್ನ ಮಗನ ಬಳಿಗೆ ಹೊರಟನು.””

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಕರ್ಣಸಂವಾದೇ ಸಪ್ತದಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಕರ್ಣಸಂವಾದ ಎನ್ನುವ ನೂರಾಹದಿನೇಳನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವವು.

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೬/೧೮, ಉಪಪರ್ವಗಳು-೬೪/೧೦೦, ಅಧ್ಯಾಯಗಳು-೯೭೭/೧೯೯೫, ಶ್ಲೋಕಗಳು-೩೩೧೭೦/೭೩೭೮೪

Image result for indian motifs against white background

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Comments are closed.