Bhishma Parva: Chapter 112

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೧೨

ಅಭಿಮನ್ಯು-ದುರ್ಯೋಧನರ (೧-೮), ಸಾತ್ಯಕಿ-ಅಶ್ವತ್ಥಾಮರ (೯-೧೨), ಧೃಷ್ಟಕೇತು-ಪೌರವರ (೧೩-೨೬), ಸುಶರ್ಮ-ಚಿತ್ರಸೇನರ (೨೭-೨೯), ಅಭಿಮನ್ಯು-ಬೃಹದ್ಬಲರ (೩೦-೩೪), ಭೀಮ-ಗಜಸೇನೆಗಳ (೩೫-೩೭), ಯುಧಿಷ್ಠಿರ-ಶಲ್ಯರ (೩೮-೩೯), ವಿರಾಟ-ಜಯದ್ರಥರ (೪೦-೪೨), ದ್ರೋಣ-ಧೃಷ್ಟದ್ಯುಮ್ನರ (೪೩-೫೨), ಅರ್ಜುನ-ಭಗದತ್ತರ (೫೩-೫೯) ದ್ವಂದ್ವಯುದ್ಧಗಳು. ಭೀಷ್ಮನ ಪರಾಕ್ರಮ (೬೦-೭೭). ಶಿಖಂಡಿ-ಅರ್ಜುನರು ಭೀಷ್ಮನನ್ನು ಆಕ್ರಮಣಿಸಿದುದು (೭೮-೧೦೧). ಅರ್ಜುನಪರಾಕ್ರಮ (೧೦೨-೧೨೪). ರಣಭೂಮಿಯ ವರ್ಣನೆ (೧೨೫-೧೩೮).

06112001 ಸಂಜಯ ಉವಾಚ|

06112001a ಅಭಿಮನ್ಯುರ್ಮಹಾರಾಜ ತವ ಪುತ್ರಮಯೋಧಯತ್|

06112001c ಮಹತ್ಯಾ ಸೇನಯಾ ಯುಕ್ತೋ ಭೀಷ್ಮಹೇತೋಃ ಪರಾಕ್ರಮೀ||

ಸಂಜಯನು ಹೇಳಿದನು: “ಮಹಾರಾಜ! ಭೀಷ್ಮನನ್ನು ರಕ್ಷಿಸಲು ಅಪಾರ ಸೇನಾ ಸಮೇತನಾಗಿ ಬಂದ ನಿನ್ನ ಮಗನನ್ನು ಪರಾಕ್ರಮಿ ಅಭಿಮನ್ಯುವು ಎದುರಿಸಿ ಯುದ್ಧಮಾಡಿದನು.

06112002a ದುರ್ಯೋಧನೋ ರಣೇ ಕಾರ್ಷ್ಣಿಂ ನವಭಿರ್ನತಪರ್ವಭಿಃ|

06112002c ಆಜಘಾನ ರಣೇ ಕ್ರುದ್ಧಃ ಪುನಶ್ಚೈನಂ ತ್ರಿಭಿಃ ಶರೈಃ||

ರಣದಲ್ಲಿ ಕ್ರುದ್ಧನಾದ ದುರ್ಯೋಧನನು ಕಾರ್ಷ್ಣಿ ಅಭಿಮನ್ಯುವನ್ನು ಒಂಭತ್ತು ನತಪರ್ವ ಬಾಣಗಳಿಂದ ಮತ್ತು ಪುನಃ ಮೂರು ಶರಗಳಿಂದ ಹೊಡೆದನು.

06112003a ತಸ್ಯ ಶಕ್ತಿಂ ರಣೇ ಕಾರ್ಷ್ಣಿರ್ಮೃತ್ಯೋರ್ಘೋರಾಮಿವ ಸ್ವಸಾಂ|

06112003c ಪ್ರೇಷಯಾಮಾಸ ಸಂಕ್ರುದ್ಧೋ ದುರ್ಯೋಧನರಥಂ ಪ್ರತಿ||

ಆಗ ಸಂಕ್ರುದ್ಧನಾದ ಕಾರ್ಷ್ಣಿಯು ರಣದಲ್ಲಿ ದುರ್ಯೋಧನನ ಮೇಲೆ ಮೃತ್ಯುವಿನ ಸೋದರಿಯಂತೆ ಘೋರವಾಗಿದ್ದ ಶಕ್ತಿಯನ್ನು ಪ್ರಯೋಗಿಸಿದನು.

06112004a ತಾಮಾಪತಂತೀಂ ಸಹಸಾ ಘೋರರೂಪಾಂ ವಿಶಾಂ ಪತೇ|

06112004c ದ್ವಿಧಾ ಚಿಚ್ಛೇದ ತೇ ಪುತ್ರಃ ಕ್ಷುರಪ್ರೇಣ ಮಹಾರಥಃ||

ವಿಶಾಂಪತೇ! ವೇಗವಾಗಿ ಬೀಳುತ್ತಿದ್ದ ಆ ಘೋರರೂಪಿಯನ್ನು ನಿನ್ನ ಮಗ ಮಹಾರಥನು ಕ್ಷುರಪ್ರದಿಂದ ಎರಡಾಗಿ ತುಂಡರಿಸಿದನು.

06112005a ತಾಂ ಶಕ್ತಿಂ ಪತಿತಾಂ ದೃಷ್ಟ್ವಾ ಕಾರ್ಷ್ಣಿಃ ಪರಮಕೋಪನಃ|

06112005c ದುರ್ಯೋಧನಂ ತ್ರಿಭಿರ್ಬಾಣೈರ್ಬಾಹ್ವೋರುರಸಿ ಚಾರ್ಪಯತ್||

ಆ ಶಕ್ತಿಯು ಬಿದ್ದುದನ್ನು ನೋಡಿದ ಕಾರ್ಷ್ಣಿಯು ಪರಮಕುಪಿತನಾಗಿ ದುರ್ಯೋಧನನ ವಕ್ಷಸ್ಥಲ ಮತ್ತು ಬಾಹುಗಳನ್ನು ಮೂರು ಬಾಣಗಳಿಂದ ಪ್ರಹರಿಸಿದನು.

06112006a ಪುನಶ್ಚೈನಂ ಶರೈರ್ಘೋರೈರಾಜಘಾನ ಸ್ತನಾಂತರೇ|

06112006c ದಶಭಿರ್ಭರತಶ್ರೇಷ್ಠ ದುರ್ಯೋಧನಮಮರ್ಷಣಂ||

ಭರತಶ್ರೇಷ್ಠ! ಪುನಃ ಅವನು ಹತ್ತು ಘೋರ ಶರಗಳಿಂದ ಅಮರ್ಷಣ ದುರ್ಯೋಧನನ ಎದೆಗೆ ಹೊಡೆದನು.

06112007a ತದ್ಯುದ್ಧಮಭವದ್ಘೋರಂ ಚಿತ್ರರೂಪಂ ಚ ಭಾರತ|

06112007c ಈಕ್ಷಿತೃಪ್ರೀತಿಜನನಂ ಸರ್ವಪಾರ್ಥಿವಪೂಜಿತಂ||

ಭಾರತ! ಆ ಯುದ್ಧವು ಘೋರವೂ ಚಿತ್ರರೂಪವೂ ಆಗಿದ್ದು, ನೋಡುವವರಲ್ಲಿ ಪ್ರೀತಿಯನ್ನುಂಟುಮಾಡುತ್ತಿತ್ತು. ಸರ್ವ ಪಾರ್ಥಿವರೂ ಗೌರವಿಸುವಂತಿತ್ತು.

06112008a ಭೀಷ್ಮಸ್ಯ ನಿಧನಾರ್ಥಾಯ ಪಾರ್ಥಸ್ಯ ವಿಜಯಾಯ ಚ|

06112008c ಯುಯುಧಾತೇ ರಣೇ ವೀರೌ ಸೌಭದ್ರಕುರುಪುಂಗವೌ||

ಭೀಷ್ಮನ ನಿಧನ ಮತ್ತು ಪಾರ್ಥನ ವಿಜಯಕ್ಕಾಗಿ ಆ ಸೌಭದ್ರ-ಕುರುಪುಂಗವ ವೀರರಿಬ್ಬರೂ ರಣದಲ್ಲಿ ಹೋರಾಡಿದರು.

06112009a ಸಾತ್ಯಕಿಂ ರಭಸಂ ಯುದ್ಧೇ ದ್ರೌಣಿರ್ಬ್ರಾಹ್ಮಣಪುಂಗವಃ|

06112009c ಆಜಘಾನೋರಸಿ ಕ್ರುದ್ಧೋ ನಾರಾಚೇನ ಪರಂತಪಃ||

ಪರಂತಪ ಬ್ರಾಹ್ಮಣಪುಂಗವ ದ್ರೌಣಿಯು ಕ್ರುದ್ಧನಾಗಿ ಯುದ್ಧದಲ್ಲಿ ರಭಸದಿಂದ ನಾರಾಚಗಳಿಂದ ಸಾತ್ಯಕಿಯನ್ನು ಎದೆಯ ಮೇಲೆ ಹೊಡೆದನು.

06112010a ಶೈನೇಯೋಽಪಿ ಗುರೋಃ ಪುತ್ರಂ ಸರ್ವಮರ್ಮಸು ಭಾರತ|

06112010c ಅತಾಡಯದಮೇಯಾತ್ಮಾ ನವಭಿಃ ಕಂಕಪತ್ರಿಭಿಃ||

ಭಾರತ! ಅಮೇಯಾತ್ಮ ಶೈನಿಯೂ ಕೂಡ ಒಂಭತ್ತು ಕಂಕಪತ್ರಿಗಳಿಂದ ಗುರುಪುತ್ರನ ಸರ್ವ ಮರ್ಮಾಂಗಗಳಿಗೂ ಹೊಡೆದನು.

06112011a ಅಶ್ವತ್ಥಾಮಾ ತು ಸಮರೇ ಸಾತ್ಯಕಿಂ ನವಭಿಃ ಶರೈಃ|

06112011c ತ್ರಿಂಶತಾ ಚ ಪುನಸ್ತೂರ್ಣಂ ಬಾಹ್ವೋರುರಸಿ ಚಾರ್ಪಯತ್||

ಅಶ್ವತ್ಥಾಮನಾದರೋ ಸಮರದಲ್ಲಿ ವೇಗಶಾಲಿ ಸಾತ್ಯಕಿಯನ್ನು ಒಂಭತ್ತು ಬಾಣಗಳಿಂದ ಹೊಡೆದು ಪುನಃ ಮೂವತ್ತು ಬಾಣಗಳಿಂದ ಅವನ ಎದೆ-ಬಾಹುಗಳನ್ನು ಹೊಡೆದನು.

06112012a ಸೋಽತಿವಿದ್ಧೋ ಮಹೇಷ್ವಾಸೋ ದ್ರೋಣಪುತ್ರೇಣ ಸಾತ್ವತಃ|

06112012c ದ್ರೋಣಪುತ್ರಂ ತ್ರಿಭಿರ್ಬಾಣೈರಾಜಘಾನ ಮಹಾಯಶಾಃ||

ದ್ರೋಣಪುತ್ರನಿಂದ ಈ ರೀತಿ ಪೆಟ್ಟುತಿಂದ ಮಹೇಷ್ವಾಸ ಮಹಾಯಶಸ್ವಿ ಸಾತ್ವತನು ದ್ರೋಣಪುತ್ರನನ್ನು ಮೂರು ಬಾಣಗಳಿಂದ ಗಾಯಗೊಳಿಸಿದನು.

06112013a ಪೌರವೋ ಧೃಷ್ಟಕೇತುಂ ಚ ಶರೈರಾಸಾದ್ಯ ಸಂಯುಗೇ|

06112013c ಬಹುಧಾ ದಾರಯಾಂ ಚಕ್ರೇ ಮಹೇಷ್ವಾಸಂ ಮಹಾರಥಂ||

ಸಂಯುಗದಲ್ಲಿ ಪೌರವನು ಮಹಾರಥ ಮಹೇಷ್ವಾಸ ಧೃಷ್ಟಕೇತುವನ್ನು ಬಹಳ ಶರಗಳಿಂದ ಹೊಡೆದು ಗಾಯಗೊಳಿಸಿದನು.

06112014a ತಥೈವ ಪೌರವಂ ಯುದ್ಧೇ ಧೃಷ್ಟಕೇತುರ್ಮಹಾರಥಃ|

06112014c ತ್ರಿಂಶತಾ ನಿಶಿತೈರ್ಬಾಣೈರ್ವಿವ್ಯಾಧ ಸುಮಹಾಬಲಃ||

ಹಾಗೆಯೇ ಯುದ್ಧದಲ್ಲಿ ಮಹಾರಥ ಸುಮಹಾಬಲ ಧೃಷ್ಟಕೇತುವು ಪೌರವನನ್ನು ಮೂವತ್ತು ನಿಶಿತ ಬಾಣಗಳಿಂದ ಹೊಡೆದನು.

06112015a ಪೌರವಸ್ತು ಧನುಶ್ಚಿತ್ತ್ವಾ ಧೃಷ್ಟಕೇತೋರ್ಮಹಾರಥಃ|

06112015c ನನಾದ ಬಲವನ್ನಾದಂ ವಿವ್ಯಾಧ ದಶಭಿಃ ಶರೈಃ||

ಮಹಾರಥ ಪೌರವನಾದರೋ ಧೃಷ್ಟಕೇತುವಿನ ಧನುಸ್ಸನ್ನು ತುಂಡರಿಸಿ, ಬಲವತ್ತಾದ ಕೂಗನ್ನು ಕೂಗಿ, ಹತ್ತು ಶರಗಳಿಂದ ಅವನನ್ನು ಹೊಡೆದನು.

06112016a ಸೋಽನ್ಯತ್ಕಾರ್ಮುಕಮಾದಾಯ ಪೌರವಂ ನಿಶಿತೈಃ ಶರೈಃ|

06112016c ಆಜಘಾನ ಮಹಾರಾಜ ತ್ರಿಸಪ್ತತ್ಯಾ ಶಿಲೀಮುಖೈಃ||

ಮಹಾರಾಜ! ಆಗ ಅವನು ಇನ್ನೊಂದು ಕಾರ್ಮುಕವನ್ನು ಎತ್ತಿಕೊಂಡು ಎಪ್ಪತ್ತ್ಮೂರು ಶಿಲೀಮುಖ ಶರಗಳಿಂದ ಪೌರವನನ್ನು ಗಾಯಗೊಳಿಸಿದನು.

06112017a ತೌ ತು ತತ್ರ ಮಹೇಷ್ವಾಸೌ ಮಹಾಮಾತ್ರೌ ಮಹಾರಥೌ|

06112017c ಮಹತಾ ಶರವರ್ಷೇಣ ಪರಸ್ಪರಮವರ್ಷತಾಂ||

ಅಲ್ಲಿ ಅವರಿಬ್ಬರು ಮಹೇಷ್ವಾಸರೂ, ಮಹಾಬಲಿಷ್ಟರೂ, ಮಹಾರಥರು ಮಹಾ ಶರವರ್ಷಗಳನ್ನು ಪರಸ್ಪರರ ಮೇಲೆ ಸುರಿಸಿದರು.

06112018a ಅನ್ಯೋನ್ಯಸ್ಯ ಧನುಶ್ಚಿತ್ತ್ವಾ ಹಯಾನ್ ಹತ್ವಾ ಚ ಭಾರತ|

06112018c ವಿರಥಾವಸಿಯುದ್ಧಾಯ ಸಂಗತೌ ತೌ ಮಹಾರಥೌ||

ಭಾರತ! ಅವರಿಬ್ಬರು ಮಹಾರಥರೂ ಅನ್ಯೋನ್ಯರ ಧನುಸ್ಸುಗಳನ್ನು ಕತ್ತರಿಸಿ, ಕುದುರೆಗಳನ್ನು ಕೊಂದು ವಿರಥರಾಗಿ ಖಡ್ಗಯುದ್ಧದಲ್ಲಿ ತೊಡಗಿದರು.

06112019a ಆರ್ಷಭೇ ಚರ್ಮಣೀ ಚಿತ್ರೇ ಶತಚಂದ್ರಪರಿಷ್ಕೃತೇ|

06112019c ತಾರಕಾಶತಚಿತ್ರೌ ಚ ನಿಸ್ತ್ರಿಂಶೌ ಸುಮಹಾಪ್ರಭೌ||

ಅವರಿಬ್ಬರೂ ನೂರು ಚಂದ್ರರ ಮತ್ತು ನೂರು ನಕ್ಷತ್ರಗಳ ಚಿತ್ರಗಳಿಂದ ಕೂಡಿದ, ಎತ್ತಿನ ಚರ್ಮದಿಂದ ಮಾಡಿದ ಗುರಾಣಿಗಳನ್ನೂ ಮಹಾಪ್ರಭೆಯುಳ್ಳ ಖಡ್ಗಗಳನ್ನೂ ಹಿಡಿದಿದ್ದರು.

06112020a ಪ್ರಗೃಹ್ಯ ವಿಮಲೌ ರಾಜಂಸ್ತಾವನ್ಯೋನ್ಯಮಭಿದ್ರುತೌ|

06112020c ವಾಶಿತಾಸಂಗಮೇ ಯತ್ತೌ ಸಿಂಹಾವಿವ ಮಹಾವನೇ||

ರಾಜನ್! ಮಹಾವನದಲ್ಲಿ ಸಿಂಹಿಯನ್ನು ಕೂಡಲು ಕಾದಾಡುವ ಎರಡು ಸಿಂಹಗಳಂತೆ ಅವರಿಬ್ಬರೂ ವಿಜಯವನ್ನು ಬಯಸಿ ಅನ್ಯೋನ್ಯರಮೇಲೆ ಖಡ್ಗದಿಂದ ಪ್ರಹರಿಸಿದರು.

06112021a ಮಂಡಲಾನಿ ವಿಚಿತ್ರಾಣಿ ಗತಪ್ರತ್ಯಾಗತಾನಿ ಚ|

06112021c ಚೇರತುರ್ದರ್ಶಯಂತೌ ಚ ಪ್ರಾರ್ಥಯಂತೌ ಪರಸ್ಪರಂ||

ಮುಂದೆ ಹೋಗುವುದು, ಹಿಂದೆ ಸರಿಯುವುದು, ಮತ್ತು ಮಂಡಲಾಕಾರದಲ್ಲಿ ಸುತ್ತುವುದು ಹೀಗೆ ವಿಚಿತ್ರ ನಡಿಗೆಗಳಿಂದ ತಮ್ಮ ಕೌಶಲಗಳನ್ನು ಪ್ರದರ್ಶಿಸುತ್ತಿದ್ದರು ಮತ್ತು ಪರಸ್ಪರರನ್ನು ಆಹ್ವಾನಿಸುತ್ತಿದ್ದರು.

06112022a ಪೌರವೋ ಧೃಷ್ಟಕೇತುಂ ತು ಶಂಖದೇಶೇ ಮಹಾಸಿನಾ|

06112022c ತಾಡಯಾಮಾಸ ಸಂಕ್ರುದ್ಧಸ್ತಿಷ್ಠ ತಿಷ್ಠೇತಿ ಚಾಬ್ರವೀತ್||

ಪೌರವನು ಸಂಕ್ರುದ್ಧನಾಗಿ ಮಹಾ ಖಡ್ಗದಿಂದ ಧೃಷ್ಟಕೇತುವಿನ ಕಿವಿಯ ಭಾಗಕ್ಕೆ ಹೊಡೆದು “ನಿಲ್ಲು! ನಿಲ್ಲು!” ಎಂದು ಹೇಳಿದನು.

06112023a ಚೇದಿರಾಜೋಽಪಿ ಸಮರೇ ಪೌರವಂ ಪುರುಷರ್ಷಭಂ|

06112023c ಆಜಘಾನ ಶಿತಾಗ್ರೇಣ ಜತ್ರುದೇಶೇ ಮಹಾಸಿನಾ||

ಚೇದಿರಾಜನೂ ಕೂಡ ಸಮರದಲ್ಲಿ ಪುರುಷರ್ಷಭ ಪೌರವನನ್ನು ಮಹಾಖಡ್ಗದ ಹರಿತ ಭಾಗದಿಂದ ಕುತ್ತಿಗೆಯ ಮೇಲೆ ಹೊಡೆದನು.

06112024a ತಾವನ್ಯೋನ್ಯಂ ಮಹಾರಾಜ ಸಮಾಸಾದ್ಯ ಮಹಾಹವೇ|

06112024c ಅನ್ಯೋನ್ಯವೇಗಾಭಿಹತೌ ನಿಪೇತತುರರಿಂದಮೌ||

ಮಹಾರಾಜ! ಆ ಮಹಾಹವದಲ್ಲಿ ಅವರಿಬ್ಬರು ಅರಿಂದಮರೂ ಅನ್ಯೋನ್ಯರನ್ನು ಎದುರಿಸಿ ಅನ್ಯೋನ್ಯರನ್ನು ವೇಗವಾಗಿ ಹೊಡೆದು ಕೆಳಗೆ ಬಿದ್ದರು.

06112025a ತತಃ ಸ್ವರಥಮಾರೋಪ್ಯ ಪೌರವಂ ತನಯಸ್ತವ|

06112025c ಜಯತ್ಸೇನೋ ರಥೇ ರಾಜನ್ನಪೋವಾಹ ರಣಾಜಿರಾತ್||

ರಾಜನ್! ಆಗ ನಿನ್ನ ಮಗ ಜಯತ್ಸೇನನು ಪೌರವನನ್ನು ತನ್ನ ರಥದಮೇಲೆ ಕುಳ್ಳಿರಿಸಿಕೊಂಡು ರಣರಂಗದ ಆಚೆ ಕೊಂಡೊಯ್ದನು.

06112026a ಧೃಷ್ಟಕೇತುಂ ಚ ಸಮರೇ ಮಾದ್ರೀಪುತ್ರಃ ಪರಂತಪಃ|

06112026c ಅಪೋವಾಹ ರಣೇ ರಾಜನ್ಸಹದೇವಃ ಪ್ರತಾಪವಾನ್||

ರಾಜನ್! ಧೃಷ್ಟಕೇತುವನ್ನು ಸಮರದಲ್ಲಿ ಪರಂತಪ, ಪ್ರತಾಪವಾನ್, ಮಾದ್ರೀಪುತ್ರ ಸಹದೇವನು ರಣದಿಂದ ಆಚೆ ಕರೆದುಕೊಂಡು ಹೋದನು.

06112027a ಚಿತ್ರಸೇನಃ ಸುಶರ್ಮಾಣಂ ವಿದ್ಧ್ವಾ ನವಭಿರಾಶುಗೈಃ|

06112027c ಪುನರ್ವಿವ್ಯಾಧ ತಂ ಷಷ್ಟ್ಯಾ ಪುನಶ್ಚ ನವಭಿಃ ಶರೈಃ||

ಚಿತ್ರಸೇನನು ಸುಶರ್ಮನನ್ನು ಒಂಭತ್ತು ಆಶುಗಗಳಿಂದ ಹೊಡೆದು, ಪುನಃ ಅರವತ್ತು ಬಾಣಗಳಿಂದಲೂ ಮತ್ತೆ ಪುನಃ ಎಂಭತ್ತು ಬಾಣಗಳಿಂದಲೂ ಹೊಡೆದನು.

06112028a ಸುಶರ್ಮಾ ತು ರಣೇ ಕ್ರುದ್ಧಸ್ತವ ಪುತ್ರಂ ವಿಶಾಂ ಪತೇ|

06112028c ದಶಭಿರ್ದಶಭಿಶ್ಚೈವ ವಿವ್ಯಾಧ ನಿಶಿತೈಃ ಶರೈಃ||

ವಿಶಾಂಪತೇ! ಆದರೆ ಸುಶರ್ಮನು ರಣದಲ್ಲಿ ಕ್ರುದ್ಧನಾಗಿ ನಿನ್ನ ಮಗನನ್ನು ಇಪ್ಪತ್ತು ನಿಶಿತ ಬಾಣಗಳಿಂದ ಹೊಡೆದನು.

06112029a ಚಿತ್ರಸೇನಶ್ಚ ತಂ ರಾಜಂಸ್ತ್ರಿಂಶತಾ ನತಪರ್ವಣಾಂ|

06112029c ಆಜಘಾನ ರಣೇ ಕ್ರುದ್ಧಃ ಸ ಚ ತಂ ಪ್ರತ್ಯವಿಧ್ಯತ|

06112029e ಭೀಷ್ಮಸ್ಯ ಸಮರೇ ರಾಜನ್ಯಶೋ ಮಾನಂ ಚ ವರ್ಧಯನ್||

ರಾಜನ್! ಚಿತ್ರಸೇನನು ರಣದಲ್ಲಿ ಕ್ರುದ್ಧನಾಗಿ ಮೂವತ್ತು ನತಪರ್ವಗಳಿಂದ ಅವನನ್ನು ಹೊಡೆದನು. ರಾಜನ್! ಅವನೂ ಕೂಡ ಭೀಷ್ಮನ ಸಮರದಲ್ಲಿ ಯಶಸ್ಸು ಮಾನಗಳನ್ನು ಹೆಚ್ಚಿಸುತ್ತಾ ಅವನನ್ನು ತಿರುಗಿ ಹೊಡೆದನು.

06112030a ಸೌಭದ್ರೋ ರಾಜಪುತ್ರಂ ತು ಬೃಹದ್ಬಲಮಯೋಧಯತ್|

06112030c ಆರ್ಜುನಿಂ ಕೋಸಲೇಂದ್ರಸ್ತು ವಿದ್ಧ್ವಾ ಪಂಚಭಿರಾಯಸೈಃ|

06112030e ಪುನರ್ವಿವ್ಯಾಧ ವಿಂಶತ್ಯಾ ಶರೈಃ ಸಂನತಪರ್ವಭಿಃ||

ರಾಜಪುತ್ರ ಸೌಭದ್ರಿಯು ಬೃಹದ್ಬಲನನ್ನು ಎದುರಿಸಿದನು. ಕೋಸಲೇಂದ್ರನು ಆರ್ಜುನಿಯನ್ನು ಐದು ಆಯಸಗಳಿಂದ ಗಾಯಗೊಳಿಸಿದನು. ಪುನಃ ಅವನನ್ನು ಇಪ್ಪತ್ತು ಸನ್ನತಪರ್ವ ಶರಗಳಿಂದ ಹೊಡೆದನು.

06112031a ಬೃಹದ್ಬಲಂ ಚ ಸೌಭದ್ರೋ ವಿದ್ಧ್ವಾ ನವಭಿರಾಯಸೈಃ|

06112031c ನಾಕಂಪಯತ ಸಂಗ್ರಾಮೇ ವಿವ್ಯಾಧ ಚ ಪುನಃ ಪುನಃ||

ಸೌಭದ್ರಿಯು ಬೃಹದ್ಬಲನನ್ನು ಒಂಭತ್ತು ಆಯಸಗಳಿಂದ ಹೊಡೆದನು ಮತ್ತು ಸಂಗ್ರಾಮದಲ್ಲಿ ನಡುಗದೇ ಪುನಃ ಪುನಃ ಹೊಡೆದನು.

06112032a ಕೌಸಲ್ಯಸ್ಯ ಪುನಶ್ಚಾಪಿ ಧನುಶ್ಚಿಚ್ಛೇದ ಫಾಲ್ಗುಣಿಃ|

06112032c ಆಜಘಾನ ಶರೈಶ್ಚೈವ ತ್ರಿಂಶತಾ ಕಂಕಪತ್ರಿಭಿಃ||

ಫಾಲ್ಗುಣಿಯು ಪುನಃ ಕೌಸಲ್ಯನ ಧನುವನ್ನು ತುಂಡುಮಾಡಿ ಮೂವತ್ತು ಕಂಕಪತ್ರಿ ಶರಗಳಿಂದ ಅವನನ್ನು ಗಾಯಗೊಳಿಸಿದನು.

06112033a ಸೋಽನ್ಯತ್ಕಾರ್ಮುಕಮಾದಾಯ ರಾಜಪುತ್ರೋ ಬೃಹದ್ಬಲಃ|

06112033c ಫಾಲ್ಗುನಿಂ ಸಮರೇ ಕ್ರುದ್ಧೋ ವಿವ್ಯಾಧ ಬಹುಭಿಃ ಶರೈಃ||

ರಾಜಪುತ್ರ ಬೃಹದ್ಬಲನು ಇನ್ನೊಂದು ಕಾರ್ಮುಕವನ್ನು ತೆಗೆದುಕೊಂಡು ಸಮರದಲ್ಲಿ ಕ್ರುದ್ಧನಾಗಿ ಫಾಲ್ಗುನಿಯನ್ನು ಬಹಳ ಶರಗಳಿಂದ ಹೊಡೆದನು.

06112034a ತಯೋರ್ಯುದ್ಧಂ ಸಮಭವದ್ಭೀಷ್ಮಹೇತೋಃ ಪರಂತಪ|

06112034c ಸಂರಬ್ಧಯೋರ್ಮಹಾರಾಜ ಸಮರೇ ಚಿತ್ರಯೋಧಿನೋಃ|

06112034e ಯಥಾ ದೇವಾಸುರೇ ಯುದ್ಧೇ ಮಯವಾಸವಯೋರಭೂತ್||

ಪರಂತಪ! ಮಹಾರಾಜ! ಭೀಷ್ಮನಿಗಾಗಿ ನಡೆದ ಆ ಕ್ರೋಧ ಚಿತ್ರಯೋಧಿಗಳ ಮಹಾಯುದ್ಧ ಸಮರವು ದೇವಾಸುರರ ಯುದ್ಧದಲ್ಲಿ ಮಯ-ವಾಸವರ ನಡುವೆ ನಡೆದಂತೆ ನಡೆಯಿತು.

06112035a ಭೀಮಸೇನೋ ಗಜಾನೀಕಂ ಯೋಧಯನ್ಬಹ್ವಶೋಭತ|

06112035c ಯಥಾ ಶಕ್ರೋ ವಜ್ರಪಾಣಿರ್ದಾರಯನ್ಪರ್ವತೋತ್ತಮಾನ್||

ವಜ್ರಪಾಣಿ ಶಕ್ರನು ಉತ್ತಮ ಪರ್ವತಗಳನ್ನು ಸೀಳುತ್ತಿರುವಂತೆ ಭೀಮಸೇನನು ಗಜಸೇನೆಯೊಡನೆ ಯುದ್ಧಮಾಡುತ್ತಾ ಬಹುವಾಗಿ ಶೋಭಿಸಿದನು.

06112036a ತೇ ವಧ್ಯಮಾನಾ ಭೀಮೇನ ಮಾತಂಗಾ ಗಿರಿಸನ್ನಿಭಾಃ|

06112036c ನಿಪೇತುರುರ್ವ್ಯಾಂ ಸಹಿತಾ ನಾದಯಂತೋ ವಸುಂಧರಾಂ||

ಭೀಮನಿಂದ ವಧಿಸಲ್ಪಟ್ಟ ಗಿರಿಸನ್ನಿಭ ಮಾತಂಗಗಳು ಚೀತ್ಕಾರಗಳಿಂದ ಭೂಮಿಯಲ್ಲಿ ಪ್ರತಿಧ್ವನಿಗಳನ್ನುಂಟುಮಾಡುತ್ತಾ ಕೆಳಗೆ ಬೀಳುತ್ತಿದ್ದವು.

06112037a ಗಿರಿಮಾತ್ರಾ ಹಿ ತೇ ನಾಗಾ ಭಿನ್ನಾಂಜನಚಯೋಪಮಾಃ|

06112037c ವಿರೇಜುರ್ವಸುಧಾಂ ಪ್ರಾಪ್ಯ ವಿಕೀರ್ಣಾ ಇವ ಪರ್ವತಾಃ||

ದೊಡ್ಡದಾದ ಇದ್ದಲಿನ ರಾಶಿಯಂತಿದ್ದ ಪರ್ವತಾಕಾರದ ಆನೆಗಳು ಭೂಮಿಯ ಮೇಲೆ ಬಿದ್ದು ರಣರಂಗವು ಪರ್ವತಗಳಿಂದ ವ್ಯಾಪ್ಯವಾಗಿದೆಯೋ ಎಂಬಂತೆ ತೋರುತ್ತಿತ್ತು.

06112038a ಯುಧಿಷ್ಠಿರೋ ಮಹೇಷ್ವಾಸೋ ಮದ್ರರಾಜಾನಮಾಹವೇ|

06112038c ಮಹತ್ಯಾ ಸೇನಯಾ ಗುಪ್ತಂ ಪೀಡಯಾಮಾಸ ಸಂಗತಃ||

ಮಹೇಷ್ವಾಸ ಯುಧಿಷ್ಠಿರನು ಮಹಾ ಸೇನೆಯಿಂದ ರಕ್ಷಿತನಾಗಿ ಆಹವದಲ್ಲಿ ಬಾಣಗಳಿಂದ ಮದ್ರರಾಜನನ್ನು ಪೀಡಿಸುತ್ತಿದ್ದನು.

06112039a ಮದ್ರೇಶ್ವರಶ್ಚ ಸಮರೇ ಧರ್ಮಪುತ್ರಂ ಮಹಾರಥಂ|

06112039c ಪೀಡಯಾಮಾಸ ಸಂರಬ್ಧೋ ಭೀಷ್ಮಹೇತೋಃ ಪರಾಕ್ರಮೀ||

ಸಮರದಲ್ಲಿ ಭೀಷ್ಮನಿಗಾಗಿ ಸಂರಬ್ಧನಾಗಿ ಪರಾಕ್ರಮೀ ಮದ್ರೇಶ್ವರನು ಮಹಾರಥ ಧರ್ಮಪುತ್ರನನ್ನು ಪೀಡಿಸಿದನು.

06112040a ವಿರಾಟಂ ಸೈಂಧವೋ ರಾಜಾ ವಿದ್ಧ್ವಾ ಸನ್ನತಪರ್ವಭಿಃ|

06112040c ನವಭಿಃ ಸಾಯಕೈಸ್ತೀಕ್ಷ್ಣೈಸ್ತ್ರಿಂಶತಾ ಪುನರರ್ದಯತ್||

ರಾಜಾ ಸೈಂಧವನು ವಿರಾಟನನ್ನು ಒಂಭತ್ತು ಸನ್ನತಪರ್ವಗಳಿಂದ ಹೊಡೆದು ಪುನಃ ಮೂರು ತೀಕ್ಷ್ಣ ಸಾಯಕಗಳಿಂದ ಗಾಯಗೊಳಿಸಿದನು.

06112041a ವಿರಾಟಶ್ಚ ಮಹಾರಾಜ ಸೈಂಧವಂ ವಾಹಿನೀಮುಖೇ|

06112041c ತ್ರಿಂಶತಾ ನಿಶಿತೈರ್ಬಾಣೈರಾಜಘಾನ ಸ್ತನಾಂತರೇ||

ಮಹಾರಾಜ! ವಿರಾಟನೂ ಕೂಡ ವಾಹಿನೀಮುಖಲ್ಲಿ ಮೂವತ್ತು ನಿಶಿತಬಾಣಗಳಿಂದ ಸೈಂಧವನ ಎದೆಗೆ ಹೊಡೆದನು.

06112042a ಚಿತ್ರಕಾರ್ಮುಕನಿಸ್ತ್ರಿಂಶೌ ಚಿತ್ರವರ್ಮಾಯುಧಧ್ವಜೌ|

06112042c ರೇಜತುಶ್ಚಿತ್ರರೂಪೌ ತೌ ಸಂಗ್ರಾಮೇ ಮತ್ಸ್ಯಸೈಂಧವೌ||

ಚಿತ್ರ ಧನುಸ್ಸುಗಳನ್ನೂ, ಚಿತ್ರ ಕವಚಗಳನ್ನೂ, ಚಿತ್ರ ಆಯುಧ ಧ್ವಜಗಳನ್ನೂ ಪಡೆದಿದ್ದ ಆ ಚಿತ್ರರೂಪೀ ಮತ್ಸ್ಯ-ಸೈಂಧವರು ಸಂಗ್ರಾಮದಲ್ಲಿ ರಾಜಿಸಿದರು.

06112043a ದ್ರೋಣಃ ಪಾಂಚಾಲಪುತ್ರೇಣ ಸಮಾಗಮ್ಯ ಮಹಾರಣೇ|

06112043c ಮಹಾಸಮುದಯಂ ಚಕ್ರೇ ಶರೈಃ ಸನ್ನತಪರ್ವಭಿಃ||

ದ್ರೋಣನು ಮಹಾರಣದಲ್ಲಿ ಪಾಂಚಾಲಪುತ್ರನನ್ನು ಎದುರಿಸಿ ಸನ್ನತಪರ್ವ ಶರಗಳಿಂದ ಮಹಾಯುದ್ಧವನ್ನು ನಡೆಸಿದನು.

06112044a ತತೋ ದ್ರೋಣೋ ಮಹಾರಾಜ ಪಾರ್ಷತಸ್ಯ ಮಹದ್ಧನುಃ|

06112044c ಚಿತ್ತ್ವಾ ಪಂಚಾಶತೇಷೂಣಾಂ ಪಾರ್ಷತಂ ಸಮವಿಧ್ಯತ||

ಮಹಾರಾಜ! ಆಗ ದ್ರೋಣನು ಪಾರ್ಷತನ ಮಹಾಧನುಸ್ಸನ್ನು ತುಂಡುಮಾಡಿ ಪಾರ್ಷತನ್ನು ಐವತ್ತು ಬಾಣಗಳಿಂದ ಹೊಡೆದನು.

06112045a ಸೋಽನ್ಯತ್ಕಾರ್ಮುಕಮಾದಾಯ ಪಾರ್ಷತಃ ಪರವೀರಹಾ|

06112045c ದ್ರೋಣಸ್ಯ ಮಿಷತೋ ಯುದ್ಧೇ ಪ್ರೇಷಯಾಮಾಸ ಸಾಯಕಾನ್||

ಪರವೀರಹ ಪಾರ್ಷತನು ಇನ್ನೊಂದು ಕಾರ್ಮುಕವನ್ನು ತೆಗೆದುಕೊಂಡು ದ್ರೋಣನು ನೋಡುತ್ತಿದ್ದಂತೆಯೇ ಯುದ್ಧದಲ್ಲಿ ಹರಿತ ಸಾಯಕಗಳನ್ನು ಪ್ರಯೋಗಿಸಿದನು.

06112046a ತಾಂ ಶರಾಂ ಶರಸಂಘೈಸ್ತು ಸಂನಿವಾರ್ಯ ಮಹಾರಥಃ|

06112046c ದ್ರೋಣೋ ದ್ರುಪದಪುತ್ರಾಯ ಪ್ರಾಹಿಣೋತ್ಪಂಚ ಸಾಯಕಾನ್||

ಆ ಶರಗಳನ್ನು ಶರಸಂಘಗಳಿಂದ ತಡೆದು ಮಹಾರಥ ದ್ರೋಣನು ದ್ರುಪದಪುತ್ರನನ್ನು ಐದು ಸಾಯಕಗಳಿಂದ ಹೊಡೆದನು.

06112047a ತಸ್ಯ ಕ್ರುದ್ಧೋ ಮಹಾರಾಜ ಪಾರ್ಷತಃ ಪರವೀರಹಾ|

06112047c ದ್ರೋಣಾಯ ಚಿಕ್ಷೇಪ ಗದಾಂ ಯಮದಂಡೋಪಮಾಂ ರಣೇ||

ಮಹಾರಾಜ! ಅದರಿಂದ ಕ್ರುದ್ಧನಾದ ಪರವೀರಹ ಪಾರ್ಷತನು ರಣದಲ್ಲಿ ದ್ರೋಣನ ಮೇಲೆ ಯಮದಂಡದಂತಿರುವ ಗದೆಯನ್ನು ಎಸೆದನು.

06112048a ತಾಮಾಪತಂತೀಂ ಸಹಸಾ ಹೇಮಪಟ್ಟವಿಭೂಷಿತಾಂ|

06112048c ಶರೈಃ ಪಂಚಾಶತಾ ದ್ರೋಣೋ ವಾರಯಾಮಾಸ ಸಂಯುಗೇ||

ಬೀಳುತ್ತಿರುವ ಆ ಹೇಮಪಟ್ಟವಿಭೂಷಿತ ಗದೆಯನ್ನು ಕೂಡಲೇ ದ್ರೋಣನು ಸಂಯುಗದಲ್ಲಿ ಐವತ್ತು ಬಾಣಗಳಿಂದ ತಡೆದನು.

06112049a ಸಾ ಚಿನ್ನಾ ಬಹುಧಾ ರಾಜನ್ದ್ರೋಣಚಾಪಚ್ಯುತೈಃ ಶರೈಃ|

06112049c ಚೂರ್ಣೀಕೃತಾ ವಿಶೀರ್ಯಂತೀ ಪಪಾತ ವಸುಧಾತಲೇ||

ರಾಜನ್! ದ್ರೋಣದ ಚಾಪದಿಂದ ಹೊರಟ ಆ ಶರಗಳಿಂದ ಅದು ಅನೇಕ ಚೂರುಗಳಾಗಿ ಒಡೆದು ನೆಲದ ಮೇಲೆ ಉದುರಿ ಬಿದ್ದಿತು.

06112050a ಗದಾಂ ವಿನಿಹತಾಂ ದೃಷ್ಟ್ವಾ ಪಾರ್ಷತಃ ಶತ್ರುಸೂದನಃ|

06112050c ದ್ರೋಣಾಯ ಶಕ್ತಿಂ ಚಿಕ್ಷೇಪ ಸರ್ವಪಾರಶವೀಂ ಶುಭಾಂ||

ಗದೆಯು ನಾಶವಾದುದನ್ನು ನೋಡಿ ಶತ್ರುಸೂದನ ಪಾರ್ಷತನು ದ್ರೋಣನ ಮೇಲೆ ಸರ್ವಪಾರಶವೀ ಶುಭ ಶಕ್ತಿಯನ್ನು ಎಸೆದನು.

06112051a ತಾಂ ದ್ರೋಣೋ ನವಭಿರ್ಬಾಣೈಶ್ಚಿಚ್ಛೇದ ಯುಧಿ ಭಾರತ|

06112051c ಪಾರ್ಷತಂ ಚ ಮಹೇಷ್ವಾಸಂ ಪೀಡಯಾಮಾಸ ಸಂಯುಗೇ||

ಭಾರತ! ಅದನ್ನು ದ್ರೋಣನು ಒಂಭತ್ತು ಬಾಣಗಳಿಂದ ಯುದ್ಧದಲ್ಲಿ ತುಂಡರಿಸಿದನು ಮತ್ತು ಮಹೇಷ್ವಾಸ ಪಾರ್ಷತನ್ನು ಪೀಡಿಸಿದನು.

06112052a ಏವಮೇತನ್ಮಹದ್ಯುದ್ಧಂ ದ್ರೋಣಪಾರ್ಷತಯೋರಭೂತ್|

06112052c ಭೀಷ್ಮಂ ಪ್ರತಿ ಮಹಾರಾಜ ಘೋರರೂಪಂ ಭಯಾನಕಂ||

ಈ ರೀತಿ ಮಹಾರಾಜ! ಭೀಷ್ಮನಿಗಾಗಿ ಘೋರರೂಪವೂ ಭಯಾನಕವೂ ಆದ ಮಹಾ ಯುದ್ಧವು ದ್ರೋಣ-ಪಾರ್ಷತರ ನಡುವೆ ನಡೆಯಿತು.

06112053a ಅರ್ಜುನಃ ಪ್ರಾಪ್ಯ ಗಾಂಗೇಯಂ ಪೀಡಯನ್ನಿಶಿತೈಃ ಶರೈಃ|

06112053c ಅಭ್ಯದ್ರವತ ಸಮ್ಯತ್ತಂ ವನೇ ಮತ್ತಮಿವ ದ್ವಿಪಂ||

ಅರ್ಜುನನು ಗಾಂಗೇಯನನ್ನು ನಿಶಿತ ಶರಗಳಿಂದ ಪೀಡಿಸುತ್ತಾ ವನದಲ್ಲಿ ಮದಿಸಿದ ಸಲಗವು ಇನ್ನೊಂದನ್ನು ಎದುರಿಸುವಂತೆ ಎದುರಿಸಿದನು.

06112054a ಪ್ರತ್ಯುದ್ಯಯೌ ಚ ತಂ ಪಾರ್ಥಂ ಭಗದತ್ತಃ ಪ್ರತಾಪವಾನ್|

06112054c ತ್ರಿಧಾ ಭಿನ್ನೇನ ನಾಗೇನ ಮದಾಂಧೇನ ಮಹಾಬಲಃ||

ಆಗ ಪ್ರತಾಪವಾನ್ ಭಗದತ್ತನು ಗಂಡಸ್ಥಳದ ಮೂರು ಕಡೆಗಳಿಂದ ಮದೋದಕವನ್ನು ಸುರಿಸುತ್ತಿದ್ದ ಕೊಬ್ಬಿದ ಆನೆಯ ಮೇಲೆ ಕುಳಿತು ಪಾರ್ಥನನ್ನು ಆಕ್ರಮಿಸಿದನು.

06112055a ತಮಾಪತಂತಂ ಸಹಸಾ ಮಹೇಂದ್ರಗಜಸನ್ನಿಭಂ|

06112055c ಪರಂ ಯತ್ನಂ ಸಮಾಸ್ಥಾಯ ಬೀಭತ್ಸುಃ ಪ್ರತ್ಯಪದ್ಯತ||

ಒಮ್ಮೆಲೇ ತನ್ನ ಮೇಲೆ ಬೀಳುತ್ತಿರುವ ಆ ಮಹೇಂದ್ರನ ಐರವಾತದಂತಿರುವ ಆನೆಯನ್ನು ಬೀಭತ್ಸುವು ಪರಮ ಯತ್ನದಿಂದ ಎದುರಿಸಿದನು.

06112056a ತತೋ ಗಜಗತೋ ರಾಜಾ ಭಗದತ್ತಃ ಪ್ರತಾಪವಾನ್|

06112056c ಅರ್ಜುನಂ ಶರವರ್ಷೇಣ ವಾರಯಾಮಾಸ ಸಂಯುಗೇ||

ಆಗ ಆನೆಯ ಮೇಲಿದ್ದ ಪ್ರತಾಪವಾನ್ ರಾಜಾ ಭಗದತ್ತನು ಸಂಯುಗದಲ್ಲಿ ಅರ್ಜುನನನ್ನು ಶರವರ್ಷಗಳಿಂದ ತಡೆದನು.

06112057a ಅರ್ಜುನಸ್ತು ರಣೇ ನಾಗಮಾಯಾಂತಂ ರಜತೋಪಮಂ|

06112057c ವಿಮಲೈರಾಯಸೈಸ್ತೀಕ್ಷ್ಣೈರವಿಧ್ಯತ ಮಹಾರಣೇ||

ಅರ್ಜುನನಾದರೋ ರಣದಲ್ಲಿ ಬರುತ್ತಿದ್ದ ಆನೆಯನ್ನು ಬೆಳ್ಳಿಯಂತೆ ವಿಮಲವಾಗಿದ್ದ ತೀಕ್ಷ್ಣ ರಾಯಸಗಳಿಂದ ಮಹಾರಣದಲ್ಲಿ ಹೊಡೆದನು.

06112058a ಶಿಖಂಡಿನಂ ಚ ಕೌಂತೇಯೋ ಯಾಹಿ ಯಾಹೀತ್ಯಚೋದಯತ್|

06112058c ಭೀಷ್ಮಂ ಪ್ರತಿ ಮಹಾರಾಜ ಜಹ್ಯೇನಮಿತಿ ಚಾಬ್ರವೀತ್||

ಮಹಾರಾಜ! ಕೌಂತೇಯನು ಶಿಖಂಡಿಯನ್ನು “ಭೀಷ್ಮನ ಹತ್ತಿರ ಬಾ! ಬಾ!” ಎಂದು ಪ್ರಚೋದಿಸುತ್ತ “ಅವನನ್ನು ಕೊಲ್ಲು!” ಎಂದನು.

06112059a ಪ್ರಾಗ್ಜ್ಯೋತಿಷಸ್ತತೋ ಹಿತ್ವಾ ಪಾಂಡವಂ ಪಾಂಡುಪೂರ್ವಜ|

06112059c ಪ್ರಯಯೌ ತ್ವರಿತೋ ರಾಜನ್ದ್ರುಪದಸ್ಯ ರಥಂ ಪ್ರತಿ||

ರಾಜನ್! ಪಾಂಡುಪೂರ್ವಜ! ಆಗ ಪ್ರಾಗ್ಜ್ಯೋತಿಷದ ಭಗದತ್ತನು ಪಾಂಡವನನ್ನು ಬಿಟ್ಟು ಅವಸರದಲ್ಲಿ ದ್ರುಪದನ ರಥದ ಕಡೆ ನಡೆದನು.

06112060a ತತೋಽರ್ಜುನೋ ಮಹಾರಾಜ ಭೀಷ್ಮಮಭ್ಯದ್ರವದ್ದ್ರುತಂ|

06112060c ಶಿಖಂಡಿನಂ ಪುರಸ್ಕೃತ್ಯ ತತೋ ಯುದ್ಧಮವರ್ತತ||

ಆಗ ಮಹಾರಾಜ! ಅರ್ಜುನನು ಶಿಖಂಡಿಯನ್ನು ಮುಂದಿರಿಸಿಕೊಂಡು ಭೀಷ್ಮನನ್ನು ಎದುರಿಸಿದನು. ಆಗ ಯುದ್ಧವು ನಡೆಯಿತು.

06112061a ತತಸ್ತೇ ತಾವಕಾಃ ಶೂರಾಃ ಪಾಂಡವಂ ರಭಸಂ ರಣೇ|

06112061c ಸರ್ವೇಽಭ್ಯಧಾವನ್ಕ್ರೋಶಂತಸ್ತದದ್ಭುತಮಿವಾಭವತ್||

ಆಗ ನಿನ್ನವರ ಶೂರರು ಎಲ್ಲರೂ ಕೂಗುತ್ತಾ ರಭಸದಿಂದ ರಣದಲ್ಲಿ ಧಾವಿಸಿ ಪಾಂಡವನನ್ನು ಎದುರಿಸಿದರು. ಅದು ಅದ್ಭುತವಾಗಿತ್ತು.

06112062a ನಾನಾವಿಧಾನ್ಯನೀಕಾನಿ ಪುತ್ರಾಣಾಂ ತೇ ಜನಾಧಿಪ|

06112062c ಅರ್ಜುನೋ ವ್ಯಧಮತ್ಕಾಲೇ ದಿವೀವಾಭ್ರಾಣಿ ಮಾರುತಃ||

ಜನಾಧಿಪ! ಆಗ ನಿನ್ನ ಪುತ್ರರ ನಾನಾವಿಧದ ಸೇನೆಗಳನ್ನು ಆಕಾಶದಲ್ಲಿರುವ ಮೋಡಗಳನ್ನು ಗಾಳಿಯು ಹೇಗೋ ಹಾಗೆ ಅರ್ಜುನನು ಚದುರಿಸಿದನು.

06112063a ಶಿಖಂಡೀ ತು ಸಮಾಸಾದ್ಯ ಭರತಾನಾಂ ಪಿತಾಮಹಂ|

06112063c ಇಷುಭಿಸ್ತೂರ್ಣಮವ್ಯಗ್ರೋ ಬಹುಭಿಃ ಸ ಸಮಾಚಿನೋತ್||

ಶಿಖಂಡಿಯಾದರೋ ಅವ್ಯಗ್ರನಾಗಿ ಭರತರ ಪಿತಾಮನನನ್ನು ಬೇಗನೆ ಅನೇಕ ಬಾಣಗಳಿಂದ ಹೊಡೆದನು.

06112064a ಸೋಮಕಾಂಶ್ಚ ರಣೇ ಭೀಷ್ಮೋ ಜಘ್ನೇ ಪಾರ್ಥಪದಾನುಗಾನ್|

06112064c ನ್ಯವಾರಯತ ಸೈನ್ಯಂ ಚ ಪಾಂಡವಾನಾಂ ಮಹಾರಥಃ||

ಪಾರ್ಥನನ್ನು ಅನುಸರಿಸಿ ಬಂದ ಸೋಮಕರನ್ನು ರಣದಲ್ಲಿ ಭೀಷ್ಮನು ಸಂಹರಿಸಿದನು ಮತ್ತು ಆ ಮಹಾರಥನು ಪಾಂಡವರ ಸೈನ್ಯವನ್ನು ತಡೆದನು.

06112065a ರಥಾಗ್ನ್ಯಗಾರಶ್ಚಾಪಾರ್ಚಿರಸಿಶಕ್ತಿಗದೇಂಧನಃ|

06112065c ಶರಸಂಘಮಹಾಜ್ವಾಲಃ ಕ್ಷತ್ರಿಯಾನ್ಸಮರೇಽದಹತ್||

ಅವನ ರಥವೇ ಅಗ್ನಿಗಾರವಾಗಿತ್ತು. ಧನುಸ್ಸೇ ಅಗ್ನಿಯ ಜ್ವಾಲೆಯಾಗಿತ್ತು. ಖಡ್ಗ-ಶಕ್ತಿ-ಗದೆಗಳು ಇಂಧನವಾಗಿದ್ದವು. ಶರಸಂಘಗಳು ಮಹಾಜ್ವಾಲೆಯಾಗಿತ್ತು. ಕ್ಷತ್ರಿಯರು ಸಮರದಲ್ಲಿ ದಹಿಸುತ್ತಿದ್ದರು.

06112066a ಯಥಾ ಹಿ ಸುಮಹಾನಗ್ನಿಃ ಕಕ್ಷೇ ಚರತಿ ಸಾನಿಲಃ|

06112066c ತಥಾ ಜಜ್ವಾಲ ಭೀಷ್ಮೋಽಪಿ ದಿವ್ಯಾನ್ಯಸ್ತ್ರಾಣ್ಯುದೀರಯನ್||

ಹೇಗೆ ಮಹಾ ಅಗ್ನಿಯು ಗಾಳಿಯೊಡಗೂಡಿ ಒಣಹುಲ್ಲನ್ನು ಸುಟ್ಟುಹಾಕುವುದೋ ಹಾಗೆ ಭೀಷ್ಮನೂ ಕೂಡ ದಿವ್ಯಾಸ್ತ್ರಗಳಿಂದ ಹೊಡೆಯುತ್ತಾ ಬೆಳಗಿದನು.

06112067a ಸುವರ್ಣಪುಂಖೈರಿಷುಭಿಃ ಶಿತೈಃ ಸನ್ನತಪರ್ವಭಿಃ|

06112067c ನಾದಯನ್ಸ ದಿಶೋ ಭೀಷ್ಮಃ ಪ್ರದಿಶಶ್ಚ ಮಹಾಯಶಾಃ||

ಮಹಾಯಶ ಭೀಷ್ಮನು ಸಿಂಹಗರ್ಜನೆ ಮಾಡಿ ಸುವರ್ಣಪುಂಖಗಳ ನಿಶಿತ ಸನ್ನತಪರ್ವ ಶರಗಳಿಂದ ದಿಕ್ಕು-ಉಪದಿಕ್ಕುಗಳನ್ನೂ ತುಂಬಿಸಿದನು.

06112068a ಪಾತಯನ್ರಥಿನೋ ರಾಜನ್ಗಜಾಂಶ್ಚ ಸಹ ಸಾದಿಭಿಃ|

06112068c ಮುಂಡತಾಲವನಾನೀವ ಚಕಾರ ಸ ರಥವ್ರಜಾನ್||

ರಾಜನ್! ರಥರನ್ನು, ಸವಾರರೊಂದಿಗೆ ಆನೆಗಳನ್ನೂ ಉರುಳಿಸಿ ಆ ರಥಸಮೂಹವನ್ನು ಬೋಳಾದ ತಾಳೆಯುಮರಗಳ ವನದಂತೆ ಮಾಡಿದನು.

06112069a ನಿರ್ಮನುಷ್ಯಾನ್ರಥಾನ್ರಾಜನ್ಗಜಾನಶ್ವಾಂಶ್ಚ ಸಂಯುಗೇ|

06112069c ಚಕಾರ ಸ ತದಾ ಭೀಷ್ಮಃ ಸರ್ವಶಸ್ತ್ರಭೃತಾಂ ವರಃ||

ರಾಜನ್! ಆಗ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಭೀಷ್ಮನು ಸಂಯುಗದಲ್ಲಿ ಮನುಷ್ಯರು, ರಥಗಳು, ಆನೆಗಳು ಮತ್ತು ಕುದುರೆಗಳು ಇಲ್ಲದಂತೆಯೇ ಮಾಡಿದನು.

06112070a ತಸ್ಯ ಜ್ಯಾತಲನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ|

06112070c ನಿಶಮ್ಯ ಸರ್ವತೋ ರಾಜನ್ಸಮಕಂಪಂತ ಸೈನಿಕಾಃ||

ರಾಜನ್! ಸಿಡಿಲಿನ ಶಬ್ಧದಂತಿದ್ದ ಅವನ ಧನುಸ್ಸಿನ ಶಿಂಜಿನಿಯ ಟೇಂಕಾರವನ್ನು ಕೇಳಿ ಎಲ್ಲೆಡೆಯೂ ಸೈನಿಕರು ಕಂಪಿಸಿದರು.

06112071a ಅಮೋಘಾ ಹ್ಯಪತನ್ಬಾಣಾಃ ಪಿತುಸ್ತೇ ಮನುಜೇಶ್ವರ|

06112071c ನಾಸಜ್ಜಂತ ಶರೀರೇಷು ಭೀಷ್ಮಚಾಪಚ್ಯುತಾಃ ಶರಾಃ||

ಮನುಜೇಶ್ವರ! ನಿನ್ನ ಪಿತ ಭೀಷ್ಮನ ಚಾಪದಿಂದ ಹೊರಟ ಶರಗಳು ಶರೀರಗಳನ್ನು ಚುಚ್ಚದೇ ವ್ಯರ್ಥವಾಗಿ ಬೀಳುತ್ತಿರಲಿಲ್ಲ.

06112072a ನಿರ್ಮನುಷ್ಯಾನ್ರಥಾನ್ರಾಜನ್ಸುಯುಕ್ತಾಂ ಜವನೈರ್ಹಯೈಃ|

06112072c ವಾತಾಯಮಾನಾನ್ಪಶ್ಯಾಮ ಹ್ರಿಯಮಾಣಾನ್ವಿಶಾಂ ಪತೇ||

ವಿಶಾಂಪತೇ! ರಾಜನ್! ಮನುಷ್ಯರೇ ಇಲ್ಲದಿದ್ದ ರಣದಲ್ಲಿ ವೇಗವಾಗಿ ಹೋಗಬಲ್ಲ ಕುದುರೆಗಳನ್ನು ಕಟ್ಟಿದ ರಥಗಳು ಓಡುತ್ತಿರುವುದನ್ನು ನೋಡಿದೆನು.

06112073a ಚೇದಿಕಾಶಿಕರೂಷಾಣಾಂ ಸಹಸ್ರಾಣಿ ಚತುರ್ದಶ|

06112073c ಮಹಾರಥಾಃ ಸಮಾಖ್ಯಾತಾಃ ಕುಲಪುತ್ರಾಸ್ತನುತ್ಯಜಃ||

06112074a ಅಪರಾವರ್ತಿನಃ ಶೂರಾಃ ಸುವರ್ಣವಿಕೃತಧ್ವಜಾಃ|

06112074c ಸಂಗ್ರಾಮೇ ಭೀಷ್ಮಮಾಸಾದ್ಯ ಸವಾಜಿರಥಕುಂಜರಾಃ|

06112074e ಜಗ್ಮುಸ್ತೇ ಪರಲೋಕಾಯ ವ್ಯಾದಿತಾಸ್ಯಮಿವಾಂತಕಂ||

ಬಾಯಿಕಳೆದ ಅಂತಕನಂತಿದ್ದ ಭೀಷ್ಮನನ್ನು ಸಂಗ್ರಾಮದಲ್ಲಿ ಎದುರಿಸಿ ಹದಿನಾಲ್ಕು ಸಾವಿರ ಮಹಾರಥ, ಸಮಾಖ್ಯಾತ, ಕುಲಪುತ್ರರು, ತನುವನ್ನೇ ತ್ಯಜಿಸಿ ಬಂದ ಚೇದಿ-ಕಾಶಿ-ಕರೂಷಣರು ಕುದುರೆ-ರಥ-ಆನೆಗಳೊಂದಿಗೆ ಪರಲೋಕಗಳಿಗೆ ತೆರಳಿದರು.

06112075a ನ ತತ್ರಾಸೀನ್ಮಹಾರಾಜ ಸೋಮಕಾನಾಂ ಮಹಾರಥಃ|

06112075c ಯಃ ಸಂಪ್ರಾಪ್ಯ ರಣೇ ಭೀಷ್ಮಂ ಜೀವಿತೇ ಸ್ಮ ಮನೋ ದಧೇ||

ಮಹಾರಾಜ! ರಣದಲ್ಲಿ ಭೀಷ್ಮನನ್ನು ಎದುರಿಸಿಯೂ ಜೀವವನ್ನು ಉಳಿಸಿಕೊಳ್ಳುತ್ತೇನೆ ಎನ್ನುವ ಯಾವ ಸೋಮಕ ಮಹಾರಥನೂ ಅಲ್ಲಿರಲಿಲ್ಲ.

06112076a ತಾಂಶ್ಚ ಸರ್ವಾನ್ರಣೇ ಯೋಧಾನ್ಪ್ರೇತರಾಜಪುರಂ ಪ್ರತಿ|

06112076c ನೀತಾನಮನ್ಯಂತ ಜನಾ ದೃಷ್ಟ್ವಾ ಭೀಷ್ಮಸ್ಯ ವಿಕ್ರಮಂ||

ಭೀಷ್ಮನ ವಿಕ್ರಮವನ್ನು ನೋಡಿ ರಣದಲ್ಲಿದ್ದ ಯೋಧರೆಲ್ಲರನ್ನೂ ಪ್ರೇತರಾಜನ ಪುರದ ಕಡೆಗೆ ಕಳುಹಿಸಿಯಾಯಿತೆಂದು ಜನರು ಅಂದುಕೊಳ್ಳುತ್ತಿದ್ದರು.

06112077a ನ ಕಶ್ಚಿದೇನಂ ಸಮರೇ ಪ್ರತ್ಯುದ್ಯಾತಿ ಮಹಾರಥಃ|

06112077c ಋತೇ ಪಾಂಡುಸುತಂ ವೀರಂ ಶ್ವೇತಾಶ್ವಂ ಕೃಷ್ಣಸಾರಥಿಂ|

06112077e ಶಿಖಂಡಿನಂ ಚ ಸಮರೇ ಪಾಂಚಾಲ್ಯಮಮಿತೌಜಸಂ||

ಆ ಸಮಯದಲ್ಲಿ ವೀರ ಪಾಂಡುಸುತ ಕೃಷ್ಣಸಾರಥಿ ಶ್ವೇತಾಶ್ವನನ್ನು ಮತ್ತು ಸಮರದಲ್ಲಿ ಅವನಿಂದ ಪಾಲಿತಗೊಂಡ ಅಮಿತೌಜಸ ಪಾಂಚಾಲ್ಯ ಶಿಖಂಡಿಯನ್ನು ಬಿಟ್ಟು ಬೇರೆ ಯಾವ ಮಹಾರಥನೂ ಅವನನ್ನು ಎದುರಿಸಲು ಮುಂದೆ ಬರಲಿಲ್ಲ.

06112078a ಶಿಖಂಡೀ ತು ರಣೇ ಭೀಷ್ಮಮಾಸಾದ್ಯ ಭರತರ್ಷಭ|

06112078c ದಶಭಿರ್ದಶಭಿರ್ಬಾಣೈರಾಜಘಾನ ಮಹಾಹವೇ||

ಭರತರ್ಷಭ! ಶಿಖಂಡಿಯಾದರೋ ರಣದ ಮಹಾಹವದಲ್ಲಿ ಭೀಷ್ಮನ ಬಳಿಹೋಗಿ ಇಪ್ಪತ್ತು ಬಾಣಗಳಿಂದ ಹೊಡೆದನು.

06112079a ಶಿಖಂಡಿನಂ ತು ಗಾಂಗೇಯಃ ಕ್ರೋಧದೀಪ್ತೇನ ಚಕ್ಷುಷಾ|

06112079c ಅವೈಕ್ಷತ ಕಟಾಕ್ಷೇಣ ನಿರ್ದಹನ್ನಿವ ಭಾರತ||

ಭಾರತ! ಕೇವಲ ಕಣ್ಣುನೋಟದಿಂದಲೇ ದಹಿಸಿಬಿಡುವನೋ ಎನ್ನುವಂತೆ ಗಾಂಗೇಯನು ಸಿಟ್ಟಿನಿಂದ ಉರಿಯುವ ಕಣ್ಣುಗಳಿಂದ ಶಿಖಂಡಿಯನ್ನು ನೋಡಿದನು.

06112080a ಸ್ತ್ರೀತ್ವಂ ತತ್ಸಂಸ್ಮರನ್ರಾಜನ್ಸರ್ವಲೋಕಸ್ಯ ಪಶ್ಯತಃ|

06112080c ನ ಜಘಾನ ರಣೇ ಭೀಷ್ಮಃ ಸ ಚ ತಂ ನಾವಬುದ್ಧವಾನ್||

ರಾಜನ್! ಅವನ ಸ್ತ್ರೀತ್ವವನ್ನು ನೆನಪಿಸಿಕೊಂಡು ಸರ್ವಲೋಕಗಳೂ ನೋಡುತ್ತಿರಲು ಭೀಷ್ಮನು ಅವನು ಹೊಡೆದರೂ ಅವನನ್ನು ತಿರುಗಿ ಹೊಡೆಯಲಿಲ್ಲ.

06112081a ಅರ್ಜುನಸ್ತು ಮಹಾರಾಜ ಶಿಖಂಡಿನಮಭಾಷತ|

06112081c ಅಭಿತ್ವರಸ್ವ ತ್ವರಿತೋ ಜಹಿ ಚೈನಂ ಪಿತಾಮಹಂ||

ಮಹಾರಾಜ! ಅರ್ಜುನನಾದರೋ ಶಿಖಂಡಿಗೆ ಹೇಳಿದನು: “ತ್ವರೆಮಾಡು! ಪಿತಾಮಹನನ್ನು ಬೇಗನೇ ಕೊಲ್ಲು!

06112082a ಕಿಂ ತೇ ವಿವಕ್ಷಯಾ ವೀರ ಜಹಿ ಭೀಷ್ಮಂ ಮಹಾರಥಂ|

06112082c ನ ಹ್ಯನ್ಯಮನುಪಶ್ಯಾಮಿ ಕಂ ಚಿದ್ಯೌಧಿಷ್ಠಿರೇ ಬಲೇ||

06112083a ಯಃ ಶಕ್ತಃ ಸಮರೇ ಭೀಷ್ಮಂ ಯೋಧಯೇತ ಪಿತಾಮಹಂ|

06112083c ಋತೇ ತ್ವಾಂ ಪುರುಷವ್ಯಾಘ್ರ ಸತ್ಯಮೇತದ್ಬ್ರವೀಮಿ ತೇ||

ವೀರ! ಏನನ್ನು ನೋಡುತ್ತಿದ್ದೀಯೆ? ಮಹಾರಥ ಭೀಷ್ಮನನ್ನು ಕೊಲ್ಲು! ಏಕೆಂದರೆ ಪುರುಷವ್ಯಾಘ್ರ! ನೀನಲ್ಲದೇ ಯುಧಿಷ್ಠಿರನ ಸೇನೆಯಲ್ಲಿ ಸಮರದಲ್ಲಿ ಪಿತಾಮಹ ಭೀಷ್ಮನೊಡನೆ ಯುದ್ಧಮಾಡಬಲ್ಲ ಬೇರೆ ಅನ್ಯರನ್ನು ನಾನು ಕಾಣೆ. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ.”

06112084a ಏವಮುಕ್ತಸ್ತು ಪಾರ್ಥೇನ ಶಿಖಂಡೀ ಭರತರ್ಷಭ|

06112084c ಶರೈರ್ನಾನಾವಿಧೈಸ್ತೂರ್ಣಂ ಪಿತಾಮಹಮುಪಾದ್ರವತ್||

ಭರತರ್ಷಭ! ಪಾರ್ಥನು ಹೀಗೆ ಹೇಳಲು ಶಿಖಂಡಿಯು ನಾನಾವಿಧದ ಶರಗಳಿಂದ ಬೇಗನೇ ಪಿತಾಮಹನನ್ನು ಹೊಡೆದನು.

06112085a ಅಚಿಂತಯಿತ್ವಾ ತಾನ್ಬಾಣಾನ್ಪಿತಾ ದೇವವ್ರತಸ್ತವ|

06112085c ಅರ್ಜುನಂ ಸಮರೇ ಕ್ರುದ್ಧಂ ವಾರಯಾಮಾಸ ಸಾಯಕೈಃ||

ಆ ಬಾಣಗಳ ಕುರಿತು ಯೋಚಿಸದೇ ನಿನ್ನ ಪಿತ ದೇವವ್ರತನು ಸಮರದಲ್ಲಿ ಕ್ರುದ್ಧನಾದ ಅರ್ಜುನನನ್ನು ಸಾಯಕಗಳಿಂದ ತಡೆದನು.

06112086a ತಥೈವ ಚ ಚಮೂಂ ಸರ್ವಾನ್ಪಾಂಡವಾನಾಂ ಮಹಾರಥಃ|

06112086c ಅಪ್ರೈಷೀತ್ಸಮರೇ ತೀಕ್ಷ್ಣೈಃ ಪರಲೋಕಾಯ ಮಾರಿಷ||

ಹಾಗೆಯೇ ಪಾಂಡವರ ಸೇನೆಗಳೆಲ್ಲವನ್ನೂ ಮಹಾರಥನು ಸಮರದಲ್ಲಿ ತೀಕ್ಷ್ಣ ಶರಗಳಿಂದ ಪರಲೋಕಕ್ಕೆ ಕಳುಹಿಸಿದನು.

06112087a ತಥೈವ ಪಾಂಡವಾ ರಾಜನ್ಸೈನ್ಯೇನ ಮಹತಾ ವೃತಾಃ|

06112087c ಭೀಷ್ಮಂ ಪ್ರಚ್ಛಾದಯಾಮಾಸುರ್ಮೇಘಾ ಇವ ದಿವಾಕರಂ||

ರಾಜನ್! ಹಾಗೆಯೇ ಪಾಂಡವನೂ ಕೂಡ ಮಹಾ ಸೇನೆಯೊಂದಿಗೆ ಆವೃತನಾಗಿ ಭೀಷ್ಮನನ್ನು ಮೋಡಗಳು ದಿವಾಕರನನ್ನು ಹೇಗೋ ಹಾಗೆ ಮುಚ್ಚಿದನು.

06112088a ಸ ಸಮಂತಾತ್ಪರಿವೃತೋ ಭಾರತೋ ಭರತರ್ಷಭ|

06112088c ನಿರ್ದದಾಹ ರಣೇ ಶೂರಾನ್ವನಂ ವಹ್ನಿರಿವ ಜ್ವಲನ್||

ಭರತರ್ಷಭ! ಎಲ್ಲಕಡೆಗಳಿಂದಲೂ ಸುತ್ತುವರೆದಿದ್ದ ಆ ಭಾರತನು ರಣದಲ್ಲಿ ಶೂರರನ್ನು ಬೆಂಕೆಯು ವನವನ್ನು ಸುಡುವಂತೆ ಸುಟ್ಟುಹಾಕಿದನು.

06112089a ತತ್ರಾದ್ಭುತಮಪಶ್ಯಾಮ ತವ ಪುತ್ರಸ್ಯ ಪೌರುಷಂ|

06112089c ಅಯೋಧಯತ ಯತ್ಪಾರ್ಥಂ ಜುಗೋಪ ಚ ಯತವ್ರತಂ||

ಅಲ್ಲಿ ನಿನ್ನ ಪುತ್ರನ ಅದ್ಭುತ ಪೌರುಷವನ್ನು ನೋಡಿದೆವು. ಅವನು ಪಾರ್ಥನೊಂದಿಗೆ ಯುದ್ಧಮಾಡುತ್ತಿದ್ದನು ಮತ್ತು ಯತವ್ರತನನ್ನು ರಕ್ಷಿಸುತ್ತಿದ್ದನು.

06112090a ಕರ್ಮಣಾ ತೇನ ಸಮರೇ ತವ ಪುತ್ರಸ್ಯ ಧನ್ವಿನಃ|

06112090c ದುಃಶಾಸನಸ್ಯ ತುತುಷುಃ ಸರ್ವೇ ಲೋಕಾ ಮಹಾತ್ಮನಃ||

ಸಮರದಲ್ಲಿ ನಿನ್ನ ಮಗ ಮಹಾತ್ಮ ಧನ್ವಿ ದುಃಶಾಸನನ ಕೃತ್ಯದಿಂದ ಸರ್ವ ಲೋಕಗಳೂ ಸಂತೋಷಗೊಂಡವು.

06112091a ಯದೇಕಃ ಸಮರೇ ಪಾರ್ಥಾನ್ಸಾನುಗಾನ್ಸಮಯೋಧಯತ್|

06112091c ನ ಚೈನಂ ಪಾಂಡವಾ ಯುದ್ಧೇ ವಾಯರಾಮಾಸುರುಲ್ಬಣಂ||

ಅವನೊಬ್ಬನೇ ಅನುಯಾಯಿಗಳೊಂದಿಗೆ ಪಾರ್ಥರನ್ನು ಎದುರಿಸಿ ಯುದ್ಧ ಮಾಡುತ್ತಿದ್ದನು. ಯುದ್ಧದಲ್ಲಿ ಪ್ರಚಂಡಪರಾಕ್ರಮಿಯಾಗಿದ್ದ ಅವನನ್ನು ಪಾಂಡವರೂ ಕೂಡ ತಡೆಯಲು ಸಮರ್ಥರಾಗಲಿಲ್ಲ.

06112092a ದುಃಶಾಸನೇನ ಸಮರೇ ರಥಿನೋ ವಿರಥೀಕೃತಾಃ|

06112092c ಸಾದಿನಶ್ಚ ಮಹಾರಾಜ ದಂತಿನಶ್ಚ ಮಹಾಬಲಾಃ||

06112093a ವಿನಿರ್ಭಿನ್ನಾಃ ಶರೈಸ್ತೀಕ್ಷ್ಣೈರ್ನಿಪೇತುರ್ಧರಣೀತಲೇ|

06112093c ಶರಾತುರಾಸ್ತಥೈವಾನ್ಯೇ ದಂತಿನೋ ವಿದ್ರುತಾ ದಿಶಃ||

ಮಹಾರಾಜ! ಸಮರದಲ್ಲಿ ದುಃಶಾಸನನಿಂದ ರಥಿಗಳು ವಿರಥರಾದರು. ಬಹಾಬಲ ಆನೆಗಳೂ, ಅವುಗಳನ್ನು ಏರಿದವರೂ ತೀಕ್ಷ್ಣಶರಗಳಿಂದ ಒಡೆದು ನೆಲದ ಮೇಲೆ ಬಿದ್ದರು. ಹಾಗೆಯೇ ಅನ್ಯ ಆನೆಗಳು ಶರಗಳಿಂದ ಪೀಡಿತವಾಗಿ ದಿಕ್ಕು ದಿಕ್ಕುಗಳಲ್ಲಿ ಓಡಿ ಹೋದವು.

06112094a ಯಥಾಗ್ನಿರಿಂಧನಂ ಪ್ರಾಪ್ಯ ಜ್ವಲೇದ್ದೀಪ್ತಾರ್ಚಿರುಲ್ಬಣಃ|

06112094c ತಥಾ ಜಜ್ವಾಲ ಪುತ್ರಸ್ತೇ ಪಾಂಡವಾನ್ ವೈ ವಿನಿರ್ದಹನ್||

ಹೇಗೆ ಅಗ್ನಿಯು ಇಂಧನಕ್ಕೆ ತಾಗಿ ಇನ್ನೂ ಹೆಚ್ಚು ಹತ್ತಿ ಉರಿಯುವುದೋ ಹಾಗೆ ನಿನ್ನ ಪುತ್ರನು ಪಾಂಡವರನ್ನು ದಹಿಸುತ್ತಾ ಇನ್ನೂ ಹತ್ತಿ ಉರಿದನು.

06112095a ತಂ ಭಾರತಮಹಾಮಾತ್ರಂ ಪಾಂಡವಾನಾಂ ಮಹಾರಥಃ|

06112095c ಜೇತುಂ ನೋತ್ಸಹತೇ ಕಶ್ಚಿನ್ನಾಪ್ಯುದ್ಯಾತುಂ ಕಥಂ ಚನ|

06112095e ಋತೇ ಮಹೇಂದ್ರತನಯಂ ಶ್ವೇತಾಶ್ವಂ ಕೃಷ್ಣಸಾರಥಿಂ||

ಮಹೇಂದ್ರತನಯ ಶ್ವೇತಾಶ್ವ ಕೃಷ್ಣಸಾರಥಿಯನ್ನು ಬಿಟ್ಟರೆ ಪಾಂಡವರಲ್ಲಿ ಬೇರೆ ಯಾವ ಮಹಾರಥನೂ ಆ ಭಾರತ ಮಹಾಮಾತ್ರನನ್ನು ಎದುರಿಸಿ ಯುದ್ಧಮಾಡಲು ಅಥವಾ ಜಯಿಸಲು ಉತ್ಸುಕರಾಗಿರಲಿಲ್ಲ.

06112096a ಸ ಹಿ ತಂ ಸಮರೇ ರಾಜನ್ವಿಜಿತ್ಯ ವಿಜಯೋಽರ್ಜುನಃ|

06112096c ಭೀಷ್ಮಮೇವಾಭಿದುದ್ರಾವ ಸರ್ವಸೈನ್ಯಸ್ಯ ಪಶ್ಯತಃ||

ಸಮರದಲ್ಲಿ ಸರ್ವಸೈನ್ಯಗಳೂ ನೋಡುತ್ತಿದ್ದಂತೆಯೇ ವಿಜಯ ಅರ್ಜುನನು ಅವನನ್ನು ಗೆದ್ದು ಒಡನೆಯೇ ಭೀಷ್ಮನನ್ನು ಆಕ್ರಮಿಸಿದನು.

06112097a ವಿಜಿತಸ್ತವ ಪುತ್ರೋಽಪಿ ಭೀಷ್ಮಬಾಹುವ್ಯಪಾಶ್ರಯಃ|

06112097c ಪುನಃ ಪುನಃ ಸಮಾಶ್ವಸ್ಯ ಪ್ರಾಯುಧ್ಯತ ರಣೋತ್ಕಟಃ|

06112097e ಅರ್ಜುನಂ ಚ ರಣೇ ರಾಜನ್ಯೋಧಯನ್ಸ ವ್ಯರಾಜತ||

ಸೋತಿದ್ದರೂ ನಿನ್ನ ಮಗ ರಣೋತ್ಕಟನು ಭೀಷ್ಮನ ಬಾಹುಗಳನ್ನು ಆಶ್ರಯಿಸಿ ಪುನಃ ಪುನಃ ದಣಿವಾರಿಸಿಕೊಂಡು ಯುದ್ಧಮಾಡುತ್ತಲೇ ಇದ್ದನು. ರಾಜನ್! ಅರ್ಜುನನೊಡನೆಯೂ ಯುದ್ಧಮಾಡುತ್ತಾ ಅವನು ರಣದಲ್ಲಿ ರಾಜಿಸಿದನು.

06112098a ಶಿಖಂಡೀ ತು ರಣೇ ರಾಜನ್ವಿವ್ಯಾಧೈವ ಪಿತಾಮಹಂ|

06112098c ಶರೈರಶನಿಸಂಸ್ಪರ್ಶೈಸ್ತಥಾ ಸರ್ಪವಿಷೋಪಮೈಃ||

ರಾಜನ್! ಶಿಖಂಡಿಯಾದರೋ ರಣದಲ್ಲಿ ಸರ್ಪವಿಷಗಳಿಗೆ ಸಮವಾದ ತೀಕ್ಷ್ಣ ಶರಗಳಿಂದ ಒಂದೇ ಸಮನೆ ಪಿತಾಮಹನನ್ನು ಹೊಡೆಯುತ್ತಲೇ ಇದ್ದನು.

06112099a ನ ಚ ತೇಽಸ್ಯ ರುಜಂ ಚಕ್ರುಃ ಪಿತುಸ್ತವ ಜನೇಶ್ವರ|

06112099c ಸ್ಮಯಮಾನಶ್ಚ ಗಾಂಗೇಯಸ್ತಾನ್ಬಾಣಾಂ ಜಗೃಹೇ ತದಾ||

ಜನೇಶ್ವರ! ಆದರೆ ಅವುಗಳು ನಿನ್ನ ತಂದೆಗೆ ನೋವನ್ನುಂಟುಮಾಡುತ್ತಿರಲಿಲ್ಲ. ಗಾಂಗೇಯನು ನಗುತ್ತಲೇ ಆ ಬಾಣಗಳನ್ನು ಸ್ವೀಕರಿಸುತ್ತಿದ್ದನು.

06112100a ಉಷ್ಣಾರ್ತೋ ಹಿ ನರೋ ಯದ್ವಜ್ಜಲಧಾರಾಃ ಪ್ರತೀಚ್ಛತಿ|

06112100c ತಥಾ ಜಗ್ರಾಹ ಗಾಂಗೇಯಃ ಶರಧಾರಾಃ ಶಿಖಂಡಿನಃ||

ಬೇಸಗೆಯ ಬಿಸಿಲಿನಿಂದ ಬಳಲಿದವನು ಹೇಗೆ ನೀರಿನ ಮಳೆಯನ್ನು ಬಯಸುತ್ತಾನೋ ಹಾಗೆ ಗಾಂಗೇಯನು ಶಿಖಂಡಿಯ ಶರಧಾರೆಗಳನ್ನು ಸ್ವೀಕರಿಸಿದನು.

06112101a ತಂ ಕ್ಷತ್ರಿಯಾ ಮಹಾರಾಜ ದದೃಶುರ್ಘೋರಮಾಹವೇ|

06112101c ಭೀಷ್ಮಂ ದಹಂತಂ ಸೈನ್ಯಾನಿ ಪಾಂಡವಾನಾಂ ಮಹಾತ್ಮನಾಂ||

ಮಹಾರಾಜ! ಘೋರ ಆಹವದಲ್ಲಿ ಭೀಷ್ಮನು ಮಹಾತ್ಮ ಪಾಂಡವರ ಸೇನೆಗಳನ್ನು ದಹಿಸುತ್ತಿರುವುದನ್ನು ಕ್ಷತ್ರಿಯರು ನೋಡಿದರು.

06112102a ತತೋಽಬ್ರವೀತ್ತವ ಸುತಃ ಸರ್ವಸೈನ್ಯಾನಿ ಮಾರಿಷ|

06112102c ಅಭಿದ್ರವತ ಸಂಗ್ರಾಮೇ ಫಲ್ಗುನಂ ಸರ್ವತೋ ರಥೈಃ||

ಆಗ ನಿನ್ನ ಮಗನು ಎಲ್ಲ ಸೈನ್ಯಗಳಿಗೂ ಹೇಳಿದನು: “ಸಂಗ್ರಾಮದಲ್ಲಿ ಫಲ್ಗುನನನ್ನು ರಥಗಳಿಂದ ಎಲ್ಲ ಕಡೆಗಳಿಂದಲೂ ಆಕ್ರಮಿಸಿರಿ.

06112103a ಭೀಷ್ಮೋ ವಃ ಸಮರೇ ಸರ್ವಾನ್ಪಲಯಿಷ್ಯತಿ ಧರ್ಮವಿತ್|

06112103c ತೇ ಭಯಂ ಸುಮಹತ್ತ್ವಕ್ತ್ವಾ ಪಾಂಡವಾನ್ಪ್ರತಿಯುಧ್ಯತ||

ಧರ್ಮವಿದು ಭೀಷ್ಮನು ಸಮರದಲ್ಲಿ ನಮ್ಮೆಲ್ಲರನ್ನೂ ಪಾಲಿಸುತ್ತಾನೆ. ಆದುದರಿಂದ ಪಾಂಡವನ ಭಯವನ್ನು ತೊರೆದು ಅವನೊಡನೆ ಯುದ್ಧಮಾಡಿ.

06112104a ಏಷ ತಾಲೇನ ದೀಪ್ತೇನ ಭೀಷ್ಮಸ್ತಿಷ್ಠತಿ ಪಾಲಯನ್|

06112104c ಸರ್ವೇಷಾಂ ಧಾರ್ತರಾಷ್ಟ್ರಾಣಾಂ ರಣೇ ಶರ್ಮ ಚ ವರ್ಮ ಚ||

ಈ ತಾಲಧ್ವಜನು ಉರಿಯುತ್ತಾ ರಣದಲ್ಲಿ ಸರ್ವ ಧಾರ್ತರಾಷ್ಟ್ರರನ್ನು ಪಾಲಿಸುತ್ತಾ ಅವರ ಕವಚ-ರಕ್ಷಕನಾಗಿ ನಿಂತಿದ್ದಾನೆ.

06112105a ತ್ರಿದಶಾಪಿ ಸಮುದ್ಯುಕ್ತಾ ನಾಲಂ ಭೀಷ್ಮಂ ಸಮಾಸಿತುಂ|

06112105c ಕಿಮು ಪಾರ್ಥಾ ಮಹಾತ್ಮಾನಂ ಮರ್ತ್ಯಭೂತಾಸ್ತಥಾಬಲಾಃ|

06112105e ತಸ್ಮಾದ್ದ್ರವತ ಹೇ ಯೋಧಾಃ ಫಲ್ಗುನಂ ಪ್ರಾಪ್ಯ ಸಂಯುಗೇ||

ತ್ರಿದಶರೂ ಕೂಡ ಪ್ರಯತ್ನಿಸಿದರೂ ಈ ಭೀಷ್ಮನನ್ನೆದುರಿಸಿ ಯುದ್ಧಮಾಡಲಾರರು. ಇನ್ನು ಬಲಶಾಲಿಗಳಾಗಿದ್ದರೂ ಸಾವಿರುವ ಮಹಾತ್ಮ ಪಾಂಡವರು ಯಾವ ಲೆಕ್ಕಕ್ಕೆ? ಆದುದರಿಂದ ಹೇ ಯೋಧರೇ! ಅರ್ಜುನನೊಡನೆ ಯುದ್ಧವು ಸನ್ನಿಹಿತವಾಗಿರುವಾಗ ಓಡಿ ಹೋಗಬೇಡಿ.

06112106a ಅಹಮದ್ಯ ರಣೇ ಯತ್ತೋ ಯೋಧಯಿಷ್ಯಾಮಿ ಫಲ್ಗುನಂ|

06112106c ಸಹಿತಃ ಸರ್ವತೋ ಯತ್ತೈರ್ಭವದ್ಭಿರ್ವಸುಧಾಧಿಪಾಃ||

ಇಂದು ನಾನು ನೀವೆಲ್ಲ ವಸುಧಾಧಿಪರೊಡನೆ ಎಲ್ಲಕಡೆಗಳಿಂದ ಮುತ್ತಿಗೆ ಹಾಕಿ ಫಲ್ಗುನನೊಂದಿಗೆ ಯುದ್ಧಮಾಡುತ್ತೇನೆ.”

06112107a ತಚ್ಚ್ರುತ್ವಾ ತು ವಚೋ ರಾಜಂಸ್ತವ ಪುತ್ರಸ್ಯ ಧನ್ವಿನಃ|

06112107c ಅರ್ಜುನಂ ಪ್ರತಿ ಸಮ್ಯತ್ತಾ ಬಲವಂತೋ ಮಹಾರಥಾಃ||

ರಾಜನ್! ನಿನ್ನ ಮಗನ ಆ ಮಾತನ್ನು ಕೇಳಿ ಬಲವಂತರಾದ ಮಹಾರಥ ಧನ್ವಿಗಳು ಅರ್ಜುನನ ಮೇಲೆ ಆಕ್ರಮಿಸಿದರು.

06112108a ತೇ ವಿದೇಹಾಃ ಕಲಿಂಗಾಶ್ಚ ದಾಶೇರಕಗಣೈಃ ಸಹ|

06112108c ಅಭಿಪೇತುರ್ನಿಷಾದಾಶ್ಚ ಸೌವೀರಾಶ್ಚ ಮಹಾರಣೇ||

06112109a ಬಾಹ್ಲಿಕಾ ದರದಾಶ್ಚೈವ ಪ್ರಾಚ್ಯೋದೀಚ್ಯಾಶ್ಚ ಮಾಲವಾಃ|

06112109c ಅಭೀಷಾಹಾಃ ಶೂರಸೇನಾಃ ಶಿಬಯೋಽಥ ವಸಾತಯಃ||

06112110a ಶಾಲ್ವಾಶ್ರಯಾಸ್ತ್ರಿಗರ್ತಾಶ್ಚ ಅಂಬಷ್ಠಾಃ ಕೇಕಯೈಃ ಸಹ|

06112110c ಅಭಿಪೇತೂ ರಣೇ ಪಾರ್ಥಂ ಪತಂಗಾ ಇವ ಪಾವಕಂ||

ವಿದೇಹರು, ಕಲಿಂಗರು, ದಾಶೇರಕಗಣಗಳೊಂದಿಗೆ ನಿಷಾದರು ಮತ್ತು ಸೌವೀರರು ಮಹಾರಣದಲ್ಲಿ ಅವನ ಮೇಲೆರಗಿದರು. ಬಾಹ್ಲೀಕರು, ದರದರು, ಪೂರ್ವದವರು, ಉತ್ತರದವರು, ಮಾಲವರು, ಅಭೀಷಾಹರು, ಶೂರಸೇನರು, ಶಿಬಯರು, ವಸಾಯತರು, ಶಾಲ್ವರು, ತ್ರಿಗರ್ತರು, ಅಂಬಷ್ಠರು, ಕೇಕಯರು ಒಟ್ಟಿಗೇ ರಣದಲ್ಲಿ ಪತಂಗಗಳು ಬೆಂಕಿಯನ್ನು ಹೇಗೋ ಹಾಗೆ ಪಾರ್ಥನನ್ನು ಮುತ್ತಿದರು.

06112111a ಸ ತಾನ್ಸರ್ವಾನ್ಸಹಾನೀಕಾನ್ಮಹಾರಾಜ ಮಹಾರಥಾನ್|

06112111c ದಿವ್ಯಾನ್ಯಸ್ತ್ರಾಣಿ ಸಂಚಿಂತ್ಯ ಪ್ರಸಂಧಾಯ ಧನಂಜಯಃ||

ಮಹಾರಾಜ! ಆಗ ಧನಂಜಯನು ದಿವ್ಯಾಸ್ತ್ರಗಳನ್ನು ಸ್ಮರಿಸಿ ಆ ಎಲ್ಲ ಮಹಾರಥರನ್ನೂ ಸೇನೆಗಳೊಂದಿಗೆ ನಾಶಪಡಿಸಿದನು.

06112112a ಸ ತೈರಸ್ತ್ರೈರ್ಮಹಾವೇಗೈರ್ದದಾಹಾಶು ಮಹಾಬಲಃ|

06112112c ಶರಪ್ರತಾಪೈರ್ಬೀಭತ್ಸುಃ ಪತಂಗಾನಿವ ಪಾವಕಃ||

ತನ್ನ ಶರಪ್ರತಾಪದಿಂದ ಮಹಾಬಲ ಬೀಭತ್ಸುವು ಮಹಾವೇಗವುಳ್ಳ ಅಸ್ತ್ರಗಳಿಂದ ಅಗ್ನಿಯು ಪತಂಗಗಳನ್ನು ಸುಡುವಂತೆ ಸುಟ್ಟುಹಾಕಿದನು.

06112113a ತಸ್ಯ ಬಾಣಸಹಸ್ರಾಣಿ ಸೃಜತೋ ದೃಢಧನ್ವಿನಃ|

06112113c ದೀಪ್ಯಮಾನಮಿವಾಕಾಶೇ ಗಾಂಡೀವಂ ಸಮದೃಶ್ಯತ||

ಆ ದೃಢಧನ್ವಿಯ ಗಾಂಡೀವವು ಸಹಸ್ರಬಾಣಗಳನ್ನು ಸೃಷ್ಟಿಸುತ್ತಾ ಆಕಾಶದಲ್ಲಿ ಮಿಂಚಿನಂತೆ ಹೊಳೆಯಿತು.

06112114a ತೇ ಶರಾರ್ತಾ ಮಹಾರಾಜ ವಿಪ್ರಕೀರ್ಣರಥಧ್ವಜಾಃ|

06112114c ನಾಬ್ಯವರ್ತಂತ ರಾಜಾನಃ ಸಹಿತಾ ವಾನರಧ್ವಜಂ||

06112115a ಸಧ್ವಜಾ ರಥಿನಃ ಪೇತುರ್ಹಯಾರೋಹಾ ಹಯೈಃ ಸಹ|

06112115c ಗಜಾಃ ಸಹ ಗಜಾರೋಹೈಃ ಕಿರೀಟಿಶರತಾಡಿತಾಃ||

ಮಹಾರಾಜ! ಶರಾರ್ತರಾದ ಆ ರಾಜರು ರಥಧ್ವಜಗಳು ಮುರಿದು ವಾನರಧ್ವಜನನ್ನು ಎದುರಿಸಲಾರದಂತಾದರು. ಕಿರೀಟಿಯ ಶರಗಳಿಂದ ಹೊಡೆಯಲ್ಪಟ್ಟು ರಥಿಗಳು ಧ್ವಜಗಳೊಂದಿಗೆ, ಅಶ್ವಾರೋಹಿಗಳು ಅಶ್ವಗಳೊಂದಿಗೆ, ಗಜಾರೋಹಿಗಳು ಆನೆಗಳೊಂದಿಗೆ ಬಿದ್ದರು.

06112116a ತತೋಽರ್ಜುನಭುಜೋತ್ಸೃಷ್ಟೈರಾವೃತಾಸೀದ್ವಸುಂಧರಾ|

06112116c ವಿದ್ರವದ್ಭಿಶ್ಚ ಬಹುಧಾ ಬಲೈ ರಾಜ್ಞಾಂ ಸಮಂತತಃ||

ಆಗ ಅರ್ಜುನನ ಭುಜಗಳಿಂದ ಪ್ರಯೋಗಿಸಲ್ಪಟ್ಟ ಶರಗಳಿಂದ ಭೂಮಿಯು ತುಂಬಿಹೋಯಿತು. ಅನೇಕ ಸೇನೆಗಳೊಂದಿಗೆ ರಾಜರು ಎಲ್ಲಕಡೆ ಓಡಿ ಹೋದರು.

06112117a ಅಥ ಪಾರ್ಥೋ ಮಹಾಬಾಹುರ್ದ್ರಾವಯಿತ್ವಾ ವರೂಥಿನೀಂ|

06112117c ದುಃಶಾಸನಾಯ ಸಮರೇ ಪ್ರೇಷಯಾಮಾಸ ಸಾಯಕಾನ್||

ಆಗ ಮಹಾಬಾಹು ಪಾರ್ಥನು ಸಮರದಲ್ಲಿ ಸೇನೆಗಳನ್ನು ಪಲಾಯನಗೊಳಿಸಿ ದುಃಶಾಸನನ ಮೇಲೆ ಸಾಯಕಗಳನ್ನು ಕಳುಹಿಸಿದನು.

06112118a ತೇ ತು ಭಿತ್ತ್ವಾ ತವ ಸುತಂ ದುಃಶಾಸನಮಯೋಮುಖಾಃ|

06112118c ಧರಣೀಂ ವಿವಿಶುಃ ಸರ್ವೇ ವಲ್ಮೀಕಮಿವ ಪನ್ನಗಾಃ|

06112118e ಹಯಾಂಶ್ಚಾಸ್ಯ ತತೋ ಜಘ್ನೇ ಸಾರಥಿಂ ಚ ನ್ಯಪಾತಯತ್||

ಅವು ನಿನ್ನ ಮಗ ದುಃಶಾಸನನನ್ನು ಹೊಕ್ಕು ಬಿಲದೊಳಗೆ ಹೊಗುವ ಸರ್ಪಗಳಂತೆ ನೆಲವನ್ನು ಮುಕ್ಕಿದವು. ಅವನ ಕುದುರೆಗಳು ಮತ್ತು ಸಾರಥಿಯು ಸತ್ತು ಬಿದ್ದರು.

06112119a ವಿವಿಂಶತಿಂ ಚ ವಿಂಶತ್ಯಾ ವಿರಥಂ ಕೃತವಾನ್ಪ್ರಭೋ|

06112119c ಆಜಘಾನ ಭೃಶಂ ಚೈವ ಪಂಚಭಿರ್ನತಪರ್ವಭಿಃ||

ಪ್ರಭುವು ವಿವಿಂಶತಿಯನ್ನು ಇಪ್ಪತ್ತು ಬಾಣಗಳಿಂದ ವಿರಥನನ್ನಾಗಿ ಮಾಡಿ ಪುನಃ ಐದು ನತಪರ್ವಗಳಿಂದ ತುಂಬಾ ಗಾಯಗೊಳಿಸಿದನು.

06112120a ಕೃಪಂ ಶಲ್ಯಂ ವಿಕರ್ಣಂ ಚ ವಿದ್ಧ್ವಾ ಬಹುಭಿರಾಯಸೈಃ|

06112120c ಚಕಾರ ವಿರಥಾಂಶ್ಚೈವ ಕೌಂತೇಯಃ ಶ್ವೇತವಾಹನಃ||

ಕೃಪ, ಶಲ್ಯ, ವಿಕರ್ಣರನ್ನೂ ಅನೇಕ ಆಯಸಗಳಿಂದ ಹೊಡೆದು ಶ್ವೇತವಾಹನ ಕೌಂತೇಯನು ಅವರನ್ನೂ ಕೂಡ ವಿರಥರನ್ನಾಗಿ ಮಾಡಿದನು.

06112121a ಏವಂ ತೇ ವಿರಥಾಃ ಪಂಚ ಕೃಪಃ ಶಲ್ಯಶ್ಚ ಮಾರಿಷ|

06112121c ದುಃಶಾಸನೋ ವಿಕರ್ಣಶ್ಚ ತಥೈವ ಚ ವಿವಿಂಶತಿಃ|

06112121e ಸಂಪ್ರಾದ್ರವಂತ ಸಮರೇ ನಿರ್ಜಿತಾಃ ಸವ್ಯಸಾಚಿನಾ||

ಹೀಗೆ ವಿರಥರಾದ ಐವರು - ಕೃಪ, ಶಲ್ಯ, ದುಃಶಾಸನ, ವಿಕರ್ಣ ಮತ್ತು ವಿವಿಂಶತಿ ಸವ್ಯಸಾಚಿಯಿಂದ ಸೋಲಲ್ಪಟ್ಟು ಸಮರದಿಂದ ಪಲಾಯನಗೈದರು.

06112122a ಪೂರ್ವಾಹ್ಣೇ ತು ತಥಾ ರಾಜನ್ಪರಾಜಿತ್ಯ ಮಹಾರಥಾನ್|

06112122c ಪ್ರಜಜ್ವಾಲ ರಣೇ ಪಾರ್ಥೋ ವಿಧೂಮ ಇವ ಪಾವಕಃ||

ರಾಜನ್! ಹಾಗೆ ಪೂರ್ವಾಹ್ಣದಲ್ಲಿ ಮಹಾರಥರನ್ನು ಪರಾಜಯಗೊಳಿಸಿ ರಣದಲ್ಲಿ ಪಾರ್ಥನು ಹೊಗೆಯಿಲ್ಲದ ಬೆಂಕಿಯಂತೆ ಪ್ರಜ್ವಲಿಸಿದನು.

06112123a ತಥೈವ ಶರವರ್ಷೇಣ ಭಾಸ್ಕರೋ ರಶ್ಮಿವಾನಿವ|

06112123c ಅನ್ಯಾನಪಿ ಮಹಾರಾಜ ಪಾತಯಾಮಾಸ ಪಾರ್ಥಿವಾನ್||

ಮಹಾರಾಜ! ಹಾಗೆಯೋ ಭಾಸ್ಕರನ ಕಿರಣಗಳಂತಹ ಶರವರ್ಷಗಳಿಂದ ಅನ್ಯ ಪಾರ್ಥಿವರನ್ನೂ ಉರುಳಿಸಿದನು.

06112124a ಪರಾಙ್ಮುಖೀಕೃತ್ಯ ತದಾ ಶರವರ್ಷೈರ್ಮಹಾರಥಾನ್|

06112124c ಪ್ರಾವರ್ತಯತ ಸಂಗ್ರಾಮೇ ಶೋಣಿತೋದಾಂ ಮಹಾನದೀಂ|

06112124e ಮಧ್ಯೇನ ಕುರುಸೈನ್ಯಾನಾಂ ಪಾಂಡವಾನಾಂ ಚ ಭಾರತ||

ಭಾರತ! ಆಗ ಶರವರ್ಷಗಳಿಂದ ಮಹಾರಥರನ್ನು ಪರಾಙ್ಮುಖಗೊಳಿಸಿ ಪಾಂಡವರ ಮತ್ತು ಕುರುಸೇನೆಗಳ ಮಧ್ಯೆ ಸಂಗ್ರಾವದಲ್ಲಿ ರಕ್ತವೇ ನೀರಾಗಿರುವ ಮಹಾನದಿಯನ್ನು ಹರಿಸಿದನು.

06112125a ಗಜಾಶ್ಚ ರಥಸಂಘಾಶ್ಚ ಬಹುಧಾ ರಥಿಭಿರ್ಹತಾಃ|

06112125c ರಥಾಶ್ಚ ನಿಹತಾ ನಾಗೈರ್ನಾಗಾ ಹಯಪದಾತಿಭಿಃ||

ರಥಿಗಳು ಅನೇಕ ಆನೆಗಳನ್ನೂ ರಥ ಸಂಘಗಳನ್ನೂ ಸಂಹರಿಸುತ್ತಿದ್ದರು. ಆನೆಗಳು ರಥಗಳನ್ನೂ, ಆನೆಗಳನ್ನೂ, ಕುದುರೆಗಳನ್ನೂ, ಪದಾತಿಗಳನ್ನೂ ಸಂಹರಿಸುತ್ತಿದ್ದವು.

06112126a ಅಂತರಾ ಚಿಧ್ಯಮಾನಾನಿ ಶರೀರಾಣಿ ಶಿರಾಂಸಿ ಚ|

06112126c ನಿಪೇತುರ್ದಿಕ್ಷು ಸರ್ವಾಸು ಗಜಾಶ್ವರಥಯೋಧಿನಾಂ||

ಗಜ-ಅಶ್ವ-ರಥಯೋಧಿಗಳ ಶರೀರ ಮತ್ತು ಶಿರಗಳು ತುಂಡು ತುಂಡಾಗಿ ಎಲ್ಲಾಕಡೆ ಬಿದ್ದಿದ್ದವು.

06112127a ಚನ್ನಮಾಯೋಧನಂ ರೇಜೇ ಕುಂಡಲಾಂಗದಧಾರಿಭಿಃ|

06112127c ಪತಿತೈಃ ಪಾತ್ಯಮಾನೈಶ್ಚ ರಾಜಪುತ್ರೈರ್ಮಹಾರಥೈಃ||

ಬಿದ್ದಿರುವ ಮತ್ತು ಬೀಳುತ್ತಿರುವ ಕುಂಡಲ-ಅಂಗದ ಧಾರಿ ಮಹಾರಥ ರಾಜಪುತ್ರರಿಂದ ರಣಭೂಮಿಯು ತುಂಬಿಹೋಗಿತ್ತು.

06112128a ರಥನೇಮಿನಿಕೃತ್ತಾಶ್ಚ ಗಜೈಶ್ಚೈವಾವಪೋಥಿತಾಃ|

06112128c ಪಾದಾತಾಶ್ಚಾಪ್ಯದೃಶ್ಯಂತ ಸಾಶ್ವಾಃ ಸಹಯಸಾದಿನಃ||

ರಥಗಳ ಗಾಲಿಗೆ ಸಿಲುಕಿ ತುಂಡಾಗಿದ್ದರು. ಆನೆಗಳ ತುಳಿತಕ್ಕೆ ಸಿಲುಕಿ ನುಜ್ಜಾಗಿದ್ದರು. ಅಶ್ವಗಳು ಮತ್ತು ಅಶ್ವಾರೋಹಿಗಳೊಂದಿಗೆ ಪದಾತಿಗಳು ಕಂಡುಬಂದರು.

06112129a ಗಜಾಶ್ವರಥಸಂಘಾಶ್ಚ ಪರಿಪೇತುಃ ಸಮಂತತಃ|

06112129c ವಿಶೀರ್ಣಾಶ್ಚ ರಥಾ ಭೂಮೌ ಭಗ್ನಚಕ್ರಯುಗಧ್ವಜಾಃ||

ಗಜ-ಅಶ್ವ-ರಥ ಸಂಘಗಳು ಎಲ್ಲಕಡೆ ಮುರಿದು ಬಿದ್ದಿದ್ದವು. ಭೂಮಿಯು ಮುರಿದ ರಥ, ಚಕ್ರ, ನೊಗ ಮತ್ತು ಧ್ವಜಗಳಿಂದ ಹರಡಿಹೋಗಿತ್ತು.

06112130a ತದ್ಗಜಾಶ್ವರಥೌಘಾನಾಂ ರುಧಿರೇಣ ಸಮುಕ್ಷಿತಂ|

06112130c ಚನ್ನಮಾಯೋಧನಂ ರೇಜೇ ರಕ್ತಾಭ್ರಮಿವ ಶಾರದಂ||

ಅಶ್ವ-ರಥಿ ಸೇನೆಗಳ ರಕ್ತದಿಂದ ತೋಯ್ದು ಹೋಡಿದ್ದ ಆ ರಣಭೂಮಿಯು ಶರದೃತುವಿನ ಕೆಂಪುಬಣ್ಣದ ಆಕಾಶದಂತೆ ಶೋಭಿಸಿತು.

06112131a ಶ್ವಾನಃ ಕಾಕಾಶ್ಚ ಗೃಧ್ರಾಶ್ಚ ವೃಕಾ ಗೋಮಾಯುಭಿಃ ಸಹ|

06112131c ಪ್ರಣೇದುರ್ಭಕ್ಷ್ಯಮಾಸಾದ್ಯ ವಿಕೃತಾಶ್ಚ ಮೃಗದ್ವಿಜಾಃ||

ನಾಯಿಗಳು, ಕಾಗೆಗಳು, ಹದ್ದುಗಳು, ತೋಳಗಳು, ನರಿಗಳು ಇವೇ ಮೊದಲಾದ ವಿಕಾಸ್ವರದ ಮೃಗಪಕ್ಷಿಗಳು ಭಕ್ಷಗಳನ್ನುಂಡು ಕೂಗಾಡಿದವು.

06112132a ವವುರ್ಬಹುವಿಧಾಶ್ಚೈವ ದಿಕ್ಷು ಸರ್ವಾಸು ಮಾರುತಾಃ|

06112132c ದೃಶ್ಯಮಾನೇಷು ರಕ್ಷಃಸು ಭೂತೇಷು ವಿನದತ್ಸು ಚ||

ರಾಕ್ಷಸರು ಮತ್ತು ಭೂತಗಳು ಗರ್ಜಿಸುತ್ತಿರುವುದು ಕಂಡುಬರಲು ಎಲ್ಲ ದಿಕ್ಕುಗಳಲ್ಲಿ ನಾನಾ ವಿಧದ ಗಾಳಿಗಳು ಬೀಸಿದವು.

06112133a ಕಾಂಚನಾನಿ ಚ ದಾಮಾನಿ ಪತಾಕಾಶ್ಚ ಮಹಾಧನಾಃ|

06112133c ಧೂಮಾಯಮಾನಾ ದೃಶ್ಯಂತೇ ಸಹಸಾ ಮಾರುತೇರಿತಾಃ||

ಕಾಂಚನದ ಮಾಲೆಗಳೂ, ಬೆಲೆಬಾಳುವ ಪತಾಕೆಗಳೂ ಗಾಳಿಯೊಂದಿಗೆ ಒಂದು ಕಡೆಯಿಂದ ಇನ್ನೊಂದು ಕಡೆ ಹಾರಾಡುತ್ತಿದ್ದು ಕಾಣುತ್ತಿತ್ತು.

06112134a ಶ್ವೇತಚ್ಛತ್ರಸಹಸ್ರಾಣಿ ಸಧ್ವಜಾಶ್ಚ ಮಹಾರಥಾಃ|

06112134c ವಿನಿಕೀರ್ಣಾಃ ಸ್ಮ ದೃಶ್ಯಂತೇ ಶತಶೋಽಥ ಸಹಸ್ರಶಃ|

06112134e ಸಪತಾಕಾಶ್ಚ ಮಾತಂಗಾ ದಿಶೋ ಜಗ್ಮುಃ ಶರಾತುರಾಃ||

ಸಹಸ್ರಾರು ಬಿಳಿಯ ಛತ್ರಗಳೂ, ಧ್ವಜಗಳೊಂದಿಗೆ ಮಹಾರಥಗಳು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಹರಡಿ ಬಿದ್ದಿರುವುದು ಕಾಣುತ್ತಿತ್ತು. ಶರಗಳಿಂದ ಪೀಡಿತರಾಗಿ ಆನೆಗಳು ಪತಾಕೆಗಳೊಂದಿಗೆ ದಿಕ್ಕಾಪಾಲಾದವು.

06112135a ಕ್ಷತ್ರಿಯಾಶ್ಚ ಮನುಷ್ಯೇಂದ್ರ ಗದಾಶಕ್ತಿಧನುರ್ಧರಾಃ|

06112135c ಸಮಂತತೋ ವ್ಯದೃಶ್ಯಂತ ಪತಿತಾ ಧರಣೀತಲೇ||

ಮನುಷ್ಯೇಂದ್ರ! ಗದ-ಶಕ್ತಿ-ಧನುಸ್ಸುಗಳನ್ನು ಹಿಡಿದಿದ್ದ ಕ್ಷತ್ರಿಯರು ಭೂಮಿಯ ಮೇಲೆ ಎಲ್ಲ ಕಡೆ ಬಿದ್ದಿರುವುದು ಕಾಣುತ್ತಿತ್ತು.

06112136a ತತೋ ಭೀಷ್ಮೋ ಮಹಾರಾಜ ದಿವ್ಯಮಸ್ತ್ರಮುದೀರಯನ್|

06112136c ಅಭ್ಯಧಾವತ ಕೌಂತೇಯಂ ಮಿಷತಾಂ ಸರ್ವಧನ್ವಿನಾಂ||

ಆಗ ಮಹಾರಾಜ! ಭೀಷ್ಮನು ದಿವ್ಯ ಅಸ್ತ್ರವನ್ನು ಪ್ರಕಟಿಸುತ್ತ ಸರ್ವಧನ್ವಿಗಳೂ ನೋಡುತ್ತಿದ್ದಂತೆ, ಕೌಂತೇಯನನ್ನು ಆಕ್ರಮಿಸಿದನು.

06112137a ತಂ ಶಿಖಂಡೀ ರಣೇ ಯತ್ತಮಭ್ಯಧಾವತ ದಂಶಿತಃ|

06112137c ಸಂಜಹಾರ ತತೋ ಭೀಷ್ಮಸ್ತದಸ್ತ್ರಂ ಪಾವಕೋಪಮಂ||

ಆದರೆ ರಣದಲ್ಲಿ ಅವನನ್ನು ಕವಚಧಾರಿಯಾದ ಶಿಖಂಡಿಯು ಎದುರಿಸಲು ಭೀಷ್ಮನು ಪಾವಕೋಪಮ ಅಸ್ತ್ರವನ್ನು ಹಿಂತೆಗೆದುಕೊಂಡನು.

06112138a ಏತಸ್ಮಿನ್ನೇವ ಕಾಲೇ ತು ಕೌಂತೇಯಃ ಶ್ವೇತವಾಹನಃ|

06112138c ನಿಜಘ್ನೇ ತಾವಕಂ ಸೈನ್ಯಂ ಮೋಹಯಿತ್ವಾ ಪಿತಾಮಹಂ||

ಇದೇ ಸಮಯದಲ್ಲಿ ಕೌಂತೇಯ ಶ್ವೇತವಾಹನನು ಪಿತಾಮಹನನ್ನು ದಿಗ್ಭ್ರಮೆಗೊಳಿಸುತ್ತಾ ನಿನ್ನ ಸೇನೆಯನ್ನು ಸಂಹರಿಸಿದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಂಕುಲಯುದ್ಧೇ ದ್ವಾದಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ನೂರಾಹನ್ನೆರಡನೇ ಅಧ್ಯಾಯವು.

Image result for indian motifs against white background

Comments are closed.