Bhishma Parva: Chapter 111

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೧೧

ರಣದಲ್ಲಿ ಹೋರಾಡುತ್ತಿರುವಾಗ ಬೇಗನೆ ತನ್ನ ವಧೆಯಾಗಬೇಕೆಂದು ಇಚ್ಛಿಸಿ, ಸಂಗ್ರಾಮದಲ್ಲಿ ಮಾನವಶ್ರೇಷ್ಠರನ್ನು ಇನ್ನು ಕೊಲ್ಲಬಾರದೆಂದು ಆಲೋಚಿಸಿ ಭೀಷ್ಮನು ಯುಧಿಷ್ಠಿರನಿಗೆ ತನ್ನನ್ನು ವಧಿಸಲು ಆದೇಶವಿತ್ತುದುದು (೧-೧೫). ಶಿಖಂಡಿಯನ್ನೂ ಧನಂಜಯನನ್ನೂ ಮುಂದಿಟ್ಟುಕೊಂಡು ಭೀಷ್ಮನನ್ನು ಕೆಡುವಲು ಪರಮ ಯತ್ನದಲ್ಲಿ ತೊಡಗಿದುದು (೧೬-೪೩).

06111001 ಧೃತರಾಷ್ಟ್ರ ಉವಾಚ|

06111001a ಕಥಂ ಶಾಂತನವೋ ಭೀಷ್ಮೋ ದಶಮೇಽಹನಿ ಸಂಜಯ|

06111001c ಅಯುಧ್ಯತ ಮಹಾವೀರ್ಯೈಃ ಪಾಂಡವೈಃ ಸಹಸೃಂಜಯೈಃ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಹತ್ತನೆಯ ದಿನ ಶಾಂತನವ ಭೀಷ್ಮನು ಸೃಂಜಯರೊಂದಿಗಿದ್ದ ಮಾಹಾವೀರ ಪಾಂಡವರೊಂದಿಗೆ ಹೇಗೆ ಯುದ್ಧಮಾಡಿದನು?

06111002a ಕುರವಶ್ಚ ಕಥಂ ಯುದ್ಧೇ ಪಾಂಡವಾನ್ಪ್ರತ್ಯವಾರಯನ್|

06111002c ಆಚಕ್ಷ್ವ ಮೇ ಮಹಾಯುದ್ಧಂ ಭೀಷ್ಮಸ್ಯಾಹವಶೋಭಿನಃ||

ಕುರುಗಳೂ ಕೂಡ ಪಾಂಡವರನ್ನು ತಡೆದು ಹೇಗೆ ಯುದ್ಧ ಮಾಡಿದರು? ಆಹವಶೋಭಿ ಭೀಷ್ಮನ ಮಹಾಯುದ್ಧದ ಕುರಿತು ನನಗೆ ಹೇಳು.”

06111003 ಸಂಜಯ ಉವಾಚ|

06111003a ಕುರವಃ ಪಾಂಡವೈಃ ಸಾರ್ಧಂ ಯಥಾಯುಧ್ಯಂತ ಭಾರತ|

06111003c ಯಥಾ ಚ ತದಭೂದ್ಯುದ್ಧಂ ತತ್ತೇ ವಕ್ಷ್ಯಾಮಿ ಶೃಣ್ವತಃ||

ಸಂಜಯನು ಹೇಳಿದನು: “ಭಾರತ! ಪಾಂಡವರೊಂದಿಗೆ ಕೌರವರು ಹೇಗೆ ಯುದ್ಧಮಾಡಿದರು ಎನ್ನುವುದನ್ನು ಆ ಯುದ್ಧವು ನಡೆದಹಾಗೆ ನಿನಗೆ ಹೇಳುತ್ತೇನೆ. ಕೇಳಬೇಕು.

06111004a ಪ್ರೇಷಿತಾಃ ಪರಲೋಕಾಯ ಪರಮಾಸ್ತ್ರೈಃ ಕಿರೀಟಿನಾ|

06111004c ಅಹನ್ಯಹನಿ ಸಂಪ್ರಾಪ್ತಾಸ್ತಾವಕಾನಾಂ ರಥವ್ರಜಾಃ||

ಅನುದಿನವೂ ಕಿರೀಟಿಯು ನಿನ್ನವರ ಮಹಾರಥರನ್ನು ಪರಮಾಸ್ತ್ರಗಳಿಂದ ಪರಲೋಕಕ್ಕೆ ಕಳುಹಿಸುತ್ತಿದ್ದನು.

06111005a ಯಥಾಪ್ರತಿಜ್ಞಂ ಕೌರವ್ಯಃ ಸ ಚಾಪಿ ಸಮಿತಿಂಜಯಃ|

06111005c ಪಾರ್ಥಾನಾಮಕರೋದ್ಭೀಷ್ಮಃ ಸತತಂ ಸಮಿತಿಕ್ಷಯಂ||

ಕೌರವ್ಯ ಸಮಿತಿಂಜಯ ಭೀಷ್ಮನೂ ಕೂಡ ಪ್ರತಿಜ್ಞೆಮಾಡಿದಂತೆ ಸತತವಾಗಿ ಪಾಂಡವರ ಸೇನಾನಾಶವನ್ನು ಮಾಡಿದನು.

06111006a ಕುರುಭಿಃ ಸಹಿತಂ ಭೀಷ್ಮಂ ಯುಧ್ಯಮಾನಂ ಮಹಾರಥಂ|

06111006c ಅರ್ಜುನಂ ಚ ಸಪಾಂಚಾಲ್ಯಂ ದೃಷ್ಟ್ವಾ ಸಂಶಯಿತಾ ಜನಾಃ||

ಕುರುಗಳ ಸಹಿತ ಯುದ್ಧಮಾಡುತ್ತಿರುವ ಮಹಾರಥ ಭೀಷ್ಮ ಮತ್ತು ಪಾಂಚಾಲರನ್ನು ಸೇರಿ ಯುದ್ಧಮಾಡುತ್ತಿರುವ ಅರ್ಜುನನ್ನು ನೋಡಿ ಜನರು ಸಂಶಯಪಟ್ಟರು.

06111007a ದಶಮೇಽಹನಿ ತಸ್ಮಿಂಸ್ತು ಭೀಷ್ಮಾರ್ಜುನಸಮಾಗಮೇ|

06111007c ಅವರ್ತತ ಮಹಾರೌದ್ರಃ ಸತತಂ ಸಮಿತಿಕ್ಷಯಃ||

ಆ ಹತ್ತನೆಯ ದಿವಸವಾದರೋ ಭೀಷ್ಮಾರ್ಜುನರ ಸಮಾಗಮದಲ್ಲಿ ಸತತವಾದ ಮಹಾರೌದ್ರ ಸೇನೆಗಳ ವಿನಾಶವು ನಡೆಯಿತು.

06111008a ತಸ್ಮಿನ್ನಯುತಶೋ ರಾಜನ್ಭೂಯಶ್ಚ ಸ ಪರಂತಪಃ|

06111008c ಭೀಷ್ಮಃ ಶಾಂತನವೋ ಯೋಧಾಂ ಜಘಾನ ಪರಮಾಸ್ತ್ರವಿತ್||

ರಾಜನ್! ಪರಂತಪ ಪರಮಾಸ್ತ್ರವಿದು ಭೀಷ್ಮ ಶಾಂತನವನು ಹತ್ತು ಸಾವಿರಕ್ಕೂ ಹೆಚ್ಚು ಯೋಧರನ್ನು ಸಂಹರಿಸಿದನು.

06111009a ಯೇಷಾಮಜ್ಞಾತಕಲ್ಪಾನಿ ನಾಮಗೋತ್ರಾಣಿ ಪಾರ್ಥಿವ|

06111009c ತೇ ಹತಾಸ್ತತ್ರ ಭೀಷ್ಮೇಣ ಶೂರಾಃ ಸರ್ವೇಽನಿವರ್ತಿನಃ||

ಪಾರ್ಥಿವ! ಕೊನೆಯವರೆಗೂ ಅವರ ನಾಮ ಗೋತ್ರಗಳು ತಿಳಿಯದೇ ಇದ್ದ, ಪಲಾಯನ ಮಾಡದೇ ಇದ್ದ ಶೂರರು ಭೀಷ್ಮನಿಂದ ಅಲ್ಲಿ ಹತರಾದರು.

06111010a ದಶಾಹಾನಿ ತತಸ್ತಪ್ತ್ವಾ ಭೀಷ್ಮಃ ಪಾಂಡವವಾಹಿನೀಂ|

06111010c ನಿರವಿದ್ಯತ ಧರ್ಮಾತ್ಮಾ ಜೀವಿತೇನ ಪರಂತಪಃ||

ಹತ್ತನೆಯ ದಿವಸ ಧರ್ಮಾತ್ಮಾ ಪರಂತಪ ಭೀಷ್ಮನು ಪಾಂಡವ ವಾಹಿನಿಯನ್ನು ಪರಿತಪಿಸಿ ಕೊನೆಗೆ ತನ್ನ ಜೀವಿತದಿಂದ ನಿರ್ವೇದಹೊಂದಿದನು.

06111011a ಸ ಕ್ಷಿಪ್ರಂ ವಧಮನ್ವಿಚ್ಛನ್ನಾತ್ಮನೋಽಭಿಮುಖಂ ರಣೇ|

06111011c ನ ಹನ್ಯಾಂ ಮಾನವಶ್ರೇಷ್ಠಾನ್ಸಂಗ್ರಾಮೇಽಭಿಮುಖಾನಿತಿ||

06111012a ಚಿಂತಯಿತ್ವಾ ಮಹಾಬಾಹುಃ ಪಿತಾ ದೇವವ್ರತಸ್ತವ|

06111012c ಅಭ್ಯಾಶಸ್ಥಂ ಮಹಾರಾಜ ಪಾಂಡವಂ ವಾಕ್ಯಮಬ್ರವೀತ್||

ಮಹಾರಾಜ! ರಣದಲ್ಲಿ ಹೋರಾಡುತ್ತಿರುವಾಗ ಬೇಗನೆ ತನ್ನ ವಧೆಯಾಗಬೇಕೆಂದು ಇಚ್ಛಿಸಿ, ಸಂಗ್ರಾಮದಲ್ಲಿ ಮಾನವಶ್ರೇಷ್ಠರನ್ನು ಇನ್ನು ಕೊಲ್ಲಬಾರದೆಂದು ಆಲೋಚಿಸಿ ನಿನ್ನ ಪಿತ ಮಹಾಬಾಹು ದೇವವ್ರತನು ಸಮೀಪದಲ್ಲಿದ್ದ ಪಾಂಡವನಿಗೆ ಹೇಳಿದನು:

06111013a ಯುಧಿಷ್ಠಿರ ಮಹಾಪ್ರಾಜ್ಞ ಸರ್ವಶಾಸ್ತ್ರವಿಶಾರದ|

06111013c ಶೃಣು ಮೇ ವಚನಂ ತಾತ ಧರ್ಮ್ಯಂ ಸ್ವರ್ಗ್ಯಂ ಚ ಜಲ್ಪತಃ||

“ಯುಧಿಷ್ಠಿರ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ಮಗೂ! ಧರ್ಮವನ್ನೂ ಸ್ವರ್ಗವನ್ನೂ ನೀಡುವ ನನ್ನ ಮಾತುಗಳನ್ನು ಕೇಳು.

06111014a ನಿರ್ವಿಣ್ಣೋಽಸ್ಮಿ ಭೃಶಂ ತಾತ ದೇಹೇನಾನೇನ ಭಾರತ|

06111014c ಘ್ನತಶ್ಚ ಮೇ ಗತಃ ಕಾಲಃ ಸುಬಹೂನ್ಪ್ರಾಣಿನೋ ರಣೇ||

ಮಗೂ! ಭಾರತ! ಈ ದೇಹದಿಂದ ತುಂಬಾ ನಿರ್ವಿಣ್ಣನಾಗಿದ್ದೇನೆ. ಅನೇಕ ಪ್ರಾಣಿಗಳನ್ನು ರಣದಲ್ಲಿ ಕೊಲ್ಲುವುದರಲ್ಲಿಯೇ ನನ್ನ ಕಾಲವು ಕಳೆದು ಹೋಯಿತು.

06111015a ತಸ್ಮಾತ್ಪಾರ್ಥಂ ಪುರೋಧಾಯ ಪಾಂಚಾಲಾನ್ಸೃಂಜಯಾಂಸ್ತಥಾ|

06111015c ಮದ್ವಧೇ ಕ್ರಿಯತಾಂ ಯತ್ನೋ ಮಮ ಚೇದಿಚ್ಛಸಿ ಪ್ರಿಯಂ||

ಆದುದರಿಂದ ನನಗೆ ಪ್ರಿಯವಾದುದನ್ನು ಮಾಡಲು ಬಯಸಿದರೆ ಪಾರ್ಥನನ್ನು, ಪಾಂಚಾಲರನ್ನು ಮತ್ತು ಸೃಂಜಯರನ್ನು ಮುಂದಿಟ್ಟುಕೊಂಡು ನನ್ನ ವಧೆಗೆ ಪ್ರಯತ್ನ ಮಾಡು.”

06111016a ತಸ್ಯ ತನ್ಮತಮಾಜ್ಞಾಯ ಪಾಂಡವಃ ಸತ್ಯದರ್ಶನಃ|

06111016c ಭೀಷ್ಮಂ ಪ್ರತಿಯಯೌ ಯತ್ತಃ ಸಂಗ್ರಾಮೇ ಸಹ ಸೃಂಜಯೈಃ||

ಅವನ ಆ ಅಭಿಪ್ರಾಯವನ್ನು ತಿಳಿದುಕೊಂಡು ಸತ್ಯದರ್ಶನ ಪಾಂಡವನು ಸೃಂಜಯರೊಡಗೂಡಿ ಸಂಗ್ರಾಮದಲ್ಲಿ ಭೀಷ್ಮನನ್ನು ಎದುರಿಸಿದನು.

06111017a ಧೃಷ್ಟದ್ಯುಮ್ನಸ್ತತೋ ರಾಜನ್ಪಾಂಡವಶ್ಚ ಯುಧಿಷ್ಠಿರಃ|

06111017c ಶ್ರುತ್ವಾ ಭೀಷ್ಮಸ್ಯ ತಾಂ ವಾಚಂ ಚೋದಯಾಮಾಸತುರ್ಬಲಂ||

ರಾಜನ್! ಭೀಷ್ಮನ ಆ ಮಾತನ್ನು ಕೇಳಿ ಧೃಷ್ಟದ್ಯುಮ್ನ ಮತ್ತು ಪಾಂಡವ ಯುಧಿಷ್ಠಿರರು ತಮ್ಮ ಚತುರ್ಬಲವನ್ನು ಪ್ರಚೋದಿಸಿದರು.

06111018a ಅಭಿದ್ರವತ ಯುಧ್ಯಧ್ವಂ ಭೀಷ್ಮಂ ಜಯತ ಸಂಯುಗೇ|

06111018c ರಕ್ಷಿತಾಃ ಸತ್ಯಸಂಧೇನ ಜಿಷ್ಣುನಾ ರಿಪುಜಿಷ್ಣುನಾ||

“ಮುನ್ನುಗ್ಗಿ ಭೀಷ್ಮನೊಂದಿಗೆ ಯುದ್ಧಮಾಡಿ! ಸತ್ಯಸಂಧ ರಿಪುಜಿಷ್ಣು ಜಿಷ್ಣುವಿನಿಂದ ರಕ್ಷಿತರಾಗಿ ಸಂಯುಗದಲ್ಲಿ ವಿಜಯಿಗಳಾಗಿ!

06111019a ಅಯಂ ಚಾಪಿ ಮಹೇಷ್ವಾಸಃ ಪಾರ್ಷತೋ ವಾಹಿನೀಪತಿಃ|

06111019c ಭೀಮಸೇನಶ್ಚ ಸಮರೇ ಪಾಲಯಿಷ್ಯತಿ ವೋ ಧ್ರುವಂ||

ಈ ವಾಹಿನೀಪತಿ ಮಹೇಷ್ವಾಸ ಪಾರ್ಷತನೂ ಭೀಮಸೇನನೂ ಸಮರದಲ್ಲಿ ನಿಮ್ಮನ್ನು ನಿಶ್ಚಯವಾಗಿಯೂ ಪಾಲಿಸುತ್ತಾರೆ.

06111020a ನ ವೈ ಭೀಷ್ಮಾದ್ಭಯಂ ಕಿಂ ಚಿತ್ಕರ್ತವ್ಯಂ ಯುಧಿ ಸೃಂಜಯಾಃ|

06111020c ಧ್ರುವಂ ಭೀಷ್ಮಂ ವಿಜೇಷ್ಯಾಮಃ ಪುರಸ್ಕೃತ್ಯ ಶಿಖಂಡಿನಂ||

ಸೃಂಜಯರೇ! ಭೀಷ್ಮನಿಗೆ ಸ್ವಲ್ಪವೂ ಹೆದರದೇ ಕರ್ತವ್ಯವೆಂದು ಯುದ್ಧಮಾಡಿ. ಶಿಖಂಡಿಯನ್ನು ಮುಂದಿಟ್ಟುಕೊಂಡು ಖಂಡಿತವಾಗಿಯೂ ಭೀಷ್ಮನನ್ನು ಜಯಿಸುತ್ತೇವೆ!”

06111021a ತಥಾ ತು ಸಮಯಂ ಕೃತ್ವಾ ದಶಮೇಽಹನಿ ಪಾಂಡವಾಃ|

06111021c ಬ್ರಹ್ಮಲೋಕಪರಾ ಭೂತ್ವಾ ಸಂಜಗ್ಮುಃ ಕ್ರೋಧಮೂರ್ಚಿತಾಃ||

ಹೀಗೆ ಒಪ್ಪಂದವನ್ನು ಮಾಡಿಕೊಂಡು ಹತ್ತನೆಯ ದಿನ ಪಾಂಡವರು ಬ್ರಹ್ಮಲೋಕಪರರಾಗಿ ಕ್ರೋಧ ಮೂರ್ಛಿತರಾದರು.

06111022a ಶಿಖಂಡಿನಂ ಪುರಸ್ಕೃತ್ಯ ಪಾಂಡವಂ ಚ ಧನಂಜಯಂ|

06111022c ಭೀಷ್ಮಸ್ಯ ಪಾತನೇ ಯತ್ನಂ ಪರಮಂ ತೇ ಸಮಾಸ್ಥಿತಾಃ||

ಶಿಖಂಡಿಯನ್ನೂ ಪಾಂಡವ ಧನಂಜಯನನ್ನೂ ಮುಂದಿಟ್ಟುಕೊಂಡು ಭೀಷ್ಮನನ್ನು ಕೆಡುವಲು ಪರಮ ಯತ್ನದಲ್ಲಿ ತೊಡಗಿದರು.

06111023a ತತಸ್ತವ ಸುತಾದಿಷ್ಟಾ ನಾನಾಜನಪದೇಶ್ವರಾಃ|

06111023c ದ್ರೋಣೇನ ಸಹಪುತ್ರೇಣ ಸಹಸೇನಾ ಮಹಾಬಲಾಃ||

06111024a ದುಃಶಾಸನಶ್ಚ ಬಲವಾನ್ಸಹ ಸರ್ವೈಃ ಸಹೋದರೈಃ|

06111024c ಭೀಷ್ಮಂ ಸಮರಮಧ್ಯಸ್ಥಂ ಪಾಲಯಾಂ ಚಕ್ರಿರೇ ತದಾ||

ಆಗ ನಿನ್ನ ಮಗನಿಂದ ನಿರ್ದೇಷಿಸಲ್ಪಟ್ಟ ನಾನಾ ಜನಪದೇಶ್ವರರು ದ್ರೋಣ ಪುತ್ರನ ಸಹಾಯದಿಂದ ಮಹಾಬಲಶಾಲಿ ಸೇನೆಗಳೊಂದಿಗೆ, ಬಲವಾನ್ ದುಃಶಾಸನ ಮತ್ತು ಎಲ್ಲ ಸಹೋದರರೊಂದಿಗೆ ಸಮರದ ಮಧ್ಯದಲ್ಲಿದ್ದ ಭೀಷ್ಮನನ್ನು ರಕ್ಷಿಸುವುದರಲ್ಲಿ ತೊಡಗಿದರು.

06111025a ತತಸ್ತು ತಾವಕಾಃ ಶೂರಾಃ ಪುರಸ್ಕೃತ್ಯ ಯತವ್ರತಂ|

06111025c ಶಿಖಂಡಿಪ್ರಮುಖಾನ್ಪಾರ್ಥಾನ್ಯೋಧಯಂತಿ ಸ್ಮ ಸಂಯುಗೇ||

ಆಗ ನಿನ್ನವರ ಶೂರರು ಯತವ್ರತನನ್ನು ಮುಂದಿರಿಸಿಕೊಂಡು ಶಿಖಂಡಿಪ್ರಮುಖರಾದ ಪಾರ್ಥರನ್ನು ಸಂಯುಗದಲ್ಲಿ ಎದುರಿಸಿ ಯುದ್ಧಮಾಡಿದರು.

06111026a ಚೇದಿಭಿಶ್ಚ ಸಪಾಂಚಾಲೈಃ ಸಹಿತೋ ವಾನರಧ್ವಜಃ|

06111026c ಯಯೌ ಶಾಂತನವಂ ಭೀಷ್ಮಂ ಪುರಸ್ಕೃತ್ಯ ಶಿಖಂಡಿನಂ||

ಚೇದಿ ಮತ್ತು ಪಾಂಚಾಲರನ್ನು ಒಡಗೂಡಿ, ಶಿಖಂಡಿಯನ್ನು ಮುಂದಿಟ್ಟುಕೊಂಡು ವಾನರಧ್ವಜನು ಶಾಂತನವ ಭೀಷ್ಮನಲ್ಲಿಗೆ ಬಂದನು.

06111027a ದ್ರೋಣಪುತ್ರಂ ಶಿನೇರ್ನಪ್ತಾ ಧೃಷ್ಟಕೇತುಸ್ತು ಪೌರವಂ|

06111027c ಯುಧಾಮನ್ಯುಃ ಸಹಾಮಾತ್ಯಂ ದುರ್ಯೋಧನಮಯೋಧಯತ್||

ದ್ರೋಣಪುತ್ರನು ಶಿನಿಯನ್ನು, ಧೃಷ್ಟಕೇತುವು ಪೌರವನನ್ನು, ಅಮಾತ್ಯನೊಂದಿಗೆ ಯುಧಾಮನ್ಯುವು ದುರ್ಯೋಧನನೊಡನೆ ಯುದ್ಧಮಾಡಿದರು.

06111028a ವಿರಾಟಸ್ತು ಸಹಾನೀಕಃ ಸಹಸೇನಂ ಜಯದ್ರಥಂ|

06111028c ವೃದ್ಧಕ್ಷತ್ರಸ್ಯ ದಾಯಾದಮಾಸಸಾದ ಪರಂತಪಃ||

ಸೇನೆಗಳೊಂದಿಗೆ ಪರಂತಪ ವಿರಾಟನು ಸೇನೆಗಳೊಂದಿಗೆ ವೃದ್ದಕ್ಷತ್ರನ ಮಗ ಜಯದ್ರಥನನ್ನು ಎದುರಿಸಿದನು.

06111029a ಮದ್ರರಾಜಂ ಮಹೇಷ್ವಾಸಂ ಸಹಸೈನ್ಯಂ ಯುಧಿಷ್ಠಿರಃ|

06111029c ಭೀಮಸೇನಾಭಿಗುಪ್ತಶ್ಚ ನಾಗಾನೀಕಮುಪಾದ್ರವತ್||

ಸೇನೆಯೊಡನಿದ್ದ ಮಹೇಷ್ವಾಸ ಮದ್ರರಾಜನನ್ನು ಯುಧಿಷ್ಠಿರ ಮತ್ತು ಸುರಕ್ಷಿತ ಭೀಮಸೇನನು ಗಜಸೇನೆಗಳನ್ನು ಎದುರಿಸಿದರು.

06111030a ಅಪ್ರಧೃಷ್ಯಮನಾವಾರ್ಯಂ ಸರ್ವಶಸ್ತ್ರಭೃತಾಂ ವರಂ|

06111030c ದ್ರೋಣಂ ಪ್ರತಿ ಯಯೌ ಯತ್ತಃ ಪಾಂಚಾಲ್ಯಃ ಸಹ ಸೋಮಕೈಃ||

ದೂರಸರಿಸಲು ಅಸಾಧ್ಯನಾದ, ತಡೆಯಲು ಅಸಾಧ್ಯನಾದ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣನೊಂದಿಗೆ ಯದ್ಧಮಾಡಲು ಸೋಮಕರೊಂದಿಗೆ ಪಾಂಚಾಲ್ಯನು ಬಂದನು.

06111031a ಕರ್ಣಿಕಾರಧ್ವಜಂ ಚಾಪಿ ಸಿಂಹಕೇತುರರಿಂದಮಃ|

06111031c ಪ್ರತ್ಯುಜ್ಜಗಾಮ ಸೌಭದ್ರಂ ರಾಜಪುತ್ರೋ ಬೃಹದ್ಬಲಃ||

ಸಿಂಹಕೇತು ಅರಿಂದಮ ಬೃಹದ್ಬಲನು ಕರ್ಣಿಕಾರಧ್ವಜ, ರಾಜಪುತ್ರ ಸೌಭದ್ರನನ್ನು ಎದುರಿಸಿದನು.

06111032a ಶಿಖಂಡಿನಂ ಚ ಪುತ್ರಾಸ್ತೇ ಪಾಂಡವಂ ಚ ಧನಂಜಯಂ|

06111032c ರಾಜಭಿಃ ಸಮರೇ ಸಾರ್ಧಮಭಿಪೇತುರ್ಜಿಘಾಂಸವಃ||

ಶಿಖಂಡಿಯನ್ನು ಮತ್ತು ಪಾಂಡವ ಧನಂಜಯನನ್ನು ಕೊಲ್ಲಲು ನಿನ್ನ ಪುತ್ರರು ರಾಜರೊಂದಿಗೆ ಅವರ ಸಮೀಪ ಬಂದರು.

06111033a ತಸ್ಮಿನ್ನತಿಮಹಾಭೀಮೇ ಸೇನಯೋರ್ವೈ ಪರಾಕ್ರಮೇ|

06111033c ಸಂಪ್ರಧಾವತ್ಸ್ವನೀಕೇಷು ಮೇದಿನೀ ಸಮಕಂಪತ||

ಆ ಅತಿ ಮಹಾಭಯಂಕರ ಯುದ್ಧದಲ್ಲಿ ಪರಾಕ್ರಮದಿಂದ ಮೇಲೆ ಬೀಳುತ್ತಿದ್ದ ಸೇನೆಗಳಿಂದ ಮೇದಿನಿಯು ಕಂಪಿಸಿತು.

06111034a ತಾನ್ಯನೀಕಾನ್ಯನೀಕೇಷು ಸಮಸಜ್ಜಂತ ಭಾರತ|

06111034c ತಾವಕಾನಾಂ ಪರೇಷಾಂ ಚ ದೃಷ್ಟ್ವಾ ಶಾಂತನವಂ ರಣೇ||

ರಣದಲ್ಲಿ ಶಾಂತನವನನ್ನು ನೋಡಿ ನಿನ್ನವರ ಸೇನೆಗಳು ಮತ್ತು ಶತ್ರುಗಳ ಸೇನೆಗಳ ನಡುವೆ ಯುದ್ಧವು ನಡೆಯಿತು.

06111035a ತತಸ್ತೇಷಾಂ ಪ್ರಯತತಾಮನ್ಯೋನ್ಯಮಭಿಧಾವತಾಂ|

06111035c ಪ್ರಾದುರಾಸೀನ್ಮಹಾನ್ ಶಬ್ದೋ ದಿಕ್ಷು ಸರ್ವಾಸು ಭಾರತ||

ಭಾರತ! ಆಗ ಅನ್ಯೋನ್ಯರ ಮೇಲೆ ಆಕ್ರಮಿಸಿ ಬರಲು ಪ್ರಯತ್ನಿಸುತ್ತಿದ್ದ ಅವರ ಮಹಾ ಶಬ್ಧವು ಎಲ್ಲ ದಿಕ್ಕುಗಳಲ್ಲಿಯೂ ಮೊಳಗಿತು.

06111036a ಶಂಖದುಂದುಭಿಘೋಷೈಶ್ಚ ವಾರಣಾನಾಂ ಚ ಬೃಂಹಿತೈಃ|

06111036c ಸಿಂಹನಾದೈಶ್ಚ ಸೈನ್ಯಾನಾಂ ದಾರುಣಃ ಸಮಪದ್ಯತ||

ಶಂಖ-ದುಂದುಭಿಗಳ ಘೋಷ, ಆನೆಗಳ ಘೀಳಿಡುವಿಕೆ ಮತ್ತು ಸೈನ್ಯಗಳ ಸಿಂಹನಾದಗಳು ದಾರುಣವೆನಿಸಿದವು.

06111037a ಸಾ ಚ ಸರ್ವನರೇಂದ್ರಾಣಾಂ ಚಂದ್ರಾರ್ಕಸದೃಶೀ ಪ್ರಭಾ|

06111037c ವೀರಾಂಗದಕಿರೀಟೇಷು ನಿಷ್ಪ್ರಭಾ ಸಮಪದ್ಯತ||

ಎಲ್ಲ ನರೇಂದ್ರರ ಚಂದ್ರಾರ್ಕಸದೃಶ ಪ್ರಭೆಯಿದ್ದ ವೀರ ಅಂಗದ ಕಿರೀಟಗಳು ನಿಷ್ಪ್ರಭೆಗೊಂಡವು.

06111038a ರಜೋಮೇಘಾಶ್ಚ ಸಂಜಜ್ಞುಃ ಶಸ್ತ್ರವಿದ್ಯುದ್ಭಿರಾವೃತಾಃ|

06111038c ಧನುಷಾಂ ಚೈವ ನಿರ್ಘೋಷೋ ದಾರುಣಃ ಸಮಪದ್ಯತ||

ಮೇಲೆದ್ದ ಧೂಳು ಶಸ್ತ್ರಗಳ ವಿದ್ಯುತ್ತಿನಿಂದ ಆವೃತವಾಗಿ, ಧನುಸ್ಸುಗಳ ನಿರ್ಘೋಷಗಳೊಂದಿಗೆ ದಾರುಣವಾದವು.

06111039a ಬಾಣಶಂಖಪ್ರಣಾದಾಶ್ಚ ಭೇರೀಣಾಂ ಚ ಮಹಾಸ್ವನಾಃ|

06111039c ರಥಘೋಷಶ್ಚ ಸಂಜಗ್ಮುಃ ಸೇನಯೋರುಭಯೋರಪಿ||

ಎರಡೂ ಸೇನೆಗಳಲ್ಲಿ ಬಾಣ, ಶಂಖ, ಪ್ರಣಾದ ಮತ್ತು ಭೇರಿಗಳ ಮಹಾಸ್ವನಗಳು ರಥಘೋಷದೊಂದಿಗೆ ಸೇರಿಕೊಂಡವು.

06111040a ಪ್ರಾಸಶಕ್ತ್ಯೃಷ್ಟಿಸಂಘೈಶ್ಚ ಬಾಣೌಘೈಶ್ಚ ಸಮಾಕುಲಂ|

06111040c ನಿಷ್ಪ್ರಕಾಶಮಿವಾಕಾಶಂ ಸೇನಯೋಃ ಸಮಪದ್ಯತ||

ಪ್ರಾಸ-ಶಕ್ತಿ-ಋಷ್ಟಿ ಸಂಘಗಳಿಂದ ಮತ್ತು ಬಾಣಗಳ ರಾಶಿಯಿಂದ ಸೇರಿ ಸೇನೆಗಳಲ್ಲಿ ಆಕಾಶದಲ್ಲಿ ಬೆಳಕೇ ಇಲ್ಲದಂತಾಯಿತು.

06111041a ಅನ್ಯೋನ್ಯಂ ರಥಿನಃ ಪೇತುರ್ವಾಜಿನಶ್ಚ ಮಹಾಹವೇ|

06111041c ಕುಂಜರಾಃ ಕುಂಜರಾಂ ಜಘ್ನುಃ ಪದಾತೀಂಶ್ಚ ಪದಾತಯಃ||

ಮಹಾಹವದಲ್ಲಿ ರಥಿಕರು ಮತ್ತು ಅಶ್ವಾರೋಹಿಗಳು ಅನ್ಯೋನ್ಯರನ್ನು ಯುದ್ಧಮಾಡುತ್ತಿದ್ದರು. ಆನೆಗಳು ಆನೆಗಳನ್ನು ಮತ್ತು ಪದಾತಿಗಳು ಪದಾತಿಗಳನ್ನು ಸಂಹರಿಸಿದರು.

06111042a ತದಾಸೀತ್ಸುಮಹದ್ಯುದ್ಧಂ ಕುರೂಣಾಂ ಪಾಂಡವೈಃ ಸಹ|

06111042c ಭೀಷ್ಮಹೇತೋರ್ನರವ್ಯಾಘ್ರ ಶ್ಯೇನಯೋರಾಮಿಷೇ ಯಥಾ||

ನರವ್ಯಾಘ್ರ! ಮಾಂಸದ ತುಂಡಿಗಾಗಿ ಗಿಡುಗಗಳು ಹೋರಾಡುವಂತೆ ಭೀಷ್ಮನ ಸಲುವಾಗಿ ಪಾಂಡವರೊಂದಿಗೆ ಕುರುಗಳ ಆ ಮಹಾಯುದ್ಧವು ನಡೆಯಿತು.

06111043a ತಯೋಃ ಸಮಾಗಮೋ ಘೋರೋ ಬಭೂವ ಯುಧಿ ಭಾರತ|

06111043c ಅನ್ಯೋನ್ಯಸ್ಯ ವಧಾರ್ಥಾಯ ಜಿಗೀಷೂಣಾಂ ರಣಾಜಿರೇ||

ಭಾರತ! ರಣರಂಗದಲ್ಲಿ ಅನ್ಯೋನ್ಯರನ್ನು ವಧಿಸಲು ಬಯಸಿದ ಅವರೀರ್ವರ ಸಮಾಗಮವು ಘೋರ ಯುದ್ಧವಾಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮೋಪದೇಶೇ ಏಕಾದಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮೋಪದೇಶ ಎನ್ನುವ ನೂರಾಹನ್ನೊಂದನೇ ಅಧ್ಯಾಯವು.

Image result for indian motifs against white background

Comments are closed.