Bhishma Parva: Chapter 109

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೦೯

ಭಗದತ್ತ, ಕೃಪ, ಶಲ್ಯ, ಕೃತವರ್ಮ, ಅವಂತಿಯ ವಿಂದಾನುವಿಂದರು, ಜಯದ್ರಥ, ಚಿತ್ರಸೇನ, ವಿಕರ್ಣ ಮತ್ತು ದುರ್ಮರ್ಷಣ ಈ ಹತ್ತು ಕೌರವ ಯೋಧರೊಂದಿಗೆ ಭೀಮಸೇನನ ಯುದ್ಧ (೧-೪೦). ಅರ್ಜುನನು ಭೀಮಸೇನನನ್ನು ಸೇರಲು ದುರ್ಯೋಧನನು ಸುಶರ್ಮನನ್ನು ಭೀಮಾರ್ಜುನರ ವಧೆಗೆ ಕಳುಹಿಸಿದುದು (೪೧-೪೮).

06109001 ಸಂಜಯ ಉವಾಚ|

06109001a ಭಗದತ್ತಃ ಕೃಪಃ ಶಲ್ಯಃ ಕೃತವರ್ಮಾ ಚ ಸಾತ್ವತಃ|

06109001c ವಿಂದಾನುವಿಂದಾವಾವಂತ್ಯೌ ಸೈಂಧವಶ್ಚ ಜಯದ್ರಥಃ||

06109002a ಚಿತ್ರಸೇನೋ ವಿಕರ್ಣಶ್ಚ ತಥಾ ದುರ್ಮರ್ಷಣೋ ಯುವಾ|

06109002c ದಶೈತೇ ತಾವಕಾ ಯೋಧಾ ಭೀಮಸೇನಮಯೋಧಯನ್||

06109003a ಮಹತ್ಯಾ ಸೇನಯಾ ಯುಕ್ತಾ ನಾನಾದೇಶಸಮುತ್ಥಯಾ|

06109003c ಭೀಷ್ಮಸ್ಯ ಸಮರೇ ರಾಜನ್ಪ್ರಾರ್ಥಯಾನಾ ಮಹದ್ಯಶಃ||

ಸಂಜಯನು ಹೇಳಿದನು: “ರಾಜನ್! ಭಗದತ್ತ, ಕೃಪ, ಶಲ್ಯ, ಸಾತ್ವತ ಕೃತವರ್ಮ, ಅವಂತಿಯ ವಿಂದಾನುವಿಂದರು, ಸೈಂಧವ ಜಯದ್ರಥ, ಚಿತ್ರಸೇನ, ವಿಕರ್ಣ ಮತ್ತು ಯುವ ದುರ್ಮರ್ಷಣ ಈ ಹತ್ತು ನಿನ್ನ ಕಡೆಯ ಯೋಧರು ನಾನಾ ದೇಶಗಳಿಂದ ಒಟ್ಟುಗೂಡಿಸಿದ ಮಹಾಸೇನೆಯೊಂದಿಗೆ ಸಮರದಲ್ಲಿ ಭೀಷ್ಮನ ಮಹಾ ಯಶಸ್ಸನ್ನು ಬಯಸುತ್ತಾ ಭೀಮನ ಮೇಲೆ ಆಕ್ರಮಣಮಾಡಿದರು.

06109004a ಶಲ್ಯಸ್ತು ನವಭಿರ್ಬಾಣೈಭೀಮಸೇನಮತಾಡಯತ್|

06109004c ಕೃತವರ್ಮಾ ತ್ರಿಭಿರ್ಬಾಣೈಃ ಕೃಪಶ್ಚ ನವಭಿಃ ಶರೈಃ||

ಶಲ್ಯನು ಒಂಭತ್ತು ಬಾಣಗಳಿಂದಲೂ, ಕೃತವರ್ಮನು ಮೂರು ಬಾಣಗಳಿಂದಲೂ, ಮತ್ತು ಕೃಪನು ಒಂಭತ್ತು ಶರಗಳಿಂದಲೂ ಭೀಮಸೇನನನ್ನು ಹೊಡೆದರು.

06109005a ಚಿತ್ರಸೇನೋ ವಿಕರ್ಣಶ್ಚ ಭಗದತ್ತಶ್ಚ ಮಾರಿಷ|

06109005c ದಶಭಿರ್ದಶಭಿರ್ಭಲ್ಲೈರ್ಭೀಮಸೇನಮತಾಡಯನ್||

ಮಾರಿಷ! ಚಿತ್ರಸೇನ, ವಿಕರ್ಣ ಮತ್ತು ಭಗದತ್ತರೂ ಕೂಡ ಹತ್ತು ಹತ್ತು ಭಲ್ಲೆಗಳಿಂದ ಭೀಮಸೇನನನ್ನು ಹೊಡೆದರು.

06109006a ಸೈಂಧವಶ್ಚ ತ್ರಿಭಿರ್ಬಾಣೈರ್ಜತ್ರುದೇಶೇಽಭ್ಯತಾಡಯತ್|

06109006c ವಿಂದಾನುವಿಂದಾವಾವಂತ್ಯೌ ಪಂಚಭಿಃ ಪಂಚಭಿಃ ಶರೈಃ||

06109006e ದುರ್ಮರ್ಷಣಶ್ಚ ವಿಂಶತ್ಯಾ ಪಾಂಡವಂ ನಿಶಿತೈಃ ಶರೈಃ||

ಸೈಂಧವನು ಮೂರು ಬಾಣಗಳಿಂದ ಅವನ ಜತ್ರುದೇಶವನ್ನೂ, ಅವಂತಿಯ ವಿಂದಾನುವಿಂದರಿಬ್ಬರು ಐದೈದು ಶರಗಳಿಂದಲೂ ಮತ್ತು ದುರ್ಮರ್ಷಣನು ಇಪ್ಪತ್ತು ನಿಶಿತ ಶರಗಳಿಂದ ಪಾಂಡವನನ್ನು ಹೊಡೆದರು.

06109007a ಸ ತಾನ್ಸರ್ವಾನ್ಮಹಾರಾಜ ಭ್ರಾಜಮಾನಾನ್ಪೃಥಕ್ ಪೃಥಕ್|

06109007c ಪ್ರವೀರಾನ್ ಸರ್ವಲೋಕಸ್ಯ ಧಾರ್ತರಾಷ್ಟ್ರಾನ್ಮಹಾರಥಾನ್||

06109007e ವಿವ್ಯಾಧ ಬಹುಭಿರ್ಬಾಣೈರ್ಭೀಮಸೇನೋ ಮಹಾಬಲಃ||

ಮಹಾರಾಜ! ಧಾರ್ತರಾಷ್ಟ್ರನ ಆ ಎಲ್ಲ ಮಹಾರಥರನ್ನೂ, ಸರ್ವಲೋಕ ಪ್ರವೀರರನ್ನೂ ಮಹಾಬಲ ಭೀಮಸೇನನು ಅನೇಕ ಬಾಣಗಳಿಂದ ಪ್ರತ್ಯೇಕ ಪ್ರತ್ಯೇಕವಾಗಿ ಹೊಡೆದನು.

06109008a ಶಲ್ಯಂ ಪಂಚಾಶತಾ ವಿದ್ಧ್ವಾ ಕೃತವರ್ಮಾಣಮಷ್ಟಭಿಃ|

06109008c ಕೃಪಸ್ಯ ಸಶರಂ ಚಾಪಂ ಮಧ್ಯೇ ಚಿಚ್ಛೇದ ಭಾರತ||

06109008e ಅಥೈನಂ ಚಿನ್ನಧನ್ವಾನಂ ಪುನರ್ವಿವ್ಯಾಧ ಪಂಚಭಿಃ||

ಭಾರತ! ಐವತ್ತರಿಂದ ಶಲ್ಯನನ್ನು ಮತ್ತು ಎಂಟರಿಂದ ಕೃತವರ್ಮನನ್ನು ಹೊಡೆದು ಕೃಪನ ಚಾಪವನ್ನು ಬಾಣದೊಂದಿಗೆ ಮಧ್ಯದಲ್ಲಿಯೇ ಕತ್ತರಿಸಿದನು. ಧನುಸ್ಸು ತುಂಡಾದವನನ್ನು ಪುನಃ ಐದರಿಂದ ಹೊಡೆದನು.

06109009a ವಿಂದಾನುವಿಂದೌ ಚ ತಥಾ ತ್ರಿಭಿಸ್ತ್ರಿಭಿರತಾಡಯತ್|

06109009c ದುರ್ಮರ್ಷಣಂ ಚ ವಿಂಶತ್ಯಾ ಚಿತ್ರಸೇನಂ ಚ ಪಂಚಭಿಃ||

ಹಾಗೆಯೇ ವಿಂದಾನುವಿಂದರನ್ನು ಮೂರರಿಂದ, ದುರ್ಮರ್ಷಣನನ್ನು ಇಪ್ಪತ್ತರಿಂದ ಮತ್ತು ಚಿತ್ರಸೇನನನ್ನು ಐದರಿಂದ ಹೊಡೆದನು.

06109010a ವಿಕರ್ಣಂ ದಶಭಿರ್ಬಾಣೈಃ ಪಂಚಭಿಶ್ಚ ಜಯದ್ರಥಂ|

06109010c ವಿದ್ಧ್ವಾ ಭೀಮೋಽನದದ್ಧೃಷ್ಟಃ ಸೈಂಧವಂ ಚ ಪುನಸ್ತ್ರಿಭಿಃ||

ವಿಕರ್ಣನನ್ನು ಹತ್ತು ಮತ್ತು ಜಯದ್ರಥನನ್ನು ಐದು ಬಾಣಗಳಿಂದ ಹೊಡೆದು ಭೀಮನು ಪುನಃ ಸೈಂಧವನನ್ನು ಮೂರರಿಂದ ಹೊಡೆದನು.

06109011a ಅಥಾನ್ಯದ್ಧನುರಾದಾಯ ಗೌತಮೋ ರಥಿನಾಂ ವರಃ|

06109011c ಭೀಮಂ ವಿವ್ಯಾಧ ಸಂರಬ್ಧೋ ದಶಭಿರ್ನಿಶಿತೈಃ ಶರೈಃ||

ಆಗ ರಥಿಗಳಲ್ಲಿ ಶ್ರೇಷ್ಠ ಗೌತಮನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಸಂರಬ್ಧನಾಗಿ ಭೀಮನನ್ನು ಹತ್ತು ನಿಶಿತ ಶರಗಳಿಂದ ಹೊಡೆದನು.

06109012a ಸ ವಿದ್ಧೋ ಬಹುಭಿರ್ಬಾಣೈಸ್ತೋತ್ತ್ರೈರಿವ ಮಹಾದ್ವಿಪಃ|

06109012c ತತಃ ಕ್ರುದ್ಧೋ ಮಹಾಬಾಹುರ್ಭೀಮಸೇನಃ ಪ್ರತಾಪವಾನ್|

06109012e ಗೌತಮಂ ತಾಡಯಾಮಾಸ ಶರೈರ್ಬಹುಭಿರಾಹವೇ||

ಅನೇಕ ಬಾಣಗಳಿಂದ ಚುಚ್ಚಲ್ಪಟ್ಟ ಮಹಾಗಜದಂತೆ ಪ್ರತಾಪವಾನ್ ಮಹಾಬಾಹು ಭೀಮಸೇನನು ಕ್ರುದ್ಧನಾಗಿ ಆಹವದಲ್ಲಿ ಗೌತಮನನ್ನು ಅನೇಕ ಶರಗಳಿಂದ ಪ್ರಹರಿಸಿದನು.

06109013a ಸೈಂಧವಸ್ಯ ತಥಾಶ್ವಾಂಶ್ಚ ಸಾರಥಿಂ ಚ ತ್ರಿಭಿಃ ಶರೈಃ|

06109013c ಪ್ರಾಹಿಣೋನ್ಮೃತ್ಯುಲೋಕಾಯ ಕಾಲಾಂತಕಸಮದ್ಯುತಿಃ||

ಮತ್ತು ಆ ಕಾಲಾಂತಕ ಸಮದ್ಯುತಿಯು ಮೂರು ಶರಗಳಿಂದ ಸೈಂಧವನ ಸಾರಥಿಯನ್ನೂ ಕುದುರೆಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು.

06109014a ಹತಾಶ್ವಾತ್ತು ರಥಾತ್ತೂರ್ಣಮವಪ್ಲುತ್ಯ ಮಹಾರಥಃ|

06109014c ಶರಾಂಶ್ಚಿಕ್ಷೇಪ ನಿಶಿತಾನ್ಭೀಮಸೇನಸ್ಯ ಸಂಯುಗೇ||

ತಕ್ಷಣವೇ ಕುದುರೆಗಳನ್ನು ಕಳೆದುಕೊಂಡು ರಥದಿಂದ ಕೆಳಗೆ ಧುಮುಕಿ ಆ ಮಹಾರಥನು ಸಂಯುಗದಲ್ಲಿ ಭೀಮಸೇನನ ಮೇಲೆ ನಿಶಿತ ಶರಗಳನ್ನು ಪ್ರಯೋಗಿಸಿದನು.

06109015a ತಸ್ಯ ಭೀಮೋ ಧನುರ್ಮಧ್ಯೇ ದ್ವಾಭ್ಯಾಂ ಚಿಚ್ಛೇದ ಭಾರತ|

06109015c ಭಲ್ಲಾಭ್ಯಾಂ ಭರತಶ್ರೇಷ್ಠ ಸೈಂಧವಸ್ಯ ಮಹಾತ್ಮನಃ||

ಭಾರತ! ಭರತಶ್ರೇಷ್ಠ ಭೀಮನು ಭಲ್ಲಗಳೆರಡರಿಂದ ಮಹಾತ್ಮ ಸೈಂಧವನ ಧನುಸ್ಸನ್ನು ಮಧ್ಯದಲ್ಲಿಯೇ ಎರಡು ಭಾಗಗಳನ್ನಾಗಿ ತುಂಡರಿಸಿದನು.

06109016a ಸ ಚ್ಛಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ|

06109016c ಚಿತ್ರಸೇನರಥಂ ರಾಜನ್ನಾರುರೋಹ ತ್ವರಾನ್ವಿತಃ||

ರಾಜನ್! ಧನುಸ್ಸು ತುಂಡಾಗಲು, ಕುದುರೆಗಳು ಹತವಾಗಿ, ಸಾರಥಿಯೂ ಹತನಾಗಿ ವಿರಥನಾಗಿದ್ದ ಅವನು ಅವಸರದಿಂದ ಚಿತ್ರಸೇನನ ರಥವನ್ನೇರಿದನು.

06109017a ಅತ್ಯದ್ಭುತಂ ರಣೇ ಕರ್ಮ ಕೃತವಾಂಸ್ತತ್ರ ಪಾಂಡವಃ|

06109017c ಮಹಾರಥಾಂ ಶರೈರ್ವಿದ್ಧ್ವಾ ವಾರಯಿತ್ವಾ ಮಹಾರಥಃ|

06109017e ವಿರಥಂ ಸೈಂಧವಂ ಚಕ್ರೇ ಸರ್ವಲೋಕಸ್ಯ ಪಶ್ಯತಃ||

ಅಲ್ಲಿ ರಣದಲ್ಲಿ ಪಾಂಡವನು ಒಂದು ಅದ್ಭುತ ಕರ್ಮವನ್ನೇ ಮಾಡಿದನು: ಎಲ್ಲ ಲೋಕಗಳೂ ನೋಡುತ್ತಿದ್ದಂತೆಯೇ ಆ ಮಹಾರಥನು ಮಹಾರಥರನ್ನು ತಡೆದು ಸೈಂಧವನನ್ನು ವಿರಥನನ್ನಾಗಿ ಮಾಡಿದನು.

06109018a ನಾತೀವ ಮಮೃಷೇ ಶಲ್ಯೋ ಭೀಮಸೇನಸ್ಯ ವಿಕ್ರಮಂ|

06109018c ಸ ಸಂಧಾಯ ಶರಾಂಸ್ತೀಕ್ಷ್ಣಾನ್ಕರ್ಮಾರಪರಿಮಾರ್ಜಿತಾನ್|

06109018e ಭೀಮಂ ವಿವ್ಯಾಧ ಸಪ್ತತ್ಯಾ ತಿಷ್ಠ ತಿಷ್ಠೇತಿ ಚಾಬ್ರವೀತ್||

ಭೀಮಸೇನನ ಅತೀವ ವಿಕ್ರಮವನ್ನು ಸಹಿಸಿಕೊಳ್ಳಲಾರದ ಶಲ್ಯನು ಕಮ್ಮಾರನಿಂದ ಹದಗೊಳಿಸಲ್ಪಟ್ಟ ಏಳು ತೀಕ್ಷ್ಣಶರಗಳನ್ನು ಹೂಡಿ ಭೀಮನನ್ನು ಹೊಡೆದು ನಿಲ್ಲು ನಿಲ್ಲು ಎಂದು ಕೂಗಿದನು.

06109019a ಕೃಪಶ್ಚ ಕೃತವರ್ಮಾ ಚ ಭಗದತ್ತಶ್ಚ ಮಾರಿಷ|

06109019c ವಿಂದಾನುವಿಂದಾವಾವಂತ್ಯೌ ಚಿತ್ರಸೇನಶ್ಚ ಸಂಯುಗೇ||

06109020a ದುರ್ಮರ್ಷಣೋ ವಿಕರ್ಣಶ್ಚ ಸಿಂಧುರಾಜಶ್ಚ ವೀರ್ಯವಾನ್|

06109020c ಭೀಮಂ ತೇ ವಿವ್ಯಧುಸ್ತೂರ್ಣಂ ಶಲ್ಯಹೇತೋರರಿಂದಮಾಃ||

ಮಾರಿಷ! ಶಲ್ಯನ ಕಾರಣದಿಂದಾಗಿ ಅರಿಂದಮ ಕೃಪ, ಕೃತವರ್ಮ, ಭಗದತ್ತ, ಅವಂತಿಯ ವಿಂದಾನುವಿಂದರು, ಚಿತ್ರಸೇನ, ದುರ್ಮರ್ಷಣ, ವಿಕರ್ಣ, ವೀರ್ಯವಾನ್ ಸಿಂಧುರಾಜ ಇವರು ತಕ್ಷಣವೇ ಭೀಮನನ್ನು ಪ್ರಹರಿಸಿದರು.

06109021a ಸ ತು ತಾನ್ಪ್ರತಿವಿವ್ಯಾಧ ಪಂಚಭಿಃ ಪಂಚಭಿಃ ಶರೈಃ|

06109021c ಶಲ್ಯಂ ವಿವ್ಯಾಧ ಸಪ್ತತ್ಯಾ ಪುನಶ್ಚ ದಶಭಿಃ ಶರೈಃ||

ಅವನಾದರೋ ಅವರನ್ನು ಐದೈದು ಶರಗಳಿಂದ ತಿರುಗಿ ಹೊಡೆದನು ಮತ್ತು ಶಲ್ಯನನ್ನು ಏಳರಿಂದ ಮತ್ತು ಪುನಃ ಹತ್ತು ಶರಗಳಿಂದ ಹೊಡೆದನು.

06109022a ತಂ ಶಲ್ಯೋ ನವಭಿರ್ವಿದ್ಧ್ವಾ ಪುನರ್ವಿವ್ಯಾಧ ಪಂಚಭಿಃ|

06109022c ಸಾರಥಿಂ ಚಾಸ್ಯ ಭಲ್ಲೇನ ಗಾಢಂ ವಿವ್ಯಾಧ ಮರ್ಮಣಿ||

ಶಲ್ಯನು ಅವನನ್ನು ಒಂಭತ್ತರಿಂದ ಮತ್ತು ಪುನಃ ಐದರಿಂದ ಹೊಡೆದು, ಅವನ ಸಾರಥಿಯನ್ನು ಕವಚವನ್ನು ಗಾಢವಾಗಿ ಹೊಗುವಂತೆ ಭಲ್ಲದಿಂದ ಹೊಡೆದನು.

06109023a ವಿಶೋಕಂ ವೀಕ್ಷ್ಯ ನಿರ್ಭಿನ್ನಂ ಭೀಮಸೇನಃ ಪ್ರತಾಪವಾನ್|

06109023c ಮದ್ರರಾಜಂ ತ್ರಿಭಿರ್ಬಾಣೈರ್ಬಾಹ್ವೋರುರಸಿ ಚಾರ್ಪಯತ್||

ವಿಶೋಕನು ಪೆಟ್ಟುತಿಂದುದನ್ನು ವೀಕ್ಷಿಸಿ ಪ್ರತಾಪವಾನ್ ಭೀಮಸೇನನು ಮದ್ರರಾಜನನ್ನು ಮೂರು ಬಾಣಗಳಿಂದ ತೋಳುಗಳಿಗೂ ವಕ್ಷಸ್ಥಳಕ್ಕೂ ಪ್ರಹರಿಸಿದನು.

06109024a ತಥೇತರಾನ್ಮಹೇಷ್ವಾಸಾಂಸ್ತ್ರಿಭಿಸ್ತ್ರಿಭಿರಜಿಹ್ಮಗೈಃ|

06109024c ತಾಡಯಾಮಾಸ ಸಮರೇ ಸಿಂಹವಚ್ಚ ನನಾದ ಚ||

ಹಾಗೆಯೇ ಅವನು ಇತರ ಮಹೇಷ್ವಾಸರನ್ನೂ ನೇರವಾಗಿ ಹೋಗುವ ಮೂರು ಮೂರು ಬಾಣಗಳಿಂದ ಪ್ರಹರಿಸಿ ಸಿಂಹದಂತೆ ಗರ್ಜಿಸಿದನು.

06109025a ತೇ ಹಿ ಯತ್ತಾ ಮಹೇಷ್ವಾಸಾಃ ಪಾಂಡವಂ ಯುದ್ಧದುರ್ಮದಂ|

06109025c ತ್ರಿಭಿಸ್ತ್ರಿಭಿರಕುಂಠಾಗ್ರೈರ್ಭೃಶಂ ಮರ್ಮಸ್ವತಾಡಯನ್||

ಪ್ರಯತ್ನಿಸುತ್ತಿದ್ದ ಆ ಮಹೇಷ್ವಾಸರೂ ಯುದ್ಧದುರ್ಮದ ಪಾಂಡವನನ್ನು ಬಗ್ಗಿರದೇ ಇರುವ ಅಗ್ರಭಾಗಗಳನ್ನು ಹೊಂದಿದ ಮೂರು ಮೂರು ಬಾಣಗಳಿಂದ ಅವನ ಮರ್ಮಸ್ಥಾನಗಳಲ್ಲಿ ಹೊಡೆದರು.

06109026a ಸೋಽತಿವಿದ್ಧೋ ಮಹೇಷ್ವಾಸೋ ಭೀಮಸೇನೋ ನ ವಿವ್ಯಥೇ|

06109026c ಪರ್ವತೋ ವಾರಿಧಾರಾಭಿರ್ವರ್ಷಮಾಣೈರಿವಾಂಬುದೈಃ||

ಹೀಗೆ ಅತಿಯಾಗಿ ನೋವುಂಟಾಗುವಂತೆ ಹೊಡೆಯಲ್ಪಟ್ಟರೂ ಭೀಮಸೇನನು ಮೋಡಗಳು ಮಳೆನೀರನ್ನು ಸುರಿದರೂ ಪರ್ವತವು ಹೇಗೆ ವಿಚಲಿತವಾಗಿರುವುದಿಲ್ಲವೋ ಹಾಗೆ ವಿವ್ಯಥನಾಗಿದ್ದನು.

06109027a ಶಲ್ಯಂ ಚ ನವಭಿರ್ಬಾಣೈರ್ಭೃಶಂ ವಿದ್ಧ್ವಾ ಮಹಾಯಶಾಃ|

06109027c ಪ್ರಾಗ್ಜ್ಯೋತಿಷಂ ಶತೇನಾಜೌ ರಾಜನ್ವಿವ್ಯಾಧ ವೈ ದೃಢಂ||

ರಾಜನ್! ಆ ಮಹಾಯಶನು ಶಲ್ಯನನ್ನು ಒಂಭತ್ತು ಬಾಣಗಳಿಂದ ಜೋರಾಗಿ ಹೊಡೆದು, ದೃಢನಾದ ಪ್ರಾಗ್ಜ್ಯೋತಿಷನನ್ನು ನೂರರಿಂದ ಹೊಡೆದನು.

06109028a ತತಸ್ತು ಸಶರಂ ಚಾಪಂ ಸಾತ್ವತಸ್ಯ ಮಹಾತ್ಮನಃ|

06109028c ಕ್ಷುರಪ್ರೇಣ ಸುತೀಕ್ಷ್ಣೇನ ಚಿಚ್ಛೇದ ಕೃತಹಸ್ತವತ್||

ಆಗ ಹಸ್ತಪಳಗಿದ ಆ ಮಹಾತ್ಮನು ಸುತೀಕ್ಷ್ಣ ಕ್ಷುರಪ್ರದಿಂದ ಸಾತ್ವತನ ಚಾಪವನ್ನು ಬಾಣಗಳೊಂದಿಗೆ ಕತ್ತರಿಸಿದನು.

06109029a ಅಥಾನ್ಯದ್ಧನುರಾದಾಯ ಕೃತವರ್ಮಾ ವೃಕೋದರಂ|

06109029c ಆಜಘಾನ ಭ್ರುವೋರ್ಮಧ್ಯೇ ನಾರಾಚೇನ ಪರಂತಪ||

ಪರಂತಪ! ತಕ್ಷಣವೇ ಇನ್ನೊಂದು ಧನುಸ್ಸನ್ನು ಹಿಡಿದು ಕೃತವರ್ಮನು ನಾರಾಚದಿಂದ ವೃಕೋದರನನ್ನು ಹುಬ್ಬುಗಳ ನಡುವೆ ತಾಗುವಂತೆ ಹೊಡೆದನು.

06109030a ಭೀಮಸ್ತು ಸಮರೇ ವಿದ್ಧ್ವಾ ಶಲ್ಯಂ ನವಭಿರಾಯಸೈಃ|

06109030c ಭಗದತ್ತಂ ತ್ರಿಭಿಶ್ಚೈವ ಕೃತವರ್ಮಾಣಮಷ್ಟಭಿಃ||

06109031a ದ್ವಾಭ್ಯಾಂ ದ್ವಾಭ್ಯಾಂ ಚ ವಿವ್ಯಾಧ ಗೌತಮಪ್ರಭೃತೀನ್ರಥಾನ್|

ಭೀಮನಾದರೋ ಸಮರದಲ್ಲಿ ಒಂಭತ್ತು ಆಯಸಗಳಿಂದ ಶಲ್ಯನನ್ನು ಹೊಡೆದು ಭಗದತ್ತನನ್ನು ಮೂರರಿಂದಲೂ, ಕೃತವರ್ಮನನ್ನು ಎಂಟರಿಂದಲೂ, ಎರೆಡೆರಡರಿಂದ ಗೌತಮರೇ ಮೊದಲಾದ ರಥರನ್ನು ಹೊಡೆದನು.

06109031c ತೇ ತು ತಂ ಸಮರೇ ರಾಜನ್ವಿವ್ಯಧುರ್ನಿಶಿತೈಃ ಶರೈಃ||

06109032a ಸ ತಥಾ ಪೀಡ್ಯಮಾನೋಽಪಿ ಸರ್ವತಸ್ತೈರ್ಮಹಾರಥೈಃ|

06109032c ಮತ್ವಾ ತೃಣೇನ ತಾಂಸ್ತುಲ್ಯಾನ್ವಿಚಚಾರ ಗತವ್ಯಥಃ||

ರಾಜನ್! ಅವರು ಸಮರದಲ್ಲಿ ಅವನನ್ನು ನಿಶಿತಶರಗಳಿಂದ ಹೊಡೆದರು. ಸುತ್ತಲೂ ಎಲ್ಲಕಡೆಗಳಿಂದಲೂ ಮಹಾರಥರಿಂದ ಪೀಡಿತನಾದರೂ ಕೂಡ ಅವರನ್ನು ತೃಣಸಮಾನರೆಂದು ಪರಿಗಣಿಸಿ ಭೀಮನು ವ್ಯಥೆಯಿಲ್ಲದೇ ಹೋರಾಡುತ್ತಿದ್ದನು.

06109033a ತೇ ಚಾಪಿ ರಥಿನಾಂ ಶ್ರೇಷ್ಠಾ ಭೀಮಾಯ ನಿಶಿತಾಂ ಶರಾನ್|

06109033c ಪ್ರೇಷಯಾಮಾಸುರವ್ಯಗ್ರಾಃ ಶತಶೋಽಥ ಸಹಸ್ರಶಃ||

ಆ ರಥಿಗಳಲ್ಲಿ ಶ್ರೇಷ್ಠರೂ ಕೂಡ ಅವ್ಯಗ್ರರಾಗಿ ಭೀಮನ ಮೇಲೆ ನೂರಾರು ಸಹಸ್ರಾರು ನಿಶಿತ ಶರಗಳನ್ನು ಪ್ರಯೋಗಿಸುತ್ತಿದ್ದರು.

06109034a ತಸ್ಯ ಶಕ್ತಿಂ ಮಹಾವೇಗಾಂ ಭಗದತ್ತೋ ಮಹಾರಥಃ|

06109034c ಚಿಕ್ಷೇಪ ಸಮರೇ ವೀರಃ ಸ್ವರ್ಣದಂಡಾಂ ಮಹಾಧನಾಂ||

06109035a ತೋಮರಂ ಸೈಂಧವೋ ರಾಜಾ ಪಟ್ಟಿಶಂ ಚ ಮಹಾಭುಜಃ|

06109035c ಶತಘ್ನೀಂ ಚ ಕೃಪೋ ರಾಜಂ ಶರಂ ಶಲ್ಯಶ್ಚ ಸಂಯುಗೇ||

ಅವನ ಮೇಲೆ ವೀರ ಮಹಾರಥ ಭಗದತ್ತನು ಮಹಾವೇಗದ, ಸ್ವರ್ಣದಂಡದ, ಮಹಾ‌ ಅಮೂಲ್ಯವಾದ ಶಕ್ತಿಯನ್ನು ಸಮರದಲ್ಲಿ ಎಸೆದನು. ರಾಜನ್! ಹಾಗೆಯೇ ರಾಜ ಮಹಾಭುಜ ಸೈಂಧವನು ತೋಮರವನ್ನೂ, ಕೃಪನು ಶತಘ್ನಿಯನ್ನೂ ಮತ್ತು ಸಂಯುಗದಲ್ಲಿ ಶಲ್ಯನು ಬಾಣವನ್ನೂ ಎಸೆದರು.

06109036a ಅಥೇತರೇ ಮಹೇಷ್ವಾಸಾಃ ಪಂಚ ಪಂಚ ಶಿಲೀಮುಖಾನ್|

06109036c ಭೀಮಸೇನಂ ಸಮುದ್ದಿಶ್ಯ ಪ್ರೇಷಯಾಮಾಸುರೋಜಸಾ||

ಇತರ ಮಹೇಷ್ವಾಸರೂ ಐದೈದು ಶಿಲೀಮುಖಿಗಳನ್ನು ಭೀಮಸೇನನನ್ನು ಅನುಲಕ್ಷಿಸಿ ಬಲಪೂರ್ವಕವಾಗಿ ಪ್ರಯೋಗಿಸಿದರು.

06109037a ತೋಮರಂ ಸ ದ್ವಿಧಾ ಚಕ್ರೇ ಕ್ಷುರಪ್ರೇಣಾನಿಲಾತ್ಮಜಃ|

06109037c ಪಟ್ಟಿಶಂ ಚ ತ್ರಿಭಿರ್ಬಾಣೈಶ್ಚಿಚ್ಛೇದ ತಿಲಕಾಂಡವತ್||

ಅನಿಲಾತ್ಮಜನು ತೋಮರವನ್ನು ಕ್ಷುರಪ್ರದಿಂದ ಎರಡು ಮಾಡಿದನು. ಮೂರು ಬಾಣಗಳಿಂದ ಪಟ್ಟಿಶವನ್ನೂ ಕೂಡ ಎಳ್ಳಿನ ಗಿಡದಂತೆ ತುಂಡರಿಸಿದನು.

06109038a ಸ ಬಿಭೇದ ಶತಘ್ನೀಂ ಚ ನವಭಿಃ ಕಂಕಪತ್ರಿಭಿಃ|

06109038c ಮದ್ರರಾಜಪ್ರಯುಕ್ತಂ ಚ ಶರಂ ಚಿತ್ತ್ವಾ ಮಹಾಬಲಃ||

06109039a ಶಕ್ತಿಂ ಚಿಚ್ಛೇದ ಸಹಸಾ ಭಗದತ್ತೇರಿತಾಂ ರಣೇ|

06109039c ತಥೇತರಾಂ ಶರಾನ್ಘೋರಾಂ ಶರೈಃ ಸನ್ನತಪರ್ವಭಿಃ||

06109040a ಭೀಮಸೇನೋ ರಣಶ್ಲಾಘೀ ತ್ರಿಧೈಕೈಕಂ ಸಮಾಚ್ಛಿನತ್|

06109040c ತಾಂಶ್ಚ ಸರ್ವಾನ್ಮಹೇಷ್ವಾಸಾಂಸ್ತ್ರಿಭಿಸ್ತ್ರಿಭಿರತಾಡಯತ್||

ಅವನು ಒಂಭತ್ತು ಕಂಕಪತ್ರಿಗಳಿಂದ ಶತಘ್ನಿಯನ್ನು ತುಂಡರಿಸಿದನು ಮತ್ತು ಆ ಮಹಾಬಲನು ಮದ್ರರಾಜನು ಪ್ರಯೋಗಿಸಿದ್ದ ಶರವನ್ನೂ ಕತ್ತರಿಸಿ ರಣದಲ್ಲಿ ಭಗದತ್ತನು ಕಳುಹಿಸಿದ್ದ ಶಕ್ತಿಯನ್ನೂ ಕೂಡಲೇ ಕತ್ತರಿಸಿದನು. ಹಾಗೆಯೇ ರಣಶ್ಲಾಘೀ ಭೀಮಸೇನನು ಇತರರ ಘೋರ ಶರಗಳು ಒಂದೊಂದನ್ನೂ ಮೂರು ಮೂರು ಸನ್ನತಪರ್ವ ಶರಗಳಿಂದ ತುಂಡರಿಸಿದನು. ಅವರೆಲ್ಲ ಮಹೇಷ್ವಾಸರನ್ನೂ ಮೂರು ಮೂರು ಶರಗಳಿಂದ ಹೊಡೆದನು.

06109041a ತತೋ ಧನಂಜಯಸ್ತತ್ರ ವರ್ತಮಾನೇ ಮಹಾರಣೇ|

06109041c ಜಗಾಮ ಸ ರಥೇನಾಜೌ ಭೀಮಂ ದೃಷ್ಟ್ವಾ ಮಹಾರಥಂ|

06109041e ನಿಘ್ನಂತಂ ಸಮರೇ ಶತ್ರೂನ್ಯೋಧಯಾನಂ ಚ ಸಾಯಕೈಃ||

ಆಗ ಸಮರದಲ್ಲಿ ಶತ್ರುಯೋಧರನ್ನು ಸಾಯಕಗಳಿಂದ ಸಂಹರಿಸುತ್ತಿದ್ದ ಮಹಾರಥ ಭೀಮನನ್ನು ನೋಡಿ ಆ ಮಹಾರಣವು ನಡೆಯುತ್ತಿರುವಲ್ಲಿಗೆ ಧನಂಜಯನು ರಥದಲ್ಲಿ ಧಾವಿಸಿ ಬಂದನು.

06109042a ತೌ ತು ತತ್ರ ಮಹಾತ್ಮಾನೌ ಸಮೇತೌ ವೀಕ್ಷ್ಯ ಪಾಂಡವೌ|

06109042c ನಾಶಶಂಸುರ್ಜಯಂ ತತ್ರ ತಾವಕಾಃ ಪುರುಷರ್ಷಭ||

ಪುರುಷರ್ಷಭ! ಅಲ್ಲಿ ಒಟ್ಟಿಗೇ ಹೋರಾಡುತ್ತಿದ್ದ ಆ ವೀರ ಮಹಾತ್ಮ ಪಾಂಡವರಿಬ್ಬರನ್ನೂ ನೋಡಿ ನಿನ್ನವರು ಜಯದ ಆಸೆಯನ್ನೇ ಬಿಟ್ಟುಬಿಟ್ಟರು.

06109043a ಅಥಾರ್ಜುನೋ ರಣೇ ಭೀಷ್ಮಂ ಯೋಧಯನ್ವೈ ಮಹಾರಥಂ|

06109043c ಭೀಷ್ಮಸ್ಯ ನಿಧನಾಕಾಂಕ್ಷೀ ಪುರಸ್ಕೃತ್ಯ ಶಿಖಂಡಿನಂ||

06109044a ಆಸಸಾದ ರಣೇ ಯೋಧಾಂಸ್ತಾವಕಾನ್ದಶ ಭಾರತ|

06109044c ಯೇ ಸ್ಮ ಭೀಮಂ ರಣೇ ರಾಜನ್ಯೋಧಯಂತೋ ವ್ಯವಸ್ಥಿತಾಃ||

06109044e ಬೀಭತ್ಸುಸ್ತಾನಥಾವಿಧ್ಯದ್ಭೀಮಸ್ಯ ಪ್ರಿಯಕಾಮ್ಯಯಾ||

ರಾಜನ್! ಭಾರತ! ಭೀಷ್ಮನ ನಿಧನಾಕಾಂಕ್ಷಿಯಾಗಿ ಶಿಖಂಡಿಯನ್ನು ಮುಂದಿಟ್ಟುಕೊಂಡು ಮಹಾರಥ ಭೀಷ್ಮನೊಡನೆ ಯುದ್ಧ ಮಾಡುತ್ತಿದ್ದ ಬೀಭತ್ಸು ಅರ್ಜುನನು ರಣದಲ್ಲಿ ಭೀಮನು ನಿನ್ನವರಾದ ಯಾವ ಹತ್ತು ಯೋಧರೊಡನೇ ಹೋರಾಡುತ್ತಿದ್ದನೋ ಅವರನ್ನು ರಣದಲ್ಲಿ ಎದುರಿಸಿ, ಭೀಮನ ಹಿತವನ್ನು ಬಯಸಿ ಅವರ ಮೇಲೆ ಪ್ರಹರಿಸಿದನು.

06109045a ತತೋ ದುರ್ಯೋಧನೋ ರಾಜಾ ಸುಶರ್ಮಾಣಮಚೋದಯತ್|

06109045c ಅರ್ಜುನಸ್ಯ ವಧಾರ್ಥಾಯ ಭೀಮಸೇನಸ್ಯ ಚೋಭಯೋಃ||

ಆಗ ರಾಜಾ ದುರ್ಯೋಧನನು ಅರ್ಜುನ ಭೀಮಸೇನರಿಬ್ಬರ ವಧೆಗಾಗಿ ಸುಶರ್ಮನನ್ನು ಪ್ರಚೋದಿಸಿದನು.

06109046a ಸುಶರ್ಮನ್ಗಚ್ಛ ಶೀಘ್ರಂ ತ್ವಂ ಬಲೌಘೈಃ ಪರಿವಾರಿತಃ|

06109046c ಜಹಿ ಪಾಂಡುಸುತಾವೇತೌ ಧನಂಜಯವೃಕೋದರೌ||

“ಸುಶರ್ಮನ್! ಹೋಗು! ಸೇನೆಗಳಿಂದ ಪರಿವಾರಿತರಾಗಿರುವ ಅವರಿಬ್ಬರು ಪಾಂಡುಸುತ ಧನಂಜಯ-ವೃಕೋದರರನ್ನು ಕೊಲ್ಲು!”

06109047a ತಚ್ಚ್ರುತ್ವಾ ಶಾಸನಂ ತಸ್ಯ ತ್ರಿಗರ್ತಃ ಪ್ರಸ್ಥಲಾಧಿಪಃ|

06109047c ಅಭಿದ್ರುತ್ಯ ರಣೇ ಭೀಮಮರ್ಜುನಂ ಚೈವ ಧನ್ವಿನೌ||

06109048a ರಥೈರನೇಕಸಾಹಸ್ರೈಃ ಪರಿವವ್ರೇ ಸಮಂತತಃ|

06109048c ತತಃ ಪ್ರವವೃತೇ ಯುದ್ಧಮರ್ಜುನಸ್ಯ ಪರೈಃ ಸಹ||

ಅವನ ಆ ಶಾಸನವನ್ನು ಕೇಳಿ ಪ್ರಸ್ಥಲಾಧಿಪ ತ್ರಿಗರ್ತನು ರಣದಲ್ಲಿ ಧನ್ವಿ ಭೀಮಾರ್ಜುನರಿಬ್ಬರನ್ನೂ ಅನೇಕ ಸಾವಿರ ರಥಗಳಿಂದ ಎಲ್ಲಕಡೆಗಳಿಂದ ಸುತ್ತುವರೆದನು. ಆಗ ಶತ್ರುಗಳೊಂದಿಗೆ ಅರ್ಜುನನ ಯುದ್ಧವು ಪ್ರಾರಂಭವಾಯಿತು."

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಮಪರಾಕ್ರಮೇ ನವಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಮಪರಾಕ್ರಮ ಎನ್ನುವ ನೂರಾಒಂಭತ್ತನೇ ಅಧ್ಯಾಯವು.

Image result for indian motifs against white background

Comments are closed.