Bhishma Parva: Chapter 104

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೦೪

ಹತ್ತನೆಯ ದಿನದ ಯುದ್ಧ

ಪಾಂಡವ ಸೇನಾವ್ಯೂಹ (೧-೧೦). ಕೌರವ ವ್ಯೂಹರಚನೆ (೧೧-೧೬).  ಭೀಷ್ಮ-ಶಿಖಂಡೀ ಸಮಾಗಮ (೧೭-೫೮).

Image result for shikhandi and Bhishma06104001 ಧೃತರಾಷ್ಟ್ರ ಉವಾಚ|

06104001a ಕಥಂ ಶಿಖಂಡೀ ಗಾಂಗೇಯಮಭ್ಯವರ್ತತ ಸಂಯುಗೇ|

06104001c ಪಾಂಡವಾಶ್ಚ ತಥಾ ಭೀಷ್ಮಂ ತನ್ಮಮಾಚಕ್ಷ್ವ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಶಿಖಂಡಿಯು ಸಂಯುಗದಲ್ಲಿ ಹೇಗೆ ಗಾಂಗೇಯನನ್ನು ಮತ್ತು ಪಾಂಡವರೂ ಭೀಷ್ಮನನ್ನು ಹೇಗೆ ಎದುರಿಸಿದರು ಎನ್ನುವುದನ್ನು ನನಗೆ ಹೇಳು.”

06104002 ಸಂಜಯ ಉವಾಚ|

06104002a ತತಃ ಪ್ರಭಾತೇ ವಿಮಲೇ ಸೂರ್ಯಸ್ಯೋದಯನಂ ಪ್ರತಿ|

06104002c ವಾದ್ಯಮಾನಾಸು ಭೇರೀಷು ಮೃದಂಗೇಷ್ವಾನಕೇಷು ಚ||

06104003a ಧ್ಮಾಯತ್ಸು ದಧಿವರ್ಣೇಷು ಜಲಜೇಷು ಸಮಂತತಃ|

06104003c ಶಿಖಂಡಿನಂ ಪುರಸ್ಕೃತ್ಯ ನಿರ್ಯಾತಾಃ ಪಾಂಡವಾ ಯುಧಿ||

ಸಂಜಯನು ಹೇಳಿದನು: “ಆಗ ವಿಮಲ ಪ್ರಭಾತದಲ್ಲಿ ಸೂರ್ಯೋದಯವಾಗುತ್ತಲೇ ಭೇರಿ ಮೃದಂಗ ಮತ್ತು ಡೋಲುಗಳನ್ನು ಬಾರಿಸಲು, ಮೊಸರಿನಂತೆ ಬಿಳುಪಾಗಿದ್ದ ಶಂಖಗಳನ್ನು ಎಲ್ಲೆಡೆಯೂ ಊದುತ್ತಿರಲು ಶಿಖಂಡಿಯನ್ನು ಮುಂದಿರಿಸಿಕೊಂಡು ಪಾಂಡವರು ಯುದ್ಧಕ್ಕೆ ಹೊರಟರು.

06104004a ಕೃತ್ವಾ ವ್ಯೂಹಂ ಮಹಾರಾಜ ಸರ್ವಶತ್ರುನಿಬರ್ಹಣಂ|

06104004c ಶಿಖಂಡೀ ಸರ್ವಸೈನ್ಯಾನಾಮಗ್ರ ಆಸೀದ್ವಿಶಾಂ ಪತೇ||

ವಿಶಾಂಪತೇ! ಮಹಾರಾಜ! ಸರ್ವಶತ್ರುಗಳನ್ನೂ ವಿನಾಶಗೊಳಿಸಬಲ್ಲ ವ್ಯೂಹವನ್ನು ರಚಿಸಿ ಶಿಖಂಡಿಯು ಸರ್ವ ಸೇನೆಗಳ ಅಗ್ರಸ್ಥಾನದಲ್ಲಿದ್ದನು.

06104005a ಚಕ್ರರಕ್ಷೌ ತತಸ್ತಸ್ಯ ಭೀಮಸೇನಧನಂಜಯೌ|

06104005c ಪೃಷ್ಠತೋ ದ್ರೌಪದೇಯಾಶ್ಚ ಸೌಭದ್ರಶ್ಚೈವ ವೀರ್ಯವಾನ್||

06104006a ಸಾತ್ಯಕಿಶ್ಚೇಕಿತಾನಶ್ಚ ತೇಷಾಂ ಗೋಪ್ತಾ ಮಹಾರಥಃ|

06104006c ಧೃಷ್ಟದ್ಯುಮ್ನಸ್ತತಃ ಪಶ್ಚಾತ್ಪಾಂಚಾಲೈರಭಿರಕ್ಷಿತಃ||

ಅವನ ಚಕ್ರಗಳನ್ನು ಭೀಮಸೇನ-ಧನಂಜಯರು ರಕ್ಷಿಸುತ್ತಿದ್ದರು. ಹಿಂಬದಿಯಲ್ಲಿ ದ್ರೌಪದಿಯ ಮಕ್ಕಳೂ, ಸೌಭದ್ರನೂ ಇದ್ದರು. ಮಹಾರಥ ಸಾತ್ಯಕಿ ಮತ್ತು ಚೇಕಿತಾನರು ಅವರನ್ನು ರಕ್ಷಿಸುತ್ತಿದ್ದರು. ಅವರ ಹಿಂದೆ ಪಾಂಚಾಲರಿಂದ ರಕ್ಷಿತನಾದ ಧೃಷ್ಟದ್ಯುಮ್ನನಿದ್ದನು.

06104007a ತತೋ ಯುಧಿಷ್ಠಿರೋ ರಾಜಾ ಯಮಾಭ್ಯಾಂ ಸಹಿತಃ ಪ್ರಭುಃ|

06104007c ಪ್ರಯಯೌ ಸಿಂಹನಾದೇನ ನಾದಯನ್ಭರತರ್ಷಭ||

ಭರತರ್ಷಭ! ಅನಂತರ ರಾಜಾ ಪ್ರಭು ಯುಧಿಷ್ಠಿರನು ಯಮಳ ಸಹಿತ ಸಿಂಹನಾದ ಗೈಯುತ್ತಾ ಹೊರಟನು.

06104008a ವಿರಾಟಸ್ತು ತತಃ ಪಶ್ಚಾತ್ಸ್ವೇನ ಸೈನ್ಯೇನ ಸಂವೃತಃ|

06104008c ದ್ರುಪದಶ್ಚ ಮಹಾರಾಜ ತತಃ ಪಶ್ಚಾದುಪಾದ್ರವತ್||

ಮಹಾರಾಜ! ಅನಂತರ ಹಿಂದೆ ತನ್ನ ಸೈನ್ಯದಿಂದ ಸಂವೃತನಾಗಿ ವಿರಾಟನೂ ಅವನ ನಂತರ ದ್ರುಪದನೂ ಹೊರಟರು.

06104009a ಕೇಕಯಾ ಭ್ರಾತರಃ ಪಂಚ ಧೃಷ್ಟಕೇತುಶ್ಚ ವೀರ್ಯವಾನ್|

06104009c ಜಘನಂ ಪಾಲಯಾಮಾಸ ಪಾಂಡುಸೈನ್ಯಸ್ಯ ಭಾರತ||

ಭಾರತ! ಐವರು ಕೇಕಯ ಸಹೋದರರೂ, ವೀರ್ಯವಾನ್ ಧೃಷ್ಟಕೇತುವೂ ಪಾಂಡುಸೇನೆಯ ಜಘನಪ್ರದೇಶವನ್ನು ಕಾಯುತ್ತಿದ್ದರು.

06104010a ಏವಂ ವ್ಯೂಹ್ಯ ಮಹತ್ಸೈನ್ಯಂ ಪಾಂಡವಾಸ್ತವ ವಾಹಿನೀಂ|

06104010c ಅಭ್ಯದ್ರವಂತ ಸಂಗ್ರಾಮೇ ತ್ಯಕ್ತ್ವಾ ಜೀವಿತಮಾತ್ಮನಃ||

ಈ ರೀತಿ ಮಹಾಸೈನ್ಯವನ್ನು ಮಹಾವ್ಯೂಹವನ್ನಾಗಿ ರಚಿಸಿ ಪಾಂಡವರು ಸಂಗ್ರಾಮದಲ್ಲಿ ತಮ್ಮ ಜೀವವನ್ನು ತೊರೆದು ನಿನ್ನ ಸೇನೆಯನ್ನು ಎದುರಿಸಿದರು.

06104011a ತಥೈವ ಕುರವೋ ರಾಜನ್ಭೀಷ್ಮಂ ಕೃತ್ವಾ ಮಹಾಬಲಂ|

06104011c ಅಗ್ರತಃ ಸರ್ವಸೈನ್ಯಾನಾಂ ಪ್ರಯಯುಃ ಪಾಂಡವಾನ್ಪ್ರತಿ||

06104012a ಪುತ್ರೈಸ್ತವ ದುರಾಧರ್ಷೈ ರಕ್ಷಿತಃ ಸುಮಹಾಬಲೈಃ|

06104012c ತತೋ ದ್ರೋಣೋ ಮಹೇಷ್ವಾಸಃ ಪುತ್ರಶ್ಚಾಸ್ಯ ಮಹಾರಥಃ||

ರಾಜನ್! ಹಾಗೆಯೇ ಕುರುಗಳು ನಿನ್ನ ದುರಾಧರ್ಷ ಸುಮಹಾಬಲ ಮಕ್ಕಳಿಂದ, ಅನಂತರ ಮಹೇಷ್ವಾಸ ದ್ರೋಣ ಮತ್ತು ಅವನ ಮಹಾರಥ ಮಗನಿಂದ ರಕ್ಷಿಸಲ್ಪಟ್ಟ ಮಹಾಬಲ ಭೀಷ್ಮನನ್ನು ಸರ್ವ ಸೈನ್ಯಗಳ ಅಗ್ರನನ್ನಾಗಿ ಮಾಡಿಕೊಂಡು ಪಾಂಡವರನ್ನು ಎದುರಿಸಿ ಹೋದರು.

06104013a ಭಗದತ್ತಸ್ತತಃ ಪಶ್ಚಾದ್ಗಜಾನೀಕೇನ ಸಂವೃತಃ|

06104013c ಕೃಪಶ್ಚ ಕೃತವರ್ಮಾ ಚ ಭಗದತ್ತಮನುವ್ರತೌ||

06104014a ಕಾಂಬೋಜರಾಜೋ ಬಲವಾಂಸ್ತತಃ ಪಶ್ಚಾತ್ಸುದಕ್ಷಿಣಃ|

06104014c ಮಾಗಧಶ್ಚ ಜಯತ್ಸೇನಃ ಸೌಬಲಶ್ಚ ಬೃಹದ್ಬಲಃ||

06104015a ತಥೇತರೇ ಮಹೇಷ್ವಾಸಾಃ ಸುಶರ್ಮಪ್ರಮುಖಾ ನೃಪಾಃ|

06104015c ಜಘನಂ ಪಾಲಯಾಮಾಸುಸ್ತವ ಸೈನ್ಯಸ್ಯ ಭಾರತ||

ಅವರ ನಂತರ ಗಜಸೇನೆಯಿಂದ ಸಂವೃತನಾದ ಭಗದತ್ತನಿದ್ದನು. ಭಗದತ್ತನನ್ನು ಅನುಸರಿಸಿ ಕೃಪ ಮತ್ತು ಕೃತವರ್ಮರಿಬ್ಬರಿದ್ದರು. ಅನಂತರ ಕಾಂಬೋಜರಾಜ ಬಲವಾನ್ ಸುದಕ್ಷಿಣ, ಮಾಗಧ, ಜಯತ್ಸೇನ, ಸೌಬಲ, ಬೃಹದ್ಬಲರಿದ್ದರು. ಅನಂತರ ಭಾರತ! ಸುಶರ್ಮನೇ ಮೊದಲಾದ ಇತರ ಮಹೇಷ್ವಾಸ ನೃಪರು ನಿನ್ನ ಸೇನೆಯ ಹಿಂಬಾಗವನ್ನು ಪಾಲಿಸುತ್ತಿದ್ದರು.

06104016a ದಿವಸೇ ದಿವಸೇ ಪ್ರಾಪ್ತೇ ಭೀಷ್ಮಃ ಶಾಂತನವೋ ಯುಧಿ|

06104016c ಆಸುರಾನಕರೋದ್ವ್ಯೂಹಾನ್ಪೈಶಾಚಾನಥ ರಾಕ್ಷಸಾನ್||

ದಿವಸಗಳು ಕಳೆದಂತೆಲ್ಲ ಭೀಷ್ಮ ಶಾಂತನವನು ಯುದ್ಧದಲ್ಲಿ ಅಸುರ, ಪೈಶಾಚ ಮತ್ತು ರಾಕ್ಷಸವ್ಯೂಹಗಳನ್ನು ರಚಿಸುತ್ತಿದ್ದನು.

06104017a ತತಃ ಪ್ರವವೃತೇ ಯುದ್ಧಂ ತವ ತೇಷಾಂ ಚ ಭಾರತ|

06104017c ಅನ್ಯೋನ್ಯಂ ನಿಘ್ನತಾಂ ರಾಜನ್ಯಮರಾಷ್ಟ್ರವಿವರ್ಧನಂ||

ಭಾರತ! ಆಗ ನಿನ್ನವರ ಮತ್ತು ಅವರ ನಡುವೆ ಅನ್ಯೋನ್ಯರನ್ನು ಸಂಹರಿಸುವ, ಯಮರಾಷ್ಟ್ರವನ್ನು ವರ್ಧಿಸುವ ಯುದ್ಧವು ಪ್ರಾರಂಭವಾಯಿತು.

06104018a ಅರ್ಜುನಪ್ರಮುಖಾಃ ಪಾರ್ಥಾಃ ಪುರಸ್ಕೃತ್ಯ ಶಿಖಂಡಿನಂ|

06104018c ಭೀಷ್ಮಂ ಯುದ್ಧೇಽಭ್ಯವರ್ತಂತ ಕಿರಂತೋ ವಿವಿಧಾನ್ಶರಾನ್||

ಅರ್ಜುನ ಪ್ರಮುಖ ಪಾರ್ಥರು ಶಿಖಂಡಿಯನ್ನು ಮುಂದಿರಿಸಿಕೊಂಡು ವಿವಿಧ ಶರಗಳನ್ನು ಬೀರುತ್ತಾ ಯುದ್ಧದಲ್ಲಿ ಭೀಷ್ಮನನ್ನು ಎದುರಿಸಿದರು.

06104019a ತತ್ರ ಭಾರತ ಭೀಮೇನ ಪೀಡಿತಾಸ್ತಾವಕಾಃ ಶರೈಃ|

06104019c ರುಧಿರೌಘಪರಿಕ್ಲಿನ್ನಾಃ ಪರಲೋಕಂ ಯಯುಸ್ತದಾ||

ಭಾರತ! ಅಲ್ಲಿ ಭೀಮನ ಶರಗಳಿಂದ ಪೀಡಿತರಾದ ನಿನ್ನವರು ರಕ್ತದಿಂದ ತೋಯ್ದು ಅಸುನೀಗಿ ಪರಲೋಕಕ್ಕೆ ನಡೆದರು.

06104020a ನಕುಲಃ ಸಹದೇವಶ್ಚ ಸಾತ್ಯಕಿಶ್ಚ ಮಹಾರಥಃ|

06104020c ತವ ಸೈನ್ಯಂ ಸಮಾಸಾದ್ಯ ಪೀಡಯಾಮಾಸುರೋಜಸಾ||

ನಕುಲ, ಸಹದೇವ ಮತ್ತು ಮಹಾರಥ ಸಾತ್ಯಕಿಯರು ನಿನ್ನ ಸೇನೆಯ ಮೇಲೆರಗಿ ಓಜಸ್ಸಿನಿಂದ ಬಹಳವಾಗಿ ಪೀಡಿಸಿದರು.

06104021a ತೇ ವಧ್ಯಮಾನಾಃ ಸಮರೇ ತಾವಕಾ ಭರತರ್ಷಭ|

06104021c ನಾಶಕ್ನುವನ್ವಾರಯಿತುಂ ಪಾಂಡವಾನಾಂ ಮಹದ್ಬಲಂ||

ಭರತರ್ಷಭ! ಅವರಿಂದ ವಧಿಸಲ್ಪಡುತ್ತಿದ್ದ ನಿನ್ನವರು ಸಮರದಲ್ಲಿ ಪಾಂಡವರ ಮಹಾಸೇನೆಯನ್ನು ತಡೆಯಲು ಅಶಕ್ಯರಾದರು.

06104022a ತತಸ್ತು ತಾವಕಂ ಸೈನ್ಯಂ ವಧ್ಯಮಾನಂ ಸಮಂತತಃ|

06104022c ಸಂಪ್ರಾದ್ರವದ್ದಿಶೋ ರಾಜನ್ಕಾಲ್ಯಮಾನಂ ಮಹಾರಥೈಃ||

ರಾಜನ್! ಆಗ ಮಹಾರಥರಿಂದ ವಧಿಸಲ್ಪಡುತ್ತಿರುವ ನಿನ್ನವರ ಸೇನೆಯು ಎಲ್ಲಕಡೆಗಳಲ್ಲಿ ದಿಕ್ಕುಗಳಲ್ಲಿ ಪಲಾಯನ ಮಾಡತೊಡಗಿತು.

06104023a ತ್ರಾತಾರಂ ನಾಧ್ಯಗಚ್ಛಂತ ತಾವಕಾ ಭರತರ್ಷಭ|

06104023c ವಧ್ಯಮಾನಾಃ ಶಿತೈರ್ಬಾಣೈಃ ಪಾಂಡವೈಃ ಸಹಸೃಂಜಯೈಃ||

ಭರತರ್ಷಭ! ಪಾಂಡವರಿಂದಲೂ ಸೃಂಜಯರಿಂದಲೂ ನಿಶಿತ ಬಾಣಗಳಿಂದ ವಧಿಸಲ್ಪಡುತ್ತಿರುವ ನಿನ್ನವರು ರಕ್ಷಕರನ್ನೇ ಕಾಣದಾದರು.”

06104024 ಧೃತರಾಷ್ಟ್ರ ಉವಾಚ|

06104024a ಪೀಡ್ಯಮಾನಂ ಬಲಂ ಪಾರ್ಥೈರ್ದೃಷ್ಟ್ವಾ ಭೀಷ್ಮಃ ಪರಾಕ್ರಮೀ|

06104024c ಯದಕಾರ್ಷೀದ್ರಣೇ ಕ್ರುದ್ಧಸ್ತನ್ಮಮಾಚಕ್ಷ್ವ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ರಣದಲ್ಲಿ ಪಾರ್ಥರಿಂದ ಸೇನೆಯು ಪೀಡಿತವಾಗುತ್ತಿರುವುದನ್ನು ನೋಡಿ ಪರಾಕ್ರಮೀ ಭೀಷ್ಮನು ಕ್ರುದ್ಧನಾಗಿ ಏನು ಮಾಡಿದನು ಎನ್ನುವುದನ್ನು ನನಗೆ ಹೇಳು.

06104025a ಕಥಂ ವಾ ಪಾಂಡವಾನ್ಯುದ್ಧೇ ಪ್ರತ್ಯುದ್ಯಾತಃ ಪರಂತಪಃ|

06104025c ವಿನಿಘ್ನನ್ಸೋಮಕಾನ್ವೀರಾಂಸ್ತನ್ಮಮಾಚಕ್ಷ್ವ ಸಂಜಯ||

ಸಂಜಯ! ಆ ಪರಂತಪನು ಯುದ್ಧದಲ್ಲಿ ಹೇಗೆ ಪಾಂಡವರನ್ನು ಎದುರಿಸಿ ವೀರ ಸೋಮಕರನ್ನು ಸಂಹರಿಸಿದ ಎನ್ನುವುದನ್ನು ನನಗೆ ಹೇಳು.”

06104026 ಸಂಜಯ ಉವಾಚ|

06104026a ಆಚಕ್ಷೇ ತೇ ಮಹಾರಾಜ ಯದಕಾರ್ಷೀತ್ಪಿತಾಮಹಃ|

06104026c ಪೀಡಿತೇ ತವ ಪುತ್ರಸ್ಯ ಸೈನ್ಯೇ ಪಾಂಡವಸೃಂಜಯೈಃ||

ಸಂಜಯನು ಹೇಳಿದನು: “ಮಹಾರಾಜ! ಪಾಂಡವ-ಸೃಂಜಯರಿಂದ ಪೀಡಿತರಾದ ನಿನ್ನ ಪುತ್ರನ ಸೇನೆಯ ಕುರಿತು ಪಿತಾಮಹನು ಏನು ಮಾಡಿದನೆಂದು ನಿನಗೆ ಹೇಳುತ್ತೇನೆ.

06104027a ಪ್ರಹೃಷ್ಟಮನಸಃ ಶೂರಾಃ ಪಾಂಡವಾಃ ಪಾಂಡುಪೂರ್ವಜ|

06104027c ಅಭ್ಯವರ್ತಂತ ನಿಘ್ನಂತಸ್ತವ ಪುತ್ರಸ್ಯ ವಾಹಿನೀಂ||

ಪಾಂಡುಪೂರ್ವಜ! ಪ್ರಹೃಷ್ಟಮನಸ್ಕರಾದ ಶೂರ ಪಾಂಡವರು ನಿನ್ನ ಮಗನ ಸೇನೆಯನ್ನು ಸಂಹರಿಸುತ್ತಾ ಮುಂದುವರೆದರು.

06104028a ತಂ ವಿನಾಶಂ ಮನುಷ್ಯೇಂದ್ರ ನರವಾರಣವಾಜಿನಾಂ|

06104028c ನಾಮೃಷ್ಯತ ತದಾ ಭೀಷ್ಮಃ ಸೈನ್ಯಘಾತಂ ರಣೇ ಪರೈಃ||

ಮನುಷ್ಯೇಂದ್ರ! ರಣದಲ್ಲಿ ಶತ್ರುಗಳಿಂದ ಸೈನ್ಯಾಘಾತವನ್ನೂ, ನರ-ವಾರಣ-ವಾಜಿಗಳ ವಿನಾಶವನ್ನೂ ಭೀಷ್ಮನು ಸಹಿಸಿಕೊಳ್ಳಲಿಲ್ಲ.

06104029a ಸ ಪಾಂಡವಾನ್ಮಹೇಷ್ವಾಸಃ ಪಾಂಚಾಲಾಂಶ್ಚ ಸಸೃಂಜಯಾನ್|

06104029c ಅಭ್ಯದ್ರವತ ದುರ್ಧರ್ಷಸ್ತ್ಯಕ್ತ್ವಾ ಜೀವಿತಮಾತ್ಮನಃ||

ಆ ಮಹೇಷ್ವಾಸ ದುರ್ಧರ್ಷನು ತನ್ನ ಜೀವವನ್ನೂ ತೊರೆದು ಪಾಂಡವರನ್ನು, ಪಾಂಚಾಲರನ್ನು ಮತ್ತು ಸೃಂಜಯರನ್ನು ಎದುರಿಸಿದನು.

06104030a ಸ ಪಾಂಡವಾನಾಂ ಪ್ರವರಾನ್ಪಂಚ ರಾಜನ್ಮಹಾರಥಾನ್|

06104030c ಆತ್ತಶಸ್ತ್ರಾನ್ರಣೇ ಯತ್ತಾನ್ವಾರಯಾಮಾಸ ಸಾಯಕೈಃ|

06104030e ನಾರಾಚೈರ್ವತ್ಸದಂತೈಶ್ಚ ಶಿತೈರಂಜಲಿಕೈಸ್ತಥಾ||

ರಾಜನ್! ಅವನು ರಣದಲ್ಲಿ ಶಸ್ತ್ರಗಳನ್ನು ಪ್ರಯೋಗಿಸಿ ವತ್ಸದಂತ, ನಾರಾಚ, ನಿಶಿತ ಅಂಜಲಿಕಗಳು ಮತ್ತು ಸಾಯಕಗಳಿಂದ ಮಹಾರಥ ಪಾಂಡವರ ಐವರು ಪ್ರಮುಖರನ್ನು ತಡೆದನು.

06104031a ನಿಜಘ್ನೇ ಸಮರೇ ಕ್ರುದ್ಧೋ ಹಸ್ತ್ಯಶ್ವಮಮಿತಂ ಬಹು|

06104031c ರಥಿನೋಽಪಾತಯದ್ರಾಜನ್ರಥೇಭ್ಯಃ ಪುರುಷರ್ಷಭಃ||

06104032a ಸಾದಿನಶ್ಚಾಶ್ವಪೃಷ್ಠೇಭ್ಯಃ ಪದಾತೀಂಶ್ಚ ಸಮಾಗತಾನ್|

06104032c ಗಜಾರೋಹಾನ್ಗಜೇಭ್ಯಶ್ಚ ಪರೇಷಾಂ ವಿದಧದ್ಭಯಂ||

ರಾಜನ್! ಆ ಪುರುಷರ್ಷಭನು ಸಮರದಲ್ಲಿ ಕ್ರುದ್ಧನಾಗಿ ಬಹಳಷ್ಟು ಅಮಿತ ಆನೆ-ಅಶ್ವಗಳನ್ನು ಸಂಹರಿಸಿದನು. ಅವನು ರಥಿಗಳನ್ನು ರಥಗಳಿಂದ, ಅಶ್ವಾರೋಹಿಗಳನ್ನು ಅಶ್ವಗಳ ಬೆನ್ನಮೇಲಿಂದ, ಗಜಾರೋಹಿಗಳನ್ನು ಆನೆಗಳ ಮೇಲಿಂದ ಉರುಳಿಸಿ ಶತ್ರುಗಳಲ್ಲಿ ಭಯವನ್ನುಂಟುಮಾಡಿದನು.

06104033a ತಮೇಕಂ ಸಮರೇ ಭೀಷ್ಮಂ ತ್ವರಮಾಣಂ ಮಹಾರಥಂ|

06104033c ಪಾಂಡವಾಃ ಸಮವರ್ತಂತ ವಜ್ರಪಾಣಿಮಿವಾಸುರಾಃ||

ಸಮರದಲ್ಲಿ ತ್ವರೆಮಾಡುತ್ತಿದ್ದ ಆ ಮಹಾರಥ ಭೀಷ್ಮನೊಬ್ಬನನ್ನೇ ಪಾಂಡವರು ವಜ್ರಪಾಣಿಯನ್ನು ಅಸುರರು ಹೇಗೋ ಹಾಗೆ ಸುತ್ತುವರೆದು ಮುತ್ತಿಗೆ ಹಾಕಿದರು.

06104034a ಶಕ್ರಾಶನಿಸಮಸ್ಪರ್ಶಾನ್ವಿಮುಂಚನ್ನಿಶಿತಾಂ ಶರಾನ್|

06104034c ದಿಕ್ಷ್ವದೃಶ್ಯತ ಸರ್ವಾಸು ಘೋರಂ ಸಂಧಾರಯನ್ವಪುಃ||

ತಾಗಲು ಇಂದ್ರನ ವಜ್ರದಂತಿರುವ ನಿಶಿತ ಶರಗಳನ್ನು ಎಲ್ಲ ಕಡೆಗಳಿಂದಲೂ ಪ್ರಯೋಗಿಸುತ್ತಿರುವ ಅವನು ಘೋರ ರೂಪವನ್ನು ತಾಳಿಕೊಂಡಿರುವಂತೆ ಕಂಡನು.

06104035a ಮಂಡಲೀಕೃತಮೇವಾಸ್ಯ ನಿತ್ಯಂ ಧನುರದೃಶ್ಯತ|

06104035c ಸಂಗ್ರಾಮೇ ಯುಧ್ಯಮಾನಸ್ಯ ಶಕ್ರಚಾಪನಿಭಂ ಮಹತ್||

ಸಂಗ್ರಾಮದಲ್ಲಿ ಯುದ್ಧ ಮಾಡುತ್ತಿದ್ದ ಅವನ ಮಹಾ ಧನುಸ್ಸು ಇಂದ್ರನ ಧನುಸ್ಸಿನಂತೆ ನಿತ್ಯವೂ ಮಂಡಲಾಕಾರದಲ್ಲಿದ್ದುದು ಕಂಡುಬಂದಿತು.

06104036a ತದ್ದೃಷ್ಟ್ವಾ ಸಮರೇ ಕರ್ಮ ತವ ಪುತ್ರಾ ವಿಶಾಂ ಪತೇ|

06104036c ವಿಸ್ಮಯಂ ಪರಮಂ ಪ್ರಾಪ್ತಾಃ ಪಿತಾಮಹಮಪೂಜಯನ್||

ವಿಶಾಂಪತೇ! ಸಮರದಲ್ಲಿ ಅವನ ಕರ್ಮವನ್ನು ನೋಡಿ ನಿನ್ನ ಪುತ್ರರು ಪರಮ ವಿಸ್ಮಿತರಾಗಿ ಪಿತಾಮಹನನ್ನು ಗೌರವಿಸಿದರು.

06104037a ಪಾರ್ಥಾ ವಿಮನಸೋ ಭೂತ್ವಾ ಪ್ರೈಕ್ಷಂತ ಪಿತರಂ ತವ|

06104037c ಯುಧ್ಯಮಾನಂ ರಣೇ ಶೂರಂ ವಿಪ್ರಚಿತ್ತಿಮಿವಾಮರಾಃ|

06104037e ನ ಚೈನಂ ವಾರಯಾಮಾಸುರ್ವ್ಯಾತ್ತಾನನಮಿವಾಂತಕಂ||

ರಣದಲ್ಲಿ ಯುದ್ಧ ಮಾಡುತ್ತಿದ್ದ ಶೂರ ವಿಪ್ರಚಿತ್ತಿಯನ್ನು ಅಮರರು ಹೇಗೋ ಹಾಗೆ ನಿನ್ನ ತಂದೆಯನ್ನು ಪಾರ್ಥರು ವಿಮನಸ್ಕರಾಗಿ ನೋಡುತ್ತಿದ್ದರು. ಬಾಯ್ತರೆದ ಅಂತಕನಂತಿದ್ದ ಅವನನ್ನು ತಡೆಯಲು ಅವರಿಗಾಗಲಿಲ್ಲ.

06104038a ದಶಮೇಽಹನಿ ಸಂಪ್ರಾಪ್ತೇ ರಥಾನೀಕಂ ಶಿಖಂಡಿನಃ|

06104038c ಅದಹನ್ನಿಶಿತೈರ್ಬಾಣೈಃ ಕೃಷ್ಣವರ್ತ್ಮೇವ ಕಾನನಂ||

ಅಂದಿನ ಹತ್ತನೆಯ ದಿವಸದಂದು ಭೀಷ್ಮನು ತನ್ನ ನಿಶಿತ ಬಾಣಗಳಿಂದ ಬೆಂಕಿಯು ಕಾಡನ್ನು ಸುಡುವಂತೆ ಶಿಖಂಡಿಯ ರಥಸೇನೆಯನ್ನು ಸುಟ್ಟುಹಾಕಿದನು.

06104039a ತಂ ಶಿಖಂಡೀ ತ್ರಿಭಿರ್ಬಾಣೈರಭ್ಯವಿಧ್ಯತ್ಸ್ತನಾಂತರೇ|

06104039c ಆಶೀವಿಷಮಿವ ಕ್ರುದ್ಧಂ ಕಾಲಸೃಷ್ಟಮಿವಾಂತಕಂ||

ಶಿಖಂಡಿಯು ಕಾಲನು ಸೃಷ್ಟಿಸಿದ ಅಂತಕನಂತೆ ಕ್ರುದ್ಧನಾಗಿ ಅವನನ್ನು ಸ್ತನಾಂತರದಲ್ಲಿ ಮೂರು ಸರ್ಪವಿಷದಂತಿರುವ ಬಾಣಗಳಿಂದ ಹೊಡೆದನು.

06104040a ಸ ತೇನಾತಿಭೃಶಂ ವಿದ್ಧಃ ಪ್ರೇಕ್ಷ್ಯ ಭೀಷ್ಮಃ ಶಿಖಂಡಿನಂ|

06104040c ಅನಿಚ್ಛನ್ನಪಿ ಸಂಕ್ರುದ್ಧಃ ಪ್ರಹಸನ್ನಿದಮಬ್ರವೀತ್||

ಆಳವಾಗಿ ಚುಚ್ಚಿದ ಬಾಣಗಳು ಶಿಖಂಡಿಯವು ಎಂದು ನೋಡಿದ ಭೀಷ್ಮನು ಸಂಕ್ರುದ್ಧನಾದರೂ ತಿರುಗಿ ಹೊಡೆಯದೇ ನಗುತ್ತಾ ಇದನ್ನು ಹೇಳಿದನು:

06104041a ಕಾಮಮಭ್ಯಸ ವಾ ಮಾ ವಾ ನ ತ್ವಾಂ ಯೋತ್ಸ್ಯೇ ಕಥಂ ಚನ|

06104041c ಯೈವ ಹಿ ತ್ವಂ ಕೃತಾ ಧಾತ್ರಾ ಸೈವ ಹಿ ತ್ವಂ ಶಿಖಂಡಿನೀ||

“ನನ್ನನ್ನು ನೀನು ಹೊಡೆಯಲು ಬಯಸುತ್ತೀಯೋ ಇಲ್ಲವೋ ನಾನು ಎಂದೂ ನಿನ್ನೊಡನೆ ಯುದ್ಧ ಮಾಡುವುದಿಲ್ಲ. ಏಕೆಂದರೆ ಧಾತ್ರನು ನಿನ್ನನ್ನು ಹೇಗೆ ಮಾಡಿದ್ದನೋ ಅದೇ ಶಿಖಂಡಿನಿಯು ನೀನು.”

06104042a ತಸ್ಯ ತದ್ವಚನಂ ಶ್ರುತ್ವಾ ಶಿಖಂಡೀ ಕ್ರೋಧಮೂರ್ಚಿತಃ|

06104042c ಉವಾಚ ಭೀಷ್ಮಂ ಸಮರೇ ಸೃಕ್ಕಿಣೀ ಪರಿಲೇಲಿಹನ್||

ಅವನ ಆ ಮಾತನ್ನು ಕೇಳಿ ಕ್ರೋಧಮೂರ್ಛಿತನಾದ ಶಿಖಂಡಿಯು ಕಟವಾಯಿಯನ್ನು ನೆಕ್ಕುತ್ತಾ ಸಮರದಲ್ಲಿ ಭೀಷ್ಮನಿಗೆ ಹೇಳಿದನು:

06104043a ಜಾನಾಮಿ ತ್ವಾಂ ಮಹಾಬಾಹೋ ಕ್ಷತ್ರಿಯಾಣಾಂ ಕ್ಷಯಂಕರಂ|

06104043c ಮಯಾ ಶ್ರುತಂ ಚ ತೇ ಯುದ್ಧಂ ಜಾಮದಗ್ನ್ಯೇನ ವೈ ಸಹ||

“ಮಹಾಬಾಹೋ! ಕ್ಷತ್ರಿಯರ ಕ್ಷಯಂಕರನಾದ ನಿನ್ನನ್ನು ನಾನು ಬಲ್ಲೆ. ನೀನು ಜಾಮದಗ್ನಿಯೊಡನೆಯೂ ಯುದ್ಧಮಾಡಿದ್ದೆಯೆಂದು ಕೇಳಿದ್ದೇನೆ.

06104044a ದಿವ್ಯಶ್ಚ ತೇ ಪ್ರಭಾವೋಽಯಂ ಸ ಮಯಾ ಬಹುಶಃ ಶ್ರುತಃ|

06104044c ಜಾನನ್ನಪಿ ಪ್ರಭಾವಂ ತೇ ಯೋತ್ಸ್ಯೇಽದ್ಯಾಹಂ ತ್ವಯಾ ಸಹ||

ನಿನ್ನ ಪ್ರಭಾವವು ದಿವ್ಯವಾದುದೆಂದು ನಾನು ಬಹಳ ಕೇಳಿದ್ದೇನೆ. ನಿನ್ನ ಪ್ರಭಾವವನ್ನು ತಿಳಿದೂ ನಾನು ಇಂದು ನಿನ್ನೊಡನೆ ಯುದ್ಧಮಾಡಲು ಬಯಸುತ್ತೇನೆ.

06104045a ಪಾಂಡವಾನಾಂ ಪ್ರಿಯಂ ಕುರ್ವನ್ನಾತ್ಮನಶ್ಚ ನರೋತ್ತಮ|

06104045c ಅದ್ಯ ತ್ವಾ ಯೋಧಯಿಷ್ಯಾಮಿ ರಣೇ ಪುರುಷಸತ್ತಮ||

ನರೋತ್ತಮ! ಪುರುಷಸತ್ತಮ! ಪಾಂಡವರಿಗೂ ಮತ್ತು ನನಗೂ ಪ್ರಿಯವಾದುದನ್ನು ಮಾಡಲು ನಾನು ಇಂದು ರಣದಲ್ಲಿ ನಿನ್ನೊಡನೆ ಹೋರಾಡುತ್ತೇನೆ.

06104046a ಧ್ರುವಂ ಚ ತ್ವಾ ಹನಿಷ್ಯಾಮಿ ಶಪೇ ಸತ್ಯೇನ ತೇಽಗ್ರತಃ|

06104046c ಏತಚ್ಚ್ರುತ್ವಾ ವಚೋ ಮಹ್ಯಂ ಯತ್ ಕ್ಷಮಂ ತತ್ಸಮಾಚರ||

ನಾನು ಖಂಡಿತವಾಗಿಯೂ ನಿನ್ನನ್ನು ಕೊಲ್ಲುತ್ತೇನೆ. ನಿನ್ನ ಮುಂದೆಯೇ ಈ ಸತ್ಯವನ್ನು ಆಣೆಯಿಟ್ಟು ಹೇಳುತ್ತಿದ್ದೇನೆ. ನನ್ನ ಈ ಮಾತನ್ನು ಕೇಳಿ ಏನು ಒಳ್ಳೆಯದೆಂದು ಯೋಚಿಸುತ್ತೀಯೋ ಹಾಗೆ ಮಾಡು.

06104047a ಕಾಮಮಭ್ಯಸ ವಾ ಮಾ ವಾ ನ ಮೇ ಜೀವನ್ವಿಮೋಕ್ಷ್ಯಸೇ|

06104047c ಸುದೃಷ್ಟಃ ಕ್ರಿಯತಾಂ ಭೀಷ್ಮ ಲೋಕೋಽಯಂ ಸಮಿತಿಂಜಯ||

ಸಮಿತಿಂಜಯ! ಭೀಷ್ಮ! ನೀನು ನನ್ನನ್ನು ಹೊಡೆಯಲು ಇಚ್ಛಿಸುತ್ತೀಯೋ ಅಥವಾ ಇಲ್ಲವೋ ನೀನು ಮಾತ್ರ ನನ್ನಿಂದ ಜೀವಂತ ಉಳಿಯಲಾರೆ! ಕೊನೆಯದಾಗಿ ಈ ಲೋಕವನ್ನು ನೋಡಿಕೋ!”

06104048a ಏವಮುಕ್ತ್ವಾ ತತೋ ಭೀಷ್ಮಂ ಪಂಚಭಿರ್ನತಪರ್ವಭಿಃ|

06104048c ಅವಿಧ್ಯತ ರಣೇ ರಾಜನ್ಪ್ರಣುನ್ನಂ ವಾಕ್ಯಸಾಯಕೈಃ||

ರಾಜನ್! ಹೀಗೆ ಹೇಳಿ ಅವನು ರಣದಲ್ಲಿ ಭೀಷ್ಮನನ್ನು ವಾಕ್ಯಸಾಯಕಗಳಲ್ಲದೇ ಐದು ನತಪರ್ವಗಳಿಂದ ಹೊಡೆದನು.

06104049a ತಸ್ಯ ತದ್ವಚನಂ ಶ್ರುತ್ವಾ ಸವ್ಯಸಾಚೀ ಪರಂತಪಃ|

06104049c ಕಾಲೋಽಯಂ ಇತಿ ಸಂಚಿಂತ್ಯ ಶಿಖಂಡಿನಮಚೋದಯತ್||

ಅವನ ಆ ಮತನ್ನು ಕೇಳಿ ಪರಂತಪ ಸವ್ಯಸಾಚಿಯು ಇದೇ ಸಮಯವೆಂದು ಯೋಚಿಸಿ ಶಿಖಂಡಿಯುನ್ನು ಪ್ರಚೋದಿಸಿದನು.

06104050a ಅಹಂ ತ್ವಾಮನುಯಾಸ್ಯಾಮಿ ಪರಾನ್ವಿದ್ರಾವಯಂ ಶರೈಃ|

06104050c ಅಭಿದ್ರವ ಸುಸಂರಬ್ಧೋ ಭೀಷ್ಮಂ ಭೀಮಪರಾಕ್ರಮಂ||

“ನಾನು ನಿನ್ನ ಹಿಂದಿನಿಂದ ಶತ್ರುವನ್ನು ಶರಗಳಿಂದ ಹೊಡೆಯುತ್ತೇನೆ. ಸರಂಬ್ಧನಾಗಿ ಆ ಭೀಮಪರಾಕ್ರಮ ಭೀಷ್ಮನನ್ನು ಆಕ್ರಮಿಸು.

06104051a ನ ಹಿ ತೇ ಸಂಯುಗೇ ಪೀಡಾಂ ಶಕ್ತಃ ಕರ್ತುಂ ಮಹಾಬಲಃ|

06104051c ತಸ್ಮಾದದ್ಯ ಮಹಾಬಾಹೋ ವೀರ ಭೀಷ್ಮಮಭಿದ್ರವ||

ಈ ಮಹಾಬಲನು ಸಂಯುಗದಲ್ಲಿ ನಿನ್ನನ್ನು ಪೀಡಿಸಲು ಅಶಕ್ತನು. ಆದುದರಿಂದ ಇಂದು ವೀರ! ಮಹಾಬಾಹೋ! ಭೀಷ್ಮನ ಮೇಲೆ ಆಕ್ರಮಣ ಮಾಡು.

06104052a ಅಹತ್ವಾ ಸಮರೇ ಭೀಷ್ಮಂ ಯದಿ ಯಾಸ್ಯಸಿ ಮಾರಿಷ|

06104052c ಅವಹಾಸ್ಯೋಽಸ್ಯ ಲೋಕಸ್ಯ ಭವಿಷ್ಯಸಿ ಮಯಾ ಸಹ||

ಮಾರಿಷ! ಒಂದು ವೇಳೆ ನೀನು ಇಂದು ಸಮರದಲ್ಲಿ ಭೀಷ್ಮನನ್ನು ಕೊಲ್ಲದೇ ಹಿಂದಿರುಗಿದರೆ ನನ್ನೊಡನೆ ನೀನೂ ಕೂಡ ಲೋಕದ ಅಪಹಾಸ್ಯಕ್ಕೆ ಈಡಾಗುತ್ತೀಯೆ.

06104053a ನಾವಹಾಸ್ಯಾ ಯಥಾ ವೀರ ಭವೇಮ ಪರಮಾಹವೇ|

06104053c ತಥಾ ಕುರು ರಣೇ ಯತ್ನಂ ಸಾಧಯಸ್ವ ಪಿತಾಮಹಂ||

ವೀರ! ಈ ಪರಮ ಆಹವದಲ್ಲಿ ನಾವು ಅಪಹಾಸ್ಯಕ್ಕೆ ಒಳಗಾಗದಂತೆ ಮಾಡು. ರಣದಲ್ಲಿ ಪಿತಾಮಹನನ್ನು ಕೊಲ್ಲುವ ಪ್ರಯತ್ನವನ್ನು ಮಾಡು.

06104054a ಅಹಂ ತೇ ರಕ್ಷಣಂ ಯುದ್ಧೇ ಕರಿಷ್ಯಾಮಿ ಪರಂತಪ|

06104054c ವಾರಯನ್ರಥಿನಃ ಸರ್ವಾನ್ಸಾಧಯಸ್ವ ಪಿತಾಮಹಂ||

ಪರಂತಪ! ಎಲ್ಲ ರಥಿಗಳನ್ನೂ ತಡೆಹಿಡಿದು ನಾನು ನಿನ್ನ ಯುದ್ಧದಲ್ಲಿ ರಕ್ಷಣೆಯನ್ನು ಮಾಡುತ್ತೇನೆ. ಪಿತಾಮಹನನ್ನು ಸಾಧಿಸು.

06104055a ದ್ರೋಣಂ ಚ ದ್ರೋಣಪುತ್ರಂ ಚ ಕೃಪಂ ಚಾಥ ಸುಯೋಧನಂ|

06104055c ಚಿತ್ರಸೇನಂ ವಿಕರ್ಣಂ ಚ ಸೈಂಧವಂ ಚ ಜಯದ್ರಥಂ||

06104056a ವಿಂದಾನುವಿಂದಾವಾವಂತ್ಯೌ ಕಾಂಬೋಜಂ ಚ ಸುದಕ್ಷಿಣಂ|

06104056c ಭಗದತ್ತಂ ತಥಾ ಶೂರಂ ಮಾಗಧಂ ಚ ಮಹಾರಥಂ||

06104057a ಸೌಮದತ್ತಿಂ ರಣೇ ಶೂರಮಾರ್ಶ್ಯಶೃಂಗಿಂ ಚ ರಾಕ್ಷಸಂ|

06104057c ತ್ರಿಗರ್ತರಾಜಂ ಚ ರಣೇ ಸಹ ಸರ್ವೈರ್ಮಹಾರಥೈಃ||

06104057e ಅಹಮಾವಾರಯಿಷ್ಯಾಮಿ ವೇಲೇವ ಮಕರಾಲಯಂ||

ದ್ರೋಣ, ದ್ರೋಣಪುತ್ರ, ಕೃಪ, ಸುಯೋಧನ, ಚಿತ್ರಸೇನ, ವಿಕರ್ಣ, ಸೈಂಧವ ಜಯದ್ರಥ, ಅವಂತಿಯ ವಿಂದಾನುವಿಂದರು, ಕಾಂಬೋಜದ ಸುದಕ್ಷಿಣ, ಶೂರ ಭಗದತ್ತ, ಮಹಾರಥ ಮಾಗಧ, ರಣಶೂರ ಸೌಮದತ್ತಿ, ರಾಕ್ಷಸ ಆರ್ಶ್ಯಶೃಂಗಿ, ತ್ರಿಗರ್ತರಾಜ, ಮತ್ತು ರಣದಲ್ಲಿ ಸರ್ವ ಮಹಾರಥರನ್ನು ಸಮುದ್ರದ ಅಲೆಗಳನ್ನು ದಡವು ಹೇಗೋ ಹಾಗೆ ತಡೆದು ನಿಲ್ಲಿಸುತ್ತೇನೆ.

06104058a ಕುರೂಂಶ್ಚ ಸಹಿತಾನ್ಸರ್ವಾನ್ಯೇ ಚೈಷಾಂ ಸೈನಿಕಾಃ ಸ್ಥಿತಾಃ|

06104058c ನಿವಾರಯಿಷ್ಯಾಮಿ ರಣೇ ಸಾಧಯಸ್ವ ಪಿತಾಮಹಂ||

ಇಲ್ಲಿ ನಿಂತಿರುವ ಸರ್ವ ಸೈನಿಕರೊಂದಿಗೆ ಕುರುಗಳನ್ನು ತಡೆಯುತ್ತೇನೆ. ರಣದಲ್ಲಿ ಪಿತಾಮಹನನ್ನು ಸಂಹರಿಸು!””

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಶಿಖಂಡೀಸಮಾಗಮೇ ಚತುರಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಶಿಖಂಡೀಸಮಾಗಮ ಎನ್ನುವ ನೂರಾನಾಲ್ಕನೇ ಅಧ್ಯಾಯವು.

Image result for indian motifs against white background

Comments are closed.