Bhishma Parva: Chapter 101

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೦೧

ದುಃಶಾಸನನಿಗೆ ಭೀಷ್ಮನನ್ನು ರಕ್ಷಿಸಲು ಹೇಳಿ ದುರ್ಯೋಧನನು ಶಕುನಿಯ ಒಂದುಲಕ್ಷ ಕುದುರೆಗಳ ಅಶ್ವಸೇನೆಯಿಂದ ಪಾಂಡವರ ಮೇಲೆ ಆಕ್ರಮಣ ಮಾಡಿಸಿದುದು (೧-೧೫). ಯುಧಿಷ್ಠಿರ-ಮಾದ್ರೀಪುತ್ರರು ಆ ಅಶ್ವಸೇನೆಯನ್ನು ಧ್ವಂಸಗೊಳಿಸಿದುದು (೧೬-೨೪). ಯುಧಿಷ್ಠಿರ-ಮಾದ್ರೀಪುತ್ರರು ಶಲ್ಯನ ಸೇನೆಯೊಂದಿಗೆ ಯುದ್ಧಮಾಡಿದುದು (೨೫-೩೩).

06101001 ಸಂಜಯ ಉವಾಚ|

06101001a ದೃಷ್ಟ್ವಾ ಭೀಷ್ಮಂ ರಣೇ ಕ್ರುದ್ಧಂ ಪಾಂಡವೈರಭಿಸಂವೃತಂ|

06101001c ಯಥಾ ಮೇಘೈರ್ಮಹಾರಾಜ ತಪಾಂತೇ ದಿವಿ ಭಾಸ್ಕರಂ||

06101002a ದುರ್ಯೋಧನೋ ಮಹಾರಾಜ ದುಃಶಾಸನಮಭಾಷತ|

06101002c ಏಷ ಶೂರೋ ಮಹೇಷ್ವಾಸೋ ಭೀಷ್ಮಃ ಶತ್ರುನಿಷೂದನಃ||

06101003a ಚಾದಿತಃ ಪಾಂಡವೈಃ ಶೂರೈಃ ಸಮಂತಾದ್ಭರತರ್ಷಭ|

06101003c ತಸ್ಯ ಕಾರ್ಯಂ ತ್ವಯಾ ವೀರ ರಕ್ಷಣಂ ಸುಮಹಾತ್ಮನಃ||

ಸಂಜಯನು ಹೇಳಿದನು: “ಮಹಾರಾಜ! ಆಕಾಶದಲ್ಲಿ ಬೇಸಗೆಯ ಕೊನೆಯಲ್ಲಿ ಮೋಡಗಳು ಭಾಸ್ಕರನನ್ನು ಹೇಗೋ ಹಾಗೆ ರಣದಲ್ಲಿ ಪಾಂಡವರು ಭೀಷ್ಮನನ್ನು ಮುತ್ತಿಕೊಂಡಿರುವುದನ್ನು ನೋಡಿ ಕ್ರುದ್ಧನಾದ ದುರ್ಯೋಧನನು ದುಃಶಾಸನನಿಗೆ ಹೇಳಿದನು: “ಭರತರ್ಷಭ! ಈ ಶೂರ ಮಹೇಷ್ವಾಸ ಶತ್ರುನಿಶೂದನ ಭೀಷ್ಮನನ್ನು ಶೂರ ಪಾಂಡವರು ಎಲ್ಲ ಕಡೆಗಳಿಂದ ಮುತ್ತಿಗೆ ಹಾಕಿದ್ದಾರೆ. ವೀರ! ಆ ಸುಮಹಾತ್ಮನ ರಕ್ಷಣೆಯ ಕಾರ್ಯವು ನಿನ್ನದು.

06101004a ರಕ್ಷ್ಯಮಾಣೋ ಹಿ ಸಮರೇ ಭೀಷ್ಮೋಽಸ್ಮಾಕಂ ಪಿತಾಮಹಃ|

06101004c ನಿಹನ್ಯಾತ್ಸಮರೇ ಯತ್ತಾನ್ಪಾಂಚಾಲಾನ್ಪಾಂಡವೈಃ ಸಹ||

ಏಕೆಂದರೆ ಸಮರದಲ್ಲಿ ನಮ್ಮನ್ನು ರಕ್ಷಿಸುತ್ತಿರುವ ಪಿತಾಮಹನನ್ನು ಸಂಹರಿಸಲು ಪಾಂಡವರೊಂದಿಗೆ ಪಾಂಚಾಲರು ಪ್ರಯತ್ನಿಸುತ್ತಿದ್ದಾರೆ.

06101005a ತತ್ರ ಕಾರ್ಯಮಹಂ ಮನ್ಯೇ ಭೀಷ್ಮಸ್ಯೈವಾಭಿರಕ್ಷಣಂ|

06101005c ಗೋಪ್ತಾ ಹ್ಯೇಷ ಮಹೇಷ್ವಾಸೋ ಭೀಷ್ಮೋಽಸ್ಮಾಕಂ ಪಿತಾಮಹಃ||

ಅಲ್ಲಿ ಭೀಷ್ಮನನ್ನು ರಕ್ಷಿಸುವುದೇ ಕಾರ್ಯವೆಂದು ನನಗನ್ನಿಸುತ್ತಿದೆ. ಈ ಮಹೇಷ್ವಾಸ ಭೀಷ್ಮ ಪಿತಾಮಹನೇ ನಮ್ಮ ರಕ್ಷಕ.

06101006a ಸ ಭವಾನ್ಸರ್ವಸೈನ್ಯೇನ ಪರಿವಾರ್ಯ ಪಿತಾಮಹಂ|

06101006c ಸಮರೇ ದುಷ್ಕರಂ ಕರ್ಮ ಕುರ್ವಾಣಂ ಪರಿರಕ್ಷತು||

ನೀನು ಸರ್ವಸೇನೆಗಳೊಂದಿಗೆ ಪಿತಾಮಹನನ್ನು ಸುತ್ತುವರೆದು ಸಮರದಲ್ಲಿ ಅವನನ್ನು ರಕ್ಷಿಸುವ ದುಷ್ಕರ ಕೆಲಸವನ್ನು ಮಾಡಬೇಕು.”

06101007a ಏವಮುಕ್ತಸ್ತು ಸಮರೇ ಪುತ್ರೋ ದುಃಶಾಸನಸ್ತವ|

06101007c ಪರಿವಾರ್ಯ ಸ್ಥಿತೋ ಭೀಷ್ಮಂ ಸೈನ್ಯೇನ ಮಹತಾ ವೃತಃ||

ಸಮರದಲ್ಲಿ ಇದನ್ನು ಕೇಳಿ ನಿನ್ನ ಮಗ ದುಃಶಾಸನನು ಮಹಾ ಸೇನೆಯೊಂದಿಗೆ ಆವೃತನಾಗಿ ಭೀಷ್ಮನನ್ನು ಸುತ್ತುವರೆದು ನಿಂತನು.

06101008a ತತಃ ಶತಸಹಸ್ರೇಣ ಹಯಾನಾಂ ಸುಬಲಾತ್ಮಜಃ|

06101008c ವಿಮಲಪ್ರಾಸಹಸ್ತಾನಾಂ ಋಷ್ಟಿತೋಮರಧಾರಿಣಾಂ||

06101009a ದರ್ಪಿತಾನಾಂ ಸುವೇಗಾನಾಂ ಬಲಸ್ಥಾನಾಂ ಪತಾಕಿನಾಂ|

06101009c ಶಿಕ್ಷಿತೈರ್ಯುದ್ಧಕುಶಲೈರುಪೇತಾನಾಂ ನರೋತ್ತಮೈಃ||

06101010a ನಕುಲಂ ಸಹದೇವಂ ಚ ಧರ್ಮರಾಜಂ ಚ ಪಾಂಡವಂ|

06101010c ನ್ಯವಾರಯನ್ನರಶ್ರೇಷ್ಠಂ ಪರಿವಾರ್ಯ ಸಮಂತತಃ||

ಆಗ ಸುಬಲಾತ್ಮಜನು ಒಂದು ಲಕ್ಷ ಕುದುರೆಗಳಿದ್ದ, ಹೊಳೆಯುತ್ತಿರುವ ಪ್ರಾಸಗಳನ್ನು ಹಿಡಿದಿದ್ದ, ಋಷ್ಟಿ-ತೋಮರ ಧಾರಿಗಳ, ದರ್ಪಿತರಾದ, ಒಳ್ಳೆಯ ವೇಗವುಳ್ಳ, ಪ್ರಬಲರಾಗಿರುವ, ಪತಾಕೆಗಳಿಂದ ಕೂಡಿದ, ಯುದ್ಧದಲ್ಲಿ ತರಬೇತಿ ಹೊಂದಿ ಕುಶಲರಾಗಿರುವ ನರೋತ್ತಮರೊಡಗೂಡಿ ನಕುಲ, ಸಹದೇವ, ಮತ್ತು ನರಶ್ರೇಷ್ಠ ಪಾಂಡವ ಧರ್ಮರಾಜನನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದು ತಡೆದು ನಿಲ್ಲಿಸಿದನು.

06101011a ತತೋ ದುರ್ಯೋಧನೋ ರಾಜಾ ಶೂರಾಣಾಂ ಹಯಸಾದಿನಾಂ|

06101011c ಅಯುತಂ ಪ್ರೇಷಯಾಮಾಸ ಪಾಂಡವಾನಾಂ ನಿವಾರಣೇ||

ಆಗ ರಾಜಾ ದುರ್ಯೋಧನನು ಪಾಂಡವರನ್ನು ನಿವಾರಿಸಲು ಹತ್ತುಸಾವಿರ ಶೂರ ಅಶ್ವಾರೋಹಿಗಳನ್ನು ಕಳುಹಿಸಿಕೊಟ್ಟನು.

06101012a ತೈಃ ಪ್ರವಿಷ್ಟೈರ್ಮಹಾವೇಗೈರ್ಗರುತ್ಮದ್ಭಿರಿವಾಹವೇ|

06101012c ಖುರಾಹತಾ ಧರಾ ರಾಜಂಶ್ಚಕಂಪೇ ಚ ನನಾದ ಚ||

ರಾಜನ್! ಮಹಾವೇಗದಿಂದ ಒಂದೇ ಸಮನೆ ಅನೇಕ ಗರುಡಗಳಂತೆ ಆಹವದಲ್ಲಿ ಬಂದೆರಗಿದ ಅವುಗಳ ಖುರಪುಟಗಳಿಂದಾಗಿ ಭೂಮಿಯು ಕಂಪಿಸಿತು ಮತ್ತು ಕೂಗಿಕೊಂಡಿತು.

06101013a ಖುರಶಬ್ದಶ್ಚ ಸುಮಹಾನ್ವಾಜಿನಾಂ ಶುಶ್ರುವೇ ತದಾ|

06101013c ಮಹಾವಂಶವನಸ್ಯೇವ ದಹ್ಯಮಾನಸ್ಯ ಪರ್ವತೇ||

ಪರ್ವತದ ಮೇಲೆ ಬಿದಿರಿನ ಮಹಾವನವು ಸುಡುತ್ತಿದೆಯೋ ಎನ್ನುವಂತೆ ಆ ಕುದುರೆಗಳ ಖುರಪುಟಗಳ ಮಹಾ ಶಬ್ಧವು ಕೇಳಿಬಂದಿತು.

06101014a ಉತ್ಪತದ್ಭಿಶ್ಚ ತೈಸ್ತತ್ರ ಸಮುದ್ಧೂತಂ ಮಹದ್ರಜಃ|

06101014c ದಿವಾಕರಪಥಂ ಪ್ರಾಪ್ಯ ಚಾದಯಾಮಾಸ ಭಾಸ್ಕರಂ||

ಅವು ಭೂಮಿಯ ಮೇಲೆ ಹೋಗುತ್ತಿರಲು ಮೇಲೆದ್ದ ಮಹಾ ಧೂಳಿನ ರಾಶಿಯು ದಿವಾಕರ ಪಥವನ್ನು ತಲುಪಿ ಭಾಸ್ಕರನನ್ನು ಮುಸುಕಿದವು.

06101015a ವೇಗವದ್ಭಿರ್ಹಯೈಸ್ತೈಸ್ತು ಕ್ಷೋಭಿತಂ ಪಾಂಡವಂ ಬಲಂ|

06101015c ನಿಪತದ್ಭಿರ್ಮಹಾವೇಗೈರ್ಹಂಸೈರಿವ ಮಹತ್ಸರಃ|

06101015e ಹೇಷತಾಂ ಚೈವ ಶಬ್ದೇನ ನ ಪ್ರಾಜ್ಞಾಯತ ಕಿಂ ಚನ||

ವೇಗದಿಂದ ಬಂದೆರಗಿದ ಆ ಕುದುರೆಗಳಿಂದ ಪಾಂಡವ ಸೇನೆಯು ಮಹಾ ವೇಗದಿಂದ ಹಂಸಗಳು ಬಂದು ಮಹಾ ಸರೋವರದಲ್ಲಿ ಬಿದ್ದರೆ ಹೇಗೋ ಹಾಗೆ ಕ್ಷೋಭೆಗೊಂಡಿತು. ಅವುಗಳ ಹೇಷಾವರ ಶಬ್ಧದಿಂದ ಬೇರೆ ಏನೂ ಕೇಳುತ್ತಿರಲಿಲ್ಲ

06101016a ತತೋ ಯುಧಿಷ್ಠಿರೋ ರಾಜಾ ಮಾದ್ರೀಪುತ್ರೌ ಚ ಪಾಂಡವೌ|

06101016c ಪ್ರತ್ಯಘ್ನಂಸ್ತರಸಾ ವೇಗಂ ಸಮರೇ ಹಯಸಾದಿನಾಂ||

06101017a ಉದ್ವೃತ್ತಸ್ಯ ಮಹಾರಾಜ ಪ್ರಾವೃತ್ಕಾಲೇನ ಪೂರ್ಯತಃ|

06101017c ಪೌರ್ಣಮಾಸ್ಯಾಮಂಬುವೇಗಂ ಯಥಾ ವೇಲಾ ಮಹೋದಧೇಃ||

ಮಹಾರಾಜ! ಆಗ ರಾಜ ಯುಧಿಷ್ಠಿರ ಮತ್ತು ಮಾದ್ರೀಪುತ್ರ ಪಾಂಡವರಿಬ್ಬರೂ ವೇಗವಾಗಿ ಸಮರದಲ್ಲಿ ಬಂದ ಅಶ್ವಾರೋಹಿಗಳನ್ನು ಮಳೆಗಾಲದ ಹುಣ್ಣಿಮೆಯಲ್ಲಿ ಉಕ್ಕಿ ಮೇಲೆ ಬರುವ ಮಹಾಸಾಗರವನ್ನು ದಡಗಳು ಹೇಗೋ ಹಾಗೆ ಬೇಗನೇ ತಡೆದರು.

06101018a ತತಸ್ತೇ ರಥಿನೋ ರಾಜನ್ ಶರೈಃ ಸನ್ನತಪರ್ವಭಿಃ|

06101018c ನ್ಯಕೃಂತನ್ನುತ್ತಮಾಂಗಾನಿ ಕಾಯೇಭ್ಯೋ ಹಯಸಾದಿನಾಂ||

ರಾಜನ್! ಆಗ ಆ ರಥಿಗಳು ಸನ್ನತಪರ್ವ ಶರಗಳಿಂದ ಅಶ್ವಾರೋಹಿಗಳ ಶಿರಗಳನ್ನು ದೇಹದಿಂದ ಕತ್ತರಿಸಿದರು.

06101019a ತೇ ನಿಪೇತುರ್ಮಹಾರಾಜ ನಿಹತಾ ದೃಢಧನ್ವಿಭಿಃ|

06101019c ನಾಗೈರಿವ ಮಹಾನಾಗಾ ಯಥಾ ಸ್ಯುರ್ಗಿರಿಗಹ್ವರೇ||

ಮಹಾರಾಜ! ದೃಢಧನ್ವಿಗಳಿಂದ ನಿಹತರಾದ ಅವರು ಮಹಾಗಜದಿಂದ ನೂಕಲ್ಪಟ್ಟು ಗಿರಿಗುಹ್ವರದಲ್ಲಿ ಬೀಳುವ ಆನೆಗಳಂತೆ ಬಿದ್ದರು.

06101020a ತೇಽಪಿ ಪ್ರಾಸೈಃ ಸುನಿಶಿತೈಃ ಶರೈಃ ಸನ್ನತಪರ್ವಭಿಃ|

06101020c ನ್ಯಕೃಂತನ್ನುತ್ತಮಾಂಗಾನಿ ವಿಚರಂತೋ ದಿಶೋ ದಶ||

ಅವರು ಪ್ರಾಸಗಳಿಂದ ಮತ್ತು ನಿಶಿತ ಸನ್ನತಪರ್ವ ಶರಗಳಿಂದ ಶಿರಗಳನ್ನು ಕತ್ತರಿಸುತ್ತಾ ಹತ್ತೂ ದಿಕ್ಕುಗಳಲ್ಲಿ ಸಂಚರಿಸಿದರು.

06101021a ಅತ್ಯಾಸನ್ನಾ ಹಯಾರೋಹಾ ಋಷ್ಟಿಭಿರ್ಭರತರ್ಷಭ|

06101021c ಅಚ್ಛಿನನ್ನುತ್ತಮಾಂಗಾನಿ ಫಲಾನೀವ ಮಹಾದ್ರುಮಾತ್||

ಭರತರ್ಷಭ! ಹೀಗೆ ಋಷ್ಟಿ ಮತ್ತು ಖಡ್ಗಗಳಿಂದ ಹೊಡೆಯಲ್ಪಟ್ಟ ಆ ಅಶ್ವಾರೋಹಿಗಳ ಶಿರಗಳು ದೊಡ್ಡ ಮರದಿಂದ ಹಣ್ಣುಗಳು ಉದುರುವಂತೆ ಉದುರಿ ಬಿದ್ದವು.

06101022a ಸಸಾದಿನೋ ಹಯಾ ರಾಜಂಸ್ತತ್ರ ತತ್ರ ನಿಷೂದಿತಾಃ|

06101022c ಪತಿತಾಃ ಪಾತ್ಯಮಾನಾಶ್ಚ ಶತಶೋಽಥ ಸಹಸ್ರಶಃ||

ರಾಜನ್! ಅಲ್ಲಿ ನೂರಾರು ಸಹಸ್ರಾರು ಸವಾರರು ಸಂಹರಿಸಲ್ಪಟ್ಟು ಕುದುರೆಗಳ ಮೇಲಿನಿಂದ ಬಿದ್ದಿದ್ದರು ಮತ್ತು ಬೀಳುತ್ತಿದ್ದರು.

06101023a ವಧ್ಯಮಾನಾ ಹಯಾಸ್ತೇ ತು ಪ್ರಾದ್ರವಂತ ಭಯಾರ್ದಿತಾಃ|

06101023c ಯಥಾ ಸಿಂಹಾನ್ಸಮಾಸಾದ್ಯ ಮೃಗಾಃ ಪ್ರಾಣಪರಾಯಣಾಃ||

ವಧಿಸಲ್ಪಡುತ್ತಿರುವ ಕುದುರೆಗಳು ಸಿಂಹವನ್ನು ಕಂಡ ಜಿಂಕೆಗಳು ಪ್ರಾಣಗಳನ್ನು ಉಳಿಸಿಕೊಳ್ಳಲು ಓಡಿಹೋಗುವಂತೆ ಭಯಾರ್ದಿತಗೊಂಡು ಓಡಿಹೋಗುತ್ತಿದ್ದವು.

06101024a ಪಾಂಡವಾಸ್ತು ಮಹಾರಾಜ ಜಿತ್ವಾ ಶತ್ರೂನ್ಮಹಾಹವೇ|

06101024c ದಧ್ಮುಃ ಶಂಖಾಂಶ್ಚ ಭೇರೀಶ್ಚ ತಾಡಯಾಮಾಸುರಾಹವೇ||

ಮಹಾರಾಜ! ಪಾಂಡವರಾದರೋ ಮಹಾಹವದಲ್ಲಿ ಶತ್ರುಗಳನ್ನು ಗೆದ್ದು ಶಂಖಗಳನ್ನು ಮೊಳಗಿಸಿ ಭೇರಿಗಳನ್ನು ಬಾರಿಸಿದರು.

06101025a ತತೋ ದುರ್ಯೋಧನೋ ದೃಷ್ಟ್ವಾ ದೀನಂ ಸೈನ್ಯಮವಸ್ಥಿತಂ|

06101025c ಅಬ್ರವೀದ್ಭರತಶ್ರೇಷ್ಠ ಮದ್ರರಾಜಮಿದಂ ವಚಃ||

ಭರತಶ್ರೇಷ್ಠ! ಆಗ ತನ್ನ ಸೈನ್ಯವು ನಾಶವಾದುದನ್ನು ನೋಡಿ ದೀನನಾಗಿ ಮದ್ರರಾಜನಿಗೆ ಈ ಮಾತನ್ನಾಡಿದನು:

06101026a ಏಷ ಪಾಂಡುಸುತೋ ಜ್ಯೇಷ್ಠೋ ಜಿತ್ವಾ ಮಾತುಲ ಮಾಮಕಾನ್|

06101026c ಪಶ್ಯತಾಂ ನೋ ಮಹಾಬಾಹೋ ಸೇನಾಂ ದ್ರಾವಯತೇ ಬಲೀ||

“ಸೋದರಮಾವ! ಮಹಾಬಾಹೋ! ಈ ಜ್ಯೇಷ್ಠ ಪಾಂಡುಸುತನು ನನ್ನವರನ್ನು ಗೆದ್ದು ನೀನು ನೋಡುತ್ತಿರುವಂತೆಯೇ ಸೇನೆಗಳನ್ನು ಓಡಿಸುತ್ತಿದ್ದಾನೆ.

06101027a ತಂ ವಾರಯ ಮಹಾಬಾಹೋ ವೇಲೇವ ಮಕರಾಲಯಂ|

06101027c ತ್ವಂ ಹಿ ಸಂಶ್ರೂಯಸೇಽತ್ಯರ್ಥಮಸಹ್ಯಬಲವಿಕ್ರಮಃ||

ಮಹಾಬಾಹೋ! ಸಮುದ್ರವನ್ನು ಭೂಮಿಯು ತಡೆಯುವಂತೆ ನೀನು ಅವರನ್ನು ತಡೆದು ನಿಲ್ಲಿಸು. ನೀನು ಅಸಹ್ಯ ಬಲ ವಿಕ್ರಮನೆಂದು ಪ್ರಸಿದ್ಧನಾಗಿದ್ದೀಯೆ.”

06101028a ಪುತ್ರಸ್ಯ ತವ ತದ್ವಾಕ್ಯಂ ಶ್ರುತ್ವಾ ಶಲ್ಯಃ ಪ್ರತಾಪವಾನ್|

06101028c ಪ್ರಯಯೌ ರಥವಂಶೇನ ಯತ್ರ ರಾಜಾ ಯುಧಿಷ್ಠಿರಃ||

ನಿನ್ನ ಮಗನ ಆ ಮಾತನ್ನು ಕೇಳಿ ಪ್ರತಾಪವಾನ್ ಶಲ್ಯನು ರಥಸಮೂಹಗಳೊಂದಿಗೆ ರಾಜಾ ಯುಧಿಷ್ಠಿರನಿದ್ದಲ್ಲಿಗೆ ಹೊರಟನು.

06101029a ತದಾಪತದ್ವೈ ಸಹಸಾ ಶಲ್ಯಸ್ಯ ಸುಮಹದ್ಬಲಂ|

06101029c ಮಹೌಘವೇಗಂ ಸಮರೇ ವಾರಯಾಮಾಸ ಪಾಂಡವಃ||

ಸಮರದಲ್ಲಿ ತನ್ನ ಮೇಲೆ ಒಮ್ಮಿಂದೊಮ್ಮೆಲೇ ಬಂದು ಎರಗಿದ ಮಹಾವೇಗವುಳ್ಳ ಶಲ್ಯನ ಮಹಾಸೇನೆಯನ್ನು ಪಾಂಡವನು ತಡೆದನು.

06101030a ಮದ್ರರಾಜಂ ಚ ಸಮರೇ ಧರ್ಮರಾಜೋ ಮಹಾರಥಃ|

06101030c ದಶಭಿಃ ಸಾಯಕೈಸ್ತೂರ್ಣಮಾಜಘಾನ ಸ್ತನಾಂತರೇ|

06101030e ನಕುಲಃ ಸಹದೇವಶ್ಚ ತ್ರಿಭಿಸ್ತ್ರಿಭಿರಜಿಹ್ಮಗೈಃ||

ತಕ್ಷಣವೇ ಮಹಾರಥ ಧರ್ಮರಾಜನು ಸಮರದಲ್ಲಿ ಮದ್ರರಾಜನ ಎದೆಗೆ ಹತ್ತು ಸಾಯಕಗಳಿಂದ ಮತ್ತು ನಕುಲ ಸಹದೇವರು ಮೂರು ಮೂರು ಜಿಹ್ಮಗಗಳಿಂದ ಹೊಡೆದರು.

06101031a ಮದ್ರರಾಜೋಽಪಿ ತಾನ್ಸರ್ವಾನಾಜಘಾನ ತ್ರಿಭಿಸ್ತ್ರಿಭಿಃ|

06101031c ಯುಧಿಷ್ಠಿರಂ ಪುನಃ ಷಷ್ಟ್ಯಾ ವಿವ್ಯಾಧ ನಿಶಿತೈಃ ಶರೈಃ|

06101031e ಮಾದ್ರೀಪುತ್ರೌ ಚ ಸಂರಬ್ಧೌ ದ್ವಾಭ್ಯಾಂ ದ್ವಾಭ್ಯಾಮತಾಡಯತ್||

ಮದ್ರರಾಜನೂ ಕೂಡ ಅವರೆಲ್ಲರನ್ನು ಮೂರು ಮೂರು ಬಾಣಗಳಿಂದ ಹೊಡೆದನು. ಪುನಃ ಯುಧಿಷ್ಠಿರನನ್ನು ಅರವತ್ತು ನಿಶಿತ ಬಾಣಗಳಿಂದ ಹೊಡೆದನು. ಸಂರಬ್ಧರಾಗಿ ಮಾದ್ರೀಪುತ್ರರಿಬ್ಬರನ್ನು ಎರೆಡೆರಡು ಬಾಣಗಳಿಂದ ಹೊಡೆದನು.

06101032a ತತೋ ಭೀಮೋ ಮಹಾಬಾಹುರ್ದೃಷ್ಟ್ವಾ ರಾಜಾನಮಾಹವೇ|

06101032c ಮದ್ರರಾಜವಶಂ ಪ್ರಾಪ್ತಂ ಮೃತ್ಯೋರಾಸ್ಯಗತಂ ಯಥಾ|

06101032e ಅಭ್ಯದ್ರವತ ಸಂಗ್ರಾಮೇ ಯುಧಿಷ್ಠಿರಮಮಿತ್ರಜಿತ್||

ಆಗ ಮಹಾಬಾಹು ಭೀಮನು ಆಹವದಲ್ಲಿ ರಾಜನು ಮೃತ್ಯುವಿನ ಬಾಯಿಯ ಬಳಿಯಂತೆ ಮದ್ರರಾಜನ ವಶದಲ್ಲಿದ್ದುದನ್ನು ನೋಡಿ ಸಂಗ್ರಾಮದಲ್ಲಿ ಅಮಿತ್ರಜಿತು ಯುಧಿಷ್ಠಿರನ ಬಳಿ ಧಾವಿಸಿ ಬಂದನು.

06101033a ತತೋ ಯುದ್ಧಂ ಮಹಾಘೋರಂ ಪ್ರಾವರ್ತತ ಸುದಾರುಣಂ|

06101033c ಅಪರಾಂ ದಿಶಮಾಸ್ಥಾಯ ದ್ಯೋತಮಾನೇ ದಿವಾಕರೇ||

ಸೂರ್ಯನು ಇಳಿಮುಖದಲ್ಲಿ ಬೆಳಗುತ್ತಿರುವಾಗ ಸುದಾರುಣ ಮಹಾಘೋರ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭೀಷ್ಮವಧಪರ್ವಣಿ ಏಕಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭೀಷ್ಮವಧಪರ್ವದಲ್ಲಿ ನೂರಾಒಂದನೇ ಅಧ್ಯಾಯವು.

Image result for indian motifs against white background

Comments are closed.