Ashvamedhika Parva: Chapter 88

ಅಶ್ವಮೇಧಿಕ ಪರ್ವ

೮೮

ಕೃಷ್ಣನು ಯುಧಿಷ್ಠಿರನಿಗೆ ಅರ್ಜುನನಿತ್ತ ಸಂದೇಶವನ್ನು ತಿಳಿಸಿದುದು (೧-೨೧).

14088001 ವೈಶಂಪಾಯನ ಉವಾಚ

14088001a ಸಮಾಗತಾನ್ವೇದವಿದೋ ರಾಜ್ಞಶ್ಚ ಪೃಥಿವೀಶ್ವರಾನ್|

14088001c ದೃಷ್ಟ್ವಾ ಯುಧಿಷ್ಠಿರೋ ರಾಜಾ ಭೀಮಸೇನಮಥಾಬ್ರವೀತ್||

ವೈಶಂಪಾಯನನು ಹೇಳಿದನು: “ವೇದವಿದ ರಾಜರೂ ಪೃಥ್ವೀಶ್ವರರೂ ಆಗಮಿಸಿರುವುದನ್ನು ನೋಡಿ ರಾಜಾ ಯುಧಿಷ್ಠಿರನು ಭೀಮಸೇನನಿಗೆ ಹೇಳಿದನು:

14088002a ಉಪಯಾತಾ ನರವ್ಯಾಘ್ರಾ ಯ ಇಮೇ ಜಗದೀಶ್ವರಾಃ|

14088002c ಏತೇಷಾಂ ಕ್ರಿಯತಾಂ ಪೂಜಾ ಪೂಜಾರ್ಹಾ ಹಿ ನರೇಶ್ವರಾಃ||

“ಇಲ್ಲಿಗೆ ಆಗಮಿಸಿರುವ ನರವ್ಯಾಘ್ರ ಜಗದೀಶ್ವರರೆಲ್ಲರೂ ಪೂಜಿಸಲ್ಪಡಲಿ! ಈ ನರೇಶ್ವರರು ಪೂಜಾರ್ಹರು.”

14088003a ಇತ್ಯುಕ್ತಃ ಸ ತಥಾ ಚಕ್ರೇ ನರೇಂದ್ರೇಣ ಯಶಸ್ವಿನಾ|

14088003c ಭೀಮಸೇನೋ ಮಹಾತೇಜಾ ಯಮಾಭ್ಯಾಂ ಸಹ ಭಾರತ||

ಭಾರತ! ಮಹಾತೇಜಸ್ವಿ ಭೀಮಸೇನನು ನಕುಲ-ಸಹದೇವರೊಂದಿಗೆ ಯಶಸ್ವಿ ನರೇಂದ್ರನು ಹೇಳಿದಂತೆಯೇ ಮಾಡಿದನು.

14088004a ಅಥಾಭ್ಯಗಚ್ಚದ್ಗೋವಿಂದೋ ವೃಷ್ಣಿಭಿಃ ಸಹ ಧರ್ಮಜಮ್|

14088004c ಬಲದೇವಂ ಪುರಸ್ಕೃತ್ಯ ಸರ್ವಪ್ರಾಣಭೃತಾಂ ವರಃ||

14088005a ಯುಯುಧಾನೇನ ಸಹಿತಃ ಪ್ರದ್ಯುಮ್ನೇನ ಗದೇನ ಚ|

14088005c ನಿಶಠೇನಾಥ ಸಾಂಬೇನ ತಥೈವ ಕೃತವರ್ಮಣಾ||

ಆಗ ಸರ್ವಪ್ರಾಣಧಾರಿಗಳಲ್ಲಿ ಶ್ರೇಷ್ಠನಾದ ಗೋವಿಂದನು ಧರ್ಮಜ ಬಲದೇವನನ್ನು ಮುಂದೆಮಾಡಿಕೊಂಡು ಯುಯುಧಾನ ಸಾತ್ಯಕಿ, ಪ್ರದ್ಯುಮ್ನ, ಗದ, ನಿಶಠ, ಸಾಂಬ ಮತ್ತು ಕೃತವರ್ಮರೊಂದಿಗೆ ಅಲ್ಲಿಗೆ ಆಗಮಿಸಿದನು.

14088006a ತೇಷಾಮಪಿ ಪರಾಂ ಪೂಜಾಂ ಚಕ್ರೇ ಭೀಮೋ ಮಹಾಭುಜಃ|

14088006c ವಿವಿಶುಸ್ತೇ ಚ ವೇಶ್ಮಾನಿ ರತ್ನವಂತಿ ನರರ್ಷಭಾಃ||

ಮಹಾಭುಜ ಭೀಮನು ಅವರಿಗೆ ಕೂಡ ಪರಮ ಪೂಜೆಯನ್ನು ಮಾಡಿದನು. ಆ ನರರ್ಷಭರು ರತ್ನಖಚಿತ ಅರಮನೆಗಳನ್ನು ಪ್ರವೇಶಿಸಿದರು.

14088007a ಯುಧಿಷ್ಠಿರಸಮೀಪೇ ತು ಕಥಾಂತೇ ಮಧುಸೂದನಃ|

14088007c ಅರ್ಜುನಂ ಕಥಯಾಮಾಸ ಬಹುಸಂಗ್ರಾಮಕರ್ಶಿತಮ್||

ಯುಧಿಷ್ಠಿರನ ಸಮೀಪದಲ್ಲಿ ಮಾತನಾಡುತ್ತಿದ್ದ ಮಧುಸೂದನನು ಕೊನೆಯಲ್ಲಿ ಬಹುಸಂಗ್ರಾಮಗಳಿಂದ ಕೃಶನಾಗಿರುವ ಅರ್ಜುನನ ಕುರಿತು ಮಾತನಾಡಿದನು.

14088008a ಸ ತಂ ಪಪ್ರಚ್ಚ ಕೌಂತೇಯಃ ಪುನಃ ಪುನರರಿಂದಮಮ್|

14088008c ಧರ್ಮರಾಡ್ ಭ್ರಾತರಂ ಜಿಷ್ಣುಂ ಸಮಾಚಷ್ಟ ಜಗತ್ಪತಿಃ||

ಆಗ ಧರ್ಮರಾಜ ಕೌಂತೇಯನು ಅರಿಂದಮ ಸಹೋದರ ಜಿಷ್ಣುವಿನ ಕುರಿತು ಪುನಃ ಪುನಃ ಕೇಳಲು ಜಗತ್ಪತಿ ಕೃಷ್ಣನು ಅವನಿಗೆ ಹೇಳಿದನು:

14088009a ಆಗಮದ್ದ್ವಾರಕಾವಾಸೀ ಮಮಾಪ್ತಃ ಪುರುಷೋ ನೃಪ|

14088009c ಯೋಽದ್ರಾಕ್ಷೀತ್ಪಾಂಡವಶ್ರೇಷ್ಠಂ ಬಹುಸಂಗ್ರಾಮಕರ್ಶಿತಮ್||

“ನೃಪ! ನನಗೆ ಆಪ್ತನಾದ ಮತ್ತು ದ್ವಾರಕೆಯಲ್ಲಿಯೇ ವಾಸಿಸುತ್ತಿದ್ದ ಪುರುಷನೋರ್ವನು ನನಗೆ ಪಾಂಡವಶ್ರೇಷ್ಠ ಅರ್ಜುನನು ಅನೇಕ ಸಂಗ್ರಾಮಗಳಲ್ಲಿ ಹೋರಾಡಿ ಕೃಶನಾಗಿರುವನೆಂದು ನನಗೆ ಹೇಳಿದನು.

14088010a ಸಮೀಪೇ ಚ ಮಹಾಬಾಹುಮಾಚಷ್ಟ ಚ ಮಮ ಪ್ರಭೋ|

14088010c ಕುರು ಕಾರ್ಯಾಣಿ ಕೌಂತೇಯ ಹಯಮೇಧಾರ್ಥಸಿದ್ಧಯೇ||

ಪ್ರಭೋ! ಕೌಂತೇಯ! ಆ ಮಹಾಬಾಹುವು ಸಮೀಪದಲ್ಲಿಯೇ ಇರುವನೆಂದೂ ಅವನು ನನಗೆ ಹೇಳಿದನು. ಅಶ್ವಮೇಧದ ಸಿದ್ಧಿಗಾಗಿ ಮಾಡಬೇಕಾದ ಕಾರ್ಯಗಳನ್ನು ಮಾಡು!”

14088011a ಇತ್ಯುಕ್ತಃ ಪ್ರತ್ಯುವಾಚೈನಂ ಧರ್ಮರಾಜೋ ಯುಧಿಷ್ಠಿರಃ|

14088011c ದಿಷ್ಟ್ಯಾ ಸ ಕುಶಲೀ ಜಿಷ್ಣುರುಪಯಾತಿ ಚ ಮಾಧವ||

ಇದಕ್ಕೆ ಪ್ರತಿಯಾಗಿ ಧರ್ಮರಾಜ ಯುಧಿಷ್ಠಿರನು ಇಂತೆಂದನು: “ಮಾಧವ! ಸೌಭಾಗ್ಯವಶಾತ್ ಜಿಷ್ಣುವು ಕುಶಲನಾಗಿಯೇ ಹಿಂದಿರುಗುತ್ತಿದ್ದಾನೆ!

14088012a ತವ ಯತ್ಸಂದಿದೇಶಾಸೌ ಪಾಂಡವಾನಾಂ ಬಲಾಗ್ರಣೀಃ|

14088012c ತದಾಖ್ಯಾತುಮಿಹೇಚ್ಚಾಮಿ ಭವತಾ ಯದುನಂದನ||

ಯದುನಂದನ! ಪಾಂಡವರ ಬಲಾಗ್ರಣಿಯು ಏನಾದರೂ ಸಂದೇಶವನ್ನು ಕಳುಹಿಸಿದ್ದರೆ ಅದನ್ನು ನಿನ್ನಿಂದ ಕೇಳ ಬಯಸುತ್ತೇನೆ!”

14088013a ಇತ್ಯುಕ್ತೇ ರಾಜಶಾರ್ದೂಲ ವೃಷ್ಣ್ಯಂಧಕಪತಿಸ್ತದಾ|

14088013c ಪ್ರೋವಾಚೇದಂ ವಚೋ ವಾಗ್ಮೀ ಧರ್ಮಾತ್ಮಾನಂ ಯುಧಿಷ್ಠಿರಮ್||

ರಾಜಶಾರ್ದೂಲ! ಹೀಗೆ ಹೇಳಲು ವೃಷ್ಣಿ-ಅಂಧಕರ ಪತಿ ವಾಗ್ಮಿಯು ಧರ್ಮಾತ್ಮ ಯುಧಿಷ್ಠಿರನಿಗೆ ಉತ್ತರಿಸಿದನು:

14088014a ಇದಮಾಹ ಮಹಾರಾಜ ಪಾರ್ಥವಾಕ್ಯಂ ನರಃ ಸ ಮಾಮ್|

14088014c ವಾಚ್ಯೋ ಯುಧಿಷ್ಠಿರಃ ಕೃಷ್ಣ ಕಾಲೇ ವಾಕ್ಯಮಿದಂ ಮಮ||

“ಮಹಾರಾಜ! ಆ ಪುರುಷನು ನನಗೆ “ಕೃಷ್ಣ! ಸಕಾಲದಲ್ಲಿ ಅರ್ಜುನನ ಈ ಮಾತನ್ನೂ ಯುಧಿಷ್ಠಿರನಿಗೆ ತಿಳಿಸಬೇಕು” ಎಂದು ಹೇಳಿದನು.

14088015a ಆಗಮಿಷ್ಯಂತಿ ರಾಜಾನಃ ಸರ್ವತಃ ಕೌರವಾನ್ಪ್ರತಿ|

14088015c ತೇಷಾಮೇಕೈಕಶಃ ಪೂಜಾ ಕಾರ್ಯೇತ್ಯೇತತ್ಕ್ಷಮಂ ಹಿ ನಃ||

“ಎಲ್ಲ ಕಡೆಗಳಿಂದ ರಾಜರು ಕೌರವರ ಕಡೆ ಬರುತ್ತಿದ್ದಾರೆ. ಅವರಲ್ಲಿ ಒಬ್ಬೊಬ್ಬರನ್ನೂ ಯಥೋಚಿತಾವಾಗಿ ಸತ್ಕರಿಸುವುದು ನಮ್ಮ ಕರ್ತವ್ಯವಾಗಿದೆ!”

14088016a ಇತ್ಯೇತದ್ವಚನಾದ್ರಾಜಾ ವಿಜ್ಞಾಪ್ಯೋ ಮಮ ಮಾನದ|

14088016c ನ ತದಾತ್ಯಯಿಕಂ ಹಿ ಸ್ಯಾದ್ಯದರ್ಘ್ಯಾನಯನೇ ಭವೇತ್||

ಮಾನದ! ಇದರ ನಂತರ “ರಾಜಸೂಯ ಯಾಗದ ಅರ್ಘ್ಯಪ್ರದಾನದ ಸಮಯದಲ್ಲಿ ನಡೆದ ದುರ್ಘಟನೆಯು ಪುನಃ ಉಂಟಾಗಬಾರದು” ಎಂಬ ವಿಜ್ಞಾಪನೆಯನ್ನೂ ಅವನು ನನ್ನಲ್ಲಿ ಮಾಡಿದ್ದಾನೆ.

14088017a ಕರ್ತುಮರ್ಹತಿ ತದ್ರಾಜಾ ಭವಾಂಶ್ಚಾಪ್ಯನುಮನ್ಯತಾಮ್|

14088017c ರಾಜದ್ವೇಷಾದ್ವಿನಶ್ಯೇಯುರ್ನೇಮಾ ರಾಜನ್ಪ್ರಜಾಃ ಪುನಃ||

“ಆ ರಾಜನು ಇದನ್ನೇ ಮಾಡಬೇಕಾಗಿದೆ. ಅದಕ್ಕೆ ನಿನ್ನ ಬೆಂಬಲವೂ ಬೇಕು. ರಾಜರ ಪರಸ್ಪರ ದ್ವೇಷದಿಂದ ಪುನಃ ಪ್ರಜೆಗಳು ವಿನಾಶಹೊಂದಬಾರದು!”

14088018a ಇದಮನ್ಯಚ್ಚ ಕೌಂತೇಯ ವಚಃ ಸ ಪುರುಷೋಽಬ್ರವೀತ್|

14088018c ಧನಂಜಯಸ್ಯ ನೃಪತೇ ತನ್ಮೇ ನಿಗದತಃ ಶೃಣು||

ನೃಪತೇ! ಕೌಂತೇಯ! ಇದಕ್ಕೂ ಹೊರತಾಗಿ ಆ ಪುರುಷನು ಧನಂಜಯನ ಅನ್ಯ ಸಂದೇಶವನ್ನೂ ಹೇಳಿದನು. ಅದನ್ನು ಹೇಳುತ್ತೇನೆ. ಕೇಳು.

14088019a ಉಪಯಾಸ್ಯತಿ ಯಜ್ಞಂ ನೋ ಮಣಿಪೂರಪತಿರ್ನೃಪಃ|

14088019c ಪುತ್ರೋ ಮಮ ಮಹಾತೇಜಾ ದಯಿತೋ ಬಭ್ರುವಾಹನಃ||

“ನಮ್ಮ ಯಜ್ಞಕ್ಕೆ ಮಣಿಪೂರದ ನೃಪತಿ ನನ್ನ ಪ್ರೀತಿಯ ಮಗ ಮಹಾತೇಜಸ್ವಿ ಬಭ್ರುವಾಹನನು ಬರುತ್ತಾನೆ.

14088020a ತಂ ಭವಾನ್ಮದಪೇಕ್ಷಾರ್ಥಂ ವಿಧಿವತ್ಪ್ರತಿಪೂಜಯೇತ್|

14088020c ಸ ಹಿ ಭಕ್ತೋಽನುರಕ್ತಶ್ಚ ಮಮ ನಿತ್ಯಮಿತಿ ಪ್ರಭೋ||

ಪ್ರಭೋ! ಅವನು ನನ್ನ ಭಕ್ತನೂ ನನ್ನಲ್ಲಿ ನಿತ್ಯವೂ ಅನುರಕ್ತನಾಗಿರುವುದರಿಂದ ನನಗೋಸ್ಕರವಾಗಿ ನೀನು ಅವನನ್ನು ವಿಧಿವತ್ತಾಗಿ ಗೌರವಿಸಬೇಕು!””

14088021a ಇತ್ಯೇತದ್ವಚನಂ ಶ್ರುತ್ವಾ ಧರ್ಮರಾಜೋ ಯುಧಿಷ್ಠಿರಃ|

14088021c ಅಭಿನಂದ್ಯಾಸ್ಯ ತದ್ವಾಕ್ಯಮಿದಂ ವಚನಮಬ್ರವೀತ್||

ಈ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಆ ವಾಕ್ಯವನ್ನು ಅಭಿನಂದಿಸುತ್ತಾ ಹೀಗೆ ಹೇಳಿದನು.

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಮೇಧಾರಂಭೇ ಅಷ್ಟಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಮೇಧಾರಂಭ ಎನ್ನುವ ಎಂಭತ್ತೆಂಟನೇ ಅಧ್ಯಾಯವು.

Comments are closed.