Ashvamedhika Parva: Chapter 68

ಅಶ್ವಮೇಧಿಕ ಪರ್ವ

೬೮

ಮೂರ್ಛೆಯಿಂದ ಎಚ್ಚೆದ್ದ ಉತ್ತರೆಯು ಪುನಃ ರೋದಿಸಿದುದು (೧-೧೫). ಕೃಷ್ಣನು ಬ್ರಹ್ಮಾಸ್ತ್ರವನ್ನು ಉಪಶಮನಗೊಳಿಸಿ ಪರಿಕ್ಷಿತನನ್ನು ಬದುಕಿಸಿದುದು (೧೬-೨೪).

14068001 ವೈಶಂಪಾಯನ ಉವಾಚ

14068001a ಸೈವಂ ವಿಲಪ್ಯ ಕರುಣಂ ಸೋನ್ಮಾದೇವ ತಪಸ್ವಿನೀ|

14068001c ಉತ್ತರಾ ನ್ಯಪತದ್ಭೂಮೌ ಕೃಪಣಾ ಪುತ್ರಗೃದ್ಧಿನೀ||

ವೈಶಂಪಾಯನನು ಹೇಳಿದನು: “ಪುತ್ರಪ್ರಿಯಳೂ ಶೋಚನೀಯಳು ಆಗಿದ್ದ ತಪಸ್ವಿನೀ ಉತ್ತರೆಯು ಈ ರೀತಿ ಕರುಣಾಜನಕವಾಗಿ ವಿಲಪಿಸುತ್ತಾ ಹುಚ್ಚುಹಿಡಿದವಳಂತೆ ಭೂಮಿಯ ಮೇಲೆ ಬಿದ್ದುಬಿಟ್ಟಳು.

14068002a ತಾಂ ತು ದೃಷ್ಟ್ವಾ ನಿಪತಿತಾಂ ಹತಬಂಧುಪರಿಚ್ಚದಾಮ್|

14068002c ಚುಕ್ರೋಶ ಕುಂತೀ ದುಃಖಾರ್ತಾ ಸರ್ವಾಶ್ಚ ಭರತಸ್ತ್ರಿಯಃ||

ಬಂಧುಗಳನ್ನೂ ಪುತ್ರನನ್ನೂ ಕಳೆದುಕೊಂಡ ಅವಳು ಬಿದ್ದುದನ್ನು ನೋಡಿ ದುಃಖಾರ್ತರಾದ ಕುಂತೀ ಮತ್ತು ಭರತಸ್ತ್ರೀಯರೆಲ್ಲರೂ ಗಟ್ಟಿಯಾಗಿ ಗೋಳಿಟ್ಟರು.

14068003a ಮುಹೂರ್ತಮಿವ ತದ್ರಾಜನ್ಪಾಂಡವಾನಾಂ ನಿವೇಶನಮ್|

14068003c ಅಪ್ರೇಕ್ಷಣೀಯಮಭವದಾರ್ತಸ್ವರನಿನಾದಿತಮ್||

ರಾಜನ್! ಒಂದು ಮುಹೂರ್ತಕಾಲ ಪಾಂಡವರ ಆ ನಿವೇಶನವು ಆರ್ತಸ್ವರ ಗೋಳಾಟದ ಧ್ವನಿಯಿಂದ ಪ್ರತಿಧ್ವನಿಗೊಂಡು ಅಪ್ರೇಕ್ಷಣೀಯವಾಗಿತ್ತು.

14068004a ಸಾ ಮುಹೂರ್ತಂ ಚ ರಾಜೇಂದ್ರ ಪುತ್ರಶೋಕಾಭಿಪೀಡಿತಾ|

14068004c ಕಶ್ಮಲಾಭಿಹತಾ ವೀರ ವೈರಾಟೀ ತ್ವಭವತ್ತದಾ||

ರಾಜೇಂದ್ರ! ವೀರ! ಪುತ್ರಶೋಕದಿಂದ ಪೀಡಿತಳಾಗಿದ್ದ ವೈರಾಟಿಯು ಮುಹೂರ್ತಕಾಲ ಮೂರ್ಛಿತಳಾಗಿಯೇ ಬಿದ್ದಿದ್ದಳು.

14068005a ಪ್ರತಿಲಭ್ಯ ತು ಸಾ ಸಂಜ್ಞಾಮುತ್ತರಾ ಭರತರ್ಷಭ|

14068005c ಅಂಕಮಾರೋಪ್ಯ ತಂ ಪುತ್ರಮಿದಂ ವಚನಮಬ್ರವೀತ್||

ಭರತರ್ಷಭ! ಅನಂತರ ಉತ್ತರೆಯು ಎಚ್ಚೆತ್ತು ತನ್ನ ಪುತ್ರನನ್ನು ತೊಡೆಯಮೇಲಿರಿಸಿಕೊಂಡು ಈ ಮಾತುಗಳನ್ನಾಡಿದಳು:

14068006a ಧರ್ಮಜ್ಞಸ್ಯ ಸುತಃ ಸಂಸ್ತ್ವಮಧರ್ಮಮವಬುಧ್ಯಸೇ|

14068006c ಯಸ್ತ್ವಂ ವೃಷ್ಣಿಪ್ರವೀರಸ್ಯ ಕುರುಷೇ ನಾಭಿವಾದನಮ್||

“ಧರ್ಮಜ್ಞನ ಮಗನಾಗಿರುವ ನೀನು ಈಗ ಅಧರ್ಮವನ್ನು ಮಾಡುತ್ತಿದ್ದೀಯೆ ಎಂದು ತಿಳಿಯದವನಾಗಿರುವೆ! ಆದುದರಿಂದಲೇ ನೀನು ವೃಷ್ಣಿಪ್ರವೀರನಿಗೆ ನಮಸ್ಕರಿಸುತ್ತಿಲ್ಲ!

14068007a ಪುತ್ರ ಗತ್ವಾ ಮಮ ವಚೋ ಬ್ರೂಯಾಸ್ತ್ವಂ ಪಿತರಂ ತವ|

14068007c ದುರ್ಮರಂ ಪ್ರಾಣಿನಾಂ ವೀರ ಕಾಲೇ ಪ್ರಾಪ್ತೇ ಕಥಂ ಚನ||

ಪುತ್ರ! ಹೋಗಿ ನಿನ್ನ ತಂದೆಗೆ ನನ್ನ ಈ ಮಾತುಗಳನ್ನು ಹೇಳು: “ವೀರ! ಕಾಲವು ಸನ್ನಿಹಿತವಾಗದೇ ಪ್ರಾಣಿಗಳಿಗೆ ಎಂದೂ ಮರಣವುಂಟಾಗುವುದಿಲ್ಲ!

14068008a ಯಾಹಂ ತ್ವಯಾ ವಿಹೀನಾದ್ಯ ಪತ್ಯಾ ಪುತ್ರೇಣ ಚೈವ ಹ|

14068008c ಮರ್ತವ್ಯೇ ಸತಿ ಜೀವಾಮಿ ಹತಸ್ವಸ್ತಿರಕಿಂಚನಾ||

ಪತಿಯಾದ ನಿನ್ನಿಂದ ಮತ್ತು ಈಗ ಈ ಮಗನಿಂದಲೂ ವಿಹೀನಳಾಗಿ ಮೃತಳಾಗಬೇಕಾಗಿದ್ದ ನಾನು ಇನ್ನೂ ಬದುಕಿಯೇ ಇದ್ದೇನಲ್ಲಾ!”

14068009a ಅಥ ವಾ ಧರ್ಮರಾಜ್ಞಾಹಮನುಜ್ಞಾತಾ ಮಹಾಭುಜ|

14068009c ಭಕ್ಷಯಿಷ್ಯೇ ವಿಷಂ ತೀಕ್ಷ್ಣಂ ಪ್ರವೇಕ್ಷ್ಯೇ ವಾ ಹುತಾಶನಮ್||

ಮಹಾಭುಜ! ಅಥವಾ ಧರ್ಮರಾಜನ ಅನುಜ್ಞೆಯನ್ನು ಪಡೆದು ತೀಕ್ಷ್ಣ ವಿಷವನ್ನಾದರೂ ಕುಡಿಯುತ್ತೇನೆ ಅಥವಾ ಅಗ್ನಿಯನ್ನಾದರೂ ಪ್ರವೇಶಿಸುತ್ತೇನೆ.

14068010a ಅಥ ವಾ ದುರ್ಮರಂ ತಾತ ಯದಿದಂ ಮೇ ಸಹಸ್ರಧಾ|

14068010c ಪತಿಪುತ್ರವಿಹೀನಾಯಾ ಹೃದಯಂ ನ ವಿದೀರ್ಯತೇ||

ಮಗೂ! ಅಥವಾ ಮರಣವು ಕಷ್ಟಸಾಧ್ಯವೆನಿಸುತ್ತದೆ. ಪತಿ-ಪುತ್ರರನ್ನು ಕಳೆದುಕೊಂಡು ನನ್ನ ಈ ಹೃದಯವು ಸಾವಿರ ಚೂರುಗಳಾಗಿ ಏಕೆ ಒಡೆಯುತ್ತಿಲ್ಲ?

14068011a ಉತ್ತಿಷ್ಠ ಪುತ್ರ ಪಶ್ಯೇಮಾಂ ದುಃಖಿತಾಂ ಪ್ರಪಿತಾಮಹೀಮ್|

14068011c ಆರ್ತಾಮುಪಪ್ಲುತಾಂ ದೀನಾಂ ನಿಮಗ್ನಾಂ ಶೋಕಸಾಗರೇ||

ಪುತ್ರ! ಮೇಲೇಳು! ಶೋಕಸಾಗರದಲ್ಲಿ ಮುಳುಗಿ ದುಃಖಿತಳಾಗಿರುವ ಈ ನಿನ್ನ ದೀನ ಆರ್ತ ಮುತ್ತಜ್ಜಿಯನ್ನು ನೋಡು!

14068012a ಆರ್ಯಾಂ ಚ ಪಶ್ಯ ಪಾಂಚಾಲೀಂ ಸಾತ್ವತೀಂ ಚ ತಪಸ್ವಿನೀಮ್|

14068012c ಮಾಂ ಚ ಪಶ್ಯ ಸುದುಃಖಾರ್ತಾಂ ವ್ಯಾಧವಿದ್ಧಾಂ ಮೃಗೀಮಿವ||

ವ್ಯಾಧನು ಹೊಡೆದ ಜಿಂಕೆಯಂತೆ ಅತ್ಯಂತ ದುಃಖಾರ್ತರಾಗಿರುವ ಆರ್ಯೆ ಪಾಂಚಾಲೀ, ತಪಸ್ವಿನೀ ಸಾತ್ವತೀ ಮತ್ತು ನನ್ನನ್ನೂ ನೋಡು!

14068013a ಉತ್ತಿಷ್ಠ ಪಶ್ಯ ವದನಂ ಲೋಕನಾಥಸ್ಯ ಧೀಮತಃ|

14068013c ಪುಂಡರೀಕಪಲಾಶಾಕ್ಷಂ ಪುರೇವ ಚಪಲೇಕ್ಷಣಮ್||

ಎದ್ದೇಳು! ಹಿಂದೆ ನಾನು ಚಪಲೇಕ್ಷಣ ಅಭಿಮನ್ಯುವನ್ನು ನೋಡುತ್ತಿದ್ದಂತೆಯೇ ಇರುವ ಧೀಮಂತ ಲೋಕನಾಥ ಪುಂಡರೀಕಪಲಾಕ್ಷನನ್ನು ನೋಡು!”

14068014a ಏವಂ ವಿಪ್ರಲಪಂತೀಂ ತು ದೃಷ್ಟ್ವಾ ನಿಪತಿತಾಂ ಪುನಃ|

14068014c ಉತ್ತರಾಂ ತಾಃ ಸ್ತ್ರಿಯಃ ಸರ್ವಾಃ ಪುನರುತ್ಥಾಪಯಂತ್ಯುತ||

ಈ ರೀತಿ ರೋದಿಸುತ್ತಾ ಪುನಃ ಬಿದ್ದ ಉತ್ತರೆಯನ್ನು ನೋಡಿ ಆ ಎಲ್ಲ ಸ್ತ್ರೀಯರೂ ಅವಳನ್ನು ಪುನಃ ಎದ್ದು ಕುಳ್ಳಿರಿಸಿದರು.

14068015a ಉತ್ಥಾಯ ತು ಪುನರ್ಧೈರ್ಯಾತ್ತದಾ ಮತ್ಸ್ಯಪತೇಃ ಸುತಾ|

14068015c ಪ್ರಾಂಜಲಿಃ ಪುಂಡರೀಕಾಕ್ಷಂ ಭೂಮಾವೇವಾಭ್ಯವಾದಯತ್||

ಮತ್ಸ್ಯಪತಿಯ ಮಗಳು ಮೇಲೆದ್ದು ಧೈರ್ಯತಂದುಕೊಂಡು ಕುಳಿತಲ್ಲಿಂದಲೇ ಪುನಃ ಪುಂಡರೀಕಾಕ್ಷನಿಗೆ ಕೈಮುಗಿದಳು.

14068016a ಶ್ರುತ್ವಾ ಸ ತಸ್ಯಾ ವಿಪುಲಂ ವಿಲಾಪಂ ಪುರುಷರ್ಷಭಃ|

14068016c ಉಪಸ್ಪೃಶ್ಯ ತತಃ ಕೃಷ್ಣೋ ಬ್ರಹ್ಮಾಸ್ತ್ರಂ ಸಂಜಹಾರ ತತ್||

ಅವಳ ಆ ವಿಪುಲ ವಿಲಾಪವನ್ನು ಕೇಳಿ ಪುರುಷರ್ಷಭ ಕೃಷ್ಣನು ಆಚಮನ ಮಾಡಿ ಬ್ರಹ್ಮಾಸ್ತ್ರವನ್ನು ಉಪಶಮನಗೊಳಿಸಿದನು.

14068017a ಪ್ರತಿಜಜ್ಞೇ ಚ ದಾಶಾರ್ಹಸ್ತಸ್ಯ ಜೀವಿತಮಚ್ಯುತಃ|

14068017c ಅಬ್ರವೀಚ್ಚ ವಿಶುದ್ಧಾತ್ಮಾ ಸರ್ವಂ ವಿಶ್ರಾವಯನ್ಜಗತ್||

ವಿಶುದ್ಧಾತ್ಮಾ ದಾಶಾರ್ಹ ಅಚ್ಯುತನು ಮಗುವನ್ನು ಜೀವಿತಗೊಳಿಸಲೋಸುಗ ಜಗತ್ತೆಲ್ಲವೂ ಕೇಳುವಂತೆ ಪ್ರತಿಜ್ಞೆಮಾಡಿ ಇಂತೆಂದನು:

14068018a ನ ಬ್ರವೀಮ್ಯುತ್ತರೇ ಮಿಥ್ಯಾ ಸತ್ಯಮೇತದ್ಭವಿಷ್ಯತಿ|

14068018c ಏಷ ಸಂಜೀವಯಾಮ್ಯೇನಂ ಪಶ್ಯತಾಂ ಸರ್ವದೇಹಿನಾಮ್||

“ಉತ್ತರೇ! ನಾನು ಸುಳ್ಳುಹೇಳುವವನಲ್ಲ. ಇದು ಸತ್ಯವಾಗಿಯೇ ನಡೆಯುತ್ತದೆ. ಸರ್ವದೇಹಿಗಳೂ ನೋಡುತ್ತಿರುವಂತೆಯೇ ನಾನು ಇವನನ್ನು ಬದುಕಿಸುತ್ತೇನೆ!

14068019a ನೋಕ್ತಪೂರ್ವಂ ಮಯಾ ಮಿಥ್ಯಾ ಸ್ವೈರೇಷ್ವಪಿ ಕದಾ ಚನ|

14068019c ನ ಚ ಯುದ್ಧೇ ಪರಾವೃತ್ತಸ್ತಥಾ ಸಂಜೀವತಾಮಯಮ್||

ಈ ಮೊದಲು ನಾನು ಪರಿಹಾಸಕ್ಕಾಗಿಯೂ ಎಂದೂ ಸುಳ್ಳುಹೇಳಿರದೇ ಇದ್ದರೆ ಮತ್ತು ಯುದ್ಧದಿಂದ ಪರಾಙ್ಮುಖನಾಗದೇ ಇದ್ದಿದ್ದರೆ ಇವನು ಬದುಕಲಿ!

14068020a ಯಥಾ ಮೇ ದಯಿತೋ ಧರ್ಮೋ ಬ್ರಾಹ್ಮಣಾಶ್ಚ ವಿಶೇಷತಃ|

14068020c ಅಭಿಮನ್ಯೋಃ ಸುತೋ ಜಾತೋ ಮೃತೋ ಜೀವತ್ವಯಂ ತಥಾ||

ನನಗೆ ಧರ್ಮ ಮತ್ತು ಅದರಲ್ಲೂ ವಿಶೇಷವಾಗಿ ಬ್ರಾಹ್ಮಣರು ಪ್ರಿಯರಾಗಿದ್ದಾರೆ ಎಂದಾದರೆ ಅಭಿಮನ್ಯುವಿನ ಈ ಸತ್ತುಹುಟ್ಟಿರುವ ಮಗನು ಜೀವಿತನಾಗಲಿ!

14068021a ಯಥಾಹಂ ನಾಭಿಜಾನಾಮಿ ವಿಜಯೇನ ಕದಾ ಚನ|

14068021c ವಿರೋಧಂ ತೇನ ಸತ್ಯೇನ ಮೃತೋ ಜೀವತ್ವಯಂ ಶಿಶುಃ||

ವಿಜಯ ಅರ್ಜುನನಿಗೆ ಎಂದೂ ವಿರೋಧವಾಗಿ ನಾನು ನಡೆದುಕೊಂಡಿದುದು ನೆನಪಿಲ್ಲ. ಆ ಸತ್ಯದಿಂದ ಈ ಮೃತ ಶಿಶುವು ಜೀವಿತಗೊಳ್ಳಲಿ!

14068022a ಯಥಾ ಸತ್ಯಂ ಚ ಧರ್ಮಶ್ಚ ಮಯಿ ನಿತ್ಯಂ ಪ್ರತಿಷ್ಠಿತೌ|

14068022c ತಥಾ ಮೃತಃ ಶಿಶುರಯಂ ಜೀವತಾಮಭಿಮನ್ಯುಜಃ||

ಸತ್ಯ-ಧರ್ಮಗಳು ನಿತ್ಯವೂ ನನ್ನಲ್ಲಿ ಹೇಗೆ ಪ್ರತಿಷ್ಠಿತಗೊಂಡಿವೆಯೋ ಹಾಗೆ ಅಭಿಮನ್ಯುವಿನ ಈ ಮೃತ ಶಿಶುವು ಜೀವಿತನಾಗಲಿ!

14068023a ಯಥಾ ಕಂಸಶ್ಚ ಕೇಶೀ ಚ ಧರ್ಮೇಣ ನಿಹತೌ ಮಯಾ|

14068023c ತೇನ ಸತ್ಯೇನ ಬಾಲೋಽಯಂ ಪುನರುಜ್ಜೀವತಾಮಿಹ||

ಕಂಸ-ಕೇಶಿಯರು ನನ್ನಿಂದ ಧರ್ಮಪೂರ್ವಕವಾಗಿಯೇ ಹತರಾದರೆನ್ನುವ ಆ ಸತ್ಯದಿಂದ ಈ ಬಾಲಕನು ಪುನಃ ಜೀವಿತನಾಗಲಿ!”

14068024a ಇತ್ಯುಕ್ತೋ ವಾಸುದೇವೇನ ಸ ಬಾಲೋ ಭರತರ್ಷಭ|

14068024c ಶನೈಃ ಶನೈರ್ಮಹಾರಾಜ ಪ್ರಾಸ್ಪಂದತ ಸಚೇತನಃ||

ಭರತರ್ಷಭ! ಮಹಾರಾಜ! ವಾಸುದೇವನು ಹೀಗೆ ಹೇಳಲು ಆ ಬಾಲಕನು ಮೆಲ್ಲ ಮೆಲ್ಲನೇ ಚೇತನಗೊಂಡು ಅವಯವಗಳನ್ನು ಆಡಿಸತೊಡಗಿದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಪರಿಕ್ಷಿತ್ಸಂಜೀವನೇ ಅಷ್ಟಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಪರಿಕ್ಷಿತ್ಸಂಜೀವನ ಎನ್ನುವ ಅರವತ್ತೆಂಟನೇ ಅಧ್ಯಾಯವು.

Comments are closed.