Ashvamedhika Parva: Chapter 67

ಅಶ್ವಮೇಧಿಕ ಪರ್ವ

೬೭

ಕೃಷ್ಣನು ಪರಿಕ್ಷಿತನ ಜನ್ಮಗೃಹವನ್ನು ಪ್ರವೇಶಿಸಿದುದು (೧-೭). ಕೃಷ್ಣನನ್ನು ನೋಡಿ ಉತ್ತರೆಯು ರೋದಿಸಿದುದು (೮-೨೪).

14067001 ವೈಶಂಪಾಯನ ಉವಾಚ

14067001a ಏವಮುಕ್ತಸ್ತು ರಾಜೇಂದ್ರ ಕೇಶಿಹಾ ದುಃಖಮೂರ್ಚಿತಃ|

14067001c ತಥೇತಿ ವ್ಯಾಜಹಾರೋಚ್ಚೈರ್ಹ್ಲಾದಯನ್ನಿವ ತಂ ಜನಮ್||

ವೈಶಂಪಾಯನನು ಹೇಳಿದನು: “ರಾಜೇಂದ್ರ! ಇದನ್ನು ಕೇಳಿ ದುಃಖಮೂರ್ಚಿತನಾದ ಕೇಶವನು ಅಲ್ಲಿದ್ದ ಜನರನ್ನು ಹರ್ಷಗೊಳಿಸುವನೋ ಎಂಬಂತೆ ಗಟ್ಟಿಯಾಗಿ “ಹಾಗೆಯೇ ಆಗಲಿ!” ಎಂದು ಹೇಳಿದನು.

14067002a ವಾಕ್ಯೇನ ತೇನ ಹಿ ತದಾ ತಂ ಜನಂ ಪುರುಷರ್ಷಭಃ|

14067002c ಹ್ಲಾದಯಾಮಾಸ ಸ ವಿಭುರ್ಘರ್ಮಾರ್ತಂ ಸಲಿಲೈರಿವ||

ಬಿಸಿಲಿನಿಂದ ಬಳಲಿದವನಿಗೆ ನೀರನ್ನು ಕೊಟ್ಟು ಸಂತಸಗೊಳಿಸುವಂತೆ ಆ ವಿಭು ಪುರುಷರ್ಷಭನು ತನ್ನ ಆ ವಾಕ್ಯದಿಂದ ಅಲ್ಲಿದ್ದ ಜನರನ್ನು ಸಂತಸಗೊಳಿಸಿದನು.

14067003a ತತಃ ಸ ಪ್ರಾವಿಶತ್ತೂರ್ಣಂ ಜನ್ಮವೇಶ್ಮ ಪಿತುಸ್ತವ|

14067003c ಅರ್ಚಿತಂ ಪುರುಷವ್ಯಾಘ್ರ ಸಿತೈರ್ಮಾಲ್ಯೈರ್ಯಥಾವಿಧಿ||

ಪುರುಷವ್ಯಾಘ್ರ! ತಕ್ಷಣವೇ ಅವನು ಯಥಾವಿಧಿಯಾಗಿ ಬಿಳಿಯ ಹೂಗಳಿಂದ ಪೂಜಿಸಿ ಅಲಂಕರಿಸಿದ್ದ ನಿನ್ನ ತಂದೆಯ ಜನ್ಮಗೃಹವನ್ನು ಪ್ರವೇಶಿಸಿದನು.

14067004a ಅಪಾಂ ಕುಂಭೈಃ ಸುಪೂರ್ಣೈಶ್ಚ ವಿನ್ಯಸ್ತೈಃ ಸರ್ವತೋದಿಶಮ್|

14067004c ಘೃತೇನ ತಿಂದುಕಾಲಾತೈಃ ಸರ್ಷಪೈಶ್ಚ ಮಹಾಭುಜ||

ಮಹಾಭುಜ! ಅಲ್ಲಿ ಎಲ್ಲಕಡೆಗಳಲ್ಲಿ ಜಲಪೂರ್ಣ ಕುಂಭಗಳಿದ್ದವು. ತುಪ್ಪದಲ್ಲಿ ನೆನೆದ ತುಂಬೇಗಿಡದ ಪಂಜುಗಳು ಬೆಳಗುತ್ತಿದ್ದವು. ಸುತ್ತಲೂ ಬಿಳೀಸಾಸಿವೆಯನ್ನು ಚೆಲ್ಲಿದ್ದರು.

14067005a ಶಸ್ತ್ರೈಶ್ಚ ವಿಮಲೈರ್ನ್ಯಸ್ತೈಃ ಪಾವಕೈಶ್ಚ ಸಮಂತತಃ|

14067005c ವೃದ್ಧಾಭಿಶ್ಚಾಭಿರಾಮಾಭಿಃ ಪರಿಚಾರಾರ್ಥಮಚ್ಯುತಃ||

14067006a ದಕ್ಷೈಶ್ಚ ಪರಿತೋ ವೀರ ಭಿಷಗ್ಭಿಃ ಕುಶಲೈಸ್ತಥಾ|

14067006c ದದರ್ಶ ಚ ಸ ತೇಜಸ್ವೀ ರಕ್ಷೋಘ್ನಾನ್ಯಪಿ ಸರ್ವಶಃ|

14067006E ದ್ರವ್ಯಾಣಿ ಸ್ಥಾಪಿತಾನಿ ಸ್ಮ ವಿಧಿವತ್ಕುಶಲೈರ್ಜನೈಃ||

ಥಳಥಳಿಸುತ್ತಿರುವ ಶುಭ್ರ ಶಸ್ತ್ರಗಳನ್ನು ಇಟ್ಟಿದ್ದರು. ಸುತ್ತಲೂ ಅಗ್ನಿಗಳು ಪ್ರಜ್ವಲಿಸುತ್ತಿದ್ದವು. ಪರಿಚಾರಕ್ಕೆಂದಿದ್ದ ವೃದ್ಧಸ್ತ್ರೀಯರು ಅಲ್ಲಿ ಸೇರಿದ್ದರು. ವೀರ! ಅಲ್ಲಿ ದಕ್ಷರೂ ಕುಶಲರೂ ಆಗಿದ್ದ ಚಿಕಿತ್ಸಕರಿದ್ದರು. ಅಲ್ಲಿ ಸುತ್ತಲೂ ರಾಕ್ಷಸರನ್ನು ನಾಶಗೊಳಿಸುವ ವಿಧಿಯನ್ನು ತಿಳಿದಿದ್ದ ಕುಶಲ ಜನರನ್ನೂ, ಇರಿಸಿದ್ದ ದ್ರವ್ಯಗಳನ್ನೂ ಆ ಅಚ್ಯುತ ತೇಜಸ್ವಿಯು ನೋಡಿದನು.

14067007a ತಥಾಯುಕ್ತಂ ಚ ತದ್ದೃಷ್ಟ್ವಾ ಜನ್ಮವೇಶ್ಮ ಪಿತುಸ್ತವ|

14067007c ಹೃಷ್ಟೋಽಭವದ್ಧೃಷೀಕೇಶಃ ಸಾಧು ಸಾಧ್ವಿತಿ ಚಾಬ್ರವೀತ್||

ಯಥಾಯುಕ್ತವಾಗಿದ್ದ ನಿನ್ನ ತಂದೆಯ ಜನ್ಮಗೃಹವನ್ನು ನೋಡಿ ಹರ್ಷಗೊಂಡ ಹೃಷೀಕೇಶನು “ಸಾಧು! ಸಾಧು!” ಎಂದನು.

14067008a ತಥಾ ಬ್ರುವತಿ ವಾರ್ಷ್ಣೇಯೇ ಪ್ರಹೃಷ್ಟವದನೇ ತದಾ|

14067008c ದ್ರೌಪದೀ ತ್ವರಿತಾ ಗತ್ವಾ ವೈರಾಟೀಂ ವಾಕ್ಯಮಬ್ರವೀತ್||

ಪ್ರಹೃಷ್ಟವದನನಾಗಿ ವಾರ್ಷ್ಣೇಯನು ಹಾಗೆ ಹೇಳುತ್ತಿರಲು ದ್ರೌಪದಿಯು ಅವಸರದಲ್ಲಿ ವೈರಾಟಿಯಲ್ಲಿಗೆ ಹೋಗಿ ಅವಳಿಗೆ ಈ ಮಾತುಗಳನ್ನಾಡಿದಳು:

14067009a ಅಯಮಾಯಾತಿ ತೇ ಭದ್ರೇ ಶ್ವಶುರೋ ಮಧುಸೂದನಃ|

14067009c ಪುರಾಣರ್ಷಿರಚಿಂತ್ಯಾತ್ಮಾ ಸಮೀಪಮಪರಾಜಿತಃ||

“ಭದ್ರೇ! ಇದೋ ಇಲ್ಲಿ ನೋಡು! ನಿನ್ನ ಮಾವ ಅಚಿಂತ್ಯಾತ್ಮ ಅಪರಾಜಿತ ಪುರಾಣಋಷಿ ಮಧುಸೂದನನು ಬರುತ್ತಿದ್ದಾನೆ!”

14067010a ಸಾಪಿ ಬಾಷ್ಪಕಲಾಂ ವಾಚಂ ನಿಗೃಹ್ಯಾಶ್ರೂಣಿ ಚೈವ ಹ|

14067010c ಸುಸಂವೀತಾಭವದ್ದೇವೀ ದೇವವತ್ಕೃಷ್ಣಮೀಕ್ಷತೀ||

ಅವಳ ಮಾತನ್ನು ಕೇಳಿ ಕೃಷ್ಣನನ್ನು ದೇವನೆಂದೇ ಕಾಣುತ್ತಿದ್ದ ದೇವೀ ಉತ್ತರೆಯಾದರೋ ಅಳುವುದನ್ನು ನಿಲ್ಲಿಸಿ, ಕಣ್ಣೀರನ್ನು ಒರೆಸಿಕೊಳ್ಳುತ್ತಾ ಸೀರೆಯನ್ನು ಸರಿಪಡಿಸಿಕೊಂಡಳು.

14067011a ಸಾ ತಥಾ ದೂಯಮಾನೇನ ಹೃದಯೇನ ತಪಸ್ವಿನೀ|

14067011c ದೃಷ್ಟ್ವಾ ಗೋವಿಂದಮಾಯಾಂತಂ ಕೃಪಣಂ ಪರ್ಯದೇವಯತ್||

ಬರುತ್ತಿದ್ದ ಗೋವಿಂದನನ್ನು ನೋಡಿ ಆ ತಪಸ್ವಿನಿಯು ದುಃಖದಿಂದ ಪೀಡಿತವಾಗಿದ್ದ ಹೃದಯದಿಂದ ದೀನಳಾಗಿ ರೋದಿಸಿದಳು:

14067012a ಪುಂಡರೀಕಾಕ್ಷ ಪಶ್ಯಸ್ವ ಬಾಲಾವಿಹ ವಿನಾಕೃತೌ|

14067012c ಅಭಿಮನ್ಯುಂ ಚ ಮಾಂ ಚೈವ ಹತೌ ತುಲ್ಯಂ ಜನಾರ್ದನ||

“ಪುಂಡರೀಕಾಕ್ಷ! ಜನಾರ್ದನ! ಅಭಿಮನ್ಯು ಮತ್ತು ನಾವಿಬ್ಬರೂ ಸಂತಾನಹೀನರಾಗಿದ್ದುದನ್ನು ನೋಡು! ನಾವಿಬ್ಬರೂ ಹತರಾದರಂತೆಯೇ!

14067013a ವಾರ್ಷ್ಣೇಯ ಮಧುಹನ್ವೀರ ಶಿರಸಾ ತ್ವಾಂ ಪ್ರಸಾದಯೇ|

14067013c ದ್ರೋಣಪುತ್ರಾಸ್ತ್ರನಿರ್ದಗ್ಧಂ ಜೀವಯೈನಂ ಮಮಾತ್ಮಜಮ್||

ವಾರ್ಷ್ಣೇಯ! ಮಧುಹನ್! ವೀರ! ಶಿರಸಾ ನಿನಗೆ ನಮಸ್ಕರಿಸುತ್ತಿದ್ದೇನೆ. ದ್ರೋಣಪುತ್ರನ ಅಸ್ತ್ರದಿಂದ ಸುಟ್ಟುಹೋಗಿರುವ ನನ್ನ ಈ ಮಗನನ್ನು ಬದುಕಿಸು!

14067014a ಯದಿ ಸ್ಮ ಧರ್ಮರಾಜ್ಞಾ ವಾ ಭೀಮಸೇನೇನ ವಾ ಪುನಃ|

14067014c ತ್ವಯಾ ವಾ ಪುಂಡರೀಕಾಕ್ಷ ವಾಕ್ಯಮುಕ್ತಮಿದಂ ಭವೇತ್||

14067015a ಅಜಾನತೀಮಿಷೀಕೇಯಂ ಜನಿತ್ರೀಂ ಹಂತ್ವಿತಿ ಪ್ರಭೋ|

14067015c ಅಹಮೇವ ವಿನಷ್ಟಾ ಸ್ಯಾಂ ನೇದಮೇವಂಗತಂ ಭವೇತ್||

ಪುಂಡರೀಕಾಕ್ಷ! ಪ್ರಭೋ! ಧರ್ಮರಾಜನಾಗಲೀ, ಭೀಮಸೇನನಾಗಲೀ ಅಥವಾ ನೀನಾಗಲೀ “ಈ ಇಷೀಕವು ಅರಿವಿಲ್ಲದ ತಾಯಿಯನ್ನೇ ಕೊಲ್ಲಲಿ!” ಎಂದು ಹೇಳಿಬಿಟ್ಟಿದ್ದರೆ ನಾನೇ ಮರಣ ಹೊಂದುತ್ತಿದ್ದೆ. ಈ ದುಃಸ್ಥಿತಿಯು ಬರುತ್ತಿರಲಿಲ್ಲ!

14067016a ಗರ್ಭಸ್ಥಸ್ಯಾಸ್ಯ ಬಾಲಸ್ಯ ಬ್ರಹ್ಮಾಸ್ತ್ರೇಣ ನಿಪಾತನಮ್|

14067016c ಕೃತ್ವಾ ನೃಶಂಸಂ ದುರ್ಬುದ್ಧಿರ್ದ್ರೌಣಿಃ ಕಿಂ ಫಲಮಶ್ನುತೇ||

ಗರ್ಭಸ್ಥನಾಗಿದ್ದ ಈ ಬಾಲಕನನ್ನು ಬ್ರಹ್ಮಾಸ್ತ್ರದಿಂದ ಕೊಂದು ಹಿಂಸೆಯನ್ನೆಸಗಿದ ಆ ದುರ್ಬುದ್ಧಿ ದ್ರೌಣಿಗಾದ ಲಾಭವಾದರೂ ಏನು?

14067017a ಸಾ ತ್ವಾ ಪ್ರಸಾದ್ಯ ಶಿರಸಾ ಯಾಚೇ ಶತ್ರುನಿಬರ್ಹಣ|

14067017c ಪ್ರಾಣಾಂಸ್ತ್ಯಕ್ಷ್ಯಾಮಿ ಗೋವಿಂದ ನಾಯಂ ಸಂಜೀವತೇ ಯದಿ||

ಶತ್ರುನಿಬರ್ಹಣ! ನಿನಗೆ ಶಿರಸಾ ವಂದಿಸಿ ಬೇಡಿಕೊಳ್ಳುತ್ತಿದ್ದೇನೆ. ಕರುಣಿಸು. ಗೋವಿಂದ! ಒಂದು ವೇಳೆ ಇವನು ಬದುಕದೇ ಇದ್ದರೆ ನಾನು ಪ್ರಾಣಗಳನ್ನು ತ್ಯಜಿಸುತ್ತೇನೆ!

14067018a ಅಸ್ಮಿನ್ ಹಿ ಬಹವಃ ಸಾಧೋ ಯೇ ಮಮಾಸನ್ಮನೋರಥಾಃ|

14067018c ತೇ ದ್ರೋಣಪುತ್ರೇಣ ಹತಾಃ ಕಿಂ ನು ಜೀವಾಮಿ ಕೇಶವ||

ಕೇಶವ! ಇವನಲ್ಲಿಯೇ ನನ್ನ ಅನೇಕ ಉತ್ತಮ ಮನೋರಥಗಳನ್ನು ಇಟ್ಟುಕೊಂಡಿದ್ದೆನು. ದ್ರೋಣಪುತ್ರನಿಂದ ಇವನು ಹತನಾದ ಮೇಲೆ ನಾನೇಕೆ ಜೀವಿಸಿರಲಿ?

14067019a ಆಸೀನ್ಮಮ ಮತಿಃ ಕೃಷ್ಣ ಪೂರ್ಣೋತ್ಸಂಗಾ ಜನಾರ್ದನ|

14067019c ಅಭಿವಾದಯಿಷ್ಯೇ ದಿಷ್ಟ್ಯೇತಿ ತದಿದಂ ವಿತಥೀಕೃತಮ್||

ಕೃಷ್ಣ! ಜನಾರ್ದನ! ಇವನನ್ನು ನನ್ನ ಕಂಕುಳಿನಲ್ಲೆತ್ತಿಕೊಂಡು ಸಂತೋಷದಿಂದ ನಿನಗೆ ನಮಸ್ಕರಿಸಬೇಕೆಂದು ನನ್ನ ಆಸೆಯಾಗಿತ್ತು. ಆದರೆ ಅದು ಈಗ ಮಣ್ಣುಪಾಲಾಯಿತು!

14067020a ಚಪಲಾಕ್ಷಸ್ಯ ದಾಯಾದೇ ಮೃತೇಽಸ್ಮಿನ್ಪುರುಷರ್ಷಭ|

14067020c ವಿಫಲಾ ಮೇ ಕೃತಾಃ ಕೃಷ್ಣ ಹೃದಿ ಸರ್ವೇ ಮನೋರಥಾಃ||

ಪುರುಷರ್ಷಭ! ಕೃಷ್ಣ! ಚಪಲಾಕ್ಷನ ಮಗನು ಮೃತನಾಗಿದ್ದಾನೆ. ಇದರಿಂದಾಗಿ ನನ್ನ ಹೃದಯದಲ್ಲಿದ್ದ ಸರ್ವಮನೋರಥಗಳೂ ವಿಫಲವಾಗಿ ಹೋದವು!

14067021a ಚಪಲಾಕ್ಷಃ ಕಿಲಾತೀವ ಪ್ರಿಯಸ್ತೇ ಮಧುಸೂದನ|

14067021c ಸುತಂ ಪಶ್ಯಸ್ವ ತಸ್ಯೇಮಂ ಬ್ರಹ್ಮಾಸ್ತ್ರೇಣ ನಿಪಾತಿತಮ್||

ಮಧುಸೂದನ! ಆ ಚಪಲಾಕ್ಷನು ನಿನಗೆ ಪ್ರಿಯನಾಗಿದ್ದ ತಾನೇ? ಅವನ ಪುತ್ರನು ಬ್ರಹ್ಮಾಸ್ತ್ರದಿಂದ ಹತನಾಗಿರುವುದನ್ನು ನೋಡು!

14067022a ಕೃತಘ್ನೋಽಯಂ ನೃಶಂಸೋಽಯಂ ಯಥಾಸ್ಯ ಜನಕಸ್ತಥಾ|

14067022c ಯಃ ಪಾಂಡವೀಂ ಶ್ರಿಯಂ ತ್ಯಕ್ತ್ವಾ ಗತೋಽದ್ಯ ಯಮಸಾದನಮ್||

ಪಾಂಡವರ ಸಂಪತ್ತನ್ನು ತೊರೆದು ಇಂದು ಯಮಸಾದನಕ್ಕೆ ಹೋದ ಇವನೂ ಕೂಡ ಅವನ ತಂದೆಯಂತೆ ಕೃತಘ್ನನೂ ಕ್ರೂರಿಯೂ ಆಗಿದ್ದಾನೆ.

14067023a ಮಯಾ ಚೈತತ್ಪ್ರತಿಜ್ಞಾತಂ ರಣಮೂರ್ಧನಿ ಕೇಶವ|

14067023c ಅಭಿಮನ್ಯೌ ಹತೇ ವೀರ ತ್ವಾಮೇಷ್ಯಾಮ್ಯಚಿರಾದಿತಿ||

ಕೇಶವ! “ವೀರ! ಅಭಿಮನ್ಯು! ನೀನೇದರೂ ರಣಾಂಗಣದಲ್ಲಿ ಹತನಾದರೆ ಬೇಗನೆ ನಾನೂ ಕೂಡ ನಿನ್ನನ್ನು ಹಿಂಬಾಲಿಸಿ ಬರುತ್ತೇನೆ!” ಎಂದು ಪ್ರತಿಜ್ಞೆಮಾಡಿದ್ದೆ.

14067024a ತಚ್ಚ ನಾಕರವಂ ಕೃಷ್ಣ ನೃಶಂಸಾ ಜೀವಿತಪ್ರಿಯಾ|

14067024c ಇದಾನೀಮಾಗತಾಂ ತತ್ರ ಕಿಂ ನು ವಕ್ಷ್ಯತಿ ಫಾಲ್ಗುನಿಃ||

ಕೃಷ್ಣ! ನನ್ನ ಜೀವನದ ಮೇಲಿನ ಆಸೆಯಿಂದ ನಿರ್ದಯಳಾದ ನಾನು ಆ ರೀತಿ ಮಾಡಲಿಲ್ಲ. ಈಗ ನಾನು ಅಲ್ಲಿಗೆ ಹೋದರೆ ಫಾಲ್ಗುನಿ ಅಭಿಮನ್ಯುವು ಏನು ಹೇಳಿಯಾನು?””

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತರಾವಾಕ್ಯೇ ಸಪ್ತಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತರಾವಾಕ್ಯ ಎನ್ನುವ ಅರವತ್ತೇಳನೇ ಅಧ್ಯಾಯವು.

Comments are closed.