Ashvamedhika Parva: Chapter 66

ಅಶ್ವಮೇಧಿಕ ಪರ್ವ

೬೬

ದುಃಖಾರ್ತಳಾದ ಸುಭದ್ರೆಯು ಕೃಷ್ಣನಲ್ಲಿ ತನ್ನ ದುಃಖವನ್ನು ತೋಡಿಕೊಳ್ಳುವುದು (೧-೧೯).

14066001 ವೈಶಂಪಾಯನ ಉವಾಚ

14066001a ಉತ್ಥಿತಾಯಾಂ ಪೃಥಾಯಾಂ ತು ಸುಭದ್ರಾ ಭ್ರಾತರಂ ತದಾ|

14066001c ದೃಷ್ಟ್ವಾ ಚುಕ್ರೋಶ ದುಃಖಾರ್ತಾ ವಚನಂ ಚೇದಮಬ್ರವೀತ್||

ವೈಶಂಪಾಯನನು ಹೇಳಿದನು: “ಪೃಥೆಯನ್ನು ಮೇಲೆಬ್ಬಿಸಿದ ನಂತರ ಸುಭದ್ರೆಯು ತನ್ನ ಅಣ್ಣನನ್ನು ನೋಡಿ ದುಃಖಾರ್ತಳಾಗಿ ಅಳುತ್ತಲೇ ಈ ಮಾತುಗಳನ್ನಾಡಿದಳು:

14066002a ಪುಂಡರೀಕಾಕ್ಷ ಪಶ್ಯಸ್ವ ಪೌತ್ರಂ ಪಾರ್ಥಸ್ಯ ಧೀಮತಃ|

14066002c ಪರಿಕ್ಷೀಣೇಷು ಕುರುಷು ಪರಿಕ್ಷೀಣಂ ಗತಾಯುಷಮ್||

“ಪುಂಡರೀಕಾಕ್ಷ! ಕುರುವಂಶೀಯರೆಲ್ಲರೂ ಸಂತಾನವಿಲ್ಲದೇ ಕ್ಷಯಿಸುತ್ತಿರಲಾಗಿ ಧೀಮಂತ ಪಾರ್ಥನ ಆಯುಸ್ಸನ್ನೇ ಕಳೆದುಕೊಂಡಿರುವ ಈ ಮೊಮ್ಮಗನನ್ನು ನೋಡು!

14066003a ಇಷೀಕಾ ದ್ರೋಣಪುತ್ರೇಣ ಭೀಮಸೇನಾರ್ಥಮುದ್ಯತಾ|

14066003c ಸೋತ್ತರಾಯಾಂ ನಿಪತಿತಾ ವಿಜಯೇ ಮಯಿ ಚೈವ ಹ||

ದ್ರೋಣಪುತ್ರನು ಭೀಮಸೇನನ ಮೇಲೆ ಪ್ರಯೋಗಿಸಿದ ಇಷೀಕವು ಉತ್ತರ, ಅರ್ಜುನ ಮತ್ತು ನನ್ನ ಮೇಲೆ ಬಿದ್ದಿತ್ತು.

14066004a ಸೇಯಂ ಜ್ವಲಂತೀ ಹೃದಯೇ ಮಯಿ ತಿಷ್ಠತಿ ಕೇಶವ|

14066004c ಯನ್ನ ಪಶ್ಯಾಮಿ ದುರ್ಧರ್ಷ ಮಮ ಪುತ್ರಸುತಂ ವಿಭೋ||

ಕೇಶವ! ದುರ್ಧರ್ಷ! ವಿಭೋ! ಅದು ಪ್ರಜ್ವಲಿಸುತ್ತಾ ನನ್ನ ಹೃದಯದಲ್ಲಿಯೇ ನೆಲೆಸಿಕೊಂಡಿರುವುದರಿಂದ ನನ್ನ ಮಗನ ಮಗನನ್ನು ನಾನು ಕಾಣದಾಗಿದ್ದೇನೆ!

14066005a ಕಿಂ ನು ವಕ್ಷ್ಯತಿ ಧರ್ಮಾತ್ಮಾ ಧರ್ಮರಾಜೋ ಯುಧಿಷ್ಠಿರಃ|

14066005c ಭೀಮಸೇನಾರ್ಜುನೌ ಚಾಪಿ ಮಾದ್ರವತ್ಯಾಃ ಸುತೌ ಚ ತೌ||

14066006a ಶ್ರುತ್ವಾಭಿಮನ್ಯೋಸ್ತನಯಂ ಜಾತಂ ಚ ಮೃತಮೇವ ಚ|

14066006c ಮುಷಿತಾ ಇವ ವಾರ್ಷ್ಣೇಯ ದ್ರೋಣಪುತ್ರೇಣ ಪಾಂಡವಾಃ||

ವಾರ್ಷ್ಣೇಯ! ಅಭಿಮನ್ಯುವಿನ ಮಗನು ಮೃತನಾಗಿ ಹುಟ್ಟಿದನೆಂದು ಕೇಳಿ ಧರ್ಮಾತ್ಮ ಧರ್ಮರಾಜ ಯುಧಿಷ್ಠಿರನು ಏನು ಹೇಳುವನು? ಭೀಮಸೇನ, ಅರ್ಜುನ, ಮತ್ತು ಮಾದ್ರವತಿಯ ಮಕ್ಕಳೀರ್ವರೂ ಏನು ಹೇಳುವರು? ದ್ರೋಣಪುತ್ರನು ಪಾಂಡವರ ಎಲ್ಲವನ್ನೂ ಕೊಳ್ಳೆಹೊಡೆದುಬಿಟ್ಟನು!

14066007a ಅಭಿಮನ್ಯುಃ ಪ್ರಿಯಃ ಕೃಷ್ಣ ಪಿತೄಣಾಂ ನಾತ್ರ ಸಂಶಯಃ|

14066007c ತೇ ಶ್ರುತ್ವಾ ಕಿಂ ನು ವಕ್ಷ್ಯಂತಿ ದ್ರೋಣಪುತ್ರಾಸ್ತ್ರನಿರ್ಜಿತಾಃ||

ಕೃಷ್ಣ! ಅಭಿಮನ್ಯುವು ತನ್ನ ತಂದೆಯರಿಗೆ ಪ್ರಿಯನಾಗಿದ್ದನೆನ್ನುವುದರಲ್ಲಿ ಸಂಶಯವೇ ಇಲ್ಲ. ದ್ರೋಣಪುತ್ರನ ಅಸ್ತ್ರದಿಂದ ಸೋಲಿಸಲ್ಪಟ್ಟ ಅವರು ಇದನ್ನು ಕೇಳಿ ಏನು ಹೇಳುವರು?

14066008a ಭವಿತಾತಃ ಪರಂ ದುಃಖಂ ಕಿಂ ನು ಮನ್ಯೇ ಜನಾರ್ದನ|

14066008c ಅಭಿಮನ್ಯೋಃ ಸುತಾತ್ಕೃಷ್ಣ ಮೃತಾಜ್ಜಾತಾದರಿಂದಮ||

ಜನಾರ್ದನ! ಕೃಷ್ಣ! ಅರಿಂದಮ! ಅಭಿಮನ್ಯುವಿನ ಮಗನು ಮೃತನಾಗಿ ಹುಟ್ಟಿರುವುದಕ್ಕಿಂತಲೂ ಮಿಗಿಲಾದ ದುಃಖವು ಯಾವುದು ತಾನೇ ಇರುವುದು?

14066009a ಸಾಹಂ ಪ್ರಸಾದಯೇ ಕೃಷ್ಣ ತ್ವಾಮದ್ಯ ಶಿರಸಾ ನತಾ|

14066009c ಪೃಥೇಯಂ ದ್ರೌಪದೀ ಚೈವ ತಾಃ ಪಶ್ಯ ಪುರುಷೋತ್ತಮ||

ಕೃಷ್ಣ! ಪುರುಷೋತ್ತಮ! ಇಂದು ಶಿರಬಾಗಿ ನಮಸ್ಕರಿಸಿ ನಾನು ನಿನ್ನ ಪ್ರಸಾದವನ್ನು ಬೇಡಿಕೊಳ್ಳುತ್ತಿದ್ದೇನೆ. ಪೃಥೆ-ದ್ರೌಪದಿಯರನ್ನೂ ನೋಡು!

14066010a ಯದಾ ದ್ರೋಣಸುತೋ ಗರ್ಭಾನ್ಪಾಂಡೂನಾಂ ಹಂತಿ ಮಾಧವ|

14066010c ತದಾ ಕಿಲ ತ್ವಯಾ ದ್ರೌಣಿಃ ಕ್ರುದ್ಧೇನೋಕ್ತೋಽರಿಮರ್ದನ||

ಮಾಧವ! ಅರಿಮರ್ದನ! ದ್ರೋಣಸುತನು ಪಾಂಡವರ ಗರ್ಭಗಳನ್ನು ನಾಶಗೊಳಿಸಲು ಹೊರಟಾಗ ನೀನು ಕ್ರುದ್ಧನಾಗಿ ದ್ರೌಣಿಗೆ ಹೀಗೆ ಹೇಳಿದ್ದೆಯಲ್ಲವೇ?

14066011a ಅಕಾಮಂ ತ್ವಾ ಕರಿಷ್ಯಾಮಿ ಬ್ರಹ್ಮಬಂಧೋ ನರಾಧಮ|

14066011c ಅಹಂ ಸಂಜೀವಯಿಷ್ಯಾಮಿ ಕಿರೀಟಿತನಯಾತ್ಮಜಮ್||

“ಬ್ರಹ್ಮಬಂಧು ನರಾಧಮನೇ! ನಿನ್ನ ಅಪೇಕ್ಷೆಯು ನೆರವೇರದಂತೆ ಮಾಡುತ್ತೇನೆ. ಕಿರೀಟಿಯ ಮಗನ ಮಗನನ್ನು ನಾನು ಬದುಕಿಸುತ್ತೇನೆ!”

14066012a ಇತ್ಯೇತದ್ವಚನಂ ಶ್ರುತ್ವಾ ಜಾನಮಾನಾ ಬಲಂ ತವ|

14066012c ಪ್ರಸಾದಯೇ ತ್ವಾ ದುರ್ಧರ್ಷ ಜೀವತಾಮಭಿಮನ್ಯುಜಃ||

ನಿನ್ನ ಆ ವಚನವನ್ನು ಕೇಳಿದಾಗಲೇ ನಿನ್ನ ಬಲವೇನೆನ್ನುವುದನ್ನು ನಾನು ಅರಿತುಕೊಂಡೆ. ದುರ್ಧರ್ಷ! ಅಭಿಮನ್ಯುವಿನ ಮಗನನ್ನು ಬದುಕಿಸಿ ಕರುಣಿಸು!

14066013a ಯದ್ಯೇವಂ ತ್ವಂ ಪ್ರತಿಶ್ರುತ್ಯ ನ ಕರೋಷಿ ವಚಃ ಶುಭಮ್|

14066013c ಸಫಲಂ ವೃಷ್ಣಿಶಾರ್ದೂಲ ಮೃತಾಂ ಮಾಮುಪಧಾರಯ||

ವೃಷ್ಣಿಶಾರ್ದೂಲ! ಒಂದು ವೇಳೆ ನೀನು ಹೇಳಿದ್ದ ಆ ಶುಭವಚನವನ್ನು ಸಫಲಗೊಳಿಸದೇ ಇದ್ದರೆ ನಾನೂ ಕೂಡ ಮೃತಳಾದೆನೆಂದೇ ಭಾವಿಸು!

14066014a ಅಭಿಮನ್ಯೋಃ ಸುತೋ ವೀರ ನ ಸಂಜೀವತಿ ಯದ್ಯಯಮ್|

14066014c ಜೀವತಿ ತ್ವಯಿ ದುರ್ಧರ್ಷ ಕಿಂ ಕರಿಷ್ಯಾಮ್ಯಹಂ ತ್ವಯಾ||

ವೀರ! ದುರ್ಧರ್ಷ! ಅಭಿಮನ್ಯುವಿನ ಸುತನನ್ನು ನೀನು ಇಂದು ಬದುಕಿಸದೇ ಇದ್ದರೆ ಜೀವಿಸಿರುವ ನಿನ್ನಿಂದ ಇನ್ನು ನನಗೇನಾಗಬೇಕಾಗಿದೆ?

14066015a ಸಂಜೀವಯೈನಂ ದುರ್ಧರ್ಷ ಮೃತಂ ತ್ವಮಭಿಮನ್ಯುಜಮ್|

14066015c ಸದೃಶಾಕ್ಷಸುತಂ ವೀರ ಸಸ್ಯಂ ವರ್ಷನ್ನಿವಾಂಬುದಃ||

ದುರ್ಧರ್ಷ! ವೀರ! ಮೋಡವು ಮಳೆಗರೆದು ಸಸ್ಯವನ್ನು ಪುನರ್ಜೀವನಗೊಳಿಸುವಂತೆ ನಿನ್ನ ಕಣ್ಣುಗಳಂಥಹದೇ ಕಣ್ಣುಗಳಿದ್ದ ಅಭಿಮನ್ಯುವಿನ ಈ ಮಗನನ್ನು ಬದುಕಿಸು!

14066016a ತ್ವಂ ಹಿ ಕೇಶವ ಧರ್ಮಾತ್ಮಾ ಸತ್ಯವಾನ್ಸತ್ಯವಿಕ್ರಮಃ|

14066016c ಸ ತಾಂ ವಾಚಮೃತಾಂ ಕರ್ತುಮರ್ಹಸಿ ತ್ವಮರಿಂದಮ||

ಅರಿಂದಮ! ಕೇಶವ! ನೀನು ಧರ್ಮಾತ್ಮ. ಸತ್ಯವಂತ ಮತ್ತು ಸತ್ಯವಿಕ್ರಮ. ನೀನು ನಿನ್ನ ಮಾತನ್ನು ಸತ್ಯವಾಗಿಸಬೇಕು!

14066017a ಇಚ್ಚನ್ನಪಿ ಹಿ ಲೋಕಾಂಸ್ತ್ರೀನ್ಜೀವಯೇಥಾ ಮೃತಾನಿಮಾನ್|

14066017c ಕಿಂ ಪುನರ್ದಯಿತಂ ಜಾತಂ ಸ್ವಸ್ರೀಯಸ್ಯಾತ್ಮಜಂ ಮೃತಮ್||

ನೀನು ಇಚ್ಛಿಸಿದರೆ ಮೃತಗೊಂಡ ಮೂರು ಲೋಕಗಳನ್ನೂ ಬದುಕಿಸಬಲ್ಲೆ! ಹೀಗಿರುವಾಗ ಸತ್ತು ಹುಟ್ಟಿರುವ ನಿನ್ನ ಈ ಅಳಿಯನ ಮಗನನ್ನು ಬದುಕಿಸಲಾರೆಯಾ?

14066018a ಪ್ರಭಾವಜ್ಞಾಸ್ಮಿ ತೇ ಕೃಷ್ಣ ತಸ್ಮಾದೇತದ್ಬ್ರವೀಮಿ ತೇ|

14066018c ಕುರುಷ್ವ ಪಾಂಡುಪುತ್ರಾಣಾಮಿಮಂ ಪರಮನುಗ್ರಹಮ್||

ಕೃಷ್ಣ! ನಿನ್ನ ಪ್ರಭಾವವೇನೆಂದು ತಿಳಿದುಕೊಂಡಿರುವುದರಿಂದಲೇ ನಾನು ನಿನಗೆ ಹೇಳುತ್ತಿದ್ದೇನೆ. ಪಾಂಡುಪುತ್ರರಿಗೆ ಈ ಪರಮ ಅನುಗ್ರಹವನ್ನು ಕರುಣಿಸು!

14066019a ಸ್ವಸೇತಿ ವಾ ಮಹಾಬಾಹೋ ಹತಪುತ್ರೇತಿ ವಾ ಪುನಃ|

14066019c ಪ್ರಪನ್ನಾ ಮಾಮಿಯಂ ವೇತಿ ದಯಾಂ ಕರ್ತುಮಿಹಾರ್ಹಸಿ||

ಮಹಾಬಾಹೋ! ತಂಗಿಯೆಂದಾದರೂ ಅಥವಾ ಪುತ್ರನನ್ನು ಕಳೆದುಕೊಂಡಿರುವಳೆಂದಾದರೂ ಅಥವಾ ಮರುಕಗೊಂಡು ಬೇಡುತ್ತಿರುವ ನನ್ನ ಮೇಲಿನ ದಯೆಯಿಂದಲಾದರೂ ಇದನ್ನು ನೀನು ಮಾಡಬೇಕು.””

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸುಭದ್ರಾವಾಕ್ಯೇ ಷಟ್ಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸುಭದ್ರಾವಾಕ್ಯ ಎನ್ನುವ ಅರವತ್ತಾರನೇ ಅಧ್ಯಾಯವು.

Comments are closed.