Ashvamedhika Parva: Chapter 56

ಅಶ್ವಮೇಧಿಕ ಪರ್ವ

೫೬

ಗುರುದಕ್ಷಿಣೆಯನ್ನು ಕೊಟ್ಟು ಹಿಂದಿರುಗಿ ಬರುತ್ತೇನೆಂದು ಸೌದಾಸನಿಗೆ ಹೇಳಿ ಉತ್ತಂಕನು ಸೌದಾಸನ ಪತ್ನಿ ಮದಯಂತಿಯ ಬಳಿ ಹೋದುದು (೧-೧೮). ಮದಯಂತಿಯು ಕುಂಡಲಗಳ ಮಹಾತ್ಮೆಯನ್ನು ವರ್ಣಿಸಿ, ಸೌದಾಸನಿಂದ ಏನಾದರೂ ಕುರುಹನ್ನು ತಾ ಎಂದು ಉತ್ತಂಕನಿಗೆ ಹೇಳಿದುದು (೧೯-೨೮).

14056001 ವೈಶಂಪಾಯನ ಉವಾಚ

14056001a ಸ ತಂ ದೃಷ್ಟ್ವಾ ತಥಾಭೂತಂ ರಾಜಾನಂ ಘೋರದರ್ಶನಮ್|

14056001c ದೀರ್ಘಶ್ಮಶ್ರುಧರಂ ನೄಣಾಂ ಶೋಣಿತೇನ ಸಮುಕ್ಷಿತಮ್||

14056002a ಚಕಾರ ನ ವ್ಯಥಾಂ ವಿಪ್ರೋ ರಾಜಾ ತ್ವೇನಮಥಾಬ್ರವೀತ್|

14056002c ಪ್ರತ್ಯುತ್ಥಾಯ ಮಹಾತೇಜಾ ಭಯಕರ್ತಾ ಯಮೋಪಮಃ||

ವೈಶಂಪಾಯನನು ಹೇಳಿದನು: “ಮಹಾಭಯಂಕರನಾಗಿ ಕಾಣುತ್ತಿದ್ದ, ದೀರ್ಘವಾದ ಗಡ್ಡ-ಮೀಸೆಗಳನ್ನು ಬೆಳೆಸಿದ್ದ, ಮನುಷ್ಯರ ರಕ್ತದಿಂದ ತೋಯ್ದುಯೋಗಿದ್ದ ಆ ರಾಜನನ್ನು ಕಂಡು ವಿಪ್ರ ಉತ್ತಂಕನು ವ್ಯಥೆಪಡಲಿಲ್ಲ.  ಯಮನಂತೆ ಭಯಂಕರನಾಗಿದ್ದ ರಾಜನು ಮಹಾತೇಜಸ್ವಿ ಉತ್ತಂಕನ ಎದಿರುಬಂದು ಹೀಗೆ ಹೇಳಿದನು:

14056003a ದಿಷ್ಟ್ಯಾ ತ್ವಮಸಿ ಕಲ್ಯಾಣ ಷಷ್ಠೇ ಕಾಲೇ ಮಮಾಂತಿಕಮ್|

14056003c ಭಕ್ಷಂ ಮೃಗಯಮಾಣಸ್ಯ ಸಂಪ್ರಾಪ್ತೋ ದ್ವಿಜಸತ್ತಮ||

“ಕಲ್ಯಾಣ! ದ್ವಿಜಸತ್ತಮ! ದಿನದ ಆರನೆಯ ಭಾಗದಲ್ಲಿ ಸೌಭಾಗ್ಯವಶದಿಂದಲೇ ನೀನು ನನ್ನ ಬಳಿ ಬಂದಿದ್ದೀಯೆ! ನಾನು ಆಹಾರವನ್ನು ಹುಡುಕುತ್ತಿರುವಾಗಲೇ ನೀನು ನನಗೆ ದೊರಕಿರುವೆ!”

14056004 ಉತ್ತಂಕ ಉವಾಚ

14056004a ರಾಜನ್ಗುರ್ವರ್ಥಿನಂ ವಿದ್ಧಿ ಚರಂತಂ ಮಾಮಿಹಾಗತಮ್|

14056004c ನ ಚ ಗುರ್ವರ್ಥಮುದ್ಯುಕ್ತಂ ಹಿಂಸ್ಯಮಾಹುರ್ಮನೀಷಿಣಃ||

ಉತ್ತಂಕನು ಹೇಳಿದನು: “ರಾಜನ್! ಗುರುದಕ್ಷಿಣೆಗಾಗಿ ತಿರುಗಾಡುತ್ತಾ ನಾನು ಇಲ್ಲಿಗೆ ಬಂದಿರುವೆನೆಂದು ತಿಳಿ! ಗುರುದಕ್ಷಿಣೆಯನ್ನು ಸಂಗ್ರಹಿಸಲು ತೊಡಗಿರುವವರನ್ನು ಹಿಂಸಿಸಬಾರದು ಎಂದು ತಿಳಿದವರು ಹೇಳುತ್ತಾರೆ!”

14056005 ರಾಜೋವಾಚ

14056005a ಷಷ್ಠೇ ಕಾಲೇ ಮಮಾಹಾರೋ ವಿಹಿತೋ ದ್ವಿಜಸತ್ತಮ|

14056005c ನ ಚ ಶಕ್ಯಃ ಸಮುತ್ಸ್ರಷ್ಟುಂ ಕ್ಷುಧಿತೇನ ಮಯಾದ್ಯ ವೈ||

ರಾಜನು ಹೇಳಿದನು: “ದ್ವಿಜಸತ್ತಮ! ದಿನದ ಆರನೆಯ ಪ್ರಹರದಲ್ಲಿ ನನಗೆ ಆಹಾರವು ವಿಹಿತವಾಗಿದೆ. ಇಂದು ನನ್ನ ಹಸಿವೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ!”

14056006 ಉತ್ತಂಕ ಉವಾಚ

14056006a ಏವಮಸ್ತು ಮಹಾರಾಜ ಸಮಯಃ ಕ್ರಿಯತಾಂ ತು ಮೇ|

14056006c ಗುರ್ವರ್ಥಮಭಿನಿರ್ವರ್ತ್ಯ ಪುನರೇಷ್ಯಾಮಿ ತೇ ವಶಮ್||

ಉತ್ತಂಕನು ಹೇಳಿದನು: “ಮಹಾರಾಜ! ಹಾಗಿದ್ದರೆ ನಾವಿಬ್ಬರೂ ಒಂದು ಒಪ್ಪಂದವನ್ನು ಮಾಡಿಕೊಳ್ಳೋಣ! ಗುರುದಕ್ಷಿಣೆಯನ್ನು ಕೊಟ್ಟು ಪುನಃ ನಿನ್ನ ವಶದಲ್ಲಿ ಬರುತ್ತೇನೆ.

14056007a ಸಂಶ್ರುತಶ್ಚ ಮಯಾ ಯೋಽರ್ಥೋ ಗುರವೇ ರಾಜಸತ್ತಮ|

14056007c ತ್ವದಧೀನಃ ಸ ರಾಜೇಂದ್ರ ತಂ ತ್ವಾ ಭಿಕ್ಷೇ ನರೇಶ್ವರ||

ರಾಜಸತ್ತಮ! ನರೇಶ್ವರ! ಗುರುದಕ್ಷಿಣೆಯಾಗಿ ಏನನ್ನು ತರುವೆನೆಂದು ಹೇಳಿಕೊಂಡಿದ್ದೆನೋ ಅದು ನಿನ್ನ ಅಧೀನದಲ್ಲಿಯೇ ಇದೆ. ರಾಜೇಂದ್ರ! ಅದನ್ನು ನನಗೆ ಭಿಕ್ಷೆಯಾಗಿ ನೀಡು!

14056008a ದದಾಸಿ ವಿಪ್ರಮುಖ್ಯೇಭ್ಯಸ್ತ್ವಂ ಹಿ ರತ್ನಾನಿ ಸರ್ವಶಃ|

14056008c ದಾತಾ ತ್ವಂ ಚ ನರವ್ಯಾಘ್ರ ಪಾತ್ರಭೂತಃ ಕ್ಷಿತಾವಿಹ|

14056008e ಪಾತ್ರಂ ಪ್ರತಿಗ್ರಹೇ ಚಾಪಿ ವಿದ್ಧಿ ಮಾಂ ನೃಪಸತ್ತಮ||

ನೀನು ವಿಪ್ರಮುಖ್ಯರಿಗೆ ಎಲ್ಲ ರತ್ನಗಳನ್ನೂ ದಾನಮಾಡಿರುವೆ! ನರವ್ಯಾಘ್ರ! ನೀನೊಬ್ಬ ದಾನಿಯೆಂದು ಭೂಮಿಯಲ್ಲಿ ಖ್ಯಾತನಾಗಿರುವೆ. ನೃಪಸತ್ತಮ! ನಾನೂ ಕೂಡ ದಾನಕ್ಕೆ ಪಾತ್ರನೆಂದು ತಿಳಿದುಕೋ!

14056009a ಉಪಾಕೃತ್ಯ ಗುರೋರರ್ಥಂ ತ್ವದಾಯತ್ತಮರಿಂದಮ|

14056009c ಸಮಯೇನೇಹ ರಾಜೇಂದ್ರ ಪುನರೇಷ್ಯಾಮಿ ತೇ ವಶಮ್||

ಅರಿಂದಮ! ರಾಜೇಂದ್ರ! ನಿನ್ನಲ್ಲಿರುವ ಗುರುದಕ್ಷಿಣೆಯನ್ನು ಕೊಟ್ಟು ಒಪ್ಪಂದದಂತೆ ಪುನಃ ನಿನ್ನ ವಶದಲ್ಲಿ ಬರುತ್ತೇನೆ!

14056010a ಸತ್ಯಂ ತೇ ಪ್ರತಿಜಾನಾಮಿ ನಾತ್ರ ಮಿಥ್ಯಾಸ್ತಿ ಕಿಂ ಚನ|

14056010c ಅನೃತಂ ನೋಕ್ತಪೂರ್ವಂ ಮೇ ಸ್ವೈರೇಷ್ವಪಿ ಕುತೋಽನ್ಯಥಾ||

ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಇದರಲ್ಲಿ ಸ್ವಲ್ಪವೂ ಸುಳ್ಳಿಲ್ಲ. ವಿನೋದಕ್ಕಾಗಿಯೂ ನಾನು ಈ ಹಿಂದೆ ಸುಳ್ಳನ್ನು ಹೇಳಿಲ್ಲ. ಈಗ ಹೇಗೆ ಅನ್ಯಥಾ ನಡೆದುಕೊಳ್ಳುತ್ತೇನೆ?”

14056011 ಸೌದಾಸ ಉವಾಚ

14056011a ಯದಿ ಮತ್ತಸ್ತ್ವದಾಯತ್ತೋ ಗುರ್ವರ್ಥಃ ಕೃತ ಏವ ಸಃ|

14056011c ಯದಿ ಚಾಸ್ಮಿ ಪ್ರತಿಗ್ರಾಹ್ಯಃ ಸಾಂಪ್ರತಂ ತದ್ಬ್ರವೀಹಿ ಮೇ||

ಸೌದಾಸನು ಹೇಳಿದನು: “ಗುರುದಕ್ಷಿಣೆಗಾಗಿ ಬೇಕಾಗಿದ್ದುದು ನನ್ನ ಸ್ವತ್ತೇ ಆಗಿದ್ದರೆ ಅದು ನಿನಗೆ ದೊರಕಿದಂತೆಯೇ ಎಂದು ತಿಳಿ. ಆದರೆ ಈಗ ನಾನು ದಾನನೀಡಲು ಅರ್ಹನಾಗಿದ್ದೇನೆಯೇ ಎನ್ನುವುದನ್ನು ಮೊದಲು ಹೇಳು!”

14056012 ಉತ್ತಂಕ ಉವಾಚ

14056012a ಪ್ರತಿಗ್ರಾಹ್ಯೋ ಮತೋ ಮೇ ತ್ವಂ ಸದೈವ ಪುರುಷರ್ಷಭ|

14056012c ಸೋಽಹಂ ತ್ವಾಮನುಸಂಪ್ರಾಪ್ತೋ ಭಿಕ್ಷಿತುಂ ಮಣಿಕುಂಡಲೇ||

ಉತ್ತಂಕನು ಹೇಳಿದನು: “ಪುರುಷರ್ಷಭ! ನೀನು ಸದೈವ ದಾನಿಯೆಂದು ಎನಿಸಿಕೊಳ್ಳಲು ಯೋಗ್ಯನಾಗಿದ್ದೀಯೆ ಎಂದು ನನಗನ್ನಿಸುತ್ತದೆ. ಅದಕ್ಕಾಗಿಯೇ ನಾನು ಆ ಮಣಿಕುಂಡಲಗಳನ್ನು ಯಾಚಿಸಲು ನಿನ್ನ ಬಳಿ ಬಂದಿದ್ದೇನೆ.”

14056013 ಸೌದಾಸ ಉವಾಚ

14056013a ಪತ್ನ್ಯಾಸ್ತೇ ಮಮ ವಿಪ್ರರ್ಷೇ ರುಚಿರೇ ಮಣಿಕುಂಡಲೇ|

14056013c ವರಯಾರ್ಥಂ ತ್ವಮನ್ಯಂ ವೈ ತಂ ತೇ ದಾಸ್ಯಾಮಿ ಸುವ್ರತ||

ಸೌದಾಸನು ಹೇಳಿದನು: “ವಿಪ್ರರ್ಷೇ! ಸುವ್ರತ! ಆ ಮಣಿಕುಂಡಲಗಳು ನನ್ನ ಪತ್ನಿಯಲ್ಲಿಯೇ ಸುಂದರವಾಗಿ ಕಾಣುತ್ತಿವೆ. ನೀನು ವರವಾಗಿ ಬೇರೆ ಏನನ್ನಾದರೂ ಕೇಳು. ಕೊಡುತ್ತೇನೆ!”

14056014 ಉತ್ತಂಕ ಉವಾಚ

14056014a ಅಲಂ ತೇ ವ್ಯಪದೇಶೇನ ಪ್ರಮಾಣಂ ಯದಿ ತೇ ವಯಮ್|

14056014c ಪ್ರಯಚ್ಚ ಕುಂಡಲೇ ಮೇ ತ್ವಂ ಸತ್ಯವಾಗ್ಭವ ಪಾರ್ಥಿವ||

ಉತ್ತಂಕನು ಹೇಳಿದನು: “ಪಾರ್ಥಿವ! ನೆಪಗಳನ್ನು ಸಾಕುಮಾಡು! ನನ್ನ ಮೇಲೆ ನಿನಗೆ ನಂಬಿಕೆಯಿದ್ದರೆ ನಾನು ಕೇಳುವ ಕುಂಡಲಗಳನ್ನು ನನಗಿತ್ತು ಸತ್ಯವಾದಿಯಾಗು!””

14056015 ವೈಶಂಪಾಯನ ಉವಾಚ

14056015a ಇತ್ಯುಕ್ತಸ್ತ್ವಬ್ರವೀದ್ರಾಜಾ ತಮುತ್ತಂಕಂ ಪುನರ್ವಚಃ|

14056015c ಗಚ್ಚ ಮದ್ವಚನಾದ್ದೇವೀಂ ಬ್ರೂಹಿ ದೇಹೀತಿ ಸತ್ತಮ||

ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ರಾಜನು ಪುನಃ ಉತ್ತಂಕನಿಗೆ ಹೇಳಿದನು: “ಸತ್ತಮ! ಹೋಗು! ನನ್ನ ವಚನದಂತೆ ಹೋಗಿ ದೇವಿಗೆ ಕೊಡು ಎಂದು ಹೇಳು.

14056016a ಸೈವಮುಕ್ತಾ ತ್ವಯಾ ನೂನಂ ಮದ್ವಾಕ್ಯೇನ ಶುಚಿಸ್ಮಿತಾ|

14056016c ಪ್ರದಾಸ್ಯತಿ ದ್ವಿಜಶ್ರೇಷ್ಠ ಕುಂಡಲೇ ತೇ ನ ಸಂಶಯಃ||

ದ್ವಿಜಶ್ರೇಷ್ಠ! ನೀನು ಹಾಗೆ ಹೇಳಿದರೆ ನನ್ನ ಮಾತಿನಂತೆ ಆ ಶುಚಿಸ್ಮಿತೆಯು ನಿನಗೆ ಕುಂಡಲಗಳನ್ನು ಕೊಡುವಳು. ಅದರಲ್ಲಿ ಸಂಶಯವಿಲ್ಲ!”

14056017 ಉತ್ತಂಕ ಉವಾಚ

14056017a ಕ್ವ ಪತ್ನೀ ಭವತಃ ಶಕ್ಯಾ ಮಯಾ ದ್ರಷ್ಟುಂ ನರೇಶ್ವರ|

14056017c ಸ್ವಯಂ ವಾಪಿ ಭವಾನ್ಪತ್ನೀಂ ಕಿಮರ್ಥಂ ನೋಪಸರ್ಪತಿ||

ಉತ್ತಂಕನು ಹೇಳಿದನು: “ನರೇಶ್ವರ! ನಿನ್ನ ಪತ್ನಿಯನ್ನು ನಾನು ಎಲ್ಲಿ ನೋಡಲು ಸಾಧ್ಯ? ಸ್ವಯಂ ನೀನೇ ನಿನ್ನ ಪತ್ನಿಯ ಬಳಿ ಏಕೆ ಹೋಗುವುದಿಲ್ಲ?”

14056018 ಸೌದಾಸ ಉವಾಚ

14056018a ದ್ರಕ್ಷ್ಯತೇ ತಾಂ ಭವಾನದ್ಯ ಕಸ್ಮಿಂಶ್ಚಿದ್ವನನಿರ್ಝರೇ|

14056018c ಷಷ್ಠೇ ಕಾಲೇ ನ ಹಿ ಮಯಾ ಸಾ ಶಕ್ಯಾ ದ್ರಷ್ಟುಮದ್ಯ ವೈ||

ಸೌದಾಸನು ಹೇಳಿದನು: “ನೀನು ಇಂದು ಅವಳನ್ನು ವನದಲ್ಲಿ ಒಂದು ಚಿಲುಮೆಯ ಬಳಿ ನೋಡಬಲ್ಲೆ. ದಿನದ ಆರನೆಯ ಘಳಿಗೆಯಾದುದರಿಂದ ಈಗ ನಾನು ಅವಳನ್ನು ನೋಡಲು ಶಕ್ಯವಿಲ್ಲ.”

14056019a ಉತ್ತಂಕಸ್ತು ತಥೋಕ್ತಃ ಸ ಜಗಾಮ ಭರತರ್ಷಭ|

14056019c ಮದಯಂತೀಂ ಚ ದೃಷ್ಟ್ವಾ ಸೋಽಜ್ಞಾಪಯತ್ಸ್ವಂ ಪ್ರಯೋಜನಮ್||

ಭರತರ್ಷಭ! ಉತ್ತಂಕನಾದರೋ ಹಾಗೆಯೇ ಆಗಲೆಂದು ಹೇಳಿ ಹೋದನು. ಮದಯಂತಿಯನ್ನು ನೋಡಿ ಅವಳಿಗೆ ತನ್ನ ಆಗಮನದ ಕಾರಣವನ್ನು ತಿಳಿಸಿದನು.

14056020a ಸೌದಾಸವಚನಂ ಶ್ರುತ್ವಾ ತತಃ ಸಾ ಪೃಥುಲೋಚನಾ|

14056020c ಪ್ರತ್ಯುವಾಚ ಮಹಾಬುದ್ಧಿಮುತ್ತಂಕಂ ಜನಮೇಜಯ||

ಜನಮೇಜಯ! ಸೌದಾಸನ ವಚನವನ್ನು ಕೇಳಿ ಆ ಪೃಥುಲೋಚನೆಯು ಮಹಾಬುದ್ಧಿ ಉತ್ತಂಕನಿಗೆ ಉತ್ತರಿಸಿದಳು:

14056021a ಏವಮೇತನ್ಮಹಾಬ್ರಹ್ಮನ್ನಾನೃತಂ ವದಸೇಽನಘ|

14056021c ಅಭಿಜ್ಞಾನಂ ತು ಕಿಂ ಚಿತ್ತ್ವಂ ಸಮಾನೇತುಮಿಹಾರ್ಹಸಿ||

“ಮಹಾಬ್ರಹ್ಮನ್! ನೀನು ಹೇಳಿದಂತೆಯೇ ಆಗಲಿ! ಅನಘ! ನೀನು ಸುಳ್ಳನ್ನಾಡುತ್ತಿಲ್ಲ. ಆದರೂ ಅವನಿಂದ ಏನಾದರೂ ಒಂದು ಗುರುತನ್ನು ತರಬೇಕು!

14056022a ಇಮೇ ಹಿ ದಿವ್ಯೇ ಮಣಿಕುಂಡಲೇ ಮೇ

ದೇವಾಶ್ಚ ಯಕ್ಷಾಶ್ಚ ಮಹೋರಗಾಶ್ಚ|

14056022c ತೈಸ್ತೈರುಪಾಯೈಃ ಪರಿಹರ್ತುಕಾಮಾಶ್

ಚಿದ್ರೇಷು ನಿತ್ಯಂ ಪರಿತರ್ಕಯಂತಿ||

ಈ ನನ್ನ ದಿವ್ಯ ಮಣಿಕುಂಡಲಗಳನ್ನು ಅಪಹರಿಸಲು ಬಯಸಿ ದೇವತೆಗಳು, ಯಕ್ಷರು, ಮತ್ತು ಮಹಾ ಉರಗರು ಪ್ರಯತ್ನಿಸುತ್ತಲೇ ಇರುತ್ತಾರೆ. ನಿತ್ಯವೂ ನನ್ನಲ್ಲಿ ದೋಷವನ್ನು ಕಂಡುಹಿಡಿಯುವುದರಲ್ಲಿ ನಿರತರಾಗಿರುತ್ತಾರೆ.

14056023a ನಿಕ್ಷಿಪ್ತಮೇತದ್ಭುವಿ ಪನ್ನಗಾಸ್ತು

ರತ್ನಂ ಸಮಾಸಾದ್ಯ ಪರಾಮೃಷೇಯುಃ|

14056023c ಯಕ್ಷಾಸ್ತಥೋಚ್ಚಿಷ್ಟಧೃತಂ ಸುರಾಶ್ಚ

ನಿದ್ರಾವಶಂ ತ್ವಾ ಪರಿಧರ್ಷಯೇಯುಃ||

ಈ ರತ್ನವನ್ನು ಭೂಮಿಯ ಮೇಲೆ ಇಟ್ಟುಬಿಟ್ಟರೆ ಪನ್ನಗಗಳು ಇವನ್ನು ಅಪಹರಿಸಿಬಿಡುತ್ತವೆ. ಅಶುಚಿಯಾಗಿ ಇವುಗಳನ್ನು ಧರಿಸಿದರೆ ಅಥವಾ ಇವನ್ನು ಧರಿಸಿ ನಿದ್ರೆಮಾಡಿದರೆ ದೇವತೆಗಳೂ ಯಕ್ಷರೂ ಬಲಾತ್ಕಾರವಾಗಿ ಇವನ್ನು ಎತ್ತಿಕೊಂಡು ಹೋಗುತ್ತಾರೆ.

14056024a ಚಿದ್ರೇಷ್ವೇತೇಷು ಹಿ ಸದಾ ಹ್ಯಧೃಷ್ಯೇಷು ದ್ವಿಜರ್ಷಭ|

14056024c ದೇವರಾಕ್ಷಸನಾಗಾನಾಮಪ್ರಮತ್ತೇನ ಧಾರ್ಯತೇ||

ದ್ವಿಜರ್ಷಭ! ಈ ದೋಷಗಳಾದರೆ ಇವುಗಳನ್ನು ಸದಾ ದೇವ-ರಾಕ್ಷಸ-ನಾಗರು ಅಪಹರಿಸಿಕೊಂಡು ಹೋಗುತ್ತಾರೆ. ಆದುದರಿಂದ ಇದನ್ನು ಜಾಗರೂಕತೆಯಿಂದ ಧರಿಸಿಕೊಂಡಿರಬೇಕಾಗುತ್ತದೆ.

14056025a ಸ್ಯಂದೇತೇ ಹಿ ದಿವಾ ರುಕ್ಮಂ ರಾತ್ರೌ ಚ ದ್ವಿಜಸತ್ತಮ|

14056025c ನಕ್ತಂ ನಕ್ಷತ್ರತಾರಾಣಾಂ ಪ್ರಭಾಮಾಕ್ಷಿಪ್ಯ ವರ್ತತೇ||

ದ್ವಿಜಸತ್ತಮ! ಇವು ಹಗಲು-ರಾತ್ರಿ ಚಿನ್ನವನ್ನು ಸುರಿಸುತ್ತವೆ. ರಾತ್ರಿ ಇವು ನಕ್ಷತ್ರ-ತಾರೆಗಳ ಪ್ರಭೆಯನ್ನೂ ಮುಸುಕುಗೊಳಿಸುತ್ತವೆ.

14056026a ಏತೇ ಹ್ಯಾಮುಚ್ಯ ಭಗವನ್ ಕ್ಷುತ್ಪಿಪಾಸಾಭಯಂ ಕುತಃ|

14056026c ವಿಷಾಗ್ನಿಶ್ವಾಪದೇಭ್ಯಶ್ಚ ಭಯಂ ಜಾತು ನ ವಿದ್ಯತೇ||

ಭಗವನ್! ಇವುಗಳನ್ನು ಧರಿಸಿದವರಿಗೆ ಹಸಿವು-ಬಾಯಾರಿಕೆಗಳು ಎಲ್ಲಿಂದ? ಇದನ್ನು ಧರಿಸಿದವರಿಗೆ ವಿಷ-ಅಗ್ನಿ-ಕ್ರೂರ ಮೃಗಗಳಿಂದ ಭಯವೇ ಇರುವುದಿಲ್ಲ.

14056027a ಹ್ರಸ್ವೇನ ಚೈತೇ ಆಮುಕ್ತೇ ಭವತೋ ಹ್ರಸ್ವಕೇ ತದಾ|

14056027c ಅನುರೂಪೇಣ ಚಾಮುಕ್ತೇ ತತ್ಪ್ರಮಾಣೇ ಹಿ ಜಾಯತಃ||

ಸಣ್ಣ ದೇಹದವರು ಇದನ್ನು ಧರಿಸಿದರೆ ಇದು ಸಣ್ಣದಾಗುತ್ತದೆ. ದೇಹದ ಗಾತ್ರಕ್ಕೆ ಅನುಗುಣವಾಗಿ ಈ ಕುಂಡಲಗಳು ಹಿಗ್ಗುತ್ತವೆ ಅಥವಾ ಕುಗ್ಗುತ್ತವೆ.

14056028a ಏವಂವಿಧೇ ಮಮೈತೇ ವೈ ಕುಂಡಲೇ ಪರಮಾರ್ಚಿತೇ|

14056028c ತ್ರಿಷು ಲೋಕೇಷು ವಿಖ್ಯಾತೇ ತದಭಿಜ್ಞಾನಮಾನಯ||

ಮೂರು ಲೋಕಗಳಲ್ಲಿಯೂ ವಿಖ್ಯಾತವಾಗಿರುವ ಮತ್ತು ನನ್ನಿಂದ ಪರಮ ಪೂಜೆಗೊಂಡಿರುವ ಈ ಕುಂಡಲಗಳು ಈ ರೀತಿ ಇವೆ. ಈಗ ನೀನು ಸೌದಾಸನಿಂದ ಏನಾದರೂ ಗುರುತನ್ನು ತೆಗೆದುಕೊಂಡು ಬಾ!””

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತಂಕೋಪಾಖ್ಯಾನೇ ಷಟ್ಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತಂಕೋಪಾಖ್ಯಾನ ಎನ್ನುವ ಐವತ್ತಾರನೇ ಅಧ್ಯಾಯವು.

Comments are closed.