Ashvamedhika Parva: Chapter 3

ಅಶ್ವಮೇಧಿಕ ಪರ್ವ

ಪಾಪಗಳನ್ನು ತೊಳೆದುಕೊಳ್ಳಲು ಅಶ್ವಮೇಧ ಯಜ್ಞವನ್ನು ಮಾಡುವಂತೆ ವ್ಯಾಸನು ಯುಧಿಷ್ಠಿರನಿಗೆ ಸೂಚಿಸಿದುದು (೧-೧೦).  ಯುದ್ಧದ ಕಾರಣದಿಂದಾಗಿ ತನ್ನ ಕೋಶವು ಬರಿದಾಗಿರುವಾಗ ಅಶ್ವಮೇಧವನ್ನು ಹೇಗೆ ಮಾಡಬಹುದೆಂದು ಯುಧಿಷ್ಠಿರನು ವ್ಯಾಸನಲ್ಲಿ ಕೇಳಿದುದು (೧೧-೧೮).  ಆಗ ವ್ಯಾಸನು ರಾಜಾ ಮರುತ್ತನ ಯಜ್ಞದಲ್ಲಿ ಬ್ರಾಹ್ಮಣರು ಬಿಟ್ಟುಹೋಗಿದ್ದ ದಕ್ಷಿಣಾರೂಪದ ಧನ-ಕನಕಗಳು ಹಿಮಾಲಯದಲ್ಲಿರುವುದನ್ನು ತಿಳಿಸಿ, ಮರುತ್ತನ ಯಜ್ಞದ ಕುರಿತಾದ ಯುಧಿಷ್ಠಿರನ ಪ್ರಶ್ನೆಗೆ ಉತ್ತರಿಸಲು ಪ್ರಾರಂಭಿಸಿದುದು (೧೯-೨೨).

14003001 ವ್ಯಾಸ ಉವಾಚ

14003001a ಯುಧಿಷ್ಠಿರ ತವ ಪ್ರಜ್ಞಾ ನ ಸಮ್ಯಗಿತಿ ಮೇ ಮತಿಃ|

14003001c ನ ಹಿ ಕಶ್ಚಿತ್ಸ್ವಯಂ ಮರ್ತ್ಯಃ ಸ್ವವಶಃ ಕುರುತೇ ಕ್ರಿಯಾಃ||

ವ್ಯಾಸನು ಹೇಳಿದನು: “ಯುಧಿಷ್ಠಿರ! ನಿನ್ನ ಪ್ರಜ್ಞೆಯು ಸರಿಯಿಲ್ಲವೆಂದು ನನಗನ್ನಿಸುತ್ತದೆ. ಮನುಷ್ಯನು ಯಾವಾಗಲೂ ತನ್ನ ವಶದಲ್ಲಿಯೇ ಇದ್ದುಕೊಂಡು ಕ್ರಿಯೆಗಳನ್ನು ಮಾಡುವುದಿಲ್ಲ.

14003002a ಈಶ್ವರೇಣ ನಿಯುಕ್ತೋಽಯಂ ಸಾಧ್ವಸಾಧು ಚ ಮಾನವಃ|

14003002c ಕರೋತಿ ಪುರುಷಃ ಕರ್ಮ ತತ್ರ ಕಾ ಪರಿದೇವನಾ||

ಮಾನವನಿಗೆ ಒಳ್ಳೆಯದು-ಕೆಟ್ಟದ್ದು ಎಲ್ಲವೂ ಈಶ್ವರನಿಂದ ನಿಯುಕ್ತವಾಗಿರುತ್ತವೆ. ಮನುಷ್ಯನು ಕೇವಲ ಕರ್ಮವನ್ನು ಮಾಡುತ್ತಿರುತ್ತಾನೆ. ಅದರಲ್ಲಿ ಏಕೆ ಶೋಕಿಸಬೇಕು?

14003003a ಆತ್ಮಾನಂ ಮನ್ಯಸೇ ಚಾಥ ಪಾಪಕರ್ಮಾಣಮಂತತಃ|

14003003c ಶೃಣು ತತ್ರ ಯಥಾ ಪಾಪಮಪಕೃಷ್ಯೇತ ಭಾರತ||

ಭಾರತ! ಕೊನೆಗೂ ನೀನು ಪಾಪಕರ್ಮವನ್ನೇ ಮಾಡಿದ್ದೀಯೆಂದು ತಿಳಿದುಕೊಂಡರೆ ಆ ಪಾಪವನ್ನು ಹೇಗೆ ತೊಳೆದುಕೊಳ್ಳಬೇಕು ಎನ್ನುವುದನ್ನು ಕೇಳು.

14003004a ತಪೋಭಿಃ ಕ್ರತುಭಿಶ್ಚೈವ ದಾನೇನ ಚ ಯುಧಿಷ್ಠಿರ|

14003004c ತರಂತಿ ನಿತ್ಯಂ ಪುರುಷಾ ಯೇ ಸ್ಮ ಪಾಪಾನಿ ಕುರ್ವತೇ||

ಯುಧಿಷ್ಠಿರ! ತಪಸ್ಸು, ಕ್ರತು ಮತ್ತು ದಾನಗಳು ಪಾಪಮಾಡಿದ ಪುರುಷನನ್ನು ನಿತ್ಯವೂ ಪಾರುಮಾಡುತ್ತವೆ.

14003005a ಯಜ್ಞೇನ ತಪಸಾ ಚೈವ ದಾನೇನ ಚ ನರಾಧಿಪ|

14003005c ಪೂಯಂತೇ ರಾಜಶಾರ್ದೂಲ ನರಾ ದುಷ್ಕೃತಕರ್ಮಿಣಃ||

ನರಾಧಿಪ! ರಾಜಶಾರ್ದೂಲ! ಯಜ್ಞ, ತಪಸ್ಸು ಮತ್ತು ದಾನಗಳು ದುಷ್ಕೃತಗಳನ್ನು ಮಾಡಿದ ಮನುಷ್ಯರನ್ನು ಪಾವನಗೊಳಿಸುತ್ತವೆ. 

14003006a ಅಸುರಾಶ್ಚ ಸುರಾಶ್ಚೈವ ಪುಣ್ಯಹೇತೋರ್ಮಖಕ್ರಿಯಾಮ್|

14003006c ಪ್ರಯತಂತೇ ಮಹಾತ್ಮಾನಸ್ತಸ್ಮಾದ್ಯಜ್ಞಾಃ ಪರಾಯಣಮ್||

ಪುಣ್ಯಸಂಪಾದನೆಗಾಗಿ ಅಸುರರೂ ಸುರರೂ ಯಜ್ಞಕಾರ್ಯಗಳನ್ನು ಮಾಡುತ್ತಾರೆ. ಆದುದರಿಂದ ಮಹಾತ್ಮರು ಯಜ್ಞಗಳಲ್ಲಿಯೇ ತೊಡಗಿರುತ್ತಾರೆ.

14003007a ಯಜ್ಞೈರೇವ ಮಹಾತ್ಮಾನೋ ಬಭೂವುರಧಿಕಾಃ ಸುರಾಃ|

14003007c ತತೋ ದೇವಾಃ ಕ್ರಿಯಾವಂತೋ ದಾನವಾನಭ್ಯಧರ್ಷಯನ್||

ಯಜ್ಞದಿಂದಲೇ ಮಹಾತ್ಮ ದೇವ ಸುರರು ಅಧಿಕ ಬಲಶಾಲಿಗಳೂ ಕ್ರಿಯಾವಂತರೂ ಆಗಿ ದಾನವರನ್ನು ಸದೆಬಡಿದರು.

14003008a ರಾಜಸೂಯಾಶ್ವಮೇಧೌ ಚ ಸರ್ವಮೇಧಂ ಚ ಭಾರತ|

14003008c ನರಮೇಧಂ ಚ ನೃಪತೇ ತ್ವಮಾಹರ ಯುಧಿಷ್ಠಿರ||

ಭಾರತ! ಯುಧಿಷ್ಠಿರ! ನೃಪತೇ! ನೀನೂ ಕೂಡ ರಾಜಸೂಯ, ಅಶ್ವಮೇಧ, ಸರ್ವಮೇಧ ಮತ್ತು ನರಮೇಧ ಯಜ್ಞಗಳನ್ನು ಮಾಡು.

14003009a ಯಜಸ್ವ ವಾಜಿಮೇಧೇನ ವಿಧಿವದ್ದಕ್ಷಿಣಾವತಾ|

14003009c ಬಹುಕಾಮಾನ್ನವಿತ್ತೇನ ರಾಮೋ ದಾಶರಥಿರ್ಯಥಾ||

14003010a ಯಥಾ ಚ ಭರತೋ ರಾಜಾ ದೌಃಷಂತಿಃ ಪೃಥಿವೀಪತಿಃ|

14003010c ಶಾಕುಂತಲೋ ಮಹಾವೀರ್ಯಸ್ತವ ಪೂರ್ವಪಿತಾಮಹಃ||

ದಾಶರಥಿ ರಾಮನಂತೆ ಮತ್ತು ನಿನ್ನ ಪೂರ್ವಪಿತಾಮಹ ದುಃಶಂತ-ಶಕುಂತಲೆಯರ ಮಗ ಪೃಥಿವೀಪತಿ ರಾಜ ಮಹಾವೀರ್ಯ ಭರತನಂತೆ ವಿಧಿವತ್ತಾಗಿ ಮನೋವಾಂಛಿತ ಸಂಪತ್ತು-ದಕ್ಷಿಣೆಗಳೊಂದಿಗೆ ಅಶ್ವಮೇಧವನ್ನು ಯಾಜಿಸು.”

14003011 ಯುಧಿಷ್ಠಿರ ಉವಾಚ

14003011a ಅಸಂಶಯಂ ವಾಜಿಮೇಧಃ ಪಾವಯೇತ್ಪೃಥಿವೀಮಪಿ|

14003011c ಅಭಿಪ್ರಾಯಸ್ತು ಮೇ ಕಶ್ಚಿತ್ತಂ ತ್ವಂ ಶ್ರೋತುಮಿಹಾರ್ಹಸಿ||

ಯುಧಿಷ್ಠಿರನು ಹೇಳಿದನು: “ಅಶ್ವಮೇಧವು ಇಡೀ ಭೂಮಿಯನ್ನೇ ಪಾವನಗೊಳಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರ ಕುರಿತು ನನ್ನ ಒಂದು ಅಭಿಪ್ರಾಯವಿದೆ. ಅದನ್ನು ನೀನು ಕೇಳಬೇಕು.

14003012a ಇಮಂ ಜ್ಞಾತಿವಧಂ ಕೃತ್ವಾ ಸುಮಹಾಂತಂ ದ್ವಿಜೋತ್ತಮ|

14003012c ದಾನಮಲ್ಪಂ ನ ಶಕ್ಯಾಮಿ ದಾತುಂ ವಿತ್ತಂ ಚ ನಾಸ್ತಿ ಮೇ||

ದ್ವಿಜೋತ್ತಮ! ಈ ಮಹಾ ಜ್ಞಾತಿವಧೆಯನ್ನು ಮಾಡಿ ನನ್ನಲ್ಲಿ ವಿತ್ತವೇ ಇಲ್ಲವಾಗಿದೆ. ಸ್ವಲ್ಪವೂ ಕೂಡ ದಾನ ಮಾಡಲು ಶಕ್ಯನಿಲ್ಲ.

14003013a ನ ಚ ಬಾಲಾನಿಮಾನ್ದೀನಾನುತ್ಸಹೇ ವಸು ಯಾಚಿತುಮ್|

14003013c ತಥೈವಾರ್ದ್ರವ್ರಣಾನ್ ಕೃಚ್ಚ್ರೇ ವರ್ತಮಾನಾನ್ನೃಪಾತ್ಮಜಾನ್||

ಯುದ್ಧದ ಹುಣ್ಣುಗಳು ಇನ್ನೂ ಮಾಸದೇ ಕಷ್ಟದಲ್ಲಿರುವ ದೀನ ಬಾಲಕ ರಾಜಕುಮಾರರಿಂದ ಧನವನ್ನು ಯಾಚಿಸಲೂ ನನಗೆ ಮನಸ್ಸಿಲ್ಲ.

14003014a ಸ್ವಯಂ ವಿನಾಶ್ಯ ಪೃಥಿವೀಂ ಯಜ್ಞಾರ್ಥೇ ದ್ವಿಜಸತ್ತಮ|

14003014c ಕರಮಾಹಾರಯಿಷ್ಯಾಮಿ ಕಥಂ ಶೋಕಪರಾಯಣಾನ್||

ದ್ವಿಜಸತ್ತಮ! ನಾನೇ ಈ ಭೂಮಿಯನ್ನು ವಿನಾಶಗೊಳಿಸಿ, ಶೋಕದಲ್ಲಿ ಮುಳುಗಿರುವವರಿಂದ, ಯಜ್ಞಕ್ಕಾಗಿ ಕರವನ್ನು ಹೇಗೆ ಕಸಿದುಕೊಳ್ಳಲಿ?

14003015a ದುರ್ಯೋಧನಾಪರಾಧೇನ ವಸುಧಾ ವಸುಧಾಧಿಪಾಃ|

14003015c ಪ್ರನಷ್ಟಾ ಯೋಜಯಿತ್ವಾಸ್ಮಾನಕೀರ್ತ್ಯಾ ಮುನಿಸತ್ತಮ||

ಮುನಿಸತ್ತಮ! ದುರ್ಯೋಧನನ ಅಪರಾಧದಿಂದಾಗಿ ಭೂಮಿ ಮತ್ತು ವಸುಧಾಧಿಪರು ನಾಶಗೊಂಡರು ಮತ್ತು ನಾವೂ ಅಪಕೀರ್ತಿಗೊಳಗಾದೆವು.

14003016a ದುರ್ಯೋಧನೇನ ಪೃಥಿವೀ ಕ್ಷಯಿತಾ ವಿತ್ತಕಾರಣಾತ್|

14003016c ಕೋಶಶ್ಚಾಪಿ ವಿಶೀರ್ಣೋಽಸೌ ಧಾರ್ತರಾಷ್ಟ್ರಸ್ಯ ದುರ್ಮತೇಃ||

ವಿತ್ತಕಾರಣದಿಂದ ದುರ್ಯೋಧನನು ಭೂಮಿಯನ್ನು ನಾಶಗೊಳಿಸಿದನು. ದುರ್ಮತಿ ಧಾರ್ತರಾಷ್ಟ್ರನಿಂದಾಗಿ ಈ ಕೋಶವೂ ಬರಿದಾಗಿಹೋಗಿದೆ.

14003017a ಪೃಥಿವೀ ದಕ್ಷಿಣಾ ಚಾತ್ರ ವಿಧಿಃ ಪ್ರಥಮಕಲ್ಪಿಕಃ|

14003017c ವಿದ್ವದ್ಭಿಃ ಪರಿದೃಷ್ಟೋಽಯಂ ಶಿಷ್ಟೋ ವಿಧಿವಿಪರ್ಯಯಃ||

ಅಶ್ವಮೇಧದಲ್ಲಿ ಪೃಥ್ವಿಯನ್ನೇ ಮುಖ್ಯ ದಕ್ಷಿಣೆಯನ್ನಾಗಿ ಕೊಡಬೇಕೆಂದು ವಿದ್ವಾಂಸರು ಕಲ್ಪಿಸಿದ ವಿಧಿಯಾಗಿದೆ. ಅದರಂತೆ ಮಾಡದಿದ್ದರೆ ಶಿಷ್ಟರು ಹಾಕಿಕೊಟ್ಟ ವಿಧಿಗೆ ವ್ಯತ್ಯಾಸವಾದಂತಾಗುತ್ತದೆ.

14003018a ನ ಚ ಪ್ರತಿನಿಧಿಂ ಕರ್ತುಂ ಚಿಕೀರ್ಷಾಮಿ ತಪೋಧನ|

14003018c ಅತ್ರ ಮೇ ಭಗವನ್ಸಮ್ಯಕ್ಸಾಚಿವ್ಯಂ ಕರ್ತುಮರ್ಹಸಿ||

ತಪೋಧನ! ಭೂಮಿಗೆ ಬದಲಾಗಿ ದಕ್ಷಿಣೆಗಳನ್ನು ಕೊಡಲು ಬಯಸುವುದಿಲ್ಲ. ಭಗವನ್! ಇದರ ಕುರಿತು ನಾನು ಏನು ಮಾಡಿದರೆ ಒಳ್ಳೆಯದು ಎನ್ನುವ ಸಲಹೆಯನ್ನು ನೀಡಬೇಕು.””

14003019 ವೈಶಂಪಾಯನ ಉವಾಚ

14003019a ಏವಮುಕ್ತಸ್ತು ಪಾರ್ಥೇನ ಕೃಷ್ಣದ್ವೈಪಾಯನಸ್ತದಾ|

14003019c ಮುಹೂರ್ತಮನುಸಂಚಿಂತ್ಯ ಧರ್ಮರಾಜಾನಮಬ್ರವೀತ್||

ವೈಶಂಪಾಯನನು ಹೇಳಿದನು: “ಪಾರ್ಥನು ಹೀಗೆ ಹೇಳಲು ಕೃಷ್ಣದ್ವೈಪಾಯನನು ಒಂದು ಕ್ಷಣ ಯೋಚಿಸಿ ಧರ್ಮರಾಜನಿಗೆ ಹೀಗೆ ಹೇಳಿದನು:

14003020a ವಿದ್ಯತೇ ದ್ರವಿಣಂ ಪಾರ್ಥ ಗಿರೌ ಹಿಮವತಿ ಸ್ಥಿತಮ್|

14003020c ಉತ್ಸೃಷ್ಟಂ ಬ್ರಾಹ್ಮಣೈರ್ಯಜ್ಞೇ ಮರುತ್ತಸ್ಯ ಮಹೀಪತೇಃ|

14003020e ತದಾನಯಸ್ವ ಕೌಂತೇಯ ಪರ್ಯಾಪ್ತಂ ತದ್ಭವಿಷ್ಯತಿ||

“ಪಾರ್ಥ! ಮಹೀಪತಿ ಮರುತ್ತನ ಯಜ್ಞದಲ್ಲಿ ಬ್ರಾಹ್ಮಣರು ಬಿಟ್ಟುಹೋದ ಸಂಪತ್ತು ಹಿಮವತ್ಪರ್ವತದಲ್ಲಿ ಇದೆಯೆಂದು ತಿಳಿದಿದೆ. ಕೌಂತೇಯ! ಅದನ್ನು ತೆಗೆದುಕೊಂಡು ಬಾ! ಅದು ನಿನಗೆ ಸಾಕಾಗುತ್ತದೆ.”

14003021 ಯುಧಿಷ್ಠಿರ ಉವಾಚ

14003021a ಕಥಂ ಯಜ್ಞೇ ಮರುತ್ತಸ್ಯ ದ್ರವಿಣಂ ತತ್ಸಮಾಚಿತಮ್|

14003021c ಕಸ್ಮಿಂಶ್ಚ ಕಾಲೇ ಸ ನೃಪೋ ಬಭೂವ ವದತಾಂ ವರ||

ಯುಧಿಷ್ಠಿರನು ಹೇಳಿದನು: “ಮಾತನಾಡುವವರಲ್ಲಿ ಶ್ರೇಷ್ಠನೇ! ಮರುತ್ತನ ಯಜ್ಞದಲ್ಲಿ ಹೇಗೆ ಆ ದ್ರವ್ಯಗಳನ್ನು ಸೇರಿಸಲಾಯಿತು? ಆ ನೃಪನು ಯಾವ ಕಾಲದಲ್ಲಿದ್ದನು?”

14003022 ವ್ಯಾಸ ಉವಾಚ

14003022a ಯದಿ ಶುಶ್ರೂಷಸೇ ಪಾರ್ಥ ಶೃಣು ಕಾರಂಧಮಂ ನೃಪಮ್|

14003022c ಯಸ್ಮಿನ್ಕಾಲೇ ಮಹಾವೀರ್ಯಃ ಸ ರಾಜಾಸೀನ್ಮಹಾಧನಃ||

ವ್ಯಾಸನು ಹೇಳಿದನು: “ಪಾರ್ಥ! ನಿನಗೆ ಕೇಳಬೇಕೆಂದರೆ ಕರಂಧಮನ ಮಗ ಆ ಮಹಾವೀರ್ಯ ನೃಪ ಮಹಾಧನ ರಾಜನಿದ್ದ ಕಾಲದ ಕುರಿತು ಕೇಳು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ತೃತೀಯೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ಮೂರನೇ ಅಧ್ಯಾಯವು.

Comments are closed.