Ashramavasika Parva: Chapter 8

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

ವ್ಯಾಸವಾಕ್ಯ

ವನಕ್ಕೆ ಹೋಗಲು ಧೃತರಾಷ್ಟ್ರನಿಗೆ ಅನುಮತಿಯನ್ನು ನೀಡು ಎಂದು ವ್ಯಾಸನು ಯುಧಿಷ್ಠಿರನಿಗೆ ಹೇಳಿದುದು (೧-೧೮). ಯುಧಿಷ್ಠಿರನು ಧೃತರಾಷ್ಟ್ರನಿಗೆ ವನಕ್ಕೆ ಹೋಗಲು ಅನುಮತಿಯನ್ನಿತ್ತಿದುದು (೧೯-೨೨).

15008001 ವ್ಯಾಸ ಉವಾಚ|

15008001a ಯುಧಿಷ್ಠಿರ ಮಹಾಬಾಹೋ ಯದಾಹ ಕುರುನಂದನಃ|

15008001c ಧೃತರಾಷ್ಟ್ರೋ ಮಹಾತ್ಮಾ ತ್ವಾಂ ತತ್ಕುರುಷ್ವಾವಿಚಾರಯನ್||

ವ್ಯಾಸನು ಹೇಳಿದನು: “ಮಹಾಬಾಹೋ ಯುಧಿಷ್ಠಿರ! ಕುರುನಂದನ ಮಹಾತ್ಮ ಧೃತರಾಷ್ಟ್ರನು ನಿನಗೆ ಏನು ಹೇಳಿದನೋ ಅದನ್ನು ವಿಚಾರಿಸದೇ ಮಾಡು!

15008002a ಅಯಂ ಹಿ ವೃದ್ಧೋ ನೃಪತಿರ್ಹತಪುತ್ರೋ ವಿಶೇಷತಃ|

15008002c ನೇದಂ ಕೃಚ್ಚ್ರಂ ಚಿರತರಂ ಸಹೇದಿತಿ ಮತಿರ್ಮಮ||

ಪುತ್ರರನ್ನು ಕಳೆದುಕೊಂಡ ಮತ್ತು ವಿಶೇಷವಾಗಿ ವೃದ್ಧನಾಗಿರುವ ಈ ನೃಪತಿಯು ಇನ್ನೂ ಬಹಳ ಕಾಲ ಈ ಕಷ್ಟವನ್ನು ಸಹಿಸಿಕೊಳ್ಳಲಾರ ಎಂದು ನನಗನ್ನಿಸುತ್ತದೆ.

15008003a ಗಾಂಧಾರೀ ಚ ಮಹಾಭಾಗಾ ಪ್ರಾಜ್ಞಾ ಕರುಣವೇದಿನೀ|

15008003c ಪುತ್ರಶೋಕಂ ಮಹಾರಾಜ ಧೈರ್ಯೇಣೋದ್ವಹತೇ ಭೃಶಮ್||

ಮಹಾರಾಜ! ಕಾರುಣ್ಯವನ್ನು ತಿಳಿದಿರುವ ಮಹಾಭಾಗೆ ಪ್ರಾಜ್ಞೆ ಗಾಂಧಾರಿಯೂ ಕೂಡ ಪುತ್ರಶೋಕವನ್ನು ಅತ್ಯಂತ ಧೈರ್ಯದಿಂದ ಸಹಿಸಿಕೊಂಡಿದ್ದಾಳೆ.

15008004a ಅಹಮಪ್ಯೇತದೇವ ತ್ವಾಂ ಬ್ರವೀಮಿ ಕುರು ಮೇ ವಚಃ|

15008004c ಅನುಜ್ಞಾಂ ಲಭತಾಂ ರಾಜಾ ಮಾ ವೃಥೇಹ ಮರಿಷ್ಯತಿ||

ನಾನೂ ಕೂಡ ನಿನಗೆ ಇದನ್ನೇ ಹೇಳುತ್ತಿದ್ದೇನೆ. ನನ್ನ ಮಾತಿನಂತೆ ಮಾಡು. ರಾಜನು ವೃಥಾ ಇಲ್ಲಿ ಸಾಯದಂತೆ ಅವನಿಗೆ ಅನುಜ್ಞೆಯನ್ನು ನೀಡು!

15008005a ರಾಜರ್ಷೀಣಾಂ ಪುರಾಣಾನಾಮನುಯಾತು ಗತಿಂ ನೃಪಃ|

15008005c ರಾಜರ್ಷೀಣಾಂ ಹಿ ಸರ್ವೇಷಾಮಂತೇ ವನಮುಪಾಶ್ರಯಃ||

ಹಿಂದಿನ ರಾಜರ್ಷಿಗಳ ಗತಿಯಂತೆ ಈ ನೃಪನೂ ಕೂಡ ಹೋಗಲಿ! ಎಲ್ಲ ರಾಜರ್ಷಿಗಳಿಗೂ ಅಂತ್ಯದಲ್ಲಿ ವನವೇ ಆಶ್ರಯವು!””

15008006 ವೈಶಂಪಾಯನ ಉವಾಚ|

15008006a ಇತ್ಯುಕ್ತಃ ಸ ತದಾ ರಾಜಾ ವ್ಯಾಸೇನಾದ್ಭುತಕರ್ಮಣಾ|

15008006c ಪ್ರತ್ಯುವಾಚ ಮಹಾತೇಜಾ ಧರ್ಮರಾಜೋ ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ಅದ್ಭುತಕರ್ಮಿ ವ್ಯಾಸನು ಹೀಗೆ ಹೇಳಲು ರಾಜಾ ಮಹಾತೇಜಸ್ವಿ ಧರ್ಮರಾಜ ಯುಧಿಷ್ಠಿರನು ಅದಕ್ಕೆ ಪ್ರತಿಯಾಗಿ ಇಂತೆಂದನು:

15008007a ಭಗವಾನೇವ ನೋ ಮಾನ್ಯೋ ಭಗವಾನೇವ ನೋ ಗುರುಃ|

15008007c ಭಗವಾನಸ್ಯ ರಾಜ್ಯಸ್ಯ ಕುಲಸ್ಯ ಚ ಪರಾಯಣಮ್||

“ನೀನೇ ನಮಗೆ ಮಾನ್ಯನು. ನೀನೇ ನಮ್ಮ ಗುರು. ನೀನೇ ಈ ರಾಜ್ಯದ ಮತ್ತು ಕುಲದ ಪರಾಯಣನು.

15008008a ಅಹಂ ತು ಪುತ್ರೋ ಭಗವಾನ್ಪಿತಾ ರಾಜಾ ಗುರುಶ್ಚ ಮೇ|

15008008c ನಿದೇಶವರ್ತೀ ಚ ಪಿತುಃ ಪುತ್ರೋ ಭವತಿ ಧರ್ಮತಃ||

ಭಗವಾನ್! ನಾನಾದರೋ ರಾಜನ ಮಗ. ಅವನು ನನ್ನ ಗುರು. ಧರ್ಮದ ಪ್ರಕಾರ ಪುತ್ರನು ತಂದೆಯ ನಿರ್ದೇಶನದಂತೆ ನಡೆಯಬೇಕಾಗುತ್ತದೆ.”

15008009a ಇತ್ಯುಕ್ತಃ ಸ ತು ತಂ ಪ್ರಾಹ ವ್ಯಾಸೋ ಧರ್ಮಭೃತಾಂ ವರಃ|

15008009c ಯುಧಿಷ್ಠಿರಂ ಮಹಾತೇಜಾಃ ಪುನರೇವ ವಿಶಾಂ ಪತೇ||

ವಿಶಾಂಪತೇ! ಹೀಗೆ ಹೇಳಿದ ಯುಧಿಷ್ಠಿರನಿಗೆ ಧರ್ಮಭೃತರಲ್ಲಿ ಶ್ರೇಷ್ಠ ಮಹಾತೇಜಸ್ವೀ ವ್ಯಾಸನು ಪುನಃ ಹೇಳಿದನು:

15008010a ಏವಮೇತನ್ಮಹಾಬಾಹೋ ಯಥಾ ವದಸಿ ಭಾರತ|

15008010c ರಾಜಾಯಂ ವೃದ್ಧತಾಂ ಪ್ರಾಪ್ತಃ ಪ್ರಮಾಣೇ ಪರಮೇ ಸ್ಥಿತಃ||

“ಮಹಾಬಾಹೋ! ಭಾರತ! ನೀನು ಹೇಳಿದುದು ಸರಿಯಾದುದೇ. ಆದರೆ ಈ ರಾಜನು ವೃದ್ಧಾಪ್ಯವನ್ನು ಹೊಂದಿದ್ದಾನೆ. ಅಂತಿಮಾವಸ್ಥೆಯಲ್ಲಿದ್ದಾನೆ.

15008011a ಸೋಽಯಂ ಮಯಾಭ್ಯನುಜ್ಞಾತಸ್ತ್ವಯಾ ಚ ಪೃಥಿವೀಪತೇ|

15008011c ಕರೋತು ಸ್ವಮಭಿಪ್ರಾಯಂ ಮಾಸ್ಯ ವಿಘ್ನಕರೋ ಭವ||

ಪೃಥಿವೀಪತೇ! ಇವನು ನನ್ನಿಂದ ಮತ್ತು ನಿನ್ನಿಂದ ಅನುಮತಿಯನ್ನು ಪಡೆದು ಅವನ ಇಷ್ಟದಂತೆಯೇ ಮಾಡಲಿ. ಅವನಿಗೆ ವಿಘ್ನವನ್ನುಂಟುಮಾಡಬೇಡ!

15008012a ಏಷ ಏವ ಪರೋ ಧರ್ಮೋ ರಾಜರ್ಷೀಣಾಂ ಯುಧಿಷ್ಠಿರ|

15008012c ಸಮರೇ ವಾ ಭವೇನ್ಮೃತ್ಯುರ್ವನೇ ವಾ ವಿಧಿಪೂರ್ವಕಮ್||

ಯುಧಿಷ್ಠಿರ! ಸಮರದಲ್ಲಿ ಅಥವಾ ವಿಧಿಪೂರ್ವಕವಾಗಿ ವನದಲ್ಲಿ ಮೃತ್ಯುವನ್ನು ಹೊಂದುವುದೇ ರಾಜರ್ಷಿಗಳ ಪರಮ ಧರ್ಮ.

15008013a ಪಿತ್ರಾ ತು ತವ ರಾಜೇಂದ್ರ ಪಾಂಡುನಾ ಪೃಥಿವೀಕ್ಷಿತಾ|

15008013c ಶಿಷ್ಯಭೂತೇನ ರಾಜಾಯಂ ಗುರುವತ್ಪರ್ಯುಪಾಸಿತಃ||

ರಾಜೇಂದ್ರ! ನಿನ್ನ ತಂದೆ ಪಾಂಡುವೂ ಕೂಡ ಈ ರಾಜನನ್ನು ಗುರುವಂತೆ ಶಿಷ್ಯಭಾವದಿಂದ ಸೇವೆಗೈಯುತ್ತಿದ್ದನು.

15008014a ಕ್ರತುಭಿರ್ದಕ್ಷಿಣಾವದ್ಭಿರನ್ನಪರ್ವತಶೋಭಿತೈಃ|

15008014c ಮಹದ್ಭಿರಿಷ್ಟಂ ಭೋಗಾಶ್ಚ ಭುಕ್ತಾಃ ಪುತ್ರಾಶ್ಚ ಪಾಲಿತಾಃ||

ಅನ್ನದ ರಾಶಿಗಳಿಂದ ಶೋಭಿತವಾದ ದಕ್ಷಿಣಾಯುಕ್ತ ಕ್ರತುಗಳನ್ನು ಮಾಡಿ, ಇಷ್ಟವಾದ ಮಹಾಭೋಗಗಳನ್ನು ಭೋಗಿಸಿ ಪುತ್ರರನ್ನು ಪಾಲಿಸಿದನು.

15008015a ಪುತ್ರಸಂಸ್ಥಂ ಚ ವಿಪುಲಂ ರಾಜ್ಯಂ ವಿಪ್ರೋಷಿತೇ ತ್ವಯಿ|

15008015c ತ್ರಯೋದಶಸಮಾ ಭುಕ್ತಂ ದತ್ತಂ ಚ ವಿವಿಧಂ ವಸು||

ನೀನು ವನವಾಸಕ್ಕೆ ತೆರಳಿದ್ದಾಗ ಹದಿಮೂರು ವರ್ಷಗಳು ಇವನು ತನ್ನ ಮಗನಲ್ಲಿದ್ದ ವಿಪುಲ ರಾಜ್ಯವನ್ನು ಭೋಗಿಸಿದನು ಮತ್ತು ವಿವಿಧ ಸಂಪತ್ತುಗಳನ್ನು ದಾನವನ್ನಾಗಿತ್ತನು.

15008016a ತ್ವಯಾ ಚಾಯಂ ನರವ್ಯಾಘ್ರ ಗುರುಶುಶ್ರೂಷಯಾ ನೃಪಃ|

15008016c ಆರಾಧಿತಃ ಸಭೃತ್ಯೇನ ಗಾಂಧಾರೀ ಚ ಯಶಸ್ವಿನೀ||

ನೃಪ! ನರವ್ಯಾಘ್ರ! ನಿನ್ನ ಗುರುಶುಶ್ರೂಷೆಯಿಂದ ಮತ್ತು ತನ್ನ ಸೇವಕರಿಂದ ಇವನು ಮತ್ತು ಯಶಸ್ವಿನೀ ಗಾಂಧಾರಿಯರು ಅರಾಧಿತರಾಗಿದ್ದಾರೆ.

15008017a ಅನುಜಾನೀಹಿ ಪಿತರಂ ಸಮಯೋಽಸ್ಯ ತಪೋವಿಧೌ|

15008017c ನ ಮನ್ಯುರ್ವಿದ್ಯತೇ ಚಾಸ್ಯ ಸುಸೂಕ್ಷ್ಮೋಽಪಿ ಯುಧಿಷ್ಠಿರ||

ಯುಧಿಷ್ಠಿರ! ಇದು ಇವನ ತಪಸ್ಸಿಗೆ ಸರಿಯಾದ ಕಾಲವಾಗಿದೆ. ನಿನ್ನ ತಂದೆಗೆ ಅನುಮತಿಯನ್ನು ನೀಡು. ಇವನಿಗೆ ನಿನ್ನಮೇಲೆ ಸ್ವಲ್ಪವೂ ಕೋಪವಿಲ್ಲ.”

15008018a ಏತಾವದುಕ್ತ್ವಾ ವಚನಮನುಜ್ಞಾಪ್ಯ ಚ ಪಾರ್ಥಿವಮ್|

15008018c ತಥಾಸ್ತ್ವಿತಿ ಚ ತೇನೋಕ್ತಃ ಕೌಂತೇಯೇನ ಯಯೌ ವನಮ್||

ಹೀಗೆ ಹೇಳಿ ಪಾರ್ಥಿವ ಯುಧಿಷ್ಠಿರನನ್ನು ಒಪ್ಪಿಸಿದನು. ಕೌಂತೇಯನು ಹಾಗೆಯೇ ಆಗಲೆಂದು ಹೇಳಲು ವ್ಯಾಸನು ವನಕ್ಕೆ ಹೊರಟುಹೋದನು.

15008019a ಗತೇ ಭಗವತಿ ವ್ಯಾಸೇ ರಾಜಾ ಪಾಂಡುಸುತಸ್ತತಃ|

15008019c ಪ್ರೋವಾಚ ಪಿತರಂ ವೃದ್ಧಂ ಮಂದಂ ಮಂದಮಿವಾನತಃ||

ಭಗವಾನ್ ವ್ಯಾಸನು ಹೊರಟುಹೋದ ನಂತರ ರಾಜ ಪಾಂಡುಸುತನು ವೃದ್ಧನಾದ ತನ್ನ ತಂದೆಗೆ ತಲೆಬಾಗಿಸಿ ಮೆಲ್ಲ ಮೆಲ್ಲನೆ ಇಂತೆಂದನು:

15008020a ಯದಾಹ ಭಗವಾನ್ವ್ಯಾಸೋ ಯಚ್ಚಾಪಿ ಭವತೋ ಮತಮ್|

15008020c ಯದಾಹ ಚ ಮಹೇಷ್ವಾಸಃ ಕೃಪೋ ವಿದುರ ಏವ ಚ||

15008021a ಯುಯುತ್ಸುಃ ಸಂಜಯಶ್ಚೈವ ತತ್ಕರ್ತಾಸ್ಮ್ಯಹಮಂಜಸಾ|

15008021c ಸರ್ವೇ ಹ್ಯೇತೇಽನುಮಾನ್ಯಾ ಮೇ ಕುಲಸ್ಯಾಸ್ಯ ಹಿತೈಷಿಣಃ||

“ಭಗವಾನ್ ವ್ಯಾಸನು ಏನು ಹೇಳಿದನೋ, ನಿನ್ನ ಅಭಿಪ್ರಾಯವೂ ಏನಿದೆಯೋ, ಮಹೇಷ್ವಾಸ ಕೃಪ ಮತ್ತು ವಿದುರರು, ಯುಯುತ್ಸು-ಸಂಜಯರು ಏನು ಹೇಳುತ್ತಾರೋ ಅದರಂತೆಯೇ ನಾನು ನಡೆದುಕೊಳ್ಳುತ್ತೇನೆ. ಏಕೆಂದರೆ ಇವರೆಲ್ಲರೂ ನನಗೆ ಮಾನ್ಯರು ಮತ್ತು ಈ ಕುಲದ ಹಿತೈಷಿಗಳೂ ಆಗಿದ್ದಾರೆ.

15008022a ಇದಂ ತು ಯಾಚೇ ನೃಪತೇ ತ್ವಾಮಹಂ ಶಿರಸಾ ನತಃ|

15008022c ಕ್ರಿಯತಾಂ ತಾವದಾಹಾರಸ್ತತೋ ಗಚ್ಚಾಶ್ರಮಂ ಪ್ರತಿ||

ನೃಪತೇ! ಶಿರಸಾ ನಮಸ್ಕರಿಸಿ ನಿನ್ನಲ್ಲಿ ಇದೊಂದನ್ನು ಬೇಡಿಕೊಳ್ಳುತ್ತಿದ್ದೇನೆ. ನೀನು ಮೊದಲು ಊಟಮಾಡು. ಅನಂತರ ಆಶ್ರಮದ ಕಡೆ ಹೋಗುವಿಯಂತೆ!””

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ವ್ಯಾಸಾನುಜ್ಞಾಯಾಂ ಅಷ್ಟಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ವ್ಯಾಸಾನುಜ್ಞಾ ಎನ್ನುವ ಎಂಟನೇ ಅಧ್ಯಾಯವು.

Comments are closed.