Ashramavasika Parva: Chapter 7

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

ವ್ಯಾಸಾಗಮನ

ಧೃತರಾಷ್ಟ್ರ-ಗಾಂಧಾರಿಯರನ್ನು ನೋಡಿದವರಲ್ಲಿ ಶೋಕ (೧-೧೦). ನಾಲ್ಕು ದಿನಗಳಿಂದ ಆಹಾರಸೇವಿಸದೇ ಇದ್ದ ಧೃತರಾಷ್ಟ್ರನಿಗೆ ಯುಧಿಷ್ಠಿರನು ಆಹಾರ ಸೇವಿಸುವಂತೆ ಹೇಳಿದುದು; ಅಲ್ಲಿಗೆ ವ್ಯಾಸನ ಆಗಮನ (೧೧-೧೯).

15007001 ಧೃತರಾಷ್ಟ್ರ ಉವಾಚ|

15007001a ಸ್ಪೃಶ ಮಾಂ ಪಾಣಿನಾ ಭೂಯಃ ಪರಿಷ್ವಜ ಚ ಪಾಂಡವ|

15007001c ಜೀವಾಮೀವ ಹಿ ಸಂಸ್ಪರ್ಶಾತ್ತವ ರಾಜೀವಲೋಚನ||

ಧೃತರಾಷ್ಟ್ರನು ಹೇಳಿದನು: “ಪಾಂಡವ! ನಿನ್ನ ಕೈಗಳಿಂದ ಪುನಃ ನನ್ನನ್ನು ಮುಟ್ಟಿ ಸವರು! ಆಲಂಗಿಸು! ರಾಜೀವಲೋಚನ! ನಿನ್ನ ಸಂಸ್ಪರ್ಶದಿಂದ ನಾನು ಪುನಃ ಜೀವಂತನಾಗಿದ್ದೇನೆ!

15007002a ಮೂರ್ಧಾನಂ ಚ ತವಾಘ್ರಾತುಮಿಚ್ಚಾಮಿ ಮನುಜಾಧಿಪ|

15007002c ಪಾಣಿಭ್ಯಾಂ ಚ ಪರಿಸ್ಪ್ರಷ್ಟುಂ ಪ್ರಾಣಾ ಹಿ ನ ಜಹುರ್ಮಮ||

ಮನುಜಾಧಿಪ! ನಿನ್ನ ನೆತ್ತಿಯನ್ನು ಆಘ್ರಾಣಿಸಲು ಬಯಸುತ್ತೇನೆ. ಕೈಗಳಿಂದ ನಿನ್ನನ್ನು ಮುಟ್ಟಲು ಬಯಸುತ್ತೇನೆ. ಅದರಿಂದ ನನ್ನ ಪ್ರಾಣವನ್ನೇ ಉಳಿಸಿಕೊಳ್ಳುತ್ತೇನೆ!

15007003a ಅಷ್ಟಮೋ ಹ್ಯದ್ಯ ಕಾಲೋಽಯಮಾಹಾರಸ್ಯ ಕೃತಸ್ಯ ಮೇ|

15007003c ಯೇನಾಹಂ ಕುರುಶಾರ್ದೂಲ ನ ಶಕ್ನೋಮಿ ವಿಚೇಷ್ಟಿತುಮ್||

ಕುರುಶಾರ್ದೂಲ! ನಾನು ಆಹಾರವನ್ನು ಸೇವಿಸಿ ಇಂದಿಗೆ ನಾಲ್ಕು ದಿನಗಳಾದವು. ಇದರಿಂದಾಗಿ ಅಲುಗಾಡಲೂ ನನಗೆ ಸಾಧ್ಯವಾಗುತ್ತಿಲ್ಲ!

15007004a ವ್ಯಾಯಾಮಶ್ಚಾಯಮತ್ಯರ್ಥಂ ಕೃತಸ್ತ್ವಾಮಭಿಯಾಚತಾ|

15007004c ತತೋ ಗ್ಲಾನಮನಾಸ್ತಾತ ನಷ್ಟಸಂಜ್ಞ ಇವಾಭವಮ್||

ನಿನ್ನ ಅಪ್ಪಣೆಯನ್ನು ಕೇಳಲೋಸುಗ ಇಷ್ಟೆಲ್ಲ ಮಾತನಾಡಿ ಆಯಾಸಗೊಂಡಿದ್ದೇನೆ. ಮಗೂ! ಮನಸ್ಸಿನ ದುಃಖದಿಂದ ಎಚ್ಚರತಪ್ಪಿದವನಂತಾದೆನು!

15007005a ತವಾಮೃತಸಮಸ್ಪರ್ಶಂ ಹಸ್ತಸ್ಪರ್ಶಮಿಮಂ ವಿಭೋ|

15007005c ಲಬ್ಧ್ವಾ ಸಂಜೀವಿತೋಽಸ್ಮೀತಿ ಮನ್ಯೇ ಕುರುಕುಲೋದ್ವಹ||

ವಿಭೋ! ಕುರುಕುಲೋದ್ವಹ! ಅಮೃತಸ್ಪರ್ಶದಂತಿರುವ ನಿನ್ನ ಈ ಸ್ಪರ್ಶದಿಂದ ನಾನು ನೂತನ ಚೇತನವನ್ನು ಪಡೆದುಕೊಂಡೆನೆಂದು ಭಾವಿಸುತ್ತೇನೆ!””

15007006 ವೈಶಂಪಾಯನ ಉವಾಚ|

15007006a ಏವಮುಕ್ತಸ್ತು ಕೌಂತೇಯಃ ಪಿತ್ರಾ ಜ್ಯೇಷ್ಠೇನ ಭಾರತ|

15007006c ಪಸ್ಪರ್ಶ ಸರ್ವಗಾತ್ರೇಷು ಸೌಹಾರ್ದಾತ್ತಂ ಶನೈಸ್ತದಾ||

ವೈಶಂಪಾಯನನು ಹೇಳಿದನು: “ಭಾರತ! ತನ್ನ ದೊಡ್ಡಪ್ಪನು ಹೀಗೆ ಹೇಳಲು ಕೌಂತೇಯನು ಸೌಹಾರ್ದತೆಯಿಂದ ಮೆಲ್ಲನೇ ಅವನ ಸರ್ವಾಂಗಗಳನ್ನೂ ಮುಟ್ಟಿ ಸವರಿದನು.

15007007a ಉಪಲಭ್ಯ ತತಃ ಪ್ರಾಣಾನ್ಧೃತರಾಷ್ಟ್ರೋ ಮಹೀಪತಿಃ|

15007007c ಬಾಹುಭ್ಯಾಂ ಸಂಪರಿಷ್ವಜ್ಯ ಮೂರ್ಧ್ನ್ಯಾಜಿಘ್ರತ ಪಾಂಡವಮ್||

ಆಗ ಮಹೀಪತಿ ಧೃತರಾಷ್ಟ್ರನು ಪುನಃ ಪ್ರಾಣಗಳನ್ನೇ ಪಡೆದುಕೊಂಡು, ತನ್ನ ಬಾಹುಗಳೆರಡರಿಂದ ಪಾಂಡವನನ್ನು ಬಿಗಿದಪ್ಪಿ ನೆತ್ತಿಯನ್ನು ಆಘ್ರಾಣಿಸಿದನು.

15007008a ವಿದುರಾದಯಶ್ಚ ತೇ ಸರ್ವೇ ರುರುದುರ್ದುಃಖಿತಾ ಭೃಶಮ್|

15007008c ಅತಿದುಃಖಾಚ್ಚ ರಾಜಾನಂ ನೋಚುಃ ಕಿಂ ಚನ ಪಾಂಡವಾಃ||

ವಿದುರಾದಿಗಳೆಲ್ಲರೂ ಅತ್ಯಂತ ದುಃಖಿತರಾಗಿ ರೋದಿಸಿದರು. ಅತಿದುಃಖದಿಂದ ಪಾಂಡವರೂ ಕೂಡ ರಾಜನಿಗೆ ಏನನ್ನೂ ಹೇಳಲಿಲ್ಲ.

15007009a ಗಾಂಧಾರೀ ತ್ವೇವ ಧರ್ಮಜ್ಞಾ ಮನಸೋದ್ವಹತೀ ಭೃಶಮ್|

15007009c ದುಃಖಾನ್ಯವಾರಯದ್ರಾಜನ್ಮೈವಮಿತ್ಯೇವ ಚಾಬ್ರವೀತ್||

ರಾಜನ್! ಧರ್ಮಜ್ಞೆ ಗಾಂಧಾರಿಯು ಮನಸ್ಸಿನಲ್ಲಿ ಮಹಾ ದುಃಖವನ್ನೇ ಅನುಭವಿಸುತ್ತಿದ್ದರೂ ದುಃಖಿತರಾತ ಅನ್ಯರಿಗೆ “ಹೀಗೆ ಅಳಬೇಡಿರಿ!” ಎಂದಳು.

15007010a ಇತರಾಸ್ತು ಸ್ತ್ರಿಯಃ ಸರ್ವಾಃ ಕುಂತ್ಯಾ ಸಹ ಸುದುಃಖಿತಾಃ|

15007010c ನೇತ್ರೈರಾಗತವಿಕ್ಲೇದೈಃ ಪರಿವಾರ್ಯ ಸ್ಥಿತಾಭವನ್||

ಅಂತಃಪುರದ ಇತರ ಸ್ತ್ರೀಯರೆಲ್ಲರೂ ಅತ್ಯಂತ ದುಃಖಿತರಾಗಿ ಕುಂತಿಯೊಡನೆ ಕಣ್ಣೀರಿಡುತ್ತಾ ಗಾಂಧಾರೀ-ಧೃತರಾಷ್ಟ್ರರನ್ನು ಸುತ್ತುವರೆದು ನಿಂತಿದ್ದರು.

15007011a ಅಥಾಬ್ರವೀತ್ಪುನರ್ವಾಕ್ಯಂ ಧೃತರಾಷ್ಟ್ರೋ ಯುಧಿಷ್ಠಿರಮ್|

15007011c ಅನುಜಾನೀಹಿ ಮಾಂ ರಾಜಂಸ್ತಾಪಸ್ಯೇ ಭರತರ್ಷಭ||

ಆಗ ಪುನಃ ಧೃತರಾಷ್ಟ್ರನು ಯುಧಿಷ್ಠಿರನಿಗೆ ಹೇಳಿದನು: “ಭರತರ್ಷಭ! ರಾಜನ್! ನನಗೆ ತಪಸ್ಸನ್ನು ಮಾಡಲು ಅನುಮತಿಯನ್ನು ಕೊಡು!

15007012a ಗ್ಲಾಯತೇ ಮೇ ಮನಸ್ತಾತ ಭೂಯೋ ಭೂಯಃ ಪ್ರಜಲ್ಪತಃ|

15007012c ನ ಮಾಮತಃ ಪರಂ ಪುತ್ರ ಪರಿಕ್ಲೇಷ್ಟುಮಿಹಾರ್ಹಸಿ||

ಮಗೂ! ಪುನಃ ಪುನಃ ಹೇಳಿದುದನ್ನೇ ಹೇಳಿ ನನ್ನ ಮನಸ್ಸು ದುರ್ಬಲವಾಗುತ್ತಿದೆ. ಪುತ್ರ! ಆದುದರಿಂದ ನನ್ನನ್ನು ಇನ್ನೂ ಹೆಚ್ಚು ದುಃಖಕ್ಕೀಡುಮಾಡುವುದು ಸರಿಯಲ್ಲ!”

15007013a ತಸ್ಮಿಂಸ್ತು ಕೌರವೇಂದ್ರೇ ತಂ ತಥಾ ಬ್ರುವತಿ ಪಾಂಡವಮ್|

15007013c ಸರ್ವೇಷಾಮವರೋಧಾನಾಮಾರ್ತನಾದೋ ಮಹಾನಭೂತ್||

ಕೌರವೇಂದ್ರನು ಪಾಂಡವನಿಗೆ ಹಾಗೆ ಹೇಳುತ್ತಿರುವಾಗ ಅಲ್ಲಿದ್ದ ಯೋಧರಲ್ಲೆಲ್ಲಾ ಮಹಾ ಆರ್ತನಾದವುಂಟಾಯಿತು.

15007014a ದೃಷ್ಟ್ವಾ ಕೃಶಂ ವಿವರ್ಣಂ ಚ ರಾಜಾನಮತಥೋಚಿತಮ್|

15007014c ಉಪವಾಸಪರಿಶ್ರಾಂತಂ ತ್ವಗಸ್ಥಿಪರಿವಾರಿತಮ್||

15007015a ಧರ್ಮಪುತ್ರಃ ಸ ಪಿತರಂ ಪರಿಷ್ವಜ್ಯ ಮಹಾಭುಜಃ|

15007015c ಶೋಕಜಂ ಬಾಷ್ಪಮುತ್ಸೃಜ್ಯ ಪುನರ್ವಚನಮಬ್ರವೀತ್||

ಯಥೋಚಿತವಲ್ಲದೇ ಉಪವಾಸದಿಂದ ಬಳಲಿ ಚರ್ಮ-ಅಸ್ಥಿಮಾತ್ರ ಉಳಿದುಕೊಂಡು ಕೃಶನೂ ವಿವರ್ಣನೂ ಆಗಿರುವ ರಾಜ ಧೃತರಾಷ್ಟ್ರನನ್ನು ನೋಡಿ ಮಹಾಭುಜ ಧರ್ಮಪುತ್ರನು ತಂದೆಯನ್ನು ಆಲಂಗಿಸಿ, ಶೋಕದಿಂದ ಕಣ್ಣೀರನ್ನು ಸುರಿಸುತ್ತಾ ಪುನಃ ಈ ಮಾತನ್ನಾಡಿದನು:

15007016a ನ ಕಾಮಯೇ ನರಶ್ರೇಷ್ಠ ಜೀವಿತಂ ಪೃಥಿವೀಂ ತಥಾ|

15007016c ಯಥಾ ತವ ಪ್ರಿಯಂ ರಾಜಂಶ್ಚಿಕೀರ್ಷಾಮಿ ಪರಂತಪ||

“ನರಶ್ರೇಷ್ಠ! ಪರಂತಪ! ರಾಜನ್! ನಿನಗೆ ಪ್ರಿಯವನ್ನುಂಟುಮಾಡಲು ಎಷ್ಟು ಬಯಸುತ್ತೇನೆಯೋ ಅಷ್ಟು ಈ ಜೀವಿತವನ್ನಾಗಲೀ ಪೃಥ್ವಿಯನ್ನಾಗಲೀ ಬಯಸುವುದಿಲ್ಲ!

15007017a ಯದಿ ತ್ವಹಮನುಗ್ರಾಹ್ಯೋ ಭವತೋ ದಯಿತೋಽಪಿ ವಾ|

15007017c ಕ್ರಿಯತಾಂ ತಾವದಾಹಾರಸ್ತತೋ ವೇತ್ಸ್ಯಾಮಹೇ ವಯಮ್||

ನಾನು ನಿನ್ನ ಅನುಗ್ರಹಕ್ಕೆ ಯೋಗ್ಯನಾಗಿದ್ದರೆ ಮತ್ತು ನಿನ್ನ ಪ್ರೀತಿಗೆ ಪಾತ್ರನಾಗಿದ್ದರೆ ನೀನು ಅಹಾರಸೇವನೆಯನ್ನು ಮಾಡಬೇಕೆಂದು ನಾನು ನಿನಗೆ ಒತ್ತಾಯಿಸುತ್ತೇನೆ.”

15007018a ತತೋಽಬ್ರವೀನ್ಮಹಾತೇಜಾ ಧರ್ಮಪುತ್ರಂ ಸ ಪಾರ್ಥಿವಃ|

15007018c ಅನುಜ್ಞಾತಸ್ತ್ವಯಾ ಪುತ್ರ ಭುಂಜೀಯಾಮಿತಿ ಕಾಮಯೇ||

ಹೀಗೆ ಹೇಳಲು ಪಾರ್ಥಿವನು ಮಹಾತೇಜಸ್ವಿ ಧರ್ಮಪುತ್ರನಿಗೆ “ಪುತ್ರ! ನೀನು ಬಯಸಿದರೆ ನಿನ್ನ ಅನುಜ್ಞೆಯಂತೆ ಊಟಮಾಡುತ್ತೇನೆ!” ಎಂದು ಹೇಳಿದನು.

15007019a ಇತಿ ಬ್ರುವತಿ ರಾಜೇಂದ್ರೇ ಧೃತರಾಷ್ಟ್ರೇ ಯುಧಿಷ್ಠಿರಮ್|

15007019c ಋಷಿಃ ಸತ್ಯವತೀಪುತ್ರೋ ವ್ಯಾಸೋಽಭ್ಯೇತ್ಯ ವಚೋಽಬ್ರವೀತ್||

ರಾಜೇಂದ್ರ ಧೃತರಾಷ್ಟ್ರನು ಯುಧಿಷ್ಠಿರನಿಗೆ ಹೀಗೆ ಹೇಳುತ್ತಿರಲು ಸತ್ಯವತೀ ಪುತ್ರ ಋಷಿ ವ್ಯಾಸನು ಅಲ್ಲಿಗೆ ಆಗಮಿಸಿ ಈ ಮಾತನ್ನಾಡಿದನು.

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರನಿರ್ವೇದೇ ಸಪ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರನಿರ್ವೇದ ಎನ್ನುವ ಏಳನೇ ಅಧ್ಯಾಯವು.

Comments are closed.