Ashramavasika Parva: Chapter 34

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೩೪

ವ್ಯಾಸಾಗಮನ

ಯುಧಿಷ್ಠಿರನು ತಾಪಸರಿಗೆ ದಾನಗಳನ್ನಿತ್ತಿದ್ದುದು (೧-೧೫). ವ್ಯಾಸನ ಆಗಮನ (೧೬-೨೬).

15034001 ವೈಶಂಪಾಯನ ಉವಾಚ|

15034001a ಏವಂ ಸಾ ರಜನೀ ತೇಷಾಮಾಶ್ರಮೇ ಪುಣ್ಯಕರ್ಮಣಾಮ್|

15034001c ಶಿವಾ ನಕ್ಷತ್ರಸಂಪನ್ನಾ ಸಾ ವ್ಯತೀಯಾಯ ಭಾರತ||

ವೈಶಂಪಾಯನನು ಹೇಳಿದನು: “ಭಾರತ! ಹೀಗೆ ಆ ಆಶ್ರಮದಲ್ಲಿದ್ದ ಆ ಪುಣ್ಯಕರ್ಮಿಗಳು ನಕ್ಷತ್ರಸಂಪನ್ನವಾದ ಮಂಗಳಕರ ರಾತ್ರಿಯನ್ನು ಸುಖವಾಗಿ ಕಳೆದರು.

15034002a ತತ್ರ ತತ್ರ ಕಥಾಶ್ಚಾಸಂಸ್ತೇಷಾಂ ಧರ್ಮಾರ್ಥಲಕ್ಷಣಾಃ|

15034002c ವಿಚಿತ್ರಪದಸಂಚಾರಾ ನಾನಾಶ್ರುತಿಭಿರನ್ವಿತಾಃ||

ಅಲ್ಲಲ್ಲಿ ಅವರ ನಡುವೆ ಧರ್ಮಾರ್ಥಲಕ್ಷಣಯುಕ್ತವಾದ, ವಿಚಿತ್ರ ಪದಸಂಚಾರಗಳುಳ್ಳ, ನಾನಾ ಶೃತಿಗಳಿಂದ ಕೂಡಿದ ಸಂಭಾಷಣೆಗಳು ನಡೆಯುತ್ತಿದ್ದವು.

15034003a ಪಾಂಡವಾಸ್ತ್ವಭಿತೋ ಮಾತುರ್ಧರಣ್ಯಾಂ ಸುಷುಪುಸ್ತದಾ|

15034003c ಉತ್ಸೃಜ್ಯ ಸುಮಹಾರ್ಹಾಣಿ ಶಯನಾನಿ ನರಾಧಿಪ||

ನರಾಧಿಪ! ಪಾಂಡವರಾದರೋ ಬಹುಮೂಲ್ಯ ಹಾಸಿಗೆಗಳನ್ನು ಪರಿತ್ಯಜಿಸಿ ತಾಯಿಯೊಡನೆ ನೆಲದ ಮೇಲೆಯೇ ಮಲಗಿಕೊಂಡರು.

15034004a ಯದಾಹಾರೋಽಭವದ್ರಾಜಾ ಧೃತರಾಷ್ಟ್ರೋ ಮಹಾಮನಾಃ|

15034004c ತದಾಹಾರಾ ನೃವೀರಾಸ್ತೇ ನ್ಯವಸಂಸ್ತಾಂ ನಿಶಾಂ ತದಾ||

ಮಹಾಮನಸ್ವೀ ರಾಜಾ ಧೃತರಾಷ್ಟ್ರನು ಯಾವ ಆಹಾರವನ್ನು ಉಂಡನೋ ಅದನ್ನೇ ಪಾಂಡವರೂ ಸೇವಿಸಿ ರಾತ್ರಿಯನ್ನು ಕಳೆದರು.

15034005a ವ್ಯತೀತಾಯಾಂ ತು ಶರ್ವರ್ಯಾಂ ಕೃತಪೂರ್ವಾಹ್ಣಿಕಕ್ರಿಯಃ|

15034005c ಭ್ರಾತೃಭಿಃ ಸಹ ಕೌಂತೇಯೋ ದದರ್ಶಾಶ್ರಮಮಂಡಲಮ್||

15034006a ಸಾಂತಃಪುರಪರೀವಾರಃ ಸಭೃತ್ಯಃ ಸಪುರೋಹಿತಃ|

15034006c ಯಥಾಸುಖಂ ಯಥೋದ್ದೇಶಂ ಧೃತರಾಷ್ಟ್ರಾಭ್ಯನುಜ್ಞಯಾ||

ರಾತ್ರಿಯನ್ನು ಕಳೆದು, ಪೂರ್ವಾಹ್ಣಿಕ ಕ್ರಿಯೆಗಳನ್ನು ಪೂರೈಸಿ ಕೌಂತೇಯ ಯುಧಿಷ್ಠಿರನು, ಧೃತರಾಷ್ಟ್ರನ ಅನುಜ್ಞೆಯನ್ನು ಪಡೆದು, ತಮ್ಮಂದಿರೊಡನೆ, ಅಂತಃಪುರದ ಪರಿವಾರದವರೊಡನೆ, ಸೇವಕರು ಮತ್ತು ಪುರೋಹಿತರೊಂದಿಗೆ ಅನಾಯಾಸವಾಗಿ ಅಲ್ಲಲ್ಲಿದ್ದ ಆಶ್ರಮ ಮಂಡಲಗಳನ್ನು ನೋಡಿದನು.

15034007a ದದರ್ಶ ತತ್ರ ವೇದೀಶ್ಚ ಸಂಪ್ರಜ್ವಲಿತಪಾವಕಾಃ|

15034007c ಕೃತಾಭಿಷೇಕೈರ್ಮುನಿಭಿರ್ಹುತಾಗ್ನಿಭಿರುಪಸ್ಥಿತಾಃ||

ಅಲ್ಲಿ ಅವರು ಅಗ್ನಿಗಳು ಪ್ರಜ್ವಲಿಸುತ್ತಿದ್ದ ವೇದಿಗಳನ್ನೂ, ಸ್ನಾನಮಾಡಿ ಅಗ್ನಿಯಲ್ಲಿ ಆಹುತಿಗಳನ್ನು ನೀಡಲು ಕುಳಿತುಕೊಂಡಿದ್ದ ಮುನಿಗಳನ್ನೂ, ನೋಡಿದರು.

15034008a ವಾನೇಯಪುಷ್ಪನಿಕರೈರಾಜ್ಯಧೂಮೋದ್ಗಮೈರಪಿ|

15034008c ಬ್ರಾಹ್ಮೇಣ ವಪುಷಾ ಯುಕ್ತಾ ಯುಕ್ತಾ ಮುನಿಗಣೈಶ್ಚ ತಾಃ||

ವನ್ಯಪುಷ್ಪಗಳ ಗೊಂಚಲುಗಳಿಂದಲೂ, ತುಪ್ಪದ ಆಹುತಿಯಿಂದಾಗಿ ಮೇಲೆದ್ದ ಹೋಮಧೂಮಗಳಿಂದಲೂ, ಮುನಿಗಣಗಳಿಂದಲೂ ಕೂಡಿದ್ದ ಅವುಗಳು ಬ್ರಾಹ್ಮೀ ಕಾಂತಿಯಿಂದ ಬೆಳಗುತ್ತಿದ್ದವು.

15034009a ಮೃಗಯೂಥೈರನುದ್ವಿಗ್ನೈಸ್ತತ್ರ ತತ್ರ ಸಮಾಶ್ರಿತೈಃ|

15034009c ಅಶಂಕಿತೈಃ ಪಕ್ಷಿಗಣೈಃ ಪ್ರಗೀತೈರಿವ ಚ ಪ್ರಭೋ||

ಅಲ್ಲಲ್ಲಿ ಮೃಗಗಳ ಗುಂಪುಗಳು ಯಾವುದೇ ಉದ್ವಿಗ್ನತೆಯೂ ಇಲ್ಲದೇ ಸೇರಿಕೊಂಡಿದ್ದವು. ಪ್ರಭೋ! ಪಕ್ಷಿಗಣಗಳು ಶಂಕೆಗಳಿಲ್ಲದೇ ಕಲಕಲನಿನಾದಗಳನ್ನು ಮಾಡುತ್ತಿದ್ದವು.

15034010a ಕೇಕಾಭಿರ್ನೀಲಕಂಠಾನಾಂ ದಾತ್ಯೂಹಾನಾಂ ಚ ಕೂಜಿತೈಃ|

15034010c ಕೋಕಿಲಾನಾಂ ಚ ಕುಹರೈಃ ಶುಭೈಃ ಶ್ರುತಿಮನೋಹರೈಃ||

15034011a ಪ್ರಾಧೀತದ್ವಿಜಘೋಷೈಶ್ಚ ಕ್ವ ಚಿತ್ಕ್ವ ಚಿದಲಂಕೃತಮ್|

15034011c ಫಲಮೂಲಸಮುದ್ವಾಹೈರ್ಮಹದ್ಭಿಶ್ಚೋಪಶೋಭಿತಮ್||

ನವಿಲುಗಳ ಕೇಕಾರವಗಳಿಂದಲೂ, ಜಾತಕಪಕ್ಷಿಗಳ ಅವ್ಯಕ್ತ ಮಧುರ ಧ್ವನಿಗಳಿಂದಲೂ, ಕೋಗಿಲೆಗಳ ಇಂಪಾದ ಶುಭಕರ ಕೂಗುಗಳಿಂದಲೂ, ಅಲ್ಲಲ್ಲಿ ಕೇಳಿಬರುತ್ತಿದ್ದ ದ್ವಿಜರ ವೇದಘೋಷಗಳಿಂದಲೂ ಆ ಆಶ್ರಮಮಂಡಲವು ಅಲಂಕೃತವಾಗಿತ್ತು. ಫಲಮೂಲಗಳನ್ನೇ ಸೇವಿಸುತ್ತಿದ್ದ ಅನೇಕ ಮಹಾಪುರುಷರಿಂದ ಅದು ಶೋಭಿಸುತ್ತಿತ್ತು.

15034012a ತತಃ ಸ ರಾಜಾ ಪ್ರದದೌ ತಾಪಸಾರ್ಥಮುಪಾಹೃತಾನ್|

15034012c ಕಲಶಾನ್ಕಾಂಚನಾನ್ರಾಜಂಸ್ತಥೈವೌದುಂಬರಾನಪಿ||

15034013a ಅಜಿನಾನಿ ಪ್ರವೇಣೀಶ್ಚ ಸ್ರುಕ್ಸ್ರುವಂ ಚ ಮಹೀಪತಿಃ|

15034013c ಕಮಂಡಲೂಂಸ್ತಥಾ ಸ್ಥಾಲೀಃ ಪಿಠರಾಣಿ ಚ ಭಾರತ||

15034014a ಭಾಜನಾನಿ ಚ ಲೌಹಾನಿ ಪಾತ್ರೀಶ್ಚ ವಿವಿಧಾ ನೃಪ|

15034014c ಯದ್ಯದಿಚ್ಚತಿ ಯಾವಚ್ಚ ಯದನ್ಯದಪಿ ಕಾಂಕ್ಷಿತಮ್||

ರಾಜನ್! ನೃಪ! ಅನಂತರ ಮಹೀಪತೀ ರಾಜಾ ಯುಧಿಷ್ಠಿರನು ತಾಪಸರಿಗಾಗಿ ತಂದಿದ್ದ ಕಾಂಚನ ಕಲಶಗಳನ್ನೂ, ತಾಮ್ರದ ಕಲಶಗಳನ್ನೂ, ಮೃಗಚರ್ಮಗಳನ್ನೂ, ಕಂಬಳಿಗಳನ್ನೂ, ಸ್ರುಕ್-ಸ್ರುವಗಳನ್ನೂ, ಕಮಂಡಲುಗಳನ್ನೂ, ಸ್ಥಾಲಿಗಳನ್ನೂ, ಮಣ್ಣಿನ ಪಾತ್ರೆಗಳನ್ನೂ, ಮತ್ತು ಯಾರಿಗೆ ಯಾವುದು ಇಷ್ಟವಾಗಿದೆಯೂ ಅವುಗಳನ್ನೂ ಕೊಟ್ಟನು.

15034015a ಏವಂ ಸ ರಾಜಾ ಧರ್ಮಾತ್ಮಾ ಪರೀತ್ಯಾಶ್ರಮಮಂಡಲಮ್|

15034015c ವಸು ವಿಶ್ರಾಣ್ಯ ತತ್ಸರ್ವಂ ಪುನರಾಯಾನ್ಮಹೀಪತಿಃ||

ಹೀಗೆ ರಾಜಾ ಧರ್ಮಾತ್ಮ ಮಹೀಪತಿ ಯುಧಿಷ್ಠಿರನು ಆಶ್ರಮಮಂಡಲದಲ್ಲಿ ತಿರುಗಾಡಿ ಆ ಎಲ್ಲ ವಸ್ತುಗಳನ್ನೂ ಧನವನ್ನೂ ಹಂಚಿ, ಧೃತರಾಷ್ಟ್ರನ ಆಶ್ರಮಕ್ಕೆ ಹಿಂದಿರುಗಿದನು.

15034016a ಕೃತಾಹ್ನಿಕಂ ಚ ರಾಜಾನಂ ಧೃತರಾಷ್ಟ್ರಂ ಮನೀಷಿಣಮ್|

15034016c ದದರ್ಶಾಸೀನಮವ್ಯಗ್ರಂ ಗಾಂಧಾರೀಸಹಿತಂ ತದಾ||

ಅಲ್ಲಿ ಆಹ್ನೀಕಗಳನ್ನು ಪೂರೈಸಿ ಗಾಂಧಾರಿಯೊಡನೆ ಕುಳಿತಿದ್ದ ಅವ್ಯಗ್ರ ರಾಜಾ ಮನೀಷೀ ಧೃತರಾಷ್ಟ್ರನನ್ನು ಕಂಡನು.

15034017a ಮಾತರಂ ಚಾವಿದೂರಸ್ಥಾಂ ಶಿಷ್ಯವತ್ಪ್ರಣತಾಂ ಸ್ಥಿತಾಮ್|

15034017c ಕುಂತೀಂ ದದರ್ಶ ಧರ್ಮಾತ್ಮಾ ಸತತಂ ಧರ್ಮಚಾರಿಣೀಮ್||

ಅನತಿದೂರದಲ್ಲಿಯೇ ಶಿಷ್ಯೆಯಂತೆ ಕೈಮುಗಿದು ನಿಂತಿದ್ದ ಆ ಸತತ ಧರ್ಮಚಾರಿಣೀ ತಾಯಿ ಕುಂತಿಯನ್ನೂ ಅವನು ನೋಡಿದನು.

15034018a ಸ ತಮಭ್ಯರ್ಚ್ಯ ರಾಜಾನಂ ನಾಮ ಸಂಶ್ರಾವ್ಯ ಚಾತ್ಮನಃ|

15034018c ನಿಷೀದೇತ್ಯಭ್ಯನುಜ್ಞಾತೋ ಬೃಸ್ಯಾಮುಪವಿವೇಶ ಹ||

ರಾಜನಿಗೆ ತನ್ನ ಹೆಸರನ್ನು ಹೇಳಿ ನಮಸ್ಕರಿಸಿ, ಕುಳಿತುಕೋ ಎಂದು ಆಜ್ಞೆಯಿತ್ತನಂತರ ಯುಧಿಷ್ಠಿರನು ದರ್ಭಾಸನದ ಮೇಲೆ ಕುಳಿತುಕೊಂಡನು.

15034019a ಭೀಮಸೇನಾದಯಶ್ಚೈವ ಪಾಂಡವಾಃ ಕೌರವರ್ಷಭಮ್|

15034019c ಅಭಿವಾದ್ಯೋಪಸಂಗೃಹ್ಯ ನಿಷೇದುಃ ಪಾರ್ಥಿವಾಜ್ಞಯಾ||

ಭೀಮಸೇನಾದಿ ಪಾಂಡವರೂ ಕೂಡ ಆ ಕೌರವರ್ಷಭನನ್ನು ವಂದಿಸಿ, ಪಾರ್ಥಿವನ ಆಜ್ಞೆಯನ್ನು ಪಡೆದು ಒಟ್ಟಾಗಿ ಕುಳಿತುಕೊಂಡರು.

15034020a ಸ ತೈಃ ಪರಿವೃತೋ ರಾಜಾ ಶುಶುಭೇಽತೀವ ಕೌರವಃ|

15034020c ಬಿಭ್ರದ್ಬ್ರಾಹ್ಮೀಂ ಶ್ರಿಯಂ ದೀಪ್ತಾಂ ದೇವೈರಿವ ಬೃಹಸ್ಪತಿಃ||

ಹೀಗೆ ಅವರಿಂದ ಪರಿವೃತನಾದ ರಾಜ ಕೌರವನು ದೇವತೆಗಳಿಂದ ಸುತ್ತುವರೆಯಲ್ಪಟ್ಟ ಬೃಹಸ್ಪತಿಯಂತೆ ಬೆಳಗುತ್ತಿರುವ ಬ್ರಾಹ್ಮೀ ಕಾಂತಿಯಿಂದ ಕಂಗೊಳಿಸುತ್ತಿದ್ದನು.

15034021a ತಥಾ ತೇಷೂಪವಿಷ್ಟೇಷು ಸಮಾಜಗ್ಮುರ್ಮಹರ್ಷಯಃ|

15034021c ಶತಯೂಪಪ್ರಭೃತಯಃ ಕುರುಕ್ಷೇತ್ರನಿವಾಸಿನಃ||

ಹೀಗೆ ಅವರು ಕುಳಿತುಕೊಂಡಿರಲು ಅಲ್ಲಿಗೆ ಕುರುಕ್ಷೇತ್ರನಿವಾಸಿಗಳಾಗಿದ್ದ ಶತಯೂಪನೇ ಮೊದಲಾದ ಮಹರ್ಷಿಗಳು ಬಂದು ಸೇರಿದರು.

15034022a ವ್ಯಾಸಶ್ಚ ಭಗವಾನ್ವಿಪ್ರೋ ದೇವರ್ಷಿಗಣಪೂಜಿತಃ|

15034022c ವೃತಃ ಶಿಷ್ಯೈರ್ಮಹಾತೇಜಾ ದರ್ಶಯಾಮಾಸ ತಂ ನೃಪಮ್||

ದೇವರ್ಷಿಗಣ ಪೂಜಿತನಾದ ಮಹಾತೇಜಸ್ವಿ ವಿಪ್ರ ಭಗವಾನ್ ವ್ಯಾಸನೂ ಕೂಡ ತನ್ನ ಶಿಷ್ಯರಿಂದೊಡಗೂಡಿ ನೃಪನಿಗೆ ಕಾಣಿಸಿಕೊಂಡನು.

15034023a ತತಃ ಸ ರಾಜಾ ಕೌರವ್ಯಃ ಕುಂತೀಪುತ್ರಶ್ಚ ವೀರ್ಯವಾನ್|

15034023c ಭೀಮಸೇನಾದಯಶ್ಚೈವ ಸಮುತ್ಥಾಯಾಭ್ಯಪೂಜಯನ್||

ಆಗ ರಾಜಾ ಕೌರವ್ಯ, ವೀರ್ಯವಾನ್ ಕುಂತೀಪುತ್ರ, ಮತ್ತು ಭೀಮಸೇನಾದಿಗಳು ಮೇಲೆದ್ದು ಅವನನ್ನು ಪೂಜಿಸಿದರು.

15034024a ಸಮಾಗತಸ್ತತೋ ವ್ಯಾಸಃ ಶತಯೂಪಾದಿಭಿರ್ವೃತಃ|

15034024c ಧೃತರಾಷ್ಟ್ರಂ ಮಹೀಪಾಲಮಾಸ್ಯತಾಮಿತ್ಯಭಾಷತ||

ಶತಯೂಪಾದಿಗಳಿಂದ ಸುತ್ತುವರೆಯಲ್ಪಟ್ಟು ಆಗಮಿಸಿದ ವ್ಯಾಸನು ಮಹೀಪಾಲ ಧೃತರಾಷ್ಟ್ರನಿಗೆ ಕುಳಿತುಕೊಳ್ಳಲು ಹೇಳಿದನು.

15034025a ನವಂ ತು ವಿಷ್ಟರಂ ಕೌಶ್ಯಂ ಕೃಷ್ಣಾಜಿನಕುಶೋತ್ತರಮ್|

15034025c ಪ್ರತಿಪೇದೇ ತದಾ ವ್ಯಾಸಸ್ತದರ್ಥಮುಪಕಲ್ಪಿತಮ್||

ಅನಂತರ ದರ್ಭೆಯನ್ನು ಹಾಸಿ ಕೃಷ್ಣಾಜಿನವನ್ನು ಹೊದಿಸಿ, ತನಗಾಗಿಯೇ ಹೊಸದಾಗಿ ಸಿದ್ಧಪಡಿಸಿದ ಶ್ರೇಷ್ಠ ಕುಶಾಸನದಲ್ಲಿ ವ್ಯಾಸನು ಕುಳಿತುಕೊಂಡನು.

15034026a ತೇ ಚ ಸರ್ವೇ ದ್ವಿಜಶ್ರೇಷ್ಠಾ ವಿಷ್ಟರೇಷು ಸಮಂತತಃ|

15034026c ದ್ವೈಪಾಯನಾಭ್ಯನುಜ್ಞಾತಾ ನಿಷೇದುರ್ವಿಪುಲೌಜಸಃ||

ವಿಪುಲ ತೇಜಸ್ವಿಗಳಾಗಿದ್ದ ಆ ದ್ವಿಜಶ್ರೇಷ್ಠರೆಲ್ಲರೂ ದ್ವೈಪಾಯನನ ಅನುಮತಿಯನ್ನು ಪಡೆದು ಅವನ ಸುತ್ತಲೂ ಕುಳಿತುಕೊಂಡರು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ವ್ಯಾಸಾಗಮನೇ ಚತುಸ್ತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ವ್ಯಾಸಾಗಮನ ಎನ್ನುವ ಮೂವತ್ನಾಲ್ಕನೇ ಅಧ್ಯಾಯವು.

Mandala floral flower oriental pattern vector illustration islam arabic indian turkish pakistan ottoman motifs Premium Vector

Comments are closed.