Aranyaka Parva: Chapter 77

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೭೭

ಪುಷ್ಕರ ಪರಾಭವ-ರಾಜ್ಯ ಪ್ರಾಪ್ತಿ

ನಲನು ತನ್ನ ರಾಜ್ಯಕ್ಕೆ ತೆರಳಿ ಪುಷ್ಕರನನ್ನು ಪುನಃ ದೂತಕ್ಕೆ ಆಹ್ವಾನಿಸುವುದು (೧-೭); ಪುಷ್ಕರನು ಒಪ್ಪಿಕೊಳ್ಳುವುದು (೮-೧೭). ದ್ಯೂತದಲ್ಲಿ ರಾಜ್ಯವನ್ನು ಗೆದ್ದು, ಗೆಲುವು-ಸೋಲುಗಳಿಗೆ ಕಾರಣಗಳನ್ನು ಹೇಳಿ ಪುಷ್ಕರನನ್ನು ಪ್ರೀತಿಯಿಂದ ಬೀಳ್ಕೊಂಡಿದುದು (೧೮-೨೯).

03077001 ಬೃಹದಶ್ವ ಉವಾಚ|

03077001a ಸ ಮಾಸಮುಷ್ಯ ಕೌಂತೇಯ ಭೀಮಮಾಮಂತ್ರ್ಯ ನೈಷಧಃ|

03077001c ಪುರಾದಲ್ಪಪರೀವಾರೋ ಜಗಾಮ ನಿಷಧಾನ್ಪ್ರತಿ||

03077002a ರಥೇನೈಕೇನ ಶುಭ್ರೇಣ ದಂತಿಭಿಃ ಪರಿಷೋಡಶೈಃ|

03077002c ಪಂಚಾಶದ್ಭಿರ್ಹಯೈಶ್ಚೈವ ಷಟ್ಶತೈಶ್ಚ ಪದಾತಿಭಿಃ||

ಬೃಹದಶ್ವನು ಹೇಳಿದನು: “ಒಂದು ತಿಂಗಳ ನಂತರ ನೈಷಧನು ಭೀಮನ ಅನುಜ್ಞೆಯನ್ನು ಪಡೆದು, ಕೆಲವೇ ಜನರಿಂದೊಡಗೂಡಿ, ಒಂದೇ ಶುಭ್ರ ರಥದಲ್ಲಿ, ಹದಿನಾರು ಆನೆಗಳು, ಐವತ್ತು ಕುದುರೆಗಳು, ಮತ್ತು ಆರುನೂರು ಪದಸೈನಿಕರಿಂದೊಡಗೂಡಿ ನಗರದಿಂದ ನಿಷಧದ ಕಡೆ ಹೊರಟನು.

03077003a ಸ ಕಂಪಯನ್ನಿವ ಮಹೀಂ ತ್ವರಮಾಣೋ ಮಹೀಪತಿಃ|

03077003c ಪ್ರವಿವೇಶಾತಿಸಂರಬ್ಧಸ್ತರಸೈವ ಮಹಾಮನಾಃ||

ಮಹಿಯನ್ನೇ ನಡುಗಿಸುತ್ತಾ ಮಹಾಮನ ಮಹೀಪತಿಯು ಶೀಘ್ರದಲ್ಲಿಯೇ ಪುರವನ್ನು ಪ್ರವೇಶಿಸಿದನು.

03077004a ತತಃ ಪುಷ್ಕರಮಾಸಾದ್ಯ ವೀರಸೇನಸುತೋ ನಲಃ|

03077004c ಉವಾಚ ದೀವ್ಯಾವ ಪುನರ್ಬಹು ವಿತ್ತಂ ಮಯಾರ್ಜಿತಂ||

ವೀರಸೇನಸುತ ನಲನು ಪುಷ್ಕರನ ಬಳಿ ಹೋಗಿ ಹೇಳಿದನು: “ಪುನಃ ಜೂಜಾಡೋಣ! ಈಗ ನಾನು ಬಹು ಸಂಪತ್ತನ್ನು ಗಳಿಸಿದ್ದೇನೆ.

03077005a ದಮಯಂತೀ ಚ ಯಚ್ಚಾನ್ಯನ್ಮಯಾ ವಸು ಸಮರ್ಜಿತಂ|

03077005c ಏಷ ವೈ ಮಮ ಸಂನ್ಯಾಸಸ್ತವ ರಾಜ್ಯಂ ತು ಪುಷ್ಕರ||

ದಮಯಂತಿ ಮತ್ತು ನಾನು ಏನೆಲ್ಲ ಸಂಪತ್ತನ್ನು ಅರ್ಜಿಸಿದ್ದೀನೋ ಆ ಎಲ್ಲವನ್ನೂ ಪಣವಿಡುತ್ತೇನೆ. ಪುಷ್ಕರ! ನೀನು ರಾಜ್ಯವನ್ನು ಪಣವಾಗಿಡು.

03077006a ಪುನಃ ಪ್ರವರ್ತತಾಂ ದ್ಯೂತಮಿತಿ ಮೇ ನಿಶ್ಚಿತಾ ಮತಿಃ|

03077006c ಏಕಪಾಣೇನ ಭದ್ರಂ ತೇ ಪ್ರಾಣಯೋಶ್ಚ ಪಣಾವಹೇ||

ಒಂದೇ ಒಂದು ಪಣವನ್ನಿಟ್ಟು ಪುನಃ ದ್ಯೂತವನ್ನು ಮುಂದುವರಿಸಬೇಕೆಂದು ನಾನು ಸಿಶ್ಚಯಿಸಿದ್ದೇನೆ. ನಮ್ಮ ಪ್ರಾಣಗಳನ್ನೇ ಪಣವನ್ನಾಗಿಡೋಣ. ನಿನಗೆ ಒಳ್ಳೆಯದಾಗಲಿ.

03077007a ಜಿತ್ವಾ ಪರಸ್ವಮಾಹೃತ್ಯ ರಾಜ್ಯಂ ವಾ ಯದಿ ವಾ ವಸು|

03077007c ಪ್ರತಿಪಾಣಃ ಪ್ರದಾತವ್ಯಃ ಪರಂ ಹಿ ಧನಮುಚ್ಯತೇ||

ಯಾರಾದರೂ ಇನ್ನೊಬ್ಬನ ರಾಜ್ಯವನ್ನಾಗಲೀ ಅಥವಾ ಸಂಪತ್ತನ್ನಾಗಲೀ ಗೆದ್ದು ತೆಗೆದುಕೊಂಡರೆ, ಅದಕ್ಕೊಂದು ಪ್ರತಿ ಪಣವನ್ನು ಇಡಬೇಕಾಗುತ್ತದೆ; ಇದನ್ನೇ ಕೊನೆಯ ಪಣವೆಂದು ಹೇಳಲಾಗುತ್ತದೆ.

03077008a ನ ಚೇದ್ವಾಂಚಸಿ ತದ್ದ್ಯೂತಂ ಯುದ್ಧದ್ಯೂತಂ ಪ್ರವರ್ತತಾಂ|

03077008c ದ್ವೈರಥೇನಾಸ್ತು ವೈ ಶಾಂತಿಸ್ತವ ವಾ ಮಮ ವಾ ನೃಪ||

ರಾಜ! ನೀನು ದ್ಯೂತವನ್ನಾಡಲು ಇಚ್ಛಿಸದಿದ್ದರೆ, ನಿನಗೆ ಅಥವಾ ನನಗೆ ಚಿರಶಾಂತಿ ದೊರೆಯುವವರೆಗೆ ಎರಡು ರಥಗಳ ಮೇಲೆ ಯುದ್ಧದ ದ್ಯೂತವಾದರೂ ಪ್ರಾರಂಭವಾಗಬೇಕು.

03077009a ವಂಶಭೋಜ್ಯಮಿದಂ ರಾಜ್ಯಂ ಮಾರ್ಗಿತವ್ಯಂ ಯಥಾ ತಥಾ|

03077009c ಯೇನ ತೇನಾಪ್ಯುಪಾಯೇನ ವೃದ್ಧಾನಾಮಿತಿ ಶಾಸನಂ||

ವಂಶೀಯವಾಗಿ ಪಡೆದುಕೊಂಡ ಈ ರಾಜ್ಯವನ್ನು ಯಾವ ಮಾರ್ಗವನ್ನಾದರೂ ಅನುಸರಿಸಿ ಪುನಃ ಪಡೆದುಕೊಳ್ಳಬಹುದು ಎಂದು ವೃದ್ಧರು ಹೇಳುತ್ತಾರೆ.

03077010a ದ್ವಯೋರೇಕತರೇ ಬುದ್ಧಿಃ ಕ್ರಿಯತಾಮದ್ಯ ಪುಷ್ಕರ|

03077010c ಕೈತವೇನಾಕ್ಷವತ್ಯಾಂ ವಾ ಯುದ್ಧೇ ವಾ ನಮ್ಯತಾಂ ಧನುಃ||

ಪುಷ್ಕರ! ಈ ಎರಡರಲ್ಲಿ ಒಂದನ್ನು ಈಗ ನಿಶ್ಚಯಮಾಡು. ದ್ಯೂತದಲ್ಲಿ ದಾಳಗಳನ್ನಾದರೂ ಎಸೆ ಅಥವಾ ಯುದ್ಧದಲ್ಲಿ ಧನುಸ್ಸನ್ನಾದರೂ ಎಳೆದು ಬಿಡು.”

03077011a ನೈಷಧೇನೈವಮುಕ್ತಸ್ತು ಪುಷ್ಕರಃ ಪ್ರಹಸನ್ನಿವ|

03077011c ಧ್ರುವಮಾತ್ಮಜಯಂ ಮತ್ವಾ ಪ್ರತ್ಯಾಹ ಪೃಥಿವೀಪತಿಂ||

ನೈಷಧನ ಈ ಮಾತುಗಳಿಗೆ ಪುಷ್ಕರನು ನಕ್ಕನು. ತನಗೇ ಜಯ ನಿಶ್ಚಯ ಎಂದು ತಿಳಿದು ಪೃಥಿವೀಪತಿಗೆ ಉತ್ತರಿಸಿದನು:

03077012a ದಿಷ್ಟ್ಯಾ ತ್ವಯಾರ್ಜಿತಂ ವಿತ್ತಂ ಪ್ರತಿಪಾಣಾಯ ನೈಷಧ|

03077012c ದಿಷ್ಟ್ಯಾ ಚ ದುಷ್ಕೃತಂ ಕರ್ಮ ದಮಯಂತ್ಯಾಃ ಕ್ಷಯಂ ಗತಂ|

03077012e ದಿಷ್ಟ್ಯಾ ಚ ಧ್ರಿಯಸೇ ರಾಜನ್ಸದಾರೋಽರಿನಿಬರ್ಹಣ||

“ನೈಷಧ! ಪ್ರತಿಯಾಗಿ ಪಣವನ್ನಿಡಲು ನೀನು ಸಂಪತ್ತನ್ನು ಗಳಿಸಿದ್ದೀಯೆ ಎಂದರೆ ಎಷ್ಟು ಸಂತೋಷದ ವಿಷಯ! ದಮಯಂತಿಯ ದುಷ್ಕೃತ ಕರ್ಮಗಳೆಲ್ಲ ನಾಶವಾದವು ಎಂದರೆ ಎಷ್ಟು ಸಂತೋಷದ ವಿಷಯ! ಅರಿನಾಶಕ! ಹೆಂಡತಿಯೊಂದಿಗೆ ನೀನೂ ಜೀವಂತವಾಗಿದ್ದೀಯಲ್ಲ ಇದು ಇನ್ನೂ ಸಂತೋಷದ ವಿಷಯ!

03077013a ಧನೇನಾನೇನ ವೈದರ್ಭೀ ಜಿತೇನ ಸಮಲಂಕೃತಾ|

03077013c ಮಾಮುಪಸ್ಥಾಸ್ಯತಿ ವ್ಯಕ್ತಂ ದಿವಿ ಶಕ್ರಮಿವಾಪ್ಸರಾಃ||

ನಾನು  ಗೆಲ್ಲುವ ಈ ಸಂಪತ್ತಿನಿಂದ ಸ್ವರ್ಗದಲ್ಲಿ ಸಮಲಂಕೃತ ಅಪ್ಸರೆಯರು ಶಕ್ರನನ್ನು ಸೇವಿಸುವಂತೆ ನನ್ನನ್ನು ವೈದರ್ಭಿಯು ಸೇವಿಸುವಳು ಎನ್ನುವುದು ನಿಜವಾಗುತ್ತಿದೆ.

03077014a ನಿತ್ಯಶೋ ಹಿ ಸ್ಮರಾಮಿ ತ್ವಾಂ ಪ್ರತೀಕ್ಷಾಮಿ ಚ ನೈಷಧ|

03077014c ದೇವನೇ ಚ ಮಮ ಪ್ರೀತಿರ್ನ ಭವತ್ಯಸುಹೃದ್ಗಣೈಃ||

ನೈಷಧ! ನಿನ್ನನ್ನು ನಿತ್ಯವೂ ಸ್ಮರಿಸುತ್ತಿದ್ದೆ ಮತ್ತು ನಿನ್ನ ಪ್ರತೀಕ್ಷೆ ಮಾಡುತ್ತಿದ್ದೆ. ನನ್ನ ಸುಹೃದಯರಲ್ಲದವರ ಜೊತೆ ದ್ಯೂತವನ್ನಾಡಲು ನನಗೆ ಮನಸೇ ಇರಲಿಲ್ಲ.

03077015a ಜಿತ್ವಾ ತ್ವದ್ಯ ವರಾರೋಹಾಂ ದಮಯಂತೀಮನಿಂದಿತಾಂ|

03077015c ಕೃತಕೃತ್ಯೋ ಭವಿಷ್ಯಾಮಿ ಸಾ ಹಿ ಮೇ ನಿತ್ಯಶೋ ಹೃದಿ||

ಇಂದು ಅನಿಂದಿತೆ ವರಾರೋಹೆ ದಮಯಂತಿಯನ್ನು ಗೆದ್ದು ನಾನು ಕೃತಕೃತ್ಯನಾಗುತ್ತೇನೆ; ಏಕೆಂದರೆ ಅವಳು ನಿತ್ಯವೂ ನನ್ನ ಹೃದಯದಲ್ಲಿ ಇದ್ದವಳು!”

03077016a ಶ್ರುತ್ವಾ ತು ತಸ್ಯ ತಾ ವಾಚೋ ಬಹ್ವಬದ್ಧಪ್ರಲಾಪಿನಃ|

03077016c ಇಯೇಷ ಸ ಶಿರಶ್ಚೇತ್ತುಂ ಖಡ್ಗೇನ ಕುಪಿತೋ ನಲಃ||

ಅವನ ಈ ಬಾಲಿಶ ಮಾತುಗಳನ್ನು ಕೇಳಿದ ನಲನು ಖಡ್ಗದಿಂದ ಅವನ ಶಿರವನ್ನು ಛೇಧಿಸಬೇಕೆನ್ನುವಷ್ಟು ಕುಪಿತನಾದನು.

03077017a ಸ್ಮಯಂಸ್ತು ರೋಷತಾಂರಾಕ್ಷಸ್ತಂ ಉವಾಚ ತತೋ ನೃಪಃ|

03077017c ಪಣಾವಃ ಕಿಂ ವ್ಯಾಹರಸೇ ಜಿತ್ವಾ ವೈ ವ್ಯಾಹರಿಷ್ಯಸಿ||

ಆಗ ನೃಪನು ಸಿಟ್ಟಿನಿಂದ ಕಣ್ಣುಗಳು ಕೆಂಪಾಗಿದ್ದರೂ ನಗುತ್ತಾ ಹೇಳಿದನು: “ಆಡೋಣ ಬಾ! ಮಾತನಾಡುವುದು ಯಾಕೆ? ಗೆದ್ದು ಮಾತನಾಡುವೆಯೆಂತೆ!”

03077018a ತತಃ ಪ್ರಾವರ್ತತ ದ್ಯೂತಂ ಪುಷ್ಕರಸ್ಯ ನಲಸ್ಯ ಚ|

03077018c ಏಕಪಾಣೇನ ಭದ್ರಂ ತೇ ನಲೇನ ಸ ಪರಾಜಿತಃ|

03077018e ಸರತ್ನಕೋಶನಿಚಯಃ ಪ್ರಾಣೇನ ಪಣಿತೋಽಪಿ ಚ||

ಹೀಗೆ ನಲ-ಪುಷ್ಕರರ ದ್ಯೂತವು ಪುನಃ ಪ್ರಾರಂಭವಾಯಿತು. ಒಂದೇ ಒಂದು ಪಣದಲ್ಲಿ ಅವನು ನಲನಿಂದ ಪರಾಜಿತನಾದನು. ತನ್ನ ರತ್ನಕೋಶಗಳ ರಾಶಿಯನ್ನು ಮತ್ತು ತನ್ನ ಪ್ರಾಣವನ್ನೂ ಪಣವಿಟ್ಟು ಸೋತನು.

03077019a ಜಿತ್ವಾ ಚ ಪುಷ್ಕರಂ ರಾಜಾ ಪ್ರಹಸನ್ನಿದಮಬ್ರವೀತ್|

03077019c ಮಮ ಸರ್ವಮಿದಂ ರಾಜ್ಯಮವ್ಯಗ್ರಂ ಹತಕಂಟಕಂ||

ಪುಷ್ಕರನನ್ನು ಗೆದ್ದ ರಾಜನು ಮುಗುಳ್ನಗುತ್ತಾ ಹೇಳಿದನು: “ಹತಕಂಟಕ! ಈ ಎಲ್ಲ ರಾಜ್ಯವೂ ನನ್ನದು. ಇದಕ್ಕೆ ಸ್ಪರ್ಧಿಗಳು ಯಾರೂ ಇಲ್ಲ.

03077020a ವೈದರ್ಭೀ ನ ತ್ವಯಾ ಶಕ್ಯಾ ರಾಜಾಪಸದ ವೀಕ್ಷಿತುಂ|

03077020c ತಸ್ಯಾಸ್ತ್ವಂ ಸಪರೀವಾರೋ ಮೂಢ ದಾಸತ್ವಮಾಗತಃ||

ರಾಜಭ್ರಷ್ಠ! ನೀನು ಇನ್ನು ವೈದರ್ಭಿಯಮೇಲೆ ಕಣ್ಣನ್ನು ಇಡಲು ಶಕ್ಯನಲ್ಲ. ಮೂಢನೇ ನೀನು ಮತ್ತು ನಿನ್ನ ಪರಿವಾರವೆಲ್ಲವೂ ದಾಸತ್ವವನ್ನು ಪಡೆದವರಾಗಿದ್ದೀರಿ.

03077021a ನ ತತ್ತ್ವಯಾ ಕೃತಂ ಕರ್ಮ ಯೇನಾಹಂ ನಿರ್ಜಿತಃ ಪುರಾ|

03077021c ಕಲಿನಾ ತತ್ಕೃತಂ ಕರ್ಮ ತ್ವಂ ತು ಮೂಢ ನ ಬುಧ್ಯಸೇ|

03077021e ನಾಹಂ ಪರಕೃತಂ ದೋಷಂ ತ್ವಯ್ಯಾಧಾಸ್ಯೇ ಕಥಂ ಚನ||

ಹಿಂದೆ ನಾನು ಸೋತಿದ್ದುದು ನಿನ್ನಿಂದಾಗಿ ಅಲ್ಲ. ಅದು ಕಲಿಯು ಮಾಡಿದ ಕರ್ಮವಾಗಿತ್ತು. ಆದರೆ ಮೂಢ! ಅದು ನಿನಗೆ ತಿಳಿದಿರಲಿಲ್ಲ. ಪರರು ಮಾಡಿದ ದೋಷಕ್ಕೆ ನಾನಾದರೂ ನಿನ್ನನ್ನು ಹೇಗೆ ನಿಂದಿಸಲಿ?

03077022a ಯಥಾಸುಖಂ ತ್ವಂ ಜೀವಸ್ವ ಪ್ರಾಣಾನಭ್ಯುತ್ಸೃಜಾಮಿ ತೇ|

03077022c ತಥೈವ ಚ ಮಮ ಪ್ರೀತಿಸ್ತ್ವಯಿ ವೀರ ನ ಸಂಶಯಃ||

ನೀನು ನಿನಗಿಷ್ಟವಿದ್ದಂತೆ ಜೀವಿಸು. ನಿನ್ನ ಪ್ರಾಣವನ್ನು ನಿನಗೇ ಹಿಂದಿರುಗಿಸುತ್ತಿದ್ದೇನೆ. ಹಾಗೆಯೇ ವೀರ! ನಿನ್ನ ಮೇಲೆ ನನ್ನ ಪ್ರೀತಿಯಿರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

03077023a ಸೌಭ್ರಾತ್ರಂ ಚೈವ ಮೇ ತ್ವತ್ತೋ ನ ಕದಾ ಚಿತ್ಪ್ರಹಾಸ್ಯತಿ|

03077023c ಪುಷ್ಕರ ತ್ವಂ ಹಿ ಮೇ ಭ್ರಾತಾ ಸಂಜೀವಸ್ವ ಶತಂ ಸಮಾಃ||

ನನ್ನ ಭ್ರಾತೃ ಪ್ರೇಮವು ನಿನ್ನನ್ನು ಇಂದೂ ವಂಚಿಸುವುದಿಲ್ಲ. ಪುಷ್ಕರ! ನೀನು ನನ್ನ ಭ್ರಾತೃ.  ನೂರು ವರ್ಷ ಜೀವಿಸು!”

03077024a ಏವಂ ನಲಃ ಸಾಂತ್ವಯಿತ್ವಾ ಭ್ರಾತರಂ ಸತ್ಯವಿಕ್ರಮಃ|

03077024c ಸ್ವಪುರಂ ಪ್ರೇಷಯಾಮಾಸ ಪರಿಷ್ವಜ್ಯ ಪುನಃ ಪುನಃ||

ಈ ರೀತಿ ಸತ್ಯವಿಕ್ರಮ ನಲನು ಭ್ರಾತನನ್ನು ಸಂತವಿಸಿ, ಪುನಃ ಪುನಃ ಅಪ್ಪಿಕೊಳ್ಳುತ್ತಾ ಅವನ ಪುರಕ್ಕೆ ಬೀಳ್ಕೊಟ್ಟನು.

03077025a ಸಾಂತ್ವಿತೋ ನೈಷಧೇನೈವಂ ಪುಷ್ಕರಃ ಪ್ರತ್ಯುವಾಚ ತಂ|

03077025c ಪುಣ್ಯಶ್ಲೋಕಂ ತದಾ ರಾಜನ್ನಭಿವಾದ್ಯ ಕೃತಾಂಜಲಿಃ||

ರಾಜನ್! ನೈಷಧನಿಂದ ಸಾಂತ್ವನಗೊಂಡ ಪುಷ್ಕರನು ಆ ಪುಣ್ಯಶ್ಲೋಕನಿಗೆ ಕೃತಾಂಜಲಿಯಾಗಿ ಅಭಿವಂದಿಸಿ ಉತ್ತರಿಸಿದನು:

03077026a ಕೀರ್ತಿರಸ್ತು ತವಾಕ್ಷಯ್ಯಾ ಜೀವ ವರ್ಷಾಯುತಂ ಸುಖೀ|

03077026c ಯೋ ಮೇ ವಿತರಸಿ ಪ್ರಾಣಾನಧಿಷ್ಠಾನಂ ಚ ಪಾರ್ಥಿವ||

“ನನ್ನ ಪ್ರಾಣ ಮತ್ತು ಅಧಿಷ್ಠಾನವನ್ನು ಹಿಂದಿರುಗಿಸಿದ ಪಾರ್ಥಿವ! ನೀನು ಅನೇಕ ವರ್ಷಗಳ ಪರ್ಯಂತ ಜೀವಿಸು ಮತ್ತು ನಿನ್ನ ಕೀರ್ತಿಯು ಅಕ್ಷಯವಾಗಿರಲಿ!”

03077027a ಸ ತಥಾ ಸತ್ಕೃತೋ ರಾಜ್ಞಾ ಮಾಸಮುಷ್ಯ ತದಾ ನೃಪಃ|

03077027c ಪ್ರಯಯೌ ಸ್ವಪುರಂ ಹೃಷ್ಟಃ ಪುಷ್ಕರಃ ಸ್ವಜನಾವೃತಃ||

03077028a ಮಹತ್ಯಾ ಸೇನಯಾ ರಾಜನ್ವಿನೀತೈಃ ಪರಿಚಾರಕೈಃ|

03077028c ಭ್ರಾಜಮಾನ ಇವಾದಿತ್ಯೋ ವಪುಷಾ ಪುರುಷರ್ಷಭ||

ಪುರುಷರ್ಷಭ! ರಾಜ ಪುಷ್ಕರನು ನೃಪನ ಅತಿಥಿಯಾಗಿ ಒಂದು ತಿಂಗಳು ಅಲ್ಲಿಯೇ ಇದ್ದು ನಂತರ ಸಂತಸದಿಂದ ಸ್ವಜನರೊನ್ನೊಡಗೂಡಿ, ಮಹತ್ತರ ಸೇನೆಯೊಂದಿಗೆ, ವಿನೀತ ಪರಿಚಾರಕರೊಂದಿಗೆ, ರೂಪದಲ್ಲಿ ಆದಿತ್ಯನಂತೆ ಬೆಳಗುತ್ತಾ ಸ್ವಪುರಕ್ಕೆ ಪ್ರಯಾಣಿಸಿದನು.

03077029a ಪ್ರಸ್ಥಾಪ್ಯ ಪುಷ್ಕರಂ ರಾಜಾ ವಿತ್ತವಂತಮನಾಮಯಂ|

03077029c ಪ್ರವಿವೇಶ ಪುರಂ ಶ್ರೀಮಾನತ್ಯರ್ಥಮುಪಶೋಭಿತಂ|

03077029e ಪ್ರವಿಶ್ಯ ಸಾಂತ್ವಯಾಮಾಸ ಪೌರಾಂಶ್ಚ ನಿಷಧಾಧಿಪಃ||

ವಿತ್ತವಂತ ಅನಾಮಯ ಪುಷ್ಕರನನ್ನು ಕಳುಹಿಸಿ, ರಾಜನು ಅದ್ಭುತವಾಗಿ ಅಲಂಕೃತವಾಗಿದ್ದ ತನ್ನ ಪುರವನ್ನು ಪ್ರವೇಶಿಸಿದನು. ಪ್ರವೇಶಿಸಿ ನಿಷಧಾಧಿಪನು ಪುರಜನರನ್ನು ಸಾಂತ್ವಯಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಪುಷ್ಕರಪರಾಭವಪೂರ್ವಕಂ ರಾಜ್ಯಪ್ರತ್ಯಾನಯನೇ ಸಪ್ತಸಪ್ತತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಪುಷ್ಕರ ಪರಾಭವ ಮತ್ತು ರಾಜ್ಯಪ್ರಾಪ್ತಿ ಎನ್ನುವ ಎಪ್ಪತ್ತೇಳನೆಯ ಅಧ್ಯಾಯವು.

Related image

Comments are closed.