Aranyaka Parva: Chapter 55

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೫೫

ಕಲಿಕೋಪ

ಲೋಕಪಾಲಕರು ಹಿಂದಿರುಗುತ್ತಿರುವಾಗ ಮಾರ್ಗದಲ್ಲಿ ದ್ವಾಪರನೊಡನೆ ದಮಯಂತಿಯನ್ನು ಬಯಸಿ ಸ್ವಯಂವರಕ್ಕೆ ಬರುತ್ತಿರುವ ಕಲಿಯನ್ನು ನೋಡಿದುದು (೧); ಸ್ವಯಂವರದಲ್ಲಿ ದಮಯಂತಿಯು ದೇವತೆಗಳ ಮಧ್ಯದಲ್ಲಿ ಮನುಷ್ಯನನ್ನು ವರಿಸಿದಳೆಂದು ಕೇಳಿ ಕಲಿಯು ಕೋಪಗೊಂಡಿದುದು (೨-೬); ಅದಕ್ಕೆ ಅವರೇ ಸಮ್ಮತಿ ನೀಡಿದರೆಂದೂ, ಶಪಿಸುವ ಅವಶ್ಯಕತೆಯಿಲ್ಲವೆಂದೂ ಹೇಳಿ ಇಂದ್ರಾದಿಗಳು ತೆರಳಿದುದು (೭-೧೧). ತಾನು ನಲನನ್ನು ಹಿಡಿಯುತ್ತೇನೆ, ಅದಕ್ಕೆ ದ್ವಾಪರನು ದಾಳಗಳಾಗಿ ಸಹಾಯ ಮಾಡಬೇಕೆಂದು ಕಲಿಯು ನಿಶ್ಚಯಿಸಿದುದು (೧೨-೧೩).

03055001 ಬೃಹದಶ್ವ ಉವಾಚ|

03055001a ವೃತೇ ತು ನೈಷಧೇ ಭೈಮ್ಯಾ ಲೋಕಪಾಲಾ ಮಹೌಜಸಃ|

03055001c ಯಾಂತೋ ದದೃಶುರಾಯಾಂತಂ ದ್ವಾಪರಂ ಕಲಿನಾ ಸಹ||

ಬೃಹದಶ್ವನು ಹೇಳಿದನು: “ನೈಷಧನು ಭೈಮಿಯಿಂದ ವರಿಸಲ್ಪಟ್ಟ ನಂತರ ಮಹೌಜಸ ಲೋಕಪಾಲಕರು ತೆರಳುತ್ತಿರುವಾಗ ದ್ವಾಪರನ ಜೊತೆಗೂಡಿ ಬರುತ್ತಿದ್ದ ಕಲಿಯನ್ನು ಕಂಡರು.

03055002a ಅಥಾಬ್ರವೀತ್ಕಲಿಂ ಶಕ್ರಃ ಸಂಪ್ರೇಕ್ಷ್ಯ ಬಲವೃತ್ರಹಾ|

03055002c ದ್ವಾಪರೇಣ ಸಹಾಯೇನ ಕಲೇ ಬ್ರೂಹಿ ಕ್ವ ಯಾಸ್ಯಸಿ||

ಬಲವೃತ್ರಹ ಶಕ್ರನು ಕಲಿಯನ್ನು ನೋಡಿ ಕೇಳಿದನು: “ಕಲಿ! ದ್ವಾಪರನನ್ನೊಡಗೂಡಿ ಎಲ್ಲಿಗೆ ಹೋಗುತ್ತಿರುವೆ ಹೇಳು.”

03055003a ತತೋಽಬ್ರವೀತ್ಕಲಿಃ ಶಕ್ರಂ ದಮಯಂತ್ಯಾಃ ಸ್ವಯಂವರಂ|

03055003c ಗತ್ವಾಹಂ ವರಯಿಷ್ಯೇ ತಾಂ ಮನೋ ಹಿ ಮಮ ತದ್ಗತಂ||

ಕಲಿಯು ಶಕ್ರನಿಗೆ ಉತ್ತರಿಸಿದನು: “ದಮಯಂತಿಯ ಸ್ವಯಂವರಕ್ಕೆ ಹೋಗುತ್ತಿದ್ದೇನೆ. ಅಲ್ಲಿ ನಾನು ಅವಳನ್ನು ವರಿಸುತ್ತೇನೆ, ಯಾಕೆಂದರೆ ನನ್ನ ಮನಸ್ಸು ಅವಳಿಗಾಗಿಯೇ ಮಾರಿಹೋಗಿದೆ.”

03055004a ತಮಬ್ರವೀತ್ಪ್ರಹಸ್ಯೇಂದ್ರೋ ನಿರ್ವೃತ್ತಃ ಸ ಸ್ವಯಂವರಃ|

03055004c ವೃತಸ್ತಯಾ ನಲೋ ರಾಜಾ ಪತಿರಸ್ಮತ್ಸಮೀಪತಃ||

ಇಂದ್ರನು ನಗುತ್ತಾ ಹೇಳಿದನು: “ಸ್ವಯಂವರವು ಮುಗಿದು ಹೋಯಿತು! ನನ್ನ ಎದುರಿನಲ್ಲಿಯೇ ಅವಳು ರಾಜ ನಲನನ್ನು ಪತಿಯನ್ನಾಗಿ ವರಿಸಿದಳು.”

03055005a ಏವಮುಕ್ತಸ್ತು ಶಕ್ರೇಣ ಕಲಿಃ ಕೋಪಸಮನ್ವಿತಃ|

03055005c ದೇವಾನಾಮಂತ್ರ್ಯ ತಾನ್ಸರ್ವಾನುವಾಚೇದಂ ವಚಸ್ತದಾ||

ಶಕ್ರನ ಈ ಮಾತುಗಳನ್ನು ಕೇಳಿ ಕಲಿಯು ಕೋಪಸಮನ್ವಿತನಾದನು. ಆ ಎಲ್ಲ ದೇವತೆಗಳನ್ನು ಉದ್ದೇಶಿಸಿ ಹೇಳಿದನು:

03055006a ದೇವಾನಾಂ ಮಾನುಷಂ ಮಧ್ಯೇ ಯತ್ಸಾ ಪತಿಮವಿಂದತ|

03055006c ನನು ತಸ್ಯಾ ಭವೇನ್ನ್ಯಾಯ್ಯಂ ವಿಪುಲಂ ದಂಡಧಾರಣಂ||

“ದೇವತೆಗಳ ಮಧ್ಯದಲ್ಲಿ ಒಬ್ಬ ಮನುಷ್ಯನನ್ನು ಪತಿಯನ್ನಾಗಿ ಆರಿಸಿಕೊಂಡರೆ ಅವಳಿಗೆ ನಿಜವಾಗಿಯೂ ವಿಪುಲ ದಂಡವೇ ದೊರೆಯಬೇಕು!”

03055007a ಏವಮುಕ್ತೇ ತು ಕಲಿನಾ ಪ್ರತ್ಯೂಚುಸ್ತೇ ದಿವೌಕಸಃ|

03055007c ಅಸ್ಮಾಭಿಃ ಸಮನುಜ್ಞಾತೋ ದಮಯಂತ್ಯಾ ನಲೋ ವೃತಃ||

ಕಲಿಯ ಈ ಮಾತುಗಳಿಗೆ ದಿವೌಕಸರು ಉತ್ತರಿಸಿದರು: “ದಮಯಂತಿಯು ನಲನನ್ನು ವರಿಸಲು ನಾವೇ ಸಮ್ಮತಿಯನ್ನು ನೀಡಿದ್ದೇವೆ.

03055008a ಕಶ್ಚ ಸರ್ವಗುಣೋಪೇತಂ ನಾಶ್ರಯೇತ ನಲಂ ನೃಪಂ|

03055008c ಯೋ ವೇದ ಧರ್ಮಾನಖಿಲಾನ್ಯಥಾವಚ್ಚರಿತವ್ರತಃ||

ಯಥಾವತ್ತಾಗಿ ವ್ರತಚರಿತ, ಅಖಿಲ ಧರ್ವವನ್ನೂ ತಿಳಿದಿರುವ, ಸರ್ವಗುಣೋಪೇತ ನೃಪ ನಲನನ್ನು ಯಾರುತಾನೆ ವರಿಸುವುದಿಲ್ಲ?

03055009a ಯಸ್ಮಿನ್ಸತ್ಯಂ ಧೃತಿರ್ದಾನಂ ತಪಃ ಶೌಚಂ ದಮಃ ಶಮಃ|

03055009c ಧ್ರುವಾಣಿ ಪುರುಷವ್ಯಾಘ್ರೇ ಲೋಕಪಾಲಸಮೇ ನೃಪೇ||

ಸತ್ಯ, ಧೃತಿ, ದಾನ, ತಪ, ಶೌಚ, ದಮ, ಮತ್ತು ಶಮ ಆ ಪುರುಷವ್ಯಾಘ್ರನಲ್ಲಿ ನೆಲೆಗೊಂಡಿವೆ; ಆ ನೃಪನು ಲೋಕಪಾಲಕರಿಗೆ ಸಮನಾಗಿದ್ದಾನೆ.

03055010a ಆತ್ಮಾನಂ ಸ ಶಪೇನ್ಮೂಢೋ ಹನ್ಯಾಚ್ಚಾತ್ಮಾನಮಾತ್ಮನಾ|

03055010c ಏವಂಗುಣಂ ನಲಂ ಯೋ ವೈ ಕಾಮಯೇಚ್ಛಪಿತುಂ ಕಲೇ||

ಕಲಿ! ಇಂತಹ ಸದ್ಗುಣಿ ನಲನನ್ನು ಶಪಿಸಲು ಇಚ್ಛಿಸುವವನು ತನ್ನನ್ನು ತಾನೇ ಶಪಿಸಿ ತನ್ನನ್ನು ತಾನೇ ಹತ್ಯೆಮಾಡಿಕೊಳ್ಳುವ ಮೂಢನಂತೆ.

03055011a ಕೃಚ್ಚ್ರೇ ಸ ನರಕೇ ಮಜ್ಜೇದಗಾಧೇ ವಿಪುಲೇಽಪ್ಲವೇ|

03055011c ಏವಮುಕ್ತ್ವಾ ಕಲಿಂ ದೇವಾ ದ್ವಾಪರಂ ಚ ದಿವಂ ಯಯುಃ||

ಕಲಿ! ಅಂಥವನು ಕೃಚ್ಛ್ರ ನರಕದಲ್ಲಿ ತುಂಬಾ ಸಮಯ ಅಗಾಧ ನೋವನ್ನು ಅನುಭವಿಸುತ್ತಾನೆ.” ಕಲಿ ಮತ್ತು ದ್ವಾಪರರಿಗೆ ಈ ರೀತಿ ಹೇಳಿದ ದೇವತೆಗಳು ದಿವಕ್ಕೆ ತೆರಳಿದರು.

03055012a ತತೋ ಗತೇಷು ದೇವೇಷು ಕಲಿರ್ದ್ವಾಪರಮಬ್ರವೀತ್|

03055012c ಸಂಹರ್ತುಂ ನೋತ್ಸಹೇ ಕೋಪಂ ನಲೇ ವತ್ಸ್ಯಾಮಿ ದ್ವಾಪರ||

ದೇವತೆಗಳು ಹೋದನಂತರ ಕಲಿಯು ದ್ವಾಪರನಿಗೆ ಹೇಳಿದನು: “ನನ್ನ ಕೋಪವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ದ್ವಾಪರ! ನಲನನ್ನು ಹಿಡಿಯುತ್ತೇನೆ.

03055013a ಭ್ರಂಶಯಿಷ್ಯಾಮಿ ತಂ ರಾಜ್ಯಾನ್ನ ಭೈಮ್ಯಾ ಸಹ ರಂಸ್ಯತೇ|

03055013c ತ್ವಮಪ್ಯಕ್ಷಾನ್ಸಮಾವಿಶ್ಯ ಕರ್ತುಂ ಸಾಹಾಯ್ಯಮರ್ಹಸಿ||

ಅವನನ್ನು ರಾಜ್ಯಭ್ರಂಶನನ್ನಾಗಿ ಮಾಡುತ್ತೇನೆ; ಮತ್ತು ಅವನು ಭೈಮಿಯ ಜೊತೆ ರಮಿಸದಂತೆ ಮಾಡುತ್ತೇನೆ. ನೀನು ದಾಳಗಳನ್ನು ಪ್ರವೇಶಿಸಿ ನನಗೆ ಸಹಾಯವನ್ನು ಮಾಡಬೇಕು.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಕಲಿದೇವಸಂವಾದೇ ಪಂಚಪಂಚಾಶತ್ತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಕಲಿದೇವಸಂವಾದ ಎನ್ನುವ ಐವತ್ತೈದನೆಯ ಅಧ್ಯಾಯವು.

Image result for indian motifs hansa

Comments are closed.