ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೫೩
ದೇವತೆಗಳ ಸನ್ನಿಧಿಯಲ್ಲಿಯೇ ನಿನ್ನನ್ನು ವರಿಸುತ್ತೇನೆಂದು ದಮಯಂತಿಯು ಹೇಳಲು (೧-೧೨) ನಲನು ದೇವತೆಗಳಲ್ಲಿದ್ದಲ್ಲಿಗೆ ಬಂದು ತಿಳಿಸಿದುದು (೧೩-೨೧).
03053001 ಬೃಹದಶ್ವ ಉವಾಚ|
03053001a ಸಾ ನಮಸ್ಕೃತ್ಯ ದೇವೇಭ್ಯಃ ಪ್ರಹಸ್ಯ ನಲಮಬ್ರವೀತ್|
03053001c ಪ್ರಣಯಸ್ವ ಯಥಾಶ್ರದ್ಧಂ ರಾಜನ್ಕಿಂ ಕರವಾಣಿ ತೇ||
ಬೃಹದಶ್ವನು ಹೇಳಿದನು:“ಆ ದೇವತೆಗಳಿಗೆ ನಮಸ್ಕರಿಸಿ, ಅವಳು ಮುಗುಳ್ನಗುತ್ತಾ ನಲನಿಗೆ ಹೇಳಿದಳು: “ರಾಜ! ನಿನ್ನ ಉದ್ದೇಶಗಳನ್ನು ಯಥಾವತ್ತಾಗಿ ಹೇಳು. ನಿನಗೆ ನನ್ನಿಂದ ಏನಾಗಬೇಕು?
03053002a ಅಹಂ ಚೈವ ಹಿ ಯಚ್ಚಾನ್ಯನ್ಮಮಾಸ್ತಿ ವಸು ಕಿಂ ಚನ|
03053002c ಸರ್ವಂ ತತ್ತವ ವಿಶ್ರಬ್ಧಂ ಕುರು ಪ್ರಣಯಮೀಶ್ವರ||
ನಾನು ಮತ್ತು ನನ್ನಲ್ಲಿರುವ ಎಲ್ಲವೂ ನಿನ್ನದೇ ಅಲ್ಲವೇ? ಈಶ್ವರ! ನಿನ್ನ ಇಚ್ಛೆಯನ್ನು ವಿಶ್ವಾಸದಿಂದ ಬಹಿರಂಗಪಡಿಸು.
03053003a ಹಂಸಾನಾಂ ವಚನಂ ಯತ್ತತ್ತನ್ಮಾಂ ದಹತಿ ಪಾರ್ಥಿವ|
03053003c ತ್ವತ್ಕೃತೇ ಹಿ ಮಯಾ ವೀರ ರಾಜಾನಃ ಸಂನಿಪಾತಿತಾಃ||
ಹಂಸಗಳ ವಚನಗಳು ನನ್ನ ದೇಹವನ್ನು ದಹಿಸುತ್ತಿವೆ ಪಾರ್ಥಿವ! ವೀರ! ನಿನಗೋಸ್ಕರವೇ ನಾನು ಈ ರಾಜರುಗಳನ್ನೆಲ್ಲಾ ಒಟ್ಟು ಸೇರಿಸಿದ್ದೇನೆ.
03053004a ಯದಿ ಚೇದ್ಭಜಮಾನಾಂ ಮಾಂ ಪ್ರತ್ಯಾಖ್ಯಾಸ್ಯಸಿ ಮಾನದ|
03053004c ವಿಷಮಗ್ನಿಂ ಜಲಂ ರಜ್ಜುಮಾಸ್ಥಾಸ್ಯೇ ತವ ಕಾರಣಾತ್||
ಮಾನದ! ನಿನ್ನನ್ನು ಪ್ರೀತಿಸುತ್ತಿದ್ದ ನನ್ನನ್ನು ನೀನು ತಿರಸ್ಕರಿಸಿದರೆ ನಾನು ನಿನ್ನ ಕಾರಣದಿಂದಾಗಿ ವಿಷವನ್ನೋ, ಅಗ್ನಿಯನೋ, ಜಲವನ್ನೋ ಅಥವಾ ನೇಣನ್ನೋ ಮೊರೆಹೊಗುತ್ತೇನೆ[1].”
03053005a ಏವಮುಕ್ತಸ್ತು ವೈದರ್ಭ್ಯಾ ನಲಸ್ತಾಂ ಪ್ರತ್ಯುವಾಚ ಹ|
03053005c ತಿಷ್ಠತ್ಸು ಲೋಕಪಾಲೇಷು ಕಥಂ ಮಾನುಷಮಿಚ್ಚಸಿ||
ವೈದರ್ಭಿಯ ಈ ಮಾತುಗಳಿಗೆ ನಲನು ಉತ್ತರಿಸಿದನು: “ಲೋಕಪಾಲಕರೇ ಇರುವಾಗ ನೀನು ಮನುಷ್ಯನನ್ನು ಹೇಗೆ ಇಚ್ಛಿಸುತ್ತೀಯೆ?
03053006a ಯೇಷಾಮಹಂ ಲೋಕಕೃತಾಮೀಶ್ವರಾಣಾಂ ಮಹಾತ್ಮನಾಂ|
03053006c ನ ಪಾದರಜಸಾ ತುಲ್ಯೋ ಮನಸ್ತೇ ತೇಷು ವರ್ತತಾಂ||
ನಾನು ಆ ಮಹಾತ್ಮ ಲೋಕಕೃತ ಈಶ್ವರರ ಪಾದಧೂಳಿಗೂ ಸಮನಲ್ಲ. ನಿನ್ನ ಮನಸ್ಸನ್ನು ಅವರೆಡೆಗೇ ಒಲಿಯಿಸು.
03053007a ವಿಪ್ರಿಯಂ ಹ್ಯಾಚರನ್ಮರ್ತ್ಯೋ ದೇವಾನಾಂ ಮೃತ್ಯುಮೃಚ್ಚತಿ|
03053007c ತ್ರಾಹಿ ಮಾಮನವದ್ಯಾಂಗಿ ವರಯಸ್ವ ಸುರೋತ್ತಮಾನ್||
ದೇವತೆಗಳಿಗೆ ಅಪ್ರಿಯವಾಗಿ ನಡೆದುಕೊಂಡ ಮರ್ತ್ಯನಿಗೆ ಮೃತ್ಯುವೇ ಗತಿ. ಅನವದ್ಯಾಂಗೀ! ಸುರೋತ್ತಮರನ್ನು ವರಿಸಿ ನನ್ನನ್ನು ರಕ್ಷಿಸು.”
03053008a ತತೋ ಬಾಷ್ಪಕಲಾಂ ವಾಚಂ ದಮಯಂತೀ ಶುಚಿಸ್ಮಿತಾ|
03053008c ಪ್ರವ್ಯಾಹರಂತೀ ಶನಕೈರ್ನಲಂ ರಾಜಾನಮಬ್ರವೀತ್||
ಆಗ ಶುಚಿಸ್ಮಿತೆ ದಮಯಂತಿಯು ಬಾಷ್ಪಗಳಿಂದೊಡಗೂಡಿದ ಮಾತಿನಿಂದ ನಿಧಾನವಾಗಿ ರಾಜನಿಗೆ ಉತ್ತರಿಸಿದಳು.
03053009a ಅಸ್ತ್ಯುಪಾಯೋ ಮಯಾ ದೃಷ್ಟೋ ನಿರಪಾಯೋ ನರೇಶ್ವರ|
03053009c ಯೇನ ದೋಷೋ ನ ಭವಿತಾ ತವ ರಾಜನ್ಕಥಂ ಚನ||
“ನರೇಶ್ವರ! ನನ್ನ ದೃಷ್ಟಿಯಲ್ಲಿ ಅಪಾಯವಿಲ್ಲದಂತಹ ಒಂದು ಉಪಾಯವಿದೆ. ರಾಜ! ಇದರಿಂದ ನಿನಗೆ ಯಾವುದೇರೀತಿಯ ದೋಷವೂ ಬರುವುದಿಲ್ಲ.
03053010a ತ್ವಂ ಚೈವ ಹಿ ನರಶ್ರೇಷ್ಠ ದೇವಾಶ್ಚಾಗ್ನಿಪುರೋಗಮಾಃ|
03053010c ಆಯಾಂತು ಸಹಿತಾಃ ಸರ್ವೇ ಮಮ ಯತ್ರ ಸ್ವಯಂವರಃ||
ನರೇಶ್ವರ! ಅಗ್ನಿಪುರೋಗಮ ದೇವತೆಗಳನ್ನೂ ಸೇರಿಕೊಂಡು ನೀವೆಲ್ಲರೂ ನನ್ನ ಸ್ವಯಂವರಕ್ಕೆ ಬರಬೇಕು.
03053011a ತತೋಽಹಂ ಲೋಕಪಾಲಾನಾಂ ಸನ್ನಿಧೌ ತ್ವಾಂ ನರೇಶ್ವರ|
03053011c ವರಯಿಷ್ಯೇ ನರವ್ಯಾಘ್ರ ನೈವಂ ದೋಷೋ ಭವಿಷ್ಯತಿ||
ನರೇಶ್ವರ! ಆಗ ನಾನು ಲೋಕಪಾಲಕರ ಸನ್ನಿಧಿಯಲ್ಲಿಯೇ ನಿನ್ನನ್ನು ವರಿಸುತ್ತೇನೆ. ನರವ್ಯಾಘ್ರ! ಈ ರೀತಿ ನಿನಗೆ ಯಾವ ದೋಷವೂ ಬರುವುದಿಲ್ಲ.”
03053012a ಏವಮುಕ್ತಸ್ತು ವೈದರ್ಭ್ಯಾ ನಲೋ ರಾಜಾ ವಿಶಾಂ ಪತೇ|
03053012c ಆಜಗಾಮ ಪುನಸ್ತತ್ರ ಯತ್ರ ದೇವಾಃ ಸಮಾಗತಾಃ||
ವಿಶಾಂಪತೇ! ವೈದರ್ಭಿಯು ಈ ರೀತಿ ಹೇಳಲು, ರಾಜ ನಲನು ಪುನಃ ದೇವತೆಗಳು ಎಲ್ಲಿ ಸಮಾಗತರಾಗಿದ್ದರೋ ಅಲ್ಲಿಗೆ ಮರಳಿದನು.
03053013a ತಮಪಶ್ಯಂಸ್ತಥಾಯಾಂತಂ ಲೋಕಪಾಲಾಃ ಸಹೇಶ್ವರಾಃ|
03053013c ದೃಷ್ಟ್ವಾ ಚೈನಂ ತತೋಽಪೃಚ್ಚನ್ವೃತ್ತಾಂತಂ ಸರ್ವಮೇವ ತತ್||
ಅಲ್ಲಿಗೆ ಅವನು ಬರುತ್ತಿರುವುದನ್ನು ಈಶ್ವರನೂ ಸಹಿತ ಲೋಕಪಾಲಕರು ನೋಡಿ ಸರ್ವ ವೃತ್ತಾಂತವನ್ನೂ ಕೇಳಿದರು.
03053014 ದೇವಾ ಊಚುಃ|
03053014a ಕಚ್ಚಿದ್ದೃಷ್ಟಾ ತ್ವಯಾ ರಾಜನ್ದಮಯಂತೀ ಶುಚಿಸ್ಮಿತಾ|
03053014c ಕಿಮಬ್ರವೀಚ್ಚ ನಃ ಸರ್ವಾನ್ವದ ಭೂಮಿಪತೇಽನಘ||
ದೇವತೆಗಳು ಹೇಳಿದರು: “ರಾಜ! ನೀನು ಶುಚಿಸ್ಮಿತೆ ದಮಯಂತಿಯನ್ನು ನೋಡಿದೆಯಾ? ಅನಘ! ಭೂಮಿಪತೇ! ನಮಗೆಲ್ಲರಿಗೆ ಅವಳು ಏನು ಹೇಳಿದಳು ಹೇಳು.”
03053015 ನಲ ಉವಾಚ|
03053015a ಭವದ್ಭಿರಹಮಾದಿಷ್ಟೋ ದಮಯಂತ್ಯಾ ನಿವೇಶನಂ|
03053015c ಪ್ರವಿಷ್ಟಃ ಸುಮಹಾಕಕ್ಷ್ಯಂ ದಂಡಿಭಿಃ ಸ್ಥವಿರೈರ್ವೃತಂ||
ನಲನು ಹೇಳಿದನು: “ನಿಮ್ಮೆಲ್ಲರ ಆದೇಶದಂತೆ ಎತ್ತರ ಗೋಡೆಗಳಿಂದ ಮತ್ತು ದಂಡಪಾಣಿ ಕಾವಲುಗಾರರಿಂದ ಆವೃತ ದಮಯಂತಿಯ ನಿವೇಶನವನ್ನು ಪ್ರವೇಶಿಸಿದೆನು.
03053016a ಪ್ರವಿಶಂತಂ ಚ ಮಾಂ ತತ್ರ ನ ಕಶ್ಚಿದ್ದೃಷ್ಟವಾನ್ನರಃ|
03053016c ಋತೇ ತಾಂ ಪಾರ್ಥಿವಸುತಾಂ ಭವತಾಮೇವ ತೇಜಸಾ||
ಆದರೆ ನಿಮ್ಮ ತೇಜಸ್ಸಿನ ಪ್ರಭಾವದಿಂದ ಆ ಪಾರ್ಥಿವಸುತೆಯನ್ನು ಬಿಟ್ಟು ಬೇರೆ ಯಾರೂ ನಾನು ಪ್ರವೇಶಿಸುವುದನ್ನು ನೋಡಲಿಲ್ಲ.
03053017a ಸಖ್ಯಶ್ಚಾಸ್ಯಾ ಮಯಾ ದೃಷ್ಟಾಸ್ತಾಭಿಶ್ಚಾಪ್ಯುಪಲಕ್ಷಿತಃ|
03053017c ವಿಸ್ಮಿತಾಶ್ಚಾಭವನ್ದೃಷ್ಟ್ವಾ ಸರ್ವಾ ಮಾಂ ವಿಬುಧೇಶ್ವರಾಃ||
ನಾನು ಅವಳ ಸಖಿಯರನ್ನು ನೋಡಿದೆ, ಅವರೂ ನನ್ನನ್ನು ನೋಡಿದರು. ವಿಬುಧೇಶ್ವರರೇ! ನನ್ನನ್ನು ನೋಡಿ ಅವರೆಲ್ಲರೂ ವಿಸ್ಮಿತರಾದರು.
03053018a ವರ್ಣ್ಯಮಾನೇಷು ಚ ಮಯಾ ಭವತ್ಸು ರುಚಿರಾನನಾ|
03053018c ಮಾಮೇವ ಗತಸಂಕಲ್ಪಾ ವೃಣೀತೇ ಸುರಸತ್ತಮಾಃ||
ನಿಮ್ಮ ಕುರಿತು ನಾನು ಆ ರುಚಿರಾನನೆಗೆ ಹೇಳಿದೆ. ಆದರೆ, ಸುರಸತ್ತಮರೇ! ಅವಳಿಗೆ ನನ್ನ ಮೇಲೆಯೇ ಸಂಕಲ್ಪವಿದೆ ಎಂದು ಹೇಳಿದಳು.
03053019a ಅಬ್ರವೀಚ್ಚೈವ ಮಾಂ ಬಾಲಾ ಆಯಾಂತು ಸಹಿತಾಃ ಸುರಾಃ|
03053019c ತ್ವಯಾ ಸಹ ನರಶ್ರೇಷ್ಠ ಮಮ ಯತ್ರ ಸ್ವಯಂವರಃ||
“ನರಶ್ರೇಷ್ಠ! ನಿನ್ನ ಜೊತೆಗೆ ಸುರರೂ ಕೂಡ ನನ್ನ ಸ್ವಯಂವರಕ್ಕೆ ಬರಲಿ!” ಎಂದು ಆ ಬಾಲೆಯು ನನಗೆ ಹೇಳಿದಳು.
03053020a ತೇಷಾಮಹಂ ಸನ್ನಿಧೌ ತ್ವಾಂ ವರಯಿಷ್ಯೇ ನರೋತ್ತಮ|
03053020c ಏವಂ ತವ ಮಹಾಬಾಹೋ ದೋಷೋ ನ ಭವಿತೇತಿ ಹ||
“ನರೋತ್ತಮ! ಅವರ ಸನ್ನಿಧಿಯಲ್ಲಿಯೇ ನಿನ್ನನ್ನು ವರಿಸುತ್ತೇನೆ. ಮಹಾಬಾಹು! ಈ ರೀತಿ ನಿನಗೆ ಯಾವುದೇ ದೋಷವೂ ಬರುವುದಿಲ್ಲ.”
03053021a ಏತಾವದೇವ ವಿಬುಧಾ ಯಥಾವೃತ್ತಮುದಾಹೃತಂ|
03053021c ಮಯಾಶೇಷಂ ಪ್ರಮಾಣಂ ತು ಭವಂತಸ್ತ್ರಿದಶೇಶ್ವರಾಃ||
ತ್ರಿದಶೇಶ್ವರರೇ! ಅಲ್ಲಿ ನಡೆದಿದ್ದನ್ನು ಯಥಾವತ್ತಾಗಿ ನಾನು ನಿಮಗೆ ತಿಳಿಸಿದ್ದೇನೆ. ಇನ್ನು ನಿಮಗೆ ತಿಳಿದಹಾಗೆ ಮಾಡಿ.””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲಕರ್ತುಕದೇವದೌತ್ಯೇ ತ್ರಿಪಂಚಾಶತ್ತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲಕರ್ತುಕದೇವದೌತ್ಯ ಎನ್ನುವ ಐವತ್ತ್ಮೂರನೆಯ ಅಧ್ಯಾಯವು.

[1]ಇಲ್ಲಿ ವಿಷ, ಅಗ್ನಿ, ಜಲ ಮತ್ತು ನೇಣು ಇವು ಆತ್ಮಹತ್ಯೆಯ ನಾಲ್ಕು ವಿಧಗಳಾದರೂ, ನಾಲ್ವರು ಲೋಕಪಾಲಕರನ್ನು, ಕ್ರಮವಾಗಿ, ಶಕ್ರ, ಅಗ್ನಿ, ವರುಣ ಮತ್ತು ಯಮರನ್ನು ಸಾಂಕೀತಿಸುತ್ತವೆ.