Aranyaka Parva: Chapter 297

ಆರಣ್ಯಕ ಪರ್ವ: ಆರಣೇಯ ಪರ್ವ

೨೯೭

ಯಕ್ಷಪ್ರಶ್ನೆ

ಯುಧಿಷ್ಠಿರನು ನೀರುಕುಡಿಯಲು ಹೋದಾಗ ಸರೋವರದಲ್ಲಿದ್ದ ಯಕ್ಷನು ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ಕುಡಿಯಲು ಹೇಳಿದುದು (೧-೧೨). ಪ್ರಶ್ನೆಗಳೇನೆಂದು ಯುಧಿಷ್ಠಿರನು ಕೇಳುವುದು (೧೩-೨೫). ಯಕ್ಷನ ಪ್ರಶ್ನೆಗಳಿಗೆ ಯುಧಿಷ್ಠಿರನು ಉತ್ತರಿಸಿದುದು (೨೬-೬೪). ಯಕ್ಷನು ಯುಧಿಷ್ಠಿರನ ತಮ್ಮಂದಿರನ್ನು ಬದುಕಿಸಿದುದು (೬೫-೭೪).

03297001 ವೈಶಂಪಾಯನ ಉವಾಚ|

03297001a ಸ ದದರ್ಶ ಹತಾನ್ಭ್ರಾತೄನ್ಲೋಕಪಾಲಾನಿವ ಚ್ಯುತಾನ್|

03297001c ಯುಗಾಂತೇ ಸಮನುಪ್ರಾಪ್ತೇ ಶಕ್ರಪ್ರತಿಮಗೌರವಾನ್||

ವೈಶಂಪಾಯನನು ಹೇಳಿದನು: “ಅಲ್ಲಿ ಅವನು ಶಕ್ರನಂತೆ ಗೌರವದಿಂದಿರುವ, ಯುಗಾಂತದಲ್ಲಿ ಕೆಳಗುರುಳಿಬಿದ್ದ ಲೋಕಪಾಲಕರಂತೆ ಹತರಾಗಿದ್ದ, ತಮ್ಮಂದಿರನ್ನು ನೋಡಿದನು.

03297002a ವಿಪ್ರಕೀರ್ಣಧನುರ್ಬಾಣಂ ದೃಷ್ಟ್ವಾ ನಿಹತಮರ್ಜುನಂ|

03297002c ಭೀಮಸೇನಂ ಯಮೌ ಚೋಭೌ ನಿರ್ವಿಚೇಷ್ಟಾನ್ಗತಾಯುಷಃ||

03297003a ಸ ದೀರ್ಘಮುಷ್ಣಂ ನಿಃಶ್ವಸ್ಯ ಶೋಕಬಾಷ್ಪಪರಿಪ್ಲುತಃ|

ಧನುರ್ಬಾಣಗಳು ಚೆಲ್ಲಿ ನಿಹತನಾಗಿದ್ದ ಅರ್ಜುನನನ್ನು, ಭೀಮಸೇನ ಮತ್ತು ಯಮಳರಿಬ್ಬರೂ ಆಯುಷ್ಯವನ್ನು ಕಳೆದುಕೊಂಡು ನಿರ್ವಿಚೇಷ್ಟರಾಗಿರುವುದನ್ನು ನೋಡಿ ಅವನು ದೀರ್ಘ ಬಿಸಿ‌ಉಸಿರನ್ನು ಬಿಟ್ಟು, ಕಣ್ಣೀರಿನಿಂದ ತುಂಬಿದವನಾಗಿ ಶೋಕಿಸಿದನು.

03297003c ಬುದ್ಧ್ಯಾ ವಿಚಿಂತಯಾಮಾಸ ವೀರಾಃ ಕೇನ ನಿಪಾತಿತಾಃ||

03297004a ನೈಷಾಂ ಶಸ್ತ್ರಪ್ರಹಾರೋಽಸ್ತಿ ಪದಂ ನೇಹಾಸ್ತಿ ಕಸ್ಯ ಚಿತ್|

“ಈ ವೀರರು ಯಾರಿಂದ ಕೆಳಗುರುಳಿಸಲ್ಪಟ್ಟರು?” ಎಂದು ಬುದ್ಧಿಯಿಂದ ಚಿಂತಿಸತೊಡಗಿದನು. “ಇಲ್ಲಿ ಏನೂ ಶಸ್ತ್ರಪ್ರಹಾರವಾಗಿಲ್ಲ. ಯಾರ ಹೆಜ್ಜೆಯೂ ಇಲ್ಲಿ ಕಾಣಿಸುತ್ತಿಲ್ಲ.

03297004c ಭೂತಂ ಮಹದಿದಂ ಮನ್ಯೇ ಭ್ರಾತರೋ ಯೇನ ಮೇ ಹತಾಃ||

03297004e ಏಕಾಗ್ರಂ ಚಿಂತಯಿಷ್ಯಾಮಿ ಪೀತ್ವಾ ವೇತ್ಸ್ಯಾಮಿ ವಾ ಜಲಂ||

ನನ್ನ ಈ ತಮ್ಮಂದಿರನ್ನು ಕೊಂದಿರುವುದು ಒಂದು ಮಹಾಭೂತವೆಂದು ನನಗನ್ನಿಸುತ್ತದೆ. ಈ ನೀರನ್ನು ಕುಡಿದ ನಂತರ ಏಕಾಗ್ರಚಿತ್ತದಿಂದ ಯೋಚಿಸುತ್ತೇನೆ.

03297005a ಸ್ಯಾತ್ತು ದುರ್ಯೋಧನೇನೇದಮುಪಾಂಶುವಿಹಿತಂ ಕೃತಂ|

03297005c ಗಾಂಧಾರರಾಜರಚಿತಂ ಸತತಂ ಜಿಹ್ಮಬುದ್ಧಿನಾ||

ಅಥವಾ ಇದು ಸತತವೂ ಕೆಟ್ಟಬುದ್ಧಿಯ ಗಾಂಧಾರರಾಜನು ದುರ್ಯೋಧನನ ಆದೇಶದಂತೆ ನಡೆಸಿದ ಕೆಲಸವಿರಬಹುದೇ?

03297006a ಯಸ್ಯ ಕಾರ್ಯಮಕಾರ್ಯಂ ವಾ ಸಮಮೇವ ಭವತ್ಯುತ|

03297006c ಕಸ್ತಸ್ಯ ವಿಶ್ವಸೇದ್ವೀರೋ ದುರ್ಮತೇರಕೃತಾತ್ಮನಃ||

ಕಾರ್ಯ ಅಕಾರ್ಯಗಳನ್ನು ಸಮವೆಂದೇ ತಿಳಿದಿರುವ ಯಾರ ಮೇಲೆ ತಾನೇ ದುರ್ಮತಿ ಅಕೃತಾತ್ಮ ವೀರನು ವಿಶ್ವಾಸವನ್ನಿಡುತ್ತಾನೆ?

03297007a ಅಥ ವಾ ಪುರುಷೈರ್ಗೂಢೈಃ ಪ್ರಯೋಗೋಽಯಂ ದುರಾತ್ಮನಃ|

03297007c ಭವೇದಿತಿ ಮಹಾಬಾಹುರ್ಬಹುಧಾ ಸಮಚಿಂತಯತ್||

ಅಥವಾ ಇದು ದುರಾತ್ಮ ಪುರುಷರ ಗೂಢ ಪ್ರಯೋಗವಿರಬಹುದೇ?” ಹೀಗೆ ಆ ಮಹಾಬಾಹುವು ಬಹುವಿಧದಲ್ಲಿ ಚಿಂತಿಸಿದನು.

03297008a ತಸ್ಯಾಸೀನ್ನ ವಿಷೇಣೇದಮುದಕಂ ದೂಷಿತಂ ಯಥಾ|

03297008c ಮುಖವರ್ಣಾಃ ಪ್ರಸನ್ನಾ ಮೇ ಭ್ರಾತೄಣಾಮಿತ್ಯಚಿಂತಯತ್||

“ನನ್ನ ತಮ್ಮಂದಿರ ಮುಖವರ್ಣವು ಪ್ರಸನ್ನವಾಗಿಯೇ ಇದ್ದುದರಿಂದ ಈ ನೀರು ವಿಷದಿಂದ ದೂಷಿತವಾಗಿರಲಿಕ್ಕಿಲ್ಲ” ಎಂದೂ ಯೋಚಿಸಿದನು.

03297009a ಏಕೈಕಶಶ್ಚೌಘಬಲಾನಿಮಾನ್ಪುರುಷಸತ್ತಮಾನ್|

03297009c ಕೋಽನ್ಯಃ ಪ್ರತಿಸಮಾಸೇತ ಕಾಲಾಂತಕಯಮಾದೃತೇ||

“ಯಮನಲ್ಲದೇ ಇನ್ನ್ಯಾರು ಈ ಮಹಾಬಲಶಾಲಿ ಪುರುಷಸತ್ತಮರನ್ನು ಒಬ್ಬೊಬ್ಬರನ್ನೇ ಅಲೆಗಳಂತೆ ಹೊಡೆದು ಉರುಳಿಸಿದ್ದಾರು?”

03297010a ಏತೇನಾಧ್ಯವಸಾಯೇನ ತತ್ತೋಯಮವಗಾಢವಾನ್|

03297010c ಗಾಹಮಾನಶ್ಚ ತತ್ತೋಯಮಂತರಿಕ್ಷಾತ್ಸ ಶುಶ್ರುವೇ||

ಹೀಗೆ ನಿರ್ಧರಿಸಿದ ಅವನು ಆ ನೀರಿನ ಬಳಿಹೋಗಿ ನೀರನ್ನು ತೆಗೆದುಕೊಳ್ಳಲು, ಅಂತರಿಕ್ಷದಿಂದ ಕೇಳಿದನು.

03297011 ಯಕ್ಷ ಉವಾಚ|

03297011a ಅಹಂ ಬಕಃ ಶೈವಲಮತ್ಸ್ಯಭಕ್ಷೋ|

        ಮಯಾ ನೀತಾಃ ಪ್ರೇತವಶಂ ತವಾನುಜಾಃ|

03297011c ತ್ವಂ ಪಂಚಮೋ ಭವಿತಾ ರಾಜಪುತ್ರ|

        ನ ಚೇತ್ ಪ್ರಶ್ನಾನ್ ಪೃಚ್ಚತೋ ವ್ಯಾಕರೋಷಿ||

ಯಕ್ಷನು ಹೇಳಿದನು: “ಶೈವಲ ಮತ್ತು ಮೀನುಗಳನ್ನು ತಿನ್ನುವ ಬಕನು ನಾನು. ನಿನ್ನ ತಮ್ಮಂದಿರು ನನ್ನಿಂದಲೇ ಪ್ರೇತವಶವನ್ನು ಪಡೆದಿದ್ದಾರೆ. ರಾಜಪುತ್ರ! ನಾನು ಕೇಳುವ ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಡದೇ ಇದ್ದರೆ ನೀನು ಐದನೆಯವನಾಗುತ್ತೀಯೆ.

03297012a ಮಾ ತಾತ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ|

03297012c ಪ್ರಶ್ನಾನುಕ್ತ್ವಾ ತು ಕೌಂತೇಯ ತತಃ ಪಿಬ ಹರಸ್ವ ಚ||

ಮಗೂ! ಸಾಹಸವನ್ನು ಮಾಡಬೇಡ. ಇದು ನನ್ನ ಪೂರ್ವಪರಿಗ್ರಹ. ಕೌಂತೇಯ! ಪ್ರಶ್ನೆಗಳಿಗೆ ಉತ್ತರಿಸಿ ನೀರನ್ನು ಹಿಡಿದು ಕುಡಿ.”

03297013 ಯುಧಿಷ್ಠಿರ ಉವಾಚ|

03297013a ರುದ್ರಾಣಾಂ ವಾ ವಸೂನಾಂ ವಾ ಮರುತಾಂ ವಾ ಪ್ರಧಾನಭಾಕ್|

03297013c ಪೃಚ್ಚಾಮಿ ಕೋ ಭವಾನ್ದೇವೋ ನೈತಚ್ಚಕುನಿನಾ ಕೃತಂ||

ಯುಧಿಷ್ಠಿರನು ಹೇಳಿದನು: “ನಾನು ಕೇಳುತ್ತಿದ್ದೇನೆ - ನೀನು ಯಾರು? ರುದ್ರರ, ವಸುಗಳ ಅಥವಾ ಮರುತರ ನಾಯಕನೋ? ಅಥವಾ ದೇವನೋ? ಇದು ಪಕ್ಷಿಯ ಕೃತ್ಯವಲ್ಲ!

03297014a ಹಿಮವಾನ್ಪಾರಿಯಾತ್ರಶ್ಚ ವಿಂಧ್ಯೋ ಮಲಯ ಏವ ಚ|

03297014c ಚತ್ವಾರಃ ಪರ್ವತಾಃ ಕೇನ ಪಾತಿತಾ ಭುವಿ ತೇಜಸಾ||

ಯಾರು ತನ್ನ ತೇಜಸ್ಸಿನಿಂದ ನಾಲ್ಕು ಪರ್ವತಗಳನ್ನು ಹಿಮಾಲಯ, ಪಾರಿಯಾತ್ರ, ವಿಂಧ್ಯ ಮತ್ತು ಮಲಯಗಳನ್ನು ಕೆಳಗುರುಳಿಸಿದ್ದಾನೆ?

03297015a ಅತೀವ ತೇ ಮಹತ್ಕರ್ಮ ಕೃತಂ ಬಲವತಾಂ ವರ|

03297015c ಯನ್ನ ದೇವಾ ನ ಗಂಧರ್ವಾ ನಾಸುರಾ ನ ಚ ರಾಕ್ಷಸಾಃ|

03297015e ವಿಷಹೇರನ್ಮಹಾಯುದ್ಧೇ ಕೃತಂ ತೇ ತನ್ಮಹಾದ್ಭುತಂ||

ಬಲವಂತರಲ್ಲಿ ಶ್ರೇಷ್ಠನೇ! ನೀನು ಅತೀವ ಮಹತ್ಕಾರ್ಯವನ್ನು ಮಾಡಿದ್ದೀಯೆ. ದೇವತೆಗಳೂ, ಗಂಧರ್ವರೂ, ಅಸುರರೂ, ರಾಕ್ಷಸರೂ ಮಾಡಲಾಗದ ಮಹಾದ್ಭುತವನ್ನು ನೀನು ಮಾಡಿದ್ದೀಯೆ.

03297016a ನ ತೇ ಜಾನಾಮಿ ಯತ್ಕಾರ್ಯಂ ನಾಭಿಜಾನಾಮಿ ಕಾಂಕ್ಷಿತಂ|

03297016c ಕೌತೂಹಲಂ ಮಹಜ್ಜಾತಂ ಸಾಧ್ವಸಂ ಚಾಗತಂ ಮಮ||

ನಾನು ನಿನ್ನ ಕಾರ್ಯವನ್ನು ತಿಳಿದಿಲ್ಲ. ನಿನ್ನ ಇಂಗಿತವನ್ನು ತಿಳಿದಿಲ್ಲ. ಮಹಾ ಕುತೂಹಲವು ನನ್ನಲ್ಲಿ ಹುಟ್ಟಿದೆ ಮತ್ತು ಮಹಾ ಉದ್ವೇಗವು ನನಗಾಗಿದೆ.

03297017a ಯೇನಾಸ್ಮ್ಯುದ್ವಿಗ್ನಹೃದಯಃ ಸಮುತ್ಪನ್ನಶಿರೋಜ್ವರಃ|

03297017c ಪೃಚ್ಚಾಮಿ ಭಗವಂಸ್ತಸ್ಮಾತ್ಕೋ ಭವಾನಿಹ ತಿಷ್ಠತಿ||

ಯಾರಿಂದ ಈ ರೀತಿ ಉದ್ವಿಗ್ನಹೃದಯನಾಗಿದ್ದೇನೋ ಮತ್ತು ತಲೆಯಲ್ಲಿ ಜ್ವರವು ಉಂಟಾಗಿದೆಯೋ ಆ ಭಗವಾನನಲ್ಲಿ ಕೇಳುತ್ತಿದ್ದೇನೆ. ಇಲ್ಲಿ ನಿಂತಿರುವವನು ಯಾರು?”

03297018 ಯಕ್ಷ ಉವಾಚ|

03297018a ಯಕ್ಷೋಽಹಮಸ್ಮಿ ಭದ್ರಂ ತೇ ನಾಸ್ಮಿ ಪಕ್ಷೀ ಜಲೇಚರಃ|

03297018c ಮಯೈತೇ ನಿಹತಾಃ ಸರ್ವೇ ಭ್ರಾತರಸ್ತೇ ಮಹೌಜಸಃ||

ಯಕ್ಷನು ಹೇಳಿದನು: “ನಿನಗೆ ಮಂಗಳವಾಗಲಿ! ನಾನು ಯಕ್ಷ. ಜಲಚರ ಪಕ್ಷಿಯಲ್ಲ. ನನ್ನಿಂದಲೇ ನಿನ್ನ ಈ ಮಹೌಜಸ ತಮ್ಮಂದಿರೆಲ್ಲರೂ ಹತರಾಗಿದ್ದಾರೆ.””

03297019 ವೈಶಂಪಾಯನ ಉವಾಚ|

03297019a ತತಸ್ತಾಮಶಿವಾಂ ಶ್ರುತ್ವಾ ವಾಚಂ ಸ ಪರುಷಾಕ್ಷರಾಂ|

03297019c ಯಕ್ಷಸ್ಯ ಬ್ರುವತೋ ರಾಜನ್ನುಪಕ್ರಮ್ಯ ತದಾ ಸ್ಥಿತಃ||

ವೈಶಂಪಾಯನನು ಹೇಳಿದನು: “ರಾಜನ್! ಯಕ್ಷನು ಹೇಳಿದ ಆ ಅಮಂಗಳ ಒರಟು ಮಾತನ್ನು ಕೇಳಿದ ಅವನು ಹತ್ತಿರ ಹೋದನು.

03297020a ವಿರೂಪಾಕ್ಷಂ ಮಹಾಕಾಯಂ ಯಕ್ಷಂ ತಾಲಸಮುಚ್ಚ್ರಯಂ|

03297020c ಜ್ವಲನಾರ್ಕಪ್ರತೀಕಾಶಮಧೃಷ್ಯಂ ಪರ್ವತೋಪಮಂ||

03297021a ಸೇತುಮಾಶ್ರಿತ್ಯ ತಿಷ್ಠಂತಂ ದದರ್ಶ ಭರತರ್ಷಭಃ|

03297021c ಮೇಘಗಂಭೀರಯಾ ವಾಚಾ ತರ್ಜಯಂತಂ ಮಹಾಬಲಂ||

ಆಗ ಆ ಭರತರ್ಷಭನು ಸೇತುವೆಯ ಮೇಲೆ ನಿಂತಿದ್ದ ವಿರೂಪಾಕ್ಷ, ತಾಳೆಯ ವೃಕ್ಷದಂತೆ ಮಹಾಕಾಯ, ಸುಡುತ್ತಿರುವ ಸೂರ್ಯನಂತಿರುವ, ಪರ್ವತೋಪಮವಾಗಿ ನಿಂತು ಅದೃಶ್ಯನಾಗಿ ಗುಡುಗಿನಂತೆ ಗಂಭೀರಧ್ವನಿಯಲ್ಲಿ ಮಾತನಾಡಿ ಹೆದರಿಕೆಯುನ್ನುಂಟುಮಾಡುತ್ತಿದ್ದ ಮಹಾಬಲನನ್ನು ನೋಡಿದನು.

03297022 ಯಕ್ಷ ಉವಾಚ|

03297022a ಇಮೇ ತೇ ಭ್ರಾತರೋ ರಾಜನ್ವಾರ್ಯಮಾಣಾ ಮಯಾಸಕೃತ್|

03297022c ಬಲಾತ್ತೋಯಂ ಜಿಹೀರ್ಷಂತಸ್ತತೋ ವೈ ಸೂದಿತಾ ಮಯಾ||

ಯಕ್ಷನು ಹೇಳಿದನು: “ರಾಜನ್! ನಾನು ಎಷ್ಟು ತಡೆದರೂ ನಿನ್ನ ಈ ತಮ್ಮಂದಿರು ಬಲವಂತವಾಗಿ ನೀರನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದುದರಿಂದ ನಾನು ಅವರನ್ನು ಮುಗಿಸಿದೆ.

03297023a ನ ಪೇಯಮುದಕಂ ರಾಜನ್ಪ್ರಾಣಾನಿಹ ಪರೀಪ್ಸತಾ|

03297023c ಪಾರ್ಥ ಮಾ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ|

03297023e ಪ್ರಶ್ನಾನುಕ್ತ್ವಾ ತು ಕೌಂತೇಯ ತತಃ ಪಿಬ ಹರಸ್ವ ಚ||

ರಾಜನ್! ಪ್ರಾಣದಿಂದ ಉಳಿಯಲು ಬಯಸುವ ಯಾರಿಗೂ ಈ ನೀರು ಕುಡಿಯಲಿಕ್ಕಿಲ್ಲ. ಪಾರ್ಥ! ನನ್ನ ಹಳೆಯ ಆಸ್ತಿಯಾದ ಇದರ ಮೇಲೆ ಸಾಹಸಮಾಡಬೇಡ. ಕೌಂತೇಯ! ನನ್ನ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಈ ನೀರನ್ನು ತೆಗೆದು ಕುಡಿಯಬಹುದು.”

03297024 ಯುಧಿಷ್ಠಿರ ಉವಾಚ|

03297024a ನೈವಾಹಂ ಕಾಮಯೇ ಯಕ್ಷ ತವ ಪೂರ್ವಪರಿಗ್ರಹಂ|

03297024c ಕಾಮಂ ನೈತತ್ಪ್ರಶಂಸಂತಿ ಸಂತೋ ಹಿ ಪುರುಷಾಃ ಸದಾ||

ಯುಧಿಷ್ಠಿರನು ಹೇಳಿದನು: “ಯಕ್ಷ! ನಾನು ನಿನ್ನ ಈ ಹಳೆಯ ಆಸ್ತಿಯನ್ನು ಉಲ್ಲಂಘಿಸಲು ಬಯಸುವುದಿಲ್ಲ. ಯಾಕೆಂದರೆ ಸಂತನು ಇದನ್ನು ಒಪ್ಪುವುದಿಲ್ಲ.

03297025a ಯದಾತ್ಮನಾ ಸ್ವಮಾತ್ಮಾನಂ ಪ್ರಶಂಸೇತ್ಪುರುಷಃ ಪ್ರಭೋ|

03297025c ಯಥಾಪ್ರಜ್ಞಂ ತು ತೇ ಪ್ರಶ್ನಾನ್ಪ್ರತಿವಕ್ಷ್ಯಾಮಿ ಪೃಚ್ಚ ಮಾಂ||

ಪ್ರಭೋ! ಪುರುಷನು ತನ್ನ ಆತ್ಮನಿಂದ ಆತ್ಮನಿಗೆ ಹೇಗೆ ಹೇಳಿಕೊಳ್ಳುತ್ತಾನೋ ಹಾಗೆ ನಿನ್ನ ಪ್ರಶ್ನೆಗಳಿಗೆ, ನನಗೆ ತಿಳಿದಹಾಗೆ, ಉತ್ತರಿಸುತ್ತೇನೆ. ನನ್ನನ್ನು ಕೇಳು.”

03297026 ಯಕ್ಷ ಉವಾಚ|

03297026a ಕಿಂ ಸ್ವಿದಾದಿತ್ಯಮುನ್ನಯತಿ ಕೇ ಚ ತಸ್ಯಾಭಿತಶ್ಚರಾಃ|

03297026c ಕಶ್ಚೈನಮಸ್ತಂ ನಯತಿ ಕಸ್ಮಿಂಶ್ಚ ಪ್ರತಿತಿಷ್ಠತಿ||

ಯಕ್ಷನು ಹೇಳಿದನು: “ಆದಿತ್ಯ[1]ನನ್ನು ಯಾವುದು ಉದಯಿಸುತ್ತದೆ ಮತ್ತು ಅವನೊಂದಿಗೆ ಸಂಚರಿಸುವವರು ಯಾರು? ಯಾವುದು ಅವನನ್ನು ಮುಳುಗಿಸುತ್ತದೆ ಮತ್ತು ಅವನು ಯಾವುದರ ಆಧಾರದ ಮೇಲಿದ್ದಾನೆ?”

03297027 ಯುಧಿಷ್ಠಿರ ಉವಾಚ|

03297027a ಬ್ರಹ್ಮಾದಿತ್ಯಮುನ್ನಯತಿ ದೇವಾಸ್ತಸ್ಯಾಭಿತಶ್ಚರಾಃ|

03297027c ಧರ್ಮಶ್ಚಾಸ್ತಂ ನಯತಿ ಚ ಸತ್ಯೇ ಚ ಪ್ರತಿತಿಷ್ಠತಿ||

ಯುಧಿಷ್ಠಿರನು ಹೇಳಿದನು: “ಬ್ರಹ್ಮ[2]ನು ಆದಿತ್ಯನನ್ನು ಉದಯಿಸುತ್ತಾನೆ. ದೇವತೆಗಳು ಅವನ ಅಭಿಚರರು. ಧರ್ಮವು ಅವನನ್ನು ಅಸ್ತಗೊಳಿಸುತ್ತದೆ ಮತ್ತು ಸತ್ಯದಲ್ಲಿ ಅವನು ಪ್ರತಿಷ್ಠಿತನಾಗಿದ್ದಾನೆ[3].”

03297028 ಯಕ್ಷ ಉವಾಚ|

03297028a ಕೇನ ಸ್ವಿಚ್ಚ್ರೋತ್ರಿಯೋ ಭವತಿ ಕೇನ ಸ್ವಿದ್ವಿಂದತೇ ಮಹತ್|

03297028c ಕೇನ ದ್ವಿತೀಯವಾನ್ಭವತಿ ರಾಜನ್ಕೇನ ಚ ಬುದ್ಧಿಮಾನ್||

ಯಕ್ಷನು ಹೇಳಿದನು: “ಯಾವುದರಿಂದ ಓರ್ವನು ಶ್ರೋತ್ರಿಯಾಗುತ್ತಾನೆ? ಯಾವುದರ ಮೂಲಕ ಓರ್ವನು ಮಹಾಗತಿಯನ್ನು ಪಡೆಯುತ್ತಾನೆ? ರಾಜನ್! ಯಾವುದರಿಂದ ಎರಡನೆಯದನ್ನು ಪಡೆಯುತ್ತಾನೆ ಮತ್ತು ಯಾವುದರಿಂದ ಓರ್ವನು ಬುದ್ಧಿವಂತನಾಗುತ್ತಾನೆ?”

03297029 ಯುಧಿಷ್ಠಿರ ಉವಾಚ|

03297029a ಶ್ರುತೇನ ಶ್ರೋತ್ರಿಯೋ ಭವತಿ ತಪಸಾ ವಿಂದತೇ ಮಹತ್|

03297029c ಧೃತ್ಯಾ ದ್ವಿತೀಯವಾನ್ಭವತಿ ಬುದ್ಧಿಮಾನ್ವೃದ್ಧಸೇವಯಾ||

ಯುಧಿಷ್ಠಿರನು ಹೇಳಿದನು: “ಶೃತಿಯಿಂದ ಶ್ರೋತ್ರನಾಗುತ್ತಾನೆ. ತಪಸ್ಸಿನಿಂದ ಮಹತ್ತನ್ನು ಪಡೆಯುತ್ತಾನೆ. ಧೃತಿಯಿಂದ ಎರಡನೆಯವನಾಗುತ್ತಾನೆ. ವೃದ್ಧರ ಸೇವೆಯಿಂದ ಬುದ್ಧಿವಂತನಾಗುತ್ತಾನೆ.”

03297030 ಯಕ್ಷ ಉವಾಚ|

03297030a ಕಿಂ ಬ್ರಾಹ್ಮಣಾನಾಂ ದೇವತ್ವಂ ಕಶ್ಚ ಧರ್ಮಃ ಸತಾಮಿವ|

03297030c ಕಶ್ಚೈಷಾಂ ಮಾನುಷೋ ಭಾವಃ ಕಿಮೇಷಾಮಸತಾಮಿವ||

ಯಕ್ಷನು ಹೇಳಿದನು: “ಬ್ರಾಹ್ಮಣರ ದೇವತ್ವವು ಯಾವುದು? ಸಂತರಿಗಿರುವಂತೆ ಅವರ ಧರ್ಮ ಯಾವುದು? ಅವರ ಮನುಷ್ಯತ್ವವೇನು? ಅಸಂತರಿಗಿರುವಂತೆ ಅವರಲ್ಲಿರುವುದು ಯಾವುದು?”

03297031 ಯುಧಿಷ್ಠಿರ ಉವಾಚ|

03297031a ಸ್ವಾಧ್ಯಾಯ ಏಷಾಂ ದೇವತ್ವಂ ತಪ ಏಷಾಂ ಸತಾಮಿವ|

03297031c ಮರಣಂ ಮಾನುಷೋ ಭಾವಃ ಪರಿವಾದೋಽಸತಾಮಿವ||

ಯುಧಿಷ್ಠಿರನು ಹೇಳಿದನು: “ಸ್ವಾಧ್ಯಾಯವು ಇವರ ದೇವತ್ವವು. ತಪಸ್ಸು ಇವರ ಸತ್ವ. ಮರಣವು ಇವರ ಮನುಷ್ಯ ಭಾವ ಮತ್ತು ಪರಿವಾದವು ಇವರ ಅಸತ್ವ.”

03297032 ಯಕ್ಷ ಉವಾಚ|

03297032a ಕಿಂ ಕ್ಷತ್ರಿಯಾಣಾಂ ದೇವತ್ವಂ ಕಶ್ಚ ಧರ್ಮಃ ಸತಾಮಿವ|

03297032c ಕಶ್ಚೈಷಾಂ ಮಾನುಷೋ ಭಾವಃ ಕಿಮೇಷಾಮಸತಾಮಿವ||

ಯಕ್ಷನು ಹೇಳಿದನು: “ಕ್ಷತ್ರಿಯರ ದೇವತ್ವವು ಯಾವುದು? ಸಂತರಿಗಿರುವಂತೆ ಅವರ ಧರ್ಮವು ಯಾವುದು? ಅವರ ಮನುಷ್ಯತ್ವವೇನು? ಅಸಂತರಿಗಿರುವಂತೆ ಅವರಲ್ಲಿರುವುದು ಯಾವುದು?”

03297033 ಯುಧಿಷ್ಠಿರ ಉವಾಚ|

03297033a ಇಷ್ವಸ್ತ್ರಮೇಷಾಂ ದೇವತ್ವಂ ಯಜ್ಞ ಏಷಾಂ ಸತಾಮಿವ|

03297033c ಭಯಂ ವೈ ಮಾನುಷೋ ಭಾವಃ ಪರಿತ್ಯಾಗೋಽಸತಾಮಿವ||

ಯುಧಿಷ್ಠಿರನು ಹೇಳಿದನು: “ಆಯುಧಗಳು ಇವರ ದೇವತ್ವ. ಯಜ್ಞವು ಇವರ ಸತ್ವ. ಭಯವೇ ಇವರ ಮನುಷ್ಯ ಭಾವ ಮತ್ತು ಪರಿತ್ಯಾಗವು ಇವರ ಅಸತ್ವ.”

03297034 ಯಕ್ಷ ಉವಾಚ|

03297034a ಕಿಮೇಕಂ ಯಜ್ಞಿಯಂ ಸಾಮ ಕಿಮೇಕಂ ಯಜ್ಞಿಯಂ ಯಜುಃ|

03297034c ಕಾ ಚೈಕಾ ವೃಶ್ಚತೇ ಯಜ್ಞಂ ಕಾಂ ಯಜ್ಞೋ ನಾತಿವರ್ತತೇ||

ಯಕ್ಷನು ಹೇಳಿದನು: “ಯಜ್ಞದಲ್ಲಿ ಒಂದು ಸಾಮವು ಯಾವುದು? ಯಜ್ಞದಲ್ಲಿ ಒಂದು ಯಜುವು ಯಾವುದು? ಯಜ್ಞವನ್ನು ಕಡಿಮೆಮಾಡುವ ಒಂದು ಯಾವುದು? ಯಜ್ಞವು ಅತಿಯಾಗದಂತೆ ಮಾಡುವ ಒಂದು ಯಾವುದು?”

03297035 ಯುಧಿಷ್ಠಿರ ಉವಾಚ|

03297035a ಪ್ರಾಣೋ ವೈ ಯಜ್ಞಿಯಂ ಸಾಮ ಮನೋ ವೈ ಯಜ್ಞಿಯಂ ಯಜುಃ|

03297035c ವಾಗೇಕಾ ವೃಶ್ಚತೇ ಯಜ್ಞಂ ತಾಂ ಯಜ್ಞೋ ನಾತಿವರ್ತತೇ||

ಯುಧಿಷ್ಠಿರನು ಹೇಳಿದನು: “ಪ್ರಾಣವೇ ಯಜ್ಞದ ಒಂದು ಸಾಮ. ಮನಸ್ಸೇ ಯಜ್ಞದ ಯಜು. ಮಾತೇ ಯಜ್ಞವನ್ನು ಕಡಿಮೆಮಾಡುವಂತಹುದು. ಯಜ್ಞವೇ ಯಜ್ಞವನ್ನು ಮೀರಬಲ್ಲದು.”

03297036 ಯಕ್ಷ ಉವಾಚ|

03297036a ಕಿಂ ಸ್ವಿದಾಪತತಾಂ ಶ್ರೇಷ್ಠಂ ಕಿಂ ಸ್ವಿನ್ನಿಪತತಾಂ ವರಂ|

03297036c ಕಿಂ ಸ್ವಿತ್ಪ್ರತಿಷ್ಠಮಾನಾನಾಂ ಕಿಂ ಸ್ವಿತ್ಪ್ರವದತಾಂ ವರಂ||

ಯಕ್ಷನು ಹೇಳಿದನು: “ಕೇಳಗೆ ಬೀಳುವುದರಲ್ಲಿ ಶ್ರೇಷ್ಠವು ಯಾವುದು? ಕೆಳಗೆ ಹೋಗುವವುಗಳಲ್ಲಿ ಶ್ರೇಷ್ಠವು ಯಾವುದು? ನಿಂತಿರುವವುಗಳಲ್ಲಿ ಶ್ರೇಷ್ಠವು ಯಾವುದು? ಮಾತನಾಡುವವುಗಳಲ್ಲಿ ಶ್ರೇಷ್ಠವು ಯಾವುದು?”

03297037 ಯುಧಿಷ್ಠಿರ ಉವಾಚ|

03297037a ವರ್ಷಮಾಪತತಾಂ ಶ್ರೇಷ್ಠಂ ಬೀಜಂ ನಿಪತತಾಂ ವರಂ|

03297037c ಗಾವಃ ಪ್ರತಿಷ್ಠಮಾನಾನಾಂ ಪುತ್ರಃ ಪ್ರವದತಾಂ ವರಃ||

ಯುಧಿಷ್ಠಿರನು ಹೇಳಿದನು: “ಕೆಳಗೆ ಬೀಳುವವುಗಳಲ್ಲಿ ಮಳೆಯೇ ಶ್ರೇಷ್ಠ. ಕೆಳಗೆ ಹೋಗುವವುಗಳಲ್ಲಿ ಬೀಜವೇ ಶ್ರೇಷ್ಠ. ನಿಂತಿರುವವುಗಳಲ್ಲಿ ಗೋವುಗಳೇ ಶ್ರೇಷ್ಠ. ಮಾತನಾಡುವವರಲ್ಲಿ ಪುತ್ರನೇ ಶ್ರೇಷ್ಠ.”

03297038 ಯಕ್ಷ ಉವಾಚ|

03297038a ಇಂದ್ರಿಯಾರ್ಥಾನನುಭವನ್ಬುದ್ಧಿಮಾನ್ಲೋಕಪೂಜಿತಃ|

03297038c ಸಮ್ಮತಃ ಸರ್ವಭೂತಾನಾಮುಚ್ಚ್ವಸನ್ಕೋ ನ ಜೀವತಿ||

ಯಕ್ಷನು ಹೇಳಿದನು: “ಯಾರು ಇಂದ್ರಿಯಗಳಿಂದ ವಿಷಯಗಳನ್ನು ಅನುಭವಿಸುತ್ತಾನೆ, ಬುದ್ಧಿವಂತನಾಗಿದ್ದಾನೆ, ಲೋಕಪೂಜಿತನಾಗಿದ್ದಾನೆ, ಸರ್ವಭೂತಗಳಿಂದ ಗೌರವಿಸಲ್ಪಡುತ್ತಾನೆ, ಉಸಿರಾಡುತ್ತಾನೆ ಆದರೂ ಜೀವಂತನಾಗಿಲ್ಲ?”

03297039 ಯುಧಿಷ್ಠಿರ ಉವಾಚ|

03297039a ದೇವತಾತಿಥಿಭೃತ್ಯಾನಾಂ ಪಿತೄಣಾಮಾತ್ಮನಶ್ಚ ಯಃ|

03297039c ನ ನಿರ್ವಪತಿ ಪಂಚಾನಾಮುಚ್ಚ್ವಸನ್ನ ಸ ಜೀವತಿ||

ಯುಧಿಷ್ಠಿರನು ಹೇಳಿದನು: “ಯಾರು ಐವರಿಗೆ - ದೇವತೆಗಳಿಗೆ, ಅತಿಥಿಗಳಿಗೆ, ಭೃತ್ಯರಿಗೆ, ಪಿತೃಗಳಿಗೆ ಮತ್ತು ಆತ್ಮನಿಗೆ - ಕೊಡುವುದಿಲ್ಲವೋ ಅವನು ಉಸಿರಾಡುತ್ತಿದ್ದರೂ ಜೀವಿತನಾಗಿರುವವನಲ್ಲ.”

03297040 ಯಕ್ಷ ಉವಾಚ|

03297040a ಕಿಂ ಸ್ವಿದ್ಗುರುತರಂ ಭೂಮೇಃ ಕಿಂ ಸ್ವಿದುಚ್ಚತರಂ ಚ ಖಾತ್|

03297040c ಕಿಂ ಸ್ವಿಚ್ಚೀಘ್ರತರಂ ವಾಯೋಃ ಕಿಂ ಸ್ವಿದ್ಬಹುತರಂ ನೃಣಾಂ||

ಯಕ್ಷನು ಹೇಳಿದನು: “ಭೂಮಿಗಿಂತಲೂ ಭಾರವಾದುದು ಯಾವುದು? ಆಕಾಶಕ್ಕಿಂತಲೂ ಎತ್ತರವಾದುದು ಯಾವುದು? ಗಾಳಿಗಿಂತಲೂ ವೇಗವಾದುದ್ದು ಯಾವುದು? ಮನುಷ್ಯರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವುದು ಯಾವುದು?”

03297041 ಯುಧಿಷ್ಠಿರ ಉವಾಚ|

03297041a ಮಾತಾ ಗುರುತರಾ ಭೂಮೇಃ ಪಿತಾ ಉಚ್ಚತರಶ್ಚ ಖಾತ್|

03297041c ಮನಃ ಶೀಘ್ರತರಂ ವಾಯೋಶ್ಚಿಂತಾ ಬಹುತರೀ ನೃಣಾಂ||

ಯುಧಿಷ್ಠಿರನು ಹೇಳಿದನು:” ತಾಯಿಯು ಭೂಮಿಗಿಂತಲೂ ಭಾರ. ತಂದೆಯು ಆಕಾಶಕ್ಕಿಂತಲೂ ಎತ್ತರ. ಮನಸ್ಸು ಗಾಳಿಗಿಂತಲೂ ಶೀಘ್ರ. ಸಂಖ್ಯೆಯಲ್ಲಿ ಚಿಂತೆಗಳು ಮನುಷ್ಯರಿಗಿಂತಲೂ ಹೆಚ್ಚು.”

03297042 ಯಕ್ಷ ಉವಾಚ|

03297042a ಕಿಂ ಸ್ವಿತ್ಸುಪ್ತಂ ನ ನಿಮಿಷತಿ ಕಿಂ ಸ್ವಿಜ್ಜಾತಂ ನ ಚೋಪತಿ|

03297042c ಕಸ್ಯ ಸ್ವಿದ್ಧೃದಯಂ ನಾಸ್ತಿ ಕಿಂ ಸ್ವಿದ್ವೇಗೇನ ವರ್ಧತೇ||

ಯಕ್ಷನು ಹೇಳಿದನು: “ಯಾವುದು ಮಲಗಿರುವಾಗಲೂ ಕಣ್ಣುಮುಚ್ಚುವುದಿಲ್ಲ? ಯಾವುದು ಹುಟ್ಟಿದರೂ ಚಲಿಸುವುದಿಲ್ಲ? ಯಾವುದಕ್ಕೆ ಹೃದಯವಿಲ್ಲ? ಯಾವುದು ವೇಗವಾಗಿರುವಾಗ ಬೆಳೆಯುತ್ತದೆ?”

03297043 ಯುಧಿಷ್ಠಿರ ಉವಾಚ|

03297043a ಮತ್ಸ್ಯಃ ಸುಪ್ತೋ ನ ನಿಮಿಷತ್ಯಂಡಂ ಜಾತಂ ನ ಚೋಪತಿ|

03297043c ಅಶ್ಮನೋ ಹೃದಯಂ ನಾಸ್ತಿ ನದೀ ವೇಗೇನ ವರ್ಧತೇ||

ಯುಧಿಷ್ಠಿರನು ಹೇಳಿದನು: “ಮೀನು ಮಲಗಿದ್ದರೂ ಕಣ್ಣನ್ನು ಮುಚ್ಚುವುದಿಲ್ಲ. ಅಂಡವು ಹುಟ್ಟಿದರೂ ಚಲಿಸುವುದಿಲ್ಲ. ಕಲ್ಲಿಗೆ ಹೃದಯವಿಲ್ಲ. ನದಿಯು ವೇಗದಲ್ಲಿರುವಾಗ ಬೆಳೆಯುತ್ತದೆ.”

03297044 ಯಕ್ಷ ಉವಾಚ|

03297044a ಕಿಂ ಸ್ವಿತ್ಪ್ರವಸತೋ ಮಿತ್ರಂ ಕಿಂ ಸ್ವಿನ್ಮಿತ್ರಂ ಗೃಹೇ ಸತಃ|

03297044c ಆತುರಸ್ಯ ಚ ಕಿಂ ಮಿತ್ರಂ ಕಿಂ ಸ್ವಿನ್ಮಿತ್ರಂ ಮರಿಷ್ಯತಃ||

ಯಕ್ಷನು ಹೇಳಿದನು: “ಪ್ರಯಾಣಿಕನ ಮಿತ್ರನು ಯಾರು? ಮನೆಯಲ್ಲಿ ಮಿತ್ರನು ಯಾರು? ರೋಗಿಯ ಮಿತ್ರನು ಯಾರು? ಮೃತ್ಯುಹೊಂದಿದವನ ಮಿತ್ರನಾರು?”

03297045 ಯುಧಿಷ್ಠಿರ ಉವಾಚ|

03297045a ಸಾರ್ಥಃ ಪ್ರವಸತೋ ಮಿತ್ರಂ ಭಾರ್ಯಾ ಮಿತ್ರಂ ಗೃಹೇ ಸತಃ|

03297045c ಆತುರಸ್ಯ ಭಿಷಮ್ಮಿತ್ರಂ ದಾನಂ ಮಿತ್ರಂ ಮರಿಷ್ಯತಃ||

ಯುಧಿಷ್ಠಿರನು ಹೇಳಿದನು: “ಜೊತೆಗೆ ಪ್ರಯಾಣಿಸುವವನು ಪ್ರಯಾಣಿಕನ ಮಿತ್ರ. ಮನೆಯಲ್ಲಿ ಪತ್ನಿಯು ಮಿತ್ರಳು. ರೋಗಿಗೆ ವೈದ್ಯನು ಮಿತ್ರ. ಮರಣಹೊಂದಿದವನಿಗೆ ದಾನವು ಮಿತ್ರ.”

03297046 ಯಕ್ಷ ಉವಾಚ|

03297046a ಕಿಂ ಸ್ವಿದೇಕೋ ವಿಚರತಿ ಜಾತಃ ಕೋ ಜಾಯತೇ ಪುನಃ|

03297046c ಕಿಂ ಸ್ವಿದ್ಧಿಮಸ್ಯ ಭೈಷಜ್ಯಂ ಕಿಂ ಸ್ವಿದಾವಪನಂ ಮಹತ್||

ಯಕ್ಷನು ಹೇಳಿದನು: “ಒಂಟಿಯಾಗಿ ಸಂಚರಿಸುವುದು ಯಾವುದು? ಯಾವುದು ಹುಟ್ಟಿ ಪುನಃ ಹುಟ್ಟುತ್ತದೆ? ಹಿಮಕ್ಕೆ ಚಿಕಿತ್ಸೆಯು ಯಾವುದು? ಅತಿ ದೊಡ್ಡ ಜಾಗವು ಯಾವುದು?”

03297047 ಯುಧಿಷ್ಠಿರ ಉವಾಚ|

03297047a ಸೂರ್ಯ ಏಕೋ ವಿಚರತಿ ಚಂದ್ರಮಾ ಜಾಯತೇ ಪುನಃ|

03297047c ಅಗ್ನಿರ್ಹಿಮಸ್ಯ ಭೈಷಜ್ಯಂ ಭೂಮಿರಾವಪನಂ ಮಹತ್||

ಯುಧಿಷ್ಠಿರನು ಹೇಳಿದನು: “ಸೂರ್ಯನು ಒಂಟಿಯಾಗಿ ಸಂಚರಿಸುತ್ತಾನೆ. ಚಂದ್ರನು ಪುನಃ ಹುಟ್ಟುತ್ತಾನೆ. ಅಗ್ನಿಯು ಹಿಮದ ಚಿಕಿತ್ಸೆ. ಭೂಮಿಯು ಅತಿ ದೊಡ್ಡ ಜಾಗ.”

03297048 ಯಕ್ಷ ಉವಾಚ|

03297048a ಕಿಂ ಸ್ವಿದೇಕಪದಂ ಧರ್ಮ್ಯಂ ಕಿಂ ಸ್ವಿದೇಕಪದಂ ಯಶಃ|

03297048c ಕಿಂ ಸ್ವಿದೇಕಪದಂ ಸ್ವರ್ಗ್ಯಂ ಕಿಂ ಸ್ವಿದೇಕಪದಂ ಸುಖಂ||

ಯಕ್ಷನು ಹೇಳಿದನು: “ಧರ್ಮದ ಒಂದು ಪದವು ಯಾವುದು? ಯಸಸ್ಸಿನ ಒಂದು ಪದವು ಯಾವುದು? ಸ್ವರ್ಗದ ಒಂದು ಪದವು ಯಾವುದು? ಸುಖದ ಒಂದು ಪದವು ಯಾವುದು?”

03297049 ಯುಧಿಷ್ಠಿರ ಉವಾಚ|

03297049a ದಾಕ್ಷ್ಯಮೇಕಪದಂ ಧರ್ಮ್ಯಂ ದಾನಮೇಕಪದಂ ಯಶಃ|

03297049c ಸತ್ಯಮೇಕಪದಂ ಸ್ವರ್ಗ್ಯಂ ಶೀಲಮೇಕಪದಂ ಸುಖಂ||

ಯುಧಿಷ್ಠಿರನು ಹೇಳಿದನು: “ದಕ್ಷತೆಯು ಧರ್ಮದ ಒಂದು ಪದ. ದಾನವು ಯಶಸ್ಸಿನ ಒಂದು ಪದ. ಸತ್ಯವು ಸ್ವರ್ಗದ ಒಂದು ಪದ, ಶೀಲವು ಸುಖದ ಒಂದು ಪದ.”

03297050 ಯಕ್ಷ ಉವಾಚ|

03297050a ಕಿಂ ಸ್ವಿದಾತ್ಮಾ ಮನುಷ್ಯಸ್ಯ ಕಿಂ ಸ್ವಿದ್ದೈವಕೃತಃ ಸಖಾ|

03297050c ಉಪಜೀವನಂ ಕಿಂ ಸ್ವಿದಸ್ಯ ಕಿಂ ಸ್ವಿದಸ್ಯ ಪರಾಯಣಂ||

ಯಕ್ಷನು ಹೇಳಿದನು: “ಮನುಷ್ಯನ ಆತ್ಮವು ಯಾವುದು? ದೈವಕೃತ ಸಖನು ಯಾರು? ಅವನ ಉಪಜೀವನವು ಯಾವುದು? ಅವನ ಪರಾಯಣವು ಯಾವುದು?”

03297051 ಯುಧಿಷ್ಠಿರ ಉವಾಚ|

03297051a ಪುತ್ರ ಆತ್ಮಾ ಮನುಷ್ಯಸ್ಯ ಭಾರ್ಯಾ ದೈವಕೃತಃ ಸಖಾ|

03297051c ಉಪಜೀವನಂ ಚ ಪರ್ಜನ್ಯೋ ದಾನಮಸ್ಯ ಪರಾಯಣಂ||

ಯುಧಿಷ್ಠಿರನು ಹೇಳಿದನು: “ಪುತ್ರನು ಮನುಷ್ಯನ ಆತ್ಮ. ಭಾರ್ಯೆಯು ದೇವಕೃತ ಸಖಿ. ಪರ್ಜನ್ಯವು ಅವನ ಉಪಜೀವನ ಮತ್ತು ದಾನವು ಅವನ ಪರಾಯಣ.”

03297052 ಯಕ್ಷ ಉವಾಚ|

03297052a ಧನ್ಯಾನಾಮುತ್ತಮಂ ಕಿಂ ಸ್ವಿದ್ಧನಾನಾಂ ಕಿಂ ಸ್ವಿದುತ್ತಮಂ|

03297052c ಲಾಭಾನಾಮುತ್ತಮಂ ಕಿಂ ಸ್ವಿತ್ಕಿಂ ಸುಖಾನಾಂ ತಥೋತ್ತಮಂ||

ಯಕ್ಷನು ಹೇಳಿದನು: “ಧನಿಗಳ ಉತ್ತಮತ್ವವು ಯಾವುದು? ಸಂಪತ್ತುಗಳಲ್ಲಿ ಯಾವುದು ಉತ್ತಮ ಸಂಪತ್ತು? ಲಾಭಗಳಲ್ಲಿ ಅನುತ್ತಮವಾದುದು ಯಾವುದು? ಸುಖಗಳಲ್ಲಿ ಉತ್ತಮವಾದುದು ಯಾವುದು?”

03297053 ಯುಧಿಷ್ಠಿರ ಉವಾಚ|

03297053a ಧನ್ಯಾನಾಮುತ್ತಮಂ ದಾಕ್ಷ್ಯಂ ಧನಾನಾಮುತ್ತಮಂ ಶ್ರುತಂ|

03297053c ಲಾಭಾನಾಂ ಶ್ರೇಷ್ಠಮಾರೋಗ್ಯಂ ಸುಖಾನಾಂ ತುಷ್ಟಿರುತ್ತಮಾ||

ಯುಧಿಷ್ಠಿರನು ಹೇಳಿದನು: “ದಕ್ಷತೆಯು ಧನಿಗಳಿಗೆ ಉತ್ತಮ. ಧನವು ಉತ್ತಮವೆಂದು ಕೇಳಿದ್ದೇವೆ. ಆರೋಗ್ಯವು ಲಾಭಗಳಲ್ಲಿ ಶ್ರೇಷ್ಠ. ಸುಖಗಳಲ್ಲಿ ತೃಪ್ತಿಯು ಉತ್ತಮ.”

03297054 ಯಕ್ಷ ಉವಾಚ|

03297054a ಕಶ್ಚ ಧರ್ಮಃ ಪರೋ ಲೋಕೇ ಕಶ್ಚ ಧರ್ಮಃ ಸದಾಫಲಃ|

03297054c ಕಿಂ ನಿಯಮ್ಯ ನ ಶೋಚಂತಿ ಕೈಶ್ಚ ಸಂಧಿರ್ನ ಜೀರ್ಯತೇ||

ಯಕ್ಷನು ಹೇಳಿದನು: “ಲೋಕದಲ್ಲಿ ಪರಮ ಧರ್ಮವು ಯಾವುದು? ಸದಾಫಲವನ್ನು ನೀಡುವು ಧರ್ಮವು ಯಾವುದು? ನಿಯಮದಲ್ಲಿದ್ದು ಯಾವುದು ಶೋಕಿಸುವುದಿಲ್ಲ? ಯಾವುದರಿಂದ ಸಂಬಂಧವು ಜೀರ್ಣವಾಗುವುದಿಲ್ಲ?”

03297055 ಯುಧಿಷ್ಠಿರ ಉವಾಚ|

03297055a ಆನೃಶಂಸ್ಯಂ ಪರೋ ಧರ್ಮಸ್ತ್ರಯೀಧರ್ಮಃ ಸದಾಫಲಃ|

03297055c ಮನೋ ಯಮ್ಯ ನ ಶೋಚಂತಿ ಸದ್ಭಿಃ ಸಂಧಿರ್ನ ಜೀರ್ಯತೇ||

ಯುಧಿಷ್ಠಿರನು ಹೇಳಿದನು: “ಕ್ರೂರನಾಗಿಲ್ಲದಿರುವುದೇ ಪರಮ ಧರ್ಮ. ತ್ರಯೀಧರ್ಮವು ಸದಾ ಫಲವನ್ನು ನೀಡುತ್ತದೆ. ನಿಗ್ರಹಿಸಿದ ಮನವು ಶೋಕಿಸುವುದಿಲ್ಲ. ಸಜ್ಜನರೊಂದಿನ ಸಂಬಂಧವು ಜೀರ್ಣವಾಗುವುದಿಲ್ಲ.”

03297056 ಯಕ್ಷ ಉವಾಚ|

03297056a ಕಿಂ ನು ಹಿತ್ವಾ ಪ್ರಿಯೋ ಭವತಿ ಕಿಂ ನು ಹಿತ್ವಾ ನ ಶೋಚತಿ|

03297056c ಕಿಂ ನು ಹಿತ್ವಾರ್ಥವಾನ್ಭವತಿ ಕಿಂ ನು ಹಿತ್ವಾ ಸುಖೀ ಭವೇತ್||

ಯಕ್ಷನು ಹೇಳಿದನು: “ಯಾವುದನ್ನು ತೊರೆದು ಪ್ರೀತಿಪಾತ್ರನಾಗುತ್ತಾನೆ? ಯಾವುದನ್ನು ತೊರೆದು ಶೋಕಿಸುವುದಿಲ್ಲ? ಯಾವುದನ್ನು ತೊರೆದು ಧನವಂತನಾಗುತ್ತಾನೆ? ಯಾವುದನ್ನು ತೊರೆದು ಸುಖಿಯಾಗುತ್ತಾನೆ?”

03297057 ಯುಧಿಷ್ಠಿರ ಉವಾಚ|

03297057a ಮಾನಂ ಹಿತ್ವಾ ಪ್ರಿಯೋ ಭವತಿ ಕ್ರೋಧಂ ಹಿತ್ವಾ ನ ಶೋಚತಿ|

03297057c ಕಾಮಂ ಹಿತ್ವಾರ್ಥವಾನ್ಭವತಿ ಲೋಭಂ ಹಿತ್ವಾ ಸುಖೀ ಭವೇತ್||

ಯುಧಿಷ್ಠಿರನು ಹೇಳಿದನು: “ಅಭಿಮಾನವನ್ನು ತೊರೆದು ಪ್ರೀತಿಪಾತ್ರನಾಗುತ್ತಾನೆ. ಸಿಟ್ಟನ್ನು ತೊರೆದು ಶೋಕಿಸುವುದಿಲ್ಲ. ಆಸೆಗಳನ್ನು ತೊರೆದು ಧನವಂತನಾಗುತ್ತಾನೆ. ಲೋಭವನ್ನು ತೊರೆದು ಸುಖಿಯಾಗುತ್ತಾನೆ.”

03297058 ಯಕ್ಷ ಉವಾಚ|

03297058a ಮೃತಃ ಕಥಂ ಸ್ಯಾತ್ಪುರುಷಃ ಕಥಂ ರಾಷ್ಟ್ರಂ ಮೃತಂ ಭವೇತ್|

03297058c ಶ್ರಾದ್ಧಂ ಮೃತಂ ಕಥಂ ಚ ಸ್ಯಾತ್ಕಥಂ ಯಜ್ಞೋ ಮೃತೋ ಭವೇತ್||

ಯಕ್ಷನು ಹೇಳಿದನು: “ಪುರುಷನು ಹೇಗೆ ಸಾಯುತ್ತಾನೆ? ರಾಷ್ಟ್ರವು ಹೇಗೆ ಸಾಯುತ್ತದೆ? ಶ್ರಾದ್ಧವು ಹೇಗೆ ಸಾಯುತ್ತದೆ? ಯಜ್ಞವು ಹೇಗೆ ಸಾಯುತ್ತದೆ?”

03297059 ಯುಧಿಷ್ಠಿರ ಉವಾಚ|

03297059a ಮೃತೋ ದರಿದ್ರಃ ಪುರುಷೋ ಮೃತಂ ರಾಷ್ಟ್ರಮರಾಜಕಂ|

03297059c ಮೃತಮಶ್ರೋತ್ರಿಯಂ ಶ್ರಾದ್ಧಂ ಮೃತೋ ಯಜ್ಞಸ್ತ್ವದಕ್ಷಿಣಃ||

ಯುಧಿಷ್ಠಿರನು ಹೇಳಿದನು: “ಬಡತನದಲ್ಲಿ ಪುರುಷನು ಸಾಯುತ್ತಾನೆ. ರಾಜನಿಲ್ಲದೇ ರಾಷ್ಟ್ರವು ಸಾಯುತ್ತದೆ. ಶ್ರೋತ್ರಿಯಿಲ್ಲದೇ ಶ್ರಾದ್ಧವು ಸಾಯುತ್ತದೆ. ದಕ್ಷಿಣೆಯಿಲ್ಲದೇ ಯಜ್ಞವು ಸಾಯುತ್ತದೆ.”

03297060 ಯಕ್ಷ ಉವಾಚ|

03297060a ಕಾ ದಿಕ್ಕಿಮುದಕಂ ಪ್ರೋಕ್ತಂ ಕಿಮನ್ನಂ ಪಾರ್ಥ ಕಿಂ ವಿಷಂ|

03297060c ಶ್ರಾದ್ಧಸ್ಯ ಕಾಲಮಾಖ್ಯಾಹಿ ತತಃ ಪಿಬ ಹರಸ್ವ ಚ||

ಯಕ್ಷನು ಹೇಳಿದನು: “ಪಾರ್ಥ! ಸರಿಯಾದ ದಿಕ್ಕು ಯಾವುದು? ಯಾವುದನ್ನು ನೀರೆಂದು ಹೇಳುತ್ತಾರೆ? ಯಾವುದು ಅನ್ನ? ಯಾವುದು ವಿಷ? ಶ್ರಾದ್ಧದ ಕಾಲವನ್ನು ಹೇಳಿ ನಂತರ ನೀರನ್ನು ತೆಗೆದು ಕುಡಿ.”

03297061 ಯುಧಿಷ್ಠಿರ ಉವಾಚ|

03297061a ಸಂತೋ ದಿಗ್ಜಲಮಾಕಾಶಂ ಗೌರನ್ನಂ ಪ್ರಾರ್ಥನಾ ವಿಷಂ|

03297061c ಶ್ರಾದ್ಧಸ್ಯ ಬ್ರಾಹ್ಮಣಃ ಕಾಲಃ ಕಥಂ ವಾ ಯಕ್ಷ ಮನ್ಯಸೇ||

ಯುಧಿಷ್ಠಿರನು ಹೇಳಿದನು: “ಸಂತರು ದಿಕ್ಕು, ಆಕಾಶವು ನೀರು, ಗೋವು ಅನ್ನ, ಪ್ರಾರ್ಥನೆಯು ವಿಷ, ಬ್ರಾಹ್ಮಣನು ಶ್ರಾದ್ಧಕ್ಕೆ ಸರಿಯಾದ ಕಾಲ ಅಥವ ಯಕ್ಷ! ನಿನ್ನ ಅಭಿಪ್ರಾಯ ಬೇರೆಯಾಗಿದೆಯೇ?”

03297062 ಯಕ್ಷ ಉವಾಚ|

03297062a ವ್ಯಾಖ್ಯಾತಾ ಮೇ ತ್ವಯಾ ಪ್ರಶ್ನಾ ಯಾಥಾತಥ್ಯಂ ಪರಂತಪ|

03297062c ಪುರುಷಂ ತ್ವಿದಾನೀಮಾಖ್ಯಾಹಿ ಯಶ್ಚ ಸರ್ವಧನೀ ನರ||

ಯಕ್ಷನು ಹೇಳಿದನು: “ಪರಂತಪ! ನೀನು ನನ್ನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದೀಯೆ. ಈಗ ಹೇಳು. ಪುರುಷನು ಯಾರು ಮತ್ತು ಯಾವ ನರನು ಸರ್ವ ಸಂಪತ್ತನ್ನೂ ಹೊಂದಿದ್ದಾನೆ?”

03297063 ಯುಧಿಷ್ಠಿರ ಉವಾಚ|

03297063a ದಿವಂ ಸ್ಪೃಶತಿ ಭೂಮಿಂ ಚ ಶಬ್ದಃ ಪುಣ್ಯಸ್ಯ ಕರ್ಮಣಃ|

03297063c ಯಾವತ್ಸ ಶಬ್ದೋ ಭವತಿ ತಾವತ್ಪುರುಷ ಉಚ್ಯತೇ||

ಯುಧಿಷ್ಠಿರನು ಹೇಳಿದನು: “ಪ್ರಸಿದ್ಧ ಪುಣ್ಯ ಕರ್ಮಿಯು ದಿವ ಮತ್ತು ಭೂಮಿಗಳನ್ನು ಮುಟ್ಟುತ್ತಾನೆ. ಎಲ್ಲಿಯವರೆಗೆ ಅವನು ಪ್ರಸಿದ್ಧನಾಗಿರುತ್ತಾನೋ ಅಲ್ಲಿಯವರೆಗೆ ಅವನನ್ನು ಪುರುಷನೆಂದು ಕರೆಯುತ್ತಾರೆ.

03297064a ತುಲ್ಯೇ ಪ್ರಿಯಾಪ್ರಿಯೇ ಯಸ್ಯ ಸುಖದುಃಖೇ ತಥೈವ ಚ|

03297064c ಅತೀತಾನಾಗತೇ ಚೋಭೇ ಸ ವೈ ಸರ್ವಧನೀ ನರಃ||

ಯಾರಿಗೆ ಪ್ರಿಯ-ಅಪ್ರಿಯಗಳು, ಸುಖ-ದುಃಖಗಳು ಮತ್ತು ಹಾಗೆಯೇ ಭೂತ-ಭವಿಷ್ಯಗಳು ಸಮನಾಗಿರುತ್ತವೆಯೋ ಆ ನರನೇ ಸರ್ವಧನಿಕ.”

03297065 ಯಕ್ಷ ಉವಾಚ|

03297065a ವ್ಯಾಖ್ಯಾತಃ ಪುರುಷೋ ರಾಜನ್ಯಶ್ಚ ಸರ್ವಧನೀ ನರಃ|

03297065c ತಸ್ಮಾತ್ತವೈಕೋ ಭ್ರಾತೄಣಾಂ ಯಮಿಚ್ಚಸಿ ಸ ಜೀವತು||

ಯಕ್ಷನು ಹೇಳಿದನು: “ರಾಜನ್! ಪುರುಷ ಮತ್ತು ಸರ್ವಧನೀ ನರರನ್ನು ಸರಿಯಾಗಿ ವ್ಯಾಖ್ಯಾಯಿಸಿದ್ದೀಯೆ. ಆದುದರಿಂದ ನಿನ್ನ ತಮ್ಮಂದಿರಲ್ಲಿ ನೀನು ಬಯಸಿದ ಒಬ್ಬನು ಜೀವಿಸುತ್ತಾನೆ.”

03297066 ಯುಧಿಷ್ಠಿರ ಉವಾಚ|

03297066a ಶ್ಯಾಮೋ ಯ ಏಷ ರಕ್ತಾಕ್ಷೋ ಬೃಹಚ್ಚಾಲ ಇವೋದ್ಗತಃ|

03297066c ವ್ಯೂಢೋರಸ್ಕೋ ಮಹಾಬಾಹುರ್ನಕುಲೋ ಯಕ್ಷ ಜೀವತು||

ಯುಧಿಷ್ಠಿರನು ಹೇಳಿದನು: “ಯಕ್ಷ! ಕೆಂಪುಕಣ್ಣಿನ, ಕಪ್ಪುಬಣ್ಣದ, ಶಾಲದಂತೆ ಎತ್ತರವಾಗಿ ಬೆಳೆದಿರುವ, ವಿಶಾಲ ಎದೆಯ, ಮಹಾಬಾಹು ನಕುಲನು ಜೀವಿಸಲಿ.”

03297067 ಯಕ್ಷ ಉವಾಚ|

03297067a ಪ್ರಿಯಸ್ತೇ ಭೀಮಸೇನೋಽಯಮರ್ಜುನೋ ವಃ ಪರಾಯಣಂ|

03297067c ಸ ಕಸ್ಮಾನ್ನಕುಲಂ ರಾಜನ್ಸಾಪತ್ನಂ ಜೀವಮಿಚ್ಚಸಿ||

ಯಕ್ಷನು ಹೇಳಿದನು: “ರಾಜನ್! ನಿನಗೆ ಪ್ರಿಯನಾದವನು ಭೀಮಸೇನ. ಅರ್ಜುನನ ಮೇಲೆ ನೀನು ಅವಲಂಬಿಸಿರುವೆ. ಹೀಗಿರುವಾಗ ಯಾವಕಾರಣಕ್ಕೆ ಅವರ ಮಲಸಹೋದರ ನಕುಲನು ಜೀವಂತನಾಗಲು ಬಯಸುವೆ?

03297068a ಯಸ್ಯ ನಾಗಸಹಸ್ರೇಣ ದಶಸಂಖ್ಯೇನ ವೈ ಬಲಂ|

03297068c ತುಲ್ಯಂ ತಂ ಭೀಮಮುತ್ಸೃಜ್ಯ ನಕುಲಂ ಜೀವಮಿಚ್ಚಸಿ||

ಹತ್ತುಸಾವಿರ ಆನೆಗಳ ಸಮಾನ ಬಲವುಳ್ಳ ಭೀಮನನ್ನು ಬಿಟ್ಟು ನಕುಲನು ಜೀವಂತನಾಗಲು ಏಕೆ ಬಯಸುತ್ತೀಯೆ?

03297069a ತಥೈನಂ ಮನುಜಾಃ ಪ್ರಾಹುರ್ಭೀಮಸೇನಂ ಪ್ರಿಯಂ ತವ|

03297069c ಅಥ ಕೇನಾನುಭಾವೇನ ಸಾಪತ್ನಂ ಜೀವಮಿಚ್ಚಸಿ||

ಭೀಮಸೇನನೇ ನಿನಗೆ ಪ್ರಿಯನಾದವನೆಂದು ಜನರು ಹೇಳುತ್ತಾರೆ. ಹಾಗಿರುವಾಗ ಯಾವ ಭಾವನೆಯಿಂದ ನಿನ್ನ ಈ ಮಲತಾಯಿಯ ಮಗನು ಜೀವಂತನಾಗಲು ಬಯಸುತ್ತೀಯೆ?

03297070a ಯಸ್ಯ ಬಾಹುಬಲಂ ಸರ್ವೇ ಪಾಂಡವಾಃ ಸಮುಪಾಶ್ರಿತಾಃ|

03297070c ಅರ್ಜುನಂ ತಮಪಾಹಾಯ ನಕುಲಂ ಜೀವಮಿಚ್ಚಸಿ||

ಯಾರ ಬಾಹುಬಲವನ್ನು ಸರ್ವ ಪಾಂಡವರೂ ಆಶ್ರಯಿಸಿರುವರೋ ಆ ಅರ್ಜುನನನ್ನು ಬಿಟ್ಟು ಏಕೆ ನಕುಲನು ಜೀವಂತವಾಗಿರಲು ಬಯಸುತ್ತೀಯೆ?”

03297071 ಯುಧಿಷ್ಠಿರ ಉವಾಚ|

03297071a ಆನೃಶಂಸ್ಯಂ ಪರೋ ಧರ್ಮಃ ಪರಮಾರ್ಥಾಚ್ಚ ಮೇ ಮತಂ|

03297071c ಆನೃಶಂಸ್ಯಂ ಚಿಕೀರ್ಷಾಮಿ ನಕುಲೋ ಯಕ್ಷ ಜೀವತು||

ಯುಧಿಷ್ಠಿರನು ಹೇಳಿದನು: “ಕ್ರೂರನಾಗಿರದೇ ಇರುವುದು ಪರಮ ಧರ್ಮ. ಇದರ ಪರಮ ಅರ್ಥವು ನನಗೆ ತಿಳಿದಿದೆ. ಯಕ್ಷ! ನಾನು ಕ್ರೂರನಾಗುವುದಿಲ್ಲ. ಆದುದರಿಂದ ನಕುಲನು ಜೀವಿಸಲಿ.

03297072a ಧರ್ಮಶೀಲಃ ಸದಾ ರಾಜಾ ಇತಿ ಮಾಂ ಮಾನವಾ ವಿದುಃ|

03297072c ಸ್ವಧರ್ಮಾನ್ನ ಚಲಿಷ್ಯಾಮಿ ನಕುಲೋ ಯಕ್ಷ ಜೀವತು||

ನನ್ನನ್ನು ಧರ್ಮಶೀಲರಾಜನೆಂದು ಸದಾ ಮಾನವರು ತಿಳಿದಿದ್ದಾರೆ. ಸ್ವಧರ್ಮದಿಂದ ವಿಚಲಿತನಾಗುವುದಿಲ್ಲ. ಆದುದರಿಂದ ಯಕ್ಷ! ನಕುಲನು ಬದುಕಲಿ.

03297073a ಯಥಾ ಕುಂತೀ ತಥಾ ಮಾದ್ರೀ ವಿಶೇಷೋ ನಾಸ್ತಿ ಮೇ ತಯೋಃ|

03297073c ಮಾತೃಭ್ಯಾಂ ಸಮಮಿಚ್ಚಾಮಿ ನಕುಲೋ ಯಕ್ಷ ಜೀವತು||

ಕುಂತಿಯು ಹೇಗೋ ಹಾಗೆ ಮಾದ್ರಿಯೂ ಕೂಡ. ಅವರಿಬ್ಬರ ಮಧ್ಯೆ ನನಗೆ ಭೇದವಿಲ್ಲ. ಇಬ್ಬರು ತಾಯಂದಿರೂ ಸಮವಾಗಿರಬಯಸುತ್ತೇನೆ. ಆದುದರಿಂದ ಯಕ್ಷ! ನಕುಲನು ಜೀವಿಸಲಿ.”

03297074 ಯಕ್ಷ ಉವಾಚ|

03297074a ಯಸ್ಯ ತೇಽರ್ಥಾಚ್ಚ ಕಾಮಾಚ್ಚ ಆನೃಶಂಸ್ಯಂ ಪರಂ ಮತಂ|

03297074c ತಸ್ಮಾತ್ತೇ ಭ್ರಾತರಃ ಸರ್ವೇ ಜೀವಂತು ಭರತರ್ಷಭ||

ಯಕ್ಷನು ಹೇಳಿದನು: “ಭರತರ್ಷಭ! ಅರ್ಥ ಕಾಮಗಳಿಗಿಂಥ ಅಕ್ರೂರತ್ವವು ಪರಮವೆಂದು ನೀನು ತಿಳಿದಿದ್ದೀಯೆ. ಆದುದರಿಂದ ನಿನ್ನ ಎಲ್ಲ ತಮ್ಮಂದಿರೂ ಜೀವಿಸಲಿ.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವಣಿ ಯಕ್ಷಪ್ರಶ್ನೇ ಸಪ್ತನವತ್ಯಧಿಕದ್ವಿಶತತಮೋಽಧ್ಯಾಯ😐

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಆರಣೇಯಪರ್ವದಲ್ಲಿ ಯಕ್ಷಪ್ರಶ್ನೆಯಲ್ಲಿ ಇನ್ನೂರಾತೊಂಭತ್ತೇಳನೆಯ ಅಧ್ಯಾಯವು.

Related image

[1] ಇಲ್ಲಿ ಮಹಾಭಾರತ ವ್ಯಾಖ್ಯಾನಕಾರ ನೀಲಕಂಠನು ಆದಿತ್ಯ ಎಂಬ ಶಬ್ಧಕ್ಕೆ ಆತ್ಮ ಎಂದು ಅರ್ಥೈಸಿದ್ದಾನೆ.

[2] ಇಲ್ಲಿ ನೀಲಕಂಠನು ಬ್ರಹ್ಮ ಎಂಬ ಶಬ್ಧಕ್ಕೆ ವೇದ ಎಂದು ಅರ್ಥೈಸಿದ್ದಾನೆ.

[3] ನೀಲಕಂಠನ ಪ್ರಕಾರ ಈ ಎರಡು ಶ್ಲೋಕಗಳು (ಶ್ಲೋಕ ೨೬ ಮತ್ತು ೨೭) ಭೌತಿಕ ವಾದ ಸೂರ್ಯನ ಕುರಿತಲ್ಲದೇ ಆಧ್ಯಾತ್ಮಿಕವಾದ ಆತ್ಮನ ಕುರಿತಾಗಿದೆ. ಯಕ್ಷನ ಈ ಪ್ರಶ್ನೆಗಳು ಮತ್ತು ಯುಧಿಷ್ಠಿರನ ಉತ್ತರಗಳು ಆತ್ಮನ ಕುರಿತಾಗಿವೆ. ವೇದವು ಅಂದರೆ ಜ್ಞಾನವು ಆತ್ಮನನ್ನು ಉದಯಿಸುತ್ತದೆ. ಶಮ-ದಮ ಮೊದಲಾದವುಗಳೇ ಆತ್ಮನ ಪರಿಚರರು. ಧರ್ಮ ಅಂದರೆ ಕರ್ಮ-ಉಪಾಸನೆಗಳೇ ಆತ್ಮವನ್ನು ಅಸ್ತಗೊಳಿಸುತ್ತದೆ. ಸತ್ಯದಲ್ಲಿಯೇ ಆತ್ಮನ ನೆಲೆಯಿರುವುದು. ಯಕ್ಷನ ಪ್ರತಿಯೊಂದು ಪ್ರಶ್ನೆ ಮತ್ತು ಯುಧಿಷ್ಠಿರನ ಉತ್ತರದ ವಿಶ್ಲೇಷಣೆಯನ್ನು ಆಂಗ್ಲಭಾಷೆಯಲ್ಲಿ ಕೆ. ಬಾಲಸುಬ್ರಮಣಿಯ ಐಯರ್ ಮಾಡಿದ್ದಾರೆ.

Comments are closed.