Aranyaka Parva: Chapter 246

ಆರಣ್ಯಕ ಪರ್ವ: ವ್ರೀಹಿದ್ರೌಣಿಕ ಪರ್ವ

೨೪೬

ಅಕ್ಕಿಕುಟ್ಟುವ ವೃತ್ತಿಯಲ್ಲಿ ನಿರತನಾದ ಮುದ್ಗಲನು ಒಂದು ಪಕ್ಷ ತಿನ್ನುತ್ತಿದ್ದು ಇನ್ನೊಂದು ಪಕ್ಷದಲ್ಲಿ ಪಾರಿವಾಳದಂತೆ ಒಂದು ಅಳತೆ ಭತ್ತವನ್ನು ಸುಲಿದು ತಿನ್ನುವ ಇಷ್ಟೀಕೃತ ಎಂಬ ವ್ರತವನ್ನು ಪರಿವಾರದೊಂದಿಗೆ ನಡೆಸುತ್ತಿದ್ದುದು (೧-೫). ಅವನು ಅನ್ನವನ್ನು ನೀಡುತ್ತಿದ್ದಂತಲೆಲ್ಲ ಪಾತ್ರೆಯಲ್ಲಿನ ಉಳಿದ ಅನ್ನವು ಅತಿಥಿಗಳ ದರ್ಶನದಿಂದ ಹಿಗ್ಗಿ ಹೆಚ್ಚಾಗುತ್ತಿದ್ದುದು (೬-೧೦). ಅವನನ್ನು ಪರೀಕ್ಷಿಸಲು ದುರ್ವಾಸನು ಆರು ಋತುಗಳು ಪಕ್ಷ-ಪಕ್ಷದಲ್ಲಿಯೂ ಬಂದು ಮುದ್ಗಲನು ಸುಲಿದ ಭತ್ತದ ಅನ್ನವನ್ನು ಪೂರ್ಣ ತಿಂದುಹೋದುದು (೧೧-೨೧). ಮುದ್ಗಲನ ಮನಸ್ಸಿನಲ್ಲಿ ಸ್ವಲ್ಪವೂ ವಿಕಾರಗಳನ್ನು ಕಾಣದೇ ಅವನ ನಿರ್ಮಲ ಮನಸ್ಸು ಶುದ್ಧವಾಗಿರುವುದನ್ನೇ ನೋಡಿ ದುರ್ವಾಸನು ನೀನು ಸಶರೀರನಾಗಿಯೇ ಸ್ವರ್ಗಕ್ಕೆ ಹೋಗುತ್ತೀಯೆ ಎನ್ನುವುದು (೨೨-೨೯). ಅವನನ್ನು ಕರೆದುಕೊಂಡು ಹೋಗಲು ದೇವದೂತನು ಬರಲು ಸ್ವರ್ಗದ ವಿಶೇಷತೆಯೇನೆಂದು ಮುದ್ಗಲನು ಅವನಲ್ಲಿ ಪಶ್ನಿಸುವುದು (೩೦-೩೬).

03246001 ಯುಧಿಷ್ಠಿರ ಉವಾಚ|

03246001a ವ್ರೀಹಿದ್ರೋಣಃ ಪರಿತ್ಯಕ್ತಃ ಕಥಂ ತೇನ ಮಹಾತ್ಮನಾ|

03246001c ಕಸ್ಮೈ ದತ್ತಶ್ಚ ಭಗವನ್ವಿಧಿನಾ ಕೇನ ಚಾತ್ಥ ಮೇ||

ಯುಧಿಷ್ಠಿರನು ಹೇಳಿದನು: “ಭಗವನ್! ಮಹಾತ್ಮನು ಯಾವ ಕಾರಣಕ್ಕಾಗಿ ಒಂದು ಅಳತೆ ಅನ್ನವನ್ನು ಪರಿತ್ಯಜಿಸಿದನು? ಅವನು ಯಾರಿಗೆ ಯಾವರೀತಿಯಲ್ಲಿ ಕೊಟ್ಟನು? ಹೇಳು!

03246002a ಪ್ರತ್ಯಕ್ಷಧರ್ಮಾ ಭಗವಾನ್ಯಸ್ಯ ತುಷ್ಟೋ ಹಿ ಕರ್ಮಭಿಃ|

03246002c ಸಫಲಂ ತಸ್ಯ ಜನ್ಮಾಹಂ ಮನ್ಯೇ ಸದ್ಧರ್ಮಚಾರಿಣಃ||

ಪ್ರತ್ಯಕ್ಷ ಭಗವಾನ್ ಧರ್ಮನು ಅವನ ಕರ್ಮಗಳಿಂದ ತುಷ್ಟನಾಗಿದ್ದಾನೆಂದರೆ ಆ ಸದ್ಧರ್ಮಚಾರಿಯ ಜನ್ಮವು ಸಫಲವಾದಂತೆಯೇ!”

03246003 ವ್ಯಾಸ ಉವಾಚ|

03246003a ಶಿಲೋಂಚವೃತ್ತಿರ್ಧರ್ಮಾತ್ಮಾ ಮುದ್ಗಲಃ ಸಂಶಿತವ್ರತಃ|

03246003c ಆಸೀದ್ರಾಜನ್ಕುರುಕ್ಷೇತ್ರೇ ಸತ್ಯವಾಗನಸೂಯಕಃ||

ವ್ಯಾಸನು ಹೇಳಿದನು: “ರಾಜನ್! ಕುರುಕ್ಷೇತ್ರದಲ್ಲಿ ಅಕ್ಕಿಕುಟ್ಟುವ ವೃತ್ತಿಯಲ್ಲಿ ನಿರತನಾದ ಮುದ್ಗಲನೆನ್ನುವ ಧರ್ಮಾತ್ಮ, ಸಂಶಿತವ್ರತನಿದ್ದನು[1].

03246004a ಅತಿಥಿವ್ರತೀ ಕ್ರಿಯಾವಾಂಶ್ಚ ಕಾಪೋತೀಂ ವೃತ್ತಿಮಾಸ್ಥಿತಃ|

03246004c ಸತ್ರಮಿಷ್ಟೀಕೃತಂ ನಾಮ ಸಮುಪಾಸ್ತೇ ಮಹಾತಪಾಃ||

ಪಾರಿವಾಳದಂತೆ ಜೀವಿಸುತ್ತಿದ್ದ ಅವನು ಅತಿಥಿಗಳನ್ನು ಸತ್ಕರಿಸುತ್ತಿದ್ದನು. ಆ ಮಹಾತಪಸ್ವಿಯು ಇಷ್ಟೀಕೃತ ಎಂಬ ಹೆಸರಿನ ಸತ್ರವನ್ನು ಕೈಗೊಂಡನು.

03246005a ಸಪುತ್ರದಾರೋ ಹಿ ಮುನಿಃ ಪಕ್ಷಾಹಾರೋ ಬಭೂವ ಸಃ|

03246005c ಕಪೋತವೃತ್ತ್ಯಾ ಪಕ್ಷೇಣ ವ್ರೀಹಿದ್ರೋಣಮುಪಾರ್ಜಯತ್||

ಅವನು ಪತ್ನಿ ಪುತ್ರರೊಂದಿಗೆ ಒಂದು ಪಕ್ಷ ತಿನ್ನುತ್ತಿದ್ದನು. ಮತ್ತು ಇನ್ನೊಂದು ಪಕ್ಷದಲ್ಲಿ ಪಾರಿವಾಳದಂತೆ ಒಂದು ಅಳತೆ ಭತ್ತವನ್ನು ಸುಲಿದು ತಿನ್ನುತ್ತಿದ್ದನು.

03246006a ದರ್ಶಂ ಚ ಪೌರ್ಣಮಾಸಂ ಚ ಕುರ್ವನ್ವಿಗತಮತ್ಸರಃ|

03246006c ದೇವತಾತಿಥಿಶೇಷೇಣ ಕುರುತೇ ದೇಹಯಾಪನಂ||

ದರ್ಶ ಮತ್ತು ಪೌರ್ಣಮಾಸಗಳನ್ನು ಆಚರಿಸುವ ಆ ವಿಗತಮತ್ಸರನು ದೇವತೆಗಳು ಮತ್ತು ಅತಿಥಿಗಳು ತಿಂದು ಉಳಿದುದರಿಂದ ದೇಹಧರ್ಮವನ್ನು ಪಾಲಿಸುತ್ತಿದ್ದನು.

03246007a ತಸ್ಯೇಂದ್ರಃ ಸಹಿತೋ ದೇವೈಃ ಸಾಕ್ಷಾತ್ತ್ರಿಭುವನೇಶ್ವರಃ|

03246007c ಪ್ರತ್ಯಗೃಹ್ಣಾನ್ಮಹಾರಾಜ ಭಾಗಂ ಪರ್ವಣಿ ಪರ್ವಣಿ||

ಮಹಾರಾಜ! ಸಾಕ್ಷಾತ್ ತ್ರಿಭುವನೇಶ್ವರ ಇಂದ್ರನು ದೇವತೆಗಳ ಸಹಿತ ಪರ್ವ ಪರ್ವಗಳಲ್ಲಿ ಯಜ್ಞದ ಭಾಗವನ್ನು ಸ್ವೀಕರಿಸುತ್ತಿದ್ದನು.

03246008a ಸ ಪರ್ವಕಾಲಂ ಕೃತ್ವಾ ತು ಮುನಿವೃತ್ತ್ಯಾ ಸಮನ್ವಿತಃ|

03246008c ಅತಿಥಿಭ್ಯೋ ದದಾವನ್ನಂ ಪ್ರಹೃಷ್ಟೇನಾಂತರಾತ್ಮನಾ||

ಪರ್ವಕಾಲದಲ್ಲಿ ಅವನು ಮುನಿವೃತ್ತಿಯನ್ನು ಅನುಸರಿಸಿ ಅಂತರಾತ್ಮದಲ್ಲಿ ಪ್ರಹೃಷ್ಟನಾಗಿ ಅತಿಥಿಗಳಿಗೆ ಅನ್ನವನ್ನು ನೀಡುತ್ತಿದ್ದನು.

03246009a ವ್ರೀಹಿದ್ರೋಣಸ್ಯ ತದಹೋ ದದತೋಽನ್ನಂ ಮಹಾತ್ಮನಃ|

03246009c ಶಿಷ್ಟಂ ಮಾತ್ಸರ್ಯಹೀನಸ್ಯ ವರ್ಧತ್ಯತಿಥಿದರ್ಶನಾತ್||

ಆ ಮಹಾತ್ಮನು ಅನ್ನವನ್ನು ನೀಡುತ್ತಿದ್ದಂತಲೆಲ್ಲ ಆ ಮಾತ್ಸರ್ಯಹೀನನ ಪಾತ್ರೆಯಲ್ಲಿನ ಉಳಿದ ಅನ್ನವು ಅತಿಥಿಗಳ ದರ್ಶನದಿಂದ ಹಿಗ್ಗಿ ಹೆಚ್ಚಾಗುತ್ತಿತ್ತು.

03246010a ತಚ್ಚತಾನ್ಯಪಿ ಭುಂಜಂತಿ ಬ್ರಾಹ್ಮಣಾನಾಂ ಮನೀಷಿಣಾಂ|

03246010c ಮುನೇಸ್ತ್ಯಾಗವಿಶುದ್ಧ್ಯಾ ತು ತದನ್ನಂ ವೃದ್ಧಿಮೃಚ್ಚತಿ||

ವಿಶುದ್ಧನಾಗಿ ತ್ಯಾಗಭಾವದಿಂದ ಆ ಅನ್ನವನ್ನು ನೀಡಿದಾಗಲೆಲ್ಲ ಅದು ನೂರಾರು ಪಟ್ಟು ವೃದ್ಧಿಯಾಗಿ ನೂರಾರು ಪಾರಂಗತ ಬ್ರಾಹ್ಮಣರು ಊಟಮಾಡುತ್ತಿದ್ದರು.

03246011a ತಂ ತು ಶುಶ್ರಾವ ಧರ್ಮಿಷ್ಠಂ ಮುದ್ಗಲಂ ಸಂಶಿತವ್ರತಂ|

03246011c ದುರ್ವಾಸಾ ನೃಪ ದಿಗ್ವಾಸಾಸ್ತಮಥಾಭ್ಯಾಜಗಾಮ ಹ||

03246012a ಬಿಭ್ರಚ್ಚಾನಿಯತಂ ವೇಷಮುನ್ಮತ್ತ ಇವ ಪಾಂಡವ|

03246012c ವಿಕಚಃ ಪರುಷಾ ವಾಚೋ ವ್ಯಾಹರನ್ವಿವಿಧಾ ಮುನಿಃ||

ನೃಪ! ಧರ್ಮಿಷ್ಟ ಸಂಶಿತವ್ರತ ಮುದ್ಗಲನ ಕುರಿತು ದಿಕ್ಕನ್ನೇ ಬಟ್ಟೆಯನ್ನಾಗಿ ಧರಿಸಿದ ದುರ್ವಾಸನು ಕೇಳಿದನು. ಪಾಂಡವ! ಆಗ ಉನ್ಮತ್ತನಂತೆ ಧರಿಸಿದ, ತಲೆಬೋಳಿಸಿಕೊಂಡ ಆ ಮುನಿಯು ವಿವಿಧ ಬೈಗಳಗಳನ್ನು ಉಚ್ಛರಿಸುತ್ತಾ ಅಲ್ಲಿಗೆ ಬಂದನು.

03246013a ಅಭಿಗಮ್ಯಾಥ ತಂ ವಿಪ್ರಮುವಾಚ ಮುನಿಸತ್ತಮಃ|

03246013c ಅನ್ನಾರ್ಥಿನಮನುಪ್ರಾಪ್ತಂ ವಿದ್ಧಿ ಮಾಂ ಮುನಿಸತ್ತಮ||

ಆಗಮಿಸಿದ ಆ ಮುನಿಸತ್ತಮನು ವಿಪ್ರನಿಗೆ ಹೇಳಿದನು: “ಮುನಿಸತ್ತಮ! ನಾನು ಅನ್ನಾರ್ಥಿಯಾಗಿ ಬಂದಿದ್ದೇನೆ ಎಂದು ತಿಳಿ.”

03246014a ಸ್ವಾಗತಂ ತೇಽಸ್ತ್ವಿತಿ ಮುನಿಂ ಮುದ್ಗಲಃ ಪ್ರತ್ಯಭಾಷತ|

03246014c ಪಾದ್ಯಮಾಚಮನೀಯಂ ಚ ಪ್ರತಿವೇದ್ಯಾನ್ನಮುತ್ತಮಂ||

“ನಿನಗೆ ಇದೋ ಸ್ವಾಗತ!” ಎಂದು ಮುದ್ಗಲನು ಮುನಿಗೆ ಉತ್ತರಿಸಿದನು. ಪಾದ್ಯ ಆಚಮನೀಯಗಳೊಂದಿಗೆ ಉತ್ತಮ ಅನ್ನವನ್ನು ಬಡಿಸಿದನು.

03246015a ಪ್ರಾದಾತ್ಸ ತಪಸೋಪಾತ್ತಂ ಕ್ಷುಧಿತಾಯಾತಿಥಿವ್ರತೀ|

03246015c ಉನಿನ್ಮತ್ತಾಯ ಪರಾಂ ಶ್ರದ್ಧಾಮಾಸ್ಥಾಯ ಸ ಧೃತವ್ರತಃ||

ಆ ಧೃತವ್ರತ ಅತಿಥಿವ್ರತಿಯು ಹಸಿವೆಯಿಂದ ಬಳಲಿದ್ದ ಹುಚ್ಚನಂತಿದ್ದ ಆ ತಪಸ್ವಿಗೆ ಪರಮ ಶ್ರದ್ಧೆಯಿಂದ ಕುಳ್ಳಿರಿಸಿ ನೀಡಿದನು.

03246016a ತತಸ್ತದನ್ನಂ ರಸವತ್ಸ ಏವ ಕ್ಷುಧಯಾನ್ವಿತಃ|

03246016c ಬುಭುಜೇ ಕೃತ್ಸ್ನಮುನ್ಮತ್ತಃ ಪ್ರಾದಾತ್ತಸ್ಮೈ ಚ ಮುದ್ಗಲಃ||

ತುಂಬಾ ಹಸಿದಿದ್ದ ಆ ಹುಚ್ಚನು ರಸವತ್ತಾಗಿದ್ದ ಆ ಅನ್ನವೆಲ್ಲವನ್ನೂ ತಿನ್ನಲು ಮುದ್ಗಲನು ಇನ್ನೂ ಹೆಚ್ಚು ನೀಡಿದನು.

03246017a ಭುಕ್ತ್ವಾ ಚಾನ್ನಂ ತತಃ ಸರ್ವಮುಚ್ಚಿಷ್ಟೇನಾತ್ಮನಸ್ತತಃ|

03246017c ಅಥಾನುಲಿಲಿಪೇಽಂಗಾನಿ ಜಗಾಮ ಚ ಯಥಾಗತಂ||

ಆ ಅನ್ನವನ್ನೂ ತಿಂದು ಎಂಜಲೆಲ್ಲವನ್ನೂ ತನ್ನ ದೇಹಕ್ಕೆ ಬಳಿದುಕೊಂಡು ದುರ್ವಾಸನು ಎಲ್ಲಿಂದ ಬಂದಿದ್ದನೋ ಅಲ್ಲಿಗೆ ತೆರಳಿದನು.

03246018a ಏವಂ ದ್ವಿತೀಯೇ ಸಂಪ್ರಾಪ್ತೇ ಪರ್ವಕಾಲೇ ಮನೀಷಿಣಃ|

03246018c ಆಗಮ್ಯ ಬುಭುಜೇ ಸರ್ವಮನ್ನಮುಂಚೋಪಜೀವಿನಃ||

ಹೀಗೆ ಎರಡನೇ ಪರ್ವಕಾಲವು ಬಂದಾಗಲೂ, ಭತ್ತವನ್ನು ಕುಟ್ಟಿ ಜೀವಿಸುತ್ತಿದ್ದ ಆ ಮನೀಷಣನ ಬಳಿ ಬಂದು ಅನ್ನವೆಲ್ಲವನ್ನೂ ತಿಂದನು.

03246019a ನಿರಾಹಾರಸ್ತು ಸ ಮುನಿರುಂಚಮಾರ್ಜಯತೇ ಪುನಃ|

03246019c ನ ಚೈನಂ ವಿಕ್ರಿಯಾಂ ನೇತುಮಶಕನ್ಮುದ್ಗಲಂ ಕ್ಷುಧಾ||

ಆಗ ನಿರಾಹಾರನಾಗಿ ಆ ಮುನಿಯು ಪುನಃ ಭತ್ತವನ್ನು ಕುಟ್ಟಿದನು. ಹಸಿವೆಯು ಮುದ್ಗಲನ ಸಮಭಾವನೆಯನ್ನು ಕೆಡಿಸಲಿಲ್ಲ.

03246020a ನ ಕ್ರೋಧೋ ನ ಚ ಮಾತ್ಸರ್ಯಂ ನಾವಮಾನೋ ನ ಸಂಭ್ರಮಃ|

03246020c ಸಪುತ್ರದಾರಮುಂಚಂತಮಾವಿವೇಶ ದ್ವಿಜೋತ್ತಮಂ||

ಮಕ್ಕಳು-ಪತ್ನಿಯೊಂದಿಗೆ ಭತ್ತ ಕುಟ್ಟುತ್ತಿದ್ದ ಆ ದ್ವಿಜೋತ್ತಮನನ್ನು ಕ್ರೋಧವಾಗಲೀ, ಮಾತ್ಸರ್ಯವಾಗಲೀ, ಅಪಮಾನವಾಗಲೀ, ಸಂಭ್ರಮವಾಗಲೀ, ಹೊಗಲಿಲ್ಲ.

03246021a ತಥಾ ತಮುಂಚಧರ್ಮಾಣಂ ದುರ್ವಾಸಾ ಮುನಿಸತ್ತಮಂ|

03246021c ಉಪತಸ್ಥೇ ಯಥಾಕಾಲಂ ಷಟ್ಕೃತ್ವಃ ಕೃತನಿಶ್ಚಯಃ||

ದುರ್ವಾಸನು ನಿಶ್ಚಯಿಸಿ ಕಾಲಕ್ಕೆ ತಕ್ಕಂತೆ ಆರು ಋತುಗಳಲ್ಲಿ ಭತ್ತಕುಟ್ಟುವ ಧರ್ಮದಲ್ಲಿ ನಿರತನಾದ ಮುನಿಸತ್ತಮನಲ್ಲಿಗೆ ಬಂದನು.

03246022a ನ ಚಾಸ್ಯ ಮಾನಸಂ ಕಿಂ ಚಿದ್ವಿಕಾರಂ ದದೃಶೇ ಮುನಿಃ|

03246022c ಶುದ್ಧಸತ್ತ್ವಸ್ಯ ಶುದ್ಧಂ ಸ ದದೃಶೇ ನಿರ್ಮಲಂ ಮನಃ||

ಆದರೆ ಮುನಿಯು ಅವನ ಮನಸ್ಸಿನಲ್ಲಿ ಸ್ವಲ್ಪವೂ ವಿಕಾರಗಳನ್ನು ಕಾಣಲಿಲ್ಲ. ಆ ಶುದ್ಧಸತ್ವನ ನಿರ್ಮಲ ಮನಸ್ಸು ಶುದ್ಧವಾಗಿರುವುದನ್ನೇ ನೋಡಿದನು.

03246023a ತಮುವಾಚ ತತಃ ಪ್ರೀತಃ ಸ ಮುನಿರ್ಮುದ್ಗಲಂ ತದಾ|

03246023c ತ್ವತ್ಸಮೋ ನಾಸ್ತಿ ಲೋಕೇಽಸ್ಮಿನ್ದಾತಾ ಮಾತ್ಸರ್ಯವರ್ಜಿತಃ||

ಆಗ ಆ ಮುನಿಯು ಸಂತೋಷಗೊಂಡು ಮುದ್ಗಲನಿಗೆ ಹೇಳಿದನು: “ನಿನ್ನ ಸಮನಾದ ಮಾತ್ಸರ್ಯವರ್ಜಿತ ದಾನಿಯು ಈ ಲೋಕದಲ್ಲಿ ಇಲ್ಲ.

03246024a ಕ್ಷುದ್ಧರ್ಮಸಂಜ್ಞಾಂ ಪ್ರಣುದತ್ಯಾದತ್ತೇ ಧೈರ್ಯಮೇವ ಚ|

03246024c ವಿಷಯಾನುಸಾರಿಣೀ ಜಿಃವಾ ಕರ್ಷತ್ಯೇವ ರಸಾನ್ಪ್ರತಿ||

ಹಸಿವೆಯು ಧರ್ಮಸಂಜ್ಞೆಯನ್ನು ಮತ್ತು ಧೈರ್ಯವನ್ನು ಬಹುದೂರ ಬಿಸಾಡುತ್ತದೆ. ವಿಷಯಾನುಸರಿಣೀ ನಾಲಿಗೆಯು ರುಚಿಯಿಂದ ಆಕರ್ಶಿತಗೊಳ್ಳುತ್ತದೆ.

03246025a ಆಹಾರಪ್ರಭವಾಃ ಪ್ರಾಣಾ ಮನೋ ದುರ್ನಿಗ್ರಹಂ ಚಲಂ|

03246025c ಮನಸಶ್ಚೇಂದ್ರಿಯಾಣಾಂ ಚಾಪ್ಯೈಕಾಗ್ರ್ಯಂ ನಿಶ್ಚಿತಂ ತಪಃ||

ಪ್ರಾಣವು ಆಹಾರವನ್ನು ಅವಲಂಬಿಸಿದೆ. ಮನಸ್ಸು ಚಂಚಲ ಮತ್ತು ಅದನ್ನು ನಿಗ್ರಹಿಸುವುದು ಕಷ್ಟ. ಮನಸ್ಸು ಮತ್ತು ಇಂದ್ರಿಯಗಳನ್ನು ಏಕಾಗ್ರವಾಗಿ ಇಟ್ಟುಕೊಳ್ಳುವುದೇ ತಪಸ್ಸೆಂದು ನಿರ್ಧರಿಸಲ್ಪಟ್ಟಿದೆ.

03246026a ಶ್ರಮೇಣೋಪಾರ್ಜಿತಂ ತ್ಯಕ್ತುಂ ದುಃಖಂ ಶುದ್ಧೇನ ಚೇತಸಾ|

03246026c ತತ್ಸರ್ವಂ ಭವತಾ ಸಾಧೋ ಯಥಾವದುಪಪಾದಿತಂ||

ಶ್ರಮದಿಂದ ಸಂಪಾದಿಸಿದುದನ್ನು ಶುದ್ಧಮನಸ್ಸಿನಿಂದ ತ್ಯಜಿಸುವುದು ಕಷ್ಟ. ಆದರೂ ಸಾಧೋ! ಇವೆಲ್ಲವನ್ನೂ ನೀನು ಸಾಧಿಸಿದ್ದೀಯೆ.

03246027a ಪ್ರೀತಾಃ ಸ್ಮೋಽನುಗೃಹೀತಾಶ್ಚ ಸಮೇತ್ಯ ಭವತಾ ಸಹ|

03246027c ಇಂದ್ರಿಯಾಭಿಜಯೋ ಧೈರ್ಯಂ ಸಂವಿಭಾಗೋ ದಮಃ ಶಮಃ||

03246028a ದಯಾ ಸತ್ಯಂ ಚ ಧರ್ಮಶ್ಚ ತ್ವಯಿ ಸರ್ವಂ ಪ್ರತಿಷ್ಠಿತಂ|

ನಿನ್ನ ಜೊತೆಯಲ್ಲಿರುವಾಗ ನಾವು ಸಂತೋಷಪಡುತ್ತೇವೆ ಮತ್ತು ಅನುಗೃಹೀತರಾಗಿದ್ದೇವೆ ಎಂದೆನಿಸುತ್ತದೆ. ಇಂದ್ರಿಯಗಳ ಮೇಲಿನ ಜಯ, ಧೈರ್ಯ, ಹಂಚಿಕೊಳ್ಳುವಿಕೆ, ದಮ, ಶಮ, ದಯೆ, ಸತ್ಯ, ಮತ್ತು ಧರ್ಮ ಎಲ್ಲವೂ ನಿನ್ನಲ್ಲಿ ನೆಲಸಿವೆ.

03246028c ಜಿತಾಸ್ತೇ ಕರ್ಮಭಿರ್ಲೋಕಾಃ ಪ್ರಾಪ್ತೋಽಸಿ ಪರಮಾಂ ಗತಿಂ||

03246029a ಅಹೋ ದಾನಂ ವಿಘುಷ್ಟಂ ತೇ ಸುಮಹತ್ಸ್ವರ್ಗವಾಸಿಭಿಃ|

03246029c ಸಶರೀರೋ ಭವಾನ್ಗಂತಾ ಸ್ವರ್ಗಂ ಸುಚರಿತವ್ರತ||

ನೀನು ಕರ್ಮಗಳಿಂದ ಲೋಕಗಳನ್ನು ಗೆದ್ದಿದ್ದೀಯೆ ಮತ್ತು ಪರಮ ಗತಿಯನ್ನು ಪಡೆದಿದ್ದೀಯೆ. ಸ್ವರ್ಗವಾಸಿಗಳೂ ಕೂಡ ನಿನ್ನ ದಾನವನ್ನು ತುಂಬಾ ಹೊಗಳುತ್ತಿದ್ದಾರೆ. ಸುಚರಿತವ್ರತ! ಸಶರೀರನಾಗಿಯೇ ನೀನು ಸ್ವರ್ಗಕ್ಕೆ ಹೋಗುತ್ತೀಯೆ.”

03246030a ಇತ್ಯೇವಂ ವದತಸ್ತಸ್ಯ ತದಾ ದುರ್ವಾಸಸೋ ಮುನೇಃ|

03246030c ದೇವದೂತೋ ವಿಮಾನೇನ ಮುದ್ಗಲಂ ಪ್ರತ್ಯುಪಸ್ಥಿತಃ||

03246031a ಹಂಸಸಾರಸಯುಕ್ತೇನ ಕಿಂಕಿಣೀಜಾಲಮಾಲಿನಾ|

03246031c ಕಾಮಗೇನ ವಿಚಿತ್ರೇಣ ದಿವ್ಯಗಂಧವತಾ ತಥಾ||

ಮುನಿ ದುರ್ವಾಸನು ಹೀಗೆ ಹೇಳುತ್ತಿದ್ದಂತೆಯೇ ಹಂಸ ಸಾರಸಗಳಿಂದ ಕೂಡಿದ, ಕಿಂಕಿಣೀಜಾಲಮಾಲೆಗಳಿಂದ ಕೂಡಿದ, ಬಣ್ಣಬಣ್ಣದ, ದಿವ್ಯ ಸುಗಂಧವನ್ನು ಸೂಸುವ, ಬೇಕಾದಲ್ಲಿ ಹೋಗಬಲ್ಲ ವಿಮಾನದಲ್ಲಿ ಕುಳಿತಿದ್ದ ದೇವದೂತನು ಮುದ್ಗಲನ ಬಳಿ ಬಂದನು.

03246032a ಉವಾಚ ಚೈನಂ ವಿಪ್ರರ್ಷಿಂ ವಿಮಾನಂ ಕರ್ಮಭಿರ್ಜಿತಂ|

03246032c ಸಮುಪಾರೋಹ ಸಂಸಿದ್ಧಿಂ ಪ್ರಾಪ್ತೋಽಸಿ ಪರಮಾಂ ಮುನೇ||

ಅವನು ಆ ವಿಪ್ರರ್ಷಿಗೆ ಹೇಳಿದನು: “ನಿನ್ನ ಕರ್ಮಗಳಿಂದ ಗಳಿಸಿರುವ ಈ ವಿಮಾನವನ್ನೇರು. ಮುನೇ! ಪರಮ ಸಂಸಿದ್ಧಿಯನ್ನು ಪಡೆದಿದ್ದೀಯೆ.”

03246033a ತಮೇವಂವಾದಿನಮೃಷಿರ್ದೇವದೂತಮುವಾಚ ಹ|

03246033c ಇಚ್ಚಾಮಿ ಭವತಾ ಪ್ರೋಕ್ತಾನ್ಗುಣಾನ್ಸ್ವರ್ಗನಿವಾಸಿನಾಂ||

ಹೀಗೆ ಹೇಳಿದ ದೇವದೂತನಿಗೆ ಋಷಿಯು ಕೇಳಿದನು: “ನಿನ್ನಿಂದ ಸ್ವರ್ಗನಿವಾಸಿಗಳ ಗುಣಗಳನ್ನು ಕೇಳಲು ಬಯಸುತ್ತೇನೆ.

03246034a ಕೇ ಗುಣಾಸ್ತತ್ರ ವಸತಾಂ ಕಿಂ ತಪಃ ಕಶ್ಚ ನಿಶ್ಚಯಃ|

03246034c ಸ್ವರ್ಗೇ ಸ್ವರ್ಗಸುಖಂ ಕಿಂ ಚ ದೋಷೋ ವಾ ದೇವದೂತಕ||

ದೇವದೂತಕ! ಅಲ್ಲಿ ವಾಸಿಸುವವರ ಗುಣಗಳೇನು? ಅವರ ತಪಸ್ಸೇನು? ಅವರ ಗುರಿಗಳೇನು? ಸ್ವರ್ಗದಲ್ಲಿ ಸ್ವರ್ಗಸುಖವೆಂದರೇನು? ದೋಷಗಳೇನು?

03246035a ಸತಾಂ ಸಪ್ತಪದಂ ಮಿತ್ರಮಾಹುಃ ಸಂತಃ ಕುಲೋಚಿತಾಃ|

03246035c ಮಿತ್ರತಾಂ ಚ ಪುರಸ್ಕೃತ್ಯ ಪೃಚ್ಚಾಮಿ ತ್ವಾಮಹಂ ವಿಭೋ||

ವಿಭೋ! ಒಳ್ಳೆಯವರೊಂದಿಗೆ ಏಳೇ ಹೆಜ್ಜೆಗಳನ್ನು ಜೊತೆಯಲ್ಲಿ ನಡೆಯುವುದರಿಂದ ಮಿತ್ರರಾಗುತ್ತಾರೆ ಎಂದು ಕುಲೋಚಿತ ಸಂತರು ಹೇಳುತ್ತಾರೆ[2]. ಮಿತ್ರತ್ವವನ್ನು ಗೌರವಿಸಿ ನಾನು ನಿನ್ನಲ್ಲಿ ಕೇಳುತ್ತಿದ್ದೇನೆ.

03246036a ಯದತ್ರ ತಥ್ಯಂ ಪಥ್ಯಂ ಚ ತದ್ಬ್ರವೀಹ್ಯವಿಚಾರಯನ್|

03246036c ಶ್ರುತ್ವಾ ತಥಾ ಕರಿಷ್ಯಾಮಿ ವ್ಯವಸಾಯಂ ಗಿರಾ ತವ||

ಏನೂ ವಿಚಾರಮಾಡದೇ ಅಲ್ಲಿ ಇದ್ದುದನ್ನು ಇದ್ದಹಾಗೆ ನನಗೆ ಯಾವುದು ಒಳ್ಳೆಯದು ಎನ್ನುವುದನ್ನು ಹೇಳು. ನಿನ್ನ ಮಾತನ್ನು ಕೇಳಿದ ನಂತರ ಏನುಮಾಡಬೇಕೋ ಅದನ್ನು ಮಾಡುತ್ತೇನೆ.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ವ್ರೀಹಿದ್ರೌಣಿಕ ಪರ್ವಣಿ ಮುದ್ಗಲೋಪಾಖ್ಯಾನೇ ಷಟ್‌ಚತ್ವಾರಿಂಶದಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ವ್ರೀಹಿದ್ರೌಣಿಕ ಪರ್ವದಲ್ಲಿ ಮುದ್ಗಲೋಪಾಖ್ಯಾನದಲ್ಲಿ ಇನ್ನೂರಾನಲ್ವತ್ತಾರನೆಯ ಅಧ್ಯಾಯವು.

Related image

[1] ದಾನದ ಮಹತ್ವದ ಕುರಿತು ಇನ್ನೊಂದು ಉಂಚವೃತ್ತಿಯಲ್ಲಿರುವ ಇನ್ನೊಬ್ಬ ಬ್ರಾಹ್ಮಣನ ಕಥೆಯು ಅಶ್ವಮೇಧಿಕ ಪರ್ವದ ೯೩ನೇ ಅಧ್ಯಾಯದಲ್ಲಿ ಬರುತ್ತದೆ.

[2] ಇದೇ ಅರ್ಥಬರುವ ಮಾತು ಆರಣ್ಯಕ ಪರ್ವದ ಅಧ್ಯಾಯ ೨೮೧ ರಲ್ಲಿ ಯಮ-ಸಾವಿತ್ರೀ ಸಂವಾದದಲ್ಲಿ ಬರುತ್ತದೆ [ಪ್ರಾಹುಃ ಸಪ್ತಪದಂ ಮಿತ್ರಂ ಬುಧಾಸ್ತತ್ತ್ವಾರ್ಥದರ್ಶಿನಃ|]

Comments are closed.