ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ
Contents
Toggle೨೩೯
ಶಕುನಿಯು ದುರ್ಯೋಧನನನ್ನು ತಡೆಯುವುದು (೧-೯). ಯಾರನ್ನೂ ಕೇಳದೇ, ನಿರಾಶನಾದ ದುರ್ಯೋಧನನು ಪ್ರಾಯೋಪವೇಶಕ್ಕೆ ಕುಳಿತುಕೊಳ್ಳುವುದು (೧೦-೧೭). ವಿಷಯವನ್ನು ತಿಳಿದ ಪಾತಾಳವಾಸೀ ದೈತ್ಯ-ದಾನವರು ಮಾಯೆಯಿಂದ ದುರ್ಯೋಧನನನ್ನು ಅಪಹರಿಸಿ ಕರೆಯಿಸಿಕೊಂಡಿದುದು (೧೮-೨೬).
03239001 ವೈಶಂಪಾಯನ ಉವಾಚ|
03239001a ಪ್ರಾಯೋಪವಿಷ್ಟಂ ರಾಜಾನಂ ದುರ್ಯೋಧನಮಮರ್ಷಣಂ|
03239001c ಉವಾಚ ಸಾಂತ್ವಯನ್ರಾಜಂ ಶಕುನಿಃ ಸೌಬಲಸ್ತದಾ||
ವೈಶಂಪಾಯನನು ಹೇಳಿದನು: “ರಾಜನ್! ಆಗ ಪ್ರಾಯೋಪವಿಷ್ಟನಾದ ಬೇಸತ್ತ ರಾಜ ದುರ್ಯೋಧನನನ್ನು ಸಂತವಿಸುತ್ತಾ ಸೌಬಲ ಶಕುನಿಯು ಹೇಳಿದನು:
03239002a ಸಮ್ಯಗುಕ್ತಂ ಹಿ ಕರ್ಣೇನ ತಚ್ಚ್ರುತಂ ಕೌರವ ತ್ವಯಾ|
03239002c ಮಯಾಹೃತಾಂ ಶ್ರಿಯಂ ಸ್ಫೀತಾಂ ಮೋಹಾತ್ಸಮಪಹಾಯ ಕಿಂ|
03239002e ತ್ವಮಬುದ್ಧ್ಯಾ ನೃಪವರ ಪ್ರಾಣಾನುತ್ಸ್ರಷ್ಟುಮಿಚ್ಚಸಿ||
“ಕೌರವ! ನೀನು ಕೇಳಿದ ಕರ್ಣನ ಮಾತುಗಳು ಸರಿಯಾಗಿಯೇ ಇವೆ. ನೃಪವರ! ನಾನು ಅಪಹರಿಸಿದ ಸಂಪತ್ತನ್ನು ಮೋಹದಿಂದ ತೊರೆದು ಅಬುದ್ಧಿಯಿಂದ ಏಕೆ ಪ್ರಾಣವನ್ನೇ ತೊರೆಯಲು ಬಯಸಿದ್ದೀಯೆ?
03239003a ಅದ್ಯ ಚಾಪ್ಯವಗಚ್ಚಾಮಿ ನ ವೃದ್ಧಾಃ ಸೇವಿತಾಸ್ತ್ವಯಾ|
03239003c ಯಃ ಸಮುತ್ಪತಿತಂ ಹರ್ಷಂ ದೈನ್ಯಂ ವಾ ನ ನಿಯಚ್ಚತಿ|
03239003e ಸ ನಶ್ಯತಿ ಶ್ರಿಯಂ ಪ್ರಾಪ್ಯ ಪಾತ್ರಮಾಮಮಿವಾಂಭಸಿ||
ನೀನು ವೃದ್ಧರ ಸೇವೆಯನ್ನೇ ಮಾಡಿರಲಿಕ್ಕಿಲ್ಲ ಎಂದು ಇಂದು ನನಗನ್ನಿಸುತ್ತಿದೆ. ಅಕಸ್ಮಾತ್ತಾಗಿ ಬಂದ ಹರ್ಷ ಅಥವಾ ದುಃಖವನ್ನು ನಿಯಂತ್ರಿಸಿಕೊಳ್ಳಲಾರದವನು ಪೂರ್ಣ ಸುಟ್ಟಿರದ ಮಣ್ಣಿನ ಕೊಡವು ನೀರನ್ನು ಹೇಗೋ ಹಾಗೆ ಸಂಪತ್ತನ್ನು ಕಳೆದುಕೊಳ್ಳುತ್ತಾನೆ.
03239004a ಅತಿಭೀರುಮತಿಕ್ಲೀಬಂ ದೀರ್ಘಸೂತ್ರಂ ಪ್ರಮಾದಿನಂ|
03239004c ವ್ಯಸನಾದ್ವಿಷಯಾಕ್ರಾಂತಂ ನ ಭಜಂತಿ ನೃಪಂ ಶ್ರಿಯಃ||
ಅತಿಯಾಗಿ ನಾಚಿಕೊಳ್ಳುವ, ಅತಿಯಾಗಿ ಹೇಡಿಯಾದ, ಬಹಳಷ್ಟು ಆಲೋಚಿಸುವ, ಬುದ್ಧಿಯನ್ನು ಉಪಯೋಗಿಸದೇ ಇರುವ, ಇಂದ್ರಿಯ ಸುಖಗಳಲ್ಲಿಯೇ ಆಸಕ್ತಿ ಹೊಂದಿರುವ ನೃಪನನ್ನು ಸಂಪತ್ತು ಅನುಸರಿಸುವುದಿಲ್ಲ.
03239005a ಸತ್ಕೃತಸ್ಯ ಹಿ ತೇ ಶೋಕೋ ವಿಪರೀತೇ ಕಥಂ ಭವೇತ್|
03239005c ಮಾ ಕೃತಂ ಶೋಭನಂ ಪಾರ್ಥೈಃ ಶೋಕಮಾಲಂಬ್ಯ ನಾಶಯ||
ಎಲ್ಲ ರೀತಿಯಲ್ಲಿಯೂ ಸತ್ಕೃತನಾದ ನಿನಗೆ ಈ ವಿಪರೀತಿ ಶೋಕವು ಹೇಗುಂಟಾಯಿತು? ಈ ರೀತಿ ಶೋಕವನ್ನಾಚರಿಸಿ ಪಾರ್ಥರು ಮಾಡಿದ ಈ ಶುಭಕಾರ್ಯವನ್ನು ನಾಶಗೊಳಿಸಬೇಡ.
03239006a ಯತ್ರ ಹರ್ಷಸ್ತ್ವಯಾ ಕಾರ್ಯಃ ಸತ್ಕರ್ತವ್ಯಾಶ್ಚ ಪಾಂಡವಾಃ|
03239006c ತತ್ರ ಶೋಚಸಿ ರಾಜೇಂದ್ರ ವಿಪರೀತಮಿದಂ ತವ||
ರಾಜೇಂದ್ರ! ಎಲ್ಲಿ ನೀನು ಸಂತೋಷದಿಂದ ಪಾಂಡವರನ್ನು ಸತ್ಕರಿಸಬೇಕಾಗಿತ್ತೋ ಅಲ್ಲಿ ನೀನು ಶೋಕಿಸುತ್ತಿರುವೆ. ಇದೇ ನಿನ್ನ ವೈಪರೀತ್ಯ.
03239007a ಪ್ರಸೀದ ಮಾ ತ್ಯಜಾತ್ಮಾನಂ ತುಷ್ಟಶ್ಚ ಸುಕೃತಂ ಸ್ಮರ|
03239007c ಪ್ರಯಚ್ಚ ರಾಜ್ಯಂ ಪಾರ್ಥಾನಾಂ ಯಶೋ ಧರ್ಮಮವಾಪ್ನುಹಿ||
ಸಂತೋಷಗೊಳ್ಳು. ನಿನ್ನ ಜೀವವನ್ನು ತೊರೆಯಬೇಡ. ಅವರು ನಿನಗೆ ಮಾಡಿದ ಒಳ್ಳೆಯದನ್ನು ನೆನಪಿಸಿಕೋ. ಪಾರ್ಥರ ರಾಜ್ಯವನ್ನು ಹಿಂದಿರುಗಿಸು. ಯಶಸ್ಸು ಮತ್ತು ಧರ್ಮವನ್ನು ಹೊಂದು.
03239008a ಕ್ರಿಯಾಮೇತಾಂ ಸಮಾಜ್ಞಾಯ ಕೃತಘ್ನೋ ನ ಭವಿಷ್ಯಸಿ|
03239008c ಸೌಭ್ರಾತ್ರಂ ಪಾಂಡವೈಃ ಕೃತ್ವಾ ಸಮವಸ್ಥಾಪ್ಯ ಚೈವ ತಾನ್|
03239008e ಪಿತ್ರ್ಯಂ ರಾಜ್ಯಂ ಪ್ರಯಚ್ಚೈಷಾಂ ತತಃ ಸುಖಮವಾಪ್ನುಹಿ||
ಹೀಗೆ ಮಾಡುವುದರಿಂದ ನೀನು ಕೃತಘ್ನನಾಗುವುದಿಲ್ಲ. ಪಾಂಡವರೊಂದಿಗೆ ಸಂಧಿಯನ್ನು ಮಾಡಿಕೊಂಡು ಸೌಭ್ರಾತೃತ್ವವನ್ನು ಸ್ಥಾಪಿಸು. ಅವರಿಗೆ ಪಿತೃ ರಾಜ್ಯವನ್ನು ಕೊಟ್ಟು ಸುಖವನ್ನು ಹೊಂದುತ್ತೀಯೆ.”
03239009a ಶಕುನೇಸ್ತು ವಚಃ ಶ್ರುತ್ವಾ ದುಃಶಾಸನಮವೇಕ್ಷ್ಯ ಚ|
03239009c ಪಾದಯೋಃ ಪತಿತಂ ವೀರಂ ವಿಕ್ಲವಂ ಭ್ರಾತೃಸೌಹೃದಾತ್||
03239010a ಬಾಹುಭ್ಯಾಂ ಸಾಧುಜಾತಾಭ್ಯಾಂ ದುಃಶಾಸನಮರಿಂದಮಂ|
03239010c ಉತ್ಥಾಪ್ಯ ಸಂಪರಿಷ್ವಜ್ಯ ಪ್ರೀತ್ಯಾಜಿಘ್ರತ ಮೂರ್ಧನಿ||
ಶಕುನಿಯ ಈ ಮಾತುಗಳನ್ನು ಕೇಳಿ ಮತ್ತು ಭಾತೃ ಸೌಹಾರ್ದದಿಂದ ಪಾದಗಳಲ್ಲಿ ಸಾಷ್ಟಾಂಗ ಬಿದ್ದಿದ್ದ ವೀರನನ್ನು ನೋಡಿ ದುರ್ಯೋಧನನು ತನ್ನ ಸುಂದರ ಬಾಹುಗಳಿಂದ ಅರಿಂದಮ ದುಃಶಾಸನನನ್ನು ಮೇಲೆತ್ತಿ ಪ್ರೀತಿಯಿಂದ ಬಿಗಿದಪ್ಪಿ ನೆತ್ತಿಯನ್ನು ಆಘ್ರಾಣಿಸಿದನು.
03239011a ಕರ್ಣಸೌಬಲಯೋಶ್ಚಾಪಿ ಸಂಸ್ಮೃತ್ಯ ವಚನಾನ್ಯಸೌ|
03239011c ನಿರ್ವೇದಂ ಪರಮಂ ಗತ್ವಾ ರಾಜಾ ದುರ್ಯೋಧನಸ್ತದಾ|
03239011e ವ್ರೀಡಯಾಭಿಪರೀತಾತ್ಮಾ ನೈರಾಶ್ಯಮಗಮತ್ಪರಂ||
ಕರ್ಣ-ಸೌಬಲರ ಈ ಮಾತುಗಳನ್ನು ಕೇಳಿ ರಾಜಾ ದುರ್ಯೋಧನನು ಪರಮ ವೇದನೆಯನ್ನು ತಾಳಿದನು. ನಾಚಿಕೆಯಿಂದ ತುಂಬಿಕೊಂಡು ಅವನಲ್ಲಿ ಪರಮ ನಿರಾಶೆಯು ಕವಿಯಿತು.
03239012a ಸುಹೃದಾಂ ಚೈವ ತಚ್ಚ್ರುತ್ವಾ ಸಮನ್ಯುರಿದಮಬ್ರವೀತ್|
03239012c ನ ಧರ್ಮಧನಸೌಖ್ಯೇನ ನೈಶ್ವರ್ಯೇಣ ನ ಚಾಜ್ಞಯಾ|
03239012e ನೈವ ಭೋಗೈಶ್ಚ ಮೇ ಕಾರ್ಯಂ ಮಾ ವಿಹನ್ಯತ ಗಚ್ಚತ||
ಸುಹೃದಯರನ್ನು ಕೇಳಿ ತುಂಬಾ ದುಃಖದಿಂದ ಹೇಳಿದನು: “ಧರ್ಮ, ಧನ, ಸಖ್ಯ, ಐಶ್ವರ್ಯ, ಅಧಿಕಾರ, ಭೋಗ ಇವುಗಳ ಕುರಿತು ನಾನು ಮಾಡಬೇಕಾದುದು ಏನೂ ಇಲ್ಲ. ನನ್ನನ್ನು ತಡೆಯಬೇಡಿ. ಹೊರಡಿ.
03239013a ನಿಶ್ಚಿತೇಯಂ ಮಮ ಮತಿಃ ಸ್ಥಿತಾ ಪ್ರಾಯೋಪವೇಶನೇ|
03239013c ಗಚ್ಚಧ್ವಂ ನಗರಂ ಸರ್ವೇ ಪೂಜ್ಯಾಶ್ಚ ಗುರವೋ ಮಮ||
ಪ್ರಾಯೋಪವೇಶದ ಈ ನಿಶ್ಚಯದಲ್ಲಿಯೇ ನನ್ನ ಮನಸ್ಸು ಗಟ್ಟಿಯಾಗಿದೆ. ನೀವೆಲ್ಲರೂ ನಗರಕ್ಕೆ ಹೋಗಿ ನನ್ನ ಹಿರಿಯರನ್ನು ಪೂಜಿಸಿ.”
03239014a ತ ಏವಮುಕ್ತಾಃ ಪ್ರತ್ಯೂಚೂ ರಾಜಾನಮರಿಮರ್ದನಂ|
03239014c ಯಾ ಗತಿಸ್ತವ ರಾಜೇಂದ್ರ ಸಾಸ್ಮಾಕಮಪಿ ಭಾರತ|
03239014e ಕಥಂ ವಾ ಸಂಪ್ರವೇಕ್ಷ್ಯಾಮಸ್ತ್ವದ್ವಿಹೀನಾಃ ಪುರಂ ವಯಂ||
ಹೀಗೆ ಹೇಳಲು ಅವರು ರಾಜಾ ಅರಿಮರ್ದನನಿಗೆ ಉತ್ತರಿಸಿದರು: “ಭಾರತ! ರಾಜೇಂದ್ರ! ನೀನು ಹೋಗುವ ದಾರಿಯೇ ನಮ್ಮದು ಕೂಡ. ನೀನಿಲ್ಲದೇ ನಾವು ಹೇಗೆ ಪುರವನ್ನು ಪ್ರವೇಶಿಸಬಲ್ಲೆವು?”
03239015a ಸ ಸುಹೃದ್ಭಿರಮಾತ್ಯೈಶ್ಚ ಭ್ರಾತೃಭಿಃ ಸ್ವಜನೇನ ಚ|
03239015c ಬಹುಪ್ರಕಾರಮಪ್ಯುಕ್ತೋ ನಿಶ್ಚಯಾನ್ನ ವ್ಯಚಾಲ್ಯತ||
ಸ್ನೇಹಿತರು, ಅಮಾತ್ಯರು, ಸಹೋದರರು ಮತ್ತು ಬಾಂಧವರು ಬಹುಪ್ರಕಾರವಾಗಿ ಹೇಳಿದರೂ ಅವನು ತನ್ನ ನಿಶ್ಚಯದಿಂದ ವಿಚಲಿತನಾಗಲಿಲ್ಲ.
03239016a ದರ್ಭಪ್ರಸ್ತರಮಾಸ್ತೀರ್ಯ ನಿಶ್ಚಯಾದ್ಧೃತರಾಷ್ಟ್ರಜಃ|
03239016c ಸಂಸ್ಪೃಶ್ಯಾಪಃ ಶುಚಿರ್ಭೂತ್ವಾ ಭೂತಲಂ ಸಮುಪಾಶ್ರಿತಃ||
ಆಗ ನಿಶ್ಚಯಿಸಿದಂತೆ ಧೃತರಾಷ್ಟ್ರನ ಮಗನು ದರ್ಭೆಗಳನ್ನು ಹರಡಿ ನೀರನ್ನು ಮುಟ್ಟಿ ಶುಚಿಯಾಗಿ ಭೂತಲದಲ್ಲಿ ಕುಳಿತುಕೊಂಡನು.
03239017a ಕುಶಚೀರಾಂಬರಧರಃ ಪರಂ ನಿಯಮಮಾಸ್ಥಿತಃ|
03239017c ವಾಗ್ಯತೋ ರಾಜಶಾರ್ದೂಲಃ ಸ ಸ್ವರ್ಗಗತಿಕಾಂಕ್ಷಯಾ|
03239017e ಮನಸೋಪಚಿತಿಂ ಕೃತ್ವಾ ನಿರಸ್ಯ ಚ ಬಹಿಷ್ಕ್ರಿಯಾಃ||
ಕುಶಚೀರ ವಸ್ತ್ರವನ್ನುಟ್ಟು ಪರಮ ನಿಯಮದಲ್ಲಿ ಕುಳಿತುಕೊಂಡನು. ಮಾತನ್ನು ನಿಲ್ಲಿಸಿ ಆ ರಾಜಶಾರ್ದೂಲನು ಸ್ವರ್ಗದ ಮಾರ್ಗವನ್ನು ಬಯಸಿ, ಹೊರಗಿನ ಕ್ರಿಯೆಗಳನ್ನೆಲ್ಲಾ ನಿಲ್ಲಿಸಿ ಮನಸ್ಸಿನಲ್ಲಿಯೇ ಪೂಜಿಸತೊಡಗಿದನು.
03239018a ಅಥ ತಂ ನಿಶ್ಚಯಂ ತಸ್ಯ ಬುದ್ಧ್ವಾ ದೈತೇಯದಾನವಾಃ|
03239018c ಪಾತಾಲವಾಸಿನೋ ರೌದ್ರಾಃ ಪೂರ್ವಂ ದೇವೈರ್ವಿನಿರ್ಜಿತಾಃ||
03239019a ತೇ ಸ್ವಪಕ್ಷಕ್ಷಯಂ ತಂ ತು ಜ್ಞಾತ್ವಾ ದುರ್ಯೋಧನಸ್ಯ ವೈ|
03239019c ಆಹ್ವಾನಾಯ ತದಾ ಚಕ್ರುಃ ಕರ್ಮ ವೈತಾನಸಂಭವಂ||
ಆಗ ಅವನ ನಿಶ್ಚಯವನ್ನು ತಿಳಿದ, ಹಿಂದೆ ದೇವತೆಗಳಿಂದ ಸೋಲಿಸಲ್ಪಟ್ಟು ಪಾತಾಲದಲ್ಲಿ ವಾಸಿಸುತ್ತಿದ್ದ ರೌದ್ರ ದೈತ್ಯ ದಾನವರು ಅದರಿಂದ ತಮ್ಮ ಪಕ್ಷವು ಕ್ಷಯವಾಗುವುದೆಂದು ತಿಳಿದು ದುರ್ಯೋಧನನನ್ನು ತಮ್ಮ ಮುಂದೆ ಆಹ್ವಾನಿಸಲು ಅಗ್ನಿಯನ್ನು ಬಳಸಿ ಕಾರ್ಯವನ್ನು ಪ್ರಾರಂಭಿಸಿದರು.
03239020a ಬೃಹಸ್ಪತ್ಯುಶನೋಕ್ತೈಶ್ಚ ಮಂತ್ರೈರ್ಮಂತ್ರವಿಶಾರದಾಃ|
03239020c ಅಥರ್ವವೇದಪ್ರೋಕ್ತೈಶ್ಚ ಯಾಶ್ಚೋಪನಿಷದಿ ಕ್ರಿಯಾಃ|
03239020e ಮಂತ್ರಜಪ್ಯಸಮಾಯುಕ್ತಾಸ್ತಾಸ್ತದಾ ಸಮವರ್ತಯನ್||
ಮಂತ್ರವಿಶಾರದರು ಬೃಹಸ್ಪತಿ ಮತ್ತು ಉಶನರು ಹೇಳಿದ್ದ ಮಂತ್ರಗಳಿಂದ ಮತ್ತು ಅಥರ್ವವೇದ ಉಪನಿಷತ್ತುಗಳಲ್ಲಿ ಹೇಳಿರುವ ಮಂತ್ರಜಪಗಳಿಂದ ಕ್ರಿಯೆಗಳನ್ನು ಪ್ರಾರಂಭಿಸಿದರು.
03239021a ಜುಹ್ವತ್ಯಗ್ನೌ ಹವಿಃ ಕ್ಷೀರಂ ಮಂತ್ರವತ್ಸುಸಮಾಹಿತಾಃ|
03239021c ಬ್ರಾಹ್ಮಣಾ ವೇದವೇದಾಂಗಪಾರಗಾಃ ಸುದೃಢವ್ರತಾಃ||
ವೇದವೇದಾಂಗಪಾರಂಗತರಾದ, ಸುಧೃಢವ್ರತರಾದ ಬ್ರಾಹ್ಮಣರು ಮಂತ್ರೋಚ್ಛಾರಣೆ ಮಾಡುತ್ತಾ ಅಗ್ನಿಯಲ್ಲಿ ಹಾಲನ್ನು ಹವಿಸ್ಸಾಗಿ ಹಾಕಿದರು.
03239022a ಕರ್ಮಸಿದ್ಧೌ ತದಾ ತತ್ರ ಜೃಂಭಮಾಣಾ ಮಹಾದ್ಭುತಾ|
03239022c ಕೃತ್ಯಾ ಸಮುತ್ಥಿತಾ ರಾಜನ್ಕಿಂ ಕರೋಮೀತಿ ಚಾಬ್ರವೀತ್||
ರಾಜನ್! ಆ ಕೃತ್ಯವು ಪೂರೈಸಲು ಅಲ್ಲಿ ಕರ್ಮಸಿದ್ಧಿಯಾಗಿ ವಿಜೃಂಭಿಸುತ್ತಾ ಮಹಾ ಅದ್ಭುತವಾದವಳು ಮೇಲೆದ್ದು “ಏನು ಮಾಡಲಿ?” ಎಂದು ಕೇಳಿದಳು.
03239023a ಆಹುರ್ದೈತ್ಯಾಶ್ಚ ತಾಂ ತತ್ರ ಸುಪ್ರೀತೇನಾಂತರಾತ್ಮನಾ|
03239023c ಪ್ರಾಯೋಪವಿಷ್ಟಂ ರಾಜಾನಂ ಧಾರ್ತರಾಷ್ಟ್ರಮಿಹಾನಯ||
ಅಂತರಾತ್ಮದಲ್ಲಿ ಸಂತುಷ್ಟರಾದ ದೈತ್ಯರು ಅವಳಿಗೆ ಹೇಳಿದರು: “ಪ್ರಾಯೋಪವಿಷ್ಟನಾಗಿರುವ ರಾಜ ಧಾರ್ತರಾಷ್ಟ್ರನನ್ನು ಇಲ್ಲಿಗೆ ಕರೆದು ತಾ!”
03239024a ತಥೇತಿ ಚ ಪ್ರತಿಶ್ರುತ್ಯ ಸಾ ಕೃತ್ಯಾ ಪ್ರಯಯೌ ತದಾ|
03239024c ನಿಮೇಷಾದಗಮಚ್ಚಾಪಿ ಯತ್ರ ರಾಜಾ ಸುಯೋಧನಃ||
ಹಾಗೆಯೇ ಆಗಲೆಂದು ಉತ್ತರಿಸಿ ಅವಳು ನಿಮಿಷಮಾತ್ರದಲ್ಲಿ ರಾಜಾ ಸುಯೋಧನನಿರುವಲ್ಲಿ ಬಂದಳು.
03239025a ಸಮಾದಾಯ ಚ ರಾಜಾನಂ ಪ್ರವಿವೇಶ ರಸಾತಲಂ|
03239025c ದಾನವಾನಾಂ ಮುಹೂರ್ತಾಚ್ಚ ತಮಾನೀತಂ ನ್ಯವೇದಯತ್||
ರಾಜನನ್ನು ಎತ್ತಿಕೊಂಡು ರಸಾತಳವನ್ನು ಪ್ರವೇಶಿಸಿದಳು. ಮುಹೂರ್ತದಲ್ಲಿಯೇ ಅವನನ್ನು ತಂದಿರುವುದನ್ನು ದಾನವರಿಗೆ ವರದಿಮಾಡಿದಳು.
03239026a ತಮಾನೀತಂ ನೃಪಂ ದೃಷ್ಟ್ವಾ ರಾತ್ರೌ ಸಂಹತ್ಯ ದಾನವಾಃ|
03239026c ಪ್ರಹೃಷ್ಟಮನಸಃ ಸರ್ವೇ ಕಿಂ ಚಿದುತ್ಫುಲ್ಲಲೋಚನಾಃ|
03239026e ಸಾಭಿಮಾನಮಿದಂ ವಾಕ್ಯಂ ದುರ್ಯೋಧನಮಥಾಬ್ರುವನ್||
ರಾತ್ರಿಯಲ್ಲಿ ಕರೆದು ತಂದ ನೃಪನನ್ನು ನೋಡಿದ ದಾನವರು ಎಲ್ಲರೂ ಸಂತೋಷ ಮನಸ್ಕರಾಗಿ, ಅರಳಿದ ಕಣ್ಣುಗಳಿಂದ ಅಭಿಮಾನದಿಂದ ಕೂಡಿದ ಈ ಮಾತನ್ನು ದುರ್ಯೋಧನನಿಗೆ ಹೇಳಿದರು.
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಪ್ರಾಯೋಪವೇಶೇ ಏಕೋನಚತ್ವಾರಿಂಶದಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಪ್ರಾಯೋಪವೇಶದಲ್ಲಿ ಇನ್ನೂರಾಮೂವತ್ತೊಂಭತ್ತನೆಯ ಅಧ್ಯಾಯವು.
![]()